ಲಲಿತ ಪ್ರಬಂಧ

ಜಾತ್ರಿ ಜೊತಿಗಿನ ನೆನಪಿನ ಬುತ್ತಿ…: ನಾರಾಯಣ ಬಾಬಾನಗರ


ಜಾತ್ರೆ ಅಂದರ..ನಿಮಗೆ ಏನ ನೆನಪಾಗತೈತಿ?ಹಿಂಗ ನಿಮಗ ಯಾರರ ಕೇಳಿದರ..ಮಿಠಾಯಿ ಮಾರುವ ಅಂಗಡಿ,ಫುಗ್ಗಾ ಮಾರುವವನು ಬಲೂನಿಗೆ ಗಾಳಿ ತುಂಬುವ ಮುಖ,ಆಟಿಕಿ ಸಾಮಾನುಗಳನ್ನು ಹರಡಿಕೊಂಡು ಕುಳಿತ ಅಜ್ಜಿ,ಬಣ್ಣದ ಶರಬತ್ ಮಾರಕೋತ ನಿಂತವನ ಕೂಗು,ಎಣ್ಣಿಯೊಳಗ ಭಜಿ ಕರಕೋತ ಕುಂತವಳು ಒಂದ ಕೈಯಿಂದ ಕಡಾಯಿಯೊಳಗ ಭಜಿ ಕರೀತಿದ್ದರ ಇನ್ನೊಂದ ಕೈಯಿಂದ ಹಂಗ ಹಣೀ ಮ್ಯಾಲಿಂದ ಕೆಳಗ ಇಳೀತಿದ್ದ ಬೆವರನ್ನ ಒರಿಸಿಕೊಂತ ಕುಂತ ಚಿತ್ರಗಳು….ಅಬ್ಬಾ ಜನ ಜಂಗುಳಿ!! ಅಂಥಾದರಾಗ ಅವ್ವನ ಜೊತಿ ಜಾತ್ರಿಗಿ ಬಂದ ಪುಟ್ಟ ಪೋರಿ ತನ್ನ ಅವ್ವಳಿಂದ ತಪ್ಪಿಸಿಕೊಂಡು ರೊಯ್ಯನೆ ಅಳಕೋತ ದಿಕ್ಕು ಕಾಣದೆ ನಿಂತದ್ದು ನೋಡಿ ಕರಳು ಚುರ್ ಅಂದಿದ್ದು….ಹಿಂಗ ನೆನಪುಗಳೆಂಬ ನೆನಪುಗಳು ಓತಪ್ರೋತವಾಗಿ ನಿಮ್ಮ ನೆನಪಿನ ಬುತ್ತಿಯಿಂದ ಒಂದೊಂದ ತೆರಕೊಳ್ಳತಿರಬಹುದು….

ಆದರ ನನಗ ಮಾತ್ರ ಜಾತ್ರಿ ಅಂದರ ಬ್ಯಾರೆನೆ ಚಿತ್ರಗಳು ನನ್ನ ಮುಂದ ತೆರೆದುಕೊಳ್ಳತೊಡಗತಾವ…ನನಗ ತೇರಿನ ಬಳುಕಿನ ಕುಲುಕಾಟವಾಗಲೀ,ತೇರಿನ ಮ್ಯಾಲೆ ಎಸೆದ ಹಣ್ಣುಗಳನ್ನು ತಮ್ಮ ಉಡಿಯೊಳಗ ತುಂಬಿಕೊಳ್ಳುವ ಹೆಣ್ಣು ಮಕ್ಕಳ ಗಡಿಬಿಡಿಯಾಗಲೀ..ದೂರದಿಂದಲೇ ಕಣ್ಣು ಮುಚ್ಚಿ ಭಕ್ತಿಯಿಂದ ಕೈ ಜೋಡಿಸಿ ದೇವರನ್ನು ನೆನೆಯುವ ಹಣ್ಣು ಹಣ್ಣು ಅಜ್ಜನಾಗಲೀ..ಸಾಬೂನು ನೀರಿನಾಗ ಕೊಳವಿ ಎದ್ದಿ ಉಫ್ ಅಂತ ಊದಿ ಗುಳ್ಳೆಗಳನ್ನು ಬಿಡುತ್ತಿದ್ದ ಹುಡುಗರಾಗಲೀ….ಬಣ್ಣ ಬಣ್ಣದ ಲಂಗಾ ಹಾಕೊಂಡು ಬಣ್ಣದ ಬಳೆಗಳನ್ನು ಕೈಗೆ ತೊಡಿಸಿಕೊಳ್ಳಲು ಸರತಿ ಸಾಲಿನಲ್ಲಿ ಕುಳಿತವರ ನಿರೀಕ್ಷಿತ ಕಣ್ಣುಗಳು  ಉಹುಂ ಇವ್ಯಾವೂ ಥಟ್ಟನೇ ನನಗೆ ನೆನಪಾಗಿ ಕಾಡಾಂಗಿಲ್ಲ…

ಜಾತ್ರಿ ಮಾಡಾಕಂತ ಅಪ್ಪ ಕೊಟ್ಟ ಹಣವನ್ನು ನಾನು ಕಳಕೊಂಡದ್ದು ಮಾತ್ರ ಇನ್ನೂ ಹಸಿ ಹಸಿಯಾಗಿ ಜಾತ್ರಿ ಅಂದರ ಸಾಕು ಕಾಡತೈತಿ…ಆಹಾ ಇದು ಬೇಜವಾಬ್ದಾರಿ ಗಿರಾಕಿಯಂತಲೋ,ಜೂಜುಕೋರ ಆಸಾಮಿಯಂತಲೋ ನನ್ನನ್ನ ಒಮ್ಮಿಂದೊಮ್ಮಿಲೇ ಧಡಕ್ಕನ ಡಿಸೈಡ್ ಮಾಡಬ್ಯಾಡ್ರೀಪಾ…ನಾ ಹೇಳೂದು ಸ್ವಲ್ಪ ಕೇಳ್ರಿ…ಅಲ್ಲಲ್ಲಾ ಮುಂದಕ್ಕ ಓದ್ರಿ……

ರೊಕ್ಕಾ ಕಳಕೊಳ್ಳಾಕ ನಾ ಏನ್ ಗಿರಮಿಟ್ಟಲಿ ಆಡಾಕ ಹೋಗಿರಲಿಲ್ಲ…ಅರ್ಥ ಆಗಲಿಲ್ಲ? ಜರಾ ನೆನಪು ಮಾಡಿಕೊಡಾಕ ಪ್ರಯತ್ನ ಪಡತೀನಿ..ನನ್ನ ಪ್ರಯತ್ನಕ್ಕಾಗಿಯಾದರೂ ನೆನಪು ಮಾಡಕೊಂಡು ನನ್ನ ಪ್ರಯತ್ನಕ್ಕ ಫಲ ಕೊಡ್ರಿ..ವಿವರಿಸ್ತೀನಿ ನೋಡ್ರಿ… ವೈವಿಧ್ಯ ಚಿತ್ರಗಳಿರುವ ಚಿತ್ರಪಟ ಹಾಸಿರುತ್ತಿದ್ದ ಒಬ್ಬಾಂವ ಆ ಚಿತ್ರಪಟದ ಕೂಡ ಕುಂತಿರತಿದ್ದ,ತನ್ನ ಮಗ್ಗಲಕ್ಕ ಚಕ್ರ ಇಟಕೊಂಡಿರತಿದ್ದ.ಚಿತ್ರಗಳ ಮ್ಯಾಲೆ ರೊಕ್ಕಾ ಇಡಾಕ ಹೇಳಿ ಚಕ್ರ ತಿರಗಿಸತಿದ್ದ…ಹಿಂಗ ತಿರುಗುವ ಚಕ್ರ ತಿರಕೋಂತ ತಿರಕೋಂತ ಬಂದು ನಿಂದರತಿತ್ತು…ಚಕ್ರಕ್ಕೊಂದು ಕಡ್ಡಿ ಇರತಿತ್ತು.ಚಕ್ರದ ಮ್ಯಾಲೂ ಚಿತ್ರಪಟದ ಮ್ಯಾಲಿನಂಥವೇ ಚಿತ್ರಗಳು ಇರತಿದ್ದವು…ತಿರುಗುವ ಚಕ್ರ ನಿಂತಾಗ ,ಚಕ್ರದ ಗೂಡಾ ಇರತಿದ್ದ ಕಡ್ಡಿ.. ಒಂದ ಚಿತ್ರದ ಗೂಡ ಹೊಂದಿಕಿಯಾಗತಿತ್ತು…ಚಿತ್ರಪಟದ ಮ್ಯಾಲಿನ ಚಿತ್ರಕ್ಕನೂ ಕಡ್ಡಿ ಬಂದ ನಿಂತ ಚಿತ್ರಕ್ಕು ಮ್ಯಾಚ್ ಆಗುವ್ಹಂಗ  ಯಾರು ರೊಕ್ಕಾ ಇಟ್ಟಿರತಾರೋ ಅಂಥವರಿಗೆ ದುಪ್ಪಟ್ಟು ರೊಕ್ಕವನ್ನು ಚಕ್ರ ತಿರುಗಿಸತಿದ್ದಾಂವ ಬೀಡಿ ಸೇದಕೋತ ಕೊಡತಿದ್ದ…ಇಂಥಾ ಚಿತ್ರ ವಿಚಿತ್ರ ಆಟಗಳು ಇರತಿದ್ದವು ಜಾತ್ರಯೊಳಗ …ನಾನು ರೊಕ್ಕಾ ಕಳಕೊಂಡಿದ್ದು ಇಂಥ ಚಿಲ್ಲರೆ ಆಟಗಳಿಗೆ ಅಲ್ಲ ಬಿಡ್ರೀ…ಎಂಥಾ ಆಟಪಾ ಅದು?ಅಂತ ನಿಮ್ಮೊಳಗಿನ ಕುತೂಹಲ ಗರಿಗೆದರಲಾಕ ಸುರುವಾತ?ಇನ್ನು ನಿಮ್ಮನ್ನು ಕಾಯಿಸಾಂಗಿಲ್ಲ,ನೇರವಾಗಿ ಇನ್ನು ವಿಷಯಕ್ಕ ಬಂದ ಬಿಡತೀನಿ …ಓದ್ರಿ ಮುಂದ…

ಜಾತ್ರಿ ಮಜಾ ನೋಡಕೋತ ಗೆಳೆಯರ ಗೂಡಾ ತಿರಗಾಡುವಾಗ ಥಟ್ಟನ ನಿಂತಬಿಟ್ಟೆ…ನನ್ನ ಗೂಡಾ ಇದ್ದವರನ್ನು ನಿಂದರಿಸಿದ್ದೆ ಎನ್ನುವುದನ್ನು ನೀವು ತಿಳಕೊಂಡರ ಸಾಕು. ಇಬ್ಬರು ಹುಡುಗರು ‘”ಆಟಾ ನೋಡ್ರಿ..ಮಜಾಗಟಾ ಆಟಾ” ಅಂತ ಹೋಗೂ ಬರೂ ಮಂದೀನ ನೋಡಿ ಕೂಗಿ ಕೂಗಿ ಕರೀತಿದ್ದರು.ನಮ್ಮ ವಾರಿಗಿ ಹುಡುಗರೆಂತಲೋ,ಇದೆಂಥ ಆಟ ನೋಡೆ ಬಿಡೋಣ ಅಂತ ಜೊತೆಗಿದ್ದವರು ಅಂದಿದ್ದಕ್ಕೋ ಅಂತೂ ಒಟ್ಟಿನ್ಯಾಗ ನಾವೆಲ್ಲಾ ಸೇರಿ ಅವರಿಬ್ಬರ ಹಂತೇಕ ಹೋದಿವಿ…ಇಬ್ಬರು ಹುಡುಗರು ಅಂತ ಹೇಳಿದ್ನೆಲ್ಲ? ಮೊದಲಿಗೆ ಒಬ್ಬಾಂವದ ಹೇಳತೀನಿ,ಆಮ್ಯಾಲಿ ಇನ್ನೊಬ್ಬಾಂವದ ಹೇಳತೀನಿ…ಯಾಕಂದರ ಇಬ್ಬರ ಕಡೇನೂ ನಾನು ರೊಕ್ಕಾ ಕಳಕೊಂಡಾಂವನ ಆಗೀನಿ…ಹೆಂಗ ಕಳಕೊಂಡೆ ಅಂತ ನಿಮ್ಮ ಮುಂದ ಹೇಳಾಕ ಹೊಂಟಾಂವ ಪೀಠಿಕೆ ಹೇಳಲಾಕ ಭಾಳ ಟೈಮ ತೊಗೊಳ್ಳಾಕತ್ತಾನ ಅಂತ ಗೊಣಗಬ್ಯಾಡ್ರಿ…ಭಾಳ ರೋಚಕ ಐತಿ ಕಥಿ!..ಬೇಕಾದರ ಛಾ ಕುಡದ ಬರತಿದ್ರ ಕುಡದ ಬರ್ರೀ…ನಂದೇನೂ ಅಭ್ಯಂತರ ಇಲ್ಲ..ಹಂಗ ನೋಡಿದರ ಹಿಂಗ ಹೇಳಲಾಕ ನನ್ನ ಸ್ವಾರ್ಥವೂ ಐತಿ ಯಾಕಂದರ ನನಗ ಛಾ ಕುಡೀಬೇಕಾಗೇತಿ…ಆತು ನೀವೂ ಕುಡೀರಿ ನಾನೂ ಕುಡದ ಬರತೀನಿ…ಮುಂದಿನ ವಾರ ಭೇಟಿಯಾಗೂಣಂತ…ತಪ್ಪದ ಹೇಳತೀನಿ ನಾ ರೊಕ್ಕಾ ಕಳಕೊಂಡಿದ್ದು ಹೆಂಗಂತ…ಓದಲಾಕ ನೀವೂ ರೆಡಿಯಾಗಿರ್ರೀ….
-ನಾರಾಯಣ ಬಾಬಾನಗರ 

(ಮುಂದುವರೆಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಜಾತ್ರಿ ಜೊತಿಗಿನ ನೆನಪಿನ ಬುತ್ತಿ…: ನಾರಾಯಣ ಬಾಬಾನಗರ

Leave a Reply

Your email address will not be published. Required fields are marked *