ರೊಕ್ಕಾ ಕಳಕೊಂಡ ಸುದ್ದಿ ಓದಾಕ ರೆಡಿಯಾಗಿ ಬಂದು ನೀವು ಕುಂತದ್ದ ರೀತಿ ನೋಡಿದರ…ನನ್ನ ಮ್ಯಾಲೆ ಎಷ್ಟು ಕನಿಕರ ನಿಮಗೈತಿ ಅನ್ನೂದು ತೋರಿಸಿಕೊಡತೈತಿ…ಹೋಗಲಿ ಬಿಡ್ರಿ…ಈ ಸಲ ‘’ಖರೇ ಖರೋ’’(ಈ ಶಬ್ದದ ಅರ್ಥ ದಯವಿಟ್ಟು ಡಿಕ್ಸನರಿಯೊಳಗ ಹುಡುಕಬ್ಯಾಡ್ರಿ,ನಿಮಗ ತಿಳದರ ಸಾಕು-ಅರ್ಥ ಹುಡುಕಿ ಅನರ್ಥ ಆಗುದು ಬ್ಯಾಡಂತ ನನ್ನ ಆಶೆ)ನನ್ನ ರೊಕ್ಕ ಹೆಂಗ ಹೋತು ಅನ್ನೂದು ಹೇಳೇ ಹೇಳತೀನಿ ನನ್ನನ್ನ ದಯವಿಟ್ಟು ನಂಬ್ರಲ್ಯಾ….
ಹಂಗ ನಮ್ಮ ಪಟಾಲಮ್ ಆ ಇಬ್ಬರೊಳಗಿನ ಹುಡುಗರೊಳಗ ಒಬ್ಬನ ಮುಂದ ಹೋಗಿ ನಿಂತಿವಿ.ಆ ಹುಡುಗ ಶುರು ಮಾಡಿದ..’’ಈ ಆಟ ಭಾಳ ಸರಳ ಐತಿ..ಸರಳಂದರ ಸರಳ’’ ಹಿಂಗ ಎರಡೆರಡು ವಿಶೇಷಣಗಳನ್ನು ಹಚ್ಚಿ ನಮ್ಮನ್ನು ತನ್ನೆಡೆಗೆ ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡಾಕತ್ತಿದ್ದ.ಅಂವಾ ಹೇಳೂದರಾಗನೂ ಸುಳ್ಳಿರಲಿಲ್ಲ..ಒಂಥರಾ ಮಜಾಗಟಾ ಆಟವಾಗಿತ್ತದು.ಇದಕ್ಕಿಂತಲೂ ಹೆಚ್ಚಾಗಿ ನಮ್ಮ ಬಜೆಟ್ ದಾಗಿನ ಆಟವಾಗಿತ್ತು.ಅಪ್ಪ ಕೊಟ್ಟ ಚಿಲ್ಲರೆ ರೊಕ್ಕ ಚಡ್ಡಿ ಕಿಸೆದಾಗ ಝಣ ಝಣ ಅಂತಿದ್ದುವಲ್ಲಾ,ಅದಕ್ಕ ಈ ಆಟ ಸರೀಹೋಗಿ ಮತ್ತ ಮ್ಯಾಲ ರೊಕ್ಕ ಉಳೀತಿತ್ತು.ಹಿಂಗಾಗಿ ಧೈರ್ಯದ ಮ್ಯಾಲ ಅವನ ಮುಂದ ಮೊಳಕಾಲ ಮಡಚಿ…ಕುಂತೆವು.ನಾವು ಕುಂತದ್ದ ನೋಡಿ ಅಂವಗ ಹುರುಪು ಬಂದಂತ ಕಾಣತದ..ಹೇಳಾಕ ಶುರು ಮಾಡಿದ..’’ಇಲ್ನೋಡ್ರಿ ಇಲ್ಲಿ ಒಂದು ಕೊಡಾ ಐತಿ’’.ಏ ಐತಿ ಬಿಡಪಾ ಮುಂದಿಂದ ಹೇಳು ಅಂದೆವು.ಹಂಗಲ್ಲ್ರೀ ಆಟದ ನಿಯಮ ಏನೈತಿ ನಾನು ಹೇಳಾಕ ಬೇಕಾಗತೈತಿ ಇಲ್ಲಂದ್ರ ಹಿಕ್ಕಟ್ಟ ತಕರಾರು ಏಳಬಾರದ್ದು..ಅದಕ್ಕ ‘’ ಅಂತಂದ.ಹಿಂಗಾಗಿ ಅಂವಾ ಏನ ಹೇಳತಾನ ಪೂರ್ತಿ ಹೇಳಿಬಿಡಲಿ ಅಂತ ನಾವು ನಿರ್ಧಾರ ಮಾಡಿ ಅವನಿಗೆ ಮಾತಾಡಕ್ಕ ಬಿಟ್ಟು ಕೇಳಕೋತ ಕುಂತಿವಿ…ಅಂವಾ ಮುಂದುವರೆಸಿದ.
ಈಗ ಈ ಕೊಡದ ಮ್ಯಾಗ ಒಂದು ಸಿಂಬಿ ಇಡತೀನಿ..ಅಂತ ಹೇಳಕೋತನ ಅರವಿಲೆ ಮಾಡಿದ ದುಂಡಗಿನ ಸಿಂಬಿ ಇಟ್ಟಾ…ನೀವು ಈ ಸಿಂಬಿ ಮ್ಯಾಲ ಎಷ್ಟರದರೇ ನಾಣ್ಯ ಇಡ್ರಿ….ನಾಣ್ಯ ಇಟ್ಟಮ್ಯಾಲ ಈ ಬಡಗೀಲೆ ಸಿಂಬಿ ಬಡೀಬೇಕು…ಇಗಾ ಕೊಡದ ಸುತ್ತ ದುಂಡಗ ಈ ಗೆರಿ ಹೊಡದೀನಲಾ ,ಹೊಡದ ಕೂಡಲೇ ನಾಣ್ಯ ಜಿಗಿದು ಗೆರಿ ದಾಟಿ ಹೋದರ ನಾ ನಿಮಗ ನೀವು ಸಿಂಬಿ ಮ್ಯಾಲ ಇಟ್ಟ ನಾಣ್ಯದ ದುಪ್ಪಟ್ಟ ರೊಕ್ಕಾ ನಾ ಕೊಡತೀನಿ…ಎಂದು ಅಂವಾ ಆಟದ ನಿಯಮವನ್ನು ನಾನ್ ಸ್ಟಾಪ್ ಆಗಿ ಒಂದೇ ಉಸಿರಿಲೇ ‘’ಒದರಿದ…’’(ನಿಮಗ ಭಾಳ ಬಿರಸ ಮಾತಿದು ಅಂತ ಅನಸಾಕತ್ತಿದ್ದರ ‘’ಹೇಳಿದ’’ ಅಂತ ತಿದ್ದಿಕೊಂಡು ಓದರೀ..ರೊಕ್ಕಾ ಕಳಕೊಂಡ ಸಂಕಟದಾಗ ಒಮ್ಮೊಮ್ಮಿ ಇಂಥಾ ಶಬ್ದ ಬರತಾವ ಏನೂ ಮಾಡಾಕಾಗಾಂಗಿಲ್ಲ). ಅವನು ಹೇಳಿದ ಮ್ಯಾಲ ಸುಮ್ಮನ ಕೂಡಲಿಲ್ಲ…ನಿಮಗ ನಿಯಮ ತಿಳದೈತಿಲ್ಲ?ಅಂತ ಕೇಳಿದ..ನಾವು ತಿಳದೈತಿ ಅಂತ ಗೋಣು ಹಾಕಿದರೂ ಬಿಡದೆ..ಮತ್ತೊಮ್ಮೆ ನಿಯಮ ಹೇಳಿದ…ಎಲ್ಲಾ ಗೊತ್ತಾಗೇತಲೇಪಾ ಅಂತ ಹೇಳಿ ನಾನು ಮ್ಯಾಲೆದ್ದೆ..ಎದ್ದವನೇ ಕಿಸೆದಾಗಿಂದ ನಾಲ್ಕಾಣೆ ಅಂದರ ಚಾರಾಣೆ ಅರ್ಥಾತ್ ಇಪ್ಪತ್ತೈದು ಪೈಸೆಯ ನಾಣ್ಯ ಹೊರ ತೆಗೆದೆ.ತೆಗೆದು ಎಲ್ಲಾ ಗೆಳೆಯರ ಮುಖ ನೋಡಿದೆ…ಅವರೆಲ್ಲಾ ವಿಜಯೀಭವ ಎಂದು ಕಣ್ಣಾಗನ ಹೇಳಿದರು….ಇದೆಂಥಾ ಭಾರಿ ಕೆಲಸ?ಸಾಲ್ಯಾಗ ಕಬ್ಬಣದ ಗುಂಡ ಒಗದಾಂವ ನಾ…ಹೋಗಿ ಹೋಗಿ ಒಂದು ನಾಣ್ಯವನ್ನು ಸಿಂಬಿ ಮ್ಯಾಲಿಂದ ಜಿಗಿಸಾಕ ಆಗಾಂಗಿಲ್ಲಾ ನನಗ…ಅಂತ ಮನಸಿನಾಗ ಅಂದುಕೊಂಡು ಸಿಂಬಿ ಮ್ಯಾಲಿಟ್ಟು ಕೈಯಾಗ ಬಡಗಿ ತೊಗೊಂಡೆ…ಈಗ ಎಲ್ಲರ ಕಣ್ಣುಗಳು ನನ್ನ ಮ್ಯಾಲ ನೆಟ್ಟಿದ್ದವು…ಬಹುಷಃ ಅವರೂ ಮನಸಿನ್ಯಾಗ ಲೆಕ್ಕಾ ಹಾಕೋತ ಕುಂತಿದ್ದರಂತ ಕಾಣತದ,ಇಂವಾ ಗೆದ್ದರ ಗೆದ್ದ ರೊಕ್ಕಿನಾಗ ಬೆಂಡು ಬತ್ತಾಸ ಕೊಡಸತಾನ ಅಂತ…ಆಗ ತಾನೇ ಊಟ ಮಾಡಿ ಬಂದಿದ್ದೆ ಹಿಂಗಾಗಿ ಮೈಯಲ್ಲ ಶಕ್ತಿ ತುಂಬಕೊಂಡ ಬಡಿಗಿ ಬೀಸಿದೆ ನೋಡಿ……ಕ್ಷಣಾರ್ಧದಾಗ ಬಡಿಗಿ ಸಿಂಬಿಗೆ ಬಡೀತು…..!!
ಹಿಂಗ ಸಿಂಬಿಗೆ ಬಡಿಗಿ ಬಡದ ಕೂಡಲೇ ನಾಣ್ಯ ಚಿಮ್ಮಿ ಎಷ್ಟು ದೂರ ಹಾರೈತಿ ಅಂತ ಎಲ್ಲಾರೂ ನೋಡಾಕ ಶುರು ಮಾಡಿದ್ರು ಯಾಕಂದರ ನಾ ಅಷ್ಟು ಜೋರಿಲೆನೇ ಬಡದಿದ್ದೆ…ಉಹುಂ ಯಾಕಾಡಿ ನೋಡಿದರೂ ನಾಕಾಣೆ ಸಿಗಲೇ ಇಲ್ಲ…ಯಾಕಂದರ ನಾಕಾಣೆ ಕೊಡದಾಗನೇ ಬಿದ್ದಿತ್ತು..! ಆಟ ಆಡಿಸತಿದ್ದ ಹುಡುಗ ಸಾವಕಾಶೆ ಕೊಡದಾಗ ಕೈ ಮುಳುಗಿಸಿ ನಾಣ್ಯ ಹೊರತೆಗೆದು ತನ್ನ ಅಂಗಿ ಕಿಸೆದಾಗ ಇಟಗೊಂಡ…ನಾವು ಮುಂದಕ್ಕ ಹೆಜ್ಜಿ ಹಾಕಿದೆವು.
ನಾನು ಮೊದಲೇ ಹೇಳಿದ್ನೆಲ್ಲಾ?ಇಬ್ಬರು ಹುಡುಗರು ಇದ್ದರಂತ…ಇನ್ನೊಬ್ಬ ಹುಡುಗ ನಿಂತಿದ್ದ…ಜರಾ ನನ್ನ ಆಟನೂ ಆಡಬರ್ರಿ ಅಂತ ಕರದ.ನನ್ನ ಕಿಸೆದಾಗ ಇನ್ನೂ ನಾಕಾಣೆ ಇತ್ತು..ಅಲ್ಲಿ ಕಳಕೊಂಡಿದ್ದನ್ನು ಇಲ್ಲ್ಯಾಕ ಗಳಸಬಾರದು…ಎಂಬ ಹುಮ್ಮಸ್ಸು ಬಂತು..
ಅಂವಾ ತನ್ನ ಆಟದ ನಿಯಮ ಹೇಳಾಕ ಶುರು ಮಾಡಿದ’’ ಇಲ್ಲಿ ನನ್ನ ಮುಂದ ಬಕೀಟ ಐತಿ ,ಬಕೀಟದಾಗ ನೀರು ತುಂಬೈತಿ.ನೀರು ತುಂಬಿದ ಬಕೀಟಿನ ಒಳಗ ಒಂದು ಸಣ್ಣ ಗಿಂಡಿ ಇಟ್ಟೀನಿ…ನೀವು ಮ್ಯಾಲಿನಿಂದ ನೋಡಕೋತ ನಾಣ್ಯ ಬಿಟ್ಟು ಆ ಗಿಂಡಿಯೊಳಗ ಹಾಕಿದರ…ನಿಮಗ ಎರಡು ಪಟ್ಟು ರೊಕ್ಕಾ ಕೊಡತೀನಿ ಅಂತ ಇವನೂ ಆಶೆ ಹಚ್ಚಿದ…ನಾನು ಮತ್ತೆ ಸನ್ನದ್ಧನಾದೆ..ಕಿಸೆದೊಳಗಿನ ನಾಣ್ಯ ತೆಗೆದು ,ಗುಂಡಿಯನ್ನೇ ತದೇಕ ಚಿತ್ತವಾಗಿ ನೋಡುತ್ತಾ ನಾಣ್ಯ ಬಿಟ್ಟೆ….
ನಾಣ್ಯ ನೀರಲ್ಲಿ ತೇಲುತ್ತಾ,ಓಲಾಡುತ್ತಾ ಗಿಂಡಿಯ ಕಡೆಗೆನೇ ಹೊರಟಿತು…ನಮ್ಮಲ್ಲಿ ಸಂಭ್ರಮ…ಇನ್ನೇನು ಗಿಂಡಿಯಲ್ಲಿ ಬಿತ್ತು ಅಂದುಕೊಳ್ಳುವಷ್ಟರಲ್ಲಿ…ಹೊರಳಿ ಹೊರಗೆ ಬೀಳಬೇಕೆ?ಕೊನೆಯ ಕ್ಷಣದಲ್ಲಿ ಅಪಜಯ ಎದುರಾಗಿ ಎರಡನೆಯ ನಾಣ್ಯವೂ ಕೈ ತಪ್ಪಿ …ಕೈ ಹೊಸಕಿಕೊಳ್ಳುವಂತಾಯಿತು…
ಆ ಇಬ್ಬರೂ ಹುಡುಗರು ಏನೂ ಓದಿಕೊಂಡಿರಲಿಲ್ಲ…ಆದರೂ ಎರಡೂ ಆಟಗಳು ವಿಜ್ಞಾನದ ಹಿನ್ನಲೆಯಲ್ಲಿ ರೂಪಿತಗೊಂಡಿದ್ದವುಗಳು ಎಂಬುದು ಈಗ ನನಗೆ ಅರ್ಥವಾಗಿ ಅಚ್ಚರಿ ಹುಟ್ಟಿಸುತ್ತದೆ. ಮೊದಲಿನ ಆಟ ತೆಗೆದುಕೊಳ್ಳಿ ಅದು ನ್ಯೂಟನ್ನನ ಮೊದಲನೆಯ ನಿಯಮಕ್ಕೆ ದೃಷ್ಟಾಂತ. ನಾನು ಬಡಿಗೆ ಬೀಸಿ ಹೊಡೆದದ್ದು ಸಿಂಬಿಯನ್ನು…ಅಂದರೆ ಬಲ ಪ್ರಯೋಗ ಮಾಡಿದ್ದು ಸಿಂಬಿಯ ಮೇಲೆ…ಹೀಗಾಗಿ ಸಿಂಬಿ ದೂರ ಹೋಗಿ ಬಿದ್ದಿತು ವಿನಾ ನಾಣ್ಯವಲ್ಲ..ನಾಣ್ಯ ಇದ್ದ ಸ್ಥಿತಿಯಲ್ಲಿಯೇ ಇತ್ತು,ಕೊಡದಲ್ಲಿ ಬಿತ್ತು.ಇನ್ನು ಎರಡನೇ ಆಟದಲ್ಲಿರುವುದು ಬೆಳಕಿನ ವಕ್ರೀಭವನದ ತತ್ವ…ನಾಣ್ಯಗಳನ್ನು ಕಳಕೊಂಡು ನಾನು ವಿಜ್ಞಾನ ಕಲಿತುಕೊಂಡ ಖುಷಿಯಲ್ಲಿದ್ದೇನೆ…ಇರಲಿ….
ಹಂಗ ಎರಡನೇ ಸಲ ನಾಣ್ಯ ಕಳಕೊಂಡು,ಜೋತು ಮುಖ ಮಾಡಕೊಂಡು ನಾವು ನಿಂತಾಗ…ನಮ್ಮ ಕಣ್ಣಿಗೆ ಹುಸೇನಿ ಬಿದ್ದ! ಯಾವಾಗ ಕಣ್ಣಿಗೆ ಹುಸೇನಿ ಬಿದ್ದನೋ…ರೊಕ್ಕ ಕಳಕೊಂಡ ದುಃಖವನ್ನೆಲ್ಲಾ ಮರೆತು ಎದ್ದೆವೋ ,ಬಿದ್ದೆವೋ ಅಂತ ದಿಕ್ಕಾಪಾಲಾಗಿ ಎಲ್ಲರೂ ಓಡಾಕ ಶುರು ಮಾಡಿದೆವು….ಹಂಗ ಓಡಾಕತ್ತಾವರು ಹುಸೇನಿ ನಮ್ಮನ್ನು ಇನ್ನು ಹಿಡಿಯಾಕ ಬರಾಂಗಿಲ್ಲ ಅನ್ನೂದನ್ನ ಖಾತ್ರಿ ಪಡಿಸಿಕೊಂಡ ಮ್ಯಾಲೆನೇ ಓಡುವುದು ನಿಲ್ಲಿಸಿದ್ದು…ಇಷ್ಟಕ್ಕೂ ಹುಸೇನಿಯನ್ನ ಕಂಡವರು ಹಂಗ್ಯಾಕ ಓಡಿದೇವು ಅನ್ನಲಾಕನೂ ಒಂದು ಕಾರಣೈತಿ…ರೋಚಕ ಹಿನ್ನೆಲೆ ಅಡಗೇತಿ…ಅದಕ್ಕಾಗಿ ಮುಂದಿವಾರದ ತನಕಾ ಕಾಯುವುದು ಅನಿವಾರ್ಯವೈತಿ…ಮುಂದಿನವಾರ ನಮ್ಮನ್ನು ಓಡಿಸಲಾಕ ಹಚ್ಚಿದ ಹುಸೇನಿ ಬರಲಾಕತ್ತಾನ…ಕಾಯ್ತಿರಲ್ಲಾ?
*****
[…] November 10th, 2014 editor [ ಸರಣಿ ಬರಹ ] https://www.panjumagazine.com/?p=9219 ಇಲ್ಲಿಯವರೆಗೆ ಅವನಿಗೆ ‘’ಹುಸೇನಿ’’ ಹಂಗಂತ […]