ಜಾಣಸುದ್ದಿ 9: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com

ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)

ಈ ಸಂಚಿಕೆಯಲ್ಲಿ
1.ಮಸಿ ಬಳೆದ ಪೊರೆಯಿಂದ ಶುದ್ಧ ನೀರು
2. ಚಂದ್ರ ಓಡಿದನೋ-ಭೂಮಿ ಹಿಂಜರಿಯಿತೋ
3. ನುಗ್ಗೆ ಮತ್ತು ಕೊಳಚೆ ಸಂಸ್ಕರಣೆ
4. ಆಟಿಕೆಯಲ್ಲೆಷ್ಟು ವಿಷವಿದೆ?

1. ಮಸಿ ಬಳಿದ ಪೊರೆಯಿಂದ ಶುದ್ಧ ನೀರು
ಮೊನ್ನೆ ಬೆಂಗಳೂರಿನ ಬಗ್ಗೆ ಬರಸಿಡಿಲಿನಂತಹ ಸುದ್ದಿ ಬಂದಿತ್ತು. ಇನ್ನೊಂದು ದಶಕದಲ್ಲಿ ಬೆಂಗಳೂರಿನಲ್ಲಿ ನೀರಿಗೆ ಬರ ಬರುವುದು ಖಂಡಿತ ಎನ್ನುವುದೇ ಈ ಸುದ್ದಿ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟು ಕಾವೇರಿಯಿಂದ ಸುಮಾರು 4.5 ಟಿಎಂಸಿ ಹೆಚ್ಚುವರಿ ನೀರನ್ನು ಬೆಂಗಳೂರಿಗರಿಗೆ ಕುಡಿಯುವ ನೀರಿಗಾಗಿಯೇ ಮೀಸಲಿಡಬೇಕೆಂದದ್ದು ತುಸು ಸಮಾಧಾನವನ್ನು ತಂದಿತು. ಜೊತೆಗೇ ಮಂಗಳೂರು, ಬೆಂಗಳೂರಿಗೆ ಇನ್ನು ಮುಂದೆ ಕಡಲ ನೀರನ್ನು ಸಂಸ್ಕರಿಸಿ ಒದಗಿಸಲಾದೀತೇ ಎನ್ನುವ ಯೋಚನೆ ಇದೆ ಎಂದು ಸಚಿವರ ಹೇಳಿಕೆಯೂ ಬಂತು. ಅದೇನೇ ಇರಲಿ. ಸುಲಭವಾಗಿ, ಸರಳವಾಗಿ ನೀರನ್ನು ಸಂಸ್ಕರಿಸುವುದು ಸಾಧ್ಯವಾಗದಿದ್ದರೆ, ಎಷ್ಟೇ ನೀರಿದ್ದರೂ ಅದು ಕೈಗೆಟುಕದ ಹಣ್ಣಾದೀತು ಎನ್ನುವುದು ವಿಜ್ಞಾನಿಗಳ ಭಯ. ಈ ನಿಟ್ಟಿನಲ್ಲಿ ಆಸಕ್ತಿಕರವಾದ ಸಂಶೋಧನೆಯೊಂದನ್ನು ನೇಚರ್ ಕಮ್ಯೂನಿಕೇಷನ್ಸ್ ಪತ್ರಿಕೆ ಪ್ರಕಟಿಸಿದೆ. ಆಸ್ಟ್ರೇಲಿಯಾದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಸಿಎಸ್ಐಆರ್ ಓದ ವಿಜ್ಞಾನಿ ಕೆನ್ ಓಸ್ಟ್ರಿಕೋವ್ ಮತ್ತು ಸಂಗಡಿಗರು ಸೋಯಾ ಎಣ್ಣೆಯಿಂದ ಪಡೆದ ನ್ಯಾನೋಕಾರ್ಬನ್ನನ್ನು ಬಳಸಿಕೊಂಡು ಸುಲಭವಾಗಿ ಹಾಳಾಗದಂತಹ ಹಾಗೂ ಸರಳವಾಗಿ ತಯಾರಿಸಲಾಗುವಂತಹ ಸೂಕ್ಷ್ಮಪೊರೆಯನ್ನು ತಯಾರಿಸಿದ್ದಾರಂತೆ. ಈ ಸೂಕ್ಷ್ಮಪೊರೆಗಳು ಅತಿ ಕಟುವಾದ ಉಪ್ಪಿನ ನೀರಿನಿಂದ ಲವಣವನ್ನು ತೆಗೆದು ಹಾಕಿ ಕುಡಿಯಲು ಸಿಹಿನೀರನ್ನು ಒದಗಿಸಬಲ್ಲುವಂತೆ.
ಚಿತ್ರ ವಿವರ: ಗ್ರಾಫೀನು ಪೊರೆ ತಯಾರಿಸುವ ವಿಧಾನ ಹಾಗೂ ನೀರು ಶುದ್ಧೀಕರಣದಲ್ಲಿ ಅದರ ಕಾರ್ಯವಿಧಾನ

ಉಪ್ಪು ನೀರು, ಗಡಸು ನೀರು ಹಾಗೂ ಕಾರ್ಖಾನೆಗಳ ತ್ಯಾಜ್ಯಗಳನ್ನು ಶುದ್ಧೀಕರಿಸಿದರೆ ಸಾಕಷ್ಟು ನೀರನ್ನು ಎಲ್ಲರಿಗೂ ಒದಗಿಸಬಹುದು ಎನ್ನುವುದಕ್ಕೆ ಲೆಕ್ಕಾಚಾರ ಹಾಕಬೇಕಿಲ್ಲ. ಇವನ್ನು ಕಡಿಮೆ ಖರ್ಚಿನಲ್ಲಿ ಶುಚಿಗೊಳಿಸುವುದು ಹೇಗೆ ಎನ್ನುವುದೇ ಸಮಸ್ಯೆ. ಇದಕ್ಕಾಗಿ ಹಲವು ತಂತ್ರಗಳಿವೆ. ನಾವು ಮನೆಯಲ್ಲಿ ಬಳಸುವ ಬಸಿಯುವ, ಸೋಸುವ ತಂತ್ರಗಳು ಇವುಗಳಿಗೆ ಸಾಲದು. ಹೀಗಾಗಿ ರಿವರ್ಸ್ ಆಸ್ಮಾಸಿಸ್ ಅಥವಾ ಮೈಕ್ರೊಫಿಲ್ಟ್ರೇಶನ್ ತಂತ್ರಗಳನ್ನು ಬಳಸಲಾಗುತ್ತದೆ. ನೀರಿನ ಅಣುಗಳಷ್ಟೆ ಒಂದು ಕಡೆಗೆ ಹರಿಯುವಂತೆ ಮಾಡುವುದೇ ಎರಡೂ ತಂತ್ರಗಳ ವಿಶೇಷ. ಎರಡರಲ್ಲಿಯೂ ವಿಶೇಷ ಪೊರೆಗಳನ್ನು ಬಳಸಲಾಗುತ್ತಿದೆ. ಇತ್ತೀಚೆಗೆ ನ್ಯಾನೊಕಾರ್ಬನ್ನು ಪೊರೆಯನ್ನು ಬಳಸಿ ಈ ಪೊರೆಗಳ ಕ್ಷಮತೆಯನ್ನು ಹೆಚ್ಚಿಸಬಹುದು ಎಂಬ ಆಸೆ ಹುಟ್ಟಿದೆ. ಏಕೆಂದರೆ ಇಂಗಾಲದ ಒಂದು ರೂಪವಾದ ನ್ಯಾನೋಕಾರ್ಬನ್ನು ತನ್ನ ವಿಶೇಷ ವಿದ್ಯುತ್ ಗುಣ ಹಾಗೂ ಕ್ರಿಯಾ ವರ್ಧಕ ಗುಣಗಳಿಂದಾಗಿ ಕೊಳಚೆ ನೀರಿನಲ್ಲಿರುವ ಲವಣಗಳನ್ನು ಒಂದೆಡೆ ಸೆಳೆಯುವುದಕ್ಕೂ, ಸಹಜವಾಗಿ ಶಿಥಿಲವಾಗದ ರಾಸಾಯನಿಕಗಳನ್ನು ಒಡೆದು ಸರಳ ರೂಪಕ್ಕೆ ಬದಲಿಸುವುದಕ್ಕೂ ಉಪಯುಕ್ತವೆನ್ನಿಸಿದೆ. ಹೀಗಾಗಿ ಇತ್ತೀಚೆಗೆ ನ್ಯಾನೋಕಾರ್ಬನನ್ನು ಲೇಪಿಸಿದ ಪೊರೆಗಳನ್ನು ನೀರನ್ನ ಶುದ್ಧೀಕರಿಸಲು ಬಳಸುವ ಸಂಶೋಧನೆಗಳು ಹಲವೆಡೆ ಸಾಗಿವೆ.
ಇಲ್ಲೂ ಒಂದು ಸಮಸ್ಯೆ ಇದೆ. ನ್ಯಾನೊಕಾರ್ಬನ್ನಿನ ಲೇಪನವಾದ ನಂತರ ಆ ಪೊರೆಗಳಲ್ಲಿ ಸೂಕ್ಷ್ಮ ರಂಧ್ರಗಳನ್ನು ಕೊರೆಯಬೇಕು. ಹಾಗಿದ್ದಲ್ಲಿ ಮಾತ್ರ ಅದರ ಮೂಲಕ ನೀರು ಹಾಯಬಲ್ಲುದು. ಈ ರಂಧ್ರ ಕೊರೆಯುವ ತಂತ್ರಗಳು ಬಲು ಕ್ಲಿಷ್ಟ ಹಾಗೂ ದುಬಾರಿ ಆದ್ದರಿಂದ ನೀರನ್ನು ಬೃಹತ್ ಪ್ರಮಾಣದಲ್ಲಿ ಶುದ್ಧೀಕರಿಸಲು ಇವು ಇನ್ನೂ ಸಿದ್ಧವಾಗಿಲ್ಲ. ಜೊತೆಗೆ ಇವು ನೀರಿನಲ್ಲಿರುವ ಲವಣಗಳ ಪ್ರಭಾವದಿಂದಾಗಿ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ.
ಓಸ್ಟ್ರಿಕೋವರ ತಂಡ ಇದಕ್ಕೊಂದು ಪರ್ಯಾಯವನ್ನು ಒದಗಿಸಿದೆ. ಈಗಾಗಲೇ ನೀರಿನ ಶುದ್ಧೀಕರಣದಲ್ಲಿ ಬಳಸುವ ಪಾಲಿಟೆಟ್ರಾಫ್ಲೂರೋಇಥಿಲೀನಿನ ಸೂಕ್ಷ್ಮಪೊರೆಗಳ ಮೇಲೆಯೇ ಒಂದೆರಡು ಅಣುಗಳ ದಪ್ಪವಿರುವ ನ್ಯಾನೊಕಾರ್ಬನ್ನಿನ ಪದರಗಳನ್ನು ಲೇಪಿಸಿದರೆ ಸಾಕಂತೆ. ಸೋಯಾ ಎಣ್ಣೆಯನ್ನು ಉರಿಸಿ ಪಡೆದ ಕಾರ್ಬನ್ನನ್ನು ಇವುಗಳ ಮೇಲೆ ಕೂರಿಸಿ ಪದರಗಳನ್ನು ಸೃಷ್ಟಿಸಬಹುದು. ಹೀಗೆ ರೂಪಿಸಿದ ಪದರಗಳ ಅಂಚು ಒಂದರ ಮೇಲೊಂದು ತುಸು ಚಾಚಿಕೊಂಡು, ನೀರು ಹರಿಯಲು ಅವಕಾಶ ಮಾಡಿಕೊಡುತ್ತವೆ. ರಂಧ್ರಗಳನ್ನು ಕೊರೆಯಬೇಕಿಲ್ಲ. ನೀರು ಈ ಅಂಚಿನಲ್ಲಿರುವ ಸಂಧಿಯ ಮೂಲಕ ಹರಿದು ಹೋಗುತ್ತದೆ. ಉಳಿದ ಲವಣಗಳು ಹರಿಯಲು ಅವಕಾಶವಿಲ್ಲ. ಹೀಗೆ ನೀರನ್ನು ಶುದ್ಧೀಕರಿಸಬಹುದು ಎಂದು ಇವರು ಕಂಡಿದ್ದಾರೆ. ಅಷ್ಟೇ ಅಲ್ಲ. ಸಮುದ್ರದ ನೀರಿನ ಐದು ಪಟ್ಟು ಉಪ್ಪಾಗಿರುವ ನೀರನ್ನು ಈ ಪೊರೆಯ ಮೂಲಕ ಸೋಸಿ, ಸಿಹಿನೀರನ್ನು ಪಡೆದಿದ್ದಾರೆ. ನೂರಕ್ಕೆ ಶೇಕಡ 99.9 ಲವಣಗಳನ್ನು ಇದು ಹಿಂದಟ್ಟುತ್ತದೆಯಂತೆ. ಅಷ್ಟೇ ಅಲ್ಲ. ಕೇವಲ ಸೂಕ್ಷ್ಮಪೊರೆಯನ್ನು ಬಳಸಿದಾಗ ಮಾಡುವುದಕ್ಕಿಂತಲೂ ಬೇಗನೆ ನೀರನ್ನು ಶುದ್ಧಗೊಳಿಸಬಹುದು. ಜೊತೆಗೆ ಲವಣಗಳು ಇವುಗಳ ಮೇಲೆ ಕುಳಿತು ಹಾಳಾಗುವ ಪರಿಸ್ಥಿತಿಯೂ ಇಲ್ಲವೆಂದು ಇವರು ನಿರೂಪಿಸಿದ್ದಾರೆ. ಅರ್ಥಾತ್, ಈ ಸೋಯಾ ಎಣ್ಣೆಯ ಕಾರ್ಬನ್ನು ಕೂಡಿಸಿದ ಸೂಕ್ಷ್ಮಪೊರೆಗಳಿಗೆ ದೀರ್ಘಬಾಳಿಕೆ ಇದೆ. ಇವುಗಳ ತಯಾರಿಕೆಯೂ ಬಲು ಸುಲಭ. ಹೀಗೆ ಇವನ್ನು ಬಲು ಸುಲಭವಾಗಿ ಬೃಹತ್ ಪ್ರಮಾಣದ ಬಳಕೆಗೆ ಸಿದ್ಧಪಡಿಸಬಹುದು ಎನ್ನುವ ಆಸೆಯನ್ನು ಇವರು ಹುಟ್ಟಿಸಿದ್ದಾರೆ.
ಅದೇನೋ ಸರಿ. ಶುಚಿಗೊಳಿಸಲು ಸುಲಭ ಸಾಧನ ಸಿಕ್ಕಿತು ಅಂತ ನೀರನ್ನು ದುರ್ಬಳಕೆ ಮಾಡಿ, ಇನ್ನಷ್ಟು ಮಲಿನಗೊಳಿಸಿದರೆ ಏನು ಮಾಡೋಣ?
ಆಕರ: Dong Han Seo et al. (2018) Anti-fouling graphene-based membranes for effective water desalination. NATURE COMMUNICATIONS | (2018) 9:683, Pp 1-6
ಲಿಂಕ್: . DOI: 10.1038/s41467-018-02871-3


ಚುಟುಕು ಚುರುಮುರಿ

2. ಚಂದ್ರ ಓಡಿದನೋ, ಭೂಮಿ ಹಿಂಜರಿಯಿತೋ
ಚಂದ್ರ ಜೋರಾಗಿ ಓಡುತ್ತಿದ್ದಾನೋ? ಅಥವಾ ಭೂಮಿಯೇ ತುಸು ನಿಧಾನವಾಯಿತೋ? ಹೀಗೊಂದು ಸ್ವಾರಸ್ಯಕರವಾದ ಪ್ರಶ್ನೆ ನಮಗೆ ಎದುರಾಗಿ ನೂರಾಐವತ್ತು ವರ್ಷಗಳಾಯಿತು. ಈ ಪ್ರಶ್ನೆಯನ್ನು ಮೊತ್ತ ಮೊದಲಿಗೆ ಫೆಬ್ರವರಿ 1868 ರಲ್ಲಿ ಬ್ರಿಟಿಷ್ ಖಗೋಳವಿಜ್ಞಾನಿ ಅಲೆಕ್ಸಾಂಡರ್ ಹರ್ಷೆಲ್ ಕೇಳಿದನಂತೆ. ಹಾಗೆಂದು ಅಂದಿನ ಸೈಂಟಿಫಿಕ್ ಅಮೆರಿಕನ್ ಪತ್ರಿಕೆ ವರದಿ ಮಾಡಿತ್ತು. ಇಂಗ್ಲೆಂಡಿನ ಡಂಡೀಯಲ್ಲಿ ನಡೆದ ಖಗೋಳವಿಜ್ಞಾನಿಗಳ ಸಮಾವೇಶದಲ್ಲಿ ಹರ್ಷೆಲ್ ಹೀಗೊಂದು ಪ್ರಶ್ನೆಯನ್ನು ಮುಂದಿಟ್ಟನೆಂದು ಪತ್ರಿಕೆ ವರದಿ ಮಾಡಿತ್ತು.
ಹರ್ಷೆಲ್ ಕೇಳಿದ ಈ ಪ್ರಶ್ನೆ ವಿಜ್ಞಾನದ ಬಗ್ಗೆ ಒಂದು ವಿಷಯವನ್ನಂತೂ ಸ್ಪಷ್ಟವಾಗಿ ಹೇಳುತ್ತದೆ. ವಿಜ್ಞಾನ ಯಾವುದನ್ನೂ ಸಾರಾ ಸಗಟು ನಂಬುವುದಿಲ್ಲ.

ಅದು ಹೇಗೆ ಎಂದಿರಾ? ಹರ್ಷೆಲ್ ಈ ಪ್ರಶ್ನೆ ಕೇಳಲು ಕಾರಣ ಆಗಿನ ಕಾಲದಲ್ಲಿ ಜನರಿಗೆ ಗ್ರಹಣಗಳ ಬಗ್ಗೆ ಇದ್ದ ಕುತೂಹಲ. ಚಂದ್ರ ಹಾಗೂ ಸೂರ್ಯಗ್ರಹಣಗಳು ಏಕಾಗುತ್ತವೆ, ಹೇಗಾಗುತ್ತವೆ ಎಂಬುದು ಸ್ಪಷ್ಟವಾಗಿ ತಿಳಿದ ನಂತರ, ಅವು ಎಂದು ಆಗಬಹುದು ಎಂದು ನಿಖರವಾಗಿ ಊಹಿಸುವ ಕಾರ್ಯ ನಡೆದಿತ್ತು. ಅಂದು ಲಭ್ಯವಿದ್ದ ಪಂಚಾಂಗಗಳನ್ನು ಗಮನಿಸಿ ಹರ್ಷೆಲ್ ಈ ಪ್ರಶ್ನೆಯನ್ನು ಕೇಳಿದ್ದರಂತೆ. ಅದಕ್ಕೆ ಕಾರಣ ಇಷ್ಟೆ. ಅಂದಿನ ಪಂಚಾಂಗದ ಪ್ರಕಾರ ಆಕಾಶದಲ್ಲಿ ಚಂದ್ರನ ಚಲನೆಯನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಬಹುದಾಗಿತ್ತು. ಆದರೆ ಈ ಕೋಷ್ಟಕ ಎಲ್ಲ ಸಂದರ್ಭದಲ್ಲಿಯೂ ಸರಿ ಇದೆ ಎಂದು ಹರ್ಷೆಲ್ ಅವರಿಗೆ ಅನ್ನಿಸಲಿಲ್ಲವಂತೆ. ಅಂದಿಗೆ ಎರಡು ಸಾವಿರ ವರ್ಷಗಳ ಹಿಂದೆ, ಅಂದರೆ ಕ್ರಿಸ್ತಪೂರ್ವ 100ರ ಸುಮಾರಿಗೆ ಬೆಬಿಲೋನಿಯಾದಲ್ಲಿ ಒಂದು ಸೂರ್ಯಗ್ರಹಣ ನಡೆದಿತ್ತು. ಆ ಪುರಾತನ ಗ್ರಹಣ ಘಟಿಸಿದ ಕಾಲವನ್ನು ಬಳಕೆಯಲ್ಲಿದ್ದ ಪಂಚಾಂಗದ ಪ್ರಕಾರ ಲೆಕ್ಕ ಹಾಕಿದರಂತೆ. ಆಗ ಸೂರ್ಯಗ್ರಹಣ ಸಂಜೆ ಸೂರ್ಯ ಮುಳುಗಿದ ಮೇಲೆ ಆಗಿದೆ ಎಂದು ಪಂಚಾಂಗ ತೋರಿಸುತ್ತಿತ್ತು. ಅದು ಹೇಗೆ ಸಾಧ್ಯ? ಬೆಬಿಲೋನಿಯನ್ನರು ಸೂರ್ಯಗ್ರಹಣವನ್ನು ನೋಡಿ, ಅದರ ಬಗ್ಗೆ ಬರೆದಿದ್ದಾರಲ್ಲ? ಹಾಗಿದ್ದರೆ ಪಂಚಾಂಗವೇ ತಪ್ಪೇ?
ಹರ್ಷೆಲ್ ಈ ತೀರ್ಮಾನಕ್ಕೆ ಬರುವ ಮೊದಲಿಗೆ ಉಳಿದ ಸಾಧ್ಯತೆಗಳನ್ನೂ ಗಮನಿಸಿದರು. ಚಂದ್ರನ ಚಲನೆ ಹಾಗೂ ಭೂಮಿಯ ಚಲನೆ ಒಂದಕ್ಕೊಂದು ತಳುಕಿಕೊಂಡಿವೆ. ಆದ್ದರಿಂದ ಒಂದರ ಗತಿ ವೇಗವಾದರೆ, ಮತ್ತೊಂದರದ್ದು ನಿಧಾನವಾಗಿರಬೇಕು. ಬೆಬಿಲೋನಿನಲ್ಲಿ ಎರಡು ಸಾವಿರ ವರ್ಷಗಳ ಹಿಂದೆ ಸೂರ್ಯಗ್ರಹಣ ಕಂಡಿದ್ದೇ ಆಗಿದ್ದರೆ, ಆ ಸಮಯದಲ್ಲಿ ಸೂರ್ಯ ಇನ್ನೂ ಮುಳುಗಿರಲಿಕ್ಕಿಲ್ಲ. ಅರ್ಥಾತ್, ಭೂಮಿ ಇನ್ನೂ ವೇಗವಾಗಿ ಸುತ್ತುತ್ತಿದ್ದಿರಬೇಕು! ಹೀಗಾಗಿ ಸೂರ್ಯಾಸ್ತಮವಾಗುವುದಕ್ಕೂ ಮುನ್ನವೇ ಚಂದ್ರ ಅದಕ್ಕೆ ಅಡ್ಡ ಬಂದಿರಬೇಕು ಎಂದು ತರ್ಕಿಸಿದರು.
ಅದೇನೋ ಸರಿ. ಹಾಗಿದ್ದರೆ ಭೂಮಿ ನಿಧಾನವಾಗಿದ್ದಾದರೂ ಏಕೆ? ಅದು ಸಾಧ್ಯವೇ ಎನ್ನುವ ಪ್ರಶ್ನೆಗಳು ಏಳುತ್ತವೆ. ಸಾಗರದ ಉಬ್ಬರವಿಳಿತಗಳು ಭೂಮಿ ಸುತ್ತುವುದನ್ನು ತಡೆಯುತ್ತಿರಬಹುದೇ? ಅಥವಾ ಇನ್ನೇನು ಕಾರಣಗಳಿರಬಹುದು? ಇಂತಹ ವ್ಯತ್ಯಾಸ ಉಂಟಾಗಲು ಭೂಮಿಯ ಭ್ರಮಣವೇಗ ಅಂದರೆ ಒಂದು ದಿನವೆನ್ನುವ ಸಮಯ ಸೆಕೆಂಡಿನ ನೂರರಲ್ಲೊಂದು ಅಂಶದಷ್ಟು ಕಡಿಮೆಯಾದರೂ ಸಾಕು ಎಂದು ಹರ್ಷೆಲ್ ಲೆಕ್ಕ ಹಾಕಿದ್ದರು. ಇದು ಹೇಗೆ ಆದೀತು ಎನ್ನುವುದು ಮುಂದಿನ ಪ್ರಶ್ನೆ. ಹರ್ಷೆಲ್ ಉಬ್ಬರವಿಳಿತಗಳ ಸೆಳೆತದಿಂದಾಗಿ ಭೂಮಿಯು ಭ್ರಮಿಸುವ ವೇಗದಲ್ಲೇನೂ ಇಷ್ಟು ಬದಲಾವಣೆಯಾಗಲಿಕ್ಕಿಲ್ಲ, ಆಗಿದ್ದರೆ ಅದು ಭೂಮಿಯ ಭಾರ ಹೆಚ್ಚಾಗಿದ್ದರಿಂದ ಇರಬಹುದು. ಎರಡು ಸಾವಿರ ವರ್ಷಗಳ ಅವಧಿಯಲ್ಲಿ ಭೂಮಿಯ ಮೇಲೆ ಬಂದು ಬಿದ್ದ ಉಲ್ಕೆಗಳು ಭೂಮಿಯ ಭಾರವನ್ನು ಹೆಚ್ಚಿಸಿ, ದಿನದಲ್ಲಿ ಸೆಕೆಂಡಿನ ನೂರನೆಯ ಒಂದಂಶದಷ್ಟು ಅದು ನಿಧಾನವಾಗುವಂತೆ ಮಾಡಿರಬಹುದು ಎಂದು ತರ್ಕಿಸಿದ್ದರೆಂದು ಸೈಂಟಿಫಿಕ್ ಅಮೆರಿಕನ್ ವರದಿ ಮಾಡಿದೆ.
ನೋಡಿದಿರಾ? ಒಂದು ಪ್ರಶ್ನೆ ಮತ್ತೊಂದಕ್ಕೆ ಮೂಲವಾಗುತ್ತದೆ? ವಿಜ್ಞಾನದ ಮೂಲ ಗುಣವೇ ಇದು.
50 and 100 Yeara Ago. Scientific American, Vol. 218. No. 2, Pages. 10-12, 1968


3. ನುಗ್ಗೆ ಮತ್ತು ಕೊಳಚೆ ಸಂಸ್ಕರಣೆ
ನುಗ್ಗೆಯ ಕಾಲ ಇದು. ಹಿಂದೆ ನುಗ್ಗೆಗೂ ಒಂದು ಕಾಲವಿತ್ತು. ಋತುವಿತ್ತು. ಈಗ ಇದು ಹೆಚ್ಚೂ ಕಡಿಮೆ ವರ್ಷವಿಡೀ ದೊರಕುವ ತರಕಾರಿ. ನುಗ್ಗೆಯ ಎಲೆ, ಕಾಯಿ, ಹೂವು, ಬೀಜಗಳಿಗೆಲ್ಲ ದೇಸೀ ವೈದ್ಯ ಪದ್ಧತಿಯಲ್ಲಿ ಬಲು ಪ್ರಮುಖ ಸ್ಥಾನವಿದೆ. ಇದೋ. ನಮ್ಮ ದೇಹ ಕಾಯುವ ನುಗ್ಗೆ ಈಗ ನೀರು, ಪರಿಸರವನ್ನೂ ಕಾಯಬಹುದಂತೆ. ಹೀಗೆನ್ನುತ್ತಿವೆ ಪರಿಸರ ತಂತ್ರಜ್ಞಾನದ ಸಂಶೋಧನೆಗಳಿಗೆ ಮೀಸಲಾದ ಎನ್ವಿರಾನ್ಮೆಂಟ್ ಟೆಕ್ನಾಲಜಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಎರಡು ಸಂಶೋಧನೆಗಳು. ಬ್ರೆಜಿಲ್ ಹಾಗೂ ಕಾಮೆರೂನ್ ದೇಶಗಳಲ್ಲಿ ನುಗ್ಗೆಯ ಬೀಜಗಳನ್ನು ಪರಿಸರವನ್ನು ಸ್ವಚ್ಛವಾಗಿಡಲು ಬಳಸುವ ಯೋಜನೆಗಳು ನಡೆದಿವೆ ಎನ್ನುತ್ತವೆ ಈ ವರದಿಗಳು.

ನುಗ್ಗೆ ಬೀಜವನ್ನೇ? ಅದು ಹೇಗೆ ಎಂದಿರಾ? ಹೌದು. ನುಗ್ಗೆ ಬೀಜ, ಅದರಲ್ಲೂ ಬೀಜದ ಪುಡಿ ಬಗ್ಗಡವಾದ ನೀರನ್ನು ಶುಚಿಗೊಳಿಸಬಲ್ಲುದು ಎನ್ನುವುದು ದಶಕಗಳ ಹಿಂದೆಯೇ ತಿಳಿದ ಸಂಗತಿ. ತಾಂಜಾನಿಯಾದಲ್ಲಿ ನುಗ್ಗೆ ಬೀಜದ ಪುಡಿಯನ್ನು ಕುಡಿಯುವ ನೀರನ್ನು ಶುಚಿಗೊಳಿಸಲು ಬಳಸಿದ್ದೂ ಹಳಸಲು ಸುದ್ದಿ. ನಮ್ಮಲ್ಲಿ ಇದು ಇನ್ನೂ ಪ್ರಯೋಗಶಾಲೆಯಿಂದ ಹೊರಬಂದಿಲ್ಲವೆನ್ನಿ. ಆದರೆ ಎನ್ವಿರಾನ್ಮೆಂಟಲ್ ಟೆಕ್ನಾಲಜಿಯಲ್ಲಿ ಪ್ರಕಟವಾಗಿರುವ ಪ್ರಬಂಧಗಳು ನುಗ್ಗೆ ಬೀಜದ ಪುಡಿಯನ್ನು ಕೇವಲ ಕುಡಿಯುವ ನೀರನ್ನು ಶುಚಿಗೊಳಿಸಲಷ್ಟೆ ಅಲ್ಲ, ಶೌಚಾಲಯಗಳಲ್ಲಿ ಸಂಗ್ರಹವಾಗುವ ಮಲಿನ ನೀರನ್ನು ಶುಚಿಗೊಳಿಸಲು ಹಾಗೂ ಹಾಲಿನ ಡೈರಿಯಿಂದ ಹೊರ ಸುರಿಯುವ ಕೊಳೆನೀರನ್ನು ಶುಚಿಗೊಳಿಸಲೂ ಬಳಸಲು ಪ್ರಯತ್ನಿಸಿವೆ.


ಚಿತ್ರ: ನುಗ್ಗೆಕಾಯಿ ಮತ್ತು ಅದರ ಬೀಜಗಳು

ನಗರಗಳಲ್ಲಿ ಡೈರಿ ಎಲ್ಲಿದೆ ಎಂದು ಯಾರನ್ನೂ ದಾರಿ ಕೇಳಬೇಕಿಲ್ಲ. ಒಂದೆರಡು ಕಿಲೋಮೀಟರು ದೂರದಿಂದಲೇ ಕಮಟು ವಾಸನೆ ಅದರ ಸುಳಿವನ್ನು ಬಿಟ್ಟು ಕೊಡುತ್ತದೆ. ಈ ಕಮಟು ವಾಸನೆಗೆ ಕಾರಣ ಹಾಲೊಡಕು. ಅಂದರೆ ಹಾಲನ್ನು ಸಂಸ್ಕರಿಸಿ ಮೊಸರು, ತುಪ್ಪ ಮಾಡಿದ ನಂತರ ಉಳಿಯುವ ತೆಳು ನೀರು. ಇದು ಬರೇ ನೀರಲ್ಲ. ಅಲ್ಪ ಸ್ವಲ್ಪ ಪ್ರೊಟೀನು, ಸಕ್ಕರೆ, ಕೊಬ್ಬೂ ಇದರಲ್ಲಿ ಉಳಿದಿರುತ್ತದೆ. ಸದ್ಯಕ್ಕೆ ಹಾಲೊಡಕನ್ನು ಶುಚಿಗೊಳಿಸಲು ಅಲ್ಯುಮಿನಿಯಂ ಸಲ್ಫೇಟು ಹಾಗೂ ಫೆರ್ರಿಕ್ ಕ್ಲೋರೈಡಿನಂತಹ ಲೋಹದ ಲವಣಗಳನ್ನು ಬಳಸುತ್ತಾರೆ. ಇವು ಹಾಲೊಡಕಿನಿಂದ ಉಪಯುಕ್ತ ವಸ್ತುಗಳನ್ನು ಪ್ರತ್ಯೇಕಿಸಿ ಲಾಭ ತಂದರೂ, ಕೊನೆಗೆ ಪರಿಸರವನ್ನು ಸೇರಿಕೊಂಡು ಹಾನಿಯುಂಟು ಮಾಡುತ್ತವೆ. ಇವುಗಳಿಗೆ ಬದಲಾಗಿ ಪ್ರಕೃತಿ ಸಹಜವಾದ ನುಗ್ಗೆಯ ಬೀಜವನ್ನು ಬಳಸಬಹುದೇ ಎಂದು ಬ್ರೆಜಿಲ್ಲಿನ ದಲೀಲ ಮಾರಿಯ ಫೊಮೆಂಟಿನಿ ಶ್ಮಿಟ್ ಮತ್ತು ಸಂಗಡಿಗರು ಪರೀಕ್ಷಿಸಿದ್ದಾರೆ. ನುಗ್ಗೆ ಬೀಜದ ಪುಡಿಯನ್ನು ತುಸು ಕ್ಯಾಲ್ಸಿಯಂ ಕ್ಲೋರೈಡು ಜೊತೆಗೆ ಕೂಡಿಸಿ ಹಾಲೊಡಕನ್ನು ಕಡೆದರೆ ಸಾಕಂತೆ. ಅದರಲ್ಲಿರುವ ಎಲ್ಲ ಘನವಸ್ತುಗಳೂ ಬಸಿದು, ತಿಳಿಯಾದ ನೀರು ಸಿಗುತ್ತದಂತೆ. ಅಷ್ಟೇ ಅಲ್ಲ. ಸಾಮಾನ್ಯವಾಗಿ ಎರಡು ಮೂರು ಗಂಟೆ ಕಾಲ ತೆಗೆದುಕೊಳ್ಳುವ ಕ್ರಿಯೆ ನುಗ್ಗೆ ಬೀಜದ ಪುಡಿ ಇದ್ದರೆ ಕೇವಲ ಅರ್ಧಗಂಟೆಯೊಳಗೆ ಮುಗಿಯುತ್ತದಂತೆ. ಹಾಲೊಡಕಿನಲ್ಲಿರುವ ಶೇಕಡ 90ಕ್ಕಿಂತಹ ಹೆಚ್ಚು ಬಗ್ಗಡವನ್ನು ಹೀಗೆ ತೆಗೆದು ಹಾಕಬಹುದಂತೆ. ಹೀಗಾಗಿ ನುಗ್ಗೆ ಬೀಜದ ಪುಡಿಯನ್ನು ಡೈರಿಗಳಿಂದ ಹೊರಸುರಿಯುವ ಹಾಲೊಡಕನ್ನು ಶುದ್ಧಿಗೊಳಿಸಬಹುದು ಎನ್ನುವುದು ಇವರ ಅಭಿಪ್ರಾಯ.

ಇದೇ ಬಗೆಯಲ್ಲಿಯೇ ಸಂಡಾಸಿನಲ್ಲಿ ಶೇಖರಣೆಯಾಗುವ ಕಕ್ಕಸಿನ ನೀರನ್ನು ಶುಚಿಗೊಳಿಸಬಹುದೇ ಎಂದು ಕಾಮೆರೂನಿನ ಸೈಮನ್ ಕುವಾಮ್ ಫೂಗಿ ಮತ್ತು ಸಂಗಡಿಗರು ಪರೀಕ್ಷಿಸಿದ್ದಾರೆ. ಕೊಳಚೆ ಸಂಸ್ಕರಣ ಕೇಂದ್ರಗಳಿಂದ ಹರಿದು ಬರುವ ನೀರಿಗೆ ನುಗ್ಗೆ ಬೀಜದ ಪುಡಿಯಿಂದ ತೆಗೆದ ಸಾರವನ್ನು ಹಾಕಿ ಪರೀಕ್ಷಿಸಿದ್ದಾರೆ. ಕೊಳಚೆ ನೀರು ತುಸು ನಿಚ್ಚಳವಾಯಿತಂತೆ. ಸಂಡಾಸಿನ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳ ಪ್ರಮಾಣದಲ್ಲಿ ಶೇಕಡ 80ರಷ್ಟು ಕಡಿಮೆ ಆಯಿತು. ಹೀಗೆ ಇದು ಉಪಯುಕ್ತ ವಿಧಾನವೆನ್ನಿಸಿದರೂ, ಬ್ಯಾಕ್ಟೀರಿಯಾಗಳನ್ನು ಸಂಪೂರ್ಣ ತೊಡೆದು ಹಾಕಲು ಸಾಧ್ಯವಾಗಲಿಲ್ಲ ಎಂದು ಇವರು ವರದಿ ಮಾಡಿದ್ದಾರೆ.

ಅರ್ಥಾತ್, ನುಗ್ಗೆ ಬೀಜದ ಪುಡಿ ಈ ಎರಡೂ ಕೊಳಚೆಯನ್ನು ಶುಚಿಗೊಳಿಸುವ ಆರಂಭದಲ್ಲಿ ನಿಜಕ್ಕೂ ಉಪಯುಕ್ತ ಎನ್ನುವುದು ಸ್ಪಷ್ಟ. ಏನಿಲ್ಲದಿದ್ದರೂ ಕೊಳಚೆ ಸಂಸ್ಕರಣೆಯಲ್ಲಿ ಬಳಸುವ ಕಡು ರಾಸಾಯನಿಕಗಳ ಪ್ರಮಾಣವನ್ನು ಇನ್ನು ಸ್ವಲ್ಪ ಕಡಿಮೆ ಮಾಡಬಹುದು. ಏನಂತೀರಾ? ತರಕಾರಿಯಾಗಿ ಮಾರಲಾಗದೆ ಉಳಿದ ಅಥವಾ ಬಲಿತ ನುಗ್ಗೆಕಾಯಿಗೂ ಇದರಿಂದ ತುಸು ಬೆಲೆ ಬರಬಹುದು.

ಆಕರ:
1. Yvan Anderson Ngandjui Tchangoue et al, Use of Moringa oleifera seed extracts to polish effluents from natural systems treating faecal sludge, Environmental Technology, 2018, DOI: 10.1080/09593330.2018.1435736
ಲಿಂಕ್: https://doi.org/10.1080/09593330.2018.1435736
2. Dalila Maria Formentini-Schmitt, Márcia Regina Fagundes-Klen, Márcia Teresinha Veit, Soraya Moreno Palácio, Daniela Estelita Goes Trigueros, Rosangela Bergamasco & Gustavo Affonso Pisano Mateus (2018): Potential of the Moringa oleifera saline extract for the treatment of dairy wastewater: application of the response surface methodology, Environmental Technology, DOI: 10.1080/09593330.2018.1440012

ಲಿಂಕ್; https://doi.org/10.1080/09593330.2018.1440012


4. ಆಟಿಕೆಯಲ್ಲೆಷ್ಟು ವಿಷವಿದೆ?
ಮಕ್ಕಳ ಕೋಟಲೆ ತಡೆಯದೆಯೋ, ಪ್ರೀತಿಯಿಂದಲೋ, ಕಾಲ ಕಳೆಯಲೆಂದೋ ಆಟಿಕೆಗಳನ್ನು ನೀಡುತ್ತೇವಷ್ಟೆ. ಹಿಂದೊಮ್ಮೆ ಪೇಪರಿನಿಂದಲೋ, ಬಟ್ಟೆಯಿಂದಲೋ, ಅಥವಾ ಕೈಗೆ ಸಿಕ್ಕ ಗರಿ, ಕಾಯಿ, ಇಟ್ಟಿಗೆ ಮುಂತಾದ ವಸ್ತುಗಳಿಂದ ಆಟಿಕೆಗಳನ್ನು ಮಾಡಿ ಕೊಡುತ್ತಿದ್ದುದುಂಟು. ಆದರೆ ಈಗ ಹಾಗಿಲ್ಲ. ಆಟಿಕೆಗಳದ್ದೇ ಬಲು ದೊಡ್ಡ ವ್ಯಾಪಾರವಾಗಿದೆ. ರಸ್ತೆ ಬದಿಯಲ್ಲಿ, ಸಿಗ್ನಲ್ಲುಗಳಲ್ಲಿ ಬಣ್ಣ, ಬಣ್ಣದ ವಿಮಾನಗಳನ್ನು ಮಾರುವವರನ್ನೂ ಕಂಡಿದ್ದೇವೆ. ಪುಟ್ಟ ಹೆಲಿಕಾಪ್ಟರುಗಳೂ, ಕೈಕುಲುಕುವ ಗಿಲಕಿಗಳೂ ಸಿಗುತ್ತವೆ. ಪ್ಲಾಸ್ಟಿಕ್ಕಿನಿಂದ ತಯಾರಾಗುವ ಈ ಆಟಿಕೆಗಳೆಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಪೋಷಕರನ್ನು ಕಾಡುವುದಂತೂ ನಿಜ. ಆಟಿಕೆಗಳಲ್ಲಿರುವ ಪುಟ್ಟ ಸ್ಕ್ರೂಗಳೋ, ಇತರೆ ಭಾಗಗಳನ್ನೋ ಮಕ್ಕಳು ನುಂಗಿ ಅಪಾಯಕ್ಕೊಳಗಾಗಿರುವುದೂ ಉಂಟು. ಅದಷ್ಟೇ ಅಲ್ಲ. ಈ ಆಟಿಕೆಗಳಲ್ಲಿ ಬಳಸುವ ಹೊಳಪಿನ ಬಣ್ಣಗಳೂ ಅಪಾಯಕಾರಿಯೆನ್ನುವ ಸುದ್ದಿಯನ್ನು ಎನ್ವಿರಾನ್ಮೆಂಟಲ್ ಸೈನ್ಸ್ ಅಂಡ್ ಟೆಕ್ನಾಲಜಿ ಪತ್ರಿಕೆ ಮೊನ್ನೆ ವರದಿ ಮಾಡಿದೆ.

ಅಯ್ಯೋ ಬಿಡಿ. ನಾವು ರಸ್ತೆ ಬದಿಯಲ್ಲಿ ಮಾರುವ ಆಟಿಕೆ ಕೊಳ್ಳುವುದಿಲ್ಲ. ಏನಿದ್ದರೂ ಬ್ರಾಂಡೆಡ್ ಆಟಿಕೆಗಳನ್ನೇ ಕೊಳ್ಳುವುದು. ಅವುಗಳಲ್ಲಿ ಬಳಸುವ ಬಣ್ಣ, ರಾಸಾಯನಿಕಗಳೆಲ್ಲವೂ ಅಪಾಯವಾಗದ ಮಟ್ಟದಲ್ಲಿ ಇರುತ್ತವೆ ಎಂದಿರಾ? ಇದೋ ಇಂಗ್ಲೆಂಡಿನ ಪ್ಲೈಮತ್ ವಿಶ್ವವಿದ್ಯಾನಿಲಯದ ಆಂಡ್ರ್ಯೂ ಟರ್ನರ್ ಯುರೋಪಿನಲ್ಲಿ ದೊರೆಯುವ ಸುಪ್ರಸಿದ್ಧ ಬ್ರಾಂಡುಗಳ 200 ಆಟಿಕೆಗಳನ್ನು ಪರೀಕ್ಷಿಸಿದ್ದಾರೆ. ಹೊಸದಾಗಿ ಇದ್ದಾಗ ಇವು ಚೆನ್ನಾಗಿಯೇ ಇರಬಹುದು. ಆದರೆ ಒಮ್ಮೆ ಬಳಕೆಯಾದ ಮೇಲೆ ಮತ್ತೆ ಮಾರಾಟ ಮಾಡುವ ಆಟಿಕೆಗಳಲ್ಲಿ ವಿಷ ಹೆಚ್ಚಿರಬಹುದು ಎನ್ನುವುದು ಇವರ ಶೋಧ.


ಹೊಸದಾಗಿ ಕೊಳ್ಳುವ ಬದಲಿಗೆ ಸೆಕೆಂಡ್ ಹ್ಯಾಂಡು ಆಟಿಕೆಗಳನ್ನೂ ಕೊಳ್ಳುವವರಿದ್ದಾರೆ. ಇಂತಹ ಆಟಿಕೆಗಳಲ್ಲಿ ಕ್ರೋಮಿಯಂ, ಸೀಸ, ಆರ್ಸೆನಿಕ್, ಕ್ಯಾಡ್ಮಿಯಂ, ಪಾದರಸ, ಬೇರಿಯಂ, ಸೆಲೆನಿಯಂ ಮತ್ತು ಟಿನ್ ಇದೆಯೇ ಎಂದು ಪರಿಶೀಲಿಸಿದ್ದಾರೆ. ಈ ಎಲ್ಲ ಲೋಹಗಳೂ ಮಕ್ಕಳಿಗೆ ಅಪಾಯಕಾರಿ ಎನ್ನುವ ಕಾರಣದಿಂದ ಯುರೋಪಿನ ರಾಷ್ಟ್ರಗಳು ಅವುಗಳ ಪ್ರಮಾಣವನ್ನು ಮಿತಿಗೊಳಿಸಿವೆ. ಕ್ಯಾಡ್ಮಿಯಂ, ಕ್ರೋಮಿಯಂ, ಬೇರಿಯಂ, ಟಿನ್, ಸೀಸದ ಪ್ರಮಾಣ ಆ ಮಿತಿಯನ್ನೂ ಮೀರಿ ಇದೆ ಎಂದು ಇವರು ವರದಿ ಮಾಡಿದ್ದಾರೆ. ಇವರು ಚೀಪುವ ಆಟಿಕೆಗಳಿಂದ ಆರಂಭಿಸಿ ಕಾರು, ಹೆಲಿಕಾಪ್ಟರಿನಂತಹ ಆಟಿಕೆ ವಾಹನಗಳನ್ನೂ ಪರೀಕ್ಷಿಸಿದ್ದಾರೆ. ಇದ್ದ ಮಾತ್ರಕ್ಕೆ ಅಪಾಯಕಾರಿಯೇನಲ್ಲವಲ್ಲ? ಅದು ದೇಹವನ್ನು ಸೇರಬೇಕಲ್ಲ? ಇದು ತಾನೇ ಮುಂದಿನ ಪ್ರಶ್ನೆ. ಇದನ್ನೂ ಟರ್ನರ್ ಪರೀಕ್ಷಿಸಿದ್ದಾರೆ. ಹೊಟ್ಟೆಯೊಳಗೆ ಹೊಕ್ಕಾಗ ಇವು ಎಷ್ಟು ಲೋಹವನ್ನು ಸುರಿಸಬಲ್ಲುದು ಎಂದು ಕೃತಕವಾಗಿ ಹೊಟ್ಟೆಯಲ್ಲಿರುವ ಸ್ಥಿತಿಯನ್ನು ಸೃಷ್ಟಿಸಿ ಅದರಲ್ಲಿ ಆಟಿಕೆಗಳನ್ನಿಟ್ಟು ಪರಿಶೀಲಿಸಿದ್ದಾರೆ. ಇಲ್ಲಿಯೂ ಬಹುತೇಕ ಲೋಹಗಳು ಆಟಿಕೆಗಳಿಂದ ಸೋರಿದ್ದು ಕಂಡು ಬಂದಿದೆ.

ಇದೇನೂ ಹೊಸ ವಿಷಯವಲ್ಲ. ಏಕೆಂದರೆ ಬಣ್ಣಗಳ ಈ ಗುಣವನ್ನು ಗುರುತಿಸಿಯೇ ವಿವಿಧ ಲೋಹದ ಮಿತಿಗಳನ್ನು ನಿಷ್ಕರ್ಷಿಸಲಾಗುತ್ತದೆ. ಒಟ್ಟಾರೆ ಇರುವ ಬಣ್ಣದ ಇಂತಿಷ್ಟು ಅಂಶ ಹೊರ ಸುರಿಯಬಹುದು ಎನ್ನುವುದು ಇದುವರೆಗಿನ ವಿಶ್ವಾಸವಾಗಿತ್ತು. ಆದರೆ ಟರ್ನರ್ ಹೇಳುವುದೇ ಬೇರೆ. ಅವರ ಪ್ರಕಾರ ವಿಭಿನ್ನ ಲೋಹದ ಅಂಶಗಳು ವಿಭಿನ್ನ ಪ್ರಮಾಣದಲ್ಲಿ ಹೊರಸುರಿಯುತ್ತವೆ. ಕ್ಯಾಡ್ಮಿಯಂ ಹಾಗೂ ಸೀಸದ ಹೊರತಾಗಿ ಉಳಿದ ಯಾವ ಲೋಹಗಳಲ್ಲೂ ಹೊರಸುರಿಯುವ ಪ್ರಮಾಣಕ್ಕೂ, ಮೊದಲಿದ್ದ ಪ್ರಮಾಣಕ್ಕೂ ತಾಳೆ ಇರಲಿಲ್ಲ. ಅರ್ಥಾತ್, ಈ ಆಟಿಕೆಗಳು ಸುರಕ್ಷಿತ ಎನ್ನಬೇಕಾದರೆ ಇದೀಗ ನಾವು ಮಿತಿ ಹಾಕಲು ಬಳಸುವ ಲೆಕ್ಕಾಚಾರಗಳು ಬದಲಾಗಬೇಕು. ಅದರಲ್ಲೂ ಸೆಕೆಂಡ್ ಹ್ಯಾಂಡ್ ಅಥವಾ ಮರುಬಳಸಿದ ಪ್ಲಾಸ್ಟಿಕ್ಕಿನ ವಿಷಯದಲ್ಲಿ ಇದು ಬಹಳ ಮುಖ್ಯ.

ಅಂತೂ ಆಟವನ್ನೂ, ಆಟಿಕೆಗಳನ್ನೂ ಬಲು ಗಂಭೀರವಾಗಿ ಗಮನಿಸಬೇಕಾದ ಕಾಲ ಇದು ಅಲ್ಲವೇ?

ಆಕರ: Andrew Turner, Concentrations and Migratabilities of Hazardous Elements in Second-Hand Children’s Plastic toys, Environmental Science & Technology Article ASAP, DOI: 10.1021/acs.est.7b04685 (2018)
ಲಿಂಕ್ : DOI: 10.1021/acs.est.7b04685


ಜಾಣನುಡಿ
ಫೆಬ್ರವರಿ 25.

ಜೀವಿವಿಜ್ಞಾನಿ ಫೀಬಸ್ ಏರೋನ್ ಥಿಯೊಡೋರ್ ಲೆವೀನ್ ಜನಿಸಿದ ದಿನ. 1869ರಲ್ಲಿ ಜನಿಸಿದ ಈತ ಜೀವದ ಜೀವಾಳವೆನ್ನಿಸಿದ ಡಿಎನ್ಎ ಹಾಗೂ ಆರ್ ಎನ್ ಎ ರಾಸಾಯನಿಕಗಳನ್ನು ಸಂಸ್ಕರಿಸಿದ ಖ್ಯಾತಿವಂತ. 1909ರಲ್ಲಿ ಈತ ಮೊದಲಿಗೆ ಬೂಸಿನಲ್ಲಿರುವ ನ್ಯೂಕ್ಲಿಕ್ ಆಮ್ಲದಲ್ಲಿ ರೈಬೋಸ್ ಎನ್ನುವ ಶರ್ಕರವಿದೆ ಎಂದು ಗುರುತಿಸಿದ. ಎರಡು ದಶಕಗಳು ಕಳೆದ ಮೇಲೆ ಪ್ರಾಣಿಗಳಲ್ಲಿರುವ ಥೈಮಸ್ ಗ್ರಂಥಿಯಿಂದ ಪ್ರತ್ಯೇಕಿಸಿದ ನ್ಯೂಕ್ಲಿಯಿಕ್ ಆಮ್ಲಗಳಲ್ಲಿ ರೈಬೋಸ್ ಶರ್ಕರಕ್ಕಿಂತಲೂ ಒಂದು ಆಕ್ಸಿಜನ ಪರಮಾಣು ಕಡಿಮೆಯಾಗಿರುವ ಬೇರೆಯೇ ಶರ್ಕರವಿದೆ ಎಂದು ಗುರುತಿಸಿದ. ಈ ಶರ್ಕರವನ್ನೇ ಡಿಆಕ್ಸಿರೈಬೋಸ್ ಎಂದು ಗುರುತಿಸಲಾಗುತ್ತದೆ. ತದನಂತರ ಇಂತಹ ಶರ್ಕರವಿರುವ ನ್ಯೂಕ್ಲಿಯಿಕ್ ಆಮ್ಲಗಳನ್ನು ಡಿಎನ್ಎ ಎಂದು ಕರೆಯಲಾಯಿತು. ಡಿಎನ್ಎ ಹಾಗೂ ಆರ್ ಎನ್ ಎ ಗಳಲ್ಲಿ ಈ ಶರ್ಕಗಳು ಸಾರಜನಕಯುಕ್ತ ಅಣುಗಳ ಜೊತೆಗೆ ಹೇಗೆ ಜೋಡಿಸಿಕೊಂಡಿವೆ ಎನ್ನುವುದನ್ನೂ ಲೆವೀನ್ ಪತ್ತೆ ಮಾಡಿದ್ದರು. ಇದುವೇ ಮುಂದೆ ಡಿಎನ್ಎಯ ರಚನೆ ಹಾಗೂ ತನ್ಮೂಲಕ ಜೀವಿಗಳ ಬದುಕಿನಲ್ಲಿ ಅದಕ್ಕಿರುವ ಪ್ರಾಮುಖ್ಯತೆಯ ಬಗ್ಗೆ ತಿಳಿಯಲು ಮೂಲವಾಯಿತು.
—-
ರಚನೆ ಮತ್ತು ಪ್ರಸ್ತುತಿ. ಕೊಳ್ಳೇಗಾಲ ಶರ್ಮ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x