1.ಜೀರಾ ರೈಸ್.(ರೆಸ್ಟೋರೆಂಟ್ ಸ್ಟೈಲ್)
ಬೇಕಾಗುವ ಸಾಮಾಗ್ರಿಗಳು:
ಬಾಸುಮತಿ ಅಕ್ಕಿ 1ಕಪ್
ಎಣ್ಣೆ 1ಚಮಚ
ಉಪ್ಪು 1/2ಚಮಚ
ತುಪ್ಪ 2ಚಮಚ
ಜೀರಿಗೆ 2ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ಅಕ್ಕಿ ಬೇಯಿಸಲು ನೀರು 5ಕಪ್
ತಯಾರಿಸುವ ವಿಧಾನ:
ಬಾಸುಮತಿ ಅಕ್ಕಿಯನ್ನು 20ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
ಬಾಣಲೆಯಲ್ಲಿ ಐದು ಕಪ್ ನೀರನ್ನು ಹಾಕಿ. ಈ ನೀರಿಗೆ ಉಪ್ಪು ಮತ್ತು ಎಣ್ಣೆಯನ್ನು ಹಾಕಿ ನೀರನ್ನು ಕುದಿಸಿ. ನಂತರ ನೆನೆಸಿ ಕೊಂಡ ಅಕ್ಕಿಯ ನೀರನ್ನು ತೆಗೆದು ಕುದಿಯುವ ನೀರಿಗೆ ಹಾಕಿ.
ಎಂಟರಿಂದ ಹತ್ತು ನಿಮಿಷ ಬೇಯಿಸಿ. ನಂತರ ಹೆಚ್ಚಿನ ನೀರನ್ನು ಜರಡಿಯನ್ನು ಉಪಯೋಗಿಸಿ ಬಸಿಯಿರಿ. ಬಸಿದ ಅನ್ನಕ್ಕೆ ತಣ್ಣಗಿನ ನೀರನ್ನು ಕೂಡಲೇ ಹಾಕಿ ಬಸಿಯಿರಿ. ಇದರಿಂದ ಅನ್ನ ಉದುರು ಉದುರಾಗಿರುತ್ತದೆ.ಅನ್ನವನ್ನು ಆರಲು ಹಾಕಿ.
ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಬಿಸಿ ಮಾಡಿ ಕೊಳ್ಳಿ. ಜೀರಿಗೆ ಹಾಕಿ ಹುರಿಯಿರಿ.
ತಣ್ಣಗಾದ ಅನ್ನವನ್ನು ಹಾಕಿ ಮಿಶ್ರಣ ಮಾಡಿ.1/4ಚಮಚದಷ್ಟು ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ. ರುಚಿಯಾದ ಮತ್ತು ಸುಲಭವಾಗಿ ತಯಾರಿಸಬಹುದಾದ ಜೀರಾ ರೈಸ್ ತಯಾರಿಸಿ ಸವಿಯಿರಿ.
2.ದಾಲ್ ಫ್ರೈ.(ರೆಸ್ಟೋರೆಂಟ್ ಸ್ಟೈಲ್).
ಬೇಕಾಗುವ ಸಾಮಾಗ್ರಿಗಳು:
ತೊಗರಿ ಬೇಳೆ 3/4ಕಪ್
ನೀರು 4ಕಪ್
ತುಪ್ಪ 2ಚಮಚ
ಸಾಸಿವೆ 1ಚಮಚ
ಜೀರಿಗೆ 1ಚಮಚ
ಒಣಮೆಣಸಿನಕಾಯಿ 1
ಕರಿಬೇವು ಸ್ವಲ್ಪ
ಇಂಗು ಚಿಟಿಕೆ
ಈರುಳ್ಳಿ 1/ಚಿಕ್ಕದಾಗಿ ಹೆಚ್ಚಿ
ಟೊಮೆಟೊ 1/ಚಿಕ್ಕದಾಗಿ ಹೆಚ್ಚಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1ಚಮಚ
ಹಸಿ ಮೆಣಸಿನಕಾಯಿ 1
ಖಾರದ ಪುಡಿ 1/2ಚಮಚ
ಧನಿಯಾ ಪುಡಿ 1/2ಚಮಚ
ಉಪ್ಪು 1ಚಮಚ
ಗರಂಮಸಾಲೆ 1/4ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕಸೂರಿ ಮೇತಿ 1ಚಮಚ.
ತಯಾರಿಸುವ ವಿಧಾನ:
ಕುಕ್ಕರಿನಲ್ಲಿ ತೊಗರಿ ಬೇಳೆಯನ್ನು ಮತ್ತು ನಾಲ್ಕು ಕಪ್ ನೀರು ಹಾಕಿ ಚಿಟಿಕೆ ಅರಶಿನ ಅರ್ಧ ಚಮಚ ಎಣ್ಣೆಯನ್ನು ಹಾಕಿ ಬೇಯಲು ಇಡಿ.ಐದರಿಂದ ಆರು ವಿಷಲ್ ಬಂದಾಗ ಒಲೆ ಆರಿಸಿ.
ಬಾಣಲೆಯಲ್ಲಿ ಎರಡು ಚಮಚ ತುಪ್ಪವನ್ನು ಹಾಕಿ. ಬಿಸಿಯಾದ ನಂತರ ಸಾಸಿವೆ, ಜೀರಿಗೆ, ತುಂಡರಿಸಿದ ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವು ಮತ್ತು ಇಂಗನ್ನು ಹಾಕಿ ಹುರಿದು ಕೊಳ್ಳಿ.
ಈ ಒಗ್ಗರಣೆಗೆ ಈರುಳ್ಳಿಯನ್ನು ಹಾಕಿ ಬಾಡಿಸಿ. ಅರಶಿನದ ಪುಡಿ, ಖಾರದಪುಡಿ,ಧನಿಯಾ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಟೊಮೆಟೊ ಹಾಕಿ ಬಾಡಿಸಿ.
ಕುಕ್ಕರಿನಲ್ಲಿ ಬೇಯಿಸಿದ ಬೇಳೆಯನ್ನು ನುಣ್ಣಗೆ ಮಾಡಿ ಕೊಳ್ಳಿ. ಆ ಬೇಳೆಯನ್ನು ತಯಾರಿಸಿ ಕೊಂಡ ಮಸಾಲೆಗೆ ಸೇರಿಸಿ. ಉಪ್ಪನ್ನು ಸೇರಿಸಿ, ಹಾಗೇಯೇ ಎಷ್ಟು ತಳ್ಳಗೆ ಬೇಕು ಅಷ್ಟು ನೀರು ಹಾಕಿಕೊಳ್ಳಿ. ಐದು ನಿಮಿಷ ಕುದಿಸಿ. ಕುದಿ ಬಂದ ನಂತರ ಗರಂಮಸಾಲೆ ಮತ್ತು ಕಸೂರಿ ಮೇತಿಯನ್ನು ಹಾಕಿ ಮಿಶ್ರಣ ಮಾಡಿ.ಸಣ್ಣ ಉರಿಯಲ್ಲಿ ಒಂದು ನಿಮಿಷ ಕುದಿಸಿ ಒಲೆಯಿಂದ ಇಳಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ.
ರುಚಿಯಾದ ದಾಲ್ ಫ್ರೈಯನ್ನು ಜೀರಾ ರೈಸ್, ಅನ್ನದೊಂದಿಗೆ ಸವಿಯಿರಿ.
-ವೇದಾವತಿ ಹೆಚ್. ಎಸ್.