ಕಾನೂನಿನ ದೃಷ್ಟಿಯಿಂದ ಎಲ್ಲರೂ ಒಂದೇ. ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನಾತ್ಮಕ ವ್ಯವಸ್ಥೆಯಿರುವ ಭಾರತದಲ್ಲಿ ಇದು ಎಷ್ಟು ಸತ್ಯವೆನ್ನುವುದು ಮಾತ್ರ ಪ್ರಶ್ನಾರ್ಥಕ. ಉತ್ತಮ ಆಡಳಿತದ ಸೂತ್ರದಂತಿರಬೇಕಾದ ಕಾನೂನು ಯಾರದೋ ಕೈ ಗೊಂಬೆಯಾಗುತ್ತಿದೆ. ದೆಹಲಿ ಅತ್ಯಾಚಾರ ಪ್ರಕರಣದ ಸಂದರ್ಭ, ಕಾನೂನು ಸಮರಕ್ಕೆ ಒಂದಷ್ಟು ಜನ ಜಮಾಯಿಸಿದ್ದರೆ, ಅವರ ವಿರುದ್ಧ ಕಿಡಿಕಾರುವ ಉದ್ಧಟತನ ಸರ್ಕಾರ ತೋರಿತ್ತು. ಬಹುಕೋಟಿ ಹಗರಣಗಳ ಕಳಂಕ ಹೊತ್ತಿದ್ದರೂ, ನಮ್ಮನ್ನು ಆಳುವ ದೊರೆಗಳು ಅದನ್ನೆಲ್ಲಾ ಸಮರ್ಥಿಸಿಕೊಳ್ಳುತ್ತಾರೆ. ಹೀಗೆ ಕಾನೂನಿರುವುದೇ ಮುರಿಯುವುದಕ್ಕೆ ಎಂದಾದರೆ ಹೊಸ ಕಾನೂನು ಜಾರಿಯಾದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿರುತ್ತದೆ.
ಭ್ರಷ್ಟ ಮತ್ತು ದುರ್ಬಲ ಆಡಳಿತ ಭಾರತೀಯ ರಾಜತಾಂತ್ರಿಕ ವ್ಯವಸ್ಥೆ ಹದಗೆಡಲು ಮೂಲ ಕಾರಣವೆಂದು ಜನಜನಿತವಾಗಿದೆ. ಆದರೂ ಪ್ರತಿ ಚುನಾವಣೆಯ ವೇಳೆ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆಂಬ ಬೊಗಳೆ ಕೇಳುತ್ತೇವೆ. ಈ ಸಲುವಾಗಿ, ಅಮೂಲ್ಯ ಮತಗಳನ್ನು ಪಡೆಯಲು ಹಣ-ಹೆಂಡ, ಸೀರೆ ಮತ್ತು ಪ್ರವಾಸ ಕೈಗೊಳ್ಳುವ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಇದರಿಂದ ಜನರ ಯಾವ ಬೇಡಿಕೆಗಳೂ ಈಡೇರಿದಂತಾಗುವುದಿಲ್ಲ. ಭ್ರಷ್ಟಾಚಾರ ನಿರ್ಮೂಲನೆಗೆ ಕಾನೂನಿನಲ್ಲಿ ಬದಲಾವಣೆ ಕೋರಿ ಲೋಕಾಯುಕ್ತದ ಬೇಡಿಕೆ ನೆನೆಗುದಿಗೆ ಬಿದ್ದಿದೆ. ವಿಪಕ್ಷಗಳು ಜನರ ಬಾಯಿ ಮುಚ್ಚಿಸಲು ಹರಿಹಾಯುತ್ತವೆ ಹೊರತು ಬದಲಾವಣೆಗೆ ಅವುಗಳೂ ಅಡ್ಡಗಾಲಿಡುತ್ತವೆ. ನಮ್ಮಲ್ಲಿ ಉತ್ತಮ ನ್ಯಾಯಾಂಗ ವ್ಯವಸ್ಥೆಯಿದ್ದರೂ, ಇದರ ನಿಲುವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲ ಪ್ರಯತ್ನಗಳಾಗುತ್ತಿವೆ. ಅಕ್ರಮ ಭೂ ಕಬಳಿಕೆ, ತೆರಿಗೆ ವಂಚನೆ, ಸಾಮಾಜಿಕ ಮತ್ತು ಲಿಂಗ ತಾರತಮ್ಯದ ಪ್ರಕರಣಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದೂಡುವ ಅಗತ್ಯವೇನಿದೆ? ಪ್ರತಿರೋಧ ಒಡ್ಡಲು ಮೀನಮೇಷ ಎಣಿಸುವುದಾದರೆ, ನಿಜಾರ್ಥದಲ್ಲಿ ಕಾನೂನಿನ ಸದ್ಬಳಕೆ ಆಗುವುದಾದರೂ ಹೇಗೆ?
ಅಲ್ಪ ದಂಡನೆಯ ಪ್ರಮಾಣ ಮತ್ತು ಅಧಿಕಾರ ವರ್ಗದವರ ರಕ್ಷಣೆಯಿಂದಾಗಿ ಸಮಾಜ ವಿರೋಧಿ ಕಾರ್ಯಗಳು ಅವ್ಯಾಹತವಾಗಿ ನಡೆಯುತ್ತಿವೆ. ಹೀಗಾಗಿ ಶಿಕ್ಷಾರ್ಹ ಅಪರಾಧಗಳೂ, ಅಪರಾಧವೇ ಅಲ್ಲವೆಂಬಂತೆ ಸಾಬೀತಾಗುತ್ತಿವೆ. ಇದರಿಂದಾಗಿ ಶಿಕ್ಷೆಯ ಕುರಿತು ಇರಬೇಕಾದ ಸಹಜ ಭಯ ದೂರವಾಗುತ್ತಿದೆ. ಕೇವಲ ಮರಣ ದಂಡನೆಯೆ ಅಂತಿಮವಾದ ಅಪರಾಧಗಳು ಮಾತ್ರ ಸಾಮಾಜಿಕ ಹೊಣೆಗಾರಿಕೆ ಮತ್ತು ವಿದ್ರೋಹಿ ಕೆಲಸಗಳ ಪರಿಣಾಮದ ಅರಿವು ಮೂಡಿಸುತ್ತಿವೆ. ಆದ್ದರಿಂದ ನ್ಯಾಯ-ಅನ್ಯಾಯದ ಬಗ್ಗೆ ನಾಗರಿಕ ಪ್ರಜ್ಞೆ ಜಾಗೃತಗೊಳಿಸಲು ಮುಂದಾಗಬೇಕಿದೆ. ಆದರೆ ಇದು ಇಂದಿನಿಂದ ನಾಳೆಗೆ ಸರಿದೂಗಿಸಲು ಅಸಾಧ್ಯ. ಸಂಕೀರ್ಣ ಸಮಸ್ಯೆಗಳನ್ನು ಹೆಗಲ ಮೇಲೆ ಹೊತ್ತಿರುವ ದೇಶದ ಆಡಳಿತ ವ್ಯವಸ್ಥೆ, ಸದ್ಯ ಇದನ್ನು ನಿರ್ವಹಿಸುವ ಸ್ಥಿತಿಯಲ್ಲಿಲ್ಲ. ಒಂದು ವೇಳೆ ಸ್ಥಳೀಯ ನ್ಯಾಯ ಪಂಚಾಯಿತಿಗೆ ಹೆಚ್ಚಿನ ಅಧಿಕಾರ ನೀಡಿದರೆ, ಆಯಾಯ ಪ್ರದೇಶದ ಸಮಸ್ಯೆಗೆ ತ್ವರಿದ ಪರಿಹಾರ ದೊರಕಬಹುದು. ಅಲ್ಲದೇ, ಆಂತರಿಕ ಭದ್ರತೆಯೂ ನೆಲೆಯೂರಲು ಸಾಧ್ಯವಾಗಬಹುದು.
ಕಾನೂನು ಸುವ್ಯವಸ್ಥೆ ಕಾಪಾಡಲು ಕಾನೂನಿನ ಪುನರ್ ಪರಿಶೀಲನೆ, ಬದಲಾವಣೆ ಮತ್ತು ಹೊಸತೊಂದರ ಸೇರ್ಪಡೆಯೂ ಮುಖ್ಯ. ಸಾಮಾಜಿಕ ಪರಿವರ್ತನೆಯಾದಂತೆ, ಜನರ ಭಾವನಾತ್ಮಕ ಗುಣದಲ್ಲೂ ಏರುಪೇರು ಉಂಟಾಗುತ್ತದೆ. ಇದಕ್ಕೆ ಬಾಹ್ಯ ಚಟುವಟಿಕೆಗಳ ಪ್ರೇರಣೆಯೂ ಇರಬಹುದು. ಆದರೆ ಅಮಾಯಕರು ಇದರಿಂದಾಗಿ ಬಲಿಯಾಗದಂತೆ ತಡೆಯಲು ಸೂಕ್ತ ಕಾನೂನೊಂದರ ಬೆಂಬಲ ಬೇಕು. ದೇಶವ್ಯಾಪಿ ತಲ್ಲಣ ಉಂಟುಮಾಡಿದ್ದ ದೆಹಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಅತ್ಯಾಚಾರ ತಡೆ’ ಮಸೂದೆ ಅಂಗೀಕಾರಗೊಂಡು ಕಾನೂನಾಗಿ ಜಾರಿಯಾಗಿದೆ. ಈ ಹಿಂದೆ ಇಂತಹ ಸಾವಿರಾರು ಪ್ರಕರಣಗಳು ನಡೆದಿವೆ. ಹಲವರ ಮಾನ-ಪ್ರಾಣ ಹಾನಿಯಾಗಿದೆ. ಅರುಣಾ ಶಾನುಭಾಗ್ ಎಂಬ ದಾದಿ ಮಾನಸಿಕ ಆಘಾತಕ್ಕೊಳಗಾಗಿ ಇಂದಿಗೂ ಸಾವು-ಬದುಕಿನ ಜೊತೆ ಸೆಣಸಾಡುತ್ತಿದ್ದಾಳೆ. ಡಕಾಯಿತಿ ರಾಣಿ ಪೂಲನ್ ದೇವಿ, ಅತ್ಯಾಚಾರಕ್ಕೊಳಗಾದ ಮೇಲೆಯೆ ಸೇಡಿಗಾಗಿ ತನ್ನ ವೀರಾವೇಶ ಪ್ರದರ್ಶಿಸಿದ್ದು. ಆದರೆ ಬಾಣಲೆಯಿಂದ ಬೆಂಕಿಗೆ ಬಿದ್ದಾಗ ಮಾತ್ರ ಎಚ್ಚೆತ್ತುಕೊಳ್ಳುವ ಸರ್ಕಾರ ಈಗಲಾದರೂ ಮಾನವೀಯತೆ ಮೆರೆದಿದೆ ಎನ್ನಬಹುದು. ದೇಶವೇ ತಲೆತಗ್ಗಿಸುವಂತೆ ಮಾಡುತ್ತಿರುವ ಮೃಗೀಯ ವರ್ತನೆಗಳಿಗೆ ಅಂಕುಶ ಬೀಳುವ ಆಶಾಭಾವ ಹುಟ್ಟಿಕೊಂಡಿದೆ. ಇಷ್ಟಾದರೂ, ಕಾನೂನು ಕನ್ನಡಿಯೊಳಗಿನ ಗಂಟಾಗದಂತೆ ನಿಗಾ ವಹಿಸುವುದೇ ನಮ್ಮ ಮುಂದಿರುವ ದೊಡ್ಡ ಸವಾಲು.
ದುರಂ ಅಂದ್ರೆ ನೀನು ಚಾಪೆ ಕೆಳಗೆ ನುಸುಳಿದರೆ ನಾನು ರಂಗೋಲಿ ಅಡಿಯಲ್ಲಿ
ನುಸುಳುತ್ತೇನೆ ಎನ್ನುವ ರೀತಿಯಲ್ಲಿ ಕಾನೂನನ್ನು ತಮ್ಮ ತಾಳಕ್ಕೆ ತಕ್ಕಂತೆ
ಕುಣಿಸುತ್ತಿದ್ದಾರೆ ಭ್ರಷ್ಟ ರಾಜಕಾರಣಿಗಳು . ಕಾನೂನಿನ ನ್ಯೂನ್ಯತೆಗಳನ್ನು
ಸರಿಪಡಿಸದೇ ಇದ್ದರೆ 'ಬೇಟೆ' ತಾತ್ಕಾಲಿಕವಾಗಿರುತ್ತದೆ, ತಿಮಿಂಗಿಲಗಳು ಜಾರಿಕೊಳ್ಳುತ್ತಲೇ
ಇರುತ್ತವೆ . ಅತ್ಯಾಚಾರ , ಭ್ರಷ್ಟಾಚಾರಗಳ ವಿರುದ್ಧ ಕಠಿಣ ಕಾನೂನು ಜಾರಿಯಾಬೇಕು.
There should be some element of fear.
let's hope for the best!
nice article. thankx.