ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com
ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)
ಈ ಸಂಚಿಕೆಯಲ್ಲಿ
ಕಣ್ಣು ಮಿಟುಕಿಸಿದಾಗ,
ಪ್ರೇಮ ನಿವೇದನೆಗೊಂದು ಹೊಸ ಶೋಧ!,
ಚಿಟ್ಟೆ ಹುಟ್ಟಿದ್ದು ಯಾವಾಗ?
ಅತಿ ದೊಡ್ಡ ಅವಿಭಾಜ್ಯ ಸಂಖ್ಯೆ
- ಕಣ್ಣು ಮಿಟುಕಿಸಿದಾಗ
ಕಣ್ಣು ಮಿಟುಕಿಸುವುದು ಎಂದರೆ ಆಡುಭಾಷೆಯಲ್ಲಿ ಕೀಟಲೆ ಮಾಡುವುದು ಎಂತಲೋ, ಸುಳ್ಳು ಹೇಳುವುದನ್ನು ತೋರಿಸಿಕೊಳ್ಳುವುದು ಎಂತಲೋ ಅರ್ಥವಾಗುತ್ತದೆ. ಪಟಪಟನೆ ಕಣ್ಣು ಮಿಟುಕಿಸಿದರೆ ನೀವು ಯಾವುದನ್ನೋ ಕಂಡು ಅಚ್ಚರಿಗೊಂಡಿದ್ದೀರಿ ಎಂದೂ ತಿಳಿಯಬಹುದು. ಹಾಗೆಯೇ ಕೇವಲ ಕಣ್ಸನ್ನೆ, ಕಣ್ಣೋಟದಲ್ಲಿಯೇ ಹೇಳಲಾಗದ್ದನ್ನು ಹೇಳುವುದ್ನು ಕುರಿತು ತಿಳಿದಿದ್ದೀರಿ. ಈಗ ಚಂಡೀಗಢದ ಸೆಂಟ್ರಲ್ ಸೈಂಟಿಫಿಕ್ ಇನ್ಸ್ಟ್ರುಮೆಂಟ್ಸ್ ಆರ್ಗನೈಸೇಶನ್ನಿನ ವಿಜ್ಞಾನಿ ರಾಮಕುಮಾರ್ ಮತ್ತು ಸಂಗಡಿಗರು ಕಣ್ಣು ಮಿಟುಕಿಸಿಯೇ ಟೀವಿ ಚಾಲಿಸುವ, ಮೋಟರು ಕುರ್ಚಿಯನ್ನು ಓಡಿಸುವ ಹಾಗೂ ಇತರೆ ಕೆಲಸಗಳನ್ನು ಮಾಡಬಹುದು ಎನ್ನುವುದನ್ನು ತೋರಿಸಿದ್ದಾರೆ. ಇವರ ಸಂಶೋಧನೆಯ ವಿವರಗಳನ್ನು ಇತ್ತೀಚಿನ ಕರೆಂಟ್ ಸೈನ್ಸ್ ಪತ್ರಿಕೆ ವರದಿ ಮಾಡಿದೆ.
ಕಣ್ಣು ಮಿಟುಕಿಸುವುದು ಒಂದು ಸಹಜ ಕ್ರಿಯೆ. ಗಾಳಿಗೆ ತೆರೆದುಕೊಂಡ ಕಣ್ಣು ಗುಡ್ಡೆಗಳು ಒಣಗದಂತೆ ಕಾಯ್ದುಕೊಳ್ಳಲು ನಿಸರ್ಗವೇ ರೂಪಿಸಿರುವ ಒಂದು ವಿಶಿಷ್ಟ ವಿಧಾನ. ನಾವು ಪ್ರತಿಬಾರಿ ಕಣ್ಣನ್ನು ಮಿಟುಕಿಸಿದಾಗಲೂ ಒಂದಿಷ್ಟು ಕಣ್ಣೀರು ಗುಡ್ಡೆಯ ಮೇಲೆ ಹರಡಿಕೊಂಡು ಗುಡ್ಡೆಯ ತೇವಾಂಶವನ್ನು ಕಾಯುತ್ತದೆ. ಇದಲ್ಲದೆ ಹೊರಗಿನಿಂದ ದೂಳು, ಕಸ ಮುಂತಾದುವುದು ಕಣ್ಣಿಗೆ ಬಂದು ಬೀಳದಂತೆ ಕಾಯುವ ಗುರಾಣಿ ಈ ಕಣ್ಣು ರೆಪ್ಪೆ. ಈಗ ಈ ಕೆಲಸಗಳೊಟ್ಟಿಗೆ ಹೊಸದೊಂದು ಕೆಲಸವನ್ನೂ ಕಣ್ಣ ರೆಪ್ಪೆ ಮಾಡಬಲ್ಲುದು ಎನ್ನುವುದೇ ರಾಜಕುಮಾರರ ಆವಿಷ್ಕಾರ.
ಇವರ ಆವಿಷ್ಕಾರಕ್ಕೆ ಪ್ರೇರಣೆ, ಕೈ ಕಾಲು ಚಾಲಿಸಲು ಸಾಧ್ಯವಿಲ್ಲದವರಿಗೆ ಹೊಸ ಶಕ್ತಿಯನ್ನು ಕೊಡಬೇಕೆನ್ನುವುದು. ಯಾವುದೇ ಕಾರಣದಿಂದಾಗಿ ಕೈ, ಕಾಲುಗಳ ಸ್ವಾಧೀನ ಇಲ್ಲದವರು ಬಹಳಷ್ಟು ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸಿರಬೇಕಾಗುತ್ತದೆ. ಮಾತು ಬರುವವರೇನೋ ನಿರ್ದೇಶಗಳನ್ನು ಕೊಡಬಹುದು. ಮಾತು ಕೇಳಿ ಕೆಲಸ ಮಾಡುವ ಯಂತ್ರಗಳೂ ಇವೆ. ಆದರೆ ಮಾತಾಡುವುದೂ ಕಷ್ಟವಾದವರ ಗತಿ ಬಲು ದೀನವಾದದ್ದು. ಇಂತಹವರಿಗಾಗಿ ಈ ಆವಿಷ್ಕಾರ.
ರಾಜಕುಮಾರರ ಆವಿಷ್ಕಾರ ಒಂದು ತಂತ್ರಾಂಶ ಎನ್ನಬಹುದು. ಇದು ಕಣ್ಣಿನ ರೆಪ್ಪೆ ಚಲಿಸಿದಾಗ ಮಿದುಳಿನಲ್ಲಿ ಹುಟ್ಟುವ ವಿದ್ಯುತ್ ಬದಲಾವಣೆಗಳನ್ನೇ ಗುರುತಿಸಿ ಯಂತ್ರಗಳನ್ನು ಚಾಲಿಸುವ ನಿರ್ದೇಶಗಳನ್ನಾಗಿ ಬದಲಿಸುತ್ತದೆ. ಮಿದುಳಿನ ಚಟುವಟಿಕೆಗಳನ್ನು ಗುರುತಿಸಲು ಬಳಸುವ ಇಇಜಿ ಅಥವಾ ಎಲೆಕ್ಟ್ರೋ ಎನ್ಕೆಫಲೋಗ್ರಫಿ ತಂತ್ರವನ್ನೇ ಬಳಸಿಕೊಂಡು ಯಂತ್ರ ಚಾಲನೆಗೆ ನಿರ್ದೇಶಗಳನ್ನು ರೂಪಿಸುತ್ತದೆ. ಇದನ್ನು ಬಳಸಿ ಕಣ್ಣನ್ನು ಒಮ್ಮೆ ಮಿಟುಕಿಸಿದಾಗ ಟೀವಿ ಚಾಲನೆಯಾಗುವಂತೆಯೂ, ಎರಡು ಬಾರಿ ಮಿಟುಕಿಸಿದಾಗ ಚಾನೆಲ್ಲು ಬದಲಿಸುವಂತೆಯೂ, ಮೂರು ಬಾರಿ ಮಿಟುಕಿಸಿದಾಗ ಸದ್ದು ಹೆಚ್ಚುವಂತೆಯೂ, ನಾಲ್ಕು ಬಾರಿ ಮಿಟುಕಿಸಿದಾಗ ಟೀವಿಯನ್ನು ಆಫ್ ಮಾಡುವಂತೆಯೂ ನಿರ್ದೇಶಗಳನ್ನು ನೀಡಬಹುದು. ಹೀಗೆ ಮಾಡುವುದು ಸಾಧ್ಯ ಎಂದು ರಾಜಕುಮಾರ್ ತಂಡ ತೋರಿಸಿದೆ. ಕಣ್ಣು ಮಿಟುಕಿಸಿ ಕೊಟ್ಟ ಸಂದೇಶಗಳನ್ನು ತೆರೆಯೊಂದರ ಮೇಲೆ ಪ್ರದರ್ಶಿಸಿ ತೋರಿಸಿದ್ದಾರೆ.
ಇದರಿಂದೇನು ಪ್ರಯೋಜನ ಎನ್ನಬೇಡಿ! ಟೀವಿ ಚಾಲನೆಗೆ ಇಲೆಕ್ಟ್ರಾನಿಕ್ ರಿಮೋಟನ್ನು ಚಾಲಿಸಬೇಕು. ಇದು ತುಸು ಸುಲಭ. ಆದರೆ ಇದೇ ತಂತ್ರವನ್ನು ಬಳಸಿ ಮೋಟರುಗಳ ಚಲನೆಯನ್ನೂ ನಿರ್ದೇಶಿಸಬಹುದಂತೆ. ವಿದ್ಯುತ್ ಚಾಲಿತ ಗಾಲಿ ಇರುವ ಕುರ್ಚಿಯನ್ನು ಹೀಗೆ ಕಣ್ಣ ಸನ್ನೆಯಿಂದಲೇ ಚಾಲಿಸುವುದು ಇದರಿಂದ ಸಾಧ್ಯವಾಗುತ್ತದೆ. ಅರ್ಥಾತ್, ಕೈ ಕಾಲು ಸ್ವಾಧೀನ ಇಲ್ಲದೆ, ಮಾತನ್ನೂ ಆಡಲು ಕಷ್ಟವಿರುವವರು ತಮ್ಮ ಕಣ್ಸನ್ನೆಯಿಂದಲೇ ಕುರ್ಚಿಯನ್ನು ಚಾಲಿಸುವುದು ಸಾಧ್ಯ. ಅಷ್ಟರ ಮಟ್ಟಿಗೆ ಅವರು ಸ್ವಾವಲಂಬಿಯಾಗಬಹುದು ಎನ್ನುತ್ತಾರೆ ರಾಜಕುಮಾರ್.
ಇವಷ್ಟೆ ಉಪಯೋಗವೇ ಎನ್ನಬೇಡಿ. “ರೆಪ್ಪೆ ಮಿಟುಕಿಸಿ ಬೇರೆ, ಬೇರೆ ಉಪಕರಣಗಳನ್ನು ಆಯ್ದುಕೊಳ್ಳುವಂತೆ ಮಾಡಬಹುದು. ತದನಂತರ ಮತ್ತೆ ರೆಪ್ಪೆ ಮಿಟುಕಿಸಿ ಆ ಉಪಕರಣಗಳನ್ನು ಚಾಲಿಸುವ ನಿರ್ದೇಶಗಳನ್ನು ಕೊಡಬಹುದು. ಹೀಗೆ ಟೀವಿ, ಕುರ್ಚಿ, ರೇಡಿಯೋ, ನಲ್ಲಿ, ವಿದ್ಯುದ್ದೀಪಗಳು ಮುಂತಾದ ಸಾಧನಗಳನ್ನು ಚಾಲಿಸಲು ಕಷ್ಟವಾಗಲಿಕ್ಕಿಲ್ಲ ಎನ್ನುತ್ತಾರೆ ರಾಜಕುಮಾರ್.”
‘ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು” ಎನ್ನುವ ಪ್ರೇಮಿಯ ಮಾತು ಇನ್ನು ಮೇಲೆ “ನಿನ್ನ ಕಣ್ಣ ಮಿಟುಕಿನಲ್ಲೇ ನೂರು ಕೆಲಸ ಕಂಡೆನು,” ಎಂದಾಗಬಹುದು!
ಆಕರ: Subhra Sankha Sarma et al., Multi-functional system for persons with disabilities using electroencephalography signals of eye blink, Current Science, VOL. 114, NO. 1, Pp 113-115, 10 JANUARY 2018,
ಲಿಂಕ್: http://www.currentscience.ac.in/Volumes/114/01/0193.pdf
ಚುಟುಕು ಚುರುಮುರಿ
- ಪ್ರೇಮ ನಿವೇದನೆಗೊಂದು ಹೊಸ ಶೋಧ
ಹ್ಹ. ಹ್ಹ. ಸಂಶೋಧಕರು ಎಂದರೆ ಸದಾ ಸೀರಿಯಸ್ ಆಗಿರುವುವರು ಎಂದು ಯಾರು ಹೇಳಿದ್ದು? ರೆಫ್ರಿಜರೇಟರುಗಳ ಕಾರ್ಯ ವಿಧಾನದ ಬಗ್ಗೆ ಸಂಶೋಧನೆ ನಡೆಸಿದ ಸಂಶೋಧಕರೊಬ್ಬರು ಕೂಲ್ ಆಗಿ ಶೋಧ ಪತ್ರದ ಮೂಲಕವೇ ತಮ್ಮ ಪ್ರೇಮ ನಿವೇದನೆಯನ್ನು ಪ್ರಕಟಿಸಿದ ಸುದ್ದಿ ಬಂದಿದೆ. ಚೀನಾದ ಹುವಯಾಂಗ್ ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ. ಪದವಿಗಾಗಿ ಸಂಶೋಧನೆ ನಡೆಸುತ್ತಿರುವ ರೂಇ ಲಾಂಗ್ ಫಿಸಿಕ್ಸ್ ಎ: ಸ್ಟಾಟಿಸ್ಟಿಕಲ್ ಮೆಕ್ಯಾನಿಕ್ಸ್ ಅಂಡ್ ಇಟ್ಸ್ ಅಪ್ಲಿಕೇಶನ್ಸ್ ಪತ್ರಿಕೆಯಲ್ಲಿ ತನ್ನ ಪ್ರಬಂಧದಲ್ಲಿ, ಸಾರ್ವಜನಿಕವಾಗಿ ತನ್ನ ಪ್ರಿಯತಮೆಯನ್ನು ಮದುವೆಯಾಗುವೆಯಾ ಎಂದು ಬೇಡಿಕೊಂಡಿದ್ದಾನೆ.
ಅಲ್ಲ. ಗಂಭೀರವಾದ ಸಂಶೋಧನೆಯ ವಿವರಗಳನ್ನು ಪ್ರಕಟಿಸುವ ಪತ್ರಿಕೆಗಳು ಪ್ರೇಮ, ಪ್ರೀತಿ ಮುಂತಾದ ವಿಷಯಗಳ ಪ್ರಕಟಣೆಗೂ ಅವಕಾಶ ಮಾಡಿಕೊಡುತ್ತದೆಯೋ ಎಂದು ಪ್ರಶ್ನಿಸಬೇಡಿ. ಪತ್ರಿಕೆಗಳ ನಿಯಮಗಳಿಗೆ ಅಡ್ಡಿಯಾಗದಂತೆ ಜಾಣತನದಿಂದ ಲಾಂಗ್ ತನ್ನ ಪ್ರಿಯತಮೆಗೆ ಸಂದೇಶ ನೀಡಿದ್ದಾರೆ. ಸಂಶೋಧನಾ ಪತ್ರಿಕೆಗಳಲ್ಲಿ ಪ್ರಯೋಗಗಳ ವಿವರಗಳು ಹಾಗೂ ಅವುಗಳಿಂದ ಕಲಿತ ವಿಷಯಗಳ ಬಗ್ಗೆ ಮಾಹಿತಿ ನೀಡಿದ ಮೇಲೆ ಸಂಶೋಧಕರು ತಮಗೆ ನೆರವಾದ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸಲು ಅವಕಾಶವಿದೆ. ಸಾಮಾನ್ಯವಾಗಿ ಸಂಶೋಧನೆಗೆ ಧನ ಸಹಾಯ ನೀಡಿಸ ಸಂಸ್ಥೆಗಳಿಗೆ, ಫಲಿತಾಂಶಗಳನ್ನು ಚರ್ಚಿಸಿದ ಸಹೋದ್ಯೋಗಿಗಳಿಗೆ, ಮಾರ್ಗದರ್ಶನ ತೋರಿದ ಹಿರಿಯ ಗುರುಗಳಿಗೆ ಎಂದೆಲ್ಲ ಕೃತಜ್ಞತೆಗಳನ್ನು ಸಂಶೋಧಕರು ತೋರಿ ಪ್ರಬಂಧವನ್ನು ಪ್ರಕಟಿಸಿರುತ್ತಾರೆ. ಆದರೆ ರೂಇ ಲಾಂಗ್ ತನ್ನ ಸಂಶೋಧನೆಗಳು ಮುಗಿಯುವವರೆಗೂ ತಾಳ್ಮೆ ತೋರಿ ಸಹಕಾರ, ನೆರವು ನೀಡಿದ ಗೆಳತಿಗೆ ಕೃತಜ್ಞತೆಯನ್ನು ತೋರಿದ್ದಲ್ಲದೆ, “ನನ್ನನ್ನು ಮದುವೆಯಾಗುವೆಯಾ?” ಎಂಬ ಬಾಲಂಗೋಚಿಯನ್ನೂ ಸೇರಿಸಿದ್ದು ಸುದ್ದಿಯಾಗಿದೆ.
ಆದರೆ ಇದು ಹೊಸ ವಿಷಯವೇನಲ್ಲ! ಎರಡು ವರ್ಷಗಳ ಹಿಂದೆ ಕರೆಂಟ್ ಬಯಾಲಜಿ ಪತ್ರಿಕೆಯಲ್ಲಿ ಡೈನೋಸಾರುಗಳ ಬಗ್ಗೆ ಪ್ರಕಟವಾದ ಸಂಶೋಧನೆಯ ಸುದ್ದಿಯಲ್ಲಿ ಆ ಸಂಶೋಧಕ ಕೆಲೆಬ್ ಬ್ರೌನ್ ಕೂಡ ಹೀಗೇ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದ ನಂತರ ಕೊನೆಯಲ್ಲಿ ಲೋರ್ನಾ ಓಬ್ರೈನ್ ನೀಡುತ್ತಿರುವ ನಿರಂತರ ಸಹಕಾರವನ್ನು ಒತ್ತಿ ಹೇಳಲು ಇಚ್ಛಿಸುತ್ತೇನೆ ಎಂದು ನುಡಿದು “ನನ್ನನ್ನು ಮದುವೆಯಾಗುವೆಯಾ?” ಎಂದು ಕೊನೆಗೊಳಿಸಿದ್ದರು.
ಅಂತೂ ಪ್ರೀತಿ, ಪ್ರೇಮಕ್ಕೆ ಫಿಸಿಕ್ಸು, ಬಯಾಲಜಿ ಎನ್ನುವುದು ಇಲ್ಲ ಅಲ್ಲವೇ?
ಆಕರ:
1. Rui Long et al., Performance analysis for minimally nonlinear irreversible refrigerators at finite cooling power, Physica A: Statistical Mechanics and its Applications Volume 96, 15 April 2018, Pages 137-146
2. Caleb M. Brown, Donald M. Henderson, A New Horned Dinosaur Reveals Convergent Evolution in Cranial Ornamentation in Ceratopsidae, Current Biology 25, 1641–1648, June 15, 2015
ಲಿಂಕ್: 1. https://www.sciencedirect.com/science/article/pii/S0378437117313614;
http://www.cell.com/current-biology/pdf/S0960-9822(15)00492-3.pdf
3. ಚಿಟ್ಟೆ ಹುಟ್ಟಿದ್ದು ಯಾವಾಗ.
ಇದೆಂಥ ತರಲೆ ಪ್ರಶ್ನೆ. ಚಿಟ್ಟೆ ಹುಟ್ಟಿದ್ದು ಮೊಟ್ಟೆ ಒಡೆದಾಗ ಅಲ್ಲವೇ ಎಂದಿರಾ? ಪ್ರಶ್ನೆ ಅದಲ್ಲ. ಚಿಟ್ಟೆ ಈ ಭೂಮಿಯ ಮೇಲೆ ಅವತರಿಸಿದ್ದು ಯಾವಾಗ? ಇದು ಸ್ವಲ್ಪ ಗಂಭೀರ ಪ್ರಶ್ನೆಯೇ ಆದರೂ ತಕ್ಷಣವೇ ಎಷ್ಟೋ ಕೋಟಿ ವರ್ಷಗಳ ಹಿಂದೆ ಎಂದು ಉತ್ತರಿಸಿ ಬಿಡಬಹುದು. ಆದರೆ ಚಿಟ್ಟೆ ಭೂಮಿಯ ಮೇಲೆ ಮೊದಲು ಅವತರಿಸಿದಾಗ ಮಕರಂದ ಇತ್ತೇ? ಮಕರಂದವನ್ನು ಸುರಿಸುತ್ತಿದ್ದ ಹೂಗಿಡಗಳು ಇದ್ದುವೇ ಎಂದು ಪ್ರಶ್ನಿಸಿದರೆ ಉತ್ತರ ಕಷ್ಟವಾಗುತ್ತದೆ. ಆದರೆ ಕಷ್ಟವೇ ವಿಜ್ಞಾನಿಗಳಿಗೆ ಇಷ್ಟದ ಪ್ರಶ್ನೆ. ಏಕೆಂದರೆ ಈ ಪ್ರಶ್ನೆಗೆ ಉತ್ತರ ಸಿಕ್ಕರೆ ಚಿಟ್ಟೆಗಳು ಹಾಗೂ ಹೂಗಿಡಗಳ ನಡುವಿನ ಸಂಬಂಧ ಹೇಗೆ ಉಂಟಾಯಿತು ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಂತಾಗುತ್ತದೆ.
19 ಕೋಟಿ ವರ್ಷ ಹಳೆಯ ಚಿಟ್ಟೆಯ ಮಿಲಿಮೀಟರಿನ ಐದುನೂರರಲ್ಲೊಂದು ಅಂಶ
ಹೌದು. ಚಿಟ್ಟೆಗಳು ಮತ್ತು ಹೂಗಿಡಗಳ ನಡುವಣ ಸಂಬಂಧ ಬಹಳ ವಿಚಿತ್ರವಾದದ್ದು. “ನೀ ನನಗಿದ್ದರೆ ನಾ ನಿನಗೆ. ಭೇದವು ಏಕೆ ನಮ್ಮೊಳಗೆ,” ಎನ್ನುವ ಕತ್ತೆ-ಕುದುರೆಯ ಹಾಡಿನಂಥದ್ದು. ಹೂವಿನ ಗಿಡಗಳಿಗೆ ಚಿಟ್ಟೆಗಳಿಂದ ಲಾಭ. ಚಿಟ್ಟೆಗಳಿಗೆ ಹೂ ಗಿಡಗಳಿಂದ ಆಹಾರ. ಹೀಗೆ ಎರಡೂ ಪರಸ್ಪರ ಲಾಭವೊದಗಿಸಿಕೊಳ್ಳುತ್ತವೆ. ಇಂತಹ ಸಂಬಂಧ ಹುಟ್ಟಿದ್ದು ಹೇಗೆ? ಇಷ್ಟು ಗಟ್ಟಿಯಾದ ಸಂಬಂಧ ಇರಬೇಕೆಂದರೆ ಒಂದೋ ಹೂಗಿಡಗಳು ಹಾಗೂ ಚಿಟ್ಟೆಗಳು ಒಟ್ಟೊಟ್ಟಿಗೆ ಅವತರಿಸಿ, ಒಟ್ಟೊಟ್ಟಿಗೇ ಬದಲಾಗಿರಬೇಕು. ಇಲ್ಲವೇ ಹೂಗಿಡಗಳು ಮೊದಲು ಹುಟ್ಟಿ ಅನಂತರ ಚಿಟ್ಟೆಗಳು ಅವತರಿಸಿರಬೇಕು ಎನ್ನುವ ತರ್ಕ ಸಹಜವಾಗಿ ತೋರುತ್ತದೆ. ಇದುವರೆವಿಗೂ ಇದನ್ನೇ ನಂಬಲಾಗಿತ್ತು. ಏಕೆಂದರೆ ಹೂ ಗಿಡಗಳು ಈ ಭೂಮಿಯ ಮೇಲೆ ಮೊದಲು ಕಾಣಿಸಿಕೊಂಡಿದ್ದು ಸುಮಾರು 19-20 ಕೋಟಿ ವರ್ಷಗಳ ಹಿಂದೆ. ಅದಕ್ಕೂ ಮುನ್ನ ಹೂಗಳನ್ನು ಬಿಡದ ನಗ್ನಬೀಜದ ಗಿಡಗಳು, ಝರೀಗಿಡಗಳು, ಕಲ್ಲು ಹೂಗಳಂತಹ ಸಸ್ಯಗಳೇ ಭೂಮಿಯನ್ನು ಹಸಿರಾಗಿಸಿದ್ದುವು. ಆದ್ದರಿಂದ ಆ ಕಾಲದಲ್ಲಿ ಚಿಟ್ಟೆಗಳು ಇರಲಿಲ್ಲ ಎಂದು ಊಹಿಸಲಾಗಿತ್ತು. ಇದಕ್ಕೆ ಪೂರಕವೋ ಎನ್ನುವಂತೆ ಅಷ್ಟು ಹಳೆಯ ಕಾಲದಲ್ಲಿ ಚಿಟ್ಟೆಗಳು ಇದ್ದ ಬಗ್ಗೆ ಯಾವ ಪುರಾವೆಯೂ ಸಿಕ್ಕಿರಲಿಲ್ಲ. ಹೀಗಾಗಿ, ಈಗ ಹೂಗಳ ಮಕರಂದವನ್ನೇ ಸೇವಿಸಿ ಬದುಕುವ ಚಿಟ್ಟೆಗಳು, ಹೂಗಿಡಗಳನ್ನೇ ಆಸರೆಯಾಗಿರಿಸಿಕೊಂಡ ಪತಂಗಗಳು ಹೂಗಿಡಗಳು ಅವತರಿಸಿದ ಮೇಲಷ್ಟೆ ಅವತರಿಸಿರಬೇಕು ಎಂದು ನಂಬಲಾಗಿತ್ತು.
ಈ ವಿಶ್ವಾಸಕ್ಕೆ ಈಗ ಧಕ್ಕೆ ಬಂದಿದೆ. ನೆದರ್ಲ್ಯಾಂಡಿನ ಯುತ್ರೆಕ್ಟ್ ವಿಶ್ವವಿದ್ಯಾನಿಲಯದ ಪಳೆಯುಳಿಕೆ ತಜ್ಞ ಬಾಸ್ ಸ್ಕೂಟಿಬ್ರಗ್ಗಿ ಮತ್ತು ಸಂಗಡಿಗರು 20 ಕೋಟಿ ವರ್ಷಗಳಿಗೂ ಹಿಂದಿನ ಚಿಟ್ಟೆಯ ರೆಕ್ಕೆಯ ಹುರುಪೆಗಳನ್ನು ಗುರುತಿಸಿದ್ದಾರೆ.
ಜರ್ಮನಿಯಲ್ಲಿ ದೊರೆತ ಶಿಲೆಗಳಲ್ಲಿರುವ ಪಳೆಯುಳಿಕೆಗಳನ್ನು ಅಧ್ಯಯನ ಮಾಡುವಾಗ 20 ಕೋಟಿ ವರ್ಷಗಳ ಶಿಲಾಪದರದಲ್ಲಿ ಚಿಟ್ಟೆಗಳ ರೆಕ್ಕೆಯಲ್ಲಿರುವ ಹುರುಪೆಗಳ ಪಳೆಯುಳಿಕೆಗಳನ್ನು ಕಂಡಿದ್ದಾರೆ. ಅತಿ ಸೂಕ್ಷ್ಮವಾಗಿರುವ ಇವುಗಳನ್ನು ಇಲೆಕ್ಟ್ರಾನ್ ಸೂಕ್ಷ್ಮದರ್ಶಕದಡಿ ಇಟ್ಟು ಹಿಗ್ಗಲಿಸಿ ನೋಡಿದ್ದಾರೆ. ಅವುಗಳಲ್ಲಿರುವ ವಿನ್ಯಾಸಗಳು ನಮಗೆ ಇದುವರೆವಿಗೂ ಕಂಡಿರುವ ಚಿಟ್ಟೆ, ಪತಂಗಗಳ ಹುರುಪೆಗಳಲ್ಲಿ ಇರುವಂತೆ ಇದೆಯೇ ಹೊರತು ಇನ್ಯಾವುದೇ ಇಂದಿನ ಅಥವಾ ಅಳಿದು ಹೋದ ಕೀಟಗಳ ಅಂಗಗಳಲ್ಲಿ ಇದ್ದಂತೆ ಇಲ್ಲವಂತೆ. ಹೀಗಾಗಿ ಇದು ಚಿಟ್ಟೆಗಳ ಪೂರ್ವಜರ ಉಳಿಕೆಗಳು ಎಂದು ಇವರು ತೀರ್ಮಾನಿಸಿದ್ದಾರೆ. ಜೊತೆಗೇ ಇವುಗಳಿರುವ ಶಿಲಾಪದರಗಳಲ್ಲಿ ನಗ್ನಬೀಜಿಗಳ ಪಳೆಯುಳಿಕೆಗಳಿವೆಯೇ ಹೊರತು ಹೂಗಿಡಗಳದ್ದಲ್ಲ. ಆದ್ದರಿಂದ ಹೂ ಗಿಡಗಳು ಅವತರಿಸಿಯೇ ಇಲ್ಲದ ಕಾಲದಲ್ಲಿಯಾಗಲೇ ಚಿಟ್ಟೆಗಳು ಹುಟ್ಟಿಯಾಗಿದ್ದಿರಬೇಕು ಎನ್ನುವುದು ಇವರ ಅನಿಸಿಕೆ. ಈ ಶೋಧವನ್ನು ಸೈನ್ಸ್ ಅಡ್ವಾನ್ಸಸ್ ಪತ್ರಿಕೆ ಇತ್ತೀಚೆಗೆ ಪ್ರಕಟಿಸಿದೆ.
ಹೂಗಿಡಗಳಿಲ್ಲದೆ ಇವು ಬದುಕಿದ್ದಾದರೂ ಹೇಗೆ? ಬಹುಶಃ ಅವತರಿಸಿದ ಮೊದಮೊದಲಲ್ಲಿ ಇವು ನಗ್ನಬೀಜಿಗಳ ಮೈ ಮೇಲೆ ಒಸರುತ್ತಿದ್ದ ರಸವನ್ನು ಸೇವಿಸಿ ಬದುಕಿದ್ದಿರಬಹುದು. ಅನಂತರದ ಕಾಲದಲ್ಲಿ ಹೂಗಿಡಗಳು ಅವತರಿಸಿದ ಮೇಲೆ ಅವುಗಳ ಹೂಗಳ ಆಶ್ರಯ ಪಡೆದಿರಬಹುದು. ನಗ್ನಬೀಜಿಗಳ ತೊಗಟೆಯಲ್ಲಿನ ಸಂದುಗಳಲ್ಲಿ ತೂರಿಸಿ ರಸ ಹೀರಲು ಅನುವು ಮಾಡಿಕೊಟ್ಟ ಹೀರುಕೊಳವೆಯಂತಹ ಅಂಗಗಳೇ ಮುಂದೆ ಹೂವಿನೊಳಗೆ ಮೂತಿಯಿಟ್ಟು ಮಕರಂದವನ್ನು ಹೀರಲು ನೆರವಾಗಿರಬಹುದು ಎಂದು ಇವರು ಊಹಿಸಿದ್ದಾರೆ.
ಯಾವುದಕ್ಕೋ ನೆರವಾದ ಅಂಶ, ಮತ್ಯಾವುದೋ ಸಂದರ್ಭದಲ್ಲಿಯೂ ಅನುಕೂಲವಾಗಿದ್ದುದರಿಂದ ಚಿಟ್ಟೆ, ಪತಂಗಗಳು ಉಳಿದ ಜೀವಿಗಳಂತೆ ನಾಶವಾಗದೆ ಬದುಕುಳಿದು, ವೈವಿಧ್ಯಮಯವಾಗಿ ವಿಕಾಸವಾಗಲು ಅವಕಾಶ ಮಾಡಿಕೊಟ್ಟಿರಬೇಕು ಎನ್ನುವುದು ಇವರ ಊಹೆ.
ಆಕರ: Timo J. B. van Eldijk et al., A Triassic-Jurassic window into the evolution of Lepidoptera, Science Advances, 2018;4: e1701568, published online 10th January 2018
ಲಿಂಕ್: van Eldijk et al., Sci. Adv. 2018;4: e1701568
4. ಐವತ್ತನೆಯ ಅತಿ ದೊಡ್ಡ ಅವಿಭಾಜ್ಯ ಸಂಖ್ಯೆ
ಅವಿಭಾಜ್ಯ ಸಂಖ್ಯೆಗಳು ಅಂದರೆ ಗೊತ್ತಿರಬೇಕಲ್ಲ? ಅದೇ ಸಂಖ್ಯೆ ಹಾಗೂ ಒಂದರಿಂದ ಮಾತ್ರ ಅವಿಭಾಜ್ಯ ಸಂಖ್ಯೆಗಳನ್ನು ಭಾಗಿಸಬಹುದು. ಉಳಿದಂತೆ ಇನ್ನು ಯಾವ ಸಂಖ್ಯೆಯಿಂದಲೂ ಅದನ್ನು ಶೇಷ ಉಳಿಯದ ಹಾಗೆ ಭಾಗಿಸಲು ಬಾರದು. ಅವಿಭಾಜ್ಯ ಸಂಖ್ಯೆಗಳಲ್ಲಿ ಅತಿ ಸಣ್ಣದು ಎಂದರೆ ಅದು ಸಂಖ್ಯೆ ಒಂದು. ಒಂದನ್ನು ಒಂದರಿಂದಲ್ಲದೆ ಬೇರಾವ ಸಂಖ್ಯೆಯಿಂದಲೂ ಭಾಗಿಸಿ ಮತ್ತೊಂದು ಪೂರ್ಣಾಂಕವನ್ನು ಪಡೆಯುವುದು ಸಾಧ್ಯವಿಲ್ಲ. ಅದರ ನಂತರ ಎರಡು. ಆಮೇಲೆ ಮೂರು, ಏಳು, ಹನ್ನೊಂದು… ಹೀಗೆ ಉದ್ದಕ್ಕೂ ಅವಿಭಾಜ್ಯ ಸಂಖ್ಯೆಗಳನ್ನು ಕಾಣಬಹುದು. ಆದರೆ ಗಣಿತಜ್ಞರಿಗೆ ಅತಿ ದೊಡ್ಡ ಅವಿಭಾಜ್ಯ ಸಂಖ್ಯೆ ಯಾವುದಿರಬಹುದು ಎನ್ನುವುದು ತೀರದ ಕುತೂಹಲ. ಅತಿ ದೊಡ್ಡ ಸಂಖ್ಯೆ ಎಂದು ನೀವು ಒಂಭತ್ತು, ಒಂಭತ್ತು ಎಂದು ಸೇರಿಸಿಕೊಂಡು ಅತಿ ದೊಡ್ಡ ಸಂಖ್ಯೆ ಎನ್ನಬಹುದು. ಆದರೆ ಅದು ಅವಿಭಾಜ್ಯ ಎನ್ನಿಸಿಕೊಳ್ಳುವುದಿಲ್ಲ. ಏಕೆಂದರೆ ಒಂದಲ್ಲದೆ, ಒಂಭತ್ತು, ಮೂರರಿಂದಲೂ ಅದನ್ನು ಸುಲಭವಾಗಿ, ನಿಶ್ಶೇಷವಾಗಿ ಭಾಗಿಸಿಬಿಡಬಹುದು. ಇದೇ ಸಮಸ್ಯೆ. ಅತಿ ದೊಡ್ಡ ಅವಿಭಾಜ್ಯ ಸಂಖ್ಯೆಯನ್ನು ಬರೆಯಲು, ಗುರುತಿಸಲು ಸುಲಭ, ಸರಳ ಸೂತ್ರಗಳಿಲ್ಲ.
ಸೂತ್ರವಿಲ್ಲದ ಗಣಿತ ಆದರೇನಂತೆ. ಸಮಸ್ಯೆಯಂತೂ ಇದ್ದೇ ಇದೆ. ಅತಿ ದೊಡ್ಡ ಅವಿಭಾಜ್ಯ ಸಂಖ್ಯೆ ಹಾಗೆಯೇ ಪೈ ಸಂಖ್ಯೆಯ ದಶಮಾಂಶ ರೂಪ ಗಣಿತದ ಎರಡು ಮುಗಿಯದ ಸಮಸ್ಯೆಗಳು. ಅದಕ್ಕೇ ಗಣಿತಜ್ಞರು ಸದಾ ಅತಿ ದೊಡ್ಡ ಅವಿಭಾಜ್ಯ ಸಂಖ್ಯೆಯ ಹುಡುಕಾಟದಲ್ಲಿ ಇರುತ್ತಾರೆ. ಇದೀಗ ಐವತ್ತನೆಯ ಅತಿ ದೊಡ್ಡ ಅವಿಭಾಜ್ಯ ಸಂಖ್ಯೆಯನ್ನು ಪತ್ತೆ ಮಾಡಿದ್ದಾಗಿ ಸುದ್ದಿ ಬಂದಿದೆ. ಅಮೆರಿಕೆಯ ಟೆನ್ನೆಸೀ ರಾಜ್ಯದ ಪ್ರಜೆ ಜೊನಾಥನ್ ಪೇಸ್ ಇದನ್ನು ಸಾಧಿಸಿದ್ದಾನೆ. ಹಾಗಂತ ಜೊನಾಥನ್ ಏನೂ ದೊಡ್ಡ ಗಣಿತಜ್ಞನಲ್ಲ. ಒಬ್ಬ ಸಾಧಾರಣ ಇಂಜಿನೀಯರು. ಬಿಡುವಿನ ವೇಳೆಯಲ್ಲಿ ತನ್ನ ಕಂಪ್ಯೂಟರನ್ನು ಬಳಸಿಕೊಂಡು ಅವಿಭಾಜ್ಯ ಸಂಖ್ಯೆಯನ್ನು ಗುರುತಿಸಿದ್ದಾನೆ.
ಜೊನಾಥನ್ ಗುರುತಿಸಿದ ಸಂಖ್ಯೆಯನ್ನು ಸೆಕೆಂಡಿಗೆ ಒಂದು ಅಂಕೆಯಂತೆ ಹೇಳಲು ಆರಂಭಿಸಿದರೆ ಸುಮಾರು 270 ದಿನಗಳವರೆಗೂ ಉಸಿರು ನಿಲ್ಲಿಸದೆ ಹೇಳುತ್ತಲೇ ಇರಬೇಕಾಗಬಹುದು. ಏಕೆಂದರೆ ಅದು ಅಷ್ಟು ಉದ್ದದ ಸಂಖ್ಯೆ. ಅದರಲ್ಲಿ ಒಟ್ಟು ಎರಡು ಕೋಟಿ ಮೂವತ್ತೆರಡು ಲಕ್ಷದ ನಲವತ್ತೊಂಭತ್ತು ಸಾವಿರದ ನಾಲ್ಕುನೂರ ಇಪ್ಪತ್ತೈದು ಅಂಕೆಗಳಿವೆ. ಸರಿಯಾಗಿ ಒಂದು ತಿಂಗಳ ಹಿಂದೆ, ಕ್ರಿಸ್ಮಸ್ ಹಬ್ಬದ ಮರುದಿನ ಜೊನಾಥನ್ ಇದನ್ನು ಗುರುತಿಸಿದ. ಅನಂತರ ಇದು ನಿಜವಾಗಿಯೂ ಅವಿಭಾಜ್ಯವೋ ಅಲ್ಲವೋ ಎಂದು ಪರಿಶೀಲಿಸಲಾಯಿತು. ತದನಂತರ ಇದು ನಿಜಕ್ಕೂ ಅತಿ ದೊಡ್ಡ ಅವಿಭಾಜ್ಯ ಸಂಖ್ಯೆ ಎಂದು ಪ್ರಕಟಿಸಲಾಯಿತು.
ಜೊನಾಥನ್ ಇದನ್ನು ಗುರುತಿಸಿದ್ದು ಹೀಗೆ. ಸಂಖ್ಯೆ ಎರಡನ್ನು ಇವನು ಸುಮಾರು ಏಳು ಕೋಟಿ ಎಪ್ಪತ್ತೆರಡು ಲಕ್ಷದ ಮೂವತ್ತೆರಡು ಸಾವಿರದ ಒಂಭೈನೂರ ಹದಿನೇಳು ಬಾರಿ ಗುಣಿಸಿ ದೊರೆತ ದೊಡ್ಡ ಮೊತ್ತದಲ್ಲಿ ಸಂಖ್ಯೆ ಒಂದನ್ನು ಕಳೆದನಂತೆ. ಆಗ ಈ ದೊಡ್ಡ ಸಂಖ್ಯೆ ಸಿಕ್ಕಿತಂತೆ. ಅಬ್ಬಾ! ಎಂದಿರಾ. ಇರಲಿ. ನೀವೂ ಹೀಗೆ ಅತಿ ದೊಡ್ಡ ಅವಿಭಾಜ್ಯ ಸಂಖ್ಯೆಯನ್ನು ಗುರುತಿಸಬಹುದು. ಅಂತಹ ಅವಕಾಶವನ್ನು ಮರ್ಸೆನ್ನಿ ಅವಿಭಾಜ್ಯ ಸಂಖ್ಯೆಯ ಶೋಧ ಸಂಸ್ಥೆ ನೀಡಲಿದೆ. ಇಪ್ಪತ್ತು ವರ್ಷಗಳ ಹಿಂದೆ ಆರಂಭಗೊಂಡ ಈ ಸಂಸ್ಥೆ ನಮ್ಮ, ನಿಮ್ಮಂತಹವರ ಕಂಪ್ಯೂಟರುಗಳನ್ನೇ ಬಳಸಿಕೊಂಡು ಅವಿಭಾಜ್ಯ ಸಂಖ್ಯೆಗಳನ್ನು ಹುಡುಕುತ್ತಿದೆ. ಇದಕ್ಕೆ ಹಿಂದೆ 49ನೆ ಅತಿ ದೊಡ್ಡ ಅವಿಭಾಜ್ಯ ಸಂಖ್ಯೆಯನ್ನು ಗುರುತಿಸಿದ್ದು ಜನವರಿ 2016ರಲ್ಲಿ. ಎರಡು ವರ್ಷಗಳ ನಂತರ ಮತ್ತೊಂದು ಸಂಖ್ಯೆ ಸಿಕ್ಕಿದೆ. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಮರ್ಸೆನ್ನಿ ಸಂಸ್ಥೆ ಕೇವಲ ಹದಿನೈದು ಹೊಸ ಸಂಖ್ಯೆಗಳನ್ನು ಗುರುತಿಸಿದೆ ಅಷ್ಟೆ. ಮರ್ಸೆನ್ನಿ ಎನ್ನುವುದು ಮುನ್ನೂರೈವತ್ತು ವರ್ಷಗಳ ಹಿಂದೆ ಅವಿಭಾಜ್ಯ ಸಂಖ್ಯೆಗಳನ್ನು ಅಧ್ಯಯನ ಮಾಡಿದ್ದ ಫ್ರೆಂಚ್ ಗಣಿತಜ್ಞನ ಹೆಸರು. ಅವನ ಹೆಸರಿನಲ್ಲಿ ಈ ಸಾಹಸ ಮುಂದುವರೆದಿದೆ ಅಷ್ಟೆ.
ಈ ಹುಡುಕಾಟದಲ್ಲಿ ಪಾಲ್ಗೊಳ್ಳಬೇಕಾದರೆ ನೀವು ಮಾಡಬೇಕಾದ್ದು ಇಷ್ಟೆ. ಈ ಹುಡುಕಾಟಕ್ಕೆಂದು ಇರುವ ಅಂತರ್ಜಾಲದ ತಂಡಕ್ಕೆ ಸೇರಿಕೊಳ್ಳಬೇಕು. ಅಲ್ಲಿರುವ ಉಚಿತ ತಂತ್ರಾಂಶವನ್ನು ಡೌನ್ಲೋಡ್ ಮಾಡಿ ನಿಮ್ಮ ಕಂಪ್ಯೂಟರಿನಲ್ಲಿ ಹಾಕಿಕೊಳ್ಳಬೇಕು. ಅನಂತರ ಹುಡುಕಾಟವನ್ನು ಆರಂಭಿಸಬೇಕು. ಹಾಂ. ನೀವು ಹೊಸದೊಂದು ಸಂಖ್ಯೆಯನ್ನು ಗುರುತಿಸಿದ ಅದೃಷ್ಟಶಾಲಿಗಳಾದರೆ ನಿಮಗೆ 3000 ಡಾಲರು ಅಂದರೆ ಸುಮಾರು ಒಂದೂಮುಕ್ಕಾಲು ಲಕ್ಷ ರೂಪಾಯಿ ಬಹುಮಾನವೂ ದೊರೆಯಲಿದೆ.
ಅದೃಷ್ಟವಂತರು ಎಂದು ಯಾಕೆ ಹೇಳಿದ್ದು ಎಂದರೆ ಹವ್ಯಾಸಿಯಾಗಿ ಜೊನಾಥನ್ ಸುಮಾರು 14 ವರ್ಷಗಳಿಂದಲೂ ಇಂತಹ ಸಂಖ್ಯೆಗೆ ಹುಡುಕುತ್ತಿದ್ದ. ಅವನಿಗೆ ದೊರಕಿದ್ದು ಈಗ.
ಆಕರ: https://www.mersenne.org/primes/press/M77232917.html
ಜಾಣನುಡಿ
ಜನವರಿ 21.
ಫೆಲಿಕ್ಸ್ ಹಾಫ್ಮನ್ ಜನಿಸಿದ ದಿನ. ಈತ 1868ರಲ್ಲಿ ಅಂದರೆ ಸರಿಯಾಗಿ ನೂರೈವತ್ತು ವರ್ಷಗಳ ಹಿಂದೆ ಜರ್ಮನಿಯ ಕೈಗಾರಿಕೋದ್ಯಮಿಗಳ ವಂಶದಲ್ಲಿ ಜನಿಸಿದ. ಔಷಧ ವಿಜ್ಞಾನಿಯಾಗಿ ಹೊಸ ಔಷಧಗಳ ಶೋಧದಲ್ಲಿ ತೊಡಗಿಕೊಂಡ ಈತ ನಾವೀಗ ನಿತ್ಯವೂ ನೋವು ಕಡಿಮೆ ಮಾಡಲು ಬಳಸುವ ಆಸ್ಪಿರಿನ್ ಮಾತ್ರೆಗಳನ್ನು ಹುಟ್ಟು ಹಾಕಿದವ. ಅದಕ್ಕೂ ಮೊದಲು ಯುರೋಪಿನಲ್ಲಿ ಸಾಮಾನ್ಯವಾಗಿ ಕಾಣಬರುವ ವಿಲ್ಲೋ ಮರಗಳಿಂದ ಸ್ಯಾಲಿಸಿಲಿಕ್ ಆಮ್ಲವನ್ನು ತೆಗೆಯಲಾಗುತ್ತಿತ್ತು. ಇದನ್ನು ಸೋಡಿಯಂ ಜೊತೆಗೆ ಕೂಡಿಸಿ, ಸೋಡಿಯಂ ಸ್ಯಾಲಿಸಿಲೇಟ್ ರೂಪದಲ್ಲಿ ಔಷಧವನ್ನಾಗಿ ಬಳಸುತ್ತಿದ್ದರು. ಆದರೆ ಈ ಔಷಧ ಅತಿಯಾದ ಹೊಟ್ಟೆಯುರಿಯನ್ನುಂಟು ಮಾಡುತ್ತಿತ್ತು. ಬಹಳ ಕಹಿಯಾಗಿಯೂ ಇತ್ತು. ಇದನ್ನು ಸೇವಿಸುತ್ತಿದ್ದ ತನ್ನ ತಂದೆಗೆ ಅನುಕೂಲವಾಗಲಿ ಎಂದು ಹಾಫ್ಮನ್ ಸ್ಯಾಲಿಸಿಲಿಕ್ ಆಮ್ಲದ ಜೊತೆಗೆ ಅಸೆಟಿಕ್ ಆಮ್ಲವನ್ನೂ ಕೂಡಿಸಿ ಅಸಿಟೈಲ್ ಸ್ಯಾಲಿಸಿಲೇಟ್ ಎನ್ನುವ ಲವಣವನ್ನು ರೂಪಿಸಿದ. ಕಹಿಯೂ ಕಡಿಮೆ. ಉರಿಯೂ ಕಡಿಮೆ ಆದ್ದರಿಂದ ಇದು ಬಹಳ ಬೇಗನೆ ಜನಪ್ರಿಯವಾಯಿತು. ಆಸ್ಪಿರಿನ್ ಮನೆ ಮಾತಾಯಿತು.
ಅಂದ ಹಾಗೆ ಹೀಗೆ ನೋವು ನಿವಾರಿಸುವ ಔಷಧವನ್ನು ನೀಡಿದವನೇ ಹೆರಾಯಿನ್ ಎನ್ನುವ ಮಾದಕ ವಸ್ತುವನ್ನು ತಯಾರಿಸುವ ವಿಧಾನವನ್ನೂ ರೂಪಿಸಿದ. ಹೆರಾಯಿನ್ ಔಷಧ ಆಗಲೇ ಪರಿಚಿತವಾಗಿದ್ದರೂ, ಅದನ್ನು ರಾಸಾಯನಿಕವಾಗಿ ತಯಾರಿಸಲು ಸಾಧ್ಯವಾಗಿದ್ದು ಹಾಫ್ಮನ್ನನ ತಂತ್ರದಿಂದ. ಔಷಧ ನೀಡಿದವನೇ ವಿಷವನ್ನೂ ನೀಡಿದ ಎನ್ನುವುದು ಎಂಥ ವಿಚಿತ್ರ ಅಲ್ಲವೇ?
—-
ರಚನೆ ಮತ್ತು ಪ್ರಸ್ತುತಿ: ಕೊಳ್ಳೇಗಾಲ ಶರ್ಮ. ಜಾಣಸುದ್ದಿ ಕುರಿತ ಸಂದೇಹ, ಸಲಹೆಗಳಿಗೆ ನೇರವಾಗಿ 9886640328 ಈ ನಂಬರಿಗೆ ವಾಟ್ಸಪ್ಪು ಮಾಡಿ.