ಜಾನ್ ಡ್ರೈಡನ್‍ನ “All for love”- ಪ್ರೇಮ ವಿಜಯ: ನಾಗರೇಖಾ ಗಾಂವಕರ


ಈಜಿಪ್ತನ ರಾಣಿ ಕ್ಲೀಯೋಪಾತ್ರ. ತನ್ನ ಅಪೂರ್ವ ಸೌಂದರ್ಯದ ಕಾರಣದಿಂದಲೇ ಐತಿಹಾಸಿಕ ಪುಟಗಳಲ್ಲಿ ತನ್ನದೇ ಛಾಪು ಒತ್ತಿದ ಆ ಕಾಲದ ಜಗತ್ತಿನ ವೀರರೆಲ್ಲರ ನಿದ್ದೆಗೆಡಿಸಿದ ಲಾವಣ್ಯವತಿ. ರೋಮನ ಪೂರ್ವಭಾಗದ ದೊರೆ ಮಾರ್ಕ ಆಂಟನಿ. ಆದರೆ ಆಕೆಯ ಪ್ರೇಮದಲ್ಲಿ ಬಿದ್ದ ರೋಮನ ದೊರೆ ಆಂಟನಿ ಸಂಪೂರ್ಣ ಅದರಲ್ಲಿ ಕೊಚ್ಚಿಹೋಗಿದ್ದಾನೆ. ಅವರಿಬ್ಬರ ಪ್ರೇಮ ಯಾರಿಂದಲೂ ಮುರಿಯಲಾಗದ್ದು. ಇದೇ ಸಂದರ್ಭ ಚಕ್ರವರ್ತಿ ಆಂಟನಿ ಒಕ್ಟೇವಿಯಸ್ ಸೀಸರನೊಂದಿಗಿನ ಯುದ್ದದಲ್ಲಿ ಸೋಲಿನಿಂದ ಹತಾಶನಾಗಿ ಬದುಕಿನ ಆಕಾಂಕ್ಷೆಗಳನ್ನು ಕಳೆದುಕೊಂಡು ಇಜಿಪ್ತನ ಅಲೆಕ್ಸಾಂಡ್ರಿಯಾದ ಐಸಿಸ್ ದೇವಾಲಯದಲ್ಲಿ ಏಕಾಂಗಿಯಾಗಿ ತಂಗಿದ್ದಾನೆ. ತನ್ನ ಪತ್ನಿ ಒಕ್ಟೇವಿಯಾ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ತ್ಯಜಿಸಿದ್ದಾನೆ. ಆತನ ಆತ್ಮೀಯ ಗೆಳೆಯ ಡೋಲಾಬೆಲ್ಲಾ ದೊರೆಯಿಂದ ದೂರವಾಗಿದ್ದಾನೆ. ಅಷ್ಟೇ ಅಲ್ಲ ತನ್ನ ಸೋಲಿಗೆ ತನ್ನ ಪ್ರೇಯಸಿ ಇಜಿಪ್ತನ ರಾಣಿ ಕ್ಲಿಯೋಪಾತ್ರಳ ಹೇಡಿತನವೇ ಕಾರಣ ಎಂದು ತಿಳಿದು ಆಕೆಯೊಂದಿಗಿನ ಸಾಮಿಪ್ಯವನ್ನು ತಿರಸ್ಕರಿಸಿದ್ದಾನೆ. ಇದೇ ಸಮಯಕ್ಕೆ ರೋಮನ ದಕ್ಷಿಣದ ಗುಡ್ಡಗಾಡುಗಳಲ್ಲಿ ಬೀಡು ಬಿಟ್ಟಿರುವ ಒಕ್ಟೇವಿಯಸ್‍ನ ಸೈನಿಕರು ಯಾವುದೇ ಸಮಯದಲ್ಲಿ ಅಲೆಕ್ಸಾಂಡ್ರಿಯಾದ ಮೇಲೆ ದಾಳಿ ಮಾಡಲು ಹುಡಿಗೈಯಲು ಸನ್ನದ್ಧರಾಗಿದ್ದಾರೆ.

ಈ ಸಂದರ್ಭದಲ್ಲಿಯೇ ಅಲ್ಲಿಗೆ ಬರುವ ರೋಮನ ಮಧ್ಯಪೂರ್ವಭಾಗದ ಸೇನಾಪತಿ ಆಂಟನಿಯ ನಂಬಿಗಸ್ಥ ವೆಂಟಿಡಿಯಸ್ ಎಂಬಾತ ಚಕ್ರವರ್ತಿಯಲ್ಲಿ ಆಶಾವಾದವನ್ನು ಹುರಿದುಂಬಿಸುತ್ತಾನೆ. ಒಕ್ಟೇವಿಯಸ್ ಸೀಜರ್ ವಶಪಡಿಸಿಕೊಂಡ ರಾಜ್ಯದ ಭೂಭಾಗಗಳನ್ನು ಮರಳಿ ಪಡೆಯಲು ಪುನಃ ಸೈನ್ಯವನ್ನು ಮುನ್ನೆಡೆಸಲು ಸನ್ನದ್ಧರಾಗುತ್ತಾರೆ. ಕ್ಲಿಯೋಪಾತ್ರ ದೊರೆಯನ್ನು ಆಟದ ದಾಳದಂತೆ ತನ್ನ ಕುಣಿತಕ್ಕೆ ತಕ್ಕಂತೆ ಬಳಸಿಕೊಂಡಳೆಂದು ಆರೋಪಿಸುತ್ತಾನೆ ವೆಂಟಿಡಿಯಸ್.
ಆದರೆ ಇದೇ ಹೊತ್ತಿಗೆ ಆಂಟನಿಯ ಜನ್ಮದಿನವೂ ಬಂದಿದ್ದು, ಆದನ್ನು ವೈಭವದಿಂದ ಆಚರಿಸಲು ಕ್ಲಿಯೋಪಾತ್ರಳ ನಂಬುಗೆಯ ಅಲೆಕ್ಸಾಸ್ ಮತ್ತು ಸೇರಾಫಿನ್ ಇವರಿಬ್ಬರೂ ಸೈನಿಕರನ್ನು ಮತ್ತು ಪ್ರಜೆಗಳನ್ನು ಹುರಿದುಂಬಿಸುತ್ತಾರೆ. ಆದರೆ ವೆಂಟಿಡಿಯಸ್ ಇದನ್ನು ಒಪ್ಪವುದಿಲ್ಲ. ಬದಲಿಗೆ ರೋಮ ಸೈನಿಕರಿಗೆ ದೊರೆಯ ಸಂಕಷ್ಟಗಳನ್ನು ದೂರಮಾಡಬೇಕಾದಲ್ಲಿ ಕಳೆದುಕೊಂಡ ಭಾಗಗಳನ್ನು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ಮುಂದುವರಿಯುವಂತೆ ಹೇಳುತ್ತಾನೆ. ಆದರೆ ಅಲೆಕ್ಸಾಸ್ ಉಪಾಯದಿಂದ ದೊರೆಯೊಂದಿಗೆ ರಾಣಿಯ ಭೇಟಿಯನ್ನು ನೇರವೇರಿಸುತ್ತಾನೆ. ಹುಟ್ಟುಹಬ್ಬದ ಕಾಣಿಕೆಯಾಗಿ ಕ್ಲಿಯೋಪಾತ್ರ ಕಳಿಸಿದ ಮಾಣಿಕ್ಯದ ಕೈಗಡಗವನ್ನು ದೊರೆಗೆ ನೀಡುತ್ತಲೇ ದೊರೆ ಅದನ್ನು ಕೈಗೆ ಕಟ್ಟಲು ಹೇಳುತ್ತಾನೆ. ಈ ಸಂದರ್ಭ ಬಳಸಿಕೊಂಡ ಅಲೆಕ್ಸಾಸ್ “Fair hands alone” ಎನ್ನುತಾ ಆ ಸುಂದರ ಕೈಗಳು ಮಾತ್ರ ದೊರೆಯ ಕೈಗೆ ಕಡುಗ ತೊಡಿಸಬಲ್ಲವೆಂದು ಹೇಳಿ ಕ್ಲಿಯೋಪಾತ್ರಳನ್ನು ಕರೆಸುತ್ತಾನೆ. ಅಲ್ಲಿಗೆ ಅವರಿಬ್ಬರ ಪುನರ್ ಭೇಟಿಗೆ ಆತ ಹೂಡಿದ ಸಂಚು ಸಫಲವಾಗುತ್ತದೆ. ಪ್ರೇಮಿಗಳಿಬ್ಬರೂ ಪರಸ್ಪರ ದೋಷಾರೋಪಣೆ ಮಾಡುತ್ತಾರೆ. ಆಂಟನಿ ಕ್ಲಿಯೋಪಾತ್ರಳನ್ನು ಹೀನಾಯವಾಗಿ ನಿಂದಿಸುತ್ತಾನೆ. ಆದರೆ ಆಕೆ ಹತಾಶೆಯಲ್ಲಿಯೂ ತನ್ನನ್ನೆ ಸಮಾಧಾನಿಸಿಕೊಳ್ಳುತ್ತಾಳೆ.

ಆಂಟನಿಯ ವಿರುದ್ದ ತನಗೆ ಸಹಾಯ ನೀಡಿದ್ದಲ್ಲಿ ಇಜಿಪ್ತ ಮತ್ತು ಸಿರಿಯಾ ಈ ದೇಶಗಳನ್ನು ಆಕೆಯ ಸುಪರ್ದಿಗೆ ನೀಡುವ ಅವಕಾಶವನ್ನು ಮುಂದಿಟ್ಟ ಒಕ್ಟೇವಿಯಸ್‍ನ ಪತ್ರವನ್ನು ತೋರಿಸಿ ಆಕೆ ಆ ಅವಕಾಶವನ್ನು ತಾನು ತಿರಸ್ಕರಿಸಿರುವುದಾಗಿಯೂ, ಆಂಟನಿಯ ಪ್ರೇಮವೇ ತನಗೆ ಮುಖ್ಯವೆಂದು ತಿಳಿಸುತ್ತಾಳೆ. ಅವರಿಬ್ಬರನ್ನೂ ದೂರಮಾಡುವ ವೆಂಟಿಡಿಯಸ್‍ನ ಎಲ್ಲ ಪ್ರಯತ್ನಗಳು ವಿಫಲವಾಗುತ್ತವೆ.

ರಾಜ ಒಕ್ಟೇವಿಯಸ್‍ನ ಸಣ್ಣ ದಾಳಿಯನ್ನು ಆಂಟನಿ ಸಮರ್ಥವಾಗಿ ಎದುರಿಸಿ ವಿಜಯಿಯಾಗುತ್ತಾನೆ. ಆದರೆ ಒಕ್ಟೇವಿಯಸ್‍ನ ದೊಡ್ಡ ಸೈನ್ಯ ಇಜಿಪ್ತನ್ನು ಆಕ್ರಮಿಸಿಕೊಳ್ಳಲು ಕಾಯುತ್ತಿದೆ. ವೆಂಟಿಡಿಯಸ್ ಶಾಂತಿ ಒಪ್ಪಂದಕ್ಕೆ ಸಿದ್ಧರಾಗುವುದೇ ಆಂಟನಿಗೆ ಒಳಿತೆಂದು ಸೂಚಿಸುತ್ತಾನೆ. ಕ್ಲಿಯೋಪಾತ್ರಳನ್ನು ಮರೆತುಬಿಡುವಂತೆ ದೊರೆಯ ಮನವೊಲಿಸುತ್ತಾನೆ. ಇದೇ ಸಮಯಕ್ಕೆ ಗೆಳೆಯ ಡೋಲಾಬೆಲ್ಲಾ ಆಂಟನಿಯ ಪತ್ನಿ ಮತ್ತು ಪುತ್ರಿಯರ ಕೂಡಾ ಒಕ್ಟೇವಿಯಸ್‍ನ ಶಾಂತಿ ಒಪ್ಪಂದದ ಸಲಹೆಯನ್ನು ಹೊತ್ತು ತರುತ್ತಾನೆ. ತನ್ನ ಸಹೋದರಿಯಾದ ಒಕ್ಟೇವಿಯಾಳನ್ನು ಪುನಃ ಸ್ವೀಕರಿಸಿದ್ದಾದಲ್ಲಿ ಶಾಂತಿ ಒಪ್ಪಂದಕ್ಕೆ ತಾನು ಸಿದ್ಧ ಹಾಗೂ ವಶಪಡಿಸಿಕೊಂಡ ಭೂಮಿಯನ್ನು ಮರಳಿಸುವ ಭರವಸೆಯ ಸಲಹೆಗೆ ಆಂಟನಿ ಮೃದುವಾಗುತ್ತಾನೆ. ಪತ್ನಿ ಒಕ್ಟೇವಿಯಾ ಕೂಡಾ ಗಂಡನೊಂದಿಗೆ ರಾಜಿಯಾಗಿ ಬದುಕಲು ಸಿದ್ದಳಾಗುತ್ತಾಳೆ. ವೆಂಟಿಡಿಯಸ್‍ನ ಸಲಹೆಯನ್ನು ಒಪ್ಪಿದ ದೊರೆ ದೂರಮಾಡಿದ ಪತ್ನಿ ಒಕ್ಟೇವಿಯಾ ಹಾಗೂ ಇಬ್ಬರು ಪುತ್ರಿಯರನ್ನು ಪುನಃ ಒಪ್ಪಿಕೊಳ್ಳುತ್ತಾನೆ. ಪತ್ನಿ ಒಕ್ಟೇವಿಯಾಳ ಪ್ರೇಮ ಹಾಗೂ ಪುತ್ರಿಯರ ಆಲಿಂಗನ ಆತನನ್ನು ಬಂಧಿಸುತ್ತದೆ. ಅದಕ್ಕಾಗಿ ಈ ಹಂತದಲ್ಲಿ ಕ್ಲೀಯೋಪಾತ್ರ ಮತ್ತೊಮ್ಮೆ ಆಂಟನಿಯನ್ನು ಕಳೆದುಕೊಳ್ಳುವ ಸಂದರ್ಭ ಎದುರಾಗುತ್ತದೆ. ಆತ ಆಕೆಗೆ ವಿದಾಯ ಹೇಳಬಯಸುತ್ತಾನೆ. ಆದರೂ ರಾಣಿ ಕ್ಲೀಯೋಪಾತ್ರಳ ಮೇಲಿರುವ ಆತನ ಅಚಲ ಪ್ರೇಮ ಅಲುಗಾಡಿಸಲಾಗದ್ದು. ಹಾಗಾಗಿ ಕ್ಲಿಯೋಪಾತ್ರಳಿಗೆ ಮುಖಾಮುಖಿಯಾಗಿ ಸಂಧಿಸಲು ಅಳಕುವ ಆತ ಗೆಳೆಯ ಡೋಲಾಬೆಲ್ಲಾನಿಗೆ ಆ ಕೆಲಸ ಒಪ್ಪಿಸುತ್ತಾನೆ.

ದೋಲಾಬೆಲ್ಲ ಮೊದಲೇ ಕ್ಲಿಯೋಪಾತ್ರಳ ಸೌಂದರ್ಯಕ್ಕ ಮಾರು ಹೋಗಿದ್ದು ತಿಳಿದ ಆಕೆಯ ಬೆಂಬಲಿಗ ಅಲೆಕ್ಸಾಸ್ ಹೇಗಾದರೂ ಮಾಡಿ ಇವರಿಬ್ಬರ ಪ್ರೇಮವನ್ನು ಅಮರಗೊಳಿಸಬಯಸುತ್ತಾನೆ. ಡೋಲಾಬೆಲ್ಲನನ್ನು ತನ್ನ ಸಂಚಿನ ದಾಳವಾಗಿಸಿಕೊಂಡು ಡೋಲಾಬೆಲ್ಲ ಮತ್ತು ಕ್ಲಿಯೋಪಾತ್ರ ಪರಸ್ಪರ ಆಕರ್ಷಿತರಾದಂತೆ ಆ ಸಂಗತಿ ವೆಂಟಿಡಿಯಸ್‍ನ ಗಮನಕ್ಕೆ ಬರುವಂತೆ ಅದು ಆಂಟನಿಗೆ ಗೊತ್ತಾಗುವಂತೆ ಮಾಡುತ್ತಾನೆ. ಈ ಸಂಗತಿ ತಿಳಿದ ಆಂಟನಿ ಕ್ರೋಧಗೊಂಡು ಅಪನಂಬಿಕೆಗೆ ಪಾತ್ರರಾದ ಕ್ಲಿಯೋಪಾತ್ರ ಮತ್ತು ಡೋಲಾಬೆಲ್ಲರನ್ನು ನಿಂದಿಸುತ್ತಾನೆ. ತನ್ನ ಮುಂದೆ ಇನ್ನೆಂದೂ ಕಾಣಿಸಿಕೊಳ್ಳಬಾರದೆಂದು ಹೇಳುತ್ತಾನೆ. ಆತನ ವರ್ತನೆಯಿಂದ ನೊಂದ ಕ್ಲಿಯೋಪಾತ್ರ ಇದಕ್ಕೆಲ್ಲಾ ಆಕೆಯ ಸಹಾಯಕ ಅಲೆಕ್ಸಸ್‍ನ ದುಷ್ಟ ಸಲಹೆಯೇ ಕಾರಣವೆಂದು ಆತನನ್ನು ಮೋಸಗಾರನೆಂದು ಜರಿದು ಆತ್ಮಹತ್ಯೆಗೆ ವಿಫಲ ಯತ್ನ ಮಾಡುತ್ತಾಳೆ.

ಇದೇ ಸಮಯದಲ್ಲಿ ಕೆಲವು ಇಜಿಪ್ತಿಯನ್ ಸೈನಿಕರು ಒಕ್ಟೇವಿಯಸ್‍ನ ರೋಮ ಪಡೆಯನ್ನು ಸೇರಿಕೊಳ್ಳುತ್ತಿರುವುದು ದೊರೆ ಆಂಟನಿಯ ಗಮನಕ್ಕೆ ಬರುತ್ತಲೇ ಆತ ಇದೇ ತನ್ನ ಕೊನೆ ಎಂದು ಗೃಹಿಸುತ್ತಾನೆ.ಇದಕ್ಕೆಲ್ಲಾ ಈಜಿಪ್ತಿನ ರಾಣಿ ಕ್ಲಿಯೋಪಾತ್ರಳೇ ಕಾರಣವೆಂದು ಹಂಗಿಸುತ್ತಾನೆ. ಈ ಮಾತುಗಳಿಂದ ನೊಂದ ಕ್ಲಿಯೋಪಾತ್ರ ತನ್ನ ಕೊನೆಯನ್ನು ಬಯಸಿ ತನ್ನ ಗೋರಿಯನ್ನು ನಿರ್ಮಿಸತೊಡಗುತ್ತಾಳೆ. ಈ ವಿಚಾರಗಳ ಅಲೆಕ್ಸನಿಂದ ತಿಳಿದ ದೊರೆ ಆಂಟನಿ ತೀವೃ ನಿರಾಶೆಗೆ ಒಳಗಾಗುತ್ತಾನೆ. ವೆಂಟಿಡಿಯಸ್‍ಗೆ ತನ್ನನ್ನು ಕೊಲ್ಲುವಂತೆ ನಿರ್ದೆಶಿಸುತ್ತಾನೆ. ಸ್ವಾಮಿಭಕ್ತನಾದ ಆತ ಅದಕ್ಕೆ ಒಪ್ಪದೇ ತಾನೆ ತನ್ನ ಇರಿದುಕೊಂಡು ಸಾಯುತ್ತಾನೆ. ಬೇರೆ ಉಪಾಯಗಾಣದ ದೊರೆ ತನ್ನ ಖಡ್ಗದ ಮೇಲೆ ಬೋರಲು ಬಿದ್ದು ಸಾಯುತ್ತ ಬಿದ್ದಿರುವಾಗ ಅಲ್ಲಿ ಬರುವ ಕ್ಲಿಯೋಪಾತ್ರ ತನ್ನ ಅಚಲ ಪ್ರೇಮವನ್ನು ಆತನಿಗೆ ಅರಹುತ್ತಾಳೆ. ಒಕ್ಟೇವಿಯಸ್‍ಸ ಸೈನಿಕರು ಇಜಿಪ್ತನ್ನು ಆಕ್ರಮಿಸಿಕೊಳ್ಳಲು ಬರುವ ಮುನ್ನವೇ ಆತನ ಜೊತೆಯಲ್ಲಿ ಮರಣಹೊಂದುವ ಇರಾದೆಯಿಂದ ವಿಷಪೂರಿತ ಚೇಳಿನಿಂದ ಕಡಿಸಿಕೊಂಡು ಆತನ ಪಕ್ಕದಲ್ಲಿಯೇ ಸತ್ತು ಬೀಳುತ್ತಾಳೆ. ಹೀಗೆ ಪ್ರೇಮಿಗಳಿಬ್ಬರೂ ಸಾವಿನಲ್ಲಿ ಒಂದಾಗುತ್ತಾರೆ.

ಇದು ಜಾನ್ ಡ್ರೈಡನ್‍ನ “All for love”- ನಾಟಕದ ಕಥಾನಕ. ನಾಟಕದ ಪ್ರಮುಖ ಸಾರ ಪ್ರೇಮ ಮತ್ತು ಗೌರವಗಳ ನಡುವಿನ ಸಂಘರ್ಷ. ಕ್ಲಿಯೋಪಾತ್ರಳಲ್ಲಿ ಇದ್ದ ನೈಜ ಪ್ರೇಮ ಮತ್ತು ರಾಜಮರ್ಯಾದೆ ಇವೆರಡರ ನಡುವೆ ಸಿಕ್ಕು ತೊಳಲಾಡುವ ಪಾತ್ರವಾಗಿ ಆಂಟನಿಯನ್ನು ಚಿತ್ರಿಸಿದ್ದಾನೆ ಡ್ರೈಡನ್. ಕೊನೆಗೂ ಪ್ರೇಮದ ವಿಜಯವನ್ನೆ ಪ್ರತಿಪಾದಿಸುತ್ತದೆ. ಹಾಗೇ ಪ್ರೇಮದ ದುರಂತವನ್ನು ನಾಟಕ ಸಮರ್ಥವಾಗಿ ಪ್ರತಿಬಿಂಬಿಸಿದೆ. ಇಬ್ಬರೂ ಪ್ರೇಮಿಗಳು ಸಮಾಜ ಮತ್ತು ನೈತಿಕ ಪ್ರಜ್ಞೆಗಳ ಮಧ್ಯೆ ಪರದಾಡುವ ಪರಿಯನ್ನು ಬಣ್ಣಗೊಳಿಸಿದ್ದಾನೆ. ಜಗತ್ತು ಆರಾಧಿಸುವ ಅನುಭಾವಿಕ ಪ್ರೇಮದ ಅಮರ ಚಿತ್ರಣವಿದೆ. ಡ್ರೈಡನ್ ಶೇಕ್ಸಪಿಯರ್‍ನ “Antony and Cleopatra” ನಾಟಕವನ್ನು ಆದರಿಸಿಯೇ ಇದನ್ನು ಬರೆದಿದ್ದರೂ ಇಲ್ಲಿಯ ಆಂಟನಿ ಶೇಕ್ಸಪಿಯರ್‍ನ ಆಂಟನಿಯಂತೆ ಧೀರೋದ್ಧಾತನಾದ ನಾಯಕನಲ್ಲ.

ಆತ ಸಿನಿಕನಂತೆ ಕಾಣುತ್ತಾನೆ. ಬದುಕಿನ ಬಗ್ಗೆ ನಿರಾಶನಾದ ವ್ಯಕ್ತಿಯಾತ. ಆತನ ಜೀವನದ ಬೆಳಕು ಕಂದಿದೆ. ಅದು ಬರಡು ಮರಭೂಮಿಯಾಗಿದೆ. ಆಂಟನಿಗಿಂತ ಕ್ಲಿಯೋಪಾತ್ರ ಆಕೆಯ ಪ್ರೇಮ ಉತ್ಕಟವೆನಿಸುತ್ತದೆ. ಆಕೆ ಒಕ್ಟೇವಿಯಸ್ ಸೈನ್ಯ ಬರುವ ಮುನ್ನವೇ ತನ್ನ ಕೊಂದುಕೊಳ್ಳುವುದು ಒಕ್ಟೇವಿಯಸ್‍ನ ವಿಜಯೋತ್ಸವವನ್ನು ಬಯಸದ ಆಕೆಯ ಸ್ವಾಭಿಮಾನಕ್ಕೆ ಹಿಡಿದ ಬೆಳಕಾಗಿದೆ. ಆಂಟನಿಯ ಸೇನಾಪತಿ ವೆಂಟಿಡಿಯಸ್ ಅಪೂರ್ವ ಸ್ವಾಮಿಭಕ್ತಿಗೆ ರಾಜ್ಯನಿಷ್ಠೆಗೆ, ಕರ್ತವ್ಯ ಪರತೆಗೆ ಸಾಕ್ಷಿಯಾಗುತ್ತಾನೆ. ಆಂಟನಿಯ ಪತ್ನಿಯ ಪ್ರೇಮ ಕ್ಲಿಯೋಪಾತ್ರಳ ಮುಂದೆ ಗೌಣವಾಗುತ್ತದೆ. ಆತನ ಪ್ರೇಮ ಕ್ಲಿಯೋಪಾತ್ರಳಲ್ಲಿ ಅಡಗಿರುವುದು ಗಮನಕ್ಕೆ ಬರುತ್ತಲೆ ಆಕೆ ನಿರ್ಗಮಿಸುವುದು ಆಕೆಯ ಕ್ಷೀಣ ಭಾವನೆಗಳನ್ನು ಪ್ರಕಟಿಸುತ್ತದೆ. ಅಲೆಕ್ಸಾಸ್ ರಾಣಿನಿಷ್ಟೆಗೆ, ಗುರುತಾಗಿ ನಿಲ್ಲುತ್ತಾನೆ. ಹೀಗೆ ನಾಟಕದ ಪಾತ್ರಗಳ ಸೃಷ್ಟಿಯಲ್ಲಿ ಡ್ರೈಡನ್ ಕಲಾತ್ಮಕತೆ ಮೆರೆಯುತ್ತಾನೆ. ಮೋಹದ ಪರಾಕಾಷ್ಟೆಯನ್ನು ವೈಭವೀಕರಿಸುವಲ್ಲಿ ಕೆಲಮಟ್ಟಿಗೆ ನಾಟಕ ಸೋತರೂ ಇದು ಡ್ರೈಡನ್‍ನ ಮಾಸ್ಟರ ಪೀಸ್ ಎಂದೇ ಪ್ರಸಿದ್ಧವಾಗಿದೆ.
-ನಾಗರೇಖಾ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x