ಜಿಪುಣಾಗ್ರೇಸರರು: ವೈ. ಬಿ. ಕಡಕೋಳ


ದೈನಂದಿನ ಬದುಕಿನಲ್ಲಿ ಜಿಪುಣತನ ಇರಕೂಡದು. ಹಾಗೆ ಇದ್ದರೆ ಅಂತಹ ವ್ಯಕ್ತಿಗಳು ಯಾರಿಗೂ ಹೊಂದಿಕೊಳ್ಳಲಾರರು. ಅಂತವರನ್ನು ಯಾರೂ ಕೂಡ ಇಷ್ಟ ಪಡಲಾರರು. ಕಾಗೆ ಒಂದಗುಳ ಕಂಡರೆ ಕರೆಯುವುದು ತನ್ನ ಬಳಗವನ್ನು ಕಾಕಾ ಎಂದು. ಎಂಬ ಮಹತ್ವವನ್ನು ಪಕ್ಷಿ ಪ್ರಾಣಿಗಳಿಂದ ಕಲಿಯುವ ನಾವು ಕನಿಷ್ಟರಾಗಿ ಬದುಕುವುದು ತರವೇ. ? ಒಂದು ಸಲ ಯೋಚಿಸಿ.

ಒಂದು ಸಲ ಒಬ್ಬ ವ್ಯಕ್ತಿ ಮರಭೂಮಿಯಲ್ಲಿ ತನ್ನ ನಾಯಿಯೊಂದಿಗೆ ಪ್ರವಾಸ ಆರಂಭಿಸಿದ್ದ. ಬೇಸಿಗೆ ಕಾಲ ಬೇರೆ ಅಂತಹ ಸ್ಥಳದಲ್ಲಿ ನೀರನ ಕೊರತೆ ಇತ್ತು. ಆತ ತನ್ನ ಹೆಗಲಿಗೆ ಬಾಟರ್ ಬ್ಯಾಗ ಹೊಂದಿದ್ದ. ಹಲವು ಕಿಲೋಮೀಟರ್ ದೂರ ನಡೆಯುವಷ್ಟರಲ್ಲಿ ನಾಯಿ ನೀರಡಿಸಿ ಬಾಯಿ ತೆರೆದು ಉಸಿರಾಡುತ್ತ ನಿಂತಿತು. ಆಗ ಅದಕ್ಕೆ ನೀರು ಬೇಕಾಗಿದೆ ಎಂಬ ಅರಿವು ಇವನಿಗಾಯಿತು. ಆದರೇನಂತೆ ತನ್ನ ನೀರಿನ ಬಾಟಲಿಯಲ್ಲಿದ್ದ ನೀರನ್ನು ಕೊಡುವುದೇ ಛೇ ಛೇ ಈ ನೀರು ನನಗೆ ಬೇಕು ಎಂದು ದಾರಿಹೋಕರನ್ನು ನೋಡತೊಡಗಿದ. ಅಷ್ಟರಲ್ಲಿ ಎದುರಿನಲ್ಲಿ ಒಬ್ಬ ವ್ಯಕ್ತಿ ಬಂದ ಅವನನ್ನು ನಿಲ್ಲಿಸಿ “ಸ್ವಾಮಿ ನನ್ನ ನಾಯಿಗೆ ನೀರಡಿಕೆಯಾಗಿದೆ. ತಮ್ಮ ಬಳಿ ಸ್ವಲ್ಪ ನೀರು ಇದ್ದರೆ ಕೊಡ್ತೀರಾ. ?” ಎಂದು ಕೇಳಿದ.

ಇವನನ್ನು ಮೇಲೆ ಕೆಳಗೆ ಒಂದು ಸಲ ನೋಡಿದ ಆ ವ್ಯಕ್ತಿ ಇವನ ಹೆಗಲಲ್ಲಿ ನೀರು ತುಂಬಿದ ಬಾಟಲಿ ಜೋತು ಬಿದ್ದಿರುವುದನ್ನು ಗಮನಿಸಿ. “ಅಯ್ಯಾ ನಿಮ್ಮ ಬಾಟಲಿಯನ್ನು ತಗೆದು ನೀರು ಕುಡಿಸಬಾರದೇ ಕಂಕುಳಲ್ಲಿ ಕೂಸನ್ನು ಇಟ್ಟುಕೊಂಡು ಊರೆಲ್ಲ ಹುಡುಕಿದ ಹಾಗೆ ಆಗಿದೆಯಲ್ಲ ತಮ್ಮ ಪರಿಸ್ಥಿತಿ” ಎಂದ. ಇವನಿಗೆ ಕೋಪ ರೀ, ಈ ನೀರನ್ನು ನಾಯಿಗೆ ಕುಡಿಸಿದರೆ ಮುಂದೆ ನಾನು ಸಾಗಬೇಕಾದ ದೂರ ಇನ್ನೂ ಬಹಳವಿದೆ. ನನಗೆ ನೀರಡಿಕೆಯಾದರೆ ಏನು ಗತಿ. ನಿಮ್ಮಲ್ಲಿ ನೀರು ಇದ್ದರೆ ಕೊಡಿ ಇಲ್ಲದಿದ್ದರೆ ನಿಮ್ಮ ಪಾಡಿಗೆ ನೀವು ಹೊರಡಿ:”ಎಂದು ಗದರಿದ. ಇವನ ಈ ಅವಸ್ಥೆಯನ್ನು ಕಂಡ ಆ ವ್ಯಕ್ತಿ ತನ್ನ ಪಾಡಿಗೆ ಗೊಣಗುತ್ತ ಹೊರಟು ಹೋದ.

ಇಂತಹ ವ್ಯಕ್ತಿಗಳ ಜಿಪುಣತನವನ್ನು ಏನೆನ್ನಬೇಕು ಊಹಿಸಿ. ಬದುಕಿನಲ್ಲಿ ಅವಶ್ಯಕತೆ ಎಷ್ಟು ಇರುತ್ತದೆಯೋ ಅಷ್ಟನ್ನು ಅನುಭವಿಸಬೇಕು. ಅದು ಇತರರಿಗೂ ಕೂಡ ಸಹಕಾರ ಸಹಾಯ ನೀಡುವ ಮೂಲಕ ಇದ್ದಾಗ ಮಾತ್ರ. ಅದು ಬಿಟ್ಟು ಎಲ್ಲವೂ ತನಗೆ ಇರಲಿ ಎಂಬ ಸ್ವಾರ್ಥ ಮನೋಭಾವ ಹೊಂದಿದ್ದರೆ. ಅದರಿಂದ ಬದುಕಿನಲ್ಲಿ ಯಾವ ಪ್ರಯೋಜನವೂ ಇಲ್ಲ.

ಹಾಗಾದರೆ ನಾವು ಎಂತಹವರನ್ನು ಜಿಪುಣ ಎನ್ನಬೇಕು. ಹಣ ಅಥವ ಇತರ ಸ್ವತ್ತುಗಳನ್ನು ಕೂಡಿಡುವ ಸಲುವಾಗಿ ಖರ್ಚುಮಾಡಲು ಯಾವ ವ್ಯಕ್ತಿ ಇಷ್ಟಪಡುವುದಿಲ್ಲವೋ. ಅಂತವರನ್ನು ಜಿಪುಣ ಎನ್ನಬಹುದು. ಎಷ್ಟರಮಟ್ಟಿಗೆ ಎಂದರೆ ಮೂಲಭೂತ ಸೌಕರ್ಯಗಳನ್ನು ಹೊಂದಿ ಕೆಲವು ಅಗತ್ಯತೆಗಳನ್ನು ವರ್ಜಿಸಿ ಬದುಕುವವರು. ತಾನೂ ತಿನ್ನ ಇತರರಿಗೂ ಬಿಡ ಎಂಬ ಮಾತಿನಂತೆ.

ಒಂದು ಸಲ ಏನಾಯಿತೆಂದರೆ ಒಂದು ಶ್ರೀಮಂತ ಕುಟುಂಬ. ಆ ಮನೆಗೆ ಹಿರಿಯ ಅಜ್ಜಿ ಇಡೀ ಕುಟುಂಬದ ಜವಾಬ್ದಾರಿ ಸ್ಥಾನ ಹೊಂದಿದವಳಾಗಿದ್ದಳು. ಅವಳು ತನ್ನ ಮಕ್ಕಳನ್ನು ಕೂಡ ತನ್ನನ್ನು ಕೇಳದೇ ಯಾವ ಒಪ್ಪಿಗೆ ಪಡೆಯದೇ ಏನನ್ನೂ ಮಾಡದಂತೆ ಬೆಳೆಸಿದ್ದಳು. ಅವಳ ಮೂರು ಗಂಡು ಮಕ್ಕಳಿಗೆ ಮದುವೆಯಾಯಿತು. ಮನೆಗೆ ಸೊಸೆಯಂದಿರು ಬಂದರು. ಕೂಡು ಕುಟುಂಬ. ಸೊಸೆಯರು ಅಡುಗೆ ಮನೆಯಲ್ಲಿ ಒಲೆ ಹೊತ್ತಿಸಬೇಕಾದರೂ ಕೂಡ ಅಜ್ಜಿಯನ್ನು ಕಡ್ಡಿ ಪೆಟ್ಟಿಗೆ ಕೇಳಬೇಕು. ಹೆಚ್ದಿಗೆ ಕಡ್ಡಿ ಕೂಡ ಒಲೆಗೆ ಗೀರುವಂತಿಲ್ಲ. ಕಡ್ಡಿಗಳನ್ನು ಕೂಡ ಈ ಅಜ್ಜಿ ಎಣಿಕೆ ಮಾಡುತ್ತಿದ್ದಳು. ಒಂದು ಕಡ್ಡಿಗೆ ಒಲೆ ಹೊತ್ತಿಕೊಳ್ಳದಿದ್ದರೆ ಮತ್ತೊಂದು ಕಡ್ಡಿ ಗೀರಿದರೆ ಅಜ್ಜಿ ಕೋಪದಿಂದ ಬೈಯ್ದು ಬಿಡುತ್ತಿದ್ದಳು. ಎಲ್ಲ ಸೊಸೆಯಂದಿರಿಗೂ ಅಜ್ಜಿ ಒಂದು ಸಮಸ್ಯೆಯಾದಳು. ಸಾಕಷ್ಟು ಶ್ರೀಮಂತಿಕೆ ಇದ್ದರೂ ಉತ್ತಮ ಜೀವನ ನಡೆಸಲು ಅಡ್ಡಿ ಇವಳಿಂದ.

ಗಂಡು ಮಕ್ಕಳು ಕೂಡ ಪ್ರತಿ ದಿನ ಎದ್ದು ಹೊರಗೆ ಕೆಲಸಕ್ಕೆ ಹೊರಡಬೇಕಾದರೆ ಅಜ್ಜಿಯ ಮಾತನ್ನೇ ಕೇಳಿ ಹೋಗುತ್ತಿದ್ದರು. ಅಷ್ಟೊಂದು ಶ್ರದ್ದೆ ಅವಳಲ್ಲಿ ಇಟ್ಟುಕೊಂಡಿದ್ದರು. ಹೀಗೆ ಹಲವು ವರ್ಷ ಕಳೆದವು. ಅಜ್ಜಿಗೆ ವಯಸ್ಸಾಗಿ ಕಾಯಿಲೆಯಿಂದ ಹಾಸಿಗೆ ಹಿಡಿದಳು. ಸಾವು ಸಮೀಪಿಸಿದೆ ಎನಿಸಿತು. ಮಾತು ಹೊರಟೇ ಹೋಯಿತು. ಕೈಕಾಲುಗಳ ಚಲನೆಯ ಮೂಲಕ ಮಾತ್ರ ಅವಳ ಹಾವಭಾವದಿಂದ ಮನೆಗೆಲಸದಲ್ಲಿ ಸೊಸೆಯಂದಿರು ತೊಡಗಿ ಅವಳ ಲಾಲನೆ ಮಾಡುತ್ತ ಕಳೆಯತೊಡಗಿದರು. ಒಂದು ದಿನ ರಾತ್ರಿ ತಮ್ಮ ಗಂಡಂದಿರಿಗೆ ಅಜ್ಜಿ ಸತ್ತರೆ ಮನೆಯ ಆಸ್ತಿ ಅಂತಸ್ತಿನ ವಿಚಾರದಲ್ಲಿ ಹೇಗೆ ಎಂದು ಯೋಚಿಸತೊಡಗಿದರು. ಏನೇ ಆಗಲಿ ಸಾಯುವ ಮುಂಚೆ ಆಸ್ತಿಯ ವಿಚಾರವಾಗಿ ಇತ್ಯರ್ಥಗೊಳಿಸಿಕೊಳ್ಳಬೇಕು. ಅವಳಿಗೆ ಬಾಯಿ ಬರುವಂತೆ ಮಾಡಿದರೆ ಏನಾದರೂ ಅನುಕೂಲ ಆದೀತು ಎಂದು ವೈದ್ಯರ ಬಳಿ ಕರೆದೊಯ್ಯಲು ಯೋಚಿಸಿದರು.

ಮರುದಿನ ಅಜ್ಜಿಯನ್ನು ದೇವರ ಕೋಣೆಯ ಎದುರಿಗೆ ಮಂಚದಲ್ಲಿ ಮಲಗಿಸಿದರು. ದೇವರ ಕೃಪಾ ದೃಷ್ಟಿ ಅವಳ ಮೇಲೆ ಬರಲಿ. ಎಂದು ಕಿರಿಯ ಸೊಸೆ ದೇವರ ಕೋಣೆಯಲ್ಲಿ ಪೂಜೆಯಲ್ಲಿ ತೊಡಗಿದಳು. ದೀಪ ಹಚ್ಚಿ ಧೂಪ ಹಾಕಬೇಕೆನ್ನುವಷ್ಟರಲ್ಲಿ ಅಜ್ಜಿ ಕೈ ಸನ್ನೆಯನ್ನು ಮಾಡತೊಡಗಿದಳು. ಅವಳ ಈ ಕೃತ್ಯವನ್ನು ಕಂಡು ಗಾಭರಿಯಾದ ಸೊಸೆ ಎಲ್ಲರನ್ನು ಕರೆದಳು. ಆದರೆ ಅಜ್ಜಿ ದೇವರ ಕೋಣೆಯತ್ತ ಕೈತೋರಿ ಏ£ನ್ನೋ ಹೇಳ ಹೊರಟಳು ಆದರೆ ಅವರಿಗಿದಾವುದು ಗೊತ್ತಾಗುತ್ತಿಲ್ಲ. ಒಮ್ಮೆ ಪೂಜೆಯನ್ನು ನೋಡುತ್ತಾರೆ ಮತ್ತೊಮ್ಮೆ ಅಜ್ಜಿಯನ್ನು ನೋಡುತ್ತಾರೆ. ದೇವರ ಪೂಜೆ ಅಲಂಕೃತವಾಗಿ ಸುಂದರವಾಗಿದೆ. ಅಜ್ಜಿಗೆ ದೇವರ ಭಕ್ತಿ ಹೆಚ್ಚಿರಬಹುದೇನೋ ಎಂದುಕೊಂಡು ಇದೇ ತಕ್ಕುದಾದ ಸಮಯ ವೈದ್ಯರನ್ನು ಕರೆತಂದು ಉಪಚರಿಸಿದರೆ ಅಜ್ಜಿಗೆ ಬಾಯಿ ಬಂದು ಆಸ್ತಿ ಅಂತಸ್ತಿನ ಬಗ್ಗೆ ಏನಾದರೂ ಹೇಳಬಹುದೇನೋ ಎಂದುಕೊಂಡು ಲಗುಬಗೆಯಿಂದ ವೈದ್ಯರ ಬಳಿಗೆ ಗಂಡು ಮಕ್ಕಳು ಬಂದರು.

ವೈದ್ಯರಿಗೆ ತಮ್ಮ ಅಜ್ಜಿಯ ಬಗ್ಗೆ ಅವಳ ವರ್ತನೆ ಬಗ್ಗೆ ತಿಳಿಸಿದರು. ಇವರ ಈ ಆಲೋಚನೆ ಕಂಡ ವೈದ್ಯ “ನೋಡಿ ನಾನು ಇಂಜೆಕ್ಷನ್ ಕೊಡುವೆ. ಆದರೆ ಅವಳಿಗೆ ಬಾಯಿ ಬಂದು ಮಾತನಾಡಿದರೂ ಕೂಡ ಬಹಳ ಹೊತ್ತು ಆ ಮಾತು ಇರಲಾರದು. ಮತ್ತೆ ಅವಳು ನಿಸ್ತೇಜಳಾಗಿ ಸ್ಮøತಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ತಗಲುವ ವೆಚ್ಚ ತಾವು ಭರಿಸುವುದಾದಲ್ಲಿ ಮಾತ್ರ ನಾನು ಆ ಇಂಜೆಕ್ಷನ್ ನೀಡುವೆ” ಎಂದರು. ಇವರಿಗೆ ಅಜ್ಜಿ ತಗೆದಿಟ್ಟಿರುವ ಆಸ್ತಿಯ ಮೇಲೆ ಮೋಹ. ದುಡ್ಡು ಎಷ್ಟು ಖರ್ಚಾದರೂ ಸರಿ ಅಜ್ಜಿ ಮಾತಾಡಿದರೆ ಸಾಕು ಎಂದುಕೊಂಡು ಮೂವರು ಸಮನಾಗಿ ಹಣ ಹೊಂದಿಸಿಕೊಂಡು ವೈದ್ಯರನ್ನು ಮನೆಗೆ ಕರೆದುಕೊಂಡು ಹೊರಟರು.

ಅಜ್ಜಿ ದೇವರ ಕೋಣೆಯತ್ತ ಕೈ ಮಾಡುವುದನ್ನು ನಿಲ್ಲಿಸಿರಲಿಲ್ಲ. ವೈದ್ಯರು ಬಂದರು. ಪರೀಕ್ಷಿಸಿದರು. ಅಜ್ಜಿಗೆ ಇಂಜೆಕ್ಷನ್ ನೀಡಿದರು. ಕೆಲ ಸಮಯದಲ್ಲಿ ಅಜ್ಜಿಗೆ ಮಾತನಾಡಲು ಬಂದೇ ಬಿಟ್ಟಿತು. ಎಲ್ಲರೂ ತದೇಕ ಚಿತ್ತದಿಂದ ನೋಡುತ್ತಿದ್ದಾರೆ ಆಗ ಅಜ್ಜಿ ಹೇಳಿದ ಮಾತು ಏನು ಗೊತ್ತೇ. ಕಿರಿಯ ಸೊಸೆಯನ್ನು ದುರುಗುಟ್ಟಿ ನೋಡಿ “ಏನೇ ದೇವರ ಮುಂದಿನ ದೀಪಕ್ಕೆ ಎಷ್ಟೊಂದು ಎಣ್ಣೆ ಹಾಕಿದ್ದೀಯಾ. ? ಇಷ್ಟೊಂದು ಎಣ್ಣೆ ಏನು ನಿಮ್ಮ ತಾತನ ಆಸ್ತಿಯೇ. ನೋಡಿಕೊಂಡು ಎಣ್ಣೆ ಬಳಕೆ ಮಾಡಲು ಬರುವುದಿಲ್ಲವೇ. ? “ ಎಂದವಳೇ ಮತ್ತೆ ನಿತ್ರಾಣ ಸ್ಥಿತಿಗೆ ಜಾರಿದಳು. ದೇವರ ದೀಪಕ್ಕೆ ಹಾಕಿದ ಎಣ್ಣೆಯ ಮೇಲೂ ಈ ಜಿಪುಣಾಗ್ರೇಸರ ಅಜ್ಜಿಯ ಕಣ್ಣು ಸಾಯುವ ಸ್ಥಿತಿ ಇದ್ದಾಗಲೂ ಇತ್ತು ಎಂದರೆ ಅವಳನ್ನು ಏನೆಂದು ಕರೆಯಬೇಕು.
ಆಸ್ತಿಯ ವಿಚಾರದಲ್ಲಿ ಅಜ್ಜಿಯ ಬಗ್ಗೆ ಊಹಿಸಿದ ಮೂವರು ಗಂಡು ಮಕ್ಕಳು ಅವಳನ್ನು ಮಾತನಾಡಿಸಲು ಹರಸಾಹಸ ಪಟ್ಟರೂ ಆಗಿದ್ದೇನು. ಆಸ್ತಿ ದೊರೆಯಲಿಲ್ಲ ಅವಳ ಜಿಪುಣತನದ ವಿಚಾರವೇ ಕಂಡುಬಂತು.

ನಮ್ಮ ಹಿರಿಯ ಮಿತ್ರರೊಬ್ಬರು ಆಫೀಸಿನಲ್ಲಿ ಇದ್ದರು. ಅವರ ಸಂಭಳ ತಿಂಗಳಿಗೆ ಎಪ್ಪತ್ತು ಸಾವಿರ ರೂಪಾಯಿ. ಆಸ್ತಿ ಸಾಕಷ್ಟಿತ್ತು. ಆಫೀಸಿನಲ್ಲಿ ಏನಾದರೂ ಕೆಳ ಹಂತದವರಿಗೆ ಕೆಲಸ ಹೇಳಲು ಪೋನ್ ಮಾಡಬೇಕೆಂದರೆ ಅವರು ಮಿಸ್ ಕಾಲ್ ಕೊಡೋರು. ತಿರುಗಿ ಅವರಿಂದ ಪೋನ್ ಬಂದರೆ ಸಾಕು ತಾಸುಗಟ್ಟಲೇ ಮಾತನಾಡಿ ತಮ್ಮ ಕೆಲಸ ಮಾಡಿಸಿಕೊಳ್ಳುವವರು. ನನಗಂತೂ ದಿನಾಲೂ ಇದನ್ನು ನೋಡಿ ನೋಡಿ ಸಾಕಾಯಿತು. ಅಷ್ಟೇ ಅಲ್ಲ ಅವರಿಗೆ ನಾಲ್ಕು ಜನ ಅಣ್ಣ ತಮ್ಮಂದಿರು ಇದ್ದರೂ ಹೆಂಡತಿಯ ಆಸ್ತಿಯನ್ನು ಕೂಡ ಪಡೆದು ಅದರಲ್ಲಿ ಮನೆ ಕಟ್ಟಿ ಬದುಕುತ್ತಿದ್ದರು. ಅವರಿಗೆ ಹೊಸ ಮೋಬೈಲ್ ಕೊಂಡುಕೊಳ್ಳುವ ಬಯಕೆ ಆದರೆ ಅದಕ್ಕೆ ಬೋನಸ್ ರೂಪದಲ್ಲಿ ಹಣ ಬರಲಿ ಎಂಬುದು ಇಚ್ಚೆ. ಹೀಗೆ ಒಂದು ವರ್ಷ ಸಾಗಿತು. ಒಂದು ದಿನ ಮೇಲಾಧಿಕಾರಿಗಳು ಕಛೇರಿಯಲ್ಲಿ ಕೆಳ ಹಂತದ ಎಲ್ಲ ನೌಕರರ ಸಭೆ ಕರೆದರು. ಆಗ ಎಲ್ಲರೂ ಸೇರಿದ್ದರು. ಎಲ್ಲರೂ ಸುಮ್ಮನಿದ್ದರೂ ನಮ್ಮ ಗುಂಡಣ್ಣ ಎದ್ದು ನಿಂತ. ಅಧಿಕಾರಿಗಳು ಯಾಕೆ. ? ಎಂದು ಪ್ರಶ್ನಿಸಿದರು.

“ಸಾಹೇಬರೇ ಈ ನಿವೃತ್ತಿ ಅಂಚಿನಲ್ಲಿ ಬಂದಿರುವ ಮಹಾಶಯನ ಬಗ್ಗೆ ನನ್ನದೊಂದು ವಿನಂತಿ ಅದು ತಮ್ಮ ಮೂಲಕ. ” ಎಂದ. ಅಧಿಕಾರಿಗಳಿಗೆ ವಿಚಿತ್ರವೆನಿಸಿತು. “ಏನು ಹೇಳಿ. ?” ಎಂದರು. “ಸಾಹೇಬರೇ ಇಡೀ ವರ್ಷದಿಂದ ನೋಡುತ್ತಿರುವೆ. ಪುಟ್ಟ ಹ್ಯಾಂಡಸೆಟ್ ಹೊಂದಿದ್ದಾರೆ. ಮೋಬೈಲ ಕರೆನ್ಸಿ ಅವರಲ್ಲಿದೆಯೋ ಇಲ್ಲವೋ ಗೊತ್ತಿಲ್ಲ. ಬರೀ ಮಿಸ್ ಕಾಲ್ ಕೊಡುತ್ತಾರೆ. ನೋಡಿದರೆ ಹಿರಿಯರು. ಕಾರಣ ಇನ್ಮುಂದೆ ಪ್ರತಿ ತಿಂಗಳು ಉಚಿತ ಡೇಟಾ ಇರುವ ಪ್ಲಾನ್ ನಾನೇ ರಿಚಾರ್ಝ ಮಾಡಿಸುವೆ. ಅವರ ನಿವೃತ್ತಿಯವರೆಗೂ ಯಾರಿಗೂ ಮಿಸ್ ಕಾಲ್ ಕೊಡದಂತೆ ತಾವು ಅಪ್ಪಣೆಯೇನಾದರೂ ಮಾಡುವಿರಾ. ?” ಎಂದಾಗ ಎಲ್ಲರೂ ಗೊಳ್ಳೆಂದು ನಕ್ಕರು. ಆದರೆ ಆತ ಮಾತ್ರ ಅವರೊಡನೆ ವಾಗ್ವಾದಕ್ಕಿಳಿದ. ಇದು ಮುಗಿಯಿತು. ಬೋನಸ್ ರೂಪದಲ್ಲಿ ಹಣ ಕೂಡ ಬಂತು . ಹದಿನೈದು ಸಾವಿರ ರೂಪಾಯಿಯ ಹೊಸ ಸೆಟ್ ಖರೀದಿಸಿದ. ಅದಕ್ಕೂ ಕೂಡ ಇನ್ಸುರೇನ್ಸ ಮಾಡಿಸಿದ. ಆಗಲಾದರೂ ಮಿಸ್ ಕಾಲ್ ಕೊಡುವುದು ಹೋಯಿತೇ ಇಲ್ಲ ಸ್ವಾಮಿ. ನಾಯಿಯ ಬಾಲ ಡೊಂಕು ಅಂತಾರಲ್ಲ ಹಾಗೆ. ಆತನಿಗೆ ಇನ್ನೂ ಒಂದು ಪ್ರಮೋಷನ್ ಕೂಡ ಆಯಿತು. ಒಂದು ದಿನ ಬಸ್‍ಲ್ಲಿ ಹೊರಟಾಗ ಇವನ ಮೋಬೈಲ್ ಜೇಬುಗಳ್ಳರ ಪಾಲಾಗಬೇಕೇ,?. ಅಬ್ಬಾ ಒಂದು ವಾರ ಮೋಬೈಲ್ ವಿಚಾರವಾಗಿ ಕಂಪ್ಲೇಟ್ ಕೊಟ್ಟು ಪೋಲಿಸ್ ಸ್ಟೇಶನ್ನು ಮೋಬೈಲ್ ಖರೀದಿಸಿದ ಅಂಗಡಿ ಅಲೆದಲೆದು ಅಷ್ಟೇ ಬೆಲೆಯ ಮೋಬೈಲ್ ತಂದ. ಇಂತವರು ಜಗತ್ತಿನಲ್ಲಿ ಎಷ್ಟಿದ್ದರೇನು. ? ಹುಟ್ಟುಗುಣ ಸುಟ್ಟರೂ ಹೋಗದು ಎಂಬ ಗಾದೆಯಂತೆ ಇವರ ಬದುಕಲ್ಲವೇ. ?

ಇಂತಹವರಲ್ಲೂ ಅನೇಕ ವೈರೈಟಿಯವರನ್ನು ನಾವು ಕಾಣುತ್ತೇವೆ. ಸರಕಾರಿ ಕಛೇರಿಗಳಲ್ಲಿ ಕರೆಂಟ್ ಹೋದರೆ ಇನ್ವರರ್ಟರ್ ಅಳವಡಿಸಿರುತ್ತಾರೆ. ಅದಕ್ಕೆ ಡಿಸ್ಟಿಲರ್ ವಾಟರ್ ಹಾಕಬೇಕಾಗುತ್ತದೆ. ಇವುಗಳ ಉಸ್ತುವಾರಿಯವನೊಬ್ಬ ಡಿಸ್ಟಿಲರ್ ವಾಟರ್ ತಂದು ತನ್ನ ಟ್ರೇಜರಿಯಲ್ಲಿಟ್ಟುಕೊಂಡು. ಸ್ವಲ್ಪ ಸ್ವಲ್ಪ ಹಾಕುತ್ತ ಇಡೀ ಬಾಟಲಿ ಡಿಸ್ಟಿಲರ್ ವಾಟರ್ ಹಾಕುವ ಮಹಾಶಯನೊಬ್ಬ ಹಲವು ದಿನ ರಜೆಯ ಮೇಲೆ ಹೋದಾಗ ಇಡೀ ಇನ್ವರ್ಟರ್ ಡಿಸ್ಟಿಲ್ ವಾಟರ್ ಖಾಲಿಯಾಗಿ ಇನ್ವರ್ಟರ್ ಸುಟ್ಟು ಹೋದರೂ ತನ್ನ ಬುದ್ದಿ ಬಿಡಲಿಲ್ಲ. ಜಿಪುಣತನಕ್ಕೆ ಇತಿಮಿತಿಗಳೇ ಇಲ್ಲವೇನೋ. ? ಒಂದು ದಿನಪತ್ರಿಕೆಯನ್ನು ಐದು ರೂಪಾಯಿ ಕೊಂಡು ಖರೀದಿಸದೇ ಬೇರೆಯವರ ಮನೆಯ ಬಾಗಿಲಿಗೆ ಪೇಪರ್ ಹುಡುಗ ಎಸೆಯುವಷ್ಟರಲ್ಲಿ ಅವರ ಬಾಗಿಲು ಮುಚ್ಚಿದ್ದರೆ ಬಾಗಿಲು ತೆರೆಯೋ ತನಕ ಅದನ್ನು ತಗೆದುಕೊಂಡು ಓದುವ ಮಹಾಶಯರೂ ಇದ್ದಾರೆ. ಅವರಿಗೆ ಪೇಪರ್ ಕೊಂಡುಕೊಳ್ಳುವಷ್ಟ ದುಡ್ಡು ಇಲ್ಲವೆಂದಲ್ಲ. ಆದರೆ ಅದೇ ದುಡ್ಡಿನಲ್ಲಿ ಏನಾದರೂ ಮಾಡಬಹುದು. ಎಂಬ ಆಲೋಚನೆ. ಒಂದು ಕಪ್ ಚಹಾ ಸೇವಿಸುವ ಮನುಷ್ಯ ಯಾರಾದರೂ ಎದುರಿಗೆ ಬಂದರೆ ಬೈಟು ಚಹಾ ಹೇಳುವ ತನಕ ಜಿಪುಣತನದವರನ್ನು ಸಮಾಜದಲ್ಲಿ ಕಾಣುತ್ತೇವೆ. ಜಿಪುಣನಿಗೆ ತಾನು ಅನುಭವಿಸಬೇಕು ಎಂಬ ಇಚ್ಚೆ ಇರದು. ತಾನೂ ಕೊಡ ಇತರರಿಗೂ ಬಿಡ ಎಂಬಂತೆ. ಅವರ ಬದುಕು ಇರುತ್ತದೆ ಎಂದರೆ ಅತಿಶಯೋಕ್ತಿಯಲ್ಲ.

ಹಿಂದೆ ಉಪನ್ಯಾಸಕರೊಬ್ಬರು ಜಿಪುಣತನ ಕುರಿತು ಒಂದು ದೃಷಾಂತ ಹೇಳಿದ್ದು ಈಗ ನೆನಪಿಗೆ ಬರುತ್ತಿದೆ. ಒಬ್ಬ ವ್ಯಕ್ತಿ ಕಾಶಿಗೆ ಹೋಗಿದ್ದ. ಅಲ್ಲಿಂದ ಗಂಗಾಜಲವನ್ನು ತರುವಾಗ ಅವನಿರುವ ಬಸ್ ಅಪಘಾತಕ್ಕೆ ಒಳಗಾಯಿತು. ಬಸ್ ಹೊರಗೆ ಒಬ್ಬ ಹುಡುಗ ನರಳುತ್ತಿದ್ದ. ಸುತ್ತಲೂ ಸೇರಿದ್ದವರೆಲ್ಲ ಇಲ್ಲಿ ಯಾರಾದರೂ ನೀರು ಇದ್ದರೆ ಕೊಡಿ ಎನ್ನುತ್ತಿರುವಾಗ ಇವರ ಬಾಟಲಿ ಕಂಡವರೊಬ್ಬರು. ಸ್ವಾಮಿ ಆ ಮಗುವಿನ ಬಾಯಿಗೆ ಸ್ವಲ್ಪ ನೀರು ಹಾಕಿ ಎನ್ನಲು. ಅವರು ಇದು ನೀರಲ್ಲ ಸ್ವಾಮಿ ಗಂಗಾಜಲ. ಇದನ್ನು ಕಾಶಿಯಿಂದ ತಂದಿರುವೆ. ಎಂದರು. ಅಷ್ಟರಲ್ಲಿ ಅಲ್ಲಿದ್ದ ಹಿರಿಯರೊಬ್ಬರು ಈ ಗತಿ ನಿಮಗೆ ಆಗಿದ್ದಿದ್ದರೆ ಗಂಗಾಜಲ ಹಾಗೆಯೇ ನಿಮ್ಮ ಮನೆಯವರೆಗೂ ಒಯ್ಯುತ್ತಿದ್ದಿರೇನು. ? ಕೊಡಿ ಮಗು ಬದುಕಿಸಿದ ಪುಣ್ಯ ಪ್ರಾಪ್ತಿ ಆಗುತ್ತದೆ ಎಂದು ಕಸಿದುಕೊಂಡು ಮಗುವಿಗೆ ನೀರನ್ನು ಕುಡಿಸಿದರು. ಆಗ ಆ ವ್ಯಕ್ತಿ ಪೆಚ್ಚುಮೋರೆ ಹಾಕಿಕೊಂಡು ನಿಂತುಬಿಟ್ಟ. ಮಗುವನ್ನು ಬದುಕಿಸಿದ ನೀರು ಗಂಗಾಜಲವಾದರೇನು ಬರೀ ನೀರಾದರೇನು ಅದು ಜೀವ ಉಳಿಸಿದ ಪರಿ ಇದೆಯಲ್ಲ ಇಂತಹ ಉದಾರತೆ ಬದುಕಿನಲ್ಲಿ ಬೇಕಲ್ಲವೇ. ?

ಬದುಕಿನಲ್ಲಿ ಒಳ್ಳೆಯತನಕ್ಕೆ ಯಾವತ್ತೂ ಬೆಲೆ ಇರುತ್ತದೆ. ನಾನು ನನ್ನದು ಎಂಬ ಭಾವ ನಮ್ಮಲ್ಲಿರಬೇಕು,ಜೀವಿಸಲು ಎಷ್ಟು ಅವಶ್ಯಕವೋ ಅಷ್ಟನ್ನು ಬಳಸೋಣ. ಇತರರ ಕಷ್ಟಗಳಿಗೆ ನೆರವಾಗುತ್ತ ಬದುಕಬೇಕು. ನಾವು ಜಿಪುಣತನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಎಲ್ಲವನ್ನೂ ಕೊನೆಗೊಂದು ದಿನ ಇಲ್ಲಿಯೇ ಬಿಟ್ಟು ಹೋಗುವ ಸತ್ಯವನ್ನು ಅರಿತು ಬದುಕಬೇಕಲ್ಲವೇ, ಇಂತಹ ಜಿಪುಣಾಗ್ರೇಸರರು ನಮ್ಮ ಮಧ್ಯದಲ್ಲಿ ಇರಬಹುದು. ಆದರೆ ಅವರ ಜಿಪುಣತನ ಬಿಡಿಸಲು ನಮ್ಮದೇ ಆದ ಚಿಂತನೆಗಳಿಂದ ಅವರನ್ನು ತಿದ್ದಬಹುದು. ಅಷ್ಟಕ್ಕೂ ಅವರಲ್ಲಿ ಪರಿವರ್ತನೆ ಆಗದಿದ್ದರೆ ಚಿಂತಿಸಿ ಯೋಚಿಸಿ ಪ್ರಯೋಜನವಿಲ್ಲ. ಅವರಷ್ಟಕ್ಕೆ ಅವರನ್ನು ಬಿಟ್ಟುಬಿಡಬೇಕು. ಅವರಿಗೆ ಒಂದಲ್ಲ ಒಂದು ದಿನ ಶರೀರ ನಶ್ವರ ಎಂಬ ಅರಿವಾದಾಗ ತನ್ನಷ್ಟಕ್ಕೆ ತಾವು ಸರಿ ಹೋಗಬಹುದು.

-ವೈ. ಬಿ. ಕಡಕೋಳ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x