ಜಾಣಸುದ್ದಿ 20: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com

ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)

ಈ ವಾರದ ಸಂಚಿಕೆಯಲ್ಲಿ:

• ಕರೀಬಿಲದ ಹೊಸ ಚಿತ್ರ,
• ಇರುಳುನೋಟ ಪಡೆದ ಇಲಿ,
• ಗಗನಯಾನಿ ಮತ್ತು ಅನುವಂಶೀಯತೆ
• ಬೀಗಲ್ ಸಾಹಸಯಾನ ೩೨

ಕರೀಬಿಲದ ಹೊಸ ಚಿತ್ರ
ಮೊನ್ನೆ ಏಪ್ರಿಲ್ ಹತ್ತನೆಯ ತಾರೀಖು ನಾವೆಲ್ಲ ಇಲ್ಲಿ ಚುನಾವಣಾ ರೇಲಿಗಳಲ್ಲಿ ಮೈಮರೆತಿದ್ದಾಗ ಪ್ರಪಂಚದಾದ್ಯಂತ ಖಗೋಳ ವಿಜ್ಞಾನಿಗಳು ಟೀವಿಯ ಸುತ್ತ ನೆರೆದಿದ್ದರು. ಇಲ್ಲ. ಅವರು ಕಾಯುತ್ತಿದ್ದುದು ಯಾವುದೇ ಚುನಾವಣಾ ಭಾಷಣಕ್ಕೂ ಅಲ್ಲ. ಅಥವಾ ಇನ್ಯಾವುದೋ ಹೊಸ ಅಂತರಿಕ್ಷ ನೌಕೆಯ ಉಡಾವಣೆಯನ್ನು ನೋಡಲೂ ಅಲ್ಲ. ಅವರೆಲ್ಲ ಕಾದಿದ್ದದ್ದು ತುಸು ತೂತು ಉದ್ದಿನ ವಡೆಯಂತೆಯೇ ತೋರುವ ಚಿತ್ರವನ್ನು ನೋಡಲು. ಟ್ವಿಟ್ಟರಿನಲ್ಲಿಯಂತೂ ಕೆಲವರು ಅಯ್ಯೋ ಅಷ್ಟಕ್ಕಾಗಿ ಅಷ್ಟೆಲ್ಲ ಒದ್ದಾಟವೇ ಎಂದಿದ್ದೂ ಆಯಿತು. ಐಶ್ವರ್ಯ ರೈದೋ, ಇನ್ಯಾರದ್ದೋ ಚಿತ್ರದಷ್ಟು ಸುಂದರವಾಗಿಯಾಗಲಿ, ಸ್ಪಷ್ಟವಾಗಿಯಾಗಲಿ ಆ ಚಿತ್ರ ಇಲ್ಲವಲ್ಲ ಎಂದು ಕೆಲವರು ಬಾಯಿ ಬಿಟ್ಟು ಹೇಳಿದ್ದೂ ಆಯಿತು. ಆದರೆ ಆ ಚಿತ್ರವನ್ನು ನೋಡಿದ ಖಗೋಳಜ್ಞರು ಮಾತ್ರ ತೆರೆದ ಬಾಯಿ ಮುಚ್ಚದೆಯೇ ಹಾಗೇ ಬೆರಗಾಗಿ ನಿಂತದ್ದು ಸತ್ಯ. ಇವೆಂಟ್ ಹೊರೈಜನ್ ಎನ್ನುವ ವಿಶಿಷ್ಟ ಟೆಲಿಸ್ಕೋಪಿನ ನೆರವಿನಿಂದ ತೆಗೆದ ಬಲು ದೂರದಲ್ಲಿರುವ ಕಾಣದ ತಾರೆಯೊಂದರ ಚಿತ್ರ ಅದು. ಕಾಣದ ತಾರೆ ಏಕೆಂದರೆ ಅದರೊಳಗಿಂದ ಬೆಳಕೂ ಹೊರ ಬರುವುದಿಲ್ಲ. ಅಷ್ಟು ಬಲವಾದ ಆಕರ್ಷಣೆಯ ತಾರೆ ಅದು. ಖಗೋಳ ವಿಜ್ಞಾನಿಗಳ ಮಾತಿನಲ್ಲಿ ಬ್ಲ್ಯಾಕ್ ಹೋಲ್ ಅಥವಾ ಕರೀಬಿಲ. ಅಂದು ಕಂಡದ್ದು ಕರೀಬಿಲದ ಮೊತ್ತ ಮೊದಲ ಚಿತ್ರ. ಮಗುವೊಂದು ಉದ್ದಿನ ವಡೆಯ ಚಿತ್ರವನ್ನು ಕೆಟ್ಟ ಕ್ಯಾಮೆರಾದಿಂದ ತೆಗೆದಂತೆ ಕಾಣುವ ಈ ಚಿತ್ರವನ್ನು ತೆಗೆದುದು ಮಾತ್ರ ಮಕ್ಕಳಾಟಿಕೆಯ ವಸ್ತುವಲ್ಲ ಎನ್ನಬೇಕು.

ಏನಿದು ಕೃಷ್ಣವಿವರ? ಕರೀಬಿಲ? ೧೯೦೩ರಲ್ಲಿ ಆಲ್ಬರ್ಟ್ ಐನ್ಸ್ಟೀನ್ ಗುರುತ್ವ ಬಲ, ಕಾಲ ಹಾಗೂ ಸ್ಪೇಸ್ ಅರ್ಥಾತ್ ಅವಕಾಶಗಳೆಲ್ಲದರ ನಡುವೆ ಸಂಬಂಧವಿದೆ ಎನ್ನುವ ಹೊಸ ತತ್ವವನ್ನು ಪ್ರತಿಪಾದಿಸಿದ್ದ. ಐನ್ ಸ್ಟೀನನ ಸಾಪೇಕ್ಷ ಸಿದ್ಧಾಂತ ಎಂದು ಹೆಸರಿಸಿದ ಈ ತತ್ವದ ಪ್ರಕಾರ ವಿಶ್ವದಲ್ಲಿ ಬೆಳಕಿಗಿಂತಲೂ ವೇಗವಾಗಿ ಸಾಗುವ ಮತ್ತೊಂದು ವಿದ್ಯಮಾನವಿಲ್ಲ. ಈ ಸಿದ್ಧಾಂತದ ಲೆಕ್ಕಾಚಾರಗಳನ್ನು ಗಮನಿಸಿದರೆ, ಗಾತ್ರದಲ್ಲಿ ಅತಿ ಚಿಕ್ಕದಾದ ಆದರೆ ಅತ್ಯಂತ ಪ್ರಬಲವಾದ ಗುರುತ್ವ ಬಲವಿರುವ ಹಾಗೂ ಮಹಾನ್ ದ್ರವ್ಯರಾಶಿಯ ವಸ್ತುಗಳೂ ಇರಬಹುದು ಎಂಬ ತರ್ಕ ಹುಟ್ಟಿತು. ಇವುಗಳಲ್ಲಿ ಕೆಲವದರ ಗುರುತ್ವ ಎಷ್ಟು ಪ್ರಬಲವಾಗಿರುತ್ತದೆ ಎಂದರೆ ಅದರಿಂದ ಬೆಳಕೂ ತಪ್ಪಿಸಿಕೊಳ್ಳಲಾರದು. ಅರ್ಥಾತ್ ಅದನ್ನು ನಾವು ಕಾಣುವುದು ಸಾಧ್ಯವಿಲ್ಲ. ೧೯೬೦ನೇ ದಶಕದವರೆಗೂ ಇದು ಕೇವಲ ತರ್ಕವಾಗಿಯಷ್ಟೆ ಉಳಿದಿತ್ತು. ಅದರೆ ಅನಂತರ ಲವಲೀನ್ ಪರ್ಸೆಲ್ ಪುಟ್ಟದೊಂದು ಭಾರೀ ಗಾತ್ರದ ಪಲ್ಸಾರ್ ಎನ್ನುವ ಕಾಯವನ್ನು ಗುರುತಿಸಿದಳು ಇದಾದ ನಂತರ ನಮ್ಮವರೇ ಆದ ಚಂದ್ರಶೇಖರ್ ಸೂರ್ಯನಿಗಿಂತ ಹಲವು ಗಾತ್ರ ಭಾರಿಯಾದ ತಾರೆಗಳು ಒಂದು ಹಂತದಲ್ಲಿ ಹೀಗೆ ಭಾರೀ ದ್ರವ್ಯರಾಶಿ, ಗುರುತ್ವ ಇರುವಂತಹ ಕಾಯಗಳಾಗುತ್ತವೆ ಎಂದರು. ಇದನ್ನೇ ಬ್ಲ್ಯಾಕ್ ಹೋಲ್ ಎಂದು ಗುರುತಿಸಲಾಯಿತು. ಕನ್ನಡದಲ್ಲಿ ಇವನ್ನು ಕೃಷ್ಣವಿವರ, ಕಪ್ಪುಕುಳಿ,ಕರೀಬಿಲ ಎಂದೆಲ್ಲ ಕರೆಯಲಾಗಿದೆ. ಅನಂತರ ನಡೆದದ್ದೆಲ್ಲವೂ ಇಂತಹ ಕಾಯಗಳು ಇವೆಯೋ ಇಲ್ಲವೋ ಎನ್ನುವುದರ ಹುಡುಕಾಟ. ಈ ಹುಡುಕಾಟದ ಕೊನಯೇ ಈವೆಂಟ್ ಹೊರೈಜನ್ ತೆಗೆದ ಈ ಚಿತ್ರ.

ಕರೀಬಿಲಗಳ ಹುಡುಕಾಟ ನಡೆದಾಗ ಇವುಗಳಿರುವುದಕ್ಕೆ ಹಲವು ಪರೋಕ್ಷವಾದ ಸುಳಿವುಗಳು ದೊರೆತಿದ್ದುವು. ಭೌತವಿಜ್ಞಾನಿಗಳ ಅಧ್ಯಯನಗಳು ಹಾಗೂ ಲೆಕ್ಕಾಚಾರಗಳ ಪ್ರಕಾರ ಅದರ ಹೇಗಿರಬಹುದು ಎಂದೂ ಕಲ್ಪಿಸಲಾಗಿತ್ತು. ಹಲವು ಕಲಾವಿದರು ಅಂತಹ ಕಾಲ್ಪನಿಕ ಚಿತ್ರಗಳನ್ನು ಸೃಷ್ಟಿಸಿದ್ದರು. ಆದರೆ ಕರೀಬಿಲದ ಛಾಯಾಚಿತ್ರವನ್ನು ತೆಗೆಯಲಾಗಿರಲಿಲ್ಲ. ಈಗ ಐದು ವರ್ಷಗಳ ಹಿಂದೆ ಇದಕ್ಕಾಗಿ ಆಕಾಶದಲ್ಲಿ ಎರಡು ಕರೀಬಿಲಗಳಿರಬಹುದು ಎಂದು ಊಹಿಸಿದ ನೆಲೆಯನ್ನು ಗುರುತಿಸಿ, ಅವುಗಳ ಸಮಗ್ರ ಚಿತ್ರ ತೆಗೆಯಲು ತೀರ್ಮಾನಿಸಲಾಯಿತು. ಆದರೆ ಒಂದೇ ಸಮಸ್ಯೆ. ಇವೆರಡೂ ಕೂಡ ನಮ್ಮಿಂದ ಬಲು ದೂರದಲ್ಲಿವೆ. ಎಷ್ಟು ದೂರದಲ್ಲಿವೆ ಎಂದರೆ ಕೋಟ್ಯಂತರ ಸೂರ್ಯನಷ್ಟು ದೊಡ್ಡ ಗಾತ್ರದವಾದರೂ, ಪುಟ್ಟ ಚುಕ್ಕೆಯಂತೆಯೂ ಕಾಣುವುದಿಲ್ಲ. ಅಷ್ಟು ದೂರದಲ್ಲಿರುವ ಇದರ ವಿವರಗಳನ್ನು ಹಿರಿದಾಗಿಸುವ ದೂರದರ್ಶಕ ಬೇಕಲ್ಲ? ದೂರದಲ್ಲಿರುವ ವಸ್ತುವನ್ನು ನೋಡಬೇಕು ಎಂದಷ್ಟೂ, ದೊಡ್ಡ ಮಸೂರವಿರುವ ದೂರದರ್ಶಕ ಬೇಕಷ್ಟೆ? ಇನ್ನು ಬೆಳಕು ನಮ್ಮನ್ನು ಬಂದು ತಲುಪಲು ಐದೂವರೆ ಕೋಟಿ ವರ್ಷಗಳೇ ಬೇಕಾಗಬಹುದಾದಷ್ಟು ದೂರದಲ್ಲಿರುವ ಮೆಸಿಯೆ ೮೭ ಎನ್ನುವ ಕಾಯವನ್ನು ನೋಡಲು ಎಷ್ಟು ದೊಡ್ಡ ಮಸೂರ ಬೇಕಾಗಬಹುದು ಊಹಿಸಿ. ಹೀಗಾಗಿ ಈ ಸಾಹಸಕ್ಕೆ ಎಳಸಿದ ೮ ರಾಷ್ಟ್ರಗಳಲ್ಲಿರುವ ೧೩ ಸಂಸ್ಥೆಗಳ ೨೦೦ ವಿಜ್ಞಾನಿಗಳು ಒಂದು ಉಪಾಯ ಹೂಡಿದರು. ಭೂಮಿಯನ್ನೇ ದೂರದರ್ಶಕವನ್ನಾಗಿ ಮಾಡಿದರು. ಅರ್ಥಾತ್, ಭೂಮಿಯ ವಿವಿಧೆಡೆಗಳಲ್ಲಿ ಇರುವ ರೇಡಿಯೊ ದೂರದರ್ಶಕಗಳನ್ನು ಏಕಕಾಲದಲ್ಲಿ ಎಂ ೮೭ರತ್ತ ಗುರಿಯಿಟ್ಟರು. ಹೀಗೆ ಇಡೀ ಭೂಮಿಯೇ ದೊಡ್ಡ ಕಣ್ಣಾಗಿ ಎಂ ೮೭ನ್ನು ನೆಟ್ಟಿ ನೋಡಿತು. ಚಿತ್ರ ತೆಗೆಯಿತು.

ಅಲ್ಲ. ಕರೀಬಿಲದಿಂದ ಬೆಳಕೂ ಬರುವುದಿಲ್ಲ ಎಂದ ಮೇಲೆ ಅದನ್ನು ಕಾಣುವುದು ಹೇಗೆ ಎಂದಿರಾ? ನಿಜ. ಇದಕ್ಕೂ ಉಪಾಯಗಳನ್ನು ವಿಜ್ಞಾನಿಗಳ ಕಂಡುಕೊಂಡರು. ಕರೀಬಿಲದ ಹಿಂದೆ ಇರುವ ಕಾಯಗಳಿಂದ ಬರುವ ಬೆಳಕನ್ನು ನೋಡುವುದು. ಅವುಗಳು ಸೃಷ್ಟಿಸುವ ನೆರಳನ್ನು ಗಮನಿಸಿದರೆ ಕರೀಬಿಲದ ಗಾತ್ರ, ಆಕಾರ ತಿಳಿಯಬೇಕಷ್ಟೆ. ಇದನ್ನೇ ಈ ಈವೆಂಟ್ ಹೊರೈಜನ್ ಮಾಡಿದ್ದು. ಕರೀಬಿಲದ ಅಗಾಧ ಗುರುತ್ವ ಬಲದಿಂದಾಗಿ ಅದರ ಆಚೀಚೆ ಸುಳಿಯುವ ಯಾವ ವಸ್ತುವೂ ಕರೀಬಿಲದೊಳಗೆ ಬಿದ್ದು ಬಿಡುತ್ತದೆ. ಈ ಬಲದ ಪ್ರಭಾವ ಮುಗಿಯುವ ದೂರದಲ್ಲಿ ಇರುವ ಬೆಳಕು, ನಿರಂತರವಾಗಿ ಬಾಗಿ, ಕರೀಬಿಲದ ಸುತ್ತಲೂ ಗಿರಕಿ ಹೊಡೆಯಬೇಕು. ಅದರಾಚೆಗೆ ಇರುವ ಬೆಳಕು ತುಸು ಬಾಗಿ ದೂರ ಹೊರಟು ಹೋಗುತ್ತವೆ. ಇನ್ನೂ ದೂರದಲ್ಲಿರುವ ಬೆಳಕು ತಂತಮ್ಮ ಹಾದಿಯಲ್ಲಿ ಸಾಗುತ್ತವೆ ಎನ್ನುವುದು ತರ್ಕ. ಎಂ೮೭ರ ಚಿತ್ರ ಹೀಗೇ ಇದೆ. ನಟ್ಟ ನಡುವೆ ಅಚ್ಚ ಕಪ್ಪು ಬಣ್ಣದ ಬೆಳಕಿಲ್ಲದ ಜಾಗ. ಅದರ ಸುತ್ತಲೂ ಬೆಂಕಿಯಂತೆ ಬೆಳಕಿನ ವರ್ತುಲಗಳು. ಅರ್ಥಾತ್, ಐನ್ ಸ್ಟೀನನ ಹಾಗೂ ಅನಂತರ ಈ ಬಗ್ಗೆ ಇತರೆ ಭೌತವಿಜ್ಞಾನಿಗಳು ನಡೆಸಿದ ತರ್ಕವೆಲ್ಲವೂ ಸತ್ಯ ಎನ್ನುವ ಪುರಾವೆಯನ್ನು ಈ ಚಿತ್ರ ಕಣ್ಣೆದುರಿಗೆ ಇಟ್ಟಿದೆ.

ಹಾಂ. ಒಂದು ಮಾತು. ಇದು ನಾವು ನೀವು ಸ್ಮಾರ್ಟ್ ಫೋನಿನಲ್ಲಿ ಕ್ಲಿಕ್ಕಿಸಿದಂತಹ ಚಿತ್ರವಲ್ಲ ಎನ್ನುವುದು ನೆನಪಿರಲಿ. ವಿವಿಧ ದೂರದರ್ಶಕಗಳು ಕಂಡ ರೇಡಿಯೊ ತರಂಗಗಳ ವೇಗ, ಹಾದಿ, ಪ್ರಖರತೆ, ಅವು ಆಕಾಶದಲ್ಲಿ ಕಂಡ ಸ್ಥಾನ ಇವೆಲ್ಲವನ್ನೂ ಒಟ್ಟು ಮಾಡಿ, ಅವುಗಳಲ್ಲಿ ಸಮಾನವಾದದ್ದನ್ನು ಗುರುತಿಸಿ, ಜೋಡಿಸಿ, ಹೊಲೆದು ತಯಾರಿಸಿದ ಚಿತ್ರ. ಅರ್ಥಾತ್, ಬಿಡಿ, ಬಿಡಿಯಾಗಿ ಸಂಗ್ರಹಿಸಿದ ಮಾಹಿತಿಯನ್ನು ಅರ್ಥವತ್ತಾಗಿ ಜೋಡಿಸಿ ಪಡೆದ ಚಿತ್ರ. ಈ ಮಾಹಿತಿ ಸಂಗ್ರಹಣೆ ಹಾಗೂ ಅರ್ಥೈಸಿದ ಬಗೆಯೂ ಸ್ವಾರಸ್ಯಕರವಾದ ಕಥೆಯೇ. ಭೂಮಿಯೇ ಕಣ್ಣಾಗಿತ್ತು ಎಂದೆನಲ್ಲವೇ? ಆ ಕಣ್ಣಿನ ಎಂಟು ಭಾಗದಲ್ಲಿ ಮಾಹಿತಿ ಸಂಗ್ರಹಿಸಲಾಯಿತು. ಹವಾಮಾನ ಚೆನ್ನಾಗಿದ್ದ ನಾಲ್ಕು ದಿನಗಳಲ್ಲಿ ಈ ಎಂಟೂ ದೂರದರ್ಶಕಗಳು ಬಿಡುವಿಲ್ಲದೆ ಎಂ೮೭ನ್ನು ಗಮನಿಸಿದ್ದವು.

ಹಾಗೆ ಸಂಗ್ರಹಿಸಿದ ಮಾಹಿತಿಯ ಒಟ್ಟಾರೆ ಗಾತ್ರ ಎಷ್ಟಿರಬಹುದು ಊಹಿಸಿ? ಅಷ್ಟು ಮಾಹಿತಿಯನ್ನು ನಿಮ್ಮ ಫೋನಿನಲ್ಲಿ ಕೂಡಿಡಬೇಕೆಂದರೆ ಒಂದರಿಂದ ಎರಡು ಲಕ್ಷ ಫೋನುಗಳು ಬೇಕಾಗುತ್ತವೆ. ಅಷ್ಟು ಪ್ರಮಾಣದ ವನ್ನು ಸಂಗ್ರಹಿಸಿಟ್ಟಿರಿ ಎಂದುಕೊಳ್ಳಿ. ಅದನ್ನು ಎಡೆಬಿಡದೆ ಕೇಳಿದರೂ ಪೂರ್ತಿ ಕೇಳಿ ಮುಗಿಸಲು ಕನಿಷ್ಟ ಎಂದರೂ ೮೫೦೦ ವರ್ಷಗಳು ಬೇಕಂತೆ. ಇಂತಹ ಬೃಹತ್ ಕಂಪ್ಯೂಟರು ಇಲ್ಲವಷ್ಟೆ. ಹೀಗಾಗಿ ಸಣ್ಣ, ಸಣ್ಣ ಸಂಗ್ರಾಹಕಗಳಲ್ಲಿ ಮೊದಲು ಸಂಗ್ರಹಿಸಿ, ಆ ಸಂಗ್ರಾಹಕಗಳು ಅರ್ಥಾತ್ ಹಾರ್ಡ್ ಡಿಸ್ಕುಗಳನ್ನು ಒಂದೆಡೆ ತಂದು, ಅಲ್ಲಿನ ಸೂಪರ್ ಕಂಪ್ಯೂಟರಿನಲ್ಲಿ ಎರಡು ವರ್ಷಗಳ ಕಾಲ ಅರ್ಥೈಸಿದ್ದಾರೆ. ಹಾಗಿದ್ದೂ ಈ ಚಿತ್ರ ಕಲ್ಪಿಸಿದ ರೀತಿಯೇ ಇದೆ ಎನ್ನುವುದೇ ಖುಷಿಯ ವಿಷಯ.ಈ ಮಾಹಿತಿಯ ವಿಶ್ಲೇಷಣೆಗೆ ಬೇಕಾದ ಗಣಕ ಕ್ರಮವನ್ನು ೨೯ ವರ್ಷ ವಯಸ್ಸಿನ ಒಬ್ಬ ಯುವತಿ ಸಾಧಿಸಿದಳು ಎನ್ನುವುದು ಇನ್ನೊಂದು ವಿಶೇಷ. ಇದೇ ರೀತಿಯಲ್ಲಿ ಮತ್ತೊಂದು ಕರೀಬಿಲದ ಮಾಹಿತಿಯನ್ನೂ ಸಂಗ್ರಹಿಸಲಾಗಿದೆ. ಆದರೆ ಅದರ ವೇಗ ಹೆಚ್ಚಾದ್ದರಿಂದ ಅದರ ಚಿತ್ರ ಇನ್ನೂ ಸ್ಪಷ್ಟವಾಗಿ ಸಿಕ್ಕಿಲ್ಲ.

ಒಟ್ಟಾರೆ ಕರೀಬಿಲದ ಚಿತ್ರವನ್ನೂ ತೆಗೆಯಬಹುದು ಎಂಬುದು ಸಿದ್ಧವಾದಂತಾಯಿತು. ಇನ್ನು ನಮಗೆ ತಿಳಿದಿರುವ ಕರೀಬಿಲಗಳೆಲ್ಲದರ ಚಿತ್ರಗಳೂ ಇದೇ ಆಕಾರದವೇ? ಬೇರೆ ಇರಬಹುದೋ? ಹಾಗಿದ್ದರೆ ಅದೇಕೆ? ಚಿತ್ರ ಬೇರೆ ರೀತಿ ಇದ್ದರೆ ನಾವು ಇದುವರೆಗೂ ರೂಪಿಸಿದ ತರ್ಕಗಳಲ್ಲಿ ಏನು ತಪ್ಪಿವೆ? ಇತ್ಯಾದಿ ಹಲವು ಪ್ರಶ್ನೆಗಳು ಏಳಲಿವೆ. ಆ ದಿನಗಳಿಗಾಗಿ ಕಾಯಬೇಕು, ಕಾಯೋಣ.


ಇರುಳುನೋಟದ ಇಲಿ
ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದ ಎನ್ನುವ ಗಾದೆ ಇದೆ. ರಾತ್ರಿಯಲ್ಲಿ ಸ್ಪಷ್ಟವಾಗಿ ಕಂಡ ಬಾವಿಯನ್ನು ಬೆಳಗ್ಗೆ ಕಾಣದೇ ಹೋದ ಮೂರ್ಖ ಎನ್ನುವ ಅರ್ಥ. ನಮಗೆ ಇರುಳಿನಲ್ಲಿ ಏನೂ ಕಾಣಿಸುವುದಿಲ್ಲವಷ್ಟೆ. ಇದಕ್ಕೆ ಕಾರಣ ಇರುಳಿನಲ್ಲಿ ಹಗಲಿನಲ್ಲಿ ಇರುವಷ್ಟು ಬೆಳಕಿಲ್ಲ ಎನ್ನುವುದು ಒಂದು ಕಾರಣ. ಮತ್ತೊಂದು ನಮ್ಮ ಕಣ್ಣಿಗೆ ಇರುಳಿನಲ್ಲಿ ಇರುವ ಬೆಳಕನ್ನು ಕಾಣುವ ಸಾಮರ್ಥ್ಯ ಇಲ್ಲ ಎನ್ನುವುದು ಮತ್ತೊಂದು. ಒಂದು ವೇಳೆ ನಮ್ಮ ಕಣ್ಣಿಗೆ ಇಲ್ಲದ ಈ ಸಾಮರ್ಥ್ಯವನ್ನು ಕೊಟ್ಟರೆ ಹೇಗೆ? ಇರುಳಿನಲ್ಲಿಯೂ ನಮ್ಮ ಕಣ್ಣು ಕಾಣಬಹುದೋ? ಇಂತಹ ಪ್ರಯತ್ನವೊಂದು ನಡೆದ ಸುದ್ದಿಯೊಂದು ಬಂದಿದೆ. ಸೆಲ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಪ್ರಬಂಧವೊಂದರ ಪ್ರಕಾರ ಚೀನಾದ ಹೆಫೈನಲ್ಲಿ ಇರುವ ಚೀನಾ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನರವಿಜ್ಞಾನಿ ಟಿಯಾನ್ ಜುಯಿ ಮತ್ತು ಸಂಗಡಿಗರು ಇಲಿಗಳಿಗೆ ಅವಕೆಂಪು ಕಿರಣಗಳನ್ನು ನೋಡುವ ಸಾಮರ್ಥ್ಯವನ್ನು ಕೊಟ್ಟಿದ್ದಾರಂತೆ. ವಿಶೇಷವಾಗಿ ತಯಾರಿಸಿದ ನ್ಯಾನೊಗುಂಡುಗಳನ್ನು ಇವುಗಳ ಕಣ್ಣುಗಳಿಗೆ ಚುಚ್ಚಿ ಈ ಶಕ್ತಿಯನ್ನು ನೀಡಿದ್ದಾರೆ ಎನ್ನುತ್ತದೆ ಸೆಲ್ ಪತ್ರಿಕೆ.

ಕಣ್ಣಿಗೆ ವಸ್ತುಗಳು ಕಾಣುತ್ತವೆ ಎಂದರೆ ಕಣ್ಣಿನ ಪರದೆಯ ಮೇಲೆ ಅವುಗಳ ಬಿಂಬ ಮೂಡಿದೆ. ಈ ಬಿಂಬದಲ್ಲಿರುವ ಬೆಳಕಿನ ಬಿಂದುಗಳನ್ನು ಅಲ್ಲಿರುವ ಜೀವಕೋಶಗಳು ಗುರುತಿಸಿವೆ. ಅನಂತರ ಆ ಮಾಹಿತಿಯನ್ನು ಮಿದುಳಿಗೆ ರವಾನಿಸಿವೆ ಎಂದರ್ಥ. ಬೆಳಕಿನ ಬಿಂದುಗಳನ್ನು ಗುರುತಿಸಲು ಕಣ್ಣಿನ ಪರದೆಯ ಕೋಶಗಳಲ್ಲಿ ವಿಶೇಷ ಪ್ರೊಟೀನುಗಳಿವೆ. ದುರದೃಷ್ಟವಶಾತ್, ಈ ಪ್ರೊಟೀನುಗಳಿಗೆ ಕಾಮನಬಿಲ್ಲಿನ ಏಳೂ ಬಣ್ಣಗಳನ್ನು ಗುರುತಿಸುವ ಶಕ್ತಿ ಇಲ್ಲ. ಕೇವಲ ಮೂರು ಬಣ್ಣಗಳನ್ನಷ್ಟೆ ಅವು ಗುರುತಿಸಬಲ್ಲುವು. ಆದರೆ ಈ ಮೂರು ಬಣ್ಣದ ಬಿಂದುಗಳ ವಿವಿಧ ವಿನ್ಯಾಸಗಳನ್ನು ನಮ್ಮ ಮಿದುಳು ಸಂಸ್ಕರಿಸಿ ಕಾಮನಬಿಲ್ಲನ್ನು ನೋಡುತ್ತದೆ. ರಾತ್ರಿಯ ಹೊತ್ತು ಇಷ್ಟು ಬಣ್ಣಗಳು ಇಲ್ಲದಿರುವುದರಿಂದ, ಪರದೆಯಲ್ಲಿರುವ ಕೋಶಗಳಲ್ಲಿ ಕೇವಲ ಬೆಳಕಿನ ಪ್ರಖರತೆಯನ್ನಷ್ಟೆ ಗುರುತಿಸುವ ಕೋಶಗಳು ಕಾರ್ಯಪ್ರವೃತ್ತವಾಗಿರುತ್ತವೆ. ಹೀಗಾಗಿ ರಾತ್ರಿಯ ಮಬ್ಬಿನಲ್ಲಿ ನಮಗೆ ಕಪ್ಪು, ಕೆಂಪು, ಹಸಿರು ಎಲ್ಲವೂ ಬೂದು ಬಣ್ಣವಾಗಿಯೇ ಕಾಣುತ್ತವೆ. ಅರ್ಥಾತ್, ಕಪ್ಪು-ಬಿಳುಪು ಚಿತ್ರಗಳಷ್ಟೆ ಕಾಣೂತ್ತವೆ.

ಈ ಕೋಶಗಳು ಬೇರೆ ಬೆಳಕನ್ನೂ ಅರ್ಥಾತ್ ಕೆಂಪು ಬಣ್ಣಕ್ಕಿಂತಲೂ ತರಂಗದೂರ ಕಡಿಮೆ ಇರುವ ಅವಕೆಂಪು ಕಿರಣಗಳನ್ನೂ ಪತ್ತೆ ಮಾಡುವಂತೆ ಮಾಡಿದರೆ ಹೇಗೆ? ಹಾಗೆ ಮಾಡಬಹುದೇ? ಈ ಪ್ರಶ್ನೆ ಕೇಳಿದ ಜುಯಿ ಮತ್ತು ತಂಡ ೯೮೦ ನ್ಯಾನೊಮೀಟರು ತರಂಗದೂರವಿರುವ ಬೆಳಕಿಗೆ ಸ್ಪಂದಿಸುವ ನ್ಯಾನೊಕಣಗಳನ್ನು ಸೃಷ್ಟಿಸಿತು. ಅವಕೆಂಪು ಕಿರಣಗಳು ಬಿದ್ದಾಗ ಅದನ್ನು ಗ್ರಹಿಸಿದ ಕಣಗಳು ಅದರಲ್ಲಿನ ಸ್ವಲ್ಪ ಶಕ್ತಿಯನ್ನು ಹೀರಿ ಉಳಿದವನ್ನು ಹಸಿರು ಬೆಳಕಿನ ರೂಪದಲ್ಲಿ ಸೂಸುತ್ತವೆ. ಅರ್ಥಾತ್, ಅವಕೆಂಪುಕಿರಣಗಳ ಅಡಿಯಲ್ಲಿ ಇವು ಹಸಿರಾಗಿ ತೋರುತ್ತವೆ. ಅನಂತರ ಕಣ್ಣಿನ ಪರದೆಯಲ್ಲಿರುವ ಬೆಳಕನ್ನು ಗ್ರಹಿಸುವ ಕೋಶಗಳೀಗೆ ಅಂಟಿಕೊಳ್ಳುವ ಪ್ರೊಟೀನನ್ನು ಈ ನ್ಯಾನೊಕಣಗಳಿಗೆ ಜೋಡಿಸಿತು. ಹೀಗೆ ತಯಾರಿಸಿದ ನ್ಯಾನೊಕಣಗಳನ್ನು ಇಲಿಯ ಕಣ್ಣಿನೊಳಗೆ ಚುಚ್ಚಿತು. ಅನಂತರ ಇಲಿಯ ಕಣ್ಣಿನೊಳಗೆ ಅವಕೆಂಪುಕಿರಣಗಳನ್ನು ಹಾಯಿಸಿ, ಈ ಕೋಶಗಳು ಅದಕ್ಕೆ ಸ್ಪಂದಿಸುತ್ತವೆಯೋ ಎಂದು ಪರೀಕ್ಷಿಸಿತು. ಒಂದೊಂದು ಕೋಶವನ್ನೇ ಪರೀಕ್ಷಿಸಿದರೂ, ಅವು ಈ ಅವಕೆಂಪು ಕಿರಣವನ್ನು ಪತ್ತೆ ಮಾಡುತ್ತಿದ್ದುವಂತೆ.

ಕೋಶಗಳು ಸ್ಪಂದಿಸಿದ ಮಾತ್ರಕ್ಕೆ ಇಲಿಗಳು ವಸ್ತುವನ್ನು ಕಂಡವು ಎಂದು ಹೇಳಲಾಗುವುದಿಲ್ಲವಷ್ಟೆ. ಇದಕ್ಕಾಗಿ ಇವರು ಇನ್ನೂ ಒಂದು ಪ್ರಯೋಗ ನಡೆಸಿದ್ದಾರೆ. ನ್ಯಾನೊ ಕಣಗಳನ್ನು ಚುಚ್ಚಿದ ಇಲಿಗಳಿಗೂ, ಮತ್ತೊಂದು ಸಾಮಾನ್ಯ ಇಲಿಗಳ ತಂಡಕ್ಕೂ ತರಬೇತಿ ನೀಡಿದ್ದಾರೆ. ಹಸಿರು ಬಣ್ಣದ ನಿರ್ದಿಷ್ಟ ಆಕಾರವನ್ನು ತೋರಿಸಿ, ವಿದ್ಯುತ್ ಶಾಕ್ ನೀಡಿದ್ದಾರೆ. ಅರ್ಥಾತ್, ಆ ಆಕಾರ ಕಂಡಾಗ ಇಲಿಗಳು ಬೆಚ್ಚುವಂತೆ ಬೆದರುವಂತೆ ಕಲಿಸಿದ್ದಾರೆ. ಅನಂತರ ಎರಡೂ ಗುಂಪಿಗೂ, ಅದೇ ಆಕಾರವನ್ನು ತೋರಿಸುವ ಅವಕೆಂಪು ಕಿರಣಗಳ ಚಿತ್ರಗಳನ್ನು ತೋರಿಸಿದ್ದಾರೆ. ಹೀಗೆ ಮಾಡಿದಾಗ, ನ್ಯಾನೊಕಣಗಳನ್ನು ಚುಚ್ಚಿದ ಇಲಿಗಳಷ್ಟೆ ಬೆದರಿದುವಂತೆ. ಸಾಮಾನ್ಯ ಇಲಿಗಳಿಗೆ ಈ ಚಿತ್ರ ಕಾಣಲೇ ಇಲ್ಲ.

ಅರ್ಥಾತ್, ನ್ಯಾನೊಕಣಗಳನ್ನು ಚುಚ್ಚಿಸಿಕೊಂಡ ಇಲಿಗಳು ಅವಕೆಂಪು ಕಿರಣಗಳ ಚಿತ್ರಗಳನ್ನು ಕಾಣುತ್ತಿದ್ದುವು. ಅವಕೆಂಪು ಕಿರಣಗಳು ಎಂದರೆ ಮತ್ತೇನಲ್ಲ. ಉಷ್ಣದ ಕಿರಣಗಳು ಎನ್ನಬಹುದು. ನಮ್ಮ ಮೈಯ ಬಿಸಿ ಕೂಡ ಅವಕೆಂಪು ಕಿರಣಗಳಾಗಿ ತೋರುತ್ತದೆ. ಹಾಗಂತ ಜುಯಿ ತಂಡದ ಉದ್ದೇಶ ಇಲಿಗಳು ನಮ್ಮನ್ನು ಕಂಡು ತಪ್ಪಿಸಿಕೊಳ್ಳಲಿ ಅನ್ನುವುದಲ್ಲ. ಬದಲಿಗೆ, ಈ ತಂತ್ರವನ್ನು ಬಳಸಿ, ಕೆಲವು ಬಣ್ಣಗಳನ್ನು ನೋಡಲಾಗದ ಅದೃಷ್ಟ ಹೀನರಿಗೆ, ಅಥವಾ ಪ್ರೊಟೀನಿನ ದೋಷಗಳೀಂದಾಗಿ ಬೆಳಕನ್ನೇ ಗುರುತಿಸಲಾಗದಂತಹ ಅಂಧರಿಗೆ ದೃಷ್ಟಿ ನೀಡ ಬಹುದೇ? ಅಥವಾ ಇರುಳಿನಲ್ಲೂ ನೋಡಬಲ್ಲ ಸೂಪರ್ ಕಣ್ಣಿನವರನ್ನೂ ಸೃಷ್ಟಿಸಬಹುದು. ಆದರೆ ಹೀಗೆ ಕೃತಕವಾಗಿ ಒದಗಿದ ದೃಷ್ಟಿಯಿಂದ ಕಾಣುವ ನೋಟಗಳು ಹೇಗಿರುತ್ತವೆಯೋ? ಏನನ್ನಿಸುತ್ತವೆಯೋ? ಹೇಳುವವರಿಲ್ಲ.
Y. Ma et al. Cell http:// doi.org/gfv5c8; 2019


ಗಗನಯಾನಿ ಮತ್ತು ಅನುವಂಶೀಯತೆ
ಚುನಾವಣೆಯಲ್ಲಿ ಯಾರಾದರೂ ಗೆಲ್ಲಲಿ, ಗಗನಯಾನದ ಯೋಜನೆ ಮಾತ್ರ ಮುಂದುವರೆಯುತ್ತದೆ. ಇನ್ನೈದು ವರ್ಷಗಳಲ್ಲಿ ಗಗನದಲ್ಲಿ ಭಾರತೀಯರು ತಮ್ಮದೇ ಸಾಮರ್ಥ್ಯದಿಂದ ಹಾರಾಡುವುದನ್ನು ನಾವು ಕಾಣಬಹುದು. ಅದೇನೋ ಸರಿ. ಆದರೆ ಹೀಗೆ ಅಂತರಿಕ್ಷಯಾನ ಮಾಡುವವರಿಗೆ ಅಪಾಯಗಳಿಲ್ಲವೇ? ಹೀಗೆಂದ ಕೂಡಲೆ ತಟ್ಟನೆ ಅಯ್ಯೋ, ಒಂದೆರಡು ದಿನದ ಪ್ರಯಾಣ ಅಷ್ಟೆ. ಅದರಿಂದೇನೂ ನಷ್ಟವಿಲ್ಲ ಎಂದು ಉತ್ತರ ಬರುತ್ತದೆ. ಹೌದು. ೧೯೬೦ರಿಂದ ಇಂದಿನವರೆವಿಗೂ ಸುಮಾರು ೬೦೦ ಮಂದಿ ಅಂತರಿಕ್ಷಯಾನವನ್ನು ಮಾಡಿದ್ದಾರೆ. ಇವರಲ್ಲಿ ಅಮೆರಿಕ, ಫ್ರಾನ್ಸ್, ಜಪಾನು, ಚೀನಾ, ಇಂಗ್ಲೆಂಡು, ರಶ್ಯಾದ ಗಗನಯಾನಿಗಳೇ ಹೆಚ್ಚು. ನಮ್ಮವರೇ ಆದ ರಾಕೇಶ್ ಶರ್ಮ, ಕಲ್ಪನಾ ಚಾವ್ಲ ಹಾಗೂ ಸುನೀತಾ ವಿಲಯಂಸರನ್ನೂ ಸೇರಿಸಿಕೊಳ್ಳಿ.
ಆದರೆ ಇವರ್ಯಾರೂ ಬಲು ದೀರ್ಘ ಕಾಲ ಅಂತರಿಕ್ಷದಲ್ಲಿ ಇರಲಿಲ್ಲ. ಕೆಲವು ತಿಂಗಳ ಕಾಲ ಅಲ್ಲಿದ್ದು ಮರಳಿದರಷ್ಟೆ. ಹಾಗೊಂದು ವೇಳೆ ನಮ್ಮ ಗಗನಯಾನ, ಮಂಗಳಯಾತ್ರೆ ಆದರೆ? ಮಂಗಳನಲ್ಲಿಗೆ ಮನುಷ್ಯ ಹೋಗಿ ಬಂದರೆ? ಎನ್ನುವ ಪ್ರಶ್ನೆಗಳು ಎದ್ದಿವೆ. ಮಂಗಳನವರೆಗೆ ಹೋಗಲು ಬೇಕಾದ ತಾಂತ್ರಿಕ ಸಾಮರ್ಥ್ಯಗಳು ಈಗಾಗಲೇ ಸಿದ್ಧವಿವೆ. ಪ್ರಶ್ನೆ ಇರುವುದು, ಹೋಗಲಾದೀತೇ ಎಂದಲ್ಲ. ಹೋದರೆ ಏನಾಗಬಹುದು? ಮಂಗಳಯಾತ್ರೆ ಮಾಡಲು ಬೇಕಾದ ದೀರ್ಘಾವಧಿಯ ಅಂತರಿಕ್ಷ ವಾಸವನ್ನು ಯಾತ್ರಿಗಳು ತಾಳಿಕೊಳ್ಳಬಲ್ಲರೇ? ಹಾಗೊಮ್ಮೆ ಅವರು ತಾಳಿಕೊಂಡರೂ, ಅದರಿಂದ ಅವರ ದೇಹದ ಮೇಲಾಗುವ ಪರಿಣಾಮಗಳು ಅವರ ಮಕ್ಕಳನ್ನು ಬಾಧಿಸಬಹುದೇ? ಹೀಗಾದರೆ ನಾವು ಮುಂದೆ ಭೂಮಿ ತುಂಬಿ ತುಳುಕಿದಾಗ, ಮಂಗಳಯಾತ್ರೆ ಮಾಡಿ ಅಲ್ಲಿ ನಮ್ಮ ವಸಾಹತು ಸ್ಥಾಪಿಸಬೇಕು ಎನ್ನುವ ಕನಸಿಗೆ ಬೆಂಕಿ ಬಿದ್ದಂತಾಗುತ್ತದಲ್ಲ? ಇಗೋ ಈ ಸಂದೇಹಗಳಿಗೆ ಉತ್ತರ ಹುಡುಕಲು ಹೊರಟ ಮೊತ್ತ ಮೊದಲ ದೀರ್ಘಾವಧಿ ಗಗನಯಾತ್ರೆಯ ಫಲಿತಾಂಶಗಳು ಬಂದಿವೆ. ಸೈನ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಈ ಪ್ರಯೋಗದ ವಿವರಗಳು ಹಲವು ಕೌತುಕಮಯ ವಿಷಯಗಳನ್ನು ಹೊರಚೆಲ್ಲಿವೆ.

ಅಮೆರಿಕೆಯ ನಾಸಾ ಸಂಸ್ಥೆಯು ನಡೆಸಿದ ಈ ಪ್ರಯೋಗಕ್ಕೆ ತದ್ರೂಪಿಯಾಗಿರುವ ಅವಳಿಗಳನ್ನು ಬಳಸಿಕೊಳ್ಳಲಾಯಿತು. ಅವಳಿಗಳೇ ಏಕೆ ಎಂದರೆ, ದೀರ್ಘಾವಧಿಯ ಅಂತರಿಕ್ಷ ಪ್ರವಾಸದಲ್ಲಿ ನಮಗೆ ಎದುರಾಗುವ ತೊಂದರೆಗಳು ಕೇವಲ ಆರೋಗ್ಯದ ಸಮಸ್ಯೆಗಳಷ್ಟೆ ಅಲ್ಲ. ಮಾನಸಿಕವಾಗಿಯೂ ತೊಂದರೆಗಳುಂಟಾಗಬಹುದು. ಜೊತೆಗೆ ಅನುವಂಶೀಯವಾಗಿ ಕಾಡುವಂಥವೂ ಉಂಟಾಗಬಹುದು. ದೈಹಿಕವಾಗಿ ಹಾಗೂ ಬಹುತೇಕ ಜೈವರಾಸಾಯನಿಕ ಕ್ರಿಯೆಗಳು ಅವಳಿಗಳಲ್ಲಿ ಏಕತೆರನಾಗಿರುವುದರಿಂದ ಅವರನ್ನು ಅಧ್ಯಯನಕ್ಕೆ ಆಯ್ದುಕೊಳ್ಳಲಾಯಿತು. ಇಬ್ಬರಲ್ಲಿ ಒಬ್ಬರು ಅಂತರಿಕ್ಷ ಯಾನ ಮಾಡಿದರೆ, ಮತ್ತೊಬ್ಬರು ಭೂಮಿಯಲ್ಲಿದ್ದೇ ಅದೇ ತೆರನ ಎಲ್ಲ ಪರೀಕ್ಷೆಗಳಿಗೂ ತಮ್ಮನ್ನು ಒಡ್ಡಿಕೊಂಡರು. ೩೪೦ ದಿನಗಳ ಕಾಲ ನಿತ್ಯವೂ ಇಬ್ಬರನ್ನೂ ಅವರ ಗ್ರಹಣಶೀಲತೆ, ವಿವಿಧ ಜೀನುಗಳ ಚಟುವಟಿಕೆಗಳು, ಜೀವಕೋಶಗಳಲ್ಲಿ ಅನುವಂಶೀಯವಾಗಿಲ್ಲದ ಬದಲಾವಣೆಗಳು, ರೋಗನಿರೋಧಕತೆ, ಒಟ್ಟಾರೆ ಪ್ರೊಟೀನುಗಳು, ದೇಹದಲ್ಲಿರುವ ಸೂಕ್ಷ್ಮಜೀವಿಗಳು, ನಡೆಯುತ್ತಿರುವ ಜೈವಿಕ ಕ್ರಿಯೆಗಳು, ಹಾಗೂ ಜೀವಕೋಶದಲ್ಲಿರುವ ವರ್ಣತಂತುಗಳ ತುದಿ ಅಥವಾ ಟೀಲೋಮಿಯರುಗಳ ಅಧ್ಯಯನ ನಡೆಸಲಾಯಿತು. ವಯಸ್ಸಾದಂತೆ ಟೀಲೋಮಿಯರುಗಳ ಉದ್ದ ಕಡಿಮೆ ಆಗುವುದರಿಂದ, ಇದನ್ನೂ ಅಧ್ಯಯನದಲ್ಲಿ ಸೇರಿಸಲಾಯಿತು. ಇವೆಲ್ಲವನ್ನೂ ಒಟ್ಟಾಗಿಸಿ, ಇಬ್ಬರೂ ಅವಳಿಗಳಲ್ಲಿ ಏನಾದರೂ ವ್ಯತ್ಯಾಸಗಳು ಇರಬಹುದೋ ಎಂದು ಪರಿಶೀಲಿಸಲಾಗಿದೆ. ಭೂಮಿಯಲ್ಲೇ ಇದ್ದ ಅವಳಿಯೂ, ಅಂತರಿಕ್ಷದಲ್ಲಿ ಇದ್ದವರಂತೆಯೇ ಅದೇ ಸಮಯದಲ್ಲಿ, ಅದೇ ಬಗೆಯ ಚಟುವಟಿಕೆಗಳನ್ನು ಕೈಗೊಳ್ಳಬೇಕಿತ್ತು.

ಈ ಎಲ್ಲ ಅಧ್ಯಯನಗಳನ್ನೂ ಎರಡು ವರ್ಷಗಳ ಕಾಲ ಅಂದರೆ ಅಂತರಿಕ್ಷದಲ್ಲಿರುವ ಅವಳಿ ಭೂಮಿಗೆ ಮರಳಿದ ಒಂದು ವರ್ಷದ ನಂತರವೂ ನಡೆಸಲಾಯಿತು. ಫಲಿತಾಂಶ: ಒಂದು ವರ್ಷದ ನಂತರ ಈ ಎಲ್ಲ ಪರೀಕ್ಷೆಗಳ ಫಲಿತಾಂಶಗಳೂ ಅಂತರಿಕ್ಷ ಯಾನಕ್ಕಿಂತಲೂ ಮೊದಲು ಇದ್ದ ಮಟ್ಟಕ್ಕೇ ಮರಳಿದುವು. ಅರ್ಥಾತ್, ಅಂತರಿಕ್ಷ ಯಾನದಿಂದ ಮರಳಿ ಬಂದವರು ಯಥಾಸ್ಥಿತಿಗೆ ಮರಳುತ್ತಾರೆ. ಅವರ ಅನುವಂಶೀಯ ಗುಣಗಳಲ್ಲಿ ಅಂತರಿಕ್ಷಯಾನದಿಂದಾಗಿ ಕೆಲವು ಬದಲಾವಣೆಗಳು ಆಗಿದ್ದರೂ, ಅವು ಯಾವುವೂ ನೆಲೆಯಾಗಿ ನಿಲ್ಲಲಿಲ್ಲ. ಬದಲಾವಣೆ ಆಗಿದ್ದು ಒಂದೇ ಒಂದು ಅಂಶದಲ್ಲಿ ಎನ್ನುತ್ತದೆ ನಾಸಾ. ಅದು ದೇಹದಲ್ಲಿರುವ ಸೂಕ್ಷ್ಮಜೀವಿಗಳ ಸಂಖ್ಯೆ ಹಾಗೂ ವೈವಿಧ್ಯ. ಇದನ್ನು ಆಹಾರ ಹಾಗೂ ಬೇರೆ ಚಿಕಿತ್ಸೆಗಳಿಂದ ಪರಿಹರಿಸಬಹುದು. ಅನುವಂಶೀಯ ಗುಣಗಳಲ್ಲಿ ಅರ್ಥಾತ್ ಕೆಲವು ಜೀನುಗಳ ಚಟುವಟಿಕೆ ಬದಲಾಗಿತ್ತು. ಆದರೆ ಈ ಬದಲಾವಣೆ ಹಾಗೆಯೇ ಉಳಿಯುತ್ತವೆಯೋ ಇಲ್ಲವೋ ಇನ್ನು ಮುಂದಷ್ಟೆ ತಿಳಿಯುತ್ತದೆ. ಹಾಗೆಯೇ ಒಂದು ವರ್ಷಕ್ಕಿಂತಲೂ ದೀರ್ಘಾವಧಿಯ ಪ್ರವಾಸದ ನಂತರವೂ ಇದೇ ರೀತಿಯ ಬದಲಾವಣೆಗಳು ಕಾಣುತ್ತವೆಯೋ, ಹಾಗೆಯೇ ಉಳಿಯುತ್ತವೆಯೋ ಎನ್ನುವುದನ್ನು ಸದ್ಯಕ್ಕೆ ಊಹಿಸಬಹುದು ಅಷ್ಟೆ. ಖಚಿತಪಡಿಸಿಕೊಳ್ಳಲು ಇನ್ನಷ್ಟು ವಿಸ್ತೃತವಾದ ಅಧ್ಯಯನ ಬೇಕಿದೆ ಎನ್ನುತ್ತದೆ ನಾಸಾ.
ಒಟ್ಟಾರೆ ಅರ್ಥ ಇಷ್ಟೆ. ಭೂಮಿಗೆ ಒಂದು ವರ್ಷದ ನಂತರ ವಾಪಸು ಮರಳುವುದಾದರೆ ಮಂಗಳಯಾತ್ರೆಗೆ ಯಾವುದೇ ಚಿಂತೆಯಿಲ್ಲದೆ ಹೊರಡಬಹುದು. ಅದಕ್ಕೂ ದೀರ್ಘಾವಧಿ ಆದರೆ ಏನಾಗುತ್ತದೋ ಹೇಳಬರುವುದಿಲ್ಲ.

Garrett-Bakelman et al., Science 364, 144 (2019)


ತುಂತುರು ಸುದ್ದಿಗಳು.
• ಇಸ್ರೇಲಿನ ವಿಜ್ಞಾನಿಗಳು ಹಾರಿಸಿದ್ದ ಬೆರೆಶೀತ್ ಎನ್ನುವ ಚಂದ್ರ ಶೋಧ ನೌಕೆ ಹಾದಿ ತಪ್ಪಿ ಚಂದ್ರನ ಮೇಲೆ ಅಪ್ಪಳಿಸಿದೆ. ನಿನ್ನೆ ಇದು ಚಂದ್ರನ ಮೇಲೆ ಇಳಿದು ಅಲ್ಲಿನ ನೆಲವನ್ನು ಶೋಧಿಸಬೇಕಿತ್ತು. ಆದರೆ ಇನ್ನೇನು ನೆಲಕ್ಕೆ ಇಳಿಯಬೇಕು ಎನ್ನುವ ಹೊತ್ತಿನಲ್ಲಿ ಇದರ ಯಂತ್ರ ಕೆಟ್ಟು, ನೌಕೆಯ ಚಂದ್ರನ ಮೇಲ್ಮೈಗೆ ಅಪ್ಪಳಿಸಿ ಚೂರುಚೂರಾಗಿದೆ. ಚಂದ್ರನನ್ನು ಮುಟ್ಟುವ ಸಾಹಸ ಮಾಡಿದ ಮೊತ್ತ ಮೊದಲ ಖಾಸಗಿ ನೌಕೆ ಇದಾಗಿತ್ತು.
• ಮನುಷ್ಯರ ಪೂರ್ವಜರ ಕುಲಕ್ಕೆ ಸಂಬಂಧಿಸಿದ ಮತ್ತೊಂದು ಹೊಸ ಜೀವಿಯ ಪಳೆಯುಳಿಕೆಗಳನ್ನು ಇಂಡೋನೇಶಿಯಾದಲ್ಲಿ ಗುರುತಿಸಲಾಗಿದೆ. . ಹೋಮೋ ಲುಜೋನೆನ್ಸಿಸ್ ಎಂದು ಹೆಸರಿಸಿರುವ ಈ ಜೀವಿಯ ಪಳೆಯುಳೀಕೆಗಳು ಸಾಂರು ೫೦೦೦೦ ದಿಂದ ೭೦೦೦೦ ವರ್ಷಗಳಷ್ಟು ಹಳೆಯವೆಂದು ಪತ್ತೆ ಯಾಗಿದೆ. ಮನುಷ್ಯನಂತೆಯೇ ಎರಡು ಕಾಲಿನಲ್ಲಿ ನಡೆಯುತ್ತಿದ್ದ, ನಮಗಿಂತಲೂ ಸಾಕಷ್ಟು ಕುಳ್ಳಗಿದ್ದ ಈ ಜೀವಿ ಮರವಾಸಿ ಆಗಿದ್ದಿರಬಹುದು ಎಂದು ಊಹಿಸಲಾಗಿದೆ. ಇಂತಹ ಹಲವಾರು ಜೀವಿಗಳಲ್ಲಿ ಈಗ ಬದುಕಿ ಉಳಿದಿರುವುದು ಕೇವಲ ನಾವಷ್ಟೆ. ಈ ಜೀವಿಯ ಶೋಧದಿಂದಾಗಿ, ಮನುಷ್ಯ ಹುಟ್ಟಿದ್ದು ಆಫ್ರಿಕಾದಲ್ಲಿ. ಅಲ್ಲಿಂದ ಬೇರೆ ಖಂಡಗಳಿಗೆ ವಲಸೆ ಹೋದನೆಂಬ ತರ್ಕವನ್ನು ಮರುಪರಿಶೀಲಿಸಬೇಕಾಗಬಹುದು.
• ಮೊತ್ತ ಮೊದಲ ಬಾರಿಗೆ ಕುಲಾಂತರಿ ಹಲ್ಲಿಯೊಂದನ್ನು ಸೃಷ್ಟಿಸಲಾಗಿದೆ. ಸಾಧಾರಣವಾಗಿ ಮೈಯೆಲ್ಲ ಬಣ್ಣ, ಬಣ್ಣವಾಗಿರುವ ಹಲ್ಲಿಯನ್ನು ಕ್ರಿಸ್ಪರ್ ತಂತ್ರವನ್ನು ಬಳಸಿ ಬಣ್ಣವೇ ತಯಾರಿಸದಂತೆ ಮಾಡಿದ್ದು, ಅವು ಬಿಳಿಚಿಕೊಂಡ ಅಲ್ಬಿನೋಗಳಾಗಿ ಹುಟ್ಟಿವೆ.


ಬೀಗಲ್‌ ಸಾಹಸಯಾನ
ಸಂಚಿಕೆ ೩೨
ಮುಂದುವರೆದುದು
ಈ ಪ್ರಾಣಿಯದೊಂದು ಕೌತುಕಮಯ ಸಂಗತಿ ಎಂದರೆ ಟಗರಿನಿಂದ ಸೂಸುವ ಗಾಢವಾದ ಅಸಹ್ಯ ವಾಸನೆ. ಅದನ್ನು ವಿವರಿಸಲು ಬಾರದು. ಇದೀಗ ಪ್ರಾಣಿಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಟ್ಟಿರುವ ಪ್ರಾಣಿಯ ದೇಹದ ಚರ್ಮವನ್ನು ಅದಕ್ಕಾಗಿ ಸುಲಿಯುವಾಗ ವಾಕರಿಕೆಯಿಂದ ನಾನು ಸೋತು ಸುಣ್ಣವಾಗಿದ್ದೆ. ಆ ಚರ್ಮವನ್ನು ರೇಷ್ಮೆಯ ಕರವಸ್ತ್ರದಲ್ಲಿ ಸುತ್ತಿ ಮನೆಗೆ ಕೊಂಡೊಯ್ದಿದ್ದೆ. ಚೆನ್ನಾಗಿ ಒಗೆದ ಮೇಲೆ ಆ ಕರವಸ್ತ್ರವನ್ನು ಬಳಸಿದ್ದೆ. ನಾನು ಅದನ್ನು ಹಲವಾರು ಬಾರಿ ತಿಕ್ಕಿ, ತೀಡಿ ಒಗೆದ ಮೇಲೆಯೂ ಮಡಿಕೆ ಬಿಡಿಚಿದರೆ ಸಾಕು ಆ ವಾಸನೆ ಮೂಗಿಗೆ ಅಡರುತ್ತಿತ್ತು. ಒಂದು ವರ್ಷ ಏಳು ತಿಂಗಳು ಕಳೆದ ಮೇಲೂ ಆ ವಾಸನೆಯನ್ನು ಕರವಸ್ತ್ರ ಬೀರುತ್ತಿತ್ತು. ಅದರಲ್ಲಿದ್ದ ಯಾವುದೋ ವಸ್ತು ಕರವಸ್ತ್ರಕ್ಕೆ ಶಾಶ್ವತವಾಗಿ ಅಂಟಿಕೊಂಡ ಹಾಗಿತ್ತು. ಆದರೂ ಆ ವಸ್ತು ಬಲು ಬಾಷ್ಪಶೀಲವಿರಬೇಕು. ಕೆಲವೊಮ್ಮೆ ಈ ಜಿಂಕೆಗಳ ಹಿಂಡಿನಿಂದ ಸುಮಾರು ಅರ್ಧ ಮೈಲಿ ದೂರದಲ್ಲಿ ಇದ್ದಾಗಲೂ, ಅತ್ತಲಿಂದ ಸುಳಿದ ಗಾಳಿ ಯನ್ನು ಮೂಸಿದಾಗ ಅದರಲ್ಲೆಲ್ಲಾ ಆ ಸ್ರಾವದ ಘಮಲು ತುಂಬಿಕೊಂಡಿರುತ್ತಿತ್ತು. ಟಗರಿನ ಕೊಂಬು ಚರ್ಮವನ್ನು ಕಳೆದುಕೊಂಡು ಚೆನ್ನಾಗಿ ಬಲಿತಿದ್ದಾಗ ಈ ಘಮಲು ಗಾಢವಾಗಿರುತ್ತದೆ ಎನ್ನುವುದು ನನ್ನ ನಂಬಿಕೆ. ಹೀಗಿದ್ದಾಗ ಅದರ ಮಾಂಸ ತಿನ್ನಲಾಗದ ಸ್ಥಿತಿಯಲ್ಲಿರುತ್ತದೆ. ಆದರೆ ಗಾಚೋಗಳ ಪ್ರಕಾರ ಆ ಮಾಂಸವನ್ನು ಸ್ವಲ್ಪ ಸಮಯ ಹೊಸ ಮಣ್ಣಿನಲ್ಲಿ ಹೂತಿಟ್ಟರೆ ವಾಸನೆ ಮಾಯವಾಗಿ ಬಿಡುತ್ತದೆಯಂತೆ. ಉತ್ತರ ಸ್ಕಾಟ್ಲ್ಯಾಂಡಿನ ಬೆಸ್ತರುಗಳೂ ಮೀನು ಹಿಡಿಯುವ ಹಕ್ಕಿಗಳ ಕೊಳೆತ ಶವಗಳನ್ನು ಹೀಗೆಯೇ ಸಂಸ್ಕರಿಸುತ್ತಾರೆ ಎಂದು ಎಲ್ಲೋ ಓದಿದ ನೆನೆಪಾಗುತ್ತಿದೆ.

ರೋಡೆಂಶಿಯಾ ಅಥವಾ ದಂಶಕಗಣಕ್ಕೆ ಸೇರಿದ ಪ್ರಾಣಿಗಳ ಪ್ರಭೇದಗಳು ಬಲು ಹೆಚ್ಚು. ಇಲಿಗಳಲ್ಲಿಯೇ ನಾನು ಏನಿಲ್ಲವೆಂದರೂ ಎಂಟಕ್ಕೆ ಕಡಿಮೆ ಇಲ್ಲದ ಪ್ರಭೇದಗಳನ್ನು ಕಂಡಿದ್ದೇನೆ. ಹಲ್ಲಿನಿಂದ ಕೊರೆಯುವ ಪ್ರಾಣಿಗಳಲ್ಲೇ ಪ್ರಪಂಚದಲ್ಲಿ ಅತಿ ದೊಡ್ಡದೆನ್ನಿಸಿದ ಹೈಡ್ರೊಖೀರಸ್‌ ಕೇಪಿಬಾರಾ, ಅಥವಾ ನೀರು ಹಂದಿಯೂ ಇಲ್ಲಿ ಸರ್ವೇ ಸಾಮಾನ್ಯ. ನಾನು ಮೊಂಟೆ ವೀಡಿಯೋದಲ್ಲಿ ಬೇಟೆಯಾಡಿದ ಹಂದಿಯೊಂದು ತೊಂಭತ್ತೆಂಟು ಪೌಂಡು ತೂಕವಿತ್ತು. ಮೂಗಿನಿಂದ ಬಾಲದವರೆಗೆ ಮೂರು ಅಡಿ ಎರಡಿಂಚು ಉದ್ದವೂ, ಮೂರು ಅಡಿ ಎಂಟಿಂಚೂ ಸುತ್ತಳತೆಯೂ ಇತ್ತು. ನೀರು ಉಪ್ಪಪ್ಪಾಗಿರುವ ಪ್ಲಾಟಾದ ಮುಖಜ ಭೂಮಿಗೆ ಈ ಮಹಾ ದಂಶಕಗಳು ಆಗಾಗ್ಗೆ ಅಡ್ಡಾಡಲು ಬರುತ್ತವೆ. ಆದರೆ ಸಿಹಿನೀರಿನ ಕೊಳ, ಸರೋವರಗಳ ಅಂಚಿನಲ್ಲಿ ಇವುಗಳ ಸಂಖ್ಯೆ ಇನ್ನೂ ಹೆಚ್ಚು. ಮಾಲ್ಡೊನಾಡೋದ ಬಳಿ ಮೂರ್ನಾಲ್ಕು ಪ್ರಾಣಿಗಳು ಒಟ್ಟಿಗೇ ಇರುವುದನ್ನು ಕಾಣಬಹುದು. ಹಗಲಿನಲ್ಲಿ ಅವು ಜಲಸಸ್ಯಗಳ ನಡುವೆ ಮಲಗಿಯೋ ಅಥವಾ ಹುಲ್ಲು ಬಯಲಿನಲ್ಲಿ ಆಹಾರ ಹುಡುಕುತ್ತಲೋ ಇರುವುದನ್ನು ಕಾಣಬಹುದು. ದೂರದಿಂದ ನೋಡಲು ನಡೆ ಹಾಗೂ ಬಣ್ಣದಲ್ಲಿ ಇವು ಹಂದಿಗಳನ್ನೇ ಹೋಲುತ್ತವೆ. ಆದರೆ ಕುಕ್ಕರುಗಾಲಿನಲ್ಲಿ ಕುಳಿತು, ಕುತೂಹಲದಿಂದ ಒಕ್ಕಣ್ಣಿನಿಂದಲೇ ಕೆಕ್ಕರಿಸುವಾಗ ತಮ್ಮದೇ ಗಣದ ಮೊಲ, ಕೇವೀಗಳಂತೆಯೇ ಕಾಣುತ್ತವೆ. ಆಳವಾದ ಅವುಗಳ ದವಡೆಯಿಂದಾಗಿ ಮುಂದಿನಿಂದಲೂ, ಬದಿಯಿಂದಲೋ ನೋಡುವುದಕ್ಕೆ ವಿಚಿತ್ರವೆನ್ನಿಸುತ್ತವೆ. ಮಾಲ್ಡೊನಾಡೋದಲ್ಲಿದ್ದ ಈ ಪ್ರಾಣಿಗಳು ಬಲು ಸಾಧು. ನಾನು ಎಚ್ಚರಿಕೆಯಿಂದ ಸದ್ದಿಲ್ಲದೆ ಇಂತಹ ನಾಲ್ಕು ಪ್ರಾಣಿಗಳಿಗೆ ಕೇವಲ ಮೂರು ಗಜ ಸಮೀಪಕ್ಕೂ ಹೋಗಿದ್ದುಂಟು. ಈ ಸಾಧುತನಕ್ಕೆ ಕಾರಣ ಬಹುಶಃ ಇಲ್ಲಿದ್ದ ಚಿರತೆಯ ಜಾತಿಯ ಜಾಗುವಾರನ್ನು ಹೊರಗಟ್ಟಿ ಕೆಲವು ವರ್ಷಗಳಾಗಿರುವುದೂ, ಮತ್ತು ಈ ಪ್ರಾಣಿಯನ್ನು ಬೇಟೆಯಾಡುವುದರಿಂದ ಲಾಭವೇನೂ ಇಲ್ಲ ಎಂದು ಗಾಚೋಗಳು ಭಾವಿಸಿರುವುದೂ ಕಾರಣವಿರಬಹುದು. ನಾನು ಹತ್ತಿರ, ಹತ್ತಿರ ಸರಿಯುತ್ತಿದ್ದಂತೆ ಅವು ತಮಗೇ ವಿಶಿಷ್ಟವಾದ ಸದ್ದನ್ನು ಮಾಡಲು ತೊಡಗಿದುವು. ಅದೇನೂ ಬೆದರಿಸುವಷ್ಟು ದೊಡ್ಡ ಸದ್ದಲ್ಲ. ಸಣ್ಣನೆ ಗುರುಗುಟ್ಟುವ ಸದ್ದು. ಇದ್ದಕ್ಕಿದ್ದ ಹಾಗೆ ಬಾಯಿಯಿಂದ ಗಾಳಿ ಹೊರಬಿದ್ದಾಗ ಆಗುವ ಸದ್ದು. ನಾನು ಕೇಳಿರುವ ಇದೇ ರೀತಿಯ ಸದ್ದಿನಲ್ಲಿ ಸಣ್ಣ ನಾಯಿ ಮರಿಯ ಕುಂಯ್ಗುಡುವಿಕೆಯಂತೆಯೇ ಇತ್ತು. ಕೈಯಳತೆ ದೂರದಲ್ಲಿ ನಾನು ಆ ನಾಲ್ಕನ್ನೂ ನೋಡಿದೆ. ಅವೂ ನನ್ನನ್ನು ನೋಡಿದುವು. ಹೀಗೆ ಕೆಲವು ನಿಮಿಷಗಳ ನೋಡಿದ ನಂತರ ಅವು ನಾಗಾಲೋಟದಲ್ಲಿ ಓಡಿ, ಬೊಗಳುತ್ತಲೇ ನೀರಿಗೆ ಹಾರಿದುವು. ನೀರಿನಲ್ಲಿ ಸ್ವಲ್ಪ ದೂರ ಮುಳುಗಿ ಈಜಿದ ಮೇಲೆ, ತಮ್ಮ ತಲೆಯ ತುದಿಯನ್ನಷ್ಟೆ ಹೊರ ಹಾಕಿ ಇಣುಕಿದುವು.


ಏಪ್ರಿಲ್ ೧೪, ೧೬೨೯

ಕ್ರಿಶ್ಚಿಯನ್ ಹೈಗೆನ್ಸ್
ಬೆಳಕು, ಕಾಲಗಳ ಬಗ್ಗೆ ಹಲವು ಮೂಲತತ್ವಗಳನ್ನು ನಮಗೆ ತಿಳಿಸಿಕೊಟ್ಟ ಡಚ್ ವಿಜ್ಞಾನಿ ಕ್ರಿಶ್ಚಿಯನ್ ಹೈಗೆನ್ಸ್ ಹುಟ್ಟಿದ ದಿನ. ೧೬೨೯ರಲ್ಲಿ ಜನಿಸಿದ ಈ ಹೈಗನ್ಸ್ನ ಹೆಸರು ಭೌತಶಾಸ್ತ್ರದಲ್ಲಿ ಅಜರಾಮರ. ಏಕೆಂದರೆ ಈತ ಮೊತ್ತ ಮೊದಲ ಬಾರಿಗೆ ಬೆಳಕು ಎಷ್ಟು ವೇಗದಲ್ಲಿ ಸಾಗುತ್ತಿದೆ ಎನ್ನುವುದನ್ನು ಅಳೆಯಲು ಪ್ರಯತ್ನಿಸಿದ ಮೇಧಾವಿ. ಅಷ್ಟೇ ಅಲ್ಲ. ಈಗ ನಾವು ಹೆಚ್ಚೂ ಕಡಿಮೆ ಮರೆತೇ ಬಿಟ್ಟಿರುವ ಅಜ್ಜನ ಕಾಲದ ಲೋಲಕ ಗಡಿಯಾರದ ಆವಿಷ್ಕಾರವೂ ಈತನದ್ದೇ. ಈ ಗಡಿಯಾರ ಅದೆಷ್ಟು ಜನರಿಗೆ ಉದ್ಯೋಗ ನೀಡಿತೋ ಲೆಕ್ಕ ಹಾಕಲಾಗದು. ಸಾಮಾನ್ಯ ಲೋಲಕ ಎಂದು ನಾವು ಇಂದು ತರಗತಿಯಲ್ಲಿ ಪಾಠ ಮಾಡುವ ವಿಷಯದ ಬಗ್ಗೆಯೂ ಹೈಗೆನ್ಸ್ ಹಲವು ಸಂಶೋಧನೆಗಳನ್ನು ನಡೆಸಿದ. ಕೇಂದ್ರಾಪಗಮನ, ಕೇಂದ್ರಾಭಿಗಮನ ಬಲಗಳು ಎಂದು ಇಂದು ನಾವು ಹೆಸರಿಸುವ ಸೆಂಟ್ರಿಪೀಟಲ್ ಹಾಗೂ ಸೆಂಟ್ರಿಫ್ಯೂಗಲ್ ಬಲಗಳ ಬಗ್ಗೆ ಮೊದಲು ಗಣಿಸಿ, ತಿಳಿಸದವೂ ಈತನೇ. ಈ ತತ್ವಗಳೇ ಮುಂದೆ ಸರ್ ಐಸಾಕ್ ನ್ಯೂಟನ್ನರಿಗೆ ತನ್ನ ಸುಪ್ರಸಿದ್ಧ ಗುರತ್ವಾಕರ್ಷಣೆಯ ನಿಯಮಗಳನ್ನು ರೂಪಿಸಲು ಆಧಾರವಾದುವು. ಶನಿ ಗ್ರಹದ ಸುತ್ತಲೂ ಬಳೆಗಳಿರುವುದನ್ನು ಮೊತ್ತ ಮೊದಲಿಗೆ ಕಂಡವನೂ ಈತನೇ. ಹೀಗೆ ಖಗೋಳ, ಭೌತವಿಜ್ಞಾನ ಮತ್ತು ಭೂಗೋಳ ಶಾಸ್ತ್ರಗಳಿಗೆ ಹೈಗೆನ್ಸನ ಕೊಡುಗೆಗಳಿವೆ. ಭುಮಿಯ ಮಾತಿರಲಿ, ದೂರದಲ್ಲಿರುವ ಮಂಗಳನ ಮೇಲ್ಮೈ ನಕ್ಷೆಯೊಂದನ್ನೂ ಈತ ರಚಿಸಿದ್ದ!

ರಚನೆ: ಕೊಳ್ಳೇಗಾಲ ಶರ್ಮ ಪ್ರಸ್ತುತಿ: ಕೊಳ್ಳೇಗಾಲ ಶರ್ಮ ಮತ್ತು ಶ್ರೀಮತಿ ಭಾರತಿ. ಜಾಣಸುದ್ದಿ ಕುರಿತ ಪ್ರಶ್ನೆಗಳು, ಸಂದೇಹ ಹಾಗೂ ಜಾಣಪ್ರಶ್ನೆಗಳ ಉತ್ತರಕ್ಕೆ 9886640328 ಈ ನಂಬರಿಗೆ ಕರೆ ಮಾಡಿ ಇಲ್ಲವೇ ವಾಟ್ಸಾಪು ಮಾಡಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x