ಈ ಜಗತ್ತು ಸುಂದರ ಮತ್ತು ಸುಖಮಯವಾಗಿ ಕಾಣುವಲ್ಲಿ ಪ್ರೇಮದ ಕೊಡುಗೆಯು ಸಿಂಹಪಾಲು ಬಹುಶಃ ಮಾನವನೆದೆಯಲ್ಲಿ ಉಂಟಾಗುವ ಭಾವನೆಗಳಿಗೆ ಮೂರ್ತ ರೂಪ ನೀಡುವಲ್ಲಿ ಈ ಪ್ರೇಮಕ್ಕೆ ಹಲವು ರೀತಿಯ ಮುಖಗಳಿವೆ.
ಮೊದಲ ನೋಟಕ್ಕ ಉಂಟಾಗುವಂತಹದ್ದು ಪ್ರೀತಿ ಆತ್ಮೀಯತೆ ಅರಳಿಸುವಂತಹದ್ದು ಪ್ರೇಮ ಕನಸುಗಳ ಮೈದಡವಿ ಬಯಕೆಗಳ ಬೆನ್ನೇರಿಸಿಕೊಂಡು ಭೂಮ್ಯಾಕಾಶದ ಆಚೆಗೂ ಪಯಣಿಸುವ ಹುಮ್ಮಸ್ಸು ತುಂಬುವಂತಹದ್ದು ಒಲವು. ಇಹಲೋಕದಲ್ಲವನ್ನೂ ಧಿಕ್ಕರಿಸುತ್ತಾ ಅನೂಹ್ಯ ಲೋಕದ ಸುಖವನ್ನು ಅನುಭವಿಸುವ ಸ್ವರ್ಗಲೋಕದ ತುತ್ತ ತುದಿಗೆ ಒಯ್ದು ಬದುಕನ್ನು ಸುಂದರಗೊಳಿಸುವಂತಹದ್ದು ಪ್ರಣಯ.
ಗಂಡು ಹೆಣ್ಣುಗಳ ಮನಸ್ಸುಗಳು ಹುಟ್ಟಾ ತರಲೆಗಳು ಮತ್ತು ಪರಸ್ಪರ ಛೇಡಿಸಲು ಪ್ರೀತಿಸಲು ಪ್ರೀತಿಯನ್ನು ಅನುಭವಿಸಲು ಆನಂದದ ಅಮೃತ ಗಹಳಿಗೆಯ ಸಂತೋಷವನ್ನು ಸವಿಯಲು ಸಮಯ ಕಾಯುತ್ತಿರುತ್ತವೆ. ಆ ಕ್ಷಣಕ್ಕೆ ಆ ಪ್ರೇಮದ ಮಧುರತೆಗೆ ವಿದ್ಯಾವಂತ ಅಜ್ಞಾನಿ ಚಿಕ್ಜವರು ದೊಡ್ಡವರು ವಯಸ್ಸಾದವರು ಅಂತೆಲ್ಲಾ ಭೇದವಿರುವುದಿಲ್ಲ.
ಅಕ್ಷರಸ್ಥ ಲೋಕದವರ ಪ್ರೀತಿ- ಪ್ರೇಮಕ್ಕಿಂತಲೂ ಅನಕ್ಷರಸ್ಥರ ಮುಗ್ಧ ರೀತಿಯ ಪ್ರೀತಿಯೇ ಬಲುಸೊಗಸು ಮತ್ತು ಸೊಬಗಿನ ಬೆಡಗು ಹಾಗೂ ಬೆರಗು ತುಂಬಿಕೊಂಡಿರುವ ಅವರ ಬದುಕಿನಲ್ಲಿ ನಿಷ್ಕಪಟ ನಿಷ್ಕಲ್ಮಷ ನಿರ್ಭೀತ ಒಲವು ಘಮ ಘಮನೆ ಪಸರಿಸುತ್ತದೆ ಅಲ್ಲಿ ನಿರಾಳತೆ ಇರುತ್ತದರ ಸ್ವಚ್ಚವಾದಂತಹ ಹೃದಯವಂತಿಕೆಯ ಛಾಪು ಕಾಣಬಹುದು.
ಅಂತಹ ಕೆಲವು ಝಲಕುಗಳನ್ನು ಜನಪದ ಸಾಹಿತ್ಯದಲ್ಲಿ ನೋಡಬಹುದು ಜನಪದ ಗೀತೆಗಳನ್ನು ಮುಗ್ಧ ಹೃದಯಗಳ ಮುಕ್ತಕಗಳೆನ್ನಬಹುದು ಬಡಬಡಾ ಮಾತನಾಡುವುದು ಸಟಸಟಾ ಸೆಟಗೊಂಡು ಮತ್ತಷ್ಟೇ ಆತ್ಮೀಯವಾಗಿ ಮುಗುಳ್ನಕ್ಕು ಮೋಡಿ ಮಾಡುವುದು ಮುಕ್ತವಾದಂತಹ ಮನಸ್ಸುಗಳಿಗಲ್ಲದೇ ಬಣ್ಣದ ಚಾದರ ಹೊದ್ದುಕೊಂಡಿರುವ ಬಣ್ಣದ ಪರದೆಯೊಳಗಿರುವ ದುಬಾರಿ ಹೃದಯಗಳಿಗೆ ಸಾಧ್ಯವಿಲ್ಲ.
ಹೆಣ್ಣಿಗೆ ಸೋಲುವ ಮನಸ್ಸು ನಿರ್ಧಿಷ್ಟವಾಗಿ ಇಂತಹದ್ದಕ್ಕೇನೆ ಸೋತಿತು ಎಂದು ಹೇಳುವುದು ಅಸಾಧ್ಯ ಅದು ಇದುವರೆವಿಗೂ ಯಾರಿಗೂ ಸಾಧ್ಯವಾಗಿಲ್ಲ ಇಂತಹದ್ದೇ ಕಾರಣಕ್ಕೆ ಪ್ರೀತಿಯಾಯ್ತು ಎಂದು ಹೇಳುವುದು ಕೂಡಾ ಅಷ್ಟೇ ಕಡುಕಷ್ಟ.
ಜರೆಯದ ಹೃದಯದಲ್ಲಿ ಅಮೃತದ ಚಿಲುಮೆಯ ರೀತಿಯಲ್ಲಿ ಉಕ್ಕುವಂತಹ ಪ್ರೀತಿ ಬಂತೆಂದರೆ ಮುಗಿಯಿತು ತನ್ನ ಪ್ರಿಯತಮ/ಪ್ರಿಯತಮೆಯನ್ನು ಕಾಣುವ ತವಕವೇ ತಪಸ್ಸಾಗುತ್ತದೆ.ಮನಸ್ಸು-ಮೇಧಸ್ಸು ಸಾವಿರ ಕಲ್ಪನೆಗಳ ಕುದುರೆ ಏರಿ ಅಡ್ಡಾದಿಡ್ಡಿ ಓಡುತ್ತಿರುತ್ತದೆ ಒಬ್ಬರನ್ನೊಬ್ಬರು ಕಾಣಲು ಹಲವು ದಾರಿಗಳನ್ನು ಹುಡುಕುತ್ತಿರುತ್ತಾರೆ.
ತೋಟದ ಹಾದಿಯಲ್ಲಿ ಕಡರೆಯ ಏರಿ ಮ್ಯಾಲೆ ಹೊಲದ ಬದುವಿನಲ್ಲಿ ದೂರದಲ್ಲೆಲ್ಲೋ ಬೆಟ್ಟದ ಇಳಿಜಾರಿನಲ್ಲಿ ಯಾವ್ಯಾವುದೋ ಪುಳಕ ಏಳುಸುತ್ತಿನ ಮಲ್ಲಿಗೆಯ ಪರಿಮಳದ ರೀತಿಯಲ್ಲಿ ಎದೆಯಲ್ಲಿಟ್ಟುಕೊಂಡಿರುವ ಪ್ರೇಮ ಪರಿಮಳವು ರೊಂಯ್ಯನೆ ಬಂದು ಸರಕ್ಕನೆ ಮನದೊಳಗಡೆ ಇಳಿದಾಗ ಕಚಗುಳಿಯಿಟ್ಟಂತಾಗಿ ಹುದುಗಿರುವ ಭಾವನೆಗಳು ಪದಗಳಾಗಿ ಹೊಹೊಮ್ಮಿದಾಗ ಒಲವಿನದನಿ ಜತೆಯಾಗಿ ಒಲುಮೆಯ ವೀಣೆಯನ್ನು ಮೀಟಿದಂತಾಗುತ್ತದೆ.
ನಿಂಬೇಯಾ ಹಣ್ಣಂಗೆ
ತುಂಬಿದಾ ಮೈಯ್ನೋಳೇ
ಗ್ಯಾನ ಬಿತ್ತಲ್ಕೇ ನಿನ್ನ ಮ್ಯಾಲೆ
ಮನಸು ಬಿತ್ತಲ್ಲೇ ನಿನ್ನ ಮ್ಯಾಲೇ
ಕನಸು ಬಿತ್ತಲ್ಲೇ ನಿನ್ನ ಮ್ಯಾಲೇ//
ಯಾವ ಆಧುನಿಕ ಕವಿಯು ಎಷ್ಟೇ ಪ್ರೇಮಗೀತೆಗಳನ್ನು ಬರೆದಾಗ್ಯೂ ಸಹ ಇಂತಹ ನೇರಾನೇತ ಮತ್ತು ಸರಳ ಹಾಗೂ ಅಷ್ಟೇ ಪ್ರೇಮಭರಿತ ಒಲುಮೆಯ ನಾದಪೂರಿತ ಪದಕಟ್ಟಿ ಹಾಎಇದ ಅಂದಿನ ಜನಪದರ ಪ್ರೇಮಗೀತೆಗಳಿಗೆ ಸಾಟಿಯಿರಲಾರದು ಶತಮಾನಗಳು ಕಳೆದು ಹೋಗಿವೆ ಆದರೂ ಸಹ ಈ ತರಹದ ಜನಪದ ಪ್ರೇಮಗೀತೆಗಳು ನಿತ್ಯನೂತನ.
ತಾನು ಮೆಚ್ಚಿದ ತರುಣಿಗೆ ತನ್ನ ಬಹುದಿನಗಳ ಆಸೆ ಆಕಾಂಕ್ಷೆಗಳನ್ನು ಮನದಿಂಗಿತವನ್ನು ನಿವೇದಿಸಿಕೊಳ್ಳಲು ಕಾಲಾವಕಾಶಕ್ಕಾಗಿ ಕಾಯುತ್ತಿದ್ದವನಿಗೆ ಅವಳು ತನ್ನ ಗೆಳೆಯರೊಡನೆ ಊರಾಚೆ ಇರುವ ಕೆರೆಗೋ ಭಾವಿಗೋ ಅಥವಾ ಹೊಳೆಗೋ ನೀರು ತರಲೆಂದು ಅಥವಾ ಜಳಕ ಮಾಡಲೆಂದು ಕಿಲಕಿಲ ನಗುತ್ತಾ ಬೆಳ್ಳನೆ ಬಿಳಿಮಲ್ಲಿಗೆಯಂತೆ ಅರಳಿ ನಿಂತಿಹ ಮುದ್ದಾದ ದುಂಡು ಮೊಗದಲ್ಲಿ ಮಂದಹಾಸ ಹೊಮ್ನಿಸುತ್ತಾ ಕೆಂಡ ಸಂಪಿಗೆಯ ಹಾಗಿರುವ ದೇಹಸಿರಿಗೆ ಒಪ್ಪುವಂತಹ ಲಂಗ ಧಾವಣಿ ತೊಟ್ಟು ಮುಡಿ ತುಂಬಾ ಹೂ ಮುಡಿದು ಕಂಕುಳಿನಲ್ಲಿ ಕೊಡವನ್ನಿಟ್ಟುಕೊಂಡು ವೈಯ್ಯಾರದಿಂದ ಬಳುಕುತ್ತಾ ಬರುವ ಅವಳನ್ನು ನೋಡಿದ ಮೇಲೆ ಅವನ ಮನಸ್ಸು ಆಸೆ ಹಕ್ಕಿಯನೇರಿ ಹಾರದೇ ಇರಬಲ್ಲುದೇ!!? ಎದೆಯ ನಗಾರಿ ಬಾರಿಸಿ ಹಾಡದೇ ಇರಲಾಗುವುದೇ!!!?
ನೀರಿಗ್ಹೋಗೋ ಹೆಣ್ಣೆ ನಿಲ್ಲೆ ನಾ ಬರುತೀನಿ
ನಿನ್ನಾಣೆ ನಿನ್ನಾ ಕೊಡದಾಣೆ
ಕೈಯ್ಯಿನ ಬಳೆಯಾಣೆ ನೀರಿನ ಹೊಳೆಯಾಣೆ
ನಿಲ್ಲೇ ಹಣ್ಣೆ ನಾ ಬರುತೀನಿ//
ತಾನು ಮೆಚ್ವಿದಂತಹ ಹುಡುಗಿಯನ್ನು ತಾನು ದಿನಾ ನೋಡ್ತಾನೆ ಇರಬೇಕು ಅವಳ ಪ್ರತಿ ಮಾತು ನಗು ಉಸುರಿನ ಪ್ರತಿ ಮಿಡಿತ ಎಲ್ಲವನ್ನೂ ನಾನು ಆಸ್ವಾದಿಸಬೇಕು ನನ್ನ ಮುಂದೇನೆ ಇರಬೇಕು ಎಂಬುದು ಪ್ರತಿಯೊಬ್ಬ ಪ್ರೇಮಿಯ ಆಶಯ ಮತ್ತು ಆಸೆ ಅಂತಹ ಮಾತನ್ನು ಹುಚ್ಚು ಆಸೆಯನ್ನು ಕೇಳಿದಂತಹ ಹಳ್ಳಿ ಹೆಣ್ಣುಮಗಳು ತುಸು ನಾಚಿಕೆಯಿಂದಾನೇ ಆತ್ಮೀಯಿಂದಾನೇ ಮತ್ತು ಪ್ರೇಮದಿಂದ ಕೂಡಾ ಬುದ್ಧವಂತಿಕೆಯ ಬುದ್ಧ ವಾದ ಹೇಳುತ್ತಾಳೆ ಪದ ಕಟ್ಟಿ ಹಾಡುತ್ತಾಳೆ
ಊರ ಮುಂದಿನ ತೋಟಾ ಮಾಡಯ್ಯ
ಚೆನ್ನಿಗಾ ಚೆಲುವ /ನಿನ್ನ ನೋಡುತಾ
ನೀರ ತರುವೆನು
ಊರ ಮುಂದಲ ತೋಟಾ ಮಾಡಿದರೆ
ಚಿನ್ನಾರಿ ಚೆಲುವೆ / ದನಕರುಗಳ
ಕಾಟ ಬಹಳಲ್ಲೇ//
ಎಲ್ಲಿಯೂ ಕೂಡಾ ಸೌಜನ್ಯದ ಎಲ್ಲೆಯನ್ನು ಮೀರದಂತಹ ಈ ತೆರನಾದ ಪ್ರೀತಿ ಪ್ರೇಮ ಎಂಬುದು ಅಮರ ಮತ್ತು ಅ್ರ ಅನುಭವವೇ ಅದ್ಭುತನಸ್ಸಿನ ತುಂಬೆಲ್ಲಾ ಕಚಗುಳಿ ಇಟ್ಟು ಪ್ರತಿ ಕ್ಷಣವೂ ಕಾಡುವಂತಹ ಅನುಭವ ನೀಡುವ ಮೈಯ್ಯರಳಿಸಿ ಮನ ನವಿರೇಳಿಸುವ ಶಕ್ತಿ ಈ ಜನಪದ ಪ್ರೇಮ ಕಾವ್ಯದಲ್ಲಿನ ಸೊಗಡು ಮತ್ತು ಸೊಬಗು
ಕಗ್ಗಲು ಕಣಿವೇಲಿ ಇಬ್ಬರು ಬರುವಾಗ
ಮುಟ್ಟಿದರೇನಾಗೋದೆ / ಎಲೆ ನಾರಿ
ವತ್ತಿದರೇನಾಗೋದೆ//
ಅತ್ತೆಯ ಮಗಳೆಂದು ಹತ್ತಿರ ಕರೆದರೆ
ಮೆತ್ತಗೆ ನೀ ಜಾರೋದೆ/ ಎಲೆನಾರಿ
ಮುಟ್ಟಿದರೇನಾಗೋದೆ//
ಒಲುಮೆಯ ಲೇಪನಗೊಂಡು ಎದೆಯ ಬಯಲ ಮೇಲೆ ಒಂದೊಂದೇ ಪ್ರೀತಿ ಮುತ್ತನ್ನು ಬಿತ್ತಿದ ಉಸುರಿನೊಂದಿಗೆ ಹೊರ ಹೊಮ್ಮುವ ಕಳ್ಳ ಮನಸ್ಸಿನ ಪ್ರೇಮಗೀತೆಗೆ ಮೈ ರೋಮಾಂಚಿತವಾಗದೇ ಇರಲಾರದು.
ಜನಪದ ಸಾಹಿತ್ಯದಲ್ಲಿ ಇಂತಹದ್ದು ಬೇರೇನೂ ಇಲ್ಲ ಎಂದು ಖಡಾಖಂಡಿತವಾಗಿ ನಿರ್ಧರಿಸಲು ಸಾಧ್ಯವಿಲ್ಲ ಇಲ್ಲಿನ ಸಾಹಿತ್ಯ ಸಕಲ ಜೀವರಾಶಿಗಳನ್ನೊಳಗೊಂಡಂತೆ ಸಮಸ್ತ ವಸ್ತು ವಿಶೇಷಗಳನ್ನು ಒಳಗೊಂಡಿದೆ.ಜಾನಪದ ಸಾಹಿತ್ಯ ವೆಂಬುದು ಯಾರೋ ಎಲ್ಲೋ ಕುಳಿತುಕೊಂಡು ಒಬ್ಬರೋ ಇಬ್ಬರೋ ರಚನೆ ಮಾಡಿರುವಂತಹದ್ದಲ್ಲ.ಸಮೂಹದಲ್ಲಿ ಹುಟ್ಟಿ ಸುದಾಯದಿಂದ ಬೆಳೆದು ಸಾಮಾಜಿಕವಾಗಿ ಪಸರಿಸಿ ಸರ್ವ ಪ್ರಾಂತ್ಯಗಳ ಸಂಸ್ಕೃತಿಯ ಜೀವನ ಶೈಲಿ ಭಾಷೆಯ ಸೊಗಡನ್ನು ಅತಗಿಸಿಕೊಂಡು ಬೆಳೆದದ್ದು ಜಾನಪದ ಜನರ ಎದೆಯಲ್ಲಿನ ಭಾವನೆಗಳು ಜನಪದ ವಾದವು. ಜನಪದದಲ್ಲಿನ ಒಂದು ತ್ರಿಪದಿ ಅದರ ಮಹತ್ವ ಮತ್ತು ಪ್ರಾಚೀನತೆಯನ್ನು ಹೇಳುತ್ತವೆ.ಆದರೆ ಇಂತಹದ್ದೇ ಕಾಲಘಟ್ಟದ್ದೆಂದು ಹೇಳಲಾಗದು.
ಹಳ್ಳಿಯ ಪದಗಳೆಂದು
ಆಡಿನಗಲೂ ಬೇಡವೋ ಅಣ್ಣಾ
ವೇದಕ್ಕೂ ಮುನ್ನಾದ ಪದಗಳು//
-ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ