ಜಾಣಸುದ್ದಿ 21: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com

ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)

ಈ ವಾರದ ಸಂಚಿಕೆಯಲ್ಲಿ:

• ಮಿದುಳಿನ ಸಾವು ಸಾವೇ?
• ಬೆಂಕಿಯ ನುಂಗುವ ತಂತ್ರಜ್ಞಾನ
• ಸಹಕಾರ ಚೆಂದವೋ, ಮೋಸಗಾರಿಕೆ ಅಂದವೋ?
• ಬೀಗಲ್ ಸಾಹಸಯಾನ 33

೧. ಮಿದುಳಿನ ಸಾವು ಸಾವೇ?
ಬೆಂಗಳೂರಿನವರಿಗೆ ಈ ಆಗಾಗ್ಗೆ ಈ ಸುದ್ದಿ ಕೇಳಿ ಅಚ್ಚರಿ ಆಗುತ್ತಿರುತ್ತದೆ. ಅರ್ಧ ಗಂಟೆಯಲ್ಲಿ ವಿಮಾನನಿಲ್ದಾಣಕ್ಕೆ ಆಂಬುಲೆನ್ಸ್ ಪಯಣ ಎಂಬ ಸುದ್ದಿ. ಮನೆಯಿಂದ ಅರ್ಧ ಕಿಲೋಮೀಟರು ದೂರ ಇರುವ ಮಾಲಿಗೆ ಹೋಗಲೇ ಒಂದೊಂದು ಗಂಟೆ ಬೇಕಾಗುವ ಬೆಂಗಳೂರಿನಲ್ಲಿ, ಅರ್ಧ ಗಂಟೆಯಲ್ಲಿ ಮೂವತ್ತು, ನಲವತ್ತು ಕಿಲೋಮೀಟರು ಪ್ರಯಾಣ ಮಾಡುವುದು ಎಂದರೆ ಅದು ಸುದ್ದಿಯೇ. ಇಷ್ಟು ಆತುರದ ಪ್ರಯಾಣಿಕರು ಯಾರೋ ವಿಐಪಿಯೋ, ವಿವಿಐಪಿಯೋ ಎಂದುಕೊಳ್ಳಬೇಡಿ. ಸಾಮಾನ್ಯವಾಗಿ ಅದು ಯಾರಿಗೋ ಕಸಿ ಮಾಡಲು ಬೇಕಾಗಿರುವ ಅಂಗವನ್ನು ಹೊತ್ತೊಯ್ಯುವ ವಾಹನ ಅಷ್ಟೆ. ದೇಹದಿಂದ ಹೊರತೆಗೆದ ಅಂಗವನ್ನು ಕಾಯ್ದುಕೊಳ್ಳುವುದು ಸುಲಭವಲ್ಲ. ಪ್ರತಿಕ್ಷಣವೂ ಬಲು ಮುಖ್ಯವಾಗುತ್ತದೆ. ಹೀಗಾಗಿ ಈ ಗ್ರೀನ್ ಕಾರಿಡಾರ್. ಎಲ್ಲ ಸಂಚಾರವನ್ನೂ ಬದಿಗೊತ್ತಿ, ಕೇವಲ ಆ ಅಂಗ ಹೊತ್ತ ವಾಹನಕ್ಕಷ್ಟೆ ಹಾದಿ ಮಾಡಿಕೊಡುವ ವ್ಯವಸ್ಥೆಯೇ ಗ್ರೀನ್ ಕಾರಿಡಾರ್.

ಇದುವರೆವಿಗೂ ಈ ವ್ಯವಸ್ಥೆಯನ್ನು ಹೃದಯ, ಮೂತ್ರಪಿಂಡಗಳಿಗಷ್ಟೆ ಬಳಸಲಾಗಿದೆ. ಮಿದುಳನ್ನು ಹೀಗೆ ಕಸಿ ಮಾಡುವ ಯೋಚನೆಯೂ ಬಂದಿಲ್ಲ. ಏಕೆಂದರೆ ಈ ಅಂಗಗಳೆಲ್ಲವೂ ಮಿದುಳು ಸತ್ತವರಿಂದಲೇ ಹೆಕ್ಕಿದಂಥವು. ಮಿದುಳಿನ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತವಾಗಿ, ವ್ಯಕ್ತಿ ಜಡವಾಗಿಬಿಟ್ಟ ಮೇಲೆ, ಅರ್ಥಾತ್ ಸಾಮಾನ್ಯ ಭಾಷೆಯಲ್ಲಿ ಕೋಮಾ ಸ್ಥಿತಿಯಲ್ಲಿ ಇರುವ ವ್ಯಕ್ತಿಯಿಂದ ತೆಗೆದ ಅಂಗಗಳನ್ನು ಬೇರೆಯವರಿಗೆ ಕಸಿ ಮಾಡುತ್ತಾರೆ. ಹೃದಯ, ಮೂತ್ರಪಿಂಡ, ಯಕೃತ್ತು ಅಥವಾ ಲೀವರ್, ರಕ್ತನಾಳಗಳು ಹೀಗೆ ಏನನ್ನು ಬೇಕಿದ್ದರೂ ಇಂತಹ ಕೋಮಾ ಸ್ಥಿತಿಯಲ್ಲಿರುವ ವ್ಯಕ್ತಿಗಳಿಂದ ತೆಗೆದು ಬೇರೆಯವರಿಗೆ ಕಸಿ ಮಾಡಬಹುದು. ಆದರೆ ಮಿದುಳನ್ನಲ್ಲ. ಏಕೆಂದರೆ ಮಿದುಳಿಗ ಕೆಲವೇ ಕ್ಷಣ ರಕ್ತ ಇಲ್ಲವೇ ಆಕ್ಸಿಜನ್ ಪೂರೈಕೆ ನಿಂತರೂ ಅದು ಕೋಮಾ ಸ್ಥಿತಿಯನ್ನು ತಲುಪುತ್ತದೆ. ಈ ಸ್ಥಿತಿ ಮರಳಿ ಬರುವಂಥದ್ದಲ್ಲ ಎನ್ನುವುದು ವಿಜ್ಞಾನಿಗಳ ಅನಿಸಿಕೆ. ಈ ಅನಿಸಿಕೆ ತಪ್ಪೇ? ಜಡವಾಗಿಬಿಟ್ಟ ಮಿದುಳನ್ನು ಮತ್ತೆ ಚಾಲಿಸಬಹುದೇ ಎನ್ನುವ ಕೌತುಕಮಯ ಪ್ರಶ್ನೆಯ ಜೊತೆಗೇ ಹಲವು ನೈತಿಕ ಪ್ರಶ್ನೆಗಳನ್ನೂ ಮುಂದಿಟ್ಟಿರುವ ಸಂಶೋಧನೆ ಮೊನ್ನೆ ಪ್ರಕಟವಾಗಿದೆ. ಅಮೆರಿಕೆಯ ಯೇಲ್ ಸ್ಕೂಲ್ ಆಫ್ ಮೆಡಿಸಿನ್ನಿನ ವೈದ್ಯ ನೇನಾಡ್ ಸೆಸ್ಟಾನ್ ಮತ್ತು ಸಂಗಡಿಗರು ಹಂದಿಯ ಮಿದುಳನ್ನು ನಾಲ್ಕೈದು ಗಂಟೆಗಳ ಕಾಲ ಕೃತಕವಾಗಿ ಕಾದಿಟ್ಟರೆಂದು ನೇಚರ್ ಪತ್ರಿಕೆ ವರದಿ ಮಾಡಿದೆ. ದೇಹದಿಂದ ಬೇರ್ಪಟ್ಟ ತಲೆಯಲ್ಲಿ ಇನ್ನೂ ಹಲವು ಜೈವಿಕ ಚಟುವಟಿಕೆಗಳು ನಡೆಯುತ್ತಿದ್ದುವು ಎಂದು ಇವರು ವರದಿ ಮಾಡಿದ್ದಾರೆ.

ದೇಹವಿಲ್ಲದ ತಲೆಯೊಳಗಿನ ಹಂದಿಯ ಮಿದುಳಿನ ಸೂಕ್ಷ್ಮ ರಕ್ತನಾಳಗಳೊಳಗೂ ಬ್ರೈನ್‌ ಎಕ್ಸ್‌ ದ್ರವ ಸರಾಗವಾಗಿ ಹರಿದಾಡುತ್ತಿರುವುದರ ಚಿತ್ರ

ಮಿದುಳು ಇಡೀ ದೇಹವನ್ನು ನಿಯಂತ್ರಿಸುವ ಅಂಗ. ಮಿದುಳಿನಿಂದ ದೇಹದ ಎಲ್ಲ ಅಂಗಗಳಿಗೂ ಸಾಗುವ ನರತಂತುಗಳು, ಅವುಗಳ ಚಟುವಟಿಕೆಯನ್ನು ನಿರ್ದೇಶಿಸುತ್ತದೆ. ತನ್ನಂತಾನೇ ಮಿಡಿಯುವ ಹೃದಯವೂ, ಹೊಟ್ಟೆಯೂ, ಮೂತ್ರಪಿಂಡಗಳೂ ಅದರ ನಿಯಂತ್ರಣದಲ್ಲಿಯೇ ಇರುತ್ತದೆ ಎನ್ನುವುದು ವಿಶೇಷ. ಮಿದುಳು ಸತ್ತ ಕೂಡಲೇ ಉಳಿದ ಅಂಗಗಳ ಚಟುವಟಿಕೆಯೂ ಸ್ಥಗಿತಗೊಳ್ಳಬಹುದು. ಅದಕ್ಕೂ ಮುನ್ನವೇ ಅವನ್ನು ತೆಗೆದು ಬೇರೊಂದು ದೇಹಕ್ಕೆ ಕಸಿ ಮಾಡಿದರೆ ಅವು ಬದುಕಿ ಉಳಿಯುತ್ತವೆ. ಆದರೆ ಈ ಭಾಗ್ಯ ಸ್ವತಃ ಮಿದುಳಿಗೇ ಇಲ್ಲ. ನಮ್ಮ ದೇಹದಲ್ಲಿ ಎಲ್ಲ ಅಂಗಗಳಿಗಿಂತಲೂ ಅತಿ ಹೆಚ್ಚು ಆಕ್ಸಿಜನ್ನು ನುಂಗುವ ಅಂಗವೆಂದರೆ ಅದು ಮಿದುಳು. ನಾಲ್ಕೇ ನಿಮಿಷಗಳ ಕಾಲ ಮಿದುಳಿಗೆ ರಕ್ತ ಪೂರೈಕೆ ಅರ್ಥಾತ್, ಆಕ್ಸಿಜನ್ ಪೂರೈಕೆ ನಿಂತು ಹೋದರೆ, ಮಿದುಳು ಜಡವಾಗಿಬಿಡುತ್ತದೆ. ಸಾಯುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಈ ಸ್ಥಿತಿ ಮುಟ್ಟಿದ ವ್ಯಕ್ತಿಯನ್ನು ಕೋಮಾದಲ್ಲಿ ಇದ್ದಾನೆ ಎನ್ನುವುದುಂಟು. ಉಳಿದ ಎಲ್ಲ ಅಂಗಗಳೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದರೂ, ಸುತ್ತಲಿನ ಪರಿವೆ ಇರುವುದಿಲ್ಲ. ಎಚ್ಚರ ಇರುವುದಿಲ್ಲ. ಹೊರಗಿನ ಬದಲಾವಣೆಗಳಿಗೆ ವ್ಯಕ್ತಿ ಸ್ಪಂದಿಸುವುದೂ ಇಲ್ಲ. ಇಂತಹ ಸ್ಥಿತಿಯನ್ನು ಬ್ರೈನ್ ಡೆಡ್ ಅರ್ಥಾತ್ ಮಿದುಳು ಸತ್ತಿದೆ ಎಂದು ವೈದ್ಯರು ಅರ್ಥೈಸುತ್ತಾರೆ. ಸಾಮಾನ್ಯವಾಗಿ ಮಿದುಳಿಗೆ ತೀವ್ರವಾದ ಪೆಟ್ಟು ಬಿದ್ದು, ಇಲ್ಲವೇ ರಕ್ತ ಪೂರೈಕೆ ನಿಂತಾಗ ಹೀಗಾಗುತ್ತದೆ. ಕೋಮಾಸ್ಥಿತಿಯಲ್ಲಿರುವ ವ್ಯಕ್ತಿಗಳು ಇತರೆ ಹಲವರಿಗೆ ಅಂಗದಾನಿಗಳಾಗುತ್ತಾರೆ.

ಹಾಗಿದ್ದರೆ ಆಕ್ಸಿಜನ್ ಪೂರೈಕೆ ನಿಂತ ಮಿದುಳಿಗೆ ಕೃತಕವಾಗಿ ಆಕ್ಸಿಜನ್ನು ಪೂರೈಸಬಹುದೇ? ಹಾಗೆ ಮಾಡಿದರೆ ಅದು ಜಡವಾಗದೆ ಉಳಿದೀತೇ? ಇದು ಪ್ರಶ್ನೆ. ಇದಕ್ಕಾಗಿ ಸೆಸ್ಟಾನ್ ಮತ್ತು ಸಂಗಡಿಗರು ಹಂದಿಗಳ ಮೇಲೆ ಪ್ರಯೋಗ ನಡೆಸಿದರು. ಮಾಂಸಕ್ಕಾಗಿ ಕೊಂದ ಹಂದಿಗಳ ತಲೆಯನ್ನು ಹಾಗೆಯೇ ತೆಗೆದಿಟ್ಟು, ಅವುಗಳ ರಕ್ತನಾಳಗಳೊಳಗೆ ಕೃತಕವಾಗಿ ದ್ರವವೊಂದನ್ನು ಹರಿಯುವಂತೆ ವ್ಯವಸ್ಥೆ ಮಾಡಿದರು. ದ್ರವ ಏಕೆ? ರಕ್ತವನ್ನೇ ಹರಿಸಬಹುದಿತ್ತಲ್ಲಾ? ಅದೂ ನಿಜವೇ. ಆದರೆ ರಕ್ತ ಹೆಪ್ಪುಗಟ್ಟಬಹುದು. ಸೋಂಕು ತಗುಲಬಹುದು. ಇವೆಲ್ಲ ಸಾಧ್ಯತೆಗಳನ್ನೂ ಇಲ್ಲವಾಗಿಸಲು ರಕ್ತಕೋಶಗಳು ಇಲ್ಲದ, ಆದರೆ ಆಕ್ಸಿಜನ್ನನ್ನು ಹೊತ್ತೊಯ್ಯಲು ಅವಶ್ಯಕವಾದ ಹೀಮೋಗ್ಲೋಬೀನ್ ಪ್ರೊಟೀನು ಮಾತ್ರವೇ ಇರುವ, ರಕ್ತದ್ದೇ ಸಾಂದ್ರತೆ, ಲವಣಾಂಶಗಳು, ಸಕ್ಕರೆ ಇರುವ ದ್ರವವನ್ನು ಇವರು ಬಳಸಿದ್ದಾರೆ. ಇದನ್ನು ಮಿದುಳಿನೊಳಗೆ ಹರಿಸಲು ಒಂದು ವ್ಯವಸ್ಥೆಯನ್ನೂ ಮಾಡಿದ್ದಾರೆ. ಬ್ರೈನ್ ಎಕ್ಸ್ ಎಂದು ಹೆಸರಿಸಿರುವ ಈ ವ್ಯವಸ್ಥೆ ಮುಂದೆ ತುರ್ತು ಸಂದರ್ಭಗಳಲ್ಲಿ ಮಿದುಳಿನ ಚಟುವಟಿಕೆಯನ್ನು ಒಂದಿಷ್ಟಾದರೂ ಕಾಯ್ದುಕೊಳ್ಳಬಹುದು ಎಂಬುದು ಇವರ ನಿರೀಕ್ಷೆ.

ಈ ನಿರೀಕ್ಷೆಯನ್ನು ಪರೀಕ್ಷಿಸಲು ಕಸಾಯಿಖಾನೆಗಳಲ್ಲಿ ಮಾಂಸಕ್ಕಾಗಿ ಕತ್ತರಿಸಿದ ಹಂದಿಗಳ ತಲೆಗಳನ್ನು ಇವರು ಹೊತ್ತು ತಂದು ಪ್ರಯೋಗ ಮಾಡಿದ್ದಾರೆ. ಇವುಗಳೊಳಗೆ ಬ್ರೈನ್ ಎಕ್ಸಿನ ನೆರವಿನಿಂದ ದ್ರವವನ್ನು ನಾಲ್ಕೈದು ಗಂಟೆಗಳ ಕಾಲ ಹರಿಯಬಿಟ್ಟು, ಮಿದುಳಿನಲ್ಲಿರುವ ನರಕೋಶಗಳ ರಚನೆ, ಸೂಕ್ಷ್ಮರಕ್ತನಾಳಗಳಲ್ಲಿನ ದ್ರವದ ಹರಿವು, ನರಕೋಶಗಳ ವಿದ್ಯುತ್ ಚಟುವಟಿಕೆಗಳು, ಉರಿಯೂತವೇನಾದರೂ ಆಗುವುದೋ, ಮಿದುಳಿನ ಕೋಶಗಳೆಷ್ಟು ಸಾವಿಗೀಡಾಗುತ್ತವೆ ಎನ್ನುವುದನ್ನೆಲ್ಲ ಗಮನಿಸಿದ್ದಾರೆ. ನಾಲ್ಕೈದು ಗಂಟೆಗಳ ನಂತರವೂ ಮಿದುಳಿನ ಈ ಎಲ್ಲ ಚಟುವಟಿಕೆಗಳೂ ಎಗ್ಗಿಲ್ಲದೆ ನಡೆದುವು. ಕೋಶಗಳ ಸಾವು ಕಡಿಮೆ ಇತ್ತು ಎಂದು ಇವರು ವರದಿ ಮಾಡಿದ್ದಾರೆ. ಹಲವಾರು ಗಂಟೆಗಳ ವರೆಗೆ ಕಾದಿಟ್ಟ ಮಿದುಳಿಗೆ ಪುನಶ್ಚೇತನಗೊಳ್ಳುವ ಸಾಮರ್ಥ್ಯ ಇದೆ ಎನ್ನುವುದು ಇವರ ನಂಬಿಕೆ.

ಅದೇನೋ ಸರಿ. ಕೋಶಗಳು ಸಾಯಲಿಲ್ಲ. ಅವುಗಳ ರಚನೆ ಇದ್ದ ಹಾಗೇ ಇತ್ತು. ವಿದ್ಯುತ್ ಸಂಕೇತಗಳು ಹರಿದಾಡಿದುವು ಎಂದ ಮಾತ್ರಕ್ಕೆ ಮಿದುಳು, ಮಿದುಳಾಗಿ ಉಳಿದಿದೆ ಎನ್ನಬಹುದೇ ಎನ್ನುವ ವೈಜ್ಞಾನಿಕ ಕುತೂಹಲವಿದೆ. ಏಕೆಂದರೆ ಸಾಮಾನ್ಯವಾಗಿ ಮಿದುಳಿನ ಎಲ್ಲೆಡೆ ಕಾಣುವ ಗ್ಲೋಬಲ್ ವಿದ್ಯುತ್ ಚಟುವಟಿಕೆ ಇದರಲ್ಲಿ ಕಾಣಲಿಲ್ಲ. ಅಥವಾ ಅದನ್ನು ಇವರು ಪರೀಕ್ಷಿಸಿಲ್ಲ. ನಮ್ಮ ಅರಿವು, ಕಲಿಕೆ, ಪ್ರಜ್ಞೆ ಮುಂತಾದ ಮಾನಸಿಕ ಚಟುವಟಿಕೆಗಳ ಸಂದರ್ಭದಲ್ಲಿ ಇಂತಹ ವಿದ್ಯುತ್ ಚಟುವಟಿಕೆಗಳನ್ನು ಮಿದುಳು ತೋರುತ್ತದೆ. ಹಾಗಿದ್ದರೆ ಈ ಛೇದಿಸಿದ ಶಿರದಲ್ಲಿ ಪ್ರಜ್ಞೆ ಇರಬಹುದೇ? ತನಗೇನಾಗುತ್ತಿದೆ ಎನ್ನುವ ಅರಿವು ಇರಬಹುದೇ? ನೋವು ಅರಿವಾಗಬಹುದೋ? ಉದ್ದೇಶ ಪೂರ್ವಕವಾಗಿ ಹೀಗೆ ಮಾಡುವುದು ಎಷ್ಟು ಸರಿ? ಎನ್ನುವ ನೈತಿಕ ಪ್ರಶ್ನೆಗಳನ್ನೂ ಹಲವರು ಕೇಳಿದ್ದಾಗಿದೆ. ಅಥವಾ ಮಿದುಳಿನ ಸಾವು ಎಂಬುದರ ವ್ಯಾಖ್ಯಾನವೇ ಬದಲಾಗಬೇಕೋ? ಹೀಗೆ ಹುಡುಕುತ್ತಾ ಹೋದ ಉತ್ತರಕ್ಕಿಂತಲೂ ಹೆಚ್ಚು ಪ್ರಶ್ನೆಗಳನ್ನು ಈ ಪ್ರಯೋಗ ಮುಂದಿಟ್ಟಿದೆ.

ಗಣೇಶ ಪಾರ್ವತಿಯರ ಕಥೆ ನೆನಪಾಗಿದ್ದರೆ, ಅದು ನಿಮ್ಮ ತಪ್ಪಲ್ಲ ಬಿಡಿ.


ಚುಟುಕು ಚುರುಮುರಿ
ಅಗ್ನಿಭಕ್ಷಕ ದಳ
ತಪ್ಪಾಗಿಲ್ಲ. ಅಗ್ನಿಶಾಮಕ ದಳವಲ್ಲ. ಅಗ್ನಿಭಕ್ಷಕ ದಳ ಎಂದೇ ಹೇಳಿದೆ. ಹೌದು. ಬೇಸಗೆಯಲ್ಲಿ ಬೆಂಕಿ ಅಪಘಾತಗಳಿಗೆ ಕೊರತೆಯೇನೂ ಇಲ್ಲ. ಮೊನ್ನೆ, ಮೊನ್ನೆಯಷ್ಟೆ ದೂರದ ಪ್ಯಾರಿಸ್ಸಿನಲ್ಲಿ ನೂರಾರು ವರ್ಷಗಳಷ್ಟು ಹಳೆಯ ನಾಟರ್ಡ್ಯಾಂ ಅರಮನೆಗೆ ಬೆಂಕಿ ಬಿದ್ದದ್ದು ಇಡೀ ಪ್ರಪಂಚವನ್ನೇ ಕಂಗೆಡಿಸಿತ್ತು. ಇಲ್ಲಿ ಬೆಂಕಿ ಬಿದ್ದರೇನೋ ಅಗ್ನಿಶಾಮಕ ದಳಗಳನ್ನು ಕರೆಸಬಹುದು. ದೂರದ ಅಂತರಿಕ್ಷದಲ್ಲಿ ಪಯಣಿಸುವಾಗಲೋ, ಅಲ್ಲಿರುವ ನೌಕೆಯಲ್ಲಿ ಪ್ರಯೋಗ ಮಾಡುವಾಗಲೋ ಬೆಂಕಿ ಬಿದ್ದರೆ ಏನು ಮಾಡುವುದು? ಅಲ್ಲಿ ಯಾವ ಅಗ್ನಿಶಾಮಕ ದಳವಿದೆ? ಅಲ್ಲವೇ? ಅದಕ್ಕೂ ವಿಜ್ಞಾನಿಗಳು ಪರಿಹಾರ ಹುಡುಕಲು ಹೊರಟಿದ್ದಾರೆ. ಅಂತಿಂಥ ಪರಿಹಾರವಲ್ಲ. ಬೆಂಕಿಯನ್ನೇ ನುಂಗಿಬಿಡುವ ಪರಿಹಾರವನ್ನು ಜಪಾನಿನ ವಿಜ್ಞಾನಿಗಳು ಸೂಚಿಸಿದ್ದಾರಂತೆ. ಜಪಾನಿನ ತೊಯೊಹಾಶಿ ವಿಶ್ವವಿದ್ಯಾನಿಲಯದ ಇಂಜಿನೀಯರು ಕಾವೊರು ವಕಾತ್ಸುಕಿ ಮತ್ತು ಸಂಗಡಿಗರು ಹೀಗೊಂದು ವ್ಯವಸ್ಥೆಯ ವಿವರಗಳನ್ನು ಇತ್ತೀಚಿನ ಫೈರ್ ಟೆಕ್ನಾಲಜಿ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.

ಬೆಂಕಿ ಎಂದರೆ ಗೊತ್ತಲ್ಲ? ಯಾವುದಾದರೂ ದಹ್ಯ ವಸ್ತು ಆಕ್ಜಿಜನ್ನಿನ ಜೊತೆ ಸೇರಿ ನಡೆಯುವ ರಾಸಾಯನಿಕ ಕ್ರಿಯೆ. ಈ ಕ್ರಿಯೆಯ ಸಂದರ್ಭದಲ್ಲಿ ಶಾಖವೂ, ಬೆಳಕೂ ಹುಟ್ಟುತ್ತದೆ. ಅದನ್ನೇ ನಾವು ಬೆಂಕಿ ಎನ್ನುತ್ತೇವೆ. ಬೆಂಕಿ ಆರಿಸಲು ಹಲವು ವಿಧಾನಗಳಿವೆ. ಮೊದಲಿಗೆ ದಹ್ಯವಸ್ತು ಇಲ್ಲದಂತೆ ಮಾಡಬಹುದು. ನಾವು ಸ್ಟವ್ವಿನ ತಿರುಪು ತಿರುಗಿಸಿದಾಗ ಬೆಂಕಿ ಆರುವುದು ಇದೇ ಕಾರಣಕ್ಕೆ. ಇಂಧನದ ಪೂರೈಕೆಯನ್ನು ನಾವು ನಿಲ್ಲಿಸಿಬಿಡುತ್ತೇವೆ. ಇನ್ನೂ ಒಂದು ಉಪಾಯ ಇದೆ. ಆಕ್ಸಿಜನ್ನು ಬೆಂಕಿಗೆ ಸೇರದಂತೆ ಮಾಡಿದರೂ ಬೆಂಕಿ ಆರುತ್ತದೆ. ಅರ್ಥಾತ್ ಗಾಳಿ ಆಡದಂತೆ ಏನನ್ನಾದರೂ ಮುಚ್ಚಿದರೆ ಬೆಂಕಿ ಅರಿ ಹೋಗುತ್ತದೆ. ಪುಟ್ಟ ಮೇಣದ ಬತ್ತಿಯಲ್ಲಿ ಈ ಉಪಾಯ ಸಾಧ್ಯ. ದೊಡ್ಡ ಬೆಂಕಿಗೆಲ್ಲ, ಈ ಕಾರಣಕ್ಕೇ ಮಣ್ಣು ಮುಚ್ಚುತ್ತಾರೆ. ಮತ್ತೂ ಒಂದು ಉಪಾಯ ಎಂದರೆ ಬೆಂಕಿಯನ್ನು ತಣಿಸುವುದು. ಅರ್ಥಾತ್, ನೀರು ಹನಿಸುವುದು. ಆಗ ಬೆಂಕಿಯ ಉಷ್ಣತೆ ಕಡಿಮೆ ಆಗಿ ರಾಸಾಯನಿಕ ಕ್ರಿಯೆ ನಿಲ್ಲುತ್ತದೆ. ಕೆಲವೊಮ್ಮೆ ಇವೆಲ್ಲ ಉಪಾಯಗಳನ್ನೂ ಉಪಯೋಗಿಸುತ್ತೇವೆ. ಇನ್ನೂ ಒಂದು ಉಪಾಯ ಎಂದರೆ ಕಾರ್ಬನ್ ಡಯಾಕ್ಸೈಡನ್ನು ಸಿಂಪರಿಸುವುದು. ಇದು ಆಕ್ಸಿಜನ್ನಿಗೆ ವಿರುದ್ಧವಾಗಿ ಕಾರ್ಯ ನಡೆಸುತ್ತದೆ. ಬೆಂಕಿಯನ್ನು ಆರಿಸುತ್ತದೆ. ನಾವು ಉರಿಯುವ ಮೇಣದ ಬತ್ತಿಯ ಮೇಲೆ ಉಫ್ ಎಂದು ಊದಿದಾದ ಇವೆಲ್ಲವನ್ನೂ ಮಾಡುತ್ತೇವೆ. ಉಸಿರಿನಲ್ಲಿರುವ ಕಾರ್ಬನ್ ಡಯಾಕ್ಸೈಡನ್ನು ಪೂರೈಸುತ್ತೇವೆ, ಮೇಣದಿಂದ ಆವಿಯಾಗುತ್ತಿರುವ ಇಂಧನವನ್ನು ಬೆಂಕಿಯಿಂದ ದೂರ ತಳ್ಳುತ್ತೇವೆ, ಉಸಿರಿನಲ್ಲಿರುವ ತುಸು ತೇವಾಂಶವೂ ಬೆಂಕಿಯನ್ನು ತಣಿಸಿ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಬತ್ತಿ ಆರುತ್ತದೆ.

ಬೆಂಕಿಯನ್ನು ನುಂಗುತ್ತಿರುವ ವಿ ಇ ಎಂ ತಂತ್ರಜ್ಞಾನ – ಪ್ರಾಯೋಗಿಕ ಚಿತ್ರಗಳು

ಕಾಡ್ಗಿಚ್ಚೇ ಇರಲಿ, ಸ್ಟವ್ವಿನ ಜ್ವಾಲೆಯೇ ಇರಲಿ, ಇದುವರೆವಿಗೂ ನಾವು ಬಳಸಿದ್ದೆಲ್ಲ ಇಂತವೇ ಉಪಾಯಗಳು. ಬೆಂಕಿಯಿಂದ ಎಷ್ಟು ಅಪಾಯ ಇದೆಯೋ, ಅಷ್ಟೇ ಅಪಾಯ ಬೆಂಕಿ ಆರಿಸುವದರಿಂದಲೂ ಆಗಬಹುದು. ಬೆಂಕಿ ಆರಿಸುವಾಗ ಸಿಂಪರಿಸುವ ನೀರು ಇಲ್ಲವೇ ಗಾಳಿ ಬೆಂಕಿಯಲ್ಲಿರುವ ಇಂಧನದ ಕಣಗಳು, ಇದ್ದಿಲಿನ ಧೂಳು ಇತ್ಯಾದಿಯನ್ನು ಬೇರೆಡೆಗೆ ಹರಡುತ್ತವೆ. ತೆರೆದ ಜಾಗದಲ್ಲಿ ಇದು ನಿರಪಾಯಕಾರಿ ಎನ್ನಿಸಿದರೂ, ಅಂತರಿಕ್ಷ ಯಾನ ನೌಕೆಗಳಲ್ಲಿ, ಸುರಂಗಗಳಲ್ಲಿ, ಜಲಾಂತರ್ಗಾಮಿ ನೌಕೆಗಳಲ್ಲಿ ತೊಂದರೆಯನ್ನುಂಟು ಮಾಡಬಹುದು. ಕೆಲವೊಮ್ಮೆ ಬೆಂಕಿಯನ್ನು ಆರಿಸುವ ಪ್ರಯತ್ನವೇ ಬೆಂಕಿಯನ್ನು ಹರಡುವುದಕ್ಕೂ ಕಾರಣವಾಗಬಹುದು. ಇವನ್ನೆಲ್ಲ ಗಮನಿಸಿದ ವಕಾತ್ಸುಕಿ ತಂಡ ಬೆಂಕಿಯನ್ನೇ ನುಂಗಿಬಿಟ್ಟರೆ ಹೇಗೆ ಎಂದು ಯೋಚಿಸಿದೆ. ಕಸಗುಡಿಸಲು ಬಳಸುವ ವ್ಯಾಕ್ಯೂಮ್ ಕ್ಲೀನರಿನಂತಹ ಉಪಕರಣವನ್ನೇ ಬಳಸಿ ಬೆಂಕಿಯನ್ನೇ ವ್ಯಾಕ್ಯೂಮ್ ಮಾಡುವುದು ಇವರ ಉಪಾಯ. ಇದನ್ನು ವಿಇಎಮ್ ಅಥವಾ ವ್ಯಾಕ್ಯೂಮ್ ಎಕ್ಸ್ಟಿಂಗ್ವಿಷಿಂಗ್ ಮೆಶೀನ್ ಎಂದು ವಕಾತ್ಸುಕಿ ತಂಡ ಹೆಸರಿಸಿದೆ.

ಸದ್ಯಕ್ಕೆ ಇದು ಕೇವಲ ಒಂದು ಕಲ್ಪನೆಯಷ್ಟೆ. ಇದರ ಸಾಧ್ಯಾಸಾಧ್ಯತೆಯನ್ನು ನಿರೂಪಿಸಲು ಈ ತಂಡ ಹಲವು ಪ್ರಯೋಗಗಳನ್ನು ನಡೆಸಿದೆ. ಬೆಂಕಿಯನ್ನು ಹೀರುವಾಗ ಏನೇನು ಬದಲಾವಣೆಗಳು ಆಗಬಹುದು ಎಂದು ಗಮನಿಸಿದೆ. ಸಾಮಾನ್ಯವಾಗಿ ಉರಿಯುತ್ತಿರುವ ಜ್ವಾಲೆಯ ಹಳದಿ ಬಣ್ಣ, ನಿರ್ವಾತಕ್ಕೆ ಹೀರಿಕೊಂಡ ಹಾಗೆಲ್ಲ ನೀಲಿಯಾಗಿ ಬಿಡುತ್ತದಂತೆ. ಇದರ ಅರ್ಥ ಅಲ್ಲಿರುವ ಅಧಿಕ ಇಂಧನವನ್ನೂ ವಿಇಎಂ ಹೀರಿಕೊಂಡಿದೆ ಎಂದು. ಇನ್ನು ಬೆಂಕಿ ಆರಿದಾಗ ಹಾರುವ ಬೂದಿ, ಇದ್ದಿಲ ಕಣಗಳೂ ವ್ಯಾಕ್ಯೂಮಿನೊಳಗೆ ಹೋಗಿ ಬಿಡುವುದರಿಂದ ನೌಕೆಯೊಳಗೆ ಅವು ಹಾರಾಡುವ ಸಾಧ್ಯತೆ ಇಲ್ಲ. ಮುಚ್ಚಿದ ಕೋಣೆಯಂತಿರುವ ನೌಕೆಯಲ್ಲಿ ಹೀಗೆ ಒಂದಿಷ್ಟು ಇದ್ದಿಲ ಕಣಗಳು ಸೇರಿಕೊಂಡರೆ ಹೊಗೆಯಲ್ಲಿಯೇ ವಾಸಿಸಿದಂತೆ ಅಷ್ಟೆ. ಜೊತೆಗೆ ಬೆಂಕಿ ಆರಿಸುವ ಮುನ್ನ ಮುಖಕ್ಕೆ ಮುಖವಾಡವನ್ನು ಧರಿಸುವ ಅವಶ್ಯಕತೆಯೂ ಇಲ್ಲವಂತೆ. ಏಕೆಂದರೆ ಬೆಂಕಿಯನ್ನು ನುಂಗುವುದರಿಂದ, ಅದು ಮುಖಕ್ಕೆ ಹಾರುವ ಸಂದರ್ಭಗಳು, ಅಥವಾ ಅದರಿಂದ ಹುಟ್ಟುವ ಕಾರ್ಬನ್ ಮಾನಾಕ್ಸೈಡನ್ನು ನಾವು ಉಸಿರಾಡುವ ಸಾಧ್ಯತೆಗಳು ಕಡಿಮೆ ಎನ್ನುತ್ತಾರೆ.

ಉಪಾಯವೇನೋ ಚೆನ್ನಾಗಿದೆ. ಆದರೆ ಇದು ನಿಜವೋ ಸುಳ್ಳೋ ಯಾವುದಾದರೂ ನೌಕೆಗೆ ಬೆಂಕಿ ಬಿದ್ದಾಗಲೇ ಗೊತ್ತಾಗಬೇಕು. ಆಗಲೂ ಅಂತರಿಕ್ಷ ಸಂಶೋಧನಾ ಸಂಸ್ಥೆಗಳು ಅಪರಿಚಿತ ಅಪ್ಸರೆಗಿಂತಲೂ ಪರಿಚಿತ ಪಿಶಾಚಿಯೇ ಮೇಲು ಎಂದು ಹಳೆಯ ಉಪಾಯಗಳಿಗೇ ಜೋತು ಬೀಳಬಹುದು.
Nakamura, Y., Usuki, T. & Wakatsuki, K. Novel Fire Extinguisher Method Using Vacuuming Force Applicable to Space Habitats Fire Technol (2019). https://doi.org/10.1007/s10694-019-00854-4


ಸಹಕಾರ ಚೆನ್ನವೋ? ಮೋಸಗಾರಿಕೆ ಅಂದವೋ?
ಕ್ಷಮಿಸಿ. ನಿಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಿದ್ದಕ್ಕೆ. ಇದು ಖಂಡಿತವಾಗಿಯೂ ನಮ್ಮ ಸಹಕಾರಿ ಬ್ಯಾಂಕುಗಳ ವ್ಯವಹಾರ ಕುರಿತಲ್ಲ. ಹೇಗಿದ್ದೂ ಅವುಗಳಲ್ಲಿ ಅಂತಹ ಆಯ್ಕೆ ಇರುವುದಿಲ್ಲ. ಏಕೆಂದರೆ ಎಷ್ಟೋ ಸಹಕಾರಿ ಬ್ಯಾಂಕುಗಳಲ್ಲಿ ಮೋಸಗಾರಿಕೆಯೇ ಎದ್ದು ಕಾಣಬಹುದು. ಆ ಮಾತು ಒತ್ತಟ್ಟಿಗಿರಲಿ. ಈಗ ನಾನು ಹೇಳ ಹೊರಟಿರುವುದು ಪ್ರಾಣಿ ಪ್ರಪಂಚದಲ್ಲಿ ಸಹಕಾರ ಮತ್ತು ಮೋಸದ ಬಗ್ಗೆ. ಹಿಂಡುಗಟ್ಟಿಕೊಂಡು ಅಲೆಯುತ್ತಾ ತನ್ನದಲ್ಲದ ಮರಿಯನ್ನೂ ಜತನದಿಂದ ನೋಡಿಕೊಳ್ಳುವ ಆನೆಗಳನ್ನು ಕಂಡಿದ್ದೀರಿ. ಹಾಗೆಯೇ ಕದ್ದು ಮುಚ್ಚಿ ಬಂದು ಕಾಗೆಯ ಗೂಡಿನೊಳಗೆ ಮೊಟ್ಟೆ ಇಟ್ಟು ನಿರಾಳವಾಗಿ ಬದುಕುವ ಮೋಸಗಾರ ಕೋಗಿಲೆಯ ಬಗ್ಗೆಯೂ ಕೇಳಿರುತ್ತೀರಿ.

ಪ್ರಾಣಿಗಳ ಇಂತಹ ನಡವಳಿಕೆಗಳು ಸುಮ್ಮನೇ ಬಂದಿಲ್ಲ. ಅದು ಹೇಗೋ ಈ ನಡವಳಿಕೆಗಳು ಪ್ರಾಣಿಗಳ ಉಳಿವಿಗೆ ಲಾಭದಾಯಕವಾಗಿರಬೇಕು. ಇಲ್ಲದಿದ್ದರೆ ಆ ನಡವಳಿಕೆ ಬೆಳೆಯಲು ಸಾಧ್ಯವೇ ಇಲ್ಲ ಎನ್ನುವುದು ವಿಜ್ಞಾನಿಗಳ ನಂಬಿಕೆ. ಇರಬಹುದು! ಆದರೆ ಮೋಸ, ಸಹಕಾರ ಇವೆರಡರಲ್ಲಿ ಯಾವುದು ಲಾಭಕಾರಿ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ. ಆದರೆ ಹಾಗೊಂದು ಪ್ರಯತ್ನವನ್ನು ನಡೆಸಿದ ಸುದ್ದಿಯನ್ನು ನೇಚರ್ ಪತ್ರಿಕೆ ಕಳೆದ ವಾರ ವರದಿ ಮಾಡಿದೆ. ನಮ್ಮೂರಿನ ಕೋಗಿಲೆಯ ನೆಂಟನೇ ಏನೋ ಎನ್ನುವ ಆಫ್ರಿಕಾದ ಗ್ರೇಟ್ ಆನಿ ಎನ್ನುವ ಕುಕ್ಕೂ ಜಾತಿಯ ಪಕ್ಷಿಯಲ್ಲಿ ಇವೆರಡೂ ನಡವಳಿಕೆಗಳು ಇವೆಯಂತೆ. ಇವನ್ನು ಪರೀಕ್ಷಿಸಿದಾಗ ಸಹಕಾರದಷ್ಟೆ, ಮೋಸವೂ ಲಾಭಕಾರಿಯಂತೆ.

ಅರ್ಥಾತ್, ಮೋಸವೋ, ಸಹಕಾರವೋ, ಒಟ್ಟಾರೆ ಪಕ್ಷಿಯ ಉಳಿವಿಗೆ ಎರಡೂ ಸಮಾನ ಅವಕಾಶವನ್ನು ಒದಗಿಸುತ್ತವೆ. ಹೀಗೆಂದು ಅಮೆರಿಕೆಯ ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದ ಜೀವಿವಿಕಾಸದ ವಿಜ್ಞಾನಿ ಕ್ರಿಸ್ಟೀನಾ ರೈಲ್ ಮತ್ತು ಮೆಘಾನ್ ಸ್ಟ್ರಾಂಗ್ ವರದಿ ಮಾಡಿದ್ದಾರೆ. ಇವರ ಸಂಶೋಧನೆಯ ವಿವರಗಳನ್ನು ನೇಚರ್ ಪತ್ರಿಕೆ ವರದಿ ಮಾಡಿದೆ.

ರೈಲ್ ಮತ್ತು ಸ್ಟ್ರಾಂಗ್ ಪನಾಮಾ ರಾಜ್ಯದಲ್ಲಿರುವ ಗ್ರೇಟ್ ಅನಿ ಎನ್ನುವ ಪಕ್ಷಿಯ ನಡವಳಿಕೆಗಳನ್ನು ಹತ್ತು ವರ್ಷಗಳ ಕಾಲ ಕೂಲಂಕಷವಾಗಿ ಅಧ್ಯಯನ ಮಾಡಿದ್ದಾರೆ. ವಿಜ್ಞಾನಿಗಳು ಕ್ರೊಟೊಫೇಗಾ ಮೇಜರ್ ಎಂದು ಹೆಸರಿಸುವ ಈ ಪಕ್ಷಿಗಳಲ್ಲಿ ಮೂರ್ನಾಲ್ಕು ಹೆಣ್ಣುಗಳು ಒಟ್ಟಾಗಿ ಗೂಡು ಕಟ್ಟಿ, ಒಟ್ಟಾಗಿ ಮೊಟ್ಟೆ ಇಟ್ಟು, ಒಟ್ಟಾಗಿಯೇ ಪಾಲಿಸುತ್ತವೆ. ಅಷ್ಟೊಂದು ಸಹಕಾರ ಇವುಗಳಲ್ಲಿದೆ. ಆದರೆ ಕೆಲವೊಮ್ಮೆ ಇವುಗಳಲ್ಲಿ ಕೆಲವು ಹೆಣ್ಣುಗಳು ಬೇರೆ ಹಕ್ಕಿಗಳ ಗೂಡುಗಳಲ್ಲಿ ಮೊಟ್ಟೆ ಇಟ್ಟು, ನಮ್ಮ ಕೋಗಿಲೆಯಂತೆಯೇ, ನಿರಾಳವಾಗಿ ಇದ್ದುಬಿಡುವುದನ್ನೂ ಕಾಣಬಹುದು. ಒಂದೇ ಪಕ್ಷಿಯಲ್ಲಿ ಎರಡೂ ಬಗೆಯ ನಡವಳಿಕೆ ಇರುವುದು ವಿಚಿತ್ರವೇ? ಹಾಗಿದ್ದರೆ ಮೋಸ ಮಾಡುವುದರಿಂದ ಲಾಭ ಹೆಚ್ಚು ಎಂದು ಹೀಗೆ ಮಾಡುತ್ತವೆಯೋ ಹೇಗೆ? ಇದು ಇವರು ಕೇಳಿಕೊಂಡ ಪ್ರಶ್ನೆ.
ಇದಕ್ಕಾಗಿ ಇವರು ಈ ಪಕ್ಷಿಗಳು ಗೂಡು ಕಟ್ಟುವ ವೇಳೆ, ಮೋಸಗಾರಿಕೆಯಿಂದ ಪರರ ಗೂಡಿನಲ್ಲಿ ಮೊಟ್ಟೆ ಇಡುವ ಹಕ್ಕಿಗಳ ಚರಿತ್ರೆ, ಎಲ್ಲ ಮೊಟ್ಟೆಗಳು ಹಾಗೂ ತಾಯಂದಿರ ತಳಿಗುಣಗಳು ಇತ್ಯಾದಿಗಳನ್ನು ಅಧ್ಯಯನ ಮಾಡಿದ್ದಾರೆ. ಸಹಕಾರ ತತ್ವ ತೋರುವ ಪಕ್ಷಿಗಳು ಜೊತೆಗಿರಲು ಅಕ್ಕ, ತಂಗಿಯರನ್ನೇ ಆಯ್ದುಕೊಳ್ಳುವುದಿಲ್ಲವಂತೆ. ಸಂಬಂಧವಿಲ್ಲದವರ ಜೊತೆಗೂ ಸ್ನೇಹದಿಂದ ಕೂಡಿ ಗೂಡು ಕಟ್ಟಿಕೊಳ್ಳುತ್ತವೆ ಎಂದು ಇವರು ಗಮನಿಸಿದ್ದಾರೆ. ಆದರೆ ಹಕ್ಕಿಗಳು ಪರಜೀವಿಗಳಾಗುವುದಕ್ಕೆ ಕಾರಣ ಬಹುತೇಕ ಚೊಚ್ಚಲ ಮೊಟ್ಟೆಯನ್ನಿಟ್ಟಾಗ ಅನುಭವಿಸಿದ ಕಷ್ಟಗಳಂತೆ. ಚೊಚ್ಚಲ ಗೂಡು ಕಟ್ಟಿದಾಗ ಬೇಟೆಗಾರರ ದಾಳಿಗೆ ಒಳಗಾಗಿ ಗೂಡು ನಾಶವಾಗಿ ಬೀದಿಗೆ ಬಿದ್ದ ಹಕ್ಕಿಗಳು ಮುಂದೆ ಗೂಡು ಕಟ್ಟುವುದನ್ನೇ ನಿಲ್ಲಿಸಿ, ಬೇರೆ ಹಕ್ಕಿಗಳ ಗೂಡಿನೊಳಗೆ ಮೊಟ್ಟೆ ಇಡಲು ಆರಂಭಿಸುತ್ತವೆಯಂತೆ. ಇವು ಮೊಟ್ಟೆ ಇಡುವ ಕಾಲವೂ ಅದಕ್ಕೆ ತಕ್ಕಂತೆ ಬಲದಾಗುತ್ತದೆ. ಸಹಕಾರಿ ಹಕ್ಕಿಗಳು ಎಲ್ಲವೂ ಮೊಟ್ಟೆ ಇಟ್ಟು ಮುಗಿದ ಮೇಲೆ ಕಾವು ಕೊಡಲು ಆರಂಭಿಸುತ್ತವೆ. ಕಾವು ಕೊಡಲು ಅರಂಭಿಸಿದ ನಂತರ ಯಾವುವೂ ಮೊಟ್ಟೆ ಇಡುವುದಿಲ್ಲ. ಆದರೆ ಪರಪುಟ್ಟಗಳು ಹಾಗಲ್ಲ! ಈಗಾಗಲೇ ಹಕ್ಕಿಗಳು ಕಾವು ಕೊಡುತ್ತಿರುವ ಮೊಟ್ಟೆಗಳ ನಡುವೆಯೇ ಹೊಸದಾಗಿ ಮೊಟ್ಟೆ ಇಡುತ್ತವೆ. ಹೀಗಾಗಿ ಇವುಗಳ ಮರಿಗಳು ತುಸು ನಿಧಾನವಾಗಿಯೇ ಗೂಡು ಬಿಡುತ್ತವೆ. ಒಮ್ಮೆ ಹೀಗೆ ಪರಪುಟ್ಟನಾದ ಹಕ್ಕಿ, ಅದೇ ಅಭ್ಯಾಸವನ್ನು ಮುಂದುವರೆಸುವುದು ಹೆಚ್ಚು. ಅಪ್ಪಟ ಪರಪುಟ್ಟನಾಗಿಯೇ ಹುಟ್ಟಿದ ಹಕ್ಕಿಗಳಿಲ್ಲ. ಅವು ಬೆಳೆಯುತ್ತಾ ಕಲಿತ ಗುಣವಂತೆ.

ಮೋಸ, ಸಹಕಾರಗಳಲ್ಲಿ ಯಾವುದು ಲಾಭ ಎಂದು ಹೇಗೆ ತಿಳಿಯುತ್ತದೆ ಎಂದಿರಾ? ಇದಕ್ಕೆ ರೈಲ್ ಮತ್ತು ಸ್ಟ್ರಾಂಗ್ ಒಂದು ಉಪಾಯ ಮಾಡಿದ್ದಾರೆ. ತಾಯಿ ಹಾಗೂ ಮರಿಗಳ ತಳಿಗುಣಗಳನ್ನು ಹೋಲಿಸಿದ್ದಾರೆ. ಪರಪುಟ್ಟವಾದ ತಾಯಿಗಳ ಮರಿಗಳೆಷ್ಟು ಬದುಕಿ ಉಳಿದಿವೆ, ಸಹಕಾರಿ ತಾಯಿಗಳ ಮರಿಗಳೆಷ್ಟು ಎಂದು ಹೀಗೆ ಖಚಿತವಾಗಿ ಗುರುತಿಸಬಹುದು. ಹೀಗೆ ಹೋಲಿಸಿದಾಗ ತಾಯಂದಿರು ತಲಾವಾರು ಇಟ್ಟ ಮೊಟ್ಟೆಗಳು, ಹಾಗೂ ಅವುಗಳಿಂದ ಒಡೆದು ಮರಿಯಾದ ಹಕ್ಕಿಗಳ ಸಂಖ್ಯೆಯಲ್ಲಿ ವ್ಯತ್ಯಾಸವೇನೂ ಕಾಣಲಿಲ್ಲ. ಅರ್ಥಾತ್, ಮೋಸವೋ, ಸಹಕಾರವೋ, ಉಳಿಯುವ ಸಾಧ್ಯತೆಗಳು ಬದಲಾಗುವುದಿಲ್ಲ. ಪರಪುಟ್ಟಗಳು ತಮ್ಮದೇ ಗೂಡು ಕಟ್ಟಿ ಮೊಟ್ಟೆ ಇಟ್ಟಾಗ ಸಹಕಾರಿ ಹಕ್ಕಿಗಳಿಗಿಂತಲೂ ಕಡಿಮೆ ಮೊಟ್ಟೆ ಇಡುತ್ತವೆ. ಅದರೆ ಇವು ಬೇರೆ ಗೂಡಿನಲ್ಲಿ ಇಟ್ಟ ಮೊಟ್ಟೆಗಳನ್ನೂ ಕೂಡಿಸಿದರೆ ಎರಡೂ ವಿಧದ ತಾಯಂದಿರು ಇಡುವ ಒಟ್ಟಾರೆ ಮೊಟ್ಟೆಯ ಸಂಖ್ಯೆ ಸಮಾನವೇ ಆಗುತ್ತದೆ.

ಹಾಗಿದ್ದರೆ ಪರಪುಟ್ಟಗಳೇಕೆ ಮೋಸ ಮಾಡುವುದನ್ನು ಕಲಿತವು? ಬಹುಶಃ ಇದು ಅಪಾಯ ಬಂದಾಗ ಇರಲಿ ಎನ್ನುವ ಉಪಾಯ ಇರಬಹುದು. ಎರಡೂ ಉಪಾಯಗಳಲ್ಲಿ ಒಂದು ಹೆಚ್ಚಿಗೇ ಇರಬಹುದು. ಸಂದರ್ಭಾನುಸಾರ ಯಾವುದನ್ನು ಬೇಕಿದ್ದರೂ ಈ ಹಕ್ಕಿಗಳು ಬಳಸಿಕೊಳ್ಳಬಹುದಲ್ಲ ಎನ್ನುತ್ತಾರೆ ಈ ವಿಜ್ಞಾನಿಗಳು.


ತುಂತುರು ಸುದ್ದಿಗಳು.
• ರೆಫ್ರಿಜರೇಟರಿಗೆ ಹೊಸ ರೂಪ ಬರಲಿದೆ. ಇನ್ನು ಮುಂದೆ ಅದರಲ್ಲಿ ಅನಿಲದ ಬದಲಿಗೆ ಪುಡಿಯನ್ನು ತುಂಬಬೇಕಾಗಬಹುದಂತೆ. ಒತ್ತಿದಾಗ ಶಾಖವನ್ನು ಹೀರಿಕೊಂಡು, ಒತ್ತಡ ಕಡಿಮೆ ಆದಾಗ ಅದನ್ನು ಬಿಡುಗಡೆ ಮಾಡುವ ಹರಳುಗಳನ್ನು ರೂಪಿಸಲಾಗಿದೆಯಂತೆ. ಅನಿಲದ ಬದಲಿಗೆ ರೆಫ್ರಿಜರೇಟರಿನಲ್ಲಿ ಇವನ್ನು ಬಳಸಬಹುದು. ಇದು ಇಂದಿನ ರೆಫ್ರಿಜರೇಟರುಗಳಿಗಿಂತ ಹೆಚ್ಚು ಪರಿಸರ ಸ್ನೇಹಿ ಆಗಬಹುದು. .
• ಹಸಿವೆ, ದಾಹ ಎಲ್ಲವನ್ನೂ ಮಿದುಳು ನಿಯಂತ್ರಿಸುತ್ತದೆ ಸರಿ. ಅದರೆ ದಾಹವಾದಾಗ ನೀರನ್ನು ಹುಡುಕಿಕೊಂಡು ಹೋಗುತ್ತೇವಲ್ಲ? ಅದು ಹೇಗೆ? ಇಂತಲ್ಲಿ ನೀರಿದೆ ಎಂದು ಹುಡುಕು ಎಂದು ಮಿದುಳು ನಿರ್ದೇಶಿಸುತ್ತದೆಯೇ? ಹೌದಂತೆ. ದಾಹವಾದಾಗ ಅದನ್ನು ತಣಿಸುವುದಕ್ಕೆ ಬೇಕಾದ ನಡವಳಿಕೆಗಳನ್ನು ಮಿದುಳು ಬದಲಿಸುತ್ತದೆ ಎನ್ನುತ್ತದೆ ಇಲಿಗಳ ಮೇಲೆ ನಡೆದಿರುವ ಒಂದು ಪ್ರಯೋಗ.
• ಛಳಿಗಾಲದಲ್ಲಿ ಉತ್ತರ ಭಾರತದ ಬಯಲುಗಳ ತುಂಬಾ ಸಾಸಿವೆ ಬೆಳೆಯುತ್ತಾರೆ. ಸಾಸಿವೆ ಗಿಡ ಬೆಳೆಯುತ್ತಿದ್ದಂತೆಯೇ ಅದಕ್ಕೆ ತಿಗಣೆಗಳು ತಗುಲುತ್ತವೆ. ಇಡೀ ಉತ್ತರಭಾರತದಲ್ಲೆಲ್ಲಾ ಇವು ಹರಡುತ್ತವೆ. ರೆಕ್ಕೆ ಇಲ್ಲದ, ಹಾರಲು ಬಾರದ ತಿಗಣೆಗಳು ಹೇಗೆ ಅಷ್ಟೊಂದು ವ್ಯಾಪಕ ಪ್ರದೇಶದಲ್ಲಿ ಹರಡುತ್ತವೆ? ಅವು ಗಾಳಿಯನ್ನೇರಿ ಬರುವ ಭೃಂಗಗಳಂತೆ! ಅಲ್ಲಲ್ಲ. ತಿಗಣೆಗಳಂತೆ.


ಬೀಗಲ್‌ ಸಾಹಸಯಾನ
ಸಂಚಿಕೆ ೩೩
ಮುಂದುವರೆದುದು
ದಕ್ಷಿಣ ಅಮೆರಿಕಾದಲ್ಲಿ ನಾನು ಒಟ್ಟಾಋ ೨೭ ಬಗೆಯ ಇಲಿಗಳನ್ನು ಸಂಗ್ರಹಿಸಿದ್ದೆ. ಇದಲ್ಲದೆ ಇನ್ನೂ ಹದಿಮೂರು ಪ್ರಭೇದಗನ್ನು ಅಜಾರ ಮತ್ತು ಇತರರು ವಿವರಿಸಿದ್ದಾರೆ. ಪ್ರಾಣಿವಿಜ್ಞಾನಿಗಳ ಸಂಘದ ಸಭೆಯಲ್ಲಿ ಮಿಸ್ಟರ್ ವಾಟರ್ ಹೌಸ್ ನಾನು ಸಂಗ್ರಹಿಸಿದ ಪ್ರಭೇದಗಳನ್ನು ವಿವರಿಸಿ, ನಾಮಕರಣವನ್ನೂ ಮಾಡಿದ್ದಾರೆ. ಎಂತಹ ಸಂದರ್ಭದಲ್ಲಿಯೂ ಉದಾರವಾಗಿ ನೆರವು ನೀಡಿದ ಅವರಿಗೂ, ಸಂಘದ ಮತ್ತೊಬ್ಬ ಸದಸ್ಯರಿಗೂ ನಾನು ಈ ಸಂದರ್ಭದಲ್ಲಿ ನನ್ನ ಋಣವನ್ನು ಹೃತ್ಪೂರ್ವಕವಾಗಿ ಹಿಂದಿರುಗಿಸುತ್ತಿದ್ದೇನೆ.

ನಾನು ಹಿಡಿದ ಕೇಪಿಬಾರಾವೊಂದರ ಹೊಟ್ಟೆಯನ್ನು ಸೀಳಿದಾಗ ಅದರೊಳಗೆ ಹಳದಿಯಾದ ದ್ರವವೊಂದು ಬೃಹತ್ ಪ್ರಮಾಣದಲ್ಲಿ ಇದ್ದುದನ್ನು ಕಂಡೆ. ಅದರಲ್ಲಿ ಒಂದಿಷ್ಟಾದರೂ ನಾರು ಕಾಣಲಿಲ್ಲ. ಮಿಸ್ಟರ್ ಓವೆನ್ ತಿಳಿಸುವ ಪ್ರಕಾರ ಈ ಜೀವಿಯ ಅನ್ನನಾಳ ಹೇಗಿದೆ ಎಂದರೆ ಅದರೊಳಗೆ ಕಾಗೆಯ ಗರಿಯ ಕಡ್ಡಿಗಿಂತ ದಪ್ಪನೆಯದು ಯಾವುದೂ ನುಸುಳಲಾರದು. ಈ ಪ್ರಾಣಿಯ ಅಗಲವಾದ ಹಲ್ಲುಗಳು ಹಾಗೂ ಬಲವಾದ ದವಡೆಗಳು ಅದರ ಆಹಾರವಾದ ಜಲಸಸ್ಯಗಳನ್ನು ಚೆನ್ನಾಗಿ ಅರೆದು ದ್ರವವಾಗಿಸಲು ಖಂಡಿತವಾಗಿಯೂ ತಕ್ಕುದಾಗಿವೆ.

ಕೇಪಿಬಾರಾ ಬಾಣಂತಿಯಾಗಿರುವಾಗ ನೀರಿಗೆ ಈಜಲು ಇಳಿದರೆ ಮರಿಗಳು ಅದರ ಬೆನ್ನ ಮೇಲೆ ಕುಳಿತಿರುತ್ತವೆ ಎನ್ನುತ್ತಾರೆ. ಈ ಪ್ರಾಣಿಯನ್ನು ನೂರಾರು ಸಂಖ್ಯೆಯಲ್ಲಿ ಸುಲಭವಾಗಿ ಬೇಟೆ ಆಡಬಹುದು. ಆದರೆ ಅವುಗಳ ಚರ್ಮಕ್ಕೆ ಕವಡೆ ಕಾಸೂ ಸಿಗಲಿಕ್ಕಿಲ್ಲ. ಮಾಂಸವೋ ಸಾಧಾರಣ ರುಚಿ. ರಿಯೊ ಪರಾನಾ ದ್ವೀಪಗಳಲ್ಲಿ ಇವು ವಿಪುಲ ಸಂಖ್ಯೆಯಲ್ಲಿ ದೊರೆಯುತ್ತವೆ. ಅಲ್ಲಿನ ಜಾಗ್ವಾರಿಗೆ ಬೇಟೆಯಾಗುತ್ತವೆ.

ಟುಕುಟುಕೊ ಅದೇ ಟೀನೋಮಿಸ್ ಬ್ರೆಸಿಲಿಯೆನ್ಸಿಸ್ ಒಂದು ವಿಚಿತ್ರವಾದ ಪುಟ್ಟ ಪ್ರಾಣಿ. ಹೆಗ್ಗಣದಂತೆಯೇ ಜೀವನಶೈಲಿ ಇರುವ ಇದನ್ನು ಕವರುವ ಪ್ರಾಣಿ ಎಂದು ಹೇಳಬಹುದು. ಈ ಪ್ರಾಂತ್ಯದ ಹಲವು ಬಾಗಗಳಲ್ಲಿ ಇದು ವಿಪುಲವಾಗಿದೆ. ಆದರೆ ಇದನ್ನು ಹಿಡಿಯುವುದು ಕಷ್ಟ. ಇದು ನೆಲದ ಮೇಲೆ ಬರುವುದೇ ಇಲ್ಲ. ಇದರ ಬಿಲಗಳ ಮೂತಿಯಲ್ಲಿ ಹೆಗ್ಗಣಗಳಂತೆಯೇ ದೊಡ್ಡ ಮಣ್ಣುಗುಡ್ಡೆಯನ್ನು ಸೃಷ್ಟಿಸುತ್ತವೆ. ಆದರೆ ಗಾತ್ರದಲ್ಲಿ ಹೆಗ್ಗಣಗಳಿಗಿಂತ ಚಿಕ್ಕವು. ಈ ಪ್ರದೇಶದ ನೆಲದಡಿಯ ಮಣ್ಣನ್ನೆಲ್ಲ ಇವು ಹೇಗೆ ಅಗೆದು ಬಿಟ್ಟಿವೆ ಎಂದರೆ ಕೆಲವೆಡೆ ಕುದುರೆಗಳ ಗೊರಸು ನೆಲದೊಳಗೇ ಕುಸಿದುಬಿಡುತ್ತದೆ. ಸ್ವಲ್ಪಮಟ್ಟಿಗೆ ಈ ಟುಕುಟುಕೊಗಳು ಹಿಂಡು ಹಿಂಡಾಗಿ ಜೀವಿಸುತ್ತವೆ. ನನಗೆ ಎಂದು ಆರು ಮಾದರಿಗಳನ್ನು ಹಿಡಿದು ತಂದ ವ್ಯಕ್ತಿ ಇವು ಎಲ್ಲೆಲ್ಲೂ ಸಿಗುತ್ತವೆ ಎಂದು ಹೇಳಿದ್ದ. ಇವು ನಿಶಾಚರಿಗಳು. ಇವುಗಳ ಪ್ರಮುಖ ಆಹಾರವೆಂದರೆ ಗಿಡಗಳ ಬೇರುಗಳು. ಅದಕ್ಕಾಗೇ ಇವು ವ್ಯಾಪಕವಾಗಿ ನೆಲವನ್ನು ತೋಡುತ್ತವೆ. ನೆಲದಡಿಯ ಬಿಲದಲ್ಲಿ ಅದು ಮಾಡುವ ವಿಚಿತ್ರ ಸದ್ದಿನಿಂದಾಗಿಯೇ ಇದು ಎಲ್ಲರಿಗೂ ಪರಿಚಿತ. ಆದರೆ ಅದನ್ನು ಮೊತ್ತ ಮೊದಲು ಕೇಳಿದವನಿಗೆ ಅಚ್ಚರಿಯಾಗುವುದಂತೂ ಕಂಡಿತ. ಏಕೆಂದರೆ ಈ ಸದ್ದು ಎಲ್ಲಿಂದ ಬರುತ್ತಿದೆ, ಯಾವ ಪ್ರಾಣಿ ಅದನ್ನು ಮಾಡುತ್ತಿದೆ ಎಂದು ಸುಲಭವಾಗಿ ಗೊತ್ತಾಗದು. ಒರಟಾಗಿ ಮೂಗಿನಿಂದಲೇ ಸಣ್ಣದಾಗಿ ಗುಟುರು ಹಾಕುತ್ತದೆ. ಈ ಸದ್ದನ್ನು ಪಟಪಟನೆ ನಾಲ್ಕು ಬಾರಿ ಮರುಕಳಿಸುತ್ತದೆ. ಇದಕ್ಕೆ ಕೊಟ್ಟಿರುವ ಟುಕುಟುಕೊ ಎನ್ನುವ ಹೆಸರು ಆ ಸದ್ದಿನ ಅಣಕವಷ್ಟೆ. ಈ ಪ್ರಾಣಿ ವಿಪುಲವಾಗಿ ಇರುವ ಕಡೆಗಳಲ್ಲಿ ಹಗಲೆಲ್ಲ ಈ ಸದ್ದನ್ನು ಕೇಳಬಹುದು. ಕೆಲವೊಮ್ಮ ನಿಮ್ಮ ಪಾದದ ಅಡಿಯಲ್ಲಿಯೇ ಈ ಸದ್ದು ಕೇಳಿಸುವುದೂ ಉಂಟು. ಕೋಣೆಯಲ್ಲಿ ಬಂಧಿಸಿದಾಗ ಇವು ಬಲು ನಿಧಾನವಾಗಿ, ಪೆದ್ದು, ಪೆದ್ದಾಗಿ ಓಡಾಡುತ್ತವೆ. ಇದಕ್ಕೆ ಕಾರಣ ಅವುಗಳ ಹಿಂಗಾಲಿನ ನಡೆ. ಇವುಗಳ ತೊಡೆಮೂಳೆಯ ಸಂಧಿಯಲ್ಲಿ ಸ್ನಾಯುವು ಇಲ್ಲದಿರುವದರಿಂದ ಸ್ವಲ್ಪವೂ ಇವು ಜಿಗಿಯಲಾರವು. ಹಾಗೆಯೇ ತಪ್ಪಿಸಿಕೊಂಡು ಹೋಗುವುದಕ್ಕೆ ಪ್ರಯತ್ನಿಸದಷ್ಟು ಪೆದ್ದುಗಳು ಕೂಡ. ಸಿಟ್ಟಾದಾಗ ಇಲ್ಲವೇ ಭಯಗೊಂಡಾಗ ಟುಕೊ-ಟುಕೊ ಎಂದು ಸದ್ದು ಮಾಡುತ್ತವೆ. ನಾನು ಜೀವಂತ ಹಿಡಿದವುಗಳಲ್ಲಿ ಬಹಳಷ್ಟು ಮೊದಲ ದಿನವೇ ಬಲು ಸಾಧುವಾಗಿಬಿಟ್ಟಿದ್ದವು. ಕಚ್ಚುವುದಕ್ಕಾಗಲಿ, ತಪ್ಪಿಸಿಕೊಳ್ಳುವುದಕ್ಕಾಗಲಿ ಪ್ರಯತ್ನಿಸಲೇ ಇಲ್ಲ. ಉಳಿದವು ತುಸು ಒರಟಾಗಿದ್ದುವು.

ನನಗೆ ಇವುಗಳನ್ನು ಹಿಡಿದುಕೊಟ್ಟ ವ್ಯಕ್ತಿ ಅವುಗಳಲ್ಲಿ ಬಹಳ ಪ್ರಾಣಿಗಳು ಕುರುಡಾಗಿರುತ್ತವೆ ಎಂದು ತಿಳಿಸಿದ. ಈ ಸ್ಥಿತಿಯಲ್ಲಿದ್ದ ಜೀವಿಯನ್ನು ನಾನು ಮದ್ಯಸಾರದಲ್ಲಿ ಸಂಗ್ರಹಿಸಿ ಇಟ್ಟಿದ್ದೆ. ಇದಕ್ಕೆ ಅದರ ಕಣ್ಣಿನ ಮೇಲಿರುವ ಪೊರೆಗೆ ಸೋಂಕು ತಗುಲಿರುವುದೇ ಕಾರಣವಿರಬೇಕು ಎಂದು ಮಿಸ್ಟರ್ ರೀಡ್ ಅಭಿಪ್ರಾಯ ಪಟ್ಟಿದ್ದಾರೆ. ಅದು ಬದುಕಿದ್ದಾಗ ನಾನು ಅದರ ತಲೆಯ ಮೇಲೆ ಅರ್ಧ ಅಂಗುಲ ಎತ್ತರದಲ್ಲಿ ನನ್ನ ಬೆರಳನ್ನು ಇಟ್ಟು ಗಮನಿಸಿದ್ದೆ. ಇದು ಒಂದಿಷ್ಟೂ ಅದರ ಗಮನಕ್ಕೆ ಬಂದಿರಲೇ ಇಲ್ಲ. ಆದರೆ ಅದು ಕೋಣೆಯೊಳಗೆ ಉಳಿದವುಗಳಷ್ಟೇ ಸರಾಗವಾಗಿ ಓಡಾಡುತ್ತಿತ್ತು. ಟುಕುಟುಕೊಗಳ ನೆಲದಡಿಯ ಜೀವನವನ್ನು ಗಮನಿಸಿದರೆ, ಈ ಕುರುಡುತನ ಸಹಜವೆನ್ನಿಸುತ್ತದೆ. ಆದರೆ ಅದರಿಂದ ಗಂಭೀರ ತೊಂದರೆಗಳೇನೂ ಇಲ್ಲ. ಆದರೂ ಹೀಗೆ ಆಗಾಗ್ಗೆ ತೊಂದರೆಗೊಳಗಾಗುವ ಅಂಗವೊಂದು ಇರಬೇಕೇಕೆ ಎಂದು ಅಚ್ಚರಿಯಾಗುತ್ತದೆ. ಭೂಮಿಯಡಿಯಲ್ಲಿ ಜೀವಿಸುವ ಆಸ್ಪಲಾಕ್ಸ್ ಎನ್ನುವ ದಂಶಕ ಮತ್ತು ನೀರಿನಡಿಯಲ್ಲಿರವ ದಟ್ಟಗತ್ತಲಿನ ಗುಹೆಗಳಲ್ಲಿ ವಾಸಿಸುವ ಪ್ರೊಟಿಯಸ್ ಎನ್ನುವ ಸರೀಸೃಪಗಳು ಕುರುಡಾಗಿರುವುದಕ್ಕೆ ಕಣ್ಣನ್ನು ಬಳಸದೆ ಇದ್ದುದರಿಂದ ಗಳಿಸಿದ ಕುರುಡುತನ ಎಂದು ಕಲ್ಪಿಸಿದ್ದ ಲಾಮಾರ್ಕನಿಗೆ ಇದರ ಬಗ್ಗೆ ತಿಳಿದಿದ್ದರೆ ಖುಷಿ ಆಗುತ್ತಿತ್ತೇನೋ. ಅವೆರಡೂ ಪ್ರಾಣಿಗಳ ಕಣ್ಣುಗಳೂ ಅಪಕ್ವ ಸ್ಥಿತಿಯಲ್ಲಿವೆ ಮತ್ತು ಸ್ನಾಯುವಿನಷ್ಟು ಗಟ್ಟಿಯಾದ ಚರ್ಮದ ಪೊರೆ ಕಣ್ಣುಗಳನ್ನು ಕವಿದಿರುತ್ತವೆ. ಆದರೆ ಸಾಮಾನ್ಯ ಹೆಗ್ಗಣಗಳ ಕಣ್ಣು ಬಲು ಪುಟ್ಟದಾಗಿದ್ದರೂ ಪರಿಪೂರ್ಣವಾಗಿರುತ್ತವೆ. ಆದರೂ ಅದರಲ್ಲಿ ದೃಷ್ಟಿನರ ಇದೆಯೋ ಇಲ್ಲವೋ ಎನ್ನುವ ಬಗ್ಗೆ ಹಲವರಿಗೆ ಸಂದೇಹಗಳಿವೆ. ಹೆಗ್ಗಣದ ದೃಷ್ಟಿ ಪರಿಪೂರ್ಣವಾಗಿಲ್ಲದಿರಬಹುದು. ಆದರೂ ಅದು ನೆಲದ ಮೇಲಿದ್ದಾಗ ಸಾಕಾಗುವಂತಿದೆ. ನನಗೆ ಕಂಡ ಹಾಗೆ ನೆಲದ ಮೇಲಕ್ಕೆ ಬರದೆಯೇ ಇರುವ ಟುಕೊಟುಕೊವಿನ ಕಣ್ಣುಗಳು ದೊಡ್ಡದಾಗಿವೆ. ಕೆಲವೊಮ್ಮೆ ಇದೂ ಕೂಡ ಕುರುಡಾಗಿ, ಉಪಯೋಗವಿಲ್ಲದ್ದಾಗಿರುತ್ತದೆ. ಇದರಿಂದ ಪ್ರಾಣಿಗೆ ಯಾವ ತೊಂದರೆಯೂ ಇಲ್ಲ. ಬಹುಶಃ ಲಾಮಾರ್ಕ್ ಇದನ್ನು ನೋಡಿದ್ದಿದ್ದರೆ, ಇದು ಈಗ ಆಸ್ಪಲಾಕ್ಸ್ ಮತ್ತು ಪ್ರೋಟಿಯಸ್ಸಿನ ಹಾದಿಯನ್ನೇ ಹಿಡಿಯುತ್ತಿದೆ ಎಂದು ಬಿಡುತ್ತಿದ್ದ.!
ಧ್ವನಿ ಬದಲಿಸಿ

ಅಂಗಗಳನ್ನು ಬಳಸುತ್ತಲೇ ಇದ್ದರೆ ಅವು ವಿಕಾಸವಾಗಿ ಸಂತಾನಗಳಲ್ಲಿ ಉಳಿಯುತ್ತವೆ. ಬಳಕೆಯಲ್ಲಿಲ್ಲದ ಅಂಗಗಳು ಕ್ಷೀಣವಾಗಿ ಕ್ರಮೇಣ ಸಂತಾನಗಳಲ್ಲಿ ಮರೆಯಾಗುತ್ತವೆ ಎಂದು ಲಾಮಾರ್ಕ್ ಒಂದು ತರ್ಕವನ್ನು ಪ್ರತಿಪಾದಿಸಿದ್ದ. ಜೀವಿವಿಕಾಸ ವಾದಗಳಲ್ಲಿ ಇದು ಬಹಳ ಪ್ರಚಾರ ಪಡೆದಿತ್ತು. ಡಾರ್ವಿನ್ ಈ ಪಯಣ ನಡೆಸಿದ್ದಾಗ ಚಾಲ್ತಿಯಲ್ಲಿತ್ತು. ತನ್ನ ಅನುಭವಗಳ ಹಿನ್ನೆಲೆಯಲ್ಲಿ ಲಾಮಾರ್ಕನ ವಾದದಲ್ಲಿ ಹುರುಳಿಲ್ಲ ಎನ್ನುವುದನ್ನು ಡಾರ್ವಿನ್ ಈ ಪಾಠದ ಭಾಗದಲ್ಲಿ ವ್ಯಂಗ್ಯವಾಗಿ ಹೇಳುತ್ತಿರುವುದನ್ನು ಗಮನಿಸಬಹುದು.


ಜಾಣಪ್ರಶ್ನೆ
ಈ ಹಕ್ಕಿಯ ಹಾಡನ್ನು ಕೇಳಿ. ಇದು ಯಾವ ಹಕ್ಕಿಯ ಹಾಡು?
ಉತ್ತರ ಮುಂದಿನವಾರ.


ಜಾಣನುಡಿ
ಓಸ್ಕರ್ ವಿಲ್ಹೆಲ್ಮ ಆಗಸ್ಟ್ ಹರ್ಸ್ವಿಜ್
ಏಪ್ರಿಲ್ 21, 1849

ಭ್ರೂಣ ರಚನೆಯ ರಹಸ್ಯವನ್ನ ಬೇಧಿಸಿದ ಜರ್ಮನ್ ಜೀವಿವಿಜ್ಞಾನಿ. ಸೀ ಅರ್ಚಿನ್ ಎನ್ನುವ ಸಮುದ್ರ ವಾಸಿ ಪ್ರಾಣಿಗಳ ಪ್ರಜನನವನ್ನು ಅಧ್ಯಯನ ಮಾಡುತ್ತಿದ್ದಾಗ ಈತ ಅವುಗಳ ಮೊಟ್ಟೆಯಲ್ಲಿ ಇದ್ದಕ್ಕಿದ್ದ ಹಾಗೆ ಎರಡು ಕೋಶಕೇಂದ್ರಗಳು ಕಾಣಿಸಿಕೊಂಡದ್ದನ್ನು ನೋಡಿದ. ಸಾಮಾನ್ಯವಾಗಿ ಒಂದೇ ಇರಬೇಕಿದ್ದ ಇದು ಎರಡು ಹೇಗಾಯಿತು ಎಂಬ ಪ್ರಶ್ನೆಗೆ ಬಹುಶಃ ಎರಡನೆಯದು ವೀರ್ಯದಿಂದ ಬಂದಿರಬೇಕು ಎಂದು ಊಹಿಸಿದ. ಹೀಗೆ ವೀರ್ಯ ಮತ್ತು ಮೊಟ್ಟೆಗಳ ಸಂಗಮದಿಂದಲೇ ಭ್ರೂಣದ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ವೀರ್ಯದಲ್ಲಿರುವ ಕೋಶಕೇಂದ್ರ ಅರ್ಥಾತ್ ನ್ಯೂಕ್ಲಿಯಸ್ಸು ಬಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಗುರುತಿಸಿದ. ಇದು ಮುಂದೆ ಭ್ರೂಣಗಳ ಅಧ್ಯಯನಕ್ಕೆ ಅಡಿಗಲ್ಲನ್ನಿಟ್ಟಿತು. ಇಂದಿಗೂ ಈ ಕ್ರಿಯೆಯೇ ಬಲು ಮುಖ್ಯವಾಗಿದೆ. ರಾಸುಗಳಲ್ಲಿ ಕೃತಕವಾಗಿ ತಳಿ ಅಭಿವೃದ್ಧಿ ಮಾಡಲು, ಪ್ರನಾಳ ಶಿಶುಗಳ ಜನನದಲ್ಲಿ, ತದ್ರೂಪಿ ಅರ್ಥಾತ್ ಪ್ರಾಣಿಗಳ ಕ್ಲೋನಿಂಗ್ ತಂತ್ರದಲ್ಲಿ ಹೀಗೆ ಕೇವಲ ಕೋಶಕೇಂದ್ರಗಳನ್ನಷ್ಟೆ ಅಂಡಗಳೊಳಗೆ ಚುಚ್ಚಲಾಗುತ್ತದೆ. ಅಂಡಾಶಯವು ಭ್ರೂಣವಾಗಲು ವೀರ್ಯ ಸೋಂಕಿದರೆ ಸಾಲದು, ಅದರೊಳಗಿನ ಕೋಶಕೇಂದ್ರ ಅಂಡದೊಳಗೆ ಕೂಡಿಕೊಳ್ಳಬೇಕು ಎನ್ನುವ ಸಾರ್ವತ್ರಿಕ ಸತ್ಯವನ್ನು ಕಂಡುಕೊಂಡವ.

ರಚನೆ: ಕೊಳ್ಳೇಗಾಲ ಶರ್ಮ ಪ್ರಸ್ತುತಿ: ಕೊಳ್ಳೇಗಾಲ ಶರ್ಮ ಮತ್ತು ಶ್ರೀಮತಿ ಭಾರತಿ. ಜಾಣಸುದ್ದಿ ಕುರಿತ ಪ್ರಶ್ನೆಗಳು, ಸಂದೇಹ ಹಾಗೂ ಜಾಣಪ್ರಶ್ನೆಗಳ ಉತ್ತರಕ್ಕೆ 9886640328 ಈ ನಂಬರಿಗೆ ಕರೆ ಮಾಡಿ ಇಲ್ಲವೇ ವಾಟ್ಸಾಪು ಮಾಡಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x