ಇದು ಡೀಮೋನಿಟೈಜೆಷನ್ ಸಮಯ. ಇಲ್ಲಿ ಹಳೆಯ ನೋಟುಗಳಿಗೆ ಕಾವಡೆ ಕಾಸಿನ ಕಿಮ್ಮತ್ತು ಇಲ್ಲ. ಒಂದು ಕಾಲದಲ್ಲಿ ತಮ್ಮದೇ ಆದ ಮೌಲ್ಯವನ್ನು ಹೊಂದಿದ್ದ ನೋಟುಗಳು, ಇಂದು ಮೌಲ್ಯಕ್ಕೂ ತಮಗೂ ಸಂಬಂಧ ಇಲ್ಲವೆಂಬಂತೆ ಮೂಲೆ ಸೇರಿಕೊಳ್ಳುತ್ತಿವೆ. ಆದರೆ, ಆ ರೀತಿ ಮೌಲ್ಯ ಕಳೆದುಕೊಂಡ ನೋಟುಗಳು ಮುಂದೂಂದು ದಿನ ನಮ್ಮನ್ನು ಕಣ್ಣರಳಿಸಿಕೊಂಡು ನೋಡುವಂತೆ ಮಾಡುವುದರಲ್ಲಿ ಸಂದೇಹವಿಲ್ಲ.
ಅಂತಹ ಕಣ್ಣರಳಿಸಿಕೊಂಡು ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ನೋಡಬೇಕು ಎಂದರೆ ಶಿವಮೊಗ್ಗ ನಗರದಲ್ಲಿರುವ ತಂಪು ಪಾನಿಯಗಳ ವ್ಯಾಪಾರಿ ಜಿಯಾವುಲ್ಲಾಖಾನ್ ಅವರ ಅಂಗಡಿಗೆ ನೀವು ದಾಂಗುಡಿ ಇಡಲೇಬೇಕು. ಶಿವಮೊಗ್ಗ ನಗರದ ಕಲ್ಲಹಳ್ಳಿ ರಸ್ತೆಯಲ್ಲಿರುವ ಆರ್.ಕೆ ಐಸ್ ಕ್ರೀಮ್ ಅಂಗಡಿ ಮಾಲೀಕ ಜಿಯಾವುಲ್ಲಾಖಾನ್ ದಣಿದು ಬಂದವರ ದಾಹ ತೀರಿಸುವುದರ ಜೊತೆಗೆ ಜ್ಞಾನದ ದಾಹಕ್ಕೂ ನೀರೆರೆಯುತ್ತಿದ್ದಾರೆ. ಹಳೆಯ ನೋಟುಗಳು ಮತ್ತು ನಾಣ್ಯಗಳ ಸಂಗ್ರಹವನ್ನೇ ತಮ್ಮ ಹವ್ಯಾಸವಾಗಿಸಿಕೊಂಡಿರುವ ಜಿಯಾವುಲ್ಲಾಖಾನ್ ಅವರ ಬತ್ತಳಿಕೆಯಲಿ 1300 ನೇ ವರ್ಷದಿಂದಿಡಿದು ಪ್ರಸ್ತುತ ದಿನದ ವರೆಗಿನ ಚಾಲ್ತಿಯಲ್ಲಿರುವಂತಹ ಪ್ರಪಂಚದ ಎಲ್ಲಾ ದೇಶದ ನೋಟು ಮತ್ತು ನಾಣ್ಯಗಳಿವೆ.
ಸಂಗ್ರಹಿಸುವುದಷ್ಟೇ ಅಲ್ಲದೇ ಜನರಿಗೆ ನೋಡಲು ಮತ್ತು ಮುಟ್ಟಲು ಹಳೆಯ ನೋಟುಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತಾರೆ. ಎರಡು ವರ್ಷಗಳಿಂದ ತಂಪು ಪಾನಿಯಗಳ ಮಾರಾಟದಲ್ಲಿ ತೊಡಗಿರುವ ಜಿಯಾವುಲ್ಲಾಖಾನ್ ವ್ಯಾಪಾರದೊಂದಿಗೆ ಹಳೆಯ ನೋಟುಗಳು ಮತ್ತು ನಾಣ್ಯಗಳ ಸಂಗ್ರಹಣೆಯನ್ನು ತಮ್ಮ ಕಾಯಕವಾಗಿಸಿಕೊಂಡಿದ್ದಾರೆ. ಸಂಗ್ರಹಿಸಿದ ನೋಟು ಮತ್ತು ನಾಣ್ಯಗಳನ್ನು ತಮ್ಮ ಅಂಗಡಿಯಲ್ಲಿ ಗ್ರಾಹಕರಿಗೋಸ್ಕರ ಪ್ರದರ್ಶನದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ವ್ಯಾಪಾರ ಮತ್ತು ಹಳೆಯ ನೋಟುಗಳ ಸಂಗ್ರಹಣೆ ಮಾತ್ರವಲ್ಲದೇ, ದೇಶ ಸುತ್ತುವುದು ಇವರ ಮತ್ತೊಂದು ಕಾಯಕವಾಗಿದೆ. ಈಗಾಗಲೇ ಜಿಯಾವುಲ್ಲಾಖಾನ್ ಸುಮಾರು 6ಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿದ್ದಾರೆ. ದೇಶ ಸುತ್ತಬೇಕು ಇಲ್ಲವೇ ಕೋಶ ಓದಬೇಕು. ಜೀವನದಲ್ಲಿನ ಸಮಸ್ಯೆಗಳು ಕೋಶ ಓದುವುದಕ್ಕೆ ಅನುವು ಮಾಡಿಕೊಡಲಿಲ್ಲ, ಆದ್ದರಿಂದ ದೇಶ ಸುತ್ತುವ ಕಾಯಕದಲ್ಲಿ ನಿರತನಾಗಿದ್ದೇನೆ ಎನ್ನುವುದು ಅವರ ಉತ್ತರ.
ಹಾವುಗಳನ್ನು ಹಿಡಿಯುವುದು ಮತ್ತೊಂದು ಕಾಯಕ. ನಗರದಲ್ಲಿ ಕಾಣ ಸಿಗುವ ಹಾವುಗಳನ್ನು ಹಿಡಿದು ಹತ್ತಿರದ ಅರಣ್ಯ ಪ್ರದೇಶಗಳಿಗೆ ಸುರಕ್ಷಿತವಾಗಿ ಬಿಡುವ ಕಾರ್ಯದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹೀಗೆ ವ್ಯಾಪಾರ, ನೋಟು ಮತ್ತು ನಾಣ್ಯಗಳ ಸಂಗಹಣೆಯೊಂದಿಗೆ, ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಜಿಯಾವುಲ್ಲಾಖಾನ್ ನಿಜಕ್ಕೂ ಪ್ರಶಂಸನಾರ್ಹರು. ಮೊಬೈಲ್ ಸಂಖ್ಯೆ: 7760626852, 7019860589
-ಪ್ರವೀಣ್ ಕುಮಾರ ಸಲಗನಹಳ್ಳಿ. ದಾವಣಗೆರೆ