‘ಜಾಲದಲ್ಲಿ ಸಮಾನತೆ’ (ಭಾಗ 2): ಜೈಕುಮಾರ್.ಹೆಚ್.ಎಸ್

ಇಲ್ಲಿಯವರೆಗೆ

ನಂತರದ ದಿನಗಳಲ್ಲಿ ಇಂಟರ್ ನೆಟ್ ನ ವಿನ್ಯಾಸ ರಚನೆ ಕೂಡ ಬದಲಾವಣೆಗೊಂಡಿದೆ. ಈ ಮುಂಚಿನ ಕೇಂದ್ರೀಕೃತ ಸರ್ವರ್ ಗಳು ಮತ್ತು ನೋಡ್ ಗಳಿಲ್ಲದ, ಪ್ರತಿಯೊಬ್ಬರೂ ಪರಸ್ಪರ ನೇರವಾಗಿ ಕಂಪ್ಯೂಟರಿಗೆ ಸಂಪರ್ಕ ಮಾಡಿಕೊಳ್ಳುವ ವಿನ್ಯಾಸ ರಚನೆಯ ಸ್ಥಳದಲ್ಲಿ ಇಂದು ಬಳಕೆದಾರರು ಇಂಟರ್ನೆಟ್ ದೈತ್ಯ ಕಂಪನಿಗಳ ಕೇಂದ್ರೀಕೃತ ಸರ್ವರ್ ಗಳನ್ನು ಅವಲಂಬಿಸುತ್ತಿದ್ದಾರೆ. ಇದನ್ನೇ ಕ್ಲೌಡ್ ಕಂಪ್ಯೂಟಿಂಗ್ ಎಂದು ಕರೆಯುವುದು. ಇಂಟರ್ ನೆಟ್ ನ ಸ್ವರೂಪದಲ್ಲಾಗಿರುವ ಈ ಮೂಲಭೂತ ಬದಲಾವಣೆಯು ಜಾಗತಿಕ ಇಂಟರ್ನೆಟ್ ಕಂಪನಿಗಳ ಏಳಿಗೆಯ ಜೊತೆ ಜೊತೆಗೇ ನಡೆದಿದೆ. 

ಆದರೂ, ಇಷ್ಟೆಲ್ಲ ಬೆಳವಣಿಗೆಯ ನಡುವೆ ಇಂಟರ್ನೆಟ್ ನ ಎರಡು ಪ್ರಮುಖ  ಗುಣಲಕ್ಷಣಗಳು ಅದರ ಪ್ರಾರಂಭದ ವಿನ್ಯಾಸ ರಚನೆಯಂತೆಯೇ ಬದಲಾಗದೇ ಉಳಿದುಕೊಂಡಿವೆ. ಟೆಲಿಕಾಂ ಟ್ರಾಫಿಕ್ ನಲ್ಲಿ ಧ್ವನಿ ಕರೆಗಳ ಎಲ್ಲ ವಾಣಿಜ್ಯ ವ್ಯವಹಾರಗಳನ್ನು ಧ್ವನಿ ಜಾಲಗಳಲ್ಲಿ ಅಳವಡಿಸಲಾಗಿದ್ದು, ಬಿಲ್ಲಿಂಗ್ ಮಾಡುವುದು ಸುಲಭ. ಆದರೆ ಇಂಟರ್ ನೆಟ್ ನಲ್ಲಿ ದತ್ತಾಂಶ ಪೊಟ್ಟಣಗಳನ್ನು (Data packets) ಪ್ರಸರಣ ಮಾಡುವಾಗ ಕಳುಹಿಸುವವರು ಮತ್ತು ಸ್ವೀಕರಿಸುವವರ ನಡುವೆ ಬಿಲ್ಲಿಂಗ್ ಮಾಡುವುದು ಬಹಳ ಕಷ್ಟ. ಏಕೆಂದರೆ ಆರಂಭದ ವಿನ್ಯಾಸ ರಚನೆಯಲ್ಲಿ ಇದನ್ನು ವಾಣಿಜ್ಯೋದ್ದೇಶಕ್ಕಾಗಿ ನಿರ್ಮಿಸಿರದ ಕಾರಣ ಪ್ರಸರಣ ಪ್ರೋಟೋಕಾಲ್ ಗಳಲ್ಲಿ ಬಿಲ್ಲಿಂಗ್ ವ್ಯವಸ್ಥೆಯನ್ನು ಅಳವಡಿಸಿರುವುದಿಲ್ಲ. ಎರಡನೆಯದು, ದತ್ತಾಂಶ ಪೊಟ್ಟಣಗಳನ್ನು ಇಂಟರ್ನೆಟ್ ಮೂಲಕ ಕಳುಹಿಸುವಾಗ ಗೌಪ್ಯತೆಯ ಕೊರತೆಯಿಂದಾಗಿ, ಸರ್ಕಾರಗಳು ಅದರಲ್ಲೂ ಅಮೇರಿಕಾ ಸರ್ಕಾರ ಇಂಟರ್ನೆಟ್ ಟ್ರಾಫಿಕ್ ಮೇಲೆ ಬೇಹುಗಾರಿಕೆ ನಡೆಸುವುದು ಬಹಳ ಸುಲಭವಾಗಿದೆ. 
'ಜಾಲದಲ್ಲಿ ಸಮಾನತೆಗಾಗಿ' ಯುದ್ದಗಳು

ಇಂಟರ್ನೆಟ್ ಕಂಪನಿಗಳು ಹಸುಳೆಗಳಾಗಿದ್ದಾಗ ಟೆಲಿಕಾಂ ಕಂಪನಿಗಳು ದೈತ್ಯ ಉರಗಗಳಾಗಿದ್ದವು. ಟೆಲಿಕಾಂ ಕಂಪನಿಗಳ ಮೂಲಸೌಲಭ್ಯದ ಮೂಲಕವೇ ಇಂಟರ್ನೆಟ್ ಕಂಪನಿಗಳು ಮತ್ತು ಬಳಕೆದಾರರು ಸಂಪರ್ಕ ಸಾಧಿಸಬೇಕಿತ್ತು! ಯಾರಾದರೂ ದತ್ತಾಂಶವನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಲಿ ಅಥವಾ ಸರ್ವರ್ ನಲ್ಲಿ ಸಂಗ್ರಹಿಸಿಡಲಿ ಅಥವಾ ಇನ್ನಾರೊಬ್ಬರು ಅದನ್ನು ವೀಕ್ಷಿಸಲಿ, ಅವೆಲ್ಲವೂ ಟೆಲಿಕಾಂ ಜಾಲಗಳ ಮೂಲಕವೇ ಸಾಗಿ ಹೋಗಬೇಕು. ಇಂಥಹ ಸಂದರ್ಭದಲ್ಲಿ, ಟೆಲಿಕಾಂ ಕಂಪನಿಗಳು ಗೇಟ್ ಕೀಪರ್ ಕೆಲಸ ಮಾಡುವುದರಿಂದ ಇಂಟರ್ನೆಟ್ ಕಂಪನಿಗಳಿಂದ ಅಥವಾ ಗ್ರಾಹಕರಿಂದ ಪ್ರವೇಶ ತೆರಿಗೆಯನ್ನು ಅವು ವಿಧಿಸುತ್ತವೆ. 

'ಜಾಲದಲ್ಲಿ ಸಮಾನತೆ' ಎಂಬ ಪದವನ್ನು ಬಳಕೆಗೆ ತಂದದ್ದು ಕೊಲಂಬಿಯಾ ಕಾನೂನು ವಿಶ್ವವಿದ್ಯಾಲಯದ ಪ್ರೊ. ಟಿಮ್ ವೂ. ಅವರು ಹೇಳುವಂತೆ ಇಂಟರ್ನೆಟ್ ನ ಅಸಲಿ ವಿನ್ಯಾಸದ ಪ್ರಮುಖ ಅಂಶವೆಂದರೆ ಹಲವು ಬೆಲೆಗಳನ್ನು ಪುಕ್ಕಟೆ ನೀಡುವುದು-ಅಂದರೆ ಶೂನ್ಯ-ಬೆಲೆಯ ನಿಯಮಗಳು. ಉಚಿತವಾಗಿ ಜಾಲಕ್ಕೆ ಸೇರ್ಪಡೆಯಾಗುವುದು. ಬಳಕೆದಾರರು ಮತ್ತು ಜಾಲತಾಣಗಳು ಪರಸ್ಪರರಿಗೆ ನೀಡುವ ಬೆಲೆ ಶೂನ್ಯ. ಬ್ಲಾಗರ್ ಒಬ್ಬ ಕಾಮ್ ಕ್ಯಾಸ್ಟ್ ನ ಗ್ರಾಹಕರನ್ನು ತಲುಪಲು ನೀಡುವ ಬೆಲೆ ಶೂನ್ಯ. ಬ್ರ್ಯಾಡ್ ಬ್ಯಾಂಡ್ ಆಪರೇಟರ್ ಗಳು ತಮ್ಮ ಮಾಹಿತಿಯನ್ನು ಸಾಗಿಸಲು ದೊಡ್ಡ ಜಾಲ ತಾಣಗಳು ವಿಧಿಸುವ ಶುಲ್ಕ ಶೂನ್ಯ. ಇದರಿಂದಾಗಿ ಇಂಟರ್ನೆಟ್ ತಾರತಮ್ಯ-ರಹಿತ ತತ್ವದ ಆಧಾರದಲ್ಲಿದ್ದು, ಶ್ರೀಮಂತ ಕಂಪನಿಗಳು ಸಾಧ್ಯವಾಗುವಂತೆಯೇ ಅತ್ಯಂತ ಕಡಿಮೆ ಸಂಪನ್ಮೂಲ ಹೊಂದಿರುವ ಯಾವುದೇ ಗುಂಪು ಅಥವಾ ವ್ಯಕ್ತಿಯು ಸಹ ಜಾಲತಾಣಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಸೃಜಿಸಬಹುದು. 
ಅಮೇರಿಕಾದಲ್ಲಿ ಆರಂಭವಾದ 'ಜಾಲದಲ್ಲಿ ಸಮಾನತೆಯ' ಯುದ್ದ:

ಅಮೇರಿಕಾದ 1996ರ ಸಂವಹನ ಕಾಯಿದೆಯಲ್ಲಿ ಕೆಲವು ವೈಚಿತ್ರ್ಯಗಳಿವೆ. ಈ ಕಾಯಿದೆಯಡಿ ಎರಡು ಗುಂಪಿನ ಸೇವೆಗಳನ್ನು ವ್ಯಾಖ್ಯಾನಿಸಲಾಗಿದೆ. ಮೊದಲನೇ ಗುಂಪಿನಲ್ಲಿ ಮಾಹಿತಿ ಸೇವೆಗಳನ್ನು ಸೇರಿಸಲಾಗಿದ್ದು, ಇವು ಕಡಿಮೆ ನಿಯಂತ್ರಣ ಹೊಂದಿವೆ. ಎರಡನೇ ಗುಂಪಿನಲ್ಲಿ ದೂರಸಂಪರ್ಕ ಸಂವಹನ ಸೇವೆಗಳನ್ನು ಸೇರಿಸಲಾಗಿದ್ದು, ಇವು ಕಟ್ಟುನಿಟ್ಟಿನ ನಿಯಂತ್ರಣಕ್ಕೊಳಪಟ್ಟಿವೆ. ಆರಂಭದಲ್ಲಿ ಹಾಲಿ ದೂರವಾಣಿ ಲೈನುಗಳ ಮೂಲಕ ಟೆಲಿಕಾಂ ಕಂಪನಿಗಳು ಬ್ರಾಡ್ ಬ್ಯಾಂಡ್ ಸೇವೆಗಳನ್ನು ಒದಗಿಸುತ್ತಿದ್ದು, ಅವುಗಳನ್ನು ದೂರಸಂಪರ್ಕ ಸಂವಹನ ಸೇವೆಗಳೆಂದು ಎರಡನೇ ಗುಂಪಿಗೆ ಸೇರಿಸಲಾಗಿತ್ತು. ನಂತರದಲ್ಲಿ ಕೇಬಲ್ ಟಿವಿ ಕಂಪನಿಗಳೂ ಕೂಡ ಬ್ರಾಡ್ ಬ್ಯಾಂಡ್ ಸೇವೆಗಳನ್ನು ಒದಗಿಸತೊಡಗಿ ತಮ್ಮ ಸೇವೆಗಳನ್ನು ಮಾಹಿತಿ ಸೇವೆಗಳೆಂದು ಮೊದಲನೇ ಗುಂಪಿಗೆ ಸೇರಿಸಬೇಕೆಂದು ಕೇಳಿಕೊಂಡವು. 2003 ರಲ್ಲಿ, ಅಮೇರಿಕಾದ ಸಂವಹನ ಮತ್ತು ಟೆಲಿಕಾಂ ನಿಯಂತ್ರಣ ಸಂಸ್ಥೆಯಾದ ಫೆಡರಲ್ ಸಂವಹನ ಆಯೋಗವು ಇದಕ್ಕೆ ಒಪ್ಪಿಗೆ ನೀಡಿ ಬ್ರಾಡ್ ಬ್ಯಾಂಡ್ ಸೇವೆಗಳನ್ನು ಮಾಹಿತಿ ಸೇವೆಗಳೆಂದು ವರ್ಗೀಕರಿಸಿತು. 2005ರಲ್ಲಿ, ಈ ಆಯೋಗವು ತಂತು ಬ್ರಾಡ್ ಬ್ಯಾಂಡ್ ಸೇವೆಗಳನ್ನು ಸಹ ಮಾಹಿತಿ ಸೇವೆಗಳೆಂದು ವರ್ಗೀಕರಿಸಿತು. ಇವೆರಡು ನಿರ್ಧಾರಗಳಿಂದ ಜಾಲದಲ್ಲಿ ಸಮಾನತೆಗಾಗಿ ಕಾದಾಡುವ ಪರಿಸ್ಥಿತಿಯುಂಟಾಯಿತು.  

ಇದೀಗ ಟೆಲಿಕಾಂ ಕಂಪನಿಗಳು ಮತ್ತು ಕೇಬಲ್ ಕಂಪನಿಗಳು ನಿಯಂತ್ರಣದಿಂದ ಜಾರಿಕೊಂಡು ತಾವು ಇಂಟರ್ ನೆಟ್ ಸೌಲಭ್ಯ ಒದಗಿಸುವಾಗ ತಾರತಮ್ಯ-ರಹಿತವಾಗಿ ಇರಬೇಕಿಲ್ಲ ಎಂದು ವಾದಿಸಿದವು. ಈ ಕಾಯಿದೆಗೆ ಟೆಲಿಕಾಂ ದೈತ್ಯ ಕಂಪನಿಗಳಾದ ಎಟಿ&ಟಿ, ವೆರಿಜಾನ್ ಮತ್ತು ಕಾಮ್ ಕ್ಯಾಸ್ಟ್ ಗಳು ಬೆಂಬಲ ನೀಡಿದ ಪರಿಣಾಮವಾಗಿ ಇಂಟರ್ ನೆಟ್ ಹೆದ್ದಾರಿಯಲ್ಲಿ ಹಲವು ಆನ್ ಲೈನ್ ಸೇವೆಗಳಿಗೆ ಬೆಲೆ ನಿಗಧಿಪಡಿಸಿ ಲಾಭಗಳಿಸಲಾರಂಭಿಸಿದವು. ಅದರ ಆಧಾರದ ಮೇಲೆ ಯಾವುದಕ್ಕೆ ಎಷ್ಟು ಆದ್ಯತೆ ನೀಡಬೇಕೆಂದು ತೀರ್ಮಾನಿಸುವ ಗೇಟ್ ಕೀಪರ್ ಕೆಲಸ ಶುರು ಮಾಡಿದವು. 

ನಾನಾ ಮೂಲೆಗಳಿಂದ ನೆಟ್ ಬಳಕೆದಾರರು ಒತ್ತಡ ತರಲಾರಂಭಿಸಿದ್ದರಿಂದ, 2015ರ ಫೆಬ್ರುವರಿಯಲ್ಲಿ ಅಮೇರಿಕಾದ ಅಧ್ಯಕ್ಷ ಒಬಾಮ ಮಧ್ಯಪ್ರವೇಶಿಸಬೇಕಾಯಿತು. ಕೊನೆಗೆ ಫೆಡರಲ್ ಸಂವಹನ ಆಯೋಗವು ಬ್ರಾಡ್ ಬ್ಯಾಂಡ್ ಸೇವೆಗಳನ್ನು ಮತ್ತೆ ಟೆಲಿಕಾಂ ಸೇವೆಗಳೆಂದು ಪುನರ್-ವರ್ಗೀಕರಿಸಿ ಜಾಲದಲ್ಲಿ ಸಮಾನತೆಯನ್ನು ಗಟ್ಟಿಗೊಳಿಸಿತು. 

ಇಂಟರ್ ನೆಟ್ – ಟೆಲಿಕಾಂ ಕಂಪನಿಗಳ ಐಕ್ಯಕೂಟ:
ಜಾಲದಲ್ಲಿ ಸಮಾನತೆಯನ್ನು ತೆಗೆದುಹಾಕಲು ಟೆಲಿಕಾಂ ಕಂಪನಿಗಳು ಇನ್ನೂ ಯತ್ನಿಸುತ್ತಿವೆ. ಪ್ರತಿ ದೇಶದಲ್ಲೂ ಪ್ರತಿ ವಲಯದಲ್ಲೂ ಅವು ಜಾಲದಲ್ಲಿನ ಸಮಾನತೆಯನ್ನು ಕಿತ್ತೊಗೆಯಲು ಹಣಾಹಣಿ ನಡೆಸಿವೆ. ಟೆಲಿಕಾಂ ಕಂಪನಿಗಳು ಆಯೋಗದ ತೀರ್ಮಾನವನ್ನು ಬುಡಮೇಲು ಮಾಡಲು ಅಮೇರಿಕಾದ ಸಂಸತ್ತಿನಲ್ಲಿ ಲಾಬಿ ನಡೆಸಿವೆ. 
ಜಾಲದಲ್ಲಿ ಸಮಾನತೆಯ ಯುದ್ದದ ಮೊದಲ ಹಂತದಲ್ಲಿ ಟೆಲಿಕಾಂ ಕಂಪನಿಗಳು ಸಣ್ಣ ಇಂಟರ್ ನೆಟ್ ಕಂಪನಿಗಳು ಮತ್ತು ನೆಟ್ ಬಳಕೆದಾರರ ವಿರುದ್ದ ನಿಂತಿದ್ದವು. ಇಂದು ಜಾಗತಿಕ ಇಂಟರ್ ನೆಟ್ ಕಂಪನಿಗಳು, ಮಾರುಕಟ್ಟೆ ಮೌಲ್ಯದಲ್ಲಿ ಹೇಳುವುದಾದರೆ, ಟೆಲಿಕಾಂ ಕಂಪನಿಗಳಿಗಿಂತ ದೊಡ್ಡದಾಗಿವೆ. ಟಾಪ್ 5 ಇಂಟರ್ ನೆಟ್ ಕಂಪನಿಗಳ (ಗೂಗಲ್, ಫೇಸ್ ಬುಕ್, ಅಮೆಜಾನ್, ಟೆನ್ಸೆಂಟ್, ಬೈಡು) ಮಾರುಕಟ್ಟೆ ಮೌಲ್ಯ 2014ರಲ್ಲಿ ಸುಮಾರು ರೂ. 58,69,500 ಕೋಟಿ ಗಳಿದ್ದರೆ, ಟಾಪ್ 5 ಟೆಲಿಕಾಂ ಕಂಪನಿಗಳ (ಚೈನಾ ಮೊಬೈಲ್, ವೆರಿಜಾನ್, ಎಟಿ&ಟಿ, ವೊಡಾಫೋನ್ & ಸಾಫ್ಟ್ ಬ್ಯಾಂಕ್) ಮಾರುಕಟ್ಟೆ ಮೌಲ್ಯ ರೂ. 53,43,000 ಕೋಟಿ ಗಳಷ್ಟಿದೆ. ಇದರಿಂದ ಇಂಟರ್ ನೆಟ್ ಕಂಪನಿಗಳು ಇಂದು ಟೆಲಿಕಾಂ ಕಂಪನಿಗಳ ಮರ್ಜಿಯಲ್ಲೇನೂ ಇಲ್ಲವೆಂಬುದು ತಿಳಿಯುತ್ತದೆ.  

ಮಾರುಕಟ್ಟೆ ಮೌಲ್ಯ

2009      

2014

ಶೇ. ಬೆಳವಣಿಗೆ   

 

ಟಾಪ್ 5 ಇಂಟರ್ ನೆಟ್ ಕಂಪನಿಗಳು (ಗೂಗಲ್, ಫೇಸ್ ಬುಕ್, ಅಮೆಜಾನ್, ಟೆನ್ಸೆಂಟ್, ಬೈಡು)

ರೂ. 18,78,500 ಕೋಟಿ         

ರೂ. 58,69,500 ಕೋಟಿ

312.5% 

 

ಟಾಪ್ 5 ಟೆಲಿಕಾಂ ಕಂಪನಿಗಳು (ಚೈನಾ ಮೊಬೈಲ್, ವೆರಿಜಾನ್, ಎಟಿ&ಟಿ, ವೊಡಾಫೋನ್ & ಸಾಫ್ಟ್ ಬ್ಯಾಂಕ್) 

ರೂ. 44,78,500 ಕೋಟಿ

ರೂ. 53,43,000 ಕೋಟಿ         

119.3% 

 

ಮೂಲ: ದಿ ರಿಬರ್ತ್ ಆಫ್ ದಿ ಟೆಲಿಕಾಂ ಮೊನಾಪಲಿ, ಸಿಟಿ ಜಿಪಿಎಸ್ ವರದಿ, ನವೆಂಬರ್ 2014
 
ಲಾಭಕ್ಕಾಗಿ ಪೈಪೋಟಿ:
ಇಂಟರ್ ನೆಟ್ ಕಂಪನಿಗಳು ತಮ್ಮ ಆರಂಭಿಕ ಷೇರು ಮಾರಾಟದಿಂದ (ಐಪಿಒ) ದೊಡ್ಡ ಮೊತ್ತದ ಹಣವನ್ನು ಮಾರುಕಟ್ಟೆಯಲ್ಲಿ ಸಂಗ್ರಹಿಸುತ್ತಿವೆ. ಇಂಟರ್ ನೆಟ್ ಕಂಪನಿಗಳ ಈ ಅಚಾನಕ್ ಬೆಳವಣಿಗೆಯನ್ನು ಕಂಡು ಪೈಪೋಟಿಗೆ ಬಿದ್ದಂತೆ ಟೆಲಿಕಾಂ ಕಂಪನಿಗಳು ಕೂಡ ಲಾಭಕ್ಕಾಗಿ ಯಾವ ಸೇವೆಯನ್ನು ಮತ್ತಷ್ಟು ಸರಕನ್ನಾಗಿಸಬಹುದೆಂದು ಹವಣಿಸುತ್ತಿವೆ. 
ಅಮೇರಿಕದಲ್ಲಿಯಾಗಲೀ, ಅಥವಾ ಭಾರತದಲ್ಲಿಯಾಗಲೀ ಟೆಲಿಕಾಂ ಕಂಪನಿಗಳು ಕಷ್ಟವನ್ನೇನು ಅನುಭವಿಸುತ್ತಿಲ್ಲ. ಅವುಗಳು ಆರೋಗ್ಯಕರ ಬೆಳವಣಿಗೆಯನ್ನು ಕಾಣುತ್ತಾ ಬಂದಿವೆ. ಮೂಲಸೌಲಭ್ಯ ಈಗಾಗಲೇ ವೃದ್ದಿಯಾಗಿರುವ ಅಮೇರಿಕಾದಲ್ಲಿ ಅವುಗಳ ಲಾಭ ಶೇ. 90 ರಷ್ಟಿದ್ದರೆ, ಇದೀಗಷ್ಟೇ ಬೆಳವಣಿಗೆಯಾಗುತ್ತಿರುವ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ತಮ್ಮ ಧ್ವನಿ ಮತ್ತು ಎಸ್.ಎಂ.ಎಸ್ ಸೇವೆಗಳ ಮೂಲಕ ಶೇ. 100 ರಷ್ಟು ಲಾಭ ಗಳಿಸುತ್ತಿವೆ. 

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ದೊಡ್ಡ ಇಂಟರ್ ನೆಟ್ ಕಂಪನಿಗಳ ಏಳಿಗೆಯಿಂದಾಗಿ ಟೆಲಿಕಾಂ ಕಂಪನಿಗಳು ಮತ್ತು ನೆಟ್ ಕಂಪನಿಗಳ ನಡುವೆ ಐಕ್ಯಕೂಟ (ಕಾರ್ಟೆಲ್) ಏರ್ಪಡುವ ಸ್ಥಿತಿಯುಂಟಾಗಿದೆ. ಇದರಿಂದಾಗಿ ಸಣ್ಣ ನೆಟ್ ಕಂಪನಿಗಳು ಮಾರುಕಟ್ಟೆಯಿಂದ ಹೊರದಬ್ಬಲ್ಪಟ್ಟು, ಗ್ರಾಹಕರು ದೊಡ್ಡ ನೆಟ್ ಕಂಪನಿಗಳು ಒದಗಿಸುವ ಕೆಲವೇ ಕೆಲವು ನೆಟ್ ಸೇವೆಗಳೊಂದಿಗೆ ಲಾಕ್ ಆಗಬೇಕಾಗುತ್ತದೆ. ದೊಡ್ಡ ಇಂಟರ್ ನೆಟ್ ಕಂಪನಿಗಳ ಜೊತೆ ಕೈಜೋಡಿಸಿದರೆ ಟೆಲಿಕಾಂ ಕಂಪನಿಗಳಿಗೆ ಎರಡು ರೀತಿಯ ಲಾಭವಿದೆ. ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರ ನೆಲೆಯನ್ನು ನೆಟ್ ಕಂಪನಿಗಳಿಗೆ ನೀಡಬಹುದು, ಅದೇ ವೇಳೆ, ನೆಟ್ ಕಂಪನಿಗಳು ತಮ್ಮ ಬಳಕೆದಾರರನ್ನು ಜಾಹೀರಾತುದಾರರಿಗೆ ನೀಡಬಹುದು. ಅಲ್ಲದೆ ಟೆಲಿಕಾಂ ಕಂಪನಿಗಳು ಒಂದೇ ಹೊಡೆತಕ್ಕೆ ಜಾಲದಲ್ಲಿ ಸಮಾನತೆಯನ್ನು ಹೊಡೆದುರುಳಿಸಬಹುದು. ಆಗ ಪ್ರತಿಯೊಂದು ಇಂಟರ್ ನೆಟ್ ಸೇವೆಗಳಿಗೆ ಟಾಲ್ ಗೇಟ್ ಹಾಕಿ ಹಣ ಸಂಗ್ರಹಿಸಲು ಸುಲಭಸಾಧ್ಯವಾಗುತ್ತದೆ. ಏಕೆಂದರೆ ಟೆಲಿಕಾಂ ಕಂಪನಿಗಳಿಗೆ ಹಣ ನೀಡುವ ವೆಬ್ ಸೈಟ್ ಗಳು ಮಾತ್ರ ಬಳಕೆದಾರರಿಗೆ ಲಭ್ಯವಾಗುತ್ತವೆ; ಹಣ ನೀಡದೇ ಇದ್ದಲ್ಲಿ ಅವುಗಳು ಬಹಳ ನಿಧಾನವಾಗಿ ಲೋಡ್ ಆಗುತ್ತವೆ, ಹಾಗೆಯೇ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಎದುರಿಸಲಾರದೇ ಅಳಿಯುತ್ತವೆ. ಇದರಿಂದ ಇಂಟರ್ ನೆಟ್ ನ ಪ್ರಜಾಸತ್ತಾತ್ಮಕ ಸಾಮರ್ಥ್ಯದ ಕೊನೆಯ ಬಳಕೆಯೂ ಅಂತ್ಯಗೊಳ್ಳುತ್ತದೆ. 

(ಮುಂದುವರೆಯುವುದು…) 

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x