ಜಾಣಸುದ್ದಿ 2: ಕೊಳ್ಳೇಗಾಲ ಶರ್ಮ, ಮಂಜುನಾಥ ಕೊಳ್ಳೇಗಾಲ

kollagala-sharma

manjunath-kollegal

 ಈ ವಾರದ ಸಂಚಿಕೆಯಲ್ಲಿ ಮಂಜುನಾಥ ಕೊಳ್ಳೇಗಾಲರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com 

ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)

ಇಂದಿನ ಸಂಚಿಕೆಯಲ್ಲಿ

  • ತಾಯಿಯ ಮಮತೆಯ ಬೇರು ಎಲ್ಲಿದೆ?
  • ಗಾಳಿ, ನೀರು ಎರಡರಲ್ಲೂ ಚಲಿಸುವ ರೋಬೋ ನೊಣ,
  • ಹೊಸ ಜೀವ ಕೊಟ್ಟ ಹೊಸ ಚರ್ಮ
  • ಬಿಸಿಲಿಗೂ ಛಳಿಗೂ ಒಂದೇ ಬಟ್ಟೆ

—–

1. ತಾಯಿಯ ಮಮತೆಯ ಬೇರು

ತಾಯೆ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೇ|

ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮ ದಾತೆಯೇ||

ಬಹುಶಃ ಪ್ರೀತಿಗೆ ತಾಯಿಗಿಂತಲೂ ಬೇರೆ ರೂಪಕ ಸಿಗುವುದು ಕಷ್ಟ. ತಾಯಿಯ ಮಮತೆಗೆ, ಪ್ರೀತಿಗೆ ಉದಾಹರಣೆಗಳು ಲೆಕ್ಕವಿಲ್ಲದಷ್ಟು ಸಿಗುತ್ತವೆ. ಆದರೆ ಈ ಮಮತೆಯ ಬೇರು ಎಲ್ಲಿದೆ? ಇದು ಕಲಿತ ಸಂಸ್ಕಾರವೋ, ಅಥವಾ ಸಹಜವಾಗಿ ಹುಟ್ಟಿನಿಂದಲೇ ಬಂದ ಸ್ವಭಾವವೋ? ಅಥವಾ ಹೆಣ್ಣಿಗಷ್ಟೆ ಇದು ಮೀಸಲೋ? ಇದೇನು ತರಲೆ ಪ್ರಶ್ನೆ ಎನ್ನಬೇಡಿ. ಇಂತಹ ತರಲೆ ಪ್ರಶ್ನೆಗಳನ್ನು ಕೇಳಿಯೇ ವಿಜ್ಞಾನ ಮುನ್ನಡೆದಿದೆ. ಮಕ್ಕಳ ಆರೋಗ್ಯಹಾಗೂ ಮಾನವ ಸಂಪನ್ಮೂಲಾಭಿವೃದ್ಧಿಯ ಯೂನಿಸ್ ಕೆನಡಿ ರಾಷ್ಟ್ರೀಯ ಸಂಶೋಧನಾಲಯ, ಬೆತೆಸ್ಡಾದ  ವಿಜ್ಞಾನಿಗಳು ತಾಯಿಯ ಮಮತೆಯ ಬೇರನ್ನು ಹುಡುಕಿ ನಡೆಸಿದ ಸಂಶೋಧನೆ ಮೊನ್ನೆ ವರದಿಯಾಗಿದೆ. ಸಂಶೋಧನಾಲಯದ ಮಾರ್ಕ್ ಬಾರ್ನಸ್ಟೈನ್ ಮತ್ತು ಸಂಗಡಿಗರು ಮಕ್ಕಳು ಅತ್ತಾಗ ತಾಯಿಯ ಕರುಳು ಹಿಂಡುತ್ತದೇಕೆ ಎಂಬುದರ ಬಗ್ಗೆ ಪಿಎನ್ಎಎಸ್ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.

ಮಕ್ಕಳು ಅತ್ತಾಗ ಹಿಂಡುವುದು ಕರುಳಲ್ಲ, ಮಿದುಳಿನಲ್ಲಿರುವ ಕೆಲವು ನರಕೋಶಗಳು ಎನ್ನುವುದು ಇವರ ಶೋಧ.

ಹೌದು. ಬೆಂಗಳೂರಿನಂತಹ ಗದ್ದಲದ ಊರಿನಲ್ಲೂ ತಾಯಂದಿರು ತಮ್ಮ ಮಕ್ಕಳು ಅತ್ತಾಗ ತಕ್ಷಣವೇ ಮಗುವಿನತ್ತ ಹೋಗುವುದನ್ನು ಕಾಣಬಹುದು. ಮಗುವಿನ ಪಕ್ಕದಲ್ಲೇ ಇರುವಾಗ ಈ ಅಳು ಕೇಳುತ್ತದೇನೋ ಸರಿ. ಆದರೆ ಆ ಗದ್ದಲದಲ್ಲಿ ಪುಟ್ಟ ಮಗುವಿನ ಕ್ಷೀಣ ಅಳು ಈ ತಾಯಿಯ ಕಿವಿಗಷ್ಟೆ ಬೀಳುವುದು ಅದ್ಭುತವಲ್ಲದೇ ಇನ್ನೇನಲ್ಲ. ಆ ಮಾತು ಬಿಡಿ. ಅನಂತರ ನಡೆಯುವ ಸಂಗತಿ ಇನ್ನೂ ವಿಶೇಷ. ಅಳುವ ಮಗುವಿನ ಬಳಿ ಹೋದ ತಾಯಿ ಮೊದಲು ಮಗುವನ್ನು ಎತ್ತಿಕೊಂಡು, ಎದೆಗೊತ್ತಿಕೊಂಡು, ಲಾಲಿ ಹಾಡಿಯೋ, ಮಾತನಾಡುತ್ತಲೋ ಸಮಾಧಾನ ಮಾಡುತ್ತಾಳೆ.

rajaravivarma-painting

ತಾಯಿಮಗು. ರಾಜಾ ರವಿವರ್ಮನ ಕಲ್ಪನೆ

ಇದು ಯಾಕೆ? ಹೀಗೆ ಮಾಡು ಎಂದು ಯಾರಾದರೂ ಹೇಳಿಕೊಟ್ಟರೋ? ಅಥವಾ ವಿವಿಧ ಜನಾಂಗಗಳಲ್ಲಿ ಅಳುವ ಮಗುವನ್ನು ಸಂತೈಸುವ ಚಟುವಟಿಕೆ ವಿಭಿನ್ನವಾಗಿರಬಹುದೇ ಎನ್ನುವುದು  ಬಾರ್ನ್ಸ್ಟೈನ್ ಮತ್ತು ಸಂಗಡಿಗರಿಗೆ ಕುತೂಹಲ ತಂದಿತು.

ಪ್ರಶ್ನೆ ಎದುರಾದ ಕೂಡಲೇ ಸುಮ್ಮನಿದ್ದರೆ ಅದು ವಿಜ್ಞಾನ ಎನ್ನಿಸುವುದಿಲ್ಲ. ಬಾರ್ನಸ್ಟೈನರ ತಂಡ ಒಂದು ಸಂಶೋಧನೆಯನ್ನು ಕೈಗೊಂಡಿತು. ಮಕ್ಕಳು ಅತ್ತಾಗ ಚೊಚ್ಚಲ ತಾಯಂದಿರು ಹೇಗೆ ನಡೆದುಕೊಳ್ಳುತ್ತಾರೆ ಎಂದು ಗಮನಿಸಿತು. ಪ್ರಪಂಚದ ಹನ್ನೊಂದು ದೇಶಗಳಲ್ಲಿ ಒಟ್ಟು 680 ತಾಯಂದಿರ ನಡವಳಿಕೆಗಳನ್ನು ಗಮನಿಸಿ, ವೀಡಿಯೊ ಚಿತ್ರೀಕರಿಸಿದರು. ವಿಚಿತ್ರವೆಂದರೆ, ಪೂರ್ವದ ಜಪಾನಿನಿಂದ, ಪಶ್ಚಿಮದ ಅಮೆರಿಕೆಯವರೆಗೆ ಎಲ್ಲ ತಾಯಂದಿರ ನಡವಳಿಕೆ ಒಂದೇ ರೀತಿ ಇತ್ತು. ಮಗುವಿನ ಅಳು ಕೇಳಿಸಿದ ಕೂಡಲೇ ಅತ್ತ ಓಡುವುದು, ಮಗುವನ್ನು ಎತ್ತಿ ಎದೆಗೆ ಒತ್ತಿಕೊಳ್ಳುವುದು ಹಾಗೂ ಹಾಡನ್ನು ಹೇಳಿಯೋ, ಮಾತಿನಿಂದಲೋ ಸಂತೈಸುವುದು.

ಎಲ್ಲ ಜನಾಂಗದಲ್ಲಿಯೂ ಒಂದೇ ರೀತಿಯ ನಡವಳಿಕೆ ಇದೆ ಎಂದರೆ ಅದು ಸಂಸ್ಕಾರವಲ್ಲ. ಅರ್ಥಾತ್ ಕಲಿತ ನಡವಳಿಕೆಯಲ್ಲ. ಸಹಜವಾಗಿ ಹುಟ್ಟಿನಿಂದಲೆ ಬಂದ ಜೈವಿಕ ಕ್ರಿಯೆ ಎನ್ನುವುದು ಇವರ ತರ್ಕ. ಈ ತರ್ಕ ನಿಜವೋ ಸುಳ್ಳೋ ಎಂದು ನೋಡಲು ಮತ್ತೂ ಒಂದು ಪರೀಕ್ಷೆ ಮಾಡಿದರು. ಸುಮಾರು 130 ತಾಯಂದಿರಿಗೆ ಮಕ್ಕಳ ಅಳು ಕೇಳಿಸಿ, ಅವು ಅದನ್ನು ಕೇಳಿದ ಕ್ಷಣದಲ್ಲಿ ಆ ತಾಯಂದಿರ ಮಿದುಳಿನೊಳಗೆ ಹಣಿಕಿದರು. ಮಿದುಳಿನೊಳಗೆ ನಡೆಯುವ ಚಟುವಟಿಕೆಗಳನ್ನು ಆ ಕ್ಷಣದಲ್ಲೇ ಕಾಣಲು ಎಂ.ಆರ್.ಐ ಎನ್ನುವ ತಂತ್ರವನ್ನು ಬಳಸುತ್ತಾರೆ. ಈ ತಂತ್ರವನ್ನು ಬಳಸಿದಾಗ, ಆ ಕ್ಷಣದಲ್ಲಿ ಮಿದುಳಿನ ಯಾವ ಭಾಗ ಚುರುಕಾಗಿದೆ ಎನ್ನುವುದು ತಿಳೀಯುತ್ತದೆ. ವಿಚಿತ್ರವೆಂದರೆ ಇವರು ಪರೀಕ್ಷೆಗೆ ಒಡ್ಡಿದ ಎಲ್ಲ ತಾಯಂದಿರ ಮಿದುಳಿನಲ್ಲೂ ಅದೇ ಭಾಗವೇ ಚುರುಕಾಗಿರುತ್ತಿತ್ತು.

ಅಂದರೆ ತಾಯ ಮಮತೆ ಎನ್ನುವುದು ಕಲಿತ ಪಾಠವಲ್ಲ. ಪ್ರಕೃತಿ ಕೊಟ್ಟ ಸಹಜ ವರ. ಜೈವಿಕವಾಗಿ ಬೆಳೆದ ಗುಣ. ಮಗುವಿನ ರಕ್ಷಣೆಗೆ ಪ್ರಕೃತಿ ನೀಡಿರುವ ಮಹತ್ವದ ವರ ಎಂದು ಬಾರ್ನಸ್ಟೈನ್ ತಂಡ ತೀರ್ಮಾನಿಸಿದೆ.

ಅಂತೂ ತಾಯ ಮಮತೆ ಮಿಡಿಯುವುದು ಕರುಳಿನಲ್ಲೂ ಅಲ್ಲ, ಹೃದಯದಲ್ಲೂ ಅಲ್ಲ. ಮಿದುಳಿನಲ್ಲಿ ಎನ್ನೋಣವೇ?

ಆಕರ:

Marc H. Bornstei et al., Neurobiology of culturally common maternal responses to infant cry, PNAS Early edition, www.pnas.org/cgi/doi/10.1073/pnas.1712022114


2. ನೀರು ಗಾಳಿ ಎರಡರಲ್ಲೂ ಚಲಿಸುವ ರೋಬೋ

ನೊಣ, ಸೊಳ್ಳೆಯಂತಹ ವಿಶಿಷ್ಟ ಜೀವಿಗಳಿಲ್ಲ ಬಿಡಿ. ಅವು ಆರಾಮವಾಗಿ ಗಾಳಿಯಲ್ಲೂ ಹಾರುತ್ತವೆ. ನೀರಿನ ಮೇಲೂ ನಡೆಯುತ್ತವೆ. ವಿಜ್ಞಾನಿಗಳಿಗಂತೂ ಇದು ಬಲು ಕೌತುಕದ ವಿಷಯ. ಹಾರಲು ಹಗುರವಾದ ದೇಹ ಬೇಕು. ಗಟ್ಟಿಯಾದ ರೆಕ್ಕೆ ಬೇಕು. ನೀರಿನಲ್ಲಿ ನಡೆಯಲು ದೇಹ ಹಗುರವಾಗಿದ್ದರಷ್ಟೆ ಸಾಲದು. ನೀರಿನ ಮೇಲ್ಮೈಯನ್ನು ಹರಿಯದಷ್ಟು ನಾಜೂಕಾಗಿ ನಡೆಯಬೇಕು. ಇದು ನೊಣ, ಸೊಳ್ಳೆಗಳಿಗೆ ಹುಟ್ಟಿನಿಂದಲೇ ಬಂದ ವರ. ಆದರೆ ಇಂತದ್ದೇ ಗುಣವಿರುವ ರೋಬೋ ತಯಾರಿಸಬಹುದೇ? ಯಾಕಿಲ್ಲ ಎನ್ನುತ್ತಾರೆ ಅಮೆರಿಕೆಯ ಹಾರ್ವರ್ಡ್ನಲ್ಲಿರುವ ಜಾನ್ ಎ ಪೌಲ್ಸನ್ ಇಂಜಿನಿಯರಿಂಗ್ ಮತ್ತು ಅನ್ವಯಿಕ ವಿಜ್ಞಾನ ವಿಭಾಗದ ವಿಜ್ಞಾನಿ ರಾಬರ್ಟ್ ಜೆ ವುಡ್ ಮತ್ತು ಸಂಗಡಿಗರು. ಇವರ ತಂಡ ಕೇವಲ ಹದಿನೇಳೂ ಗ್ರಾಂ ತೂಕವಿರುವ ನೊಣದಂತಹ ರೋಬೋವೊಂದನ್ನು ಸೃಷ್ಟಿಸಿದೆ. ಇದು ಗಾಳಿಯಲ್ಲಿ ಹಾರುವಷ್ಟೆ ಸರಾಗವಾಗಿ ನೀರಿನಲ್ಲೂ ಸಾಗುತ್ತದೆ. ನೀರಿಗೆ ಇಳಿದಾಗ ಮುಳುಗಿದರೂ, ಚೇತರಿಸಿಕೊಂಡು ಮತ್ತೆ ಹೊರ ಬಂದು ಪಯಣವನ್ನು ಮುಂದುವರೆಸುತ್ತದೆ ಎಂದು ನವೆಂಬರ್ ತಿಂಗಳ ಸೈನ್ಸ್ ರೋಬೋಟಿಕ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಶೋಧ ಪ್ರಬಂಧ ಹೇಳುತ್ತದೆ.

ನೊಣಗಳಷ್ಟು ಪುಟಾಣಿ ರೋಬೋಗಳನ್ನು ತಯಾರಿಸಿರುವುದು ವಿಶೇಷವಲ್ಲ. ಇಂತಹ ಹಲವು ರೋಬೋಗಳು ಈಗಾಗಲೇ ಸುದ್ದಿ ಮಾಡಿವೆ. ಈ ಪುಟಾಣಿ ರೋಬೋ ಅಂತರಿಕ್ಷಯಾನಿಯೂ ಹೌದು, ಜಲಾಂತರ್ಗಾಮಿಯೂ ಹೌದು ಎನ್ನುವುದೇ ವಿಶೇಷ. ರೋಬೋಗಳು ಎಂದರೆ ಒಂದಿಷ್ಟು ಇಲೆಕ್ಟ್ರಾನಿಕ್ಸ್ ನಿಯಂತ್ರಣ, ಇನ್ನೊಂದಿಷ್ಟು ಯಾಂತ್ರಿಕ ಚಲನೆಗಳು ಹಾಗೂ ವಿನ್ಯಾಸ ಅಷ್ಟೆ. ರಾಬರ್ಟ್ ವುಡ್ ಮಾಡಿರುವುದೂ ಅದನ್ನೇ. ರೋಬೋಗೆ ನೊಣಗಳಿಗಿರುವಂತಹ ಎರಡು ರೆಕ್ಕೆಗಳನ್ನೂ, ಅದನ್ನು ಚಾಲಿಸಲು ಅಗತ್ಯವಾದ ಬ್ಯಾಟರಿ, ಇಲೆಕ್ಟ್ರಾನಿಕ್ಸ್ ನಿಯಂತ್ರಣವನ್ನೂ ಒದಗಿಸಿದ್ದಾರೆ. ಆದರೆ ಇದರ ಜಲಾಂತರ್ಗಾಮಿ ನಡೆ ಇದೆಯಲ್ಲ, ಅದು ಸ್ಪೆಷಲ್. ಅದು ಇಲೆಕ್ಟ್ರಾನಿಕ್ಸೂ ಅಲ್ಲ, ಯಂತ್ರ ವಿಜ್ಞಾನವೂ ಅಲ್ಲ. ಅದು ಅಪ್ಪಟ ರಸಾಯನವಿಜ್ಞಾನ.

22

ನೀರು ಗಾಳಿಯಲ್ಲೆರಡರಲ್ಲೂ ಓಡಾಡುವ ನ್ಯಾನೋ ರೋಬೋ

ಹೌದು ನೊಣ, ಸೊಳ್ಳೆಗಳು ನೀರಿನ ಮೇಲ್ಪದರವನ್ನು ಸೀಳುವಷ್ಟು ಭಾರ ಹೇರುವುದಿಲ್ಲವಾದ್ದರಿಂದ ಅಲ್ಲಿ ನಿಲ್ಲಬಲ್ಲವು. ಆದರೆ ಅಂತಹ ಕಾಲುಗಳು ಈ ರೋಬೋಗೆ ನೀಡಲಾಗದು. ಹೀಗಾಗಿ ವುಡ್ಸ್ ರಾಸಾಯನಿಕ ತಂತ್ರಗಳಿಗೆ ಮೊರೆ ಹೋಗಿದ್ದಾರೆ. ರೋಬೋನ ದೇಹವೇ ಒಂದು ಪುಟ್ಟ ಲೋಹದ ಪೆಟ್ಟಿಗೆ. ಇದು ನೀರಿಗೆ ತಾಕಿದ ಕೂಡಲೇ ಅದರೊಳಗೆ ವಿದ್ಯುತ್ತು ಹರಿದು, ಆ ವಿದ್ಯುತ್ತಿನಿಂದಾಗಿ ನೀರಿನ ಅಣುಗಳು ಒಡೆದು ಆಮ್ಲಜನಕ, ಹಾಗೂ ಜಲಜನಕಗಳಾಗಿ ಒಡೆಯುತ್ತವೆ. ಅಲ್ಲಿರುವ ಪುಟ್ಟ ಡಬ್ಬಿಯಲ್ಲಿ ಇವೆರಡೂ ಸಂಗ್ರಹವಾಗುವುದರಿಂದ ಈ ರೋಬೋನ ಮೈ ಹಗುರವಾಗುತ್ತದೆ. ಮುಳುಗದಿರಲು ಸೋರೆ ಬುರುಡೆ ಬಳಸಿದಂತಹ ಉಪಾಯ ಎನ್ನಿ. ಆದರೆ ಈ ಸೋರೆಬುರುಡೆಯೊಳಗೆ ಗಾಳಿಯನ್ನು ಸಾಯನಿಕ ತಂತ್ರದಿಂದ ತುಂಬುತ್ತಾರೆ ಅಷ್ಟೆ. ಅದೂ ಬೇಕೆಂದಾಗ. ಹೀಗಾದಾಗ ರೋಬೋ ನೀರೊಳಗಿನಿಂದ ಮೇಲೆದ್ದು ತೇಲುತ್ತದೆ.

ತೇಲಿದರೆ ಸಾಕೆ. ಮತ್ತೆ ಜಿಗಿದು ಹಾರಲು ಶಕ್ತಿ ಬೇಕಲ್ಲ? ಇದಕ್ಕೂ ವುಡ್ಸ್ ಉಪಾಯ ಹೂಡಿದ್ದಾರೆ. ಬುರುಡೆಯೊಳಗೆ ಕಲೆತ ಅನಿಲಗಳಿಗೆ ಕಿಡಿ ಸೋಕಿಸುವುದು. ಇವೆರಡೂ ಅನಿಲಗಳೂ ಕಿಡಿ ಸೋಕಿದಾಗ ಸಿಡಿದು ಮತ್ತೆ ನೀರಾಗುತ್ತವೆ. ಪುಟಾಣಿ ರೋಬೋ ನೀರಿನಿಂದ ಗಾಳಿಗೆ ಜಿಗಿಯುವಂತೆ ಮಾಡಲು ಈ ಪುಟಾಣಿ ಬಾಂಬಿನ ಸ್ಫೋಟವೇ ಸಾಕು. ಅದಾದ ಅನಂತರ ಯಥಾಪ್ರಕಾರ ರೆಕ್ಕೆ ಬಡಿದುಕೊಂಡು ಮರಳಿ ಹಾರಾಡಲಾರಂಭಿಸುತ್ತದೆ.

ಆಹಾ! ತಂತ್ರಜ್ಞಾನ ಎಂದರೆ ಮಾಂತ್ರಿಕ ಶಕ್ತಿಯಂತೆಯೇ ಅಲ್ಲವೇ?

ಆಕರ:

Yufeng Chen et al., A biologically inspired, flapping-wing, hybrid aerial-aquatic microrobot, Science Robotics,

http://robotics.sciencemag.org/content/2/11/eaao5619/tab-pdf


3. ಹೊಸ ಚರ್ಮ, ಹೊಸ ಜೀವ.

ಹಬ್ಬ ಹರಿದಿನಗಳಲ್ಲಿ ಹೊಸ ಬಟ್ಟೆ ತೊಟ್ಟು ಖುಷಿಯಿಂದ ಓಡಾಡುವ ಮಕ್ಕಳನ್ನು ಕಂಡಿದ್ದೀರಲ್ಲ! ಹೊಸ ಬಟ್ಟೆ ಇರಲಿ, ಹೊಚ್ಚ ಹೊಸದಾದ ಚರ್ಮವನ್ನೇ ಹೊದ್ದುಕೊಳ್ಳುವ ಸಂದರ್ಭ ಇದ್ದರೆ ಏನೆನ್ನುವಿರಿ. ಇದು ಖಂಡಿತ ಖುಷಿಯ ಸಂದರ್ಭವಲ್ಲ. ಪ್ರಕೃತಿ ಕೊಟ್ಟ ಅದ್ಭುತವಾದ ಚರ್ಮದ ಹೊದಿಕೆ ಕಳೆದು ಮತ್ತೊಂದು ಚರ್ಮವನ್ನು ಹೊದ್ದುಕೊಳ್ಳುವುದು ಖಂಡಿತವಾಗಿಯೂ ಸಹಜವಾದದ್ದಲ್ಲ. ಆದರೆ ಹೀಗೊಂದು ಕಾರ್ಯದಿಂದ ಸಾವಿನಂಚಿನಲ್ಲಿದ್ದ ಮಗುವೊಂದನ್ನು ಇಟಲಿಯ ವಿಜ್ಞಾನಿಗಳು ಕಾಪಾಡಿದ್ದಾರೆ. ಹೊಸ ಚರ್ಮದ ಜೊತೆಗೆ ಹೊಸ ಜೀವನ, ಜೀವವನ್ನೂ ಕೊಟ್ಟಿದ್ದಾರಂತೆ. ಈ ಶೋಧದ ವರದಿಯನ್ನು ನೇಚರ್ ಪತ್ರಿಕೆ ಕಳೆದ ವಾರ ಪ್ರಕಟಿಸಿದೆ.

4

ಎಪಿಡರ್ಮಿಯೊಲೈಸಿಸ್ ಬುಲೋಸಾ ಇರುವ ಶಿಶುವಿನ ಕಾಲು

ಚರ್ಮ ಎಂದರೆ ಸಾಮಾನ್ಯ ಹೊದಿಕೆ ಅಲ್ಲ. ಜೀವಂತ ಹೊದಿಕೆ. ಹಲವು ಪದರಗಳಿರುವ ಅದಕ್ಕೆ ಹಲವು ಕೆಲಸಗಳೂ ಇವೆ. ಹೊರಗಿನಿಂದ ನೀರು ಹರಿದು ಒಳಸೇರಿ ನಮ್ಮನ್ನು ನೀರಾಗಿಸದೆ ಇರುವಂತೆ ಕಾಪಾಡುವುದರ ಜೊತೆಗೇ ಒಳಗಿನ ನೀರು ಆವಿಯಾಗಿ ನಾವು ಒಣಕಟ್ಟಿಗೆಯಾಗದಂತೆಯೂ ಚರ್ಮ ನೋಡಿಕೊಳ್ಳುತ್ತದೆ. ಇಂತಹ ಚರ್ಮ ಇಲ್ಲದಿದ್ದರೆ ಏನಾದೀತು? ಊಹಿಸಲೂ ಅಸಾಧ್ಯ. ಆದರೆ ಅಂತಹ ದೌರ್ಭಾಗ್ಯವಿರುವ ಮಕ್ಕಳೂ ಇದ್ದಾರೆ. ಎಪಿಡರ್ಮಿಯೋಲೈಸಿಸ್ ಬ್ಯೂಲೋಸಾ ಎನ್ನುವ ಖಾಯಿಲೆ ಇದು. ಹುಟ್ಟಿನಿಂದಲೇ ಈ ಖಾಯಿಲೆ ಬರುತ್ತದೆ. ಇಂತಹವರ ಚರ್ಮ ಎಲ್ಲರ ಚರ್ಮದಂತೆ ಒಂದೇ ಹಾಳೆಯಾಗಿ ಬಿಗಿದು ನಿಲ್ಲುವುದಿಲ್ಲ. ಅಲ್ಲಲ್ಲಿ ಹರಿದು ತೇಪೆಯಾಗುತ್ತದೆ. ಹರಿದಲ್ಲಿ ಗಾಯವಾಗಿ, ವ್ರಣವಾಗಿ ಕಾಡುತ್ತದೆ.

ಚರ್ಮದಲ್ಲಿರುವ ಜೀವಕೋಶಗಳು ಕೆಲವು ಪ್ರೋಟೀನುಗಳನ್ನು ತಯಾರಿಸದೇ ಇರುವುದೇ ಈ ರೋಗಕ್ಕೆ ಕಾರಣ. ಈ ಪ್ರೋಟೀನುಗಳನ್ನು ತಯಾರಿಸಲು ಅಗತ್ಯವಾದ ಜೀನಿನಲ್ಲಿ ದೋಷವೋ, ಜೀನೇ ಇಲ್ಲದೆಯೋ ಅಥವಾ ಅದು ತಯಾರಿಸುವ ಪ್ರೋಟೀನು ಸಹಜವಾಗಿಲ್ಲದಿರುವುದರಿಂದಲೋ ಹರಕು ಚರ್ಮದ ರೋಗ ಉಂಟಾಗುತ್ತದೆ. ಈ ರೋಗದಲ್ಲಿಯೂ ತೀವ್ರತೆ ಹಲವು ಬಗೆ. ಕೆಲವರಲ್ಲಿ ಇದು ಕೇವಲ ಒಂದೆರಡು ವ್ರಣಗಳಾಗಿ ಕಾಡಬಹುದು. ಇನ್ನು ಕೆಲವರಲ್ಲಿ ಕೆಲವು ಭಾಗದಲ್ಲಿಯಷ್ಟೆ ತೊಂದರೆಯಾಗಬಹುದು. ಅಪರೂಪಕ್ಕೆ, ಕೋಟಿಯಲ್ಲೊಬ್ಬರಿಗೆ ಎನ್ನಿ, ಇಡೀ ದೇಹದ ಚರ್ಮವೇ ಕುರುನಾಡಾಗಿ ಬಿಡಬಹುದು. ಹಾಗಾದಾಗ, ಈರುಳ್ಳಿಯ ಸಿಪ್ಪೆಯಂತೆ ಚರ್ಮ ಉದುರುದುರಿ, ವ್ರಣವೆದ್ದು ರೋಗಿ ಸಾವಿನ ನಾಡಿಗೆ ಪಯಣಿಸಬೇಕಾಗುತ್ತದೆ.

3

ಕುಲಾಂತರಿ ಚರ್ಮವನ್ನು ಸೃಷ್ಟಿಸಿ ಹೊಸದಾಗಿ ಹೊದಿಸಿದ ಬಗೆ

ಒಂಭತ್ತು ವರ್ಷದ ಹಸನ್ ಇಂತಹ ದುರದೃಷ್ಟವನ್ನು ಹೊತ್ತು ಹುಟ್ಟಿದ ಮಗು. ಅತಿ ತೀವ್ರತೆರನಾದ ಎಪಡರ್ಮಿಯೋಲೈಸಿಸ್ (ಹರಕು ಚರ್ಮ) ಇವನನ್ನು ಕಾಡಿತ್ತು. ದೇಹದಲ್ಲೆಲ್ಲ ವ್ರಣ. ಈತ ಬದುಕುವುದು ಸಾಧ್ಯವೇ ಇಲ್ಲ ಎಂದಾಗ ಅವನ ತಂದೆ ತಾಯಿಗಳು ಎಲ್ಲ ತಂದೆ ತಾಯಿಗಳಂತೆ ಏನಾದರೂ ಮಾಡಿ ಬದುಕಿಸಬಹುದೇ ನೋಡಿ ಎಂದು ಬೇಡಿಕೊಂಡರು. ಜರ್ಮನಿಯ ವೈದ್ಯರು ಇಟಲಿಯ ಜೀವವಿಜ್ಞಾನಿ ಮೈಕೇಲ್ ಡೆಲ್ಯೂಕಾನನ್ನು ಸಂಪರ್ಕಿಸಿದರು. ಫಲಿತಾಂಶ. ಇಟಲಿಯ ಹಸನನ ಮೇಲೆ ಇದುವರೆವಿಗೂ ನಡೆಯದ ಚಿಕಿತ್ಸೆ ನಡೆಯಿತು. ಅವನ ದೇಹದಿಂದ ನಾಲ್ಕಿಂಚು ಚರ್ಮವನ್ನು ಕಿತ್ತು, ಅದರೊಳಗೆ ಇರುವ ಇಡೀ ಚರ್ಮಕ್ಕೆ ಹುಟ್ಟು ಕೊಡಬಹುದಾದ ಆಕರ ಕೋಶವನ್ನು ಹೆಕ್ಕಿದರು. ಅದರಲ್ಲಿದ್ದ ದೋಷಪೂರ್ಣವಾಗಿದ್ದ ಎಲ್ಎಎಂಬಿ3  ಎನ್ನುವ ಜೀನಿನ ಜಾಗೆಯಲ್ಲಿ ಬೇರೊಬ್ಬರಿಂದ ತೆಗೆದ ಜೀನನ್ನು ಹುದುಗಿಸಲಾಯಿತು. ಹೀಗೆ ಜೀನು ಪಲ್ಲಟಗೊಳಿಸಿದ ಆಕರ ಕೋಶಗಳನ್ನು ಬೆಳೆಸಿ, ಹೊಸ ಚರ್ಮ ಕೃಷಿ ಮಾಡಿದರು. ಈ  ಚರ್ಮದ ಚೂರುಗಳನ್ನು ಮರಳಿ ಹಸನನ ದೇಹದ ಮೇಲೆ ತೇಪೆ ಹಚ್ಚಲಾಯಿತು.

ಹೊರಗೆ ಬೆಳೆಸಿದ ಕೃತಕ ಚರ್ಮವನ್ನು ದೇಹದ ಮೇಲೆ ಕೂಡಿಸುವುದು ಹೊಸದೇನಲ್ಲ. ಬೆಂಕಿಯಿಂದ ಬೆಂದ ದೇಹದವರಿಗೆ ಇಂತಹ ಚಿಕಿತ್ಸೆ ನೀಡುವುದು ಸರ್ವೇ ಸಾಮಾನ್ಯ. ಚರ್ಮ ಹರಕು ರೋಗದ ಸಂದರ್ಭದಲ್ಲಿಯೂ ಕೆಲವೊಮ್ಮೆ ಇದೇ ಚಿಕಿತ್ಸೆ ಬಳಸುತ್ತಾರೆ. ಆದರೆ ಹಸನನಿಗೆ ಮಾತ್ರ, ಹೊಚ್ಚ ಹೊಸ ಜೀನ್ ಕೂಡಿಸಿದ, ಹಾಗೂ ಹೊಸ ಆಕರ ಕೋಶದಿಂದಷ್ಟೆ ಹುಟ್ಟಿದ ಸಂಪೂರ್ಣ ಹೊಸದಾದ ಚರ್ಮವನ್ನು ತೇಪೆ ಹಚ್ಚಿದ್ದಾರೆ. ಹಸನನಿಗೆ ಮೂರು ಬಾರಿ ಇದಕ್ಕಾಗಿ ಶಸ್ತ್ರಕ್ರಿಯೆ ನಡೆಸಲಾಯಿತು. ಸುಮಾರು ಎರಡು ವರ್ಷಗಳ ಚಿಕಿತ್ಸೆಯ ನಂತರ ಈಗ ಹಸನನ ಚರ್ಮ ಎಲ್ಲರದರಂತೆ ಆಗಿದೆ. ದೇಹದ ಎಲ್ಲ ಭಾಗದಲ್ಲಿಯೂ ಹೊಸ ಚರ್ಮದ ಹೊದಿಕೆ ಬಂದಿದೆಯಂತೆ. ಹೊಸ ಜೀವ ಬಂದಂತಾಗಿದೆ ಎನ್ನುತ್ತಾರೆ ಈ ಚಿಕಿತ್ಸೆಯನ್ನು ಮಾಡಿದ ವೈದ್ಯರು ಹಾಗೂ ವಿಜ್ಞಾನಿಗಳು.

ಇಡೀ ದೇಹದ ಚರ್ಮವನ್ನೇ ಹೊಸದಾಗಿ ತೊಡಿಸಿದ್ದು ಇದೇ ಮೊದಲು. ಹಾಗೆಯೇ ಇಡೀ ಚರ್ಮವನ್ನು ಆಕರಕೋಶ ಚಿಕಿತ್ಸೆಯಿಂದ ಬೆಳೆಸಿದ್ದೂ ಇದೇ ಮೊದಲು. ಅಷ್ಟೇ ಅಲ್ಲ. ತಳಿಗುಣದಲ್ಲಿರುವ ದೋಷವನ್ನು ತಿದ್ದಿ ತೀಡಿದ ಚರ್ಮವನ್ನು ಬೆಳೆಸಿದ್ದೂ ಇದೇ ಮೊದಲು. ಹಲವು ಮೊದಲುಗಳ ಈ ಶೋಧ ಹಸನನಂತಹ ದುರದೃಷ್ಟವಂತರಿಗೆ ಬದುಕುವ ಹೊಸ ಆಸೆಯನ್ನು ಹುಟ್ಟಿಸಿದೆ ಎಂದರೆ ತಪ್ಪೇನಲ್ಲ. ಅಲ್ಲವೇ?

ಆಕರ:

Mariaceleste Aragona & Cédric Blanpain, Gene therapy: Transgenic stem cells replace skin, Nature Nature 551, 306–307 (16 November 2017) doi:10.1038/nature24753


4. ಬೇಸಗೆಯ ಬೇಗೆಗೂ, ಛಳಿಗಾಲದ ನಡುಕಕ್ಕೂ ಒಂದೇ ಬಟ್ಟೆಯೇ!

ಕರಾವಳಿಯ ಕನ್ನಡಿಗರನ್ನು ಬಿಟ್ಟು ಉಳಿದೆಲ್ಲ ಕನ್ನಡಿಗರಿಗೂ ದೀಪಾವಳಿ ಮುಗಿಯಿತೆಂದರೆ ಹಳೆಯ ಬಟ್ಟೆಗಳನ್ನು ಕೊಡವುವ ಕೆಲಸ ಗ್ಯಾರಂಟಿ. ಮಳೆಗಾಲ ಕಳಿದು ಛಳಿ ಕಾಲಿಡುವ ಸಮಯ. ಪೆಟ್ಟಿಗೆ, ಬೀರುವಿನಲ್ಲಿ ಬೆಚ್ಚಗೆ ಮಡಚಿಟ್ಟಿದ್ದ ಉಣ್ಣೆ ಬಟ್ಟೆಗಳನ್ನೋ, ಚಳ್ಳಕೆರೆಯ ಕಂಬಳಿಯನ್ನೋ, ಪಾಲಿಯೆಸ್ಟರು ಸ್ವೆಟರುಗಳನ್ನೋ ಹೊರತೆಗೆಯುವ ಕಾಲ. ಅವನ್ನೆಲ್ಲ ಕೊಡವಿ, ಬಿಸಿಲಿಗೊಡ್ಡಿ, ಧರಿಸುವ ಸೀಸನ್ನು. ಇಷ್ಟೆಲ್ಲ ಕಷ್ಟ ಏಕೆಂದರೆ, ಛಳಿಗಾಲಕ್ಕೂ, ಬೇಸಿಗೆಗೂ ಒಗ್ಗುವ ಬಟ್ಟೆ ಇಲ್ಲ ಅನ್ನುವುದು ಕಟು ಸತ್ಯ. ಬೇಸಿಗೆಗೆ ಹತ್ತಿ ಬಟ್ಟೆ, ಛಳಿಗಾಲಕ್ಕೆ ಉಣ್ಣೆ ಬಟ್ಟೆ ಅಂತ ಪ್ರೈಮರಿ ಶಾಲೆಯಿಂದಲೂ ಪಾಠ ಕಲಿತೇ ಬೆಳೆದಿರುತ್ತೇವೆ. ಕರ್ನಾಟಕದ ಪಾಡೇ ಹೀಗಾದರೆ, ಇನ್ನು ದೆಹಲಿ, ಕಾಶ್ಮೀರದಂತಹ ವರ್ಷಕ್ಕೆ ಎರಡೇ ಸೀಸನ್ನು ಇರುವ ಉತ್ತರದೇಶಗಳ ಪಾಡು ಇನ್ನೂ ಕಠಿಣ. ಅಲ್ಲಿಯ ಕಠೋರ ಛಳಿಗೆ ಒಂದೆರಡು ಬಟ್ಟೆ ಹಾಕಿದರೆ ಸಾಲದು.

2

ಸೀಸನ್ನಿಗೆ ತಕ್ಕ ಬಟ್ಟೆ ಇಲ್ಲ ಎನ್ನುವುದು ಒಂದು ಕಷ್ಟ. ಇರುವ ಬಟ್ಟೆಯನ್ನು ಮುಂದಿನ ಸೀಸನ್ನಿನವರೆಗೂ ಕಾಪಾಡಿಕೊಳ್ಳುವುದು ಇನ್ನೂ ಕಷ್ಟ. ಇಂತಹ ಸಂದರ್ಭದಲ್ಲಿ ಯಾವಾಗ ಬೇಕಿದ್ದರೂ ಹಾಕುವಂತಹ ಬಟ್ಟೆ ಇದ್ದರೆ ಎಷ್ಟು ಚೆನ್ನ ಎಂದು ಯಾರಿಗೂ ಅನ್ನಿಸಬಹುದು. ಆ ಕಾಲ ಹತ್ತಿರವಾಗಿದೆ ಎನ್ನುವ ಸುದ್ದಿಯನ್ನು ಸೈನ್ಸ್ ಅಡ್ವಾನ್ಸಸ್ ಪತ್ರಿಕೆ ಮೊನ್ನೆ ವರದಿ ಮಾಡಿದೆ. ಅಮೆರಿಕೆಯ ಸ್ಟಾನ್ಫರ್ಡ್ ವಿವಿಯ ವಸ್ತು ವಿಜ್ಞಾನಿ ಯಿಷೂಯಿ ಮತ್ತು ಸಂಗಡಿಗರು ಛಳಿಯಲ್ಲಿ ಬೆಚ್ಚಗಿಡುವ, ಬೇಸಗೆಯಲ್ಲಿ ತಣ್ಣನಿಡುವ ಬಟ್ಟೆಯನ್ನು ರೂಪಿಸಿದ್ದಾರಂತೆ. ಬೇಸಗೆಯಲ್ಲಿ ಒಂದು ಬದಿ ಒಳಗಿರುವಂತೆ, ಛಳಿಗಾಲದಲ್ಲಿ ಅದನ್ನೇ ಒಳಹೊರಗು ಮಾಡಿ ಆ ಬದಿ ಹೊರಗೆ ಬರುವಂತೆ ಮಾಡಿದರೆ ಸಾಕಂತೆ. ಬಟ್ಟೆ ಹಿತವಾದ ಉಷ್ಣತೆಯಲ್ಲಿ ನಮ್ಮನ್ನು ಕಾಯುತ್ತದೆ ಎನ್ನುತ್ತಾರೆ ಯಿಷೂಯಿ.

ಇದೆಂಥ ಬಟ್ಟೆ? ಉಣ್ಣೆಯೇ, ಹತ್ತಿಯೇ ಎನ್ನಬೇಡಿ. ಉಣ್ಣೆಯಾದರೂ, ಹತ್ತಿಯಾದರೂ ಸರಿಯೇ. ಮೈಯ ಶಾಖ ಬಟ್ಟೆಯೊಳಗಿಂದ ಯಾವ ಪ್ರಮಾಣದಲ್ಲಿ ಹೊರ ಹರಿದು ಹೋಗುತ್ತದೆ ಎನ್ನುವುದು ಬಟ್ಟೆ ನಮ್ಮನ್ನು ಬೆಚ್ಚಗಿಡುತ್ತದೆಯೋ ತಣ್ಣಗಿಡುತ್ತದೆಯೋ ಎನ್ನುವುದನ್ನು ನಿರ್ಧರಿಸುತ್ತದೆ. ಹೊರಗಿನ ಬೇಗೆಯನ್ನು ಬಟ್ಟೆ ಪ್ರತಿಫಲಿಸಿ ಅದು ನಮ್ಮ ದೇಹವನ್ನು ಮುಟ್ಟದಂತೆ ಕಾಯ್ದರೆ ನಾವು ತಣ್ಣಗಿರಬಹುದು. ಹತ್ತಿ ಬಟ್ಟೆ ಹೊರಗಿನ ಉಷ್ಣ ಒಳಗೆ ಹರಿಯದಂತೆ ಕಾಯುತ್ತದೆ. ಆದರೆ ಉಣ್ಣೆ ಒಳಗಿನ ತಾಪ ಅಲ್ಲೇ ಉಳಿಯುವಂತೆ ಮಾಡಿ ಬೆಚ್ಚಗಿಡುತ್ತದೆ. ಇವೆರಡನ್ನೂ ಮಾಡುವ ಒಂದೇ ಬಟ್ಟೆ ಸದ್ಯಕ್ಕೆ ಯಾವುದೂ ಇಲ್ಲ.

ಯಿಷೂಯಿಯ ತಂಡ ಮಾಡಿರುವುದು ಇದನ್ನೇ. ಈ ಬಟ್ಟೆಯ ಒಂದು ಬದಿ ಉಷ್ಣವನ್ನು ಅಂದರೆ ಇನ್ಫ್ರಾರೆಡ್ ಕಿರಣಗಳನ್ನು ಪ್ರತಿಫಲಿಸುತ್ತದೆ. ಆದರೆ ಅದರ ಮೂಲಕ ಶಾಖ ಹಾಯುವುದು ಕಡಿಮೆ. ಮತ್ತೊಂದು ಬದಿಯೂ ಶಾಖವನ್ನು ಪ್ರತಿಫಲಿಸುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚು ಶಾಖವನ್ನು ಹಾಯಲು ಬಿಡುತ್ತದೆ. ಇದನ್ನು ಸಾಧಿಸಲು ಯಿಷೂಯಿಯ ತಂಡ ಬಟ್ಟೆಗೆ ನ್ಯಾನೋಕಾರ್ಬನ್ನು ಹಾಗೂ ನ್ಯಾನೋಲೋಹದ ತೆಳು ಲೇಪವನ್ನು ಹಚ್ಚಿದೆ.  ಈ ಲೇಪ ಒಂದು ಬದಿಯಲ್ಲಿ ತುಸು ದಪ್ಪನಾಗಿಯೂ, ಇನ್ನೊಂದು ಬದಿಯಲ್ಲಿ ತೆಳ್ಳಗೂ ಇರುವುದರಿಂದ ಶಾಖದ ಹರಿವಿನಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಒಂದು ಬದಿಯನ್ನು ಮೈಮುಟ್ಟುವಂತೆ ತೊಟ್ಟಾಗ ಬೆಚ್ಚಗಿರುತ್ತದೆ. ಅದೇ ಮತ್ತೊಂದು ಬದಿಯನ್ನು ಮೈಮುಟ್ಟುವಂತೆ ತೊಟ್ಟಾಗ ಅದು ಶಾಖವನ್ನು ಹರಿಯಗೊಟ್ಟು ತಣ್ಣಗಿಡುತ್ತದೆ. ಒಟ್ಟಾರೆ ಇವರು ರೂಪಿಸಿರುವ ಹೊಸ ಬಟ್ಟೆ 32 ಸೆಂಟಿಗ್ರೇಡಿನಿಂದ 36 ಸೆಂಟಿಗ್ರೇಡಿನೊಳಗೆ ಚರ್ಮದ ಉಷ್ಣತೆ ಇರುವಂತೆ ನೋಡಿಕೊಳ್ಳುತ್ತದೆಯಂತೆ. ಇದು ಬಲು ಹಿತವಾದ ಉಷ್ಣತೆ ಎನ್ನುತ್ತಾರೆ ಯಿಷೂಯಿ. ಬೇಸಗೆಯಲ್ಲಿ ಒಂದು ಬದಿ ಹೊರಗೆ, ಛಳಿಗಾಲದಲ್ಲಿ ಮತ್ತೊಂದು ಬದಿ ಹೊರಗೆ ಬರುವಂತೆ ತೊಟ್ಟರೆ ಸಾಕು ಎನ್ನುತ್ತಾರೆ.

ಅದೇನೇ ಇರಲಿ.  ಈ ಬಟ್ಟೆ ನಮಗೇನೋ ಹಿತ. ಆದರೆ ಬಟ್ಟೆ ಹೊಲಿಯುವ ದರ್ಜಿಗಳಿಗೆ ಕಷ್ಟ. ಹೊಲಿಗೆ ಕಾಣದಂತೆ ಅವರು ಹೊಲಿಯಬೇಕಲ್ಲ!

ಆಕರ:

Hsu et al., A dual-mode textile for human body radiative heating and cooling Sci. Adv. 2017;3: e1700895 (10 November 2017)

http://robotics.sciencemag.org/content/2/11/eaao5619/tab-pdf


ಜಾಣನುಡಿ

Salim Ali

ನವೆಂಬರ್ 12. ಭಾರತದ ಸುಪ್ರಸಿದ್ಧ ಪಕ್ಷಿ ತಜ್ಞ. ಭಾರತದ ಹಕ್ಕಿ ಮನುಷ್ಯ ಎಂದೇ ಖ್ಯಾತಿ ಪಡೆದ ಸಲೀಮ್ ಮೊಯಿಜುದ್ದೀನ್ ಅಬ್ದುಲ್ ಅಲಿ ಅರ್ಥಾತ್ ಸಲೀಂ ಅಲಿ ಹುಟ್ಟಿದ ದಿನ. 1896ರಲ್ಲಿ ಇವರು ಹುಟ್ಟಿದರು. ಪಕ್ಷಿಗಳ ಬಗ್ಗೆ ಚಿಕ್ಕಂದಿನಿಂದಲೇ ಆಸಕ್ತಿ ಮೂಡಿಸಿಕೊಂಡು, ಆ ಕ್ಷೇತ್ರದಲ್ಲೇ ಉದ್ಯೋಗವನ್ನೂ ಅರಸಿ, ಆ ಕ್ಷೇತ್ರದಲ್ಲೇ ಸಾಧನೆಯನ್ನೂ ಮಾಡಿದವರು ಸಲೀಂ ಅಲಿ.

ಪಕ್ಷಿವೀಕ್ಷಣೆಯ ಬಗ್ಗೆ ಇವರು ಹೇಳಿದ್ದು:

ಪಕ್ಷಿವೀಕ್ಷಣೆಯಿಂದ ಏನೂ ಪ್ರಯೋಜನವಿಲ್ಲ. ವೃಥಾ ಕಾಲಹರಣ ಎನ್ನಬೇಡಿ. ವಯಸ್ಸಾದ ಮೇಲೆ ಬೇರೇನೂ ಕೆಲಸವಿಲ್ಲದಿದ್ದಾಗ ಪಕ್ಷಿವೀಕ್ಷಣೆ ಕಾಲ ಕಳೆಯಲು ಒದಗುತ್ತದೆ. ಜೊತೆಗೆ ಮರಗಿಡಗಳ ಜೊತೆಗೆ ಇರಬೇಕಾಗುವುದರಿಂದ ಆರೋಗ್ಯಕ್ಕೂ ಒಳ್ಳೆಯದು.

ನಿಜ. ಆದರೆ ಪಕ್ಷಿಗಳೇ ಕಾಣೆಯಾಗುತ್ತಿರುವಾಗ ಏನು ಮಾಡೋಣ? ಇನ್ನಾದರೂ ಪಕ್ಷಿಗಳ ಆವಾಸಗಳನ್ನು ಉಳಿಸೋಣ ಅಲ್ಲವೇ?

_

ರಚನೆ: ಕೊಳ್ಳೇಗಾಲ ಶರ್ಮ; ಧ್ವನಿ: ಮಂಜುನಾಥ ಕೊಳ್ಳೇಗಾಲ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
G,W.Carlo
G,W.Carlo
6 years ago

However I tried, couldn't open unicode to type in Kannada. Sorry. I have read Kollegala Sharma's science articles before.  Above articles are informative and interesting. I will try the audio version some other time. All the best.

1
0
Would love your thoughts, please comment.x
()
x