ಜಾನ್ ಆಯೋಜಿಸಿದ್ದ ಪಾರ್ಟಿ ಮುಗಿಸಿ ಮನೆಗೆ ಬಂದ ವೆಂಕಣ್ಣನ ಮುಖ ತುಂಬಾ ಚಿಂತೆಯಲ್ಲಿದ್ದಂತೆ ಕಂಡು ಬಂದದ್ದರಿಂದ ಜಾನು ಗೆ ಕಳವಳವಾಯಿತು.
“ಯಾಕ್ರೀ ಪಾರ್ಟಿಯೊಳಗ ಯಾರರೆ ಏನರೆ ಅಂದರೋ ಏನು?” ಅಂತ ಹತ್ತಿರಕ್ಕೆ ಹೋಗಿ ವಿಚಾರಿಸಿದಳು. ಹಾಗೆ ಹತ್ತಿರ ಹೋಗಿದ್ದಕ್ಕೆ ಇನ್ನೊಂದು ಕಾರಣವೂ ಇತ್ತು. ಗಂಡ ವಿದೇಶಕ್ಕೆ ಬಂದು ಅವರ ತರಹವೇ ಪಾರ್ಟಿಲಿ ಗುಂಡು ಹಾಕೋಕೂ ಶುರು ಹಚ್ಚಿಕೊಂಡನೋ ಹೇಗೆ ಎಂಬ ಪರೀಕ್ಷೆ ಅದಾಗಿತ್ತು.
“ಯಾರೇನ್ ಅಂದ್ರೂ ನಾ ತಲಿ ಕೆಡಿಸ್ಕೊಳೋದಿಲ್ಲ ಬಿಡು. ಆದ್ರ ಆ ಜೇ.ಸಿ.ಬಿ ನನ್ ಮಗಾ ಏನೋ ಸ್ಕೆಚ್ ಹಾಕ್ಲಿಕತ್ತಾನ. ಅದ ಸ್ವಲ್ಪ ತಲಿ ಕೊರಿಲಿಖತ್ತದ” ಅಂದವನ ಉಸಿರಿನಲ್ಲಿ ಶರಾಬಿನ ವಾಸನೆ ಇಲ್ಲದ್ದು ಅವಳಿಗೆ ಸ್ವಲ್ಪ ಸಮಾಧಾನ ತಂದಿತಾದರೂ. ಹೊಸ ಉಪಾಧ್ಯಕ್ಷ ಜಾನ್ ಕಿರಿಕ್ಕು ಶುರು ಮಾಡಿರುವ ಸಂಗತಿ ಅವಳ ತಲೆಯಲ್ಲೂ ಕೊರೆಯತೊಡಗಿತ್ತು.
“ಏನ್ ಮಾಡ್ತಾನಂತ ಆವಾ?” ಅಂದಳು.
“ಗೊತ್ತಿಲ್ಲ… ಮುಂದಿನ ವಾರ ಬೆಂಗಳೂರಿಗೆ ಹೊಂಟಾನ. ಅಲ್ಲೇ ಯಾರ್ಯಾರ್ನ ಹಾರಸ್ತಾನೋ ಏನ್ ಕತಿನೋ! ಸುಧೀರ್ ಗ ಒಂದ್ ಕಾಲ್ ಮಾಡ್ತೀನಿ ತಡಿ. ಇವತ್ತ ಏನೇನ್ ಆತು ಎಲ್ಲಾ ಅವಂಗ ಹೇಳ್ಬೇಕು.” ಅಂತ ಫೋನ್ ನಲ್ಲಿ ನಂಬರ್ ಡಯಲ್ ಮಾಡತೊಡಗಿದ. ಮಗಳು ಖುಷಿ ಅಲ್ಲಿನ ಹಗಲು ರಾತ್ರಿಗಳಿಗೆ ಆಗಲೇ ಹೊಂದಿಕೊಂಡಿದ್ದಳು. ಅವಳು ಗಾಢ ನಿದ್ರೆಯಲ್ಲಿದ್ದಳು. ಇವನ ಫೋನ್ ಕಾರ್ಯಕ್ರಮ ಇನ್ನು ಕನಿಷ್ಟ ಒಂದು ಗಂಟೆಯಾದರೂ ಸಾಗುವುದೆಂಬ ಅರಿವಿದ್ದ ಜಾನು ತಾನೂ ಮಲಗಲು ತೆರಳಿದಳು.
—
ಭಾರತದಲ್ಲಿ ಬೆಳಗಿನ ಹತ್ತು ಗಂಟೆ. ಸುಧೀರನ ಮೊಬೈಲ್ ಮೊಳಗಿತು. ವೆಂಕಟ್ ರಾತ್ರಿ ಜಾನ್ ನ ಪಾರ್ಟಿಗೆ ಹೋಗಿರುವ ಸಂಗತಿ ಗೊತ್ತಿದ್ದುದರಿಂದ ಅವನದೇ ಫೋನ್ ನ ನಿರೀಕ್ಷೆಯಲ್ಲಿದ್ದನವನು. ಅದು ಅವನದೇ ಕರೆಯೆಂದು ಗೊತ್ತಾಗುತ್ತಲೇ ತನ್ನ ಕ್ಯಾಬಿನ್ ನಲ್ಲಿ ಯಾರದೋ ಜೊತೆಗೆ ಮಾತಾಡುತ್ತಿದ್ದವನು ಅವರನ್ನು ಸಾಗ ಹಾಕಿ ವೆಂಕಟ್ ಹೇಳುವುದನ್ನು ಗಮನವಿಟ್ಟು ಕೇಳತೊಡಗಿದ. ಸುಮಾರು ಹೊತ್ತು ಮಾತಾಡಿ ಅವನಿಗೆ ಶುಭರಾತ್ರಿ ಹೇಳಿ ಕರೆಯನ್ನು ಮುಗಿಸಿದ ಮೇಲೆ ಸುಧೀರ್ ಗೂ ಚಿಂತೆ ಶುರುವಾಗಿತ್ತು…
ಯಾವುದೋ ವಿಷಯಕ್ಕೆ ಚರ್ಚಿಸಲು ಅಂತ ಬಂದ ಸುಜಯ್, ಬಾಸ್ ಸುಧೀರ್ ತನ್ನದೇ ಲೋಕದಲ್ಲಿ ಮುಳುಗಿದ್ದು ಗಮನಿಸಿದ. ಬಾಗಿಲು ತಟ್ಟಿ ಒಳಗೆ ಬಂದವನ ಜೊತೆ ವಿಷಯ ಚರ್ಚಿಸುತ್ತಿದ್ದನಾದರೂ ಒಳಗೊಳಗೇ ತನ್ನ ಹಾಗೂ ತಮ್ಮ ಶಾಖೆಯ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದುದು ಅವನ ಮುಖದಲ್ಲಿ ಸ್ಪಷ್ಟವಾಗಿತ್ತು. ಒಟ್ಟಿನಲ್ಲಿ ಜಾನ್ ಎಂಬ ಬಿರುಗಾಳಿಯ ಮುನ್ಸೂಚನೆಗೆ ಭಾರತದ ಈ ಶಾಖೆ ಅಕ್ಷರಶಃ ನಡುಗುತ್ತಿತ್ತು!
—
ಇತರ ಎಷ್ಟೋ ಚಿಂತಾಮಣಿಗಳಂತೆ ಮಹಾ ಮೈಗಳ್ಳ ರಘುಗೆ ಇನ್ನೂ ಹೆಚ್ಚಿನ ಚಿಂತೆ ಶುರುವಾಗಿತ್ತು. ಜಾನ್ ನ ಕೆಲಸಗಳ್ಳರ ಪಟ್ಟಿಯಲ್ಲಿ ತಾನು ಮುಂಚೂಣಿಯಲ್ಲಿರುತ್ತೇನೆಂಬ ಸಂಪೂರ್ಣ ಭರವಸೆ ಇವನಿಗಿತ್ತು. ಯಾಕೆಂದರೆ ಕಳೆದ ಕೆಲವು ವರ್ಷಗಳಿಂದ ತಾನು ಏನೂ ಕೆಲಸವನ್ನೇ ಮಾಡದೇ ಈ ಕಂಪನಿಗೆ ಭಾರವಾದ ಸಂಗತಿಯನ್ನು ಜಾನ್ ಗೆ ಸುಧೀರ್ ಹೇಳದೆ ಇರುವ ಸಾಧ್ಯತೆಗಳೇ ಇರಲಿಲ್ಲ. ಹೀಗೆ ತಲೆಗೆ ಕೈಹಚ್ಚಿಕೊಂಡು ಕೂತಾಗಲೇ ತನ್ನ ಫೋನ್ ಕೂಗಿ ಇವನ ಎಚ್ಚರಿಸಿತು. ಹಲೋ ಅಂದವನಿಗೆ ಅವನ ಹಳೆಯ ಸಹೋದ್ಯೋಗಿ ತರಂಗಿಣಿಯ ದನಿ ಕೇಳಿ ಇವಳ್ಯಾಕೆ ಎಷ್ಟೋ ದಿನಗಳ ಬಳಿಕ ತನ್ನ ನೆನಸಿಕೊಂಡಳು ಅಂತ ಕುತುಹಲಿಯಾದನವನು. ಅವಳು ಕೆಲವು ವರ್ಷಗಳ ಹಿಂದೆ ಇವನ ಜೊತೆಗೆ ಕೆಲಸ ಇದೆ ಕಂಪನಿಯಲ್ಲಿ ಮಾಡಿಕೊಂಡಿದ್ದಳು. ಅವಳ ಮದುವೆಯಾದ ಮೇಲೆ, ತಾನೇ ಸ್ವಂತ ಏನಾದರೂ ಮಾಡುತ್ತೇನೆ… ಇವರು ಕೊಡುವ ಪುಟಗೋಸಿ ಕಾಸಿಗೆ ಯಾವನು ಇಲ್ಲಿ ಗುಲಾಮಗಿರಿ ಮಾಡಿಕೊಂಡಿರುತ್ತಾನೆ ಅಂತ ಭಾಷಣ ಬಿಗಿದು ರಾಜಿನಾಮೆ ಕೊಟ್ಟು ಕಾಣೆಯಾಗಿದ್ದಳು. ಮೋದಮೊದಲಿಗೆ ಇವನ ಜೊತೆ ಸಂಪರ್ಕದಲ್ಲಿದ್ದಳಾದರೂ ಕ್ರಮೇಣವಾಗಿ ಅದು ಕಡಿಮೆಯಾಗಿತ್ತು. ಏನೋ ಒಂದು Consultancy ಶುರು ಮಾಡಿದ್ದಳೆಂಬ ವಿಷಯ ಇವನಿಗೆ ಗೊತ್ತಿತ್ತು ಅಷ್ಟೇ.
“ಏನ್ ಮ್ಯಾಮ್ ಎಷ್ಟೋ ದಿನಾ ಆದ ಮೇಲೆ ಫೋನ್ ಮಾಡಿದೀರಾ? ಏನ್ ಸಮಾಚಾರಾ?”
“ಏನಿಲ್ಲಾ ರಘು… ಎಲ್ಲಾ ಆರಾಮು…. ಒಂದು ಒಳ್ಳೆ opportunity ಇತ್ತು ಅದಕ್ಕೆ ನಿಮ್ಮ ನೆನಪಾಯ್ತು” ಅಂದ್ಲು. ಯಾವ್ದಾದ್ರೂ ಹೊಸ ಕೆಲಸ ಇರಬಹುದು. ಒಳ್ಳೆ ಟೈಮ್ ಗೆ ಮಾಡಿದಾಳೆ. ಅಂತ ಅಂದುಕೊಂಡವನೇ….
“ಸ್ವಲ್ಪ ಇರಿ, ಆಚೆ ಬರ್ತೀನಿ….” ಅಂತ ತನ್ನ ಜಾಗದಿಂದ ಎದ್ದ. ಇಂತಹ ವಿಚಾರ ಎಲ್ಲಾದರೂ ಆಫೀಸಿನೊಳಗೆ ಮಾತಾಡೋಕಾಯ್ತದಾ! ಅಲ್ಲೇ ಸ್ವಲ್ಪ ದೂರದಲ್ಲಿ ರಿಸೆಪ್ಶನ್ ಪಕ್ಕದಲ್ಲಿದ್ದ ಕಾನ್ಫರೆನ್ಸ್ ಕೋಣೆ ಖಾಲಿ ಇದ್ದುದರಿಂದ ಅದರೊಳಗೆ ತೂರಿಕೊಂಡು ಮಾತು ಮುಂದುವರಿಸಿದ.
“…. ಹಾ ಹೇಳಿ ಈಗ”
“ಹೆಂಗ್ ನಡೀತಿದೆ ಕೆಲ್ಸಾ?” ಕೇಳಿದಳವಳು.
“ಅಯ್ಯೋ ಸಿಕ್ಕಾಪಟ್ಟೆ ಕೆಲಸ ರೀ… ನಾಯಿ ಪಾಡಾಗೋಗಿದೆ.” ಆಫೀಸಿನಲ್ಲಿ ಇವನೆಷ್ಟು ಘನ ಕಾರ್ಯ ಮಾಡುತ್ತಿದ್ದನೆಂದು ಗೊತ್ತಿಲ್ಲವೇ ಅವಳಿಗೆ!
“ಪ್ಯಾರಿಸ್ ಗೆ ಹೋಗ್ತೀರಾ?” ಇಂತಹ ವಿಚಿತ್ರ ಪ್ರಶ್ನೆಯನ್ನೇ ನಿರೀಕ್ಷಿಸಿದ್ದ ರಘು ನ ಗಂಟಲು ವಣಗಿತ್ತು! ಕಷ್ಟಪಟ್ಟು ಸಾವರಿಸಿಕೊಂಡು…
“ಏನು? ಪ್ಯಾರಿಸ್ ಗಾ?!”
“ಹೂಂ ಕಣ್ರೀ… ಬ್ಲ್ಯಾಕ್ ಇಯರ್ ಸಾಫ್ಟ್ವೇರ್ ಕಂಪನೀಲಿ ಒಂದು ದೊಡ್ಡ ಹುದ್ದೆಯ ಕೆಲಸ ಖಾಲಿ ಇದೆ. ನನಗೆ ತುಂಬಾ ಬೇಕಾದವರು ಅಲ್ಲಿ ಕಂಪನಿಯ ಅದ್ಯಕ್ಷ ಮಂಡಳಿಯಲ್ಲಿ ಇದ್ದಾರೆ. ಅವರದು ಕೋಟಾ ಇರುತ್ತೆ. ಸುಮ್ಮನೆ ಔಪಚಾರಿಕತೆಗೆ ಅಂತ ಒಂದು ಸಂದರ್ಶನ ಇರುತ್ತೆ. ಪ್ಯಾರಿಸ್ ನಲ್ಲಿ ವಾಸ್ತವ್ಯ. ಅಲ್ಲಿನ ಶಾಖೆಯನ್ನು ನೀವು ನೋಡಿಕೊಳ್ಳಬೇಕು. ಅವರಿಗೆ ತುಂಬಾ ತುರ್ತಾಗಿ ಬೇಕಾಗಿದೆ. ನೀವು ಮುಂದಿನ ವಾರವೇ ಅಲ್ಲಿಗೆ ಹೋಗೋಕೆ ತಯಾರಿದೀರಾ?”
ಇಂತಹದೊಂದು ಪ್ರಶ್ನೆಯನ್ನು ಕನಸಿನಲ್ಲೂ ನಿರೀಕ್ಷಿಸದಿದ್ದ ರಘುಗೆ ಎಚ್ಚರ ತಪ್ಪೋದೊಂದೇ ಬಾಕಿ. ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾಗ ಹೀಗೊಬ್ಬಳು ಕರೆ ಮಾಡಿ ನಿನಗೆ ಅಂತ ಪ್ಯಾರಿಸ್ ನಲ್ಲಿ ಕೆಲಸ ಇದೆ, ಅದೂ ಪ್ರತಿಷ್ಟಿತ ಬ್ಲ್ಯಾಕ್ ಇಯರ್ ಕಂಪನಿಯಲ್ಲಿ.,. ಅದೂ ಅಲ್ಲದೆ ಆ ಕೆಲಸ ಪಡೆದು ಕೊಳ್ಳೋದು ಅಂದ್ರೆ ಬಾಳೆ ಹಣ್ಣು ಸುಲಿದಷ್ಟೇ ಸುಲಭ ಅಂತ ಅವಳು ಹೇಳುತ್ತಿದ್ದರೆ, ಇದು ಕನಸೋ ನನಸೋ ಅಂತ ಅರಿವಾಗದೆ, ಅವಳಿಗೆ ಏನು ಹೇಳಬೇಕೆಂದು ತೋಚದೆ, ಮೊಬೈಲ್ ನ ಪರದೆಯನ್ನೇ ಪಿಳಿ ಪಿಳಿ ನೋಡುತ್ತಾ ಕುಳಿತವನಿಗೆ ತರಂಗಿಣಿಯ ಹಲೋ ಹಲೋ ಅನ್ನುವ ದನಿ ಕೇಳಿ, ವಾಸ್ತವಕ್ಕೆ ಬಂದು ಉಗುಳು ನುಂಗಿ ….
“ಹಾ ಹಾ ಹೇಳಿ” ಅಂತ ಉಲಿದ.
“ನಾ ಹೇಳೋದೆಲ್ಲಾ ಹೇಳಾಯ್ತು. ಈಗ ನೀವು ಹೇಳಿ. ಈ ಕೆಲಸ ಬೇಕು ಅಂದ್ರೆ ನಿಮ್ಮ ರೇಸುಮೆ ಈಗಲೇ ಕಳಿಸಿ. ನಾನು ನಿಮ್ಮ ಬಗ್ಗೆ ಅವರಿಗೆ ಆಗಲೇ ಹೇಳಿ ಆಗಿದೆ.” ಅಂತ ಗಡಿಬಿಡಿಸಿದಳು!
ಇವನು ಕೆಲಸದಲ್ಲಿ ಎಷ್ಟು ಮೈಗಳ್ಳನೋ, ಅಷ್ಟೇ ಮೈಗಳ್ಳ ಉಳಿದ ವಿಷಯದಲ್ಲ್ಲೂ ಆಗಿದ್ದ. ತನ್ನ ರೇಸುಮೆ ಅನ್ನುವ ಜಾತಕವನ್ನು ಅವನು ಎಷ್ಟೋ ವರ್ಷಗಳಿಂದ update ಕೂಡ ಮಾಡಿರಲಿಲ್ಲ. ಅದನ್ನು ತರಂಗಿಣಿಗೆ ಹೇಳಿದರೆ ಅವಳು ಫೋನಿನಲ್ಲೇ ಉಗಿಯುವಳೆಂದು ಗೊತ್ತಿದ್ದುದರಿಂದ…
“ನಾನು ನನ್ನ ಇತ್ತೀಚಿನ ಪ್ರಾಜೆಕ್ಟ್ ಬಗ್ಗೆ ಇನ್ನೂ ರೇಸುಮೆ ನಲ್ಲಿ ಹಾಕಿಲ್ಲ. ಸಂಜೆ ಒಳಗೆ ಬರೆದು ನಿಮ್ಮ ಇಮೇಲ್ ಗೆ ಕಳಿಸುವೆ” ಎಂದು ಹೇಳಿ ಬೀಸುವ ದೊಣ್ಣೆ ತಪ್ಪಿಸಿಕೊಂಡ.
“ಆಯ್ತು ಬೇಗ ಕಳಿಸಿ. ಯಾಕಂದ್ರೆ ಇದು ತುಂಬಾ ಅರ್ಜೆಂಟು” ಅಂತ ಹೇಳಿ ಅವಳು ಕರೆಯನ್ನು ಮೊಟಕುಗೊಳಿಸಿದಳು.
ರಘು ಭೂಮಿಯ ಮೇಲೇ ಇರಲಿಲ್ಲ. ತಕ್ಷಣವೆ ತನ್ನ ಹೆಂಡತಿಗೆ ಕರೆ ಮಾಡಿ ನಡೆದದ್ದನ್ನೆಲ್ಲ ತಿಳಿಸಿ, ಇನ್ನು ಕೆಲವೇ ದಿನಗಳಲ್ಲಿ ತಾವು ಪ್ಯಾರಿಸ್ ಗೆ ಹೋಗಬೇಕಾಗಬಹುದೆಂಬ ಸುದ್ದಿಯನ್ನು ಭಿತ್ತರಿಸಿದ. ಒಂದು ಕ್ಷಣವೂ ತಡಮಾಡದೇ ಲಗುಬಗೆಯಿಂದ ತನ್ನ ರೇಸುಮೆ ಯನ್ನು ಬರೆಯಲುತೊಡಗಿದ. ಸಂಜೆಯೊಳಗೆ, ತಾನು ಇಷ್ಟು ವರುಷ ಮಾಡಲಾರದ್ದನ್ನೆಲ್ಲ ಮಾಡಿದ್ದೇನೆ ಎಂಬಂತೆ ಆ ರೇಸುಮೆ ನಲ್ಲಿ ತುರುಕಿ ಒಂದು ಸುಳ್ಳಿನ ಕಂತೆಯನ್ನು ತಯಾರಿಸಿ ತರಂಗಿಣಿಯ ಇಮೇಲ್ ಗೆ ಕಳಿಸಿ ಕೈ ತೊಳೆದುಕೊಂಡ!
(ಮುಂದುವರಿಯುವುದು…)
*****
ಮಸ್ತದ ಗುರು!
ರಘು ಅಂಥಾವರಿಗೆ ಅವಕಾಶಾ ಸಿಗೋದು… ಓಳ್ಳೆ ಕೆಲಸಾ ಮಾಡೊರಿಗೆ ಓಳ್ಳೆ ಅವಕಾಶಾ ಸಿಗೊದಿಲ್ಲಾ 🙂
ಗೆಳೆಯ ವಿಟ್ಠಲ, ಬಹುಷಃ ಕೆಲಸಗಳ್ಳರಿಗೆ ಸುಳ್ಳನ್ನು ಸೃಷ್ಟಿ ಮಾಡಲು ಸಾಕಷ್ಟು ಸಮಯ ಇರುವುದಕ್ಕೇ ಅವರು ಅವಕಾಶದ ಸದುಪಯೋಗ ಪದೆದುಕೊಳ್ಳುವರೋ ಏನೋ! 🙂
ಎಂದಿನಂತೆ ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ!
ಗುರು ಸರ್!! ನಮಗೂ ಪ್ಯರಿಸ್ ನಲ್ಲಿ ಒ೦ದು ಕೆಲ್ಸ ಕೂಡಿಸಿ 🙂
ಸಾಮ್ಜಿ, ಆಯ್ತು ನಿಮ್ಮ ನಂಬರ್ ತರಂಗಿಣಿಗೆ ತಲುಪಿಸುವೆ 😉
ಓದಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು!
ಗುರು, ಚೆಂದಿದೆ…….
ಗೆಳೆಯಾ ಅಮರ್, ಬರಹವನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು! 🙂
ತುಂಬಾ ಇಂಟೆರೆಸ್ಟಿಂಗ ಆಗಿದೆ.
ಪ್ರಿಯ ಸದಾನಂದ, ಕತೆಯನ್ನು ಓದಿ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು!
[…] ಬಹುಪರಾಕ್!: ಗುರುಪ್ರಸಾದ್ ಕುರ್ತಕೋಟಿ June 8th, 2015 editor [ ಪಂಚ್ ಕಜ್ಜಾಯ ] https://www.panjumagazine.com/?p=11024 ಇಲ್ಲಿಯವರೆಗೆ […]