ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com
ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)
ಈ ವಾರದ ಸಂಚಿಕೆಯಲ್ಲಿ:
• ರೆಕ್ಕೆ ಬಡಿಯುತ ಹಾರುವ ರೋಬೋ,
• ಮಂಗನನ್ನು ಅಣಕಿಸುವುದೇಕೆ?
• ರೋಲರ್ ಕೋಸ್ಟರ್ ಚಿಕಿತ್ಸೆ,
• ತುಂತುರು ಸುದ್ದಿಗಳು ಹಾಗೂ
• ಬೀಗಲ್ ಸಾಹಸಯಾನ -3
1. ರೆಕ್ಕೆ ಬಡಿಯುತ ಹಾರುವ ರೋಬೋ
ಪಾತರಗಿತ್ತಿ ಪಕ್ಕ ಕೇಳಿದಿರಲ್ಲ? ವರಕವಿ ಬೇಂದ್ರೆಯವರು ಈ ಹಾಡಿನಲ್ಲಿ ಪಟಪಟನೆ ರೆಕ್ಕೆ ಬಡಿಯುತ್ತಾ ಹೂವಿಂದ ಹೂವಿಗೆ ಹಾರುವ ಚಿಟ್ಟೆಯ ಬಗ್ಗೆ ಅಚ್ಚರಿಯನ್ನು ತೋರಿಸುತ್ತಾರೆ. ಅವರದೇ ಇನ್ನೊಂದು ಕವನ ಹಕ್ಕಿ ಹಾರುತಿದೆ ನೋಡಿದಿರಾ. ಅದರಲ್ಲಿಯೂ ಅಷ್ಟೆ ಆಕಾಶದಲ್ಲಿ ಸರಾಗವಾಗಿ ಮೇಲೆ, ಕೆಳಗೆ ಹಾರುವ ಹಕ್ಕಿಗಳ ಬಗ್ಗೆ ಕವಿ ಬೆರಗುಗಣ್ಣಿನಿಂದ ನೋಡುತ್ತಾರೆ. ಅಂದ ಹಾಗೆ ತನ್ನನ್ನು ಬಿಟ್ಟು ಇಷ್ಟೊಂದು ಜೀವಿಗಳು ಹಾರಾಡುವ ಬಗ್ಗೆ ಮನುಷ್ಯನಿಗೆ ಅಸೂಯೆಯೇನೋ? ತಾನು ಹಾರದಿದ್ದರೂ ತನಗೆ ಹಾರಾಟದ ಅನುಭವ ನೀಡುವ ಯಂತ್ರಗಳನ್ನಂತೂ ನಿರ್ಮಿಸಿಬಿಟ್ಟಿದ್ದಾನೆ.
ವಿಮಾನ, ಹೆಲಿಕಾಪ್ಟರುಗಳು, ಡ್ರೋನುಗಳು, ಗಾಳಿಪಟ ಇವೆಲ್ಲವೂ ಅವನ ಬೆರಗಿನದ್ದೋ, ಅಸೂಯೆಯದ್ದೋ ಫಲ. ದೊಡ್ದದರಲ್ಲಿ ದೊಡ್ಡ ಹಕ್ಕಿಗಿಂತ ಸಾವಿರ ಪಟ್ಟು ದೊಡ್ಡದಾದ ವಿಮಾನವನ್ನೂ ಮನುಷ್ಯ ಹಾರಿಸಿಯಾಗಿದೆ. ಆದರೂ ಅವನಿಗೆ ಇನ್ನೂ ತೃಪ್ತಿಯಿಲ್ಲ. ಇನ್ನೂ ಹೊಸ, ಹೊಸ ಹಾರುವ ಯಂತ್ರಗಳನ್ನು ನಿರ್ಮಿಸುವ ಪ್ರಯತ್ನಗಳು ನಡೆಸಿಯೇ ಇದ್ದಾನೆ. ಇದೋ ಇಂತಹ ಹೊಸದೊಂದು ಪುಟ್ಟ ಹಾರುವ ಯಂತ್ರದ ಬಗ್ಗೆ ಕಳೆದ ವಾರ ಸೈನ್ಸ ಪತ್ರಿಕೆ ವರದಿ ಮಾಡಿದೆ. ನೆದರ್ಲ್ಯಾಂಡಿನ ಡೆಲ್ಫ್ಟ್ ವಿವಿಯ ಮೈಕ್ರೊ ಏರ್ ವೆಹಿಕಲ್ ಕಂಟ್ರೋಲ್ ಲ್ಯಾಬೊರೇಟರಿಯ ಮಾಟೆ ಕರಾಸೆಕ್ ಮತ್ತು ಸಂಗಡಿಗರು ಚಿಟ್ಟೆಯಂತೆಯೇ ಪಟಪಟನೇ ರೆಕ್ಕೆ ಬಡಿಯುತ್ತಾ ಹಾರುವ ರೋಬೋವನ್ನು ಸೃಷ್ಟಿಸಿದ್ದಾರೆ. ಹಾಗೂ ಅದನ್ನು ಬಳಸಿ ಚಿಟ್ಟೆಗಳು ಹೇಗೆ ಹಾರುತ್ತವೆಂದೂ ವರದಿ ಮಾಡಿದ್ದಾರೆ.
ಚಿಟ್ಟೆಗಳು ಹಾರುವುದು ಪಟಪಟನೆ ರೆಕ್ಕೆ ಬಡಿದಲ್ಲವೇ ಎಂದಿರಾ? ಹೌದು. ಹಾಗೆಯೇ. ವಿಶೇಷವೆಂದರೆ ಇದುವರೆವಿಗೂ ಮಾನವನು ನಿರ್ಮಿಸಿರುವ ವಿಮಾನಗಳು, ಡ್ರೋನುಗಳು ಹಾಗೂ ಹೆಲಿಕಾಪ್ಟರುಗಳಲ್ಲಿ ಇಂತಹ ರೆಕ್ಕೆಗಳಿಲ್ಲ. ವಿಮಾನಗಳಲ್ಲಿ ಚಪ್ಪರದಂತಹ ಸ್ಥಿರವಾದ ರೆಕ್ಕೆ ಇವೆ. ಹೆಲಿಕಾಪ್ಟರುಗಳ ರೆಕ್ಕೆಗಳು ಮನೆಯಲ್ಲಿ ಸೂರಿಗೆ ನೇತು ಬಿಟ್ಟಿರುವ ಫ್ಯಾನುಗಳಂತಹ ಗಿರಿಗಿಟ್ಟಲೆಗಳು. ಇನ್ನು ಡ್ರೋನುಗಳಲ್ಲಿ ಕೆಲವು ವಿಮಾನಗಳಂತೆ, ಕೆಲವು ಹೆಲಿಕಾಪ್ಟರುಗಳಂತೆ. ಚಿಟ್ಟೆ, ಪಕ್ಷಿಗಳಂತೆ ಪಟಪಟನೆ ರೆಕ್ಕೆ ಬಡಿದು ಹಾರುವ ಯಂತ್ರಗಳು ಇಲ್ಲವೇ ಇಲ್ಲ. ಕರಾಸೆಕ್ ಮತ್ತು ಸಂಗಡಿಗರು ನಿರ್ಮಿಸಿರುವ ಯಂತ್ರ ಇಂತಹದ್ದು. ಅದಷ್ಟೇ ಇದರ ವಿಶೇಷ ಅಲ್ಲ. ಹೀಗೆ ರೆಕ್ಕೆ ಬಡಿಯುವ ಪುಟ್ಟ ರೋಬೋ ಕೀಟಗಳು ಈ ಹಿಂದೆಯೂ ಸುದ್ದಿ ಮಾಡಿದ್ದುವು. ಆದರೆ ಅವೆಲ್ಲವನ್ನೂ ಗಾಳಿಪಟದ ಹಾಗೆ ದಾರಕ್ಕೆ ಕಟ್ಟಿ, ಕೈಯಲ್ಲಿ ರಿಮೋಟು ಹಿಡಿದು ನಿಯಂತ್ರಿಸಬೇಕಿತ್ತು. ಕರಾಸೆಕ್ಯವರ ರೋಬೋ ಚಿಟ್ಟೆ ಹಾಗಲ್ಲ. ತನ್ನದೇ ಬ್ಯಾಟರಿ, ತನ್ನದೇ ಇಲೆಕ್ಟ್ರಾನಿಕ್ ಮಿದುಳಿರುವುದರಿಂದ ಯಾವ ಸೂತ್ರವೂ ಇಲ್ಲದೆ ಹಾರುತ್ತದೆ.
ಚಿಟ್ಟೆಯಂತೆ ಹಾರುವ ಪ್ಲಾಸ್ಟಿಕ್ ರೆಕ್ಕೆಗಳ ರೋಬೋ
ಮತ್ತೂ ಒಂದು ವಿಶೇಷ ಎಂದರೆ ಇದನ್ನು ಬಳಸಿಕೊಂಡು ಚಿಟ್ಟೆ, ಕೀಟಗಳು ಅಷ್ಟು ಸರಾಗವಾಗಿ ಹೇಗೆ ಹಾರಬಲ್ಲುವು ಎನ್ನುವುದನ್ನೂ ತಿಳಿಯಬಹುದು ಎನ್ನುತ್ತಾರೆ ಕರಾಸೆಕ್. ಹೌದು. ಚಿಟ್ಟೆ, ನೊಣಗಳ ಹಾಗೆ ಹಾರುವುದು ಸುಲಭವಲ್ಲ. ಎಂದಾದರೂ ಸೊಳ್ಳೆ, ನೊಣ ಹೊಡೆದಿದ್ದರೆ, ಅಥವಾ ಚಿಟ್ಟೆ ಹಿಡಿಯಲು ಹೋಗಿದ್ದರೆ ಇದರ ಅನುಭವ ನಿಮಗೆ ಆಗಿರುತ್ತದೆ. ನೀವು ಕೈ ಬೀಸುತ್ತಿದ್ದಂತೆಯೇ ಪಟ್ಟನೆ ಪಲ್ಟಿ ಹೊಡೆದು ನೊಣ ಬೇರೊಂದು ದಿಕ್ಕಿಗೆ ಹಾರಿ ಬಿಡುತ್ತದೆ. ಹೀಗೆ ಕ್ಷಣಮಾತ್ರದಲ್ಲಿ ನೊಣ ಮಾಡುವ ಕಸರತ್ತನ್ನು ನಾವು ವಿಮಾನದಲ್ಲಿ ಮಾಡಬೇಕೆಂದರೆ ಪೈಲಟ್ಟುಗಳಿಗೆ ಕಠಿನ ತರಬೇತಿ ಬೇಕು. ದಸರ ಅಥವಾ ಗಣತಂತ್ರ ದಿನಗಳಂದು ವಿಮಾನಗಳ ಹಾರಾಟ ನೋಡಿದ್ದೀರಲ್ಲ? ರೊಯ್ಯನೆ ಮೇಲೇರಿ, ಪಲ್ಟಿ ಹೊಡೆದು ಬಾನಿನಲ್ಲಿ ಹೊಗೆಯ ಗಂಟೊಂದನ್ನು ರೂಪಿಸುತ್ತವಲ್ಲ, ಇಂತಹ ಹಾರಾಟ ಚಿಟ್ಟೆಗಳಿಗೆ ನಿತ್ಯದ ವ್ಯಾಯಾಮ. ಅದು ಹೇಗೆ ಇವು ತಟ್ಟನೆ ಎಡಕ್ಕೋ, ಬಲಕ್ಕೋ, ಅಥವಾ ಹಿಂದಕ್ಕೆ ಪಲ್ಟಿ ಹೊಡೆಯುವುದೋ ಮಾಡಬಲ್ಲವು?
ಇದನ್ನು ತಿಳಿದರೆ ಇನ್ನೂ ಸಮರ್ಥವಾದ ವಿಮಾನ, ಹಾರುವ ರೋಬೋಗಳನ್ನು ಸೃಷ್ಟಿಸಬಹುದು. ಆದರೆ ಚಿಟ್ಟೆಗಳ ಮಿಂಚಿನ ಹಾರಾಟವನ್ನು ಗಮನಿಸುವುದೂ ಕಷ್ಟ. ಇದಕ್ಕಾಗಿ ಹೈಸ್ಪೀಡು ಕ್ಯಾಮೆರಾಗಳನ್ನು ಬಳಸಿ ಚಿತ್ರಗಳನ್ನು ತೆಗೆದು, ಅವನ್ನು ನಿಧಾನವಾಗಿ ವೀಕ್ಷಿಸಿ ತಿಳಿಯುವುದು ಒಂದು ಮಾರ್ಗ. ಇಲ್ಲವೇ ಇಂತಹ ರೋಬೋಗಳನ್ನು ತಯಾರಿಸಿ, ಅವನ್ನು ದಾರದಲ್ಲಿ ಕಟ್ಟಿ ಹಿಡಿದು ಹೇಗೆ ಹಾರುತ್ತವೆ ಎಂದು ಗಮನಿಸುವುದು ಮತ್ತೊಂದು ವಿಧಾನ. ಕರಾಸೆಕ್ಕರ ಚಿಟ್ಟೆ ಇವೆಲ್ಲಕ್ಕಿಂತಲೂ ಭಿನ್ನ. ಇದಕ್ಕೆ ಎರಡು ಪಾಲಿಥೀನ್ ಹಾಳೆಗಳ ರೆಕ್ಕೆಗಳಿವೆ. ಬಾವಲಿಗಳ ರೆಕ್ಕೆಗಳಂತೆ ಇದುವೂ ಮುಂದೆ ಚಾಚಿ, ಮೇಲಕ್ಕೆ ಎದ್ದು, ಮತ್ತೆ ಕೆಳಗೆ ಇಳಿಯುತ್ತಾ, ಹಿಂದಕ್ಕೆ ಬಡಿದು ಗಾಳಿಯನ್ನು ತಳ್ಳುತ್ತದೆ. ಎಡದಲ್ಲಿ ಎರಡು, ಬಲದಲ್ಲಿ ಎರಡು ರೆಕ್ಕೆಗಳಿವೆ. ಇವೆಲ್ಲವನ್ನೂ ಪ್ರತ್ಯೇಕವಾಗಿ ಚಾಲಿಸಬಹುದು. ಹೀಗೆ ಒಂದೊಂದನ್ನೂ ನಿಯಂತ್ರಿಸಿ ಚಿಟ್ಟೆಯನ್ನು ಹಾರಿಸಿದ್ದಾರೆ. ಅದು ನಿಜ ಚಿಟ್ಟೆಯಂತೆಯೇ ತಟಕ್ಕನೆ ಎಡಕ್ಕೆ ತಿರುಗಬಲ್ಲುದು. ನಿಂತಲ್ಲೇ ರೆಕ್ಕೆ ಬಡಿಯುತ್ತಾ ನಿಲ್ಲಬಲ್ಲುದು. ಮುಂದೆ ತಟ್ಟನೆ ಹಾರಬಲ್ಲುದು. ಮುಂದೆ ಹಾರಿ ಪಟ್ಟನೆ ಪಲ್ಟಿ ಹೊಡೆದು ಹಿಂದಕ್ಕೆ ಹಾರಬಲ್ಲುದು. ಒಂದು ವೃತ್ತವನ್ನು ಸುತ್ತಿ ಮರಳಿ ಇದ್ದ ದಿಕ್ಕಿಗೇ ಹಾರಬಲ್ಲುದು.
ಇವೆಲ್ಲವನ್ನೂ ಮಾಡಿಸಿ ಹೈಸ್ಪೀಡ್ ವೀಡಿಯೋ ಚಿತ್ರಿಸಿದ್ದಾರೆ. ನಿಂತಲ್ಲೇ ಅಲ್ಲಾಡದೆ, ಬದಿಗೆ ವಾಲದೆ, ಮುಂದಕ್ಕೆ ಎಗರದೆ, ಹಿಂದಕ್ಕೆ ಜಾರದೆಯೇ ಚಿಟ್ಟೆಗಳು ಹಾರಬಲ್ಲವು. ಹಕ್ಕಿಗಳೂ ಇದನ್ನು ಮಾಡುತ್ತವೆ. ಆದರೆ ಹಕ್ಕಿಗಳಿಗೆ ವಾಲಾಟ, ಎಗರಾಟವನ್ನು ನಿಯಂತ್ರಿಸಲು ಬಾಲದ ಪುಕ್ಕಗಳಿವೆ. ಚಿಟ್ಟೆಗಳಿಗೆ ಇದು ಇಲ್ಲ. ಹೀಗಾಗಿ ಈ ವಾಲಾಟ, ಎಗರಾಟವನ್ನು ಚಿಟ್ಟೆಗಳು ಹೇಗೆ ನಿಭಾಯಿಸುತ್ತವೆ? ಇದು ಕುತೂಹಲದ ಪ್ರಶ್ನೆ. ಇದಕ್ಕಾಗಿ ಹೈಸ್ಪೀಡು ಕ್ಯಾಮೆರಾ ಬಳಸಿ ಚಿಟ್ಟೆಗಳ ಹಾರಾಟದ ಚಿತ್ರಗಳನ್ನು ತೆಗೆದು ಪರೀಕ್ಷಿಸಿದ್ದರೂ ಅದು ಸ್ಪಷ್ಟವಾಗಿರಲಿಲ್ಲ. ಇದೋ ಅದರಿಂದ ಕಲಿತ ಪಾಠಗಳನ್ನು ಈ ರೋಬೋಚಿಟ್ಟೆಯ ಹಾರಾಟಕ್ಕೆ ಅಳವಡಿಸಿ ಗಮನಿಸಿದ್ದಾರೆ ಕರಾಸೆಕ್. ಹಾಗೆಯೇ ಹಣ್ಣಿನ ನೊಣದ ಹಾರಾಟಕ್ಕೂ ಇದಕ್ಕೂ ಏನಾದರೂ ಹೋಲಿಕೆ ಇದೆಯೇ ಎಂದೂ ಗಮನಿಸಿದ್ದಾರೆ.
ಇವೆಲ್ಲದರ ಫಲ: ಇದ್ದ ಸ್ಥಳದಲ್ಲಿಯೇ ಹಾರುತ್ತ ನಿಂತ ಚಿಟ್ಟೆಗಳು, ನೊಣಗಳು ಥಟಕ್ಕನೆ ವಾಲುವುದಕ್ಕೋ, ದಿಕ್ಕು ಬದಲಿಸುವುದಕ್ಕೆ ವಿಮಾನಗಳಂತೆ ಹೆಚ್ಚಿನ ಬಲವನ್ನು ಪ್ರಯೋಗಿಸುವುದಿಲ್ಲವಂತೆ. ಆ ಕಡೆಗೆ ಮೊದಲು ಜಾರಿ ಬಿದ್ದು, ನಂತರ ನೇರವಾಗಲು ಬಲ ಪ್ರಯೋಗಿಸುತ್ತವೆ ಎಂದು ಇವರು ಕಂಡುಕೊಂಡಿದ್ದಾರೆ. ಅರ್ಥಾತ್, ನೀವು ಚಿಟ್ಟೆ ಹಿಡಿಯಲು ಹೋದಾಗ ಅದು ಬಲಕ್ಕೋ, ಎಡಕ್ಕೋ ಉದ್ದೇಶಪೂರ್ವಕವಾಗಿ ಹಾರುವುದಿಲ್ಲ. ಬದಲಿಗೆ ಯಾವ ದಿಕ್ಕಿಗೆ ಬೀಳುತ್ತದೆಯೋ ಅಲ್ಲಿಂದ ಸಾವರಿಸಿಕೊಂಡು ಮತ್ತೆ ಮೊದಲಿನ ದಿಕ್ಕು ಹಿಡಿಯುತ್ತದೆ.
ಪುಟ್ಟ ನೊಣ, ಚಿಟ್ಟೆಯನ್ನೂ ಅರ್ಥ ಮಾಡಿಕೊಳ್ಳುವುದೂ, ಅಣಕಿಸುವುದೂ ಎಷ್ಟು ಕಷ್ಟ ಅಲ್ಲವೇ?
ಆಕರ: Karásek et al., A tailless aerial robotic flapper reveals that flies use torque coupling
in rapid banked turns, Science 361, 1089–1094 (2018)
ಲಿಂಕ್: http://science.sciencemag.org/content/361/6407/1089
ಚುಟುಕು ಚುರುಮುರಿ
2. ಮಂಗನನ್ನು ಅಣಕಿಸುವುದೇಕೆ?
ಅಕ್ಟೋಬರ್ ತಿಂಗಳು ನೋಬೆಲ್ ಪಾರಿತೋಷಕಗಳು ಪ್ರಕಟವಾಗುತ್ತವೆ. ಎಲ್ಲ ಕಡೆಯೂ ಸುದ್ದಿ ಮಾಡುತ್ತವೆ. ಆದರೆ ಅದೇ ರೀತಿ ಕಳೆದ ವಾರ ಇಗ್ನೋಬೆಲ್ ಎನ್ನುವ ಇನ್ನೊಂದು ಜಾಗತಿಕ ಪ್ರಶಸ್ತಿ ಪ್ರಕಟವಾಯಿತು. ದಿ ಜರ್ನಲ್ ಆಫ್ ಇರ್ರೆಪ್ರೊಡ್ಯೂಸಬಲ್ ರಿಸರ್ಚ್ ಎನ್ನುವ ಪತ್ರಿಕೆ ಕಳೆದ 27 ವರ್ಷಗಳಿಂದ ಇಂತಹ ಪ್ರಶಸ್ತಿಯನ್ನು ಕೊಡುತ್ತಾ ಬಂದಿದೆ. ಭಾರತದ ಕೆಲವು ವಿಜ್ಞಾನಿಗಳಿಗೂ ಈ ಪ್ರಶಸ್ತಿ ದಕ್ಕಿದೆ. ಆದರೆ ಈ ಬಗ್ಗೆ ಯಾರೂ ಜಂಭ ಕೊಚ್ಚಿಕೊಂಡು ಓಡಾಡುವುದಿಲ್ಲ. ಏಕೆಂದರೆ ಇದೊಂದು ತಮಾಷೆಯ ಪ್ರಶಸ್ತಿ. ಇಂತಹ ಸಂಶೋಧನೆ ಬೇಕಿರಲಿಲ್ಲ. ಮತ್ತೊಬ್ಬರು ಇದನ್ನು ಮಾಡಬೇಕೆ? ಎಂದು ಕುಹಕದ ಪ್ರಶ್ನೆ ಕೇಳುವ ಪ್ರಶಸ್ತಿಗಳು. ಪ್ರಪಂಚದಾದ್ಯಂತ ನಡೆಯುವ ಲಕ್ಷಾಂತರ ಸಂಶೋಧನೆಗಳಲ್ಲಿ ಕೆಲವೊಂದು ಹೀಗೂ ಇರುತ್ತವೆ. ಅವುಗಳಿಂದ ಯಾವುದೇ ಪ್ರಯೋಜನವಾಗಲಿ ಹೊಸ ಜ್ಞಾನವಾಗಲಿ ಸಿಗುವುದಿಲ್ಲ. ಜೊತೆಗೆ ಅವು ಹಾಸ್ಯಾಸ್ಪದವಾಗಿಯೂ ಇರುತ್ತವೆ. ಅಂತಹವುಗಳೇ ಇಗ್ನೋಬೆಲ್ ಪ್ರಶಸ್ತಿಗೆ ಅರ್ಹರು. ಕಳೆದ ವಾರ ಈ ಪ್ರಶಸ್ತಿಗಳನ್ನು ವಿತರಿಸಲಾಯಿತು. ಇವುಗಳಲ್ಲಿ ಎರಡು ಸ್ಯಾಂಪಲ್ಲು ಇಲ್ಲಿವೆ.
ಮಾನವಶಾಸ್ತ್ರ ಅಧ್ಯಯನದ ವಿಭಾಗದಲ್ಲಿ ಗೇಬ್ರಿಯೆಲಾ ಅಲಿನಿ ಸಾಸಿಯುಕ್ ಮತ್ತು ಸಂಗಡಿಗರಿಗೆ ಈ ಪ್ರಶಸ್ತಿ ದೊರಕಿದೆ. ಕಳದ ವರ್ಷದ ಆಗಸ್ಟ್ ತಿಂಗಳಲ್ಲಿ ಇವರು ಚಿಂಪಾಂಜಿಗಳನ್ನು ಮನುಷ್ಯರು ಹೇಗೆ ಅಣಕಿಸುತ್ತಾರೆ ಎನ್ನುವ ಬಗ್ಗೆ ಸಂಶೋಧನೆ ಮಾಡಿದ್ದರು. ಆ ಕಾರಣವಾಗಿ ಇವರಿಗೆ ಪ್ರಶಸ್ತಿ ದೊರಕಿದ.
ವಾಸ್ತವವಾಗಿ ಇವರು ಅಣಕಿಸುವ ಪ್ರವೃತ್ತಿ ಏಕಿದೆ? ಅದರ ಪ್ರಯೋಜನವೇನು ಎನ್ನುವ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತಿರುವ ಮನಶ್ಶಾಸ್ತ್ರಜ್ಞೆ. ಅಣಕಿಸುವುದು ಕೇವಲ ಅಪಹಾಸ್ಯ ಮಾಡುವುದಕ್ಕಲ್ಲ, ಅದೊಂದು ಸಂವಹನದ ರೀತಿ ಎನ್ನುವುದು ಮನಶ್ಶಾಸ್ತ್ರಜ್ಞರ ಅನಿಸಿಕೆ. ಅಣಕಿಸುವ ಮೂಲಕ ಸಮಾಜದ ಇತರೆ ಸದಸ್ಯರ ಜೊತೆಗೆ ಸಂಬಂಧಗಳನ್ನು ರೂಪಿಸಿಕೊಳ್ಳುತ್ತೇವೆ ಎಂಬುದು ಅವರ ತರ್ಕ. ಆದರೆ ಕೆಲವರು ಇದನ್ನು ಒಪ್ಪುವುದಿಲ್ಲ. ಅಣಕಿಸುವುದಕ್ಕೆ ಅರ್ಥವಿರಲೇ ಬೇಕಿಲ್ಲ ಎಂಬ ವಾದವೂ ಇದೆ. ಇದನ್ನು ತಿಳಿಯಲು ಇವರು ಪ್ರಾಣಿಸಂಗ್ರಹಾಲಯದಲ್ಲಿ ಚಿಂಪಾಂಜಿ ಹಾಗೂ ಮನುಷ್ಯರು ಮುಖಾಮುಖಿಯಾದಾಗ ಏನಾಗುತ್ತದೆ ಎಂದು ಗಮನಿಸಿದ್ದಾರೆ. ಮಂಗಗಳಿಗೆ ಮಾನವ ಎದುರಾದಾಗ ಮಂಗಗಳ ನಡವಳಿಕೆಯನ್ನು ಅಣಕಿಸುತ್ತಾನಂತೆ. ಅಂದ ಹಾಗೆ ಇವರ ಮಟ್ಟಿಗೆ ಜೂಗೆ ಬಂದವರಲ್ಲಿ ಮಕ್ಕಳಿಗಿಂತಲೂ ಹಿರಿಯರೇ ಹೆಚ್ಚು ಅಣಕಿಸಿದರಂತೆ. ಹಿರಿಯರೆಲ್ಲರ ಅಣಕದ ಭಾವಗಳನ್ನು ಒಟ್ಟು ಮಾಡಿದಾಗ ಅದು ಬಲು ಹೆಚ್ಚಿತ್ತು. ಚಿಂಪಾಂಜಿಗಳು ಕೇವಲ 14 ರೀತಿಯಲ್ಲಿ ಅಣಕಿಸಿದುವಂತೆ. ಆದರೆ ಮನುಷ್ಯರು ಅದಕ್ಕಿಂತಲೂ ತುಸು ಹೆಚ್ಚೇ ಅಣಕಿಸಿದರು ಎನ್ನುತ್ತದೆ ಈ ಸಂಶೋಧನೆ.
ಅಣಕಿಸುವುದರಿಂದ ಯಾವುದೇ ಲಾಭವಿಲ್ಲದಿದ್ದರೂ, ಮನುಷ್ಯರು ಹಾಗೂ ಚಿಂಪಾಂಜಿಗಳು ಹೀಗೆ ಸಂವಹಿಸಲು ಪ್ರಯತ್ನಿಸಿದುವು ಎಂದು ಇವರು ಹೇಳಿದ್ದಾರೆ. ಅರ್ಥಾತ್, ಏನಾದರೂ ಲಾಭವಿದ್ದರಷ್ಟೆ ನಾವು ಅಣಕಿಸುವುದನ್ನು ಕಲಿಯುವುದಿಲ್ಲ. ನಿಕಟವರ್ತಿಗಳಾಗಿದ್ದರೂ ಸಾಕು, ಗೊತ್ತಿಲ್ಲದೆಯೇ ಮಂಗಗಳನ್ನು ಅಣಕಿಸಲು ಆರಂಭಿಸಬಹುದು ಎನ್ನುವುದು ಇವರ ತೀರ್ಮಾನ.
ನಮ್ಮನ್ನೇ ಅಣಕಿಸಿದಂತೆ ಇದೆ ಅಲ್ಲವೇ ಈ ಸಂಶೋಧನೆ. ಇದಕ್ಕೆ ಇಗ್ನೋಬೆಲ್ ಸಿಕ್ಕಿದ್ದು ಅಚ್ಚರಿಯೇನಲ್ಲ ಅಲ್ಲವೇ?
ಹಾಂ. ಹೀಗೆ ಕೀಟಲೆ ಮಾಡುವ ಪ್ರಶಸ್ತಿಯನ್ನು ಯಾರಾದರೂ ಸ್ವೀಕರಿಸಲು ಹೋಗುವರೇ ಎಂಬ ಕುತೂಹಲವೇ? ಗೇಬ್ರಿಯೆಲಾ ಸ್ವತಃ ತಾವೇ ಸಮಾರಂಭಕ್ಕೆ ಹೋಗಿ ಖುಷಿಯಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಆಗ ಪ್ರಶಸ್ತಿ ನೀಡುವವರನ್ನು ಇವರು ಅಣಕಿಸಿದರೋ, ಅವರು ಇವರನ್ನು ಅಣಕಿಸಿದರೋ ಗೊತ್ತಿಲ್ಲ.
ಆಕರ: Tomas Persson et al., Spontaneous cross-species imitation in interactions between chimpanzees and zoo visitors Primates, Primates (2018) 59:19–29
ಲಿಂಕ್: https://doi.org/10.1007/s10329-017-0624-9
3. ರೋಲರ್ ಕೋಸ್ಟರ್ ಚಿಕಿತ್ಸೆ
ರೋಲರ್ ಕೋಸ್ಟರ್ ರೈಡ್ ಅಂದರೆ ಗೊತ್ತಿರಬೇಕಲ್ಲ. ದಸರಾ ವಸ್ತುಪ್ರದರ್ಶನದಲ್ಲಿ ಇಂತಹುದ್ದೊಂದು ಇರುತ್ತದೆ. ಏರಿ ಇಳಿಯುವ ವಕ್ರ ಹಾದಿಯಲ್ಲಿ ವೇಗದಿಂದ ಸಾಗುತ್ತೇವೆ. ಪುಟ್ಟ ಗಾಡಿಯಲ್ಲಿ ಕುಳಿತು, ಸೀಟಿಗೆ ಭದ್ರವಾಗಿ ಕಟ್ಟಿಕೊಂಡು ಕುಳಿತುಕೊಳ್ಳಬೇಕು. ದಸರಾ ವಸ್ತುಪ್ರದರ್ಶನದಲ್ಲಿ ಇಲ್ಲವೇ ವಂಡರ್ ಲಾ ದಲ್ಲಿ ಬಹುಶಃ ನೀವು ಇವನ್ನು ಅನುಭವಿಸಿರುತ್ತೀರಿ. ಈ ಥ್ರಿಲ್ ಆಟವನ್ನು ಆಡಲು ಕೆಲವು ವೈದ್ಯರು ಕಿಡ್ನಿ ಸ್ಟೋನು ಅರ್ಥಾತ್ ಮೂತ್ರಪಿಂಡದ ಕಲ್ಲುಗಳನ್ನೂ ಕಳಿಸಿದ್ದರಂತೆ. ಈ ಪ್ರಯೋಗವನ್ನು ಮಾಡಿದವರು ವಾಷಿಂಗ್ಟನ್ನಿನ ಮಾರ್ಕ್ ಮಿಚೆಲ್ ಮತ್ತು ಡೇವಿಡ್ ವಾರ್ಟಿಂಗರ್. ಉದ್ದೇಶ: ರೋಲರ್ ಕೋಸ್ಟರಿನಲ್ಲಿ ಮೂತ್ರಪಿಂಡದಲ್ಲಿ ಕಲ್ಲಿರುವ ರೋಗಿಗಳು ಪಯಣಿಸಿದರೆ ಕಲ್ಲಿಗೇನಾಗುತ್ತದೆ ಎನ್ನುವ ಕುತೂಹಲವಂತೆ.
ರೋಲರ್ ಕೋಸ್ಟರ್ ಪಯಣಕ್ಕೆ ಹೋದ ಕೃತಕ ಸಿಲಿಕೋನ್ ಮೂತ್ರ ಪಿಂಡ
ಅಲ್ಲ. ರೋಲರ್ ಕೋಸ್ಟರಿನಲ್ಲಿ ಹೋದರೆ ಹೃದಯವೇ ಬಾಯಿಗೆ ಬಂದಂತೆ ಆಗುತ್ತೆ. ಇನ್ನು ಮೂತ್ರಪಿಂಡದ ಕಲ್ಲು ಬರುವುದಿಲ್ಲವೇ ಎನ್ನಬೇಡಿ. ಮೂತ್ರಪಿಂಡದ ಕಲ್ಲುಗಳು ಅಷ್ಟು ಸುಲಭವಾಗಿ ಜಗ್ಗುವಂಥವಲ್ಲ. ಅವನ್ನು ಶಕ್ತಿಯುತವಾದ ಶಬ್ದ ತರಂಗಗಳಿಂದಲೋ, ಇನ್ಯಾವುದರಿಂದಲೋ ಕುಟ್ಟಿ ಪುಡಿ ಮಾಡಿ, ಚೆನ್ನಾಗಿ ನೀರು ಕುಡಿಸಿ ದೇಹದಿಂದ ಹೊರಗೆ ಹೋಗುವಂತೆ ವೈದ್ಯರು ಪ್ರಯತ್ನಿಸುತ್ತಾರೆ. ಇವರ ಬಳಿ ಬಂದ ಹಲವು ರೋಗಿಗಳು ಹೀಗೆ ರೋಲರ್ ಕೋಸ್ಟರಿನಲ್ಲಿ ಪಯಣಿಸಿದ ನಂತರ ಮೂತ್ರಪಿಂಡದ ಕಲ್ಲುಗಳು ಮೂತ್ರದಲ್ಲಿ ಹೋದುವು ಎಂದು ದೂರಿದ್ದರಂತೆ. ಇದು ನಿಜವೇ ಎಂದು ತಿಳಿಯಲು ಇವರು ಮೂತ್ರಪಿಂಡವನ್ನೇ ಹೋಲುವ ಸಾಧನವೊಂದನ್ನು ಸೃಷ್ಟಿಸಿ, ಅದರೊಳಗೆ ಹಲವು ಕಲ್ಲುಗಳನ್ನಿಟ್ಟು ಪರೀಕ್ಷಿಸಿದ್ದಾರೆ.
ಈ ಸಾಧನವನ್ನು ಇಬ್ಬರೂ ತಮ್ಮ ಮಧ್ಯೆ ಕುಳ್ಳಿರಿಸಿ ರೋಲರ್ ಕೋಸ್ಟರ್ ಹತ್ತಿದ್ದಾರೆ. ಹೀಗೆ ಮೂರು ಮೂತ್ರಪಿಂಡದ ಕಲ್ಲುಗಳನ್ನು ಇಪ್ಪತ್ತು ಬಾರಿ ರೋಲರ್ ಕೋಸ್ಟರಿನಲ್ಲಿ ಕೂರಿಸಿ ಆಡಿಸಿದ್ದಾರೆ. ಪ್ರತಿಬಾರಿ ಹೋಗಿ ಬಂದ ಮೇಲೂ ಸಾಧನವನ್ನು ಸ್ಕ್ಯಾನ್ ಮಾಡಿ ಒಳಗಿರುವ ಕಲ್ಲಿಗೇನಾಗಿದೆ ಎಂದು ಪರೀಕ್ಷಿಸಿದ್ದಾರೆ. ಏಳೆಂಟು ಬಾರಿ ಹೀಗೆ ಪಯಣಿಸಿದಾಗ ಸಾಮಾನ್ಯವಾಗಿ ಮೂತ್ರಪಿಂಡದ ಆದಿ ಭಾಗದಲ್ಲಿ ಇರುವ ಸೂಕ್ಷ್ಮ ಕಲ್ಲುಗಳು ಅಂತಿಮ ಭಾಗಕ್ಕೆ ಜರುಗಿದುವಂತೆ. ಅಂತಿಮ ಜಾಗದಲ್ಲಿದ್ದುವು ಅಷ್ಟೇನೂ ಅಲ್ಲಾಡಲಿಲ್ಲವಂತೆ.
ಅಂತೂ ಇನ್ನು ವಂಡರ್ ಲಾ ಸಮೀಪ ಇರುವ ರೋಗಿಗಳಿಗೆ ವೈದ್ಯರು ಔಷಧ, ಸ್ಕ್ಯಾನಿಂಗ್ ಸೂಚಿಸುವುದರ ಜೊತೆಗೇ ವಂಡರ್ ಲಾಗೆ ಭೇಟಿ ನೀಡಿ ಎಂದೂ ಹೇಳಬಹುದು. ಏನಂತೀರಿ?
ಇದೋ ಈ ಶೋಧಕ್ಕಾಗಿ ಇವರಿಬ್ಬರಿಗೂ ವೈದ್ಯಕೀಯದಲ್ಲಿ ಇಗ್ನೋಬಲ್ ಪ್ರಶಸ್ತಿ ಸಿಕ್ಕಿದೆ. ಡೇವ್ ವಾರ್ಟಿಂಜರ್ ಪ್ರಶಸ್ತಿಯನ್ನು ಸ್ವತಃ ಸ್ವೀಕರಿಸಿದ್ದಾರೆ.
ಆಕರ: Marc A. Mitchell, and David D. Wartinger,Validation of a Functional Pyelocalyceal Renal Model for the Evaluation of Renal Calculi Passage While Riding a Roller Coaster The Journal of the American Osteopathic Association October 2016 | Vol 116 | No. 10
ಲಿಂಕ್: http://www.currentscience.ac.in/Volumes/115/04/0621.pdf
4. ತುಂತುರು ಸುದ್ದಿಗಳು
• ಇರುವೆ, ಕೆಂಜಗ ಕಚ್ಚಿದರೆ ಏನಾಗುತ್ತದೆ ಗೊತ್ತಲ್ಲ? ಅದರ ವಿಷದಿಂದ ಊತವುಂಟಾಗುತ್ತದೆ. ಇರುವೆಗಳಲ್ಲಿ ನೂರಾರು ಜಾತಿಗಳು ಇರುವ ಹಾಗೆಯೇ, ಇರುವೆಯ ವಿಷಗಳಲ್ಲೂ ವೈವಿಧ್ಯವಿದೆ. ಇಷ್ಟೆಲ್ಲ ವೈವಿಧ್ಯದ ವಿಷಗಳು ಬಹುಶಃ ಒಂದೇ ಪ್ರೊಟೀನು ಕ್ರಮೇಣ ವ್ಯತ್ಯಾಸವಾಗಿ ಹಲವಾಗಿವೆಯಂತೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದಿನ ಜಾಣಸುದ್ದಿಯಲ್ಲಿ ಕೇಳೋಣ..
• ಕುಡಿಯಲು ಯೋಗ್ಯವೆನಿಸಿದ್ದಕ್ಕಿಂತಲೂ 13 ಪಟ್ಟು ಹೆಚ್ಚು ಸೀಸ ಬೆರೆತಿದ್ದ ನೀರನ್ನೂ ಸೋಸಿ ಕುಡಿಯಲು ಯೋಗ್ಯವನ್ನಾಗಿ ಮಾಡುವ ಹೊಸ ತಂತ್ರಜ್ಞಾನವನ್ನು ಆಸ್ಟ್ರೇಲಿಯಾದ ವಿಜ್ಞಾನಿಳು ರೂಪಿಸಿದ್ದಾರೆ. ಲಿಕ್ವಿಡ್ ಮೆಟಲ್ ಅಥವಾ ದ್ರವಲೋಹಗಳು ಎನ್ನುವ ಹೊಸ ಸ್ವರೂಪದಲ್ಲಿ ವಸ್ತುಗಳನ್ನು ರೂಪಿಸುವ ಈ ವಿಧಾನದ ಮೂಲಕ ಈಗ ಸಾಧ್ಯವಾಗಿರುವುದಕ್ಕಿಂತಲೂ 100 ಪಟ್ಟು ಶೀಘ್ರವಾಗಿ, ಕಡಿಮೆ ಖರ್ಚಿನಲ್ಲಿ ಕಲುಷಿತ ನೀರನ್ನು ಶುಚಿಗೊಳಿಸಬಹುದಂತೆ.
• ಮೀನು ಹಿಡಿಯುವ ಸೂರ್ಯನ ಕುದುರೆಯ ಬಗ್ಗೆ ಕೇಳಿದ್ದೀರಾ? ಇದುವರೆವಿಗೂ ಈ ಕೀಟ ಕೇವಲ ಹುಳು ಹುಪ್ಪಟೆಗಳನ್ನಷ್ಟೆ ಬೇಟೆಯಾಡುತ್ತದೆಂದು ಕೇಳಿದ್ದೆವು. ಬಂಧಿಸಿಟ್ಟಾಗಲಷ್ಟೆ ಕೈಗೆ ಸಿಕ್ಕದ್ದನ್ನು ತಿನ್ನುತ್ತದೆಂದೂ ತಿಳಿಯಲಾಗಿತ್ತು.ಇದೀಗೆ ಕರ್ನಾಟಕದ ರಾಜೇಶ್ ಪುಟ್ಟಸ್ವಾಮಯ್ಯ ಎನ್ನುವವರು ತೆಗೆದಿರುವ, ಮೀನನ್ನು ಬೇಟೆಯಾಡಿ ತಿನ್ನುತ್ತಿರುವ ಸೂರ್ಯನ ಕುದುರೆಯ ಚಿತ್ರ ಸುದ್ದಿ ಮಾಡುತ್ತಿದೆ.
5. ಬೀಗಲ್ ಸಾಹಸಯಾನ
ಬೀಗಲ್ ಯಾನದ ಬಗ್ಗೆ ಒಂದು ಸ್ವಾರಸ್ಯಕರ ಸಂಗತಿಯನ್ನು ಪ್ರೊಫೆಸರ್ ಎಸ್. ಎನ್. ಹೆಗಡೆ ಮೊನ್ನೆ ಕಳಿಸಿದ್ದಾರೆ. ಡಾರ್ವಿನ್ನನ ಬೀಗಲ್ ಯಾನ ೧೭೩೧ರ ಡಿಸೆಂಬರ್ ೨೭ ಕ್ಕೆ ಆರಂಭವಾಗಿ ೧೮೩೬ರ ಅಕ್ಟೋಬರ್ ೨ರಂದು ಕೊನೆಗೊಂಡಿತಷ್ಟೆ. ಐದು ವರ್ಷಗಳ ಈ ಬೀಗಲ್ ಯಾನ ಆರಂಭಕ್ಕೆ ಮೊದಲು ನಡೆದ ಸ್ವಾರಸ್ಯ: ಪ್ರೊ. ಹೆನ್ಸ್ಲೊರವರು ಚಾರ್ಲ್ಸ್ ಡಾರ್ವಿನ್ನರಿಗೆ ಬೀಗಲ್ಲಿನಲ್ಲಿ ಯಾನ ಮಾಡಲು ಅವಕಾಶ ನೀಡುವಂತೆ ಮನವಿ ಮಾಡುತ್ತಾರೆ. ಆದರೆ ಬೀಗಲ್ಲಿನ ಕಾಪ್ಟನ್ ಫಿಟ್ಜ್ ರಾಯ್ ಮೊದಲು ಇದಕ್ಕೆ ಒಪ್ಪುವುದಿಲ್ಲ. ಕಾರಣ ಅವನಿಗೆ ಗಿಡ್ಡ ಮೂಗಿನವರನ್ನು ಕಂಡರೆ ತಿರಸ್ಕಾರ. ಡಾರ್ವಿನ್ನನದೂ ಗಿಡ್ಡ ಮೂಗು.
ಆತನ ವಿಕಾಸವಾದವನ್ನು ಹಂಗಿಸಿ ಬರೆದ ಈ ವ್ಯಂಗ್ಯಚಿತ್ರದಲ್ಲಿ ಡಾರ್ವಿನ್ನನ ಮೊಂಡು ಮೂಗನ್ನು ಗಮನಿಸಿ.
ಪಿಟ್ಜರಾಯ್ ಪ್ರಯಾಣಕ್ಕೆ ಅವಕಾಶ ನೀಡಲಾಗದು ಎನ್ನುತ್ತಾರೆ. ಡಾರ್ವಿನ್ ಅಷ್ಟಕ್ಕೆ ಬಿಡುವುದಿಲ್ಲ. ಮತ್ತೆ ಹೆನ್ಸ್ಲೊರ ಮೂಲಕ ಆ ಕಾಲದಲ್ಲಿ ಇಂಗ್ಲೆಂಡಿನ ಪ್ರಭಾವಿ ವಿಜ್ಞಾನಿಯಾಗಿದ್ದ ಸೆಜ್ವಿಕ್ ಎಂಬವರ ಶಿಫಾರಸ ಪಡೆಯುತ್ತಾರೆ. ಅದರ ಫಲವಾಗಿ ಬೀಗಲ್ ಯಾನಕ್ಕೆ ಆಯ್ಕೆ ಯಾಗುತ್ತಾರೆ. ಆದರೂ ಯಾನದ ಉದ್ದಕ್ಕೂ ಫಟ್ಜ್ ರಾಯ್ ಡಾರ್ವಿನ್ ರನ್ನು ಗಿಡ್ಡಮೂಗಿನ ಹುಡುಗ ಎಂದೇ ಹೇಳುತ್ತಿದ್ದರಂತೆ. ಇದೇ ಗಿಡ್ಡ ಮೂಗಿನ ಹುಡುಗ ಪ್ರಪಂಚವನ್ನೇ ಬೆರಗುಗೊಳಿಸಿದ ವಿಕಾಸವಾದವನ್ನು ಪ್ರತಿಪಾದಿಸಿದಾಗ ಫಿಟ್ಜ್ ರಾಯ್ ತಾವು ಆಗ ನಡೆದುಕೊಂಡ ಬಗೆಗೆ ತಾವೇ ವಿಷಾದಿಸಿದರಂತೆ. ಇದೋ ಈಗ ಬೀಗಲ್ ಯಾನದ ಮುಂದಿನ ಕಥೆ ಕೇಳೋಣ.
ಎಚ್ಎಮ್ಮೆಸ್ ಬೀಗಲ್ ಸಾಹಸ ಯಾನ ಮುಂದುವರೆದುದು
ಆ ಬೆಳಗ್ಗೆ ನೋಟ ಬಲು ನಿಚ್ಚಳವಾಗಿತ್ತು. ದೂರದಲ್ಲಿದ್ದ ಪರ್ವತಗಳ ಅಂಚುಗಳೆಲ್ಲವೂ ಅಚ್ಚ ನೀಲಿ ಬಣ್ಣದ ಮೋಡಗಳ ದಡದಲ್ಲಿ ಬರೆದ ರೇಖೆಗಳಂತೆ ಸುಸ್ಪಷ್ಟವಾಗಿ ಕಾಣುತ್ತಿದ್ದುವು. ಇಂಗ್ಲೆಂಡು ಹಾಗೂ ಇನ್ನಿತರ ಕಡೆಗಳಲ್ಲಿನ ಅನುಭವಗಳ ಆಧಾರದ ಮೇಲೆ ಗಾಳಿ ತೇವಾಂಶದಿಂದ ಆರ್ದ್ರವಾಗಿರಬೇಕು ಎಂದು ತರ್ಕಿಸಿದೆ. ಆದರೆ ವಾಸ್ತವ ಬೇರೆಯದೇ ಆಗಿತ್ತು. ವಾತಾವರಣದ ಉಷ್ಣತೆ ಹಾಗೂ ನೀರು ಹನಿಗಟ್ಟುವ ಉಷ್ಣತೆಯ ನಡುವೆ 29.6 ಡಿಗ್ರೀಗಳ ವ್ಯತ್ಯಾಸವಿದೆ ಎಂದು ಆರ್ದ್ರತಾ ಮಾಪಕ ಸೂಚಿಸಿತು. ಇದು ಹೆಚ್ಚೂ ಕಡಿಮೆ ಅದಕ್ಕೂ ಮುಂಚಿನ ದಿನಗಳಲ್ಲಿ ನಾನು ಕಂಡಿದ್ದ ವ್ಯತ್ಯಾಸದ ದುಪ್ಪಟ್ಟು ಇತ್ತು. ವಾತಾವರಣದ ಈ ಶುಷ್ಕತೆಯ ಜೊತೆಗೆ ಎಡೆಬಿಡದೆ ಮಿಂಚು ಕೂಡ ಕೋರೈಸುತ್ತಿತ್ತು. ಇಂತಹ ಹವಾಗುಣವಿರುವ ಸಂದರ್ಭಗಳಲ್ಲಿ ಎಲ್ಲವೂ ನಿಚ್ಚಳವಾಗಿರುವುದು ತುಸು ಅಪರೂಪ, ಅಲ್ಲವೇ?
ದೂಳಿನಲ್ಲಿ ಡಾರ್ವಿನ್ ಕಂಡ ಜೀವಿಗಳ ಅಂಶ
ಸಾಮಾನ್ಯವಾಗಿ ಇಲ್ಲಿನ ವಾತಾವರಣ ಮಬ್ಬು ಮಸುಕಾಗಿಯೇ ಇರುತ್ತದೆ. ಅತಿ ಸಣ್ಣ ದೂಳು ತುಂಬಿಕೊಂಡು ಹೀಗಾಗುತ್ತಿತ್ತು. ಇದು ಖಗೋಳ ವೀಕ್ಷಣೆಯ ಸಾಧನಗಳನ್ನೂ ಹಾಳುಗೆಡವಿತ್ತು. ಪ್ರಾಯಾ ಬಂದರಿನಲ್ಲಿ ಲಂಗರು ಹಾಕುವ ಮುನ್ನಾದಿನ ಬೆಳಗ್ಗೆ ನಾನು ಒಂದಿಷ್ಟು ನಯವಾದ ಕಂದು ಬಣ್ಣದ ದೂಳನ್ನು ಸಂಗ್ರಹಿಸಿದ್ದೆ. ಕೂವೆಗೆ ಕಟ್ಟಿದ್ದ ಹಾಯಿಬಟ್ಟೆಯ ಮೂಲಕ ಗಾಳಿ ಇದನ್ನು ಸೋಸಿದ ಹಾಗೆ ತೋರುತ್ತಿತ್ತು. ಈ ದ್ವೀಪಗಳ ಉತ್ತರಕ್ಕೆ ಸುಮಾರು ನಾಲ್ಕುನೂರು ಮೈಲಿಗಳ ದೂರದಲ್ಲಿ ಹಡಗಿನ ಮೇಲೆ ಬಿದ್ದ ದೂಳಿನ ನಾಲ್ಕು ಪೊಟ್ಟಣಗಳನ್ನು ಮಿ. ಲಯೆಲ್ ನನಗೆ ಕೊಟ್ಟಿದ್ದರು. ಪ್ರೊಫೆಸರ್ ಎಹ್ರೆನ್ ಬರ್ಗರಿಗೆ ಇದನ್ನು ಕಳಿಸಿದಾಗ ಆತ ಈ ದೂಳಿನಲ್ಲಿ ಹೆಚ್ಚಿನಂಶ ಸಿಲಿಕಾಭರಿತ ಹುರುಪೆಗಳು ಹಾಗೂ ಸಿಲಿಕಾಭರಿತ ಗಟ್ಟಿಯಾದ ಸಸ್ಯಗಳ ಅಂಗಾಂಶವಿವೆ ಎಂದು ಗುರುತಿಸಿದರು. ಈ ಐದು ಪುಟ್ಟ ಪೊಟ್ಟಣಗಳಲ್ಲಿ ಆತ ಏನಿಲ್ಲವೆಂದರೂ ಅರವತ್ತೇಳು ವಿಭಿನ್ನ ಜೀವಿರೂಪಗಳನ್ನು ಗುರುತಿಸಿದ್ದರು! ಇವುಗಳಲ್ಲಿ ಎರಡು ಸಮುದ್ರ ಜೀವಿಗಳು. ಉಳಿದೆಲ್ಲವೂ ಸಿಹಿನೀರಿನ ವಾಸಿಗಳವು. ಅಟ್ಲಾಂಟಿಕ ಸಾಗರದ ಮಧ್ಯೆ, ತೀರದಿಂದ ಎಲ್ಲೋ ದೂರದಲ್ಲಿದ್ದಾಗಲೂ ಕನಿಷ್ಟ ಎಂದರೆ ಹದಿನೈದು ಜೀವಿಯಂಶಗಳಿರುವ ದೂಳು ಹಡಗಿನಲ್ಲಿ ಬಂದು ಬೀಳುವುದನ್ನು ನಾನು ಕಂಡಿದ್ದೇನೆ. ಈ ದೂಳು ಬಿದ್ದಾಗಲೆಲ್ಲ ಬೀಸುವ ಗಾಳಿಯ ದಿಕ್ಕು ಹಾಗೂ ವಾಯುಮಂಡಲದಲ್ಲಿ ಅತಿ ಎತ್ತರಕ್ಕೆ ದೂಳನ್ನು ಕೊಂಡೊಯ್ಯುವ ಹರ್ಮಟ್ಟನ್ ಬೀಸುವ ಕಾಲದಲ್ಲಿಯೇ ಈ ದೂಳು ಬಂದು ಬೀಳುವುದನ್ನೂ ಗಮನಿಸಿದರೆ ಇದು ಆಫ್ರಿಕಾದಿಂದಲೇ ಬರುತ್ತದೆ ಎಂದು ನಾವು ತಿಳಿಯಬಹುದು. ಹರ್ಮಟ್ಟನ್ ನಮ್ಮ ಮುಂಗಾರಿನಂತೆಯೇ ಆಫ್ರಿಕಾದ ಸಹಾರದಲ್ಲಿ ನಿಯತವಾದ ಋತುಗಳಲ್ಲಿ ಬೀಸುವ ಒಂದು ಮಾರುತ. ಆದರೆ ಆಫ್ರಿಕಾಗಷ್ಟೆ ಸೀಮಿತವಾದ ಹಲವು ವಿಶಿಷ್ಟ ಜೀವಿಯಂಶಗಳ ಅರಿವು ಇರುವ ಪ್ರೊಫೆಸರಿಗೆ ಈ ದೂಳಿನಲ್ಲಿ ಅವು ಯಾವುವೂ ಸಿಗಲಿಲ್ಲ ಎನ್ನುವುದು ವಿಚಿತ್ರವಾದರೂ ಸತ್ಯ. ಆತನಿಗೆ ಗೊತ್ತಿದ್ದ ಹಾಗೂ ದಕ್ಷಿಣ ಅಮೆರಿಕೆಯಲ್ಲಿ ಜೀವಿಸುವ ಎರಡು ಜೀವಿಗಳ ಅಂಶಗಳು ಮಾತ್ರವೆ ಅವರಿಗೆ ಕಂಡಿವೆ.
ಹಡಗಿನಲ್ಲಿರುವ ಎಲ್ಲವನ್ನೂ ಮುಸುಕುವಷ್ಟು ಭಾರೀ ಪ್ರಮಾಣದಲ್ಲಿ ಈ ದೂಳು ಬೀಳುತ್ತದೆ. ಇದು ಕಣ್ಣುಗಳನ್ನೂ ಉರಿಸುವುದುಂಟು. ಕೆಲವೊಮ್ಮೆ ಇದು ಎಷ್ಟು ದಟ್ಟವಾಗಿರುತ್ತದೆಂದರೆ ಹಡಗುಗಳು ದಾರಿಕಾಣದೆ ತೀರಕ್ಕೆ ಬಂದು ಬಡಿದುದೂ ಉಂಟು. ಹಡಗುಗಳು ಆಫ್ರಿಕಾದಿಂದ ನೂರಾರಲ್ಲ, ಸಾವಿರ ಮೈಲುಗಳಿಗಿಂತ ದೂರದಲ್ಲಿದ್ದಾಗಲೂ ಉತ್ತರ-ದಕ್ಷಿಣವಾಗಿ ಸುಮಾರು 1600 ಮೈಲಿ ದೂರದಲ್ಲಿದ್ದಾಗಲೂ ಈ ದೂಳು ಬಂದು ಬಿದ್ದುದುಂಟು. ಒಮ್ಮೆ ಹಡಗು ತೀರದಿಂದ ಮುನ್ನೂರ ಮೈಲಿ ದೂರದಲ್ಲಿದ್ದಾಗ ಬಂದು ಬಿದ್ದ ದೂಳನ್ನು ಹೆಕ್ಕಿದಾಗ ಅದರಲ್ಲಿ ಅಂಗುಲದ ಸಾವಿರದೊಂದಂಶಕ್ಕಿಂತಲೂ ದೊಡ್ಡ ಗಾತ್ರದ ಕಲ್ಲುಗಳು ಅತಿ ನಯವಾದ ದೂಳಿನಲ್ಲಿ ಬೆರೆತಿರುವುದನ್ನು ಕಂಡು ನಾನು ಬೆರಗಾಗಿದ್ದೂ ಉಂಟು. ಇಷ್ಟು ಹೇಳಿದ ಮೇಲೆ ಇದಕ್ಕಿಂತಲೂ ಸಣ್ಣಗಿನ ಹಾಗೂ ಹಗುರವಾಗಿರುವ ಸಸ್ಯಗಳ ಗುಪ್ತಬೀಜಗಳನ್ನು ದೂಳಿನಲ್ಲಿ ಇರುವುದು ಅಚ್ಚರಿಯ ವಿಷಯವಲ್ಲ. ಅಲ್ಲವೇ?
ಈ ದ್ವೀಪದ ಭೂಲಕ್ಷಣಗಳು ಅದರ ಪ್ರಾಕೃತಿಕ ಚರಿತ್ರೆಯ ಬಲು ಕೌತುಕಮಯವಾದ ಅಂಶವಾಗಿವೆ. ಬಂದರನ್ನು ಪ್ರವೇಶಿಸುತ್ತಿದ್ದಂತೆ ಎದುರಿಗೆ ಇರುವ ಕಡಿದಾದ ಬಂಡೆಯ ಮುಖದಲ್ಲಿ, ತೀರದ ಉ,ದ್ದಕ್ಕೂ ಹಲವು ಮೈಲಿಗಳ ದೂರದವರೆಗೆ ಬಿಳಿಯದೊಂದು ಗೆರೆಯನ್ನು ಕಾಣಬಹುದು. ಈ ಗೆರೆಯು ನೀರಿನ ಮೇಲೆ ಸುಮಾರು ನಲವತ್ತೈದು ಅಡಿ ಎತ್ತರದಲ್ಲಿ ಅಡ್ಡವಾಗಿ ಸಾಗಿರುವುದು. ಬಳಿ ಸಾರಿ. ಪರೀಕ್ಷಿಸಿದಾಗ ಈ ಬಿಳಿಯ ಪದರದಲ್ಲಿ ಹಲವಾರು ಕಪ್ಪೆಚಿಪ್ಪುಗಳು ಹುದುಗಿದ ಸುಣ್ಣದ ವಸ್ತು ಇರುವುದನ್ನು ಕಾಣಬಹುದು. ಈ ಚಿಪ್ಪುಗಳ ಜೀವಿಗಳಲ್ಲಿ ಬಹುತೇಕವನ್ನು ಈಗಲೂ ನೆರೆಯ ಸಮುದ್ರ ತೀರದಲ್ಲಿ ಹೆಕ್ಕಬಹುದು. ಇದು ಹಳೆಯ ಜ್ವಾಲಾಮುಖಿಯ ದಿಕ್ಕಿಗೆ ಮುಖಮಾಡಿಕೊಂಡಿದೆ.
6. ಜಾಣಪ್ರಶ್ನೆ
ನೊಣಗಳಿಗೂ ಹೃದಯವಿದೆಯೇ?
ಇದೋ ಹೀಗೊಂದು ಪ್ರಶ್ನೆಯನ್ನು ನಮ್ಮ ಬಳಗದ ಗೆಳೆಯರೊಬ್ಬರು ಮೊನ್ನೆ ಕಳಿಸಿದ್ದರು. ನೊಣಕ್ಕೆ ಹೃದಯವಿದೆ. ಆದರೆ ಅದು ನಮ್ಮ ಹೃದಯದ ಹಾಗಲ್ಲ. ಏಕೆಂದರೆ ನೊಣ ಹಾಗೂ ಇತರೆ ಕೀಟಗಳಲ್ಲಿ ರಕ್ತ ನಾಳಗಳು ಇಲ್ಲ. ಮನುಷ್ಯರು ಹಾಗೂ ಇತರೆ ಬೆನ್ನು ಮೂಳೆ ಇರುವ ಪ್ರಾಣಿಗಳಲ್ಲಿ ರಕ್ತ ನಾಳಗಳೊಳಗೆ ಹರಿಯುತ್ತದೆ. ಅಂಗಗಳ ಜೊತೆಗೆ ಬೆರೆಯುವುದಿಲ್ಲ. ಆದರೆ ಕೀಟಗಳಲ್ಲಿ ರಕ್ತ ದೇಹದ ತುಂಬವೂ ತುಂಬಿರುತ್ತದೆ. ಎಲ್ಲ ಅಂಗಗಳೂ ಅದರಲ್ಲೇ ಮುಳುಗಿರುತ್ತವೆ. ಈ ಎಲ್ಲ ರಕ್ತವನ್ನೂ ಒಂದೆಡೆಯಿಂದ ಮತ್ತೊಂದೆಡೆಗೆ ತಳ್ಳಲು ಒಂದು ಪ್ರಧಾನ ರಕ್ತನಾಳವಿದೆ. ಇದು ಕೀಟದ ಬೆನ್ನಿನ ಉದ್ದಕ್ಕೂ ಇರುತ್ತದೆ. ಈ ನಾಳವೇ ಅಲ್ಲಲ್ಲಿ, ಪ್ರಮುಖವಾಗಿ ಮುಖದ ಮೀಸೆಯ ಬಳಿ, ರೆಕ್ಕೆಯ ಬಳಿ ತುಸು ಉಬ್ಬಿರುತ್ತದೆ. ಈ ಉಬ್ಬಿನಲ್ಲಿ ರಂಧ್ರಗಳೂ ಇರುತ್ತವೆ. ದೇಹದಲ್ಲಿ ತುಂಬಿರುವ ರಕ್ತ ಈ ರಂಧ್ರದ ಮೂಲಕ ನಾಳದೊಳಗೆ ಬರುತ್ತದೆ. ಉಬ್ಬಿದ ಭಾಗಗಳು ಹಿಗ್ಗಿ, ಕುಗ್ಗಿ ಈ ರಕ್ತವನ್ನು ಮೂತಿಯತ್ತ ತಳ್ಳುತ್ತವೆ. ಮನುಷ್ಯನಲ್ಲಿ ರಕ್ತ ತಲೆಯ ಕಡೆಗೆ ಒಂದು ನಾಳದ ಮೂಲಕವೂ, ಕಾಲಿನ ಕಡೆಗೆ ಮತ್ತೊಂದರ ಮೂಲಕವೂ ಚಲಿಸುತ್ತದೆ. ಆದರೆ ಕೀಟಗಳಲ್ಲಿ ಹೀಗಲ್ಲ. ಅವು ದೇಹದಿಂದ ನಾಳದ ಒಳಗೆ ಹೋಗಿ ಅಲ್ಲಿಂದ ಕೇವಲ ಮೂತಿಯ ಕಡೆಗಷ್ಟೆ ಹರಿಯಬಲ್ಲವು.
ಕೀಟದ ರಕ್ತನಾಳ, ರಂಧ್ರ ಹಾಗೂ ಹೃದಯದಂತಹ ಗುಬುಟೆ
ನಾಳದ ಉಬ್ಬನ್ನೇ ಹೃದಯ ಎನ್ನುವುದಾರೆ ಎಷ್ಟು ರೆಕ್ಕೆಗಳು, ಮೀಸೆಗಳು ಇವೆಯೋ ಅಷ್ಟು ಮತ್ತೊಂದು ಹೃದಯ ನೊಣಕ್ಕೆ ಇದೆ ಎನ್ನಬಹುದು. ಈ ವಿನ್ಯಾಸವೇ ಮುಂದೆ ನಮ್ಮಲ್ಲಿರುವ ರಕ್ತನಾಳಗಳು ಹಾಗೂ ಹೃದಯಗಳ ಸ್ವರೂಪದಲ್ಲಿ ವಿಕಾಸವಾಗಿರಬೇಕು ಎನ್ನುತ್ತಾರೆ ಪ್ರಾಣಿ ವಿಜ್ಞಾನಿಗಳು.
ಹಾಂ. ನೊಣಕ್ಕೆ ಕರುಣಾಹೃದಯ, ಕ್ರೂರಹೃದಯ ಎನ್ನುವ ಭಾವನಾತ್ಮಕ ಹೃದಯಗಳು ಇವೆಯೋ ಇಲ್ಲವೋ ಗೊತ್ತಿಲ್ಲ!
7. ಜಾಣನುಡಿ
ಸೆಪ್ಟೆಂಬರ್ 23 , 1863
ಪ್ಲೇಗು ಮಾರಿಯನ್ನು ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ಪ್ರಪ್ರಥಮ ಬಾರಿಗೆ ಗುರುತಿಸಿ, ಲಸಿಕೆಯನ್ನು ರೂಪಸಿದ ಸ್ವಿಸ್, ಫ್ರೆಂಚ್ ವಿಜ್ಞಾನಿ ಅಲೆಕ್ಸಾಂಡ್ರೆ ಯೆರ್ಸಿನ್ ಜನಿಸಿದ ದಿನ. ಲೂಯಿ ಪ್ಯಾಶ್ಚರ್ ಮಾನವರಲ್ಲಿ ಹಲವು ರೋಗಗಳು ಸೂಕ್ಷ್ಮಜೀವಿಗಳ ಸೋಂಕಿನಿಂದ ಆಗುತ್ತವೆ ಎಂದು ತಿಳಿಸಿದಾಗಿನಿಂದಲೂ ಪ್ರತಿ ರೋಗಕ್ಕೂ ಕಾರಣವೇನೆಂಬ ಬಗ್ಗೆ ವೈದ್ಯರುಗಳು ಹುಡುಕಾಡಲು ಆರಂಭಿಸಿದ್ದರು. ಹತ್ತೊಂಬತ್ತನೆಯ ಶತಮಾನದಲ್ಲಿ ಸಿಡುಬಿನಂತೆಯೇ ಪ್ಲೇಗು ಹಾಗೂ ಕ್ಷಯ ಬಲು ಮಾರಕ ಮಾರಿಗಳಾಗಿದ್ದುವು. ಬ್ಯಾಕ್ಟೀರಿಯಾವೊಂದು ಪ್ಲೇಗನ್ನು ಉಂಟು ಮಾಡುತ್ತದೆಂದು ಮೊದಲು ನಿರೂಪಿಸಿದವರೇ ಅಲೆಕ್ಸಾಂಡ್ರೆ ಯೆರ್ಸಿನ್.
ಈತನನ್ನು ಫ್ರೆಂಚ್ ಸರಕಾರವು ಪ್ಲೇಗು ಅಧ್ಯಯನಕ್ಕೆಂದು ಹಾಂಕಾಂಗಿಗೆ ಕಳಿಸಿತ್ತು. ಹಾಂಕಾಂಗ್ ಆಗ ಬ್ರಿಟಿಷರ ಒಂದು ವಸಾಹತು. ಅಲ್ಲಿ ಹೋದ ಯೆರ್ಸಿನ್ 1894ರಲ್ಲಿ ಪ್ಲೇಗು ರೋಗಿಯೊಬ್ಬರ ಹುಣ್ಣಿನಿಂದ ಒಸರಿದ ಕೀವನ್ನು ಸಂಗ್ರಹಿಸಿ, ಅದರಲ್ಲಿ ಬ್ಯಾಕ್ಟೀರಿಯಾಗಳನ್ನು ಈತ ಕಂಡರು. ಬ್ಯಾಕ್ಟೀರಿಯಾವನ್ನು ಪ್ರತ್ಯೇಕಿಸಿ, ಬೆಳೆಸಿ ಚಟುವಟಿಕೆಯನ್ನು ಕ್ಷೀಣಗೊಳಿಸಿ, ಪ್ಲೇಗು ರೋಗಕ್ಕೆ ಔಷಧವನ್ನಾಗಿಸಬಹುದು ಎಂದು ನಿರೂಪಿಸಿದರು. ಅದೇ ಸಮಯಕ್ಕೆ ಹಾಂಕಾಂಗಿನಲ್ಲೇ ಇದ್ದ ಜಪಾನೀಯ ವೈದ್ಯ ಶಿಬಸಾಬುರೊ ಕಿಟಸಾಟೋ ಕೂಡ ಈ ರೋಗಾಣುವನ್ನು ಪತ್ತೆ ಮಾಡಿದರೂ, ಲಸಿಕೆಯನ್ನು ತಯಾರಿಸಿದ ಯೆರ್ಸಿನ್ನರ ಹೆಸರೇ ಮುಂದಾಯಿತು. ಇಂದಿಗೂ ಅವರ ಹೆಸರು ಪ್ಲೇಗು ಬ್ಯಾಕ್ಟೀರಿಯಾದ ಹೆಸರಿನಲ್ಲಿ ಅಜರಾಮರವಾಗಿದೆ. ಈ ಬ್ಯಾಕ್ಟೀರಿಯಾವನ್ನು ಯೆರ್ಸೀನಿಯಾ ಪೆಸ್ಟಿಸ್ ಎಂದೇ ಕರೆಯಲಾಗುತ್ತದೆ. ಪೆಸ್ಟಿಸ್ ಎನ್ನುವುದು ಅದೊಂದು ಪೀಡೆ ಎನ್ನುವುದನ್ನು ಸೂಚಿಸುತ್ತದೆ.
—-
ರಚನೆ : ಕೊಳ್ಳೇಗಾಲ ಶರ್ಮ. ಪ್ರಸ್ತುತಿ: ಕೊಳ್ಳೇಗಾಲ ಶರ್ಮ ಮತ್ತು ಶ್ರೀಮತಿ ಭಾರತಿ. ಸಂಪರ್ಕ: 9886640328