ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com
ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)
ಈ ಸಂಚಿಕೆಯಲ್ಲಿ
ಓಮುವಾಮುವಾ ಎಂಬ ವಿಶ್ವಯಾನಿ,
ಇಲೆಕ್ಟ್ರಾನಿಕ್ ಫ್ಯಾಷನ್
ಕಿವುಡುಗಿವಿಗೆ ಇಂಬುಕೊಟ್ಟ ಚಿಕಿತ್ಸೆ
ವಾಯುಗುಣದ ವೈಪರೀತ್ಯವೇಕೆ?
1. ಓಮುವಾಮುವಾ ಎಂಬ ವಿಶ್ವಯಾನಿ
ಓಮುವಾಮುವಾ! ಅಮ್ಮಮ್ಮೋ ಇದೆಂಥ ಹೆಸರಪ್ಪ ಎಂದು ಅಚ್ಚರಿ ಪಡಬೇಡಿ. ಇದು ವಿಜ್ಞಾನಿಗಳು ಪ್ರೀತಿಯಿಂದ ಕಲ್ಲೊಂದಕ್ಕೆ ಕೊಟ್ಟಿರುವ ಹೆಸರು. ಹಾಗಂತ ಇದನ್ನು ಸಾಧಾರಣ ಕಲ್ಲು ಎಂದು ಕೊಳ್ಳಬೇಡಿ. ವಿಶ್ವದ ಯಾವುದೋ ಮೂಲೆಯಿಂದ ನಮ್ಮ ಸೌರಮಂಡಲಕ್ಕೆ ಪ್ರವಾಸ ಬಂದಿರುವ ಕಲ್ಲಂತೆ. ಅದಕ್ಕೆ ಓಮುವಾಮುವಾ ಎಂಬ ಹೆಸರಂತೆ. ಹೌದು. ನೇಚರ್ ಪತ್ರಿಕೆಯ ಇತ್ತೀಚಿನ ಸಂಚಿಕೆಯಲ್ಲಿ ಈ ಕಲ್ಲಿನ ಕಥೆ ಪ್ರಕಟವಾಗಿದೆ.
ಓಮುವಾಮುವಾ ಎನ್ನುವುದು ಹವಾಯಿ ಭಾಷೆಯ ಪದ. ಹಾಗೆಂದರೆ ಪ್ರವಾಸಿ, ಅದರಲ್ಲೂ ಯಾರದ್ದೋ ಸಂದೇಶ ಹೊತ್ತು ಬಂದ ರಾಯಭಾರಿ ಎಂದು ಅರ್ಥವಂತೆ. ಅಂತರಿಕ್ಷದಲ್ಲಿ ಎಲ್ಲೋ ಇರುವ ಕಲ್ಲಿಗೆ ವಿಜ್ಞಾನಿಗಳು ಈ ಹೆಸರು ಕೊಡಲು ಕಾರಣ ಅದು ನಮಗೆ ಇದುವರೆಗೂ ಪರಿಚಿತವಾದ ಯಾವ ಸ್ಥಳದಿಂದಲೂ ಪ್ರವಾಸ ಬಂದಿದ್ದಲ್ಲವಂತೆ. ನಮ್ಮ ಸೂರ್ಯಮಂಡಲದ್ದಂತೂ ಅಲ್ಲವೇ ಅಲ್ಲ. ಬೇರಾವುದೋ ತಾರೆಯರ ಮಡಿಲಿನಿಂದ ಹಾರಿ ಬಂದಿರಬಹುದು ಎನ್ನುವುದ ಊಹೆ. ಈ ಊಹೆ ಹಾಗೂ ಓಮುವಾಮುವಾದ ಚಹರೆ, ಹಾದಿ ಮತ್ತು ಆಕಾರವೂ ವಿಶೇಷವಾಗಿವೆಯಂತೆ.
ಓಮುವಾಮುವಾ ಕಳೆದ ಅಕ್ಟೋಬರ್ 19ರಂದು ಮೊದಲು ಹವಾಯಿಯ ಖಗೋಳ ವಿಜ್ಞಾನಿಗಳ ಕಣ್ಣಿಗೆ ಕಾಣಿಸಿತು. ಆಕಾಶದಲ್ಲಿ ಎಂದಿನಂತೆ ಅಂತರಿಕ್ಷವನ್ನು ಪರಿಶೀಲಿಸುತ್ತಿದ್ದಾಗ ಒಂದೆಡೆ ಹೊಸದೊಂದು ಚುಕ್ಕೆ ಕಾಣಿಸಿತಂತೆ. ಎರಡು ದಿನಗಳ ನಂತರ ಆ ಚುಕ್ಕೆ ಸ್ಥಾನ ಬದಲಿಸಿತ್ತು. ಸುಮಾರು 6 ಡಿಗ್ರೀ ಕೋನ ಸರಿದಿತ್ತು. ಜೊತೆಗೆ ಇದರ ಚಿತ್ರದಲ್ಲಿ ತಾರೆಗಳಲ್ಲಿ ಕಾಣುವಂತೆ ಮಸುಕು ಮುಸುಕು ಇರಲಿಲ್ಲ. ಹಾಗೆಯೇ ತಾರೆಗಳಂತೆ ಇದರ ಚಿತ್ರ ರೇಖೆಯಾಗಿಯೂ ಕಾಣಲಿಲ್ಲ. ಅಂದರೆ ಇದು ತಾರೆಗಳಷ್ಟು ದೂರವಿಲ್ಲದ ಮತ್ಯಾವುದೋ ವಸ್ತು ಎಂದು ವಿಜ್ಞಾನಿಗಳು ಊಹಿಸಿ, ಅದರ ಬೆನ್ನು ಹತ್ತಿದರು. ಮುಂದಿನ ಏಳೆಂಟು ದಿನಗಳ ಕಾಲ ಹವಾಯಿ ಹಾಗೂ ಬೇರೆಡೆಗಳಲ್ಲಿ ಇರುವ ದೂರದರ್ಶಕಗಳ ಕಣ್ಣುಗಳೂ ಇದರತ್ತ ನೆಟ್ಟವು. ಇದರ ಚಲನೆ, ಹೊಳಪು, ಆಕಾರವೆಲ್ಲವನ್ನೂ ಕೂಲಂಕಷವಾಗಿ ದಾಖಲಿಸಿದರು. ಈ ಎಲ್ಲ ದಾಖಲೆಗಳ ವಿಶ್ಲೇಷಣೆಯನ್ನೇ ನೇಚರ್ ಪತ್ರಿಕೆ ಪ್ರಕಟಿಸಿದೆ. ಅದರ ಪ್ರಕಾರ ಸುಮಾರು ಅರ್ಧ ಕಿಲೋಮೀಟರು ಉದ್ದದ ನೂರಡಿ ದಪ್ಪದ ಕಂಭದಂತಿರುವ ಈ ವಸ್ತು ಸೌರಮಂಡಲದ್ದಲ್ಲ. ಇನ್ಯಾವುದೋ ತಾರೆಯಿಂದ ಬಂದಿದ್ದು.
ಸಾಮಾನ್ಯವಾಗಿ ಗ್ರಹಗಳೆಲ್ಲವೂ ಚೆಂಡಿನಂತಿರುತ್ತವೆ. ಕಂಭದಂತೆ ಸಿಲಿಂಡರಿನ ಆಕಾರ ಇರುವುದಿಲ್ಲ. ಇಂತಹ ಆಕಾರ ಇರುವ ಆಕಾಶಕಾಯಗಳೆಂದರೆ ಉಲ್ಕೆಗಳು ಹಾಗೂ ಧೂಮಕೇತುಗಳಷ್ಟೆ. ಆದರೆ ಓಮುವಾಮುವಾನ ಚಲನೆಯನ್ನು ನೋಡಿದರೆ ಅದು ಧೂಮಕೇತುಗಳು ಉಗಮವಾಗುತ್ತವೆ ಎನ್ನುವ ಊರ್ಟ್ ಮೋಡದಿಂದ ಬಂದ ಹಾಗೆ ಕಾಣುವುದಿಲ್ಲ. ಅಲ್ಲಿಂದ ಬಂದಿದ್ದರೆ ಇದರ ಹಾದಿ ಬೇರೆಯದೇ ದಿಕ್ಕಿನಲ್ಲಿ ಇರಬೇಕಿತ್ತು. ಇನ್ನು ಇದು ಮತ್ತೊಂದು ಉಲ್ಕೆಯೋ, ಕ್ಷುದ್ರಗ್ರಹವೋ ಎನ್ನಲೂ ಆಗದು. ಏಕೆಂದರೆ ವಿಜ್ಞಾನಿಗಳಿಗೆ ಇದುವರೆಗೆ ಗೊತ್ತಿರುವ ಸುಮಾರು ಏಳೂವರೆ ಲಕ್ಷ ಕ್ಷುದ್ರಗ್ರಹಗಳಲ್ಲಿ ಯಾವುದೂ ಇಷ್ಟು ಸಣ್ಣದಿಲ್ಲ. ಇನ್ನು ಓಮುವಾಮುವಾದಿಂದ ಚಿಮ್ಮುವ ಬೆಳಕಿನ ಪ್ರಖರತೆಯೂ ನಿಯತವಾಗಿ ಹೆಚ್ಚು ಕಡಿಮೆ ಆಗುತ್ತಿದೆ. ಓಮುವಾಮುವಾ ಗಿರಕಿ ಹೊಡೆಯುತ್ತಿರುವುದಕ್ಕೆ ಇದು ಸೂಚನೆ. ಈ ಬದಲಾವಣೆಯನ್ನು ಗಮನಿಸಿದಾಗ ಅದು ಗುಂಡಗಿರದೆ ಉದ್ದುದ್ದದ ಆಕಾರವಾಗಿರಬೇಕು ಎಂದು ಸ್ಪಷ್ಟವಾಗುತ್ತದೆ. ಗುಂಡಗಿದ್ದರೆ ಆಗುತ್ತಿದ್ದ ವ್ಯತ್ಯಾಸವೇ ಬೇರೆ.
ಇವೆಲ್ಲವನ್ನೂ ಗಮನಿಸಿದ ವಿಜ್ಞಾನಿಗಳು ಇದು ನಮ್ಮ ಸೌರಮಂಡಲದ ಸದಸ್ಯನೇ ಅಲ್ಲ. ಬೇರೆಲ್ಲಿಂದಲೋ ಬಂದ ರಾಯಭಾರಿ ಎಂದು ಹೆಸರಿಸಿದ್ದಾರೆ. ರಾಯಭಾರಿ ಏಕೆಂದರೆ ಹೊರ ವಿಶ್ವದ ಬಗ್ಗೆ ಇದು ಹೊಸ ವಿಷಯವನ್ನು ಹೇಳುತ್ತಿದೆ. ಲೋಹಗಳಿರುವ ಗಟ್ಟಿ ಕಲ್ಲು ಇದು. ಜೊತೆಗೆ ಇದರ ಚಲನೆಯ ಹಾದಿಯೂ ಇದು ಪೆಗಾಸಸ್ (ಮಹಾವ್ಯಾಧ) ಎನ್ನುವ ನಕ್ಷತ್ರ ಪುಂಜದಲ್ಲಿರುವ ವೇಗಾಸ್ ನಕ್ಷತ್ರದ ಕಡೆಗೆ ಮುಖ ಮಾಡಿದೆ. ಅಲ್ಲಿಂದಲೇ ಬಂದಿದೆ ಎಂದಾದರೆ ಗಂಟೆಗೆ 60 ಸಾವಿರ ಕಿಲೋಮೀಟರು ವೇಗದಲ್ಲಿ ಚಲಿಸುತ್ತಿರುವ ಇದು ಇಂದಿರುವೆಡೆಗೆ ಬರಲು ಸುಮಾರು 15 ಕೋಟಿ ವರ್ಷಗಳು ಬೇಕು. ಅಂದರೆ ಇದು ಮತ್ತೊಮ್ಮೆ ನಮ್ಮ ಸೌರಮಂಡಲವನ್ನು ಪ್ರವೇಶಿಸುವಾಗ ಸೌರಮಂಡಲವೇ ಇರುತ್ತದೋ ಇಲ್ಲವೋ!
ನನಗೆ ಗೊತ್ತು. ಈಗ ನೀವು ಓಮುವಾಮುವಾ ಅನ್ನುತ್ತಿಲ್ಲ. ಅಮ್ಮಮ್ಮ. ಎಂಥ ರಾಯಭಾರಿ ಎನ್ನುತ್ತಿದ್ದೀರಿ ಅಂತ ಗೊತ್ತು.
ಆಕರ: Karen J Meech et al., A brief visit from a red and extremely elongaged interstellar asteroid, Nature, Vol. 552, Pp 378-381, 21/28 December 2017
2. ಹಳೆ ಸರ್ಕೀಟು, ಹೊಸ ಒಡವೆ
ಹೊಸ ವರ್ಷಕ್ಕೆ ಹೊಸ ಒಡವೆ ಬೇಕು ಎನ್ನುವ ಆಸೆಯೇ! ಹಾಗಿದ್ದರೆ ಬನ್ನಿ. ವಿನೂತನವಾದ ಒಡವೆ ಸಿದ್ಧವಿದೆ. ಇಲೆಕ್ಟ್ರಾನಿಕ್ ಸಾಧನಗಳಿಂದಲೇ ಸಿದ್ಧವಾದ ಮೂಗುತಿ, ಝುಮಕಿ, ಪದಕಗಳನ್ನು ಹಾಕಿ. ಹೊಸ ಫ್ಯಾಷನ್ ಆನಂದಿಸಿ. ಹೌದು. ಅಮೆರಿಕೆಯ ಕೆಲವು ಮಹಿಳೆಯರು ಒಟ್ಟುಗೂಡಿ ಸರ್ಕ್ಯುಟ್ ಬ್ರೇಕರ್ ಲ್ಯಾಬ್ ಎನ್ನುವ ಕಂಪೆನಿಯನ್ನು ಹುಟ್ಟು ಹಾಕಿದ್ದಾರೆ. ಈ ಕಂಪೆನಿ ಹಳೆಯ ಇಲೆಕ್ಟ್ರಾನಿಕ್ ಸಾಧನಗಳಲ್ಲಿರುವ ಸರ್ಕೀಟು ಬೋರ್ಡುಗಳನ್ನೂ, ಇತರೆ ಅಂಗಗಳನ್ನೂ ಹೆಕ್ಕಿ ಅವುಗಳಿಂದ ವಿನೂತನವಾದ ಪದಕ, ಝುಮಕಿ, ಕೈಕಡಗ, ಅಂಗೈ ಗೆಜ್ಜೆ ಮುಂತಾದ ಸಾಧನಗಳನ್ನು ತಯಾರಿಸಿ ಮಾರುತ್ತಿದೆ. ಹಳೆಯ ವಸ್ತುಗಳನ್ನು ಮರುಬಳಕೆ ಮಾಡಿದಂತೆಯೂ ಆಯಿತು, ಹೊಸ ಫ್ಯಾಷನ್ ನೀಡಿದಂತೆಯೂ ಆಯಿತು! ಹೇಗಿದೆ ಉಪಾಯ?
ಹಳೆ ಸರ್ಕೀಟು, ಹಳೆ ಸ್ವಿಚ್ಚುಗಳನ್ನು ಬಳಸಿದ ಒಡವೆಗಳು ಬೇಡವೇ? ಹಾಗಿದ್ದರೆ ಲ್ಯೂಮೆನ್ ಇಲೆಕ್ಟ್ರಾನಿಕ್ ಜ್ಯೂವೆಲರಿ ನಿಮಗೆ ಇಷ್ಟವಾಗಬಹುದು. ಈ ಕಂಪೆನಿ ಹೊಳೆಯುವ ಚಿನ್ನದ ಒಡವೆಗಳ ಬದಲಿಗೆ, ಮಿನುಗುವ ದೀಪಗಳ ಒಡವೆಗಳನ್ನೇ ನೀಡಲಿದೆ. ಪುಟ್ಟ ಸರ್ಕೀಟುಗಳನ್ನೂ, ಅದರೊಟ್ಟಿಗೆ ಸೌರವಿದ್ಯುತ್ ಫಲಕಗಳನ್ನೂ, ಬ್ಯಾಟರಿಗಳನ್ನೂ ಕೂಡಿಸಿದ ಉಪಕರಣಗಳನ್ನೇ ಪದಕ, ಹಾರ, ಕಿವಿಯೋಲೆ, ಉಂಗುರು ಮುಂತಾಗಿ ಇದು ತಯಾರಿಸುತ್ತಿದೆ. ಇವುಗಳ ಜೊತೆಗಿರುವ ಪುಟ್ಟ ಎಲ್ ಇ ಡಿ ಬಲ್ಬುಗಳು ನಿಮಗಿಷ್ಟ ಬಂದಾಗ ಮಿನುಗಬಲ್ಲವು. ಹೊಸ ವರ್ಷದ ರಾತ್ರಿ ಪಾರ್ಟಿಯ ಕತ್ತಲಲ್ಲಿ ಮಿನುಗುವ ಹಾರದ ಜೊತೆಗೆ ಕುಣಿಯುವ ಫ್ಯಾಷನ್ ಯಾರಿಗೆ ಬೇಡ ಹೇಳಿ?
ಇವೆಲ್ಲ ಫ್ಯಾಷನ್ ಪ್ರಿಯರಿಗೆ. ಇದಲ್ಲದೆ ಝುಮಕಿ, ಪದಕಗಳು, ಬ್ರೇಸ್ಲೆಟ್ಟುಗಳನ್ನೇ ನಿಮ್ಮ ಆರೋಗ್ಯದ ಮೇಲೆ ಸದಾ ಕಣ್ಣಿಡುವ ಸ್ಮಾರ್ಟ್ ಸೆನ್ಸಾರುಗಳನ್ನಾಗಿ ಬಳಸಲೂ ವಿಜ್ಞಾನಿಗಳು ಯೋಜಿಸುತ್ತಿದ್ದಾರೆ. ಈಗಾಗಲೇ ಸ್ಮಾರ್ಟ್ ಗಡಿಯಾರಗಳು ಮಾರುಕಟ್ಟೆಯಲ್ಲಿವೆ. ಉಳಿದವು ದೊರಕಲು ಹೆಚ್ಚು ಕಾಯಬೇಕಿಲ್ಲ.
ಆಕರ: https://spectrum.ieee.org/geek-life/reviews/holiday-gift-guide-2017
3. ಕಿವುಡುಗಿವಿಗೆ ಇಂಬುಗೊಡುವ ಚಿಕಿತ್ಸೆ.
ಹುಟ್ಟಾ ಕಿವುಡಿಗೆ ಇದೋ ಹೊಸದೊಂದು ಚಿಕಿತ್ಸೆ. ಕಿವಿಯ ಮೇಣ ತೆಗೆಯಲು ಎಣ್ಣೆ ಸುರಿಯುವಂತೆ ಒಂದಿಷ್ಟು ಎಣ್ಣೆಯನ್ನು ಚುಚ್ಚಿದರೆ ಸಾಕು, ಕಿವುಡನ್ನು ಗುಣಪಡಿಸಬಹುದು ಎನ್ನುವ ಕುತೂಹಲಕರ ಸುದ್ದಿಯನ್ನು ಈ ವಾರದ ನೇಚರ್ ಪತ್ರಿಕೆ ವರದಿ ಮಾಡಿದೆ. ಇದು ಕೇವಲ ಕಿವುಡನ್ನು ಗುಣಪಡಿಸುವ ವಿಧಾನವಷ್ಟೆ ಅಲ್ಲ, ಹುಟ್ಟಾ ದೋಷವಿರುವ ಜೀನ್ ಗಳನ್ನು ತಿದ್ದಿ ಸರಿಪಡಿಸುವ ಮತ್ತೊಂದು ಸುಲಭ ವಿಧಾನವೂ ಹೌದು. ಜೀನ್ ಚಿಕಿತ್ಸೆಯ ಹೊಸ ಮಜಲು ಎನ್ನಬಹುದು.
ಕಿವುಡಿಗೆ ಹಲವು ಕಾರಣಗಳಿರಬಹುದು. ಕಿವಿಯೊಳಗೆ ಇರುವ ಸದ್ದಿಗೆ ಅದುರುವ ತಮಟೆ ಹರಿದು ಹೋಗಿರಬಹುದು ಇಲ್ಲವೇ ಸುಲಭವಾಗಿ ಕಂಪಿಸಲಾಗದಷ್ಟು ದಪ್ಪನಾಗಿರಬಹುದು. ಅಥವಾ ಇದರೊಟ್ಟಿಗೆ ಜೋಡಿಸಿಕೊಂಡಿರುವ ಮೂರು ಮೂಳೆಗಳಲ್ಲಿ ಯಾವುದಾದರೂ ಇಲ್ಲದಿರಬಹುದು. ಇಲ್ಲವೇ ಕದಲಿ ಸ್ಥಾನ ಬದಲಿಸಿರಬಹುದು. ಅಥವಾ ಇವೆಲ್ಲದರ ಕೊನೆಯಲ್ಲಿರುವ ಕಾಕ್ಲಿಯಾ ಎನ್ನುವ ಶಂಖುವಿನಾಕಾರದ ನೀರಿನ ಚೀಲವೊಂದರಲ್ಲಿ ದೋಷವಿರಬಹುದು. ಕಾಕ್ಲಿಯಾದ ಒಳಗೆ ಇರುವ ಸೂಕ್ಷ್ಮ ರೋಮಗಳಂತಹ ಸಂವೇದಕ ನರಗಳು ಕಾಣೆಯಾಗಿರಬಹುದು. ಇವುಗಳಲ್ಲಿ ಯಾವುದೇ ಕಾರಣದಿಂದಲೂ ನಮಗೆ ಸದ್ದು ಕೇಳದೆ ಹೋಗಬಹುದು. ಇವುಗಳಲ್ಲಿ ಕಾಕ್ಲಿಯದಲ್ಲಿರುವ ದೋಷಗಳು ಸಾಮಾನ್ಯವಾಗಿ ಹುಟ್ಟಿನಿಂದಲೇ ಬರುವಂಥವು. ಅಂತಹ ಹುಟ್ಟಾಗಿವುಡನ್ನು ಗುಣಪಡಿಸುವ ವಿಧಾನವನ್ನು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಯಾಂಗ್ ತಾವೊ ಮತ್ತು ಸಂಗಡಿಗರು ರೂಪಿಸಿದ್ದಾರೆಂದು ನೇಚರ್ ವರದಿ ಮಾಡಿದೆ. ಇಲಿಗಳ ಕಾಕ್ಲಿಯಾದಲ್ಲಿರುವ ಸೂಕ್ಷ್ಮ ರೋಮಗಳಲ್ಲಿನ ದೋಷಗಳನ್ನು ವಿಶೇಷವಾಗಿ ತಯಾರಿಸಿದ ಎಣ್ಣೆಯನ್ನು ಚುಚ್ಚಿ ಸರಿಪಡಿಸಿರುವುದಾಗಿ ಇವರು ವರದಿ ಮಾಡಿದ್ದಾರೆ.
ಬೀಥೋವೆನ್ ಎನ್ನುವ ಕಿವುಡು ಇಲಿಗಳ ತಳಿಗಳಲ್ಲಿ ಇವರು ಈ ಪ್ರಯೋಗ ಮಾಡಿದ್ದಾರೆ. ಬೀಥೋವೆನ್ ಸುಪ್ರಸಿದ್ಧ ಸಂಗೀತಕಾರ. ಆದರೆ ಈತ ಕಿವುಡನಾಗಿದ್ದ ಎನ್ನುವುದನ್ನು ನೆನಪಿಡಿ.
ಈ ಇಲಿಗಳಲ್ಲಿ ಒಂದು ಜೀನ್ ದೋಷಪೂರ್ಣವಾಗಿರುತ್ತದೆ. ಸಾಮಾನ್ಯ ಜೀನಿನಲ್ಲಿರುವ ಸಂಕೇತದಲ್ಲಿ ಒಂದಕ್ಷರ ಬದಲಾಗಿದ್ದರಿಂದ ಈ ಕಿವುಡು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಸೂಕ್ಷ್ಮರೋಮಗಳ ಹೊದಿಕೆಯಲ್ಲಿ ಇರುವ ಪ್ರೊಟೀನು ಒಂದರ ಕಾರ್ಯಕ್ಕೆ ಭಂಗವಾಗುತ್ತದೆ. ಅದುವೇ ಕಿವುಡಿಗೆ ಕಾರಣವಾಗುತ್ತದೆ. ಹಾಗಿದ್ದರೆ ಈ ಒಂದು ಅಕ್ಷರವನ್ನು ಇಲಿ ಹುಟ್ಟಿದ ನಂತರ ತಿದ್ದಬಹುದೇ? ತಿದ್ದಿದರೆ ಅದಕ್ಕೆ ಮತ್ತೆ ಕಿವಿ ಕೇಳಬಹುದೇ? ತಿದ್ದುವುದು ಹೇಗೆ? ಇವೆಲ್ಲ ಪ್ರಶ್ನೆಗಳಿಗೂ ತಾವೋ ತಂಡದ ಪ್ರಯೋಗ ಉತ್ತರ ನೀಡಿದೆ.
ಇವರು ಮೊದಲಿಗೆ ಕಿವುಡಿಲ್ಲದ ಇಲಿಗಳಲ್ಲಿರುವ ಈ ಜೀನಿನ ಬದಲಿಗೆ ಅದರ ಉತ್ಪನ್ನವಾದ ಆರ್ ಎನ್ ಎ ಯನ್ನು ತಯಾರಿಸಿದರು. ಇದನ್ನು ಎಣ್ಣೆಯಂತಹ ಕೊಬ್ಬಿನ ಸೂಕ್ಷ್ಮ ಪೊಟ್ಟಣಗಳಲ್ಲಿಟ್ಟು ನೇರವಾಗಿ ಇಲಿಯ ಕಾಕ್ಲಿಯಾದೊಳಗೆ ಚುಚ್ಚಿದರು. ರೋಮಕೋಶಗಳ ಹೊದಿಕೆಯೂ ತೈಲಮೂಲದ್ದೇ ಆದ್ದರಿಂದ ಈ ಕೊಬ್ಬಿನ ಪೊಟ್ಟಣಗಳು ಅದನ್ನು ಸುಲಭವಾಗಿ ದಾಟಬಲ್ಲುವು ಎನ್ನುವುದು ಇವರ ಊಹೆಯಾಗಿತ್ತು. ಹೀಗೆ ಚಿಕಿತ್ಸೆ ನೀಡಿದ ಅನಂತರ ಈ ಕಿವುಡು ಇಲಿಗಳು ಸದ್ದಿಗೆ ಬೆಚ್ಚಲಾರಂಭಿಸಿದ್ದನ್ನು ಇವರು ಗಮನಿಸಿದ್ದಾರೆ. ಅಂದರೆ ಅವಕ್ಕೆ ಕಿವಿ ಕೇಳಿಸಲಾರಂಭಿಸಿದೆ ಎಂದು ಅರ್ಥವಷ್ಟೆ. ಹಾಗೆಯೇ ಈ ಸೂಕ್ಷ್ಮರೋಮಗಳು ಚುರುಕಾಗಲು ಎಷ್ಟು ಸದ್ದು ಮಾಡಬೇಕು ಎಂದೂ ಗಮನಿಸಿದ್ದಾರೆ. ಮೊದಲಿಗಿಂತಲೂ ಕಡಿಮೆ ಸದ್ದಿಗೇ ಅವು ಚುರುಕಾಗುತ್ತಿದ್ದುದನ್ನು ಉಪಕರಣಗಳು ತೋರಿಸಿವೆ. ಅಂದರೆ, ಅವು ಸದ್ದಿಗೆ ಹೆಚ್ಚು ಸಂವೇದಿಸಲು ಆರಂಭಿಸಿದವು ಎಂದರ್ಥವಷ್ಟೆ. ಹೀಗೆ ಈ ಬಗೆಯ ದೋಷವಿರುವ ಕಿವುಡನ್ನು ನೇರವಾಗಿ ಒಂದಿಷ್ಟು ಕೊಬ್ಬಿನ ಔಷಧಿಯನ್ನು ಚುಚ್ಚಿ ಗುಣಪಡಿಸಬಹುದು ಎನ್ನುವುದು ಇವರ ಶೋಧ. ಈ ಔಷಧವನ್ನು ತಯಾರಿಸುವ ಬಗೆ ತಿಳಿದಿರಬೇಕು ಅಷ್ಟೆ.
ಆಕರ: Xue Gao et al., Treatment of autosomal dominant hearing loss by invivo delivery of genome editing agents, Nature, online published 20 December 2017, doi:10.1038/nature25164
https://www.nature.com/articles/nature25164
4. ಹವಾಮಾನ ವೈಪರೀತ್ಯವೇಕೆ?
ಮೊನ್ನೆ ಅಮೆರಿಕೆಯ ಅಧ್ಯಕ್ಷರು ಕಳಿಸಿದ ಸಂದೇಶವೊಂದು ಗಂಭೀರ ಚರ್ಚೆಯನ್ನುಂಟು ಮಾಡಿತು. ಅಧ್ಯಕ್ಷ ಟ್ರಂಪ್ ಏಶಿಯಾ ರಾಷ್ಟ್ರಗಳಿಗೆ ಈ ವರ್ಷ ಛಳಿ ಕಡಿಮೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇದು ಜಾಗತಿಕ ವಾಯುಗುಣದ ಬದಲಾವಣೆಯ ಅಧ್ಯಯನ ಹಾಗೂ ಜಾಗತಿಕ ಹವಾಮಾನ ಬಿಸಿಯೇರುತ್ತಿರುವುದನ್ನು ತಡೆಯಲು ಅಮೆರಿಕೆಯು ನೀಡಬೇಕಿದ್ದ ತನ್ನ ಪಾಲಿನ ಹಣವನ್ನು ನೀಡುವುದಿಲ್ಲ ಎಂದು ನೀಡಿದ ಎಚ್ಚರಿಕೆ ಇದು. ಅಮೆರಿಕೆಯ ಹಣ ಇಲ್ಲದೆ ಹೋದರೆ ಭೂಮಿಯ ಹವೆ ಬಿಸಿಯೇರಿ, ಛಳಿ ಕಡಿಮೆಯಾಗುತ್ತದೆ ಎನ್ನುವ ವ್ಯಂಗ್ಯದ ನುಡಿ ಇದು. ಹವಾಮಾನದಲ್ಲಿನ ಬದಲಾವಣೆಗಳು ಮಾನವನಿಂದಾಗಿ ಆಗುತ್ತಿವೆ. ಆದ್ದರಿಂದ ನಮ್ಮ ಚಟುವಟಿಕೆಗಳನ್ನು ನಿಯಂತ್ರಿಸಬೇಕು ಎಂದು ವಿಶ್ವದ ಎಲ್ಲ ರಾಷ್ಟ್ರಗಳೂ ಒಟ್ಟಾಗಿ ನುಡಿಯುತ್ತಿರುವ ಸಂದರ್ಭದಲ್ಲಿ ಅದನ್ನು ಅಲ್ಲಗಳೆಯುವ ಸುದ್ದಿ. .
ಅವರು ಈ ಮಾತಾಡಿದ ಸಮಯದಲ್ಲಿಯೇ ಅಮೆರಿಕೆಯ ಉತ್ತರ ಭಾಗದಲ್ಲಿ ಹಿಂದೆಂದಿಗಿಂತಲೂ ತುಸು ಹೆಚ್ಚೇ ಛಳಿ ಕಾಣಿಸಿಕೊಂಡು ನಯಾಗರಾ ಜಲಪಾತವೂ ಹೆಪ್ಪುಗಟ್ಟಿದೆ ಎನ್ನುವುದು ನಿಸರ್ಗದ ವ್ಯಂಗ್ಯ ಇರಬೇಕು. ಅದೇನೇ ಇರಲಿ. ಹವಾಗುಣ ನಿಜವಾಗಿಯೂ ಬದಲಾಗುತ್ತಿದೆಯೇ? ಈ ವರ್ಷ ಭಾರತದಲ್ಲಿ ಛಳಿ ನಿಧಾನವಾಗಿ ಕಾಣಿಸಿಕೊಂಡದ್ದು ಇದೇ ಕಾರಣಕ್ಕಿರಬಹುದೇ? ಕಳೆದ ವರ್ಷ ಮುಂಗಾರು ಮಳೆ ಕೈ ಕೊಟ್ಟದ್ದು ಯಾಕೋ? ಹವಾಮಾನ ಬದಲಾವಣೆ ಸಹಜವಾಗಿಯೇ ಆಗುತ್ತಿದೆಯೋ ಅಥವಾ ನಮ್ಮ ಚಟುವಟಿಕೆಗಳ ಪ್ರಭಾವದಿಂದಾಗಿಯೋ? ಮಾನವನ ಚಟುವಟಿಕೆಗಳ ಪ್ರಭಾವದಿಂದಾಗಿ ಎಂದರೆ ಅದನ್ನು ತಿಳಿದುಕೊಳ್ಳುವುದು ಹೇಗೆ? ಇದೋ ಈ ಪ್ರಶ್ನೆಗಳಿಗೆ ಉತ್ತರವಾಗಿ ಮೂರು ವಿಶೇಷ ಪ್ರಬಂಧಗಳನ್ನು ಅಮೆರಿಕೆಯ ಹವಾಮಾನ ತಜ್ಞರ ಸಂಘ ಪ್ರಕಟಿಸಿದೆ. ಇದರಲ್ಲಿ ಒಂದು ನೇರವಾಗಿ ಭಾರತಕ್ಕೆ ಸಂಬಂಧಿಸಿದ್ದು. ಕಳೆದ ವರ್ಷ ಭಾರತ ಹಾಗೂ ಇತರೇ ಏಶಿಯಾ ರಾಷ್ಟ್ರಗಳಲ್ಲಿ ಕಾಣಿಸಿಕೊಂಡ ವಿಪರೀತ ಬೇಗೆ ಜಾಗತಿಕ ತಾಪಮಾನ ಹೆಚ್ಚಾದದ್ದರಿಂದ ಎಂದು ಇದು ವರದಿ ಮಾಡಿದೆ. ಜಪಾನಿನ ಮೀಟಿಯಾರಾಲಾಜಿಕಲ್ ಸೊಸೈಟಿಯ ವಿಜ್ಞಾನಿಗಳು ಅಮೆರಿಕೆಯ ವಿಜ್ಞಾನಿಗಳೊಟ್ಟಿಗೆ ಸೇರಿ ಈ ವಿಶ್ಲೇಷಣೆಯನ್ನು ಮಾಡಿದ್ದಾರೆ.
2016ರಲ್ಲಿ ವಿಶ್ವದ ಎಲ್ಲೆಡೆ ಬೇಸಿಗೆಯಲ್ಲಿ ಉಷ್ಣತೆ ಸಾಧಾರಣಕ್ಕಿಂತಲೂ ಹೆಚ್ಚಿತ್ತು. ಹೀಗೆ ಸಾಧಾರಣಕ್ಕಿಂತಲೂ ವಿಪರೀತವಾದ ಬೇಗೆ, ಛಳಿ, ಮಳೆ, ಗಾಳಿಯನ್ನು ಅತಿ ವಿಪರೀತ ಹವಾಮಾನ ಅಥವಾ ಎಕ್ಟ್ರೀಮ್ ಕ್ಲೈಮೇಟ್ ಎಂದು ಕರೆಯುತ್ತಾರೆ. ಇಂತಹ ವಿಪರೀತದ ಘಟನೆಗಳು ಹೆಚ್ಚಾಗಿದ್ದಷ್ಟೂ, ಆಥವಾ ಆಗಾಗ್ಗೆ ಆಗುವುದೂ ಹವಾಮಾನದಲ್ಲಿ ಬದಲಾವಣೆಗಳಾಗುತ್ತಿರುವ ಸೂಚನೆ ಎನ್ನುವುದು ವಿಜ್ಞಾನಿಗಳ ನಂಬುಗೆ. ಆದರೆ ಇದಕ್ಕೆ ಇಂತದ್ದೇ ಕಾರಣ ಎನ್ನುವುದನ್ನು ನಿರೂಪಿಸುವುದು ಬಹಳ ಕಷ್ಟ. ಇದೇ ಈ ಜಪಾನೀ ವಿಜ್ಞಾನಿಗಳ ಸಾಧನೆ.
ಯಾವುದೇ ಊರಿನ ಹವಾಮಾನವನ್ನೂ ಅಲ್ಲಿನ ತೇವಾಂಶ, ಗಾಳಿ, ಗಾಳಿಯ ದಿಕ್ಕು, ಬಿಸಿಲಿನ ಪ್ರಮಾಣ, ಋತು, ಅಕ್ಷಾಂಶ, ರೇಖಾಂಶ, ಉಷ್ಣತೆ, ಗಾಳಿಯಲ್ಲಿರುವ ದೂಳು, ಅಲ್ಲಿರುವ ಜ್ವಾಲಾಮುಖಿಯ ಚಟುವಟಿಕೆ ಇತ್ಯಾದಿ ಹಲವಾರು ಅಂಶಗಳು ಬಾಧಿಸುತ್ತವೆ. ಇವುಗಳಲ್ಲಿ ಯಾವುದೊಂದು ಪರಿಸ್ಥಿತಿ ಬದಲಾದರೂ ಅಂದಿನ ಹವಾಮಾನ ಬದಲಾಗುತ್ತದೆ. ಹೀಗಾಗಿ ಹವಾಮಾನದ ಭವಿಷ್ಯವನ್ನು ನುಡಿಯುವುದು ಬಹಳ ಕಷ್ಟ. ವಿಜ್ಞಾನಿಗಳು ಈ ಒಂದೊಂದನ್ನೂ ಬದಲಾಯಿಸಿದರೆ ಅಥವಾ ಕೆಲವನ್ನೋ, ಎಲ್ಲವನ್ನೋ ಬದಲಾಯಿಸಿದರೆ ಏನಾಗಬಹುದು ಎಂದು ಲೆಕ್ಕಾಚಾರ ಹಾಕಿ ಹವಾಮಾನದ ಭವಿಷ್ಯ ನುಡಿಯುತ್ತಾರೆ. ಇದನ್ನೇ ಮಾಡೆಲಿಂಗ್ ಎನ್ನುತ್ತೇವೆ.
ಜಪಾನೀ ವಿಜ್ಞಾನಿಗಳು ಇಂತಹ ನೂರಾರು ಮಾಡೆಲ್ಲುಗಳನ್ನು ಬಳಸಿ ಏಶಿಯಾದ ಹವಾಮಾನವನ್ನು 2016ರಲ್ಲಿ ವಿಶ್ವದ ಹವಾಮಾನ ಹೇಗಿತ್ತೆಂದು ಅಣಕಿಸಿ ನೋಡಿದರು. ಈ ಎಲ್ಲ ಮಾದರಿಗಳಲ್ಲಿಯೂ ಮನುಷ್ಯನಿಂದಾಗುವ ಬದಲಾವಣೆಗಳನ್ನು ನಿರ್ಲಕ್ಷಿಸಲಾಗಿತ್ತು. ಹೀಗೆ ಮಾಡಿದಾಗ ದೊರೆತ ಉತ್ತರಗಳಲ್ಲಿ ಎಲ್ಲಿಯೂ ಕಳೆದ ವರ್ಷ ನಾವು ಕಂಡಂಥ ಬೇಗೆ ಕಾಣಲಿಲ್ಲ. ಕಳೆದ ವರ್ಷದ ಬೇಸಗೆಯಲ್ಲಿ ಬೇಗೆ ಹೆಚ್ಚಾಗಿ ಸುಮಾರು 500ಕ್ಕೂ ಹೆಚ್ಚು ಸಾವುಗಳಾಗಿದ್ದುವು ಎನ್ನುವುದು ನೆನಪಿರಲಿ. ಆದರೆ ಮಾನವನಿಂದಾಗಿ ಉಂಟಾಗುತ್ತಿರುವ ಬದಲಾವಣೆಗಳನ್ನು ಈ ಮಾಡೆಲ್ಲುಗಳಲ್ಲಿ ಸೇರಿಸಿದಾಗ, 2016ರಲ್ಲಿ ವಾಸ್ತವದಲ್ಲಿ ಕಂಡ ಉಷ್ಣತೆಯನ್ನು ಮಾಡೆಲ್ಲುಗಳೂ ಪ್ರತಿಫಲಿಸಿದುವು. ಮಾನವ ನಿರ್ಮಿತ ಬದಲಾವಣೆಗಳು ಅಂದರೆ ಇನ್ನೇನಲ್ಲ. ಅಧಿಕ ಇಂಧನದ ಬಳಕೆಯಿಂದ ಇಂಗಾಲದ ಡೈಯಾಕ್ಸೈಡು, ಮೀಥೇನು, ಗಂಧಕದ ಆಕ್ಸೈಡು ಮುಂತಾದ ವಾಯುಮಾಲಿನ್ಯದ ವಸ್ತುಗಳ ಉತ್ಪಾದನೆ. ಅಂದರೆ ಕಳೆದ ವರ್ಷದ ಬೇಗೆ ಆಗಿದ್ದು ನಮ್ಮ ಕರ್ಮದಿಂದಾಗಿ ಎಂದೇ ಅರ್ಥ.
ಎಲ್ಲೋ ಯಾರೋ ಮಾಡಿದ ಪಾಪ ನಮ್ಮನ್ನೂ ತಾಕುತ್ತದೆ ಎನ್ನುವುದು ಜಾಗತಿಕ ಹವಾಮಾನದ ವಿಷಯದಲ್ಲಂತೂ ಸತ್ಯವೇ.
Yukiko Imada et al., Climate Change Increased the Likelihood of the 2016 Extreme Heat Wave condition in Asia, Bull.Am.Meteorologial Soc., January 2018, Pp S97-S101
DOI:10.1175/BAMS-D-17-0109.1
ಜಾಣನುಡಿ
ಡಿಸೆಂಬರ್ 31,
ಪ್ರಪ್ರಥಮ ಬಾರಿಗೆ ಸಾರ್ವಜನಿಕವಾಗಿ ವಿದ್ಯುತ್ ಬಲ್ಬು ಪ್ರಕಾಶಿಸಿದ ದಿನ. 1879ರಲ್ಲಿ ವಿದ್ಯುತ್ ಬಲ್ಬನ್ನು ಆವಿಷ್ಕರಿಸಿದ ಸುಪ್ರಸಿದ್ಧ ತಂತ್ರಜ್ಞಾನಿ ಥಾಮಸ್ ಆಲ್ವ ಎಡಿಸನ್ ವಿದ್ಯತ್ತಿನಿಂದ ಅದನ್ನು ಬೆಳಗಿಸಿ ಸಾರ್ವಜನಿಕರಿಗೆ ಪ್ರದರ್ಶಿಸಿದ. ಆ ದಿನ ಹೊತ್ತಿದ ಬೆಳಕು ಇಡೀ ಜಗತ್ತನ್ನೇ ಬದಲಿಸಿತು. ಸುಮಾರು 150 ವರ್ಷಗಳೊಳಗೆ ಇದರಿಂದಾಗಿ ನಮ್ಮ ಭೂಮಿಯಲ್ಲಿ ರಾತ್ರಿ ಎನ್ನುವುದು ಸಂಪೂರ್ಣ ಮರೆಯಾಗಿದೆ. ಎಲ್ಲೆಡೆ ಜಗಮಗಿಸುವ ಬೆಳಕಿನಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ಸಂದರ್ಭದಲ್ಲಿ ಈ ಆವಿಷ್ಕಾರವನ್ನು ನೆನಪಿಸಿಕೊಳ್ಳಲೇ ಬೇಕು.
—-
ರಚನೆ ಮತ್ತು ಪ್ರಸ್ತುತಿ: ಕೊಳ್ಳೇಗಾಲ ಶರ್ಮ.