ಅಮರ್ ದೀಪ್ ಅಂಕಣ

ಜಿರಾಫೆ ಡೈರಿಯಿಂದ: ಅಮರ್ ದೀಪ್ ಪಿ.ಎಸ್.

ಮಕ್ಕಳನ್ನು ನೋಡುತ್ತಲೇ ಕೆಲವರು ಹೇಳುತ್ತಿರುತ್ತಾರೆ;  "ಹುಡುಗ ಭಾಳ ಚುರುಕದಾನ, ಮುಂದ್ ಚಲೋತ್ನಾಗಿ ಓದಿ ಬುದ್ಧಿವಂತನಾಗ್ತಾನ, ನೀವೇನ್ ಕಾಳಜಿ ಮಾಡಬ್ಯಾಡ್ರಿ"  ಆ ಬುದ್ಧಿವಂತಿಕೆ, ಚುರುಕು, ತಲೆಗೆ ಹತ್ತುವ ಓದು ಎಲ್ಲಾ ಓಕೆ.  ಆದರೆ, ನಾನು ನೋಡಿದ ಸ್ವತಃ ನೋಡಿ  ಅನುಭವಿಸಿದಂತೆ ಕೆಲವು ಸ್ನೇಹಿತರಲ್ಲಿ ಯು- ಟರ್ನ್ ತೆಗೆದುಕೊಂಡಿರುತ್ತಾರೆ.  ಒಂದೋ ದಡ್ಡತನದಿಂದ ಜಾಣತನದೆಡೆಗೆ ಇಲ್ಲವೇ ಬುದ್ಧಿವಂತಿಕೆಯಿಂದ  ದಡ್ಡರ ಸಾಲಿಗೆ.  ಸೋಮಾರಿತನ ಬಿಟ್ಟು ಸಮಯ,ದುಡಿಮೆ, ಜಾಣ್ಮೆ ಎಲ್ಲದರ ಕಡೆ ಪ್ರಜ್ಞಾಪೂರ್ವಕವಾಗಿ ಬಿಹೇವ್ ಮಾಡುವುದು.  ಈ ಮಧ್ಯೆ ಓದಿನ ಹಂತದಲ್ಲೇ  ಚೂರು ಮೈ ಚಳಿ ಬಿಟ್ಟು ಲಗುಬಗೆಯಿಂದ, ಲವಲವಿಕೆಯಿಂದ ಮಾತಾಡುವುದನ್ನು ಕೆಲವರು ಚೆನ್ನಾಗಿ ಅರಿತಿರುತ್ತಾರೆ.  ಇನ್ನು ಕೆಲ ವರು ದುಡಿಮೆಗೆ, ಬದುಕಿನ ಸಂಕಷ್ಟಗಳಿಗೆ ಬಾಯ್ತೆರೆದಾಗಲೇ ಕಲಿಯುತ್ತಾರೆ. 
 
ಸ್ನೇಹ, ಪ್ರೀತಿ, ಕಾಳಜಿ, ಆತ್ಮೀಯತೆ, ತಾಳ್ಮೆ, ತೊಡಗಿಸಿಕೊಳ್ಳುವಿಕೆ, ಸ್ವಲ್ಪ ಸ್ವಾರ್ಥ, ಅದಕ್ಕಿಂತ ಅರೆಪಾವು ಹೆಚ್ಹಾಗಿ ಸ್ವಾಭಿಮಾನ, ತುಂಟತನ, ಮಾತಿನ ಚಾಕಚಕ್ಯತೆ, ಏನೇ ಹೇಳಿದರೂ ಪೂರ್ತಿಯಲ್ಲದಿದ್ದರೂ ಒಂದಿ ಷ್ಟಾದರೂ ನಂಬಿಸಿ ಒಪ್ಪಿಸುವಂಥ ದೃಢತೆ ಎಲ್ಲವಕ್ಕೂ ಶಾಲೆ, ಕಾಲೇಜು, ಓಣಿ, ವಲಯದ  ವಾತಾವರಣ, ಪ್ರಭಾವ, ಪೋಷಕರ, ಸ್ನೇಹಿತರ ನಂಟೂ ಕಾರಣವಾಗಬಹುದು. ಮಕ್ಕಳು ದೊಡ್ಡವರಾದಂತೆ  ತಂದೆ ತಾಯಿ, ಪೋಷಕರಿಂದ ಅಟ್ಯಾಚ್ ಮೆಂಟ್, ಅವಲಂಬನೆಯೂ  ಕಡಿಮೆಯಾಗಿ ತಮ್ಮ ತಮ್ಮ ಸ್ನಾನ, ಬಟ್ಟೆ ಬ್ಯಾಗು, ಓದು, ಊಟದ ಕಡೆ ಗಮನ ಹರಿಸಿತ್ತಾರೆ.  ಇಷ್ಟ ಕಷ್ಟಗಳ ಬಗ್ಗೆ ಮಾತ್ರ ಪಟ್ಟಿ ಕೈಗಿಟ್ಟು ಕೇಳುವಾಗ ಮಾತ್ರ ಜೋತು ಬಿದ್ದಂತೆ ಆಡುವುದು.  ಮುಂದೆ ಶಾಲೆ, ಕಾಲೇಜು ಊರು, ಗೆಳೆಯರು ಎಲ್ಲವನ್ನು ತಾವೇ ಆರಿಸಿ ಕೊಳ್ಳುತ್ತಾರೆ. ಗೆದ್ದವರು  ಸೋತವರು ಎಲ್ಲರದೂ ಒಂದೊಂದು ಬಗೆ.  ಹೀಗೆ ಕಾಲೇಜು ಸೇರಿದ ನಂತರದ ನನ್ನ ಹಾಸ್ಟೆಲ್ ಜೀವನದ ಗೆಳೆಯನೊಬ್ಬನ ಬಗ್ಗೆ ಒಂಚೂರು  ಹೇಳಬೇಕೆಂದಿದ್ದೇನೆ. 
 
ಊರು ಬಿಟ್ಟು ಹಾಸ್ಟೆಲ್ ಸೇರಿದ ಬಹಳ ಹುಡುಗರು ಮೊದಲಿಗೆ ಹೋಂ ಸಿಕ್  ಸಮಸ್ಯೆಯಿಂದ ಹೊರಬರಲು ಸ್ವಲ್ಪ ಸಮಯ ಹಿಡಿಯುತ್ತೆ.  ಒಮ್ಮೆ ಆ ಸಿಕ್ ನಿಂದ ಹೊರ ಬಂದರೋ? ಅವರು ಗೆಳೆಯರು, ಕಾಲೇಜು, ಹಾಸ್ಟೆಲ್, ಎಲ್ಲೆಲ್ಲಿ ಹೇಗಿರಬೇಕೆನ್ನುವುದು ತಾವಾಗಿಯೇ ಕಲಿಯುತ್ತಾರೆ.  ಈಗಿನ ಮಕ್ಕಳ ಪೋಷಕರು ಖರ್ಚಿಗೆ, ವೆಚ್ಚಕ್ಕೆ, ಸಾಕಾಗುವಷ್ಟು  ಮತ್ತೂ ಬೇಕೆಂದರೆ ನೀಡುವಷ್ಟು ಧಾರಾಳಿಗಳು.  ಆದರೆ, ಇಪ್ಪತ್ತು, ಇಪ್ಪತ್ತೈದು ವರ್ಷಗಳ ಹಿಂದೆ ಆ ಪರಿಸ್ಥಿತಿ ನಮ್ಮದಿದ್ದಿಲ್ಲ. ನಾವಿದ್ದ ಹಾಸ್ಟೆಲ್ ನಲ್ಲಿ  ಸೋಪು ಪೇಸ್ಟು ತಂದು ಸ್ಟಾಕು ಇಡುತ್ತಿದ್ದಿಲ್ಲ.  ಇಟ್ಟರೆ ಅಷ್ಟೇ.  ನನ್ನ ಒಂದು ಸೋಪು, ಒಂದು ಪೇಸ್ಟ್  ಖಾಲಿ ಆಗುವುದರಲ್ಲೇ ಉಳಿದ ನಾಲ್ಕು ಸೋಪುಗಳು ಗಾಯಬ್ ಆಗಿರುತ್ತಿದ್ದವು. ಹಂಗಾಗಿ ಹಾಸ್ಟೆಲ್ ನಲ್ಲಿ ರೂಮೇಟ್ಸ್  ಯಾರದು ಪೇಸ್ಟ್ ಇರುತ್ತೋ ಆ ಪೇಸ್ಟ್ ಖಾಲಿ ಆಗುವವರೆಗೂ ಬೇರೆಯವರ ಪೇಸ್ಟ್ ಹೊರಗೆ ತೆಗೆಯುತ್ತಿರಲಿಲ್ಲ. ಆದರೆ ಹಲ್ಲುಜ್ಜುವ ಬ್ರಶ್ ಮತ್ತು  ಸೋಪು ಮಾತ್ರ ನಮ್ಮವೇ ಆಗಬೇಕು. ಮಳೆಗಾಲ, ಚಳಿಗಾಲದಲ್ಲಿ  ಪ್ರತೀದಿನ ತಣ್ಣೀರು ಸ್ನಾನ ಒಲ್ಲದೇ ಪುಣ್ಯಕ್ಕೆ ಹಲ್ಲಾದರೂ ಸ್ವಚ್ಚವಾಗಿ ತಿಕ್ಕಿ ಮಿನಿ ಸ್ನಾನ ಮಾಡುವುದು ನನ್ನಂತೆ ಬಹಳ ಹುಡುಗರ ಚಾಳಿಯಾಗಿತ್ತು.  ಎರಡು ದಿನಕ್ಕೊಮ್ಮೆ ಸ್ನಾನ.   ಸ್ನಾನ ಮಾಡಿದಾಗೊಮ್ಮೆ ದೇವರಿಗೊಂದು ನಮಸ್ಕಾರ?  ಉಹೂ… ದೇವರ ಫೋಟೋ ಒಂದಾದರೂ ಇಟ್ಟಿದ್ದು ನನಗೆ ನೆನಪಿಲ್ಲ.  ಆದರೆ, ಓದುವ ಒಂದು ತಾಸಿರುತ್ತಲ್ಲಾ?  ಆಗ ನಮ್ಮ ಪಕ್ಕದಲ್ಲೇ ಕುಳಿತು ಆತ  ಓದಿಸುತ್ತಿದ್ದ. ಇಲ್ಲವಾದರೆ, ನಾವು ಹೀಗೆ ಬದುಕಲು ಸಾಧ್ಯವಿತ್ತಾ?.   ವಾರಕ್ಕೊಮ್ಮೆ ಧೋಭಿ ಕಾಮ್.  ಒಬ್ಬನಿಗೆ ಮೆಸ್ ಬಿಲ್ ದುಡ್ಡು ತುಂಬಲು ಊರಿಂದ  ಹಣ ಕಳಿಸಿದರೆ ನಾಲ್ಕು ಹುಡುಗರ ಕಣ್ಣಲ್ಲಿ ಸಮಾಧಾನ.  ತಮ್ಮ ತಮ್ಮ ದುಡ್ಡು ಬರುವವರೆಗೆ ಖರ್ಚಿಗೆ, ಒಂದೊಳ್ಳೆ ಸಿನೆಮಾಕ್ಕೆ ದುಡ್ಡು ಹೊಂದಿಸಿದಂತಾಗುತ್ತಿತ್ತು.
 
ನನ್ನ ಗೆಳೆಯರಲ್ಲಿ ಒಬ್ಬನಿದ್ದ  ಮೂಲತಃ ಜಾಣನೇ. ಆತನ ವರ್ತನೆ ಸ್ನೇಹಿತರಲ್ಲಿ ಯಾವುದೇ ಅನುಮಾನ ಗಳಿಗೆ ಕಾರಣವಾಗದಿದ್ದರೂ ಒಮ್ಮೊಮ್ಮೆ ಅವನ ಚೇಷ್ಟೆ, ಗೇಲಿ, ಗಂಬೀರವಿದ್ದ ವಿಷಯಕ್ಕೆ ತಮಾಷೆಯ ಕಾಮೆಂಟ್ ಮಾಡುವುದು. ತಮಾಷೆ ವಿಷಯವಾದರೂ ಸೀರಿಯಸ್ ಆಗಿ  ಪ್ರತಿಕ್ರಿಯಿಸುವುದು ನಡೆಯುತ್ತಿತ್ತು.  ಓದಿಗಾಗಿಯೇ  ಹಾಸ್ಟೆಲ್ ವಾಸದಲ್ಲಿದ್ದ ನಮ್ಮ ಮಧ್ಯೆ ತಮಾಷೆಗಾಗಿ ತಂದಿಟ್ಟ ಮಾತುಗಳು ಒಂದು ಹುಡುಗಿ ಲವ್ ಮಾಡುವ ವಿಷಯದವರೆಗೆ  ಬಂದು ನಿಂತಿತ್ತು.  ಗೆಳೆಯ ಮೂಲತಃ ತಾನು ಯಾವ ಜಾತಿಗೂ ಅಂಟಿ ಕೊಳ್ಳದಿದ್ದರೂ ಆ ಹುಡುಗಿ ಜಾತಿ ಪತ್ತೆ ಮಾಡಿ  ಭಾನುವಾರ ಬಂತೆಂದರೆ ಸಾಕು, ಸ್ನಾನ ಮಾಡಿ ಹಿಂದಿನ ದಿನವೇ  ಒಗೆದು ಇಸ್ತ್ರಿ ಮಾಡಿಸಿಟ್ಟಂತೆ  ಕಾಣುವ ಬಟ್ಟೆ ಹಾಕಿಕೊಂಡು ನಾವು ಎದ್ದೇಳುವ ಮುಂಚೆಯೇ ಆ ಹುಡುಗಿ ಹೋಗುವ  ಚರ್ಚ್ ನ ಒಳಗೆ ಪ್ರಾರ್ಥನೆಗೆ ಕುಳಿತು ಬಿಡುತ್ತಿದ್ದ.  ಬಂದವನೇ ನಮ್ಮೆಲ್ಲರನ್ನೂ ಎಬ್ಬಿಸಿ ಚರ್ಚ್ ನಲ್ಲಿ ಹೇಳಿದ ದೇವವಾಕ್ಯಗಳನ್ನು ಹೇಳಿ ಅದರಂತೆ ನಡೆಯಲು ಸೀರಿಯಸ್ ಆಗಿ ಹೇಳುತ್ತಿದ್ದ. 
 
ಅದಕ್ಕೂ ಮುಂಚೆ ಅವನ ಒಂದಿಷ್ಟು ವರಸೆಗಳನ್ನು ಹೇಳಿಬಿಡುತ್ತೇನೆ. ಕಾಲೇಜಲ್ಲೇನೋ ಅವನು ಗೊತ್ತಿದ್ದೂ ಗೊತ್ತಿಲ್ಲದಂತೆಯೇ ಇದ್ದರೆ, ಹೊರಗಡೆ  ಸ್ನೇಹಿತರ, "ಸ್ನೇಹಿತೆ" ಯರ ಮಧ್ಯೆ ಮಾತ್ರ ಆತ್ಮೀಯವಾಗಿರುತ್ತಿದ್ದ. ಅದೇ ತಾನೇ  ಶಾರುಖ್ ನ ದೀವಾನಾ,ಬಾಜಿಗರ್, ಡರ್ರ್,  ಶಂಕರ್ ನ  ಜೆಂಟಲ್ ಮ್ಯಾನ್, ಪ್ರಭುದೇವನ ಕಾದಲನ್, ಮಣಿರತ್ನಂ ಅವರ ರೋಜಾ, ಬಾಂಬೆಯಂಥ ಪ್ರೀತಿ ಪ್ರೇಮ  ಸಿನೆಮಾಗಳ ಹವಾ.  ಹಮ್ಮಾ ಹಮ್ಮಾ ಹಾಡು, ವಯಸ್ಸಿನ ಹುಡುಗ ಹುಡುಗಿಯರನ್ನು ಕಚಗುಳಿ ಇಟ್ಟು ಕೆರಳಿಸಿದ್ದವು. ಆಗ ಈ ನಮ್ಮ  ಗೆಳೆಯ  ಥೇಟ್ ಪ್ರಭುದೇವನ ಸ್ಟೈಲ್ ನಲ್ಲಿ ಆರೇಳು  ಜೊತೆ ದೊಗಳೆ ಪ್ಯಾಂಟ್  ಶರ್ಟ್ ಹೋಲಿಸಿದ. ಮೊದಲೇ ಉದ್ದ.  ಉದ್ದ ಮೂಗಿದ್ದ  ಇವನನ್ನು "ಜಿರಾಫೆ ನನ್ಮಗ"  ಅಂತಲೇ ಕರೆದು ಕಿಕ್ಕಿಕ್ಕಿಕಿ  ಎಂದು  ನಗುತ್ತಿದ್ದ ಇನ್ನೊಬ್ಬ ಗೆಳೆಯ.  ಆಯಿತಲ್ಲ? ಆ ಬಟ್ಟೆಗೆ ತಕ್ಕ ಬೆಲ್ಟು, ಬೂಟು, ಘಮ್ಮೆನ್ನಲು ಸೆಂಟು, ಕೆರೆದು ಕೆರೆದೇ ಕೆನ್ನೆಯನ್ನು ಒರಟಾಗಿಸಿಕೊಂಡು ಬೆಳೆಸಿದ ಮೊಳಕೆ ಗಡ್ಡ ಇವನನ್ನು ಬದಲಾಯಿಸಿತ್ತು.  ಆವತ್ತಿನಿಂದ ಇವನ ನಡೆವ, ನುಡಿವ, ಸ್ಟೈಲೇ ಬದಲಿ.  
 
ಹೇಳಿದೆನಲ್ಲ? ಅವನವು ಆರೇಳು  ಜೊತೆ ಹೊಸ ಬಟ್ಟೆ ಇದ್ದವೆಂದು. ಆರೇಳು ಜೊತೆ ಬಟ್ಟೆಯಲ್ಲಿ ಒಂದೊಂದು ಜೊತೆ ಬಟ್ಟೆಯನ್ನು ಎರಡು ಅಥವಾ ಮೂರು ದಿನಕ್ಕೆ ಬದಲಾಯಿಸುತ್ತಿದ್ದ.  ಆದರೆ ಕೊಳೆಯಾಗದಂತೆ ನಾಜೂಕಾಗಿ ಉಟ್ಟ ಬಟ್ಟೆಯನ್ನು ಪುನಃ ನೀಟಾಗಿ ಮಡಚಿ ಮಂಚದ ಕೆಳಗಿನ ಟ್ರಂಕಿನಲ್ಲಿ ಇಡುತ್ತಿದ್ದ. ಹೀಗೆ ಆರೇಳು ಜೊತೆ ಬಟ್ಟೆಗಳನ್ನೂ ಉಟ್ಟ ನಂತರ ಮೊದಲು ತೊಟ್ಟ ಜೊತೆ ಬಟ್ಟೆಯನ್ನು ಮತ್ತೆ ನೀಟಾಗಿ ತೆಗೆದು ಮಂಚದ ಮೇಲೆ ಹರಡಿ ಅಂಗಿಯ ಕಾಲರ್, ಮತ್ತಿತರ ಸಂದುಗಳ ಜಾಗಕ್ಕೆ ಸುವಾಸನೆ ಭರಿತ ಪೌಡರ್ ಚುಮುಕಿಸಿ  ಮತ್ತೆ ಹಾಕಿ ಕೊಂಡು …. " ಹಮ್ಮಾsss  ಹಮ್ಮಾssss ಹಮ್ಮ ಹಮ್ಮ ಹಮ್ಮಾsssssssss .. " ಅಂದು ಕೈ ತಿರುವುತ್ತಾ ಮೆಟ್ಟಿಲಿಳಿದು ಹೊರಡುತ್ತಿದ್ದ.  ಅವನು ರಜಾ ದಿನಗಳಲ್ಲಿ  ಬಟ್ಟೆ ಒಗೆಯುವುದನ್ನು ನಾವು "ಏಕದಿನ"  ಕ್ರಿಕೆಟ್ ಮ್ಯಾಚ್ ನಷ್ಟೇ ಆಸಕ್ತಿಯಿಂದ ನೋಡುತ್ತಿದ್ದೆವು. 
 
ಒಂದಿನ ಯಾವುದೋ ಒಂದು ಸೀನಿಯರ್ ಹುಡುಗಿ ಹುಟ್ಟುಹಬ್ಬಕ್ಕೆ ಇನ್ವೈಟ್ ಮಾಡಿದ್ಲು.  ಸರಿ, ನಾವೆಲ್ಲಾ ಹೋಗೋದಿಕ್ಕೇನು ರೆಡಿನೇ.  ಆದರೆ, ಅವಳ ಮನೆ ನಮ್ಮ ಹಾಸ್ಟಲ್ ನಿಂದ ಮೂರೂವರೆ ಕಿಲೋಮೀಟರ್  ದೂರ. ಅಲ್ದೇ ಆ ಹುಡುಗಿಗೆ ಒಂದೊಳ್ಳೆ ಗಿಫ್ಟ್ ಕೊಡೋಕೆ, ಆಟೋ ಚಾರ್ಜ್ಗೆ, ದುಡ್ಡು? ನಮ್ಮ ಹಣೆಬರಕ್ಕೆ ಅವತ್ತು  ಎಲ್ಲರತ್ರಾನೂ ಸೇರಿಸಿದರೆ ಐವತ್ತಕ್ಕಿಂತ  ಹೆಚ್ಚಿದ್ದಿಲ್ಲ.  ರಾತ್ರಿ ಎಂಟು ಗಂಟೆಗೆ ಹಾಸ್ಟಲ್ ಊಟದ ಬೆಲ್.  ಬರ್ತ್ ಡೇ ಗೆ ಹೋಗೋದು "ಕ್ಯಾನ್ಸಲ್" ಅಂತಾದ್ರೆ ಹಾಸ್ಟಲ್ ಊಟನಾದ್ರೂ ದಕ್ಕುತ್ತೆ. ಹೋಗೋದೇ ಆದ್ರೆ ಅಲ್ಲಿ ಬರೀ ಕೇಕ್ ಕೈಗಿಟ್ಟು ಕಳಿಸಿದರೆ "ಬರ್ತಾ ಹೊಟ್ಯಸ್ಕಂಡು ಸಾಯ್ಬೇಕಲೆ" ಅಂದ್ಕಂಡು ಸುಮ್ಮನೇ ಕುಳಿತಿದ್ದೆವು.  ಅದೇ ಟೈಮಿಗೆ Mr.  ಕುಂದ್ವಾಡ್ ಬಂದ.  ಅವನು ಪಕ್ಕದ ಹಳ್ಳಿಯಿಂದ ಕಾಲೇಜಿಗೆ ಓಡಾಡು ತ್ತಿದ್ದ.   ಸಡನ್ನಾಗಿ ನಮ್ ಜಿರಾಫೆ ಗೆಳೆಯ  ಕಾರ್ಯಪ್ರವೃತ್ತನಾದ. ಅವನನ್ನು ಕೂಡಿಸಿ ತನ್ನಲ್ಲಿದ್ದ ಚೊಲೋ ಶರ್ಟ್, ಇನ್ನೊಬ್ಬನ ಪ್ಯಾಂಟು,  ಬೆಲ್ಟ್, ಬೂಟು ಜೋಡಿಸಿ "ಲೇ ಕುಂದ್ವಾಡ್, ಇವತ್ತು ಆ ಹುಡುಗಿ ಬರ್ತ್ ಡೇ ಪಾರ್ಟಿಗೆ ನೀನೇ ನಮ್ ಕಡೆಯಿಂದ "ಚೀಫ್ ಗೆಸ್ಟ್" ಅಂದುಬಿಟ್ಟ. ಅಲ್ಲಿಗೆ Mr. ಕುಂದ್ವಾಡ್  ಸದ್ಯದ   ಕಾರ್ಯ ಕ್ರಮ ಮುನ್ನಡೆಸುವ ನಾಯಕನಾದ.  ಮೊದಲಿಗೆ ಬರೀ ಒಂದು ಗ್ರೀಟಿಂಗ್ ಕಾರ್ಡ್, ಇಲ್ಲಾ ಒಂದು ಹೂವಿನ ಗುಚ್ಹ ನೀಡುವುದಷ್ಟೇ ನಮ್ಮ ಪ್ಲಾನ್ ಇದ್ದಿದ್ದು.  ಸರಿ, Mr. ಕುಂದ್ವಾಡ್  ಬಂದ್ಮೇಲೆ ಹಂಗಂಗೆ ಬದಲಾಗ್ತಾ ಹೋಯ್ತು.  ಅಲ್ಲಿವರ್ಗೂ ಕುಂದ್ವಾಡ್ ನನ್ನ ಹತ್ರ ಬರೀ ನೂರಿದೆ, ಇನ್ನೂರಿದೆ ಅನ್ನುತ್ತಿದ್ದವನು "ಹುಡುಗಿ ಬರ್ತ್ ಡೇ ಕಣಲೇ, ನಿನ್ನೂ ಕರ್ಕೊಂಡ್ ಬರ್ಲೇಬೇಕೆಂದ್ ಹೇಳಿದಾಳೆ"  ಎಂದು  ಜಿರಾಫೆ ಹೇಳುತ್ತಿದ್ದಂತೆಯೇ ಹಾಸ್ಟಲ್  ಹೊರಕ್ಕೆ ಬರ್ ಬರ್ತಿದ್ದಂಗೆ ಕುಂದ್ವಾಡ್ "ಆಟೋ" ಕರೆದು ಹತ್ರಲೇ ಅಂದೇಬಿಟ್ಟ. 
  
ಬರ್ತ್ ಡೇ ಗೆ ಹೋಗುವ ಹುರುಪಿನಲ್ಲಿ ಹಾಸ್ಟಲ್ ನಲ್ಲಿ "ಊಟಕ್ಕೆ ನಾವು ಬರಲ್ಲ" ಅಂತ ಬೇರೆ ತಿಳಿಸಿ ಹೊರಗೆ ಬಂದಾಗಿತ್ತು.   ಹುಡುಗಿ ಮನೆ ತಲುಪಿದಾಗ ಬರೋಬ್ಬರಿ ಒಂಬತ್ತು ಚಿಲ್ರೆ ಗಂಟೆ.  ಮನೆಯಲ್ಲಿ ಹುಡುಗಿ, ಅವ ರಮ್ಮ, ತಂಗಿ ಅಷ್ಟೇ ಇದ್ದಿದ್ದು.  "ಸಂಜೆ ಬೇಗ ಸೆಲೆಬ್ರೇಟ್ ಮಾಡಿರ್ಬೇಕು, ಹಂಗಾಗಿ ಎಲ್ರೂ ಬಂದ್ ಹೋದ ಮೇಲ್ ನಾವ್ ಕೊನಿಗೆ  ಬಂದಂಗೈತಿ" ಅನ್ನಿಸ್ತು.  Mr. ಕುಂದ್ವಾಡ್  ತಾನೇ ಸ್ಪಾನ್ಸರ್ ಮಾಡಿದ್ದ ಗಿಫ್ಟ್ ಅವನ ಕೈಯಾರೆ ಹುಡುಗಿಗೆ ಕೊಟ್ಟು  ಕೈ ಕುಲುಕಿ ಪುಳಕವಾಗಿದ್ದ. ನಾವು ವಿಶ್ ಮಾಡಿದ್ದಷ್ಟೇ ಬಂತು.  ಒಂದಷ್ಟು ಹರಟಿ ಹಲ್ಕಿರಿದದ್ದೂ ಆಯಿತು.  ಊಟಕ್ಕೆ ಕರೀತಾರೇನೋ ಅಂದ್ಕೊಂಡ್ರೆ, ಒಳಗ್ ಹೋಗಿ ಮೊದ್ಲು ಕೇಕ್ ತಂದ್ಲು ಹುಡುಗಿ.  ಹಾಸ್ಟಲ್ ಊಟ ತಿನ್ನೋ ಈ ಟೋಳಿ ನೋಡಿ ಅವರಮ್ಮನಿಗೆ  ಏನನ್ನಿಸಿತೋ ಏನೋ  "ಒಂದರ್ಧ ಗಂಟೆ ಕೊತ್ಕೊಳ್ರಪ್ಪ, ಬಿಸಿ ಅಡುಗೆ ಮಾಡ್ತೀನಿ, ಉಂಡ್ಕಂಡು ಹೋಗೀರಂತೆ" ಅಂದಳು. ಅಷ್ಟರಲ್ಲಿ ಜಿರಾಫೆ ಗೆಳೆಯ "ಒಹ್, ಇವತ್ತು ಇಲ್ಲಿ ಊಟದ್ ಆಸೆ ಬಿಡೋದ್ ವಾಸಿ"ಅಂತ ಸನ್ನೆ ಮಾಡಿದ.  
 
ಹೊರಗೆ ಬರುವಾಗ ಸಮಯ ಹತ್ತಾಗುತ್ತಿತ್ತು.  "ಇವತ್ತು ನಮ್ ಕುಂದ್ವಾಡ್ ಆ ಹುಡುಗಿಗೆ ಬರ್ತ್ ಡೇ ಗಿಫ್ಟ್ ಕೊಟ್ಟದ್ದಕ್ಕೆ ತುಂಬಾ ಥ್ಯಾಂಕ್ಸ್.  ಈ ಟೈಮಿಗೆ ಹಾಸ್ಟಲ್ ಗೆ ಹೋದ್ರೆ ಊಟ ಸಿಗೋಲ್ಲಾ, ಹಂಗಾಗಿ ಈ ರಾತ್ರಿಯ ನಮ್ಮೆಲ್ಲರ ಊಟದ ಪ್ರಾಯೊಜಕತ್ವವನ್ನೂ ನಮ್ಮ Mr ಕುಂದ್ವಾಡ್  ಅವರೇ ವಹಿಸಿಕೊಳ್ಳು ವುದಾಗಿ ತುಂಬಾ ಒತ್ತಾಯ ಪೂರ್ವಕವಾಗಿ ಹೇಳಿರೋದ್ರಿಂದ,  ಹಸ್ವು ಜಾಸ್ತೀನೇ ಆಗಿ ನಾವು ಇಲ್ಲವೆನ್ನಲು  ಬಾಯೇ  ಬರ್ತಾ ಇಲ್ಲ,  ಆದ್ದರಿಂದ ಎಲ್ರೂ ಒಮ್ಮೆ ಜೋರಾಗಿ ಹೇಳ್ಬಿಡಿ, Mr. ಕುಂದ್ವಾಡ್ ಅವ್ರಿಗೆ ಜಯ್ವಾಗ್ಲಿ"  ಅಂದುಬಿಟ್ಟ  ಜಿರಾಫೆ ಗೆಳೆಯ.  Mr  ಕುಂದ್ವಾಡ್ ಕೂಡ ಅಷ್ಟೇ. ಮೊದ್ಲು ನೂರಿನ್ನೂರು ಅಂದಿರ್ತಿದ್ನಲ್ಲ?  ಆಮೇಲಾಮೇಲೆ ಬಹುಪರಾಕ್ ಗೆ ಮನಸೋತು "ಈಗ ಬಂದೆ ಅಂತ  ಸೈಡಿಗೆ ಹೋಗಿ  ಅಂಡರ್ವೇರ್ ನಲ್ಲಿ ಸುಳಿ ಸುತ್ತಿಟ್ಟಿರ್ತಿದ್ದ ನೋಟುಗಳನ್ನು ತೆಗೆಯುತ್ತಿದ್ದ.  ಕುಂದ್ವಾಡ್ ಹಿಂಗೆ ಮಾಡೋದ್ ನೋಡೀನೇ ನಮ್ಮ ಜಿರಾಫೆ ಗೆಳೆಯ ತಗುಲಿಕೊಳ್ಳುತ್ತಿದ್ದನೇನೋ ಅನ್ನಿಸೋದು. ಅದೆಷ್ಟೋ ಬಾರಿ ಹೀಗಾ ಗಿತ್ತು.  ಟೀ ಕಾಫಿ,ಗೆ ಟೈ ಹಾಕೋದು, ತಿಂಡಿ ಖರ್ಚಿಗೆ ಬೆಲ್ಟ್ ಹಾಕೋದು ಊಟಕ್ಕೆ "ಮತ್ತೊಂದಕ್ಕೆ" ಇಡೀ ಡ್ರೆಸ್ ಸೆಟ್ ಹಾಕಿಸಿಬಿಡೋದು.   ಹಂಗಾಗಿ ದುಡ್ಡು ಧಾರಾಳವಾಗಿ ಖರ್ಚು ಮಾಡುವ ಹೊಸ  ಹೊಸ ಹುಡುಗರು ಕಂಡ್ರೆ ಸಾಕು; ಗೆಳೆಯ ಜಿರಾಫೆ  "ಏನ್ಲಾ ಟೈನೋ, ಬೆಲ್ಟು, ಅಥ್ವಾ ಸೂಟೋ, ನೀವ್ ಹೆಂಗ್ ಅಂತೀರೋ ಹಂಗೆ" ಅಂದು ಶುರುವಿಡುತ್ತಿದ್ದ.   ಹಾಗೆ ದುಡ್ಡು ಖರ್ಚು ಮಾಡಿಸುವುದು ತಪ್ಪೇ. ಆದ್ರೆ ಹಸಿವಿಗೆ ನಾಚಿಕೆ ಅನ್ನೋದಿರಲ್ಲ.  ಗೆಳೆತನಕ್ಕೆ restrictions ಇರ್ತಾ ಇದ್ದಿಲ್ಲ.  ಅದ್ದರಿಂದ ಇದೆಲ್ಲ ನಡೆಯೋದು. 
  
ಇರಿ, ಜಿರಾಫೆ ಗೆಳೆಯನ ಲವ್ ಕಥೆ ಅಲ್ಲಿಗೆ ಬಿಟ್ಟಿದ್ದೆ.  ಕಾಲೇಜಿನಲ್ಲಿ ಕ್ಯಾರೆ ಎನ್ನದೇ ಪ್ರತಿ ವಾರ ಚರ್ಚ್ ನಲ್ಲಿ ಮಾತ್ರವೇ ಸ್ಮೈಲ್ ಬಿಸಾಕುವ ಆ ಹುಡುಗಿಗೋ ಕನ್ನಡ ದುಬಾರಿ. ಇವನ ಇಂಗ್ಲೀಷು?  ಆಗಿನ್ನೂ ಅಂಬೆಗಾಲು. ನಮ್ಮವು? ಬಿಡಿ,  "ಹಾಯ್, ಹಲ್ಲೋ ಓಕೆ ಸಿಯೂ ಬೈ" ಇಷ್ಟರಲ್ಲೇ ಕುಂಟುತ್ತಿತ್ತು.   ಆಷ್ಟಾದರೂ ಆ ಹುಡುಗಿ ಯನ್ನು ಮಾತಾಡಿಸಿ ಬರುತ್ತಿದ್ದ ಗೆಳೆಯ ಜಿರಾಫೆ  ಕೊರಳಲ್ಲಿ ಇತ್ತೀಚೆಗೆ ಶಿಲುಬೆ ಕಂಡಿತು.  "ಏನಲೇ, ಕನ್ವರ್ಟ್ ಆದ್ಯೋ ಹೆಂಗೆ?" ಕೇಳುತ್ತಿದ್ದೆವು.  ಆಗೆಲ್ಲಾ "ಏಸುವಿನ ನಾಮಬಲದಿಂದ" ಅಂದು ಕಗ್ಗಂಟಾಗುತ್ತಿದ್ದ.  ಮೊದ ಮೊದಲು ತಮಾಷೆಗೆ ಅಂದುಕೊಂಡಿದ್ದ ನಾವೆಲ್ಲಾ ಅವನ ವರ್ತನೆ ನೋಡಿ ಗಾಬರಿಯಾಗಿದ್ದೆವು.   ಆದೆರೆಷ್ಟು ದಿನ? ಇರಿ, ಅದನ್ನೂ ಹೇಳುತ್ತೇನೆ.  ವರ್ಷದ ಕೊನೆಗೆ ಕ್ರಿಸ್ಮಸ್ ಹಬ್ಬ ಬಂತು.  ಆವತ್ತು  ಜಿರಾಫೆ  ಒಂದು ಗುಲಾಬಿ ಗುಚ್ಚನ್ನು ಖರೀದಿಸಿ ಚರ್ಚ್ ಆವರಣದಲ್ಲೇ ಹಬ್ಬದ ವಿಷಸ್ ತಿಳಿಸಿ ಪ್ರೀತಿಸುತ್ತಿರುವ ಬಗ್ಗೆ ಅಲವತ್ತುಕೊಂಡಿದ್ದಾನೆ.  ಉಹೂ.. straight away she said  "NO"..  ಅಷ್ಟು ಇಂಗ್ಲೀಷು ಬರುವ ವರೆಗೂ ಹಾಸ್ಟೆಲ್ ನಿಂದ ಚರ್ಚವರೆಗೆ ಸೈಕಲ್ಲಂತೂ ಜಿರಾಫೆ  ತುಳಿದಿದ್ದ.  "ಅರ್ಥವಾಯ್ತು ಬಿಡಿ" ಅಂದವನೇ ವಾಪಸ್ಸು ಬಂದು "ನಾಯಕ್ ನಹೀsss   ಖಳ್ ನಾಯಕ್ ಹೂ ಮೈssss …."  ಹಾಡು ಹೇಳುತ್ತಾ ಮಲಗಿದ್ದ. 
 
ಅಷ್ಟಾಗಿದ್ದೇ ಬಂತು.  ಲವ್ ಮಾಡುವ ಹುಕಿಯ ಹುಡುಗರು ಯಾರಾದ್ರೂ ಸಿಕ್ಕರೆ ಸಾಕು ಇಂಗ್ಲೀಷ್  ಕವಿಗಳ  ಚೆಂದನೆಯ ಕವಿತೆಗಳನ್ನು ಮುದ್ದಾಗಿ ಬರೆದುಕೊಡುತ್ತಿದ್ದ. ತಾನೇ ಕೊರಳಲ್ಲಿದ್ದ ಶಿಲುಬೆಯನ್ನು ಗೌರವಯುತ ವಾಗಿ ತೆಗೆದ ಇವನಿಗೆ  "ಕಣ್ಣಿನ" ಹೆಸರುಳ್ಳ ಹುಡುಗಿಯೊಬ್ಬಳು ದೂರದಿಂದಲೇ ಸ್ಮೈಲ್ ಬಿಸಾಕಿದ್ದಳು ಎನ್ನು ವುದು ಈ ಜಿರಾಫೆ ಗೆಳೆಯನ ಮಿಷ್ಟೀಕಾಗಿತ್ತು. ಇದ್ದಕ್ಕಿದ್ದಂತೆ ಅವನಿಗೆ ತನ್ನ ಮೈಮೇಲಿದ್ದ ಜನಿವಾರದ ನೆನೆ ಪಾದಂತೆ  "ಶಾಂತಂ ಪಾಪಂ" ಅಂದುಬಿಟ್ಟ.  ಮೊದಲಿದ್ದ ಗೇಲಿ, ತಮಾಷೆ, ಸಿನೆಮಾ ಹುಚ್ಚು, ಪ್ಯಾಥೋ ಸಾಂಗ್ಸ್ ಸಹವಾಸ ಎಲ್ಲದರ ಜೊತೆ ಓದನ್ನು ಅದ್ಹೇಗೆ ದಕ್ಕಿಸಿಕೊಂಡಿದ್ದನೋ ಏನೋ? ಎಲ್ಲ ಗೆಳೆಯರ ಜೊತೆ ರಾತ್ರಿ ಹನ್ನೆರಡರವರೆಗೆ ಹರಟೆ ಹೊಡೆದು ಎಲ್ಲರೂ ಮಲಗಿದ ಮೇಲೆ ಬೆಳಗಿನ ಐದರವರೆಗೆ ಓದಿ ಸೋಮಾರಿ ಯಂತೆ ಚಾದರ ಹೊದ್ದು ಮಲಗಿರುತ್ತಿದ್ದ.  
  
ಬೆಳಿಗ್ಗೆ ನೋಡಿದವರಿಗೆ ಇವನ ಚಟುವಟಿಕೆಗಳೇ ಅರ್ಥವಾಗುತ್ತಿರಲಿಲ್ಲ.ವರ್ಷಗಳೂ  ಮುಗಿದವು. ಓದೂ ಮುಗಿಯಿತು.  ನೋಡಿದರೆ ಒಂದು ವಿಷಯ ಬ್ಯಾಕ್ ಇಟ್ಕೊಂಡಿದ್ದ  ಜಿರಾಫೆ, ಮುಂದೆ ಓದು ಕೆಲಸ ಎರಡನ್ನೂ ಮಾಡುತ್ತಾ ಬೆಂಗಳೂರು ಸೇರಿದ. ನನ್ನ ಓದು ಅಲ್ಲಿಗೆ ನಿಂತಿತು.  ಮುಂದೆ ನಾವೆಲ್ಲರೂ ಅನ್ನ  ದಕ್ಕಿದ ಕಡೆ ದುಡಿಯಲು ಬೇರೆಯಾದವು. ನಂತರ ಜಿರಾಫೆ  ಮಲ್ಟಿ ನ್ಯಾಷನಲ್ ಕಂಪನಿ ಒಂದರಲ್ಲಿ ಸೇರಿದ. ಈಗ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿದ್ದಾನೆಂಬುದು ಸದ್ಯಕ್ಕಿರುವ ಲಿಂಕು.  ನಮ್ಮ ಗುಂಪು  ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇನ್ನು ಏನೇನು ಸುಡುಗಾಡು ಕಾರ್ಡು ನೋಡಿದ್ದೇ ಮೊದಲು ಅವನಲ್ಲಿ. ಅಪರೂಪಕ್ಕೆ ಜೊತೆಗೆ ಓದಿದವರ ಮದುವೆಗಳಲ್ಲಿ ಕಂಡು ಹಳೆಯದನ್ನೆಲ್ಲಾ ಜ್ಞಾಪಿಸಿಕೊಂಡು ಕೊಕ್ಕರಿಸಿ ನಕ್ಕಿದ್ದೆವು.   ಆದರೆ,  ನಮ್ಮ ಗುಂಪಿನಲ್ಲಿ ಒಬ್ಬ ಮಾತ್ರ "ಎದ್ದೇಳದ  ಮಂಜುನಾಥ"ನಾಗಿಯೇ ಉಳಿದಿದ್ದಾನೆ.
 
ಈಗೆಲ್ಲಾ ಕೈಯಲ್ಲಿ ಮೊಬೈಲಿದೆ, ಬೇಕೆಂದಾಗ ಒತ್ತಿದರೆ ಹಲೋ ಅನ್ನಬಹುದು.  ಕೆಲವೇ ಗೆಳೆಯರು ಸಿಗು ತ್ತಾರೆ.  ಪುರುಸೊತ್ತು ಮಾಡ್ಕೊಂಡು ಮಾತಾಡುತ್ತೇವೆ.  ಒಬ್ಬ  ಗೆಳೆಯನು ಮಾತ್ರ ಎಲ್ಲಾ ಮೊಬೈಲ್ ಕಂಪನಿಗಳಿಗೆ  ರಾಯಭಾರಿಯಾಗಿದ್ದಾನೆ.  ಯಾವ್ ನಂಬರನ್ನು ಯಾವಾಗ ಬದಲಿ ಮಾಡಿರುತ್ತಾನೋ.  ಇನ್ಯಾವ ನಂಬರ್ ನಿಂದಲೋ ಮಾತಾಡಿ "ಏನಪ್ಪಾ, ಫೋನೇ ಮಾಡಂಗಿಲ್ಲಾ?" ಅಂದು ಉಗಿಸಿಕೊಳ್ಳುತ್ತಾನೆ.  
 
ಹೀಗೆ  ನಡೀತಾ ಇದೆ….. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

9 thoughts on “ಜಿರಾಫೆ ಡೈರಿಯಿಂದ: ಅಮರ್ ದೀಪ್ ಪಿ.ಎಸ್.

 1. ಸ್ಟೂಡೆಂಟ್ ಲೈಫು
  ಗೋಲ್ಡನ್ ಲೈಫು
  ಎನ್ನುವುದನ್ನು
  ನೆನಪು ಮಾಡಿದ್ದಕ್ಕೆ
  ಧನ್ಯವಾದಗಳು ಅಮರ್ ಜೀ

  1. ಅಖಿಲೇಶ್ ಸರ್….. ಧನ್ಯವಾದಗಳು… ಆದ್ರೆ ಒಂದ್ ಸಣ್ ರಿಕ್ವೆಸ್ಟ್ … ಅಮರ್ ಅಂದ್ರೆ ಅಷ್ಟೇ ಸಾಕು… ಜೀ…ಯಾಕೋ ಭಾರವಾಗುತ್ತೆ…

 2. ಅಮರ್, ತುಂಬಾ ಚೆನ್ನಾಗಿದೆ. ನನ್ನ ಹಳೆಯ ದಿನಗಳನ್ನು ನೆನಪಿಸಿದಿರಿ! ಎಲ್ಲರ ಬಳಗದಲ್ಲೂ ಒಂದಿಷ್ಟು 'ಜಿರಾಫೆ' ಗಳಿರುವುದಂತೂ ನಿಜ 🙂

 3. Super Deepu, Estu vishya marte hogittu, thanks kanale nenap madiddakke, Aadre papa kundvada matra eeglu ade tara balipashu aagtirtane annode novina sangathi,

Leave a Reply

Your email address will not be published.