ಜಾಣಸುದ್ದಿ 12: ಕೊಳ್ಳೇಗಾಲ ಶರ್ಮ, ಡಾ. ಎನ್. ಆರ್. ಮಂಜುನಾಥ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com

ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)

ಈ ವಾರದ ಸಂಚಿಕೆಯಲ್ಲಿ:
1. ಎಲ್ಲೆಂದರಲ್ಲಿ ರಕ್ತ ಸಂಸ್ಕರಣೆ
2. ಹುಳಿಹಣ್ಣುಗಳ ಹಳೆಯ ಇತಿಹಾಸ
3.ಅಪಾಯದ ಕೂಗು ನೋಡುವ ಹಕ್ಕಿ ಗಳು
4.ಕ್ಯಾನ್ಸರ್ ಕೊಲ್ಲುವ ಬೆಳಕು.

1. ಎಲ್ಲೆಂದರಲ್ಲಿ ರಕ್ತ ಸಂಸ್ಕರಣೆ
ಕಳೆದ ಹಲವು ತಿಂಗಳಿನಿಂದ ಡೆಂಗೀ ಜ್ವರದ ಬಗ್ಗೆ ಕೇಳುತ್ತಲೇ ಇದ್ದೇವೆ. ಮಹಾಮಾರಿ ಇದು ಎಂದು ಭೀತಿ ಹಬ್ಬಿಸಿದವರೂ ಇದ್ದಾರೆ. ಇದುವೂ ಸಾಧಾರಣ ನೆಗಡಿ ಜ್ವರದಂತೆಯೇ. ಸುಮ್ಮನೆ ಗಾಭರಿ ಆಗಬೇಡಿ ಎಂದು ಹಿತವಚನ ಹೇಳಿದರೂ ಭೀತಿ ತಪ್ಪಿದ್ದಲ್ಲ. ನಮ್ಮೂರಲ್ಲಂತೂ ಡೆಂಗೀ ಭೀತಿ ಇದ್ದಾಗ ಎಲ್ಲರೂ ಓಡಿ ರಕ್ತ ಪರೀಕ್ಷೆ ಮಾಡಿಸಿದ್ದೇ ಮಾಡಿಸಿದ್ದು. ಅಪ್ಪಿ ಅಪ್ಪಿ ಜ್ವರ ಬಂದರೆ ಪ್ಲೇಟ್ಲೆಟ್ಟುಗಳಿಗೆ ಎಲ್ಲಿ ಓಡಬೇಕಾದೀತೋ ಎಂದು ಬ್ಲಡ್ ಬ್ಯಾಂಕ್ಗಳ ಅಡ್ರೆಸ್ಸು ಬರೆದಿಟ್ಟುಕೊಂಡವರು ಎಷ್ಟೋ ಜನ. ಇನ್ನು ಇಷ್ಟು ಗಾಭರಿ ಬೇಕಿಲ್ಲ. ಇದೋ ಬರಲಿದೆ ರಕ್ತವನ್ನು ಸಂಸ್ಕರಿಸಬಲ್ಲ ಸರಳ, ಪುಟ್ಟ, ಎಲ್ಲೆಂದರಲ್ಲಿ ಕೊಂಡೊಯ್ಯಬಲ್ಲ ಉಪಕರಣ ಎನ್ನುತ್ತದೆ ಪಿಎಲ್ಓಎಸ್ ಪತ್ರಿಕೆಯಲ್ಲಿ ಜನವರಿ ಎರಡನೆಯ ವಾರದಲ್ಲಿ ಪ್ರಕಟವಾದ ಸಂಶೋಧನೆ. ಅಮೆರಿಕೆಯ ಹ್ಯೂಸ್ಟನ್ನಿನಲ್ಲಿರುವ ಎಂಡಿ ಆಂಡರ್ಸನ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಬಯೋಮೆಡಿಕಲ್ ಇಂಜಿನೀಯರ್ ಸರ್ಗೀ ಶೆವ್ಕೊಪ್ಲಿಯಾಸ್ ಮತ್ತು ಸಂಗಡಿಗರು ಹೀಗೊಂದು ಉಪಕರಣವನ್ನು ಸಿದ್ಧ ಪಡಿಸಿದ್ದಾರೆ.


ರಕ್ತ ಸಂಸ್ಕರಣೆ ಎಂದರೆ ಇನ್ನೇನಲ್ಲ. ದೇಹದಿಂದ ಹೊರಗೆ ಬಂದ ಕೂಡಲೇ ರಕ್ತವು ತನ್ನ ಗುಣವನ್ನು ಬದಲಿಸುವುದರೊಳಗೆ ಅದರಲ್ಲಿರುವ ವಿವಿಧ ಅಂಶಗಳನ್ನು ಪ್ರತ್ಯೇಕಿಸಬೇಕಾಗುತ್ತದೆ. ಇದನ್ನೇ ರಕ್ತ ಸಂಸ್ಕರಣೆ ಎನ್ನುತ್ತಾರೆ. ರಕ್ತ ನೀರಿನಂತೆ ಅಪ್ಪಟ ದ್ರವವಲ್ಲ. ಅದೊಂದು ಜೀವಂತ ದ್ರವ. ಹಲವು ಜೈವಿಕ ಅಂಶಗಳಿರುವ ಅಂಗಾಂಶ. ಅದರಲ್ಲಿ ದೇಹಕ್ಕೆ ಆಕ್ಸಿಜನ್ ಒದಗಿಸುವ ಕೆಂಪುರಕ್ತ ಕಣಗಳು, ರೋಗಾಣುಗಳ ಜೊತೆಗೆ ಹೋರಾಡುವ ಬಿಳಿಯ ರಕ್ತ ಕಣಗಳು, ರಕ್ತ ಸೋರದಂತೆ ಹೆಪ್ಪುಗಟ್ಟಿಸಿ ಕಾಯುವ ಪ್ಲೇಟ್ಲೆಟ್ಟುಗಳು ಹಾಗೂ ವಿವಿಧ ಪೋಷಕಾಂಶಗಳನ್ನು ಕೂಡಿಟ್ಟುಕೊಂಡ ತುಸು ಮಂದವಾದ ಪ್ಲಾಸ್ಮ ಎನ್ನುವ ದ್ರವ ಇರುತ್ತವೆ. ಇವೆಲ್ಲವನ್ನೂ ಬೇರ್ಪಡಿಸದಂತೆಯೇ ರಕ್ತವನ್ನು ಕೂಡಿಡಬಹುದು. ಆದರೆ ಅಂತಹ ರಕ್ತಕ್ಕಿಂತಲೂ ಕೆಲವು ಅಂಶಗಳಷ್ಟೆ ಬಹಳಷ್ಟು ಸಂದರ್ಭಗಳಲ್ಲಿ ಬೇಕಾಗುತ್ತವೆ. ಆದ್ದರಿಂದ ರಕ್ತದ ಈ ವಿವಿಧ ಅಂಶಗಳನ್ನು ಪ್ರತ್ಯೇಕಿಸಿ ಪ್ರತ್ಯೇಕವಾಗಿ ಸಂಗ್ರಹಿಸಿಡುತ್ತಾರೆ. ಇದೇ ರಕ್ತ ಸಂಸ್ಕರಣೆ. ಸಾಮಾನ್ಯವಾಗಿ ಇದಕ್ಕಾಗಿ ರಕ್ತವನ್ನು ವಿವಿಧ ರಾಸಾಯನಿಕಗಳ ಜೊತೆಗೆ ಬೆರೆಸಿ, ಆಮೇಲೆ ಬಲು ವೇಗವಾಗಿ ತಿರುಗುವ ಯಂತ್ರದಲ್ಲಿಟ್ಟು ತಿರುಗಿಸುತ್ತಾರೆ. ನಿಮಿಷಕ್ಕೆ 30000 ದಿಂದ 100000 ಸುತ್ತಿನ ವೇಗದಲ್ಲಿ ಸುತ್ತಿದಾಗ ರಕ್ತದಲ್ಲಿನ ವಿವಿಧ ಅಂಶಗಳು ಅವವುಗಳ ಭಾರಕ್ಕನುಗುಣವಾಗಿ ಪ್ರತ್ಯೇಕವಾಗುತ್ತವೆ. ಇದನ್ನು ಸೆಂಟ್ರಿಫ್ಯುಗೇಶನ್ ಎನ್ನುತ್ತಾರೆ. ಹಾಗೂ ವಿದ್ಯುತ್ತಿನ ಸೆಂಟ್ರಿಫ್ಯೂಜ್ ಎನ್ನುವ ಭಾರೀ ಉಪಕರಣವನ್ನು ಬಳಸುತ್ತಾರೆ. ಇದನ್ನು ಇಟ್ಟಲ್ಲಿಂದ ಕದಲಿಸುವುದೂ ಇಲ್ಲ.
ಹೀಗಿರುವಾಗ ಎಲ್ಲೆಂದರಲ್ಲಿ ಕೊಂಡೊಯ್ಯುವ ರಕ್ತ ಸಂಸ್ಕರಣೆಯ ಉಪಕರಣವೆಲ್ಲಿಂದ ಬಂತು ಎನ್ನಬೇಡಿ. ಈ ಬಗೆಯ ಪ್ರಯತ್ನಗಳು ಈ ಹಿಂದೆಯೂ ಆಗಿದ್ದುವು. ಉದಾಹರಣೆಗೆ ಕಳೆದ ವರ್ಷ ಅಮೆರಿಕೆಯ ಸ್ಟಾನ್ಫರ್ಡ್ ವಿವಿಯಲ್ಲಿರುವ ಭಾರತೀಯ ಮೂಲದ ವಿಜ್ಞಾನಿ ಪ್ರಕಾಶ್ ದಾರಕ್ಕೆ ಕಟ್ಟಿ ತಿರುಗಿಸುವ ಗಿರಗಿಟ್ಟಲೆಯಂತಹ ಉಪಕರಣವನ್ನು ಹಳೆಯ ಸೀಡಿ ತಟ್ಟೆಗಳಿಂದ ತಯಾರಿಸಿ ಸುದ್ದಿ ಮಾಡಿದ್ದರು. ವಿದ್ಯುತ್ತು ಇಲ್ಲದೆಯೇ ಚಲಿಸುವ ಈ ಗಿರಗಟ್ಟಲೆ ಆಟಿಕೆಯೂ ಹೌದು. ರಕ್ತ ಸಂಸ್ಕರಣೆಯ ಸಾಧನವೂ ಹೌದು. ಆದರೆ ಒಂದೆರಡು ಮಿಲಿಯಿಂದ ಹತ್ತಾರು ಮಿಲಿ ರಕ್ತವನ್ನಷ್ಟೆ ಅದು ಸಂಸ್ಕರಿಸಬಲ್ಲುದು.
ಶೆವ್ಕೊಪ್ಲಿಯಾಸ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಇವರ ಉಪಕರಣದಲ್ಲಿ ರಕ್ತವನ್ನು ಸುತ್ತಿಸುವ ಗೋಜೇ ಇಲ್ಲ. ಇಡೀ ರಕ್ತವನ್ನು ಪುಟ್ಟ ನಾಳಗಳಿರುವ ಮೈಕ್ರೊಫ್ಲುಯಿಡಿಕ್ ತಟ್ಟೆಯೊಳಗೆ ಬಲವಂತವಾಗಿ ಒತ್ತಿ ಹರಿಸುತ್ತಾರೆ. ಬಲವಂತ ಎಂದರೆ ಒತ್ತಡ ಹೇರಬೇಕಷ್ಟೆ. ಅದೇನೂ ಮಹಾ ಅಲ್ಲ. ಬೈಸಿಕಲ್ಲಿಗೆ ಗಾಳಿ ಪಂಪು ಮಾಡಿದ್ದಷ್ಟೂ ಶ್ರಮ ಪಡಬೇಕಿಲ್ಲವಂತೆ. ಇದಕ್ಕೂ ಮೊದಲು ರಕ್ತವಿರುವ ಚೀಲವನ್ನು ಓರೆಯಾಗಿರುವಂತೆ ತುಸು ಇಳಿಜಾರಿನಲ್ಲಿ ಒಂದೆರಡು ಗಂಟೆ ಇಡಬೇಕಾಗುತ್ತದೆ. ಆಗ ರಕ್ತದಲ್ಲಿರುವ ರಕ್ತಕಣಗಳು ಹಾಗೂ ಪ್ಲೇಟ್ ಲೆಟ್ ಇರುವ ಪ್ಲಾಸ್ಮ ಪ್ರತ್ಯೇಕವಾಗುತ್ತದೆ. ಈಗ ಈ ಚೀಲವನ್ನು ಬಲವಾಗಿ ಒತ್ತಿದರೆ ಮೊದಲು ಪ್ಲಾಸ್ಮ ಹೊರ ಬರುತ್ತದೆ. ಇದನ್ನು ಅತಿ ಸೂಕ್ಷ್ಮ ಕಾಲುವೆಗಳಿರುವ ಗಾಜಿನ ಉಪಕರಣದೊಳಗೆ ಹಾಯಿಸುತ್ತಾರೆ. ಅಲ್ಲಿ ಪ್ಲೇಟ್ಲೆಟ್ಟು ಹಾಗೂ ಪ್ಲಾಸ್ಮ ಪ್ರತ್ಯೇಕವಾಗುತ್ತವೆ. ಅದು ಖಾಲಿಯಾದ ಮೇಲೆ ಚೀಲದಲ್ಲಿ ಕೆಳಗಿರುವ ಕೆಂಪುರಕ್ತಕಣಗಳ ಗಟ್ಟಿ ದ್ರವವನ್ನು ತುಸು ತೆಳುವಾಗಿಸಿ ಮತ್ತೆ ಒತ್ತಲಾಗುತ್ತದೆ. ಕೆಂಪುರಕ್ತಕಣಗಳಗಳಿಗಿಂತ ತುಸು ದೊಡ್ಡದಾಗಿರುವ ಬಿಳೀ ರಕ್ತಕಣಗಳನ್ನು ಸೋಸುವ ಸೋಸುಕದೊಳಗೆ ಇದನ್ನು ಹರಿಸಿದರೆ, ಬಿಳೀ ರಕ್ತಕಣಗಳು ಹಾಗೂ ಕೆಂಪುರಕ್ತ ಕಣಗಳು ಪ್ರತ್ಯೇಕವಾಗುತ್ತವೆ. ಹೀಗೆ ಯಾವುದೇ ವಿದ್ಯುತ್ತಾಗಲೀ, ದೊಡ್ಡ ಉಪಕರಣವಾಗಲೀ ಇಲ್ಲದೆ ಅಂಗೈಯೊಳಗೆ ಇಡಬಹುದಾದ ಸೂಕ್ಷ್ಮನಾಳಗಳ ಉಪಕರಣ ಮತ್ತು ಪಂಪನ್ನು ಬಳಸಿ ರಕ್ತದ ಎಲ್ಲ ಅಂಶಗಳನ್ನೂ ಪ್ರತ್ಯೇಕಿಸಬಹುದು ಎನ್ನುತ್ತಾರೆ ಶೆವ್ಕೊಪ್ಲಿಯಾಸ್.
ಎಷ್ಟು ಸುಲಭ. ಸರಳ ಅಲ್ಲವೇ? ಇದು ಬೇಗ ಮಾರುಕಟ್ಟೆಗೆ ಬರಲಿ ಎಂದು ಹಾರೈಸೋಣ.
ಆಕರ: Gifford SC, Strachan BC, Xia H, VoÈroÈs E, Torabian K, Tomasino TA, et al. (2018) A portable system for processing donated whole blood into high quality components without centrifugation. PLoS ONE 13(1): e0190827
ಲಿಂಕ್: . https://doi.org/10.1371/journal.pone.0190827

ಚುಟುಕು ಚುರುಮುರಿ

2. ಹುಳಿ ಹಣ್ಣುಗಳ ಹಳೆಯ ಇತಿಹಾಸ
ನಿಂಬೆ ಹಣ್ಣು ನೋಡಿದಾಗಲೆಲ್ಲ ಬಿಆರ್ ಲಕ್ಷ್ಮಣರಾಯರ ಕವನ ನೆನಪಿಗೆ ಬರುತ್ತದೆ. “ನಿಂಬೆ ಗಿಡ ತುಂಬಾ ಚಂದ. ನಿಂಬೆ ಹೂವು ತುಂಬಾ ಸಿಹಿ ನಿಂಬೆ ಹಣ್ಣು ಕಂದಾ ಬರೀ ಹುಳಿ ಹುಳಿ,.” ನಿಂಬೆ ಜಾತಿಯ ಹಣ್ಣುಗಳದ್ದು ಒಂದು ವಿಶಿಷ್ಟ ರುಚಿ. ಹುಳಿ, ಸಿಹಿ, ಕಹಿ ಎಲ್ಲವೂ ಇರುವ ಹಣ್ಣುಗಳು ಇವು. ಹಾಗೆಯೇ ಗಾತ್ರದಲ್ಲೂ ಬಲು ಭಾರೀ ವೈವಿಧ್ಯವಿದೆ. ತುಸು ಕಹಿಯೇ ಮುಂದಿರುವ ಸಿಹಿ ಹಣ್ಣು ಚಕೋತದ ಗಾತ್ರ ಫುಟ್ಬಾಲ್ ಚೆಂಡಿನಷ್ಟು. ಪುಟ್ಟ ನಿಂಬೆಹಣ್ಣಿನದ್ದೋ ಮೈ ನಡುಗಿಸುವಂತಹ ಹುಳಿ, ತುಸು ಕಹಿ ಹಾಗೂ ಅದ್ಭುತ ಪರಿಮಳ. ಈ ಪರಿಮಳವನ್ನು ನಂಬಿಕೊಂಡು ಹೆರಳೆಕಾಯಿಯನ್ನು ಬಳಸಿದಿರೋ, ಹುಳಿಗಿಂತಲೂ ಕಹಿಯೇ ಮುಂದೆ ಎನ್ನಿಸಬಹುದು. ಇನ್ನು ನಾಗಪುರ ಕಿತ್ತಲೆಯ ಸಿಹಿ-ಹುಳಿ, ಕೊಡಗಿನ ಕಿತ್ತಳೆಯ ಸಿಹಿ-ಸಿಹಿ, ಮಾದಲದ ಹುಳಿ ಹೀಗೇ ಈ ;ಹುಳಿ-ಸಿಹಿ-ಕಹಿ ಹಣ್ಣುಗಳ ವೈವಿಧ್ಯ ಬಲು ರೋಚಕ. ಇವಿಷ್ಟು ವೈವಿಧ್ಯಮಯವಾಗಿದ್ದು ಹೇಗೆ? ಇವುಗಳೆಲ್ಲವೂ ಒಂದೇ ಕುಲದ ಶಾಖೆಗಳೋ ಅಥವಾ ಬೇರೆ, ಬೇರೆಯಾಗಿ ಹುಟ್ಟಿದುವೋ ಎನ್ನುವ ಪ್ರಶ್ನೆ ಬಹುಶಃ ನಿಮಗೂ ಕಾಡಿರಬಹುದು. ವಿಜ್ಞಾನಿಗಳಿಗಂತೂ ಇದು ಯಕ್ಷ ಪ್ರಶ್ನೆಯೇ. ಇದುವರೆವಿಗೂ ಈ ಹುಳಿ-ಸಿಹಿ ಸಿಟ್ರಸ್ ಹಣ್ಣುಗಳ ಗಾತ್ರ, ಆಕಾರ, ರುಚಿ, ಗಿಡಗಳ ಸ್ವರೂಪವನ್ನು ಆಧರಿಸಿ, ಯಾವುದು ಯಾವುದಕ್ಕೆ ಸಂಬಂಧಿ ಎಂದು ಊಹಿಸಲಾಗಿತ್ತು. ಮೊನ್ನೆ ನೇಚರ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನೆಯೊಂದು ಪ್ರಪಂಚದ ಹಲವು ಹುಳಿ-ಸಿಹಿ ಸಿಟ್ರಸ್ ಹಣ್ಣುಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಇವು ಮೊದಲಿಗೆ ಹುಟ್ಟಿದಾಗ ಯಾವ ಸ್ವರೂವಿದ್ದುವು? ಹೇಗೆ ಇಷ್ಟೊಂದು ವೈವಿಧ್ಯಮಯವಾದುವು ಎಂದು ಕಲ್ಪಿಸಲು ಪ್ರಯತ್ನಿಸಿದೆ. ಇದಕ್ಕಾಗಿ ಈ ಸಸ್ಯಗಳ ತಳಿಗುಣಗಳಲ್ಲಿರುವ ಸಾಮ್ಯ ಹಾಗೂ ವ್ಯತ್ಯಾಸಗಳನ್ನು ಪಟ್ಟಿಮಾಡಿ, ಯಾವ ಹಣ್ಣಿಗೆ ಇನ್ಯಾವ ಹಣ್ಣು ಹತ್ತಿರವೆಂದು ವಂಶವೃಕ್ಷವನ್ನು ರಚಿಸಿದೆ. ಸ್ಪೇನಿನ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ ಸಂಸ್ಥೆಯ ವಿಜ್ಞಾನಿ ಮ್ಯಾನ್ಯುಯೆಲ್ ತಲೋನರವರ ನೇತೃತ್ವದಲ್ಲಿ ಜಪಾನು, ಅಮೆರಿಕ ಹಾಗೂ ಫ್ರಾನ್ಸಿನ ವಿಜ್ಞಾನಿಗಳು ಕೈಗೂಡಿಸಿ ಈ ಸಾಧನೆ ಮಾಡಿದ್ದಾರೆ.

ಇವರು ಪ್ರಪಂಚದ ವಿವಿಧೆಡೆ ಬೆಳೆಯುವ ಸಿಟ್ರಸ್ ಕುಲದ 60 ಸಸ್ಯಗಳ ತಳಿಗುಣಗಳನ್ನು ಹೋಲಿಸಿದ್ದಾರೆ. ಸಿಟ್ರಸ್ ಜಾತಿಯಲ್ಲಿ ಮುಖ್ಯವಾಗಿ ಮೂರು ಪ್ರಮುಖ ಬಗೆಗಳಿವೆ. ಚಕೋತ ಹಣ್ಣಿನಂತಹವು, ಮಾದಲ-ನಿಂಬೆಯಂತಹವು ಹಾಗೂ ಕಿತ್ತಳೆಯಂತಹವು. ಇವನ್ನು ಪೊಮೆಲೋ, ಲೈಮ್ ಹಾಗೂ ಮಾಂಡರಿನ್ ಎಂದು ಗುರುತಿಸುತ್ತಾರೆ. ಇವುಗಳ ತಳಿಗುಣಗಳಲ್ಲಿರುವ ಹೋಲಿಕೆ ಹಾಗೂ ವ್ಯತ್ಯಾಸವನ್ನು ಗಮನಿಸಿದರೆ ಈ ಮೂರು ಪ್ರಮುಖ ಬಗೆಗಳು ಇಂದಿಗೆ ಸುಮಾರು 50 ಲಕ್ಷ ವರ್ಷಗಳಿಂದ ಒಂದು ಕೋಟಿ ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ಮೂಲವಂಶಜರಿಂದ ಬೇರೆಯಾಗಿರುವಂತೆ ತೋರುತ್ತದಂತೆ. ಅದೇ ಸಮಯದಲ್ಲಿ ಆಗ್ನೇಯ ಏಶಿಯಾದಲ್ಲಿ ಪ್ರಬಲವಾಗಿದ್ದ ಮಾನ್ಸೂನು ಮಳೆಗಾಲ ತುಸು ಕ್ಷೀಣವಾಗಿತ್ತಂತೆ. ಇದರಿಂದಾಗಿ ಈ ಮೊದಲ ವ್ಯತ್ಯಾಸಗಳು ಕಂಡು ಬಂದಿರಬೇಕು.
ಅಷ್ಟಕ್ಕೇ ಈ ಹಣ್ಣುಗಳ ವಿಕಾಸ ನಿಲ್ಲಲಿಲ್ಲ. ಅನಂತರ ಇಂದಿಗೆ ಇಪ್ಪತ್ತರಿಂದ ಐವತ್ತು ವರ್ಷ ಹಿಂದಿನ ಕಾಲಘಟ್ಟದಲ್ಲಿ ಆಸ್ಟ್ರೇಲಿಯಾದಲ್ಲಿ ಬೆಳೆಯುತ್ತಿದ್ದ ಕೆಲವು ಸಸ್ಯಗಳು ಹೇಗೋ ಬೇರೆಡೆಗೂ ಹರಡಿಕೊಂಡು ಅಲ್ಲಿದ್ದ ತಳಿಗಳ ಜೊತೆಗೆ ಬೆರೆತ ಕಾರಣವಾಗಿ ಇನ್ನಷ್ಟು ಹೊಸ ತಳಿಗಳು ಉದ್ಭವವಾಗಿವೆ ಎಂದು ಇವರು ಊಹಿಸಿದ್ದಾರೆ. ಹಾಗೆಯೇ ಈಗ ವ್ಯಾಪಾರಕ್ಕಾಗಿ ವ್ಯಾಪಕವಾಗಿ ಬಳಸುತ್ತಿರುವ ತಳಿಗಳು ಬಂದಿದ್ದು ಹೇಗೆ ಎನ್ನುವ ಬಗ್ಗೆಯೂ ಇದು ಸುಳಿವು ನೀಡಿದೆ. ಸಿಹಿ ಕಿತ್ತಳೆಗಳ ಬಗೆಗಳಲ್ಲಿ ಇರುವ ಸಾಮ್ಯ ಅವುಗಳು ಬಹುತೇಕ ಕೃಷಿ ಬಗೆಗಳೆಂದು ಸೂಚಿಸುತ್ತವೆ. ಜೊತಗೇ ಈ ಎಲ್ಲ ಕಿತ್ತಳೆಗಳಲ್ಲಿಯೂ ಒಂದಿಷ್ಟು ಚಕೋತದ ತಳಿಗುಣಗಳೂ ಇವೆಯಂತೆ. ಚಕೋತದ ಜೊತೆಗೆ ಇವನ್ನು ಬೆರೆಸಿ ಹೊಸ ತಳಿಗಳನ್ನು ಸೃಷ್ಟಿಸಿದ್ದರಿಂದಾಗಿ ಇದು ಉಳಿದುಕೊಂಡಿರಬೇಕು . ಒಟ್ಟಾರೆ ನಮ್ಮ ಆರೋಗ್ಯ ಹಾಗೂ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುವ ಈ ಹುಳಿ-ಸಿಹಿ ಹಣ್ಣುಗಳ ಇತಿಹಾಸವೂ ಅಷ್ಟೇ ಸ್ವಾದಿಷ್ಟವಾಗಿದೆ ಎನ್ನಬಹುದು. ಈ ಸಂಶೋಧನೆಯನ್ನು ನೇಚರ್ ಪತ್ರಿಕೆ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿದೆ.
Guohong Albert Wu et al., Genomics of the origin and evolution of Citrus, Nature | Vol.554 | Pp 311-316 | 15 February 2018
ಲಿಂಕ್: 1. doi:10.1038/nature25447

3. ಅಪಾಯದ ಕೂಗು ನೋಡುವ ಹಕ್ಕಿ
ಹಕ್ಕಿ ಹಾಡುತಿದೆ ಕೇಳಿದಿರಾ? ಎನ್ನುವ ಮಾತು ಕೇಳಿದ್ದೀರಿ. ಚೇಕಡಿ ಹಕ್ಕಿಗಳು ಏನಾದರೂ ಈ ಹಾಡನ್ನು ಕೇಳಿದರೆ ಬಹುಶಃ ಅದನ್ನೂ ತಿದ್ದಿಯಾವು. ಹಕ್ಕಿ ಹಾಡುತಿದೆ ಕೇಳಿದಿರಾ ಅಂತಲ್ಲ. ಹಕ್ಕಿ ಹಾಡುತಿದೆ ನೋಡಿದಿರಾ ಅಂತ ಇರಬೇಕು ಅಂತ ತಿದ್ದಬೇಕು ಎಂದಾವು. ಇದೇನು ತರಲೆ ಎನ್ನಬೇಡಿ. ಹಕ್ಕಿಗಳು ಕೂಗುವಾದ ಕೆಲವು ದೃಶ್ಯಗಳನ್ನು ಅವು ಸಂಗಡಿಗರಿಗೆ ಶಬ್ದದ ಮೂಲಕವೇ ಒದಗಿಸುತ್ತಿರಬಹುದು ಎನ್ನುತ್ತದೆ ಜಪಾನಿನ ಕ್ಯೋಟೋ ವಿಶ್ವವಿದ್ಯಾನಿಲಯದ ಪಕ್ಷಿ ವಿಜ್ಞಾನಿ ತೊಶಿತಾಕಾ ಸುಜುಕಿಯವರ ಸಂಶೋಧನೆ., ಪಿಎನ್ಎಎಸ್ ಪತ್ರಿಕೆಯ ಇತ್ತೀಚಿನ ಸಂಚಿಕೆಯಲ್ಲಿ ಇವರು ಜಪಾನಿನ ಚೇಕಡಿಗಳಿಗೆ (ಪ್ಯಾರಸ್ ಮೈನರ್) ಸುಳ್ಳು ಅಪಾಯವನ್ನು ತೋರಿಸಿ ಅವು ಹೇಗೆ ಕೂಗುತ್ತವೆ ಎಂದೂ, ಅಂತಹ ಕೂಗುಗಳು ಸಂದರ್ಭಕ್ಕೆ ಅನುಗುಣವಾಗಿ ಬದಲಾಗಬಹುದೋ ಎಂದು ಪರೀಕ್ಷಿಸಿದ್ದಾರೆ. ಈ ಸಂಶೋಧನೆಗಳ ಪ್ರಕಾರ ಹಕ್ಕಿಗಳು ಅಪಾಯ ಬಂತೆಂದು ಅರಚುವಾಗ ಎಂತಹ ಕೇವಲ ಎಚ್ಚರಿಕೆಯನ್ನಷ್ಟೆ ನೀಡುವುದಿಲ್ಲ, ಎಂತಹ ಅಪಾಯ ಅದು ಎನ್ನುವ ಚಿತ್ರಣವನ್ನೂ ನೀಡುತ್ತವೆ ಎಂದು ಕಂಡಿದ್ದಾರೆ.
ಹೌದು ನಾವು ಮಾತನಾಡುವಾಗ ವಸ್ತುಗಳಿಗೆ, ಚಿತ್ರಗಳಿಗೆ ನಿರ್ದಿಷ್ಟ ಶಬ್ದಗಳನ್ನು ನೀಡಿ ಗುರುತಿಸುತ್ತೇವಷ್ಟೆ. ಹಾವು ಮತ್ತು ಹಗ್ಗದ ಆಕಾರ, ಬಣ್ಣ ಒಂದೇ ಆಗಿದ್ದರೂ ನಾವು ಹಾವು ಎಂದಾಗ ಮನಸ್ಸಿನಲ್ಲಿ ಮೂಡುವ ಚಿತ್ರವೇ ಬೇರೆ. ಹಗ್ಗವೆಂದಾಗ ಮೂಡುವುದೇ ಬೇರೆ. ಮಾತಿನಿಂದ ಹೀಗೆ ನಿರ್ದಿಷ್ಟ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯ ಕೇವಲ ಮನುಷ್ಯನಿಗಷ್ಟೆ ಅಲ್ಲ. ಹಕ್ಕಿಗಳು, ಡಾಲ್ಫಿನ್ನುಗಳು, ನಾಯಿ, ಬೆಕ್ಕುಗಳಿಗೂ ಇರಬಹುದು ಎನ್ನುವ ಅನುಮಾನವಿದೆ. ನಾಯಿಯ ಬೊಗಳನ್ನು ಕೇಳಿಯೇ ಬಾಗಿಲ ಬಳಿ ಬಂದದ್ದು ಯಜಮಾನನೋ, ಅಪರಿಚಿತನೋ ಎಂದು ಹೇಳಬಹುದಲ್ಲವೇ? ಹಾಗೆಯೇ ಪಕ್ಷಿಗಳ ಕೂಗಿನಲ್ಲಿಯೂ ಹಾವು ಬರುತ್ತಿದೆ ಎಚ್ಚರಿಕೆ ಎಂತಲೋ, ಏನೋ ಬರುತ್ತಿದೆ ಎಚ್ಚರಿಕೆ ಎನ್ನುವುದಕ್ಕೂ ವ್ಯತ್ಯಾಸ ಇರುತ್ತದೆ ಎಂದು ಇವರು ಕಂಡಿದ್ದಾರೆ.

ಇದು ಗೊತ್ತಾಗಿದ್ದು ಹೀಗೆ. ಚೇಕಡಿಗಳ ವಿಭಿನ್ನ ರೀತಿಯ ಹಾಡುಗಳನ್ನು ಮೊದಲು ಇವರು ರೆಕಾರ್ಡು ಮಾಡಿಕೊಂಡು ನಿರ್ದಿಷ್ಟ ಸಂದರ್ಭದಲ್ಲಿ ಅದನ್ನು ಅವುಗಳಿಗೆ ಕೇಳಿಸಿದರು. ಉದಾಹರಣೆಗೆ, ಹಾವನ್ನು ಕಂಡಾಗ ಚೇಕಡಿಗಳ ಕೂಗು ಬೇರೆಯದೇ ರೀತಿಯಲ್ಲಿ ಇರುತ್ತದೆ. ಈ ಹಾಡನ್ನು ಕೇಳಿಸುವಾಗ ಒಮ್ಮೆ ಕಡ್ಡಿಯೊಂದು ಹಾವಿನಂತೆ ಚಲಿಸುವಂತೆಯೂ, ಮತ್ತೊಮ್ಮೆ ಅದೇ ಕಡ್ಡಿ ನೆಲದ ಮೇಲೆ ಕಡ್ಡಿಯಂತೆಯೇ ನಡೆಯುವಂತೆಯೂ, ಇನ್ನೊಮ್ಮೆ ಆ ಕಡ್ಡಿ ಮುರಿದ ಕೊನೆಯಂತೆ ಮರದಲ್ಲಿ ತೂಗಾಡುವಂತೆಯೂ ಇವರು ವ್ಯವಸ್ಥೆ ಮಾಡಿದರು. ಅನಂತರ ಹಕ್ಕಿಗೆ ಹಾಡನ್ನು ಕೇಳಿಸಿದರು. ಕಡ್ಡಿ ಹಾವಿನಂತೆ ಚಲಿಸುವಾಗಲೇ ಹಾವಿನ ಬಗ್ಗೆ ಎಚ್ಚರಿಕೆ ಕೇಳಿದ ಚೇಕಡಿಗಳು ಕಡ್ಡಿಯ ಬಳಿಗೆ ಸಾಗಿ ಪರೀಕ್ಷಿಸಿದುವಂತೆ. ಅಂದರೆ ತಾವು ಕೇಳಿದ ಎಚ್ಚರಿಕೆಗೂ ಕಂಡ ದೃಶ್ಯಕ್ಕೂ ಹೋಲಿಕೆ ಇದ್ದುದು ಅವಕ್ಕೆ ಗೊತ್ತಾಯಿತು ಅಂತಷ್ಟೆ. ಹಾಗೆಯೇ ಕಡ್ಡಿ ಕಡ್ಡಿಯಂತೆಯೇ ಚಲಿಸಿದಾಗ ಕೇಳಿಸಿದ ಕೂಗು ಹಾವಿನ ಎಚ್ಚರಿಕೆಯಾದರೂ ಚೇಕಡಿಗಳು ಸುಮ್ಮನಿದ್ದುವು. ಕಡ್ಡಿ ಕಡ್ಡಿಯಂತೆಯೇ ತೂಗಾಡುವಾಗಲೂ ಅಷ್ಟೆ ಅವು ಶಾಂತವಾಗಿದ್ದುವು. ಕಡ್ಡಿ ಹಾವಿನಂತೆ ಓಡುವಾಗ ಕೇಳಿಸಿದ ಎಚ್ಚರಿಕೆ ಹಾವಿನದ್ದಲ್ಲದಿದ್ದರೂ ಅಷ್ಟೆ ಅವು ಶಾಂತವಾಗಿರುತ್ತಿದ್ದುವಂತೆ. ಅರ್ಥಾತ್, ಹಾವಿನ ಬಗೆಗಿನ ಎಚ್ಚರಿಕೆ ಅವುಗಳ ಮನಸ್ಸಿನಲ್ಲಿ ಹಾವಿನ ಚಿತ್ರವನ್ನು ಮೂಡಿಸಿದ್ದರಿಂದ ಅವು ಹಾವಿನಂತೆ ಚಲಿಸುವ ಕಡ್ಡಿಯ ಸಮೀಪಕ್ಕೆ ಹೋಗಿ ಪರೀಕ್ಷಿಸಿದುವು. ಅದೇ ಚಿತ್ರ ಮೂಡಿದರೂ, ಕಡ್ಡಿ ಬೇರೆ ರೀತಿಯಲ್ಲಿ ಚಲಿಸುತ್ತಿದ್ದುದರಿಂದ ಅವು ಆ ಕಡೆಗೆ ಹೋಗಲಿಲ್ಲ ಎಂದು ಸುಜುಕಿ ತೀರ್ಮಾನಿಸಿದ್ದಾರೆ.
ನೋಡಿದಿರಾ? ಹಕ್ಕಿ ಹಾಡನ್ನು ನೋಡುವ ಪರಿ ಹೀಗಿದೆ.

ಆಕರ: Toshitaka N. Suzuki, Alarm calls evoke a visual search image of a predator in birds, PNAS | February 13, 2018 | vol. 115 | no. 7 | 1541–1545
ಲಿಂಕ್: www.pnas.org/cgi/doi/10.1073/pnas.1718884115

4. ಕ್ಯಾನ್ಸರ್ ಕೊಲ್ಲುವ ಬೆಳಕು
ಕ್ಯಾನ್ಸರ್ ಎಂದರೇ ಬಹಳಷ್ಟು ಜನ ಸಾವು ಎಂದು ಅರ್ಥೈಸುವುದುಂಟು. ಎಲ್ಲ ವಿಧದ ಕ್ಯಾನ್ಸರೂ ಮಾರಕವಲ್ಲ ಎನ್ನುವುದೂ ನಿಜ. ಆದರೆ ಹಲವಾರು ಬಗೆಯ ಕ್ಯಾನ್ಸರುಗಳನ್ನು ಪೂರ್ಣವಾಗಿ ನಿವಾರಿಸಿಬಿಡುತ್ತೇವೆ ಎಂದು ವೈದ್ಯರೂ ಖಚಿತವಾಗಿ ಹೇಳಲು ಸಿದ್ಧರಿರುವುದಿಲ್ಲ. ಏಕೆಂದರೆ ರೋಗಲಕ್ಷಣಗಳು ಗುಣವಾದರೂ, ಅಷ್ಟೋ, ಇಷ್ಟೋ ಉಳಿದಿರುವ ಕ್ಯಾನ್ಸರ್ ಕೋಶಗಳು ಮರಳಿ ಕೋಟಲೆ ಕೊಡಲು ಆರಂಭಿಸಬಹುದು. ಹೀಗಾಗಿಯೇ ಕೊಲ್ಲುವುದಿದ್ದರೆ ಎಲ್ಲ ಕ್ಯಾನ್ಸರ್ ಕೋಶಗಳನ್ನೂ ಕೊಂದೇ ತೀರಬೇಕು ಎಂದು ವೈದ್ಯರು ಅತಿ ಕಡುವಾದ ವಿಷ ಇಲ್ಲವೇ ಅತಿ ಪ್ರಖರವಾದ ವಿಕಿರಣವನ್ನು ಬಳಸುತ್ತಾರೆ. ಇವೆರಡೂ ತರುವ ತೊಂದರೆಗಳಿಲ್ಲದ ಮತ್ತೊಂದು ವಿಧಾನವೂ ಇದೆ. ಅದುವೇ ಬೆಳಕಿನ ಚಿಕಿತ್ಸೆ. ಬೆಳಕು ಬಿದ್ದಾಗ ಅದನ್ನು ಹೀರಿಕೊಂಡು ವಿಷವಾಗಿ ಬದಲಾಗುವ ರಾಸಾಯನಿಕಗಳನ್ನು ಬಳಸುವುದೇ ಫೋಟೋಡೈನಾಮಿಕ್ ಇಲ್ಲವೇ ಬೆಳಕಿನ ಚಿಕಿತ್ಸೆ. ಇದು ವಿಕಿರಣಗಳು ಕೊಡುವಷ್ಟು ತೊಂದರೆ ಕೊಡುವುದಿಲ್ಲ. ಜೊತೆಗೆ ಬೆಳಕು ಬಿದ್ದಲ್ಲಿಯಷ್ಟೆ ಆ ಔಷಧ ವಿಷ. ಬೆಳಕು ಬೀಳದಿದ್ದಾಗ ಅದು ನಿಸ್ತೇಜ ರಾಸಾಯನಿಕವಾಗುತ್ತದೆ.

ಇದೊಂದು ಅದ್ಭುತ ಕಲ್ಪನೆಯೇನೋ ನಿಜ. ಮೂರು ನಾಲ್ಕು ದಶಕಗಳಿಂದಲೂ ಈ ಬಗ್ಗೆ ಸಂಶೋಧನೆ ನಡೆದಿವೆಯಾದರೂ ಇದು ನನಸಾಗಿಲ್ಲ. ಕಾರಣ ಇಷ್ಟೆ. ಬೆಳಕನ್ನು ದೇಹದ ಆಳದಲ್ಲಿರುವ ಅಥವಾ ಕ್ಯಾನ್ಸರ್ ಗಂಟಿನ ಒಳಭಾಗದಲ್ಲೂ ಪಸರಿಸುವಂತೆ ಮಾಡುವುದು ಸಾಧ್ಯವಾಗಿಲ್ಲ. ಕ್ಯಾನ್ಸರಿನ ಮೇಲ್ಮೈಯನ್ನಷ್ಟೆ ಬೆಳಕು ತಾಕುವುದರಿಂದ ಗಂಟಿನ ಹೊರಗಿರುವ ರೋಗಕೋಶಗಳು ಸಾಯುತ್ತವೆ. ಆದರೆ ಒಳಗಿನವು ಬದುಕು ಉಳಿಯುತ್ತವೆ. ಇತ್ತೀಚೆಗೆ ಆಪ್ಟಿಕಲ್ ಫೈಬರ್ ಅರ್ಥಾತ್ ಬೆಳಕನ್ನು ಸಾಗಿಸುವ ತೆಳು ಗಾಜಿನ ಎಳೆಗಳನ್ನು ಕ್ಯಾನ್ಸರ್ ಗಂಟಿನೊಳಗೆ ಹುದುಗಿಸಿ ಬೆಳಕನ್ನು ಗಂಟಿನಂತರಾಳಕ್ಕೆ ತಲುಪಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಚಿಕಿತ್ಸೆಯನ್ನು ಒಮ್ಮೆ ಮಾತ್ರ ನೀಡುವುದಾದರೆ ಇದು ಸಾಕು. ಪದೇ, ಪದೇ ಚಿಕಿತ್ಸೆಯನ್ನು ನೀಡಬೇಕಾದರೆ ಇದು ಸ್ವಲ್ಪ ಕಷ್ಟವೇ
ಇದೀಗೆ ಸಿಂಗಪೂರ್ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಜಾನ್ ಎಸ್. ಹೋ ಮತ್ತು ಸಂಗಡಿಗರು ಗಂಟಿನೊಳಗೆ ಹುದುಗಿಸಿದ ಹಾಗೂ ದೂರದಲ್ಲೆಂಲ್ಲಿದಲೋ ಹೊತ್ತಿಸಬಹುದಾದ ಪುಟ್ಟ ಟಾರ್ಚೊಂದನ್ನು ಸೃಷ್ಟಿಸಿದ್ದಾರೆ. ಇದನ್ನು ಕ್ಯಾನ್ಸರ್ ಗಂಟಿನೊಳಗೆ ಹುದುಗಿಸಿಟ್ಟರೆ ಸಾಕು. ಅನಂತರ ಬೇಕೆಂದಾಗ ಒಂದು ರಿಮೋಟು ಸ್ವಿಚ್ಚನ್ನು ಅದುಮಿ ಹಿಡಿದರೆ ಸಾಕು, ಗಂಟಿನೊಳಗೆಲ್ಲ ಬೆಳಕೋ ಬೆಳಕು. ಸೂಕ್ಷ್ಮವಾದ ಎಲ್ ಇ ಡಿ ಬಲ್ಬುಗಳು ಹಾಗೂ ಇಲೆಕ್ಟ್ರಾನಿಕ್ ಸರ್ಕೀಟನ್ನು ಬಳಸಿ ಈ ಪುಟ್ಟ ಟಾರ್ಚನ್ನು ರೂಪಿಸಲಾಗಿದೆ. ಕೈಗಡಿಯಾರದೊಳಗೆ ಹುದುಗಿಸಿರುವ ಪುಟ್ಟ ಬ್ಯಾಟರಿಯಷ್ಟೆ ದೊಡ್ಡದಾದ ಇದನ್ನು ನೇರವಾಗಿ ದೇಹದೊಳಗೆ ಹುದುಗಿಸಬಹುದು. ಕ್ಲೋರೀನ್6 ಎನ್ನುವ ರಾಸಾಯನಿಕವನ್ನು ಚುಚ್ಚಿ, ಬೇಕೆಂದಾಗ ಟಾರ್ಚನ್ನು ಬೆಳಗಿಸಬಹುದು. ಸುಮಾರು 3 ಸೆಂಮೀ ದಪ್ಪನೆಯ ಗಂಟಿನೊಳಗೆ ಎಲ್ಲೆಡೆಯೂ ಸಮನಾಗಿ ಬೆಳಕನ್ನು ಇದು ನೀಡಬಲ್ಲುದಂತೆ. ರಿಮೋಟನ್ನು ಒಂದು ಸೆಂಟಿಮೀಟರಿನಿಂದ ಹಲವು ಸೆಂಟಿಮೀಟರುಗಳಷ್ಟು ದೂರದಲ್ಲಿಟ್ಟೂ ಸ್ವಿಚ್ಚು ಅದುಮಬಹುದು. ದಪ್ಪ ಹಂದಿ ಮಾಂಸದ ಹಾಳೆಯ ಕೆಳಗೆ ಕ್ಯಾನ್ಸರ್ ಕೋಶಗಳನ್ನಿಟ್ಟು ಹಾಗೂ ಇಲಿಗಳಲ್ಲಿ ಬೇಕೆಂದೇ ಬೆಳೆಸಿದ ಗಂಟುಗೊಳಳಗೂ ಈ ಉಪಕರಣವನ್ನಿಟ್ಟು ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಹೋ ತಂಡ ಪ್ರಯತ್ನಸಿದೆ. ಅಲ್ಪಾವಧಿ ಚಿಕಿತ್ಸೆಗೆ ಆಗಾಗ್ಗೆ ಇದನ್ನು ಚುಚ್ಚಿಯೂ, ದೀರ್ಘಾವಧಿಯಲ್ಲಿ ಹಾಳಾಗದಂತೆ ರಬ್ಬರಿನ ಹೊದಿಕೆ ಹೊದಿಸಿ ದೇಹದೊಳಗೆ ಇಡುವುದೂ ಸಾಧ್ಯವಂತೆ. ಔಷಧ ಯಾವುದಾದರೂ ಸರಿ, ಬೆಳಕನ್ನು ಮಾತ್ರ ಈ ರೀತಿ ರಿಮೋಟಿನಿಂದ ಬೆಳಗಿಸಬೇಕು ಎನ್ನುತ್ತಾರೆ ಹೋ. ಇದರಿಂದಲಾದರೂ ಬೆಳಕಿನ ಚಿಕಿತ್ಸೆಗೆ ಇನ್ನಷ್ಟು ಹೊಳಪು ಬರುತ್ತದೋ ಕಾದು ನೋಡೋಣ.

ಆಕರ: Akshaya Bansal et al., In vivo wireless photonic photodynamic therapy, PNAS | February 13, 2018 | vol. 115 | no. 7 | 1469–1474,

ಲಿಂಕ್ :www.pnas.org/cgi/doi/10.1073/pnas.1717552115


ಜಾಣನುಡಿ
ಫೆಬ್ರವರಿ 18.

ಜೀವ ಎನ್ನುವುದು ಒಂದು ರಾಸಾಯನಿಕ ಪ್ರಕ್ರಿಯೆ ಎಂದು ಸೂಚಿಸಿದ ರಷ್ಯನ್ ವಿಜ್ಞಾನಿ ಅಲೆಕ್ಸಾಂಡರ್ ಒಪಾರಿನ್ ಜನಿಸಿದ ದಿನ. 1894 ಫೆಬ್ರವರಿ 18ರಂದು ಜನಿಸಿದ ಈತ ನಾವೀಗ ರಾಸಾಯನಿಕ ವಿಕಾಸವಾದ ಎಂದು ಹೇಳುವ ಪರಿಕಲ್ಪನೆಯನ್ನು ನೀಡಿದವ. ಇವರ ಪ್ರಕಾರ ಭೂಮಿಯ ಉಗಮವಾದ ಅನಂತರ ನಡೆದ ಉಗ್ರ ಬದಲಾವಣೆಗಳು, ಕಠೋರ ಹವಾಮಾನ ಆಗ ವಾತಾವರಣದಲ್ಲಿದ್ದ ಸರಳ ರಾಸಾಯನಿಕಗಳು ಒಂದರೊಡನೊಂದು ಪ್ರತಿಕ್ರಯಿಸಿ ಇದೀಗ ಜೀವಿಗಳಲ್ಲಿ ಮಾತ್ರ ಕಾಣಬರುವ ಸಂಕೀರ್ಣ ರಾಸಾಯನಿಕಗಳಿಗೆ ಜನ್ಮ ನೀಡಿರಬೇಕು. ಇವು ಅನಂತರ ಕ್ರಮೇಣ ವಿಕಾಸವಾಗಿ ಮೊದಲು ಸರಳ ಏಕಕೋಶ ಜೀವಿಗಳಾಗಿಯೂ, ಅವುಗಳಿಂದ ಹಲವು ಜೀವಕೋಶಗಳಿರುವ ಜೀವಿಗಳಾಗಿಯೂ ವಿಕಾಸವಾಗುತ್ತಾ ಇಂದು ನಾವು ಭೂಮಿಯ ಮೇಲೆ ಕಾಣುವ ಎಲ್ಲ ಜೀವಿಗಳಿಗೂ ಮೂಲವಾಗಿರಬೇಕು ಎಂದು ಒಪಾರಿನ್ ಪರಿಕಲ್ಪಿಸಿದ್ದರು. ಅನಂತರ ಪ್ರಯೋಗಗಳಿಂದ ಇದು ಸಾಧ್ಯ ಎಂದು ಯೂರೆ ಮತ್ತು ಮಿಲ್ಲರ್ ಎನ್ನುವ ವಿಜ್ಞಾನಿಗಳು ನಿರೂಪಿಸಿದ್ದು ಚರಿತ್ರೆ.
ಜೀವಿಗಳ ಉಗಮದ ಬಗ್ಗೆ ಒಪಾರಿನ್ ಹೇಳಿದ್ದು ಹೀಗೆ. “ಈ ಹಿಂದೆ ತಿಳಿದುಕೊಂಡಿದ್ದಂತೆ ಜೀವ ಎನ್ನುವುದು ಯಾವುದೋ ಆಕಸ್ಮಿಕದ ಹುಟ್ಟಲ್ಲ ಅದು ವಸ್ತುವಿನ ವಿಕಾಸದಲ್ಲೊಂದು ಅವಶ್ಯಕ ಹಂತ ಎಂದು ಈಗ ಅರಿವಾಗುತ್ತಿದೆ. ಜೀವದ ವಿಕಾಸ ಎನ್ನುವುದು ಈ ವಿಶ್ವದ ಬೆಳೆವಣಿಗೆಯಲ್ಲಿನ, ವಿಶೇಷವಾಗಿ ಈ ಭೂಮಿಯ ವಿಕಾಸದಲ್ಲಿನ ಒಂದು ಸಾಮಾನ್ಯ ಪ್ರಕ್ರಿಯೆ”
—-
ರಚನೆ: ಕೊಳ್ಳೇಗಾಲ ಶರ್ಮ.
ಪ್ರಸ್ತುತಿ. ಡಾ. ಎನ್. ಆರ್. ಮಂಜುನಾಥ
ಜಾಣಸುದ್ದಿಯನ್ನು ನೀವೂ ಕೇಳಿ. ನಿಮ್ಮವರೊಂದಿಗೂ ಹಂಚಿಕೊಳ್ಳಿ.

ಜಾಣಸುದ್ದಿ ಕುರಿತ ಸಂದೇಹ, ಸಲಹೆಗಳಿಗೆ ನೇರವಾಗಿ 9886640328 ಈ ನಂಬರಿಗೆ ವಾಟ್ಸಪ್ಪು ಮಾಡಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x