ಜೀವದ ಪ್ರಾಮುಖ್ಯತೆ: ಗಿರಿಜಾ ಜ್ಞಾನಸುಂದರ್

ಅಹ್! ದೇಹ ಹಗುರವಾಗುತ್ತಿರುವ ಅನುಭವ! ಏನಾಯಿತು ಅಷ್ಟೊಂದು ನೋವಾಗುತ್ತಿದ್ದ ದೇಹಕ್ಕೆ? ಪ್ರಸಾದ್ ಯೋಚಿಸುತಿದ್ದಂತೆ ತಿಳಿಯಿತು ಅವನ ಆತ್ಮ ದೇಹದಿಂದ ಹೊರಗೆ ಬಂದಿದೆ!! ಹಾಗಾಗಿ ನೋವು ಮರೆಯಾಗಿದೆ…. ತಾನು ಮನನೊಂದು ಆತ್ಮಹತ್ಯೆ ಮಾಡಿಕೊಂಡದ್ದು ನೆನಪಿಗೆ ಬಂತು…..

ಕಷ್ಟಪಟ್ಟು ಓದಿ ಶಾಲೆಯಲ್ಲಿ ಮೊದಲನೆಯವನಾಗಿದ್ದ ಪ್ರಸಾದ್. ಎಲ್ಲದರಲ್ಲೂ ಮೊದಲು. ಆಟ ಪಾಠ, ವಿದ್ಯೆ, ಪರಿಶ್ರಮ, ಸಹನೆ, ಸ್ನೇಹ ಎಲ್ಲದರಲ್ಲೂ. ಅತ್ಯಂತ ಶ್ರದ್ಧೆಯಿಂದ ಓದಿ ಡಾಕ್ಟರ್ ಆಗಿದ್ದು ಆಯಿತು. ಉತ್ತಮ ರಾಂಕ್ ಗಳಿಸಿದ್ದಕ್ಕಾಗಿ ಸರ್ಕಾರಿ ಉದ್ಯೋಗವು ಆಯಿತು. ಡಾಕ್ಟರ್ ಆಗಿ ತನ್ನ ಕರ್ತವ್ಯ ಪಾಲನೆಯಲ್ಲಿ ಮನಸ್ಸಿಟ್ಟು ಕೆಲಸ ಮಾಡುತ್ತಿದ್ದ. ನಿಷ್ಠಾವಂತ ಡಾಕ್ಟರ್ ಎಂದು ಆಗಲೇ ಹೆಸರು ಮಾಡಿದ್ದ. ಅವನ ಮಾತನ್ನು ಯಾರು ತಳ್ಳಿ ಹಾಕುತ್ತಿರಲಿಲ್ಲ. ಅವನ ಮಾತಿನಲ್ಲಿ ಗಾಂಭೀರ್ಯ ಹಾಗು ವಿಷಯದ ಮೇಲಿನ ಹಿಡಿತ ಎಂಥವರನ್ನು ಬೆರಗುಗೊಳಿಸುವಂತಿತ್ತು. ಅಂಥದರಲ್ಲಿ ಅವನ ಅಧಿಕಾರಿಗೆ ಮಾತ್ರ ಅವನು ಸಾಧಾರಣ ಡಾಕ್ಟರ್ ಅನ್ನಿಸುತ್ತೇನೋ. ಅವನ ಯಾವುದೇ ಕಾರ್ಯಗಳು ಅವರನ್ನು ಸಂತೋಷಪಡಿಸುತ್ತಿರಲಿಲ್ಲ. ಸಂತೋಷವಾದರೂ, ತೋರಿಸಿಕೊಳ್ಳಬಾರದೆಂದು ಮುಖ ಸಿಂಡರಿಸಿಕೊಂಡಿರುತ್ತಿದರು. ಏಕೆಂದು ಪ್ರಸಾದ್ ಬಹಳ ಬಾರಿ ತಲೆ ಕೆಡಿಸಿಕೊಂಡಿದ್ದರು ತಿಳಿದಿರಲಿಲ್ಲ. ಏನೋ ಮನೆಯಲ್ಲಿ ಸಮಸ್ಯೆ ಇರಬಹುದೆಂದು ಯೋಚಿಸುತ್ತಿದ್ದ. ಅದು ಬಹಳಷ್ಟು ಮಟ್ಟಿಗೆ ಸತ್ಯವು ಆಗಿತ್ತು. ಆತ ತನ್ನ ಕುಟುಂಬದವರೊಂದಿಗೆ ಅಷ್ಟಾಗಿ ಹೊಂದಿಕೊಂಡಿರಲಿಲ್ಲ, ದಿನವೂ ಮನಸ್ತಾಪ, ಸಣ್ಣ ಪುಟ್ಟ ಜಗಳದಿಂದ ಬೇಸತ್ತಿದ್ದ ಅವನಿಗೆ ಪ್ರಸಾದ್ ಅಷ್ಟೊಂದು ಚುರುಕಾಗಿರುವುದು ಅಸಹನೀಯವಾಗಿ ಕಾಣಿಸುತ್ತಿತ್ತು.

ತನ್ನ ಆಸ್ಪತ್ರೆಯಲ್ಲಿ ಎಲ್ಲರೊಂದಿಗೂ ಚೆನ್ನಾಗಿದ್ದ ಪ್ರಸಾದ್ ಗೆ, ಯಾಕೋ ತನ್ನ ಜೀವನದ ಬಗ್ಗೆ ಅಸಹನೆ ಕಾಡುತ್ತಿತ್ತು. ತನ್ನ ಸಂಬಂಧಿಕರು ಆಡುವ ಕಿಡಿಮಾತುಗಳು ಮನಸ್ಸಿಗೆ ನೋವುಂಟು ಮಾಡುತ್ತಿತ್ತು. ಆತನ ಯಶಸ್ಸು ಅವರನ್ನು ಅಣಕಿಸುವ ಹಾಗಿತ್ತು. ಅದನ್ನು ಸಹಿಸದೆ ಅವನ ಏನಾದರು ಸಣ್ಣ ಪುಟ್ಟ ನ್ಯೂನ್ಯತೆಗಳ ಬಗ್ಗೆ ದೊಡ್ಡದಾಗಿ ಮಾತನಾಡುತ್ತ ಅವನ ಮನಸ್ಸಿಗೆ ಹಿಂಸೆ ಮಾಡುತ್ತಿದ್ದರು. ವಯಸ್ಸಾದ ಆತನ ತಾಯಿತಂದೆ ಸಹ ಸಂಬಂಧಿಕರ ಮಾತನ್ನು ನಿಜವೆಂದು ತಮ್ಮ ಮಗನ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿದಾದರೂ, ಆತನ ಏಳಿಗೆಯ ಬಗ್ಗೆ ಅವರಿಗೆ ಸಮಾಧಾನವಿತ್ತು.

ಸ್ಪುರಧ್ರೂಪಿ ಆಗಿದ್ದ ಪ್ರಸಾದ್ ಗೆ ಬಹಳ ಗೆಳೆಯರು ಗೆಳತಿಯರು. ಅವನ ಗೆಳತಿಯರಿಗೆ ಅವನ ಸಾಧಾರಣ ನಡೆ ನುಡಿ ಬಹಳ ಇಷ್ಟವಾಗುತ್ತಿತ್ತು. ಆದರೆ ಅವನು ಎಲ್ಲರೊಡನೆ ತುಂಬ ಪ್ರೀತಿಯಿಂದ ಇರುತ್ತಿದ್ದುದರಿಂದ ಎಲ್ಲಿ ಅವನೊಂದಿದೆ ಸ್ನೇಹಕ್ಕೆ ಧಕ್ಕೆ ಬರುವುದೋ ಎಂದು ಅವನ ಮೇಲಿನ ಆಕರ್ಷಣೆಯನ್ನು ತಮ್ಮಲ್ಲೇ ಮುಚ್ಚಿಟ್ಟುಕೊಳ್ಳುತ್ತಿದರು. ಅವನ ಮನಸ್ಸಿಗೆ ಹಿತವೆನಿಸುವ ಗೆಳತಿಯರು ಒಂದಿಬ್ಬರು ಇದ್ದರು, ಅವನಿಗೆ ಅವನ ಪ್ರೀತಿಯ ಬಗ್ಗೆ ಹೇಳುವ ಧೈರ್ಯವಿರಲಿಲ್ಲ. ಹಾಗಾಗಿ ಅದು ಸದಾ ಸ್ನೇಹವಾಗಿಯೇ ಇರುತ್ತಿತ್ತು.

ಒಮ್ಮೆ ತನ್ನೊಡನೆ ಕೆಲಸಮಾಡುವ ಡಾಕ್ಟರ್ ಸುಮಾಳನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ಪ್ರಸಾದ್. ಅವಳು ಸಹ ಹಾಗೆಯೇ ಇದ್ದಳು. ಇಬ್ಬರು ಮನಸ್ಸು ಬಿಚ್ಚಿ ಮಾತನಾಡಲು ಹಿಂಜರಿಯುತ್ತಿದ್ದರು. ಪ್ರಸಾದ್ ನ ದೊಡ್ಡಪ್ಪನ ಮಗ ಅಭಿ ಅವನನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದು, ಸುಮಾಳನ್ನು ಅವನೊಡನೆ ಕಂಡು ನಾನೇನು ಅವನಿಗಿಂತ ಕಮ್ಮಿ ಇಲ್ಲವೆಂದು ತೋರಿಸಲು ಯೋಚಿಸಿದನು. ಸುಮಾ ಯಾವ ವಿಷಯದ ತಜ್ಞೆ ಎಂದು ತಿಳಿದು ಅವಳ ವಿಷಯ ಸಂಗ್ರಹಿಸಿದನು. ಅವಳ ವಿಳಾಸ, ತಂದೆ ತಾಯಿ ಎಲ್ಲವನ್ನು ವಿಚಾರಿಸಿ ತಿಳಿದುಕೊಂಡನು. ಒಮ್ಮೆ ಪ್ರಸಾದ್ ಇಲ್ಲದ್ದನ್ನು ಖಾತ್ರಿ ಮಾಡಿಕೊಂಡು, ಬೇಕಂತಲೇ ಸುಮಾಳನ್ನು ಮಾತನಾಡಿಸಿಕೊಂಡು ಹೊರಗೆ ಕರೆದು ಕೊಂಡು ಹೋದನು. ಆಕರ್ಷಕ ವ್ಯಕ್ತಿತ್ವ, ತನ್ನ ಮಾತಿನಲ್ಲಿ ಅವಳನ್ನು ಮೋಡಿ ಮಾಡುತ್ತ ಅವಳನ್ನು ತನ್ನತ್ತ ಸೆಳೆದನು. ಅವರ ಒಡನಾಟ ಹೆಚ್ಚಾಗುತ್ತಾ ಬಂತು. ಪ್ರಸಾದ್ ಅದನ್ನು ಸೂಕ್ಷ್ಮವಾಗಿ ಗಮನಿಸಿದ. ಅವನ ಮನಸ್ಸು ತಳಮಳ ಗೊಂಡಿತು. ಆದರೂ ಅವರಿಬ್ಬರೂ ಸಂತೋಷದಿಂದ ಇರುವುದನ್ನು ಕಂಡು ತನ್ನ ಮನಸ್ಸನ್ನು ಸಮಾಧಾನ ಮಾಡಿಕೊಂಡನು. ನನ್ನದಲ್ಲದ ಪ್ರೀತಿಯನ್ನು ಪಡೆಯುವುದು ಸೂಕ್ತವಲ್ಲವೆಂದು ಆ ವಿಷಯವನ್ನು ತನ್ನ ಮನಸ್ಸಿನಿಂದ ತೆಗೆದು ಹಾಕಿದನು.

ಆಸ್ಪತ್ರೆಯಲ್ಲಿ ತನ್ನ ಕೆಲಸವನ್ನು ಎಲ್ಲರು ಕೊಂಡಾಡುತ್ತಿದ್ದು, ಅವನನ್ನೇ ಕಾಣಬೇಕೆಂದು ರೋಗಿಗಳು ಕಾಯುತ್ತಿದ್ದರು. ಅವನ ಕೈಗುಣ ಹಾಗು ಅವನ ಹಿತವಾದ ಮಾತು ಎಲ್ಲರಿಗು ಅಚ್ಚುಮೆಚ್ಚು. ಹಾಗಾಗಿ ಅವನು ಕೆಲಸದಲ್ಲಿ ಬಡ್ತಿಯನ್ನು ನಿರೀಕ್ಷಿಸುತ್ತಿದ್ದನು. ಎಲ್ಲದರಲ್ಲೂ ಮುಂದಿದ್ದ ಪ್ರಸಾದ್ ಗೆ ಅದ್ಯಾಕೋ ಅದೃಷ್ಟ ಸ್ವಲ್ಪ ಹಿಂದೇಟು ಹಾಕುತ್ತಿತ್ತು. ಅವನಿಷ್ಟಪಟ್ಟ ಹುಡುಗಿಯು ಅವನಿಗೆ ಸಿಗದ ಕಾರಣ ಅವನ ಮನಸ್ಸಿಗೆ ತುಂಬ ಆಘಾತವಾಗಿತ್ತು. ಅಷ್ಟೆಲ್ಲ ಪ್ರೀತಿ ಕಾಳಜಿಯಿಂದ ಮಾಡಿದ ಕೆಲಸಕ್ಕೂ ಬಡ್ತಿ ಸಿಗದೇ ಅವನು ಹತಾಶನಾಗಿ ಆತ್ಮಹತ್ಯೆಗೆ ಶರಣಾಗಿದ್ದ.

ತುಂಬ ಶ್ರದ್ಧೆಯಿಂದ ಬಾಳಿದ ಬದುಕು ಕೊನೆಯಾಗಿತ್ತು. ವಯಸ್ಸಾದ ತಂದೆ ತಾಯಿಯರನ್ನು ಬಿಟ್ಟು ಹತಾಶನಾಗಿ ಜೀವನವನ್ನು ಕೊನೆಗಾಣಿಸಿದ್ದ. ಅವನಿಗಾಗಿ ಮಿಡಿಯುತ್ತಿದ್ದ ಮುದಿ ಜೀವಗಳು ಕಣ್ಣೀರು ಹಾಕುತ್ತಿದ್ದವು. ಅವನ ಸುತ್ತ ಬಂಧು ಬಳಗ, ಅವನ ಗೆಳೆಯ ಗೆಳತಿಯರು ಕಣ್ಣೀರು ಹಾಕುತ್ತಿದ್ದರು. ಅವರೆಲ್ಲರಿಗಿಂತ ಓದಿನಲ್ಲಿ ಮುಂದಿದ್ದ, ಕೆಲಸದಲ್ಲಿ ಚುರುಕಾಗಿದ್ದ, ಸ್ನೇಹ ಪ್ರೀತಿಗೆ ಒಂದು ಉದಾಹರಣೆಯಾಗಿದ್ದ ಒಂದು ಸ್ಪುರದ್ರೂಪಿ ಇಲ್ಲವಾಗಿದ್ದ.

ಅವನ ಆತ್ಮ ಒಮ್ಮೆ ಅಲ್ಲಿ ನಡೆಯುತ್ತಿದ್ದದ್ದನ್ನು ನೋಡುತ್ತಿತ್ತು. ಅಯ್ಯೋ! ಎಂಥ ಕೆಲಸ ಮಾಡಿದೆ! ನಾನು ಸರಿಪಡಿಸಬಹುದಾಗಿದ್ದ ಜೀವನವನ್ನು ನಾನಾಗೆ ಹಾಳುಮಾಡಿಕೊಂಡೇ… ಜೀವನ ಕೇವಲ ಒಂದು ಹುಡುಗಿಗಾಗಿ ಅಥವಾ ಒಂದು ಕೆಲಸ ಅಥವಾ ಬಡ್ತಿಗಾಗಿ ಕಳೆದುಕೊಳ್ಳುವಷ್ಟು ಸಣ್ಣದಲ್ಲ. ಆದರೆ ಅದನ್ನು ತಿಳಿಯುವಷ್ಟರಲ್ಲಿ ನನ್ನ ಜೀವ ಕೈಜಾರಿದೆ… ಅಯ್ಯೋ ನನ್ನ ಬುದ್ಧಿಗೆ.. ಈಗ ಏನೆಲ್ಲಾ ಸಮಾಧಾನ ಮಾಡಿಕೊಂಡರು ಪ್ರಯೋಜನವಿಲ್ಲ. ಅವನ ಹೆತ್ತವರ ಕಣ್ಣೀರು, ನೋವು ದುಃಖ ಎಲ್ಲವು ಅವನಿಗೆ ತಿಳಿಯಿತು. ಆದರೆ ಏನು ಮಾಡಲು ಈಗ ಸಾಧ್ಯವಿಲ್ಲ. ಅವನ ಆತ್ಮ ಬದುಕಿನಲ್ಲಿ ನೋವುಕಂಡವರಿಗೆ ಒಂದು ವಿಷಯವನ್ನು ಹೇಳಬಯಸುತ್ತಿದೆ “ನಮ್ಮಿಂದಾಗದ ಕೆಲಸ ಯಾವುದು ಇಲ್ಲ. ಗೆಲುವು ನಾವಂದುಕೊಂಡಾಗ ಬರದೇ ಇರಬಹುದು, ಆದರೆ ಸತತ ಪ್ರಯತ್ನದಿಂದ ಎಲ್ಲವನ್ನು ಸಾಧಿಸಬಹುದು. ಇನ್ನು ಹೆಚ್ಚಿನದನ್ನೆ ಪಡೆಯಬಹುದು. ಮನಸ್ಸಿಗೆ ಅಹಿತವೆನಿಸಿದಾಗ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ, ಆ ಕ್ಷಣವನ್ನು ಸಮಾಧಾನದಿಂದ ಕಳೆಯಿರಿ… ನಂತರ ನಮಗೆ ಅರ್ಥವಾಗುತ್ತದೆ, ನಾವೆಷ್ಟು ಶಕ್ತ್ಯರು ಎಂದು.. ನಮ್ಮನ್ನು ಹೆತ್ತು, ಸಲಹಿದ ತಂದೆತಾಯಿಯರಿಗೆ ನಮ್ಮ ಕೆಲಸದಿಂದ ಹೆಮ್ಮೆಯಾಗಬೇಕೇ ಹೊರತು ನೋವಲ್ಲ. ಮಾನವ ಜನ್ಮ ದೊಡ್ಡದು. ಸಾರ್ಥಕತೆಯಿಂದ ಬದುಕಿರಿ”

-ಗಿರಿಜಾ ಜ್ಞಾನಸುಂದರ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Ramesh V
Ramesh V
4 years ago

Mana kulukuva kathe Jothe. Mana muttuva mathugalu! Koneya salu “ಮಾನವ ಜನ್ಮ ದೊಡ್ಡದು. ಸಾರ್ಥಕತೆಯಿಂದ ಬದುಕಿರಿ”adhbutha

ಉಮಾಶಂಕರ್ ಹುಸ್ಕೂರ್
ಉಮಾಶಂಕರ್ ಹುಸ್ಕೂರ್
4 years ago

ನಮಸ್ತೆ ಮೇಡಂ ನಿಮ್ಮ ಈ ಲೇಖನ ಮುಂದಿನ ಪೀಳಿಗೆಯವರು ಓದಿ ತಿಳಿದುಕೊಂಡು ಬದುಕಿದರೆ ಪೋಷಕರ ಜೀವನ ಪುಣ್ಯ ಮತ್ತು ಸಾರ್ಥಕ
ನಿಮ್ಮ ಕೊನೆಯ ಸಾಲಿನ ಪ್ಯಾರಾಗ್ರಾಫ್ ಬಹಳ ಉತ್ತಮ ಸಾರಾಂಶ ಹೊಂದಿದೆ.
ಇಂತಿ
ಉಮಾಶಂಕರ್ ಹುಸ್ಕೂರ್ ಕಪ್ಪಣ್ಣ

2
0
Would love your thoughts, please comment.x
()
x