ಅಂವ ಉಳಿಯೋದ ಗ್ಯಾರಂಟಿ ಇಲ್ಲ. ನಾಂವ sಮಾಡಬೇಕಾದ ಪ್ರಯತ್ನಾ ಎಲ್ಲಾ ಮಾಡಾಕ ಹತ್ತೀವಿ. ಮಿಕ್ಕಿದ್ದ ಆ ದೇವ್ರಿಗೆ ಬಿಟ್ಟದ್ದ ಅನಕೋತ ಕೈಯಾಗ ಒಂದ ದೇಹಾ ಚಕ್ಕಮಾಡುವ ಮಶಿನ್ ಹಿಡಕೊಂಡ ಮಾತಾಡಕೋತ ಮಾತಾಡಕೋತ ಕಂಚಿ ಡಾಕ್ಟರ್ ಆಫ್ರೇಶನ್ ಥೇಟರ್ಗೆ ಹೊಂಟ. ಬಿಳಿ ಸೀರಿ,ಬಿಳಿ ಜಂಪರ್ ತೊಟ್ಟ, ಮೂಗಿಗೆ ಎತ್ತಗೊಳಿಗೆ ಹಾಕಿದಂಗ ಒಂದ ಬಾಯಿಬುಟ್ಟಿ ಹಕ್ಕೊಂಡ, ಮನಿ ಕಳ್ಳತನಾ ಮಾಡಾಕ ಬಂದ ಕಳ್ಳರಂತೆ ವೇಷಧಾರಿ ನರಸಬಾಯಿಗೋಳು ಡಾಕ್ಟರ್ ಹಿಂದ ಮುಂದ ಪಾದರಸದ ಹಂಗ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಓಡಾಡುತ್ತಿದ್ದರು. ಒಬ್ಬಾಕಿ ಡಾಕ್ಟರ್ತಿಬಾಯಿಯಂತು ಕಿವಿಯಾಗ ಒಂದ ಪೋನ್ ಇಟಗೊಂದ, “ಯಾ..ಯಾ…., ನೋ.. ನೋ..” ಅನಕೋತ ಮೂಗಿನ ಮ್ಯಾಲ ಜರದ ಬೀಳುತಿದ್ದ ಕನ್ನಡಕಾ ಒತ್ತಿ ಸುದ್ದಮಾಡಕೊಂಡು ತುಂಬಾ ನಾಜೂಕಿನ ಹೆಜ್ಜೆ ಹಾಕುತ್ತ ಅವಳೂ ಆಪ್ರೇಶನ್ ಥೇಟರ ಹೊಕ್ಕಳು. ಪಟಾಕಿ ಶಬ್ದಕ್ಕ ಹೌವಹಾರಿ ಬೆದರುವ ದನಗೋಳ ಹಂಗ ಐಗೋಳ ನೀಲವ್ವ ಭೂತಬಂಗಲೆಯಂತ ಆ ದವಾಖಾನಿ, ಅಲ್ಲಿರುವ ಡಾಕ್ಟರಗೋಳ ತೊಟ್ಟಕೊಂಡ ವೇಷಭೂಷಣ, ಅವರು ಮಾತಾಡುವ ಹರಕಬರಕ ಇಂಗ್ಲಿಷ್ ಮಾತು ಕೇಳಿ ದಂಗಬಡದ ಕುಂತಿದ್ದಳು.
ಕಂಚಿ ಡಾಕ್ಟರ್ ಬಿಜಾಪೂರ ನಗರಕ್ಕ ದೊಡ್ಡ ಪೇಮಸ್ ಡಾಕ್ಟರ್. ನಾಡಿನ ಮೂಲೆ ಮೂಲೆಯಿಂದ ರೋಗಿಗಳು ಕಂಚಿ ಡಾಕ್ಟರ್ ನ ಕೈಗುಣಾ ಬಾಳ ಚಲೋ ಐತಿ ಅಂತ ತಿಳಕೊಂಡು ಬಿಜಾಪೂರಿಗೆ ಬರ್ತಿದ್ರು. ಕಂಚಿ ಡಾಕ್ಟರ್ ಇಂವಗ ಇದ ರೋಗೈತಿ, ಇಂವಗ ಇದ ಪಿಡಗ ಬಂದೈತಿ ಅಂತ ಕಣ್ಣ ಮುಚ್ಚಿ ಕಣ್ಣ ತಗಿಯುವಷ್ಟರಾಗ ಹೇಳ್ತಿದ್ದ. ನೀಲವ್ವ ಕಂಚಿ ಡಾಕ್ಟರ್ ನ ಹವಾ ಎಂಥಾದು ಅಂತ ಬಲ್ಲವಳಾಗಿದ್ಳು.
ನಿನ್ನ ಮಗಾ ಉಳಿಯುವ ಗ್ಯಾರಂಟಿ ಇಲ್ಲ ಅನ್ನು ಮಾತ ಕಂಚಿ ಡಾಕ್ಟರ್ ನ ಬಾಯಿಯಿಂದ ಕೇಳಿದಾಗಂತು ನೀಲವ್ವ ಲಭೋ..ಲಭೋ ಹೊಯ್ಕೊಂಡು ಡಾಕ್ಟರ ಕಾಲಮ್ಯಾಲ ಬಿದ್ದ ಹೊಳ್ಳಾಡಿದ್ಳು. ಸುತ್ತ ಮುತ್ತ ಇದ್ದ ಮಂದಿ ನೀಲವ್ವನ ಸಂಕಟಾ ಪಡುವ ಸ್ಥಿತಿ ನೋಡಿ ಅಯ್ಯೋ ಪಾಪ ಅನ್ನದೆ ಇರಲಿಲ್ಲ. ಕೆಲವರು ಹತ್ತಿರ ಬಂದು “ಸಮಾಧಾನ ತಗೋ ಬೇ ಏನೂ ಆಗಂಗಿಲ್ಲ, ಒಮ್ಮಿಗಿಲೇ ಧೈರ್ಯ ಕಳಕೊಬ್ಯಾಡ” ಎಂದು ಸಾಂತ್ವನ ಹೇಳುತ್ತಿದ್ದರು. “ಯಲಾ ಇವ್ರ ಏನ ಅನಾವತಾ ಮಂದಿ ಇವ್ರು, ನಾನು ನೂರೆಂಟ ನಮೂನಿ ಪುಸ್ತಾಕ ಕಣ್ಣಾಗ ಎಣ್ಣಿ ಹಕ್ಕೊಂಡ ಓದಿ ಡಾಕ್ಟರಾಗಿನಿ, ನಾನ ಉಳಿವೂದ ಗ್ಯಾರಂಟಿ ಇಲ್ಲಂತ ಹೇಳಾಕ ಹತ್ತೀನಿ, ಇವ್ರ ನೋಡಿದ್ರ ಏನೂ ಆಗುದಿಲ್ಲ ಅಂತಾರಲ್ಲ” ಎಂದು ಕಂಚಿ ಡಾಕ್ಟರ ಜನರಾಡುವ ಮಾತು ಕೇಳಿ ದಂಗಾದ. ಒಮ್ಮೊಮ್ಮೆ ಹನಿಬರಾ ಗಟ್ಟಿದ್ದರ ಹೇಳಾಕನೂ ಆಗೂದಿಲ್ಲ ಅಂತ ಮನದಲ್ಲಿ ಅಂದ್ಕೊಂಡ.
ಬಿ.ಪಿ.ಯಂತೂ ಕಂಡಾಪಟಿ ಲೋ ಆಗೇತಿ, ಹೆಂಗರ ಮಾಡಿ ಒಂದ ಬಾಟಲಿ ‘ಓ’ ಪಾಜಟಿವ್ ರಕ್ತಾ ತರಸಿದ್ರ ಶಿವಯ್ಯ ಉಳದ್ರೂ ಉಳಿಬಹುದು. ಕಂಚಿ ಡಾಕ್ಟರ್ ಮೂಗಿಗೆ ಹಾಕಿದ್ದ ವಸ್ತ್ರಾ ತಗೆಯುತ್ತ ನೀಲವ್ವನಿಗೆ ಹೇಳಿದ. “ಉಳದ್ರೂ ಊಳಿಬಹುದ ಅಂತ ಯಾಕಂತಿಯೋ ನನ್ನಪ್ಪ ಉಳಿತಾನಂತ ಒಮ್ಮಿ ಹೇಳು, ನಿನ್ನ ಕಾಲ ತೊಳದ ನೀರ ಕುಡಿತೀನಿ” ಎಂದು ನೀಲವ್ವ ಮತ್ತೆ ಬೋರಿಟ್ಟಳು.
ಯವ್ವಾ ಕಾಲಿ ಪೀಲಿ ಮಾತಾಡಾಕ ಟೈಮ್ ಇದಲ್ಲಾ, ಲಗೂನ ರಕ್ತಾ ತರುವ ವ್ಯವಸ್ಥೆ ಮಾಡು, ಇಲ್ಲಂದ್ರ ಶಿವಯ್ಯ ಶಿವನ ಪಾದ ಸೇರ್ತಾನ ಎಂದು ಮತ್ತೆ ನೀಲವ್ವಳಿಗೆ ಅಧೈರ್ಯದ ಮಾತು ಹೇಳಿದ. ನೀಲವ್ವಗ ರಕ್ತಾ ಎಲ್ಲಿ ಹೋಗಿ ತರಬೇಕು, ಅದು ಎಲ್ಲಿ ಸಿಗ್ತೈತಿ ಅನ್ನೂದ ಗೊತ್ತಿರಲಿಲ್ಲ. ಎಪ್ಪಾ..! ನಾ ಐಗೋಳಾಕಿ ಅದೀನಿ. ಆದ್ರೂ ತಪ್ಪಿಲ, ನಿನ್ನ ಕೈಕಾಲ ಮುಗೀತೀನಿ, ದುಡ್ಡ ಎಷ್ಟಾರ ಖರ್ಚ ಆಗೊಲ್ದು, ನನ್ನೂ ಎರಡೂ ಎಮ್ಮಿ ಮಾರಿಯಾದ್ರೂ ತಂದ ನಿನ್ನ ದವಾಖಾನಿ ಬಿಲ್ಲಕಟ್ಟತೀನಿ, ರಗತ ಎಷ್ಟ ಬೇಕೋ ಅದನ್ನ ನೀನ ಹಾಕು ಎಂದು ಮತ್ತೆ ಡಾಕ್ಟರ ಕಾಲ ಮೇಲೆ ಬಿದ್ದು ಉರಳಾಡತೊಡಗಿದಳು. “ಏನೂ ಗೊತ್ತಿಲ್ಲಂದ್ರ ಸಾವು ಹೆಣ ತಗೊಂದ ದವಾಖಾನಿಗೆ ಯಾಕ ಬರ್ತಿರೀ” ಡಾಕ್ಟರ ಕಣ್ಣು ಕೆಂಪು ಮಾಡಿಕೊಂಡ. ಸುತ್ತಮುತ್ತಲಿದ್ದವರು ಮತ್ತೆ ನೀಲವ್ವನನ್ನು ಸಮಾಧಾನ ಪಡಿಸುತ್ತ ರಕ್ತ ಸಿಗುವ ಸ್ಥಳದ ಬಗ್ಗೆ ಮಾಹಿತಿ ನೀಡತೊಡಗಿದರು.
ಅಲ್ಲಿದ್ದ ಒಬ್ಬ ಹೆಂಗಸು “ಯಮ್ಮಾ ನಿಮ್ಮ ಸಂಬಂಧಿಕರು ಬಂದುಗಳು ಯಾರೂ ಇಲ್ಲನ” ಎಂದು ಕೇಳಿದಾಗ ಸತ್ತಗಂಡನ ನೆನಪು ಮಾಡಿಕೊಂಡು ನೀಲವ್ವ ಸೀರಿಸೆರಗು ಮೋತಿಗೆ ಒತ್ತಿಕೊಂಡು ಬಿಕ್ಕತೊಡಗಿದಳು. ಹೋಗ್ಲಿ ಪೋನ್ ನಂಬರಾದ್ರೂ..? ಅಜ್ಜಿ ನಿಮ್ಮೂರು ಯಾವೂದು? ನಿಮ್ಮ ಊರಿನವರಿಗೆ ಈ ವಿಷ್ಯಾ ನಾನರ ಪೋನ ಮಾಡಿ ತಿಳಸ್ತೀನಿ ಎಂದು ಅಲ್ಲಿದ್ದ ಹುಡುಗನೊಬ್ಬ ಕೇಳಿದ. ‘ದೇವನಾಳ ಊರು’ ಎಂದು ಕಣ್ಣೊರಿಸಿಕೊಳ್ಳುತ್ತ ನೀಲವ್ವ ಮುಂದಿದ್ದ ಹುಡುಗನಿಗೆ ಹೇಳೂದ ತಡಾ, ಹಸಿರು ಸೀರೆ ಹೆಂಗಸೊಬ್ಬಳು ಏನಜ್ಜಿ ನೀನು ದೇವನಾಳ ಅಂತ ಮೊದಲ ಹೇಳ ಬಾರ್ದಾ..? ನಮ್ಮೂರ ಮಾತಂಗೆವ್ವನ ನಿಮ್ಮೂರ ಮೂಲಿಮನಿ ಸಿದ್ದಪ್ಪನ ಮಗನಿಗೆ ಕೊಟ್ಟೀವಿ. ಮನ್ನೆ ಮನ್ನೆ ಮಾತಂಗಿ ಅವಳಿ-ಜವಳಿ ಎರಡ ಹೆಣ್ಣ ಹಡದಾಳಂತ. ನೋಡಾಕ ಎರಡೂ ಒಂದ ನಮೋನಿ ಅದಾವಂತ, ಉಪಯೋಗಕ್ಕೆ ಬಾರದ ಮಾತು ಕುಟ್ಟತೊಡಗಿದಳು. ಹುಡಗನೊಬ್ಬ ಗುದ್ದಾಡಿ ದೇವನಾಳ ಊರಿಗೆ ಸುದ್ದಿ ಮುಟ್ಟಿಸಿದ. ದೇವನಾಳ ಊರಾಗಿಂದ ಸುದ್ದಿ ತಿಳದ ಮ್ಯಾಲ ಬೈಕು ಹತ್ತಿ ನಾಕಾರ ಮಂದಿ ಹಾಜರಾದ್ರು. ಆಗ ಒಂದ ತಟಗ ನೀಲವ್ವಗ ಒನಾಧೈರ್ಯಾ ಬಂದಂಗಾತು.
ನೀಲವ್ವ ದೇವನಾಳದಾಗ ಎಲ್ಲರಿಗೂ ಬೇಕಾದಂತ ಹೆಣ್ಣಮಗಳು. ಯವ್ವಾ ಯಕ್ಕಾ, ಯಪ್ಪಾ ಯಣ್ಣಾ ಎಂದು ನೆಡತಿ ಹಚ್ಚಿ ಮಾತಾಡುತ್ತ ಜನರ ಮನಸ ಗೆದ್ದವಳು. ಶಿವಯ್ಯ ಬೈಕ ಮ್ಯಾಲಿಂದ ಬಿದ್ದ ತೆಲಿ ಒಡಕೊಂಡಾನ, ಬಾಳ ರಕ್ತ ಹೋಗೈತಿ, ಕಂಚಿ ದವಾಖಾನ್ಯಾಗ ಹಾಕ್ಯಾರಂತ, ಊರ ತುಂಬ ಸುದ್ದಿ ಆದದ್ದ ತಡಾ, ಊರಾನ ಮಂದಿ ನೀಲವ್ವಗ ಖಾಸ ಇದ್ದವ್ರು, ಶಿವಯ್ಯನ ದೋಸ್ತರು ತಾಬಡತೊಬಡ ದವಾಖಾನಿ ಮುಂದ ಜಮಾ ಆದ್ರು.
ನಾಕಾರು ಹುಡಗೂರು ಗಾಳಿ ಹ್ವಾದಂಗ ಬ್ಲಡ್ ಬ್ಯಾಂಕಿಗೆ ಹ್ವಾದ್ರು. ಅದರಾಗಂತೂ ಶಿವಯ್ಯನ ಆಪ್ತಮಿತ್ರ ಕಿವುಡ ಸಿದ್ದನಿಗೆ ದಿನಾ ಇಪತ್ತನಾಲ್ಕು ತಾಸು ಕೂಡಿ ಇದ್ದ ಗೆಳೆಯಾಗ ಹಿಂಗಾತಲಾ ಅಂತ ಕಣ್ಣಿರ ಚಿಮ್ಮತೊಡಗಿದವು.
“ಸರ್ ನಮಗ ‘ಓ’ ಪಾಜಟಿವ್ ರಕ್ತ ಬೇಕಾಗೇತ್ರಿ, ಖಾಸ ನನ್ನ ಗೆಳೆಯ ಸಾವು ಬದುಕಿನ ಮದ್ಯಾ ಹೋರಾಡಾಕ ಹತ್ಯಾನ ದಯಮಾಡಿ ರಕ್ತಾ ಕೊಡ್ರಿ ಇಲ್ಲ ಅನ್ನಾಕ ಹೋಗಬ್ಯಾಡ್ರಿ” ಎಂದು ಬ್ಯಾಡರ ಸಿದ್ದ ಬಾಳ ದೈನಾಸಿದಿಂದ ಅಲ್ಲಿದ್ದ ಬ್ಲಡ್ ಬ್ಯಾಂಕನ್ಯಾಗÀ ವರ್ಕ ಮಾಡುವ ಮನಸ್ಯಾನ ಕೇಳಿದ.
“ಓ ಪಾಜಟಿವ್ ಖಾಲಿ ಆಗೇತ್ರಿ, ಇಲ್ಲ. ಅದು ಸಿಗೂದ ಬಾಳ ದುರ್ಲಬಾ ಐತಿ” ಎಂದು ಹೇಳುದೇ ತಡಾ ಸಿದ್ದನಿಗೆ ಕಾಲು ಸೋತಂಗ ಆತು, ಕಣ್ಣಿಗೆ ಕಳಾ ಬಂದಂಗ ಆತು, ಮತ್ತ ಇನ್ನ ಹ್ಯಾಂಗ ಮಾಡೂದ್ರೀ ಸಾಹೇಬ್ರ ಎಂದು ಸಿದ್ದ ಗಾಬರಿಯಾದ. ನೋಡ್ರೀ ನಿಮ್ಮಲ್ಲಿ ಯಾರಾದ್ರೂ ‘ಓ’ ಪಾಜಟಿವ್ ರಕ್ತ ಇದ್ದಾವ್ರ ಇದ್ದರ ಲಗೂನ ಕರಕೊಂಡ ಬರ್ರಿ. ನಾ ಹೆಂಗರಾ ಮಾಡಿ ವ್ಯವಸ್ಥಾ ಮಾಡತೀನಿ ಎಂದು ಭರವಸೆ ನೀಡಿದ. ಅಂವನ ಮಾತ ಕೇಳಿ ಸಿದ್ದನಿಗೆ ಕಳಕೊಂಡ ಹ್ವಾದ ಎಮ್ಮಿಗೊಡ್ಡ ಮರಳಿ ಸಿಕ್ಕಷ್ಟ ಆನಂದ ಆತು.
ಲಗುಬಗೆಯಿಂದ ಕಿಸೆದಾಗಿಂದ ಪೋನ ಹೊರಗ ತಗದು ಬಲಗೈಯ್ ಬೆರಳಿಂದ ಪಟಪಟಾ ನಂಬರ ಒತ್ತಿದಂವ ಕಿವಿಮ್ಯಾಲ ಹಿಡಕೊಂಡ. ನೀವು ಕರೆ ಮಾಡಿದ ಚಂದಾದಾರರು ಸ್ವಿಚ್ಚಾಪ್ ಮಾಡಿದ್ದಾರೆ ಎಂದು ಹೆಣ್ಣಿನ ದ್ವನಿ ಕೇಳುತ್ತಿದ್ದಂತೆ “ಇವನೌನ ಯಾವಾಗ ನೋಡತಿ ಅವಾಗ ಪೋನ ಸ್ವಿಚ್ಚಾಪ ಮಾಡಕೊಂಡ ಏನ ಗೆಣಸ ಕೇರಿತಾನೋ ಮಳ್ಳ ಸೂಳಿಮಗಾ” ಎಂದು ಬೈಕೋತ ಮತ್ತೊಂದ ನಂಬರಿಗೆ ಪೋನ ಹಾಯಿಸಿದ.
“ಹಲೋ, ಬಸಯ್ಯ, ನಾನ ಲೇ ಸಿದ್ದರಾಜು”
“ಯಾವ ಸಿದ್ದರಾಜು ರೀ”
“ಥೂ.. ಹಾಳಾದವ್ನ ನಾನ ಲೇ ಕಿವುಡ ಸಿದ್ದ”
ಹಾಂ.. ಹಂಗ ಹೇಳ ಮತ್ತ, ಸಿದ್ದರಾಜು ಗಿದ್ದರಾಜು ಅಂದ್ರ ನಮಗೆಲ್ಲಿ ಗೊತ್ತಾಗ್ಬೇಕು? ನೆಟ್ಟಗ ಕಿವುಡ ಸಿದ್ದ ಅಂದ್ರ ಮುಗಿತಿ. ಇರ್ಲಿ ಬಿಡು ನೀ “ಯಾಕ, ಹಂಗ್ಯಾಕ ಗಾಬರಿಯಾಗಿ ಮಾತಾಡಕತ್ತಿ ಲೇ ಮಾರಾಯ ಚಂದಗ ಮಾತ್ಯಾಡ” ಎಂದ ಬಸಯ್ಯ.
“ಎಲ್ಲಿ ಅದಿ ಈಗ”
“ಯಾಕ? ಇಲ್ಲೆ ಮನ್ಯಾಗ ಅದೀನಿ”
“ಯಾಕೂ ಇಲ್ಲ ಅರ್ಜೆಂಟಾಗಿ ‘ಓ’ ಪಾಜಿಟಿವ್ ಬ್ಲಡ್ ಬೇಕಾಗಿತ್ತು, ”
“ಯಾರೀಗೆ”
“ನಿಮ್ಮ ಕಾಕಾನ ಮಗ ಐಗೋಳ ಶಿವಯ್ಯನಿಗೆ ಬೇಕಾಗೇತಿ”
“ಅಂವಗೇನಾತ”
“ ಬೈಕಮ್ಯಾಲಿಂದ ಬಿದ್ದಾನ”
“ಹ್ಯಾಂಗ”
“ಅದನೆಲ್ಲ ಆಮೇಲ ಹೇಳತೀನಿ, ನೀ ಮೊದಲ ರಕ್ತದ ವ್ಯವಸ್ಥಾ ಮಾಡ”
“ನನಗ ಗೊತ್ತಿದ್ದಂಗ ದಾಸರ ಪರಸ್ಯಾಂದ ಓ ಪಾಜಟಿವ್ ಐತಿ, ಆದ್ರ”
“ಏನಾದ್ರ”
“ದಾಸರಾಂವಂದ ರಕ್ತಾ ಹಾಕ್ಯಾರಂತ ನಮ್ಮ ಐಗೋಳ ಮಂದಿಗೆ ಸುದ್ದಿ ಆಗಿ ಏನಾರ ಹೆಚ್ಚುಕಮ್ಮಿ ಆದರ ಯಾರ ಹೊಣೆ”
“ಅದನೆಲ್ಲ ಆ ಮ್ಯಾಲ ನೋಡಕೊಳ್ಳುನೂ”
“ಆ ಮ್ಯಾಲ ಅಂದ್ರ ಬಾಳ ಕಷ್ಟ ಅಕೈತಿ, ಮೊದಲ ಪರಸ್ಯಾ ಬಾಳ ಬಡವ, ತಿನ್ನಾಕ ಗತಿ ಇಲ್ಲ”
“ಅದಕೇನೂ ಆಗೂದಿಲ್ಲ ನಾ ಇರ್ತಿನಿ”
“ನೀ ಎಲ್ಲಾ ಇರ್ತಿ ಪಾ, ನನ್ನ ಗತಿ, ಆ ಬಡಪಾಯಿ ಪರಸ್ಯಾನ ನಮ್ಮ ಜನರ ಸುಮ್ಮಕ ಬಿಟ್ಟಾರನ”
“ಈಗ ಹಿಂಗ ವನಾ ಉಸಾಬರಿ ಮಾಡಕೋತ ಕುಂತ್ರ ಶಿವಯ್ಯನ ಕಳಕೊಬೇಕ ಅಕೈತಿ, ಆ ಜಾತಿಗೆ ಬೆಂಕಿ ಹಚ್ಚು, ಜಾತ್ಯಾಗೇನು ಸುಡಗಾಡೈತಿ, ಏನರ ಆದದ್ದ ಆಗಲಿ ಮುಂದ ಬಂದದ್ದ ಎದರಿಸಿದ್ರ ಆತ, ನೀ ಲಗೂನ ಹೋಗಿ ಪರಸ್ಯಾನ ಕರಕೊಂಡ ಬ್ಲಡ್ ಬ್ಯಾಂಕಿಗೆ ಬಾ ಎಂದು ಕಿವುಡ ಸಿದ್ದ ಬಸಯ್ಯನಿಗೆ ದೈನಾಸದಿಂದ ಹೇಳಿದ. ಆದ್ರ ಆತು ಎಲ್ಲ ದಾನಗಳಲ್ಲಿಯೇ ರಕ್ತದಾನ ಶ್ರೇಷ್ಠ ಅಂತಾರ, ಪಾಪ..! ನಮ್ಮ ಶಿವಯ್ಯನ ಉಳಸ್ಕೊಬೇಕು ಅಂದುಕೊಳ್ಳುತ್ತ ಬಸಯ್ಯ ಓಡಕೋತ ಓಡಕೋತ ಪರಸ್ಯಾನ ಮನಿಕಡೆ ಹೊಂಟ. ಬಸಯ್ಯ ಓಡುವ ಪರಿ ನೋಡಿ ಪಿಂಜಾರ ಯಮನೂರನ ನಾಯಿಗೆ ಚೆಲ್ಲಾಟ ಎನಿಸಿ ‘ಬೌವ್ ಬೌವ್’ ಎಂದು ಬೊಗಳಕೋತ ಅಂವನ ಬೆನ್ನ ಹತ್ತಿತು. ನಿನ್ನೌನ ನಮಗೊಂದ ನಮಗ ಹತ್ತೇತಿ ನಿಂದೇನ ಕಾಟ ಎಂದವ್ನ ಬಗ್ಗಿ ಒಂದು ಕಲ್ಲ ತಗೊಂದ ಬಸಯ್ಯ ಅದಕ್ಕ ಎಸೆದ. ಕಲ್ಲು ಹೋಗಿ ನಾಯಿ ದುಬ್ಬಕ ಬಿತ್ತು, ನಾಯಿ ‘ಕುಂಯ್ ಕುಂಯ್’ ರಾಗ ಎಳೆಯುತ್ತ ಒಂದು ಸಂದಿ ಹಿಡಿದು ಓಡತೊಡಗಿತು.
“ಲೇ ಬಸಯ್ಯ ಹಿಂಗ್ಯಾಕ ಮಟಾ ಮಟಾ ಮದ್ಯಾನದಾಗ ಹುಚ್ಚರಗತೆ ಓಡಾಕ ಹತ್ತಿಲೇ” ಎಂದು ಅಗಸಿ ಕಟ್ಟಿಮ್ಯಾಲ ಹಾಳ ಹರಟಿ ಹೊಡಕೋತ ಕುಂತಿದ್ದ ಈರಯ್ಯ ಅಜ್ಜ ಬಸಯ್ಯನ ತಡೆದು ನಿಲ್ಲಿಸಿ ಕೇಳತೊಡಗಿದ.
ಏದುಸಿರು ಬಿಡುತ್ತ, ಮೋತಿ ಮ್ಯಾಲಿನ ಬೆವರು ವರಿಸಿಕೊಳ್ಳುತ್ತ, ದಸ ದಸ ತೇಕುತ್ತ ಬಸಯ್ಯ ಸಾವರಿಸಿಕೊಂಡು “ನಮ್ಮ ಶಿವಯ್ಯನ ದವಾಖಾನಿಗೆ ಹಾಕ್ಯಾರಂತ, ಬೈಕನ್ಯಾಗಿಂದ ಬಿದ್ದ ತಲಿ ಒಡಕೊಂಡ ಸಾವು ಬದುಕಿನ ಮದ್ಯಾ ಹೊರಾಡಾಕ ಹತ್ಯಾನಂತ, ತಲಿಯಾನ ರಕ್ತ ಬಾಳ ಹೋಗೆತಿ, ಲಗೂನ ‘ಓ’ ಪಾಜಟಿವ್ ರಕ್ತಾ ತಂದಕೊಟ್ರ ಉಳಸಿ ಕೊಡತೀವಿ, ಇಲ್ಲಂದ್ರ ಹೆಣ ತಗೊಂದ ಮನಿಗೆ ಹೋಗ್ರಿ ಎಂದು ಡಾಕ್ಟರ ಹೇಳ್ಯಾರಂತ, ಎಲ್ಲೂ ‘ಓ’ ಪಾಜಟಿವ್ ರಕ್ತ ಸಿಗವಲ್ದು ಅದಕ್ಕ ದಾಸರ ಪರಸ್ಯಾಂದ ‘ಓ’ ಪಾಜಟಿವ್ ಐತಿ,ಅಂವಂದ ರಕ್ತಾ ಶಿವಯ್ಯನಿಗೆ ಹಾಕಿಸಿ ಊಳಸ್ಕೋಳ್ಳುನೂ ಎಂದು ಕಿವುಡ ಸಿದ್ದಪ್ಪ ಪೋನ ಹಚ್ಚಿ ಹೇಳಿದ. ಅದಕ್ಕ ಪರಸ್ಯಾನ ಕರಕೊಂಡ ದವಾಖಾನಿಗೆ ಹೋಗಬೇಕ” ಬಸಯ್ಯ ಕೋರ್ಟ್‍ನಲ್ಲಿ ವಕೀಲರ ಮುಂದೆ ಜವಾಬ್ ನೀಡಿದಂತೆ ಈರಯ್ಯನ ಮುಂದೆ ಇದ್ದ ಸತ್ಯವನ್ನು ಕಕ್ಕಿದ.
“ಗೆಡ್ಡಿಮ್ಯಾಲ ಬಿಗಿಲೇನ ಮೂಳ ಸೂಳಿಮಗನ, ಶಿವಯ್ಯ ನಮ್ಮ ಜಾತ್ಯಾಂವ, ಐನಾರಂವ ಅದಾನ, ಅಂವನ ರಕ್ತದಾಗ ದಾಸರ್ದು ರಕ್ತಾ ಕೂಡಿಸಿದ್ರ ಕುಲಾ ಎಲ್ಲಾ ಹಾಳಾಗಿ ಹೊಕ್ಕೈತಿ, ಊರಹೋಗಿ ಹೊಲಗೇರಿ ಮಾಡಾಂವ ಅದಿ ಏನಲೇ ಕತ್ತಿ ಸೂಳಿಮಗನ”À ಎಂದು ಎರಗಿ ಹೋಗಿ ಬಸಯ್ಯನ ಎದಿಮ್ಯಾಲಿನ ಅಂಗಿ ಹಿಡಿದು ಒಂದು ಏಟಾ ಈರಯ್ಯ ಹೊಡದೇ ಬಿಟ್ಟ. ಮತ್ತೊಂದ ಕಪಾಳಿಗೆ ಹೊಡಿಯಾಕ ಈರಯ್ಯ ಅಜ್ಜ ಕೈ ಎತ್ತಿ ಜೋರಲೆ ಬೀಸಿದಾಗ ಬಸಯ್ಯ ಪಟಕ್ಕನ ತಪ್ಪಸ್ಕೊಂಡ. ಜೋಲಿ ಹಿಡಿಯುವುದು ಆಗದ ಈರಯ್ಯ ಅಜ್ಜ ಮಾರೂದ್ದ ದೂರ ಹೋಗಿ ದಪ್ಪ ಅಂತ ಬಿದ್ದು ವದ್ದಾಡಕ ಸುರುಮಾಡಿದ. ಬಸವಣ್ಣನ ಗುಡಿ ಕಟ್ಟಿಗೆ ಕುಂತ ಹಿರ್ಯಾರು ಕಿರ್ಯಾರು ಗಾಬರಿಯಾಗಿ ಓಡಿ ಬಂದ ಈರಯ್ಯ ಅಜ್ಜನ ಮ್ಯಾಲ ಎಬ್ಬಿಸಿ. ಕೈಗೆ ಕಾಲಿಗೆ ಹತ್ತಿದ ದೂಳಾ ಜಾಡಿಸಿದ್ರು. ಮನಕಾಲದಾಗಿಂದ ಜಿಳಿ ಜಿಳಿ ಹರಿಯುವ ರಕ್ತಕ್ಕ ಒಂದ ಟಾವೆಲ್ ಸುತ್ತಿದ್ರು. ಇದ್ದ ವಿಷಯ ತಿಳಕೊಂಡು ಹೋಗ್ಲಿ ಬಿಡು ಇನ್ನ ಅಂವಂದ ಹುಡಗ ಬುದ್ದಿ ಐತಿ ಎಂದು ಈರಯ್ಯ ಅಜ್ಜನ ರಟ್ಯಾಗ ಕೈ ಹಾಕಿ ನಾಕಾರ ಮಂದಿ ಬಸಯ್ಯನ ಹೊಡೆಯುವುದನ್ನು ಬಿಡಿಸಿಕೊಂಡು ಬಂದು ಕಟ್ಟಿಮ್ಯಾಲ ಕುಂದ್ರಿಸಿದ್ರು.
ಬಸಯ್ಯನಿಗೆ ಬಾಳ ಅವಮಾನ ಆದಾಂಗ ಆತು. ಸಿದ್ದಪ್ಪನ ಮ್ಯಾಲ ಸಿಟ್ಟು ಉಕ್ಕಿಬಂತು. ಸಿದ್ದಗ ಪೋನ ಹಚ್ಚಿದವ್ನ ನೆಡೆದಿದ್ದೆಲ್ಲಾ ಹೇಳಿ ಒಂದು ಎರಡು ಅನ್ನದೆ ಸುಮ್ಮನೆ ಪೋನ ಕಟ್ಟ ಮಾಡಿದ. “ಜಾತಿ ಅಂತ ಜ್ಯಾತಿ ಬೋಳಿಮಕ್ಕಳಿಗೆ ಒಂದ ಜೀವ ಸಾಯಾಕ ಹತೈತಿ ಹೆಂಗ ಉಳಸ್ಕೊಬೇಕು ಅನ್ನು ಕಬರಿಲ್ಲ, ಊರಾಗ ಮತ್ತ ಇವ್ರ ದೊಡ್ಡ ಹಿರತನ ಮಾಡತಾರ” ಎಂದು ತನಗೆ ಬಡೆದ ಈರಯ್ಯ ಅಜ್ಜನ ಮೇಲೆ ಬಂದ ಸಿಟ್ಟನ್ನು ಸಿದ್ದನ ಮೇಲೆ ಹಾಕಿ ಬೈದು ತೀರಿಸಿಕೊಂಡು ಬಸಯ್ಯ ಒಟಗುಡುತ್ತ ಉರುಉರು ಬಿಸಲಾಗ ಮನೆಸೇರಿದ.
ಬಸಯ್ಯನ ಮಾತ ಕೇಳೂದ ತಡಾ ಸಿದ್ದಗ ಹೊಟ್ಟ್ಯಾಗ ಕಾರಾಕಲಸಿದಂಗ ಆತು. ಹಿಂಗಾದ್ರ ಶಿವಯ್ಯನ ಕಳಕೊಳ್ಳುದ ನಿಕ್ಕಿನ. ನಾ ಊರಿಗೆ ಹೋಗಲಾರ್ದ ನಿರ್ವಾ ಇಲ್ಲ ಅಂದಕೊಂಡ. ಅವನ ಜೋಡಿ ಬಂದಿದ್ದ ಪಕಿರಪ್ಪಗ “ನೀ ದವಾಖಾನಿಗೆ ನಡಿ ನಾ ಊರ ಮಟಾ ಹೋಗಿ ಬರ್ತೀನಿ” ಎಂದು ಹೇಳಿದವ್ನ ‘ಬಂವ್’ ಅಂತ ಬಾಯ್ಕ ಓಡಸ್ಕೊಂಡ ಪರಸ್ಯಾನ ಮನಿ ಮುಂದ ಬಂದ ನಿಂತ. ಹರಿದ ಲುಂಗಿಗೆ ಸೂಜಿ ದಾರದ ಕಸರತ್ತು ಮಾಡುತ್ತ ಕುಳಿತ ಪರಸಾ ಬೈಕ ಶಬ್ದಾ ಕೇಳಿ ಯಾರ ಬಂದ್ರು ಎಂದು ಹರಿದಲುಂಗಿ ಕೈಯಲ್ಲೆತ್ತಿಕೊಂಡು ಹೊರಗ ಬಂದ.
“ಬರ್ರೀ ಸಿದ್ದಪ್ಪ ದನಿ, ಬಡವರ ಮನಿಗೆ ಭಾಗ್ಯನ ಬಂದಾಂಗ ಆತಲ”್ಲ ಎಂದ.
“ನನಗ ಬಾಳ ವಿವರಿಸಿ ಮಾತಾಡಕಾ ಟೈಮಿಲ್ಲ, ಬಡವನ ಹತ್ರ ದೈನಾಸ ದಿಂದ ಭಾಗ್ಯಾ ಕೇಳಾಕ ಬಂದಿನಿ, ನೀ ಇಲ್ಲ ಅನಬಾರ್ದು”
“ಏನ್, ಮಾತ ಅಂತ ಆಡತೀರಿ ನಿಂವ”
ಕರೇನ, ಪರಸೂ ನನ್ನ ಗೆಳೆಯಾ ಶಿವಯ್ಯ ಸಾವು ಬದುಕಿನ ಮದ್ಯ ಹೊರಾಡಾಕ ಹತ್ಯಾನ ಅದಕ ಅಂವ ಈಗ ಉಳಿಬೇಕಾದ್ರ ‘ಓ’ ಪಾಜಟಿವ್ ರಗತ ಅರ್ಜೆಂಟಾಗಿ ಬೇಕಾಗೇತಿ, ಅದಕ ನಿನ್ನ ಹುಡಕೊಂದ ಬಂದಿನಿ,
“ಸಿದ್ದಪ್ಪ ಸಾವಕಾರ.. ನಾ ಕೊಡಾಕೇನ ಹಿಂದಮುಂದ ನೋಡಂಗಿಲ್ಲ, ಆದ್ರ.. ನಮ್ಮದ ನೆಡಿಬೇಕಲ್ಲ”
“ನೇಡಸಿದ್ರ ಎಲ್ಲಾ ನೆಡಿತಾವ, ಬಿಟ್ಟರ ಎಲ್ಲಾ ಬಿಡತಾವ, ರಕ್ತದಾಗೂ ಜಾತಿ ಧರ್ಮಾ ಬರದಾನೇನ ಆ ದೇವ್ರ, ಈ ಮಳ್ಳ ಸೂಳಿಮಕ್ಕಳ ಏನಾರ ಒಂದ ಮಾಡಕೊಂಡ ಕುಂತಾವ, ನೀ ಲಗೂನ ತಯಾರ ಆಗ ಯಾಂವ ಏನ್ ಅಂತಾನ ನಾನೂ ಒಂದ ಕೈ ನೋಡೆ ಬಿಡ್ತಿನಿ” ಎಂದು ಸಿದ್ದ ಗುಡಗಿದಾಗ ಸುತ್ತಮುತ್ತ ಇದ್ದ ಮಂದಿ ಸುಮ್ಮನ ಬಾಯ ಮುಚಗೊಂದ ತಮ್ಮ ತಮ್ಮ ಹ್ವಾರೇದ ಕಡಗೆ ಜಾರಿಕೊಂಡರು.
ಅಷ್ಟೊತ್ತಿಗಾಗ್ಲೆ ಯಾರೋ ಈರಯ್ಯಅಜ್ಜನ ಕಿವಿಯಾಗ ಪಟಕ್ಕನ ಸುದ್ದಿ ಊದೇ ಬಿಟ್ಟಿದ್ರು. ಸಿದ್ದ ಎಡವಟ್ಟ ಹುಡಗ ಅಂತ ಇಡೀ ಊರೇ ಮಾತಾಡೂದ ಈರಯ್ಯಗ ಗೊತ್ತಿತ್ತು. ಸಿದ್ದ ಕೈ ಹಚ್ಚಿದ ಕೆಲಸ ಆಗೂ ಮಟಾ ಬಿಡು ಮನಸ್ಯಾ ಅಲ್ಲ ಅಂತ ಊರ ಜನರು ದಿನಾ ಆಡುವ ಮಾತಾಗಿತ್ತು. ಕಿವುಡ ಸಿದ್ದನ ತೊಡದು ಹೆದರಿಸುವ ಧೈರ್ಯ ತನಗೊಬ್ಬನಿಗೆ ನೀಗೂದಿಲ್ಲ ಎಂದು ಈರಯ್ಯ ಅಜ್ಜ ಅರಿತುಕೊಂಡಿದ್ದ. ನೀಲವ್ವ ದಾಸರ ರಕ್ತಾ ಹಾಕಸಿಕೊಂಡ ಮಗನ ಉಳಸಕೊಂಡ, ನಮ್ಮ ಜಾತಿ ಕೆಡಿಸ್ಯಾಳ. ಅಕೀ ಇನ್ನ ಮ್ಯಾಲ ನಮ್ಮ ಕುಲದಾಗ ಇರೂದ ಬ್ಯಾಡ, ಕುಲದಿಂದ ಅಕೀನ ಹೊರಗ ಇಡ್ತಿನಿ ಎಂದು ಸಿಂಹ ಘರ್ಜನೆಯಲ್ಲಿ ಈರಯ್ಯ ಅಜ್ಜ ಗುಡಗಿದಾಗ ಎಲ್ಲ ಐಗೋಳ ಮಂದಿ ಗೋನು ಹಾಕಿದರು.
ಗಾಳಿ ವೇಗದಲ್ಲಿ ಬೈಕ ಓಡಿಸಿಕೊಂಡು ಹೋಗಿ ಪರಸ್ಯಾನ ದೇಹದಿಂದ ಒಂದು ಬಾಟಲಿ ರಕ್ತ ತಗೊಂಡ ಕಿವುಡ ಸಿದ್ದ ದವಾಖಾನಿಯತ್ತ ನಡೆದ.
ನೀಲವ್ವ ಹನಮಪ್ಪಾ, ಈರಣ್ಣ, ದ್ಯಾಮವ್ವ, ದುರಗವ್ವ, ಅಂತ ಎಲ್ಲ ದೇವರನ್ನು ನೆನಿಸಿಕೊಳ್ಳುತ್ತ ದವಾಖಾನೆಯ ಒಂದು ಮೂಲೆಯಲ್ಲಿ ಕುಳಿತು ಅಳುತ್ತಿದ್ದಳು. ಸಿದ್ದ ರಕ್ತದ ಬಾಟಲಿ ಹಿಡಿದು ಕೊಂಡು ಬರುವುದನ್ನು ನೋಡಿ “ದೇವ್ರ ನಮ್ಮ ಮ್ಯಾಲ ಅದಾನ” ಎಂದು ದವಾಖಾನೆಯಲ್ಲಿ ಏಕಾಂಗಿಯಾಗಿ ಕುಳಿತಿದ್ದ ಗಣಪತಿ ಮೋತಿಗೆ ಕೈ ಮುಗಿದು, ಕಣ್ಣಂಚಲ್ಲಿ ಬಂದ ಕಣ್ಣೀರು ಮುಂಗೈಯಿಂದ ತೀಡಿಕೊಂಡಳು.
ಕಿವುಡ ಸಿದ್ದ ತಂದು ಕೊಟ್ಟ ರಕ್ತವನ್ನು ಡಾಕ್ಟರ್ ಹಚ್ಚಿದ ಮೂರುತಾಸಾದ ಮೇಲೆ ಶಿವಯ್ಯ ಮಿಸಗ್ಯಾಡತೊಡಗಿದ. “ಅಂವನ ಹನಿಬರಾ ಗಟ್ಟಿತ್ತು ಅದಕ ನಿನ್ನ ಮಗಾ ಉಳದ” ಎಂದು ಕಂಚಿ ಡಾಕ್ಟರ ಹೇಳೂದ ತಡಾ ನೀಲವ್ಗ ಮತ್ತೊಂದ ಮಗಗ ಜನ್ಮಾ ಕೊಟ್ಟಸ್ಟು ಸಂತೋಷವಾಗಿತ್ತು.
*****
ಜಾತಿ ,ಕುಲ ,ಧರ್ಮ ಯಾರ್ಗು ದೇವರು ಠಸ್ಸೆ ವತ್ತಿ ಕಳಿಸಿರೊದಿಲ್ಲ ಮನುಷ್ಯರೆಲ್ಲ ಒಂದೇ… ಜಾತಿ ಓಳಗ ಏನೈತ್ರಿ ಸುಢಗಾಡ ಓಳ್ಳೆ ತಿರಳು ಇರುವ ಕಥೆ….
Dhanyavadagalu sir