ಜಾಣಸುದ್ದಿ 4: ಕೊಳ್ಳೇಗಾಲ ಶರ್ಮ

kollagala-sharma

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ  ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com

ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)

 

ಈ ಸಂಚಿಕೆಯಲ್ಲಿ:

ಬೂಸಿನ ಬೀಸಿಗೆ ಬಗ್ಗದ ಕಡಲೆಕಾಯಿ

 ಆದಿ ಮಾನವಿಯರ ಕೆಲಸ

ಕೊಕ್ಕಿನಲ್ಲಿದೆ ಬಾತುಕೋಳಿಯ  ಕೈ

 ರೋಗಪತ್ತೆಗೊಂದು ಕಾಗದದ ಕಟ್ಟು

 

1. ಬೂಸಿನ ಬಲೆಗೆ ಬೀಳದ ಕಡಲೆಕಾಯಿ

ಸಂಜೆ ಕಾಫಿಯ ಜೊತೆಗೆ ಹಾಟ್ ಚಿಪ್ಸ್ ಅಂಗಡಿಯಿಂದ ತಂದ ಕುರುಕಲು ಕಡಲೆಬೀಜ ಮೆಲ್ಲುವುದು ಯಾರಿಗೆ ತಾನೇ ಇಷ್ಟವಿಲ್ಲ? ಕಾಫಿಯ ಸ್ವಾದದ ಜೊತೆಗೆ ಕಡಲೆ ಬೀಜದ ಖಾರದ ರುಚಿ ಆಹಾ ಎನ್ನುವಂತಿದೆ. ಇಂತಹ ಸೊಗಸಾದ ಅನುಭವವನ್ನು ಕೆಡಸಲು ಒಂದು ಕಹಿ ಕಡಲೆ ಬೀಜ ಇದ್ದರೆ ಸಾಕು. ಕಾಫಿ, ಕಡಲೆಯ ಮಜವನ್ನೆಲ್ಲ ಓಡಿಸಿಬಿಡುತ್ತದೆ. ಕಹಿ ಕಡಲೆ ಬೀಜಕ್ಕೆ ಕಾರಣ ನೆಲಗಡಲೆಗೆ ಹೊತ್ತಿಕೊಳ್ಳುವ ಆಸ್ಪರ್ಜಿಲ್ಲಸ್ ಎನ್ನುವ ಒಂದು ಬಗೆಯ ಬೂಸ್ಟು. ಈಗ ಹೈದರಾಬಾದಿನಲ್ಲಿರುವ ಇಕ್ರಿಸಾಟ್ ಸಂಸ್ಥೆಯ ವಿಜ್ಞಾನಿಗಳು ಈ ಬೂಸಿನ ಬಲೆಗೆ ಬೀಳದ ಕಡಲೆ ತಳಿಯನ್ನು ರೂಪಿಸಿದ್ದಾರಂತೆ. ಈ ಸುದ್ದಿಯನ್ನು ಪ್ಲಾಂಟ್ ಬಯೋಟೆಕ್ನಾಲಜಿ ಜರ್ನಲ್ ಪತ್ರಿಕೆ ಇತ್ತೀಚೆಗೆ ವರದಿ ಮಾಡಿದೆ.

peanut-2982397_960_720

ಆಸ್ಪರ್ಜಿಲ್ಲಸ್ ಬೂಸು ನೆಲದಲ್ಲಿ ಸಹಜವಾಗಿಯೇ ಸಮೃದ್ಧವಾಗಿ ಬೆಳೆಯುವ ಬೂಸು. ಇನ್ನು ನೆಲದಡಿಯಲ್ಲಿ ಬೆಳೆಯುವ ಕಡಲೆಯನ್ನು ಅದು ತಾಕದಿದ್ದೀತೇ? ಎಷ್ಟೇ ಜಾಗ್ರತೆ ವಹಿಸಿದರೂ ಈ ಸೋಂಕಿಲ್ಲದಂತೆ ಕಡಲೆಯನ್ನು ಬೆಳೆಸುವುದು ಕಷ್ಟ. ಆಸ್ಪರ್ಜಿಲ್ಲಸ್ಸಿನ ಸೋಂಕಷ್ಟೆ ಇದ್ದರೆ ಪರವಾಗಿರಲಿಲ್ಲ. ಆದರೆ ಈ ಬೂಸು ಅಫ್ಲಟಾಕ್ಸಿನ್ ಎನ್ನುವ ವಿಷವನ್ನೂ ಸುರಿಸುತ್ತದೆ. ಈ ವಿಷ ಕಹಿಯಷ್ಟೆ ಅಲ್ಲ, ಕ್ಯಾನ್ಸರನ್ನೂ ತರುತ್ತದೆ.  ಇದೇ ಬೂಸಿನ ಅಪಾಯ.

ಹಾಗಿದ್ದರೆ ಬೂಸನ್ನು ದೂರವಿಡುವ ಉಪಾಯಗಳಿಲ್ಲವೇ ಎನ್ನಬೇಡಿ. ಇವೆ. ಈ ವಿಷವನ್ನು ಸುರಿಯದ ಆಸ್ಪರ್ಜಿಲ್ಲಸ್ ಹಾಗೂ ಅದೇ ಬಗೆಯ ಇತರೆ ಬೂಸುಗಳನ್ನು ನೆಲಕ್ಕೆ ಸುರಿಯಬಹುದು. ಇವು ವಿಷ ಸುರಿಯುವ ಬೂಸಿನ ಜೊತೆಗೆ ಸ್ಪರ್ಧಿಸಿ ಅದರ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಅಥವಾ ಬೂಸನ್ನು ಕೊಲ್ಲುವ ರಾಸಾಯನಿಕಗಳನ್ನು ಉಪಯೋಗಿಸಬಹುದು. ಇದೂ ಆಗದಿದ್ದರೆ, ಕಡಲೆ ಬೀಜವನ್ನು ಹುರಿದೋ, ಬೇಯಿಸಿಯೋ, ಒಣಗಿಸಿಯೋ ತಿಂದರೆ ಬೂಸಿನ ವಿಷವನ್ನು ಕುಗ್ಗಿಸಬಹುದು. ಆದರೂ ಹಸಿ ಬೀಜವನ್ನು ಬಳಸುವ ಎಣ್ಣೆಯಲ್ಲಿ, ಇತರೆ ಪದಾರ್ಥಗಳಲ್ಲಿ, ಕಡಲೆ ಹಿಂಡಿಯಲ್ಲಿ ಇದು ಇದ್ದೇ ಇರುತ್ತದೆ. ಅಲ್ಲಿಂದ ಮತ್ತೆ ನಮ್ಮ ಒಡಲಿಗೆ ಕರಿದ ಪದಾರ್ಥಗಳ ಮೂಲಕವೋ, ಹಸುವಿನ ಹಾಲಿನ ಮೂಲಕವೋ ಬಂದರೂ ಅಚ್ಚರಿಯಿಲ್ಲ.

ಬೂಸನ್ನೆ ದೂರವಿಡುವ ಕಡಲೆ ತಳಿ ಇದ್ದರೆ ಎಷ್ಟು ಚೆನ್ನ!  ಈ ಯಾವ ಉಪಾಯಗಳೂ ಬೇಕಿಲ್ಲ ಅಲ್ಲವೇ? ಹೈದರಾಬಾದಿನ ಇಕ್ರಿಸಾಟ್ ಸಂಸ್ಥೆಯ ಪೂಜಾ ಭಟ್ನಾಗರ್ ಅಮೆರಿಕೆಯ ಸಹೋದ್ಯೋಗಿಗಳ ಜೊತೆಗೂಡಿ ಹೀಗೊಂದು ತಳಿಯನ್ನು ರೂಪಿಸಿದ್ದಾರೆ. ಇದಕ್ಕೆ ಇವರು ಕುಲಾಂತರಿ ತಂತ್ರಜ್ಞಾನವನ್ನು ಬಳಸಿದ್ದಾರೆ. ಇವರು ಮಾಡಿದ್ದು ಇಷ್ಟೆ. ಮೊದಲಿಗೆ ಬೂಸಿನ ಕಾಟವನ್ನು ತಡೆಯಲು ಕಡಲೆಯಲ್ಲಿಯೇ ಇರುವಂತಹ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದರು. ನೆಲಗಡಲೆ ಸಹಜವಾಗಿಯೇ ಬೂಸಿನ ಸೋಂಕನ್ನು ವಿರೋಧಿಸುವ ರಾಸಾಯನಿಕಗಳನ್ನು ತಯಾರಿಸುತ್ತದೆ. ಕುಲಾಂತರಿ ತಂತ್ರಜ್ಞಾನವನ್ನು ಬಳಸಿ ಈ ರಾಸಾಯನಿಕಗಳನ್ನು ಸೃಷ್ಟಿಸುವ ಜೀನುಗಳು ಹೆಚ್ಚೆಚ್ಚು ಕಾರ್ಯಪ್ರವೃತ್ತವಾಗುವಂತೆ ಮಾಡಿದರು. ಇದು ಬೂಸಿನ ಸೋಂಕನ್ನು ಕಡಿಮೆ ಮಾಡುತ್ತದೆ.

ಏನೋಪ್ಪ. ಇಷ್ಟೆಲ್ಲ ಮಾಡಿದ ಮೇಲೂ ಬೂಸು ಸೋಂಕಿದರೆ ಎಂದಿರಾ? ಪೂಜಾ ಅವರ ತಂಡ ಅದಕ್ಕೂ ಒಂದು ಉಪಾಯ ಹೂಡಿದೆ. ಕುಲಾಂತರಿ ತಂತ್ರವನ್ನೇ ಬಳಸಿ ಬೂಸು ಅಫ್ಲಟಾಕ್ಸಿನ್ ತಯಾರಿಸದಂತೆ ತಡೆಯುವ  ರಾಸಾಯನಿಕವನ್ನು ಕಡಲೆಕಾಯಿಯೇ ತಯಾರಿಸುವಂತೆ ಮಾಡಿದೆ. ಈ ರಾಸಾಯನಿಕ ಅಫ್ಲಟಾಕ್ಸಿನ್ ತಯಾರಿಕೆಯಲ್ಲಿ ತೊಡಗಿಕೊಳ್ಳುವ ಬೂಸಿನ ಜೀನುಗಳನ್ನು ನಿಷ್ಕ್ರಿಯವಾಗಿಸುತ್ತದೆ. ಇದರಿಂದಾಗಿ ಬೂಸು ತಾಕಿದರೂ ಅಫ್ಲಟಾಕ್ಸಿನ್ ಕೂಡುವುದಿಲ್ಲ. ಹೀಗೆ ಕುಲಾಂತರಿಸಿದ ಕಡಲೆಬೀಜಗಳನ್ನು ಪರೀಕ್ಷಿಸಿದಾಗ ಈ ರಾಸಾಯನಿಕಗಳ ತಯಾರಿಕೆ ಹೆಚ್ಚಾದಷ್ಟೂ, ಬೀಜದಲ್ಲಿ ಅಫ್ಲಟಾಕ್ಸಿನ್ ಸಂಗ್ರಹಣೆ ಕುಗ್ಗಿರುವುದನ್ನೂ ಇವರು ದಾಖಲಿಸಿದ್ದಾರೆ. ಒಟ್ಟಾರೆ ಈ ತಂತ್ರದಿಂದ ಬೂಸನ್ನು ಬಗ್ಗುಬಡೆಯುವ ನೆಲಗಡಲೆ ತಳಿ ಸಿದ್ಧಪಡಿಸಬಹುದು.

ಹಾಗಿದ್ದರೆ ಇನ್ನು ಕಹಿ ಬೀಜದ ಕೋಟಲೆ ಇರುವುದಿಲ್ಲವೇ? ಅದಕ್ಕೆ ಸ್ವಲ್ಪ ಕಾಯಬೇಕು. ಈ ತಳಿಯೂ ಉಳಿದ ಕಡಲೆ ತಳಿಗಳ ಹಾಗೆಯೇ ಇಳುವರಿ ಕೊಡುತ್ತದೆಯೋ ಇಲ್ಲವೋ ಗೊತ್ತಿಲ್ಲವಲ್ಲ. ಅದುವರೆಗೂ ಕಾಯಬೇಕು. ಕಾಯೋಣ.

ಆಕರ:

Sharma, K.K., et al. and Bhatnagar-Mathur, P. (2017) Peanuts that keep aflatoxin at bay: a threshold that matters. Plant Biotechnol. J.,

ಲಿಂಕ್:  http://onlinelibrary.wiley.com/doi/10.1111/pbi.12846/epdf


2. ಆದಿ ಮಾನವಿಯರ ಶ್ರಮಜೀವನ

 “ ಅಯ್ಯೋ. ಏನು ಕಾಲ ಬಂತೋ? ನಾವೆಲ್ಲ ಮೂಳೆ ಮುರಿಯೋ ಹಾಗೆ ದುಡಿತಾ ಇದ್ದೆವು. ಈಗಿನವರು ಬರೇ ಮೈಗಳ್ಳರು.” ಮನೆಯಲ್ಲಿ ಹಿರಿಯರು ಇದ್ದರೆ ಈ ಮಾತನ್ನು ಕೇಳೇ ಇರುತ್ತೀರಿ.  ಅವರು ಹೀಗೆಂದಾಗ “ಅದಕ್ಕೆ ಪುರಾವೆ ಏನು? ನೀವ” ಎಂದು ಯಾರಾದರೂ ಕೇಳಿದರೆ ಖಂಡಿತ ಅವರನ್ನು ತಲೆಹರಟೆ ಅಂತಲೋ, ಅಹಂಕಾರಿ ಅಂತಲೋ, ದೊಡ್ಡವರನ್ನು ಹಾಗೆಲ್ಲ ಪ್ರಶ್ನೆ ಮಾಡುತ್ತಾರೋ ಎಂದೆಲ್ಲ ಗದರಿಸುತ್ತೇವೆ.

 ನಿಜ. ಬೆಳಗ್ಗೆದ್ದು ಮಕ್ಕಳನ್ನು ಶಾಲೆಗೆ ಕಳಿಸಿ, ಬಸ್ಸು ಹಿಡಿದು, ಕೂಲಿಗೋ ಉದ್ಯೋಗಕ್ಕೋ ಓಡುವ ತರಾತುರಿಯಲ್ಲಿ ಅವರನ್ನು ನಾವು ಮರು ಪ್ರಶ್ನಿಸುವುದಿಲ್ಲ. ಆದರೆ ಒಳಗೊಳಗೇ ಅವರ ಕಾಲದಲ್ಲಿ ಇಷ್ಟೆಲ್ಲ ಓಡಾಟವಿರಲಿಲ್ಲ. ಜೀವನ ಆರಾಮವಾಗಿತ್ತು, ಎಂದು ಖಂಡಿತ ಗೊಣಗುತ್ತೀವಿ.  ಆದರೆ ವಿಜ್ಞಾನಿಗಳು ಹಾಗಲ್ಲ. ಯಾವುದಕ್ಕೂ ಪುರಾವೆ ಏನು ಎಂದು ಕೇಳಿಯೇ ಬಿಡುತ್ತಾರೆ.

ಅಲ್ಲ. ಅಜ್ಜಿಯರ ಕಾಲದಲ್ಲಿ ಅವರು ಮೂಳೆ ಮುರಿಯುವ ಹಾಗೆ ದುಡಿಯುತ್ತಿದ್ದರು ಅನ್ನುವುದಕ್ಕೆ ಅವರ ಮಾತಿನ ಹೊರತು ಬೇರೆ ಪುರಾವೆ ಇರಬಹುದೇ? ಮೂವತ್ತು ನಲವತ್ತು ವರ್ಷ ಹಿಂದಿನ ತಲೆಮಾರಿನ ಬಗ್ಗೆಯೇ ಇಷ್ಟೊಂದು ಅನುಮಾನ ಇರುವಾಗ ಸಾವಿರಾರು ವರ್ಷ ಹಿಂದೆ ಇದ್ದವರು ಮೈಗಳ್ಳರೋ, ಮೈಮುರಿದು ದುಡಿಯುತ್ತಿದ್ದವರೋ ಎನ್ನುವುದು ತಿಳಿಯಲಾದೀತೇ? ಯಾಕಾಗುವುದಿಲ್ಲ. ಖಂಡಿತ ಸಾಧ್ಯ ಎನ್ನುತ್ತದೆ ಸೈನ್ಸ್ ಅಡ್ವಾನ್ಸಸ್ ಪತ್ರಿಕೆಯಲ್ಲಿ ಮೊನ್ನೆ ಪ್ರಕಟವಾದ ಒಂದು ಸಂಶೋಧನೆ.  ಐದು ಸಾವಿರ ವರ್ಷಗಳ ಹಿಂದೆ ಮಹಿಳೆಯರು ದೈಹಿಕವಾಗಿ ಇಂದಿನವರಿಗಿಂತಲೂ ಹೆಚ್ಚು ಶ್ರಮ ಪಡುತ್ತಿದ್ದರು ಎಂದು ಈ ಸಂಶೋಧನೆ ಹೇಳುತ್ತದೆ.

prehistoric-woman

ಹೌದು. ಮಾನವ ಚರಿತ್ರೆಯನ್ನು ಗಮನಿಸಿದರೆ ನಾಗರೀಕತೆ ಬೆಳೆದಂತೆ ಮಾನವರ ದೈಹಿಕ ಶ್ರಮವೂ ಕಡಿಮೆಯಾಗುತ್ತ ಬಂದಿದೆ. ಇದಕ್ಕೆ ಪುರಾವೆ ಮಾನವರ ಮೂಳೆಗಳಲ್ಲಿ ಸಿಗುತ್ತದಂತೆ. ಕೈ ಕಾಲುಗಳಿಗೆ ವ್ಯಾಯಾಮ ಸಿಕ್ಕಷ್ಟೂ ಅಲ್ಲಿನ ಮೂಳೆಗಳು ಗಟ್ಟಿಯಾಗುತ್ತವಷ್ಟೆ. ಕೈ, ಕಾಲಿನಲ್ಲಿರುವ ಯಾವ ಮೂಳೆಗಳು ಗಟ್ಟಿಯಾಗಿವೆ, ಯಾವುವು ತೆಳ್ಳಗಿವೆ ಎನ್ನುವುದು ಆ ಜನ ಯಾವ ರೀತಿಯ ಶ್ರಮವನ್ನು ಕೈಗೊಂಡಿದ್ದಿರಬಹುದೂ ಎಂದೂ ಸೂಚಿಸುತ್ತದೆ. ಉದಾಹರಣೆಗೆ, ಓಟಗಾರರ ತೊಡೆ ಮೂಳೆಗಳು ಗಟ್ಟಿಯಾಗಿರುತ್ತವೆ. ಕೂಲಿಗಾರರ ತೋಳು ಮೂಳೆಗಳು ಗಟ್ಟಿಯಾಗಿರುತ್ತವೆ.

ಈ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ನಮ್ಮ ಪೂರ್ವಜರು ಎಂತಹ ಶ್ರಮಜೀವಿಗಳಾಗಿದ್ದರು ಎನ್ನುವುದನ್ನು ಊಹಿಸಬಹುದೇ? ಈ ಪ್ರಶ್ನೆಯನ್ನು ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಅಲಿಸನ್ ಮೆಕಿಂಟೋಶ್ ಹಾಗೂ ಕೆನಡಾದಲ್ಲಿರುವ ಆಕೆಯ ಸಹೋದ್ಯೋಗಿಗಳು ಕೇಳಿದ್ದಾರೆ. ಉತ್ತರಕ್ಕಾಗಿ ಇವರು ಯುರೋಪಿನ ಮಹಿಳೆಯರು, ಪುರುಷರು ಹಾಗೂ 5000 ವರ್ಷಗಳ ಹಿಂದೆ ಬದುಕಿದ್ದವರ ಮೂಳೆಗಳನ್ನು ಪರೀಕ್ಷಿಸಿದ್ದಾರೆ. ಈ ಮೂಳೆಗಳೆಷ್ಟು ಗಟ್ಟಿ ಎನ್ನುವುದನ್ನು ಪರೀಕ್ಷಿಸಿ ತನ್ಮೂಲಕ ತಮ್ಮ ಪ್ರಶ್ನೆಗೆ ಉತ್ತರ ಸಿಗಬಹುದೋ ಎಂದು ಪ್ರಯತ್ನಿಸಿದ್ದಾರೆ.

ಇವರ ಸಂಶೋಧನೆಯ ಪ್ರಕಾರ 5000 ವರ್ಷಗಳ ಹಿಂದೆ ಇದ್ದ ಜನತೆಯಲ್ಲಿ ಮಹಿಳೆಯರು ತೂಕವನ್ನೆತ್ತುವ, ಕೈಗೆಲಸ ಹೆಚ್ಚು ಮಾಡುವವರಾಗಿದ್ದರಂತೆ. ಅಂದರೆ ಅವರು ಮೈಮುರಿದು ಕೆಲಸ ಮಾಡುತ್ತಿದ್ದರು. ಓಡಾಡುತ್ತಾ ಕಾಲ ಕಳೆಯುವ ಜೀವಿಗಳಾಗಿರಲಿಲ್ಲ. ಇದಕ್ಕೆ ತಕ್ಕುದಾಗಿ ಇಂದಿನ ಮಹಿಳೆಯರಲ್ಲಿ ಓಟಗಾರ್ತಿಯರ ತೊಡೆಮೂಳೆಯ ಲಕ್ಷಣಗಳು ಅವರು ತೊಡೆಮೂಳೆಗಳಲ್ಲಿ ಕಂಡು ಬರುವುದಿಲ್ಲ. ಆದರೆ ಇಂದಿನ ಪುರುಷರ ತೋಳ್ಮೂಳೆಗಳಂತೆ ಅವುಗಳ ಲಕ್ಷಣಗಳಿದ್ದುವು. ಅರ್ಥಾತ್, ಇಂದಿನ ಓಟಗಾರ್ತಿಯರು ಮಾಡುವ ವ್ಯಾಯಾಮಕ್ಕಿಂತಲೂ ಶ್ರಮ ಬೇಡುವ ಕೆಲಸಗಳನ್ನು ಅಂದಿನ ಮಹಿಳೆಯರು ಮಾಡುತ್ತಿದ್ದರು ಎಂದರ್ಥ.

ಐದು ಸಾವಿರ ವರ್ಷಗಳು ಎಂದರೆ ಹರಪ್ಪ, ಮೊಹೆಂಜೊದಾರೊ ನಾಗರೀಕತೆ ಬರುವುದಕ್ಕೆ ಒಂದು ಸಾವಿರ ವರ್ಷಗಳಷ್ಟು ಹಿಂದೆ ಹಾಗೂ ಮನುಷ್ಯರು ಕೃಷಿ ಮಾಡಲು ಆರಂಭಿಸಿ ಐದು ಸಾವಿರ ವರ್ಷಗಳು ಕಳೆದಾಗಿತ್ತು. ಕೃಷಿಕರಾದ ಕೂಡಲೇ ಆರಾಮವಾಗಿತ್ತು ಎಂದಲ್ಲ. ಆಗಲೂ ಶ್ರಮದ ಕೆಲಸಗಳನ್ನೇ ಮಾಡಬೇಕಿತ್ತು. ಪುರುಷರಿಗಿಂತಲೂ ಮಹಿಳೆಯರೇ ಹೆಚ್ಚು ಶ್ರಮದ ಕೆಲಸಗಳನ್ನು ಮಾಡುತ್ತಿದ್ದರು ಎಂದು ಈ ಮೂಳೆಗಳು ತಿಳಿಸುತ್ತವೆ.

ನಮ್ಮ ತೋಳ್ಬಲವೇನೂ ಕಡಿಮೆ ಇಲ್ಲ ಎಂದು ಮಹಿಳೆಯರು ಈಗ ತೋಳೇರಿಸಿ ನಿಲ್ಲಬಹುದು. ಹೆಮ್ಮೆಯಿಂದ ಅಲ್ಲವೇ?

ಆಕರ: Macintosh,, AA et al., Prehistoric women’s manual labor exceeded that of athletes through the first 5500 years of farming in Central EuropeSci. Adv. 2017;3: eaao3893 29 November 2017

ಲಿಂಕ್: http://advances.sciencemag.org/content/3/11/eaao3893


3. ಕೊಕ್ಕಿನೊಳಗಿದೆ ಬಾತುಕೋಳಿಯ ಕೈ

ಬಾತುಕೋಳಿ ಕಮಲದೊಟ್ಟಿಗೇ ಕೆಸರಿನಲ್ಲಿ ವಾಸಿಸುವ ಹಕ್ಕಿ. ಇದರ ನಂಟ ಹಂಸವೂ ಅಷ್ಟೆ. ಈ ನೀರ ಹಕ್ಕಿಗಳು ಹಾಲನ್ನೂ ನೀರನ್ನೂ ಬೇರೆ ಬೇರೆ ಮಾಡುತ್ತವೆ ಎನ್ನುವ ಪ್ರತೀತಿ ಇದೆ. ಇದು ಎಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ.  

ಒಂದಂತೂ ಸತ್ಯ. ಈ ಹಕ್ಕಿಗಳಿಗೆ ನೀರನ್ನು ಶೋಧಿಸದೆ ವಿಧಿ ಇಲ್ಲ. ನೀರನ್ನು ಸೋಸಿಯಲ್ಲದೆ ಅವು ಆಹಾರ ಪಡೆಯುವುದು ಸಾಧ್ಯವಿಲ್ಲ. ಏಕೆಂದರೆ ಅವು ಬಾಳುವ ಕೆಸರಿನಲ್ಲಿ ಏನಿದೆಯೋ, ಏನಿಲ್ಲವೋ ಕಣ್ಣಿಗಂತೂ ಗೋಚರಿಸದು. ಅದಕ್ಕೇ ಬಾತು, ಹಂಸಗಳು ಕೆಸರನ್ನು ಕೆದಕಿ, ಬೆದಕಿ, ಕುಕ್ಕಿ ಆಹಾರ ಹುಡುಕುತ್ತವೆ. ಇವು ಕೆದಕಿ ಬೆದಕಿ ನೋಡುವುದು ನಾಯಿಗಳು ಮಾಡುವ ಹಾಗೆ ಆಹಾರವನ್ನು ಮೂಸುವುದಕ್ಕೋ? ಅಥವಾ ನಮ್ಮ, ನಿಮ್ಮ ಹಾಗೆ ತಟ್ಟಿ, ಚುಚ್ಚಿ ಇದು ಆಹಾರ, ಇದು ಅಲ್ಲ ಎಂದು ನಿರ್ಧರಿಸುತ್ತವೆಯೋ?

peanut-2982397_960_720

ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಇವು ವಾಸನೆಯನ್ನು ಗ್ರಹಿಸಿ ಆಹಾರವನ್ನು ದೊರಕಿಸಿಕೊಳ್ಳುತ್ತವೆ ಎನ್ನೋಣವೆಂದರೆ ಆಹಾರಕ್ಕಾಗಿ ಇವು ಮುಳುಗು ಹಾಕಬೇಕು. ಆಗ ಮೂಗಿನಲ್ಲಿ ನೀರು ತುಂಬಿಕೊಂಡಿರುತ್ತದೆಯೇ ಹೊರತು ವಾಸನೆಯಲ್ಲ. ಇನ್ನು ಇವುಗಳ ಕೊಕ್ಕು ನಮ್ಮ ಅಥವಾ ನಾಯಿಯ ಮೂಗಿನಂತೆ ಇಲ್ಲ. ಹೀಗಾಗಿ ಇವು ಬಹುಶಃ ಸ್ಪರ್ಶ ಜ್ಞಾನದಿಂದ ಅಂದರೆ ಕುಕ್ಕಿ, ಚುಚ್ಚಿ, ಕಚ್ಚಿ, ಹಿಸಿದು ಆಹಾರವನ್ನು ಗುರುತಿಸುತ್ತವೆಯಂತೆ. ಹೀಗೆಂದು ಅಮೆರಿಕೆಯ ಯೇಲ್ ವಿಶ್ವವಿದ್ಯಾನಿಲಯದ ನರವಿಜ್ಞಾನಿ ಸ್ವೆತಾಸ್ಲೋವ್ ಬಾಗ್ರಿಯಂತ್ಸೆ ಮತ್ತು ಸಂಗಡಿಗರು ಗುರುತಿಸಿದ್ದಾರೆ.

ಸ್ಪರ್ಶಜ್ಞಾನ ಎಂದರೆ ಮತ್ತೇನಲ್ಲ. ಅತಿ ಸೂಕ್ಷ್ಮ ಒತ್ತಡದ ಬಿಂದುಗಳನ್ನೂ ಗುರುತಿಸುವ ಸಾಮರ್ಥ್ಯ. ಮೂಗಿನಲ್ಲಿ ವಾಸನೆಯನ್ನು ಗ್ರಹಿಸುವ ನರಗಳಂತೆ, ನಾಲಗೆಯಲ್ಲಿ ರಾಸಾಯನಿಕದಿಂದ ಚುರುಕಾಗುವ ನರಗಳಂತೆ, ಚರ್ಮದಲ್ಲಿಯೂ ಒತ್ತಡಗಳಿಗೆ ಸ್ಪಂದಿಸುವ ನರಗಳಿರುತ್ತವೆ. ಇಂತಹುದೇ ನರಗಳು ಬಾತಿನ ಕೊಕ್ಕಿನೊಳಗೂ ಇವೆ ಎಂದು ಇವರು ಗುರುತಿಸಿದ್ದಾರೆ. ಅಷ್ಟೇ ಅಲ್ಲ. ಇವು ಒತ್ತಡದಲ್ಲಿ ಅತ್ಯಲ್ಪ ವ್ಯತ್ಯಾಸವಾದರೂ ಅದಕ್ಕೆ ಪ್ರತಿಕ್ರಯಿಸುತ್ತವೆಯಂತೆ. ಬೇರೆ ಹಕ್ಕಿಗಳಲ್ಲಿಯೂ ಒತ್ತಡಕ್ಕೆ ಸ್ಪಂದಿಸುವ ನರಗಳು ಇವೆಯಾದರೂ ಅವುಗಳಿಗೆ ಈ ಸೂಕ್ಷ್ಮತೆಯಿಲ್ಲ ಎಂದು ಇವರು ಗುರುತಿಸಿದ್ದಾರೆ. ಜೊತೆಗೆ ಇವು ಬಲು ದೀರ್ಘಕಾಲ ಸ್ಪಂದಿಸಬಲ್ಲುವು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇವರು ಈ ನರಗಳಲ್ಲಿ ಇರುವ ವಿಶೇಷ ರಿಸೆಪ್ಟಾರುಗಳನ್ನು ಗುರುತಿಸಿದ್ದಾರೆ. ಪೀಜೋ2 ಎನ್ನುವ ಇವು ಒಂದು ಬಗೆಯ ರಾಸಾಯನಿಕಗಳು. ಒತ್ತಡದಲ್ಲಿ ಇವು ಪ್ರತಿಕ್ರಯಿಸಿ ನರಕೋಶಗಳು ವಿದ್ಯುತ್ತು ಉತ್ಪಾದಿಸುವಂತೆ ಮಾಡುತ್ತವೆ. ಪೀಜೋ2 ರಿಸೆಪ್ಟಾರುಗಳನ್ನು ತೆಗೆದು ಹಾಕಿಬಿಟ್ಟರೆ ಅಂತಹ ನರಕೋಶಗಳನ್ನು ಪ್ರತಿಕ್ರಯಿಸುವಂತೆ ಮಾಡಲು  ಹೆಚ್ಚೆಚ್ಚು ಒತ್ತಡ ಬೇಕಾಗುತ್ತದೆಯಂತೆ. ಅರ್ಥಾತ್, ಈ ಒಂದು ರಿಸೆಪ್ಟಾರಿನ ದೆಸೆಯಿಂದ ಬಾತು, ಹಂಸಗಳು ಕೆಸರನ್ನೂ ಸೋಸಿ ಆಹಾರ ಹುಡುಕಿಕೊಳ್ಳಬಲ್ಲವು ಎನ್ನುವುದು ಇವರ ತೀರ್ಮಾನ.

ಈ ಶೋಧದ ವಿವರಗಳನ್ನು ಪಿಎನ್ಎಎಸ್ ಪತ್ರಿಕೆ ಪ್ರಕಟಿಸಿದೆ.

ಆಕರ: Eve R. Schneider Molecular basis of tactile specialization in the duck bill PNAS, | vol. 114 | no. 49| Pp 13036–13041 | December 5, 2017  ಲಿಂಕ್: www.pnas.org/cgi/doi/10.1073/pnas.1708793114


4. ರೋಗಪತ್ತೆಗೊಂದು ಕಾಗದದ ಕಟ್ಟು

 ಹೌದು. ಒಂದಿಷ್ಟು ಕಾಗದದ ಚೂರುಗಳು. ಅಂಟು, ರೋಗಪತ್ತೆಗೆ ಬಳಸುವ ಕೆಲವು ರಾಸಾಯನಿಕಗಳು ಮತ್ತು ಅಂಗಡಿಗಳಲ್ಲಿ ಬಳಸುವ ಬಾರ್ ಕೋಡ್ ಓದುವ ಸಾಧನವಿದ್ದರೆ ಹತ್ತೇ ಸೆಕೆಂಡಿನಲ್ಲಿ ಎಚ್.ಐ.ವಿ. ಸೋಂಕು ಇದೆಯೋ ಇಲ್ಲವೋ ಎಂದು ಪತ್ತೆ ಮಾಡಬಹುದಂತೆ. ಹೀಗೊಂದು ಸುದ್ದಿಯನ್ನು ನೀಡಿದೆ ಸೈನ್ಸ್ ಅಡ್ವಾನ್ಸಸ್ ಪತ್ರಿಕೆ. ತೆಳುವಾದ ದ್ರವ ಹೀರುವ ಕಾಗದವನ್ನೇ ಕಟ್ಟು ಕಟ್ಟಿ ಹೀಗೊಂದು ಸಾಧನವನ್ನು ತಯಾರಿಸಬಹುದಂತೆ. ಈ ಮ್ಯಾಜಿಕ್ ಮಾಡಿದವರು ಚೀನಾದ ಬೈಜಿಂಗ್ ಇಂಜಿನೀಯರಿಂಗ್ ರೀಸರ್ಚ್ ಸೆಂಟರಿನ ವಿಜ್ಞಾನಿ ವೀ ಚಾಂಗ್.

ರೋಗಗಳು ಒಂದೊಂದಕ್ಕೂ ಒಂದೊಂದು ವಿಶಿಷ್ಟ ಲಕ್ಷಣವಿದ್ದಲ್ಲಿ ರೋಗಪತ್ತೆ ಸುಲಭ. ಆದರೆ ಮಾರಕವೆನ್ನಿಸಿದ ಡೆಂಗೀ, ಎಚ್ ಐ ವಿ, ಎಚ್1ಎನ್1, ಮಿದುಳುಜ್ವರ ಇವುಗಳೆಲ್ಲದರ ಲಕ್ಷಣಗಳೂ ಸಾಮಾನ್ಯ ನೆಗಡಿಯಂತೆಯೇ ಕಾಣುವುದು ಒಂದು ಸಮಸ್ಯೆ. ಹೀಗಾಗಿ ರೋಗಪತ್ತೆಗೆ ಬೇರೆಯದೇ ಉಪಾಯ ಬೇಕು.  ದೇಹದಲ್ಲಿರುವ  ರೋಗಾಣುಗಳನ್ನೋ, ಅವುಗಳ ಅವಶೇಷಗಳನ್ನೋ, ಅಥವಾ ಅವು ಸ್ರವಿಸಿದ ವಿಷಗಳನ್ನೋ ಹುಡುಕಿಯೂ ರೋಗಪತ್ತೆ ಮಾಡಬಹುದು. ಆದರೆ ಇವೆಲ್ಲವೂ ಮಣಗಟ್ಟಲೆ ಇರುವುದಿಲ್ಲ ಎನ್ನುವುದೇ ಸಮಸ್ಯೆ. ಬಣವೆಯಲ್ಲಿ ಸೂಜಿಯನ್ನು ಹುಡುಕಿದಂತೆ ಇವನ್ನು ಹುಡುಕಬೇಕಾಗುತ್ತದೆ. ಜೊತೆಗೆ ಒಂದೇ ಮಂತ್ರದಿಂದ ಎಲ್ಲ ರೋಗಗಳ ಪತ್ತೆಯೂ ಸಾಧ್ಯವಿಲ್ಲ. ಮತ್ತೂ ಒಂದು ಸಮಸ್ಯೆ ಎಂದರೆ ಕೆಲವು ರೋಗಾಣುಗಳ ಇರವನ್ನು ತಿಳಿಯಲು ಅವನ್ನು ವಿಶೇಷ ಪರಿಸರದಲ್ಲಿ ಬೆಳೆಸಬೇಕು. ಇದಕ್ಕೆ ಹಲವು ದಿನಗಳೇ ಹಿಡಿಯಬಹುದು. ಹತ್ತೇ ಸೆಕೆಂಡಿನಲ್ಲಿ, ಒಂದಲ್ಲ ಹತ್ತಾರು ರೋಗಗಳ ರೋಗಾಣುಗಳನ್ನು ಅಥವಾ ಹತ್ತಾರು ರಾಸಾಯನಿಕಗಳ ಇರವನ್ನು ಪತ್ತೆ ಮಾಡುವುದಿದ್ದರೆ ಎಷ್ಟು ಚೆನ್ನ ಅಲ್ಲವೇ? ಚಾಂಗ್ ರೂಪಿಸಿರುವ ಕಾಗದದ ಕಟ್ಟು ಇದನ್ನು ಮಾಡುತ್ತದಂತೆ.  

barcodesensor

ಇದನ್ನು ಇವರು ಸಾಧಿಸಿರುವುದು ಹೀಗೆ. ಎರಡು ಬಣ್ಣದ ಕಾಗದದ ಪಟ್ಟಿಗಳನ್ನು ತೆಗೆದುಕೊಂಡು ಒಂದರ ಪಕ್ಕ ಒಂದನ್ನು ಇಟ್ಟು ಗೋಂದಿನಿಂದ ಅಂಟಿಸಿದ್ದಾರೆ. ಹೀಗೆ ಅಂಟಿಸುವಾಗ ಎರಡು ಬಣ್ಣದ ಕಾಗದವನ್ನು ಬಳಸಿದ್ದಾರೆ. ಜೊತೆಗೆ ಕೆಲವು ಕಡೆ ಒಂದು ಹಾಳೆಯ ಬದಲಿಗೆ ಅದೇ ಬಣ್ಣದ ಎರಡೋ ಮೂರೋ ಹಾಳೆಗಳನ್ನು ಕೂಡಿಸಿದ್ದಾರೆ. ಹೀಗೆ ಮಾಡಿದಾಗ ಪ್ಯಾಕೆಟ್ಟುಗಳ ಮೇಲೆ ಇರುವ ಬಾರ್ ಕೋಡಿನಂತೆ ಕಾಣುವ ಪೇಪರಿನ ಕಟ್ಟು ತಯಾರಾಯಿತು. ಬಾರ್ ಕೋಡಿನಲ್ಲಿ ದಪ್ಪ ಹಾಗೂ ತೆಳು ಗೆರೆಗಳನ್ನು ಬಳಸುವ ನಿಯಮವನ್ನೇ ಇಲ್ಲಿಯೂ ಬಳಸಿರುವುದರಿಂದ ಇದು ಒಂದು ಬಾರ್ ಕೋಡಿನಂತೆಯೇ ವರ್ತಿಸುತ್ತದೆ. ಮರವನ್ನು ಉಜ್ಜುಗೊರಡದಿಂದ ಉಜ್ಜಿ ತೆಳುವಾಗಿ ಪಕಳೆಗಳನ್ನು ತೆಗೆಯುವಂತೆ,  ಕಾಗದದ ಕಟ್ಟನ್ನು ಹರಿತವಾದ ಚಾಕುವಿನಿಂದ ಹೆರೆದು ತೆಳುವಾದ ಬಿಳಿ, ಕೆಂಪು ಬಣ್ಣದ ಗೆರೆಗಳಿರುವ ತೆಳು ಪೊರೆಯಾಗಿ ಹರಿಯಬಹುದು. ಇಂತಹ ಕಟ್ಟನ್ನು ತಯಾರಿಸುವಾಗ ಕೆಲವೆಡೆ ವಿಶಿಷ್ಟ ರಾಸಾಯನಿಕಗಳನ್ನಷ್ಟೆ ಗುರುತಿಸುವ ದ್ರಾವಣದೊಳಗೆ ಅದ್ದಿದ ಬಿಳಿ ಕಾಗದವನ್ನು ಬಳಸಿದ್ದಾರೆ. ಅನಂತರ ಕಾಗದದ ಕಟ್ಟನ್ನು ಆ ರಾಸಾಯನಿಕವಿರುವ ತಟ್ಟೆಯೊಳಗೆ ಅದ್ದಿದ್ದಾರೆ. ಈ ರಾಸಾಯನಿಕವನ್ನು ಹೀರಿಕೊಂಡ ಬಿಳಿ ಹಾಳೆಗಳು ಕೆಂಪಾಗುತ್ತವೆ.

ಅಂದರೆ ಇಷ್ಟೆ. ಒಂದೇ ಕಾಗದದ ಕಟ್ಟನ್ನು ಎರಡು ಭಾಗ ಮಾಡಿ, ಒಂದನ್ನು ರಾಸಾಯನಿಕದಲ್ಲಿ ಅದ್ದುವುದು. ಮತ್ತೊಂದನ್ನು ಹಾಗೆಯೇ ಹೋಲಿಕೆಗೆ ಇಡುವುದು. ಅನಂತರ ಈ ಕಾಗದದ ಕಟ್ಟುಗಳ ಬದಿಗಳನ್ನು ಅಂಗಡಿಗಳಲ್ಲಿ ಬಳಸುವ ಸಾಮಾನ್ಯ ಬಾರ್ ಕೋಡ್ ಸ್ಕ್ಯಾನರ್ ಯಂತ್ರ ಬಳಸಿ ಓದುವುದು. ಎರಡೂ ಹಾಳೆಗಳನ್ನು ಹೋಲಿಸಿದಾಗ ಎಲ್ಲೆಲ್ಲಿ ರಾಸಾಯನಿಕ ಕ್ರಿಯೆ ನಡೆದಿದೆ ಎನ್ನುವುದನ್ನು ಪತ್ತೆ ಮಾಡಬಹುದು. ಬಾರ್ ಕೋಡಿನ ವಿವಿಧ ಗೆರೆಗಳಲ್ಲಿ ವಿವಿಧ ರಾಸಾಯನಿಕಗಳನ್ನು ಹಾಕಿದಾಗ ಒಮ್ಮೆಲೇ ಹತ್ತಾರು ರಾಸಾಯನಿಕಗಳ ಇರವನ್ನು ಪತ್ತೆ ಮಾಡಬಹುದು.

ಈ ಐಡಿಯಾ ಬಳಸಿ ಎಚ್.ಐ.ವಿ., ಹೆಪಟೈಟಿಸ್ ಹಾಗೂ ಟ್ರೆಪಾನೋಮಾ ಪ್ಯಾಲಿಡಮ್ ಎನ್ನುವ ಜೀವಿಯ ಸೋಂಕು ಹತ್ತಿದವರ ರಕ್ತವನ್ನು ಪರಿಶೀಲಿಸಿದ್ದಾರೆ. ಇವರಲ್ಲಿ ಈ ಸೋಂಕು ಇರುವುದನ್ನು ಬಾರ್ ಕೋಡು ಪತ್ತೆ ಮಾಡಿದೆ. ಅಷ್ಟೆ ಅಲ್ಲ. ಇದೇ ತಂತ್ರವನ್ನು ಬಳಸಿ ಮಾದಕ ದ್ರವ್ಯಗಳನ್ನು ಬಳಸಿದವರ ರಕ್ತವನ್ನೂ ಆ ವಸ್ತುಗಳ ಇರವಿಗಾಗಿ ಪರಿಶೀಲಿಸಬಹುದು. ಇದಕ್ಕೆ ಈ ಕಾಗದದ ಕಟ್ಟು ಇದ್ದರೆ ಸಾಕು. ಒಂದೇ ಬಾರ್ ಕೋಡಿನಲ್ಲಿ ಹತ್ತಾರು ದ್ರವ್ಯಗಳಲ್ಲಿ ಯಾವುದಿದೆ ಎನ್ನುವುದನ್ನು ಪತ್ತೆ ಮಾಡುವಷ್ಟು ಈ ಬಾರ್ ಕೋಡ್ ವಿಶ್ಲೇಷಕ ಸಮರ್ಥವಾಗಿದೆ ಎನ್ನುತ್ತಾರೆ ಚಾಂಗ್.

ಹೇಗಿದೆ ಬಾರ್ ಕೋಡ್ ಪ್ರಯೋಗಾಲಯ?

ಆಕರ: Mingzhu Yang et al., Skiving stacked sheets of paper into test paper for rapid and multiplexed assay, Yang et al., Sci. Adv. 2017;3: eaao4862 1 December 2017

ಲಿಂಕ್; http://advances.sciencemag.org/content/3/12/eaao4862


ಜಾಣನುಡಿ

ಡಿಸೆಂಬರ್  10, 1684. ಈ ಜಗತ್ತಿನ ರಹಸ್ಯಗಳಲ್ಲಿ ಅತಿ ಪ್ರಮುಖವಾದದ್ದು ಬಯಲಾದ ದಿನ. ಈ ದಿನದಂದು  ಬ್ರಿಟನ್ನಿನ ರಾಯಲ್ ಸೊಸೈಟಿಯ ಅಧ್ಯಕ್ಷನಾಗಿದ್ದ  ಎಡ್ಮಂಡ್ ಹೇಲೀ ಸೊಸೈಟಿಯ ಸಭೆಯಲ್ಲಿ ಪ್ರಮುಖವಾದೊಂದು ಲೇಖನವನ್ನು ಓದಿ ಹೇಳಿದ. ಈ ಲೇಖನವನ್ನು ಬರೆದಿದ್ದು ಐಸಾಕ್ ನ್ಯೂಟನ್. ಲೇಖನದಲ್ಲಿ ಗುರುತ್ವಾಕರ್ಷಣೆಯ ನಿಯಮಗಳನ್ನು ಬಳಸಿ ಆ ಹಿಂದೆ ಯೋಹಾನ್ ಕೆಪ್ಲರ್ ಪ್ರತಿಪಾದಿಸಿದ್ದ ಸೂರ್ಯ ಹಾಗೂ ಗ್ರಹಗಳ ಚಲನೆಯ ನಿಯಮಗಳು ಸತ್ಯವೆಂದು ನ್ಯೂಟನ್ ಪ್ರತಿಪಾದಿಸಿದ್ದ. ಇದು ವಿಶ್ವವನ್ನು ನೋಡುವ ಜಗತ್ತಿನ ದೃಷ್ಟಿಯನ್ನೇ ಬದಲಿಸಿತು. ಅಷ್ಟೇ ಅಲ್ಲ. ಭೌತವಿಜ್ಞಾನದ ದಿಸೆಯನ್ನೇ ಪಲ್ಲಟಿಸಿತು.

isaacnewton

ಐಸಾಕ್ ನ್ಯೂಟನ್

ಐಸಾಕ್ ನ್ಯೂಟನ್

ಡಿಸೆಂಬರ್ 10 ವಿಜ್ಞಾನ ಜಗತ್ತಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಮತ್ತೊಬ್ಬ ವಿಜ್ಞಾನಿ ಮರಣಿಸಿದ ದಿನ. ವಿಜ್ಞಾನ ಜಗತ್ತಿನ ಮೇರು ಪ್ರಶಸ್ತಿ ಎಂದು ಹೆಸರಾದ ನೋಬೆಲ್ ಪ್ರಶಸ್ತಿಯ ಸ್ಥಾಪಕ, ಡೈನಾಮೈಟ್ ಸ್ಫೋಟಕವನ್ನು ಆವಿಷ್ಕರಿಸಿದ ಆಲ್ಫ್ರೆಡ್ ನೋಬೆಲ ಕೊನೆಯುಸಿರೆಳೆದಿದ್ದು 1896ನೇ ಇಸವಿ ಡಿಸೆಂಬರ್ ಹತ್ತರಂದೇ.

—-

ರಚನೆ ಮತ್ತು ಪ್ರಸ್ತುತಿ: ಕೊಳ್ಳೇಗಾಲ ಶರ್ಮ. ಜಾಣಸುದ್ದಿ ಕುರಿತ ಸಂದೇಹ, ಸಲಹೆಗಳಿಗೆ ನೇರವಾಗಿ 9886640328 ಈ ನಂಬರಿಗೆ ವಾಟ್ಸಪ್ಪು ಮಾಡಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
G,W.Carlo
G,W.Carlo
6 years ago

ಚೆನ್ನಾಗಿದೆ. 

1
0
Would love your thoughts, please comment.x
()
x