ಹಲ ದಿನಗಳ ಹಿಂದೆ ಪ್ರಸಿದ್ಧ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಒಂದು ಲೇಖನ ಕಣ್ಸೆಳೆದಿತ್ತು. ಅದು ಪುರಂದರದಾಸರನ್ನು ಕರ್ಣಾಟಕ ಸಂಗೀತದ ಪಿತಾಮಹನೆಂದು ಕರೆಯುವುದರ ವಿರುದ್ಧ ಎತ್ತಿದ ದನಿಯಾಗಿತ್ತು. ಅಲ್ಲಿ ಸಂಗೀತಕ್ಕವರ ಕೊಡುಗೆಯ ಪ್ರಮಾಣವಾಗಲಿ, ಕರ್ಣಾಟಕ ಸಂಗೀತದ ಆ ತಲೆಮಾರುಗಳಿಂದ ಈ ತಲೆಮಾರಿನವರೆಗಿನ ಸಂವಹನದಲ್ಲಿ ಅವರ ಕೆಲಸದ ಪಾತ್ರವೇನು ಎಂಬುದಾಗಲಿ ಲೇಖಕರಿಗೆ ಪ್ರಸ್ತುತವೆನಿಸದೆ, ಪುರಂದರರು ಕೀಳ್ಜಾತಿಯೆನುವ ವ್ಯವಸ್ಥೆಯ ಸದಸ್ಯರಾಗಿರದೆ ಇದ್ದು, ಒಂದು ಸಂಸ್ಕೃತಿಯ ಪಿತಾಮಹನೆನಿಸಿಕೊಂಡದ್ದು ಅವರನ್ನು ಕಾಡಿದಂತಿತ್ತು. ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾದ ಪುರಂದರರಿಗೊಲಿಯದೆ ಕೃಷ್ಣ ಕನಕನಿಗೊಲಿದಿದ್ದ ಎಂಬ ಪದಗಳೇಕೋ ಬಹಳ ಕಾಡುತ್ತಲೇ ಸಾಗಿದ್ದವು.
ಕಪ್ಪು ಕನ್ನಡಕದೊಳಗಿಂದ ಎಂಥಹ ಶುಭ್ರ ಬೆಳಕನ್ನು ನೋಡಿದರೂ, ಅದು ಮಸುಕಾಗಿಯೇ ಕಾಣುವುದು. ಬಿಸಿಲಿನಿಂದ ಪಾರಾಗಲು ಕಪ್ಪು ಕನ್ನಡಕ ಹಾಕುವುದೇನೋ ಸರಿ, ಆದರೆ ಬೆಳಕನ್ನರಸಿ ಹೋಗುವ ಅಥವಾ ಕತ್ತಲೆಯಿಂದ ಪಾರಾಗುವ ದಾರಿ ಹುಡುಕುವಾಗ ಕಪ್ಪು ಕನ್ನಡಕ ಬೇಕೇ?
ನಮ್ಮ ಕನ್ನಡಸಾಹಿತ್ಯದ ರಚನೆಗಳಲ್ಲಿ ಕತ್ತಲಿಂದ ಪಾರಾಗಿಸಿ ಬೆಳಕಿನತ್ತ ಜನಸಾಮಾನ್ಯನನ್ನು ಕೊಂಡೊಯ್ಯುವ ಶತಪ್ರಯತ್ನದಲ್ಲಿ ತೊಡಗಿದ ಹಲವಾರು ಮಹಾನ್ ಚಿಂತನೆಗಳಿವೆ. ಅವುಗಳಲ್ಲೊಂದರ ಫಲಶ್ರುತಿಯೇ ದಾಸಸಾಹಿತ್ಯ ಪರಂಪರೆ. ಅಲ್ಲಿ ಅದು ಪುರಂದರದಾಸರಿರಬಹುದು, ಕನಕದಾಸರಿರಬಹುದು ಅಥವಾ ರಂಗವಿಥಲದಾಸರು, ವಿಜಯದಾಸರು , ವಾದಿರಾಜರು…. ಹೀಗೆ ಪ್ರತಿಯೊಬ್ಬರೂ ಪಕ್ವವೈರಾಗ್ಯವನ್ನೂ ಮತ್ತದರ ಜೊತೆ ನಮ್ಮನ್ನು ಮೀರಿದ, ನಮ್ಮನ್ನು ಹೆಜ್ಜೆಹೆಜ್ಜೆಗೂ ಹಿಡಿದೆತ್ತಿ ಕಾಯುವ ಮಹಾನ್ ಶಕ್ತಿಯೆಡೆಗೆ ಶರಣಾಗತಿಯನ್ನೂ ಸಾಧಿಸುವುದರ ಮೂಲಕ ನಮ್ಮೊಳಗಿನ ಹಾಗೂ ಆಮೇಲೆ ಹೊರಗಿನ ಕೊಳೆ ತೊಳೆಯುವ ಜಾಡಿನಲ್ಲಿ ಸಾಗಿ ಎಂದು ಭೋಧಿಸಿದವರು.
ತಮ್ಮ ರಚನೆಗಳ ಸಂಖ್ಯೆಯ ಅಗಾಧತೆ ಹಾಗೂ ಜನಸಾಮಾನ್ಯನನ್ನು ಪ್ರಭಾವಿಸಬಹುದಾದ ಅವುಗಳ ಸರಳತೆಯಿಂದ ಹರಿದಾಸರ ನಡುವೆ ಪುರಂದರದಾಸರು ಮತ್ತು ಕನಕದಾಸರು ಹೆಚ್ಚು ಪ್ರಸಿಧ್ಧರು. ಪುರಂದರರದು ಸಾತ್ವಿಕ ಸಿಟ್ಟಿನ, ಹುಸಿಕೋಪದ ದನಿಯಾದರೆ, ಕನಕರದು ಬಡಿದೆಬ್ಬಿಸುವ ದನಿ. ಆದರೆ ಆ ದನಿ ಸಾರಿದ ಧ್ವನಿಯ ಸಾರಾಂಶ ಮಾತ್ರ ಒಂದೇ, ಅದು ಬಹುಶಃ ಹೀಗಿದೆ – ಜೀವನವನ್ನು ಸರಳವಾಗಿಸಿ ಬಾಳಿ, ಬೇಡದ ಚಿಂತನೆಗಳಿಂದ ಅದ ಕಠಿಣವಾಗಿಸಿದರೆ ಪರಮಾನಂದದಿಂದ ವಿಮುಖರಾಗುವಿರಿ, ಸಲ್ಲದ ವ್ಯಾಪಾರಗಳಲ್ಲಿ ಕಳೆದರೆ ಮಾನವಜನ್ಮ ಮತ್ತೆ ಸಿಗದೇ ಹೋಗಬಹುದು.
ಆದರೆ, ಇತ್ತೀಚೆಗೆ ಇವರಿಬ್ಬರ ಹೆಸರಿನಲ್ಲಿ ಜಾತ್ಯಾಧಾರಿತ ದೃಷ್ಟಿಯ ಮಾತುಕತೆ, ಹಾಗೂ ಆ ಹಿನ್ನೆಲೆಯಲ್ಲಿ ಅವರ ಮೂಲೋದ್ದೇಶವನ್ನು ಬದಿಗಿರಿಸಿ, ತಮ್ಮ ಮನದ ನಿಲುವನ್ನು ಅವರ ವ್ಯಕ್ತಿತ್ವಗಳಿಗೆ ಅರೋಪಿಸಿ ಒಂದು ರೀತಿಯ ಪೈಶಾಚಿಕ ಆನಂದ ಹೊಂದುತ್ತಿರುವ ಒಂದು ವರ್ಗ ಸೃಷ್ಟಿಯಾಗಿದೆ. ಕನಕ-ಪುರಂದರರಿಗೆ ಪರಸ್ಪರ ಸ್ಪರ್ಧೆಯ ಮನೋಭಾವವಾಗಲಿ, ಭಿನ್ನಾಭಿಪ್ರಾಯವಾಗಲಿ ಒಂದು ಕ್ಷಣವೂ ಭಾಧಿಸಿದ್ದಿರಲಾರದು. ಯಾಕೆಂದರೆ ಅವರು ಇಂಥಹ ಕ್ಷುಲ್ಲಕತೆಗಳಿಗಿಂತ ತುಂಬಾ ಎತ್ತರದಲ್ಲಿದ್ದವರು. ಅಂಥಹದ್ದರಲ್ಲಿ ಕನಕದಾಸರ ಹಾಡುಗಳಿಗೆ ಪುರಂದರದಾಸರ ಕರ್ತೃತ್ವವನ್ನು ಆರೋಪಿಸಿದ್ದಾರೆ ಎಂಬ ಮಾತು ಅಲ್ಲಿ ಉಲ್ಲೇಖಿತವಾಗಿತ್ತು. ಯಾರು ಹಾಗೆ ಮಾಡಿದವರು ಎಂಬುದೊಂದು ಪ್ರಶ್ನೆ. ರೇಲ್ವೇಸ್ಟೇಶನ್ ನಲ್ಲೂ, ಫುಟ್ ಪಾತ್ ನಲ್ಲೂ ಕನಕ-ಪುರಂದರರ ಹಾಡಿನ ಪುಸ್ತಕಗಳು ಈಗ ಮಾರಾಟಕ್ಕೆ ಸಿಗುತ್ತಿವೆ. ವಿಷಯಸೂಕ್ಷ್ಮತೆಯ ಅರಿವಿಲ್ಲದವರ್ಯಾರೋ ಮುದ್ರಿಸಿದ ಈ ಪುಸ್ತಕಗಳಲ್ಲೇನಿದೆಯೋ ಅದು ಅಂಥ ಮಹಾನ್ ಚೇತನಗಳ ಬಧ್ಧತೆಯನ್ನು ಪ್ರಶ್ನಿಸುವ ಮಾತಾಗಬಾರದು, ಅದೂ ಸುಸಂಸ್ಕೃತವರ್ಗದೊಳಗಂತೂ ಖಂಡಿತಾ ಕೂಡದು.
ಇನ್ನು ಕೃಷ್ಣ ಪುರಂದರರಿಗೊಲಿಯಲಿಲ್ಲ ಅಥವಾ ಕನಕರಿಗೊಲಿದ ಎಂಬ ಮಾತು. ಈ ಎರಡರಲ್ಲೊಂದನ್ನಾದರೂ ಕಂಡವರುಂಟೆ? ಕನಕದಾಸರು ಕಿಂಡಿಯ ಮೂಲಕ ಮತ್ತು ಪುರಂದರರು ತಮ್ಮ ಪತ್ನಿಯ ಮೂಗುತಿಯ ಮೂಲಕ ತಮ್ಮ ದೈವದ ಸಾಕ್ಷಾತ್ಕಾರವನ್ನು ಕಂಡುಕೊಂಡರೆಂಬ ಈ ಕತೆಗಳಲ್ಲಿ ನಾವು ಅವರ ಮಹಾತ್ಮೆಯನ್ನು ಸಂಭ್ರಮಿಸುತ್ತೇವೆ. ಎರಡೂ ಕತೆಗಳೇ. ಕನಕನ ಕಿಂಡಿ ಆ ಘಟನೆಗೆ ಪುರಾವೆಯೆಂಬಂತೆ ಅಲ್ಲಿರುವುದು ಮತ್ತದನ್ನು ಪುರಾವೆಯೆಂದು ಪರಿಗಣಿಸಿರುವುದು- ಈ ಮಾತ್ರಕ್ಕೇ ಕನಕರದು ಮಾತ್ರ ಸತ್ಯಕತೆ, ಪುರಂದರರದು ಕಟ್ಟುಕತೆ ಎನ್ನಲಾದೀತೆ? ಇನ್ನು ಕೃಷ್ಣ ಅವರನ್ನು ಬಿಟ್ಟು ಇವರಿಗೊಲಿದದ್ದೇ ನಿಜವಾಗಿದ್ದರೆ ಅದು ಅವರವರ ಪ್ರಾಪ್ತಿ, ಅಥವಾ ದೈವದ ನಿರ್ಧಾರ. ಪುರಂದರರಿಗೆ ದೈವ ಒಲಿಯಲಿಲ್ಲ ಅನ್ನುವವವರು ಹಾಗಾಗಲು ಒಂದೇ ಒಂದು ಕಾರಣವನ್ನಾದರೂ ದೃಢವಾಗಿ ಹೇಳಬಲ್ಲರಾ? ಇಷ್ಟಕ್ಕೂ ದೈವಕ್ಕೆ ಮೀಸಲಾತಿಯನ್ನನುಸರಿಸಲು ವೋಟ್ ಬ್ಯಾಂಕ್ ನ ಚಿಂತೆಯಂತೂ ಇಲ್ಲವಲ್ಲಾ! ಪುರಂದರರಿಗೆ ದೈವವೊಲಿಯದೆ ಅವರು ಆ ಮಹಾನ್ ಎತ್ತರಕ್ಕೇರಿದರಾ? ಕತ್ತೆತ್ತಿ ಆ ಎತ್ತರವನ್ನು ನಿರುಕಿಸುವುದೂ ಅಸಾಧ್ಯವೆನಿಸುವ ಯೋಗ್ಯತೆಯ ಹುಲುಜೀವಿಗಳು ಅಂಥ ಮಹಾನುಭಾವರ ನಾಮಗಳ ಸ್ವರೂಪವನ್ನೂ, ಅವರ ವೇಷ ಭೂಷಗಳನ್ನೂ, ಅವರ ಯೋಗ್ಯತೆಯನ್ನೂ ಹರಟೆಗಿಂತಲೂ ಹಗುರವಾದ ಮಾತುಕತೆಯಲ್ಲಿ ಬಳಸಿಕೊಳ್ಳುತ್ತಿರುವುದು ಒಂದು ದುರಂತವೇ ಸರಿ. ಇದು ರಾಮಾಯಣ- ಮಹಾಭಾರತಗಳ ಪಾರಮ್ಯದ ಕುರಿತು ಚರ್ಚೆ ಮಾಡುವಂಥಹ ಮೂರ್ಖತನದ ಮಾತೇ ಹೌದು.
ನಮ್ಮನಾಡಿನ ಎಲ್ಲ ಆಗುಹೋಗುಗಳನ್ನೂ ಜಾತಿ ಎಂಬ ಕಪ್ಪುಕನ್ನಡಕದ ಮೂಲಕವೇ ವೀಕ್ಷಿಸುವ ಬೆಳವಣಿಗೆಯೊಂದು ಈಗೀಗ ನಿಖರವಾಗಿ ಎಲ್ಲೆಲ್ಲೂ ಕಾಣುತ್ತಿದೆ, ಇದು ಖಂಡಿತಾ ಆರೋಗ್ಯಕರವಲ್ಲ. ಜಾತ್ಯಾತೀತವೆಂದು ನಾವು ಕರೆದುಕೊಳ್ಳುವ ಈ ನಾಡಿನಲ್ಲಿ ಬಂಡಾಯದ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಾ, ಆ ಅರೆಬೆಂದ ಬೇಳೆಯಿಂದಲೇ ಸಾರು ಮಾಡಿ ಉಣಿಸುವ ಮನೋಭಾವದ ಹಲವರು ಸುಸಂಸ್ಕೃತವರ್ಗವೆನಿಸಿಕೊಳ್ಳುವ ಪರಿಧಿಯಲ್ಲೇ ಕಾಣಸಿಗುತ್ತಿರುವುದು ಶೋಚನೀಯ.
ಇಂದು ನಮ್ಮ ಕಣ್ಣ ಮುಂದಾಗುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಚಿಂತಿಸಿ, ಪರ್ಯಾಯವನ್ನು ಆಲೋಚಿಸುವುದನ್ನು ಬಿಟ್ಟು, ಅಂದೆಂದೋ ನಡೆಯಿತು ಎನ್ನಲಾಗುವ ಘಟನೆಗಳ ನೆನಪಿನಲ್ಲಿ, ಕಾಲದ ಪ್ರವಹಿಸುವಿಕೆಯಲ್ಲಿ ಬದಲಾದ ಸನ್ನಿವೇಶಗಳಡಿ ಸ್ವಾಭಾವಿಕವಾಗಿ ತಣ್ಣಗಾಗುತ್ತಿದ್ದ ಆ ಅಸಮಾಧಾನದ ಕಿಡಿಯನ್ನು ಸ್ವಾನುಕಂಪದ ಗಾಳಿಯೂದಿ ಬಲಾತ್ಕಾರವಾಗಿ ದ್ವೇಷದ ದಳ್ಳುರಿಯಾಗಿಸಿ, ಈಗೆದುರಾದವರೆಲ್ಲರನ್ನೂ ಅದರಲ್ಲಿ ದಹಿಸುವ ಕುರುಡು ರೋಷದಿಂದ ಅಥವಾ ನೇತ್ಯಾತ್ಮಕ ಧೋರಣೆಯಿಂದ ಕಹಿಯನ್ನಷ್ಟೇ ಹುಟ್ಟುಹಾಕಿ ಅದನ್ನೇ ಪೋಷಿಸಿದಂತಾಗುವುದೇ ಹೊರತು ಸುಧಾರಣೆಯತ್ತ ಸಾಗಲಾಗದು.
ಗೊಡ್ಡು ಸಂಪ್ರದಾಯಸ್ಥ ಮನೋಭಾವ ಮೇಲ್ಜಾತಿಯೆನುವ ವ್ಯವಸ್ಥೆಯಡಿಯಲ್ಲಿದ್ದವರಲ್ಲಿತ್ತು-ಒಪ್ಪುವ ಮಾತೇ, ಅದು ಇಂದಿಗೂ ಇದೆ- ಇದನ್ನೂ ಅಲ್ಲಗಳೆಯಲಾಗದು. ಅರ್ಥಹೀನ ಆಚರಣೆಗಳ ಮೊತ್ತವೆನಿಸಿದ ಜಾತಿಪದ್ಧತಿಯ ಕೆಲ ನಡವಳಿಕೆಗಳು ಅಷ್ಟೊಂದು ಮೂಲಸ್ವರೂಪದಲ್ಲಲ್ಲದಿದ್ದರೂ ಪಳೆಯುಳಿಕೆಗಳಾಗಿ ಇಂದಿಗೂ ಅಲ್ಲಲ್ಲಿ ಕಾಣಸಿಗುತ್ತವೆ. ಆದರೆ ಇದೇ ಅಚರಣೆಗಳ ಇನ್ನೊಂದು ಮಗ್ಗುಲಿನ ಅಂಗವಾದ ಕೆಳಜಾತಿಯೆನುವ ವ್ಯವಸ್ಥೆಯಡಿಯಲ್ಲಿರುವವರ ನಡವಳಿಕೆಗಳಲ್ಲಿ ಆ ಆಚರಣೆಗಳಿಗೆ ಪೂರಕವಾದ ನಿಲುವೇ ಇತ್ತು, ಇಂದಿಗೂ ಅದು ಅಲ್ಲಲ್ಲಿ ಕಾಣಸಿಗುತ್ತದೆ. ಉದಾಹರಣೆಗೆ ಪಟ್ಟಣಗಳಲ್ಲಿ ಸಾಮಾನ್ಯ ಅಂಥ ಪದ್ಧತಿಗಳಿಂದ ಮುಕ್ತವಾಗಿರುವ ಜೀವನಶೈಲಿಯಲ್ಲಿ ಮನೆಯೊಳಗೆ ಕರೆದರೂ ಹಳ್ಳಿಯಿಂದ ಬಂದವರಾಗಿದ್ದರೆ ಅವರು ಇವರ ಮನೆಹೊಸಿಲು ದಾಟುವುದಿಲ್ಲ, ತಾವು ತಿಂದ ತಟ್ಟೆಲೋಟಗಳನ್ನು ತಾವೇ ತೊಳೆದಿಡುತ್ತಾರೆ.
ಇದು ಅವರ ಮೇಲೆ ಮೇಲ್ಜಾತಿಯವರೆನಿಸುವವರಿಂದ ಆರೋಪವಾದ ಬಲಾತ್ಕಾರದ ಶಿಸ್ತಿನ ಅನುಶಾಸನಗಳು ಎಂದು ಹೇಳಲಾಗುತ್ತದೆಯಾದರೂ, ಅವರ ಅಂತರಾಳದಲ್ಲಿ ತಾವೆಸಗುವ ಅಪಚಾರವೆನ್ನಲಾಗುವ ಈ ಕೆಲಸಗಳು ತಮ್ಮ ಭವಿಷ್ಯಕ್ಕೆ ಮುಳುವಾಗುವುದೆಂಬ ಅನುಭವವೇದ್ಯವೆಂದು ಅವರೇ ಹೇಳಿಕೊಳ್ಳುವ ಮೂಢನಂಬಿಕೆ ಮತ್ತು ಹಾಗಾಗಬಾರದೆಂಬ ಆಶಯವೇ ಅವರನ್ನು ಹಾಗೆ ವರ್ತಿಸುವಂತೆ ಮಾಡುವುದೇ ಹೊರತು, ಇನ್ನ್ಯಾವ ಬಲಾತ್ಕಾರದ ಹೇರುವಿಕೆಯೂ ಅಲ್ಲ. ಈ ಮತೀಯವಾದವನ್ನು ರಾಜಕೀಯ ದಾಳವಾಗಿ ಉಪಯೋಗಿಸಿಕೊಳ್ಳುವವರು ಜಾಣ್ಮೆಯಿಂದ ಸಣ್ಣ ಕಿಡಿಯಾಗಿರುವ ಆಲೋಚನೆಯೊಂದನ್ನು ಊದಿಊದಿ ಜ್ವಾಲೆಯಾಗಿಸುತ್ತಾರೆ. ಇಂದಿನ ಜನರು ಸುಶಿಕ್ಷಿತರಾಗಿದ್ದರೂ, ಅವರಲ್ಲಿ ಸೂಕ್ಷ್ಮ ಮನೋಭಾವದವರಾದ ಅನೇಕರು ಸ್ವಾನುಕಂಪದ ಅಲೆಗಳಲ್ಲಿ ತೇಲುತ್ತಾ, ಈ ಜ್ವಾಲೆಯ ಅಡಿಯಾಳುಗಳಾಗಿ, ಸಮಾಜಕ್ಕೆ ಹಾನಿಯೊದಗಿಸುವುದಲ್ಲದೆ, ಅರಿಯದೆ ತಾವೂ ಉರಿದುಹೋಗುತ್ತಿರುತ್ತಾರೆ.
ಇಷ್ಟಕ್ಕೂ ಈ ಅಧಾರರಹಿತ ಆಚರಣೆಗಳು ವರ್ಣಾಧಾರಿತ ಚಿಂತನೆ ಅಥವಾ ವರ್ಣಭೇಧದ ಪರಿಧಿಯಲ್ಲಷ್ಟೆ ಅಲ್ಲ, ಒಂದೇ ಜಾತಿವ್ಯವಸ್ಥೆಯ ಒಳಗೊಳಗೂ ಇವೆ. ಉದಾಹರಣೆಗೆ ಮೇಲ್ಜಾತಿಯೆನುವ ವ್ಯವಸ್ಥೆಯಡಿ ಸ್ತ್ರೀಯರನ್ನು ಅಧ್ಯಾತ್ಮಿಕವಾಗಿ ಉನ್ನತಮಟ್ಟದ್ದೆನ್ನಲಾಗುವ ಎಲ್ಲಾ ಆಚರಣೆಗಳಲ್ಲಿ ದೂರವಿಟ್ಟಿರುವುದು- ದೇವರ ಮನೆಯೆಲ್ಲ ಒರೆಸಿ ತೊಳೆದು ಶುಧ್ಧವಾಗಿಡುವವಳು, ಪೀಠವಿಡುವ ಕಟ್ಟೆಯನ್ನು ಮುಟ್ಟುವಂತಿಲ್ಲ. ಪೂಜೆಯ ಪರಿಕರಗಳನ್ನೊದಗಿಸುವವಳು, ಪೂಜೆಯ ಮಂತ್ರಗಳು ಅವಳ ಕಿವಿಗೆ ಬೀಳುವಂತಿಲ್ಲ. ತಿಂಗಳ ರಜೆಯ ಕಾಲ ಅವಳ ನೆರಳೂ ಗಂಡಸರನ್ನು ತಾಗುವಂತಿಲ್ಲ, ವಿಧವೆಯರು ಯಾವುದೇ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಅಷ್ಟೇ ಏಕೆ, ಅವಳ ಹುಟ್ಟೇ ಒಂದು ಅಸಮಾಧಾನದ ವಿಷಯವೆನುವಂತೆ, ಅವಳ ಅಸ್ತಿತ್ವವೇ ಒಂದು ಹೊರೆಯೆಂಬಂತೆ, ಅವಳು ಜನ್ಮಹೊಂದುವ ಮೊದಲೇ ಸಾಯಿಸುವ….ಹೀಗೇ ಇನ್ನೂ ಪ್ರಬಲವಾದ ತಾರತಮ್ಯದ ಕ್ರೂರವೇ ಅನ್ನಿಸುವ ಅನೇಕ ನಡವಳಿಕೆಗಳು ಅಂದೂ ಹೆಣ್ಣುಜನಾಂಗವನ್ನು ಕಾಡಿದ್ದವು, ಇಂದೂ ಅದು ತುಸುಮಟ್ಟಿಗೆ ಹಾಗೆಯೇ ನಡೆಯುತ್ತಿದೆ. ಅದರ ವಿರುದ್ಧವೂ ಮಾತು ಕೇಳಿ ಬರುತ್ತಿದೆ, ಲಿಂಗಾಧಾರಿತ ಶೋಷಣೆಯ ವಿರುದ್ಧ ಚಳುವಳಿಗಳೂ, ಅದರ ಪರಿಹರಿಸುವಿಕೆಗಾಗಿ ಹಲಹೆಜ್ಜೆಗಳೂ ಇಡಲ್ಪಟ್ಟಿವೆ. ಆದರಿಲ್ಲಿ ವರ್ಣಾಧಾರಿತ ಶೋಷಣೆಯ ವಿರುದ್ಧದ ಚಿಂತನೆಯಲ್ಲಿನ ತೀವ್ರತೆ ಕಾಣಿಸುವುದಿಲ್ಲ.
ಇನ್ನು ಇಂದು ಜಾತ್ಯಾಧಾರಿತ ನಡವಳಿಕೆಯ ದೆಸೆಯಿಂದ ಮನಸಿಗೆ ನೋವಾಗಿ ಸಾಯುತ್ತಿರುವವರ ಸಂಖ್ಯೆ, ಹೊಟ್ಟೆಗಿಲ್ಲದೆ ಸಾಯುತ್ತಿರುವವರ ಸಂಖ್ಯೆಯೊಂದಿಗೆ ಖಂಡಿತಾ ತುಲನಾತ್ಮಕವಾಗಿಲ್ಲ. ಅಂದರೆ, ನಾವೀಗ ವರ್ಣಾತ್ಮಕ ಶೋಷಣೆಯ ಬಗ್ಗೆಗಿಂತ ಹೆಚ್ಚು ಯೋಚಿಸಬೇಕಾಗಿರುವುದು- ವರ್ಗಾತ್ಮಕ ಶೋಷಣೆಯ ಕುರಿತಾಗಿ. ಆರ್ಥಿಕ ಅಸಮತೋಲನವು ಕಳೆಗಿಡದಂತೆ ಹುಲುಸಾಗಿ ಬೆಳೆದು ಸಮಾಜದ ಸತ್ವಪೂರ್ಣತೆಯನ್ನು ಪೂರ್ತಿ ಹಾಳುಗೆಡವುವ ಮುನ್ನ ಸಮಾಜದ ಈ ಸ್ತರದ ವಿದ್ಯಾವಂತವರ್ಗ ಎಚ್ಚೆತ್ತುಕೊಳಬೇಕಾಗಿದೆ. ಅದೆಲ್ಲೋ ಅಲ್ಲಲ್ಲಿ ಕಂಡುಬರುವ ಅಥವಾ ಹಿಂದೆಂದೋ ಇದ್ದ ಜಾತ್ಯಾಧಾರಿತ ಶೋಷಣೆಯ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚು ಇತ್ತಕಡೆ ಗಮನ ಮೀಸಲಿಟ್ಟು ಪರ್ಯಾಯದ ಬಗ್ಗೆ ಚಿಂತಿಸಿ ನಡಕೊಂಡರೆ, ಬಹುಶಃ ಹೊಟ್ಟೆಗಿಲ್ಲದೆ ಸಾಯುವ ಅತಂತ್ರ ವ್ಯವಸ್ಥೆಯನ್ನು ಕೊನೆಗಾಣಿಸಬಹುದು.
ಮನುಷ್ಯ ಎಷ್ಟೇ ಮೌಲ್ಯಗಳುಳ್ಳವನಾದರೂ, ಎಷ್ಟೇ ಸಂಪ್ರದಾಯಸ್ಥ ಮನೋಭಾವನೆಯವನಾದರೂ ಕಂಗೆಡಿಸುವ ಹಸಿವಿನ ಮುಂದೆ, ಮತ್ತು ಆ ಮೂಲಕ ಕಣ್ಮುಂದೆ ಬರುವ ಸಾವಿನೆದುರು ಎಲ್ಲ ಮರೆತವನಾಗುತ್ತಾನೆ, ತಾನು ಮನುಷ್ಯನೆಂಬುದನ್ನೂ ಮರೆತು ಮೃಗದಂತೆ ವರ್ತಿಸಿಯಾದರೂ ಸಾವಿನಿಂದ ಪಾರಾಗುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಾನೆ. ಇದರ ಪರಿಣಾಮವೇ ಇಂದಿನ ಎಲ್ಲ ಸಾಮಾಜಿಕ ಸ್ತರಗಳಲ್ಲೂ ಹಾಸುಹೊಕ್ಕಾಗಿರುವ ಮೋಸ, ಕಳ್ಳತನ, ದರೋಡೆ, ವಂಚನೆ….ಇವೇ ಮೊದಲಾದ ಅನಾರೋಗ್ಯಕರ ಬೆಳವಣಿಗೆಗಳು. ನೀರು ತುಂಬಿರುವ ಗುಳಿಯತ್ತಲೇ ಮತ್ತೆ ಮತ್ತೆ ಹರಿಯುವಂತೆ, ತುಂಬಿತುಳುಕಾಡುವ ಐಶ್ವರ್ಯದೆಡೆಗೇ ಮತ್ತೆಮತ್ತೆ ಹಣದಹೊಳೆ ಹರಿದುಹೋಗುವುದನ್ನು ಬಡವರು ನೋಡಿದಾಗ ತಮ್ಮ ಖಾಲಿ ಬಾಳು ಸಹನೀಯವಾಗದೆ, ಅಸಹಾಯಕತೆಯನಪ್ಪಿ ಬಾಳುವುದೂ ಒಂದು ಮಟ್ಟದ ನಂತರ ಸಾಧ್ಯವಾಗದೆ, ದುರಾಚಾರಕ್ಕಿಳಿಯುತ್ತಾರೆ ಮತ್ತು ಆ ಮೂಲಕವಾದರೂ ಹಸಿವಿನ ಜೋಳಿಗೆ ತುಂಬುವ ಸಾಧ್ಯತೆಯ ಬಗ್ಗೆ ಚಿಂತಿಸುತ್ತಾರೆ. ಇಂದಿನ ಯುವಜನತೆ ನೇರದಾರಿಯ ಬಗ್ಗೆ ಯೋಚನೆ ಬಿಟ್ಟು ಬಹಳ ಸ್ವಾಭಾವಿಕವೆಂಬಂತೆ ಅಡ್ಡದಾರಿ-ಗಿಡ್ಡದಾರಿಗಳನ್ನೇ ಬಳಸಲೆಳಸುವುದು ಇದೇ ಕಾರಣಕ್ಕಾಗಿ. ಹೀಗೆ ವ್ಯರ್ಥವಾಗುವ ಯುವಶಕ್ತಿ ಸಮಾಜಕ್ಕೆಷ್ಟು ದೊಡ್ಡ ನಷ್ಟ!- ಇದು ಸಮಾಜ ಅವನತಿಯತ್ತ ಸಾಗುತ್ತಿರುವ ಸ್ಪಷ್ಟ ಸೂಚನೆಯೇ ಹೌದು.
ನಾವೆಲ್ಲರೂ ಒಂದೇ ನೆಲದ ಮಕ್ಕಳು, ಸಹೋದರತೆಯ ಬಂಧದಲ್ಲಿ ಜೋಡಿಸಲ್ಪಟ್ಟ ಮಾನವಸರಪಳಿಯ ಕೊಂಡಿಗಳು-ಮತ್ತು ಸಮಾನ ಬದುಕಿನ ಹಕ್ಕಿಗೆ ಪಾತ್ರರು ಎಂಬ ಮಹಾನ್ ಚಿಂತನೆಯು, ಸ್ವಾರ್ಥಸಾಧನೆಯ ಮೋಸದಿಂದ ಅಪ್ರಭಾವಿತವಾದ ನಿಟ್ಟಿನಲ್ಲಿ ಮುನ್ನಡೆದರೆ ಮತ್ತಲ್ಲಿ ವರ್ಣಬೇಧದ ಸಂದರ್ಭದಲ್ಲಿರುವದೇ ರೀತಿಯ ತೀವ್ರತರದ ತೊಡಗಿಕೊಳ್ಳುವಿಕೆ ಸಾಧ್ಯವಾದರೆ, ಮಹೋನ್ನತ ಧ್ಯೇಯವೊಂದು ಸಾಧಿಸಲ್ಪಡಬಹುದು. ಹೆಣ್ಣುಜನಾಂಗ ತಾರತಮ್ಯರಹಿತ ಬಾಳು ಕಾಣುವ ದಿನ ಬರಬಹುದು. ಬಡತನವೆಂಬ ಪೈಶಾಚಿಕ ಬಾಹುಗಳ ಮುಷ್ಟಿಯಲ್ಲಿ ನರಳುತ್ತಿರುವ ನಮ್ಮ ದೇಶ ನಿಜವಾದ ಅರ್ಥದಲ್ಲಿ ಸಮಾನ ಬದುಕಿನ ಹಕ್ಕೊಂದನ್ನು ಸಾಧಿಸಿ ತೋರಿಸುವಂತಾಗಬಹುದು. ಇದು ಇಂದಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಮಾಜದ ಸ್ವಾಸ್ಥ್ಯದ ಉಳಿಸುವಿಕೆಯೆಡೆಗಿನ ತುರ್ತಿನ ಕರೆಯೂ ಹೌದು. ಬಾಂಧವರೇ, ಎಚ್ಚೆತ್ತುಕೊಳ್ಳೋಣ, ರಾಜಕೀಯಸಾಧನೆಯ ಅಥವಾ ಸ್ವಮತ ಸಾಧನೆಯ ಮತ್ತದರ ಹೇರಿಕೆಯ ಹಿನ್ನೆಲೆಯಲ್ಲಿ ಕುತಂತ್ರಿಗಳಾಡುತ್ತಿರುವ ಸ್ವಾರ್ಥಲಾಲಸೆಯ ಆಟದ ದಾಳಗಳಾಗದೆ, ತಾಯ್ನೆಲದ ಹಿತಾಸಕ್ತಿಯನ್ನು ರಕ್ಷಿಸುವ ಸಾಧನಗಳಾಗೋಣ.
-ಅನುರಾಧ ಪಿ. ಸಾಮಗ
ಹೌದು ಬರಿ ಕನಕ ಪುರಂದರನ್ನಷ್ಟೆ ಅಲ್ಲ ಪ್ರತಿ ಒಬ್ಬ ಇತಿಹಾಸ ಪುರುಷರನ್ನು ಅವರ ಜಾತಿಯಿಂದ ಹಿನ್ನಲೆಯಲ್ಲಿ, ಅವರು ಯಾವ ಪಕ್ಷಕ್ಕೆ ಸೇರಿದವರೆನ್ನುವ ಕಲ್ಪನೆಯ ಆದಾರದ ಮೇಲೆ ನೋಡಲಾಗುತ್ತಿದೆ ಅನ್ನುವುದು ಸತ್ಯ. ಅತ್ಯಂತ ತಮಾಷಿಯ ವಿಶಯವೆಂದರೆ ಇತಿಹಾಸದ ಪುರುಷರನ್ನು ಈಗಿನ ಸಾಮಾಜಿಕ ಹಿನ್ನಲೆಯಲ್ಲಿ ನೋಡಲಾಗುತ್ತೆ,, ಉದಾ: ಟಿಪ್ಪು ಕನ್ನಡಪ್ರೇಮಿ ಹೌದೊ ಅಲ್ಲವೊ ? ಎಂಬ ಪ್ರಶ್ನೆ ಚರ್ಚನಡೆಯುತ್ತದೆ, ವಿಚಿತ್ರವೆಂದರೆ ಬಾಷಾವಾರು ಪ್ರಾಂತ್ಯ ರಚನೆಯಾಗಿ ಕನ್ನಡ ರಾಜ್ಯ ಎಂಬ ಕಲ್ಪನೆ ಮೂಡಿದ್ದು ೧೯೫೬ ರ ನಂತರ ಟಿಪ್ಪುವಿನ ಕಾಲಕ್ಕೆ ಬಾಷೆಯ ಗೊಂದಲವಿತ್ತೆ ಗೊತ್ತಿಲ್ಲ. ಹಾಗೆ ಕೃಷ್ಣದೇವರಾಯ ಕನ್ನಡಿಗನೊ ತೆಲುಗನೊ ? ಪುರಂದರರು ಶ್ರೇಷ್ಟರೊ ಕನಕರು ಶ್ರೇಷ್ಟರೊ ಎಂಬ ವಿಚಾರಗಳೆಲ್ಲ ತೀರ ಬಾಲಿಶ ಅನ್ನಿಸುತ್ತದೆ
ನಿಜ ಸರ್ ನಾನು ಒಂದು ಉದಾಹರಣೆಯಾಗಷ್ಟೇ ಈ ತಿರುಳನ್ನು ಆಯ್ದುಕೊಂಡದ್ದು, ಈ ಜಾತ್ಯಾಧಾರಿತ ದೃಷ್ಟಿಕೋನದ ಕುಣಿಕೆಯ ಬಿಗಿತದಿಂದ ಹೊರಬಂದು ಸುತ್ತುಮುತ್ತನ್ನು ನೋಡುವ ಅಗತ್ಯ ತುಂಬಾ ತೀವ್ರವಾಗಿದೆ ಈಗ, ಅದು ನಮ್ಮ ಸಾಕಷ್ಟು ಸಮಯ ಮತ್ತು ಶಕ್ತಿಯನ್ನು ವ್ಯಯ ಮಾಡುತ್ತಿದೆ ಅಂತ ತುಂಬಾ ಸಮಯದಿಂದ ಇಂಥ ವಿದ್ಯಮಾನಗಳನ್ನು ನೋಡಿದಾಗಲೆಲ್ಲ ಅನಿಸುತಿದ್ದುದ್ದು ಈಗ ಒಂದು ಲೇಖನದ ಪ್ರತಿಕ್ರಿಯೆಯ ನೆಪದಲ್ಲಿ ಹೊರಬಂತು
ನಕಾರಾತ್ಮಕ ಧೋರಣೆ, ಮೇಲ್ಜಾತಿ, ಕೆಳ ಜಾತಿಯೆಂದು ಒಬ್ಬರಿಗೊಬ್ಬರ ಮೇಲೆ ಎತ್ತಿಕಟ್ಟುವುದು ಈವಾಗಿನ ಅಲೆ. ರಾಜಕಾರಿಣಿಗಳು, ಬುದ್ಧಿಜೀವಿಗಳು, ಕೆಲ ಸಾಹಿತಿಗಳೆಂದು ಅನಿಸಿಕೊಂಡಿರುವವರು ಮಾಡುವುದು ಇದನ್ನೇ. ಪ್ರಥಮ ಪಿ.ಯು ಸಿ ಗೆ ಇರುವ ನಾಟಕ, "ಕನಕದಾಸರು". ದ್ವಿತೀಯ ಪಿ.ಯು.ಸಿಗೆ ಇರುವ ನಾಟಕ, "ಏಕಲವ್ಯ". ಎರಡರ ಸಾರ ಒಂದೇ – ಒಂದು ವರ್ಗದವರ ಮೇಲೆ ಇನ್ನೊಂದು ವರ್ಗದವರನ್ನು ಕೆರಳಿಸಿವುದು. ಇದು ಮುಂದೆ ಯಾವ ಪರಿಣಾಮವನ್ನು ಬೀರಬಹುದೆಂದು ಯೋಚಿಸುವವರಿಲ್ಲ.
ಪುರಂದರದಾಸ ಮತ್ತು ಕನಕದಾಸರನ್ನು ಜಾತಿಯ ದೃಷ್ಟಿಯಿಂದ ಹೋಲಿಸುವುದು ಒಂದು ದುರಂತ.
ಎಚ್ಚೆತ್ತುಕೊಳ್ಳೋಣ. ಮಲಗಿದರವನ್ನು ಎಬ್ಬಿಸೋಣ. ಮಲಗಿರುವ ನಾಟಕವಾಡುತ್ತಿರುವವರನ್ನೂ ಎಬ್ಬಿಸುವ ಪ್ರಯತ್ನ ಮಾಡೋಣ.
ಈ ಕೆಲವೆಲ್ಲ ಮೂಢನಂಬಿಗಕೆಗಳು ಕೊನೆಗೊಳ್ಳುವುದೆಂದೋ? ಒಂದು ಕಾಲದಲ್ಲಿ 'ಓದಿದವರು' 'ವಿದ್ಯಾಬುದ್ಧಿ ಕಲಿಸುವವರು' ಎಂದೇ ಕರೆಸಿಕೊಳ್ಳುತ್ತಿದ್ದ ಕೆಲವರ ಮನೆಗಳಲ್ಲಿ ಮಹಿಳೆಯರ ಶೋಷಣೆ ಈಗಲೂ ಇದೆ. ವಿಧವೆಯರು ಕೇಶಮುಂಡನ ಮಾಡುವುದು ಕಡಿಮೆಯಾಗಿದ್ದರೂ ಮನೆಯೊಳಗಿನ 'ಮಡಿವಂತಿಕೆ' ಇಂದಿಗೂ ಜೀವಂತವಾಗಿದೆ. ಆದರೆ ಮನದೊಳಗೆ 'ಮಡಿವಂತಿಕೆ' ಮಾತ್ರ ಇಲ್ಲ!
ಕೋಮುವಾದ ಬೆಳೆಸುವವರಲ್ಲಿ ಹೆಚ್ಚಿನವರು ಅದನ್ನು ಆತ್ಮಸಾಕ್ಷಿಗೆ ವಿರುದ್ಧವಾಗಿ ಮಾಡುತ್ತಿದ್ದಾರೆ ಎಂದು ನನ್ನ ಭಾವನೆ. ಪರರನ್ನು ಹುರಿದುಂಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಇವರು ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಸರಿಯಾದ ನಿಟ್ಟಿನಲ್ಲಿ ಯೋಚಿಸುತ್ತಿದ್ದವರೇ. ವಿಚಾರವಾದಿಗಳೂ ಹೌದು. ಬುದ್ಧಿಜೀವಿಗಳೂ ಹೌದು. ಆಮೇಲಾಮೇಲೆ ಧನದಾಹ, ಅಧಿಕಾರದ ಮೋಹ, (ಕು)ಖ್ಯಾತಿಯ ಹುಚ್ಚುಗಳ ದಾಸರಾಗಿ ಒಡೆದು ಆಳುವ (ಕು)ತಂತ್ರಕ್ಕೆ ತಮ್ಮನ್ನು ತಾವೇ ಮಾರಿಕೊಳ್ಳುತ್ತಾರೆ.
ಒಳ್ಳೆಯ ಬರಹ. Like it