ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com
ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)
ಇಂದಿನ ಸಂಚಿಕೆಯಲ್ಲಿ
- ತರಕಾರಿ ತೊಳೆಯುವುದು ಹೇಗೆ?
- ಬಾಲಂಗೋಚಿ
- ಅಂತರಿಕ್ಷದಲ್ಲಿ ಬಿಸಿಯೇರುವ ಮಾನವ
- ಫೋನಿನ ಗಾಜನ್ನು ನಿಚ್ಚಳವಾಗಿಸುವುದು ಹೇಗೆ?
1. ತರಕಾರಿ ತೊಳೆಯುವುದು ಹೇಗೆ?
ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲು ಪ್ರಯಾಣ ಮಾಡುತ್ತಿದ್ದೆ. ಭಯಂಕರ ಹಸಿವಾಗಿತ್ತು. ರೈಲಿನಲ್ಲಿ ಬಂದ ತಿಂಡಿ ತಿನ್ನೋಣವೆಂದರೆ ಪಕ್ಕದಲ್ಲಿ ಮಡದಿ ಇದ್ದಳು. ಎಣ್ಣೆ, ಚೆನ್ನಾಗಿರುವುದಿಲ್ಲ ಎಂದೆಲ್ಲ ಕೇಳಬೇಕಾಗುತ್ತದೆ ಅಂತ ಸುಮ್ಮನಾದೆ. ಈ ಮಧ್ಯೆ ಹಣ್ಣು ಮಾರುವವ ಬಂದ. ಸೀಡ್ಲೆಸ್ ದ್ರಾಕ್ಷಿ ಕಂಡು ಬಾಯಿ ನೀರೂರಿತು. ತಿನ್ನೋಣ ಅಂತ ಒಂದಿಷ್ಟು ಕೊಂಡೆ. ಆದರೆ ಅದನ್ನು ತಿನ್ನಲೂ ಮಡದಿ ಬಿಡಲೇ ಇಲ್ಲ. “ನೋಡಿ. ದ್ರಾಕ್ಷಿಯ ಮೇಲೆ ಬೆಳ್ಳಗೆ ಏನೇನೋ ಇದೆ. ಏನು ಹಾಳು ರಾಸಾಯನಿಕವೋ ಏನೋ? ಬೆಳ್ಳಗೆ ಹೇಗೆ ಇದೆ ಮೊದಲು ಚೆನ್ನಾಗಿ ತೊಳೆದು ತಿನ್ನಿ.” ಎಂದು ಪ್ಲಾಸ್ಟಿಕ್ ಚೀಲದಲ್ಲಿ ದ್ರಾಕ್ಷಿಯನ್ನೂ, ಒಂದಿಷ್ಟು ನೀರನ್ನೂ ಹಾಕಿ ಚೆನ್ನಾಗಿ ಕುಲುಕಿ ತೊಳೆದಳು. ಅಷ್ಟರಲ್ಲಿ ನನ್ನ ಬಾಯಲ್ಲಿದ್ದ ನೀರೂ ಆರಿತ್ತು ಎನ್ನಿ.
ದ್ರಾಕ್ಷಿಯ ಮೇಲಿದ್ದ ಬೆಳ್ಳಗಿನ ವಸ್ತು ಅದರಲ್ಲಿದ್ದ ಸಕ್ಕರೆ ಎನ್ನುವುದು ಬೇರೆ ವಿಷಯ. ಎಷ್ಟು ತೊಳೆದರೂ ಅದು ಹೋಗುವುದಿಲ್ಲ. ಅಪಾಯವೂ ಅಲ್ಲ. ಅಂತ ಗೊತ್ತಿರುವ ವಿಷಯವನ್ನು ಹೇಳಿದರೂ ಮಡದಿ ಕೇಳಬೇಕಲ್ಲ. ದ್ರಾಕ್ಷಿ ಕೆಡದೆ ಇರಲಿ ಅಂತ ಕೀಟನಾಶಕಗಳನ್ನು ಸಿಂಪಡಿಸಿರುತ್ತಾರಂತೆ ಅಂತ ಹೇಳಿದಳು.
ನಿಜ. ಹಸಿ ಹಣ್ಣು, ತರಕಾರಿ ಪೌಷ್ಟಿಕವೇನೋ ಸರಿ. ಆದರೆ ಅವು ತರುವಷ್ಟು ಅನಾರೋಗ್ಯವನ್ನು ಬೇರೆ ಆಹಾರ ತರಲಾರದು. ಏಕೆಂದರೆ, ಹಸಿ ಹಣ್ಣು ತರಕಾರಿಯಲ್ಲಿ ಇರುವಷ್ಟು ಸೂಕ್ಷ್ಮಜೀವಿಗಳು ಹಾಗೂ ಕೀಟನಾಶಕಗಳು ದವಸ, ಧಾನ್ಯಗಳಲ್ಲಿ ಇರುವುದಿಲ್ಲ. ಹೀಗಾಗಿ ಅವನ್ನು ತೊಳೆದು ತಿನ್ನಬೇಕು ಎನ್ನುವುದು ರೂಢಿ. ಆದರೆ ಹೇಗೆ ತೊಳೆಯುವುದು? ಬರೀ ನೀರಿನಲ್ಲಿ ತೊಳೆದರೆ ಸಾಕೆ? ಅಥವಾ ಸೋಪು ನೀರಿನಲ್ಲೋ? ಇವುಗಳಿಂದ ಕಣ್ಣಿಗೆ ಕಾಣುವ ಕಸ, ಮಣ್ಣು ತೊಳೆಯಬಹುದು. ಆದರೆ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳೂ, ಕೀಟನಾಶಕಗಳ ಶೇಷಾಂಶಗಳೂ ತೊಳೆದಿವೆ ಎನ್ನುವುದಕ್ಕೆ ಏನು ಗ್ಯಾರಂಟಿ? ಯಾವುದರಿಂದ ತೊಳೆದರೆ ಅವುಗಳೂ ಕಳೆದಿವೆ ಎಂದು ಖಾತ್ರಿ?
ಮನೆಯಾಕೆಯ ಈ ಸಂದೇಹಗಳಿಗೆ ಉತ್ತರವನ್ನು ಹುಡುಕಲು ಕೆಮಿಸ್ಟ್ರಿ ರೆಡಿಯಾಗಿದೆ. ನವೆಂಬರ್ ಮೊದಲ ವಾರದಲ್ಲಿ ಜರ್ನಲ್ ಆಫ್ ಅಗ್ರಿಕಲ್ಚರಲ್ ಅಂಡ್ ಫುಡ್ ಕೆಮಿಸ್ಟ್ರಿ ಪತ್ರಿಕೆಯಲ್ಲಿ ಅಡುಗೆ ಮನೆಯಲ್ಲಿರುವ ಸಾಧಾರಣ ರಾಸಾಯನಿಕದಿಂದ ತರಕಾರಿ, ಹಣ್ಣುಗಳನ್ನು ಸ್ವಚ್ಛವಾಗಿ ತೊಳೆಯಬಹುದು ಎಂಬ ಸುದ್ದಿ ಪ್ರಕಟವಾಗಿದೆ. ಅಮೆರಿಕೆಯ ಮಸ್ಯಾಚಸೆಟ್ಸ್ ವಿವಿಯ ವಿಜ್ಞಾನಿ ಲಿಲಿ ಹೇ ಮತ್ತು ಸಂಗಡಿಗರು ಈ ಶೋಧವನ್ನು ಮಾಡಿದ್ದಾರೆ. ಇವರ ಪ್ರಕಾರ ಮನೆಯಲ್ಲಿರುವ ಅಡುಗೆ ಸೋಡಾ ಹಣ್ಣು, ತರಕಾರಿಗಳನ್ನು ಸುರಕ್ಷಿತವಾಗಿಸಬಲ್ಲುದು.
ಅಡುಗೆ ಸೋಡಾ ಎಂದರೆ ಇನ್ನೇನಲ್ಲ. ಅದು ಸೋಡಿಯಂ ಬೈಕಾರ್ಬೊನೇಟು ಎಂಬ ರಾಸಾಯನಿಕ. ನೀರಿನಲ್ಲಿ ಸುಲಭವಾಗಿ ಕರಗುವ ವಸ್ತು. ಇದನ್ನು ನೀರಿನಲ್ಲಿ ಕೂಡಿಸಿ ತಯಾರಿಸಿದ ದ್ರಾವಣವನ್ನು ತರಕಾರಿ, ಹಣ್ಣು ಶುಚಿಗೊಳಿಸಲು ಬಳಸಬಹುದು ಎನ್ನುತ್ತಾರೆ ಲಿಲಿ ಹೇ. ಅಡುಗೆ ಸೋಡಾ ದ್ರಾವಣ ತರಕಾರಿಯನ್ನು ಶುಚಿಗೊಳಿಸಲು ಸದ್ಯಕ್ಕೆ ಬಳಸುತ್ತಿರುವ ಬ್ಲೀಚಿಂಗ್ ಪೌಡರು ಇಲ್ಲವೇ ಕ್ಲೋರಿನು ದ್ರಾವಣಗಳಿಗಿಂತಲೂ ಪರಿಣಾಮಕಾರಿ ಎನ್ನುವುದು ಇವರ ಶೋಧ. ಕ್ಲೋರಿನು ಇಲ್ಲವೇ ಬ್ಲೀಚಿಂಗ್ ಪೌಡರಿನ ದ್ರಾವಣಗಳನ್ನು ಆಕ್ಸಿಡೀಕರಿಸುವ ದ್ರಾವಣಗಳೆನ್ನುತ್ತಾರೆ. ಇವು ಕೀಟನಾಶಕಗಳಂತಹ ರಾಸಾಯನಿಕಗಳ ಜೊತೆ ಪ್ರತಿಕ್ರಯಿಸಿ ಅವನ್ನು ಸರಳ ರಾಸಾಯನಿಕಗಳನ್ನಾಗಿ ಬದಲಾಯಿಸುತ್ತವೆ. ಅನಂತರ ಸುಲಭವಾಗಿ ಅವನ್ನು ತೊಳೆಯಬಹುದು. ಇದೇ ಕೆಲಸವನ್ನು ಅಡುಗೆ ಸೋಡಾ ಇನ್ನೂ ಪರಿಣಾಮಕಾರಿಯಾಗಿ ಮಾಡುತ್ತದಂತೆ.
ಇದನ್ನು ಲಿಲಿ ಹೇ ಸುಮ್ಮನೆ ಹೇಳಲಿಲ್ಲ. ಒಂದಿಷ್ಟು ಸೇಬಿನ ಮೇಲೆ ಸಾಮಾನ್ಯವಾಗಿ ಬಳಸುವ ಮೂರು ಬಗೆಯ ಕೀಟನಾಶಕಗಳನ್ನು ಸಿಂಪರಿಸಿ, ಕೆಲವು ಗಂಟೆಗಳ ನಂತರ ಹಾಗೂ ಒಂದು ದಿನದ ನಂತರ ಅವನ್ನು ತೊಳೆದು ಪರೀಕ್ಷಿಸಿದ್ದಾರೆ. ಕೀಟನಾಶಕಗಳ ಉಳಿಕೆ ಇದೆಯೋ ಇಲ್ಲವೋ ಎನ್ನುವುದನ್ನು ಅತಿ ಸೂಕ್ಷ್ಮ ಪ್ರಮಾಣದಲ್ಲಿ ರಾಸಾಯನಕಗಳನ್ನು ಗುರುತಿಸುವ ಕ್ರೊಮಾಟೊಗ್ರಫಿ ತಂತ್ರವನ್ನು ಬಳಸಿ ಪರೀಕ್ಷಿಸಿದ್ದಾರೆ. ಒಂದೆಡೆ ಕ್ಲೋರಾಕ್ಸ್ ದ್ರಾವಣವನ್ನೂ ಮತ್ತೊಂದೆಡೆ ಅಡುಗೆ ಸೋಡಾವನ್ನು ಬಳಸಿದ್ದಾರೆ. ಅಡುಗೆ ಸೋಡಾ ದ್ರಾವಣದಲ್ಲಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಸೇಬನ್ನು ಇಟ್ಟು, ಅನಂತರ ನೀರಿನಲ್ಲಿ ತೊಳೆದಾಗ ಅದರ ಮೇಲಿದ್ದ ಕೀಟನಾಶಕಗಳು ಶೇಕಡ 80 ರಿಂದ 98 ರಷ್ಟು ತೊಳೆದು ಹೋದುವಂತೆ. ಆದರೆ ಕ್ಲೋರಾಕ್ಸ್ ಇಲ್ಲವೇ ನೀರು ಇಷ್ಟು ಪರಿಣಾಮಕಾರಿಯಾಗಿರಲಿಲ್ಲ. ಒಂದು ಲೀಟರು ನೀರಿನಲ್ಲಿ ಹತ್ತು ಗ್ರಾಂ ಅಡುಗೆ ಸೋಡ ಕರಗಿಸಿ ಬಳಸಿದರೆ ಸಾಕು ಎನ್ನುತ್ತಾರೆ ಲೇ.
ಹಾಗಿದ್ದೂ ಒಂದು ಎಚ್ಚರಿಕೆಯ ಮಾತು. ಹಳೆಯ ತರಕಾರಿಗಳನ್ನು ಅಂದರೆ ಕೀಟನಾಶಕ ಸಿಂಪಡಿಸಿ ದಿನಗಳಾದ ಮೇಲೆ ಬಳಸುವ ತರಕಾರಿಗಳನ್ನು ಹೀಗೆ ಶುಚಿಗೊಳಿಸಲಾಗದು. ಏಕೆಂದರೆ ಹೆಚ್ಚು ಕಾಲ ಕಾದಿಟ್ಟಷ್ಟೂ ಮೇಲಿರುವ ಕೀಟನಾಶಕಗಳು ತರಕಾರಿ-ಹಣ್ಣುಗಳ ಒಳಗೆ ಕೂಡಿಕೊಂಡು ಬಿಡುತ್ತವೆ. ಆಗ ಏನು ತೊಳೆದರೂ ಏನೂ ಪ್ರಯೋಜನವಿಲ್ಲ ಎನ್ನುತ್ತಾರೆ ಲೇ. ಸೇಬಿನಂತಹ ಹಣ್ಣುಗಳ ಸಿಪ್ಪೆಯನ್ನು ಸುಲಿದರೆ ಇವನ್ನೂ ಕಳೆಯಬಹುದಂತೆ.
ಅದೆಲ್ಲ ಸರಿ. ಸಿಪ್ಪೆ ಸುಲಿಯಲಾಗದ, ಹೆರೆಯಲಾಗದ ಟೊಮ್ಯಾಟೊ, ಕಾಲಿಫ್ಲವರು, ಬದನೆಕಾಯಿಯಂತಹ ತರಕಾರಿಗಳ ಗತಿ. ಆದಷ್ಟೂ ತಾಜಾ ತರಕಾರಿಯನ್ನು, ತೊಳೆದು ಬಳಸುವುದೇ ಉತ್ತಮ. ಇಲ್ಲದಿದ್ದರೆ ಇದ್ದೇ ಇದೆ ಆರ್ಗಾನಿಕ್ ತರಕಾರಿ. ಏನಂತೀರಿ?
ಆಕರ:
Tianxi Yang et al., Effectiveness of Commercial and Homemade Washing Agents in Removing Pesticide Residues on and in Apples, J. Agric. Food Chem. 2017, 65, 9744-9752
Link: http://pubs.acs.org/action/showCitFormats?doi=10.1021/acs.jafc.7b03118
2. ಬಾಲಂಗೋಚಿ
ಇಂಗ್ಲೀಷಿನಲ್ಲಿ ಒಂದು ಗಾದೆ ಇದೆ. ಬಾಲವೇ ಕುಣಿಸುವಂತಾದರೆ ಹೇಗೆ ಎಂದು. ಅಂದರೆ ಬಾಲವೇ ದೇಹವನ್ನು ನಿಯಂತ್ರಿಸುವಂತಾದರೆ ಎಂದು ಅರ್ಥ. ಹಲ್ಲಿಗಳ ವಿಷಯದಲ್ಲಂತೂ ಈ ಗಾದೆ ಸತ್ಯವಂತೆ. ಹಾಗೆಂದು ಅಮೆರಿಕೆಯ ಚಾಪ್ಮನ್ ವಿಶ್ವವಿದ್ಯಾನಿಲಯದ ಕೆವಿನ್ ಜಗನಂದನ್ ಕಂಡುಕೊಂಡಿದ್ದಾರೆ. ಬಾಲವಿಲ್ಲದಿದ್ದಾಗ ಹಲ್ಲಿಗಳ ನಡೆಯೇ ಸಂಪೂರ್ಣ ಬದಲಾಗುತ್ತದೆಯಂತೆ. ಹಲ್ಲಿಗಳ ಚಲನೆಗೆ ಬಾಲ ಬಲು ಮುಖ್ಯ ಎನ್ನುತ್ತಾರೆ ಜಗನಂದನ್. ಈ ಶೋಧವನ್ನು ನೇಚರ್ ಸೈಂಟಿಫಿಕ್ ರಿಪೋರ್ಟ್ಸ್ ಕಳೆದ ತಿಂಗಳು ಪ್ರಕಟಿಸಿದೆ.
‘ಅಯ್ಯೋ ನೀನು ಯಾಕೋ ಬಾಲ’ ಎಂದು ಕರೆಯದೆ ಜೊತೆಗೆ ಬರುವವನನ್ನು ಹೀಯಾಳಿಸುವುದನ್ನು ಕೇಳಿದ್ದೀರಿ. ಬಾಲ ಎಂದರೆ ಅದು ಅಂತಹ ಮುಖ್ಯವಾದ ಅಂಗವೇನಲ್ಲ ಎನ್ನುವ ಅಭಿಪ್ರಾಯವಿದೆ. ‘ಬಾಲ ಕತ್ತರಿಸಿ ಬಿಡುತ್ತೀನಿ ನೋಡು’ ಎನ್ನುವ ಬೆದರಿಕೆಯಲ್ಲಿ ಇದು ವೇದ್ಯ. ಹಾಗಿದ್ದರೆ ಇಷ್ಟೊಂದು ಪ್ರಾಣಿಗಳಿಗೆ ಬಾಲಗಳಿವೆಯಲ್ಲ? ಏಕಿವೆ? ಉಪಯೋಗವಿಲ್ಲ ಎಂದರೆ ಅದನ್ನು ಹೊತ್ತು ನಡೆಯುವ ಕಷ್ಟವಾದರೂ ಏಕೆ? ಇದು ಜೀವಿವಿಜ್ಞಾನಿಗಳ ಪ್ರಶ್ನೆ. ಇದಕ್ಕೆ ಹಲವು ಉತ್ತರಗಳನ್ನೂ ಅವರೇ ಕೊಟ್ಟಿಕೊಂಡಿದ್ದಾರೆ. ಬಹುಶಃ ಬಾಲ ನಡೆದಾಡುವಾಗ ದೇಹ ಬೀಳದಂತೆ ಕಾಯುವ ಅಂಗವಿರಬೇಕು ಎನ್ನುವುದು ಒಂದು ಊಹೆ. ಮರದ ಮೇಲೆ ಹಾರಾಡುವ ಮಂಗಗಳ ವಿಷಯದಲ್ಲಿ ಇದು ಸತ್ಯ. ಕೆಲವು ಮಂಗಗಳಂತೂ ಬಾಲವನ್ನೇ ಕೈಯನ್ನಾಗಿ ಬಳಸುವುದನ್ನೂ ಕಾಣಬಹುದು. ನಾಯಿಗಳಲ್ಲಿ ಬಾಲ ಭಾವಸೂಚಕ. ಖುಷಿಯಾದಾಗ ಅಲುಗಾಡುವುದೂ, ಬೆದರಿದಾಗ ಕುಂಡಿಯಡಿ ಸೇರುವುದೂ ಅದಕ್ಕೇ. ಇನ್ನು ಜಿಂಕೆಗಳಲ್ಲಿ ಇದು ಎಚ್ಚರಿಕೆಯ ಸಂಕೇತ. ವೈರಿಗಳು ಎದುರಾದಾಗ ಜಿಂಕೆಗಳ ಬಾಲ ಬಾವುಟದಂತೆ ನಿಲ್ಲುತ್ತದೆ. ಆನೆ, ಆಕಳಿನಲ್ಲಿ ನೊಣ ಹೊಡೆಯಲು ಉಪಯುಕ್ತ.
ಹಲ್ಲಿಗಳ ಬಾಲದ ಪುರಾಣವೇ ಬೇರೆ. ಇವು ಬೆದರಿದಾಗ ತಮ್ಮ ಬಾಲವನ್ನೇ ಬಿಸಾಡಿ ಬಿಡುತ್ತವೆ. ವೈರಿ ಬಿಸಾಡಿದ ಬಾಲವನ್ನು ನೋಡಿ ಬೆರಗಾದ ಕ್ಷಣದಲ್ಲಿ ತಾವು ತಪ್ಪಿಸಿಕೊಂಡು ಬಿಡುತ್ತವೆ. ಹಲ್ಲಿಗಳ ಬಾಲಕ್ಕೆ ಇದಷ್ಟೆ ಕೆಲಸ ಎಂದು ಊಹಿಸಲಾಗಿತ್ತು. ಆದರೂ ಯಾವಾಗಲೋ ಘಟಿಸುವ ಘಟನೆಗಾಗಿ ಇಷ್ಟು ಭಾರದ ಅಸ್ತ್ರವನ್ನು ಹೊತ್ತೊಯ್ಯುವುದು ಯಾಕೋ ಎನ್ನುವ ಸಂದೇಹವೂ ಇತ್ತು. ಏಕೆಂದರೆ ಕೆಲವು ಹಲ್ಲಿಗಳ ಬಾಲದ ತೂಕ ಹೆಚ್ಚೂ ಕಡಿಮೆ ಅವುಗಳ ದೇಹದ ಅರ್ಧದಷ್ಟಿರಬಹುದಂತೆ.
ಜಗನಂದನ್ ಅಂತಹುದೊಂದು ಹಲ್ಲಿಯ ಅಧ್ಯಯನ ಮಾಡಿದ್ದಾರೆ. ಯೂಬ್ಲಿಫೇರಿಸ್ ಮ್ಯಾಕ್ಯುಲೇರಿಯಸ್ ಎನ್ನುವ ಈ ಜಾತಿಯ ಹಲ್ಲಿಗಳಲ್ಲಿ ಕೆಲವದರ ಹಲ್ಲಿಗಳ ಬಾಲವನ್ನು ಅಲ್ಲಾಡದಂತೆ ಹೆಡೆಮುರಿ ಕಟ್ಟಿದ್ದಾರೆ. ಇನ್ನು ಕೆಲವನ್ನು ಬೆದರಿಸಿ ಬಾಲ ಬಿಸಾಡುವಂತೆ ಮಾಡಿದ್ದಾರೆ. ಮತ್ತು ಕೆಲವನ್ನು ಹಾಗೆ ಬಿಟ್ಟಿದ್ದಾರೆ. ಈ ಮೂರೂ ಬಗೆಯ ಹಲ್ಲಿಗಳನ್ನೂ ಅನಂತರ ಓಡಿಸಿ ಅವುಗಳ ನಡೆಯಾಟ ಹೇಗಿದೆ ಎಂದು ಗಮನಿಸಿದ್ದಾರೆ. ಬಾಲವಿರುವ ಹಲ್ಲಿಯ ನಡೆಗೂ, ಬಾಲಕಟ್ಟಿದ ಹಾಗೂ ಬಾಲವಿಲ್ಲದ ಹಲ್ಲಿಗಳ ನಡೆಗೂ ವ್ಯತ್ಯಾಸವೇನಿರಬಹುದು ಎಂದು ವೀಡಿಯೋ ಚಿತ್ರಿಸಿದ್ದಾರೆ.
ಇವೆಲ್ಲದರ ಫಲ. ಬಾಲ ಆಚೀಚೆ ಬಳುಕುವುದರಿಂದಾಗಿ ಹಲ್ಲಿಯ ಸೊಂಟ, ತನ್ಮೂಲಕ ಹಲ್ಲಿ, ಹೆಚ್ಚೆಚ್ಚು ಮುಂದೆ ಜರುಗಬಹುದು. ಹೀಗೆ ಹಲ್ಲಿಯ ನಡೆಗೆ ಅನುಕೂಲವಾಗುತ್ತದೆ ಎನ್ನುವುದು ಇವರ ತೀರ್ಮಾನ. ಬಾಲ ಕಳೆದುಕೊಂಡ ಹಲ್ಲಿ ತನ್ನ ನಾಲ್ಕೂ ಕಾಲುಗಳನ್ನೂ ಇನ್ನೂ ದೂರಕ್ಕೆ ಚಾಚಿಕೊಳ್ಳಬೇಕಾಗುತ್ತದಂತೆ. ಅಂದರೆ ಒಂದು ರೀತಿ ನೆಲವನ್ನೇ ಕಚ್ಚಿಕೊಂಡು ತೆವಳಿದ ಹಾಗೆ. ಬಾಲವನ್ನು ಕಟ್ಟಿ ಹಾಕಿದ ಹಲ್ಲಿಯೂ ಇದೇ ರೀತಿ ತೆವಳುತ್ತದಂತೆ. ಆದರೆ ಬಾಲವಿರುವ ಹಲ್ಲಿ ಮಾತ್ರ ಬಾಲವನ್ನು ಅಲ್ಲಾಡಿಸಿ, ಕಾಲನ್ನು ನೆಲದಿಂದ ಮೇಲೆತ್ತಿ ಇಟ್ಟು ನಡೆಯುತ್ತದೆ. ಹೀಗೆ ತನ್ನ ಭಾರವನ್ನು ಹೊರಲು ಹಲ್ಲಿಗೆ ಬಾಲ ನೆರವಾಗುತ್ತಿದೆ ಎನ್ನುತ್ತಾರೆ ಜಗನಂದನ್.
ಅಂತೂ ದೇಹವನ್ನೇ ಆಡಿಸುತ್ತದೆ ಬಾಲ.
ಆಕರ: Kevin Jagnandan & Timothy E. Higham, Lateral movements of a massive tail influence gecko locomotion: an integrative study comparing tail restriction and autotomy
Scientific Reports | 7: 10865 | DOI:10.1038/s41598-017-11484-7
ಲಿಂಕ್: https://www.nature.com/articles/s41598-017-11484-7
3. ಅಂತರಿಕ್ಷದಲ್ಲಿ ಬಿಸಿಯೇರಿದ ಮಾನವ
ಇನ್ನೊಂದೆರಡು ವರ್ಷಗಳಲ್ಲಿ ಇಸ್ರೋ ಭಾರತೀಯನೊಬ್ಬನನ್ನು ಅಂತರಿಕ್ಷಕ್ಕೆ ಹಾರಿ ಬಿಡುತ್ತದಂತೆ. ಈ ಮೊದಲು ನಮ್ಮವರೇ ಆದ ರಾಕೇಶ್ ಶರ್ಮ ರಷ್ಯಾದ ರಾಕೆಟ್ಟಿನಲ್ಲಿ ಹಾರಿದ್ದರು. ಈಗ ನಮ್ಮದೇ ರಾಕೆಟ್ಟು, ನಮ್ಮದೇ ಶೋಧ ನೌಕೆ ಹಾಗೂ ನಮ್ಮವರೇ ಆದ ಅಂತರಿಕ್ಷ ಯಾನಿ ಗಗನಕ್ಕೆ ಹಾರಲಿದ್ದಾರೆ.
ಅಂತರಿಕ್ಷ ಯಾನ ಎನ್ನುವುದು ನಿಜಕ್ಕೂ ಒಂದು ಅದ್ಭುತ ಅನುಭವವೇ. ಆದರೆ ಅಲ್ಲಿನ ಬದುಕು ಹೇಗಿರುತ್ತದೆ? ಅಂತರಿಕ್ಷದಲ್ಲಿ ಮೊದಲಿಗೆ ದೇಹಕ್ಕೆ ಭಾರ ಎನ್ನುವುದೇ ಇರುವುದಿಲ್ಲ. ಭೂಮಿಯ ಗುರುತ್ವಾಕರ್ಷಣೆಯಿಂದಾಗಿ ನಮ್ಮ ದೇಹ ಜಗ್ಗುವುದನ್ನೇ ನಾವು ಭಾರ ಎನ್ನುತ್ತೇವೆ. ಈ ಜಗ್ಗಾಟ ಇಲ್ಲದಿರುವ ಪರಿಸ್ಥಿತಿಯನ್ನು ದೇಹ ಹೇಗೆ ನಿಭಾಯಿಸಬಹುದು? ಇದಕ್ಕೆ ಉತ್ತರವನ್ನು ಹುಡುಕಲು ನಾವು ಅಂತರಿಕ್ಷಕ್ಕೇ ಹೋಗಬೇಕು. ಅಲ್ಲಿನ ಗುರುತ್ವ ಶಕ್ತಿಯಷ್ಟೆ ಅಲ್ಲ, ಉಷ್ಣತೆಯೂ ಇಳೆಯ ಮೇಲಿರುವಂತೆ ಇರುವುದಿಲ್ಲ. ಅತ್ಯಂತ ಶೀತಲ ವಾತಾವರಣ. ಹೀಗಾಗಿಯೇ ಅಂತರಿಕ್ಷ ಯಾನಿಗಳಿಗೆ ಭಾರಿಯಾದ ದಿರಿಸನ್ನು ತೊಡಬೇಕಾಗುತ್ತದೆ. ನೌಕೆಯಲ್ಲಿ ಭೂಮಿಯಲ್ಲಿರುವಂತೆಯೇ ಹಿತವಾದ ಉಷ್ಣತೆಯನ್ನು ಕಾಪಾಡಬೇಕಾಗುತ್ತದೆ.
ಇಷ್ಟೆಲ್ಲ ಎಚ್ಚರ ತೆಗೆದುಕೊಂಡರೂ ಮನುಷ್ಯನ ದೇಹದ ಉಷ್ಣತೆಯಲ್ಲಿ ಬದಲಾವಣೆ ಆಗಬಹುದೇ ಎನ್ನುವ ಪ್ರಶ್ನೆ ಇದ್ದೇ ಇದೆ. ಏಕೆಂದರೆ ಮನುಷ್ಯನೊಬ್ಬ ಬಿಸಿರಕ್ತದ ಪ್ರಾಣಿ. ಅಂದರೆ ಈತನ ದೇಹದ ಉಷ್ಣತೆ ಅತಿ ಹೆಚ್ಚು ಬದಲಾಗುವುದಿಲ್ಲ. ಸಾಮಾನ್ಯವಾಗಿ ಅದು 37 ಡಿಗ್ರಿ ಸೆಂಟಿಗ್ರೇಟಿನಷ್ಟಿರುತ್ತದೆ. ದೇಹವು ಇದನ್ನು ಕರಾರುವಾಕ್ಕಾಗಿ ನಿಯಂತ್ರಿಸುತ್ತದೆ. ಹಾಗೊಂದು ನಿಯಂತ್ರಣ ತಪ್ಪಿ ಉಷ್ಣತೆ ಕಡಿಮೆಯೋ, ಹೆಚ್ಚೋ ಆಯಿತೆಂದರೆ ಆರೋಗ್ಯ ತಪ್ಪಿತೆಂದೇ ಅರ್ಥ. ಅಂತರಿಕ್ಷದಲ್ಲಿ ಈ ನಿಯಂತ್ರಣ ಹೇಗಿರಬಹುದು? ಅದೇನಾದರೂ ತಾಳ ತಪ್ಪುತ್ತದೆಯೋ? ಎಂಬುದನ್ನು ಅಮೆರಿಕೆಯ ನಾಸಾ ಹಾಗೂ ಯುರೋಪಿನ ಅಂತರಿಕ್ಷ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ನಡೆಸಿದರು. ಈ ಸಂಶೋಧನೆಯ ಪ್ರಕಾರ ಅಂತರಿಕ್ಷದಲ್ಲಿ ದೀರ್ಘಕಾಲ ವಾಸವಿದ್ದರೆ ಒಂದು ಡಿಗ್ರೀ ಸೆಂಟಿಗ್ರೇಡಿನಷ್ಟು ಉಷ್ಣತೆ ಹೆಚ್ಚಾಗುತ್ತದೆಯಂತೆ. ಅರ್ಥಾತ್, ಇಲ್ಲಿ ನಾವು ಜ್ವರವಿದೆಯೋ ಇಲ್ಲವೋ ಎನ್ನಲು ಬಳಸುವ ಥರ್ಮಾಮೀಟರಿನಲ್ಲಿರುವ ಕೆಂಪು ಗೆರೆಯ ಸ್ಥಾನ ಅಲ್ಲಿ ಬದಲಾಗಬೇಕಾಗುತ್ತದಂತೆ
ಆರು ಪುರುಷರು ಹಾಗೂ ಐದು ಮಹಿಳಾ ಅಂತರಿಕ್ಷಯಾನಿಗಳು ಈ ಶೋಧದಲ್ಲಿ ಪಾಲ್ಗೊಂಡಿದ್ದರು. ಇವರು ಅಂತರಿಕ್ಷದಲ್ಲಿ ಭೂಮಿಯ ಸುತ್ತಲೂ ಸುತ್ತುತ್ತಲಿರುವ ಸ್ಪೇಸ್ ಸ್ಟೇಷನ್ನಿನಲ್ಲಿ ಆರು ತಿಂಗಳ ಕಾಲ ವಾಸವಿದ್ದಾಗ ಪ್ರತಿ ದಿನವೂ ತಮ್ಮ ದೇಹದ ಉಷ್ಣತೆಯನ್ನು ದಾಖಲಿಸುತ್ತಿದ್ದರು. ವಿರಮಿಸುವಾಗಲೂ, ನಿರ್ದಿಷ್ಟ ವ್ಯಾಯಾಮ ಮಾಡಿದಾಗಲೂ ಉಷ್ಣತೆಯನ್ನು ಗುರುತಿಸಬೇಕಿತ್ತು. ಅಂತರಿಕ್ಷಕ್ಕೆ ಹೋಗುವ ಮೊದಲು ಭೂಮಿಯ ಮೇಲೂ ಇದೇ ಕಸರತ್ತನ್ನು ಮೂರು ತಿಂಗಳ ಕಾಲ ನಡೆಸಿದ್ದರು. ಅದಲ್ಲದೆ ಆಗಾಗ್ಗೆ ಇವರ ರಕ್ತವನ್ನೂ ವಿವಿಧ ರಕ್ತಕೋಶಗಳ ಪ್ರಮಾಣ, ಸಂಖ್ಯೆ ಹಾಗೂ ಇತರೆ ಸೂಚಕಗಳಿಗಾಗಿ ಪರೀಕ್ಷಿಸಿದ್ದರು.
ಇವೆಲ್ಲದರ ಫಲಿತಾಂಶ. ವಿರಮಿಸುವಾಗಲೂ, ವ್ಯಾಯಾಮ ಮಾಡಿದಾಗಲೂ ಅಂತರಿಕ್ಷದಲ್ಲಿದ್ದಾಗ ಯಾನಿಗಳ ದೇಹದ ಉಷ್ಣತೆ 38 ಡಿಗ್ರೀಗಿಂತಲೂ ಹೆಚ್ಚೇ ಇರುತ್ತಿತ್ತು. ಆರಂಭದಲ್ಲಿ ಭೂಮಿಯಲ್ಲಿದ್ದಷ್ಟೇ ಇದ್ದರೂ ಕ್ರಮೇಣ ಇದು ಹೆಚ್ಚಾಯಿತು. ಸಂಪೂರ್ಣ ಹವಾನಿಯಂತ್ರಣವಿದ್ದರೂ ಹೀಗೇಕಾಯಿತೋ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಆದರೆ ರಕ್ತದಲ್ಲಿರುವ ಇಂಟರ್ ಲ್ಯೂಕಿನ್ ಎನ್ನುವ ರಾಸಾಯನಿಕಗಳಲ್ಲಿ ಏರುಪೇರಾಗಿರುವುದು ಕಂಡು ಬಂದಿದೆ. ಇವುಗಳಿಗೂ ದೇಹದ ಮೂಲ ಉಷ್ಣತೆಗೂ ಸಂಬಂಧವಿರಬೇಕು ಎನ್ನುವುದು ವಿಜ್ಞಾನಿಗಳ ಊಹೆ.
ಈ ವಿವರಗಳನ್ನು ಸೈಂಟಿಫೀಕ್ ರಿಪೋರ್ಟ್ಸ್ ಪತ್ರಿಕೆ ನವೆಂಬರ್ ಸಂಚಿಕೆಯಲ್ಲಿ ವರದಿ ಮಾಡಿದೆ.
ಆಕರ:
Alexander C. Stahn et al., Increased core body temperature in astronauts during long-duration space missions, Scientific Reports | 7: 16180 | DOI:10.1038/s41598-017-15560-w
ಲಿಂಕ್: https://www.nature.com/articles/s41598-017-15560-w
4. ಸ್ಮಾರ್ಟ್ ಫೋನಿಗೊಂದು ನಿಚ್ಚಳ ಗಾಜು
ಬಿಸಿಲಿನಲ್ಲಿ ಸ್ಮಾರ್ಟ್ ಫೋನು ಬಳಸಿದ ಅನುಭವ ಇದೆಯೇ? ಎತ್ತ ಬಾಗಿಸಿದರೂ ಏನೂ ಕಾಣುವುದಿಲ್ಲ. ಬ್ಯಾಟರಿ ಪೂರ್ತಿ ಸೋರುವಷ್ಟು ಪ್ರಖರತೆಯನ್ನು ಹೆಚ್ಚಿಸಿದರೂ, ಕನ್ನಡಿಯಂತೆ ಹೊರಗಿನ ದೃಶ್ಯವನ್ನು ಕಾಣಬಹುದೇ ಹೊರತು ಫೋನಿನಲ್ಲೇನಿದೆ ಎನ್ನುವುದು ಕಾಣುವುದೇ ಇಲ್ಲ. ಸಮಸ್ಯೆ ಕೇವಲ ಸ್ಮಾರ್ಟ್ ಫೋನುಗಳಲ್ಲಿಯಷ್ಟೆ ಅಲ್ಲ. ಹೀಗೆ ಗಾಜಿನ ಹೊದಿಕೆ ಬಳಸುವ ಬಹುತೇಕ ಸಾಧನಗಳಲ್ಲಿ ಈ ‘ಗ್ಲೇರ್’ ಅಥವಾ ಅನವಶ್ಯ ಪ್ರತಿಫಲನದ ಸಮಸ್ಯೆ ಇದ್ದೇ ಇದೆ. ಟೀವಿ, ಕಾರಿನ ಗಾಜು, ಕಪ್ಪು ಕನ್ನಡಕ, ಇವೆಲ್ಲದರಲ್ಲೂ ಈ ಸಮಸ್ಯೆ ಇದ್ದೇ ಇದೆ. ಇದನ್ನು ಕಡಿಮೆ ಮಾಡುವುದು ಹೇಗೆ? ನಡು ಮಧ್ಯಾಹ್ನದಲ್ಲಿಯೂ ಸುಸ್ಪಷ್ಟವಾಗಿ ಓದಲು ಕೊಡುವ ಸ್ಮಾಟ್ ಫೋನಿನ ಗಾಜು ದೊರೆತೀತೇ?
ಯಾಕಾಗದು ಎನ್ನುತ್ತಾರೆ ಮಹಾರಾಷ್ಟ್ರದ ಪುಣೆಯಲ್ಲಿರುವ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ ಇಂಜಿನೀಯರಿಂಗ್ ರೀಸರ್ಚ್ ನ ಭೌತವಿಜ್ಞಾನಿ ಅತೀಕುರ್ ರೆಹಮಾನ್. ರೆಹಮಾನ್ ಅವರು ಅಮೆರಿಕೆಯ ಬ್ರೂಕ್ ಹೇವನ್ ಪ್ರಯೋಗಶಾಲೆಯ ಆಂಡ್ರಿಯಾಸ್ ಲಿಯಾಪಿಸ್ ಮತ್ತು ಚಾರ್ಲಸ್ ಟಿ ಬ್ಲಾಕ್ ಜೊತೆಗೂಡಿ ಗಾಜಿನ ಮೇಲೆ ಅಲ್ಯುಮಿನಿಯಂ ಲೋಹವನ್ನು ಲೇಪಿಸುವ ವಿಶಿಷ್ಟ ತಂತ್ರವೊಂದನ್ನು ರೂಪಿಸಿದ್ದಾರೆ. ಇದು ಗಾಜಿನ ಮೇಲೆ ನಿಯತ ಆಕಾರದ ಅತಿ ಸೂಕ್ಷ್ಮ ವಿನ್ಯಾಸದ ಲೇಪನವನ್ನು ಕೊಡುತ್ತದೆ. ಈ ಲೇಪನದಿಂದಾಗಿ ಗಾಜಿನಿಂದ ಪ್ರತಿಫಲಿತಗೊಳ್ಳುವ ಬೆಳಕಿನ ಪ್ರಮಾಣ ಮುಕ್ಕಾಲು ಭಾಗದಷ್ಟು ಕಡಿಮೆಯಾಗುತ್ತದೆಯಂತೆ. ಹೀಗೆಂದು ಇವರು ಅಪ್ಲೈಡ್ ಫಿಸಿಕ್ಸ್ ಲೆಟರ್ಸ್ ಪತ್ರಿಕೆಯಲ್ಲಿ ಇತ್ತೀಚೆಗೆ ವರದಿ ಮಾಡಿದ್ದಾರೆ.
ಗಾಜು ಹೇಳಿ ಕೇಳಿ ಕನ್ನಡಿಯಂತೆ. ಎಷ್ಟೇ ಪಾರದರ್ಶಕವೆನ್ನಿಸಿದರೂ ಒಂದಿಷ್ಟು ಬೆಳಕನ್ನು ಪ್ರತಿಫಲಿಸಿಯೇ ತೀರುತ್ತದೆ. ಇದುವೇ ಗ್ಲೇರ್. ಸಾಮಾನ್ಯವಾಗಿ ಗಾಜು ತನ್ನ ಮೇಲೆ ಬಿದ್ದ ಬೆಳಕಿನ ಶೇಕಡ 8% ಬೆಳಕನ್ನು ಪ್ರತಿಫಲಿಸುತ್ತದಂತೆ. ಅದುವೂ ನೇರವಾಗಿ, ಮುಖದ ಮೇಲೆ ಮುಖವನ್ನಿಟ್ಟು ನೋಡಿದಂತೆ ಇದ್ದಾಗ. ಇನ್ನು ಒಂದಿಷ್ಟು ಆಚೀಚೇ ಹೊರಳಿಸಿದಿರೋ, ಪ್ರತಿಫಲನವೂ ಹೆಚ್ಚಾಗುತ್ತದೆ. ಗ್ಲೇರೂ ಹೆಚ್ಚಾಗುತ್ತದೆ. ಇದೇ ಕಾರಣಕ್ಕೇ ಎಲ್ ಸಿ ಡಿ ಟೀವಿಯಲ್ಲಿ ನೋಟದ ಕೋನ 170 ಡಿಗ್ರೀ ಅಂತ ನಮೂದಿಸಿರುತ್ತಾರೆ. ಅದಕ್ಕಿಂತಲೂ ಆಚೀಚೆ ಹೋದಾಗ ನಿಮಗೆ ಕಾಣುವ ಬೆಳಕಿನ ಸ್ವರೂಪವೇ ಬೇರೆ.
ಈ ಗ್ಲೇರನ್ನು ಕಡಿಮೆ ಮಾಡುವುದೆಂದರೆ ಪ್ರತಿಫಲನಗೊಳ್ಳುವ ಬೆಳಕನ್ನು ಕಡಿಮೆ ಮಾಡಬೇಕು. ಇದಕ್ಕಾಗಿ ಹಲವಾರು ತಂತ್ರಗಳು ಇವೆಯಾದರೂ, ಅವು ಬೆಳಕಿನಲ್ಲಿರುವ ಕೆಲವು ತರಂಗಗಳನ್ನಷ್ಟೆ ತಡೆಯಬಲ್ಲವು. ಬೆಳಕಿನಲ್ಲಿರುವ ಬಹುತೇಕ ತರಂಗಗಳು ಪ್ರತಿಫಲನ ಆಗದಂತೆ ತಡೆಯುವ ಲೇಪಕ್ಕಾಗಿ ಹುಡುಕಾಟ ನಡೆದಿದೆ.
ಇದು ಅಸಾಧ್ಯವೆಂದೇನಲ್ಲ. ಜೀರುಂಡೆಯ ರೆಕ್ಕೆ ಹೀಗೇ. ಸಂಪೂರ್ಣ ಪಾರದರ್ಶಕ. ಅದಕ್ಕೆ ಕಾರಣ ಅದರ ಮೇಲಿರುವ ಸೂಕ್ಷ್ಮ ರಚನೆಗಳು. ಇದನ್ನೇ ಅಣಕಿಸಿ ಗಾಜಿನ ಮೇಲೂ ಸೂಕ್ಷ್ಮ ರಚನೆಗಳನ್ನು ಮಾಡಿದರೆ ಗ್ಲೇರ್ ಕಡಿಮೆ ಮಾಡಬಹುದು ಎನ್ನುವುದು ತರ್ಕ. ಆದರೆ ಜೀರುಂಡೆಯ ರೆಕ್ಕೆಯ ಮೇಲೆ ಸಹಜವಾಗಿ ಹುಟ್ಟುವ ಸೂಕ್ಷ್ಮ ವಿನ್ಯಾಸಗಳನ್ನು ಅಣು ಮಟ್ಟದಲ್ಲಿ ನಾವು ಕೃತಕವಾಗಿ ರಚಿಸುವುದು ಎಂದರೆ ಸುಲಭವಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳು ಸಂಪೂರ್ಣ ಸಫಲವಾಗಿಲ್ಲ.
ನ್ಯಾನೋಮೇಲ್ಮೈ ಗಾಜು ಮತ್ತು ಸಾಧಾರಣ ಗಾಜನ್ನು ಅಕ್ಕಪಕ್ಕದಲ್ಲಿ ಇರಿಸಿದೆ. ನ್ಯಾನೊಮೇಲ್ಮೈನಗಾಜು ಕಾಣುತ್ತಿದೆಯೇ?
ರೆಹಮಾನ್ ತಂಡ ಮಾಡಿದ್ದು ಇದನ್ನೇ. ಇವರು ಅಲ್ಯೂಮಿನಿಯಂನ ಅಣುಗಳನ್ನು ನಿರ್ದಿಷ್ಟ ವಿನ್ಯಾಸದಲ್ಲಿ ಗಾಜಿನ ಮೇಲೆ ಜಾಣತನ ತೋರಿದ್ದಾರೆ. ಇದಕ್ಕೆ ಇವರು ಬಳಸಿದ್ದು ಸ್ವತಃ ದೊಡ್ಡ ಅಣುಗಳಾಗಿ ಬೆಸೆದುಕೊಳ್ಳುವ ಪಾಲಿಸ್ಟಟೈರೀನ್ ಬೀಟ ಪಾಲಿ ಮೇಥೈಲ್ ಮೆಥಾಕ್ರಿಲೇಟ್ ಎನ್ನುವ ರಾಸಾಯನಿಕವನ್ನು ಬಳಸಿದ್ದಾರೆ. ಗಾಜಿನ ಮೇಲೆ ದ್ರಾವಣವನ್ನು ಲೇಪಿಸಿ ಬಿಸಿ ಮಾಡಿದಾಗ ಅದರ ಅಣುಗಳು ನಿರ್ದಿಷ್ಟ ವಿನ್ಯಾಸದಲ್ಲಿ ಬೆಸೆದುಕೊಳ್ಳುತ್ತವೆ. ನಡುವೆ ಇರುವ ಖಾಲಿ ಜಾಗೆಯಲ್ಲಿ ಅಲ್ಯೂಮಿನಿಯಂ ಹಬೆಯನ್ನು ಹಾಯಿಸಿದ್ದಾರೆ. ತದನಂತರ, ಪಾಲಿಮರನ್ನು ತೊಳೆದಿದ್ದಾರೆ. ಅಲ್ಲಿ ಉಳಿದ ಅಲ್ಯೂಮಿನಿಯಂನ ಲೇಪ ಅತಿ ತೆಳುವಾಗಿಯೂ, ನಿಯತವಾದ ವಿನ್ಯಾಸದಿಂದಲೂ ಉಳಿಯುತ್ತದೆ. ಹೀಗೆ ಲೇಪನಗೊಂಡ ಗಾಜು ಕೇವಲ ಶೇ0.2 ರಷ್ಟು ಬೆಳಕನ್ನಷ್ಟೆ ಪ್ರತಿಫಲಿಸುತ್ತದೆ. ಅರ್ಥಾತ್, ಬಲು ನಿಚ್ಚಳವಾಗಿದೆಯಂತೆ. ಎತ್ತ ಬಾಗಿಸಿದರೂ ಗಾಜಿರುವುದೇ ತಿಳಿಯದಷ್ಟು ಪಾರದರ್ಶಕವಾಗಿದೆ ಎಂದು ಇವರು ವರದಿ ಮಾಡಿದ್ದಾರೆ.
ಇನ್ನು ಬಿಸಿಲಿನಲ್ಲಿ ಕಣ್ಣು ಕಿರಿದು ಮಾಡುವ ಅವಶ್ಯಕತೆ ಇರದು ಎಂದಿರಾ? ಕಾದು ನೋಡೋಣ.
ಆಕರ:
Andreas C. Liapis, Atikur Rahman, and Charles T. Black, Self-assembled nanotextures impart broadband transparency to glass windows and solar cell encapsulants
Appl. Phys. Lett. 111, 183901 (2017)
ಲಿಂಕ್”: http://aip.scitation.org/doi/10.1063/1.5000965
ಜಾಣನುಡಿ
ನವೆಂಬರ್ 26, 1801. ಹೊಸದೊಂದು ಧಾತುವಿನ ಪತ್ತೆಯಾದ ದಿನ. ಚಾರ್ಲಸ್ ಹಾಚೆಟ್ ಇಂಗ್ಲೆಂಡಿನ ರಾಯಲ್ ಸೊಸೈಟಿಯಲ್ಲಿ ಹೊಸದೊಂದು “ಮಣ್ಣು” ಪತ್ತೆ ಮಾಡಿದ್ದಾಗಿ ವರದಿ ಮಾಡಿದ. ನ್ಯೂ ಇಂಗ್ಲೆಂಡ್ ಪ್ರಾಂತ್ಯದಲ್ಲಿ ಹೆಕ್ಕಿದ ಕಲ್ಲಿನ ತುಣುಕೊಂದು ವಸ್ತು ಸಂಗ್ರಹಾಲಯದಲ್ಲಿತ್ತು. ಇದನ್ನು ವಿಶ್ಲೇಷಿಸಿದ ಹಾಚೆಟ್ ಆ ಶಿಲೆಯಲ್ಲಿ ಹೊಸದೊಂದು ವಸ್ತುವಿದೆ ಎಂದು ಹೇಳಿ ಅದಕ್ಕೆ ಕೊಲಂಬಿಯಂ ಎಂದು ಹೆಸರಿಟ್ಟ. ಆದರೆ ಅದನ್ನು ಶಿಲೆಯಿಂದ ಬೇರ್ಪಡಿಸಲು ಅವನಿಗೆ ಸಾಧ್ಯವಾಗಲಿಲ್ಲ. 40 ವರ್ಷಗಳ ನಂತರ ಜರ್ಮನಿಯ ರಸಾಯನ ವಿಜ್ಞಾನಿಯೊಬ್ಬ ಅದನ್ನು ಪ್ರತ್ಯೇಕಿಸಿ, ಅದೊಂದು ಹೊಸ ಮೂಲಧಾತು ಎಂದು ನಿರೂಪಿಸಿದ. ಅದುವೇ ನಿಯೋಬಿಯಂ. ಅತಿ ಕಡಿಮೆ ಉಷ್ಣತೆಯಲ್ಲಿಯೂ ಗಟ್ಟಿಯಾಗಿರುವ ಉಕ್ಕನ್ನು ತಯಾರಿಸಲು ನಿಯೋಬಿಯಂ ಕೂಡಿಸುತ್ತಾರೆ. ಗಾಜಿನ ತಯಾರಿಕೆಯಲ್ಲಿಯೂ ಇದರ ಬಳಕೆಯಾಗುತ್ತದೆ. ವಿಮಾನಗಳಲ್ಲಿರುವ ಉಕ್ಕಿನಲ್ಲಿ ವಿಶೇಷವಾಗಿ ಬಳಕೆಯಾಗುತ್ತಿದೆ. ಇಂದು ನಮಗೆ ತಿಳಿದಿರುವ 118 ಮೂಲವಸ್ತುಗಳ ಪಟ್ಟಿಯಲ್ಲಿ 41ನೆಯ ಸ್ಥಾನದಲ್ಲಿ ನಿಯೋಬಿಯಂ ಇದೆ. ಇದೋ ಇಲ್ಲಿದೆ ನಿಯೋಬಿಯಂ ಅಯಸ್ಕಾಂತಗಳ ಚಿತ್ರ.
-ರಚನೆ ಮತ್ತು ಪ್ರಸ್ತುತಿ: ಕೊಳ್ಳೇಗಾಲ ಶರ್ಮ