ಕಥಾಲೋಕ

ಜೀರ್ಣೋದ್ದಾರ: ಸತೀಶ್ ಶೆಟ್ಟಿ ವಕ್ವಾಡಿ.


ಗುತ್ತಿಗೆಪುರದ ಶ್ರೀ ಅನಂತಪದ್ಮನಾಭ ದೇವಸ್ಥಾನ ಇತಿಹಾಸ ಪ್ರಸಿದ್ಧವಾದದ್ದು. ಸುತ್ತಲಿನ ಐದಾರು ಊರುಗಳ ಆರಾಧ್ಯ ದೇವರಾದ ಅನಂತಪದ್ಮನಾಭನನ್ನು ಏಳುನೂರು ವರ್ಷಗಳ ಹಿಂದೆ ಇಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಪ್ರತಿವರ್ಷದ ಮಾರ್ಗಶಿರ ಮಾಸದ ಮೊದಲ ಅಷ್ಟಮಿಯ ದಿನ ಇಲ್ಲಿ ರಥೋತ್ಸವ ಮತ್ತು ಕೃಷ್ಣಾಷ್ಟಮಿಯ ದಿನ ವಿಶೇಷ ಉತ್ಸವದ ಕಾರ್ಯಕ್ರಮವಿರುತ್ತದೆ. ಇದಲ್ಲದೆ ಗಣೇಶೋತ್ಸವ ಮತ್ತು ನವರಾತ್ರಿ ಉತ್ಸವಗಳನ್ನೂ ಆಚರಿಸಲಾಗುತ್ತೆ. ಆವಾಗೆಲ್ಲ ಸುತ್ತಲಿನ ಊರುಗಳ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಲರವ ರಂಗೆರಿಸುತ್ತವೆ. ಊರಿನವರೆಲ್ಲ ತಮ್ಮ ಗದ್ದೆಗಳ ನಾಟಿ ಮಾಡುವ ಮುನ್ನ ದಿನ ಮತ್ತು ನಾಟಿಯ ಕೊನೆ ದಿನ ಅನಂತಪದ್ಮನಾಭನಿಗೆ ನಾಟಿ ಸೇವೆ ಅನ್ನುವ ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ಒಂದು ಪಾರಂಪರಿಕ ಆಚರಣೆ.

ರಾಮಚಂದ್ರ ಉಪಾಧ್ಯರು ಈ ದೇವಸ್ಥಾನದ ಅರ್ಚಕರು. ವಂಶಪಾರಂಪರಿಕವಾಗಿ ಬಂದ ದೇವಸ್ಥಾನದ ಪೂಜಾ ಕೈಂಕರ್ಯವನ್ನು ಕಳೆದ ಐದು ದಶಕದಿಂದ ಇವರು ಶ್ರದ್ದಾಪೂರ್ವಕವಾಗಿ ನೆಡೆಸಿಕೊಂಡು ಬಂದಿದ್ದಾರೆ. ಮುಂಜಾನೆ ನಾಲ್ಕು ಗಂಟೆಗೆ ಎದ್ದು ದೇವಸ್ಥಾನದ ಬಾಗಿಲು ತೆರೆದು ಧ್ವನಿವರ್ಧಕದಲ್ಲಿ ಸುಪ್ರಬಾತ ಹಾಕಿ ಉಪಾಧ್ಯರು ದೇವರ ಪೂಜೆ ಆರಂಭಿಸುತ್ತಿದ್ದರು. ಸೂರ್ಯನ ಕಿರಣಗಳು ದೇವಳದ ಪ್ರಾಂಗಣವನ್ನು ಸ್ಪರ್ಶಿಸುತ್ತಿದ್ದಂತೆ ಆರಂಭವಾಗುವ ಭಕ್ತರ ಪ್ರವೇಶ ಮಧ್ಯಾಹ್ನ ಮಹಾಪೂಜೆಯವರೆಗೂ ಇರುತ್ತಿತ್ತು, ಮತ್ತು ಸಂಜೆ ಐದಕ್ಕೆ ಆರಂಭವಾಗುವ ದೇವರ ದರ್ಶನ ರಾತ್ರಿ ಮಹಾಪೂಜೆಯ ತನಕವೂ ಇರುತ್ತಿತ್ತು.

ಆವತ್ತು ಮಂಗಳವಾರವಾಗಿದ್ದರಿಂದ ಬೆಳಿಗ್ಗೆ ಭಕ್ತರ ಸಂಖ್ಯೆ ತುಂಬಾ ಕಡಿಮೆನೇ ಇತ್ತು. ಸ್ವಲ್ಪ ಸುಧಾರಿಸಿಕೊಳ್ಳೋಣ ಅಂತ ರಾಮಚಂದ್ರ ಉಪಾಧ್ಯರು ದೇವಳದ ಗರ್ಭಗುಡಿಯ ಗೋಡೆಗೆ ಒರಗಿ ಕುಳಿತಾಗ ಮೈಮೇಲೆ ಏನೋ ಬಿದ್ದಂತಾಯಿತು. ಏನಂತ ನೋಡಿದರೆ ಗೋಡೆಯ ಸಿಮೆಂಟಿನ ಚಿಕ್ಕ ಚೂರು ಇವರ ಹೆಗಲ ನೆಲೆ ಬಿದ್ದಿತ್ತು. ಅದನ್ನು ಪರೀಕ್ಷಿಸುತ್ತಿರುವಾಗಲೇ ಇನ್ನೊಂದು ದೊಡ್ಡ ಚೂರು ಇವರ ಪಕ್ಕಕೆ ಬಿದ್ದು ಬಿಡ್ತು, ಜೊತೆಗೆ ಗೋಡೆಯ ಮಣ್ಣಿನ ದೂಳು ಸಹ ಅದನ್ನ ಹಿಂಬಾಲಿಸಿತ್ತು. ಭಯಗೊಂಡ ಉಪಾಧ್ಯರು ಗರ್ಭಗುಡಿಯ ಗೋಡೆಯನ್ನು ದಿಟ್ಟಿಸಿದರು. ಅರ್ಧ ಶತಮಾನದಿಂದ ತೆಂಗಿನಮರದ ಪಕ್ಕಾಸೆಗಳು, ಹೆಂಚುಗಳನ್ನು ಹೊತ್ತುಕೊಂಡು, ನಿಸ್ತೇಜವಾಗಿ ಗೋಡೆಯ ಮೇಲೆ ಮಲಗಿದ್ದವು. ಇವೆಲ್ಲದರ ಭಾರ ಹೊತ್ತಿದ್ದ ಗೋಡೆಗೆ ಬದುಕು ಸಾಕು ಅನ್ನಿಸಿದ್ದನ್ನು ಬಿರುಕುಗಳ ಮೂಲಕ ಉಪಾಧ್ಯರಿಗೆ ಸೂಚ್ಯವಾಗಿ ಅರುಹಿತ್ತು. ಹೌದು ಐವತ್ತು ವರ್ಷ ಹಿಂದೆ ಹುಲ್ಲಿನ ಹೊದಿಕೆಯ ದೇವಳವನ್ನು ಬಹಳಷ್ಟು ತ್ರಾಸ ಪಟ್ಟು ಹೆಂಚಿನ ಹೊದಿಕೆಗೆ ಪರಿವರ್ತಿಸಲಾಗಿತ್ತು. ಅಂದು ಜೀರ್ಣೋದ್ದಾರದ ಕೊನೆಯ ಹಂತಕ್ಕೆ ದುಡ್ಡುಸಾಲದೆ, ದೇವಳದ ಗೋಡೆಯ ಗಾರೆಯನ್ನು ಹಂತವಾಗಿ ಮುಗಿಸುವ ಹೊತ್ತಿಗೆ ಒಂದು ದಶಕವೇ ಕಳೆದಿತ್ತು. ಈಗ ಮತ್ತೆ ದೇವಳದ ಗೋಡೆಗಳು ಅಭದ್ರಗೊಂಡಿವೆ. ಬಹುಶ: ಅನಂತಪದ್ಮನಾಭ ತನಗೆ ಹೊಸ ಗುಡಿಯ ಸಂಕಲ್ಪ ಮಾಡಿದಂತಿದೆ. ಉಪಾಧ್ಯರು ಒಮ್ಮೆ ದೇವರ ಮೂರ್ತಿಯನ್ನು ದೀರ್ಘವಾಗಿ ದಿಟ್ಟಿಸಿದರು. ಪೂರ್ಣ ಮಂದಹಾಸದ ಮೂರ್ತಿಯ ಮುಖದಲ್ಲೊಂದು ನಗುವಿನ ಮಿಂಚೊಂದು ಉಪಾಧ್ಯಾಯರ ಕಣ್ಣಿಗೆ ಅಪ್ಪಳಿಸಿತು.

******

“ಅದು ಅವನ ಸಂಕಲ್ಪ, ನಮ್ಮದೇನಿದೆ. ನಿನ್ನೆ ಉಪಾಧ್ಯರಿಗೆ ಅದರ ಕುರುಹು ತೋರಿಸಿದ್ದಾನೆ. ಅವನ ಸಂಕಲ್ಪಕ್ಕೆ ಅವನೇ ದಾರಿ ತೋರಿಸುತ್ತಾನೆ, ನಮ್ಮದೇನಿದ್ದರೂ ಬರೀ ಪ್ರಯತ್ನ ಮಾತ್ರ. ಐದಾರು ಊರಿನವರು ಅನಂತಪದ್ಮನಾಭನನ್ನು ನಂಬಿದ್ದಾರೆ, ಒಂದೆರಡು ಕೋಟಿ ಕಲೆಕ್ಷನ್ ಮಾಡುವುದು ದೊಡ್ಡ ಕೆಲಸವೇನಲ್ಲ. ಹೊಸ ದೇವಸ್ಥಾನ ನಿರ್ಮಿಸೋಣ, ಎಲ್ಲಾ ಪಕ್ಕ ಪ್ಲಾನ್ ಮಾಡಿದ್ರೆ ಮೂರೇ ತಿಂಗಳು. ಏನಂತೀರಾ ?” ದೇವಳದ ಧರ್ಮದರ್ಶಿ ಹಾಗು ಸ್ಥಳೀಯ ತಾಲೂಕು ಪಂಚಾಯಿತ್ ಸದಸ್ಯ ಶ್ರೀನಿವಾಸ ಶೆಟ್ರು ದೇವಸ್ಥಾನದ ಜೀರ್ಣೋದ್ದಾರದ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ನುಡಿದಾಗ ಸೇರಿದ್ದ ಊರ ಪ್ರಮುಖರು ಅದಕ್ಕೆ ತಲೆತೂಗಿದರು. ಮತ್ತೆ ಮಾತು ಮುಂದುವರಿಸಿದ ಶೆಟ್ರು “ನೋಡಿ ಹಣದ ವಿಷಯ ನನಗೆ ಬಿಡಿ. ನಾನು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ ನಾಯಕ್ರು ಸೇರಿ ದೇವಸ್ಥಾನ ಕಟ್ಟಲು ಬೇಕಾದ ಫಂಡ್ ಕಲೆಕ್ಟ್ ಮಾಡ್ತೀವಿ, ಬೇರೆ ನಿರ್ಮಾಣದ ಉಸ್ತುವಾರಿನ ಉಪಾಧ್ಯಾಯರು ಮತ್ತು ಅಕ್ಕಿಮಿಲ್ಲಿನ ಸದಾಶಿವ ಕಿಣಿಯವರು ನೋಡಿಕೊಳ್ಳಲಿ. ಮತ್ತೆ ಬೇರೆ ನೀವೆಲ್ಲ ಬೇರೆ ಒಂದೊಂದು ಉಸ್ತುವಾರಿ ನೋಡಿಕೊಳ್ಳಿ. ನಾಳೇನೇ ನಮ್ಮ ಇಂಜಿನಿಯರ್ ಆದರ್ಶ ಹೆಗ್ಡೆಯನ್ನು ಕರೆಸಿ ದೇವಸ್ಥಾನದ ಪ್ಲಾನ್ ರೆಡಿ ಮಾಡುವ. ಏನಂತೀರಾ ?” ಮತ್ತೆ ಸಭೆಯನ್ನು ಕೇಳಿದರು, ಶೆಟ್ರ ಮಾತಿಗೆ ಇಲ್ಲ ಅನ್ನುವ ಮನಸ್ಸು ಯಾರಿಗೂ ಇರಲಿಲ್ಲ. ದೊಡ್ಡಮಟ್ಟದಲ್ಲಿ ದೇವಸ್ಥಾನ ಕಟ್ಟುವ ಐತಿಹಾಸಿಕ ಘೋಷಣೆ ದೇವಸ್ಥಾನದ ಪ್ರಾಂಗಣದಲ್ಲಿ ಮೊಳಗಿತು ಮತ್ತು ಸಭೆಯ ಪ್ರಯುಕ್ತ ತರಿಸಿದ್ದ ಚಹಾ ಮತ್ತು ಬಿಸ್ಕುಟ್ ಅಂಬೊಡೆಯ ತಿಂದು ಎಸೆದಿದ್ದ ಪ್ಲಾಸ್ಟಿಕ್ ತಟ್ಟೆಗಳು ಸಂಜೆಯ ತಂಗಾಳಿಗೆ ದೇವಸ್ಥಾನದ ರಥಬೀದಿಯ ತುಂಬೆಲ್ಲ ಪಥಸಂಚಲನ ನೆಡೆಸುತ್ತಿದ್ದವು. ಪೂರ್ಣ ಮಂದಹಾಸದ ಅನಂತಪದ್ಮನಾಭನ ಮುಖದಲಿ ಮಂದಹಾಸವಿತ್ತು.

*****

ಸೂರ್ಯ ಪಥ ಬದಲಾವಣೆಯ ದಿನವಾದ ಮಕರ ಸಂಕ್ರಾಂತಿಯಂದು ದೇವಸ್ಥಾನದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಾಯಿತು. ಜೀರ್ಣೋದ್ದಾರದ ಒಟ್ಟು ಒಂದೂವರೆ ಕೋಟಿ ಅಂದಾಜು ವೆಚ್ಚದ ನೀಲನಕ್ಷೆ ಸಿದ್ದವಾಗಿತ್ತು. ದೇವಳದ ಬಲ ಭಾಗ ದಲ್ಲಿರುವ ಪುಷ್ಕರಣಿಯ ಸಮೀಪ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್ ಗೆ ದೇವರ ಮೂರ್ತಿಯನ್ನ ಸ್ಥಳಾಂತರಿಸಿದರು. ಉಪಾಧ್ಯರಿಗೆ ದೇವರ ಪೂಜೆಯ ಜೊತೆಗೆ ಕಟ್ಟಡ ನಿರ್ಮಾಣದ ಉಸ್ತುವಾರಿಯೂ ಹೊಣೆ ಹೊರಬೇಕಾಯಿತು. ಎಪ್ಪರ ಹರೆಯದಲ್ಲೂ ಸ್ವಲ್ಪವೂ ದಣಿವಿರದೆ ಎಲ್ಲವನ್ನು ನಿಭಾಯಿಸುತ್ತಿದ್ದರು. ಅಂದು ಉಪಾಧ್ಯರು ಬೆಳಗಿನ ಪೂಜೆ ಮುಗಿಸಿ ಉಪಹಾರ ಸೇವಿಸಲು ಮನೆಗೆ ಬಂದಾಗ ಅಚ್ಚರಿ ಕಾಡಿತ್ತು. ಅವರ ಮಗ ಪ್ರಸಾದ ಇದ್ದಕ್ಕಿದ್ದಂತೆ ಮನೆಯಲ್ಲಿ ಪ್ರತ್ಯಕ್ಷನಾಗಿದ್ದ. ಎರಡು ತಿಂಗಳ ಹಿಂದೆಯಷ್ಟೇ ರಥೋತ್ಸವ ಮುಗಿಸಿ ಹುಬ್ಬಳಿಗೆ ಕೆಲಸಕ್ಕೆ ಅಂತ ಹೋಗಿದ್ದವ ಮತ್ತೆ ಯಾಕೆ ಬಂದ, ಅದು ವಿಷಯ ತಿಳಿಸದೇ ?. ಉಪಾಧ್ಯರ ಮುಖದಲ್ಲಿ ಆತಂಕದ ಕರಿಮೋಡ ಆವರಿಸಿತ್ತು.

ಹೌದು ಪ್ರಸಾದನ ವಯಸ್ಸು ನಲವತ್ತರ ಆಸುಪಾಸಿಗೆ ಬಂದಿದ್ದರೂ ಇನ್ನು ಬದುಕಲ್ಲಿ ನೆಲೆಕಾಣುವ ಹೆಣಗಾಟಕ್ಕೆ ಪೂರ್ಣವಿರಾಮ ಬಿದ್ದಿಲ್ಲ. ಜೊತೆಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಇತ್ತ ಓದಲು ಆಗದೆ, ಅತ್ತ ಪುರೋಹಿತಿಗೆ ಮಾಡಲು ಒಲ್ಲದೆ ಬಿಸಿನೆಸ್ ಮಾಡ್ತೇನೆ ಅಂತ ಹಠ ಹಿಡಿದ್ದ ಮಗನಿಗೆ ತಾನು ಕೂಡಿಟ್ಟ ಹಣದಲ್ಲಿ ಹುಬ್ಬಳ್ಳಿಯಲ್ಲಿರುವ ಹೆಂಡತಿಯ ತಮ್ಮನ ಮೂಲಕ ಉಪಾಧ್ಯರು ಒಂದು ಹೋಟೆಲು ಮಾಡಿಸಿದ್ದರು. ಒಂದೈದು ವರ್ಷ ಹೋಟೆಲ್ ನೋಡೆಸುವ ಹೊತ್ತಿಗೆ ಆತ ಸುಸ್ತಾಗಿದ್ದ. ಲಾಸಾಯಿತು ಅಂತ ಅಡ್ಡದುಡ್ಡಿಗೆ ಹೋಟೆಲ್ ಮಾರಿದ್ದ. ಆಮೇಲೆ ಪ್ರಸಾದ ಅಲ್ಲಿ ಇಲ್ಲಿ ಅಂತ ಕೆಲಸ ಮಾಡುತ್ತಾ ಒಂದಷ್ಟು ವರ್ಷ ಕಾಲಹರಣ ಮಾಡಿದ್ದ. ರಥೋತ್ಸವಕ್ಕೆ ಬಂದವ ‘ ಸ್ಟಾರ್ ಹೋಟೆಲಿನಲ್ಲಿ ಮ್ಯಾನೇಜರ್ ಕೆಲಸ ಸಿಕ್ಕಿದೆ’ ಅಂತ ಹೋದವ ಎರಡೇ ತಿಂಗಳಿಗೆ ಮರಳಿ ಮನೆಯಲ್ಲಿ ಪ್ರತ್ಯಕ್ಷವಾಗಿದ್ದ.

” ಅದು ಅಪ್ಪಯ್ಯ, ಆ ಸ್ಟಾರ್ ಹೋಟೆಲ್ ಶುರು ಆಪುಕೆ ಇನ್ನು ಮೂರ್ ತಿಂಗಳು ಇದೆಯಂತೆ. ಅಲ್ಲೀತನಕ ಅಲ್ಲಿದ್ದು ಏನು ಮಾಡುದು, ಇಲ್ಲಿ ಹೊಸ ದೇವಸ್ಥಾನ ಬೇರೆ ಮಾಡ್ತಾ ಇದ್ದಾರೆ, ಆ ಜವಾಬ್ದಾರಿಯೆಲ್ಲ ನೀವೇ ನೋಡ್ಕಂತ ಇದ್ರಿ ಅಂತೇ. . ಅಪ್ಪಯ್ಯಂಗೆ ಕಷ್ಟ ಆಗ್ತಾ ಇದೆ ಅಂತ ತಂಗಿ ಫೋನ್ ಮಾಡ್ದಾಗ ಹೇಳ್ದ್ಲು. ಅದ್ಕೆ ನಿಮಗೆ ಸ್ವಲ್ಪ ಸಹಾಯ ಆಗ್ಲಿ ಅಂತ ಬಂದೆ ” ಮಗ ಪ್ರಸಾದನ ಮಾತು ಉಪಾಧ್ಯಾಯರಿಗೆ ಸರಿ ಅನ್ನಿಸಿತು.

“ಹೌದು ಈ ಸಮಯದಲ್ಲಿ ನೀನಿದ್ರೆ ನನಗೆ ಸ್ವಲ್ಪ ನಿರಾಳ ಆಗುತ್ತೆ. ” ಅಂದ ಉಪಾಧ್ಯರು ಮಗನಿಗೆ ದೇವಸ್ಥಾನದ ನಿರ್ಮಾಣದ ಯೋಜನೆಗಳ ಬಗ್ಗೆ ಉಪಹಾರ ಸೇವಿಸುತ್ತಾ ವಿವರಿಸಿದರು.

ಪ್ರಸಾದ ತಂದೆಯ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ, ದೇವಸ್ಥಾನ ನಿರ್ಮಾಣದ ಉಸ್ತುವಾರಿಯನ್ನು ತಾನೇ ವಹಿಸಿಕೊಂಡು ಅದ್ಭುತವಾಗಿ ನಿಭಾಯಿಸುತ್ತಿದ್ದ, ಬೆಳಿಗ್ಗೆ ಬಂದರೆ ಮನೆಗೆ ರಾತ್ರಿನೇ ಮರಳುತ್ತಿದ್ದ, ಅಗತ್ಯ ಬಿದ್ದರೆ ತಾನೇ ಕಲ್ಲು ಮಣ್ಣು ಸಿಮೆಂಟ್ ಹೊರುತ್ತಿದ್ದ, ಗೋಡೆಗಳಿಗೆ ನೀರು ಬಿಡುತ್ತಿದ್ದ. ಒಟ್ಟಾರೆ ಜೀವನದಲ್ಲಿ ಮೊದಲ ಬಾರಿಗೆ ಊರವರ ಕೈಲಿ ಹೊಗಳಿಸಿಕೊಂಡಿದ್ದ.

ಅಂದು ರಾತ್ರಿ ಗಂಟೆ ಹತ್ತಾಗಿತ್ತು. ಏಕಾದಶಿಯ ಉಪವಾಸ ಆಗಿದ್ದರಿಂದ ಒಂದು ಲೋಟ ಹಾಲು ಕುಡಿದು ಮಲಗಲು ಹೊರಟಿದ್ದ ರಾಮಚಂದ್ರ ಉಪಾಧ್ಯರಿಗೆ ಮನೆಮುಂದೆ ಶ್ರೀನಿವಾಸ ಶೆಟ್ರ ಕಾರು ಬಂದು ನಿಂತಾಗ ಅಚ್ಚರಿಯ ಜೊತೆಗೆ ಆತಂಕವು ಆಯಿತು. ಈ ರಾತ್ರಿಯಲ್ಲಿ ಯಾಕೆ ಬಂದಿದ್ದಾರೆ ಅಂತ ಅಂದುಕೊಳ್ಳುತ್ತಿರುವಾಗಲೇ ಮನೆಯೊಳಗೆ ಬಂದ ಶೆಟ್ರು ” ಆತಂಕ ಬೇಡ ಉಪಾದ್ಯರೆ, ” ಅಂತ ಕೈಯಲ್ಲಿದ್ದ ಕಿಟ್ ಬ್ಯಾಗನ್ನು ಕುರ್ಚಿಯಮೇಲಿಟ್ಟು, ತಾವು ಬಂದ ಕಾರಣ ವಿವರಿಸತೊಡಗಿದರು.

“ಅದು ದೇವಸ್ಥಾನಕ್ಕೆ ಡೊನೇಷನ್ ಕಲೆಕ್ಟ್ ಮಾಡ್ತಾ ಇದ್ದೀನಲ್ಲ, ಹಾಗೆ ನಮ್ಮ ಎಂಪಿ ಮತ್ತು ಎಂ ಎಲ್ ಎ ಹತ್ರ ಕೇಳಿದ್ದೆ. ಅವ್ರು ಕೆಲವ್ ಕಂಟ್ರಾಕ್ಟರ್ ಮತ್ತು ರಿಯಲ್ ಎಸ್ಟೇಟ್ ನವರ ಹತ್ರ ಹೇಳಿದ್ರು. ಇವತ್ ಅವರ ಹತ್ರ ಕಲೆಕ್ಷನ್ಗೆ ಹೋಗಿದ್ದೆ. ಅವ್ರದ್ದೆಲ್ಲ ಬ್ಲಾಕ್ ಮನಿ ಅಲ್ವ, ಅದ್ಕೆ ಎಲ್ಲ ಕ್ಯಾಷಲ್ಲೇ ಕೊಟ್ಟಿದ್ದಾರೆ, ಒಟ್ಟು ಹದಿನೆಂಟು ಲಕ್ಷ ಇದೆ ಈ ಬ್ಯಾಗಿನಲ್ಲಿ. ಇದನ್ ಬ್ಯಾಂಕಿಗೆ ಹಾಕೋ ರಗಳೆ ಬೇಡ. ನಾಳೆ ನಮ್ಮ ಮೆಟೀರಿಯಲ್ ಮತ್ತು ಲೇಬರ್ ಕಂಟ್ರಾಕ್ಟರ್ ನ ಬರೋಕೆ ಹೇಳಿದ್ದೆ. ಅವರಿಗೆ ಡೈರೆಕ್ಟ್ ಕೊಟ್ಟಬಿಡುವ. ನಿಮಗೆ ಗೊತ್ತಲ್ಲ, ಎಲ್ಲ ಕಡೆ ಐಟಿ ರೇಡ್ ಆಗ್ತಾ ಇದೆ, ಅದ್ಕೆ ನಮ್ಮ ಮನೆಯಲ್ಲಿ ಇಡ್ಕೊಳ್ಳೋಕ್ಕೆ ಭಯ. ಇದೊಂದ್ ರಾತ್ರಿ ದುಡ್ಡು ನಿಮ್ಮಮನೆಯಲ್ಲೇ ಇರ್ಲಿ, ಜೋಪಾನ ” ಅಂದ ಶ್ರೀನಿವಾಸ ಶೆಟ್ರು, ಉಪಾಧ್ಯರ ಹೆಂಡತಿ ಕೊಟ್ಟ ಮಜ್ಜಿಗೆ ಕುಡಿದು ಹೊರಟು ಹೋದರು. ಇತ್ತ ಉಪಾಧ್ಯರು ದೇವರ ಕೋಣೆಯಲ್ಲಿಯಲ್ಲಿ ದುಡ್ಡಿನ ಬ್ಯಾಗು ಇಟ್ಟು ಬೀಗ ಹಾಗಿ ಅಲ್ಲೇ ಹೊರಗೆ ಮಲಗಿಕೊಂಡರು.

******

ಎಂದಿನಂತೆ ಉಪಾಧ್ಯರು ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಬಂದು ಪೂಜೆ ಆರಂಭಿಸಲು ದೇವರ ಮೂರ್ತಿಯನ್ನು ತೊಳೆಯುತ್ತಿದ್ದಾಗ ಮೊಬೈಲ್ ರಿಂಗಣಿಸಿತು. ನೋಡಿದರೆ ಮನೆಯ ನಂಬರಿಂದ ಕರೆ ಬರುತ್ತಿತ್ತು. ಕರೆ ಸ್ವೀಕರಿಸಿದ ಉಪಾಧ್ಯರು ಅತ್ತ ಕಡೆ ತಮ್ಮ ಪತ್ಮಿಯ ಅಳು ಕೇಳಿ ಗಾಬರಿಯಾದರು. ಅಳುವಿನ ಸಂಧಿಯೊಳಗೆ ತೂರಿಕೊಂಡು ಬರುತ್ತಿದ್ದ ಹೆಂಡತಿಯ ಒಂದೊಂದೇ ಮಾತುಗಳು ಉಪಾಧ್ಯರ ಬದುಕಿನ ಬೇರುಗಳನ್ನು ಕತ್ತರಿಸುತ್ತಿದ್ದವು.

“ರೀ ಬೆಳಿಗ್ಗೆಯಿಂದ ಪ್ರಸಾದ ಮನೆಯಲ್ಲಿ ಕಾಣ್ತಾ ಇಲ್ಲ. ಎಲ್ಲಾ ಕಡೆ ಹುಡುಕಿದೆ, ಮೊಬೈಲ್ ಮಾತ್ರ ಮನೆಯಲ್ಲಿ ಇದೆ, ಅವನ ಬ್ಯಾಗು ಕಾಣ್ಸ್ತ ಇಲ್ಲ, ಮತ್ತೆ ದೇವರ ಕೊನೆಯಲ್ಲಿ ಇಟ್ಟಿದ ದುಡ್ಡಿನ ಬ್ಯಾಗು ಕಾಣ್ಸ್ತ ಇಲ್ಲ. ದೇವರ ಕೋಣೆ ಬೀಗ ಒಡೆದಿದೆ. ಪ್ರಸಾದ ದುಡ್ಡ್ ತಕಂಡ್ ಓಡಿ ಹೋದ ಅನ್ಸುತ್ತೆ, ಎಲ್ಲಾ ಮುಗಿತು, ದೇವ್ರೇ ” ಉಪಾಧ್ಯ ಹೆಂಡತಿಯ ಅಳು ಜೋರಾಗುತ್ತಾಳೆ ಇತ್ತು.

ರಾಮಚಂದ್ರ ಉಪಾಧ್ಯರಿಗೆ ಕಣ್ಣು ಕತ್ತಲೆ ಬಂದು, ಕಣ್ಣು ರೆಪ್ಪೆಗಳು ಒಂದಕ್ಕೊಂದು ಹತ್ತಿರವಾಗುತ್ತಿದ್ದ ಆ ಗಳಿಗೆಯಲ್ಲಿ ಅವರು ಒಮ್ಮೆ ದೇವರ ಮೂರ್ತಿಯತ್ತ ದೃಷ್ಟಿ ಹರಿಸಿದರು. ಪೂರ್ಣ ಮಂದಹಾಸದ ಅನಂತಪದ್ಮನಾಭನ ಮುಖದಲ್ಲಿ ಮಂದಹಾಸ ಹಾಗೆ ಇತ್ತು. . . . . !!
-ಸತೀಶ್ ಶೆಟ್ಟಿ ವಕ್ವಾಡಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಜೀರ್ಣೋದ್ದಾರ: ಸತೀಶ್ ಶೆಟ್ಟಿ ವಕ್ವಾಡಿ.

Leave a Reply

Your email address will not be published. Required fields are marked *