ಜಾಣಸುದ್ದಿ 18: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com

ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)

ಈ ವಾರದ ಸಂಚಿಕೆಯಲ್ಲಿ:

ದೇಹಶಿಲ್ಪವನ್ನು ಕಡೆಯುವ ನಿಯಮಗಳು
ಹೆಬ್ಬಾವಿನ ಬೆನ್ನಟ್ಟಿದ ಡಿಎನ್ಎ
ಹೊಗೆಯಲ್ಲಿ ಮಸಿ ಆಗುವುದು ಹೇಗೆ?
ತುಂತುರು ಸುದ್ದಿಗಳು
ಬೀಗಲ್ ಸಾಹಸಯಾನ 2
1. ದೇಹಶಿಲ್ಪವನ್ನು ಕಡೆಯುವ ನಿಯಮಗಳು
ದೇವನು ಕಡೆದ ಶಿಲ್ಪವದು ಅಂತ ಯಾರೋ ಪ್ರೇಮಿ ತನ್ನ ಪ್ರೇಯಸಿಯನ್ನು ಮೆಚ್ಚಿ ಹಾಡುತ್ತಿದ್ದನಂತೆ. ಪಾಪ. ಪ್ರೇಯಸಿಯ ರೂಪದಿಂದ ಮರುಳಾಗಿ ಹಾಗಾಗಿರಬೇಕು ಎನ್ನಬೇಡಿ. ಪ್ರತಿ ದೇಹವೂ ಒಂದು ಕಡೆದ ಶಿಲ್ಪದಂತೆಯೇ ಸರಿ. ಆಯಾಯಾ ಅಂಗಗಳು ಇರಬೇಕಾದ ಸ್ಥಳದಲ್ಲೇ ಇರುತ್ತವೆ. ಇರಬೇಕಾದ ಪ್ರಮಾಣದಲ್ಲಿಯೇ ಇರುತ್ತವೆ. ನೆಲಮುಟ್ಟುವಷ್ಟು ಉದ್ದದ ಕೈಯನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಹಾಗೆಯೇ ಹನುಮಂತನ ಬಾಲವನ್ನೂ ನಾವು ಊಹಿಸಿಕೊಳ್ಳಲು ಸಾಧ್ಯವಿಲ್ಲ. ರಾವಣನ ಸಿಂಹಾಸನಕ್ಕಿಂತಲೂ ಎತ್ತರಕ್ಕೆ ಬಾಲವನ್ನು ಸಿಂಬಿ ಸುತ್ತಿಕೊಂಡು ಕುಳಿತಿದ್ದನಂತೆ ಹನುಮ. ಹಾಗೆನ್ನುತ್ತದೆ ರಾಮಾಯಣದ ಒಂದು ಕಥೆ.

ಇದನ್ನು ನಾವು ಸಾಮಾನ್ಯವಾಗಿ ನಂಬಲಾಗದ್ದರಿಂದಲೇ ಹನುಮನ ಈ ಕಥೆ ರೋಚಕ ಕಥೆಯಾಗುತ್ತದೆ. ಹಾಗೆ ಹನುಮನ ಹಾಗೆ ಎಷ್ಟೆಂದರಷ್ಟು ಉದ್ದನೆಯ ಬಾಲ ಬೆಳೆಯುವುದು ಸಾಧ್ಯವೇ? ಇದೇ ಪ್ರಶ್ನೆಯನ್ನು ವಿಜ್ಞಾನಿಗಳು ಹೀಗೆ ಕೇಳುತ್ತಾರೆ. ಇದು ಯಾಕೆ ಪ್ರತಿಯೊಂದು ಜೀವಿಯ ಪ್ರತಿ ಅಂಗವೂ ಹೀಗೆ ಪ್ರಮಾಣ ಬದ್ಧವಾಗಿ ಇರುತ್ತದೆ? ಅಡ್ಡಾದಿಡ್ಡಿ ಗಾತ್ರವಾಗಲಿ, ಆಕಾರವಾಗಲಿ ಇರುವುದಿಲ್ಲವೇಕೆ? ಇದೋ ಈ ಕೌತುಕದ ಪ್ರಶ್ನೆಗೆ ಉತ್ತರ ಹೀಗೂ ಇರಬಹುದು. ಬೆಳೆಯುತ್ತಿರುವ ಜೀವಿಯ ಭ್ರೂಣದ ಕೋಶಗಳು ಜೇಡಿಮಣ್ಣಿನಂತೆ. ಅವು ಒತ್ತಡಕ್ಕೆ ಸಿಕ್ಕ ಕಡೆಯಲ್ಲಿ ನೀರಾಗಿಯೂ, ಒತ್ತಡ ಕಡಿಮೆಯಾದಲ್ಲಿ ಗಟ್ಟಿಯಾಗಿಯೂ ನಿಂತು ರೂಪು ಪಡೆಯುತ್ತಿರಬಹುದು ಎಂದು  ಅಮೆರಿಕೆಯ ಕೆಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಇಂಜಿನೀಯರ್ ಓಟ್ಗರ್ ಕಂಪಾಸ್ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ.

ಇರುವೆ, ಚಿಟ್ಟೆ, ಹಲ್ಲಿ, ಮೀನು, ನಾಯಿ, ಮನುಷ್ಯ ಹೀಗೆ ಜೀವಿ ಯಾವುದೇ ಇರಲಿ ಅದರ ಹುಟ್ಟು ಆರಂಭ ಆಗುವುದು ಮೊಟ್ಟೆ ಎನ್ನುವ ಒಂದೇ ಒಂದು ಜೀವಕೋಶದಿಂದ. ಇದು ವೀರ್ಯದ ಜೊತೆ ಸೇರಿ ಭ್ರೂಣದ ಅಂಕುರವಾಗುತ್ತದೆ. ಆರಂಭದಲ್ಲಿ ಎಲ್ಲ ಭ್ರೂಣಗಳೂ ಕೇವಲ ಜೀವಕೋಶಗಳ ಮುದ್ದೆಯೇ. ಈ ಮುದ್ದೆಯಲ್ಲಿರುವ ಜೀವಕೋಶಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ, ಮುದ್ದೆಯೂ ಉದ್ದವಾಗಿ  ಕೊಳವೆಯಂತಾಗುತ್ತದೆ. ಕ್ರಮೇಣ ವಿವಿಧ ಅಂಗಗಳು ಆಕಾರ ಪಡೆದು ನಾಯಿಯೋ, ಕೋತಿಯೋ, ಮನುಷ್ಯನೋ ಆಗುತ್ತದೆ. ಈ ಜೀವಕೋಶಗಳ ಮುದ್ದೆ ಅದು ಹೇಗೆ ತನ್ನಂತಾನೇ ನಿರ್ದಿಷ್ಟ ಆಕಾರ ಪಡೆದುಕೊಳ್ಳುತ್ತದೆ ಎನ್ನುವುದೊಂದು ದೊಡ್ಡ ಕೌತುಕ. ಸಾಮಾನ್ಯವಾಗಿ ಈ ಕೊಳವೆ ಬಾಲದ ಕಡೆಯಷ್ಟೆ ಬೆಳೆಯುತ್ತದೆಯೇ ಹೊರತು ಶಿರಭಾಗದಲ್ಲಿಯಲ್ಲ. ಹೀಗೇಕೆ? ಬಾಲದ ಬದಿಯಲ್ಲೇನಿದೆ? ಅಲ್ಲೇನು ನಡೆಯುತ್ತಿದೆ? ಇದು ಕಂಪಾಸ್ ಅವರ ಪ್ರಶ್ನೆ.

ಹೀಗಾಗಲು ಎರಡೇ ವಿಧಾನಗಳು ಸಾಧ್ಯ. ಒಂದೋ ಬಾಲದೆಡೆ ಜೀವಕೋಶಗಳು ಹೆಚ್ಚುತ್ತಿರಬೇಕು. ಇಲ್ಲವೇ ಬೇರೆಲ್ಲಿಂದಲೋ ಅಲ್ಲಿಗೆ ಹರಿದು ಬಂದು ಸೇರುತ್ತಿರಬೇಕು. ಸೂಕ್ಷ್ಮದರ್ಶಕದ ಅಡಿಯಲ್ಲಿ ಗಮನಿಸಿದಾಗ ಆರಂಭದಲ್ಲಿ ಬಾಲದ ಭಾಗದಲ್ಲಿ ಜೀವಕೋಶಗಳ ಸಂಖ್ಯೆ ಹೆಚ್ಚುವುದಕ್ಕೆ ಬದಲಿಗೆ, ಶಿರದ ಕಡೆಯಿಂದ ಬಂದು ಕೂಡುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಒಮ್ಮೆ ಅಲ್ಲಿ ಬಂದ ನಂತರ ಅವು ಬದಲಾಗುತ್ತವೆ. ಅವುಗಳಾಚೆಗೆ ಮತ್ತೊಂದಿಷ್ಟು ಬಾಲ ಸೃಷ್ಟಿಯಾಗುತ್ತದೆ. ಇದಕ್ಕೆ ಕಾರಣ, ಜೀವಕೋಶಗಳ ಸಂಖ್ಯೆ ಹೆಚ್ಚಾಗಿ ಒಂದಿನ್ನೊಂದರ ಮೇಲೆ ಒತ್ತುವ ಬಲವಿರಬಹುದು. ಹೀಗೆ ಒತ್ತೊತ್ತಾಗಿರುವ ಕಡೆಯಲ್ಲಿ ಜೀವಕೋಶಗಳು ನೀರಿನಂತಾಗಿ ಹರಿದು ಮುಂದೆ ಸರಿಯುತ್ತವೆ. ಒತ್ತಡ ಕಡಿಮೆ ಇರುವಲ್ಲಿ ಗಟ್ಟಿಯಾಗಿ ನಿಲ್ಲುತ್ತವೆ ಎಂಬುದು ಊಹೆ.

ಮೀನಿನ ಭ್ರೂಣ. ಬಾಲವೇ ಏಕೆ ಉದ್ದವಾಗುತ್ತದೆ?. ಕೃಪೆ: ವೀಕಿಪೀಡಿಯಾ

ಈ ಊಹೆ ನಿಜವಂತೆ. ಹಾಗೆನ್ನುತ್ತದೆ ಕಂಪಾಸ್ ತಂಡದ ಶೋಧನೆ. ಇವರು ಬೆಳೆಯುತ್ತಿರುವ ಮೀನಿನ ಭ್ರೂಣಗಳಲ್ಲಿ ಶಿರದಿಂದ ಬಾಲದವರೆಗೂ ಇರುವ ಒತ್ತಡವನ್ನು ಅಳೆದಿದ್ದಾರೆ. ಇದಕ್ಕಾಗಿ ಭ್ರೂಣದಲ್ಲಿ ವಿವಿಧ ಜಾಗೆಗಳಲ್ಲಿ ಕಾಂತಶಕ್ತಿಯುಳ್ಳ ಎಣ್ಣೆಯ ಪುಟ್ಟ ಹನಿಗಳನ್ನು ಕೂಡಿಸಿದ್ದಾರೆ. ಸಾಧಾರಣ ಸ್ಥಿತಿಯಲ್ಲಿ ಈ ಹನಿಗಳು ದುಂಡಗಿರಬೇಕು. ಒತ್ತಡ ಬಿದ್ದಾಗ ದುಂಡಗಿನ ಆಕಾರ ಬೆಲೂನನ್ನು ಒತ್ತಿದಾಗ ಅದರ ಆಕಾರ ಬದಲಾದಂತೆ ಬದಲಾಗುತ್ತದೆ. ಈ ಬದಲಾವಣೆಯನ್ನು ಗಮನಿಸಿ ಒತ್ತಡ ಎಲ್ಲಿ ಬೀಳುತ್ತಿದೆ ಎಂದು ತಿಳಿಯಬಹುದು. ಹೀಗೆ ಗಮನಿಸಿದಾಗ ಶಿರದ ಬಳಿ ಒತ್ತಡ ಕಡಿಮೆ ಇದ್ದು ಬಾಲದ ಕಡೆಗೆ ಹೆಚ್ಚಾಗುತ್ತದೆನ್ನುವುದು ತಿಳಿದಿದೆ.

ಇದು ಬಾಲವನ್ನು ಕಡೆಯುವುದು ಹೇಗೆ ಎಂದು ಕೇಳಿದಿರಾ? ಭ್ರೂಣ ಬೆಳೆಯುತ್ತಿದ್ದಂತೆ. ಶಿರದಲ್ಲಿ ಜೀವಕೋಶಗಳ ಸಂಖ್ಯೆ ಹೆಚ್ಚಾಗುತ್ತದಷ್ಟೆ. ಇದು ಬಾಲದ ಕಡೆ ಇರುವ ಕೋಶಗಳನ್ನು ಒತ್ತುತ್ತದೆ. ಪರಿಣಾಮವಾಗಿ ಅವು ಗಟ್ಟಿಯಾಗಿ ತಡೆಯುತ್ತವೆ. ಫಲವಾಗಿ ಕಲ್ಲಿನ ಮೇಲೆ ಬಿದ್ದ ಮಳೆ ನೀರು ಬದಿಯಿಂದ ಹರಿಯುವ ಹಾಗೆ ಜೀವಕೋಶಗಳು ಒಂದು ಬದಿಯಿಂದ ಹರಿದು ಬಾಲದ ಕೊನೆ ಸೇರುತ್ತವೆ. ಅಲ್ಲಿ ಗಟ್ಟಿಯಾಗುತ್ತವೆ. ಇದೇ ಪ್ರಕ್ರಿಯೆ ಮುಂದುವರೆಯುತ್ತದೆ. ಕೋಶಗಳ ಸಂಖ್ಯೆ ಕ್ರಮೇಣ ಕಡಿಮೆ ಆಗುವುದರಿಂದ ಬಾಲವೂ ಸಣ್ಣದಾಗುತ್ತ ಸಾಗುತ್ತದೆ. ಕೊನೆಗೆ ಮೊನಚಾಗುತ್ತದೆ.

ಹಾಂ. ಭ್ರೂಣಗಳಲ್ಲಿ ಕೋಶಗಳ ಚಲನೆ ಹೀಗಿದೆ ಎಂದು ಗುರುತಿಸಿದ ಮೇಲೆ ಕಾಂಪಾಸ್ ತಂಡ ಕಂಪ್ಯೂಟರಿನಲ್ಲಿ ಇದು ಸಾಧ್ಯವೇ ಎಂದೂ ಗಣಿಸಿ ನೋಡಿದೆ. ಅಲ್ಲಿಯೂ ಇದು ಹೀಗೇ ಎಂದು ಪುರಾವೆ ಸಿಕ್ಕಿದೆಯಂತೆ. ಜೀವಕೋಶದೊಳಗೆ ಸ್ನಾಯುಗಳಲ್ಲಿರುವ ಆಕ್ಟಿನ್ನು ಪ್ರೋಟೀನಿನಂತಹ ನಾರುಗಳ ಸೃಷ್ಟಿ, ವಿತರಣೆ ಕೋಶ ದ್ರವಸ್ಥಿತಿಯಲ್ಲಿರುವುದಕ್ಕೂ, ಗಟ್ಟಿಯಾಗುವುದಕ್ಕೂ ಕಾರಣ. ಹೀಗೆ ಜೈವಿಕ ಹಾಗೂ ಭೌತಿಕ ಕಾರಣಗಳೆರಡೂ ಕೂಡಿ ನಮ್ಮ ದೇಹವನ್ನು ಕಡೆಯುತ್ತವೆ ಎಂದು ಕಾಂಪಾಸ್ ತಂಡ ತೀರ್ಮಾನಿಸಿದೆ. ಹಾಂ. ಇವೆಲ್ಲ ನಡೆಯಲು ಎಷ್ಟು ಸಮಯ ಬೇಕು ಗೊತ್ತೇ? ಒಂದೇ ನಿಮಿಷದೊಳಗೆ ಇಷ್ಟೆಲ್ಲ ಕ್ರಿಯೆಗಳೂ ನಡೆದು ತಲೆಯ ಕಡೆಯ ಕೋಶಗಳು ಬಾಲದ ಕಡೆಗೆ ಬರುತ್ತವೆಯಂತೆ.

ಆಕರ: Alessandro Mongera et al., A fluid-to-solid jamming transition underlies vertebrate body axis elongation https://doi.org/10.1038/s41586-018-0479-2, published online  5.9.2018

ಲಿಂಕ್: https://doi.org/10.1038/s41586-018-0479-2


2. ಹೆಬ್ಬಾವಿನ ಬೆನ್ನು ಹತ್ತಿದ ಡಿಎನ್ಎ
ನೀರೆಯ ಮನಸ್ಸನ್ನೂ, ಹಾವಿನ ಜಾಡನ್ನೂ ತಿಳಿದವರಿಲ್ಲ ಎನ್ನುವ ಜಾಣ್ನುಡಿ ಇದೆ. ಹೆಂಗಸರ ಮನಸ್ಸಿನಲ್ಲಿ ಇರುವುದನ್ನಾದರೂ ಅರ್ಥ ಮಾಡಿಕೊಳ್ಳಬಹುದು, ಆದರೆ ಹಾವಿನ ಹೆಜ್ಜೆಯನ್ನು ಗುರುತಿಸುವುದು ಕಷ್ಟ. ಏಕೆಂದರೆ ಸಾಮಾನ್ಯವಾಗಿ ಹಾವುಗಳು ವಾಸಿಸುವ ಕಲ್ಲು, ಮಣ್ಣಿನ ಜಾಗೆಯಲ್ಲಿ ಅದು ಸಾಗಿದ ಹಾದಿ ಮೂಡುವುದು ಕಷ್ಟ. ಜೊತೆಗೆ ಅದರ ನಡವಳಿಕೆಯೂ ಇದಕ್ಕೆ ಕಾರಣವಾಗುತ್ತದೆ. ಸಂದಿಗೊಂಡಿಗಳಲ್ಲೋ, ಇಲಿ, ಮೊಲಗಳ ಬಿಲಗಳಲ್ಲೋ, ಅಥವಾ ಹೆಬ್ಬವಾಗಿದ್ದರೆ ದೊಡ್ಡ ಮರದ ಮೇಲೆಲ್ಲೋ ರೆಂಬೆಯಂತೆಯೇ ಅಡಗಿಕೊಂಡು ಬಿಡುವ ಹಾವುಗಳನ್ನು ಹುಡುಕುವುದು ಕಷ್ಟ. ಇದೋ. ಹಾವು ಇಲ್ಲಿದೆ ಎನ್ನುವುದನ್ನು ಪರೋಕ್ಷವಾಗಿ, ಪರಿಸರದಲ್ಲಿ ಸಿಗುವ ಡಿಎನ್ಎಯನ್ನು ಪರಿಶೀಲಿಸಿ ಹೇಳಬಹುದೇ ಎನ್ನುವ ಪ್ರಯತ್ನ ಅಮೆರಿಕೆಯಲ್ಲಿ ನಡೆದಿದೆಯಂತೆ. ಹೀಗೆಂದು ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ವರದಿ ಮಾಡಿದೆ. ಈ ಪ್ರಯತ್ನ ಇತ್ತೀಚೆಗೆ ಅಮೆರಿಕೆಯ ಫ್ಲಾರಿಡಾ ರಾಜ್ಯದ ಕಾಡುಗಳಲ್ಲಿ ವಿಪರೀತವಾಗಿ ಧಾಂಧಲೆ ಮಾಡುತ್ತಿರುವ ಹೆಬ್ಬಾವನ್ನು ಗುರುತಿಸಿ ನಿಯಂತ್ರಿಸುವುದಕ್ಕಾಗಿ ನಡೆದಿದೆಯಂತೆ.

ಬರ್ಮಾದ ಹೆಬ್ಬಾವು.  ಕೃಪೆ: ವೀಕಿಪೀಡಿಯಾ

ಕಾಡಿನಲ್ಲಿ ಹೆಬ್ಬಾವು ಇದ್ದರೇನಂತೆ? ಅದು ಸಹಜ ತಾನೇ ಎಂದಿರಾ? ನಿಜ. ಸಹಜವಾಗಿ ಅಲ್ಲಿ ಹೆಬ್ಬಾವು ಇದ್ದಿದ್ದರೆ ಯೋಚನೆ ಇರುತ್ತಿರಲಿಲ್ಲ. ಆದರೆ ಈ ಹೆಬ್ಬಾವು ಅಲ್ಲಿಗೆ ಬರ್ಮಾದಿಂದ ಬಂದದ್ದು. ಕೆಲವು ವರ್ಷಗಳ ಹಿಂದೆ ಯಾರೋ ಸಾಕಲೆಂದು ತಂದ ಹೆಬ್ಬಾವಿನ ಸಂತತಿ. ಅಮೆರಿಕೆಯಲ್ಲಿ ಸಹಜವಾಗಿ ಹೆಬ್ಬಾವುಗಳು ನೆಲೆಯಿರುವುದಿಲ್ಲ. ಹೀಗಾಗಿ ಅಲ್ಲಿ ಅವುಗಳನ್ನು ಕೊಲ್ಲುವ ವೈರಿಗಳೂ ಇಲ್ಲ. ಜೊತೆಗೇ ಅಲ್ಲಿ ಕಾಡುಕೋಳಿಗಳು, ಪೌಲ್ಟ್ರಿಯ ಕೋಳಿಗಳು, ಹಸು, ಕರು ಹಾಗೂ ನಾಯಿಗಳನ್ನೂ ಸಮೃದ್ಧವಾಗಿ ಬೆಳೆಸುವುದು ವಾಡಿಕೆ. ಇವು ಹೆಬ್ಬಾವಿಗೆ ಸುಲಭ ಆಹಾರವೂ ಕೂಡ. ಹೀಗಾಗಿ ಫ್ಲಾರಿಡಾದ ವಿಶಾಲವಾದ ಬಯಲು ಪ್ರದೇಶಗಳಲ್ಲಿ ಈ ಹಾವು ಜಬರ್ದಸ್ತಾಗಿ ತಳವೂರಿದೆಯಂತೆ. ಆರಂಭದಲ್ಲಿ ಎವರ್ಗ್ಲೇಡ್ ಎನ್ನುವಲ್ಲಿ ಕಾಣಿಸಿಕೊಂಡಿದ್ದ ಇದು ತಡೆಯಿಲ್ಲದೆ ಸಂತತಿಯನ್ನು ಬೆಳೆಸಿಕೊಳ್ಳುತ್ತಿದೆಯಂತೆ.  ಪ್ರತಿ ವರ್ಷವೂ 200-300 ಹಾವುಗಳನ್ನು ಹಿಡಿದು ಕೊಲ್ಲುತ್ತಿದ್ದಾಋಎ. ಆದರೂ ಅವುಗಳ ಹಾವಳಿ ಕಡಿಮೆ ಆಗಿಲ್ಲವಂತೆ.

ಹೆಬ್ಬಾವಿನ ದಾಳಿ ಎಷ್ಟರ ಮಟ್ಟಿಗೆಂದರೆ, ಕೆಲವೆಡೆ ಮನೆಗಳಲ್ಲಿ, ಟಾಯ್ಲೆಟ್ಟುಗಳಲ್ಲಿ, ಮಲಗುವ ಕೋಣೆಯಲ್ಲಿಯೂ ಇವು ಸಿಕ್ಕಿದ ಉದಾಹರಣೆಗಳಿವೆ. ಇವು ತಿಂದುಂಡ ಕೋಳಿ, ಕುರಿಗಳ ಸಂಖ್ಯೆಗೆ ಲೆಕ್ಕವಿಲ್ಲ. ಹೀಗಾಗಿ ಇವನ್ನು ಹುಡುಕಿ ಕೊಲ್ಲುವುದೇ ಒಂದು ಉದ್ಯೋಗವಾಗಿ ಬಿಟ್ಟಿದೆ. ಆದರೆ ಈ ಹಾವಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಅಮೆರಿಕನ್ನರಿಗೆ ಇವನ್ನು ಹುಡುಕುವುದೂ ಕಷ್ಟವಂತೆ. ಅದಕ್ಕೆ ಏನೆಲ್ಲ ಸಾಧ್ಯವೋ ಅವೆಲ್ಲ ಉಪಾಯವನ್ನೂ ಮಾಡುತ್ತಿದ್ದಾರೆ. ಇದಕ್ಕಾಗಿ ಅಲ್ಲಲ್ಲಿ ಕಳ್ಳ ಕ್ಯಾಮೆರಾಗಳನ್ನು ಇಟ್ಟಿದ್ದಾರೆ. ಇಲೆಕ್ಟ್ರಾನಿಕ್ ಸೆನ್ಸಾರುಗಳನ್ನು ಮರಗಿಡಗಳಲ್ಲಿ ನೆಟ್ಟು ಹಾವಿಗಾಗಿ ಕಾದಿದ್ದಾರೆ. ಈಗ್ಗೆ ಎರಡು ವರ್ಷಗಳ ಹಿಂದೆ ತಮಿಳುನಾಡಿನಿಂದ ಇರುಳ ಜನಾಂಗದ ಇಬ್ಬರನ್ನು ಹೆಬ್ಬಾವು ಹಿಡಿಯಲೆಂದೇ ಅಮೆರಿಕೆಗೆ ಕರೆದೊಯ್ದಿದ್ದರು. ಇರುಳ ಬುಡಕಟ್ಟಿನ ಜನ ಹಾವುಗಳನ್ನು ಹಿಡಿಯುವುದರಲ್ಲಿ ನಿಷ್ಣಾತರಷ್ಟೆ.

ಹೆಬ್ಬಾವನ್ನು ಕೊಂದವರಿಗೆ ತಲೆಗೊಂದು ಹಾವಿನಂತೆ ಬಹುಮಾನವನ್ನು ಕೊಡುವ ಪದ್ಧತಿಯೂ ಈಗ ಅಲ್ಲಿ ರೂಢಿಗೆ ಬಂದಿದೆ. ಇವೆಲ್ಲ ಇದ್ದರೂ ಹಾವು ಇರುವ ನೆಲೆ ತಿಳಿಯಬೇಕಷ್ಟೆ. ಈ ಹಾವು ಮೊದಲು ಕಂಡಲ್ಲಿಯಷ್ಟೆ ಇದೆಯೋ ಅಥವಾ ಅಲ್ಲಿಂದ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಬೇರೆಡೆಗೂ ವಲಸೆ ಹೋಗಿದೆಯೋ ತಿಳಿಯದು. ಇದನ್ನು ತಿಳಿಯಲು ಡಿಎನ್ಎ ನೆರವಾಗಬಹುದು ಎನ್ನುವುದು ಅಲ್ಲಿಯ ಪರಿಸರತಜ್ಞರ ತರ್ಕ. ಉದಾಹರಣೆಗೆ, ಎವರ್ ಗ್ಲೇಡಿನಿಂದ ಸುಮಾರು 125 ಕಿಲೋಮೀಟರು ದೂರವಿರುವ ಆರ್ಥರ್ ಮಾರ್ಷಲ್ ಲಾಕ್ಷಾಶೀ ರಾಷ್ಟ್ರೀಯ ವನದಲ್ಲಿ ಇತ್ತೀಚೆಗೆ ಹೀಗೊಂದು ಅಧ್ಯಯನ ನಡೆಯಿತು. ಅಲ್ಲಿನ ಪರಿಸರದಲ್ಲಿ ಕಂಡ ಮಲ, ಕೂದಲು, ಪೊರೆ ಇತ್ಯಾದಿಗಳನ್ನು ಸಂಗ್ರಹಿಸಿ ಅವುಗಳಲ್ಲಿ ಹಾವಿನ ಡಿಎನ್ಎ ಇದೆಯೇ ಎಂದು ಪರೀಕ್ಷಿಸಲಾಯಿತು. ತೊರೆಗಳಲ್ಲಿನ ನೀರಲ್ಲಿಯೂ ಈ ಹೆಬ್ಬಾವಿನ ಡಿಎನ್ಎ ಇದ್ದ ಕುರುಹುಗಳು ಕಂಡುವಂತೆ. ಆದರೆ ಇದುವರೆವಿಗೂ ಒಂದಾದರೂ ಹಾವು ಅಲ್ಲಿ ಕೈಗೆ ಸಿಕ್ಕಿಲ್ಲ.

ಹೀಗೆ ಕಣ್ತಪ್ಪಿಸಿಕೊಂಡು ಓಡಾಡುವ ಪ್ರಾಣಿಗಳ ಇರವು ಹಾಗೂ ಚಲನವಲನವನ್ನು ಪರಿಸರದಲ್ಲಿ ದೊರಕುವ ಡಿಎನ್ಎಯನ್ನು ಪರೀಕ್ಷಿಸಿ ತಿಳಿಯಬಹುದು ಎನ್ನುತ್ತಾರೆ ಅಲ್ಲಿನ ವಿಜ್ಞಾನಿಗಳು. ನಮ್ಮಲ್ಲೂ ಇಂತಹ ಅಧ್ಯಯನಗಳು ನಡೆದಿವೆ. ಉದಾಹರಣೆಗೆ, ಹೈದರಾಬಾದಿನ ಸಿಸಿಎಂಬಿಯ ವಿಜ್ಞಾನಿಗಳು ಮಲೈಮಹದೇಶ್ವರ ಬೆಟ್ಟದ ಆಸುಪಾಸಿನ ಕಾಡುಗಳಲ್ಲಿ ಹುಲಿಯ ಹೇಲನ್ನು ಹೆಕ್ಕಿ ಪರೀಕ್ಷಿಸಿದಾಗ, ಅಲ್ಲಿಗೆ ದೂರದ ಬಂಡೀಪುರ ಕಾಡಿನಿಂದ ಹುಲಿಗಳು ಬಂದು ಸಂಸಾರ ನಡಸುತ್ತಿವೆ ಎಂದು ತಿಳಿದಿತ್ತು.

ಹೀಗೆ ಡಿಎನ್ಎ ಕಳ್ಳ ಪ್ರಾಣಿಗಳ ಮೇಲೆ ಕಣ್ಗಾವಲಿಡಲು ನೆರವಾಗುತ್ತದೆ

ಆಕರ: Carolyn Beans,, Environmental DNA helps researchers track pythons and other stealthy creatures PNAS | September 4, 2018 | vol. 115 | no. 36 | 8843–8845

ಲಿಂಕ್: www.pnas.org/cgi/doi/10.1073/pnas.1811906115


3. ಹೊಗೆಯಲ್ಲಿ ಮಸಿ ಆಗುವುದು ಹೇಗೆ?
ಬೆಂಕಿ ಇಲ್ಲದೆ ಹೊಗೆ ಬರುವದುಂಟೆ? ಈ ಮಾತನ್ನು ನಾವೆಲ್ಲ ಬಹಳಷ್ಟು ಕೇಳಿದ್ದೀವಿ. ಬೆಂಕಿ ಇದ್ದರೆ ಹೊಗೆ ಬರುವುದು ಖಂಡಿತ. ಹಾಗೆಯೇ ಮಸಿಯೂ ಆಗುವುದು ಖಂಡಿತ. ಇದರಲ್ಲೇನು ವಿಶೇಷ ಎಂದಿರಾ? ವಿಶೇಷವಿದೆ. ನಾವು ಶಾಲೆಯಲ್ಲಿ ಕಲಿತ ಪಾಠಗಳಲ್ಲಿ ಉಷ್ಣತೆ ಹೆಚ್ಚಿದಂತೆಲ್ಲ, ವಸ್ತುವಿನಲ್ಲಿರುವ ಕಣಗಳು ದೂರ, ದೂರ ಹೋಗುತ್ತವೆ. ಹೀಗಾಗಿ ಅದರ ಗಾತ್ರದಲ್ಲಿ ಬದಲಾವಣೆ ಆಗುತ್ತದೆ. ಘನ ಅಂದರೆ ಗಟ್ಟಿಯಾದ ಪದಾರ್ಥ ದ್ರವವಾಗುತ್ತದೆ. ನೀರಿನಂತೆ ಹರಿಯುತ್ತದೆ. ದ್ರವಗಳು ಬಿಸಿಯಾದಾಗ ಆವಿಯಾಗಿ ಅನಿಲಗಳಾಗುತ್ತವೆ. ನೀರು ಹಬೆಯಾಗುತ್ತದೆ ಎಂದೆಲ್ಲ ಕೇಳಿದ್ದೀವಿ. ಅಂದರೆ ಬೆಂಕಿಯ ಬಿಸಿಯಲ್ಲಿ ಕಣಗಳು ದೂರ, ದೂರವಾಗಬೇಕಷ್ಟೆ. ಆದರೆ ಕಾರ್ಬನ್ನಿನ ಕಣಗಳು ಬೆಂಕಿಯಲ್ಲೂ ಒಟ್ಟಾಗಿ ಮಸಿಯಾಗುತ್ತವಲ್ಲ ಅದು ಹೇಗೆ? ಇದೋ. ಈ ಪ್ರಶ್ನೆಗೆ ಅಮೆರಿಕೆಯ ಸ್ಯಾಂಡಿಯ ನ್ಯಾಶನಲ್ ಲ್ಯಾಬೊರೇಟರಿಯ ದಹನಕ್ರಿಯಾ ರಸಾಯನ ವಿಜ್ಞಾನಿ ಯೋಹಾನ್ಸನ್ ಮತ್ತು ಸಂಗಡಿಗರು ಉತ್ತರವನ್ನು ಕಂಡುಕೊಂಡಿದ್ದಾರೆ. ಬೆಂಕಿಯ ಜ್ವಾಲೆಯ ಬುಡದಲ್ಲಿ ಇಂಧನ ಉರಿದಾಗ ಹುಟ್ಟುವ ಕಣಗಳು ಕ್ರಮೇಣ ಒಂದರೊಡನೊಂದು ರಾಸಾಯನಿಕ ಕ್ರಿಯೆಯಲ್ಲಿ ತೊಡಗಿ ತಣಿದಾಗ ನೀರಿನ ಕಣಗಳು ಒಂದಾಗಿ ದೊಡ್ಡ ಮಂಜಿನ ಕಣವಾಗುವಂತೆ ಇವುಗಳೂ ಒಟ್ಟಾಗಿ ಗ್ರಾಫೀನು ಅಥವಾ ಮಸಿಯಾಗುತ್ತದೆಯಂತೆ.

ಕಾಡ್ಗಿಚ್ಚು. ಇಷ್ಟು ತಾಪದಲ್ಲಿಯೂ ಕಾರ್ಬನ್ ಸುಟ್ಟು ಮರೆಯಾಗದೆ ಮಸಿಯಾಗಿ ಉಳಿಯುವುದೇಕೆ?. ಕೃಪೆ: ವೀಕಿಪೀಡಿಯಾ

ಮಸಿ ಎಂದರೆ ಇನ್ನೇನಲ್ಲ. ಅದು ಕಾರ್ಬನ್ನಿನ ಕಣಗಳು ಒಂದಾಗಿ ಆದ ಗ್ರಾಫೀನು. ಕಾರ್ಬನ್ನಿನ ಕಣಗಳು ಹಲವು ರೀತಿಯಲ್ಲಿ ಹರಳುಗಟ್ಟುತ್ತವೆ. ವಜ್ರಗಳಲ್ಲಿ ಪ್ರತಿ ಕಾರ್ಬನ್ನಿನ ಪರಮಾಣುವಿನ ಜೊತೆಗೆ ಇನ್ನೂ ಮೂರು ಕಾರ್ಬನ್ನಿನ ಪರಮಾಣುಗಳು ಜೋಡಿಸಿಕೊಂಡು ವಜ್ರವಾಗುತ್ತದೆ. ಪೆನ್ಸಿಲಿನ ಮಸಿಯಲ್ಲಿ ಇದೇ ಕಾರ್ಬನ್ನಿನ ಪರಮಾಣುಗಳು ಒಂದು ಇನ್ನೂ ಮೂರರ ಜೊತೆಗೆ ಕೂಡುತ್ತವೆಯಾದರೂ, ಇಲ್ಲಿ ಅವುಗಳ ಒಟ್ಟಾರೆ ಜೋಡಣೆ ಹರಳಿನ ರೂಪದಲ್ಲಿ ಇರದೆ ಹಾಳೆಯ ರೂಪದಲ್ಲಿ ಇರುತ್ತದೆ. ಈ ಹಾಳೆಗಳು ಸುರುಳಿ ಸುತ್ತಿಕೊಂಡಾಗ ಗ್ರಾಫೀನು ಕೊಳವೆಗಳಾಗುತ್ತವೆ. ನ್ಯಾನೊಕಾರ್ಬನ್ನು ಎನಿಸಿಕೊಳ್ಳುತ್ತವೆ.

ಬೆಂಕಿಯಲ್ಲಿ ಉರಿಯುವ ವಸ್ತುಗಳೆಂದರೆ ಸಾಮಾನ್ಯವಾಗಿ ಹೈಡ್ರೊಜನ್ನು ಮತ್ತು ಕಾರ್ಬನ್ನುಗಳಷ್ಟೆ ಇರುವ ಬಲು ದೊಡ್ಡ ಅಣುಗಳು. ಇವು ಉರಿದಾಗ ಹೈಡ್ರೊಜನ್ನು ಗಾಳಿಯಲ್ಲಿರುವ ಆಕ್ಸಿಜನ್ನಿನ ಜೊತೆ ಸೇರಿ ನೀರಾಗುತ್ತದೆ. ಕಾರ್ಬನ್ ಉಳಿಯುತ್ತದೆ. ಆದರೆ ಜ್ವಾಲೆಯಲ್ಲಿರುವ ಬಿಸಿಯಿಂದಾಗಿ ಈ ಕಾರ್ಬನ್ನಿನ ಪರಮಾಣುಗಳಲ್ಲಿರುವ ಇಲೆಕ್ಟ್ರಾನುಗಳನ್ನು ಇಂತಹುದೇ ಪರಮಾಣುವಿಗೆ ಸೇರಿದ್ದು ಎಂದು ಹೇಳಲಾಗದ ಸ್ಥಿತಿಯಲ್ಲಿ ಇರುತ್ತವೆ. ಹೀಗೆ ಸಮಸ್ಥಿತಿಯಲ್ಲಿರುವ ಕಾರ್ಬನ್ನುಗಳು ಒಂದರೊಡನೊಂದು ಕೂಡಿಕೊಳ್ಳುತ್ತವೆ. ಎಲ್ಲ ಕಾರ್ಬನ್ ಪರಮಾಣುಗಳ ಒಟ್ಟಾರೆ ಶಕ್ತಿಯೂ ಒಂದೇ ರೀತಿಯಲ್ಲಿರುವುದರಿಂದ ಅವು ಜೊತೆಗೂಡುವುದು ಸುಲಭ. ಜೊತೆಗೆ ಹಾಗೆ ಆದಾಗ ತುಸು ಶಕ್ತಿ ನಶಿಸಿ, ಇಲೆಕ್ಟ್ರಾನುಗಳು ಮತ್ತೆ ಪರಮಾಣುವಿನ ಜೊತೆಗೆ ಕೂಡಿಕೊಳ್ಳುತ್ತವೆ. ಈ ಕ್ರಿಯೆ ನಡೆಯುವುದರಿಂದ ಕಾರ್ಬನ್ನಿನ ಹಲವು ಪರಮಾಣುಗಳು ಒಟ್ಟಾಗಿ ಮಸಿ ರೂಪುಗೊಳ್ಳುತ್ತದೆ ಎಂದು ಇವರು ಸೈನ್ಸ್ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.

ಉರಿಯುವ ಜ್ವಾಲೆಯಲ್ಲಿನ ಮಸಿಯ ಕಣಗಳ ತೂಕವನ್ನು ಮಾಸ್ ಸ್ಪೆಕ್ಟ್ರೋಮೀಟರಿನಿಂದ ಪತ್ತೆ ಮಾಡಬಹುದು. ಜ್ವಾಲೆಯ ವಿವಿಧ ಕಡೆಗಳಲ್ಲಿ ಹಾಗೂ ವಿವಿಧ ಸಮಯದಲ್ಲಿ ಅಲ್ಲಿರುವ ಮಸಿಯ ಕಣಗಳ ತೂಕವನ್ನು ಪತ್ತೆ ಮಾಡಿದ್ದಾರೆ. ಹಾಗೆ ಮಾಡಿದಾಗ, ಜ್ವಾಲೆಯ ಆರಂಭದಲ್ಲಿ ಬಲು ಕಡಿಮೆ ತೂಕದ ಮಸಿಯ ಕಣಗಳು ಇದ್ದುದನ್ನೂ, ಕ್ರಮೇಣ ಸಮಯ ಕಳೆದಂತೆ ಅವುಗಳ ತೂಕ ಹೆಚ್ಚಾದುದನ್ನೂ ಗಮನಿಸಿದ್ದಾರೆ. ಆರಂಭದಲ್ಲಿ ರೂಪುಗೊಳ್ಳುವ ಅಣುಗಳು ಬಲು ಕ್ರಿಯಾಶೀಲವಾಗಿದ್ದು, ತಮ್ಮಂತೆಯೇ ಇರುವ ಇತರೆ ಅಣುಗಳ ಜೊತೆಗೆ ಪ್ರತಿಕ್ರಿಯಿಸುತ್ತವೆ. ಹೀಗೆ ಹಂತ, ಹಂತವಾಗಿ ಕ್ರಿಯೆಗಳಲ್ಲಿ ಪಾಲ್ಗೊಳ್ಳುವುದರಿಂದ ಅವುಗಳ ಕ್ರಿಯಾಶೀಲತೆಯೂ ಕುಗ್ಗಿ ಅವು ಸ್ಥಿರವಾದ ಕಣಗಳಾಗುತ್ತವೆ. ಕೊನೆಗೆ ಕ್ರಿಯೆ ಮುಂದುವರೆಯದ ಸ್ಥಿತಿ  ಮುಟ್ಟಿದಾಗ ಕಣಗಳಾಗಿಯೇ ಉಳಿದು ಮಸಿಯಾಗಿ ತೋರುತ್ತವೆ ಎನ್ನುವುದು ಇವರ ವಾದ. ಈ ಕ್ರಿಯೆ ಪೂರ್ವಸ್ಥಿತಿಗೆ ಮರಳಲಾಗದ ಕ್ರಿಯೆಯಾದ್ದರಿಂದ ಮಸಿ, ಮಸಿಯಾಗಿಯೇ ಉಳಿಯುತ್ತದೆ ಎಂದು ವಿವರಿಸುತ್ತಾರೆ. ಈ ಹಿಂದೆ ಮಸಿ ರೂಪುಗೊಳ್ಳುವುದಕ್ಕೆ ನೀಡಿದ್ದ ಕಾರಣಗಳೆಲ್ಲವೂ ಮಸಿ ಮರಳಿ ಸುಟ್ಟು, ಕಾರ್ಬನ್ ಡಯಾಕ್ಸೈಡ್ ಆಗಬಹುದು ಎಂದು ಸೂಚಿಸುತ್ತಿದ್ದವು. ಆದರೆ ವಾಸ್ತವ ಹಾಗಿರಲಿಲ್ಲ.

ಈ ಮಸಿಯ ಪ್ರಶ್ನೆ ಕೇವಲ ಮಾಲಿನ್ಯ ಹೇಗಾಗುತ್ತದೆ? ಮಸಿ ಕೂಡ ಕಾರ್ಬನ್ನೇ ಆದರೂ ಅದನ್ನು ಸುಡಲಾರೆವೇಕೆ ಎನ್ನುವ ಪ್ರಶ್ನೆಗಳಿಗೂ ಸಮಾಧಾನವನ್ನು ನೀಡಿದೆ. ಹಾಗೆಯೇ ಅಂತರಿಕ್ಷದಲ್ಲಿ ಅಲೆದಾಡುವ ಕಾರ್ಬನ್ ಕಣಗಳು ಹೇಗೆ ರೂಪುಗೊಂಡಿರಬಹುದು ಎಂದೂ ಸೂಚಿಸುತ್ತವೆ ಎನ್ನುತ್ತದೆ ಸೈನ್ಸ್.

ಆಕರ: K. O. Johansson et al,  Resonance-stabilized hydrocarbon radical chain reactions may explain soot inception and growth,  Science 361, 997–1000 (2018)

ಲಿಂಕ್: http://www.currentscience.ac.in/Volumes/115/04/0621.pdf


 4. ತುಂತುರು ಸುದ್ದಿಗಳು

ರೆಕ್ಕೆ ಬಡಿಯುತ್ತಾ ಹಾರುವ ಮೊತ್ತ ಮೊದಲ ರೋಬೋ ಸಿದ್ಧವಿದೆಯಂತೆ. ವಿಮಾನವೇ ಆಗಲಿ, ಹೆಲಿಕಾಪ್ಟರೇ ಆಗಲಿ ಗಾಳಿಯಲ್ಲಿ ಹಾರಾಡುವುದಕ್ಕೆ ಗಿರಗಿಟ್ಟಲೆಯ ಹಾಗೆ ತಿರುಗುವ ರೆಕ್ಕೆಗಳು ಕಾರಣ. ಹಕ್ಕಿಗಳು ಹಾಗೂ ಕೀಟಗಳಂತೆ ಬಡಿಯುವ ರೆಕ್ಕೆಗಳಿರುವ ಯಂತ್ರವಿರಲಿಲ್ಲ. ಚಿಟ್ಟೆಯಷ್ಟು ಪುಟ್ಟ ರೋಬೋವೊಂದು ರೆಕ್ಕೆ ಬಡಿಯುತ್ತಾ ಹಾರುತ್ತಿರುವ ಬಗ್ಗೆ ಮುಂದಿನ ಜಾಣಸುದ್ದಿಯಲ್ಲಿ ವಿವರವಾಗಿ ತಿಳಿಯುವಿರಿ.
ಉತ್ತರ ಅಮೆರಿಕದ ಮೋನಾರ್ಕ್ ಚಿಟ್ಟೆಗಳು ಪ್ರತಿ ವರ್ಷವೂ ಅಮೆರಿಕೆಯಿಂದ ಮೆಕ್ಸಿಕೋಗೆ ಸುಮಾರು 3500 ಕಿಲೋಮೀಟರುಗಳು ತೀರ್ಥಯಾತ್ರೆಯಂತೆ ವಲಸೆ ಹೋಗುತ್ತವೆ. ಇವುಗಳಲ್ಲಿ ಕೆಲವು ಅಲ್ಲಲ್ಲಿ ಪಯಣ ಮುಗಿಸದೆಯೇ ಅಲ್ಲಲ್ಲಿ ಇಳಿದು ತಳವೂರಿಬಿಡುತ್ತವೆ. ಇಂತಹ ತಳವೂರಿದ ಚಿಟ್ಟೆಗಳಲ್ಲಿ ಪರಜೀವಿ ಸೋಂಕು ಹೆಚ್ಚಂತೆ. ವಲಸೆ ಹೋಗುವವುಗಳಿಗಿಂತಲೂ ವಸಾಹತು ಸ್ಥಾಪಸಿದ ಚಿಟ್ಟೆಗಳಲ್ಲಿ 13 ಪಟ್ಟು ಹೆಚ್ಚು ಸೋಂಕು ಕಾಣಿಸುತ್ತದೆಯಂತೆ. ಜನರೇ ಸಂಶೋಧನೆಯಲ್ಲಿ ತೊಡಗಿಕೊಂಡ ಸಿಟಿಜನ್ ಸೈನ್ಸ್ ಶೋಧ ಇದು.
ಕುಚೋದ್ಯದ ಪ್ರಶಸ್ತಿ ಇಗ್ನೋಬೆಲ್ ಅಥವಾ ಕು-ನೋಬೆಲ್ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಪ್ರಪಂಚದೆಲ್ಲೆಡೆ ನಡೆಯುತ್ತಿರುವ ಸಂಶೋಧನೆಗಳಲ್ಲಿ ಅತಿ ಅಸಂಬದ್ಧವಾದ ಇಲ್ಲವೇ ಹಾಸ್ಯಾಸ್ಪದವಾದ ಸಂಶೋಧನೆಗಳಿಗೆ ಈ ಪ್ರಶಸ್ತಿಯನ್ನು ನೀಡಿ ಕುಹಕ ಮಾಡಲಾಗುತ್ತದೆ. ಮುಂದಿನ ಜಾಣಸುದ್ದಿಯಲ್ಲಿ ಮೂರು ಕುಹಕದ ಪ್ರಶಸ್ತಿಗಳನ್ನು ಪಡೆದ ಸಂಶೋಧನೆಗಳ ಬಗ್ಗೆ ತಿಳಿಯುವಿರಿ.
ಬೊಕ್ಕ ತಲೆಯಲ್ಲಿ ಕೂದಲು ಬೆಳೆಸಲು ಹೊಳೆವ ಲೇಸರಿನ ಟೋಪಿ ಹಾಕಿಕೊಂಡರೆ ಸಾಕು. ಹೀಗೆನ್ನುತ್ತದೆ ಎಸಿಎಸ್ ನ್ಯಾನೊ ಪತ್ರಿಕೆಯಲ್ಲಿ ಬಂದಿರುವ ಒಂದು ವರದಿ. ಹೆಚ್ಚಿನ ವಿವರಗಳು ಮುಂದಿನ ವಾರ.


5. ಬೀಗಲ್ ಸಾಹಸಯಾನ
ಒಂದು ದಿನ ನಾನು ಮತ್ತು ಇನ್ನಿಬ್ಬರು ಅಧಿಕಾರಿಗಳು ಪ್ರಾಯಾ ಬಂದರಿನ ಪೂರ್ವಕ್ಕೆ ಕೆಲವು ಮೈಲುಗಳಷ್ಟು ದೂರದಲ್ಲಿದ್ದ ರಿಬಿಯೆರಾ ಗ್ರಾಂಡಿ ಎನ್ನುವ ಗ್ರಾಮಕ್ಕೆ ತೆರಳಿದೆವು. ಸೈಂಟ್ ಮಾರ್ಟಿನ್ನನ ಕಣಿವೆಯವರೆಗೂ ಆ ಪ್ರದೇಶವೆಲ್ಲವೂ ತೆಳು ಕಂದು ಬಣ್ಣದ್ದಾಗಿ ತೋರುತ್ತಿತ್ತು. ಆದರೆ ಅಲ್ಲಿದ್ದ ಸಣ್ಣ ತೊರೆಯಿಂದಾಗಿ ಕಣಿವೆಯಲ್ಲಿ ದಟ್ಟವಾದ ಗಿಡಮರಗಳ ಹಸಿರಿತ್ತು. ಒಂದೇ ಗಂಟೆಯೊಳಗೆ ನಾವು ರಿಬಿಯೆರಾ ಗ್ರಾಂಡೆ ತಲುಪಿಯಾಗಿತ್ತು. ಅಲ್ಲಿದ್ದ ಪಾಳು ಬಿದ್ದ ಕೋಟೆ ಹಾಗೂ ಚರ್ಚೊಂದನ್ನು ನೋಡಿ ಬೆರಗಾದೆವು.  ಬಂದರು ಪೂರ್ತಿ ಹೂಳು ತುಂಬಿಕೊಳ್ಳುವ ಮುನ್ನ ಈ ಪುಟ್ಟ ಗ್ರಾಮವೇ ದ್ವೀಪದ ಪ್ರಮುಖ ಸ್ಥಾನವಾಗಿತ್ತು. ಈಗ ಅದು ವಿಷಣ್ಣತೆ ತೋರುವ ಸುಂದರ ಚಿತ್ರದಂತಿತ್ತು. ಅಲ್ಲಿಯ ಕರಿಯ ಪಾದ್ರಿಯೊಬ್ಬನನ್ನು ಮಾರ್ಗದರ್ಶಿಯಾಗಿಯೂ, ಆ ಹಿಂದಿನ ಯುದ್ಧದಲ್ಲಿ ಪಾಲ್ಗೊಂಡಿದ್ದ ಸ್ಪೈನಿನವನೊಬ್ಬನನ್ನು ಅನುವಾದಕನನ್ನಾಗಿಯೂ ಇಟ್ಟುಕೊಂಡು ಅಲ್ಲಿದ್ದ ವಿವಿಧ ಕಟ್ಟಡಗಳಿಗೆ ಭೇಟಿ ನೀಡಿದೆವು. ನಾವುಗಳು ಭೇಟಿ ನೀಡಿದ ಸ್ಥಾನಗಳಲ್ಲಿ ಪುರಾತನವಾದ ಚರ್ಚೊಂದು ಪ್ರಧಾನವಾಗಿತ್ತು. ಆ ದ್ವೀಪವನ್ನು ಆಳಿದ ಗವರ್ನರುಗಳು ಹಾಗೂ ಕಪ್ತಾನರನ್ನು ಆ ಚರ್ಚಿನಲ್ಲಿಯೇ ದಫನು ಮಾಡಲಾಗಿತ್ತು. ಅಲ್ಲಿದ್ದ ಕೆಲವು ಗೋರಿಗಳು ಹದಿನಾರನೆ ಶತಮಾನಕ್ಕೆ ಸೇರಿದ್ದುವು. ಅಂದ ಹಾಗೆ ಕೇಪ್ ಡೆ ವರ್ಡೆ ದ್ವೀಪಗಳನ್ನು 1449ರಲ್ಲಿ ಪತ್ತೆ ಮಾಡಲಾಯಿತು. ಹೀಗಾಗಿ 1571ರ ದಿನಾಂಕವಿದ್ದ ಬಿಷಪ್ಪರ ಗೋರಿಯೊಂದು ಅಲ್ಲಿತ್ತು.  ಹಾಗೆಯೇ 1497 ಇಸವಿ ಎಂದು ಕೆತ್ತಿದ್ದ ಕತ್ತಿಯ ಹಿಡಿಯೂ ಅಲ್ಲಿತ್ತು. ಯುರೋಪಿನ ನೆನಪು ತರುವಂತಹ ವಸ್ತುಗಳೆಂದರೆ ಅಲ್ಲಿ ನೆಲೆಯಿದ್ದ ರಾಜದೂತರ ಆಭರಣಗಳಷ್ಟೆ. ಮೈದಾನದ ಒಂದು ಬದಿಗೆ ಚರ್ಚು ಇತ್ತು. ಚರ್ಚಿನ ನಡುವಿನಲ್ಲಿ ದೊಡ್ಡ ಬಾಳೆಯ ತೋಪೊಂದು ಬೆಳೆದಿತ್ತು. ಇನ್ನೊಂದು ಬದಿಯಲ್ಲಿ ಇದ್ದ ಆಸ್ಪತ್ರೆಯಲ್ಲಿ ಹತ್ತು-ಹನ್ನೆರಡು ದೀನ ರೋಗಿಗಳಿದ್ದರು.

ರಾತ್ರಿ ಊಟಕ್ಕೆ ನಾವು ವೇಂಡಾಗೆ ಮರಳಿದೆವು. ಅಲ್ಲಿ ನಮ್ಮನ್ನು ನೋಡಲು ಅಚ್ಚ ಗಪ್ಪು ಬಣ್ಣದ ಗಂಡಸರು, ಹೆಂಗಸರು ಹಾಗೂ ಮಕ್ಕಳ ದೊಡ್ಡ ಜನಸಂದಣಿಯೇ ನೆರೆದಿತ್ತು. ಅವರೆಲ್ಲ ಬಲು ಖುಷಿಯಾಗಿದ್ದಂತಿತ್ತು. ನಾವೇನು ಹೇಳಿದರೂ, ಮಾಡಿದರೂ ಎಲ್ಲದಕ್ಕೂ ಉತ್ತರವಾಗಿ ಎಲ್ಲರೂ  ನಗುತ್ತಿದ್ದರು. ಪಟ್ಟಣವನ್ನು ಬಿಡುವ ಮೊದಲು ನಾವು ಅಲ್ಲಿನ ಚರ್ಚಿಗೆ ಭೇಟಿ ನೀಡಿದೆವು. ಸಣ್ಣ ಚರ್ಚಿನಷ್ಟು ಇದು ಶ್ರೀಮಂತವಾಗಿರಲಿಲ್ಲ. ತಾಳಮೇಳವಿಲ್ಲದೆ ಅರಚುತ್ತಿದ್ದ ವಾದ್ಯವಷ್ಟೆ ಅಲ್ಲಿತ್ತು. ಆ ಕರಿಯ ಪಾದ್ರಿಗೆ ನಾವು ಕೆಲವು ಶಿಲ್ಲಿಂಗುಗಳನ್ನು ನೀಡಿದೆವು. ಸ್ಪೈನಿನವನೋ ಅವನ ತಲೆಯನ್ನು ತಟ್ಟಿ, ಅವನು ಕರಿಯನೆಂದು ನಮಗೆ ಅನಿಸಲೇ ಇಲ್ಲವೆಂದ.  ಅನಂತರ ನಮ್ಮ ಕುದುರೆಗಳು ಎಷ್ಟೂ ವೇಗವಾಗಿ ಸಾಗಬಲ್ಲುದೋ ಅಷ್ಟೂ ಶೀಘ್ರವಾಗಿ ಅಲ್ಲಿಂದ ಪ್ರಾಯಾ ಬಂದರಿಗೆ ಮರಳಿದೆವು.

ಮತ್ತೊಂದು ದಿನ ನಮ್ಮ ಸವಾರಿ  ದ್ವೀಪದ ನಟ್ಟ ನಡುವೆ ಇದ್ದ ಸೇಂಟ್ ಡೊಮಿಂಗೊ ಗ್ರಾಮಕ್ಕೆ  ಹೋಯಿತು. ಜಾಲಿಮುಳ್ಳಿನ ಹಲವು ಪುಟ್ಟ ಪುಟ್ಟ ಗಿಡಗಳಿದ್ದ ಸಣ್ಣ ಮೈದಾನವನ್ನು ದಾಟಿ ನಡೆದೆವು. ಸದಾ ಬೀಸುತ್ತಿದ್ದ ಗಾಳಿಯು ಅವುಗಳ ತಲೆಯನ್ನು ಬಾಗಿಸಿತ್ತು. ಕೆಲವಂತೂ ನೆಲವನ್ನೇ ಮುಟ್ಟುವಂತೆ ಬಾಗಿದ್ದುವು. ಅವುಗಳೆಲ್ಲವೂ ಉತ್ತರ-ಈಶಾನ್ಯ ಮುಖಿಯಾಗಿಯೂ, ದಕ್ಷಿಣ-ನೈಋತ್ಯ ಮುಖಿಯಾಗಿಯೂ ಬಾಗಿದ್ದುವು ಇದ್ದುವು. ಅಂದರೆ ಇದು ಅಲ್ಲಿ ಸಹಜವಾಗಿ ಬೀಸುತ್ತಿದ್ದ ಬಲವಾದ ವಾಣಿಜ್ಯ ಮಾರುತಗಳ ದಿಕ್ಕನ್ನು ಸೂಚಿಸುತ್ತಿದ್ದುವಷ್ಟೆ. ಅಲ್ಲಿ ಪಯಣಿಗರು ನಡೆದಾಡಿದ ಗುರುತು ಒಂದಿಷ್ಟೂ ಕಾಣದಿದ್ದರಿಂದ ನಾವು ಹಾದಿ ತಪ್ಪಿ ಫ್ಯುಂಟೆಸಿಗೆ ಹೋದೆವು. ಇದು ನಮಗೆ ಅಲ್ಲಿಗೆ ತಲುಪಿದ ಮೇಲಷ್ಟೆ ಅರಿವಾಗಿದ್ದು. ಆದರೆ ಹೀಗೆ ದಾರಿ ತಪ್ಪಿದ್ದೂ ಒಳ್ಳೆಯದೇ ಆಯಿತು. ಫ್ಯೂಂಟೀಸು ಒಂದು ಸುಂದರ ಹಳ್ಳಿ. ಅಲ್ಲೊಂದು ಪುಟ್ಟ ತೊರೆಯೂ ಇತ್ತು. ಅಲ್ಲಿನ ನಿವಾಸಿಗಳ ಹೊರತಾಗಿ ಉಳಿದೆಲ್ಲವೂ ಶ್ರೀಮಂತವಾಗಿತ್ತು.  ಸಂಪೂರ್ಣ ಬೆತ್ತಲಾಗಿ, ಕಪ್ಪಗೆ ಒಣಕಲಾಗಿದ್ದ ಮಕ್ಕಳು ತಮಗಿಂತಲೂ ಇಮ್ಮಡಿ ದೊಡ್ಡದಾದ ಸೌದೆಯ ಹೊರೆ ಹೊತ್ತು ನಡೆದಿದ್ದರು.

ಫ್ಯೂಂಟಿಸಿನ ಬಳಿ ನಾವು ಗಿನೀ ಕೋಳಿಗಳ ದೊಡ್ಡ ಹಿಂಡೊಂದನ್ನು ಕಂಡೆವು. ಹಿಂಡಿನಲ್ಲಿ ಐವತ್ತು ಅರವತ್ತು ಕೋಳಿಗಳಿದ್ದುವು. ಅವು ಎಷ್ಟು ಚುರುಕಾಗಿದ್ದುವೆಂದರೆ ನಮಗೆ ಹತ್ತಿರ ಹೋಗಿ ನೋಡಲು ಆಗಲೇ ಇಲ್ಲ. ಸೆಪ್ಟೆಂಬರಿನ ಮಳೆಗಾಲದಲ್ಲಿ ಪಾರ್ಟರಿಜ್ ಹಕ್ಕಿಗಳು ಮಾಡುವಂತೆ ತಲೆ ಕೊಂಕಿಸಿಕೊಂಡು ನಮ್ಮಿಂದ ತಪ್ಪಿಸಿಕೊಂಡು ಬಿಡುತ್ತಿದ್ದುವು.. ಅಟ್ಟಿಸಿಕೊಂಡು ಹೋದರೆ ಹಾರಿ ಹೋಗುತ್ತಿದ್ದುವು.

ಸೈಂಟ್ ಡೊಮಿಂಗೋದ ನೋಟ  ಮತ್ತು  ಸೌಂದರ್ಯ ಅಚ್ಚರಿಗೊಳಿಸುವಷ್ಟು ಭಿನ್ನವಾಗಿತ್ತು. ದ್ವೀಪದ ಉಳಿದ ಭಾಗದಲ್ಲಿದ್ದ ವಿಷಾದದ ಛಾಯೆ ಇಲ್ಲಿರಲಿಲ್ಲ. ಕಡಿದಾದ, ಚೂಪು-ಚೂಪಾದ ಲಾವಾ ಪದರ ಶಿಲೆಗಳಿದ್ದ  ಕಣಿವೆಯ ತಳದಲ್ಲಿ ಈ ಹಳ್ಳಿ ಇದೆ. ಅಲ್ಲಿ ಹರಿಯುತ್ತಿದ್ದ ಕಿರುತೊರೆಯ ದಂಟೆಗುಂಟ ಆವರಿಸಿದ್ದ ಮಿರುಗುವ ಹಸಿರು, ಅದನ್ನು ಸುತ್ತುವರಿದ ಕಪ್ಪು ಲಾವಾಶಿಲೆಗಳಿಂದಾಗಿ ಎದ್ದು ಕಾಣುತ್ತಿತ್ತು. ನಾವು ಹೋದ ದಿನ ಯಾವುದೋ ಹಬ್ಬ. ಊರೆಲ್ಲ ಜನ ಜಂಗುಳಿ. ಅಲ್ಲಿಂದ ಮರಳುವಾಗ ನಾವು ಒಂದಿಪ್ಪತ್ತು ಕಪ್ಪು ಹುಡುಗಿಯರ ತಂಡವನ್ನು ಹಾದು ಮುನ್ನಡೆದೆವು. ಅವರೆಲ್ಲರೂ ಬಲು ಸೊಗಸಾಗಿ ದಿರಿಸು ಉಟ್ಟಿದ್ದರು. ಅಚ್ಚಕಪ್ಪು ದೇಹದ ಮೇಲೆ ಮಂಜಿನಂತಹ ಬಿಳುಪಿನ ಉಡುಪು, ಜೊತೆಗೆ ಬಣ್ಣ-ಬಣ್ಣದ ಪೇಟ ಮತ್ತು ದೊಡ್ಡ ಶಾಲುಗಳು. ನಾವು ಸಮೀಪಿಸುತ್ತಿದ್ದಂತೆಯೇ ಅವರೆಲ್ಲರೂ ನಮ್ಮತ್ತ ತಿರುಗಿ ರಸ್ತೆಯುದ್ದಕ್ಕೂ ಶಾಲನ್ನು ಹಾಸಿ, ತೊಡೆ ತಟ್ಟುತ್ತಾ ಹಾಡೊಂದನ್ನು ಉತ್ಸಾಹದಿಂದ ಹಾಡಿದರು. ನಾವು ಅವರತ್ತ ಕೆಲವು ವಿಂಟೆಮ್ಮು (ಪೋರ್ತುಗಲ್ಲರ ಕಾಸು) ಎಸೆದೆವು. ನಗುತ್ತ, ಕಿರುಚಾಡುತ್ತ ಅದನ್ನು ಅವರು ಹೆಕ್ಕಿಕೊಂಡರು. ನಾವು ಅಲ್ಲಿಂದ ಹೊರಟಾಗ ಅವರ ಹಾಡು-ಕೂಗಾಟ ಇಮ್ಮಡಿಯಾಗಿತ್ತು.


ಜಾಣನುಡಿ


ಸೆಪ್ಟೆಂಬರ್ 16 , 1893

ವಿಟಾಮಿನ್ ಸಿ ಅಥವಾ ಜೀವಸತ್ವ ಸಿ ಎಂಬ ಉಪಯುಕ್ತ ಪೋಷಕಾಂಶವನ್ನು ಪತ್ತೆ ಮಾಡಿ, ಅದನ್ನು ವಿವಿಧ ವಸ್ತುಗಳಿಂದ ಪ್ರತ್ಯೇಕಿಸಿದ ಹಂಗರಿಯಲ್ಲಿ ಜನಿಸಿ ಅಮೆರಿಕೆಗೆ ವಲಸೆ ಹೋದ ವಿಜ್ಞಾನಿ ಆಲ್ಬರ್ಟ್ ಸೆಂಟ್ಜ್ಯಾರ್ಜಿ ಹುಟ್ಟಿದ ದಿನ. ನಮ್ಮ ದೇಹದಲ್ಲಿ ಜರುಗುವ ಹಾಗೂ ಶಕ್ತಿಯನ್ನು ಒದಗಿಸುವ ಚಯಾಪಚಯ ಕ್ರಿಯೆಗಳಲ್ಲಿ ವಿಟಮಿನ್ ಸಿಯ ಪಾತ್ರವನ್ನು ಗುರುತಿಸಿದ್ದಕ್ಕಾಗಿ ಇವರಿಗೆ 1937ರ ಜೀವಶಾಸ್ತ್ರ ಮತ್ತು ವೈದ್ಯಕೀಯದ ನೋಬೆಲ್ ಪಾರಿತೋಷಕ ಲಭಿಸಿತ್ತು. ಜೀವಿವಿಜ್ಞಾನದಲ್ಲಿ ಜೀವಸತ್ವ ಸಿಯ ಮಹತ್ವವನ್ನಷ್ಟೆ ಅಲ್ಲದೆ ಫ್ಲೇವಿನ್ ಎನ್ನುವ ಮಹತ್ವದ ರಾಸಾಯನಿಕವನ್ನೂ, ಉಸಿರಾಟದ ಪ್ರಕ್ರಿಯೆಯಲ್ಲಿ ಅದರ ಪಾತ್ರವನ್ನು ಇವರು ನಿರೂಪಿಸಿದ್ದರು. ಜೊತೆಗೇ ನಮ್ಮ ಸ್ನಾಯುಗಳಲ್ಲಿ ಇರುವ ಎರಡು ವಿಧದ ನಾರಿನಂತಹ ಪ್ರೊಟೀನುಗಳ ರಚನೆ ಹಾಗೂ ಅವುಗಳ ಕಾರ್ಯವೈಖರಿಯ ಬಗ್ಗೆಯೂ ಜಗತ್ತಿನ ಕಣ್ಣನ್ನು ತೆರೆದವರು ಜ್ಯಾರ್ಜ್ಯಿ. “ಎಲ್ಲ ಜೀವಿಗಳೂ ಜೀವ ಎನ್ನುವ ಒಂದೇ ಮರದ ಎಲೆಗಳಂತೆ,” ಎಂದು ಹೇಳುತ್ತಿದ್ದರು. ಗಿಡ, ಮರ, ಹಾವು, ಚೇಳು, ಮನುಷ್ಯರೆಲ್ಲರಲ್ಲೂ ಜೀವದ ಪರಿ ಒಂದೇ ತೆರ.  ಬೇರೆ, ಬೇರೆ ಪರಿಸರಕ್ಕೆ  ಹೊಂದಿಕೊಂಡಿರುವುದರಿಂದ ಹೊರನೋಟಕ್ಕೆ ಅವು ಭಿನ್ನವಾಗಿ ತೋರುತ್ತವೆ ಎಂದು ಇವರು ಹೇಳುತ್ತಿದ್ದರು.

—-

ರಚನೆ ಮತ್ತು ಪ್ರಸ್ತುತಿ : ಕೊಳ್ಳೇಗಾಲ ಶರ್ಮ.  ಜಾಣಸುದ್ದಿ ಕುರಿತ ಸಲಹೆ, ಸಂದೇಹಗಳಿಗೆ ಹಾಗೂ ಜಾಣಪ್ರಶ್ನೆಗೆ ಉತ್ತರವಿದ್ದರೆ ನೇರವಾಗಿ 9886640328 ಈ ನಂಬರಿಗೆ ಕರೆ ಮಾಡಿ ಇಲ್ಲವೇ ವಾಟ್ಸಾಪು ಮಾಡಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x