ಸ್ನೇಹಿತೆಯ ಪೋನ್ ಕರೆ ಬಂದಿತ್ತು. “ನಿನ್ನ ಪ್ರೊಫೈಲ್ ಪಿಕ್ಚರ್ ತುಂಬಾ ಚೆನ್ನಾಗಿದೆ, ಎಲ್ಲಿಗೆ ಹೋಗಿದ್ದೆ, ಭಾವಚಿತ್ರದ ಹಿಂಬದಿಗೆ ಕಾಣುತ್ತಿರುವ ಫಾಲ್ಸ್ ನಾನು ನೋಡ ಬೇಕು, ಯಾವ ಸ್ಥಳ ಎಂಬುದು ವಾಟ್ಸಾಪ್ ನಲ್ಲಿ ಅಡ್ರೆಸ್ ಹಾಕಿ ತಿಳಿಸು, ಫೇಸ್ಬುಕ್ನಲ್ಲಿ ಬೇಡ. ಅಲ್ಲಿ ಕಾಮೆಂಟ್ ಮಾಡಿದರೆ. . ಎಲ್ಲರಿಗೂ ಗೊತ್ತಾಗುತ್ತದೆ”ಎಂದು ಒಂದೇ ಉಸಿರಿನಲ್ಲಿ ಬೇಕಾದ ಮಾಹಿತಿಯನ್ನು ಕಲೆ ಹಾಕಿದಳು.
ಎಲ್ಲಿ ನೋಡಿದರೂ ವಾಟ್ಸಾಪ್, ಫೇಸ್ಬುಕ್ ಗಳ ಬಗ್ಗೆ ಮಾತುಗಳು. ಹಳ್ಳಿಯಿಂದ ಡೆಲ್ಲಿಯವರೆಗೆ ಜಾಸ್ತಿಯಾಗಿ ಜನ ಬಳಕೆ ಮಾಡುವ ಜಾಲತಾಣಗಳು ಎಂದರೆ ತಪ್ಪಾಗಲಾರದು. ಬೆಳಿಗ್ಗೆ ಕೈಕಾಲು ಮುಖ ತೊಳೆದು ಕೊಳ್ಳದೇ ಎಷ್ಟು ಲೈಕ್, ಕಾಮೆಂಟ್ ಬಂದಿದೆ ಎಂದು ನೋಡುವುದು ಜನರ ಹವ್ಯಾಸಕ್ಕಿಂತ ಚಟವಾಗಿದೆ ಎನ್ನಬಹುದು. ಮನೆ ಕೆಲಸ ಹಾಳಾಗಿ ಹೋಗಲಿ ಪರ್ವಾಗಿಲ್ಲ, ಫೇಸ್ಬುಕ್ ಮಾತ್ರ ನೋಡಲೇ ಬೇಕು. ಬೆಳಿಗ್ಗೆ ಕಾಫಿ, ತಿಂಡಿ ಎಷ್ಟು ಹೊತ್ತಿಗಾದರೂ ನೆಡೆಯಲಿ,ಶುಭೋದಯ, ಶುಭ ದಿನ ಹೇಳಿ ಎಲ್ಲರೂ ಯಾವ ರೀತಿ ಫೋಸ್ಟ ಹಾಕಿದ್ದಾರೆ ನೋಡಿ, ಅದಕ್ಕೆ ನೈಸ್, ಸೂಪರ್ ಹೇಳುವಷ್ಟು ಟೈಮ್ ಗೆ ಮಕ್ಕಳಿಗೆ ಶಾಲೆಗೆ ಟೈಮ್ ಅಗಿದ್ದು ಗೊತ್ತೇ ಆಗಲ್ಲ. ಗಂಡನ ಆಫೀಸ್ ಕಥೆ ಇನ್ನು ಕೇಳಬೇಕೆ? ಸಂಸಾರ ಅಧೋಗತಿ.
ಗಂಡನ ಬೈಗುಳ ಒಂದು ಕಡೆಯಿಂದ ಕೇಳಿ ಬರುತ್ತಿದೆ. “ಈ ಫೇಸ್ಬುಕ್ ಕಂಡು ಹಿಡಿದ ಮಾರ್ಕ್ ಜ್ಯೂಕರ್ಬರ್ಗ ದಿನೇ ದಿನೇ ಶ್ರೀಮಂತ ಆಗುತ್ತಿದ್ದಾನೆ. ಇಂಟರ್ನೆಟ್ ಖರ್ಚು ದಿನೇ ದಿನೇ ಜಾಸ್ತಿ ಅಗುತ್ತಿದೆ. ಸಂಸಾರ ನೆಡೆಸುವುದು ಹೇಗೆ? ಪ್ರತಿಯೊಂದು ವಸ್ತುವಿನ ಬೆಲೆ ಜಾಸ್ತಿಯಾಗಿ ಹೋಗಿದೆ. ಈ ತಿಂಗಳು ನೋಡುತ್ತೇನೆ, ಹೀಗೆ ಬಿಲ್ ಜಾಸ್ತಿ ಬರುತ್ತಿದ್ದರೆ ಮುಂದಿನ ತಿಂಗಳು ಇಂಟರ್ನೆಟ್ ತೆಗೆದು ಹಾಕುತ್ತೇನೆ” ಜೋರಾಗಿ ಕಿರುಚ ತೊಡಗಿದ. ಅದಕ್ಕೆ ಉತ್ತರವಾಗಿ “ಪರ್ವಾಗಿಲ್ಲ ಇಂಟರ್ನೆಟ್ ತೆಗೆದು ಹಾಕಿ, ನಾನು ಹಾಕುವ ಫೋಸ್ಟ್ ಗೆ ಸಾವಿರದ ಮೇಲೆ ಲೈಕ್, ಮುನ್ನೂರರ ಮೇಲೆ ಕಾಮೆಂಟ್ ಬರುತ್ತದೆ ಅದಕ್ಕೆ ನಿಮಗೆ ಹೊಟ್ಟೆ ಉರಿ, ನಿಮಗೆ ಯಾರು ಲೈಕ್, ಕಾಮೆಂಟ್ ಮಾಡುವುದು ಇಲ್ಲ ನೋಡಿ ಅದಕ್ಕೆ ಹೀಗಾಡುವುದು”ಎಂದು ಕಿರುಚ ತೊಡಗಿದಳು. ಅದಕ್ಕೆ ಉತ್ತರವಾಗಿ ಗಂಡ ಪ್ರಾರಂಭ ಮಾಡಿದ “ಹೌದು, ನೀನು ಹೆಣ್ಣು ಅದಕ್ಕೆ ಅವರೆಲ್ಲ ನೈಸ್, ಸೂಪರ್ ಎಲ್ಲಾ ಹೇಳಿ ಕಾಮೆಂಟ್ ಹಾಕುತ್ತಾರೆ. ಇದನ್ನು ನಂಬಿ ನೀನು ಉಬ್ಬಿ ಹೋಗಿ,ಮನೆ ಇದೆ ನಿನಗೆ, ಮಕ್ಕಳು ಗಂಡ ಇದ್ದಾರೆ ಎಂಬುದು ಮರೆತು ಹೋಗುತ್ತಿಯಾ? ಈ ಫೇಸ್ಬುಕ್ ನಿಂದ ಎಷ್ಟು ಮನೆ ಹಾಳಾಗಿ ಹೋಗಿದೆ,ಎಂದು ನಿಮಗೆ ಗೊತ್ತಿಲ್ಲ” ಎನ್ನುವನು.
ಇಂತಹ ಫೇಸ್ಬುಕ್ ಮತ್ತು ವಾಟ್ಸಾಪ್ ಜಗಳ ಕೆಲವೊಂದು ಮನೆಯಲ್ಲಿ ಇರುವುದು ಗ್ಯಾರಂಟಿ. ಅದರ ಜೊತೆಗೆ ಸೆಲ್ಫಿ ಹುಚ್ಚು. ಸೆಲ್ಫಿಯಿಂದ ಜೀವನವನ್ನು ಕಳೆದುಕೊಂಡವರು ಬಹುತೇಕ ಮಂದಿ. ಇನ್ನೊಬ್ಬರ ಲೈಕ್, ಕಾಮೆಂಟ್ ಗೆ ತಮ್ಮ ಸುಂದರವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂದರೆ ಇದಕ್ಕಿಂತ ದುಃಖದ ವಿಷಯ ಇನ್ನೊಂದು ಇಲ್ಲ.
ಒಂದು ವರ್ಷದ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರ ಕೈಯಲ್ಲಿ ಮೊಬೈಲ್. ಶಾಲಾ ಮಕ್ಕಳಿಗೆ ಮೊಬೈಲ್ ಎಷ್ಟರಮಟ್ಟಿಗೆ ಬೇಕು ಎಂದು ಗೊತ್ತಾಗುವಾಗ ಜೀವನದ ದೊಡ್ಡ ದುರಂತಕ್ಕೆ ನಾಂದಿ ಹಾಡಿರುತ್ತಾರೆ. ಊಟ ಮಾಡುವಾಗ ಸೆಲ್ಫಿ, ಅಡುಗೆ ಮಾಡುವಾಗ ಸೆಲ್ಫಿ ಹೀಗೆ ಪ್ರತಿಯೊಂದು ಸೆಲ್ಫಿ ತೆಗೆಯುವುದು ವಾಟ್ಸಾಪ್, ಫೇಸ್ಬುಕ್ ಗೆ ಫೋಸ್ಟ್ ಮಾಡುವುದು. ಅಲ್ಲಿ ನೈಸ್, ಸೂಪರ್,ಬ್ಯೂಟಿಪುಲ್ ಗಳ ಸುರಿಮಳೆ. ಮನುಷ್ಯ ಇನ್ನೊಬ್ಬರ ಮೆಚ್ಚುಗೆ ಪಡೆಯಲು ಏನು ಬೇಕಾದರೂ ಮಾಡುತ್ತಾನೆ ಎಂಬುದಕ್ಕೆ ಇವುಗಳೇ ಸಾಕ್ಷಿ.
ಇದೆ ಪ್ರಾಮುಖ್ಯತೆ ತನ್ನ ಜೀವನದ ಯಾವುದಾದರೂ ಸಾಧನೆ ಮಾಡಲು ಉಪಯೋಗಿಸಿದರೆ ಈ ಜನರು ಉನ್ನತ ಮಟ್ಟದಲ್ಲಿ ಇರುವುದು ಖಂಡಿತ. ಹಗಲು ರಾತ್ರಿ ನಿದ್ದೆಯನ್ನು ಮಾಡದೇ ಫೇಸ್ಬುಕ್ ನಲ್ಲಿ ಇರುವವರು ಆನೇಕ ಮಂದಿ. ಪ್ರತಿದಿನ ಮನೆಯಲ್ಲಿ ಏನು ನೆಡೆಯುತ್ತದೆ ಎಲ್ಲಾವನ್ನೂ ತಿಳಿಸುವ ಜನರಿದ್ದಾರೆ.
ಫೇಸ್ಬುಕ್ ಮತ್ತು ವಾಟ್ಸಾಪ್ ನಿಂದ ಅನುಕೂಲ ಸಹ ಇದೆ. ಅದನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಮೇಲೆ ನಿಂತಿದೆ. ಮನುಷ್ಯ ಬುದ್ಧಿ ಜೀವಿ. ತನಗೆ ಏನು ಬೇಕು ಏನು ಬೇಡ ಎಂಬುದು ಅರಿತು ಕೊಂಡಿರುತ್ತಾನೆ. ಎಲ್ಲದಕ್ಕೂ ಇತಿಮಿತಿ ಅರಿತು ಬಾಳಿದರೆ ಯಾವುದು ಕೆಟ್ಟದ್ದಲ್ಲ. ಟೈಮ್ ನಿಗದಿ ಮಾಡಿ ಅಂತಹ ಟೈಮ್ ನಲ್ಲಿ ಮಾತ್ರ ವಾಟ್ಸಾಪ್, ಫೇಸ್ಬುಕ್ ನೋಡುವಂತಹ ತಿಳುವಳಿಕೆಯನ್ನು ಹೊಂದಿರಬೇಕು. ಮನೆಯಲ್ಲಿ ದೊಡ್ಡವರು ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಗಳನ್ನು ಮಕ್ಕಳ ಎದುರು ಉಪಯೋಗಿಸುತ್ತಾ ಬಂದರೆ ಮಕ್ಕಳು ಅದನ್ನೇ ಕಲಿಯುತ್ತಾರೆ. ವಿಧ್ಯಾಭ್ಯಾಸದಲ್ಲಿ ಹಿಂದೆ ಬೀಳುತ್ತಾರೆ.
ಈ ಜಾಲತಾಣಗಳಲ್ಲಿ ಪರಿಚಿತರು ಕಡಿಮೆ. ಯಾರು? ಏನು? ನೋಡದೇ ಸ್ನೇಹ ಮಾಡುವುದು ಸಹ ತುಂಬಾ ಅಪಾಯಕಾರಿ. ಜಾಲತಾಣಗಳಲ್ಲಿ ಒಳ್ಳೆಯವರು ಯಾರು ಕೆಟ್ಟವರು ಯಾರು ಎಂದು ಖಂಡಿತಾ ಗೊತ್ತಾಗುವುದಿಲ್ಲ. ಫೇಸ್ಬುಕ್ ನಲ್ಲಿ ಅಥವಾ ವಾಟ್ಸಾಪ್ ನಲ್ಲಿ ನಮ್ಮ ಕೆಲವೊಂದು ವಿಷಯಗಳನ್ನು ಹಂಚಿ ಕೊಳ್ಳದೇ ಇದ್ದರೆ ಒಳ್ಳೆಯದು. ಜಾಲತಾಣಗಳಲ್ಲಿ ಫೇಕ್ ಆಕೌಂಟ್ ಗಳೇ ಜಾಸ್ತಿ ಎನಬಹುದು. ಗೆಳತನ ಬಯಸಿ ಬರುವವರು ಕೊನೆಯವರೆಗೂ ಖಂಡಿತಾ ಇರುವುದಿಲ್ಲ. ಫೇಸ್ಬುಕ್ ಸ್ನೇಹಿತರು ಏನಿದ್ದರೂ ಮನೋರಂಜನೆಗೆ ಸೀಮಿತ ಅಗಿರುತ್ತಾರೆ. ಕೆಲವು ಮಂದಿ ಮಾತ್ರ ಒಳ್ಳೆಯದನ್ನು ಬಯಸುತ್ತಾರೆ ಎಂದರೆ ತಪ್ಪಾಗಲಾರದು.
ಫೇಸ್ಬುಕ್ ನಲ್ಲಿ ಐದು ಸಾವಿರ ಸ್ನೇಹಿತರು ಇದ್ದರೂ ಬರುವ ಲೈಕ್, ಕಾಮೆಂಟ್ ಐದು ನೂರುಕ್ಕೂ ಕಡಿಮೆ ಇರುತ್ತದೆ. ಇದರ ಅರ್ಥ ಎಲ್ಲರೂ ಎಲ್ಲಾ ಫೋಸ್ಟ್ ನೋಡುವುದು ಕಡಿಮೆ ಮತ್ತು ಸಾಧ್ಯವಿಲ್ಲ ಎಂಬುದು. ಆದ್ದರಿಂದ ನಮಗೆ ಇಷ್ಟವಾದ ಕೆಲವು ಸ್ನೇಹಿತರು ಇದ್ದರೆ ಸಾಕೆಂದು ಅನಿಸುತ್ತದೆ. ನಮ್ಮ ಆಕೌಂಟ್ಗೆ ಬರುವವರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಉಳಿದವರು ಲೆಕ್ಕಕ್ಕೆ ಸ್ನೇಹ ಬೆಳೆಸಿರುತ್ತಾರೆ ಎಂದು ತಿಳಿದು ಕೊಳ್ಳ ಬಹುದು. ಅಂತಹ ಅಕೌಂಟ್ ಸುಮ್ಮನೆ ಇಟ್ಟು ಕೊಳ್ಳುವುದಕ್ಕಿಂತ ಯಾರು ನಾವು ಹಾಕುವ ಪೋಸ್ಟ್ ಗೆ ಸ್ಪಂದನೆ ಮಾಡುತ್ತಾರೆ ಅವರನ್ನು ಮಾತ್ರ ಸ್ನೇಹಿತರು ಎಂದು ಭಾವಿಸಿದರೆ ಸಾಕಲ್ಲವೇ?
ಜಾಲತಾಣಗಳಲ್ಲಿ ಬಹುತೇಕ ಮಂದಿ ರಾಜಕೀಯ ವ್ಯಕ್ತಿಗಳು ಇರುತ್ತಾರೆ. ಎಲ್ಲಾ ವರ್ಗದ ಜನರು ಸ್ನೇಹ ಬಯಸಿ ಬಂದಿರುತ್ತಾರೆ. ಎಷ್ಟೇ ಸ್ನೇಹವಿದ್ದರು ಸ್ವಂತ ವಿಷಯಗಳ ಬಗ್ಗೆ ಚರ್ಚೆ ಮಾಡುವುದು ಒಳ್ಳೆಯದಲ್ಲ. ಕೆಲವೊಮ್ಮೆ ಅದು ಜೀವನಕ್ಕೆ ಮುಳುವಾಗ ಬಹುದು. ಒಳ್ಳೆಯ ವಿಷಯವನ್ನು ತೆಗೆದುಕೊಂಡು ಕೆಟ್ಟದ್ದನ್ನು ಅಲ್ಲೇ ಬಿಟ್ಟು ಬಿಡಬೇಕು. ಯಾರು ಹೇಗೆಂದು ಅವರ ಕಾಮೆಂಟ್ ಗಳಲ್ಲಿ ಕಂಡುಹಿಡಿಯಲು ಸಾಧ್ಯ. ಕೆಟ್ಟದಾಗಿ ನೆಡೆದು ಕೊಳ್ಳುವ ಜನರನ್ನು ಬ್ಲಾಕ್ ಮಾಡುವುದೇ ಒಳ್ಳೆಯದು. ಎಷ್ಟೇ ಬ್ಲಾಕ್ ಮಾಡಿದರು ಇನ್ನೊಂದು ಆಕೌಂಟ್ ಮಾಡಿ ರಿಕ್ವೆಸ್ಟ್ ಕಳುಹಿಸುವ ಮಂದಿ ಇದ್ದಾರೆ.
ಕೆಲವೊಮ್ಮೆ ನಾವು ಹಾಕುವ ಪೋಸ್ಟ್ ಎಲ್ಲರಿಗೂ ಇಷ್ಟವಾಗಬೇಕು ಎಂದೆನಿಲ್ಲ. ಆ ಟೈಮ್ ನಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವವರು ಇದ್ದಾರೆ. ಸೂಕ್ಷ್ಮ ಮನಸ್ಥಿತಿ ಹೊಂದಿರುವವರು, ಇಂತಹ ಕಾಮೆಂಟ್ ಗಳಿಗೆ ತೊಂದರೆ ಅನುಭವಿಸುತ್ತಾರೆ. ಯಾವುದೇ ಪೋಟೊ ಹಾಕುವಾಗ ಎಚ್ಚರಿಕೆಯಿಂದ ಹಾಕುವುದು ಒಳ್ಳೆಯದು. ಇದನ್ನು ದುರುಪಯೋಗ ಮಾಡಿ ಕೊಳ್ಳುವ ವ್ಯಕ್ತಿಗಳು ಇರುತ್ತಾರೆ. ಷೋಷಕರು ತಮ್ಮ ಮಕ್ಕಳಿಗೆ ಇಂತಹ ವಿಷಯಗಳ ಬಗ್ಗೆ ಮುನ್ನೆಚ್ಚರಿಕೆ ಸಲಹೆಗಳನ್ನು ನೀಡುವುದು ಒಳ್ಳೆಯದು. ಜಾಲತಾಣಗಳಲ್ಲಿ ಕೆಲವೊಮ್ಮೆ ಕಾಮೆಂಟ್ ಗಳಿಗೆ ಸಮಾಧಾನವಾಗಿ ಉತ್ತರ ಕೊಡುವುದು ಒಳ್ಳೆಯದು. ಕೆಲವೊಮ್ಮೆ ಜೀವನದ ಜೊತೆಗೆ ಅಟವಾಡುವ ಜನರು ಇರುತ್ತಾರೆ. ಯಾರು ಹೇಗೆಂದು ಗೊತ್ತಿಲ್ಲದೆ ಆ ವ್ಯಕ್ತಿಯ ನಡುವೆ ಸ್ವಂತ ವಿಷಯಗಳ ಬಗ್ಗೆ, ಕುಟುಂಬದ ಬಗ್ಗೆ, ಮಕ್ಕಳ ಬಗ್ಗೆ ಅಥವಾ ಯಾವುದೇ ವ್ಯವಹಾರಗಳ ಬಗ್ಗೆ ಚರ್ಚೆ ನೆಡೆಸುವುದು ಅಷ್ಟು ಸಮಂಜಸವಲ್ಲ. ನಮ್ಮ ಕೆಲವು ಸನ್ನಿವೇಶವನ್ನು ದುರುಪಯೋಗ ಮಾಡಿ ಕೊಳ್ಳುವ ಸಾಧ್ಯತೆ ಬೇಕಾದಷ್ಟಿರುತ್ತದೆ. ಅಂತಹ ಸಂದರ್ಭದಲ್ಲಿ ಕುಟುಂಬ ಜನರೊಂದಿಗೆ ಮನಸ್ಸು ಬಿಚ್ಚಿ ಮಾತನಾಡುವುದು ಒಳ್ಳೆಯದು.
ಷೋಷಕರು ಜಾಲತಾಣಗಳಲ್ಲಿ ಮುಳುಗಿ ಹೋದರೆ ಮಕ್ಕಳು ಸಹ ಅದನ್ನೇ ಅನುಸರಿಸಲು ಪ್ರಾರಂಭಿಸುತ್ತಾರೆ. ಅದ್ದರಿಂದ ಮಕ್ಕಳಿಗೂ ಒಳಿತು ಕೇಡಕುಗಳನ್ನು ತಿಳಿಸುವುದು ಒಳ್ಳೆಯದು. ಜಾಲತಾಣಗಳಲ್ಲಿ ಹೇಗೆ ವ್ಯವಹಾರಿಸಬೇಕು,ಅವುಗಳ ಉಪಯೋಗವನ್ನು ಹೇಗೆ ಪಡೆದು ಕೊಳ್ಳ ಬೇಕೆಂದು ತಿಳಿಸುವುದು ಒಳ್ಳೆಯದು. ಯಾವುದೇ ಆಗಲಿ ಏಕೆ ಉಪಯೋಗ ಮಾಡುತ್ತವೆ,ಅದರಿಂದ ನಮಗೆ ಅನುಕೂಲವಿದೆಯೇ ಎಂದು ಯೋಚನೆ ಮಾಡುವುದು ಮುಖ್ಯ.
ಯಾರಾದರೂ ತುಂಬಾ ಕಿರಿಕಿರಿ ಮಾಡುತ್ತಾರೆ ಎಂದಾದರೆ ಅವರನ್ನು ಕೂಡಲೇ ಬ್ಲಾಕ್ ಮಾಡುವುದು ಒಳ್ಳೆಯದು. ಮುಂದೆ ಅವರಿಂದಾಗುವ ತೊಂದರೆಯನ್ನು ತಪ್ಪಿಸಿಕೊಳ್ಳಲು ಸಾಧ್ಯ. ಮೇಸೆಜ್ ನ್ನು ಕೆಟ್ಟದಾಗಿ ಕಳುಹಿಸುವುದು,ನಮ್ಮ ಫೋಟೋ ದುರುಪಯೋಗ ಪಡಿಸಿ ಕೊಳ್ಳುವುದು, ಕೆಟ್ಟದಾಗಿ ಕಾಮೆಂಟ್ ಹಾಕುವುದು ಇವುಗಳ ಬಗ್ಗೆ ಸೈಬರ್ ಕ್ರೈಮ್ ಗೆ ದೂರುಗಳನ್ನು ದಾಖಲೆ ಮಾಡ ಬಹುದು.
ಯಾವುದೇ ಆಗಲಿ ಗೊತ್ತಿಲ್ಲದ ವ್ಯಕ್ತಿ ನಮ್ಮ ಪೋಸ್ಟ್ ಗಳಿಗೆ ಕಾಮೆಂಟ್ ಹಾಕಿದರೆ ಯಾರೆಂದು ಗಮನಿಸಬೇಕು. ಇದರಿಂದ ಮುಂದೆ ಬರಬಹುದಾದ ತೊಂದರೆ ತಪ್ಪಿಸಲು ಸಾಧ್ಯ. ಯಾರ ಮರ್ಯಾದೆಗೆ ಧಕ್ಕೆ ಬರದಂತೆ ನೆಡೆದು ಕೊಳ್ಳುವುದು ಪ್ರತಿಯೊಬ್ಬರು ಕಲಿತು ಕೊಳ್ಳಬೇಕು. ಈ ಜಾಲತಾಣಗಳಲ್ಲಿ ವ್ಯವಹರಿಸುವ ವ್ಯಕ್ತಿ ಬಗ್ಗೆ ತಿಳಿದು ಸ್ನೇಹಿತರಾಗುವುದು ಒಳ್ಳೆಯದು. ಪ್ರತಿಯೊಬ್ಬ ವ್ಯಕ್ತಿಗೂ ಅವರದೇ ಆದ ಸುಂದರ ಕುಟುಂಬವಿರುತ್ತದೆ ಎಂದು ಮನಗಂಡು ವ್ಯವಹಾರಿಸಬೇಕು. ಏನೇ ಹೇಳಿದರು ಯಾವುದೇ ಅಗಲಿ ನಮ್ಮ ಇತಿಮಿತಿಯಲ್ಲಿ ಇದ್ದರೆ ತೊಂದರೆಯಿಲ್ಲ. ಜಾಲತಾಣಗಳನ್ನು ಉಪಯೋಗಿಸುವ ಪ್ರತಿಯೊಬ್ಬರು ತಮ್ಮ ಘನತೆ, ಗೌರವಕ್ಕೆ ಧಕ್ಕೆ ಬಾರದ ಹಾಗೆ ನೆಡೆದು ಕೊಳ್ಳುವುದು ಒಳ್ಳೆಯದು. ಪ್ರತಿಯೊಂದು ಸ್ವಂತ ವಿಷಯಗಳನ್ನು ಜಾಲತಾಣಗಳಲ್ಲಿ ಚರ್ಚೆ ಮಾಡುವುದು ಒಳ್ಳೆಯದಲ್ಲ. ಕೆಲವೊಮ್ಮೆ ಟೈಮ್ ನೊಂದಿಗೆ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನು ನೋಡಿದ್ದೇವೆ.
ಯಾವುದನ್ನು ಎಷ್ಟು ಉಪಯೋಗಿಸ ಬೇಕು ಎಂಬುದು ಅವರಿಗೆ ಗೊತ್ತಾಗಬೇಕು. ಸುಂದರವಾದ ಜೀವನದಲ್ಲಿ ಬಿರುಗಾಳಿ ಬಾರದ ಹಾಗೆ ನೋಡಿಕೊಳ್ಳುವುದು ಜಾಲತಾಣಗಳಲ್ಲಿ ವ್ಯವಹಾರಿಸುವವರಿಗೆ ಬಿಟ್ಟ ವಿಷಯ. ಒಳ್ಳೆಯದು ತೆಗೆದುಕೊಂಡು ಕೆಟ್ಟದ್ದನ್ನು ಬಿಟ್ಟರೆ ಒಳ್ಳೆಯದು. ದಿನ ಪೂರ್ತಿ ಕಾಲಹರಣ ಮಾಡುವುದು ಒಳ್ಳೆಯದಲ್ಲ. ಅದಕ್ಕೆಂದೇ ಟೈಮ್ ಇಟ್ಟು ಕೊಂಡರೆ ಒಳ್ಳೆಯದು.
-ವೇದಾವತಿ ಹೆಚ್. ಎಸ್.
Entertaining and informative.