ಪಂಜು-ವಿಶೇಷ

ಜೀವನದ ಕೆಲವು ಪುಟಗಳಿಂದ


ಆಕೆ ಜಾರಿ ಬಿದ್ದಾಗೆಲ್ಲಾ ಆಕೆಗಿಂತ ಹೆಚ್ಚು ನೋವಾಗುವುದು ನನಗೆ. ಆಕೆ ನಸು ನಗುತ್ತಾಳೆ. ನಾನು ಪೆಚ್ಚು ಪೆಚ್ಚಾಗಿ ನಗುತ್ತೇನೆ.

ಮದುವೆಯಾದ ಮೊದಲು – ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ. ಕತ್ತಲಾಗಿತ್ತು. ಅದು ಹಳ್ಳಿ. ಹೊಸ ಮದು ಮಗ ಮದುಮಗಳು ಕೈ ಕೈ ಹಿಡಿದುಕೊಂಡು ಹೋಗುವಾಗ, ಯಾರೋ ತಮಾಶೆ ಮಾಡಿದರು. ಆಕೆ ಕೈ ಕೊಸರಿಕೊಂಡು ನಡೆದಳು. ಅದು ಒಂದು ಕ್ಷಣ ಮಾತ್ರ. ಬಿದ್ದ ಸದ್ದು. ಹಿಂದೆ ನೋಡಿದರೆ ಆಕೆ ಬಿದ್ದಿದ್ದಾಳೆ. ಇಂದಿಗೂ ಆ ಘಟನೆ ನೆನೆದಾಗ, ಆಕೆಯ ಅಸಾಹಯಕತೆಯ ಬಗ್ಗೆ ನನಗೆ ನೋವಾಗುತ್ತದೆ.

ಸುಮಾರು ಮೂವತ್ತೆಂಟು ವರ್ಷಗಳ ಹಿಂದೆ ನಾನಾಕೆಯನ್ನು ಮೊದಲ ಸಲ ಕಂಡಿದ್ದೆ. ಆವಾಗ ಆಕೆ ಹದಿಹರೆಯದ ಹುಡುಗಿ. ಆಕೆಯನ್ನು ಮೊದಲ ಬಾರಿಗೆ ಕಂಡಾಗ ಅನಿಸಿದ್ದು – ಆಕೆಯನ್ನು ಮದುವೆಯಾಗುವಾತ ತುಂಬಾ ಅದೃಷ್ಟವಂತ. ಯಾಕೆ ಅಂತಹ ಯೋಚನೆ ನನಗೆ ಬಂದಿತ್ತೆಂದು ನನಗಿನ್ನೂ ಗೊತ್ತಿಲ್ಲ. ಆ ಅದೃಷ್ಟವಂತ ತಾನಾಗುವೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ.

ಮದುವೆಯೇ ಬೇಡವೆಂದು ಇದ್ದ ನಾನು, ಅಮ್ಮನ ಕಿರಿ ಕಿರಿಗೋ, ಸಂಗಾತಿ ಬೇಕೆನಿಸುವ ಅನಿಸಿಕೆಯಿಂದಲೋ ಮದುವೆಗೆ ಒಪ್ಪಿಕೊಂಡೆ. ಅನಿರೀಕ್ಷಿತವಾಗಿ ಈ ಹುಡುಗಿಯ ಪ್ರಸ್ತಾವನೆ ನನಗೆ ಬಂತು. ನಾನು ನಿರಾಕರಿಸಿದೆ.  ವಯಸ್ಸಿನ ಅಂತರ ಈ ನಿರಾಕರಣೆಗೆ ಮೂಲ ಕಾರಣ. ಅಷ್ಟೊಂದು ಸುಂದರ ಹೆಣ್ಣಿಗೆ, ಅಷ್ಟು ಓದಿದ ಹೆಣ್ಣಿಗೆ ಗಂಡು ಸಿಗದೇ ಅನ್ನುವ ಅಭಿಪ್ರಾಯ ಸಹ ನನ್ನದಾಗಿತ್ತು. ಆದರೆ ತಿಳಿದು ಬಂದ ವಿಷಯ ಬಹು ಅನಿರೀಕ್ಷಿತ. ನಾಲ್ಕು ವರ್ಷಗಳ ಹಿಂದೆ ಆಕೆಯ ಕಾಲಿನ ಶಸ್ತ್ರ ಚಿಕಿತ್ಸೆಯಾಗಿ, ಆಕೆಯ ಕಾಲನ್ನು ಕತ್ತರಿಸಿದ್ದಾರೆಂದು. ಮನಸ್ಸಿಗೆ ಪೆಚ್ಚೆನಿಸಿತು. ಏನೂ ಮಾತನಾಡದೆ ಸ್ನಾನಕ್ಕೆ ಹೋದೆ.

ನನಗೆ ವಯಸ್ಸಾಯಿತೆಂದು, ಇಂತಹ ಹುಡುಗಿಯ ಜೊತೆಗೆ ಮದುವೆಯೇ? ಒಂದು ಕಾಲಿಲ್ಲದ ಹುಡುಗಿಯನ್ನು ಮದುವೆಯಾಗುವುದೋ? “ನಿನ್ನ ಆದರ್ಶಗಳೆಲ್ಲವೂ ನಾಟಕವೇ?” ಪ್ರಶ್ನಿಸಿದ್ದು ನನ್ನ ಒಳ ಮನಸ್ಸು.
ಸ್ನಾನ ಮುಗಿಸಿ ಹೊರ ಬಂದು, ಹುಡುಗಿಯನ್ನು ಒಪ್ಪಿಕೊಂಡೆ. ಮನಸ್ಸಿನ ಮೂಲೆಯೊಂದರಲ್ಲಿ ಒಂದು ಒಣ ಹೆಮ್ಮೆ ಸಹ.

ಕಾಲು ಕತ್ತರಿಸಿದಾಗ ಆಕೆಯ ಮನಃ ಸ್ಥಿತಿಯನ್ನು ತಿಳಿಯುವ ಆಸೆ ನನಗೆ. ಆಕೆ ಉತ್ತರಿಸುವುದಿಲ್ಲ. ಆದರೆ ತನ್ನ ಅಪ್ಪ ಪಟ್ಟ ಬವಣೆ ಮಾತ್ರ ತಿಳಿಸುತ್ತಾಳೆ. ಹದಿನಾರು ವರ್ಷದ ಹುಡುಗಿಯನ್ನು ಅಪ್ಪ ಎತ್ತಿಕೊಂಡು ಹೋಗಿ ಕಾಲೇಜಿನಲ್ಲಿ ಬಿಟ್ಟು ಬರುತ್ತಿದ್ದರು. ಎಂದಿಗೂ ಊರುಗೋಲು ಉಪಯೋಗಿಸಲೂ ಬಿಡಲಿಲ್ಲ.  ತನ್ನ ಹೋರಾಟದಲ್ಲಿ ಅಪ್ಪನ ಪಾತ್ರ ಬಲು ಹಿರಿದು.

ಮುಂದೆ ಆಕೆಗೆ ಕೆಲಸವೂ ಸಿಕ್ಕಿತು. ಆದರೆ ಅದು ಮಾತ್ರ ಆತನಿಗಿಂತ ಸುಮಾರು ಸಾವಿರ ಕಿಲೋಮೀಟರ್ ದೂರದ ಊರಲ್ಲಿ. ಆರು ತಿಂಗಳಲ್ಲಿ ನಾನಿರುವ ಊರಿಗೆ ವರ್ಗಾವಣೆ ಮಾಡುವ ಭರವಸೆಯೊಂದಿಗೆ. ಆಕೆ ನಾನಿರುವಲ್ಲಿನ ಊರಲ್ಲಿ ಕೆಲಸ ಮಾಡಲು  ರೈಲಿನಲ್ಲಿ ಪ್ರಯಾಣಿಸ ಬೇಕು. ಈ ಊರಿನ ಜನದಟ್ಟಣೆಯಲ್ಲಿ ಅದು ಅಸಾಧ್ಯ. ನಾನೇ ಆಕೆ ಇರುವಲ್ಲಿ ಹೊಸ ಕೆಲಸ ಹುಡುಕಿದೆ.

ಹೊರಗಿನ ಕೆಲಸಕ್ಕೆ ಮನೆ ಕೆಲಸದವರು. ಆಲಸಿಯಾದ ನಾನೂ ಬದಲಾಗಬೇಕಾಯಿತು. ಅಡುಗೆ ಮನೆಯಲ್ಲಿ ಆಕೆಗೆ ಸ್ವಲ್ಪ ಸಹಾಯ ಮಾಡತೊಡಗಿದೆ. ಅದು ಸಾಲದು. ನೆಲದಲ್ಲಿ ನೀರು ಚೆಲ್ಲಿದ್ದರೆ, ಆಕೆ ಜಾರುತ್ತಾಳೆ. ತನ್ನ ನೋವನ್ನೂ ಹೇಳಿಕೊಳ್ಳುವುದಿಲ್ಲ. ಅಭ್ಯಾಸವಾಗಿದೆ ಅನ್ನುತ್ತಾಳೆ. ಆದರೆ ಆಕೆಯ ಅಸಾಹಯಕತೆ ನೆನೆದು ನನಗೆ ನೋವಾಗುತ್ತದೆ.

ಹೊರಗೆ ಹೋಗುವಾಗ, ಆಕೆಯ ನಡಿಗೆಯನ್ನು ಗಮನಿಸುವ ಜನರ ಕಣ್ನುಗಳು, ಕೆಲವು ಅಧಿಕ ಪ್ರಸಂಗಿಗಳ ಪ್ರಶ್ನೆಗಳು ನನಗೆ ಮುಜುಗರ ತರುತ್ತವೆ. ಆಕೆಗೆ ಅದೆಲ್ಲಾ ಸಾಮಾನ್ಯ. ಕೃತಕ ಕಾಲು ಧರಿಸಲು ಕೆಲವೊಮ್ಮೆ ಕಷ್ಟವಾಗುತ್ತದೆ. ಕೆಲವೊಮ್ಮೆ ಅದು ಸಡಿಲವಾಗಿ ನಡೆಯಲು ತೊಂದರೆಯಾಗುತ್ತದೆ. ತೊಡೆಯಲ್ಲಿ ಗಾಯವಾಗುತ್ತದೆ. ಆಕೆ ಏನೂ ಆಗದವರಂತೆ ಅದೆಲ್ಲವನ್ನೂ ಸಹಿಸಿಕೊಳ್ಳುತ್ತಾಳೆ.

ಮನೆ ಕಟ್ಟಿದ ಸಂಭ್ರಮ. ಖುಶಿಯಲ್ಲಿ ಯಾಕೋ ಬೇಗ ಬೇಗನೆ ಬರುತ್ತಾಳೆ, ಒಮ್ಮೆಲೇ ಜಾರಿ ಬೀಳುತ್ತಾಳೆ – ಅನೆಕ ಅತಿಥಿಗಳ ಮುಂದೆ. ಆಕೆ, ಎನೂ ಆಗದವರಂತೆ ನಗುತ್ತಾ ಏಳುತ್ತಾಳೆ. ನನಗೆ, ಇಂದಿಗೆ ಹಲವಾರು ವರ್ಷವಾದರೂ ನೆನೆದಾಗ ನೋವಾಗುತ್ತದೆ. ಇದನ್ನು ಬರೆಯುವಾಗ ಕಣ್ನು ತೇವವಾಗಿದೆ.
ನನ್ನ ಕಷ್ಟದ ದಿನಗಳಲ್ಲಿ ಆಕೆ ನನಗೆ ಬೆನ್ನೆಲುಬಾಗಿ ನಿಂತವಳು. ಆಕೆಯ ಪ್ರೋತ್ಸಾಹದ ಮಾತುಗಳು, ನಾನು ತಲೆ ಎತ್ತಿ ನಿಲ್ಲುವಂತೆ ಮಾಡಿದವು. ಹಾಗಾಗಿ, ಅಗಾಗ ನಾನು ಆಕೆಯನ್ನು ನನ್ನ “ಇನ್ಸ್ಪಿರೇಷನ್”  ಅನ್ನುತ್ತೇನೆ.
ಇದೀಗ ಆಕೆ ಸುಧಾರಿತ ಕೃತಕ ಕಾಲು ಧರಿಸುತ್ತಾಳೆ. ಬಲು ದುಬಾರಿಯಾದರೂ ಗುಣಮಟ್ಟ ಚೆನ್ನಾಗಿದೆ. ಮೊದಲಿನಷ್ಟು ತೊಂದರೆಗಳಿಲ್ಲ. ಈ ಕಾಲು ಧರಿಸಿದ ಮೊದಲ ದಿನ ಆಕೆಯ ಮುಖದಲ್ಲಿ ಕಂಡ ನಗು……

ಬಸ್ಸಿನಲ್ಲಿ ಜನದಟ್ಟಣೆ ಜಾಸ್ತಿ ಇದ್ದರೆ ಆಕೆಗೆ ಸ್ವಲ್ಪ ಕಷ್ಟವಾಗುತ್ತದೆ. ಈಗೀಗ ಸಾಯಂಕಾಲ ಸುಮಾರು ಒಂದೂವರೆ ಎರಡು ಘಂಟೆ ಬಸ್ಸಿನಲ್ಲಿ ಪ್ರಯಾಣಿಸ ಬೇಕಾಗುತ್ತದೆ. ಇಂತಹವರಿಗಾಗಿ ಬೇರೆಯೇ ಆಸನದ ವ್ಯವಸ್ತೆ ಇದ್ದರೂ ಅದನ್ನು ಉಪಯೋಗಿಸುವುದು ಸರಿ ಇರುವ ಜನರು. ಕೃತಕ ಕಾಲು ಇರುವ ಆಕೆಯ ಕಷ್ಟ ಬೇರೆಯವರಿಗೆ ಗೊತ್ತಾಗುವುದೂ ಇಲ್ಲ. ಆಕೆ ಅದನ್ನು ಹೇಳಿ ಕೊಳ್ಳುವುದೂ ಇಲ್ಲ. ಮನೆಗೆ ಬಂದಾಗ ಆಯಾಸವಾಗಿರುತ್ತದೆ. ಮನೆಯಲ್ಲಿ ಇರುವುದು ಆಲಸಿ. ಆಕೆಗೆ ಕೆಲವೊಮ್ಮೆ ರಸ್ತೆ ದಾಟಲು ಕಷ್ಟವಾಗುತ್ತದೆ. 

ಸರಕಾರ ಇಂತಹವರಿಗಾಗಿ ಕೆಲವು ಸವಲತ್ತು ನೀಡಿದೆ. 
ರೈಲಿನಲ್ಲಿ ದೂರದ ಊರಿಗೆ ಪ್ರಯಾಣಿಸುವುದಿದ್ದರೆ ೭೫% ರಿಯಾಯಿತಿ ನೀಡಿದೆ. (ಹವಾನಿಯಂತ್ರಿತ ಕೋಚ್ ನಲ್ಲಿ ಇಲ್ಲ). ಅವರೊಂದಿಗೆ ಸಹಾಯಕರೊಬ್ಬರು ಇರಲೇ ಬೇಕು ಮತ್ತು ಅವರಿಗೂ ಅದೇ ರಿಯಾಯಿತಿ ಇದೆ.( ಹೊಸ ಬದಲಾವಣೆಗಳು ಆಗಿದ್ದರೆ ಗೊತ್ತಿಲ್ಲ)

ತೆರಿಗೆಯಲ್ಲಿ ಸ್ವಲ್ಪ ರಿಯಾಯಿತಿ ಇದೆ. ಆದರೆ ಅಂಗವಿಹೀನತೆಯ ಛಾಯಾಚಿತ್ರ (ಫೋಟೋ) ಕೊಡ ಬೇಕು. (ಹೆಚ್ಚಿನ ಮಾಹಿತಿ ನಮ್ಮಲ್ಲಿ ಇಲ್ಲ)

ಮುಖ್ಯವಾಗಿ ನಾವು ತೊಂದರೆ ಅನುಭವಿಸಿದ್ದು ಮುಂಬಾಯಿ ವಿಮಾನ ನಿಲ್ದಾಣದಲ್ಲಿ. ಅಲ್ಲಿನ ಸುರಕ್ಷಾದಳವರು ತುಂಬಾ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಇದು ಎರಡು ಮೂರು ಸಲ ಪುನರಾವರ್ತನೆಯಾಗಿದೆ. ಒಮ್ಮೆ 
ಕೆಟ್ಟ ಶಬ್ದಗಳನ್ನೂ ಉಪಯೋಗಿಸಿದ್ದಾರೆ. ಕೊಟ್ಟ ದೂರುಗಳು ಕಿವುಡು ಕಿವಿಗಳ ಮೇಲೆ ಬಿದ್ದಿದೆ. ನಮ್ಮ ದೇಶದ ಬೇರೆ ಯಾವುದೇ ವಿಮಾನ ನಿಲ್ದಾಣದಲ್ಲಾಗಲಿ, ವಿದೇಶದ ನಿಲ್ದಾಣದಲ್ಲಾಗಲಿ ಯಾವುದೇ ತೊಂದರೆಯಾಗಿಲ್ಲ. 

*
ನಾನು ನನ್ನ ಹೆಂಡತಿಯನ್ನು ಮೊದಲ ಸಲ ಮಾತನಾಡಿಸಿದಾಗ (ಆಗ ಆಕೆ ನನ್ನ ಹೆಂಡತಿಯಾಗಿರಲಿಲ್ಲ), ನಾನು ಹೇಳಿದ ಮೊದಲ ಮಾತು, “ನಿನ್ನನ್ನು ನಾನು ಕನಿಕರದಿಂದ ನೋಡುವುದಿಲ್ಲ. ಇತರರಂತೆ ಕಾಣುತ್ತೇನೆ.”
ಇಂತಹ ವ್ಯಕ್ತಿಗಳಿಗೆ ನಮ್ಮ ಸಹಾನುಭೂತಿ, ಕರುಣೆಯ ಅಗತ್ಯವಿಲ್ಲ, ಆದರೆ ಅವರ ತೊಂದರೆಗಳ ಅರಿವು ನಮಗೆ ಇರಬೇಕು.

*

ಕೃತಕ ಕಾಲಿನ ಮಾಹಿತಿ ಯಾರಿಗಾದರೂ ಬೇಕಿದ್ದರೆ “ಪಂಜು” ಬಳಗಕ್ಕೆ ನೀಡಿದ್ದೇನೆ. ಅವರನ್ನು ಸಂಪರ್ಕಿಸಿ. 

*

ಗೌಪ್ಯ ಕಾಪಾಡಲು ನನ್ನ ಹೆಸರು ಪ್ರಕಟಿಸದಿರಲು “ಪಂಜು” ಬಳಗದವರನ್ನು ಕೇಳಿಕೊಂಡಿದ್ದೇನೆ. ಅಪ್ರತ್ಯಕ್ಷವಾಗಿ ನನಗೆ ಗೊತ್ತಿರುವ ಮಾಹಿತಿ ಬೇಕಿದ್ದರೆ ತಿಳಿಸುವೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಜೀವನದ ಕೆಲವು ಪುಟಗಳಿಂದ

  1. ನೆಲದಲ್ಲಿ ನೀರು ಚೆಲ್ಲಿದ್ದರೆ, ಆಕೆ ಜಾರುತ್ತಾಳೆ. ತನ್ನ ನೋವನ್ನೂ ಹೇಳಿಕೊಳ್ಳುವುದಿಲ್ಲ. ಅಭ್ಯಾಸವಾಗಿದೆ ಅನ್ನುತ್ತಾಳೆ. ಆದರೆ ಆಕೆಯ ಅಸಾಹಯಕತೆ ನೆನೆದು ನನಗೆ ನೋವಾಗುತ್ತದೆ.

    Ide anubhava nanagoo aguttiruttade,aa vishayadalli hoovinanthe kapaduva
    Nanna gandanigoo ee lekhakarigoo ondu salaamu.

    1. ಧನ್ಯವಾದಗಳು. ಆಕೆ ಕೊನೆಯ ಪ‍ಕ್ಷ ಮನೆಯಲ್ಲಿ ಬೀಳದಂತೆ ನೋದಿಕೊಳ್ಳುವುದು ನನ್ನ ಕರ್ತವ್ಯ. ಇಂತಹ ನೋವುಗಳು ಯಾರಿಗೂ ಬರಕೂಡದು, ಹೆಂಗಸರಿಗೆ ಬರಲೇ ಕೂಡದು. ಸೀರೆ ಉಟ್ಟು ಹೊರ ಹೋಗಲೂ ಕಷ್ಟ. 

Leave a Reply

Your email address will not be published. Required fields are marked *