ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com
ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)
ಈ ವಾರದ ಸಂಚಿಕೆಯಲ್ಲಿ:
• ಕುಲುಮೆಗಿಟ್ಟರೂ ಬೂದಿಯಾಗದ ಮರ
• ಪರಜೀವವೋ, ಪರಕಾಯವೋ?
• ಹಲ್ಲು ಕುಳಿ ತಡೆಯುವ ನ್ಯಾನೋಗುಂಡುಗಳು
• ತುಂತುರು ಸುದ್ದಿಗಳು
• ಸಿಡುಬು ಮತ್ತೆ ಬರಬಹುದೇ?
1. ಕುಲುಮೆಗಿಟ್ಟರೂ ಬೂದಿಯಾಗದ ಮರ
ಮನೆ ಕಟ್ಟಬೇಕು ಎಂದು ಯಾರಾದರೂ ಹೇಳಿದ ಕೂಡಲೇ ಕಿಟಕಿ, ಬಾಗಿಲಿಗೆ ಯಾವ ಮರ ಹಾಕಿಸುವುದು ಎನ್ನುವ ಪ್ರಶ್ನೆ ಎದುರಾಗುತ್ತದೆ. ವಾಸ್ತು ನಂಬುವ ವಿಷಯವೋ ಅಲ್ಲವೋ, ಆದರೂ ಮನೆಬಾಗಿಲಿಗೆ ತೇಗ, ಕಿಟಕಿಗೆ ತೇಗವಾದರೂ ಆಯಿತು, ಹೊನ್ನೆ ಆದರೂ ಆಯಿತು ಎನ್ನುವವರೇ ಹೆಚ್ಚು. ಮರ ಎನ್ನುವ ವಸ್ತುವಿನ ಖ್ಯಾತಿಯೇ ಹಾಗೆ. ಅದಕ್ಕೆ ಕಾರಣವೂ ಇದೆ ಎನ್ನಿ. ಮರದಂತಹ ಮತ್ತೊಂದು ವಸ್ತು ಇಲ್ಲ. ಇಂಜಿನೀಯರುಗಳಿಗೆ ಮರದಂಥಹ ವಸ್ತುವನ್ನು ರೂಪಿಸುವುದು ಒಂದು ಸವಾಲೇ ಸರಿ. ಏಕೆಂದರೆ ಒಂದೆಡೆ ಎಂತಹ ಭಾರವನ್ನೂ ಹೊರುವ ಧೃಡತೆ, ಮತ್ತೊಂದೆಡೆ ಸಣ್ಣ ಮೊಳೆಗೂ ಬಾಗುವ ಮೃದುತ್ವ ಇವೆರಡೂ ಸರಿಸಮವಾಗಿ ತೂಗುವ ಇನ್ನೊಂದು ವಸ್ತು ಬಹುಶಃ ಬೇರೊಂದಿಲ್ಲ. ಹಾಗಿದ್ದೂ ಮರದ ಬಗ್ಗೆ ಒಂದು ದೂರಿದೆ. ಇದು ಬಲು ಸುಲಭವಾಗಿ ಬೆಂಕಿಗೆ ಆಹುತಿಯಾಗುತ್ತದೆ. ಸುಟ್ಟು ಸಂಪೂರ್ಣ ಬೂದಿಯಾಗುತ್ತದೆ. ಇದೋ ಕೃತಕ ಮರವನ್ನು ಸೃಷ್ಟಿಸಲು ಹೊರಟ ವಿಜ್ಞಾನಿಗಳು ಇದೀಗೆ ಸುಟ್ಟರೂ ಬೂದಿಯಾಗದ ಮರವನ್ನು ರೂಪಿಸಿದ್ದಾರಂತೆ. ಹಾಗೆಂದು ಸೈನ್ಸ್ ಅಡ್ವಾನ್ಸಸ್ ಪತ್ರಿಕೆ ಮೊನ್ನೆ ವರದಿ ಮಾಡಿದೆ. ಚೀನೀ ವಿಜ್ಞಾನ ಅಕಾಡೆಮಿಯ ನ್ಯಾನೋಮೆಟೀರಿಯಲ್ಸ್ ಮತ್ತು ಕೆಮಿಸ್ಟ್ರಿ ವಿಭಾಗದ ಶುಹೋಂಗ್ ಯೂ ಮತ್ತು ಸಂಗಡಿಗರು ಈ ಸಾಧನೆ ಮಾಡಿದ್ದಾರಂತೆ.
ವಿವಿಧ ಬಗೆಯ ಕೃತಕ ಮರಗಳು ಹಾಗೂ ಅವುಗಳ ಒಳರಚನೆ
ಕೃತಕ ಮರದ ಸುದ್ದಿಯೇನೂ ಹೊಸತಲ್ಲ. ಕಾಡಿನಲ್ಲಿ ಮರಗಳು ಕಡಿಮೆಯಾಗುತ್ತಿದ್ದ ಹಾಗೆಯೇ, ಕೃತಕವಾಗಿ ಮರದಂತೆಯೇ ಇರುವ ವಸ್ತುಗಳನ್ನು ಸೃಷ್ಟಿಸುವ ಕೆಲಸವೂ ಸಾಗಿತ್ತು. ಮರದ ಹಾಳೆಗಳನ್ನು ಗೋಂದು ಹಚ್ಚಿ ಹಲಗೆಗಳನ್ನಾಗಿ ಮಾಡುವುದೋ, ಅಥವಾ ಗೋಂದಿನೊಳಗೆ ಮರದ ಪುಡಿಯನ್ನು ಬೆರೆಸಿ ತಟ್ಟಿ ಹಲಗೆಗಳನ್ನೂ ತೊಲೆಗಳನ್ನೂ ರೂಪಿಸುವುದೋ ನಡೆಯಿತು. ಇವನ್ನೆಲ್ಲ ಕಂಪೋಸಿಟ್ಟು ಮರಗಳು ಎಂದು ಕರೆದರು. ಇವುಗಳ ಬಳಕೆಯಿಂದ ಕಾಡನ್ನು ಕಡಿಯುವುದು ಕಡಿಮೆಯಾದೀತು ಎಂದೂ ನಂಬಲಾಯಿತು. ಆದರೆ ಇವುಗಳು ಕೂಡ ಮರದಂತೆಯೇ ಸುಟ್ಟು ಬೂದಿಯಾಗುವ ವಸ್ತುಗಳೇ. ಹೀಗಾಗಿ, ಬೆಂಕಿಬಿದ್ದರೂ ಗಟ್ಟಿಯಾಗಿಯೇ ಉಳಿಯುವ, ಪ್ಲಾಸ್ಟಿಕ್ಕಿನಂತೆ ಕರಗದ, ಮರದಂತೆ ಬೂದಿಯಾಗದ ಹಾಗೂ ಮರದಂತೆಯೇ ಬಳಕೆಗೆ ಒಗ್ಗುವಂತಹ ವಸ್ತುವಿಗಾಗಿ ಹುಡುಕಾಟ ನಡೆದಿತ್ತು. ಶುಹೋಂಗ್ ಯೂ ತಂಡ ಇದನ್ನು ನನಸಾಗಿಸಿದ್ದೇವೆ ಎಂದು ಹೇಳಿಕೊಂಡಿದೆ.
ಮರದ ವಿಶೇಷವೆಂದರೆ ಅದರ ರಚನೆ. ಗೋಂದಿನಂತಹ ಹೂರಣದೊಳಗೆ ನಾರುಗಳು ಹೆಣೆದುಕೊಂಡು ಜಾಲರಿಯಾಗಿರುವಂತಹ ರಚನೆ. ನಾರುಗಳೂ ಅಷ್ಟೆ. ಬೇಕಾಬಿಟ್ಟಿ ಹೆಣೆದುಕೊಂಡಿರುವುದಿಲ್ಲ. ಮರದಲ್ಲಿರುವ ಪ್ರತಿಯೊಂದು ನಾರಿಗೂ ನಿರ್ದಿಷ್ಟ ದಿಕ್ಕು, ಗಾತ್ರ, ಆಕಾರ ಹಾಗೂ ಜೋಡಣೆ ಇರುತ್ತದೆ. ಸೆಲ್ಯುಲೋಸಿನ ನಾರುಗಳನ್ನು, ಲಿಗ್ನಿನ್ ಎನ್ನುವ ಗೋಂದು ಅಂಟಿಸಿರುತ್ತದೆ. ಲಿಗ್ನಿನ್ ಎನ್ನುವುದು ಒಂದು ಪಾಲಿಫೀನಾಲ್ ರಾಸಾಯನಿಕ. ಈ ವ್ಯವಸ್ಥೆ ಎಷ್ಟು ಚೆನ್ನಾಗಿರುತ್ತದೆ ಎಂದರೆ ಟೊಮ್ಯಾಟೋವನ್ನು ಮೇಲಿನಿಂದ ಬುಡದವರೆಗೆ ಕತ್ತರಿಸುವುದು ಎಷ್ಟು ಸುಲಭವೋ, ಅದನ್ನು ಬದಿಯಿಂದ ಬದಿಗೆ ಕತ್ತರಿಸುವುದು ಅಷ್ಟೇ ಕಷ್ಟ. ಇದುವೇ ಮರದ ವಿಶೇಷ. ಧೃಡತೆ ಇದ್ದರೂ ಮೃದು ಸ್ವರೂಪವೂ ಇರುತ್ತದೆ. ಹಗುರವಾಗಿದ್ದರೂ ಭಾರವನ್ನು ತಾಳುತ್ತದೆ.
ಇದನ್ನೇ ಅಣಕಿಸಿದರೆ ಮರದಂತೆಯೇ ಗುಣವಿರುವ ವಸ್ತುವನ್ನು ರೂಪಿಸಬಹುದೇ ಎಂದು ಶುಹೋಂಗ್ ಯೂ ತಂಡ ಪ್ರಯತ್ನಿಸಿದೆ. ಮರದಲ್ಲಿರುವ ಲಿಗ್ನಿನ್ನನ್ನು ಹೋಲುವ ರೆಸಾಲ್ ಎನ್ನುವ ನೀರಿನಲ್ಲಿ ಕರಗುವ ರಾಸಾಯನಿಕವನ್ನು ಇವರು ಬಳಸಿದ್ದಾರೆ. ಇದನ್ನು ಮಂಜುಗಡ್ಡೆಯ ಅಚ್ಚಿನಲ್ಲಿ ಸುರಿದು ನಿರ್ದಿಷ್ಟ ರೂಪವನ್ನು ನೀಡಿದ್ದಾರೆ. ಮಂಜುಗಡ್ಡೆ ಆವಿಯಾದಂತೆ ಈ ಹಂದರ ತನ್ನದೇ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ತದನಂತರ ಸುಮಾರು 200 ಡಿಗ್ರಿ ಉಷ್ಣತೆಯಲ್ಲಿ ಇದನ್ನು ಕಾಯಿಸಿದರೆ ಈ ವಿನ್ಯಾಸ ಗಟ್ಟಿಯಾಗುತ್ತದೆ. ಈ ತಂತ್ರವನ್ನು ಬಳಸಿ ಮರದಲ್ಲಿ ಕಾಣುವಂತೆಯೇ ರಂಧ್ರಗಳನ್ನೂ ರೂಪಿಸಬಹುದು. ರೆಸಾಲ್ ಬದಲಿಗೆ ಮೆಲಾಮಿನ್ ಕೂಡ ಬಳಸಬಹುದಂತೆ. ದ್ರಾವಣದ ಸಾಂದ್ರತೆ, ಶೈತ್ಯೀಕರಿಸುವ ಸಮಯ ಹಾಗೂ ಅನಂತರ ಕಾಯಿಸುವ ಉಷ್ಣತೆಗಳನ್ನು ಬದಲಿಸಿ ವಿವಿಧ ಗಾತ್ರದ ರಂಧ್ರಗಳಿರುವಂತೆ ರೂಪಿಸಬಹುದಂತೆ. ಹೀಗೆ ಮರದಂತೆಯೇ ಇರುವ ಕೃತಕ ಪಾಲಿಮರ್ ಮರಗಳನ್ನು ಮಾಡಬಹುದು. ಕೇವಲ ಪಾಲಿಮರಷ್ಟೆ ಅಲ್ಲದೆ ಅದರೊಟ್ಟಿಗೆ ಸಿಲಿಕಾ ಮುಂತಾದ ಹರಳುಗಳನ್ನು ಬಳಸಿ ಕಂಪೋಸಿಟ್ಟುಗಳನ್ನೂ ತಯಾರಿಸಬಹುದು. ಈ ಮಿಶ್ರವಸ್ತುಗಳ ಗುಣ ತುಸು ಭಿನ್ನವಾಗಿರುತ್ತದೆ.
ಇಂತಹ ಹತ್ತಾರು ಬಗೆಯ ಮರಗಳನ್ನು ತಯಾರಿಸಿ, ಅವುಗಳ ಧೃಢತೆ ಹಾಗೂ ಇತರೆ ಗುಣಗಳನ್ನು ಪರೀಕ್ಷಿಸಿದ್ದಾರೆ. ಇವೆಲ್ಲವೂ ಬಾಲ್ಸ ಮರಗಳಿಗಿಂತಲೂ ಬೆಂಕಿರೋಧಿಯಾಗಿದ್ದುವಂತೆ. ಅರ್ಥಾತ್, ಬೆಂಕಿ ಹೊತ್ತಿಕೊಳ್ಳಲು ಹೆಚ್ಚು ಸಮಯ ಬೇಕಾಯಿತಲ್ಲದೆ, ಜ್ವಾಲೆಯಿಂದ ಹೊರತೆಗೆದ ಕೂಡಲೇ ತಣ್ಣಗಾದುವಂತೆ. ಪ್ಲಾಸ್ಟಿಕ್ಕಿನಂತೆ ಇವು ಬೆಂಕಿಯಲ್ಲಿ ಕರಗಿ, ಬಿಸಿದ್ರವವಾಗುವುದಾಗಲಿ, ಮರದಂತೆ ಬೂದಿಯಾಗುವುದಾಗಲಿ ಆಗಲಿಲ್ಲವೆನ್ನುತ್ತಾರೆ ಶುಹೋಂಗ್ ಯೂ.
ಆಕರ: Yu et al., , Bioinspired polymeric woods, Sci. Adv. 2018; 4 : eaat7223
2. ಪರಜೀವವೋ? ಪರಕಾಯ ಪ್ರವೇಶವೋ?
ನಮ್ಮ ದಾಸರು ಹೇಳಿದ್ದಾರಲ್ಲ! ಎಲ್ಲಾ ಮಾಡುವುದು ಹೊಟ್ಟೆಗಾಗಿ, ಗೇಣು ಹೊಟ್ಟೆಗಾಗಿ ಅಂತ. ಈ ಗೇಣು ಹೊಟ್ಟೆಯದ್ದೂ ಎಷ್ಟೊಂದು ಪ್ರಭಾವ. ಹಸಿದಾಗ ತಲೆನೋವು ತರುತ್ತದೆ. ತುಂಬಿದಾಗ ನಿದ್ರೆ ಬರಿಸುತ್ತದೆ. ಎಲ್ಲವೂ ಸರಿಯಾಗಿದ್ದಾಗಲೂ ಒಮ್ಮೊಮ್ಮೆ ಇನ್ನೇನಾದರೂ ಕೋಟಲೆ ಕಾಡುವುದುಂಟು. ಹೊಟ್ಟೆಯೊಳಗೆ ಅರ್ಥಾತ್ ನಮ್ಮ ಜೀರ್ಣಾಂಗದೊಳಗೆ ಆಹಾರ ಅರಗುತ್ತದೆ ಎನ್ನುವುದಷ್ಟೆ ಹೊಟ್ಟೆ ಹಾಗೂ ನಮ್ಮ ಆರೋಗ್ಯಕ್ಕೆ ಇರುವ ಸಂಬಂಧವಲ್ಲ. ನಮ್ಮ ಆರೋಗ್ಯದಲ್ಲಿ ಹೊಟ್ಟೆಯೊಳಗೆ ಇರುವ ಬ್ಯಾಕ್ಟೀರಿಯಾಗಳದ್ದೂ ಪಾಲುಂಟು. ಇವು ಆಹಾರದಲ್ಲಿರುವ ಕೆಲವು ವಸ್ತುಗಳನ್ನು ನಮಗೆ ಅಗತ್ಯವಾದ ಜೀವಸತ್ವವನ್ನಾಗಿ ಪರಿವರ್ತಿಸಿ ಕೊಡುತ್ತವೆ. ಅಷ್ಟೇ ಅಲ್ಲ. ಹೊಟ್ಟೆ ಕೆಡಿಸುವ ಬ್ಯಾಕ್ಟೀರಿಯಾಗಳೇನಾದರೂ ಅಪ್ಪಿ, ತಪ್ಪಿ ಹೊಟ್ಟೆ ಸೇರಿದಾಗ ಅವುಗಳ ಜೊತೆ ಕಾದಾಡಿ ನಮಗೆ ರಕ್ಷಣೆಯನ್ನೂ ಕೊಡಬಲ್ಲವು. ಇದು ನಮ್ಮ ಹೊಟ್ಟೆಯೊಳಗೆ ಹುಟ್ಟಿನಿಂದಲೇ ಬಂದಿರುವ ಬ್ಯಾಕ್ಟೀರಿಯಾಗಳ ಕೆಲಸ.
ಕೆಲವೊಮ್ಮೆ ಇವು ತುಸು ಹತೋಟಿ ತಪ್ಪಿ ತೊಂದರೆಯನ್ನೂ ಕೊಡಬಲ್ಲವು. ತಿನ್ನುವುದು ನಾವು. ಅದರ ಫಲವನ್ನು ಬೊಜ್ಜಾಗಿಯೋ, ಮತ್ತೊಂದಾಗಿಯೋ ನಾವೇ ಉಣಬೇಕಲ್ಲವೇ? ವಿಜ್ಞಾನಿಗಳ ಪ್ರಕಾರ ನಾವು ತೆಳ್ಳಗಿರುವುದಕ್ಕೂ, ಬೊಜ್ಜು ಬೆಳೆಸಿಕೊಳ್ಳುವುದಕ್ಕೂ ಬ್ಯಾಕ್ಟೀರಿಯಾಗಳೂ ಕಾರಣವಂತೆ. ತೆಳ್ಳಗಿನ ಇಲಿಗಳಿಗೆ ಕೊಬ್ಬಿದ ಮನುಷ್ಯರ ಹೊಟ್ಟೆಯಲ್ಲಿದ್ದ ಬ್ಯಾಕ್ಟೀರಿಯಾಗಳನ್ನು ಉಣಿಸಿ ನೋಡಿದಾಗ ಅವುಗಳಲ್ಲಿ ಕೂಡ ಬೊಜ್ಜು ಬಂದ ಲಕ್ಷಣಗಳನ್ನು ಕಂಡದ್ದಿದೆ. ಆದರೆ ಇದರಲ್ಲೂ ಬ್ಯಾಕ್ಟೀರಿಯಾಗಳ ಕೈವಾಡವಿದೆ ಎನ್ನುವ ಸಂಶಯವಷ್ಟೆ ಇತ್ತು. ಇದು ಸಂಶಯವಲ್ಲ, ಸತ್ಯ ಎನ್ನುವ ಸುದ್ದಿಯನ್ನು ಇ-ಲೈಫ್ ಆನ್ಲೈನ್ ಪತ್ರಿಕೆ ಪ್ರಕಟಿಸಿದೆ. ಆದರೆ ಇವು ಪರಜೀವಿಗಳಷ್ಟೆ ಅಲ್ಲ. ಪರಕಾಯ ಪ್ರವೇಶಿಸಿದಂತೆ ನಮ್ಮ ದೇಹದ ಚಟುವಟಿಕೆಗಳನ್ನೂ ನಿಯಂತ್ರಿಸಬಲ್ಲುವಂತೆ. ಅಮೆರಿಕೆಯ ಬಾಸ್ಟನ್ನಿನಲ್ಲಿರುವ ಹಾರ್ವರ್ಡ್ ವೈದ್ಯಕೀಯ ಶಾಲೆಯ ಸ್ಲೋವನ್ ಡೆವ್ಲಿನ್ ಮತ್ತು ಸಂಗಡಿಗರು ಹೀಗೊಂದು ಶೋಧದ ವಿವರಗಳನ್ನು ಪ್ರಕಟಿಸಿದ್ದಾರೆ. ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳು ಸ್ರವಿಸುವ ರಾಸಾಯನಿಕಗಳು ಮನುಷ್ಯರ ಚಯಾಪಚಯ ಕ್ರಿಯೆಗಳನ್ನು ಬದಲಿಸಬಹುದು ಎನ್ನುತ್ತದೆ ಈ ಶೋಧ. ಪರಿಣಾಮವಾಗಿ ನಮ್ಮ ದೇಹದಲ್ಲಿ ಕೊಬ್ಬು ಪಚನಗೊಳ್ಳುವ ರೀತಿಯೇ ಬದಲಾಗುತ್ತದಂತೆ.
ಲ್ಯಾಕ್ಟೊಬ್ಯಾಸಿಲಸ್ ಬ್ಯಾಕ್ಟಿರಿಯಾ ತಯಾರಿಸುವ ಬೈಲ್ ಸಾಲ್ಟ್ ಹೈಡ್ರೊಲೇಸ್
ನಮ್ಮ ದೇಹದಲ್ಲಿ ಕೊಬ್ಬು ಪಚನವಾಗುವುದಕ್ಕೆ ಪಿತ್ತರಸ ಕಾರಣ. ಪಿತ್ತಜನಕಾಂಗದಲ್ಲಿ ಹುಟ್ಟುವ ಈ ರಸ ಅಲ್ಲಿಂದ ಗುಲ್ಮ ಎನ್ನುವ ಪುಟ್ಟ ಚೀಲದಲ್ಲಿ ಸಂಗ್ರಹವಾಗುತ್ತದೆ. ನಾವು ಸೇವಿಸಿದ ಆಹಾರ ಕರುಳನ್ನು ಸೇರಿದಾಗ ಈ ಪಿತ್ತರಸವು ಅಲ್ಲಿಗೆ ಹರಿದು ಬಂದು, ಅಲ್ಲಿ ಕೊಬ್ಬನ್ನು ಜೀರ್ಣಿಸುತ್ತದೆ. ಇದು ಸಹಜ ಕ್ರಿಯೆ. ಜೀರ್ಣಕ್ರಿಯೆಗೆ ಬಳಕೆಯಾಗಿ ಹೆಚ್ಚುವರಿಯಾಗಿ ಉಳಿದ ಪಿತ್ತರಸ ಹಾಗೇ ನಷ್ಟವಾಗುವುದಿಲ್ಲ. ಅದನ್ನು ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಸುಮಾರು ಐವತ್ತು ಬಗೆಯ ಪಿತ್ತದಾಮ್ಲವಾಗಿ ಬದಲಿಸುತ್ತವೆ. ಈ ಪಿತ್ತದಾಮ್ಲಗಳಲ್ಲಿ ಕೆಲವು ಕರುಳಿನ ಜೀವಕೋಶಗಳ ಮೇಲಿರುವ ಗ್ರಾಹಕ ಪ್ರೊಟೀನುಗಳಿಗೆ ಅಂಟಿಕೊಂಡು, ವಿಭಿನ್ನ ಕ್ರಿಯೆಗಳಿಗೆ ಕಾರಣವಾಗುತ್ತವೆ. ಜೀರ್ಣಿಸಿದ ಸತ್ವಗಳನ್ನು ಹೀರಿಕೊಳ್ಳಲು ಹಾಗೂ ಸಾಕಷ್ಟು ಆಹಾರವಿದ್ದಾಗ, ಸಾಕಪ್ಪ, ಸಾಕು ಇನ್ನು ಕೆಲಸ ನಿಲ್ಲಿಸಿ ಎಂದು ಜೀರ್ಣಾಂಗಗಳಿಗೆ ಸಂಕೇತವನ್ನು ನೀಡುವ ಕೆಲಸವನ್ನೂ ಮಾಡುತ್ತವೆ. ಈ ಐವತ್ತು ಪಿತ್ತದಾಮ್ಲಗಳಲ್ಲಿ ಹೆಚ್ಚೂ ಕಡಿಮೆ ಆದಾಗ ಜೀರ್ಣಕ್ರಿಯೆಯಷ್ಟೆ ಅಲ್ಲ, ಕೊಬ್ಬು ಶೇಖರಣೆ, ಮಧುಮೇಹವನ್ನು ತಡೆಗಟ್ಟುವ ಇನ್ಸುಲಿನ್ ಕೆಲಸ ಮಾಡದೇ ಇರುವುದು ಮುಂತಾದುವುಗಳಾಗುತ್ತದೆ. ಖಾಯಿಲೆ ಕಾಣಿಸುತ್ತದೆ.
ಡೆವ್ಲಿನ್ ಮತ್ತು ಸಂಗಡಿಗರು ಬ್ಯಾಕ್ಟೀರಿಯಾಗಳು ಸ್ರವಿಸುವ ಬೈಲ್ ಸಾಲ್ಟ್ ಹೈಡ್ರೊಲೇಸ್ ಎನ್ನುವ ರಾಸಾಯನಿಕದ ಕುರಿತು ಸಂಶೋಧನೆ ನಡೆಸಿದ್ದಾರೆ. ಇದನ್ನು ನಾವು ಬಿಎಸ್ಎಚ್ ಎಂದು ಕರೆಯೋಣ. ಇವು ಪಿತ್ತರಸವನ್ನು ಒಡೆಯುತ್ತವೆ. ಹೀಗೆ ಒಡೆದಲ್ಲದೆ ಬ್ಯಾಕ್ಟೀರಿಯಾಗಳು ಪಿತ್ತರಸವನ್ನು ಪಿತ್ತದಾಮ್ಲಗಳನ್ನಾಗಿ ಬದಲಾಯಿಸಲಾಗದು. ಡೆವ್ಲಿನ್ ಅವರ ಸಂಶೋಧನೆಯ ಪ್ರಕಾರ ನಮ್ಮ ಕರುಳಿನಲ್ಲಿ ಪಿತ್ತರಸವನ್ನು ನಿರ್ದಿಷ್ಟರೀತಿಯಲ್ಲಿ ಬದಲಿಸುವಂತಹ ಬಿಎಸ್ಎಚ್ ತಯಾರಿಸುವ ಬ್ಯಾಕ್ಟೀರಿಯಾಯಿಡಿಸ್ ಥೀಟಅಯೋಟಾಓಮೈಕ್ರಾನ್ ಎನ್ನುವ ಬ್ಯಾಕ್ಟೀರಿಯಾವನ್ನು ಗುರುತಿಸಿದ್ದಾರೆ. ಇದರಲ್ಲಿ ಬಿಎಸ್ಎಚ್ ತಯಾರಿಕೆಯನ್ನು ನಿರ್ದೇಶಿಸುವ ಒಂದು ಜೀನ್ ಇದೆ. ಇದನ್ನು ಕಿತ್ತೆಸೆದಾಗ, ಈ ಬ್ಯಾಕ್ಟೀರಿಯಾ ಪಿತ್ತರಸದಲ್ಲಿ ಯಾವ ಬದಲಾವಣೆಯನ್ನೂ ಮಾಡುವುದಿಲ್ಲ.
ಹೀಗೆ ಬಿಎಸ್ಎಚ್ ಜೀನಿಲ್ಲದ ಬ್ಯಾಕ್ಟೀರಿಯಾವನ್ನೂ, ಒಂದಿಷ್ಟೂ ಬ್ಯಾಕ್ಟೀರಿಯಾಗಳೇ ಇಲ್ಲದ ಇಲಿಗಳ ಕರುಳಿನಲ್ಲಿ ಸೇರಿಸಿದ್ದಾರೆ. ಮತ್ತೊಂದು ಅಂತಹುದೇ ಗುಂಪಿನ ಇಲಿಗಳ ಕರುಳಿನಲ್ಲಿ ಸಾಧಾರಣ ಬ್ಯಾಕ್ಟೀರಿಯಾಗಳನ್ನು ಕೂಡಿಸಿದ್ದಾರೆ. ಅನಂತರ ಎರಡು ಗುಂಪಿಗೂ ಕೊಬ್ಬಿರುವ ಆಹಾರವನ್ನು ಯಥೇಚ್ಛವಾಗಿ ತಿನ್ನಲು ಕೊಟ್ಟಿದ್ದಾರೆ. ಬಿಎಸ್ಎಚ್ ಜೀನ್ ಇಲ್ಲದ ಬ್ಯಾಕ್ಟೀರಿಯಾ ಹೊತ್ತ ಇಲಿಗಳು ತೆಳ್ಳಗೆ ಬೆಳೆದುವಂತೆ. ಸಾಧಾರಣ ಬ್ಯಾಕ್ಟೀರಿಯಾ ಹೊತ್ತವುಗಳು ಕೊಬ್ಬಿ, ಬೊಜ್ಜು ಬೆಳೆಸಿಕೊಂಡುವಂತೆ. ಅರ್ಥಾತ್, ಮೊದಲಿನದರ ಚಯಾಪಚಯ ಕ್ರಿಯೆಗಳನ್ನು ಬ್ಯಾಕ್ಟೀರಿಯಾ ನಿಯಂತ್ರಿಸಿತು ಎಂತಷ್ಟೆ. ಹೀಗೆ ಕರುಳಿನ ಬ್ಯಾಕ್ಟೀರಿಯಾಗಳು ನಮ್ಮ ದೇಹದ ಚಯಾಪಚಯ ಕ್ರಿಯೆಗಳ ಮೇಲೂ ಕೈಯಾಡಿಸುತ್ತವೆ ಎಂದು ಇವರು ನಿರೂಪಿಸಿದ್ದಾರೆ.
ಬ್ಯಾಕ್ಟೀರಿಯಾಗಳು ಪರಜೀವಿಗಳಷ್ಟೆ ಅಲ್ಲ. ನಮ್ಮ ಕಾಯದ ಕಾಯಕವನ್ನೂ ಬದಲಿಸುತ್ತವೆ ಎಂದರೆ ವಿಚಿತ್ರವಲ್ಲವೇ?
ಆಕರ: Yao et al. A selective gut bacterial bile salt hydrolase alters host metabolism eLife 2018;7:e37182.
ಲಿಂಕ್ : DOI: https://doi.org/10.7554/eLife.37182
3. ಹಲ್ಲು ಕುಳಿ ತಡೆಯುವ ನ್ಯಾನೊಗುಂಡುಗಳು
ಬಹುಶಃ ಬೇರೆಲ್ಲ ನೋವಿಗಿಂತಲೂ ಹಲ್ಲು ನೋವಿನಷ್ಟು ತೊಂದರೆ ಕೊಡುವಂಥದ್ದು ಬೇರೊಂದಿಲ್ಲವೇನೋ. ತಿನ್ನಲೂ ಬಿಡದೆ, ಕುಡಿಯಲೂ ಬಿಡದೆ ಹಲ್ಲು ಜುಮ್ಮೆನ್ನುವಾಗ ಪ್ರಾಣ ಹೋಗುವ ಖಾಯಿಲೆಯಾದರೂ ಪರವಾಗಿಲ್ಲ, ಹಲ್ಲು ನೋವು ಬೇಡಪ್ಪ, ಬೇಡ ಎನಿಸಿಬಿಡುತ್ತದೆ. ಎಷ್ಟೇ ಸ್ವಚ್ಛ ಮಾಡಿಕೊಂಡರೂ, ಗಟ್ಟಿ ಬ್ರಷ್ಷಿನಿಂದ ಉಜ್ಜಿದರೂ, ಆಯುರ್ವೇದದ್ದೋ, ಆಲೋಪತಿಯದ್ದೋ ಪೇಸ್ಟು ಬಳಸಿದರೂ ಹಲ್ಲು ಕರೆಗಟ್ಟುವುದನ್ನೂ, ಹಲ್ಲು ಕುಳಿ ಬೀಳುವುದನ್ನೂ ತಪ್ಪಿಸಲಾಗದು. ಅದಕ್ಕೆಂದೇ ಪೇಸ್ಟಿನಲ್ಲಿಯೇ ಆಂಟಿಬಯಾಟಿಕ್ಕುಗಳನ್ನು ಸೇರಿಸುವುದೂ ಇದೆ. ಅಥವಾ ಹಲ್ಲುಜ್ಜಿದ ಮೇಲೆ ಬಾಯಿ ಮುಕ್ಕಳಿಸಲು ಔಷಧವನ್ನು ಬಳಸುವುದಿದೆ. ಇದೋ ಇವ್ಯಾವುದೂ ಬೇಡವಂತೆ. ವಿಶೇಷವಾಗಿ ತಯಾರಿಸಿರುವ ನ್ಯಾನೊಗುಂಡುಗಳ ಪೇಸ್ಟನ್ನು ಬಳಸಿದರೆ ಸಾಕಂತೆ. ಹೀಗೊಂದು ಸಂಶೋಧನೆಯನ್ನು ಇಲಿನಾಯ್ ವಿಶ್ವವಿದ್ಯಾನಿಲಯದ ಇಂಜಿನೀಯರಿಂಗ್ ಕಾಲೇಜಿನ ಜೈವಿಕ ಇಂಜಿನೀಯರು ವಿಭಾಗದ ದೀಪಾಂಜನ್ ಪಾನ್ ಮತ್ತು ಸಂಗಡಿಗರು ಮಾಡಿದ್ದಾರೆಂದು ಬಯೋಮೆಟೀರಿಯಲ್ಸ್ ಪತ್ರಿಕೆ ವರದಿ ಮಾಡಿದೆ.
ಹಲ್ಲು ಕುಳಿ ಬೀಳಲು ಕಾರಣ ಬ್ಯಾಕ್ಟೀರಿಯಾಗಳ ಬೆಳೆವಣಿಗೆ. ಹಾಗಂತ ಬಾಯಲ್ಲಿ ಬರೇ ದುಷ್ಟ ಬ್ಯಾಕ್ಟೀರಿಯಾಗಳಷ್ಟೆ ಇರುವುದಿಲ್ಲ. ಕೆಲವು ನಿರಪಾಯಕಾರಿ ಬ್ಯಾಕ್ಟೀರಿಯಾಗಳೂ ಇರುತ್ತವೆ. ಆದರೆ ಸ್ಟ್ರೆಪ್ಟೊಕಾಕಸ್ ಜಾತಿಗೆ ಸೇರಿದ ಕೆಲವು ಬ್ಯಾಕ್ಟೀರಿಯಾಗಳಷ್ಟೆ ಹಲ್ಲಿನ ಮೇಲೆ ನೆಲೆಯಾಗಿ ಗಟ್ಟಿಯಾಗಿ, ಹಳದಿಗಟ್ಟುತ್ತವೆ. ಕ್ರಮೇಣ ಹಲ್ಲಿನ ಮೇಲಿರುವ ಹೊಳೆಯುವ ಎನಾಮಲ್ಲನ್ನು ಕರಗಿಸಿ, ಕುಳಿಯುಂಟು ಮಾಡುತ್ತವೆ. ಒಮ್ಮೊಮ್ಮೆ ಇವು ಅತಿಯಾದಾಗ ಹೃದಯ ರೋಗಕ್ಕೆ ನಾಂದಿಯೂ ಆಗಬಹುದು. ಇವನ್ನು ನಿವಾರಿಸಲು ನಿತ್ಯವೂ ಬ್ಯಾಕ್ಟೀರಿಯಾ ಕೊಲ್ಲುವ ಔಷಧಿಗಳಿಂದ ಬಾಯನ್ನು ಮುಕ್ಕಳಿಸುವುದು ಒಳಿತಾದೀತು. ಆದರೆ ಆಗ ದುಷ್ಟರ ಜೊತೆಗೆ ಶಿಷ್ಟ ಬ್ಯಾಕ್ಟೀರಿಯಾಗಳು ಸಾಯುತ್ತವಷ್ಟೆ.
ಹಾಗಿದ್ದರೆ ಈ ಬ್ಯಾಕ್ಟೀರಿಯಾಗಳು ಹತೋಟಿ ಮೀರಿ ಬೆಳೆಯುವ ಮುನ್ನವೇ, ಅಂದರೆ ಆರಂಭದಲ್ಲಿಯೇ ಅವನ್ನು ಪತ್ತೆ ಮಾಡಿ ಹಳದಿಗಟ್ಟಿದ ಕರೆಯನ್ನು ಕಿತ್ತು ಬಿಟ್ಟರೆ ಆಗದೇ? ಇದೇ ದೀಪಾಂಜನರ ತಂಡದ ಉದ್ದೇಶ. ಆದರೆ ಹೀಗೆ ಮಾಡುವುದೂ ಸುಲಭವಲ್ಲ. ಏಕೆಂದರೆ ಈ ಬ್ಯಾಕ್ಟೀರಿಯಾಗಳೂ, ಬೇರೆ ಬ್ಯಾಕ್ಟೀರಿಯಾಗಳಿಗೂ ವ್ಯತ್ಯಾಸ ಗೊತ್ತಾಗುವುದೇ ಇಲ್ಲ. ಕೆಲವು ರಾಸಾಯನಿಕಗಳನ್ನು ಬಳಸಿ ಹಳದಿಗಟ್ಟಿದ ಹಲ್ಲುಗಳನ್ನು ಪತ್ತೆ ಮಾಡಬಹುದಾದರೂ, ಅದು ಆರಂಭದ ಹಂತದಲ್ಲಿ ಕೆಲಸ ಮಾಡುವುದಿಲ್ಲ. ಹೀಗಾಗಿ ದೀಪಾಂಜನರ ತಂಡ ಹೊಸದೊಂದು ಉಪಾಯ ಮಾಡಿದೆ.
ಸ್ಟ್ರೆಪ್ಟೊಕಾಕಸ್ ಮ್ಯುಟಾನ್ಸ್ ಎನ್ನುವ ಹಲ್ಲುಕುಳಿಕಾರಕ ಬ್ಯಾಕ್ಟೀರಿಯಾದಲ್ಲಷ್ಟೆ ಇರುವ ಪ್ರೊಟೀನಿಗೆ ತಳುಕಿಕೊಳ್ಳುವ ವಸ್ತುವನ್ನು ಹೆಕ್ಕಿ ಅದನ್ನು ಸೂಕ್ಷ್ಮವಾದ ಸಿಲೇನ್ ಎನ್ನುವ ಪಾಲಿಮರ್ ನ್ಯಾನೋಗುಂಡುಗಳ ಜೊತೆಗೆ ತಳುಕಿಸಿದ್ದಾರೆ. ಈ ಗುಂಡಿಗೆ ಹ್ಯಾಫ್ಮಿಯಂ ಎನ್ನುವ ಲೋಹವನ್ನೂ ಕೂಡಿಸಿದ್ದಾರೆ. ದೇಹದ ಒಳಾಂಗಗಳ ಎಕ್ಸ್ರೇ ಚಿತ್ರ ತೆಗೆಯುವಾಗ ಸ್ಪಷ್ಟವಾಗಿ ಬರಲೆಂದು ಹ್ಯಾಫ್ಮಿಯಂ ಬಳಸುತ್ತಾರೆ. ಈ ನ್ಯಾನೋಗುಂಡುಗಳನ್ನು ಹಲ್ಲಿನ ಮೇಲೆ ಬಳಿದಾಗ, ಅವು ಕೇವಲ ಸ್ಟ್ರೆಪ್ಟೊಕಾಕಸ್ ಮ್ಯುಟಾನ್ಸ್ ಬ್ಯಾಕ್ಟೀರಿಯಾಗಳನ್ನಷ್ಟೆ ಅಪ್ಪಿಕೊಳ್ಳುತ್ತವೆ. ಅನಂತರ ಎಕ್ಸ ರೇ ತೆಗೆದರೆ ಈ ಬ್ಯಾಕ್ಟೀರಿಯಾಗಳು ಎಲ್ಲೆಲ್ಲಿ ಇವೆ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗೆ ಹಲ್ಲು ಕರೆ ಕಟ್ಟುವ ಮುನ್ನವೇ ಈ ಬ್ಯಾಕ್ಟೀರಿಯಾಗಳ ಇರವನ್ನು ತಿಳಿಯಬಹುದು. ಅಷ್ಟೇ ಅಲ್ಲ. ಹಲ್ಲುಗಳ ಮೇಲೆ ಬ್ಯಾಕ್ಟೀರಿಯಾ ಬೆಳೆಸಿ ಈ ನ್ಯಾನೋಗುಂಡುಗಳನ್ನು ಲೇಪಿಸಿದಾಗ ಬ್ಯಾಕ್ಟೀರಿಯಾಗಳ ಬೆಳೆವಣಿಗೆ ಕಡಿಮೆಯಾಗಿದ್ದೂ ಕಂಡು ಬಂದಿದೆ. ಸೂಕ್ಷ್ಮದರ್ಶಕದ ಅಡಿಯಲ್ಲಿ ಗಮನಿಸಿದಾಗ, ಕೇವಲ ಈ ಬ್ಯಾಕ್ಟೀರಿಯಾಗಳಷ್ಟೆ ಸಾಯುವುದೂ ಗೋಚರಿಸಿದೆ. ಅಲ್ಲದೆ ಈ ನ್ಯಾನೋಗುಂಡುಗಳು ನೇರವಾಗಿ ಬ್ಯಾಕ್ಟೀರಿಯಾದ ಡಿಎನ್ಎಯನ್ನು ತುಂಡರಿಸಿದ್ದೂ ಗೊತ್ತಾಗಿದೆ. ಹೀಗೆ ಯಾವುದೇ ಆಂಟಿಬಯಾಟಿಕ್ಕುಗಳಿಲ್ಲದೆಯೇ ಸ್ಟ್ರೆಪ್ಟೊಕಾಕಸ್ ಮ್ಯುಟಾನ್ಸ್ ಕೊಲ್ಲಬಹುದು ಎನ್ನುತ್ತಾರೆ ದೀಪಾಂಜನ್.
ಆಕರ: Ostadhossein F1, Misra SK1, Tripathi I1, Kravchuk V1, Vulugundam G1, LoBato D2, Selmic LE2, Pan D3 , Biomaterials. Dual purpose hafnium oxide nanoparticles offer imaging Streptococcus mutans dental biofilm and fight it In vivo via a drug free approach.
Biomaterials, 2018 Jul 30;181:252-267.
ಲಿಂಕ್: doi: 10.1016/j.biomaterials.2018.07.053
4. ತುಂತುರು ಸುದ್ದಿಗಳು
• ಭಾರತದ ವ್ಯೋಮಯಾನ ಸಂಸ್ಥೆ ಇಸ್ರೋ ಚಂದ್ರನ ಮೇಲೆ ಮಾನವರಹಿತ ನೌಕೆಯನ್ನು ಕಳಿಸುವುದಕ್ಕೂ, ಅಂತರಿಕ್ಷದಲ್ಲಿ ಭಾರತೀಯರೊಬ್ಬರು ಪಯಣಿಸುವಂತಹ ಯೋಜನೆಗಳನ್ನು ಹಮ್ಮಿಕೊಂಡಿದೆಯಂತೆ. ಎಲ್ಲವೂ ನಿಗದಿಪಡಿಸಿದಂತೆಯೇ ನಡೆದರೆ ಇನ್ನೈದು ವರ್ಷಗಳಲ್ಲಿ ನಮ್ಮವರೊಬ್ಬರು ಚಂದ್ರನ ಮೇಲೂ ತಿರಂಗಾ ಹಾರಿಸಬಹುದು.
• ದೃಷ್ಟಿ ಕಳೆದುಕೊಂಡ ಕಣ್ಣಿಗೆ ದೃಷ್ಟಿ ಮರಳಿಸುವುದು ಸಾಧ್ಯವಂತೆ. ಕಣ್ಣಿನ ಪರದೆಯಲ್ಲಿರುವ ಬೆಳಕನ್ನು ಗ್ರಹಿಸುವ ಜೀವಕೋಶಗಳನ್ನು ಪುನಶ್ಚೇತರಿಸಿ ಕಣ್ಣು ಕಾಣದ ಇಲಿಗಳಿಗೆ ದೃಷ್ಟಿ ಮರಳಿಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದಿನ ಜಾಣಸುದ್ದಿಯಲ್ಲಿ ಕೇಳೋಣ.
• ಅಮೆರಿಕೆಯ ಮನಶ್ಶಾಸ್ತ್ರಜ್ಞರ ಸಂಘವು ನಡೆಸಿರುವ ಬೃಹತ್ ಸರ್ವೆಯೊಂದು ಅಮೆರಿಕೆಯ ಮಕ್ಕಳಲ್ಲಿ ಕಾಣುವ ಆಟಿಸಂ ದೋಷಕ್ಕೂ, ಮಕ್ಕಳ ತಾಯಂದಿರು ವಾಸವಿದ್ದ ಜಾಗದಲ್ಲಿ ಡಿಡಿಟಿ ಮಾಲಿನ್ಯ ಹೆಚ್ಚಾಗಿರುವುದಕ್ಕೂ ಸಂಬಂಧವಿದೆ ಎಂದು ತಿಳಿಸಿದೆ.
• ಚೂರು, ಚೂರಾಗದಂತೆ ಒಣಗಿದ ಶ್ಯಾವಿಗೆಯನ್ನು ಬಾಗಿಸುವುದು ಹೇಗೆ ಗೊತ್ತಿದೆಯೇ? ಇಲ್ಲದಿದ್ದರೆ ತಾಳಿ. ಮುಂದಿನ ಜಾಣಸುದ್ದಿಯಲ್ಲಿ ಕೇಳೋಣ.
5. ಸಿಡುಬು ಮಾರಿ ಮತ್ತೆ ಮರಳೀತೇ?
ಸಿಡುಬಿನ ಬಗ್ಗೆ ಇಂದಿನ ಜೆನ್ ನೆಕ್ಸ್ಟಿಗೆ ಪರಿಚಯವೇ ಇಲ್ಲ. ಒಂದು ಕಾಲದಲ್ಲಿ ಊರಿಗೆ ಊರನ್ನೇ ಬಲಿ ತೆಗೆದುಕೊಳ್ಳುತ್ತಿದ್ದ ಈ ವೈರಸ್ ಖಾಯಿಲೆ ಈಗ ಅಪರಿಚಿತವೆನ್ನುವಂತಾಗಿದೆ. ಸಿಡುಬಿನ ಕೊಟ್ಟ ಕೊನೆಯ ರೋಗಿ ಪತ್ತೆಯಾಗಿ ನಾಲ್ವತ್ತು ವರ್ಷಗಳ ಹಿಂದೆ. 1979ರಲ್ಲಿ. ಅಂದಿನಿಂದ ಇಂದಿನವರೆಗೂ ಈ ಮಾರಿ ಮತ್ತೆ ಕಾಣಿಸಿಲ್ಲ. ಹೀಗಾಗಿ ಇದನ್ನು ವೈದ್ಯಕೀಯ ಜಗತ್ತಿನ ಅದ್ಭುತ ಸಾಧನೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ವ್ಯವಸ್ಥಿತವಾಗಿ ಎಲ್ಲ ಮಕ್ಕಳಿಗೂ ಲಸಿಕೆಗಳನ್ನು ನೀಡುವ ಮೂಲಕ ಈ ಮಾರಿ ಮತ್ತೆ ಕಾಣಿಸಿಕೊಳ್ಳದ ಹಾಗೆ ಮಾಡಿದ್ದೇವೆ.
ಇದು ಇತಿಹಾಸ. ಹೊಸ ಔಷಧಗಳಿಗೆ ಪರವಾನಿಗಿ ನೀಡುವ ಅಮೆರಿಕೆಯ ಔಷಧ ನಿಯಂತ್ರಣ ಸಂಸ್ಥೆ ಇತ್ತೀಚೆಗೆ ಸಿಡುಬು ಬಾರದಂತೆ ತಡೆಯಬಲ್ಲುದು ಎನ್ನಲಾದ ಎರಡು ಔಷಧಗಳ ತಯಾರಿಕೆ ಹಾಗೂ ಮಾರಾಟಕ್ಕೆ ಒಪ್ಪಿಗೆ ನೀಡಿದೆಯಂತೆ ಇಲ್ಲದ ರೋಗಕ್ಕೆ ಔಷಧ ಏಕೆ? ತಯಾರಿಸಿದ್ದೇನೋ ಸರಿ. ಇದನ್ನು ಕೊಳ್ಳುವವರಾರು? ಇದು ಪ್ರಶ್ನೆ. ಇದಕ್ಕೆ ಉತ್ತರವೋ ಎನ್ನುವ ಹಾಗೆ ನೇಚರ್ ಪತ್ರಿಕೆ ಒಂದು ಸಂಪಾದಕೀಯವನ್ನು ಪ್ರಕಟಿಸಿದೆ. ಸಿಡುಬು ರೋಗ ಮತ್ತೊಮ್ಮೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಇವೆ ಎನ್ನುತ್ತದೆ ಈ ಸಂಪಾದಕೀಯ.
ಅದು ಹೇಗೆ? ರೋಗ ಯಾರಲ್ಲಿಯಾದರೂ ಇದ್ದರಲ್ಲವೇ ಬೇರೊಬ್ಬರಿಗೆ ಹರಡುವುದು ಎಂದಿರಾ? ರೋಗಿಗಳು ಯಾರೂ ಇಲ್ಲ ಎನ್ನುವುದೇನೋ ನಿಜ. ಆದರೆ ರೋಗಾಣುಗಳು ಇಲ್ಲದೇ ಇಲ್ಲ. ಅಮೆರಿಕೆಯ ಸೇನಾ ಸಂಶೋಧನಾಲಯದಲ್ಲಿ ಹಾಗೂ ರಷ್ಯಾದ ಸೇನಾ ಸಂಶೋಧನಾಲಯಗಳಲ್ಲಿ ಈ ಸಿಡುಬಿನ ವೈರಸ್ಸುಗಳ ಮಾದರಿಯನ್ನು ಸಂಗ್ರಹಿಸಿ ಭದ್ರ ಕಾವಲಿನಲ್ಲಿ ಇಡಲಾಗಿದೆ. ಅಲ್ಲಿನ ಚಟುವಟಿಕೆಗಳಿಗೆ ಬೇಸತ್ತು ಯಾರಾದರೂ ಉದ್ಯೋಗಿ ಇದನ್ನು ಬಿಡುಗಡೆ ಮಾಡಬಹುದು ಎನ್ನುವ ಆತಂಕವಿದೆ. ಈ ಹಿಂದೆ ಕಾಲುಬಾಯಿ ಜ್ವರದ ವೈರಸ್ಸನ್ನು ಹೀಗೆಯೇ ಅತೃಪ್ತ ನೌಕರನೊಬ್ಬ ಹರಡಿದ್ದು ಸುದ್ದಿಯಾಗಿತ್ತು. ಅಥವಾ ಯುದ್ಧದ ಸಂದರ್ಭದಲ್ಲಿ ಇವನ್ನು ಬೇಕೆಂತಲೇ ವೈರಿಗಳ ಮೇಲೆ ಪ್ರಯೋಗಿಸಲೂ ಬಹುದು. ಹೀಗೆ ಮಾಡಬಾರದೆನ್ನುವ ಅಂತಾರ್ರಾಷ್ಟ್ರೀಯ ಒಪ್ಪಂದಗಳಿದ್ದರೂ, ಯುದ್ಧದ ಸಮಯದಲ್ಲಿ ನಿಯಮಗಳ ಪಾಲನೆಗಿಂತಲೂ ಅದನ್ನು ಮುರಿಯುವುದೇ ಹೆಚ್ಚು.
ಇದಲ್ಲದೆ ಈ ವೈರಸ್ಸಿನ ಅಣು-ಅಣುವಿನ ಪರಿಚಯವೂ ವಿಜ್ಞಾನಿಗಳಿಗೆ ಇದೆ. ಹೀಗಾಗಿ ಈ ವೈರಸ್ಸನ್ನು ಕೃತಕವಾಗಿ ಸೃಷ್ಟಿಸಲೂ ಬಹುದು. ಹತ್ತು ವರ್ಷಗಳ ಹಿಂದೆ ಸಿಡುಬಿನ ವೈರಸ್ಸಿನ ಸಂಬಂಧಿ ಆದರೆ ಬಲು ಸೌಮ್ಯವಾದ ವೈರಸ್ಸಿಗೆ ಸಿಡುಬಿನಂತೆಯೇ ಮಾರಕ ಗುಣಗಳನ್ನು ಆಸ್ಟ್ರೇಲಿಯಾದ ವಿಜ್ಞಾನಿಗಳು ನೀಡಿದ್ದರು. ಅವರು ಇದನ್ನು ಬಲು ಎಚ್ಚರಿಕೆಯಿಂದ ಮಾಡಿದ್ದರೆನ್ನುವುದು ನಿಜವಾದರೂ, ಎಲ್ಲರೂ ಅಷ್ಟೇ ಎಚ್ಚರದಿಂದ ಹಾಗೂ ನೀತಿಯಿಂದ ನಡೆದುಕೊಳ್ಳುತ್ತಾರೆ ಎನ್ನುವುದನ್ನು ಹೇಗೆ ನಂಬೋಣ ಎನ್ನುತ್ತದೆ ಈ ಸಂಪಾದಕೀಯ.
ಹಾಂ. ಅಲ್ಲಿಂದಲೋ ಇಲ್ಲಿಂದಲೋ ಒಂದಿಷ್ಟು ವೈರಸ್ಸು ಕದ್ದು ಭಯೋತ್ಪಾದನೆಗೆ ಬಳಸಿದರೂ ಅಚ್ಚರಿಯಿಲ್ಲ. ಅಂತಹ ಸಂದರ್ಭಗಳಿಗೂ ನಾವು ಸಿದ್ಧರಿರಬೇಕು. ಹೀಗೆ ಯುದ್ಧ, ಭಯೋತ್ಪಾದನೆ, ಆಕಸ್ಮಿಕ ಇಲ್ಲವೇ ಉದ್ದೇಶ ಪೂರ್ವಕವಾಗಿ ಈ ವೈರಸ್ಸು ಹರಡುವ ಸಾಧ್ಯತೆಗಳಿವೆ. ಅವು ಎಷ್ಟೇ ಅಪರೂಪವೆನ್ನಿಸಿದರೂ, ಘಟಿಸಿದಾಗ ಬಲು ಕ್ಷಿಪ್ರವಾಗಿ ಹರಡಬಹುದು. ಏಕೆಂದರೆ ನಾವು ಜೆನ್ ನೆಕ್ಸ್ಟ್ ಎನ್ನುವ ಮುಂದಿನ ಪೀಳಿಗೆಗೆ ಇದರ ವಿರುದ್ಧ ಲಸಿಕೆಯನ್ನು ನೀಡಿಲ್ಲ. ಅಂತಹ ಜನತೆಯಲ್ಲಿ ಇದು ಕಾಡ್ಗಿಚ್ಚಿನಂತೆ ಕ್ಷಿಪ್ರವಾಗಿ ಹರಡಬಹುದಂತೆ.
ಅಂತಹ ಸಂದರ್ಭಗಳಿಗೆ ಸಿದ್ಧವಾಗಿರಲಿ ಎಂದು ಈ ಔಷಧ. ಅಷ್ಟೆ. ಆದರೂ ಇಷ್ಟೆಲ್ಲ ಖರ್ಚು ಮಾಡಿ ತಯಾರು ಮಾಡಿದ್ದನ್ನು ಕಂಪೆನಿಗಳು ಮಾರದೇ ಹೇಗೆ ಉಳಿದಾವು ಎನ್ನುವುದು ಕುತೂಹಲದ ಪ್ರಶ್ನೆ.
ಆಕರ: The Spectre of SmallPox lingers, Nature, 6 AU G U S T 2 0 1 8 | VO L 5 6 0 , Pp | 2 8 1
6. ಜಾಣಪ್ರಶ್ನೆ
ಜಾಣಸುದ್ದಿಯ ಗ್ರೂಪಿನಲ್ಲಿ ಮತ್ತೊಂದು ವೀಡಿಯೋ ಬಂದಿತ್ತು. ಗರುಡ ಸಂಜೀವನಿ ಎನ್ನುವ ಮರದ ಬೇರು ಎನ್ನಲಾದ ಇದು ಸುರುಳಿ ಸುತ್ತಿ ಬಿಚ್ಚಿದ ತಂತಿಯಂತೆ ವಕ್ರವಾಗಿತ್ತು. ಹರಿಯುವ ನೀರಿನಲ್ಲಿ ಇಟ್ಟಾಗ ಹರಿವಿಗೆ ವಿರುದ್ಧವಾಗಿ ತಿರುಗುತ್ತಾ ಸಾಗಿತು. ಸ್ಕ್ರೂ ಅಥವಾ ತಿರುಗಣಿಯಂತೆ ಇದು ಕಂಡಿತು. ಇದನ್ನು ನೋಡಿದಾಗ ಎದ್ದ ಪ್ರಶ್ನೆ.
ತಿರುಗಣಿ ಅಥವಾ ಸ್ಕ್ರೂವನ್ನು ತಿರುಗಿಸಿದಾಗ ಅದು ಮುಂದೆ ಚಲಿಸುತ್ತದಲ್ಲ? ಅದು ಹೇಗೆ? ಇದೋ ಮತ್ತೊಮ್ಮೆ ಪ್ರಶ್ನೆ. ಸ್ಕ್ರೂ ಅಥವಾ ತಿರುಗಣಿಯನ್ನು ತಿರುಗಿಸಿದರೆ ಅದು ಮುಂದೆ ಚಲಿಸುತ್ತದೆ. ಇದು ಹೇಗೆ?
7. ಜಾಣನುಡಿ
ಆಗಸ್ಟ್ 19, 1871
ಪ್ರಪ್ರಥಮ ಮೋಟರು ಚಾಲಿತ ವಿಮಾನವನ್ನು ರೂಪಿಸಿದ, ಹಾರಿಸಿದ ರೈಟ್ ಸಹೋದರರಲ್ಲೊಬ್ಬರಾದ ಆರ್ವಿಲ್ ರೈಟ್ ಜನಿಸಿದ ದಿನ. ಆರ್ವಿಲ್ ಮತ್ತು ವಿಲ್ಬರ್ ರೈಟ್ ಸಹೋದರರುಗಳು 1903ನೇ ಇಸವಿಯಲ್ಲಿ ಮೊತ್ತ ಮೊದಲ ವಿಮಾನವನ್ನು ಹಾರಿಸಿದ್ದರು. ಈ ವಿಮಾನ ಕೇವಲ ಹನ್ನೆರಡು ಸೆಕೆಂಡುಗಳಷ್ಟೆ ಹಾರಿತ್ತು.
ಅನಂತರ ಇವರು ರೂಪಿಸಿದ ವಿಮಾನ 38 ನಿಮಿಷಗಳ ಕಾಲ ಹಾರಿತ್ತು. ತದನಂತರ ಇವರು ಹಲವಾರು ವಿಮಾನಗಳನ್ನು ರೂಪಿಸಿ ಮಾರಾಟ ಮಾಡಿದರು. 1908ರಿಂದ ವಿಮಾನಗಳನ್ನು ತಯಾರಿಸುವ ರೈಟ್ ಕಂಪೆನಿಯನ್ನೂ ಸ್ಥಾಪಿಸಿದ್ದರು. ಅದರೆ 1912ರಲ್ಲಿ ವಿಲ್ಬರ್ ರೈಟ್ ಟೈಫಾಯಿಡ್ ಖಾಯಿಲೆಯಿಂದ ನಿಧನರಾದ ಮೇಲೆ ಆರ್ವಿಲ್ ತಮ್ಮ ಕಂಪೆನಿಯನ್ನು ಮಾರಾಟ ಮಾಡಿಬಿಟ್ಟರು. ಇವರ ಬಗ್ಗೆ ಸುಪ್ರಸಿದ್ಧ ವಿಜ್ಞಾನಿ ಕಾರ್ಲ ಸಾಗನ್ ಹೇಳಿದ್ದು ಹೀಗೆ.
ಜೀನಿಯಸ್ಸುಗಳನ್ನು ಕಂಡು ನಗುವವರೆಲ್ಲರೂ ಜೀನಿಯಸ್ಸುಗಳಾಗಿರುವುದಿಲ್ಲ. ಕೊಲಂಬಸನನ್ನು ಕಂಡು, ಉಗಿಹಡಗನ್ನು ರೂಪಿಸಿದ ಫುಲ್ಟನ್ನನನ್ನು ಕಂಡು ಹಾಗೂ ರೈಟ್ ಸಹೋದರರನ್ನು ಕಂಡು ನಕ್ಕವರೆಲ್ಲರೂ, ನಕಲಿಶ್ಯಾಮನನ್ನು ನೋಡಿ ನಕ್ಕವರಷ್ಟೆ!
—-
ರಚನೆ ಮತ್ತು ಪ್ರಸ್ತುತಿ : ಕೊಳ್ಳೇಗಾಲ ಶರ್ಮ. ಜಾಣಸುದ್ದಿ ಕುರಿತ ಸಲಹೆ, ಸಂದೇಹಗಳಿಗೆ ಹಾಗೂ ಜಾಣಪ್ರಶ್ನೆಗೆ ಉತ್ತರವಿದ್ದರೆ ನೇರವಾಗಿ 9886640328 ಈ ನಂಬರಿಗೆ ಕರೆ ಮಾಡಿ ಇಲ್ಲವೇ ವಾಟ್ಸಾಪು ಮಾಡಿ.