ಅಂದು ತರಗತಿಯಲ್ಲಿ ಜೀವನ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಹೇಳುವಾಗ, ಮುಂದೆ ಯಾರ್ಯಾರು ಏನಾಗಲು ಬಯಸುತ್ತೀರಿ? ಎಂದು ಕೇಳಿದೆ.ಕೆಲವರು ಮಾಮೂಲಿಯಂತೆ ಡಾಕ್ಟರ್, ಇಂಜಿನಿಯರ್, ಪೊಲೀಸ್, ಲಾಯರ್, ಕವಿ, ಬರಹಗಾರ, ಮುಖ್ಯಮಂತ್ರಿ, ಶಿಕ್ಷಕ…ಹೀಗೆ ಅನೇಕ ಆಯ್ಕೆಗಳನ್ನು ತಮ್ಮ ಅಭಿಲಾಷೆಯಂತೆ ಹೇಳಿಕೊಂಡರು. ಶಹಬ್ಬಾಸ್ ಗಿರಿ ಕೊಟ್ಟು, ಅವೆಲ್ಲವನ್ನು ಆಗಬೇಕಾದರೆ ಏನು ಪೂರ್ವ ತಯಾರಿ ಮಾಡಿಕೊಳ್ಳಬೇಕೆಂಬುದು ನಿಮಗೇ ಗೊತ್ತೇ ಎಂಬ ನನ್ನ ಮರು ಪ್ರಶ್ನೆಗೆ ಅವರು ತಲೆಯಾಡಿಸಿದರು. ಅವರಿಗ ವಿಷಯ ಮನದಟ್ಟು ಮಾಡಿಕೊಡಲು ಈ ಉದಾಹರಣೆ ಹೇಳಿದೆ.
ಪತ್ರಿಕೆಗಳಲ್ಲಿ ನನ್ನ ಕತೆ, ಚುಟುಕ, ಲೇಖನ ಗಳು ಪ್ರಕಟವಾಗುವ ಮೂಲಕ ನಾನೂ ಒಬ್ಬ ಲೇಖಕ ಅನ್ನಿಸಿಕೊಳ್ಳಬೇಕು ಎಂದರೆ ಏನು ಮಾಡಬೇಕು? ಮೊದಲಿಗೆ ಬಳಸುವ ಭಾಷೆಯಲ್ಲಿ ಪ್ರಬುದ್ಧತೆ ಇರಬೇಕು. ಶಬ್ದ ಭಂಡಾರ ಹೆಚ್ಚಿರಬೇಕು, ವಿಷಯಗಳನ್ನು ಸ್ವಂತ ವಾಕ್ಯಗಳಲ್ಲಿ ನಿರೂಪಿಸುವ ಸಾಮರ್ಥ್ಯ ಪಡೆಯಬೇಕು. ಅದರ ಸಿದ್ಧಿಗಾಗಿ ಹೆಚ್ಚಾಗಿ ಕವಿ/ಲೇಖಕರು ಬರೆದ ಬರಹಗಳನ್ನು ಓದಿ ಅರ್ಥೈಸಿಕೊಂಡು, ಅವರ ಶೈಲಿಯಲ್ಲಿ ಇಷ್ಟವಾದುದನ್ನು ಅನುಸರಿಸಿ ಸ್ವತಃ ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಇಷ್ಟಾದ ಮೇಲೆ ಆಸಕ್ತಿ ಇರುವ ವಿಷಯ ಕುರಿತು ಕತೆ, ಕವನ, ಲೇಖನಗಳನ್ನು ಬರೆದು ಅಂಚೆ ಅಥವಾ ಇಮೇಲ್ ಮೂಲಕ ಪತ್ರಿಕೆಗಳಿಗೆ ಕಳಿಸಿಕೊಡಬೇಕು. ಒಮ್ಮೆಗೇ ಪ್ರಕಟವಾಗಲಿಲ್ಲ ಎಂದ ಮಾತ್ರಕ್ಕೆ ನಿರಾಸೆ ಹೊಂದದೆ ಮರಳಿ ಯತ್ನವ ಮಾಡುತ್ತಿರಬೇಕು. ಈ ಅಭ್ಯಾಸದಿಂದ ಬರಹದಲ್ಲಿ ಪಕ್ವತೆ ಉಂಟಾಗಿ ಖಂಡಿತಾ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ.ಆಗ ನಿಮ್ಮ ಗುರಿ ಸಾಧಿಸಿದಂತಾಗುತ್ತದೆಯಲ್ಲವೇ.
ಪ್ರಯತ್ನವೇ ಫಲದ ಮೂಲ:
ನಮ್ಮ ಗುರಿಯು ಈಡೇರಬೇಕಾದರೆ ಮೊದಲು ನಮ್ಮಲ್ಲಿ ಆಸಕ್ತಿ ಅಭ್ಯಾಸ ಮತ್ತು ತಕ್ಕ ಪರಿಶ್ರಮ ಇರಬೇಕಾಗುತ್ತದೆ. ಡಾ.ಎ.ಪಿ.ಜೆ ಅಬ್ದುಲ್ ಕಲಾಮ್ ಹೇಳುವಂತೆ "ನಿದ್ದೆಯಲ್ಲಿ ಕನಸು ಕಾಣುವುದಕ್ಕಿಂತ ಇತರರು ನಿದ್ರೆಗೆಡುವಂತೆ ಕಂಡ ಕನಸು ನನಸು ಮಾಡಿಕೊಳ್ಳುವುದು ಸಾಧನೆ".
ಗುರಿಯಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತೆ ಎಂಬುದನ್ನು ಅರಿತು ಬದುಕಿನಲ್ಲಿ ಗುರಿಯನ್ನು ಇಟ್ಟುಕೊಂಡು ಅದರ ಸಿದ್ಧಿಗಾಗಿ ಶ್ರಮಿಸಬೇಕು.
ಸಾಧನೆಗೆ ಸಾಧನ ಶಿಕ್ಷಣ;
ನಾವು ಏನೇ ಸಾಧನೆ ಮಾಡಬೇಕಾದರೆ ಮೊದಲು ಬೇಕಾದುದು "ಗುಣಮಟ್ಟದ ಶಿಕ್ಷಣ". ಇದನ್ನು ಪಡೆಯಬೇಕಾದರೆ ಗುರುಗಳ ಮಾರ್ಗ ದರ್ಶನದಂತೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ತುಂಬಾ ಚೆನ್ನಾಗಿ ವ್ಯಾಸಂಗ ಮಾಡುವ ಮೂಲಕ ಅರಿವಿನ ಮನೆಗೆ ಭದ್ರ ಬುನಾದಿ ಹಾಕಿಕೊಳ್ಳಬೇಕು. ಮುಂದೆ ಕಾಲೇಜು ಶಿಕ್ಷಣದಲ್ಲಿ ಆಸಕ್ತಿ ಇರುವ ವಿಷಯಗಳಲ್ಲಿ ವಿವಿಧ ಕೋರ್ಸ್ ಗಳಲ್ಲಿ ಉನ್ನತ ಜ್ಞಾನವನ್ನು ಪಡೆದು, ಅದಕ್ಕೆ ತಕ್ಕಂತಹ ನೌಕರಿ, ವ್ಯಾಪಾರ, ವ್ಯವಹಾರಗಳಲ್ಲಿ ತೊಡಗಿಕೊಂಡು, ತಮ್ಮ ಬಾಲ್ಯದ ಗುರಿಯನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಆ ಮೂಲಕ ಬದುಕನ್ನು ಸುಂದರವಾಗಿಸಿಕೊಂಡು ನೆಮ್ಮದಿಯಿಂದ ಬಾಳಬಹುದಾಗಿದೆಯಲ್ಲವೇ.
ಮುಖ್ಯಾಂಶಗಳು:
*ಕಲಿಕೆಯಲ್ಲಿ ಆಸಕ್ತಿಯೇ ತಾಯಿ; ಅಭ್ಯಾಸವೇ ತಂದೆ ಎಂಬುದನ್ನು ಅರಿಯಿರಿ.
*ನಿಯಮಿತವಾಗಿ ಕಲಿಕಾ ಪ್ರಕ್ರಿಯೆಯಲ್ಲಿ ಭಾಗವಹಿಸಿ.
*ಸ್ಪರ್ಧಾತ್ಮಕ ಬದುಕಿಗೆ ಬೇಕಾದ ಗರಿಷ್ಠ ಜ್ಞಾನ ಸಂಪಾದನೆ ಮುಖ್ಯ.
*ನಿರ್ದಿಷ್ಟ ಗುರಿಯ ಕಡೆ ಸದಾ ತುಡಿತವಿರಲಿ.
*ಜ್ಞಾನ ವರ್ಧನೆಗೆ , ಮನೋವಿಕಾಸಕ್ಕೆ ಪೂರಕವಾದ ಹವ್ಯಾಸ ಬೆಳೆಸಿಕೊಳ್ಳಿ.
*ಸಾಧಕರ ಜೀವನ ಚರಿತ್ರೆ ಓದಿ ಸ್ಫೂರ್ತಿ ಪಡೆದು, ಆತ್ಮವಿಶ್ವಾಸ ವೃದ್ಧಿಸಿಕೊಳ್ಳಿ.
*ಗುರುಗಳ, ಹಿರಿಯರ ಮಾರ್ಗದರ್ಶನದ ಶ್ರೀರಕ್ಷೆ ಸದಾ ಜೊತೆಗಿರಲಿ.
*ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಬಗ್ಗೆ ದೃಢ ನಿರ್ಧಾರ ಹೊಂದಿರಬೇಕು.
********