ಜಾಣಸುದ್ದಿ 13: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com

ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)

ಈ ವಾರದ ಸಂಚಿಕೆಯಲ್ಲಿ:

1.ಹನುಮನೌಕೆಯ ಯಾನ,
2.ಅಷ್ಟ ರೋಧಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸುಗಂಧದೆಣ್ಣೆಗಳು,
3. ಗಂಗೆಯ ಮೂರು ಆಯಾಮದ ಚಿತ್ರ,
4. ತುಂತುರು ಸುದ್ದಿ
5. ಹರಳೆಣ್ಣೆಯಲಿ ತೇಲುವ ಮ್ಯಾಗ್ನೆಟ್ಟು
6. ಜಾಣಪ್ರಶ್ನೆ
7. ಜಾಣನುಡಿ

1. ಹನುಮ ನೌಕೆಯ ಯಾನ
ಹನುಮನ ಕಥೆ ಕೇಳಿದ್ದೀರಲ್ಲ. ನಮ್ಮ ಪುರಾಣಗಳಲ್ಲಿ ಬರುವ ಸ್ವಾರಸ್ಯಕರವಾದ ಕಥೆ ಇದು. ಒಮ್ಮೆ ಹನುಮ ಕೆಂಪಾದ ಉದಯ ಸೂರ್ಯನನ್ನು ಹಣ್ಣು ಎಂದು ಭಾವಿಸಿದನಂತೆ. ಹಾಗೆಯೇ ಅದನ್ನು ಹಿಡಿಯಲು ಹಾರಿ ಹೋಗಿದ್ದನಂತೆ. ಇದು ಹನುಮನ ಶಕ್ತಿಗೆ ನಮ್ಮ ಹಿರಿಯರು ಕಲ್ಪಿಸಿದ ಕಥೆ. ಇದೋ ಹೀಗೆಯೇ ಸೂರ್ಯನನ್ನು ಹಿಡಿಯಲೋ, ಮುಟ್ಟಲೋ ಅಲ್ಲದಿದ್ದರೂ, ಸೂರ್ಯನನ್ನು ಇನ್ನೂ ಹತ್ತಿರದಿಂದ ನೋಡುವ ಬಯಕೆಯಿಂದ ಹನುಮನಂತೆಯೇ ಒಂದು ನೌಕೆ ಹಾರಿದೆ. ಅಮೆರಿಕೆಯ ನಾಸಾ ಸಂಸ್ಥೆಯು ಮೊನ್ನೆ ಅಂದರೆ ಆಗಸ್ಟ್ ಹತ್ತನೆಯ ತಾರೀಖು ಪಾರ್ಕರ್ ಎನ್ನುವ ಹೆಸರಿನ ಸೌರಶೋಧ ನೌಕೆಯನ್ನು ಹಾರಿಬಿಟ್ಟಿತು. ಇದು ಇನ್ನು ಏಳು ವರ್ಷಗಳ ಕಾಲ ಸೂರ್ಯನನ್ನು ಸುತ್ತಲಿದೆಯಂತೆ. ಏನಿದು ನೌಕೆ? ಏಕೆ ಹಾರಿಸಿದ್ದೇವೆ? ಎನ್ನುವ ವಿವರಗಳನ್ನು ಕಳೆದ ತಿಂಗಳು ನೇಚರ್ ಪತ್ರಿಕೆ ಪ್ರಕಟಿಸಿತ್ತು. ಅದರಲ್ಲಿನ ಕೆಲವು ವಿವರಗಳನ್ನು ನಿಮಗೆ ಇಲ್ಲಿ ತಿಳಿಸುತ್ತಿದ್ದೇವೆ.
ಪಾರ್ಕರ್ ಒಂದು ಶೋಧ ನೌಕೆ. ಇದರ ಪ್ರಯಾಣದ ಉದ್ದೇಶವೂ ಸರಳ. ಸೂರ್ಯನ ಬಳಿಗೆ ಹೋಗಿ ಸೂರ್ಯನ ವಾತಾವರಣ ಹೇಗಿದೆ ಎನ್ನುವ ಕುತೂಹಲ ಇದರದ್ದು. ಅದರಲ್ಲೇನಿದೆ? ಎಂದಿರಾ? ಸೂರ್ಯನ ಹನುಮನ ಕಲ್ಪನೆಯ ಹಣ್ಣಲ್ಲ ಎನ್ನುವುದು ನಮಗೆಲ್ಲರಿಗೂ ಗೊತ್ತು. ಅದೊಂದು ಬೆಂಕಿಯ ಚೆಂಡು. ಅದುವೂ ಸಾಧಾರಣ ಬೆಂಕಿಯಲ್ಲ. ಕಬ್ಬಿಣವನ್ನು ಕರಗಿಸುವ ಕುಲುಮೆಯಲ್ಲಿ ಸುಮಾರು 1000 ಡಿಗ್ರಿ ಸೆಂಟಿಗ್ರೇಡ್ ಬಿಸಿ ಇರಬಹುದು. ಆದರೆ ಸೂರ್ಯನ ಮೈ ಇದರ ಆರುಪಟ್ಟು ಹೆಚ್ಚು ಬಿಸಿಯಂತೆ. ಇನ್ನೂ ವಿಚಿತ್ರವೆಂದರೆ ಸೂರ್ಯನ ಮೈಗಿಂತಲೂ ಅದನ್ನು ಆವರಿಸಿರುವ ವಾತಾವರಣ ಇನ್ನೂ ಬಿಸಿ. ಅದು ಹತ್ತಲ್ಲ, ಇಪ್ಪತ್ತಲ್ಲ, ಲಕ್ಷಪಟ್ಟು ಬಿಸಿ. ಅರ್ಥಾತ್, ಅದರ ವಾತಾವರಣದ ಉಷ್ಣತೆ ಮಿಲಿಯನ್ ಸೆಂಟಿಗ್ರೇಡನ್ನೂ ದಾಟಬಲ್ಲುದು. ನಮಗೆ ಜ್ವರ ಬಂದಾಗ ಮೈ ಒಂದೆರಡು ಡಿಗ್ರಿ ಸೆಂಟಿಗ್ರೇಡಿನಷ್ಟು ಹೆಚ್ಚು ಬಿಸಿಯಾಗುತ್ತದೆ ಅಷ್ಟೆ. ಇನ್ನು ಕುದಿಯುವ ನೀರು 100 ಡಿಗ್ರಿ ಸೆಂಟಿಗ್ರೇಡಿನಷ್ಟು ಬಿಸಿ ಇರುತ್ತದೆ. ನಾವು ಸ್ನಾನಕ್ಕೆ ಬಳಸುವ ಅತಿ ಬಿಸಿ ನೀರೂ ಕೂಡ ಕೇವಲ ನಲವತ್ತೋ, ಐವತ್ತೋ ಡಿಗ್ರಿ ಸೆಂಟಿಗ್ರೇಡಿನಷ್ಟು ಬಿಸಿ ಇರಬಹುದು. ಅತಿ ಉರಿ ಬೇಸಗೆ ಎನ್ನಿಸುವ ಮರುಭೂಮಿಯಲ್ಲೂ ತಾಪಮಾನ 50 ಡಿಗ್ರಿ ಸೆಂಟ್ರಿಗ್ರೇಡನ್ನು ದಾಟಲಾರದು. ಹೀಗಿರುವಾಗ ಸೂರ್ಯನ ಮೈ ಮೇಲಿನ ಬಿಸಿ ಎಷ್ಟು ಎಂದು ಊಹಿಸಿಕೊಳ್ಳಿ.
ಪಾರ್ಕರನ ಕುತೂಹಲ ಕೇವಲ ಸೂರ್ಯನ ಮೈ ಏಕೆ ಇಷ್ಟು ಬಿಸಿ ಇದೆ ಎನ್ನುವುದಷ್ಟೆ ಅಲ್ಲ. ಸೂರ್ಯನ ವಾತಾವರಣವನ್ನು ಕೊರೊನ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಬಿಸಿಯಷ್ಟೆ ಅಲ್ಲ, ಇದರಲ್ಲಿರುವ ವಿದ್ಯುತ್ ಆವೇಶಗೊಂಡ ಕಣಗಳು ಅಲ್ಲಿಂದ ಹಾರಿ ಇಡೀ ಸೂರ್ಯಮಂಡಲದುದ್ದಕ್ಕೂ ಹರಡಿಕೊಳ್ಳುತ್ತವೆ. ಇದನ್ನೇ ಸೌರಮಾರುತ ಎಂದು ವಿಜ್ಞಾನಿಗಳು ಹೆಸರಿಸಿದ್ದಾರೆ. ವಿದ್ಯುತ್ ಇದ್ದ ಕಡೆ ಕಾಂತ ಶಕ್ತಿಯೂ ಇರಬೇಕಷ್ಟೆ. ಈ ಸೌರಮಾರುತದ ಕಾಂತ ಪ್ರಭಾವ ನಮ್ಮ ಭೂಮಿಯನ್ನೂ ಆಗಾಗ್ಗೆ ತಾಕುತ್ತದೆ. ನಮ್ಮ ಟೆಲಿಫೋನು, ಟೆಲಿವಿಷನ್ನು ಪ್ರಸಾರಗಳಿಗೆ ಅಡ್ಡಿಯಾಗುತ್ತದೆ. ನೆನಪಿರಲಿ. ನಾವು ಸೂರ್ಯನಿಂದ ಸುಮಾರು 14.9 ಕೋಟಿ ಕಿಲೋಮೀಟರುಗಳಷ್ಟು ದೂರದಲ್ಲಿದ್ದೇವೆ.
ಇಷ್ಟು ದೂರದಲ್ಲಿರುವ ನಮಗೆ ಬೇಸಗೆಯಲ್ಲಿ ಸೂರ್ಯನ ಬಿಸಿ ಸುಟ್ಟು ಬಿಸಿ ಮಾಡುವಷ್ಟು ಎನಿಸುತ್ತದಲ್ಲ? ಈ ಪಾರ್ಕರನನ್ನು ಅದು ಸುಟ್ಟು ಬೂದಿ ಮಾಡದೇ? ಹಾಂ. ಅದಕ್ಕೆಂದೇ ಪಾರ್ಕರನಿಗೆ ಸುಮಾರು ಒಂದು ಅಡಿ ದಪ್ಪದ ಕಾರ್ಬನ್ ಅಣುಗಳನ್ನು ದಟ್ಟವಾಗಿ ಒತ್ತೊತ್ತಿ ಮಾಡಿದ ಪದರಗಳ ಭದ್ರ ಕವಚವನ್ನು ಹೊದಿಸಿದ್ದಾರೆ. ಇದು ಸುಮಾರು 1400 ಡಿಗ್ರೀ ಸೆಂಟಿಗ್ರೇಡಿನಷ್ಟು ಉಷ್ಣತೆಯನ್ನೂ ಸಹಿಸಿಕೊಳ್ಲಬಲ್ಲುದು. ವಿದ್ಯುತ್ ಉತ್ಪಾದಿಸುವ ಇದರ ಸೌರಫಲಕಗಳು ಬಿಸಿಯೇರದಿರಲಿ ಎಂದು ಕಾರಿನ ಇಂಜಿನನ್ನು ತಣಿಸುವ ರೇಡಿಯೇಟರಿನಂತೆ ಸಣ್ಣ ಕೊಳವೆಗಳಲ್ಲಿ ನೀರನ್ನು ಹರಿಬಿಟ್ಟು ತಣಿಸಲಾಗುತ್ತದೆ.
ಸೂರ್ಯನನ್ನು ಬೆದಕಲು ಹೊರಟ ಮೊದಲ ಪ್ರಯತ್ನ ಇದಲ್ಲ. ಇದಕ್ಕೂ ಮೊದಲು ನಾಸಾ ಸಂಸ್ಥೆಯೇ ಜರ್ಮನಿಯ ಹೀಲಿಯೋಸ್ 1 ಮತ್ತು ಹೀಲಿಯೋಸ್ 2 ಎನ್ನುವ ಎರಡು ಶೋಧ ನೌಕೆಗಳನ್ನು ಸುಮಾರು ನಲವತ್ತು ವರ್ಷಗಳ ಹಿಂದೆಯೇ ಹಾರಬಿಟ್ಟಿತ್ತು. ಆದರೆ ಪಾರ್ಕರ್ ಈಗ ಅವೆಲ್ಲವುಗಳಿಗಿಂತಲೂ ಮುಂದೆ ಸಾಗಿ, ಸೂರ್ಯನಿಗೆ ಬಲು ಸಮೀಪ ಹೋಗಲಿದೆ. ಬಲು ಸಮೀಪ ಎಂದರೆ ಸುಮಾರು 2.4 ಕೋಟಿ ಕಿಲೋಮೀಟರುಗಳಷ್ಟು ಸಮೀಪ ಅಷ್ಟೆ. ಅಂದರೆ ಚಂದ್ರ ಭೂಮಿಗಿರುವ ದೂರಕ್ಕಿಂತಲೂ ಸಾವಿರ ಪಟ್ಟು ದೂರದಲ್ಲಿ ಇದು ಸೂರ್ಯನನ್ನು ನೋಡುತ್ತದೆ ಅಷ್ಟೆ.
ಇಂದಿನಿಂದ ಎರಡು ವಾರಗಳವರೆಗೆ ಸೂರ್ಯಮುಖಿಯಾಗಿ ಹಾರುವ ಪಾರ್ಕರ್ ಅನಂತರ ಶುಕ್ರ ಗ್ರಹದ ಸೆಳೆತಕ್ಕೆ ಸಿಲುಕಿ ಸ್ವಲ್ಪ ನಿಧಾನಗತಿಯಲ್ಲಿ ಮುಂದುವರೆಯುತ್ತದೆ. ನಾಲ್ಕುವಾರಗಳು ಹೀಗೆ ಸಾಗಿದ ಮೇಲೆ ಸೂರ್ಯನಿಗೆ ಅತಿ ಸಮೀಪದಲ್ಲಿರುವ ಬುಧ ಗ್ರಹವನ್ನೂ ದಾಟಿ ಮುಂದುವರೆಯುತ್ತದೆ. ಅನಂತರ ಏಳು ವರ್ಷಗಳ ವರೆಗೆ ಸೂರ್ಯನ ಸುತ್ತಲೂ ನಿಧಾನವಾಗಿ ಸುತ್ತುತ್ತದೆ. ನವೆಂಬರ್ ವೇಳೆಗೆ ಇದು ಸೂರ್ಯನಿಗೆ ಸುಮಾರು 2.4 ಕೋಟಿ ಕಿಲೋಮೀಟರು ಹತ್ತಿರವಿರುತ್ತದೆ. ವಿಜ್ಞಾನಿಗಳ ಪ್ರಕಾರ ಇದೊಂದು ವಿಶೇಷ ಸೀಮೆ. ಇದರಿಂದ ಈಚೆಗೆ ಸೌರಮಾರುತ ಬಿಡು ಬೀಸಾಗಿ ಹರಿಯುತ್ತದೆ. ಇದನ್ನು ದಾಟಿ ಸೂರ್ಯನತ್ತ ಸಾಗಿದರೆ ಅಲ್ಲಿ ಅದು ಸೂರ್ಯನ ಗುರುತ್ವದ ಬಲೆಗೆ ಸಿಕ್ಕು ಬೇರೆಯೇ ರೀತಿ ವರ್ತಿಸುತ್ತದೆ.

ಪಾರ್ಕರ್ ನೌಕೆ ಸೂರ್ಯನತ್ತ. (ಚಿತ್ರ ಕೃಪೆ: ನಾಸಾ)

ಈ ಸೀಮೆಯಾಚೆ ಏನಿದೆ ಎನ್ನುವುದನ್ನು ತಿಳಿಯುವ ಕುತೂಹಲವೇ ಪಾರ್ಕರ ನೌಕೆಯನ್ನು ಹಾರಿಸಿರುವುದಕ್ಕೆ ಕಾರಣ. ಅಂದ ಹಾಗೆ ಇದೀಗ 91 ವರ್ಷ ವಯಸ್ಸಾಗಿರುವ ಯೂಜೀನ್ ಪಾರ್ಕರ್ ಎನ್ನುವ ಖಭೌತ ವಿಜ್ಞಾನಿಯ ಗೌರವಾರ್ಥ ಈ ನೌಕೆಗೆ ಪಾರ್ಕರ್ ಎನ್ನುವ ಹೆಸರನ್ನು ಇಡಲಾಗಿದೆ. 1958ರಲ್ಲಿ ಈಗ ಅಂದು ಲಭ್ಯವಿದ್ದ ಮಾಹಿತಿಗಳನ್ನು ಆಧರಿಸಿ, ಸೌರಮಾರುತ ಹೇಗೆ ಉಂಟಾಗುತ್ತದೆ? ಅದರ ಪ್ರಭಾವವೇನು? ಎಂದೆಲ್ಲ ತರ್ಕಿಸಿದ್ದರು. ಅದರ ಸತ್ಯಾಸತ್ಯತೆಯ ಸತ್ವಪರೀಕ್ಷೆಯನ್ನು ಈ ಹನುಮ ನೌಕೆ ನಡೆಸಲಿದೆ.
ಹಾಂ. ಹನುಮನೌಕೆ ಎಂದು ನಾನು ಹೇಳಿದ ಕೂಡಲೆ ನಮ್ಮ ಪುರಾಣಗಳನ್ನು ಬರೆದವರಿಗೆ ಸೂರ್ಯನ ಬಗ್ಗೆ ಅರಿವಿತ್ತು ಅಂತ ಭಾವಿಸಬೇಕಿಲ್ಲ. ಸೂರ್ಯನಿಲ್ಲದೆ ಬೆಳಕಿಲ್ಲ, ಬಿಸಿಲೂ ಇಲ್ಲ ಎನ್ನುವುದು ಬಹುಶಃ ಗೊತ್ತಿದ್ದಿರಬಹುದು. ಆದರೆ ಸೂರ್ಯನ ಉಷ್ಣತೆ ಎಷ್ಟು ಎನ್ನುವ ಊಹೆ ಕೂಡ ಇದ್ದಿರಲಿಕ್ಕಿಲ್ಲ. ಅದೊಂದು ಅನಿಲದ ಚೆಂಡು ಎನ್ನುವ ಕಲ್ಪನೆಯಂತೂ ಇರಲಿಕ್ಕೆ ಸಾಧ್ಯವೇ ಇಲ್ಲ. ಆದರೆ ಹೀಗೆ ಬೆರಗನ್ನುಂಟು ಮಾಡುವ ವಸ್ತುಗಳ ಬಗ್ಗೆ ಕಲ್ಪಿಸುವ, ಕಥೆ ಕಟ್ಟುವ ಸಾಮರ್ಥ್ಯವಂತೂ ಅವರಿಗೆ ಇತ್ತು. ಅವರಂತೆಯೇ ಪ್ರಪಂಚದ ಇನ್ನೂ ಹಲವು ಜನಾಂಗಗಳಲ್ಲಿಯೂ ಇತ್ತು.
ಏಳು ವರ್ಷಗಳ ನಂತರ ಏನಾಗಬಹುದು ಎಂದಿರಾ? ಕಾದು ನೋಡೋಣ.
ಆಕರ: ALEXANDRA WITZE, NASA aims for Sun’s corona, Vol 5 5 9 | NATURE |453-454, 2018


2. ಅಷ್ಟರೋಧಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸುಗಂಧದೆಣ್ಣೆಗಳು
ಆಸ್ಪತ್ರೆಗೆ ನಾವು ಹೋಗುವುದು ಆರೋಗ್ಯ ಸುಧಾರಿಸಲು ಎಂದಷ್ಟೆ. ಆದರೆ ಕೆಲವೊಮ್ಮೆ ಆಸ್ಪತ್ರೆಯಿಂದಲೇ ನಮಗೆ ಖಾಯಿಲೆ ಬರುವ ಸಂಗತಿಯೂ ಉಂಟು. ಆಸ್ಪತ್ರೆ ಎಂದ ಮೇಲೆ ಹಲವು ತೆರನ ರೋಗಿಗಳಿರುತ್ತಾರಷ್ಟೆ. ಇವರಲ್ಲಿ ಸೋಂಕು ರೋಗಿಗಳೂ ಇರುತ್ತಾರೆ. ಈ ರೋಗಿಗಳಲ್ಲಿರುವ ಬ್ಯಾಕ್ಟೀರಿಯಾ, ವೈರಸ್ ಅಥವಾ ಬೂಸು ಇತರರಿಗೂ ಹರಡಬಹುದು. ಹೀಗಾಗದಿರಲಿ ಎಂದು ಸಾಮಾನ್ಯವಾಗಿ ಆಸ್ಪತ್ರೆಯ ಪರಿಸರವನ್ನಷ್ಟೆ ಅಲ್ಲ, ಅಲ್ಲಿ ಬಳಸುವ ವೈದ್ಯೋಪಕರಣಗಳನ್ನೂ, ಬಟ್ಟೆ ಬರೆಗಳನ್ನೂ ಕ್ರಿಮಿನಾಶಕಗಳಿಂದ ಶುಚಿಗೊಳಿಸುತ್ತಾರೆ. ವೈದ್ಯರು ಕ್ರಿಮಿನಾಶಕವಿರುವ ನೀರಿನಲ್ಲೇ ಕೈ, ಕಾಲು ತೊಳೆದು ರೋಗಿಗಳನ್ನು ಮುಟ್ಟುತ್ತಾರೆ.
ಇಷ್ಟೆಲ್ಲ ಇದ್ದಾಗ್ಯೂ ಕೆಲವೊಮ್ಮೆ ಆಸ್ಪತ್ರೆಯಿಂದಲೇ ರೋಗಗಳು ಹರಡುವುದುಂಟು. ರಕ್ತವನ್ನು ಸೋಂಕಿ ಸೆಪ್ಟಿಕ್ಕು ಉಂಟು ಮಾಡಬಹುದು. ಶ್ವಾಸಕೋಶದೊಳಗೆ ನುಗ್ಗಿ ನ್ಯುಮೋನಿಯಾ ಮಾಡುವಂಥವು ಇವೆ. ಅಥವಾ ಚರ್ಮಕ್ಕೆ ಅಂಟಿಕೊಂಡು ಚರ್ಮರೋಗವನ್ನುಂಟು ಮಾಡುವ ಬೂಸುಗಳಿವೆ. ಇಂತಹವುಗಳಲ್ಲಿ ಬುರ್ಖೋಲ್ಡೇರಿಯಾ ಸೆಪಾಸಿಯಾ ಎನ್ನುವ ಬ್ಯಾಕ್ಟೀರಿಯಾ ಸೋಂಕು ಬಲು ಕುಖ್ಯಾತಿ ಪಡೆದಿದೆ. ಇದು ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಬಳಸುವ ಹಲವು ಪ್ರತಿಜೀವಕಗಳು ಅರ್ಥಾತ್ ಆಂಟಿಬಯಾಟಿಕ್ಕುಗಳಿಗೆ ಬೆದರುವುದೇ ಇಲ್ಲ. ಅವಕ್ಕೆಲ್ಲ ರೋಧವನ್ನು ಬೆಳೆಸಿಕೊಂಡಿರುವ ಈ ಬ್ಯಾಕ್ಟೀರಿಯಾವನ್ನು ದೂರವಿಡುವುದು ಕಷ್ಟ. ಸಿಸ್ಟಿಕ್ ಫೈಬ್ರೋಸಿಸ್ ಎನ್ನುವ ಖಾಯಿಲೆಯಿಂದ ನರಳುವ ರೋಗಿಗಳಲ್ಲಂತು ಇದರ ಹಾವಳಿ ಹೆಚ್ಚು. ಈ ರೋಗಿಗಳಲ್ಲಿ ಶ್ವಾಸಕೋಶ, ಜೀರ್ಣಾಂಗದ ಕರುಳಿನಲ್ಲಿ ಹಾಗೂ ಮೂಗಿನಲ್ಲಿ ಲೋಳೆ ಹೆಚ್ಚಾಗಿ ಕಾಣಿಸುತ್ತದೆ. ದಮ್ಮು-ಅಸ್ತಮಾದಂತೆ ಇಲ್ಲಿಯೂ ಉಸಿರಾಟಕ್ಕೆ ತೊಂದರೆ ಆಗುತ್ತದೆ. ಅದರ ಜೊತೆಗೇ ಬುರ್ಖೋಲ್ಡೇರಿಯಾ ಕೂಡಿಕೊಂಡರೆ ನ್ಯುಮೋನಿಯಾದಂತೆ ಮಾರಕವೂ ಆಗಬಹುದು. ಇಂತಹ ಬ್ಯಾಕ್ಟೀರಿಯಾವನ್ನು ಹತ್ತಿಕ್ಕಲು ಸುಗಂಧದ್ರವ್ಯಗಳು ನೆರವಾಗಬಲ್ಲುವಂತೆ. ಹಾಗೆಂದು ಇಂಗ್ಲೆಂಡಿನ ಸಂಡರ್ಲ್ಯಾಂಡ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಮಾರ್ಕ ಡೇವೀಸ್ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ. ಇವರ ಸಂಶೋಧನೆಯ ವಿವರಗಳನ್ನು ಪಿಎಲ್ಓಎಸ್ ಒನ್ ಪತ್ರಿಕೆ ಕಳೆದ ವಾರ ವರದಿ ಮಾಡಿದೆ.

ಬುರ್ಖೋಲ್ಡೇರಿಯಾದ ಒಂದು ಬಗೆ (ಕೃಪೆ: ವೀಕಿಪೀಡಿಯಾ)

ಡೇವೀಸ ಮತ್ತು ಸಂಗಡಿಗರು 43 ಸಿಸ್ಟಿಕ್ ಫೈಬ್ರೋಸಿಸ್ ರೋಗಿಗಳ ಉಗುಳಿನಿಂದ ಈ ಬೆಕ್ಟೀರಿಯಾದ 51 ಬಗೆಗಳನ್ನು ಪ್ರತ್ಯೇಕಿಸಿ ಅವುಗಳ ಡಿಎನ್ಎಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಇವುಗಳೆಲ್ಲವೂ ಕೂಡ ನಾವು ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಬಳಸುವ ಎಂಟು ಔಷಧಗಳಿಗೆ ಜಗ್ಗದಂತಹ ರೋಧಿ ತಳಿಗಳು.ಜೊತೆಗೆ ಮೂಲತಃ ಸಸ್ಯಗಳಲ್ಲಿ ರೋಗವನ್ನುಂಟು ಮಾಡುತ್ತಿದ್ದ ಬ್ಯಾಕ್ಟೀರಿಯಾಗಳಿಂದ ಜನಿಸಿದಂಥವು. ನೋಡಲು ಒಂದೇ ತೆರನಾಗಿದ್ದರೂ ಇವುಗಳ ಡಿಎನ್ಎಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.
ಈ ಬೆಕ್ಟೀರಿಯಾಗಳನ್ನು ಆಂಟಿಬಯಾಟಿಕ್ಕುಗಳಿರುವ ಆಹಾರದಲ್ಲಿ ಬೆಳೆಸಿ ನೋಡಿದರು. ಆಂಟಿಬಯಾಟಿಕ್ಕುಗಳಿದ್ದಾಗ್ಯೂ ಎಷ್ಟು ಕಡಿಮೆ ಸಂಖ್ಯೆಯಲ್ಲಿ ಬಿತ್ತಿದರೆ ಇವು ಹುಲುಸಾಗಿ ಬೆಳೆಯುತ್ತವೆ ಎಂದು ಗಮನಿಸಿದರು. ಈ ಸಂಖ್ಯೆ ಕಡಿಮೆ ಇದ್ದಷ್ಟೂ ಇವುಗಳು ಆಂಟಿಬಯಾಟಿಕ್ಕುಗಳಿಗೆ ಜಗ್ಗುವುದಿಲ್ಲ ಎನ್ನುವುದು ವೇದ್ಯ. ಈ ಪರೀಕ್ಷೆಯಿಂದ ಔಷಧಗಳಿಗೆ ಜಗ್ಗದವುಗಳನ್ನು ಗುರುತಿಸಿ, ಅವುಗಳನ್ನು ಸುಗಂಧದೆಣ್ಣೆ ಹನಿಸಿದ ಆಹಾರದೊಳಗೆ ಇಟ್ಟು ಕೃಷಿ ಮಾಡಿದರು. ಅಲ್ಲಿ ಇವು ಬೆಳೆಯುತ್ತವೆಯೇ? ಎಷ್ಟು ಹುಲುಸಾಗಿ ಬೆಳೆಯುತ್ತವೆ? ಎಷ್ಟು ಪ್ರಮಾಣದ ಸುಗಂಧದೆಣ್ಣೆಯನ್ನು ತಾಳಿಕೊಳ್ಳುತ್ತವೆ ಎಂದು ಪರೀಕ್ಷಿಸಿದರು. ಅಷ್ಟೇ ಅಲ್ಲ. ಬಳಸಿದ ಸುಗಂಧದೆಣ್ಣೆಗಳಲ್ಲಿ ಯಾವ ರಾಸಾಯನಿಕಗಳಿವೆ ಎಂದೂ ಗುರುತಿಸಿದರು. ಅವುಗಳಲ್ಲಿ ಯಾವುದು ಇವನ್ನು ಕೊಲ್ಲುತ್ತಿರಬಹುದು ಎಂದೂ ಖಚಿತಪಡಿಸಿಕೊಂಡಿದ್ದಾರೆ. ಒಟ್ಟು ಹತ್ತೊಂಬತ್ತು ಸುಗಂಧದೆಣ್ಣೆಗಳ ಪರಿಣಾಮವನ್ನು ಇವರು ಪರೀಕ್ಷಿಸಿದ್ದಾರೆ. ಇವುಗಳಲ್ಲಿ ಲ್ಯಾವೆಂಡರ್, ಕಿತ್ತಳೆ, ಮೂಸಂಬಿಯ ಸಿಪ್ಪೆಯ ಎಣ್ಣೆ, ಮತ್ತಿ ಮರದ ಎಣ್ಣೆ, ಟೀ ಟ್ರೀ ಎನ್ನುವ ಮರದ ಎಣ್ಣೆ, ಲವಂಗ, ಸೋಂಪು, ಜೀರಿಗೆ, ಕರಿಮೆಣಸು ಮುಂತಾದುವುಗಳಿವೆ. ಇವುಗಳಲ್ಲಿ ಲ್ಯಾವೆಂಡರ್, ಪುದೀನ, ಲೆಮನ್ ಗ್ರಾಸ್ (ನಿಂಬೆಹುಲ್ಲು), ಟೀಟ್ರೀ ಎಣ್ಣೆ ಹಾಗೂ ಮಾರ್ಜೊರಿನಾ ಎನ್ನುವ ಗಿಡದ ಎಣ್ಣೆಗಲು ಎಲ್ಲ 51 ಬಗೆಯ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಶಕ್ತವಾಗಿದ್ದುವು. ಇವುಗಳಲ್ಲಿರುವ ಟರ್ಪಿನೆನ್-4-ಓಲ್ ಮತ್ತು ಜೆರಾನಿಯಾಲ್ ಎನ್ನುವ ಆಲ್ಕೊಹಾಲುಗಳು ಬೆಕ್ಟೀರಿಯಾಗಳ ಕೋಶಪೊರೆಯನ್ನು ಹರಿದು ಅವನ್ನು ಕೊಲ್ಲುತ್ತವೆ ಎಂದು ಇವರು ಗುರುತಿಸಿದ್ದಾರೆ.
ಈ ಎಣ್ಣೆಗಳನ್ನು ಶುಚಿಗೊಳಿಸಲು ಹಾಗೂ ಚಿಕಿತ್ಸೆಯಲ್ಲಿ ಬಳಸಿದರೆ ಬುರ್ಖೋಲ್ಡೇರಿಯಾದ ಸೋಂಕಿನಿಂದ ಬಿಡುಗಡೆ ಪಡೆಯಬಹುದು ಎನ್ನುವ ಆಸೆಯನ್ನು ಮಾರ್ಕ ಡೇವೀಸ್ ತಂಡ ಪ್ರಕಟಿಸಿದೆ.
ಆಕರ: Vasireddy L, Bingle LEH, Davies MS (2018) Antimicrobial activity of essential oils against multidrug-resistant clinical isolates of the Burkholderia cepacia complex. PLoS ONE 13(8): e0201835

ಲಿಂಕ್ : . https://doi.org/10.1371/journal. pone.0201835


3. ಗಂಗೆಯ ಮೂರು ಆಯಾಮದ ಚಿತ್ರ
ನದಿ ಮೂಲ, ಋಷಿ ಮೂಲವನ್ನು ಹುಡುಕಬಾರದು ಎಂದು ಹೇಳುವುದನ್ನು ಕೇಳಿದ್ದೇವೆ. ಅವನ್ನು ಹುಡುಕುವುದು ಕಷ್ಟ ಎನ್ನುವ ಕಾರಣಕ್ಕೆ ಬಹುಶಃ ಹಿರಿಯರು ಈ ಮಾತುಗಳನ್ನು ಹೇಳಿರಬಹುದು. ಇಂದು ಬಹುತೇಕ ಎಲ್ಲ ನದಿಗಳ ಮೂಲವನ್ನು ಹುಡುಕಿಯಾಗಿದೆ. ಅತಿ ದುರ್ಗಮ ಸ್ಥಳವನ್ನೂ ವಿಮಾನಗಳಿಂದಲೋ, ಇತ್ತೀಚೆಗೆ ಡ್ರೋನುಗಳನ್ನು ಬಳಸಿಯೋ ಹುಡುಕಿದ್ದಾರೆ. ಆದರೆ ಇವುಗಳಿಂದಲೂ ಆಗದ ಕೆಲಸ ಎಂದರೆ ನದಿಗಳ ಆಳ, ಹರವನ್ನು ಹಿಡಿಯುವ ಕೆಲಸ. ನಮ್ಮ ಗಂಗಾ ನದಿಯನ್ನೇ ತೆಗೆದುಕೊಳ್ಳಿ. ಗಂಗೋತ್ರಿಯಲ್ಲಿ ಜನಿಸಿದ ಇದು ನಿಧಾನವಾಗಿ ಬಯಲಿಗೆ ಹರಿದು, ಅಲ್ಲಿ ಯಮುನೆಯಂತಹ ಹಲವು ಉಪನದಿಗಳ ಜೊತೆಗೂಡಿ ಬೃಹತ್ತಾಗಿ ಬೆಂಗಾಲಕೊಲ್ಲಿಯನ್ನು ಸೇರುತ್ತದೆ. ಇದರ ಮೂಲವೂ ಗೊತ್ತು. ಗಮ್ಯವೂ ಗೊತ್ತು. ಆದರೆ ಈ ನದಿಯ ಆಳ, ಅಗಲಗಳು ನಮಗೆ ಇನ್ನೂ ಸರಿಯಾಗಿ ಪರಿಚಯವಿಲ್ಲ. ಇದೋ ಇದನ್ನು ಅಳೆಯುವ ಕೆಲಸವನ್ನು ಈಗ ಭಾರತೀಯ ಸರ್ವೇಕ್ಷಣ ಸಂಸ್ಥೆ ಅರ್ಥಾತ್ ಸರ್ವೆ ಆಫ್ ಇಂಡಿಯಾ ಮಾಡಲು ಹೊರಟಿದೆಯಂತೆ. ಗಂಗೋತ್ರಿಯಿಂದ, ಬಂಗಾಲಕೊಲ್ಲಿಯವರೆಗೂ ಗಂಗೆಯ ಮೂರು ಆಯಾಮದ ಚಿತ್ರವನ್ನು ತೆಗೆದು, ಎಲ್ಲೆಲ್ಲಿ ಗಂಗೆ ಎಷ್ಟೆಷ್ಟು ಆಳವಿದೆ, ಎಷ್ಟೆಷ್ಟು ಅಗಲವಿದೆ ಎಂದು ಚಿತ್ರಿಸುವ ಸಾಹಸವನ್ನು ಸರ್ವೆ ಆಫ್ ಇಂಡಿಯಾ ಮಾಡಲಿದೆ.

ಅದು ಸಾಧ್ಯವೇ ಎಂದಿರಾ? ಸಾಧ್ಯವಂತೆ. ಇದಕ್ಕಾಗಿ ಲಿಡಾರ್ ತಂತ್ರಗಳನ್ನು ಸರ್ವೆ ಬಳಸಲಿದೆ. ಲಿಡಾರ್ ಎಂದರೆ ಒಂದು ಬಗೆಯ ರಾಡಾರ್. ರಾಡಾರ್ ಚಿತ್ರಗಳಲ್ಲಿ ರೇಡಿಯೊ ತರಂಗಗಳನ್ನು ಬೀಸಿ, ಅವುಗಳ ಪ್ರತಿಫಲನವನ್ನು ಗಣಿಸಿ ಚಿತ್ರವನ್ನು ರಚಿಸುತ್ತಾರೆ. ಲಿಡಾರಿನಲ್ಲಿ ರೇಡಿಯೊತರಂಗಗಳ ಬದಲಿಗೆ ಲೇಸರ್ ಕಿರಣಗಳು ಬಳಕೆಯಾಗುತ್ತವೆ. ಆದರೆ ಈ ಕಿರಣಗಳು ನೆಲವನ್ನು ತಾಕಿ ಅಲ್ಲಿಂದ ಪ್ರತಿಫಲಿಸುತ್ತವೆ. ನೀರಿನಲ್ಲಿ ನುಸುಳಿ ಹಾಯುತ್ತವೆ. ಅರ್ಥಾತ್, ನದಿಯ ಮೇಲೆ ಇದನ್ನು ಬೀಸಿದರೆ ಈ ತರಂಗಗಳು ನೀರಿನ ಆಳಕ್ಕೆ ಹೋಗಿ, ಅಲ್ಲಿರುವ ನೆಲವನ್ನು ತಾಕಿ, ಪ್ರತಿಫಲಿಸಿ, ಮರಳಿ ನೀರನ್ನೇ ಹಾದು ಮೇಲ್ಮೈಗೆ ಹಿಂದುರುಗುತ್ತವೆ. ಅಲ್ಲಿ ಇವನ್ನು ಹಿಡಿದರೆ, ನದಿ ತಳದ ಚಿತ್ರ ಸಿಕ್ಕಿದಂತೆ. ಅಲ್ಲಿರುವ ಎಲ್ಲ ಹಳ್ಳ, ಕೊಳ್ಳ, ಸೀಳು, ಉಬ್ಬುಗಳನ್ನೂ ಸ್ಪಷ್ಟವಾಗಿ ಚಿತ್ರಿಸಬಹುದು.

ಕಾಶಿಯ ಗಂಗೆ

ಇದಕ್ಕಾಗಿ ಸರ್ವೆ ಆಫ್ ಇಂಡಿಯಾ ಹಲವಾರು ಸಣ್ಣ ವಿಮಾನಗಳನ್ನು ಬಳಸಲಿದೆ. ಈ ವಿಮಾನಗಳು ಗಂಗಾ ನದಿಯ ಉದ್ದಕ್ಕೂ ಹಾರಾಡಲಿವೆ. ದಿನದಲ್ಲಿ ಕೇವಲ ಒಂದು ಮೀಟರು ಉದ್ದದ ಗಂಗೆಯ ಮೇಲೆ, ಉದ್ದಗಲಕ್ಕೂ ನಿಧಾನವಾಗಿ ಹಾರಿ, ಲೇಸರು ಬೀಸಿ, ಚಿತ್ರಗಳನ್ನು ತೆಗೆಯಲಿವೆ. ಈ ಚಿತ್ರಗಳನ್ನು ಒಗ್ಗೂಡಿಸಿ, ಇಡೀ ಗಂಗೆಯ ಒಡಲ ಒಳಚಿತ್ರವನ್ನು ವಿಸ್ತಾರವಾಗಿ ಬಿಡಿಸಬಹುದು. ಅಷ್ಟೇ ಅಲ್ಲ. ಎಲ್ಲಿ ಏಕೆ ಗಂಗೆಯ ಹರಿವು ನಿಧಾನವಾಗುತ್ತದೆ, ಎಲ್ಲಿ ಹರಿವಿಗೆ ಎಂತಹ ತೊಡಕುಗಳಿವೆ ಎನ್ನುವುದಷ್ಟೆ ಅಲ್ಲದೆ, ಗಂಗೆಯ ದಡಗಳು ಎಲ್ಲಿ ಕುಸಿಯುತ್ತಿವೆ, ಎಲ್ಲಿ ಗಟ್ಟಿಯಾಗಿವೆ ಎನ್ನುವುದೂ ತಿಳಿಯುತ್ತದೆ. ಜೊತೆಗೇ ಎಲ್ಲಿ ಗಂಗೆಯ ಒಡಲಿಗೆ ಯಾವ ಕಸ ಬಂದು ಕೂಡಿದೆ ಎನ್ನುವುದೂ ಸ್ಪಷ್ಟವಾಗುತ್ತದೆ. ಇಷ್ಟನ್ನೂ ಎಂಟು ತಿಂಗಳೊಳಗೆ ಮಾಡುವ ಆಲೋಚನೆ ಇದೆ.

ಒಟ್ಟಾರೆ ಇದೊಂದು ಬಗೆಯಲ್ಲಿ ಗಂಗೆಗೇ ಸಿಟಿ ಸ್ಕ್ಯಾನ್ ಆದಂತೆ ಎನ್ನಬಹುದು. ಏನೋ ಇದಾದರು ನಮ್ಮ ಗಂಗೆಯ ಆರೋಗ್ಯವನ್ನು ಕಾಯಲು ನೆರವಾಗುತ್ತದೆ ಎಂದು ಹಾರೈಸೋಣ.

ಆಕರ: Lou Del Bello, Indian scientists race to map Ganges river in 3D | VOL 560 | NATURE | 149
ಲಿಂಕ್: https://www.nature.com/magazine-assets/d41586-018-05872-w/d41586-018-05872-w.pdf


4. ತುಂತುರು ಸುದ್ದಿಗಳು

• ನಮ್ಮ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳಲ್ಲಿ ಕೆಲವು ಹೊಟ್ಟೆ ನೋವನ್ನುಂಟು ಮಾಡುತ್ತವೆ. ಇನ್ನು ಕೆಲವು ನಮ್ಮ ದೇಹಕ್ಕೆ ಬೇಕಾದ ಸತ್ವಗಳನ್ನು ಒದಗಿಸುತ್ತವೆ ಎನ್ನುವುದಷ್ಟೆ ಗೊತ್ತಿತ್ತು. ಆದರೆ ಇವುಗಳಲ್ಲಿ ಕೆಲವು ನಮ್ಮ ಜೀರ್ಣಾಂಗದ ಪ್ರಮುಖ ಅಂಶವಾದ ಪಿತ್ತರಸದ ಚಟುವಟಿಕೆಯನ್ನೂ ಬದಲಿಸುತ್ತವೆಯಂತೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದಿನ ಜಾಣಸುದ್ದಿಯಲ್ಲಿ ಕೇಳುವಿರಿ. .
• ಇತ್ತೀಚೆಗೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೆಕ್ಕೆ ಜೋಳದ ಬೆಳೆಯನ್ನು ಕಾಡುತ್ತಿರುವ ಕಾಂಡಕೊರಕ ಹುಳುಗಳು ಭಾರತೀಯ ತಳಿಗಳಲ್ಲ. ವಿದೇಶೀ ಹುಳುಗಳು ಅದು ಹೇಗೋ ಬಂದು ಸೇರಿಕೊಂಡಿವೆ. ಇವು ಭತ್ತ, ಜೋಳ ಹಾಗೂ ಇತರೆ ಬೆಳೆಗಳನ್ನೂ ತಾಕಿ ಹಾಳುಮಾಡಬಲ್ಲವು ಎಂಬ ಎಚ್ಚರಿಕೆಯನ್ನು ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನೀಡಿದ್ದಾರೆ. .
• 1946ರಲ್ಲಿ ದಕ್ಷಿಣ ಆಸ್ಟ್ರೇಲಿಯಾದ ಎಡಕಾರನ್ ಗುಡ್ಡದಲ್ಲಿ ದೊರೆತ ಸಸ್ಯಗಳ ಅವಶೇಷದಂತೆ ಕಾಣುವ ಜೀವಿ ಸಸ್ಯವಾಗಿರಲಿಲ್ಲ. ಸುಮಾರು ಐವತ್ತು ಕೋಟಿ ವರ್ಷಗಳ ಹಿಂದೆ ಬದುಕಿದ್ದ ಇದು ಒಂದು ಪ್ರಾಣಿಯಾಗಿತ್ತು. ಆದರೆ ಅಂತಹ ಬೇರೊಂದು ಪ್ರಾಣಿ ಆಗಲೂ ಇರಲಿಲ್ಲ. ಈಗಲೂ ಇಲ್ಲ. ಅಂತಹ ವಿಶೇಷ ರಚನೆ, ಬದುಕಿನ ಪ್ರಾಣಿಯಾಗಿತ್ತು ಎಂದು ಜಪಾನು, ಇಂಗ್ಲೆಂಡು ಹಾಗೂ ಚೀನಾದ ವಿಜ್ಞಾನಿಗಳ ತಂಡವೊಂದು ವರದಿ ಮಾಡಿದೆ.
• ಕುಲುಮೆಗಿಟ್ಟರೂ ಬೆಂಕಿ ಹೊತ್ತದ ಕೃತಕ ಮರವನ್ನು ಸೃಷ್ಟಿಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದಿನ ಜಾಣಸುದ್ದಿಯಲ್ಲಿ ಕೇಳುವಿರಿ.


5. ಹರಳೆಣ್ಣೆ ಮತ್ತು ತೇಲುವ ಅಯಸ್ಕಾಂತ
ವಿಜ್ಞಾನ ಎಂದರೆ ವ್ಯವಸ್ಥಿತ ಅಧ್ಯಯನ ಎಂದು ಹೇಳುವ ಮಾತಿದೆ. ಆದರೆ ಎಲ್ಲ ಸಂದರ್ಭದಲ್ಲಿಯೂ ಇದು ಸತ್ಯವಲ್ಲ. ಎಷ್ಟೋ ಬಾರಿ ಆಕಸ್ಮಿಕವಾಗಿಯೇ ಬಲು ಮುಖ್ಯವಾದ ಶೋಧವೂ ಆಗಿದ್ದಿದೆ. ಬಹಳ ಹಿಂದೆಯೇ ದ್ರವಗಳ ಮೇಲೊತ್ತುವ ಬಲದ ಬಗ್ಗೆ, ನಾವೇಕೆ ನೀರಿನಲ್ಲಿ ತೇಲುತ್ತೇವೆ ಎನ್ನುವ ಬಗ್ಗೆ ಆರ್ಕಿಮಿಡೀಸ್ ಕಂಡುಕೊಂಡ ಬಗೆಯೂ ಆಕಸ್ಮಿಕವಾಗಿತ್ತು. ಬೆಂಜೀನಿನ ವರ್ತುಲಾಕಾರದ ರಚನೆಯ ಬಗ್ಗೆ ಕೆಕ್ಯುಲೆಗೆ ಕನಸಿನಲ್ಲಿ ಜ್ಞಾನೋದಯವಾಯಿತು ಎನ್ನುವುದು ಇದೆ. ಆಕಸ್ಮಿಕ ಶೋಧಗಳು ಎಂದಾಕ್ಷಣ ಎಲ್ಲರಿಗೂ ಇದು ಆಕಸ್ಮಿಕವಾಗಿ ದೊರಕುವುದಿಲ್ಲ. ಕೂಲಂಕಷವಾಗಿ ಗಮನವಿಟ್ಟು ನೋಡುವವರಿಗಷ್ಟೆ ಇದು ಕಾಣಿಸುತ್ತದೆ ಎಂದೂ ಹೇಳುತ್ತಾರೆ. ಅಂತಹುದೊಂದು ಆಕಸ್ಮಿಕ ಶೋಧದ ಬಗ್ಗೆ ಫಿಸಿಕಲ್ ರಿವ್ಯೂ ಲೆಟರ್ಸ್ ಪತ್ರಿಕೆ ವರದಿ ಮಾಡಿದೆ. ಪ್ರಯೋಗಾಲಯದಲ್ಲಿ ದ್ರವಗಳನ್ನು ಕದಡಲು ಬಳಸುವ ಮ್ಯಾಗ್ನೆಟಿಕ್ ಸ್ಟರ್ರರಿನಲ್ಲಿರುವ ಪುಟ್ಟ ಮ್ಯಾಗ್ನೆಟ್ಟು ಇದ್ದಕ್ಕಿದ್ದ ಹಾಗೆ ತೇಲುವುದು ಏಕೆ? ಹೇಗೆ ಎನ್ನುವ ಕೌತುಕವನ್ನು ಇಂಗ್ಲೆಂಡಿನ ನಾಟಿಂಗ್ ಹ್ಯಾಂ ವಿಶ್ವವಿದ್ಯಾನಿಲಯದ ಡೇವಿಡ್ ಫೇರ್ ಹರ್ಸ್ಟ್ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ. ನೀರಿನ ಬದಲಿಗೆ ಹರಳೆಣ್ಣೆಯನ್ನು ಬಳಸಿದರೆ ಈ ಮ್ಯಾಗ್ನೆಟ್ಟು ನೆಲಬಿಟ್ಟು ಮೇಲೆದ್ದು ಗಿರಕಿ ಹೊಡೆಯುತ್ತಲೇ ಗಿರಗಿರನೆ ತಿರುಗುತ್ತದೆ ಎಂದು ಇವರು ನಿರೂಪಿಸಿದ್ದಾರೆ.

ಸ್ಟರರ್ ಮತ್ತು ಒಳಗಿರುವ ಫ್ಲೀ (ಚಿಗಟ)

ಮ್ಯಾಗ್ನೆಟಿಕ್ ಸ್ಟರರ್ ಎಂದರೆ ಇನ್ನೇನಲ್ಲ. ಇದೊಂದು ಪುಟ್ಟ ಯಂತ್ರ. ಯಂತ್ರದೊಳಗೆ ಒಂದು ತಿರುಗುವ ವಿದ್ಯುತ್ ಕಾಂತವಿರುತ್ತದೆ. ಈ ಯಂತ್ರದ ಮೇಲೆ ಪಾತ್ರೆ ಇಟ್ಟು, ಅದರೊಳಗೆ ಪುಟ್ಟ ಅಯಸ್ಕಾಂತವನ್ನು ಹಾಕಿ, ಯಂತ್ರವನ್ನು ಚಾಲಿಸಿದರೆ, ಆ ಅಯಸ್ಕಾಂತ ಗಿರಗಿರನೆ ತಿರುಗುತ್ತದೆ. ಪಾತ್ರೆಯೊಳಗೆ ದ್ರವವಿದ್ದರೆ ಇದು ಗಿರಗಿರನೆ ತಿರುಗುವುದರಿಂದ ದ್ರವವನ್ನು ಕದಡಿದಂತೆ ಆಗುತ್ತದೆ. ಈ ಪುಟ್ಟ ಅಯಸ್ಕಾಂತವನ್ನು ವಿಜ್ಞಾನಿಗಳು ಪ್ರೀತಿಯಿಂದ ಫ್ಲೀ ಅರ್ಥಾತ್ ಚಿಗಟ ಎನ್ನುವ ಅಡ್ಡ ಹೆಸರಿನಿಂದ ಕರೆಯುತ್ತಾರೆ. ಒಮ್ಮೆ ಹೀಗೆ ದ್ರವವನ್ನು ಕದಡುವಾಗ ಈ ಚಿಗಟ ತುಸು ಮೇಲೆ ನೀರಿನಲ್ಲಿ ತೇಲಿದಂತೆ ತೋರಿತಂತೆ. ಇದು ಆಕಸ್ಮಿಕವಾಗಿ ಆಯಿತೋ, ಅಥವಾ ಅದರಲ್ಲೇನಾದರೂ ನಿಯಮವಿರಬಹುದೋ ಎಂದು ಕುತೂಹಲಗೊಂಡ ಫೇರ್ಹರ್ಸ್ಟ ಹಲವು ಪ್ರಯೋಗಗಳನ್ನು ಕೈಗೊಂಡಿದ್ದಾರೆ. ದ್ರವಗಳನ್ನು ಬದಲಿಸಿ, ಅಯಸ್ಕಾಂತಗಳನ್ನು ಬದಲಿಸಿದ್ದಾರೆ. ಸ್ಟರರಿನ ವಿದ್ಯುತ್ ಕಾಂತದ ದಿಕ್ಕನ್ನೂ ಬದಲಿಸಿ ಗಮನಿಸಿದ್ದಾರೆ. ಇವೆಲ್ಲ ಸಂದರ್ಭದಲ್ಲಿಯೂ ಚಿಗಟದ ಚಲನೆ ಹೇಗಿತ್ತು ಎಂದು ಚಲನಚಿತ್ರಗಳನ್ನೂ ತೆಗೆದಿದ್ದಾರೆ. ಅನಂತರ ಪರಿಶೀಲಿಸಿ, ಲೆಕ್ಕ ಹಾಕಿ ಯಾವ್ಯಾವ ಬಲಗಳು ಇದರ ಚಲನೆಯನ್ನು ಪ್ರಭಾವಿಸಿರಬಹುದು ಎಂದೂ ಲೆಕ್ಕ ಹಾಕಿದ್ದಾರೆ.
ಹರಳೆಣ್ಣೆ ಹಾಕಿದಾಗ ಚಿಗಟ ಸರಾಗವಾಗಿ ಮೇಲೆದ್ದು, ಯೋಗ ಸಾಧನೆ ಮಾಡುತ್ತಿರುವಂತೆ ತೇಲುತ್ತಲೇ ಗಿರಗಿರನೆ ತಿರುಗಿತಂತೆ. ಅಷ್ಟೇ ಅಲ್ಲ. ಮೊದಲು ಅಂಚಿನಲ್ಲಿ ಇದ್ದದ್ದು ಕ್ರಮೇಣ ಪಾತ್ರೆಯ ನಡುವಿಗೆ ಬಂದು ಅಲ್ಲೇ ಗಿರಗಿರನೆ ಸುತ್ತಿತಂತೆ. ಹಾಗೆಯೇ ಒಮ್ಮೆ ಇತ್ತ, ಒಮ್ಮೆ ಅತ್ತ ವಾಲಾಡುತ್ತಿತ್ತಂತೆ. ಇವೆಲ್ಲಕ್ಕೂ ಫಿಸಿಕ್ಸ್ ನಿಯಮಗಳೇ ಕಾರಣ. ಹರಳೆಣ್ಣೆಯಂತಹ ಗಟ್ಟಿ, ಅಂಟಿನಂತಹ ದ್ರವದಲ್ಲಿ ತಿರುಗುವುದು ಸರಾಗವಾಗದ್ದರಿಂದ, ಒಟ್ಟು ಬಲ ಚಿಗಟವನ್ನು ಮೇಲೆತ್ತುತ್ತದೆ. ನೀರಿನಲ್ಲಿ ಅದು ಹಾಗಾಗದು ಎಂದು ಇವರು ಹೇಳುತ್ತಾರೆ.
ಅದೇನೋ? ಒಟ್ಟಾರೆ ಆಕಸ್ಮಿಕವಾಗಿ ಕಂಡದ್ದೂ ಕೂಡ ಹೊಸ ನಿಯಮಗಳನ್ನು ಅರಿವಿಗೆ ತರಬಹುದು ಎನ್ನುವುದಷ್ಟೆ ಅರ್ಥವಾಯಿತು ಎನ್ನಬಹುದು. ಅಲ್ಲವೇ?
ಆಕರ: Scrutton Alvarado N, Stevenson TJ. 2018 Appetitive information seeking behaviour reveals robust daily rhythmicity for Internet-based food-related keyword searches. R. Soc. open sci. 5: 72080.
ಲಿಂಕ್: http://dx.doi.org/10.1098/rsos.172080


6. ಜಾಣಪ್ರಶ್ನೆ


ಈ ಬಾರಿ ಜಾಣಪ್ರಶ್ನೆ ಒಂದು ಚಿತ್ರ. ಗೆಳೆಯ ಬಾಸರಕೋಡು ಒಂದು ಚಿತ್ರವನ್ನು ಕಳಿಸಿದ್ದರು. ನೂರಾರು ಪುಟ್ಟ ಹುಳುಗಳು ಒಂದೆಡೆ ಮುದ್ದೆಯಾಗಿದ್ದುವು. ಇವು ಯಾವ ಜೀವಿ? ವಿಷವೇ? ಇದ್ದಕ್ಕಿದ್ದ ಹಾಗೆ ಕಂಡಿವೆಯಲ್ಲ? ಎಲ್ಲಿಂದ ಬಂದುವು ಎನ್ನುವ ಪ್ರಶ್ನೆಗಳಿದ್ದುವು. ಚಿತ್ರಗಳನ್ನು ನೋಡಿದ ಪ್ರೊಫೆಸರ್ ಕೊಪ್ಪರ್ ಮತ್ತು ಪ್ರೊಫೆಸರ್ ಹೆಗಡೆ ಇದು ನಾವು ಮಿಲಿಪೀಡ್ ಎಂದು ಕರೆಯುವ ಜಂತುಗಳ ಜಾತಿಗೆ ಸೇರಿದುವು. ಮಳೆ ಹೆಚ್ಚಿರುವ ಪ್ರದೇಶಗಳಲ್ಲಿ, ಮಳೆಗಾಲದಲ್ಲಿ ಕಾಣಿಸುತ್ತವೆ. ಒಟ್ಟಿಗೇ ನೂರಾರು ಮೊಟ್ಟೆಗಳನ್ನು ಇಟ್ಟು ಮರಿಯಾಗುತ್ತವೆ. ನಿರುಪದ್ರವಿಗಳು. ಆದರೆ ಜೀವಜಗತ್ತಿನಲ್ಲಿ ಬಲು ಪ್ರಮುಖವಾದಂತವು ಎಂದು ತಿಳಿಸಿದ್ದರು. ಜೂಲಿಡ್ ಎನ್ನುವ ವರ್ಗಕ್ಕೆ ಸೇರಿದ ಸಂಧಿಪದಿ ಅಥವಾ ಆರ್ತ್ರೊಪೋಡಾ ಜೀವಿಗಳು ಎಂದು ತಿಳಿಸಿದ್ದರು. ಇವುಗಳಿಗೆ ಒಂದೊಂದು ಕಡೆ ಒಂದೊಂದು ಹೆಸರಿದೆ. ಚಕ್ಕುಲಿ ಹುಳು ಎಂದು ಪ್ರೊ. ಹೆಗಡೆ ತಿಳಿಸಿದ್ದರು. ಈ ಚಿತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸಿ ಅವರೇನು ಹೆಸರು ಹೇಳುತ್ತಾರೆ ಕೇಳೋಣ ಎಂದಿದ್ದೆ. ಇದೋ ಇಂಗ್ಲೀಷು ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿನಿಯ ಹೇಳಿಕೆಯನ್ನು ಕಳಿಸಿದ್ದಾರೆ. ಬನ್ನಿ ಅವಳೇನು ಹೇಳುತ್ತಾಳೆ ಕೇಳೋಣ.


7. ಜಾಣನುಡಿ


ಆಗಸ್ಟ್ 12, 1919
ಖಭೌತವಿಜ್ಞಾನಿ, ಇಸ್ರೋ ಸಂಸ್ಥೆಯ ಸಂಸ್ಥಾಪಕ ವಿಕ್ರಂ ಸಾರಾಭಾಯಿ ಜನಿಸಿದ ದಿನ. ಅಹಮದಾಬಾದಿನ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ವಿಕ್ರಂ ವ್ಯಾಪಾರವನ್ನು ಬಿಟ್ಟು ವಿಜ್ಞಾನವನ್ನು ಒಪ್ಪಿಕೊಂಡ ವ್ಯಕ್ತಿ. ಸರ್. ಸಿ. ವಿ. ರಾಮನ್ನರ ಬಳಿ ಶಿಷ್ಯನಾಗಿ ಉನ್ನತ ವಾಯುಮಂಡಲದಲ್ಲಿ ರೇಡಿಯೊ ತರಂಗಗಳು ಹಾಗೂ ಇತರೆ ವಿಕಿರಣಗಳ ಬಗ್ಗೆ ವ್ಯಾಸಂಗ ಮಾಡಿದರು. ತದನಂತರ ಸ್ವತಂತ್ರ ಭಾರತದಲ್ಲಿ ವಿಜ್ಞಾನದ ಮುನ್ನಡೆಗೆ ಅಂತರಿಕ್ಷ ವಿಜ್ಞಾನ ಹಾಗೂ ತಂತ್ರಜ್ಞಾನ ಅವಶ್ಯಕವೆಂದು ವಾದಿಸಿ, ಅದಕ್ಕಾಗಿ ಸಂಸ್ಥೆಗಳನ್ನು ಸ್ಥಾಪಿಸಿದರು.

ಇಂದು ಜಗತ್ತಿನಲ್ಲಿ ಭಾರತಕ್ಕೆ ತನ್ನ ಬಾಹ್ಯಾಕಾಶ ಸಂಶೋಧನೆ ಹಾಗೂ ಸಾಹಸಗಳಿಂದ ಗೌರವವನ್ನ ತಂದಿರುವ ಇಸ್ರೋ ಸಂಸ್ಥೆಯ ಸ್ಥಾಪಕ. ಮೊತ್ತ ಮೊದಲ ನಿರ್ದೇಶಕರು ಕೂಡ. ಇಸ್ರೊ ಸಂಸ್ಥೆ ಇವರ ನೆನಪಿನಲ್ಲಿ ಹಲವು ಕಾರ್ಯಕ್ರಮಗಳನ್ನು ಯೋಜಿಸುತ್ತದೆ. ಅಲ್ಲದೆ ತಿರುವನಂತಪುರದಲ್ಲಿರುವ ಸಂಶೋಧನಾ ಸಂಸ್ಥೆಗೆ ಇವರ ಹೆಸರನ್ನೇ ಇಟ್ಟಿದೆ.
—-
ಇದು ಇಂದಿನ ಜಾಣಸುದ್ದಿ
ರಚನೆ ಮತ್ತು ಪ್ರಸ್ತುತಿ : ಕೊಳ್ಳೇಗಾಲ ಶರ್ಮ. ಜಾಣಸುದ್ದಿ ಕುರಿತ ಸಲಹೆ, ಸಂದೇಹಗಳಿಗೆ ಹಾಗೂ ಜಾಣಪ್ರಶ್ನೆಗೆ ಉತ್ತರವಿದ್ದರೆ ನೇರವಾಗಿ 9886640328 ಈ ನಂಬರಿಗೆ ಕರೆ ಮಾಡಿ ಇಲ್ಲವೇ ವಾಟ್ಸಾಪು ಮಾಡಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Gerald Carlo
Gerald Carlo
5 years ago

ಇದು ಪಂಜು ಪತ್ರಿಕೆಯಲ್ಲಿ ನನ್ನ ನೆಚ್ಚಿನ ಅಂಕಣ. ಕೊಳ್ಳೆಗಾಲ ಶರ್ಮರಿಗೆ ಧನ್ಯವಾದಗಳು.

1
0
Would love your thoughts, please comment.x
()
x