ಜಾಣಸುದ್ದಿ 19: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com

ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)

ಈ ವಾರದ ಸಂಚಿಕೆಯಲ್ಲಿ:

• ಅನ್ಯಲೋಕದಲ್ಲಿ ನಡೆದೇವೆ?
• ನೀರ್ಗುಳ್ಳೆಗಳ ಚಮತ್ಕಾರ,
• ವಲಸೆ ಬಂದ ಆತಂಕ,
• ತುಂತುರು ಸುದ್ದಿಗಳು
• ಬೀಗಲ್ ಸಾಹಸಯಾನ

1. ಅನ್ಯಲೋಕದಲ್ಲಿ ನಡೆದೇವೆ?
ಪ್ರಧಾನಮಂತ್ರಿ ಮೋದಿಯವರು 2022ನೇ ಇಸವಿಯ ವೇಳೆಗೆ ಭಾರತೀಯರೊಬ್ಬರು ಭಾರತೀಯರೇ ನಿರ್ಮಿಸಿದ ಹಾಗೂ ಹಾರಿಸಿದ ಅಂತರಿಕ್ಷನೌಕೆಯಲ್ಲಿ ಅಂತರಿಕ್ಷಯಾನ ಮಾಡುತ್ತಾರೆಂದು ಘೋಷಿಸಿಯಾಗಿದೆ. ನಾಲ್ಕೇ ವರ್ಷದಷ್ಟು ಅಲ್ಪಾವಧಿಯಲ್ಲಿ ಇದು ಸಾಧ್ಯವೋ ಇಲ್ಲವೋ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೆ ಇಸ್ರೋದ ವಿಜ್ಞಾನಿಗಳು ಇದೊಂದು ಸವಾಲು. ಇದನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದ್ದೂ ಆಗಿದೆ. ಇಷ್ಟಕ್ಕೆ ನಿಲ್ಲುತ್ತದೆಯೋ? ಅಥವಾ ಮುಂದಿನ ಸರಕಾರ, ನಾನೇನು ಕಡಿಮೆ ಎಂದು ಭಾರತೀಯರು ಬೇರೆ ಲೋಕಕ್ಕೇ ಪಯಣಿಸಲಿ ಎಂದು ಆದೇಶಿಸುವುದೋ ಗೊತ್ತಿಲ್ಲ. ಹಾಗೇನಾದರೂ ಆದರೆ ನಾವು ಬೇರೆ ಲೋಕವನ್ನು ತಲುಪಬಲ್ಲೆವೆ? ತಲುಪಿದರೆ ಅಲ್ಲಿ ನಮ್ಮ ಬದುಕು ಹೇಗಿರಬಹುದು? ಅಲ್ಲಿರುವ ಸಮಸ್ಯೆಗಳೆಲ್ಲವನ್ನೂ ನಾವು ತಾಳಿಕೊಳ್ಳಬಲ್ಲೆವೆ? ಬಹುಶಃ ಒಂದು ಸಮಸ್ಯೆಯನ್ನು ಬಿಟ್ಟು ಮಿಕ್ಕೆಲ್ಲವನ್ನೂ ನಾವು ತಾಳಿಕೊಳ್ಳಬಹುದು ಎನ್ನುತ್ತದೆ ಆರ್ಕ್ಸಿವ್ ಮುಕ್ತ ಪತ್ರಿಕೆಯಲ್ಲಿ ಪ್ರಕಟವಾಗಿರುವ ಒಂದು ವರದಿ. ಕ್ರೊಯೇಶಿಯಾದ ಜಾಗ್ರೆಬ್ ವಿಶ್ವವಿದ್ಯಾನಿಲಯದ ಫಿಸಿಕ್ಸ್ ಪ್ರೊಫೆಸರ್ ನಿಕೋಲಾ ಪೋಲ್ಯಾ ಮತ್ತು ಸಂಗಡಿಗರು ಮನುಷ್ಯನ ದೇಹ ಎಷ್ಟು ಮಟ್ಟರ ಗುರುತ್ವಾಕರ್ಷಣೆಯನ್ನು ತಾಳಿಕೊಳ್ಳಬಹುದು ಎಂದು ಲೆಕ್ಕ ಹಾಕಿದೆ.

ಇವೆಲ್ಲವೂ ಸರಿ. ಅಂತರಿಕ್ಷದಲ್ಲಿ ಮನುಷ್ಯರು ಪಯಣಿಸುವುದು ಅಷ್ಟು ಕಷ್ಟವೇಕೆ ಎನ್ನುವ ಪ್ರಶ್ನೆ ಸಹಜವಾಗಿಯೇ ನಮಗೂ ನಿಮಗೂ ಉಂಟಾಗುತ್ತದೆ. ಹಲವು ಸಮಸ್ಯೆಗಳಿವೆ. ಅಂತರಿಕ್ಷದಲ್ಲಿ ಉಸಿರಾಡಲು ಗಾಳಿ ಇಲ್ಲ. ಗಾಳಿಯ ಒತ್ತಡ ಇಲ್ಲದ್ದರಿಂದಲೂ ತೊಂದರೆ ಆಗಬಹುದು. ಬಿಸಿಲು ಇಲ್ಲಿನಂತೆ ಇರುವುದಿಲ್ಲ. ಇನ್ನೂ ಪ್ರಖರವಾಗಿರುತ್ತದೆ. ಇನ್ನು ಊಟ ತಿಂಡಿ ಸಮಸ್ಯೆಯೂ ಇವೆ. ಅಲ್ಲಿ ಗುರುತ್ವಾಕರ್ಷಣೆಯೂ ಇಲ್ಲ. ಹೀಗಾಗಿ ಎಲ್ಲವೂ ತೇಲಲು ಆರಂಭಿಸುತ್ತದೆ. ಇಷ್ಟೆಲ್ಲ ಸಮಸ್ಯೆಗಳನ್ನೂ ಪರಿಹರಿಸಿಕೊಂಡರಷ್ಟೆ ಅಂತರಿಕ್ಷದಲ್ಲಿ ಮನುಷ್ಯನ ಪ್ರಯಾಣ ಸಾಧ್ಯ. ಪುಣ್ಯಕ್ಕೆ ಈ ಎಲ್ಲ ಸಮಸ್ಯೆಗಳಿಗೂ ವಿಜ್ಞಾನಿಗಳು ಪರಿಹಾರವನ್ನು ಹುಡುಕಿಯಾಗಿದೆ. ಒತ್ತಡವನ್ನು ಉಂಟು ಮಾಡುವ, ದೇಹವನ್ನು ತಣ್ಣಗೆ ಇಡುವ ಸ್ಪೇಸ್ ದಿರಿಸುಗಳು ಹಾಗೂ ಅಂತರಿಕ್ಷದಲ್ಲಿಯೂ ಒಳ್ಳೆಯ ಪೋಷಣೆ ನೀಡುವ ಅತಿ ಕಡಿಮೆ ತೂಕದ ಆಹಾರ ಇತ್ಯಾದಿ ಲಭ್ಯವಿವೆ. ಹಾಗಾಗಿ ಇವೆಲ್ಲವನ್ನೂ ತಾಳಿಕೊಳ್ಳಬಹುದು. ತಾಳಿಕೊಳ್ಳಲಾಗದಂಥದ್ದು ಎಂದರೆ ಗುರುತ್ವಾಕರ್ಷಣೆ.

ನಾವು ನಡೆದಾದ ನಮ್ಮ ದೇಹ ತೂಗಾಡುವ ಲೋಲಕದಂತೆ ಒಮ್ಮೆ ಹಾಗೂ ಭೂಮಿಯಲ್ಲಿ ನೆಟ್ಟ ಕಂಬಿಯಂತೆ ಇನ್ನೊಮ್ಮೆ ವಾಲಾಡುತ್ತಿರುತ್ತದೆ.

ಗ್ರಹಗಳ ನಡುವೆ ಪಯಣಿಸುವಾಗ ಗುರುತ್ವಾಕರ್ಷಣೆ ಅಷ್ಟಾಗಿ ಕಾಡುವುದಿಲ್ಲ. ಚಂದ್ರನ ಮೇಲೆ ಇಳಿದಾಗಲೂ ಅಷ್ಟು ಕಾಡುವುದಿಲ್ಲ. ಏಕೆಂದರೆ ಭೂಮಿಗಿಂತಲೂ ಚಿಕ್ಕದಾಗಿರುವ ಚಂದ್ರನ ಗುರುತ್ವಾಕರ್ಷಣೆ ತುಸು ಕಡಿಮೆಯೇ. ಆದರೆ ನಾವೇನಾದರೂ ಇನ್ನಷ್ಟು ಉತ್ಸಾಹದಿಂದ ಸೂರ್ಯಮಂಡಲದಾಚೆಗಿರುವ ಭೂಮಿಯಂತಹುದೇ ಗ್ರಹಕ್ಕೆ ಪಯಣಿಸಿದೆವೆನ್ನಿ. ಆಗ ಇದು ಪ್ರಮುಖ ವಿಷಯವಾಗುತ್ತದೆ.

ಅಂತಹ ಗ್ರಹಗಳಿವೆಯೇ? ಇವೆ. ಸುಮಾರು ನಾಲ್ಕುನೂರಕ್ಕೂ ಹೆಚ್ಚು ಭೂಮಿಯಷ್ಟೇ ಗಾತ್ರವಿರುವ ಗ್ರಹಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಆದರೆ ಇವೆಲ್ಲವೂ ಕೂಡ ಭೂಮಿಗಿಂತಲೂ ಭಾರ. ಆದ್ದರಿಂದ ಇವುಗಳ ಗುರುತ್ವಾಕರ್ಷಣೆಯೂ ಬಲವಾಗಿರುತ್ತದೆ. ಭೂಮಿಯ ಐದು ಪಟ್ಟು ಹೆಚ್ಚು ಬಲವಾಗಿ ಸೆಳೆಯುವ ಗ್ರಹಗಳಿಂದ ನೂರು ಪಟ್ಟು ಬಲವಾಗಿ ಸೆಳೆಯುವ ಗ್ರಹಗಳೂ ಇವೆ. ಇವುಗಳನ್ನು ನಾವು ತಲುಪಿದರೆ ಏನಾಗಬಹುದು? ಅಲ್ಲಿ ನಾವು ಸಹಜವಾಗಿ ಇರಲು ಸಾಧ್ಯವೇ? ಇದು ಪೋಲ್ಯಾ ತಂಡದ ಪ್ರಶ್ನೆ.

ಇದಕ್ಕೆ ಕೆಲವೇ ಪ್ರಶ್ನೆಗಳನ್ನು ಕೇಳಿ ಇವರು ಉತ್ತರ ಹುಡುಕಲು ಪ್ರಯತ್ನಿಸಿದ್ದಾರೆ. ನಮ್ಮ ದೇಹದ ತೂಕ ಎಂದರೆ ಭೂಮಿಯ ಗುರುತ್ವ ಜಗ್ಗುವ ಬಲ. ಆದ್ದರಿಂದ ಗುರುತ್ವ ಹೆಚ್ಚಾದಷ್ಟೂ ಭಾರವೂ ಹೆಚ್ಚಾಗುತ್ತದೆ. ಅಂದರೆ ಭೂಮಿಗಿಂತ ಹೆಚ್ಚು ಗುರುತ್ವ ಇದ್ದರೆ, ಅದನ್ನು ನಮ್ಮ ದೇಹ ತಾಳಿಕೊಳ್ಳಬಲ್ಲುದೇ? ನಮ್ಮ ಮೂಳೆ ಎಷ್ಟು ಭಾರವನ್ನು ತಾಳಬಲ್ಲುದು? ಸುಮಾರು ಐವತ್ತು ಕಿಲೋಗ್ರಾಂ ವಸ್ತುವಿರುವ ದೇಹಕ್ಕೆ ಒಂದೇ ಕಾಲಿದೆ ಎಂದುಕೊಂಡು, ನಮ್ಮ ತೊಡೆ ಮೂಳೆ ಅತಿ ಹೆಚ್ಚು ಎಂದರೆ ಎಷ್ಟು ಭಾರ ಹೊರಬಲ್ಲುದು ಎಂದು ಲೆಕ್ಕ ಹಾಕಿದ್ದಾರೆ. ಹಾಗೇ ನಿಂತಾಗ ಸುಮಾರು ಭೂಮಿಯ ನೂರು ಪಟ್ಟು ಅಂದರೆ ಸೆಕೆಂಡಿಗೆ 980 ಮೀಟರು ವೇಗೋತ್ಕರ್ಷ ಇರುವ ಗುರುತ್ವದ ನೆಲೆಯಲ್ಲಿಯನ್ನೂ ನಮ್ಮ ಮೂಳೆ ತಾಳಿಕೊಳ್ಳಬಲ್ಲುದು. ನಡೆಯುವಾಗ ಹತ್ತು ಪಟ್ಟು ಕಡಿಮೆ ಆಗಬಹುದು.

ಹಾಗೆಯೇ ಮಲಗಿದ್ದವರು ಏಳುವುದು ಎಂದರೆ ಭೂಮಿಯ ಆಕರ್ಷಣೆಯನ್ನು ಮೀರಿ ಬಲವನ್ನು ಪ್ರಯೋಗಿಸುವುದಷ್ಟೆ? ನಮ್ಮ ತೊಡೆಯ ಸ್ನಾಯು ಹೀಗೆ ಎಷ್ಟು ಬಲವನ್ನು ಮೀರಿ ಏಳಬಲ್ಲುದು ಎಂದು ಲೆಕ್ಕ ಹಾಕಿದ್ದಾರೆ. ಭೂಮಿಗಿಂತ ಸುಮಾರು ಐದು ಪಟ್ಟು ಹೆಚ್ಚು ಗುರುತ್ವ ಇರುವ ಗ್ರಹದ ಸೆಳೆತವನ್ನೂ ಮೀರಿ ಬಲವನ್ನು ನಮ್ಮ ಸ್ನಾಯು ಹುಟ್ಟಿಸಬಲ್ಲುದು. ಅದಕ್ಕಿಂತ ಹೆಚ್ಚಾದರೆ ಹರಿದುಹೋಗುತ್ತದೆ.

ಇನ್ನು ಓಡಾಟ ಎಲ್ಲಿಯವರೆಗೂ ಸಾಧ್ಯ? ನಡೆಯುವುದು ಅಥವಾ ಓಡುವುದು ಎಂದರೆ ಒಂದು ರೀತಿ ನಮ್ಮ ದೇಹದ ಭಾರವೆಲ್ಲವೂ ಲೋಲಕದಂತೆ ಹಿಂದ-ಮುಂದೆ ವಾಲಾಡುವುದು ಎನ್ನುತ್ತಾರೆ ವಿಜ್ಞಾನಿಗಳು. ನಡೆಯುವಾಗ ಒಂದು ಕಾಲು ತೂಗಿ ಹಾಕಿದ ಲೋಲಕದಂತೆ ವಾಲಾಡಿದರೆ, ಮತ್ತೊಂದು ನೆಲದಲ್ಲಿ ನೆಟ್ಟ ಸರಳಿನಂತೆ ವಾಲಾಡುತ್ತದೆ. ಈ ಎರಡೂ ಬಗೆಯ ಚಲನೆಯನ್ನೂ ಗುರುತ್ವ ಪ್ರಭಾವಿಸುತ್ತದೆ. ಉದಾಹರಣೆಗೆ ಸಮ ಉದ್ದವಿರುವ ಹಗ್ಗದಲ್ಲಿ ಸಮ ತೂಕದ ಚೆಂಡುಗಳನ್ನು ನೇತು ಹಾಕಿದರೆ ಅವು ವಿಭಿನ್ನ ಗುರುತ್ವದಲ್ಲಿ ಬೇರೆ, ಬೇರೆ ಗತಿಯಲ್ಲಿ ವಾಲಾಡುತ್ತವೆ. ಅರ್ಥಾತ್, ಗುರುತ್ವ ನಾವೆಷ್ಟು ವೇಗವಾಗಿ ನಡೆಯಬಲ್ಲೆವು ಎನ್ನುವುದನ್ನು ನಿರ್ಧರಿಸುತ್ತದೆ. ನಾವಷ್ಟೆ ಅಲ್ಲ. ಎಲ್ಲ ಪ್ರಾಣಿಗಳ ನಡೆಯ ವೇಗವೂ ಒಂದು ಮಿತಿಯೊಳಗೇ ಇರಲು ಈ ಗುರುತ್ವವೇ ಕಾರಣ. ಗುರುತ್ವ ಹೆಚ್ಚಾದರೆ ವಾಲಾಟದ ಗತಿಯಷ್ಟೆ ಅಲ್ಲ, ಅದರಿಂದಾಗಿ ನಮ್ಮ ತೊಡೆ ಮೂಳೆ ಹಾಗೂ ಸ್ನಾಯುವಿನ ಮೇಲೆ ಬೀಳುವ ಬಲವೂ ಹೆಚ್ಚು ಕಡಿಮೆಯಾಗುತ್ತದೆ. ಇವೆಲ್ಲವನ್ನು ಲೆಕ್ಕ ಹಾಕಿದಾಗ, ಅತಿ ಗಟ್ಟಿ ಮೂಳೆ, ಸ್ನಾಯುಗಳಿರುವ ಪೈಲ್ವಾನರೂ ಕೂಡ ಭೂಮಿಯ ಗುರುತ್ವಕ್ಕಿಂತ ಐದು ಪಟ್ಟು ಗುರುತ್ವವಿರುವ ಲೋಕದಲ್ಲಿ ಸರಾಗವಾಗಿ ನಡೆಯಲಾರರು. ಓಡಲಾರರು.

ಅರ್ಥಾತ್, ಅನ್ಯಲೋಕಕ್ಕೆ ನಾವು ದಾಳಿ ಇಡುವ ಆಲೋಚನೆ ಇದ್ದರೆ, ಬಹುಶಃ ಭೂಮಿಯ ಐದು ಪಟ್ಟು ಹಾಗೂ ಅದಕ್ಕೂ ಮೇಲಿನ ಗುರುತ್ವವಿರುವ ಲೋಕಗಳನ್ನು ಮರೆತು ಬಿಡಬೇಕು. ಅಲ್ಲಿ ನಿಲ್ಲಲೂ, ಏಳಲೂ, ಓಡಲೂ ಆಗುವುದಿಲ್ಲ.
ಎಲ್ಲಾ ಸರಿ. ಆದರೆ ಮಾನವ ಇಷ್ಟಕ್ಕೇ ನಿಲ್ಲುವನೇ? ತಾನು ನಡೆಯಲಾಗಿದದ್ದರೇನಂತೆ ವಾಹನವನ್ನು ಬಳಸಿ ಓಡಾಡಲೂ, ಸಾಧನಗಳನ್ನು ಬಳಸಿ ಗುರುತ್ವದ ಬಲವನ್ನು ವಿರೋಧಿಸಲೂ ಪ್ರಯತ್ನಿಸಬಹುದು ಎಂದಿರಾ? ನಿಜ ಏನೇ ಅಪಾಯವಿದ್ದರೂ ತನ್ನ ಹಠವನ್ನೇ ನಡೆಸುವ ದುಸ್ಸಾಹಸಿ ಮಾನವ ಅಲ್ಲವೇ?

ಆಕರ: Nikola Poljak et al., Effects of exoplanetary gravity on human locomotor ability arXiv:1808.07417v1 physics.pop-ph] 22 Aug 2018

ಲಿಂಕ್: arXiv:1808.07417v1 physics.pop-ph] 22 Aug 2018


2. ನೀರ್ಗುಳ್ಳೆಗಳ ಚಮತ್ಕಾರ
ನೀರ್ಗುಳ್ಳೆಗಳನ್ನು ನೋಡಿದ್ದೀರಲ್ಲ? ನೀರನ್ನೋ, ದ್ರವವನ್ನೋ ಕುದಿಸುವಾಗ ಇವನ್ನು ಕಂಡಿರುತ್ತೀರಿ. ಸೋಪಿನ ಗುಳ್ಳೆಗಳನ್ನು ಊದಿ ಅವು ಗಾಳಿಯಲ್ಲಿ ಮೇಲೆ, ಮೇಲೆ ಏರುವುದನ್ನು ಕಂಡು ಖುಷಿ ಪಟ್ಟಿರುತ್ತೀರಿ. ಹಾಗೆಯೇ ನೀರಿನಲ್ಲಿ ಎಣ್ಣೆ ಹಾಕಿ ಕುಲುಕಿದಾಗ ಉಂಟಾಗುವ ಗುಳ್ಳೆಗಳೂ ಕೊನೆಗೆ ಮೇಲೇರಿ ಪದರವಾಗಿ ಕುಳಿತುಕೊಳ್ಳುವುದನ್ನು ಗಮನಿಸಿರುತ್ತೀರಿ. ಏನೇ ಇರಲಿ ಈ ಗುಳ್ಳೆಗಳು ತಮ್ಮಿಷ್ಟದಂತೆ ಚಲಿಸುತ್ತವೆಯೇ ಹೊರತು ನಮ್ಮಿಷ್ಟದಂತೆ ನಡೆದುಕೊಳ್ಳುವುದಿಲ್ಲ ಎನ್ನುವುದು ನಮಗೆಲ್ಲ ಗೊತ್ತು. ಗುಳ್ಳೆಗಳು ನಾವು ಹೇಳಿದ್ದನ್ನು ಕೇಳುವಂತೆ ಮಾಡಬಹುದಂತೆ. ಹಾಗೊಂದು ರಾಸಾಯನಿಕ ಚಮತ್ಕಾರವನ್ನು ನೇಚರ್ ಕೆಮಿಸ್ಟ್ರಿ ಪತ್ರಿಕೆ ಕಳೆದ ವಾರ ಪ್ರಕಟಿಸಿದೆ. ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಪ್ರೊಟೋಲೈಫ್ ರೀಸರ್ಚ್ ಹಾಗೂ ಆರ್ಗಾನಿಕ್ ಕೆಮಿಸ್ಟ್ರಿ ವಿಭಾಗದ ವಿಜ್ಞಾನಿ ಅವಿನಾಶ್ ಪಾಟೀಲ್ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ. ಇವರು ಕಿಣ್ವಗಳು ಹಾಗೂ ಕೆಲವು ರಾಸಾಯನಿಕಗಳನ್ನು ತುಂಬಿದ ನೀರ್ಗುಳ್ಳೆಗಳನ್ನು ಹೀಗೆ ಬೇಕೆಂದ ರೀತಿಯಲ್ಲಿ ಮೇಲೆ ಕೆಳಗೆ ಓಡಾಡುವಂತೆ ಮಾಡಬಹುದು ಎಂದು ತಿಳಿಸಿದ್ದಾರೆ.

ಗುಳ್ಳೆಗಳಲ್ಲಿ ಎರಡು ಬಗೆ. ದ್ರವದ ತೆಳು ಪೊರೆಯೊಂದು ಗಾಳಿಯನ್ನು ಹೊರಗಿನ ನೀರಿನಿಂದ ಬೇರೆಯಾಗಿಡುವ ಗುಳ್ಳೆಗಳು ಅಥವಾ ಎಣ್ಣೆಯಂತಹ ದ್ರವದ ಪೊರೆ ನೀರಿನಂತಹ ಮತ್ತೊಂದು ದ್ರವವನ್ನು ಸುತ್ತುವರೆದು ಹೊರಗಿನ ನೀರಿನಿಂದಲೋ, ಎಣ್ಣೆಯಿಂದಲೋ ಬೇರೆಯಾಗಿಡುವ ಗುಳ್ಳೆಗಳು. ಇವನ್ನು ಮೈಸೆಲ್ಲುಗಳು ಎಂದೂ. ಇಂತಹ ದ್ರವಗಳನ್ನು ಕೊಲಾಯಿಡ್ಡುಗಳು, ಎಮಲ್ಶನ್ನುಗಳು ಎಂದೂ ಕರೆಯುತ್ತಾರೆ. ನಮ್ಮಲ್ಲಿರುವ ಎಲ್ಲ ಜೀವಕೋಶಗಳೂ ಕೂಡ ಇಂತಹ ಸ್ಥಿತಿಯಲ್ಲಿ ಇರುವಂಥವೇ. ತೈಲದ ಪೊರೆಯೊಳಗೆ ನೀರಿನಂತಹ ದ್ರವವಿದೆ. ಜೀವಕೋಶಗಳು ಸ್ಥಳ ಬದಲಿಸುತ್ತವಲ್ಲ? ಅದು ಗುಳ್ಳೆಗಳಿಗೇಕೆ ಸಾಧ್ಯವಿಲ್ಲ? ಗುಳ್ಳೆಗಳನ್ನೂ ಜೀವಕೋಶಗಳಂತೆ ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸುವಂತೆ ಮಾಡಬಹುದೇ? ಇದು ಪಾಟೀಲರ ತಂಡದ ಪ್ರಶ್ನೆಗಳು. ಹೀಗೆ ನಮ್ಮ ಮಾತನ್ನು ಕೇಳುವಂತಹ ಸೂಕ್ಷ್ಮ ಗುಳ್ಳೆಗಳನ್ನು ತಯಾರಿಸಿ ಔಷಧವೇ ಮುಂತಾದ ಬಳಕೆಗಳಿಗೆ ಉಪಯೋಗಿಸುವ ಆಲೋಚನೆ ಇದೆ. ಆದರೆ ಒಂದೇ ಸಮಸ್ಯೆ ಇವನ್ನು ನಿಯಂತ್ರಿಸಲಾಗದು. ಇದೀಗ ಪಾಟೀಲರ ತಂಡ ಅದಕ್ಕೊಂದು ಉಪಾಯ ಹುಡುಕಿದೆ.

ಜಾಡಿಯೊಳಗಿರುವ ಚೀಲವನ್ನು ನೀರ್ಗುಳ್ಳೆಗಳ ಚಮತ್ಕಾರ ಮೇಲೆ ಕೆಳಗೆ ಓಡಾಡಿಸಿದೆ. ಚೀಲದೊಳಗಿರುವ ನೀರ್ಗುಳ್ಳೆಗಳು ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮ.

ಗುಳ್ಳೆಗಳಲ್ಲಿ ಕಿಣ್ವಗಳನ್ನು ತುಂಬಿ ಅವು ಗಾಳಿಯನ್ನು ಅರ್ಥಾತ್ ಆಕ್ಸಿಜನ್ನೋ, ಹೈಡ್ರೊಜನ್ನೋ ಮುಂತಾದ ಅನಿಲಗಳನ್ನು ಉತ್ಪಾದಿಸುವಂತೆ ಮಾಡಿದರೆ ಅವು ಹಗುರಾಗಿ ನೀರಿನಲ್ಲಿ ಮೇಲೇರಬಲ್ಲುವು. ಅಥವಾ ಆ ಅನಿಲಗಳನ್ನು ಬಳಸಿಕೊಳ್ಳುವಂತೆ ಮಾಡಿದರೆ ಗಾಳಿ ಬಿಟ್ಟ ಬಲೂನಿನಂತೆ ಭಾರವಾಗಿ ಕೆಳಗೆ ಇಳಿಯಬಲ್ಲುವು. ಇದರೊಟ್ಟಿಗೆ ಅಯಸ್ಕಾಂತವನ್ನು ಉಪಯೋಗಿಸಿದರೆ, ನಿರ್ದಿಷ್ಟ ದಿಕ್ಕಿಗೆ ಗುಳ್ಳೆಗಳನ್ನು ಆಕರ್ಷಿಸುವಂತೆಯೂ ಮಾಡಬಹುದು. ಇದು ಇವರ ಉಪಾಯ. ಇದಕ್ಕೆ ಪ್ರೇರಣೆ ನೀರಿನಲ್ಲಿ ಜೀವಿಸುವ ಸೂಕ್ಷ್ಮ ಪಾಚಿ ಸಸ್ಯಗಳಂತೆ.

ಇದಕ್ಕಾಗಿ ಸೂಕ್ಷ್ಮವಾದ ಕೋಶಗಳನ್ನು ಸೃಷ್ಟಿಸಿದ್ದಾರೆ. ಇವುಗಳೊಳಗೆ ಕೆಟಲೇಸ್ ಎನ್ನುವ ಕಿಣ್ವ ಹಾಗೂ ಡಿಎನ್ಎ ರಾಸಾಯನಿಕಗಳನ್ನು ಕೂಡಿಸಿದ್ದಾರೆ. ಈ ಕೋಶಗಳು ಆರ್ಗಾನೊ ಕ್ಲೇ, ಅರ್ಥಾತ್ ಅಮೈನೊಪ್ರೊಪೈಲ್ ಮೆಗ್ನೀಶಿಯಂ ಫಿಲ್ಲೋಸಿಲಿಕೇಟ್ ಎನ್ನುವ ಗಟ್ಟಿಯಾದ ಸಾವಯವ ವಸ್ತುವಿನಿಂದ ಮಾಡಿದಂಥವು. ಹೀಗೆ ತಯಾರಾದ ಕೃತಕ ಕೋಶಗಳಂತಹ ಗುಳ್ಳೆಗಳು ನೀರಿನ ತಳದಲ್ಲಿ ಒಟ್ಟಾಗುತ್ತಿದ್ದುವು. ನೀರಿಗೆ ಹೈಡ್ರೊಜನ್ ಪರಾಕ್ಸೈಡು ಬೆರೆಸಿದಾಗ, ಕೋಶದೊಳಗಿನ ಕೆಟಲೇಸ್ ಕಿಣ್ವ ಅದನ್ನು ಒಡೆದು ಹೈಡ್ರೊಜನ್ನನ್ನು ಬಿಡುಗಡೆ ಮಾಡುತ್ತಿತ್ತು. ಈ ಅನಿಲದಿಂದಾಗಿ ಕೋಶಗಳು ಹಗುರವಾಗಿ ಬಲೂನಿನಂತೆ ತೇಲಿ ಮೇಲೇರುತ್ತಿದ್ದುವು. ಇದೇ ಕೋಶಗಳೊಳಗೆ ಗ್ಲುಕೋಸ್ ಪರಾಕ್ಸಿಡೇಸ್ ಕಿಣ್ವವನ್ನೂ ಕೂರಿಸಿದಾಗ ಅದು ಬಿಡುಗಡೆಯಾದ ಹೈಡ್ರೊಜನ್ನನ್ನು ಉಪಯೋಗಿಸುವುದರಿಂದ ಕೋಶಗಳು ಮರಳಿ ಭಾರಿಯಾಗುತ್ತಿದ್ದುವು. ಕೋಶದ ಹೊದಿಕೆಯೊಳಗೆ ಕಬ್ಬಿಣದ ಅಣುಗಳಿರುವುದರಿಂದ ಅದನ್ನು ಅಯಸ್ಕಾಂತವನ್ನೋ, ವಿದ್ಯುತ್ತನ್ನೋ ಬಳಸಿ ನಿರ್ದಿಷ್ಟ ದಿಕ್ಕಿಗೆ ನಿರ್ದೇಶಿಸಬಹುದಿತ್ತು.

ಎರಡೂ ಕಿಣ್ವಗಳೂ ಒಂದಿನ್ನೊಂದರ ಕ್ರಿಯೆಗೆ ಪ್ರತಿದ್ವಂದ್ವಿಯಾಗಿದ್ದರಿಂದ, ಇವು ತೇಲುತ್ತಾ, ಮುಳುಗುತ್ತಾ ಇದ್ದುವು ಎಂದು ಪಾಟೀಲರ ತಂಡ ವರದಿ ಮಾಡಿದೆ. ಅಷ್ಟೇ ಅಲ್ಲ. ತೊಟ್ಟಿಯ ತಳದಲ್ಲಿದ್ದ ತಮಗಿಂತಲೂ ಭಾರಿಯಾದ ವಸ್ಗುಗಳನ್ನೂ ಇವು ಮೇಲೆತ್ತಿಕೊಂಡು ಬಂದುವಂತೆ. ಹೀಗೆ ನಿಯಂತ್ರಿತವಾಗಿ ಇವುಗಳಿಂದ ಕೆಲಸ ಮಾಡಿಸುವುದೂ ಸಾಧ್ಯ ಎಂದು ಇವರು ನಿರೂಪಿಸಿದ್ದಾರೆ.

ಆಕರ: B. V. V. S. Pavan Kumar , Avinash J. Patil * and Stephen Mann Enzyme-powered motility in buoyant organoclay/DNA protocells, Nature Chemistry, https://doi.org/10.1038/s41557-018-0119-3

ಲಿಂಕ್: https://doi.org/10.1038/s41557-018-0119-3


3. ವಲಸೆ ಬಂದ ಆತಂಕ
ಭಾರತದಲ್ಲಿ ಬೆಳೆಯುವ ಹಲವಾರು ಪ್ರಮುಖ ಬೆಳೆಗಳನ್ನು ಕಾಡುವ ಸಾಮರ್ಥ್ಯವುಳ್ಳ ವಿದೇಶೀ ಕೀಟವೊಂದು ಕರ್ನಾಟಕಕ್ಕೆ ವಲಸೆ ಬಂದಿರುವುದನ್ನು ಬೆಂಗಳೂರಿನಲ್ಲಿರುವ ಕೃಷಿ ವಿಶ್ವವಿದ್ಯಾನಿಲಯದ ಕೀಟ ತಜ್ಞರು ಪತ್ತೆ ಮಾಡಿದ್ದಾರೆ. ಗೌರಿಬಿದನೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮೆಕ್ಕೆಜೋಳದ ಬೆಳೆಗೆ ದಾಳಿಯಿಟ್ಟಿರುವ ಕೀಟ ನಮ್ಮ ದೇಶದ್ದಲ್ಲವಂತೆ. ಇದು ವಲಸೆ ಬಂದ ಕೀಟ ಎಂದು ಕೃಷಿ ವಿಶ್ವವಿದ್ಯಾನಿಲಯದ ಕೀಟಶಾಸ್ತ್ರ ವಿಭಾಗದ ಸಂಶೋಧಕ ಪ್ರಭು ಗಾಣಿಗೇರ್ ಮತ್ತು ಸಂಗಡಿಗರು ಇತ್ತೀಚೆಗೆ ಕರೆಂಟ್ ಸೈನ್ಸ್ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.

ಇಂಗ್ಲೀಷಿನಲ್ಲಿ ಫಾಲ್ ಆರ್ಮಿ ವರ್ಮ್ ಎನ್ನುವ ಇದು ಒಂದು ಚಿಟ್ಟೆಯ ಲಾರ್ವ. ಗೌರಿಬಿದನೂರಿನ ಬಳಿ ಮೆಕ್ಕೆ ಜೋಳದ ಎಲೆಗಳಲ್ಲಿ ತೂತು ಬಿದ್ದಿದ್ದನ್ನೂ, ಕೆಲವೆಡೆ ಸುರುಳಿ ಸುತ್ತಿಕೊಂಡಿದ್ದನ್ನೂ ಕೃಷಿ ವಿಜ್ಞಾನಿಗಳು ಗಮನಿಸಿದ್ದರು. ಅದಕ್ಕೆ ಕಾರಣವಾದ ಹುಳುಗಳನ್ನು ಕಂಡಾಗ ಅವು ಸಾಮಾನ್ಯವಾಗಿ ಈ ಬೆಳೆಗಳನ್ನು ಕಾಡುವವುಗಳಂತೆ ಕಾಣಲಿಲ್ಲ. ಹೀಗಾಗಿ ಅವನ್ನು ಪ್ರಯೋಗಾಲಯಕ್ಕೆ ತಂದು ಬೆಳೆಸಿ ನೋಡಿದರು. ಗೂಡು ಕಟ್ಟಿ, ಚಿಟ್ಟೆ ಹೊರ ಬಂದ ಮೇಲೆ ಅವನ್ನು ಗಮನಿಸಿದಾಗ, ಈ ಚಿಟ್ಟೆಗಳು ಸ್ಪೋಡೋಪ್ಟೆರಾ ಫ್ರುಗಿಪೆರ್ಡಾ (Spodoptera frugiperda) ಎನ್ನುವ ಪ್ರಭೇದದ ಚಿಟ್ಟೆಗಳೆಂದು ಖಾತ್ರಿಯಾಯಿತು. ಈ ಪ್ರಭೇದವನ್ನು ಭಾರತದಲ್ಲಿಯಾಗಲಿ, ಏಶಿಯಾದಲ್ಲಿಯಾಗಲಿ ಯಾರೂ ಕಂಡ ವರದಿಗಳಿಲ್ಲ.

ಸ್ಪೋಡೋಪ್ಟೆರಾ ಫ್ರುಗಿಪೆರ್ಡಾ ಹಲವು ಬೆಳೆಗಳನ್ನು ಕಾಡುವ ಪೀಡೆ. ನಮ್ಮಲ್ಲಿ ಬೆಳೆಯುವ ಕಬ್ಬು, ರಾಗಿ, ಭತ್ತ, ಮೆಕ್ಕೆಜೋಳ, ಬೇಳೆಗಳು, ಟೊಮ್ಯಾಟೊ ಮುಂತಾದ ಪ್ರಮುಖ ಕೃಷಿ ಬೆಳೆಗಳನ್ನು ಇದು ಕಾಡಿರುವುದು ಕಂಡಿದೆ. ಕೆನಡಾ, ದಕ್ಷಿಣ ಅಮೆರಿಕಾಗಳಲ್ಲಿ ಇದರ ಹಾವಳಿ ಹೆಚ್ಚು. ಇತ್ತೀಚೆಗೆ ಇದು ಆಫ್ರಿಕಾದಲ್ಲಿಯೂ ಕಂಡು ಬಂದಿದೆ. ಆದರೆ ಏಶಿಯಾದಲ್ಲಿಯಾಗಲಿ, ಭಾರತದಲ್ಲಿಯಾಗಲಿ ಇದು ಇದೆ ಎನ್ನುವುದು ಗೊತ್ತಿರಲಿಲ್ಲ.

“ಜುಲೈ ತಿಂಗಳಲ್ಲಿ ಗೌರಿಬಿದನೂರಿನ ಹೊಲಗಳಲ್ಲಿ ಇವನ್ನು ಕಂಡೆವು. ಪ್ರಯೋಗಾಲಯದಲ್ಲಿ ಇವನ್ನು ಕೃಷಿ ಮಾಡುವುದು ತುಸು ಕಷ್ಟವಾಯಿತು. ಏಕೆಂದರೆ ಇವು ಒಂದಿನ್ನೊಂದನ್ನು ತಿಂದು ಬಿಡುತ್ತವೆ. ಅಂತೂ ತಿಂಗಳು ಕಳೆದು ಚಿಟ್ಟೆ ಹೊರ ಬಂದಾಗಲಷ್ಟೆ ಇದು ಹೊಸ ಪ್ರಬೇಧವೆಂದು ನಮಗೆ ಗೊತ್ತಾಗಿದ್ದು,” ಎನ್ನುತ್ತಾರೆ ಪ್ರಭು ಗಾಣಿಗೇರ. ಇದು ಹೇಗೆ ಭಾರತಕ್ಕೆ ಕಾಲಿಟ್ಟಿತೋ ಗೊತ್ತಿಲ್ಲ. ಬಹುಶಃ ಮಾನ್ಸೂನ್ ಮೋಡಗಳ ಜೊತೆಯಲ್ಲಿ ಇವುಗಳ ಮೊಟ್ಟೆ ಬಂದಿರಬಹುದು? ಇಲ್ಲವೇ ಯಾರದ್ದಾದರೂ ಸಾಮಾನುಗಳ ಜೊತೆಯಲ್ಲಿ ಕಸವಾಗಿ ಸೇರಿಕೊಂಡು ಬಂದಿರಬಹುದು ಎಂಬ ಊಹೆಗಳಿವೆ. ಅಥವಾ ಲಾಭಕೋರರು ಯಾರಾದರೂ ಇದನ್ನು ತಂದು ಹಾಕಿದ್ದರೂ ಆಶ್ಚರ್ಯವಿಲ್ಲ. ಏನೇ ಇರಲಿ. ಹೀಗೆ ವಲಸೆ ಬಂದ ಜೀವಿಗಳು ಹೊಸ ಪರಿಸರಕ್ಕೆ ಒಗ್ಗಿಕೊಂಡು ಬಿಟ್ಟರೆ ಅವನ್ನು ಹತ್ತಿಕ್ಕುವುದು ಕಷ್ಟ. ಏಕೆಂದರೆ ಹೊಸ ಪರಿಸರದಲ್ಲಿ ಅವನ್ನು ತಡೆಯುವ ಸಹಜ ವೈರಿಗಳು ಇರುವುದಿಲ್ಲ. ಕಳೆದ ವರ್ಷವಷ್ಟೆ ಹೀಗೆ ಟೊಮ್ಯಾಟೋಗೂ ಒಂದು ವಲಸೆ ಜೀವಿಯ ಕಾಟ ಕಾಡಿ ಸಾಕಷ್ಟು ನಷ್ಟವಾಗಿತ್ತು ಎನ್ನುತ್ತದೆ ಕರೆಂಟ್ ಸೈನ್ಸ್.

ಇದನ್ನು ಗುರುತಿಸುವುದೂ ಸುಲಭವಂತೆ. ಈ ಹುಳುಗಳ ಮೈ ಮೇಲೆ ಉದ್ದಕ್ಕೂ ಬೊಟ್ಟು ಇಟ್ಟಂತೆ ಕರಿ ಚುಕ್ಕೆಗಳಿವೆ. ಅಲ್ಲದೆ ಬಾಲದ ಬಳಿ ನಾಲ್ಕು ದೊಡ್ಡ ಚುಕ್ಕೆಗಳು ಇರುವುದು ವಿಶಿಷ್ಟ ಗುರುತು. ಹೀಗಾಗಿ ರೈತರು ಇದನ್ನು ಗುರುತಿಸುವುದು ಸುಲಭ. ಆರಂಭದ ಹಂತದಲ್ಲಿಯೇ ಇದನ್ನು ಗುರುತಿಸಿದರೆ ಬೇವಿನೆಣ್ಣೆಯನ್ನು ಸಿಂಪರಿಸಿ ನಿಯಂತ್ರಿಸಬಹುದು. ಅತಿ ಹೆಚ್ಚು ಸೋಂಕು ಇದ್ದಾಗ ಕೀಟನಾಶಕಗಳ ಮೊರೆ ಹೋಗದೆ ನಿರ್ವಾಹವಿಲ್ಲ ಎನ್ನುತ್ತಾರೆ ಪ್ರಭು ಗಾಣಿಗೇರ್.

ವೈರಿ ದೇಶದೊಳಗೆ ನುಸುಳುವಾಗಲೇ ಗೊತ್ತಾಗಿರುವುದರಿಂದ ಬಹುಶಃ ಹತ್ತಿಕ್ಕಬಹುದೇನೋ? ಏನಿಲ್ಲವಾದರೂ, ಅದರಿಂದಾಗುವ ಅಪಾಯದ ಬಗ್ಗೆ ಎಚ್ಚರದಿಂದ ಕಣ್ಗಾವಲಿರುವುದು ಮುಖ್ಯ.
ಆಕರ: Prabhu Ganiger et al., , Occurrence of the new invasive pest, fall armyworm, Spodoptera frugiperda (J.E. Smith) (Lepidoptera: Noctuidae), in the maize fieldsof Karnataka, India CURRENT SCIENCE, VOL. 115, NO. 4, Pp 621-623, 25 AUGUST 2018
ಲಿಂಕ್: http://www.currentscience.ac.in/Volumes/115/04/0621.pdf


4. ತುಂತುರು ಸುದ್ದಿಗಳು

• ಬಾಲ ಬೆಳೆಯುವುದು ಹೇಗೆ ಗೊತ್ತೇ? ಜೇಡಿಮಣ್ಣು ಹೇಗೆ ಒತ್ತಿದಾಗ ನೀರಿನಂತೆ ಹರಿದು, ಮತ್ತೆ ಗಟ್ಟಿಯಾಗುತ್ತದೆಯೋ ಹಾಗೆಯೇ ಜೀವಕೋಶಗಳ ಗುಂಪೂ ಒಮ್ಮೆ ದ್ರವದಂತೆಯೂ, ಇನ್ನೊಮ್ಮೆ ಗಟ್ಟಿ ವಸ್ತುವಿನಂತೆಯೂ ವರ್ತಿಸುವುದರಿಂದ ಜೀವಕೋಶಗಳ ಮುದ್ದೆಯೊಂದು ಆಕಾರ ಪಡೆದುಕೊಂಡು ಜೀವಿಯಾಗುತ್ತದಂತೆ. ಹೀಗೊಂದು ಸಂಶೋಧನೆ ಮೊನ್ನೆ ವರದಿಯಾಗಿದೆ.

• ಬ್ರೆಜಿಲ್ಲಿನ ಸುಪ್ರಸಿದ್ಧ ಹಾಗು ಅತಿ ಹಳೆಯ ಚಾರಿತ್ರಿಕ ವಸ್ತುಸಂಗ್ರಹಾಲಯವು ಬೆಂಕಿ ಬಿದ್ದು ಸುಟ್ಟು ಹೋಗಿದೆ. 1818ರಲ್ಲಿ ಸ್ಥಾಪನೆಯಾಗಿದ್ದ ಈ ಸಂಗ್ರಹಾಲಯ ಪ್ರಪಂಚದಲ್ಲೇ ಅತಿ ಹಳೆಯದು ಹಾಗೂ ಸುಮಾರು 2 ಕೋಟಿ ವಸ್ತುಗಳನ್ನು ಸಂಗ್ರಹಿಸಿಟ್ಟು. ಇವೆಲ್ಲವೂ ಈಗ ಸುಟ್ಟು ಭಸ್ಮವಾಗಿವೆ.
• ಮನೆಯಲ್ಲಿ ಅಡುಗೆ ಮಾಡುವ ಮೈಕ್ರೊವೇವ್ ಒಲೆ ರಸಾಯನಿಕ ವಿಜ್ಞಾನಿಗಳಿಗೂ ನೆರವಾಗಲಿದೆಯಂತೆ. ಮೈಕ್ರೊವೇವ್ ಒಲೆಯನ್ನು ಬಳಸಿ ಅತಿ ದುಬಾರಿ ಹಾಗೂ ಬಲು ವಿಶಿಷ್ಟ ವಸ್ತು ಎನ್ನಿಸಿದ ಗ್ರಾಫೀನು ಹಾಳೆಗಳನ್ನು ಸುಲಭವಾಗಿ ತಯಾರಿಸಬಹುದು ಎನ್ನುವ ಸುದ್ದಿ ಬಂದಿದೆ.
• ಹೊಗೆಯಲ್ಲಿ ಮಸಿ ಇರುವುದೇಕೆ ಎಂದು ಎಂದಾದರೂ ಯೋಚಿಸಿದ್ದೀರಾ? ಇದೋ. ಹೊಗೆಯಂತಹ ಅತಿ ಬಿಸಿಯಾದ ವಾತಾವರಣದಲ್ಲಿಯೂ ಅಣುಗಳು ಹೆಪ್ಪುಗಟ್ಟಿ ಮಸಿಯಾಗುವ ಬಗೆ ಹೇಗೆನ್ನುವುದು ಈಗ ಬಯಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದಿನ ಜಾಣಸುದ್ದಿಯಲ್ಲಿ ಕೇಳುವಿರಿ.


5. ಬೀಗಲ್ ಸಾಹಸಯಾನ
ಚಾರ್ಲ್ಸ್ ಡಾರ್ವಿನ್ನರ ಬಗ್ಗೆ ನಮಗೆಲ್ಲ ಗೊತ್ತು. ಜೀವಿಗಳು ವಿಕಾಸವಾದದ್ದು ಹೇಗೆ ಎನ್ನುವ ಬಗ್ಗೆ ವಿಶ್ವಾಸಾರ್ಹವಾದ ತರ್ಕವನ್ನುನೀಡಿ ನಮ್ಮ ಅರಿವಿನ ಹಾದಿಯನ್ನೇ ಪಲ್ಲಟಿಸಿದವರು ಡಾರ್ವಿನ್. ಇವರು ಬರೆದ ಆರಿಜಿನ್ ಆಫ್ ಸ್ಪೀಶೀಸ್ … ಎನ್ನುವ ಹೆಸರಿನಿಂದ ಆರಂಭವಾಗುವ ಪುಸ್ತಕ ಜೀವಿವಿಜ್ಞಾನವಷ್ಟೆ ಅಲ್ಲ, ಭೌತವಿಜ್ಞಾನ, ರಸಾಯನವಿಜ್ಞಾನ, ಅರ್ಥಶಾಸ್ತ್ರ, ಮಾನವಶಾಸ್ತ್ರ, ತತ್ವಶಾಸ್ತ್ರ ಮುಂತಾದ ವಿವಿಧ ಜ್ಞಾನ ಶಾಖೆಗಳನ್ನು ಪ್ರಭಾವಿಸಿದೆ. ಮಾನವನ ಯೋಚನೆಯ ದಿಕ್ಕನ್ನು ಬದಲಿಸಿದೆ. ಚಾರ್ಲ್ಸ್ ಡಾರ್ವಿನ್ನರ ಸಾಧನೆ ಇಷ್ಟಕ್ಕೇ ನಿಲ್ಲುವುದಿಲ್ಲ. ಅವರ ಬರೆಹಗಳು ಎಷ್ಟು ವೈಜ್ಞಾನಿಕವಾಗಿದ್ದುವೋ, ಅಷ್ಟೇ ಸ್ವಾರಸ್ಯಕರವೂ ಆಗಿದ್ದುವು. ಅವರು ಯುವಕರಾಗಿದ್ದಾಗ ಕೈಗೊಂಡ ಸಾಗರಯಾನದ ವೇಳೆ ಕೈಗೊಂಡ ಸಂಶೋಧನೆಗಳೇ ಅವರ ಚಿಂತನೆಗಳಿಗೆ ಮೂಲವಾಗಿದ್ದುವು. ಎಚ್ಎಮ್ಎಸ್ ಬೀಗಲ್ ಎನ್ನುವ ಹಡಗಿನಲ್ಲಿ ಅವರು ಎರಡು ವರ್ಷಗಳ ಕಾಲ ಪ್ರಪಂಚದ ವಿವಿಧೆಡೆಗೆ ಪಯಣಿಸಿದ್ದರು. 1831ರ ಡಿಸೆಂಬರ್ 27ರಂದು ಆರಂಭವಾದ ಈ ಚಾರಿತ್ರಿಕ ಪಯಣದ ಪ್ರಮುಖ ವಿವರಗಳನ್ನು ಅವರು ಒಂದು ದಿನಚರಿಯಲ್ಲಿ ದಾಖಲಿಸಿ, ಅದನ್ನೇ “ದಿ ಜರ್ನಲ್ ಆಫ್ ರಿಸರ್ಚಸ್ ಇನ್ ಟು ದಿ ನ್ಯಾಚುರಲ್ ಹಿಸ್ಟರಿ ಅಂಡ್ ಜಿಯಾಲಜಿ ಆಫ್ ಪ್ಲೇಸಸ್ ವಿಸಿಟೆಡ್ ಡ್ಯೂರಿಂಗ್ ದಿ ವಾಯೇಜ್ ಅರೌಂಡ್ ದಿ ವರ್ಲ್ಡ್ ಆಫ್ ಹೆಚ್ ಎಮ್ ಎಸ್ ಬೀಗಲ್” ಎಂಬ ಪುಸ್ತಕವನ್ನಾಗಿ ಪ್ರಕಟಿಸಿದ್ದಾರೆ. ಈ ಪುಸ್ತಕ ಡಾರ್ವಿನ್ನರ ನೋಟ ಎಷ್ಟು ಸೂಕ್ಷ್ಮವಾಗಿತ್ತೆಂದು ಪರಿಚಯಿಸುತ್ತದೆ. ಜೊತೆಗೇ ಅಂದಿನ ಕಾಲದ ಪರಿಸರ ಹಾಗೂ ಆ ಬಗ್ಗೆ ನಮಗಿದ್ದ ತಿಳುವಳಿಕೆಯ ಅರಿವನ್ನೂ, ಅಂದಿನ ಬದುಕಿನ ಸುಂದರ ಚಿತ್ರಣವನ್ನೂ ನೀಡುತ್ತದೆ. ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ನಿಮಗಾಗಿ ಇಲ್ಲಿ ಕಥೆ ಹೇಳುತ್ತಿದ್ದೇವೆ. ಪ್ರತಿವಾರವೂ ಒಂದಿಷ್ಟು ಸಾಗರಪಯಣ ಮಾಡೋಣ. ಇದೋ. ಇಲ್ಲಿದೆ ಮೊದಲ ದಿನದ ಪಯಣ.

ಸೇಂಟ್ ಜಾಗೊ – ಕೇಪ್ ಡಿ ವರ್ಡಿ ದ್ವೀಪಗಳು

ಭಾರಿಯಾಗಿ ಬೀಸಿದ ನೈಋತ್ಯ ಮಾರುತಗಳಿಂದಾಗಿ ಎರಡು ಬಾರಿ ಹಿಮ್ಮೆಟ್ಟಿದ ಬೀಗಲ್ ಹಡಗು ಕೊನೆಗೂ ಡೇವನ್ ಪೋರ್ಟಿನಿಂದ ಹೊರಟಿತು. ಹತ್ತು ಫಿರಂಗಿಗಳಿದ್ದ ಆ ಕೂವೆ ಹಡಗು ಕಪ್ತಾನ ಫಿಟ್ಜ್ ರಾಯನ ನೇತೃತ್ವದಲ್ಲಿ ಡಿಸೆಂಬರ್ 27, 1831ರಂದು ಪ್ರಯಾಣ ಆರಂಭಿಸಿತು. ಕಪ್ತಾನ ಕಿಂಗರ ನೇತೃತ್ವದಲ್ಲಿ ಆರಂಭವಾಗಿದ್ದ ಪಟಗೋನಿಯ ಹಾಗೂ ಟಿಯೆರ್ರಾ ಡೆ ಫ್ಯೂಗೊದ ಸರ್ವೇಕ್ಷಣೆಗಳನ್ನು ಮುಗಿಸುವುದು, ಚಿಲಿ, ಪೆರು ಹಾಗೂ ಶಾಂತಿಸಾಗರದ ಕೆಲವು ದ್ವೀಪಗಳ ಕರಾವಳಿಗಳ ಸರ್ವೆ ಹಾಗೂ ಪ್ರಪಂಚದ ಹಲವೆಡೆ ಕಾಲಮಾನವನ್ನು ಅಳೆಯುವುದು ಈ ಅನ್ವೇಷಣೆಯ ಉದ್ದೇಶವಾಗಿತ್ತು. ಜನವರಿ 6 ರಂದು ನಾವು ಟೆನೆರಿಫೆ ತಲುಪಿದೆವು. ಆದರೆ ನಾವು ಕಾಲರಾ ತಂದು ಬಿಡುತ್ತೇವೆಂಬ ಭಯದಿಂದ ಅಂದೇ ತೀರಕ್ಕೆ ಇಳಿಯಲಿಲ್ಲ. ಮರುದಿನ ಬೆಳಗ್ಗೆ ದೂರದಲ್ಲಿ ಅಂಕುಡೊಂಕಾಗಿದ್ದ ಗ್ರಾಂಡ್ ಕ್ಯಾನರಿ ದ್ವೀಪಗಳ ಬೆನ್ನ ಹಿಂದಿನಿಂದ ಉದಯಿಸಿದ ಸೂರ್ಯ ತಟಕ್ಕನೆ ಟೆನೆರಿಫೆಯ ಶಿಖರವನ್ನು ಬೆಳಗುವುದನ್ನು ಕಂಡೆವು. ಶಿಖರದ ಕೆಳಗೆಲ್ಲ ಮೋಡಗಳು ಹಿಂಜಿದ ಉಣ್ಣೆಯಂತೆ ಕವಿದಿದ್ದುವು.

ನಾವು ಮರೆಯಲಾಗದಂತಹ ದಿನಗಳಲ್ಲಿ ಇದು ಮೊದಲನೆಯದು. ಜನವರಿ 18, 1832ರಂದು ನಾವು ಸೇಂಟ್ ಜಾಗೋ ದ್ವೀಪದ ಪ್ರಾಯಾ ಬಂದರಿನಲ್ಲಿ ಲಂಗರು ಹಾಕಿದೆವು. ಪ್ರಸ್ಥಭೂಮಿಯ ಭೂಶಿರ ಡೆ ವರ್ಡಿಯಲ್ಲಿನ ಪ್ರಮುಖ ದ್ವೀಪ ಸೇಂಟ್ ಜಾಗೋದಲ್ಲಿನ ಬಂದರು ಅದು.
ಕಡಲಿನಿಂದ ನೋಡಿದಾಗ ಪ್ರಾಯಾ ಬಂದರಿನ ಪರಿಸರವೆಲ್ಲವೂ ಬರಡೆನ್ನಿಸುತ್ತದೆ. ಹಿಂದೆ ಸುರಿದ ಜ್ವಾಲಾಮುಖಿಯ ಬೆಂಕಿ ಹಾಗೂ ಉಷ್ಣವಲಯದ ಸೂರ್ಯನ ಸುಡು ಬಿಸಿಲಿನಿಂದಾಗಿ ಬಹುತೇಕ ಸ್ಥಳಗಳಲ್ಲಿನ ನೆಲದಲ್ಲಿ ಹಸಿರು ಬೆಳೆಯದಂತಾಗಿದೆ. ಪ್ರಸ್ಥಭೂಮಿಯಿಂದ ಹಂತ ಹಂತವಾಗಿ ನೆಲ ಎತ್ತರವಾಗುತ್ತದೆ. ಅಲ್ಲಲ್ಲಿ ಚೂಪಾದ ಗೋಪುರಗಳಂತಹ ಬೆಟ್ಟಗಳಿವೆ. ಕ್ಷಿತಿಜದಗುಂಟವೂ ಎತ್ತರದ ಪರ್ವತಮಾಲೆ ವಕ್ರರೇಖೆಗಳನ್ನು ಎಳೆದಿದೆ. ಸದಾ ಮಬ್ಬಾಗಿರುವ ಅಲ್ಲಿನ ಹವೆಯಲ್ಲಿ ಇದು ಬಲು ಕೌತುಕಮಯವಾದ ದೃಶ್ಯವಾಗಿ ತೋರುತ್ತದೆ. ಆಗಷ್ಟೆ ಕಡಲಿನಿಂದ ಇಳಿದು ಪ್ರಪ್ರಥಮ ಬಾರಿಗೆ ತೆಂಗಿನ ತೋಪಿನೊಳಗೆ ಕಾಲಿಡುವ ಯಾವನಿಗೂ ಖುಷಿಯಾಗದೇ ಇರದು. ಆ ದ್ವೀಪ ಸಾಧಾರಣವೆನ್ನಿಸಿದರೂ, ಕೇವಲ ಇಂಗ್ಲೆಂಡಿನ ನೆಲವನ್ನಷ್ಟೆ ನೋಡಿದ್ದವರಿಗೆ ಹಸಿರು ತುಂಬಿದ ನಾಡಿಗಿಂತಲೂ ಬಣಗುಡುವ ಈ ಬರಡೂ ಹೊಸತೆನ್ನಿಸುವುದರಲ್ಲಿ ಅಚ್ಚರಿಯೇನಲ್ಲ. ಆ ಲಾವಾಶಿಲೆಗಳ ಬಯಲಿನಲ್ಲಿ ದೂರ ದೂರದವರೆಗೆ ಒಂದೇ ಒಂದು ಹಸಿರೆಲೆಯೂ ಗೋಚರಿಸದು. ಆದರೂ ಕೆಲವು ಹಸುಗಳ ಜೊತೆಗೆ ಆಡುಗಳ ಹಿಂಡುಗಳು ಅಲ್ಲಿ ಬದುಕು ಕಟ್ಟಿಕೊಂಡಿವೆ. ಮಳೆ ಅಪರೂಪ. ಆದರೆ ಬಲು ಅಲ್ಪ ಕಾಲ ಮಳೆ ಭಾರಿಯಾಗಿ ಸುರಿಯುತ್ತದೆ. ಮಳೆ ಸುರಿದ ತಕ್ಷಣದಲ್ಲಿಯೇ ಅಲ್ಲಿರುವ ಎಲ್ಲ ಸಂದುಗೊಂದುಗಳಿಂದಲೂ ಹಸಿರು ಚಿಗುರೊಡೆಯುತ್ತದೆ. ಬಲು ಶೀಘ್ರವೇ ಒಣಗಿ ಹುಲ್ಲಾಗಿ ಬಿಡುವ ಇದೇ ಆ ಪ್ರಾಣಿಗಳ ಬದುಕಿಗೆ ಜೀವಾಳ. ಕಳೆದೊಂದು ವರ್ಷದಿಂದಲೂ ಇಲ್ಲಿ ಮಳೆಯಾಗಿಲ್ಲ. ಈ ದ್ವೀಪವು ಪತ್ತೆಯಾದ ಮೊದಲಲ್ಲಿ ಪ್ರಾಯಾ ಬಂದರಿನ ನೆರೆಹೊರೆಯಲ್ಲೆಲ್ಲ ಮರಗಳ ಹೊದಿಕೆ ಇತ್ತಂತೆ. ವಿವೇಚನೆಯಿಲ್ಲದೆ ಮರಗಳನ್ನು ನಾಶಮಾಡಿದ್ದು ಇಲ್ಲಿ, ಸೇಂಟ್ ಹೆಲೆನಾ ಹಾಗೂ ಕೆಲವು ಕೆನರಿ ದ್ವೀಪಗಳನ್ನು ಹೆಚ್ಚೂಕಡಿಮೆ ಬರಡಾಗಿಸಿದೆ1. ಮಳೆಗಾಲದ ಕೆಲವು ದಿನಗಳಲ್ಲಿ ಮಾತ್ರ ನೀರು ಹರಿಯುವ ಸಪಾಟಾದ ವಿಶಾಲ ಕಣಿವೆಯಲ್ಲಿ ಅಲ್ಲಲ್ಲಿ ಎಲೆಗಳೇ ಇಲ್ಲದ ಕುರುಚಲು ಪೊದೆಗಳನ್ನು ಕಾಣಬಹುದು. ಕೆಲವೇ ಜೀವಗಳು ಈ ಕಣಿವೆಯಲ್ಲಿ ವಾಸಿಸುತ್ತವೆ. ಇಲ್ಲಿ ಸಾಮಾನ್ಯವಾಗಿ ಕಾಣಬರುವ ಪಕ್ಷಿ ಎಂದರೆ ಡಾಸೆಲೋ ಇಯಾಗೊಯೆನ್ಸಿಸ್ ಎನ್ನುವ ಮಿಂಚುಳ್ಳಿ. ಹರಳು ಬೀಜದ ಗಿಡಗಳ ಮೇಲೆ ಕುಳಿತಿರುವ ಇದು ಮಿಡತೆಗಳನ್ನೋ, ಹಲ್ಲಿಗಳನ್ನೋ ಹಿಡಿಯಲು ಚಿಮ್ಮುವುದನ್ನು ನೋಡಬಹುದು. ಗಾಢ ಬಣ್ಣವಿದ್ದರೂ ಇದು ಯುರೋಪಿನ ಮಿಂಚುಳ್ಳಿಗಳಷ್ಟು ಸುಂದರವೇನಲ್ಲ. ಅದರ ಹಾರಾಟ ಹಾಗೂ ಒಣ ಪ್ರದೇಶದಲ್ಲಿರುವ ಅದರ ವಾಸನೆಲೆಯಲ್ಲಿಯೂ ಅದು ಯುರೋಪಿನವುಗಳಿಗಿಂತ ಸಾಕಷ್ಟು ಭಿನ್ನ.


5. ಜಾಣನುಡಿ
ಸೆಪ್ಟೆಂಬರ್ 9 , 1923
ನ್ಯೂಗಿನೀ ದ್ವೀಪವಾಸಿಗಳಲ್ಲಿ ಕಂಡು ಬರುವ ವಿಚಿತ್ರ ನರರೋಗಕ್ಕೆ ಕಾರಣವನ್ನು ತಿಳಿಸಿದ ಹಾಗೂ 1976ರಲ್ಲಿ ವೈದ್ಯಕೀಯ ನೋಬೆಲ್ ಪಾರಿತೋಷಕವನ್ನು ಹಂಚಿಕೊಂಡ ವೈದ್ಯ ಕಾರ್ಲ್ಟನ್ ಗಾಜುಚೆಕ್ ಹುಟ್ಟಿದ ದಿನ.

ಆಸ್ಟ್ರಿಯಾದಲ್ಲಿ ಹುಟ್ಟಿದ ಗಾಜುಚೆಕ್ ವೈದ್ಯಸೇವೆಗೆಂದು ಆಯ್ದುಕೊಂಡಿದ್ದು ದೂರದ ನ್ಯೂಗಿನೀ ದ್ವೀಪಗಳನ್ನು. ನಾಗರೀಕತೆಯ ಸೋಂಕೇ ಇಲ್ಲದ ಅಲ್ಲಿನ ಬುಡಕಟ್ಟು ಜನಾಂಗಗಳ ಜೊತೆಗೆ ಬೆರೆತು ಅಲ್ಲಿಯೇ ನೆಲೆಸಿದ್ದವರು. ಆ ವೇಳೆ ಅಲ್ಲಿನ ಕುರು ಜನಾಂಗದಲ್ಲಿ ಕಾಣಿಸುತ್ತಿದ್ದ ವಿಶಿಷ್ಟ ರೋಗದ ಬಗ್ಗೆ ಇವರು ಅಧ್ಯಯನ ಕೈಗೊಂಡರು. ಕುರು ಜನಾಂಗದ ಪುರುಷರು ಅದರಲ್ಲೂ ಹಿರಿಯರ ಸ್ನಾಯುಗಳು ಹಾಗೂ ನರಗಳು ಕ್ರಮೇಣ ಸವೆದು ಕೃಶರಾಗಿ ಸಾಯುತ್ತಿದ್ದರು. ಕುರು ಜನರ ಆಹಾರ ಪದ್ಧತಿತಳು ಹಾಗೂ ಇತರೆ ನಡವಳಿಕೆಗಳನ್ನು ಅಧ್ಯಯನ ಮಾಡಿದ ಗಾಜುಚೆಕ್ ಅಲ್ಲಿನ ಹಿರಿಯರು ತಾವು ಕೊಂದು ತಂದ ಮನುಷ್ಯರ ಮಿದುಳನ್ನು ತಿನ್ನುತ್ತಿದ್ದುದರಿಂದ ಈ ರೋಗ ಬರುತ್ತಿರಬಹುದೇ ಎಂದು ಗುಮಾನಿ ಪಟ್ಟರು. ಏಕೆಂದರೆ ಮಿದುಳನ್ನು ಕೇವಲ ಪುರುಷರಷ್ಟೆ ತಿನ್ನುತ್ತಿದ್ದರು. ಈ ಬಗ್ಗೆ ಅಧ್ಯಯನ ನಡೆಸಿದ ಇವರು ಮಿದುಳಿನಲ್ಲಿರುವ ಯಾವುದೋ ಸೋಂಕು ಈ ನರಭಕ್ಷಕರನ್ನು ತಾಕಿ ರೋಗವನ್ನುಂಟು ಮಾಡುತ್ತಿರಬೇಕು ಎಂದು ಊಹಿಸಿದರು. ಅದು ಯಾವುದು ಎಂದು ನಿರೂಪಿಸಲು ಸಾಧ್ಯವಾಗದಿದ್ದರೂ, ಅದು ಸೋಂಕೇ ಎಂದು ಇವರು ಖಚಿತಪಡಿಸಿದ್ದರು. ಇದೇ ಬಗೆಯ ಸ್ಲೋ ವೈರಸ್ಸುಗಳು ಅಥವಾ ನಿಧಾನ ವೈರಸ್ಸುಗಳ ರೋಗಗಳು ಅನಂತರ ಪತ್ತೆಯಾದುವು. ದನಗಳಲ್ಲಿ ಸ್ಕ್ರೇಪೀ ಕೂಡ ಇಂತಹುದೇ ರೋಗ ಎಂದು ಅನಂತರ ತಿಳಿಯಿತು. ಈ ರೋಗಗಳಿಗೆ ಕಾರಣವಾದ ಪ್ರೀಯಾನು ಎನ್ನುವ ವೈರಸ್ಸುಗಳಿಗಿಂತಲೂ ಸೂಕ್ಷ್ಮವಾದ ಹೊಸ ಬಗೆಯ ಜೀವಿಗಳು ಕಾರಣವಿರಬಹುದು ಎನ್ನುವ ತರ್ಕವನ್ನು ಅನಂತರ ಪ್ರುಸಿನರ್ ಎಂಬಾತ ಹೇಳಿದ.

ಗಾಜುಚೆಕ್ಕರು ನ್ಯೂಗಿನೀಯಲ್ಲಿ ಅಧ್ಯಯನ ಮಾಡುತ್ತಿದ್ದಾಗ ಅಲ್ಲಿ ಹರೆಯದ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದು ಅವರಿಗೆ 80 ವರ್ಷ ವಯಸ್ಸಾಗಿದ್ದಾಗ ದಾವೆ ಹೂಡಲಾಯಿತು. ಒಂದು ವರ್ಷ ಅವರನ್ನು ಜೈಲುವಾಸವನ್ನೂ ವಿಧಿಸಲಾಗಿತ್ತು. ಜೈಲಿನಿಂದ ಹೊರಬಂದ ಒಂದೇ ವರ್ಷದಲ್ಲಿ ಆತ ತನ್ನ ತವರಿನಲ್ಲಿ ಸಾವನ್ನಪ್ಪಿದರು.

ಕೊಳ್ಳೇಗಾಲ ಶರ್ಮ

—-
ಇದು ಇಂದಿನ ಜಾಣಸುದ್ದಿ. ರಚನೆ ಮತ್ತು ಪ್ರಸ್ತುತಿ : ಕೊಳ್ಳೇಗಾಲ ಶರ್ಮ. ಜಾಣಸುದ್ದಿ ಕುರಿತ ಸಲಹೆ, ಸಂದೇಹಗಳಿಗೆ ಹಾಗೂ ಜಾಣಪ್ರಶ್ನೆಗೆ ಉತ್ತರವಿದ್ದರೆ ನೇರವಾಗಿ 9886640328 ಈ ನಂಬರಿಗೆ ಕರೆ ಮಾಡಿ ಇಲ್ಲವೇ ವಾಟ್ಸಾಪು ಮಾಡಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x