ಅದ್ಯಾಕೆ ಹೀಗೆ ಅಂತ ನನಗೂ ಗೊತ್ತಿಲ್ಲ. ಮೊದಲಿನಿಂದಲೂ ಹಾಗೆ ಗೆಳತಿಯರು ಅಂತ ಸಮೀಪವಿದ್ದವರೆಲ್ಲ ನನ್ನೊಂದಿಗೆ ಒಂದಿಷ್ಟು ಜಾಸ್ತಿನೇ ಅನ್ನುವಷ್ಟು ಆತ್ಮೀಯರಾಗ್ತಾರೆ. ತಮ್ಮ ಮನಸ್ಸಿನಲ್ಲಿರುವುದನ್ನು ನನ್ನ ಬಳಿ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ಬಹುಶಃ ನಾನು ನನ್ನದೇನೋ ಕೆಲಸವಿದೆ ಎಂದು ಅವರಿಗೆ ಬೆನ್ನು ಹಾಕಿ ಎದ್ದು ಹೋಗದೇ ಇರುವುದರಿಂದಲೋ, ಅವರು ಹೇಳಿದ್ದನ್ನೆಲ್ಲ ದೇವರ ಹಾಗೆ ಕೂತು ಕೇಳಿಸಿಕೊಳ್ಳುತ್ತೇನೆ ಎನ್ನುವುದಕ್ಕೋ ಅಥವಾ ಅವರು ಏನು ಹೇಳಿದರೂ ಅದನ್ನು ಪ್ರಶ್ನಿಸದೇ ಒಪ್ಪಿಕೊಳ್ಳುತ್ತೇನೆ ಎನ್ನುವ ಕಾರಣಕ್ಕೋ, ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ವಯಸ್ಸಿನಲ್ಲಿ ಹೆಚ್ಚು ಕಡಿಮೆ ಹಿರಿಯರು ಕಿರಿಯರು ನನ್ನೊಂದಿಗೆ ಆತ್ಮೀಯರಾಗುತ್ತಾರೆ ಎನ್ನುವುದು ಮಾತ್ರ ಸತ್ಯ.
ನಾನೂ ಅಷ್ಟೆ ನನಗಿರುವ ಎಲ್ಲ ಒತ್ತಡಗಳನ್ನು ಪಕ್ಕಕ್ಕಿಟ್ಟು ಅವರೊಂದಿಗಿಷ್ಟು ಹೊತ್ತು ಹಾಯಾಗಿ ಬೆರೆಯುತ್ತೇನೆ. ನನ್ನಿಂದ ಅವರು ಎಷ್ಟು ಗೌರವ ಪ್ರೀತಿ ಸಹಾಯ ನಿರೀಕ್ಷಿಸುತ್ತಾರೋ ಅಷ್ಟನ್ನು ಕೊಡಲು ಯತ್ನಿಸುತ್ತೇನೆ. ಒಂದಂತೂ ನಿಜ ಅವರು ನನ್ನಂತೆ ಕೇಳಿಸಿಕೊಳ್ಳುವ ಜೀವಕ್ಕಾಗಿ ಹಂಬಲಿಸುತ್ತಾರೆ. ಹೌದು ಅವರಿಗೆ ತಮ್ಮ ಮಾತನ್ನು ಯಾವುದೇ ಕಿರಿ ಕಿರಿ ಇಲ್ಲದೇ ಕೇಳಿಸಿಕೊಳ್ಳುವ ಮತ್ತು ಅವರೊಂದಿಗೆ ಒಂದಿಷ್ಟು ಸಾಂತ್ವನಭರಿತ ಪ್ರೀತಿಯ ಮಾತನಾಡುವ ಜೀವವೊಂದು ಬೇಕಾಗಿರುತ್ತದೆ. ಮನೆಯಲ್ಲಿ ಕೇಳುವ ಕಿವಿಗಳು ಸಿಗುವುದು ದುಸ್ತರ. ಅಕ್ಕ ಪಕ್ಕದವರು ತಲೆ ತಿಂತಾರೆ ಎಂದು ದೂರ ಸರಿಸುತ್ತಾರೆ. ಆತ್ಮೀಯ ಗೆಳತಿಯರು ದೂರದ ಊರಿನಲ್ಲಿದ್ದಾರೆ ಅಷ್ಟು ಸುಲಭಕ್ಕೆ ಮಾತಿಗೆ ಸಿಕ್ಕುವುದಿಲ್ಲ. ಹೀಗಿರುವಾಗ ತನ್ನ ಮನದ ಮಾತುಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಕು?
ಬೇರೆ ಯಾರ ಬಗ್ಗೆಯೂ ನಾನು ಯೋಚಿಸುವುದಿಲ್ಲ ಒಂದು ಸಾರಿ ನನ್ನ ಬಾಲ್ಯದ ಮತ್ತು ಕಾಲೇಜಿನ ಗೆಳತಿಯರ ಬಗೆಗೆ ಯೋಚಿಸುತ್ತೇನೆ. ಅದರ ಮರುಕ್ಷಣವೇ ನನಗೆ ಮೂವತೈದು ವಸಂತಗಳನ್ನು ಹಿಂದಕ್ಕೆ ಬಿಟ್ಟಿರುವ ನನ್ನ ಭೂತದ ನೆನಪುಗಳು ಸುತ್ತಿಕೊಳ್ಳುತ್ತವೆ. . ಭವಿಷ್ಯದ ಬಾಯಿಗೆ ಕಿವಿಯಾದಾಗ ಸುತ್ತ ಮುತ್ತಲಿರುವ ಎಲ್ಲ ಹಿರಿಯ ಕಿರಿಯ ಗೆಳತಿಯರ ಮಾತುಗಳಿಗೆ ಸದಾ ತೆರೆದಿಟ್ಟ ಆಲಿಸುವ ಕಿವಿಗಳಾಗಬೇಕು ಎನ್ನಿಸಿಬಿಡುತ್ತದೆ. ಯಾವ ಯಾವುದಕ್ಕೆ ಸುಮ್ಮನೆ ಸಮಯವನ್ನು ಕಳೆದು ಬಿಡುವ ನಾವು ಅದರಲ್ಲೇ ಒಂದಿಷ್ಟು ಹೊತ್ತನ್ನು ಇಂಥ ಮನಸ್ಸುಗಳಿಗಾಗಿ ಕಳೆದು ಬಿಡಬೇಕು ಅನ್ನಿಸುತ್ತದೆ. ಇದೇ ಕಾರಣಕ್ಕೆ ನಾನು ಅದೆಷ್ಟೇ ಬ್ಯೂಸಿ ಇದ್ದರೂ ಎಲ್ಲೇ ಇದ್ದರೂ ಮನೆಗೊಂದು ಫೋನ್ ಮಾಡುವುದನ್ನು ತಪ್ಪಿಸಿರಲಿಲ್ಲ.
ದುಡಿದ ಹಣದಲ್ಲಿ ಅಪ್ಪ ಅವ್ವನ ಕೈಗೆ ತಿಂಗಳಿಗಿಷ್ಟು ಕೊಟ್ಟು ನನ್ನ ಬಗ್ಗೆ ಹೆಮ್ಮೆಯ ಭಾವ ಮೂಡಿಸೋಣವೆಂದರೆ, ಶ್ರಮವೇ ಜೀವನ ಎಂದು ದುಡಿದು ಗಳಿಸಿದ ಹಣವಿದೆ. ಹಿರಿಯರು ಮಾಡಿಟ್ಟ ಜಮೀನು ಬಂಗಾರ ಬೆಳ್ಳಿ ಸಾಕಷ್ಟಿದೆ. ಹಳೆಯ ತಲೆಮಾರಿನ ಹಳೆಯ ಮನೆ (ಗೌಡಕಿ ಮನೆತನದ ಮನೆ) ಅಷ್ಟೇ ಅಲ್ಲ ಈಗಿನ ಕಾಲಕ್ಕೆ ಒಪ್ಪುವಂಥ ಶಾನದಾರ ಮನೆ ಯಜಮಾನರು ಅವರು! ಹೀಗಿರುವಾಗ ನಾನು ಅವರಿಗೆ ಧನ ಸಹಾಯ ಮಾಡೋದೇನು ಬಂತು ಇರೋ ಒಬ್ಬಳು ಮಗಳು ಹಬ್ಬ ಹರಿದಿನ ಸೂಟಿಗೆ ಬರದಿದ್ದರೆ ಹೇಗೆ? ಎಂದು ಹಕ್ಕಿನಿಂದ ಕರೆಯುವ ಅಪ್ಪ ಮುದ್ದು ಮಗಳು ಅಂತ ಸಾಥ್ ಕೊಡುವ ಹಡದವ್ವನ ನೆನೆದರೆ ಅದ್ಯಾವ ಜನುಮದಲ್ಲಿ ಪುಣ್ಯ ಮಾಡಿದ್ದೀನಿ ಏನೋ ಇಂಥ ತಂದೆ ತಾಯಿ ಪಡೆಯಲು ಅಂತ ಎಷ್ಟೋ ಸಾರಿ ಅನಿಸಿದ್ದುಂಟು.
ನಾನು ಬರ್ತಿನಿ ಎನ್ನುವ ಸುದ್ದಿ ತಿಳಿದ ಕೂಡಲೇ ತನ್ನ ಮೈ ಕೈ ನೋವುಗಳನ್ನು ದೂರ ಸರಿಸಿ ನನಗಿಷ್ಟವಾಗುವ ತಿಂಡಿಗಳ ಸಿದ್ಧತೆಗೆ ಹೊಸ ಹುರುಪಿನಿಂದಲೇ ಅಣಿಯಾಗುತ್ತಾಳೆ. ನನ್ನ ಬಾಯಿ ಅನ್ನೋ ಟೇಸ್ಟ್ ಟೆಸ್ಟರ್‍ಗೆ ಹಾಕಿ ಖುಷಿ ಪಡುತ್ತಾಳೆ. ಬರೋವಾಗ ಕಾರ್ ಡಿಕ್ಕಿ ತುಂಬ ತರ ತರಹದ ತಿಂಡಿ ತಿನಿಸುಗಳಿಂದ ತುಂಬಿಸುತ್ತಾಳೆ. ಒಲ್ಲದ ಮನಸ್ಸಿನಿಂದ ಕೈ ಬೀಸಿ ಕಣ್ತುಂಬ ನೀರು ತುಂಬಿಸಿಕೊಂಡು ದೀಪಾವಳಿ ಹಬ್ಬಕ್ಕ ತಪ್ಪಸಬ್ಯಾಡ್ರೀ ಎರಡು ದಿನ ಸೂಟಿ ಹಾಕಿ ಮೊದಲಿಗೆ ಬರ್ರೀ ಎಂದು ಭಾರವಾದ ಎದೆಯಿಂದ, ನಮ್ಮ ಕಾರು ಧೂಳೆಬ್ಬಿಸಿ ದೂರ ಓಡುವವರೆಗೂ ಅಲ್ಲೇ ನಿಂತಿರ್ತಾಳೆ. ಹೀಗೆ ಪ್ರೀತಿ ತೋರಿಸುವುದಕ್ಕೆ ಹಡೆದವ್ವ ಅಂತಾರೇನೋ? ನಾನು ನನ್ನ ಮಗಳಿಗೆ ಮುಂದೆ ಇಷ್ಟೊಂದು ಕಾಳಜಿ ಪ್ರೀತಿ ತೋರಿಸಲು ಸಾಧ್ಯ ಅದ ಏನು? ಎನ್ನುವ ಹತ್ತಾರು ಪ್ರಶ್ನೆಗಳು ತಲೆಯನ್ನು ತುಂಬುತ್ತವೆ. ಈ ನಡುವೆ ಅವ್ವನ ಮಮತೆಯ ಮಡಿಲಲ್ಲಿ ಮಲಗಿದ ಆ ಕ್ಷಣಗಳು ಕಣ್ಮುಂದೆ ಬಂದಾಗ ಕಣ್ಣಾಲಿಗಳು ಒದ್ದೆಯಾಗಿ ಕೆನ್ನೆಯನ್ನೂ ತೋಯಿಸಿ ಬಿಡುತ್ತವೆ.
ಅಪ್ಪ ಅವ್ವನ ಬಗೆಗೆ ಮೊದಲಿನಿಂದಲೂ ಅದೇನೋ ಅವ್ಯಕ್ತ ಪ್ರೀತಿ ಮನದಲ್ಲಿ. ಅದನ್ನು ಹೇಗೆ ಅಭಿವ್ಯಕ್ತಿಸುವುದು ಗೊತ್ತಿಲ್ಲ.ದೇ ನೆನಪು ಅತಿಯಾಗಿ ಕಾಡಿದಾಗಲೊಮ್ಮೆ ಕೈಗೆ ಫೋನ್ ಎತ್ತಿಕೊಂಡು ಅವರ ದನಿಗೆ ಕಿವಿಯಾಗುತ್ತೇನೆ ನಿಜವಾಗಿಯೂ ದಿನಕ್ಕೆ ನೂರಾರು ಬಾರಿ ಅವರನ್ನು ನೆನಯದೇ ಇರುವುದಿಲ್ಲ. ಇಳಿ ವಯಸ್ಸಿನ ಬಗೆಗೆ ಪುಟ್ಟ ಕಾಳಜಿಯಿದೆ. ಎನ್ನುವುದನ್ನು ಫೋನಿನಲ್ಲಿ ಅಮೂಲ್ಯವಾದ ಪ್ರೀತಿಯ ಮಾತುಗಳಿಂದ ವ್ಯಕ್ತಪಡಿಸಿಬಿಟ್ಟರೆ ಅವರ ಬದುಕಿನ ಖುಷಿ ಕಾರಂಜಿಯಾಗುತ್ತದೆ. ಈ ಎಪ್ಪತ್ತರ ಹರೆಯದಲ್ಲೂ ಬದುಕಿನ ಉತ್ಸಾಹಗಳಿಗೆ ರಾಕೆಟ್ ವೇಗ ಬರುತ್ತದೆ.
ಇತ್ತೀಚಿಗೆ ಕೆಲ ದಿನಗಳಿಂದ ನಾನು ಏನೇನೋ ಕೆಲಸದ ನಿಮಿತ್ತ ಊರುಗಳ ಸುತ್ತಾಟದಲ್ಲಿ ಅವರ ಯೋಗ ಕ್ಷೇಮಕ್ಕೆ ರಿಂಗ್ ಮಾಡುವುದನ್ನು ಬಿಟ್ಟಿದ್ದಕ್ಕೆ ಮನದಲ್ಲಿ ಕಳವಳ ಶುರುವಾಗಿತ್ತು. ಅದೇ ಸಮಯದಲ್ಲಿ ಇಂದು ರವಿವಾರ ಇವತ್ತಾದರೂ ನಿನ್ನ ಫೋನ್ ಬರುತ್ತೆ ಅಂತ ಕಾದು, ನಾನೇ ಫೋನ್ ಮಾಡಿದೆ ಎನ್ನುವ ಅವ್ವನ ಮಾತು ಕೇಳಿದಾಗ ಕಣ್ಣಂಚಿನಲ್ಲಿ ನೀರಾಡಿತ್ತು. ಮುಂದೊಂದು ದಿನ ನಾನು ಮಗಳ ದನಿಗಾಗಿ ಹೀಗೆ ಕಾಯಬಹುದೇನೋ ಎಂಬ ಭಯ ಮನದಾಳದಲ್ಲಿ ಮನೆ ಮಾಡಿತು. ಹೌದು ನಾವೀಗ ಹುಚ್ಚು ಹರೆಯದಲ್ಲಿದ್ದೇವೆ. ದಿನದ ಇಪ್ಪತ್ನಾಲ್ಕು ಗಂಟೆ ದುಡಿಯಬಲ್ಲೆ ಎನ್ನುವ ಹುಚ್ಚು ಧೈರ್ಯ. ಇದೆಲ್ಲ ಎಲ್ಲಿಯವರೆಗೆ? ನಾವಿಂದು ಇದ್ದ ಜಾಗದಲ್ಲಿ ಇಂದಿನ ಹಿರಿಯ ಜೀವಗಳು ಇದ್ದಿರಲಿಲ್ಲವೇ? ಕೈಯಲ್ಲಿಯೇ ಕಲ್ಲನ್ನು ಕುಟ್ಟಿ ಪುಡಿ ಮಾಡುವ ತಾಕತ್ತಿತ್ತು. ಆಗ ಅವರಿಗೆ.ಆದರೆ ಇವತ್ತು ಅದೆಲ್ಲವೂ ಕೇವಲ ನೆನಪಷ್ಟೇ! ಬೇಡ ಬೇಡವೆಂದರೂ ಇಂದು ಬದುಕು ಸುಕ್ಕು ಸುಕ್ಕಾದ ಪುಟಗಳನ್ನು ತೆರೆಯುತ್ತಿದೆ. ಬೇರೆಯವರನ್ನು ಅವಲಂಬಿಸುವ ಹಂತಕ್ಕೆ ಬಂದು ನಿಂತಿದೆ.
ಸಂಜೆ ಹೊತ್ತು ಆಫೀಸಿನಿಂದ ಬಂದು ಮಗ/ಳು ಫೊನ್ ಹಚ್ಚಿ ತನ್ನ ಯೋಗ ಕ್ಷೇಮ ವಿಚಾರಿಸಿಕೊಳ್ತಾನೆ/ಳೆ ಎಂದು ಕಾದು ಕುಳಿತಿರುವ ಗುರುತು ಪರಿಚಯವಿಲ್ಲದ ಹಿರಿಯ ಜೀವಿಗಳು ಆ ಕಡೆಯಿಂದ ಫೋನ್ ರಿಂಗ್ ಆಗದೇ ಇರುವ ಹೊತ್ತಿನಲ್ಲಿ,ನಗೆ ಬಿರಿದ ಹೂಗಳ ಮಧ್ಯೆ ಉದ್ಯಾನವನದಲ್ಲಿ ಒಣಗಿದ ಮುಖ ಹೊತ್ತು ಕುಳಿತುಕೊಂಡಿರುತ್ತಾರೆ.ಇಂಥವರ ಮಾತಿಗೆ ಕಿವಿ ತೆರೆಯುತ್ತೇನೆ. ಹೀಗೆ ಹಿರಿಯ ಜೀವಿಗಳ ಮಾತಿಗೆ ಹೃದಯ ಮಿಡಿದಾಗಲೆಲ್ಲ ದೂರದಲ್ಲಿರುವ ಅಪ್ಪ ಅವ್ವ ಕಣ್ಮುಂದೆ ಬಂದು ಬಿಡುತ್ತಾರೆ.
ಹೆಚ್ಚಿನ ಬಾರಿ ನಾವು ಅಂದುಕೊಂಡಷ್ಟು ಬ್ಯೂಸಿ ಆಗಿರುವುದಿಲ್ಲ. ಕೆಲಸ ಮಾಡುತ್ತಿರುವ ಸಮಯದಲ್ಲೂ ಕೆಲ ಸಮಯ ಖಾಲಿ ಇದ್ದೇ ಇರುತ್ತೇವೆ. ಇಂಥ ಕೆಲವೊಂದು ಸಂದರ್ಭಗಳಲ್ಲಿ ಯೋಗ ಕ್ಷೇಮ ವಿಚಾರಿಸಿ ನೆಗ್ಗುತ್ತಿರುವ ಬದುಕನ್ನು ಸುಧಾರಿಸಿಕೊಳ್ಳಬಹುದು. ದಾವಂತದ ಹೆಸರಿನಲ್ಲಿ ಬದುಕು ನೀಡಿದ ಜೀವಿಗಳನ್ನು ದೂರ ಇಟ್ಟಿರುವ ನಾವು ಈ ನೆಪದಿಂದ ಹೊರ ಬಂದು ಯೋಚಿಸಿದರೆ ವಿಷಯದ ಗಂಭೀರತೆ ಅರ್ಥವಾಗುತ್ತದೆ. ಹಿಂದೆ ಮುಂದೆ ಯೋಚಿಸದೇ ಮುನ್ನಡೆಯುತ್ತಿರುವ ಬದುಕಿನ ಬಂಡಿಗೆ ಒಂದು ಬ್ರೇಕ್ ಹಾಕಿದಾಗ ಒಳ್ಳೆಯ ನಿರ್ಧಾರ ಬಂದೇ ಬರುತ್ತದೆ. ಹಿರಿಯ ಜೀವಿಗಳಿಗಾಗಿ ಕೆಲ ಸಮಯ ಸಿಕ್ಕೇ ಸಿಗುತ್ತದೆ. ಈ ಒಳ್ಳೆಯ ನಿರ್ಧಾರದಿಂದ ನಂತರದ ನರಳಾಟಗಳಂತೂ ಸನಿಹ ಸುಳಿಯುವುದಿಲ್ಲ. ಅಲ್ಲಿ ಬೇರೆಯವರ ಬದುಕು ಅರಳುವುದಿಲ್ಲ. ನಮ್ಮ ಬದುಕೇ ನಸುನಗುತ್ತದೆ. ಎದೆ ಗೂಡಿನಲ್ಲಿ ಉಸಿರು ತುಂಬಿರುವ ಜೀವಿಗಳಿಗೆ, ಪ್ರೀತಿಯ ತುತ್ತಿಗಾಗಿ ಕಾದಿರುವ ಹಿರಿಯ ಜೀವಿಗಳಿಗೆ ಅವರ ಜೀವನದ ಅಂಚಿನಲ್ಲಿರುವ ಪುಟಗಳನ್ನು ಪ್ರೀತಿಯ ಬಣ್ಣದಿಂದ .ತುಂಬೋಣ. ಮುಂದೊಂದು ದಿನ ಪಶ್ಚಾತ್ತಾಪ ಕಾಡದಂತೆ, ನೆಮ್ಮದಿಯ ನಾಳೆಗಳನ್ನು ಭದ್ರಪಡಿಸಿಕೊಳ್ಳೋಣವಲ್ಲವೇ?
-ಜಯಶ್ರೀ. ಜೆ. ಅಬ್ಬಿಗೇರಿ, ಬೆಳಗಾವಿ