ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com
ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)
ಈ ವಾರದ ಸಂಚಿಕೆಯಲ್ಲಿ:
• ಕುರುಡುಗಳೆಯುವ ಚಿಕಿತ್ಸೆ
• ಶ್ಯಾವಿಗೆಯನ್ನು ಬಾಗಿಸುವುದು ಹೇಗೆ?
• ಸಿಡಿಯದ ಬ್ಯಾಟರಿ ಹಾಗೂ ಬೆಣ್ಣೆ,
• ತುಂತುರು ಸುದ್ದಿಗಳು
• ಅನುವಂಶೀಯ ರೋಗಕ್ಕೆ ಬ್ಯಾಕ್ಟೀರಿಯಾ ಚಿಕಿತ್ಸೆ
1. ಕುರುಡುಗಳೆಯುವ ಚಿಕಿತ್ಸೆ
ಬೆಳದ ಮೇಲೆ ಗಿಡವನ್ನು ಬಾಗಿಸಲಾಗದು ಎನ್ನುವ ಮಾತನ್ನು ಕೇಳಿದ್ದೇವೆ. ಇದರರ್ಥ ಇಷ್ಟೆ. ಬೆಳೆವಣಿಗೆ ಎನ್ನುವುದು ಹಿಂದೆ ಮರಳಲಾಗದಂತಹ ಪಯಣ. ಒಮ್ಮೆ ಬೆಳೆದರೆ ಮರಳಿ ಪೂರ್ವಸ್ಥಿತಿಗೆ ಹೋಗುವ ಮಾತೇ ಇಲ್ಲ. ಹಾಗೆಯೇ ಇಷ್ಟು ಬೆಳೆದರೂ ಬುದ್ಧಿ ಮಾತ್ರ ಬೆಳೆಯಲಿಲ್ಲವಲ್ಲ ಅಂತ ಪ್ರೀತಿಯಿಂದಲೋ, ಅಸಹನೆಯಿಂದಲೋ ಬೈಯಿಸಿಕೊಂಡಿದ್ದೇವೆ. ಬೆಳೆದ ಮೇಲೆ ಬುದ್ದಿ ಬೆಳೆಯುವುದಿಲ್ಲ ಎನ್ನುವ ಸೂಚ್ಯಾರ್ಥವೂ ಇದರಲ್ಲಿ ಇದೆ ಎನ್ನಬಹುದು. ಮನುಷ್ಯನಂತಹ ಸ್ತನಿಗಳ ಮಟ್ಟಿಗೆ ಇವೆರಡೂ ಮಾತುಗಳು ಒಂದು ರೀತಿಯಲ್ಲಿ ಸತ್ಯವೇ. ಸ್ತನಿಗಳ ಮಿದುಳು ಬಾಲ್ಯದಲ್ಲಿ ಬೆಳೆಯುತ್ತದೆ, ಆದರೆ ದೊಡ್ಡವರಾದ ಮೇಲೆ ಇದು ಬೆಳೆಯುವುದೇ ಇಲ್ಲ. ಇದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಯಾವುದೇ ಕಾರಣಕ್ಕೆ ಬಾಲ್ಯದಲ್ಲಿ ನರಮಂಡಲದ ಯಾವುದೇ ಭಾಗವು ಸರಿಯಾಗಿ ಬೆಳೆಯದೇ ಹೋದರೂ ಆ ಅಂಗ ಜೀವನಪರ್ಯಂತ ಊನವಾಗಿರುತ್ತದೆ. ಕುರುಡು, ಕಿವುಡು, ಅಷ್ಟಾವಕ್ರವಾದ ಬೆರಳುಗಳು, ಮಂದಬುದ್ಧಿ ಮುಂತಾದ ಹಲವು ದೋಷಗಳು ಹೀಗೆ ನರಮಂಡಲ ಸರಿಯಾಗಿ ಬೆಳೆಯದ್ದರಿಂದ ಆಗುತ್ತವೆ. ದೊಡ್ಡವರಲ್ಲೂ ಮಿದುಳು ಬೆಳೆಯುವಂತಿದ್ದರೆ ಬಹುಶಃ ಹೀಗೆಲ್ಲ ತೊಂದರೆಗಳು ಕಡಿಮೆ ಆಗುತ್ತಿದ್ದುವು. ಚರ್ಮ ಹರಿದಾಗ ಹೊಸ ಚರ್ಮ ಬೆಳೆದರೂ ಹೊಸ ನರ ಬೆಳೆಯುವುದು ಕಷ್ಟ. ಕಣ್ಣಿನಲ್ಲೂ ಅಷ್ಟೆ. ಬೆಳಕನ್ನು ಗ್ರಹಿಸುವ ನರಕೋಶಗಳು ಸತ್ತಾಗ ಅವುಗಳ ಜಾಗದಲ್ಲಿ ಹೊಸ ಕೋಶಗಳು ಬೆಳೆಯುವುದಿಲ್ಲ. ಬೆಳೆದ ನರಕೋಶಗಳನ್ನೂ ಬಾಗಿಸುವಂತಿದ್ದರೆ ಎಷ್ಟು ಚೆನ್ನಿರುತ್ತಿತ್ತು. ಇಂತಹ ಹಲವು ದೋಷಗಳನ್ನು ತಿದ್ದಬಹುದಿತ್ತು ಅಲ್ಲವೇ? ಇದೋ ಅದುವೂ ಸಾಧ್ಯವೆನ್ನುವ ಸುದ್ದಿಯನ್ನು ಕಳೆದ ವಾರ ನೇಚರ್ ಪತ್ರಿಕೆ ಪ್ರಕಟಿಸಿದೆ. ನ್ಯೂಯಾರ್ಕಿನಲ್ಲಿರುವ ಐಕಾನ್ ವೈದ್ಯಕೀಯ ಶಾಲೆಯ ನರವಿಜ್ಞಾನಿ ಬೋ ಶೆನ್ ಮತ್ತು ಸಂಗಡಿಗರು ಸಾಮಾನ್ಯವಾಗಿ ದೊಡ್ಡ ಇಲಿಗಳಲ್ಲಿ ಬೆಳೆಯದೇ ಇರುವಂತಹ ನರಕೋಶಗಳನ್ನೂ ಮತ್ತೆ ಬೆಳೆಯುವಂತೆ ಪ್ರೇರೇಪಿಸಿರುವ ಸುದ್ದಿಯನ್ನು ನೇಚರ್ ಪತ್ರಿಕೆ ವರದಿ ಮಾಡಿದೆ.
ಇಲಿಗಳು ನಮ್ಮಂತೆ ಸ್ತನಿಗಳಷ್ಟೆ. ಸ್ತನಿಗಳ ಕಣ್ಣುಗಳಿಗೊಂದು ಕೊರತೆ ಇದೆ. ಕಣ್ಣಿನ ಒಳಭಾಗದಲ್ಲಿರುವ ಪರದೆಯಲ್ಲಿ ರಾಡ್ ಮತ್ತು ಕೋನ್ (ದಂಡ ಹಾಗೂ ಶಂಖು ಕೋಶಗಳು) ಎನ್ನುವ ನರಕೋಶಗಳಿವೆ. ಇವುಗಳಲ್ಲಿ ಬೆಳಕನ್ನು ಗ್ರಹಿಸುವ ರಾಸಾಯನಿಕವಿರುತ್ತದೆ. ಬೆಳಕು ಬಿದ್ದಾಗ ಈ ರಾಸಾಯನಿಕದಲ್ಲಾಗುವ ಬದಲಾವಣೆ ವಿದ್ಯುತ್ ಸಂಕೇತವನ್ನು ಹರಿಸುತ್ತದೆ. ಹೊರಗಿನ ಚಿತ್ರವನ್ನು ನಮಗೆ ತೋರುತ್ತದೆ. ಬೆಳಕನ್ನು ಗ್ರಹಿಸುವ ಈ ನರಕೋಶಗಳು ಒಮ್ಮೆ ಸತ್ತರೆ ಮತ್ತೆ ಬಾರವು. ಅಥವಾ ಅವು ಹುಟ್ಟದೇ ಇದ್ದರೂ ಅಷ್ಟೆ. ಮತ್ತೆ ಅವು ಬೆಳೆಯುವಂತೆ ಮಾಡುವುದು ಕಷ್ಟ. ಹೀಗೆ ಈ ಕೋಶಗಳು ಬೆಳೆಯದೇ ಇರುವುದೂ ಕೂಡ ಹುಟ್ಟುಗುರುಡಿಗೆ ಕಾರಣ.
ಆದರೆ ಜೀಬ್ರಾ ಮೀನಿನಲ್ಲಿ ಹೀಗಲ್ಲ. ಅದರ ಕಣ್ಣಿನಲ್ಲಿರುವ ನರಕೋಶಗಳು ಸತ್ತರೂ ಮತ್ತೆ ಅವುಗಳ ಜಾಗದಲ್ಲಿ ಹೊಸ ಕೋಶಗಳು ತುಂಬಿಕೊಳ್ಳುತ್ತವೆ. ಪರದೆಯ ಬುಡದಲ್ಲಿ ಇರುವ ಮ್ಯುಲ್ಲರ್ ಗ್ಲಿಯಾ ಎನ್ನುವ ಜೀವಕೋಶಗಳು ಹೊಸ ಜೀವಕೋಶಗಳನ್ನು ಸೃಷ್ಟಿಸುತ್ತವೆ. ಕಣ್ಣ ಪರದೆಗೆ ಗಾಯವಾದಾಗ ಇವು ತಕ್ಷಣವೇ ಹೊಸ ಜೀವಕೋಶಗಳನ್ನು ಸೃಷ್ಟಿಸುತ್ತವೆ. ಇವು ನರಕೋಶಗಳಾಗಿ ಮಾರ್ಪಡುತ್ತವೆ. ಹೀಗೆ ಹೊಸ ನರಕೋಶಗಳನ್ನು ಒದಗುತ್ತವೆ. ಇಂತಹ ಮ್ಯುಲ್ಲರ್ ಕೋಶಗಳು ಇಲಿ ಮತ್ತು ಮನುಷ್ಯರಲ್ಲಿಯೂ ಇವೆ. ಆದರೂ ಮನುಷ್ಯರಲ್ಲಿ ನರಕೋಶಗಳು ನಾಶವಾದರೆ ದೃಷ್ಟಿ ನಾಶವಾಗುತ್ತದೆಯೇ ಹೊರತು ಹೊಸ ನರಕೋಶಗಳು ಹುಟ್ಟಿ ಬರುವುದಿಲ್ಲ. ಹೀಗೇಕೆ? ಮನುಷ್ಯರಲ್ಲಿರುವ ಮ್ಯುಲ್ಲೆರ್ ಗ್ಲಿಯಾ ಕೋಶಗಳನ್ನು ಹೊಸ ನರಕೋಶಗಳನ್ನು ಸೃಷ್ಟಿಸುವಂತೆ ಪ್ರೇರೇಪಿಸಬಹುದೇ? ಹಾಗೆ ಮಾಡಿದಾಗ ತೆರವಾದ ನರಕೋಶಗಳ ಜಾಗೆ ತುಂಬಿಕೊಳ್ಳುವುದೇ? ಜೀಬ್ರಾ ಮೀನಿನಲ್ಲಿರುವ ಮ್ಯುಲ್ಲರ್ ಗ್ಲಿಯಾ ಕೋಶಗಳಿಗೂ, ಸ್ತನಿಗಳಲ್ಲಿರುವ ಮ್ಯುಲ್ಲರ್ ಗ್ಲಿಯಾ ಕೋಶಗಳಿಗೂ ಇರುವ ವ್ಯತ್ಯಾಸವೇ ಇದಕ್ಕೆ ಕಾರಣವಿರಬಹುದೇ? ಹೀಗೊಂದು ವ್ಯತ್ಯಾಸವನ್ನೂ ಗುರುತಿಸಲಾಗಿದೆ. ಮೀನುಗಳಲ್ಲಿ ಕಣ್ಣಿನ ಪರದೆಗೆ ಗಾಯವಾಗದಿದ್ದರೂ ಮ್ಯುಲ್ಲರ್ ಕೋಶಗಳು ಜೀವಕೋಶಗಳನ್ನು ಹುಟ್ಟಿಸುವಂತೆ ಮಾಡಬಹುದು. ಬೀಟ ಕ್ಯಾಟೆನಿನ್ ಎನ್ನುವ ರಾಸಾಯನಿಕ ಇದನ್ನು ಮಾಡುತ್ತದೆ. ಇದು ಸ್ತನಿಗಳಲ್ಲಿಯೂ ಮ್ಯುಲ್ಲರ್ ಕೋಶಗಳನ್ನು ಪ್ರಚೋದಿಸಬಲ್ಲುದೇ?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಬೋಶೆ ತಂಡ ಇಲಿಗಳಲ್ಲಿ ಪ್ರಯೋಗ ಮಾಡಿದೆ. ಇಲಿಗಳ ಕಣ್ಣಪರದೆಯಲ್ಲಿರುವ ಜೀವಕೋಶಗಳಲ್ಲಿ ಎರಡು ಜೀನುಗಳು ಇಲ್ಲದಿದ್ದರೆ ಅವು ಹುಟ್ಟಾ ಕುರುಡಾಗುತ್ತವೆ. ಕಾರಣ ಇವುಗಳಲ್ಲಿ ನರಕೋಶಗಳು ಬೆಳೆದೇ ಇರುವುದಿಲ್ಲ. ಹೀಗಾಗಿ ಬೋಶೆ ತಂಡ ಜೀನುಗಳ ಕೊರತೆಯಿಂದಾಗಿ ಕುರುಡಾದ ಇಲಿಗಳ ಕಣ್ಣಿನ ಕೋಶಗಳಲ್ಲಿ ಬೀಟ ಕೆಟ್ಯಾನಿನ್ ಉತ್ಪಾದಿಸುವ ಜೀನುಗಳನ್ನು ಹುದುಗಿಸಿದೆ. ವಿಶೇಷವೆಂದರೆ ಇಲಿಗಳಲ್ಲಿ ಸಾಮಾನ್ಯವಾಗಿ ತೆಪ್ಪಗೆ ಇರುವ ಮ್ಯುಲ್ಲರ್ ಕೋಶಗಳೂ ಹೊಸ ಕೋಶಗಳನ್ನು ಸೃಷ್ಟಿಸುವುದನ್ನು ಕಂಡಿದ್ದಾರೆ. ಈ ಕೋಶಗಳು ರಾಡ್ ಮತ್ತು ಶಂಖುಗಳಾಗುವಂತೆ ರಾಸಾಯನಿಕವಾಗಿ ಪ್ರೇರೇಪಿಸಿದ್ದಾರೆ. ಹೀಗೆ ಮಾಡಿದ ಹುಟ್ಟಾಗುರುಡು ಇಲಿಗಳು ಬೆಳಕಿಗೆ ಸ್ಪಂದಿಸಿದುವಂತೆ. ಸೂಕ್ಷ್ಮದರ್ಶಕದ ಅಡಿಯಲ್ಲಿಯೂ ರಾಡ್ ಕೋಶಗಳಂತಹ ಕೋಶಗಳು ಕಂಡುವಂತೆ. ಅಷ್ಟೇ ಅಲ್ಲ. ಈ ಕೋಶಗಳ ಸಂಖ್ಯೆಯನ್ನೂ ಲೆಕ್ಕ ಹಾಕಿದ್ದಾರೆ. ಕಾಲ ಕಳೆದಂತೆ ಸಾಮಾನ್ಯವಾಗಿದ್ದ ಕೋಶಗಳ ಸಂಖ್ಯೆ ಕಡಿಮೆಯಾಗಿ ರಾಡ್ ನಂತಹ ಕೋಶಗಳ ಸಂಖ್ಯೆ ಹೆಚ್ಚಿದುವಂತೆ. ಅರ್ಥಾತ್, ಕೇವಲ ಕೋಶದ ಉತ್ಪಾದನೆ ಮಾತ್ರವಲ್ಲ ಅವುಗಳ ಪರಿವರ್ತನೆಯೂ ನಡೆದಿದೆ ಎಂದಾಯಿತು. ಹೀಗೆ ಹೊಸದಾಗಿ ಯಾವುದೇ ಜೀವಕೋಶಗಳನ್ನೂ ಹುದುಗಿಸದೆಯೇ ಕೇವಲ ರಾಸಾಯನಿಕಗಳ ನೆರವಿನಿಂದ, ಕಣ್ಣಿನಲ್ಲೇ ಸುಪ್ತವಾಗಿರುವ ಮ್ಯುಲ್ಲರ್ ಕೋಶಗಳನ್ನು ಜಾಗೃತಗೊಳಿಸಿ ಹೊಸ ರಾಡ್ ಕೋಶಗಳನ್ನು ಸೃಷ್ಟಿಸುವುದು ಸಾಧ್ಯ ಎನ್ನುತ್ತಾರೆ ಬೋ ಶೆ. ಸ್ಟೆಮ್ ಕೋಶಗಳ ಚಿಕಿತ್ಸೆಗೆ ಇದು ಪರ್ಯಾಯ ಚಿಕಿತ್ಸೆ ಆಗಬಹುದು ಎನ್ನುವ ಆಶಯವಿದೆ.
ಅದು ನಿಜವಾಗುವುದಕ್ಕೂ ಮುನ್ನ ಈ ಪರೀಕ್ಷೆ ಮನುಷ್ಯರಲ್ಲೂ ರಾಡ್ ಕೋಶಗಳನ್ನು ಸೃಷ್ಟಿಸುತ್ತವೆ ಎಂಬುದು ಸಿದ್ಧವಾಗಬೇಕು. ಹಾಗೆಯೇ ಬೇರೆ ಯಾವ ಅಪಾಯವೂ ಇಲ್ಲವೆನ್ನುವುದು ಖಚಿತವಾಗಬೇಕು. ಅಲ್ಲವೇ?
ಆಕರ: Kai Yao1 et al., Restoration of vision after de novo genesis of rod photoreceptors in mammalian retinas Nature, 16th August 2018, 10.1038/s41586-018-0425-3
ಲಿಂಕ್: https://doi.org/10.1038/s41586-018-0425-3
2. ಶ್ಯಾವಿಗೆಯನ್ನು ಬಾಗಿಸುವುದು ಹೇಗೆ?
ಶ್ಯಾವಿಗೆಯನ್ನು ಬಾಗಿಸುವುದೇ? ಬಿಲ್ಲು ಬಾಗಿಸುವುದನ್ನು ಕೇಳಿದ್ದೇವೆ? ಗಿಡವನ್ನು ಬಾಗಿಸುವುದನ್ನು ಕೇಳೀದ್ದೇವೆ. ಶ್ಯಾವಿಗೆಯನ್ನು ಬಾಗಿಸುವುದೇ? ಅದರಲ್ಲೇನು ಮಹಾ ಎಂದಿರಾ? ಒಮ್ಮೆ ಒಣ ಶ್ಯಾವಿಗೆಯನ್ನು ತೆಗೆದುಕೊಂಡು ಬಾಗಿಸಲು ಪ್ರಯತ್ನಿಸಿ. ಅದು ವಿಕ್ರಮ ಮತ್ತು ಭೇತಾಳನ ಕಥೆಯಲ್ಲಿ ಭೇತಾಳನು ವಿಕ್ರಮನನ್ನು ಹೆದರಿಸುವಂತೆ ಸಹಸ್ರ ಹೋಳುಗಳಾಗಿ ಬಿಡದಿದ್ದರೆ ಕೇಳಿ. ಬಹಳ ಹಿಂದೆ ಸ್ವಯಂವರಗಳಲ್ಲಿ ರಾಜಕುಮಾರರು ಬಿಲ್ಲನ್ನು ಬಾಗಿಸಿ ಹೆದೆ ಕಟ್ಟುವ ಸ್ಪರ್ಧೆ ಇತ್ತಂತೆ. ಅಷ್ಟೆಲ್ಲ ಕಷ್ಟದ ಬದಲಿಗೆ ಶ್ಯಾವಿಗೆಯನ್ನು ಮುರಿಯದೆಯೇ ಬಾಗಿಸುವ ಸ್ಪರ್ಧೆ ಇದ್ದಿದ್ದರೆ ಬಹುಶಃ ಮಹಾಭಾರತವೂ, ರಾಮಾಯಣವೂ ನಡೆಯುತ್ತಲೇ ಇರಲಿಲ್ಲ ಎನ್ನಬಹುದು. ಹಾಂ. ಹಾಗಂತ ನಿರಾಶರಾಗಬೇಕಿಲ್ಲ. ಶ್ಯಾವಿಗೆಯನ್ನು ಮುರಿಯದಂತೆ ಬಾಗಿಸುವುದು ಹೇಗೆ ಎಂಬ ಬಗ್ಗೆ ಮಸ್ಯಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ಗಣಿತಜ್ಞ ವಿಶಾಲ್ ಪಾಟೀಲ್ ಮತ್ತು ಸಂಗಡಿಗರು ಶೋಧ ಮಾಡಿದ್ದಾರೆಂದು ಫಿಸಿಕ್ಸ್ ವರ್ಲ್ಡ್ ಪತ್ರಿಕೆ ವರದಿ ಮಾಡಿದೆ.
ಹಸಿಯಾದ ಇಲ್ಲವೇ ಬೇಯಿಸಿದ ಶ್ಯಾವಿಗೆಯನ್ನು ದಾರದ ಹಾಗೆ ಹೇಗೆ ಬೇಕಾದರೂ ಸುರುಳಿ ಸುತ್ತಿ ಗಂಟು ಗೋಜಲಾಗಿಸಬಹುದು. ಆದರೆ ಒಣಶ್ಯಾವಿಗೆಯ ಕಥೆ ಹಾಗಲ್ಲ. ಒರಟಾದ ಅದು ಸದಾ ನೇರ. ಹಾಗೆಯೇ ಬಿರುಕಲು ವಸ್ತು. ಒಂದಿಷ್ಟು ಬಾಗಿಸಿದರೂ ಪುಡಿಯಾಗುತ್ತದೆ. ಬಹುಶಃ ಇದು ಹಾಗಾಗುವುದರಿಂದಲೇ ಶ್ಯಾವಿಗೆ ಪಾಯಸ ಮಾಡುವುದು ಸುಲಭವಾಗಿರಬೇಕು. ಆದರೆ ಈ ಒಣ ಶ್ಯಾವಿಗೆ ಮುಟ್ಟಿದರೆ ಮುರಿಯುತ್ತದೇಕೆ? ಮುರಿಯಲಿ ಬಿಡಿ. ಆದರೆ ಎರಡು ತುಂಡುಗಳಾಗದೆ, ಹತ್ತಾರು ತುಣುಕುಗಳಾಗುತ್ತದಲ್ಲ? ಅದೇಕೆ? ಈ ಪ್ರಶ್ನೆ ಗಣಿತಜ್ಞರನ್ನೂ, ಭೌತವಿಜ್ಞಾನಿಗಳನ್ನೂ ಬಹಳಷ್ಟು ದಿನಗಳಿಂದ ಕಾಡಿದೆ. ಇದಮಿತ್ಥಂ ಎನ್ನುವ ಉತ್ತರ ಇನ್ನೂ ಸಿಕ್ಕಿಲ್ಲವೆನ್ನಿ.
ಆದರೆ ಹಲವು ವರ್ಷಗಳ ಹಿಂದೆ ಅಂದರೆ ಹದಿಮೂರು ವರ್ಷಗಳ ಹಿಂದೆ ಹೀಗೊಂದು ಪ್ರಯೋಗವನ್ನು ಫ್ರೆಂಚ್ ವಿಜ್ಞಾನಿಗಳು ನಡೆಸಿದ್ದರು. ಶ್ಯಾವಿಗೆಯನ್ನು ನಿಧಾನವಾಗಿ ಬಾಗಿಸಿದರೆ ಅದರ ಮೇಲೆ ಬೀಳುವ ಒತ್ತಡ ಹೇಗೆ ಬದಲಾಗುತ್ತದೆ? ಅದರಿಂದೇನು ಪರಿಣಾಮಗಳಾಗುತ್ತವೆ ಎಂದು ಕಣ್ಣಟ್ಟು ನೋಡಿದರು. ಶ್ಯಾವಿಗೆಯನ್ನು ಎರಡೂ ತುದಿಗಳಲ್ಲಿ ಹಿಡಿದುಕೊಂಡು ಬಾಗಿಸಿದರೆ, ಅದು ಎಲ್ಲೋ ಒಂದೆಡೆ ಮುರಿಯುತ್ತದೆ. ಹೀಗೆ ಮುರಿದಾಗ ಉಂಟಾಗುವ ಆಘಾತದ ಬಲ ಶ್ಯಾವಿಗೆಯ ಉದ್ದಕ್ಕೂ ಅಲೆಯಲೆಯಾಗಿ ಚಲಿಸುತ್ತದೆ. ವೀಣೆಯ ತಂತಿಯನ್ನು ಮೀಟಿದಾಗ ಅದರಲ್ಲಿ ಅಲೆಗಳುಂಟಾಗುವ ಹಾಗೆ. ಈ ಅಲೆಗಳಿಂದಾಗಿ ಅಲ್ಲಲ್ಲಿ ಶ್ಯಾವಿಗೆ ಹೆಚ್ಚೆಚ್ಚು ಬಾಗುತ್ತದೆ. ಬಳುಕುತ್ತದೆ. ಕೊನೆಗೆ ಮುರಿಯುತ್ತದೆ.
ಅಂದರೆ ಈ ಮುರಿತದ ಅಲೆಗಳನ್ನು ನಿಧಾನಿಸಿದರೆ ಬಹುಶಃ ಶ್ಯಾವಿಗೆ ಒಂದೇ ಕಡೆ ಬಾಗುವಂತೆ ಮಾಡಬಹುದು. ಹೀಗೆ ಎರಡೇ ತುಂಡನ್ನಾಗಿ ಮುರಿಯಬಹುದು ಎನ್ನುವುದು ಪಾಟೀಲರ ತರ್ಕ. ತರ್ಕವೇನೋ ಸರಿ. ಅದನ್ನು ಮಾಡುವುದು ಹೇಗೆ? ಇದಕ್ಕಾಗಿ ಇವರು ಗಣಿತೀಯ ಮಾದರಿಗಳನ್ನು ರಚಿಸಿ, ಬಾಗಿಸುವ ಬಲ ಹಾಗೂ ಮುರಿತದ ಅಲೆಗಳ ಬಲಗಳ ನಡುವಣ ಸಂಬಂಧವನ್ನು ವಿವಿಧ ಸಂದರ್ಭಗಳಲ್ಲಿ ಲೆಕ್ಕಿಸಿದ್ದಾರೆ. ಫಲಿತಾಂಶ: ಬಾಗಿಸಿದರೂ ಎರಡೇ ತುಂಡಾಗಿ ಶ್ಯಾವಿಗೆಯನ್ನು ಮುರಿಯುವುದು ಹೇಗೆ ಎಂದು ಈಗ ಗೊತ್ತಾಗಿದೆ.
ಇದಕ್ಕೆ ಮಾಡಬೇಕಾಗಿದ್ದು ಇಷ್ಟೆ. ಶ್ಯಾವಿಗೆಯನ್ನು ಬಾಗಿಸುತ್ತಿದ್ದ ಹಾಗೆಯೇ ತುಸು ಅದನ್ನು ತಿರುಚಲೂ ಬೇಕಂತೆ. ಹೀಗೆ ತಿರುಚುವಾಗ ಹುಟ್ಟಿದ ಬಲ, ಶ್ಯಾವಿಗೆಯ ಉದ್ದಕ್ಕೂ ಅಲೆಯಾಗಿ ಸಾಗುತ್ತಿರುವ ಮುರಿತದ ಬಲವನ್ನು ನಿಧಾನಿಸುತ್ತದಂತೆ. ಹೀಗಾಗಿ ಶ್ಯಾವಿಗೆ ಹತ್ತಾರು ಕಡೆ ವಕ್ರವಾಗದೆ, ಕೇವಲ ಒಂದೇ ಕಡೆ ಬಾಗುತ್ತದೆ. ಅಲ್ಲಿಯೇ ಮುರಿಯುತ್ತದೆ. ಎರಡೇ ತುಂಡಾಗುತ್ತದೆ ಎನ್ನುತ್ತಾರೆ.
ಅಯ್ಯೋ! ಶ್ಯಾವಿಗೆ ತುಂಡಾದರೆಷ್ಟು, ಆಗದಿದ್ದರೆಷ್ಟು. ಪಾಯಸ ರುಚಿಯಾಗಿದ್ದರೆ ಸಾಕು ಎಂದಿರಾ? ಅದು ನಮಗೆ ಮತ್ತು ನಿಮಗೆ. ವಿಜ್ಞಾನಿಗಳಿಗೆ ಈ ಶ್ಯಾವಿಗೆಯ ಸಮಸ್ಯೆ ಬಲು ಪ್ರಮುಖವಾದದ್ದು. ಉದಾಹರಣೆಗೆ, ಸೇತುವೆ ಕಟ್ಟುವಾಗ ಬಳಸಿರುವ ಕಬ್ಬಿಣದ ಕಂಭಿಗಳು ಬಾಗಿ ಹತ್ತಾರು ಕಡೆ ಒಡೆಯಬಹುದು. ಅವು ಹಾಗಾಗದಿರಬೇಕಾದರೆ ಏನು ಮಾಡಬಹುದು? ಅಥವಾ ಸೂಕ್ಷ್ಮ ನ್ಯಾನೋಕಾರ್ಬನ್ನುಗಳ ತಂತಿಗಳನ್ನು ರಚಿಸುವ ಪ್ರಯೋಗಗಳು ನಡೆಯುತ್ತಿವೆ. ಈ( ತಂತಿಗಳು ಬಾಗಿಸಿದಾಗ ಒಡೆದು ಚೂರು, ಚೂರಾಗದಂತೆ ಹೇಗೆ ನೋಡಿಕೊಳ್ಳುವುದು? ಇಂತಹ ಪ್ರಶ್ನೆಗಳಿಗೂ ಒಣ ಶ್ಯಾವಿಗೆಯ ಮೇಲಿನ ಈ ಪ್ರಯೋಗ ಉತ್ತರ ನೀಡಬಲ್ಲುದು ಎನ್ನುತ್ತದೆ ಫಿಸಿಕ್ಸ್ ವರ್ಲ್ಡ್.
ಆಕರ: Hamish Johnston. The twisted secret to snapping spaghetti strands into two, Physics World,
eLife 2018;7:e37182.
ಲಿಂಕ್ : https://physicsworld.com/a/the-twisted-secret-to-snapping-spaghetti-strands-into-two/
3. ಸಿಡಿಯದ ಬ್ಯಾಟರಿ ಮತ್ತು ಬೆಣ್ಣೆ
ಸ್ಮಾರ್ಟ್ ಫೋನು ಬಂದದ್ದೇ ಬಂದದ್ದು. ಎರಡು ಬಗೆಯ ತಲೆನೋವು ಶುರುವಾಯಿತು. ಮೊದಲನೆಯದು ಬ್ಯಾಟರಿಯ ಚಿಂತೆ. ಎರಡನೆಯದು ಮೆಸೇಜುಗಳ ವ್ಯಾಮೋಹ. ಬ್ಯಾಟರಿ ಛಾರ್ಜು ಇದೆಯೋ ಇಲ್ಲವೋ ಒಂದು ಪ್ಲಗ್ಗು ಹುಡುಕಿ ಛಾರ್ಜು ಮಾಡಬೇಕೆಂದು ಒದ್ದಾಡುವವರನ್ನು ನೀವು ನೋಡಿರಬಹುದು. ಬೆಳಗ್ಗೆದ್ದ ಕೂಡಲೇ ಮೆಸೇಜು ನೋಡಲು ಬೇಕಾಗುವಷ್ಟು ಛಾರ್ಜು ಇಲ್ಲದಿದ್ದರೆ ಅಂತ ಫೋನನ್ನು ಛಾರ್ಜಿಗೆ ಹಾಕಿ ಹಾಸಿಗೆಯಲ್ಲಿ ಪಕ್ಕದಲ್ಲೇ ಇಟ್ಟುಕೊಂಡು ಮಲಗುವವರೂ ಇದ್ದಾರೆ. ಇವೆಲ್ಲದರ ಜೊತೆಗೆ ಇತ್ತೀಚೆಗೆ ಬ್ಯಾಟರಿ ಸಿಡಿಯುವ ಘಟನೆಗಳೂ ಸಾಕಷ್ಟು ವರದಿಯಾಗಿವೆ. ಹೆಚ್ಚೆಚ್ಚು ಶಕ್ತಿಯನ್ನು ತುಂಬಿಕೊಂಡ ಬ್ಯಾಟರಿಗಳು ಸಿಡಿಯುವುದು ಸಾಮಾನ್ಯವಾಗಿವೆ. ಸ್ಯಾಮ್ಸಂಗ್ ಕಂಪೆನಿಯಂತು ಬ್ಯಾಟರಿಯ ತೊಂದರೆಯಿಂದಾಗಿ ತನ್ನ ಒಂದು ಫೋನಿನ ಮಾಡೆಲ್ಲಿನ ತಯಾರಿಕೆಯನ್ನೇ ನಿಲ್ಲಿಸಿ ಬಿಟ್ಟಿತು. ಫೋನು ಸಿಡಿದೋ, ಬೆಂಕಿ ಹೊತ್ತಿಕೊಂಡೋ ಅಪಾಯಕ್ಕೊಳಗಾದವರ ಬಗ್ಗೆಯೂ ಕೇಳಿರುತ್ತೀರಿ. ಹೀಗೆ ಬೆಂಕಿ ಹೊತ್ತದ, ಸಿಡಿಯದ, ಬ್ಯಾಟರಿ ಸಿಗುವುದಿಲ್ಲವೇ? ಎನ್ನುವ ಪ್ರಶ್ನೆ ನಿಮ್ಮಲ್ಲಿದ್ದರೆ ಇದೋ ಇಲ್ಲೊಂದು ಸಿಹಿ ಸುದ್ದಿ. ಬೆಂಕಿ ಹೊತ್ತದ, ಸಿಡಿಯದ ಬ್ಯಾಟರಿಯನ್ನು ತಯಾರಿಸುವ ಹೊಸ ಉಪಾಯವೊಂದನ್ನು ಅಮೆರಿಕೆಯ ಓಕ್ ರಿಜ್ ನ್ಯಾಶನಲ್ ಲ್ಯಾಬೊರೇಟರಿಯ ರಸಾಯನ ವಿಜ್ಞಾನಿ ಗೇಬ್ರಿಯಲ್ ವೈತ್ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ ಎಂದು ಅಮೆರಿಕನ್ ಕೆಮಿಕಲ್ ಸೊಸೈಟಿ ವರದಿ ಮಾಡಿದೆ.
ಬ್ಯಾಟರಿಯನ್ನು ಸುರಕ್ಷಿತವಾಗಿಸುವ ಸಿಲಿಕಾ ಪುಡಿ
ಸ್ಮಾರ್ಟ್ ಫೋನುಗಳಲ್ಲಿ ಇರುವ ಬ್ಯಾಟರಿಗಳನ್ನು ಲಿಥಿಯಂ-ಅಯಾನು ಬ್ಯಾಟರಿ ಎಂದು ಕರೆಯುತ್ತಾರೆ. ಇದರಲ್ಲಿ ಲಿಥಿಯಂ ಫಾಸ್ಫರಸ್ ಹೆಕ್ಸಾ ಫ್ಲೂರೈಡಿನಂತಹ ಲವಣಗಳನ್ನು ವಿದ್ಯುತ್ ಛಾರ್ಜುಗಳನ್ನು ಸೃಷ್ಟಿಸಲು ಬಳಸುತ್ತಾರೆ. ಎರಡೂ ಬದಿಯಲ್ಲಿರುವ ಧನ ಹಾಗೂ ಋಣ ಧ್ರುವಗಳ ನಡುವೆ ಸಾವಯವ ದ್ರವವೊಂದು ಇರುತ್ತದೆ. ಅತ್ತಿಂದಿತ್ತ ವಿದ್ಯುತ್ ಛಾರ್ಜುಗಳು ಹರಿಯದಂತೆ ದ್ರವದೊಳಗೆ ಒಂದು ತೆಳುವಾದ ಪ್ಲಾಸ್ಟಿಕ್ಕಿನ ಸೆಪರೇಟರ್ ಹಾಕಿರುತ್ತಾರೆ. ಧ್ರುವಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಿಂದ ಪಾಸಿಟಿವ್ ಹಾಗೂ ನೆಗಟಿವ್ ಛಾರ್ಜುಗಳು ಉತ್ಪತ್ತಿಯಾಗುತ್ತವೆಯಾದರೂ ಇವು ಕೇವಲ ವಿದ್ಯುತ್ ತಂತಿ ಜೋಡಿಸಿದಾಗ ಮಾತ್ರ ಅದರ ಮೂಲಕ ಹರಿಯಬಲ್ಲುವು. ಆಗ ಕರೆಂಟು ಹರಿಯಿತು ಎನ್ನುತ್ತೇವೆ. ಯಾವುದೇ ಕಾರಣಕ್ಕೆ ಎರಡೂ ಧ್ರುವಗಳಲ್ಲಿರುವ ಛಾರ್ಜುಗಳು ಬೆರೆತರೆ ಬ್ಯಾಟರಿ ಬಿಸಿಯೇರಬಹುದು, ಬೆಂಕಿ ಹೊತ್ತಿಕೊಳ್ಳಬಹುದು. ಬಲು ಕ್ಷಿಪ್ರವಾಗಿ ಹೀಗಾದಲ್ಲಿ ಸಿಡಿಯಲೂ ಬಹುದು. ನಡುವೆ ಇರುವ ಸೆಪರೇಟರು ಇದನ್ನು ತಡೆಯುತ್ತದೆ.
ಹಾಗಿದ್ದರೂ ಅವಘಡಗಳು ತಪ್ಪಿದ್ದಲ್ಲ. ನಡುವೆ ಇರುವ ದ್ರವದ ಬದಲಿಗೆ ಛಾರ್ಜುಗಳನ್ನು ಹರಿಯಬಿಡುವ ಗಟ್ಟಿ ವಸ್ತುವನ್ನು ಇಟ್ಟು ಈ ಅಪಾಯವನ್ನು ತಡೆಯಬಹುದಾದರೂ, ಅದಕ್ಕಾಗಿ ಇಡೀ ಬ್ಯಾಟರಿಯ ವಿನ್ಯಾಸವನ್ನೇ ಬದಲಿಸಬೇಕಾಗಿ ಬರಬಹುದು. ವೈತ್ ತಂಡ ಇದಕ್ಕೊಂದು ಉಪಾಯವನ್ನು ಸೂಚಿಸಿದೆ. ನಡುವೆ ಇರುವ ದ್ರವವನ್ನು ದ್ರವವಾಗಿಯೇ ಇಡುವ ಬದಲಿಗೆ ತುಸು ಸಿಲಿಕಾ ಕಣಗಳನ್ನು ಸೇರಿಸಿ ಕೊಲಾಯಿಡ್ ಅಥವಾ ಕಲಿಲವನ್ನಾಗಿ ಮಾಡಿಬಿಟ್ಟರೆ ಈ ತೊಂದರೆ ನಿವಾರಣೆಯಾಗಬಹುದು ಎನ್ನುವುದೇ ಇವರ ಉಪಾಯ.
ಕಲಿಲ ಎಂದರೆ ಇನ್ನೇನಲ್ಲ. ದ್ರವದಲ್ಲಿ ಘನ ಕಣಗಳು ತೇಲುತ್ತಿರುವಂತಹ ಒಂದು ವಸ್ತು. ಸೀಮೆ ಸುಣ್ಣದ ಪುಡಿಯನ್ನು ನೀರಿನಲ್ಲಿ ಕದಡಿದರೆ ಅದು ಕಲಿಲವಾಗುತ್ತದೆ. ಹಾಲು ಕೂಡ ಒಂದು ಕಲಿಲ. ಆದರೆ ಹಾಲಿನಲ್ಲಿ ನೀರಿನೊಳಗೆ ಎಣ್ಣೆಯೇ ಹೀಗೆ ಹರಡಿಕೊಂಡಿರುತ್ತದೆ. ಇವೆರಡನ್ನೂ ಸುಲಭವಾಗಿ ಪ್ರತ್ಯೇಕಿಸಬಹುದು. ಇಂತಹ ಕಲಿಲಗಳಲ್ಲಿ ಕೆಲವು ವಿಶೇಷ ಕಲಿಲಗಳೂ ಉಂಟು. ಅವು ಸಾಮಾನ್ಯ ಸ್ಥಿತಿಯಲ್ಲಿ ಹರಿಯುವಂತಿದ್ದರೂ, ಒತ್ತಡ ಬಿದ್ದಾಗ ಗಟ್ಟಿಯಾಗಬಹುದು. ಅಥವಾ ಬೆಣ್ಣೆಯಂತೆ ಸಾಮಾನ್ಯ ಸ್ಥಿತಿಯಲ್ಲಿ ಗಟ್ಟಿಯಾಗಿದ್ದು, ಒತ್ತಡ ಬಿದ್ದಾಗ ನೀರಾಗಬಹುದು. ಬ್ಯಾಟರಿಗಳಲ್ಲಿ ಇರುವ ದ್ರವವನ್ನು ಮೊದಲನೆಯ ಬಗೆಯ ಕಲಿಲವನ್ನಾಗಿ ಮಾಡಿದರೆ ಬ್ಯಾಟರಿಗೆ ಏಟು ಬಿದ್ದಾಗ ಅದು ಗಟ್ಟಿಯಾಗಿ ಉಳಿಯುತ್ತದೆ. ಹರಿದು ಮತ್ತೊಂದು ಬದಿಯಲ್ಲಿರುವ ದ್ರವದ ಜೊತೆಗೆ ಕೂಡಿಕೊಳ್ಳುವ ಸಾಧ್ಯತೆ ಇರದು ಎನ್ನುವುದು ವೈತ್ ಅವರ ತರ್ಕ.
ನೀರಿನಲ್ಲಿ ಮೆಕ್ಕೆಜೋಳದ ಹಿಟ್ಟು ಕದಡಿದರೆ ಅದು ಆರಂಭದಲ್ಲಿ ನೀರಾಗಿದ್ದರೂ, ಜೋರಾಗಿ ಒತ್ತಿದರೆ ಗಟ್ಟಿಯಾಗಿಬಿಡುತ್ತದೆ. ಹೀಗೆಯೇ ಸಿಲಿಕಾದ ಸೂಕ್ಷ್ಮ ಗುಂಡುಗಳನ್ನು ಬ್ಯಾಟರಿಯ ನಡುವಿರುವ ದ್ರವದೊಳಗೆ ಕೂಡಿಸಿ, ಕಲಿಲವನ್ನು ಉಂಟು ಮಾಡಿದ್ದಾರಂತೆ ವೈತ್. ಈ ಕಲಿಲವಿರುವ ಬ್ಯಾಟರಿಯನ್ನು ಎಷ್ಟು ಜೋರಾಗಿ ಹೊಡೆದರೂ, ಅದು ಬಿಸಿಯೇರುವುದಿಲ್ಲ ಎನ್ನುತ್ತಾರೆ.
ಈ ಬ್ಯಾಟರಿ ಯಾವಾಗ ಮಾರುಕಟ್ಟೆಗೆ ಬಂದು ನಮ್ಮ ಸ್ಮಾರ್ಟ್ ಪೋನಿನ ಬೆನ್ನೇರುತ್ತದೆಯೋ? ಕಾದು ನೋಡೋಣ.
ಆಕರ: Ostadhossein F1, Misra SK1, Tripathi I1, Kravchuk V1, Vulugundam G1, LoBato D2, Selmic LE2, Pan D3 , Biomaterials. Dual purpose hafnium oxide nanoparticles offer imaging Streptococcus mutans dental biofilm and fight it In vivo via a drug free approach.
Biomaterials, 2018 Jul 30;181:252-267.
ಲಿಂಕ್: doi: 10.1016/j.biomaterials.2018.07.053
4. ತುಂತುರು ಸುದ್ದಿಗಳು
• ಕಾರ್ಬನ್ ನ್ಯಾನೋರೂಪಗಳಲ್ಲಿ ಗ್ರಾಫೀನು ಎನ್ನುವುದೂ ಒಂದು. ಹೊಗೆಯ ಮಸಿಯಲ್ಲಿಯೂ, ಇದೀಗ ಹಲವಾರು ವಿನೂತ ಜೈವಿಕ ಸಾಧನಗಳಲ್ಲೂ ಇರುವ ಈ ವಸ್ತುವನ್ನು ನಮ್ಮ ಶ್ವಾಸಕೋಶದಲ್ಲಿರುವ ಕಿಣ್ವವೊಂದು ಜೀರ್ಣಿಸಿಬಿಡುತ್ತದಂತೆ. ಇದು ನಿಜವಾದರೆ ನಿರಾತಂಕವಾಗಿ ಗ್ರಾಫೀನಿನ ಔಷಧ, ಜೈವಿಕ ಸೆನ್ನಾರುಗಳನ್ನು ಬಳಸಬಹುದು.
• ಬೆಳ್ಳುಳ್ಳಿಯಲ್ಲಿರುವ ನೂರಾರು ಘಾಟಿನ ವಸ್ತುಗಳಲ್ಲಿ ಒಂದಾದ ಅಜೋಯೀನನ್ನು ಬೆಳ್ಳುಳ್ಳಿ ಇಲ್ಲದೆಯೇ ಕೃತಕವಾಗಿ ಪ್ರಯೋಗಾಲಯದಲ್ಲಿ ತಯಾರಿಸುವ ವಿಧಾನವನ್ನು ಇಂಗ್ಲೆಂಡಿನ ವಿಜ್ಞಾನಿಗಳು ರೂಪಿಸಿದ್ದಾರೆ.
• ಕೀಟಭಕ್ಷಕ ಡೈನೊಸಾರುಗಳ ಪೂರ್ವಜರೆನ್ನಿಸುವಂತಹ ಎರಡು ಹೊಸ ಡೈನೊಸಾರುಗಳ ಪಳೆಯುಳಿಕೆಗಳನ್ನು ಚೀನಾದ ವಿಜ್ಞಾನಿಗಳು ಹೆಕ್ಕಿದ್ದಾರೆ. ಇವು ಅತ್ತ ಮಾಂಸಭಕ್ಷಕರೂ ಅಲ್ಲದ, ಇತ್ತ ಕೀಟಭಕ್ಸಕರೂ ಅಲ್ಲದ ಡೈನೊಸಾರುಗಳು. ಇವುಗಳ ಹೆಸರು: ಬೋನಿಕಸ್ ಮತ್ತು ಸಿಯೋನಿಕಸ್..
• ಸಿಹಿನೀರಿನಲ್ಲಿ ಲೋಹಗಳು ಕೂಡಿ ಮಾಲಿನ್ಯವಾಗುತ್ತಿದೆ ಎನ್ನುವುದನ್ನು ನೀರನ್ನು ಬಳಸಲು ಆಗದ ಸ್ಥಿತಿ ಬರುವವರೆಗೂ ಕಾಯದೇ ಮೊದಲೇ ತಿಳಿದುಕೊಳ್ಳಲು ಏನು ಮಾಡಬೇಕು ಗೊತ್ತೇ? ಹಾಂ. ಅಲ್ಲಿರುವ ಮೀನಿನ ಮೇಲಿರುವ ಹೇನುಗಳನ್ನು ಲೆಕ್ಕ ಹಾಕಬೇಕಂತೆ. ಈ ಹೇನುಗಳು ನೀರಿನಲ್ಲಿರುವ ಲೋಹದ ಪ್ರಮಾಣವನ್ನು ತಿಳಿಸಬಲ್ಲುವಂತೆ. .
5. ಅನುವಂಶೀಯ ರೋಗಕ್ಕೆ ಬ್ಯಾಕ್ಟೀರಿಯಾ ಚಿಕಿತ್ಸೆ.
ಅನುವಂಶೀಯ ರೋಗಗಳೆಂದರೆ ಗೊತ್ತಲ್ಲ? ವಂಶಪಾರಂಪರ್ಯವಾಗಿ ಬರುವಂತಹ ಖಾಯಿಲೆಗಳು. ನಮ್ಮ ತಳಿಗುಣಗಳಲ್ಲಿರುವ ಯಾವುದೋ ದೋಷದ ಫಲವಾಗಿ ಕಾಡುವ ತೊಂದರೆಗಳು. ಇಂತಹವುಗಳಿಗೆ ಸಾಮಾನ್ಯವಾಗಿ ಚಿಕಿತ್ಸೆ ಇಲ್ಲ ಎನ್ನುವ ಮಾತಿದೆ. ಇದೋ ಆ ಮಾತಿಗೆ ಒಂದು ಗುದ್ದು ಕೊಟ್ಟಿದೆ ನೇಚರ್ ಬಯೋಟೆಕ್ನಾಲಜಿ. ಬ್ಯಾಕ್ಟೀರಿಯಾಗಳನ್ನು ಬಳಸಿ ಅನುವಂಶೀಯವಾಗಿ ಹಲವರನ್ನು ಕಾಡುವ ಫೀನೈಲ್ ಕೀಟೋನ್ ಯೂರಿಯಾ ಎನ್ನುವ ರೋಗವನ್ನು ತಹಬಂದಿಗೆ ತರಬಹುದಂತೆ. ಹೀಗೆಂಬ ಸಂಶೋಧನೆಯನ್ನು ಅಮೆರಿಕೆಯ ಜೈವಿಕ ತಂತ್ರಜ್ಞಾನ ಕಂಪೆನಿ ಸಿನ್ಲಾಜಿಕ್ಕಿನ ಸಂಶೋಧಕಿ ವಿನ್ಸೆಂಟ್ ಇಸಾಬೆಲ್ಲ ಮತ್ತು ಸಂಗಡಿಗರು ನೇಚರ್ ಬಯೋಟೆಕ್ನಾಲಜಿ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.
ಎಸ್ಚೆರಿಶಿಯಾ ಕೋಲಿ ಬ್ಯಾಕ್ಟೀರಿಯಾ
ಫೀನೈಲ್ ಕೀಟೋನ್ ಯೂರಿಯಾ ಎನ್ನುವುದು ಒಂದು ವಿಶಿಷ್ಟ ಅನುವಂಶೀಯ ದೋಷ. ಈ ದೋಷವಿರುವ ವ್ಯಕ್ತಿಗಳು ಆಹಾರದಲ್ಲಿರುವ ಫೀನೈಲ್ ಅಲನಿನ್ ಎನ್ನುವ ಅಮೈನೋ ಆಮ್ಲಗಳನ್ನು ಜೀರ್ನೀಸಿಕೊಳ್ಳಲಾರರು. ಅದಕ್ಕಾಗಿ ಬೇಕಾದ ಕಿಣ್ವವೊಂದು ಕಾಣೆಯಾಗಿರಬಹುದು ಇಲ್ಲವೇ ಕಡಿಮೆ ಪ್ರಮಾಣದಲ್ಲಿರಬಹುದು. ಫೀನೈಲ್ ಅಲನಿನ್ ದೇಹದಲ್ಲಿ ಸಂಗ್ರಹಗೊಂಡು ಹಲವು ತೊಂದರೆಗಳು ಉಂಟಾಗುತ್ತವೆ. ಸೋಂಕು ರೋಗದಂತೆ ಇದನ್ನು ಗುಣಪಡಿಸುವ ಔಷಧಗಳು ಇಲ್ಲದ್ದರಿಂದ ಬಹುತೇಕ ಪ್ರೊಟೀನುಗಳೇ ಇಲ್ಲದ ಅಥವಾ ನಿರ್ದಿಷ್ಟ ಅಮೈನೊ ಆಮ್ಲಗಳಷ್ಟೆ ಇರುವಂತಹ ವಿಶಿಷ್ಟ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಜೊತೆಗೆ ಇತರೆ ಪೋಷಕಾಂಶಗಳನ್ನು ಒದಗಿಸುವ ಪಥ್ಯಾಹಾರ ಅವಶ್ಯವಾಗುತ್ತದೆ.
ಜೀನ್ ಚಿಕಿತ್ಸೆ ಇನ್ನೂ ಕೈ ಹತ್ತಿಲ್ಲದ ಸ್ಥಿತಿಯಲ್ಲಿ ಸದ್ಯಕ್ಕೆ ಕೆಲವು ವಿಶೇಷ ಔಷಧ ಹಾಗೂ ಪಥ್ಯಾಹಾರಗಳಷ್ಟೆ ಚಿಕಿತ್ಸೆಯಾಗಿವೆ. ಇರುವ ಎರಡು ಔಷಧಗಳು ಹಲವು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ. ಇದಕ್ಕೆ ಹೊಸದೊಂದು ಉಪಾಯವನ್ನು ಇಸಾಬೆಲ್ಲ ಸೂಚಿಸಿದ್ದಾರೆ. ನಮ್ಮ ಹೊಟ್ಟೆಯೊಳಗೇ ವಾಸಿಸುವ ಕೆಲವೊಮ್ಮೆ ಬೇಧಿಯನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನೂ ಫೀನೆಲ್ ಅಲನಿನನ್ನು ಜೀರ್ಣೀಸುವಂತೆ ತಿದ್ದುವುದು. ಹೀಗೆ ತಿದ್ದಿದ ಬ್ಯಾಕ್ಟೀರಿಯಾವನ್ನು ನಿತ್ಯ ಸೇವಿಸುತ್ತಿದ್ದರೆ ಪ್ರೊಟೀನನ್ನು ಸಹಜವಾಗಿಯೇ ಜೀರ್ಣಿಸಿಕೊಳ್ಳಬಹುದು. ಹೀಗೆ ತರ್ಕಿಸಿದ ಇವರು ಕರುಳಿನಲ್ಲಿದ್ದಾಗ ಮಾತ್ರವೇ ಪೀನೈಲ್ ಅಲನಿನನ್ನು ಜೀರ್ಣೀಸುವ ಕಿಣ್ವಗಳನ್ನು ತಯಾರಿಸುವಂತೆ ಎಸ್ಷೆರಿಸಿಯಾ ಕೋಲಿ ನಿಸೆಲ್ ಬ್ಯಾಕ್ಟೀರಿಯಾಗಳನ್ನು ತಿದ್ದಿದ್ದಾರೆ. ಈ ಕುಲಾಂತರಿಗಳನ್ನು ಪೀನೈಲ್ ಕೀಟೋನ್ ಯೂರಿಯಾ ದಂತಹುದೇ ತೊಂದರೆಗೊಳಗಾದ ಇಲಿಗಳಿಗೆ ತಿನ್ನಿಸಿದಾಗ ಅವುಗಳ ರಕ್ತದಲ್ಲಿ ಕೂಡಿಕೊಂಡಿದ್ದ ಫೀನೈಲ್ ಅಲನಿನ್ನಿನಲ್ಲಿ ಶೇಕಡ 38% ಕಡಿಮೆಯಾಯಿತಂತೆ. ಇಲಿಗಳು ಪಥ್ಯಾಹಾರವಿಲ್ಲದಿದ್ದಾಗಲೂ ಪ್ರೊಟೀನು ಜೀರ್ಣಿಸಿದುವಂತೆ. ಇದೇ ಪ್ರಯೋಗವನ್ನು ಕೋತಿಗಳಲ್ಲಿಯೂ ಇವರು ಮಾಡಿ ನೋಡಿದ್ದಾರೆ. ಅಲ್ಲಿಯೂ ಬ್ಯಾಕ್ಟೀರಿಯಾಗಳನ್ನು ನೀಡಿದ ಕೋತಿಗಳಿಗೆ ನಿತ್ಯಕ್ಕಿಂತಲೂ ಹೆಚ್ಚು ಫೀನೆಲ್ ಅಲನಿನ್ ತಿನ್ನಿಸಿದಾಗಲೂ ರಕ್ತದಲ್ಲಿ ಅದು ಕಾಣಿಸಲಿಲ್ಲ ಎನ್ನುತ್ತಾರೆ ಇಸಾಬೆಲ್ಲ. ಬ್ಯಾಕ್ಟೀರಿಯಾಗಳು ಇವನ್ನು ಟ್ರಾನ್ಸ್ ಸಿನಮೇಟ್ ಎನ್ನುವ ರಾಸಾಯನಿಕವನ್ನಾಗಿ ಪರಿವರ್ತಿಸಿದುವೆಂದೂ. ಈ ರಾಸಾಯನಿಕವನ್ನು ದೇಹವು ಜೀರ್ಣಿಸಿಕೊಂಡು, ಮೂತ್ರದ ಮೂಲಕ ಹೊರಗಟ್ಟಿತೆಂದೂ ಇವರು ಪತ್ತೆ ಮಾಡಿದ್ದಾರೆ. ಅರ್ಥಾತ್, ಫೀನೈಲ್ ಅಲನಿನ್ ಸಂಗ್ರಹಗೊಳ್ಳುವುದನ್ನು ಹೀಗೆ ತಿದ್ದಿದ ಬ್ಯಾಕ್ಟೀರಿಯಾಗಳು ಸಮರ್ಥವಾಗಿ ತಡೆಯಬಲ್ಲುವು ಎಂದಷ್ಟೆ.
ಹೀಗೆ ಅನುವಂಶೀಯ ಖಾಯಿಲೆಗೂ ಹೊಸದೊಂದು ಬ್ಯಾಕ್ಟೀರಿಯಾ ಚಿಕಿತ್ಸೆಯನ್ನು ಇವರು ಕಂಡುಕೊಂಡಿದ್ದಾರೆ.
ಆಕರ: Vincent M Isabella, Development of a synthetic live bacterial therapeutic for the human metabolic disease phenylketonuria, Nature Biotechnology, doi:10.1038/nbt.4222
6. ಜಾಣಪ್ರಶ್ನೆ
ಗರುಡ ಸಂಜೀವನಿ ಮರದ ಬೇರು ಹರಿಯುವ ನೀರಿನಲ್ಲಿ ಮುಂದೆ ಚಲಿಸುವುದು ಹೇಗೆ ಎಂಬ ಪ್ರಶ್ನೆಗೆ ಚೆನ್ನೈನ ಇನ್ಸ್ಟಿಟ್ಯೂಟ್ ಆಫ್ ಮ್ಯಾತಮಾಟಿಕಲ್ ಸೈನ್ಸಸಿನ ಗಣಿತಜ್ಞ ಡಾ. ಗೌತಮ್ ಮೆನನ್ ಹೀಗೆ ಉತ್ತರ ಕಳಿಸಿದ್ದಾರೆ. ಇದು ತಿರುಗಣಿ ಅಥವಾ ಸ್ಕ್ರೂನಂತೆಯೇ ಕೆಲಸ ಮಾಡುತ್ತದೆ.
ಆರ್ಕಿಮಿಡೀಸನ ಸ್ಕ್ರೂ. ಕೊಳವೆ ತಿರುಗಿದಂತೆಲ್ಲ ನೀರು ಮೇಲೇರುತ್ತದೆ. ಇದೇ ತತ್ವ ಗರುಡ ಸಂಜೀವನಿ ಬೇರನ್ನು ಮುಂದೆ ಚಾಲಿಸುತ್ತದೆ.
ಸ್ಕ್ರೂ ಮುಂದೂಡುವಾಗ ನಾವು ಅದನ್ನು ತಿರುಗಿಸುತ್ತೇವಷ್ಟೆ. ಇಲ್ಲಿ ಆ ಬಲದ ಬದಲಿಗೆ ನೀರಿನ ಹರಿವು ಗರುಡ ಸಂಜೀವನಿ ಬೇರನ್ನು ತಿರುಗಿಸುತ್ತದೆ. ಹೀಗೆ ತಿರುಗುವುದರಿಂದ ಉಂಟಾಗುವ ಬಲವೇ ಅದನ್ನು ಮುಂದೆ ದೂಡುತ್ತದೆ. ನೀರಿನ ಹರಿವಿಲ್ಲದಿದ್ದರೆ ಇದು ಮುಂದೆ ಚಲಿಸಲಾರದು ಎಂದು ಅವರು ವಿವರಿಸಿದ್ದಾರೆ. ಇದಕ್ಕೂ ಬೇರು ಹಗುರವಿದೆಯೋ, ಭಾರವಿದೆಯೋ ಎನ್ನುವುದಕ್ಕೂ ಸಂಬಂಧವಿಲ್ಲವಂತೆ. ಯಾರಾದರೂ ಪರೀಕ್ಷಿಸಬಹುದೇ?
7. ಜಾಣನುಡಿ
ಆಗಸ್ಟ್ 26, 1741
ಆಂಟನ್ ಲಾರೆಂಟ್ ಲೆವಾಸಿಯೆ. ಪ್ರಾಣವಾಯುವನ್ನು ಮೊದಲು ಪತ್ತೆ ಮಾಡಿದ ಫ್ರೆಂಚ್ ವಿಜ್ಞಾನಿ ಹುಟ್ಟಿದ ದಿನ. ಈತ ಪ್ರಾಣವಾಯು ಅಥವಾ ಆಮ್ಲಜನಕ ಅರ್ಥಾತ್ ಆಕ್ಸಿಜನ್ ಎನ್ನುವ ವಸ್ತು ಇದೆ ಎನ್ನುವುದನ್ನು ಗುರುತಿಸುವವರೆವಿಗೂ ಫ್ಲಾಜಿಸ್ಟಾನ್ ಎನ್ನುವ ವಸ್ತುವಿದೆ ಎಂದು ನಂಬಲಾಗಿತ್ತು. ಉರಿಯುವ ಎಲ್ಲ ವಸ್ತುಗಳಲ್ಲಿಯೂ ಫ್ಲಾಜಿಸ್ಟಾನ್ ಇದೆ. ಇದು ವಸ್ತುಗಳು ಉರಿಯುವುದಕ್ಕೆ ಕಾರಣ. ವಸ್ತು ಉರಿದು ಬೂದಿಯಾದಾಗ ಇದು ಬಿಡುಗಡೆಯಾಗುತ್ತದೆ ಎಂದು ನಂಬಲಾಗಿತ್ತು. ಆದರೆ ಈ ತರ್ಕವನ್ನು ಸುಳ್ಳು ಎಂದು ನಿರೂಪಿಸಿದ್ದು ಲೆವಾಸಿಯೆ. ಈತ ಗಾಳಿಯಲ್ಲಿ ಎರಡು ವಸ್ತುಗಳಿವೆ. ಒಂದು ಉರಿಯಲು ನೆರವಾಗುತ್ತದೆ. ಇನ್ನೊಂದು ಉರಿಯಲು ನೆರವಾಗುವುದಿಲ್ಲ ಎಂದು ನಿರೂಪಿಸಿದ. ಅಲ್ಲದೆ ಉರಿಯಲು ನೆರವಾಗುವ ವಸ್ತುವೇ ಆಮ್ಲಜನಕ ಎಂದು ಈತ ಹೇಳಿದ. ಅನಂತರ ಈ ಆಮ್ಲಜನಕವೇ ಜೀವಿಗಳ ಉಸಿರಾಟಕ್ಕೂ ಅವಶ್ಯಕ ಎಂದು ಗೊತ್ತಾಯಿತು. ಹಾಂ. ಲೆವಾಸಿಯೆ ಇಷ್ಟೆಲ್ಲ ಮಾಡಿದರೂ ರಾಜಕೀಯ ಕಾರಣಗಳಿಗಾಗಿ ಆತ ತನ್ನ ಪ್ರಾಣವನ್ನು ತೆರಬೇಕಾಯಿತು. ಅಂದಿನ ಫ್ರೆಂಚ್ ಸಮಾಜದಲ್ಲಿ ಅಧಿಕಾರಶಾಹಿಗಳನ್ನು ವಿರೋಧಿಸಿ ನಡೆದ ಕ್ರಾಂತಿಯ ವೇಳೆ ಈತನನ್ನು ಸೆರೆ ಹಿಡಿದು ಸಾರ್ವಜನಿಕವಾಗಿ ಗೋಣು ಕೊಯ್ದು ಕೊಲೆ ಮಾಡಲಾಯಿತು. ಏಕೆಂದರೆ ಈತ ಅಂದಿನ ರಾಜನ ರಾಯಭಾರಿಯಾಗಿ ಸಾರ್ವಜನಿಕರಿಂದ ಸುಂಕ ವಸೂಲಿ ಮಾಡುತ್ತಿದ್ದ.
ಹಾಂ. ಲೆವಾಸಿಯೆ ತನ್ನೆಲ್ಲ ಶೋಧಗಳಿಗೂ ಬಳಸಿದ್ದು ಒಂದು ತಕ್ಕಡಿಯನ್ನು. ಆ ತಕ್ಕಡಿಯಲ್ಲಿ ವಿವಿಧ ಕ್ರಿಯೆಗಳಿಗೊಳಗಾದ ವಸ್ತುಗಳನ್ನು ತೂಗಿ ತನ್ನ ತರ್ಕವನ್ನು ರೂಪಿಸಿಕೊಂಡ. ಆಮ್ಲಜನಕವಿಲ್ಲದಿದ್ದರೆ ರಕ್ತದ ಕಡುಗೆಂಪು ಬಣ್ನ ಕೆಡುತ್ತದೆ ಎಂದು ತಿಳಿಸಿದ್ದೂ ಈತನೇ.
ರಚನೆ ಮತ್ತು ಪ್ರಸ್ತುತಿ : ಕೊಳ್ಳೇಗಾಲ ಶರ್ಮ. ಜಾಣಸುದ್ದಿ ಕುರಿತ ಸಲಹೆ, ಸಂದೇಹಗಳಿಗೆ ಹಾಗೂ ಜಾಣಪ್ರಶ್ನೆಗೆ ಉತ್ತರವಿದ್ದರೆ ನೇರವಾಗಿ 9886640328 ಈ ನಂಬರಿಗೆ ಕರೆ ಮಾಡಿ ಇಲ್ಲವೇ ವಾಟ್ಸಾಪು ಮಾಡಿ.