ಜಾಣಸುದ್ದಿ 7: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com

ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)

 ಸಂಚಿಕೆಯಲ್ಲಿ
1. ರೋಗ ಹೆಚ್ಚಿಸುವ ಸಂರಕ್ಷಕ
2. ಅಂತರಿಕ್ಷದ ಅವಾಂತರ
3.ಹಲ್ಲು ಹೇಳುವ ಕಥೆ
4. ಹಸಿರು ನೀಲಿ ಜೀನ್ಸು

1. ರೋಗ ಹೆಚ್ಚಿಸುವ ಸಂರಕ್ಷಕ
ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ ಎಂತಲೋ ಆಕಳು ವೇಷದ ಹುಲಿ ಎಂತಲೋ ಗಾದೆ ಮಾತನ್ನು ಕೇಳಿಯೇ ಇದ್ದೇವೆ. ನಮ್ಮ ನಂಬುಗೆಗೆ ಮೋಸವಾದಾಗ ಹೀಗೆ ಹೇಳುತ್ತೇವೆ. ಈ ಮಾತು ಟ್ರೆಹ್ಯಾಲೋಸ್ ಎನ್ನುವ ಸಕ್ಕರೆಯ ವಿಷಯದಲ್ಲಿ ನಿಜ ಎನ್ನುವ ವರದಿ ಬಂದಿದೆ. ನಮ್ಮನ್ನು ಕಾಪಾಡುತ್ತದೆಂದು ವಿಶ್ವಾಸವಿಟ್ಟ ವಸ್ತುವೇ ತೊಂದರೆ ನೀಡುವ ವಸ್ತುವೂ ಆಗಬಹುದು ಎನ್ನುವುದೇ ಈ ಸುದ್ದಿ. ನೇಚರ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನೆಯ ಪ್ರಕಾರ ಆಹಾರವನ್ನು ಸುರಕ್ಷಿತವಾಗಿ ಕಾದಿಡಲು ಬಳಸುವ ಟ್ರೆಹ್ಯಾಲೋಸ್ ಎಂಬ ಸಕ್ಕರೆಯೇ ಆಹಾರ ವಿಷಮಯವಾಗಲೂ ಕಾರಣವಿರಬಹುದಂತೆ. ಹೀಗೆಂಬ ಶೋಧವನ್ನು ಅಮೆರಿಕೆಯ ಹ್ಯೂಸ್ಟನ್ನಿನಲ್ಲಿರುವ ಬೇಲರ್ ವೈದ್ಯಕೀಯ ಕಾಲೇಜಿನ ಸೂಕ್ಷ್ಮಜೀವಿ ತಜ್ಞ ಜೆ. ಕಾಲಿನ್ಸ್ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ.

ಸಕ್ಕರೆ ಎಂದರೆ ನಿಮಗೆ ಗೊತ್ತು. ಗ್ಲುಕೋಸು, ಸುಕ್ರೋಸು, ಫ್ರಕ್ಟೋಸು ಎನ್ನುವಂತಹ ಕಾರ್ಬನ್ನು, ಹೈಡ್ರೊಜನ್ನು ಮತ್ತು ಆಕ್ಸಿಜನ್ನುಗಳಿಂದಾದ ಉದ್ದುದ್ದ ಅಣುಗಳಲ್ಲಿ ಒಂದು ಬಗೆ. ಈ ರಾಸಾಯನಿಕಗಳ ವರ್ಗಕ್ಕೆ ಕಾರ್ಬೊಹೈಡ್ರೇಟು ಎನ್ನುವ ಹೆಸರೂ ಉಂಟು. ಇವು ಶಕ್ತಿದಾಯಕ ರಾಸಾಯನಿಕಗಳು. ಅರ್ಥಾತ್, ನಮ್ಮ, ನಿಮ್ಮೆಲ್ಲರ ಚಟುವಟಿಕೆಗಳಿಗೂ ಇವುಗಳೇ ಮೂಲ. ಟ್ರೆಹ್ಯಾಲೋಸ್ ಇಂತಹುದೇ ಒಂದು ಕಾರ್ಬೊಹೈಡ್ರೇಟು. ಎರಡು ಗ್ಲುಕೋಸಿನ ಅಣುಗಳು ಭದ್ರವಾಗಿ ಬೆಸೆದುಕೊಂಡು ಈ ರಾಸಾಯನಿಕವಾಗಿರುತ್ತದೆ. ಹಲವಾರು ಆಹಾರ ಪದಾರ್ಥಗಳಲ್ಲಿ ಇವನ್ನು ಕಾಣಬಹುದು. ಕರುಳಿನಲ್ಲಿರುವ ಟ್ರೆಹ್ಯಾಲೇಸ್ ಎನ್ನುವ ಕಿಣ್ವ ಇದನ್ನು ಗ್ಲುಕೋಸನ್ನಾಗಿ ಒಡೆಯುತ್ತದೆ. ಟ್ರೆಹ್ಯಾಲೋಸಿಗೆ ಮೈಕೋಸು ಮತ್ತು ಟ್ರೆಮ್ಯಾಲೋಸ್ ಎನ್ನುವ ಹೆಸರುಗಳೂ ಉಂಟು.

ಸಾಮಾನ್ಯವಾಗಿ ಸಸ್ಯಾಹಾರಗಳಲ್ಲಿ ಏನಿದ್ದರೂ ಗ್ಲುಕೋಸು, ಪಿಷ್ಟ, ಫ್ರಕ್ಟೋಸು, ಸೆಲ್ಯುಲೋಸುಗಳೇ ಹೆಚ್ಚು. ಟ್ರೆಹ್ಯಾಲೋಸಿನ ಅಂಶ ಬಹಳ ಕಡಿಮೆ. ಆದರೆ ಮೀನು, ಸೀಗಡಿ. ಅಣಬೆಗಳಲ್ಲಿ ಇದು ಕಾಣಸಿಗುತ್ತದೆ. ಸಸ್ಯಗಳಲ್ಲೂ ಬರಗಾಲದಲ್ಲಿ ಇದರ ಉತ್ಪಾದನೆ ಸಾಮಾನ್ಯಕ್ಕಿಂತಲೂ ಹೆಚ್ಚು ಎನ್ನುತ್ತಾರೆ. ಕೀಟಗಳ ರಕ್ತದಲ್ಲಿ ಗ್ಲುಕೋಸಿಗಿಂತಲೂ ಟ್ರೆಹ್ಯಾಲೋಸೇ ಹೆಚ್ಚು. ಶಕ್ತಿದಾಯಕವಷ್ಟೆ ಅಲ್ಲದೆ ಕೆಲವು ಸಂದರ್ಭಗಳಲ್ಲಿ ಇದು ಆಹಾರ ಪದಾರ್ಥಗಳು ನೀರು ಕಳೆದುಕೊಂಡು ಹಾಳಾಗದಂತೆ ರಕ್ಷಿಸುತ್ತವೆ ಕೂಡ. ಹೀಗಾಗಿ ಆಹಾರ ಪದಾರ್ಥಗಳನ್ನು ಒಣಗಿಸಿ ಸಂಗ್ರಹಿಸಿಡಬೇಕಾದಾಗ ಟ್ರೆಹ್ಯಾಲೋಸನ್ನು ಬಳಸುವುದು ವಾಡಿಕೆಯಾಗಿ ಹೋಗಿದೆ. ಜೊತೆಗೆ ಇದು ತುಸು ವಿಶೇಷ ಪರಿಮಳವನ್ನೂ, ರುಚಿಯನ್ನೂ ನೀಡುತ್ತದೆ. ಬಹು ಅಲ್ಪ ಪ್ರಮಾಣದಲ್ಲಿ ಬಳಸುವುದರಿಂದ ಇದು ಯಾವ ವಸ್ತುವನ್ನೂ ಬೆಳೆಯಲು ಸಾಲದು.

ಜೊತೆಗೆ ಸಹಜವಾಗಿಯೇ ನಿಸರ್ಗದಲ್ಲಿ ದೊರೆಯುವ ಟ್ರೆಹ್ಯಾಲೋಸಿನಿಂದ ಯಾವ ಅಪಾಯವೂ ಇಲ್ಲವೆಂದು ಪರಿಗಣಿಸಲಾಗಿತ್ತು. ಅದರೆ ಕಾಲಿನ್ಸ್ ಅವರ ಸಂಶೋಧನೆ ಇದು ನೇರವಾಗಿಯಲ್ಲದಿದ್ದರೂ ಪರೋಕ್ಷವಾಗಿಯಾದರೂ ತೊಂದರೆಯನ್ನುಂಟು ಮಾಡಬಲ್ಲುದು ಎಂದು ಸೂಚಿಸಿದೆ. ಇದು ಕ್ಲಾಸ್ಟ್ರೀಡಿಯಂ ಡಿಫಿಸಿಲಿ ಎನ್ನುವ ಬ್ಯಾಕ್ಟೀರಿಯಾದ ರೋಗಕಾರಿ ತಳಿಗಳ ಬೆಳವಣಿಗೆಗೆ ನೆರವಾಗುತ್ತದಂತೆ. ಕ್ಲಾಸ್ಟ್ರೀಡಿಯಂ ಬಗೆಯ ಬ್ಯಾಕ್ಟೀರಿಯಾಗಳು ಕರುಳನ್ನು ಮೊದಲು ಕಾಡುತ್ತವೆ. ಬೆಳೆಯುತ್ತಾ ನರಗಳನ್ನು ಬಾಧಿಸುವ ವಿಷವನ್ನು ಸ್ರವಿಸುತ್ತವೆ. ಇವುಗಳಿಂದಾಗಿ ಧನುರ್ವಾಯು, ಬಾಟುಲಿಸಮ್ಮಿನಂತಹ ರೋಗಗಳು ಕಾಣಿಸಬಹುದು. ಕ್ಲಾಸ್ಟ್ರೀಡಿಯಂ ಡಿಫಿಸಿಲಿ ಬಗೆ ಕರುಳು ಬೇನೆಗೆ ಕಾರಣ. ಇದು ಸೋಂಕಿರುವ ಆಹಾರವನ್ನು ಸೇವಿಸಿದಾಗ ಹೊಟ್ಟೆ ಕಿವುಚುವುದು, ವಾಂತಿ, ಬೇಧಿ ಕಾಣಿಸಿಕೊಳ್ಳುತ್ತದೆ. ಯುರೋಪು ಮತ್ತು ಅಮೆರಿಕೆಯಲ್ಲಿ ಇದರ ಕಾಟ ಇತ್ತೀಚೆಗೆ ಹೆಚ್ಚಾಗಿದೆ. ಇದಕ್ಕೆ ಕಾರಣ ಆಹಾರವನ್ನು ಕಾದಿಡಲು ಬಳಸುವ ಟ್ರೆಹ್ಯಾಲೋಸ್ ಇರಬಹುದು ಎನ್ನುವುದು ಕಾಲಿನ್ಸ ತಂಡದ ಅನುಮಾನ.

ಕಾಲಿನ್ಸ್ ಮತ್ತು ಸಂಗಡಿಗರು ಖಾಯಿಲೆಯನ್ನುಂಟು ಮಾಡುವ ಬಗೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ಆರ್ಟಿ 078 ಮತ್ತು ಆರ್ಟಿ 027 ಎಂಬ ಎರಡು ವಿಶಿಷ್ಟ ತಳಿಗಳು ದೊರಕಿದುವು. ಇವುಗಳಲ್ಲಿ ಎರಡು ಆರ್ ಎನ್ ಎ ರಾಸಾಯನಿಕಗಳಲ್ಲಿ ದೋಷವಿತ್ತು. ಈ ದೋಷಗಳು ಬ್ಯಾಕ್ಟೀರಿಯಾಗೆ ತೊಂದರೆಯುಂಟು ಮಾಡುವ ಬದಲಿಗೆ ಅವು ಟ್ರೆಹ್ಯಾಲೋಸನ್ನು ಬಳಸಿ ಬೆಳೆಯಲು ಅನುವು ಮಾಡಿಕೊಟ್ಟಿವೆಯಂತೆ. ಅತ್ಯಲ್ಪ ಪ್ರಮಾಣದಲ್ಲಿ ಟ್ರೆಹ್ಯಾಲೋಸ್ ದೊರೆತರೂ ಸಮೃದ್ಧವಾಗಿ ಬೆಳೆಯುವ ಸಾಮರ್ಥ್ಯ ಇವೆರಡರಲ್ಲೂ ಇವೆಯಂತೆ. ಹೀಗಾಗಿ ಬೇರೆ ತಳಿಗಳು ಬೆಳೆಯದ ಸಂದರ್ಭದಲ್ಲಿಯೂ ಇವೆರಡೂ ಸೊಂಪಾಗಿ ಬೆಳೆದು ಖಾಯಿಲೆ ಉಂಟು ಮಾಡುತ್ತಿರಬಹುದು ಎಂದು ಕಾಲಿನ್ಸ್ ಮತ್ತು ಸಂಗಡಿಗರು ಸಂದೇಹಿಸಿದ್ದಾರೆ.

ಆಕರ: J. Collins et al., Dietary trehalose enhances virulence of epidemic Clostridium difficile, Nature, Published online 3 January 2018 ( doi:10.1038/nature25178)
By Ben Mills – Own work, Public Domain, https://commons.wikimedia.org/w/index.php?curid=10829392

ಲಿಂಕ್: https://www.nature.com/articles/nature25178


2. ಅಂತರಿಕ್ಷದ ಅವಾಂತರ
ಯಾರಿಗೇ ಆಗಲಿ ಹಾರುವುದು ಎಂದರೆ ಏನೋ ಸಂಭ್ರಮ. ಇನ್ನು ವಿಶೇಷ ದಿರಿಸು ತೊಟ್ಟು ಭೂಮಿಯನ್ನೇ ಬಿಟ್ಟು ಅಂತರಿಕ್ಷಕ್ಕೆ ಹಾರುವ ಅಂತರಿಕ್ಷ ಯಾನಿಗಳೆಂದರೆ ಹೆಚ್ಚೂ ಕಡಿಮೆ ಸೂಪರ್ ಹೀರೋಗಳಂತೆಯೇ ಸರಿ. ಪ್ರಪಂಚದಲ್ಲಿ ಹೀಗೆ ಅಂತರಿಕ್ಷ ಯಾನಿ ಆಗುವ ಸಂದರ್ಭ ಎಲ್ಲರಿಗೂ ದೊರಕುವುದಿಲ್ಲ ಎನ್ನುವ ಮಾತು ಬಿಡಿ. ಕೆಲವೊಮ್ಮೆ ಈ ಸಾಹಸ ಕಾರ್ಯವೂ ಬಲು ಪೇಚಿನ ಸಂಗತಿಯಾಗಬಹುದು. ಅಂತರಿಕ್ಷಕ್ಕೆ ಹಾರಿದ ಮೊತ್ತ ಮೊದಲ ಅಮೆರಿಕನ್ನರಿಗೂ ಹೀಗೊಂದು ಪೇಚಿನ ಸಂದರ್ಭ ಒದಗಿ ಬಂದಿತ್ತಂತೆ.

ಅಂತರಿಕ್ಷಕ್ಕೆ ಕರೆದೊಯ್ಯಲು ಮರ್ಕ್ಯುರಿ ನೌಕೆ ಅಣಿ

ಅಂದು ಮೇ 5, 1961. ಮೊತ್ತ ಮೊದಲ ಅಮೆರಿಕನ್ನನನ್ನು ಅಂತರಿಕ್ಷಕ್ಕೆ ಕರೆದೊಯ್ಯಲು ಮರ್ಕ್ಯುರಿ ನೌಕೆ ಅಣಿಯಾಗಿತ್ತು. ಆ ಅದೃಷ್ಟಶಾಲಿ ಅಲಾನ್ ಶೆಪರ್ಡ್ ಕೂಡ ಸಿದ್ಧವಾಗಿ ನೌಕೆಯೊಳಗೆ ಕುಳಿತಾಗಿತ್ತು. ಹೇಳಿ ಕೇಳಿ ಅಂತರಿಕ್ಷಯಾನವಲ್ಲವೇ? ಮೈ ತುಂಬಾ ಭಾರಿ ದಿರಿಸು. ತಲೆಗೂದಲಿಗಿಂತಲೂ ಹೆಚ್ಚು ಮೈ ತುಂಬ ವಿವಿಧ ಉಪಕರಣಗಳಿಗೆ ಜೋಡಿಸಿದ ತಂತಿಗಳಿದ್ದುವು. ಮೊದಲ ಪ್ರಯಾಣವಾದ್ದರಿಂದ ಶೆಪರ್ಡರ ದೇಹದಲ್ಲಾಗುವ ಎಲ್ಲ ಬದಲಾವಣೆಗಳನ್ನೂ ತಿಳಿದುಕೊಳ್ಳುವ ಆಸೆಯಿಂದ ಹೀಗೆ ಮಾಡಿದ್ದರು.

ಕೌಂಟ್ ಡೌನು ಆರಂಭವಾಗಿಯಾಗಿತ್ತು. ವಾಹನ ಇನ್ನೇನು ಅಂತರಿಕ್ಷಕ್ಕೆ ಹಾರಬೇಕು, ಶೆಪರ್ಡರಿಗೆ ಮೂತ್ರದ ಅವಸರ ಆಯಿತಂತೆ. ಶಾಲೆಯಲ್ಲಾದರೆ ಕಿರುಬೆರಳನ್ನು ಎತ್ತಿ ತೋರಬಹುದಿತ್ತು. ಆದರೆ ಇಲ್ಲಿ ಅದು ಕೂಡ ಸಾಧ್ಯವಿಲ್ಲವೇ! ನೌಕೆ ಹತ್ತುವ ಮೊದಲು ಕಾಫಿ ಕುಡಿದದ್ದರಿಂದಲೋ, ಅಥವಾ ಹೊಸ ಸಾಹಸಕ್ಕೆ ಕೈಹಾಕುತ್ತಿರುವ ಆತಂಕದಿಂದಲೋ ಅಂತೂ ಅವಸರವೋ ಅವಸರ. ಅಲ್ಲೇನು ಟಾಯ್ಲೆಟ್ಟೇ, ಮೂತ್ರಿಯೇ? ಜೊತೆಗೆ ಇಳಿದು ಬಂದು ಮೂತ್ರ ವಿಸರ್ಜಿಸಿಬಿಡೋಣ ಎಂದರೆ ಎಲ್ಲ ವೈರು, ತಂತಿಗಳನ್ನು ತೆಗೆಯಲು ಹಲವು ಗಂಟೆಗಳಾದರೂ ಬೇಕಿತ್ತು. ದಿರಿಸನ್ನು ಬಿಚ್ಚಲೂ ಹರಸಾಹಸ ಪಡಬೇಕಿತ್ತು.

ಹೋಗಲಿ ಚಡ್ಡಿಯಲ್ಲೇ ಮಕ್ಕಳು ಮೂತ್ರಿಸುವಂತೆ ಸ್ಪೇಸುಸೂಟಿನೊಳಗೇ ಗುಟ್ಟಾಗಿ ಮಾಡಿಬಿಡೋಣ ಎಂದರೆ ಮೈ ತುಂಬಾ ತಂತಿಗಳನ್ನು ಹಾಕಿದ್ದಾರೆ. ಅವೆಲ್ಲವೂ ಚಾಲಿಸಿರುವಾಗ ಒದ್ದೆಯಾಗಿ ವಿದ್ಯುತ್ ಶಾಕ್ ಹೊಡೆದರೆ? ಅಥವಾ ಉಪಕರಣಗಳು ಹಾಳಾದರೆ? ಪಾಪ. ಅತ್ತ ತಡೆಯಲೂ ಆಗದೆ, ಇತ್ತ ವಿಸರ್ಜಿಸಲೂ ಆಗದೆ ಶೆಪರ್ಡ್ ತಮ್ಮ ಅಳಲು ತೋಡಿಕೊಂಡರಂತೆ. ಕೊನೆಗೆ ಎಲ್ಲ ಉಪಕರಣಗಳನ್ನೂ ಸ್ವಿಚ್ ಆಫ್ ಮಾಡಿ, ದಿರಿಸಿನಲ್ಲಿಯೇ ಮೂತ್ರ ಮಾಡಲು ಅನುಮತಿ ದೊರಕಿತಂತೆ. ಅಂತೂ ಮೊದಲ ಪ್ರಯಾಣ ಉಚ್ಚೆ ಬಟ್ಟೆಯೊಂದಿಗೇ, ಘಾಟು ವಾಸನೆಯೊಂದಿಗೇ ಆಯಿತು ಎಂದು ನಾಟಿಲಸ್ ಪತ್ರಿಕೆ ವರದಿ ಮಾಡಿದೆ.

ಅವಸರವಾದಾಗ ಮೂತ್ರ ಕಟ್ಟಿ ಹಿಡಿಯುವುದಕ್ಕಿಂತ ಬೇರೆ ಶಿಕ್ಷೆ ಇಲ್ಲ ಅಲ್ಲವೇ?

ಆಕರ: http://nautil.us/blog/99-problems-and-a-wild-gecko-space-orgy-is-just-one


3. ಹಲ್ಲು ಹೇಳುವ ಕಥೆ
ದನದ ಸಂತೆಗೆ ಹೋಗುವವರಿಗೆ ಈ ವಿಷಯ ಚೆನ್ನಾಗಿ ಗೊತ್ತಿರುತ್ತದೆ. ಹಸು, ಎತ್ತು ಇಲ್ಲವೇ ಕುದುರೆಯನ್ನು ಕೊಳ್ಳುವ ಮುನ್ನ ಅದರ ಹಲ್ಲು ಹಿಡಿದು ನೋಡುತ್ತಾರೆ. ಹಲ್ಲಿನಿಂದಲೇ ಪ್ರಾಣಿಯ ಆರೋಗ್ಯ ಹಾಗೂ ಅದರ ತಳಿಯನ್ನೂ ಗುರುತಿಸಬಹುದಂತೆ. ಇವು ಹೊಸ ಹಲ್ಲುಗಳು. ಹಳೆಯ ಹಲ್ಲುಗಳು ಹೇಳುವ ಕಥೆಯ ಬಗ್ಗೆ ಗೊತ್ತೇ? ಇದೋ ಈ ವಾರ ಅಂತಹ ಎರಡು ಸುದ್ದಿಗಳು ಬಂದಿವೆ. ಕಲ್ಲಾದ ಹಲ್ಲುಗಳು ಕೋಟಿ ವರ್ಷಗಳ ಹಿಂದೆ ಬದುಕಿದ್ದ ಪ್ರಾಣಿಗಳ ಆಹಾರಾಭ್ಯಾಸ ಏನಿತ್ತು ಅಂತ ತಿಳಿಸಿವೆ. ಹಾಗೆಯೇ ಎಲ್ಲೋ ಬಿದ್ದ ಹಲ್ಲಿನಿಂದಲೇ ಅದರ ಒಡೆಯರು ಹೆಣ್ಣೋ, ಗಂಡೋ ಎಂದು ತಿಳಿಯಬಹುದಂತೆ.

ಟೀರೋಸಾರುಗಳ ಹಳೆಯ ಹಲ್ಲುಗಳು

ಕೋಟಿ ವರ್ಷಗಳ ಹಿಂದಿನ ಹಲ್ಲೇ ಎಂದಿರಾ? ಹೌದು ಸುಮಾರು 6 ಕೋಟಿ ವರ್ಷಗಳ ಹಿಂದೆ ಬದುಕಿ ಮರೆಯಾದ ಡೈನೊಸಾರುಗಳ ಹಲ್ಲಿನ ಕಥೆ ಇದು. ಈ ಹಲ್ಲುಗಳು ಈಗ ಕಲ್ಲಾಗಿ ಕಾಣಸಿಗುತ್ತವೆ. ಸುಮಾರು ಹತ್ತೊಂಭತ್ತು ಕೋಟಿ ವರ್ಷಗಳಷ್ಟು ಹಳೆಯ ಇಂತಹ ಹಲ್ಲುಗಳನ್ನು ಬೆದಕಿದ್ದಾರೆ ಇಂಗ್ಲೆಂಡಿನ ಲೈಸೆಸ್ಟರಶೈರಿನ ಪಳೆಯುಳಿಕೆ ತಜ್ಞ ಜೋರ್ಡಾನ ಬೆಸ್ಟ್ವಿಕ್. ಇವರು ಲಂಡನ್ನಿನ ಸಂಗ್ರಹಾಲಯಗಳಲ್ಲಿದ್ದ ಹಾರುವ ಡೈನೊಸಾರುಗಳೆಂದೇ ಖ್ಯಾತಿ ಪಡೆದ ಟೀರೋಸಾರುಗಳ ಹಲ್ಲುಗಳನ್ನು ಪರಿಶೀಲಿಸಿದ್ದಾರೆ. ಈ ಹಲ್ಲುಗಳನ್ನು ಸೂಕ್ಷ್ಮದರ್ಶಕದಡಿಯಲ್ಲಿಟ್ಟು ಮೂರು ಆಯಾಮದ ಅಂದರೆ 3ಡಿ ಚಿತ್ರಗಳನ್ನು ತೆಗೆದಿದ್ದಾರೆ. ಅನಂತರ ಅವುಗಳಲ್ಲಿರುವ ಕಚ್ಚು, ಗೀರುಗಳನ್ನು ಹಿಗ್ಗಲಿಸಿ ದ್ದಾರೆ. ಇವು ಮೀನುಗಳನ್ನು ತಿನ್ನುತ್ತಿದ್ದವೋ, ಹಾರಾಡುವ ಕೀಟಗಳನ್ನು ಭಕ್ಷಿಸುತ್ತಿದ್ದವೋ ಎನ್ನುವುದರ ಬಗ್ಗೆ ಅನುಮಾನಗಳಿದ್ದುವು. ಹೀಗಾಗಿ ಮೀನನ್ನು ತಿನ್ನುವ ಮೊಸಳೆಯಂತ ಸರೀಸೃಪಗಳ ಹಲ್ಲುಗಳನ್ನು ಹಾಗೂ ಕೀಟಗಳನ್ನು ಹಿಡಿದು ತಿನ್ನುವ ಹಲ್ಲಿಗಳಂತಹವುಗಳ ಹಲ್ಲುಗಳನ್ನೂ ಪರೀಕ್ಷಿಸಿದ್ದಾರೆ. ಇವುಗಳ ಹಲ್ಲಿನಲ್ಲಿರುವ ಗುರುತುಗಳಿಗೂ ಟೀರೋಸಾರುಗಳ ಹಲ್ಲುಗಳಲ್ಲಿನ ಗುರುತುಗಳಿಗೂ ತಾಳೆ ಹಾಕಿದ್ದಾರೆ. ಹಾಗೆ ಮಾಡಿದಾಗ ಹೆಚ್ಚಿನವು ಹಲ್ಲಿಗಳನ್ನು ಹೋಲುತ್ತಿದ್ದುವೇ ಹೊರತು ಮೊಸಳೆಗಳದ್ದಲ್ಲ. ಹೀಗಾಗಿ ತಾವು ಅಧ್ಯಯನ ಮಾಡಿದ ಟೀರೋಸಾರುಗಳು ಕೀಟಗಳನ್ನು ಹಿಡಿದು ತಿನ್ನುತ್ತಿದ್ದುವು ಎಂದು ತೀರ್ಮಾನಿಸಿದ್ದಾರೆ.

ಹಳೆಯ ಹಲ್ಲಿನ ಕಥೆ ಇಲ್ಲಿಗೇ ಮುಗಿಯಲಿಲ್ಲ. ಇಂಗ್ಲೆಂಡಿನ ಬ್ರೈಟನ್ ವಿಶ್ವವಿದ್ಯಾನಿಲಯದ ನಿಕೊಲಾಸ್ ಆಂಡ್ರೆ ಸ್ಟೀವರ್ಟ್ ಮತ್ತು ಸಂಗಡಿಗರು ಹಳೆಯ ಹಲ್ಲುಗಳನ್ನು ಹೆರೆದು ಅದು ಹೆಣ್ಣಿನದ್ದೋ, ಗಂಡಿನದ್ದೋ ಎಂದು ತೀರ್ಮಾನಿಸುವ ವಿಧಾನವನ್ನು ಶೋಧಿಸಿದ್ದಾರೆ. ಸಾಧಾರಣವಾಗಿ ಪುರಾತತ್ವ ಅಧ್ಯಯನಗಳಲ್ಲಿ ದೊರೆಯುವ ಮೂಳೆ, ಹಲ್ಲುಗಳ ಆಯುಸ್ಸನ್ನು ನಿರ್ಧರಿಸಬಹುದು. ಆದರೆ ಅವು ಹೆಣ್ಣುಗಳದ್ದೋ, ಗಂಡಿನದ್ದೋ ಎಂದು ತೀರ್ಮಾನಿಸುವುದು ಕಷ್ಟ. ಅದರಲ್ಲೂ ಎಳೆಯರ ಮೂಳೆಗಳಾದರೆ ಇನ್ನೂ ಕಷ್ಟ. ಡಿಎನ್ಎ ಪರೀಕ್ಷೆಯಿಂದ ಇದು ಸಾಧ್ಯವಾದರೂ ಎಲ್ಲ ಸಂದರ್ಭದಲ್ಲೂ ಪರೀಕ್ಷೆಗೆ ಒದಗುವಷ್ಟು ಹಾಗೂ ಪರೀಕ್ಷೆಗೆ ಒಗ್ಗುವಂತಹ ಡಿಎನ್ಎ ಸಿಗುವುದು ಕಷ್ಟ. ಹೀಗಾಗಿ ನಿಕೊಲಾಸ್ ಮತ್ತು ಸಂಗಡಿಗರು ಹಳೆಯ ಹಲ್ಲಿನ ಮೇಲಿನ ಎನಾಮೆಲ್ ಪದರವನ್ನು ಹೆರೆದು ತೆಗೆದು ಅದರಲ್ಲಿ ಎನಾಮೆಲ್ ರೂಪುಗೊಳ್ಳಲು ಅಗತ್ಯವಾದ ಅಮೆಲೋಜೆನಿನ್ ಎನ್ನುವ ಪೆಪ್ಟೈಡು ಇದೆಯೋ ಇಲ್ಲವೋ ಪರೀಕ್ಷಿಸಿದ್ದಾರೆ. ಈ ಪೆಪ್ಟೈಡುಗಳಲ್ಲಿ ಎರಡು ವಿಧಗಳಿವೆ. ಅವುಗಳಲ್ಲಿ ಒಂದು ಗಂಡಿನಲ್ಲಿ ಹಾಗೂ ಮತ್ತೊಂದು ಹೆಣ್ಣಿನಲ್ಲಿ ಕಾಣಬರುತ್ತವೆ. ಹೀಗಾಗಿ ಇವರು ಸುಮಾರು 3000 ವರ್ಷದಿಂದ ನೂರು ವರ್ಷ ಹಳೆಯದಾದ ಅವಶೇಷಗಳ ಹಲ್ಲುಗಳನ್ನು ಪರೀಕ್ಷಿಸಿದ್ದಾರೆ. ಅವುಗಳಿಂದ ಹೆರೆದ ಪ್ರೊಟೀನಿನಲ್ಲಿ ಎಂತಹ ಅಮೆಲೋಜೆನಿನ್ ಪೆಪ್ಟೈಡುಗಳಿವೆ ಎಂದು ಗುರುತಿಸಿ, ಗಂಡು ಹಾಗೂ ಹೆಣ್ಣಿನಲ್ಲಿರುವ ಅಮೆಲೋಜೆನಿನ್ ಜೊತೆಗೆ ಹೋಲಿಸಿದ್ದಾರೆ. ಹೀಗೆ ಮುರಿದ ಹಲ್ಲು ಸಿಕ್ಕಿದರೂ ಕೂಡ ಅದು ಗಂಡಿನದ್ದೋ, ಹೆಣ್ಣಿನದ್ದೋ ಹೇಳಬಹುದು ಎನ್ನುವುದು ನಿಕೊಲಾಸರ ಧೃಢ ವಿಶ್ವಾಸ.

ಹಳೆಯ ಹಲ್ಲುಗಳು ಹೇಳುವ ಕಥೆ ಇವು.

ಆಕರ: 1. John Pickrell, Tooth scratches reveal new clues to pterosaur diets, Nature news, published online 5.1.2018;
ಲಿಂಕ್; https://www.nature.com/articles/d41586-018-00080-y?utm_source=briefing&utm_medium=email&utm_campaign=20180108
ಆಕರ: 2. Nicolas Andre Stewart et al., Sex determination of human remains from peptides in tooth enamel, PNAS, December 26, 2017 | vol. 114 | no. 52 | 13649–13654
ಲಿಂಕ್: http://www.pnas.org/content/114/52/13649


4. ಹಸಿರು ನೀಲಿ ಜೀನ್ಸು
ಯೋಚಿಸ ಬೇಡಿ. ತಪ್ಪೇನೂ ಆಗಿಲ್ಲ. ನೀಲಿ, ಹಳದಿ ಸೇರಿದರೆ ಹಸಿರು ಬಣ್ಣವಾಗುತ್ತದೆ. ಹಸಿರು, ನೀಲಿ ಸೇರಿದರೆ ಅದು ನೀಲಿಯೇ ಅಲ್ಲವೇ ಎನ್ನಬೇಡಿ. ಇಲ್ಲಿ ನಾನು ಮಾತನಾಡುತ್ತಿರುವುದು ಹಸಿರಾದ ಬಣ್ಣದ ಬಗ್ಗೆ ಅಲ್ಲ. ಹೇಗೆ ಜೀನ್ಸುಗಳಿಗೆ ಹಾಕುವ ನೀಲಿ ಬಣ್ಣ ಪರಿಸರ ಸ್ನೇಹಿ ಆಗಲಿದೆ ಅನ್ನುವ ಬಗ್ಗೆ.

ಬಹುಶಃ ಇದಕ್ಕೆ ಮುನ್ನ ನಿಮಗೆಲ್ಲ ಒಂದು ಚಿತ್ರವನ್ನು ನೆನಪಿಸಬೇಕು. ಕೆಲವು ದಿನಗಳ ಹಿಂದ ವಾಟ್ಸಾಪ್ಪಿನಲ್ಲಿ ಇದು ಓಡಾಡಿತ್ತು ಸಾಕಷ್ಟು ಸುದ್ದಿಯನ್ನೂ ಮಾಡಿತ್ತು. ಮುಂಬಯಿಯ ಕೊಳಚೆ ಪ್ರದೇಶವೊಂದರಲ್ಲಿದ್ದ ಬೀದಿನಾಯಿಯ ಚಿತ್ರ ಅದು. ಪಂಚತಂತ್ರ ಕಥೆಯಲ್ಲಿ ಬರುವ ನರಿಯಂತೆ ಈ ನಾಯಿ ಅಪ್ಪಟ ನೀಲಿ ಬಣ್ಣದ್ದಾಗಿತ್ತು. ಕಾರಣ: ಅದರ ನೆರೆಯಲ್ಲಿದ್ದ ಚರಂಡಿಯ ನೀರು ಜೀನ್ಸು ಹಾಗೂ ಇತರೆ ಬಟ್ಟೆಗಳಿಗೆ ಹಚ್ಚಿದ ಬಣ್ಣದಿಂದ ನೀಲಿಮಯವಾಗಿತ್ತು. ಆ ನೀರಿನಲ್ಲಿ ಈಜಾಡಿದ ನಾಯಿಯ ಬಣ್ಣವೂ ನೀಲಿಯಾಗಿತ್ತು.


ಜೀನ್ಸ್ ಬಟ್ಟೆಗಳಿಂದಾಗಿ ಪರಿಸರಕ್ಕೆ ಎಷ್ಟು ಹಾನಿ ಆಗುತ್ತಿದೆ ಎನ್ನುವುದಕ್ಕೆ ಇದೊಂದು ಚಿತ್ರ ಸಾಕು. ಜೀನ್ಸು ಬಟ್ಟೆಗಳಿಗೆ ಗಾಢ ನೀಲಿ ಬಣ್ಣ ನೀಡಲು ಬಳಸುವ ರಾಸಾಯನಿಕ ಹಾಗೂ ಅದಕ್ಕಾಗಿ ಅನುಸರಿಸುವ ಕ್ರಮಗಳು ಸುತ್ತಮುತ್ತಲಿನ ಜಾಗೆಯನ್ನು ಕೊಳಕು ಮಾಡುತ್ತವೆ. ಅಲ್ಲಿನ ನೀರನ್ನು ಬಳಸಲು ಯೋಗ್ಯವಲ್ಲದಂತೆ ನೀಲಿಯನ್ನಾಗಿಸಿ ಬಿಡುತ್ತವೆ. ಇದಕ್ಕೆ ಪರಿಹಾರವಿದೆಯೇ ಎಂದು ಬಹಳ ದಿನಗಳಿಂದ ಹುಡುಕುತ್ತಿದ್ದ ವಿಜ್ಞಾನಿಗಳಿಗೆ ನೇಚರ್ ಕೆಮಿಕಲ್ ಬಯಾಲಜಿ ಪತ್ರಿಕೆ ಸಿಹಿ ಸುದ್ದಿ ತಂದಿದೆ. ಇನ್ನು ಮುಂದೆ ಜೀನ್ಸು ಫ್ಯಾಕ್ಟರಿಗಳಿಂದ ಹೊರ ಹರಿಯುವ ನೀರು ತಿಳಿಯಾಗಿರಬಹುದಂತೆ. ಅದಕ್ಕೆ ಬೇಕಾದ ಉಪಾಯವನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಹಾಗೂ ಬರ್ಕಲೀ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ರೂಪಿಸಿದ್ದಾರಂತೆ. ಅದೂ ಹೇಗೆ? ಬ್ಯಾಕ್ಟೀರಿಯಾಗಳನ್ನು ಮಾರ್ಪಡಿಸಿ ಈ ತಂತ್ರವನ್ನು ರೂಪಿಸಿದ್ದಾರೆ.

ಜೀನ್ಸು ಬಟ್ಟೆಗಳಿಗೆ ಬಳಿಯುವ ನೀಲಿ ಬಣ್ಣಕ್ಕೆ ಇಂಡಿಗೋ ಎನ್ನುವ ರಾಸಾಯನಿಕ ಕಾರಣ. ಇದು ಎರಡು ವಿಧಗಳಿಂದ ಪರಿಸರಸ್ನೇಹಿ ಅಲ್ಲ. ಮೊದಲಿಗೆ ಇದರ ಮೂಲ ಕೆಲವು ಗಿಡ ಮರಗಳು. ಬಣ್ಣಕ್ಕಾಗಿ ಆ ಮರಗಳಿಗೆ ತೊಂದರೆ ನೀಡಲೇ ಬೇಕು. ಅದು ಬೇಡವೆಂದರೆ ಕೃತಕವಾಗಿ ತಯಾರಿಸಬಹುದು. ಆಗ ಸುತ್ತಲಿನ ಪ್ರದೇಶಗಳನ್ನು ವಿಷರಾಸಾಯನಿಕಗಳಿಂದ ತುಂಬಬೇಕಾದ್ದು ಅನಿವಾರ್ಯ. ಬಣ್ಣ ಸಿಕ್ಕೆ ಮೇಲೂ ತೊಂದರೆ ಬಿಟ್ಟದ್ದಿಲ್ಲ. ಅದನ್ನು ನೇರವಾಗಿ ಹಚ್ಚೋಣ ಎಂದರೆ ಹತ್ತಿಯ ನಾರಿಗೆ ಅದು ಕಚ್ಚಿಕೊಳ೵ಳುವುದಿಲ್ಲ. ಹೀಗಾಗಿ ಮೊದಲಿಗೆ ಅದನ್ನು ರಾಸಾಯನಿಕವಾಗಿ ಲ್ಯೂಕೋಇಂಡಿಗೋ ಎನ್ನುವ ರೂಪಕ್ಕೆ ಪರಿವರ್ತಿಸುತ್ತಾರೆ. ಇದನ್ನು ಹತ್ತಿಗೆ ಬಳಿದು, ಅನಂತರ ಮತ್ತೊಂದು ರಾಸಾಯನಿಕದಿಂದ ತೊಳೆಯುತ್ತಾರೆ. ಆಗಷ್ಟೆ ನೂಲು ನೀಲಿ ಬಣ್ಣವಾಗುತ್ತೆ. ಇವಿಷ್ಟು ಕ್ರಿಯೆಗಳೂ ಪರಿಸರಕ್ಕೆ ಹಾನಿಯನ್ನುಂಟು ಮಾಡುವಂಥವೇ ಸರಿ.

ಕ್ಯಾಲಿಫೋರ್ನಿಯಾ ವಿವಿಯ ರಸಾಯನ ವಿಜ್ಞಾನಿ ಜಾನ್ ಡ್ಯೂಬರ್ ಮತ್ತು ಸಂಗಡಿಗರು ಇದಕ್ಕೊಂದು ಉಪಾಯ ಹೂಡಿದ್ದಾರೆ. ಸಸ್ಯಗಳಲ್ಲಿ ಈ ಇಂಡಿಗೋ ಬಣ್ಣ ಉತ್ಪಾದನೆಯಾಗುವ ಕ್ರಮವನ್ನೇ ಬ್ಯಾಕ್ಟೀರಿಯಾದೊಳಗೆ ಅನುಕರಿಸಲು ಪ್ರಯತ್ನಿಸಿದ್ದಾರೆ. ಬ್ಯಾಕ್ಟೀರಿಯಾದೊಳಗೆ ಸಸ್ಯಗಳ ಜೀನು ಕೂಡಿಸಿ ಈ ಸೂಕ್ಷ್ಮ ಜೀವಿಗಳೊಳಗೆ ಇಂಡಾಕ್ಸಿಲ್ ಎನ್ನುವ ರಾಸಾಯನಿಕವು ಇಂಡಿಕ್ಯಾನ್ ಎನ್ನುವ ರೂಪಕ್ಕೆ ಬದಲಾಗುವಂತೆ ಮಾಡಿದ್ದಾರೆ. ಇದು ಸಹಜವಾಗಿಯೇ ಆಗದ ಕ್ರಿಯೆ. ಇದು ಸಾಧ್ಯವಾಗಬೇಕೆಂದರೆ ಬ್ಯಾಕ್ಟೀರಿಯಾಗಳು ಇಂಡಾಕ್ಸಿಲ್ಲಿಗೆ ಒಂದು ಸಕ್ಕರೆ ಅಣುವನ್ನು ಕೂಡಿಸಬೇಕು. ಅದಕ್ಕಾಗಿ ಮತ್ತೊಂದು ಕಿಣ್ವದ ಸಹಾಯ ಬೇಕು. ಡ್ಯೂಬರ್ ಮತ್ತು ಸಂಗಡಿಗರು ಬ್ಯಾಕ್ಟೀರಿಯಾಗಳಲ್ಲಿ ಇಲ್ಲದ ಈ ಜೀನನ್ನು ಸಸ್ಯಗಳಿಂದ ಹೆಕ್ಕೆ ತೆಗೆದು ಬ್ಯಾಕ್ಟೀರಿಯಾಗಳಲ್ಲಿ ಸೇರಿಸಿದ್ದಾರೆ. ಇದೀಗ ಬ್ಯಾಕ್ಟೀರಿಯಾ ಇಂಡಾಕ್ಸಿಲ್ಲನ್ನು, ಇಂಡಿಕ್ಯಾನನ್ನಾಗಿ ಪರಿವರ್ತಿಸುತ್ತದೆ.

ಇಂಡಿಕ್ಯಾನಿನ ಸ್ವತಃ ಬಣ್ಣವಿಲ್ಲ. ಆದರೆ ಸುಲಭವಾಗಿ ಲಭ್ಯವಿರುವ ಹಾಗೂ ಸಕ್ಕರೆಯನ್ನು ಜೀರ್ಣಿಸುವ ಬೀಟ-ಗ್ಲುಕೋಸಿಡೇಸ್ ಎನ್ನುವ ಕಿಣ್ವ ಜೊತೆಗಿದ್ದರೆ ಇದು ತನ್ನಲ್ಲಿರುವ ಸಕ್ಕರೆಯನ್ನು ಕಳೆದುಕೊಂಡು ಇಂಡಿಗೋ ಬಣ್ಣವಾಗುತ್ತದೆ. ಜೊತೆಗೆ ನೀರಿನಲ್ಲಿ ಸುಲಭವಾಗಿ ಕರಗಿ, ಬಟ್ಟೆಗೆ ಭದ್ರವಾಗಿ ಅಂಟಿಕೊಳ್ಳಬಲ್ಲುದು. ಹೀಗೆ ಬ್ಯಾಕ್ಟೀರಿಯಾಗಳಿಂದ ಪಡೆದ ಇಂಡಿಕಾನನ್ನು ನೀರಿನಲ್ಲಿ ಕಿಣ್ವದ ಜೊತೆಗೆ ಬೆರೆಸಿ ಬಟ್ಟೆಗಳಿಗೆ ಹಚ್ಚಿದಾಗ ಗಾಢ ನೀಲಿ ಬಣ್ಣ ದೊರೆಯುತ್ತದಂತೆ. ಅಲ್ಲದೇ ಲ್ಯೂಕೋಇಂಡಿಗೋವನ್ನು ನೀಲಿಯಾಗಿಸಲು ಬಳಸುತ್ತಿದ್ದ ರಾಸಾಯನಿಕ ಕ್ರಿಯೆಯ ಅವಶ್ಯಕತೆಯೂ ಇಲ್ಲ. ಕಿಣ್ವವನ್ನಷ್ಟೆ ಬಳಸುವುದರಿಂದ ಹೊಸ ರಾಸಾಯನಿಕಗಳು ಯಾವುವನ್ನೂ ಪರಿಸರಕ್ಕೆ ಕೂಡಿಸಿದಂತೆಯೂ ಆಗುವುದಿಲ್ಲ. ಹೀಗೆ ಒಂದು ಪರಿಸರ ಸ್ನೇಹಿ ವಿಧಾನದಿಂದ ಜೀನ್ಸು ತಯಾರಾಗುತ್ತದೆ ಎನ್ನುತ್ತದೆ ಈ ಬಗ್ಗೆ ಸಂಪಾದಕೀಯ ಬರೆದಿರುವ ನೇಚರ್.

ಇದೇ ಹಸಿರು ನೀಲಿ ಜೀನ್ಸ್ ಅಥವಾ ಡೆನಿಮ್. ಅಂದ ಹಾಗೆ ಈ ವಿಧಾನ ಬಳಕೆಗೆ ಬಂದರೂ ಈಗಾಗಲೇ ನೀಲಿಯಾಗಿರುವ ನಾಯಿಗಳ ಬಣ್ಣ ಬದಲಾಗುತ್ತದೆಯೋ? ಕೊಳೆಯಾಗಿರುವ ನೀವು ಶುಚಿಯಾಗುತ್ತದೆಯೋ ಎಂದು ಪ್ರಶ್ನೆ ಕೇಳಬೇಡಿ. ಉತ್ತರ ಯಾರಿಗೂ ಗೊತ್ತಿಲ್ಲ.
ಆಕರ: Tammy M Hsu et al, Employing a biochemical protecting group for a sustainable indigo dyeing strategy, Nature Chemical Biology, doi:10.1038/nchembio.2552


ಜಾಣನುಡಿ
ಜನವರಿ 14, ಮಕರ ಸಂಕ್ರಮಣ. ಅಥವಾ ಸಂಕ್ರಾಂತಿಯ ದಿನ. ಸಾಮಾನ್ಯವಾಗಿ ಬಹುತೇಕ ಹಿಂದು-ಮುಸ್ಲಿಮ್ ಹಬ್ಬಗಳು ವರ್ಷದಿಂದ ವರ್ಷಕ್ಕೆ ಬೇರೆ, ಬೇರೆ ತಾರೀಖುಗಳಲ್ಲಿ ಬರುವುದನ್ನು ಕಾಣುತ್ತೇವೆ. ಸರಕಾರಿ ಕಛೇರಿಗಳಲ್ಲಂತೂ ರಜಾದಿನಗಳನ್ನು ಗುರುತಿಸುವುದೇ ಒಂದು ದೊಡ್ಡ ಕೆಲಸವಾಗಿರುತ್ತದೆ. ಪಾಶ್ಚಾತ್ಯರಿಗೆ ಈ ಸಂದಿಗ್ಧವೇ ಇಲ್ಲ. ಪ್ರತಿ ವರ್ಷ ಡಿಸೆಂಬರ್ ಇಪ್ಪತ್ತೈದಕ್ಕೆ ಕ್ರಿಸ್ಮಸ್. ಜನವರಿ 1ಕ್ಕೆ ಹೊಸ ವರ್ಷ. ಹಿಂದೂ ಹಬ್ಬಗಳಲ್ಲಿ ಇದಕ್ಕೆ ಅಪವಾದ ಎಂದರೆ ಸಂಕ್ರಾಂತಿ.

ಇದನ್ನು ಪ್ರತಿವರ್ಷ ತಪ್ಪದೆ ಜನವರಿ 14ರಂದೇ ಆಚರಿಸಲಾಗುತ್ತದೆ. ಕಾರಣ ಗೊತ್ತೇ? ಕಾರಣ ಇಷ್ಟೆ. ಮಕರ ಸಂಕ್ರಾಂತಿ ಭೂಮಿ ಹಾಗೂ ಸೂರ್ಯನ ಚಲನೆಗಳನ್ನು ಆಧರಿಸಿದ ಹಬ್ಬ. ನೀವು ಬೆಳಗ್ಗೆ ಸೂರ್ಯ ಉದಯಿಸುವುದನ್ನು ನೋಡುತ್ತಿದ್ದೀರಿ ಎಂದುಕೊಳ್ಳಿ. ಇಂದು ಉದಯಿಸಿದ ಸ್ಥಾನದಲ್ಲಿಯೇ ಸೂರ್ಯನು ನಾಳೆಯೂ ಉದಯಿಸುವುದಿಲ್ಲ. ಪ್ರತಿದಿನವೂ ಸೂರ್ಯೋದಯದ ಸ್ಥಾನ ಬದಲಾಗುತ್ತಲೇ ಇರುತ್ತದೆ. ವರ್ಷದ ಆರು ತಿಂಗಳು ಇದು ದಕ್ಷಿಣದ ಕಡೆಗೆ ಸರಿಯುತ್ತಾ ಬರುತ್ತದೆ. ಇನ್ನರ್ಧ ವರ್ಷ ಹೊರಳಿ ಉತ್ತರಕ್ಕೆ ಸರಿಯುತ್ತದೆ. ಈ ಹೊರಳುವಿಕೆಯನ್ನೇ ಸಂಕ್ರಮಣ ಎನ್ನುತ್ತಾರೆ. ಈ ಸಂದರ್ಭದಲ್ಲಿಯೇ ಸೂರ್ಯನೂ ಮಕರ ರಾಶಿಯಲ್ಲಿ ಕಾಲಿಡುತ್ತಾನೆ. ಅದೇ ಸಂಕ್ರಾಂತಿ. ಹಿಂದೂಗಲ ಉಳಿದ ಹಬ್ಬಗಳು ಚಂದ್ರನ ಚಲನೆಯನ್ನು ಆಧರಿಸಿವೆ. ಚಂದ್ರನ ಚಲನೆಯನ್ನು ಆಧರಿಸಿದ ವರ್ಷ ಸೂರ್ಯನ ಚಲನೆಯನ್ನು ಆಧರಿಸಿದ ವರ್ಷಕ್ಕಿಂತ ಹತ್ತು ದಿನ ಕಿರಿಯದು. ಈ ವ್ಯತ್ಯಾಸವೇ ಇತರೆ ಹಿಂದೂ ಹಬ್ಬಗಳ ದಿನಗಳೂ, ಕ್ಯಾಲೆಂಡರಿನ ದಿನಾಂಕಗಳೂ ಹೊಂದಿಕೆ ಆಗದಿರಲು ಕಾರಣ.
—-
ರಚನೆ ಮತ್ತು ಪ್ರಸ್ತುತಿ: ಕೊಳ್ಳೇಗಾಲ ಶರ್ಮ..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x