ಜಾಣಸುದ್ದಿ 11: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com

ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)

ಸಂಚಿಕೆಯಲ್ಲಿ
• ಜಗ್ಗದ ಬಗ್ಗದ ಮರ
• ಸೂರ್ಯನಕುದುರೆಯ ಸೂಪರ್ ಕಣ್ಣು
• ಕೋಳಿಜ್ವರಕ್ಕೆ ಎದೆಹಾಲಿನ ನೆರವು
• ಮೊದಲ ಹೂವಿನ ಸುತ್ತ

1. ಜಗ್ಗದ ಬಗ್ಗದ ಮರ
ಮನೆ ಕಟ್ಟಿ ನೋಡು. ಮದುವೆ ಮಾಡಿ ನೋಡು ಎನ್ನುವ ಗಾದೆ ಇದೆ. ಈ ಎರಡೂ ಕೆಲಸಗಳೂ ಎಷ್ಟೊಂದು ಕಷ್ಟವನ್ನು ತರುತ್ತವೆ ಎನ್ನುವುದನ್ನು ಕುರಿತಾಗಿ ಹಿರಿಯರು ಆಡಿದ ಮಾತು ಇದು. ಕಷ್ಟ ಇನ್ನೇನಲ್ಲ. ಬಾಗಿಲಿಗೆ ಗಟ್ಟಿಯಾದ ಸಾಗುವಾನಿ ಮರವನ್ನು ಬಳಸಬೇಕೋ, ಹೊನ್ನೆ ಸಾಕೋ? ಅಥವಾ ಈಗ ಬಹಳ ಪ್ರಸಿದ್ಧಿಯಾಗಿರುವ ಹಾಗೂ ವಿವಿಧ ಮರದ ಹಾಳೆಗಳನ್ನು ಅಂಟಿಸಿ ಮಾಡಿದ ಲ್ಯಾಮಿನೇಟುಗಳು ಉಚಿತವೋ? ಈ ಆಯ್ಕೆ ಸುಲಭವಲ್ಲ. ದಪ್ಪದ ಮರದ ಬಾಗಿಲನ್ನು ಹಾಕಿಸಿದ ಮೇಲೂ ಅದರ ಹೊರಗೆ ಉಕ್ಕಿನ ಜಾಲರಿಯನ್ನು ಹಾಕುವುದನ್ನು ನೋಡಿದ್ದೀರಿ. ಎಷ್ಟೇ ಅಂದವಾದರೂ, ಮರ ತುಸು ಮೃದುವೇ. ಪುಟ್ಟ ಮನೆಯ ಮಟ್ಟಿಗೆ ಯಾವ ಮರವೂ ಆಗಬಹುದು. ಆದರೆ ದೊಡ್ಡ, ದೊಡ್ಡ ಗಗನಚುಂಬಿ ಕಟ್ಟಡಗಳ ಪಾಲಿಗೆ ಇವೇನಿದ್ದರೂ ಅಲಂಕಾರದ ವಸ್ತುಗಳು. ಅಂತಹ ಮನೆಯನ್ನು ಕಟ್ಟಲು ಕಬ್ಬಿಣ, ಕಾಂಕ್ರೀಟು, ಸಿಮೆಂಟೇ ಬೇಕು. ಏಕೆಂದರೆ ಮರ ಈ ವಸ್ತುಗಳಷ್ಟು ಗಟ್ಟಿಯಲ್ಲ. ಈ ವಸ್ತುಗಳಂತೆ ಅದು ಭಾರೀ ತೂಕವನ್ನು ತಡೆಯಲಾರದು. ಹಾಗೆಯೇ ಭಾರೀ ಬಡಿತವನ್ನೂ ತಡೆಯಲಾರದು. ಆದ್ದರಿಂದಲೇ ಮರವನ್ನು ಏನಿದ್ದರೂ ಮಂಚ, ಕುರ್ಚಿ, ಬಾಗಿಲುಗಳ ತಯಾರಿಕೆಗೆ ಬಳಸುತ್ತೇವೆಯೇ ಹೊರತು ಗೋಡೆ ಕಟ್ಟಲಲ್ಲ! ಇಗೋ ಇರುವ ಮರವನ್ನೇ ಉಕ್ಕಿನಷ್ಟು ಗಟ್ಟಿ ಮಾಡಿದರೆ ಹೇಗೆ? ಹೀಗೊಂದು ಸುದ್ದಿಯನ್ನು ನೇಚರ್ ಪತ್ರಿಕೆ ವರದಿ ಮಾಡಿದೆ. ಅಮೆರಿಕೆಯ ಮೇರೀಲ್ಯಾಂಡ್ ವಿಶ್ವವಿದ್ಯಾನಿಲಯದ ವಸ್ತು ವಿಜ್ಞಾನಿ ಮತ್ತು ಇಂಜಿನಿಯರ್ ಲಿಯಾಂಗ್ಬಿಂಗ್ ಹು ಮತ್ತು ಸಂಗಡಿಗರು ಹೀಗೊಂದು ವಸ್ತುವನ್ನು ಸೃಷ್ಟಿಸಿದ್ದಾರೆ. ಸೂಪರ್ ವುಡ್ ಎಂದು ನೇಚರ್ ಇದನ್ನು ಹೆಸರಿಸಿದೆ.

ಕಾಡಿನಿಂದ ಕಡಿದು ತಂದ ಮರವನ್ನು ನೇರವಾಗಿ ಹಾಗೆಯೇ ಬಳಸಲು ಆಗದು. ಅದನ್ನು ತುಸು ಹದಗೊಳಿಸಬೇಕು. ಏಕೆಂದರೆ ಮರದಲ್ಲಿ ಸಹಜವಾಗಿಯೇ ಸಾಕಷ್ಟು ರಂಧ್ರಗಳಿರುತ್ತವೆ. ಆ ರಂಧ್ರಗಳು ಮುಚ್ಚಿಕೊಂಡು ಗಟ್ಟಿಯಾದಷ್ಟೂ ಮರವೂ ಬಾಳಿಕೆ ಬರುತ್ತದೆ. ಈ ಕಾರಣದಿಂದಲೇ ಮರವನ್ನು ನೀರಿನಲ್ಲಿ ಸಾಕಷ್ಟು ದಿನಗಳು ಇಡುವುದೂ ಉಂಟು. ರಾಸಾಯನಿಕಗಳಲ್ಲಿ ಅದ್ದಿಡುವುದೂ ಉಂಟು. ಇವೆಲ್ಲದರಿಂದ ಮರದಲ್ಲಿಯೇ ಇರುವ ಗೋಂದು ಇತ್ಯಾದಿ ಕರಗುವ ವಸ್ತುಗಳು ಕರಗಿ ರಂಧ್ರಗಳನ್ನು ಮುಚ್ಚುತ್ತವೆ. ಅನಂತರ ಒಣಗಿಸಿದಾಗ ಮರ ಗಟ್ಟಿಯಾಗುತ್ತದೆ. ಇದು ಸರಳ ವಿಧಾನ. ಇದಲ್ಲದೆ ಇನ್ನೂ ಹಲವು ವಿಧಾನಗಳನ್ನು ಬಳಸಲಾಗುತ್ತದೆಯಾದರೂ ಅವು ಯಾವುವೂ ಉಕ್ಕಿನಷ್ಟು ಗಟ್ಟಿಯಾದ ಮರವನ್ನು ನೀಡುವುದಿಲ್ಲ. ಇದಕ್ಕೆ ಪರ್ಯಾಯವಾಗಿ ಮರದ ಹಲವಾರು ಹಾಳೆಗಳನ್ನು ಮಧ್ಯೆ ಗೋಂದಿನಂತಹ ಪಾಲಿಮರುಗಳನ್ನು ಲೇಪಿಸಿ ಒಂದಕ್ಕೊಂದು ಅಂಟುವಂತೆ ಮಾಡಿ ಕೃತಕ ಮರದ ಹಲಗೆಗಳನ್ನು ತಯಾರಿಸುತ್ತಾರೆ. ಇವುಗಳನ್ನೇ ನಾವು ಪ್ಲೈವುಡ್ಡು, ಲ್ಯಾಮಿನೇಟು ಎಂದು ಕರೆಯುತ್ತೇವೆ. ಇವು ಸಹಜವಾದ ಮರಕ್ಕಿಂತಲೂ ತುಸು ಗಟ್ಟಿಯಾದರೂ ಸರಿಯಾಗಿ ಸಂಸ್ಕರಿಸದಿದ್ದರೆ ಗೋಂದು ಬಿಚ್ಚಿಕೊಂಡು ಸೀಳಿಬಿಡಬಹುದು.

ಈ ಎಲ್ಲ ಸಮಸ್ಯೆಗೆ ಪರಿಹಾರವೆಂದುಇದೀಗ ಹು ಮತ್ತು ತಂಡದವರು ಸಾಧಾರಣ ಮರವನ್ನೆ ಉಕ್ಕಿನಂತೆ ಗಟ್ಟಿಯಾಗುವಂತೆ ಮಾಡಿದ್ದಾರೆ. ಇದಕ್ಕೆ ಇವರು ಮಾಡಿದ್ದು ಇಷ್ಟೆ. ಮರದಲ್ಲಿರುವ ಲಿಗ್ನಿನ್ ಹಾಗೂ ಹೆಮಿಸೆಲ್ಯುಲೋಸ್ ಎನ್ನುವ ವಸ್ತುಗಳನ್ನು ಕರಗಿಸಿದರು. ಈ ಎರಡೂ ವಸ್ತುಗಳೂ ಮೃದುವಾಗಿರುವುದರಿಂದಲೂ, ಗೋಂದಿನಂತಿರುವುದರಿಂದಲೂ ಮರವನ್ನು ತುಸು ದುರ್ಬಲಗೊಳಿಸುತ್ತವೆ. ಇದಕ್ಕಾಗಿ ಸೋಡಿಯಂ ಕಾರ್ಬೊನೇಟು ಮತ್ತು ಸೋಡಿಯಂ ಹೈಡ್ರಾಕ್ಸೈಡು ದ್ರಾವಣಗಳನ್ನು ಬಳಸಿದರು. ಅನಂತರ ಉಕ್ಕಿನ ದಂಡವನ್ನು ಉರುಳೆಗಳ ನಡುವೆ ಒತ್ತಿ ಹಾಳೆಗಳಾಗಿ ಸಪಾಟಾಗಿಸುವಂತೆ ಈ ಮರವನ್ನೂ ಬಿಸಿ, ಬಿಸಿಯಾಗಿರುವಾಗಲೇ ಒತ್ತಿ, ಒತ್ತಿ ತೆಳ್ಳಗಾಗಿಸಿದರು. ಮೊದಲಿದ್ದ ದಪ್ಪದ ಶೇಕಡ 20ರಷ್ಟಕ್ಕೆ ಇದನ್ನು ತೆಳ್ಳಗಾಗಿಸಿದಾಗ ಮರ ಉಕ್ಕಿನಂತೆಯೇ ಬಲು ಗಟ್ಟಿಯಾಯಿತಂತೆ. ಅದೆಷ್ಟು ಗಟ್ಟಿ ಎಂದು ಪರೀಕ್ಷಿಸಲು ಮರಕ್ಕೆ ಗುಂಡು ಹೊಡೆದು ಪರೀಕ್ಷಿಸಿದ್ದಾರೆ. ಏಕಪದರವಾಗಿ ಒತ್ತಿದ ಈ ಮರದ ಜೊತೆಗೆ ಸಾಧಾರಣ ಮರ ಹಾಗೂ ಲ್ಯಾಮಿನೇಟುಗಳನ್ನೂ ಅವು ಪಿಸ್ತೂಲಿನಿಂದ ಹಾರಿದ ಗುಂಡನ್ನು ಹೇಗೆ ತಡೆದುಕೊಳ್ಳುತ್ತವೆ ಎಂದು ಪರೀಕ್ಷಿಸಿದ್ದಾರೆ. ಗುಂಡು ಹೊಕ್ಕ ಕಡೆ ಗುಂಡಿನಷ್ಟೆ ಗಾತ್ರದ ರಂಧ್ರವಾಯಿತೇ ಹೊರತು ಲ್ಯಾಮಿನೇಟಿನಲ್ಲಿ ಆದಂತೆ ದೊಡ್ಡ ತೂತಾಗಿ ಪದರಗಳು ಸೀಳುವುದೋ, ಸಾಮಾನ್ಯ ಮರದಲ್ಲಿ ಆಗುವಂತೆ ದೊಡ್ಡ ತೂತಾಗುವುದೋ ಆಗಲಿಲ್ಲ ಎಂದು ಹು ಹೇಳಿದ್ದಾರೆ. ಧೃಢತೆ ಹಾಗೂ ಬಾಳಿಕೆ ಎರಡೂ ಇದರಲ್ಲಿದೆ ಎಂದು ಇವರು ಪರೀಕ್ಷಿಸಿದ್ದಾರೆ. ಜೊತೆಗೇ ಈ ವಿಧಿಯ ವೇಳೆ ಮರದ ರಚನೆಯಲ್ಲಾಗುವ ಸೂಕ್ಷ್ಮ ಬದಲಾವಣೆಗಳನ್ನೂ ಸೂಕ್ಷ್ಮದರ್ಶಕದಿಂದ ತೆಗೆದ ಚಿತ್ರಗಳ ಮೂಲಕ ಪರೀಕ್ಷಿಸಿದ್ದಾರೆ.

ಒಟ್ಟಾರೆ ಸಾಗುವಾನಿಯೋ, ಹೊನ್ನೆಯೋ, ಬೇವೋ, ಗಟ್ಟಿ ಮರವಂತೂ ಸಿಗುವುದು ಗ್ಯಾರಂಟಿ. ಅದಕ್ಕಾಗಿಯಾದರೂ ನಾವು ಕಾಡುಗಳನ್ನು ಉಳಿಸಿ, ಬೆಳೆಸಬೇಕು ಅಷ್ಟೆ.

ಆಕರ: Jianwei Song et al Processing bulk natural wood into a high-performance structural material N AT U R E | VO L 5 5 4 | 8 f e b ruar y 2 0 1 8, Pp 223-228
ಲಿಂಕ್: doi:10.1038/nature25476


ಚುಟುಕು ಚುರುಮುರಿ
2. ಸೂರ್ಯನ ಕುದುರೆಯ ಸೂಪರ್ ಕನ್ನಡಕ
ಸೂರ್ಯನ ಕುದುರೆಯ ಪರಿಚಯ ಇರಬೇಕಲ್ಲ. ಇಂಗ್ಲೀಷಿನಲ್ಲಿ ಇವಕ್ಕೆ ಮ್ಯಾಂಟಿಸ್ ಎನ್ನುವ ಹೆಸರಿದೆ. ಗಿಡಗಳದ್ದೇ ಬಣ್ಣ, ಎಲೆ, ಕಾಂಡಗಳಂತೆಯೇ ದೇಹ ಹೀಗೆ ಹಲವು ಬಗೆಯ ಮ್ಯಾಂಟಿಸುಗಳನ್ನು ಕಾಣಬಹುದು. ತಮ್ಮ ಪರಿಸರಕ್ಕೆ ತಕ್ಕಂತೆ ಛದ್ಮವೇಷ ಧರಿಸಿ, ಹಿನ್ನೆಲೆಯಲ್ಲಿ ಮರೆಯಾಗಿ ಬಿಡುವ ಈ ಕೀಟಗಳು ಅದ್ಭುತ ಬೇಟೆಗಾರರೂ ಹೌದು. ಗುರಿತಪ್ಪದೆ ತಮ್ಮ ಬೇಟೆಯನ್ನು ಹಿಡಿಯುವುದರಲ್ಲಿ ನಿಷ್ಣಾತರು. ಬಡಪಾಯಿಯಂತೆ ಕೈ ಮುಗಿದು ಕುಳಿತುಕೊಳ್ಳುವ ಈ ಕೀಟ ಹತ್ತಿರ ಸುಳಿಯುವ ಬೇರಾವುದೇ ಕೀಟವನ್ನೂ ತಟಕ್ಕನೆ ಹಿಡಿದು ಕಬಳಿಸುತ್ತದೆ. ಅದೂ ಆ ಕೀಟವೂ ಯಾರಿಗೂ ಕಾಣದಂತಹ ಹಿನ್ನೆಲೆಯನ್ನೇ ಹೋಲುವ ಬಣ್ಣವಿದ್ದರೂಮಸೂರ್ಯನಕುದುರೆ ಅದನ್ನು ಹಿಡಿದೇ ಹಿಡಿಯುತ್ತದೆ. ಅದು ಹೇಗೆ? ಇದು ಪ್ರಶ್ನೆ.

ಇದಕ್ಕೆ ಕಾರಣ ಅವುಗಳಿಗೂ ನಮಗಿರುವಂತೆಯೇ ಸ್ಟೀರಿಯೋದೃಷ್ಟಿ ಇದೆಯಂತೆ. ಸ್ಟೀರಿಯೋ ದೃಷ್ಟಿ ಎಂದರೆ ಇನ್ನೇನಲ್ಲ. ಅದು ಇಗ್ಗಣ್ಣ ನೋಟ. ಎರಡು ಕಣ್ಣುಗಳಿಂದಾಗಿ ವಸ್ತುಗಳಿರುವ ದೂರವನ್ನು ಅಥವಾ ಆಳವನ್ನು ಪತ್ತೆ ಮಾಡುವ ಸಾಮರ್ಥ್ಯ. ಈ ಸಾಮರ್ಥ್ಯ ಬೆನ್ನುಹುರಿ ಇರುವ ಎಲ್ಲ ಪ್ರಾಣಿಗಳಲ್ಲೂ ಇದೆ. ನರ-ವಾನರಗಳ ಬದುಕಿಗೆ ಈ ಇಗ್ಗಣ್ಣು ನೋಟ ಅಂದರೆ ಎರಡು ಕಣ್ಣಿನ ನೋಟ ಬಲು ಅವಶ್ಯಕ. ಆದರೆ ಬೆನ್ನುಹುರಿ ಇಲ್ಲದ ಕೀಟಗಳಂತಹ ಅಕಶೇರುಕ ಪ್ರಾಣಿಗಳಲ್ಲಿ ಈ ಸಾಮರ್ಥ್ಯ ಇಲ್ಲ. ಇದಕ್ಕೆ ಒಂದೇ ಒಂದು ಅಪವಾದ ಸೂರ್ಯನ ಕುದುರೆ ಎನ್ನುತ್ತಾರೆ ಬೆಂಗಳೂರಿನವರಾದ ಹಾಗೂ ಈಗ ಇಂಗ್ಲೆಂಡಿನ ನ್ಯೂಕ್ಯಾಸಲ್ ವಿಶ್ವವಿದ್ಯಾನಿಲಯದಲ್ಲಿ ನರವಿಜ್ಞಾನಿಯಾಗಿರುವ ವಿವೇಕ ನಿತ್ಯಾನಂದ. ಇತ್ತೀಚೆಗೆ ಇವರು ಸೂರ್ಯನ ಕುದುರೆಗೆ ತ್ರೀಡಿ ಕನ್ನಡಕ ಹಾಕಿ ಅದು ನೋಡುವ ಪರಿ ಹೇಗೆ ಎಂದು ತಿಳಿದಿದ್ದನ್ನು ಕರೆಂಟ್ ಬಯಾಲಜಿ ಪತ್ರಿಕೆ ವರದಿ ಮಾಡಿದೆ. ಸೂರ್ಯನ ಕುದುರೆಯ ಸ್ಟೀರಿಯೋ ದೃಷ್ಟಿಗೂ ನಮ್ಮ ಸ್ಟೀರಿಯೋ ದೃಷ್ಟಿಗೂ ವ್ಯತ್ಯಾಸವಿದೆಯಂತೆ.

ಇಗ್ಗಣ್ಣು ನೋಟ ಅಥವಾ ಸ್ಟೀರಿಯೋ ದೃಷ್ಟಿ ಎಂದರೆ ಇನ್ನೇನಲ್ಲ. ನಮ್ಮ ಎರಡೂ ಕಣ್ಣುಗಳ ನಡುವೆ ಇರುವ ದೂರದಿಂದಾಗಿ ಯಾವುದೇ ವಸ್ತುವಿನ ಬಿಂಬವೂ ಪ್ರತಿ ಕಣ್ಣಿಗೂ ಸ್ವಲ್ಪ ಬೇರೆ, ಬೇರೆಯಾಗಿಯೇ ಕಾಣುತ್ತದೆ. ಕೈಯಳತೆ ದೂರದಲ್ಲಿ ಇರುವ ವಸ್ತುವನ್ನು ಮೊದಲು ಬಲಗಣ್ಣಿನಿಂದಲೂ, ಅನಂತರ ಕೇವಲ ಎಡಗಣ್ಣಿನಿಂದಲೂ ನೋಡಲು ಪ್ರಯತ್ನಿಸಿ. ವಸ್ತು ಸ್ವಲ್ಪ ಜಾಗ ಬದಲಿಸಿದ ಹಾಗೆ ಕಾಣುತ್ತದೆ. ಈ ವ್ಯತ್ಯಾಸವೇ ನಮಗೆ ವಸ್ತುವಿನ ಎತ್ತರ, ಆಳ ದಪ್ಪವನ್ನು ತಿಳಿಸುತ್ತದೆ. ಅರ್ಥಾತ್, ತ್ರೀಡಿ ಪರಿಣಾಮವುಂಟಾಗುತ್ತದೆ.

ಈ ಪರಿಣಾಮವನ್ನು ನಾವು ಕೃತಕವಾಗಿಯೂ ಉಂಟು ಮಾಡಬಹುದು. ಉದಾಹರಣೆಗೆ, ಪೇಪರಿನ ಮೇಲೆ ಎರಡು ಬೇರೆ ಬೇರೆ ಬಣ್ಣದ ಬಿಂಬಗಳನ್ನು ಬರೆದು ಅವನ್ನು ಒಂದೊಂದು ಕಣ್ಣೂ ಬೇರೆ, ಬೇರೆ ಬಣ್ಣದ ಗಾಜಿನ ಮೂಲಕ ನೋಡುವಂತೆ ಮಾಡಿದರೆ ಎರಡೂ ಬಿಂಬಗಳೂ ಕೂಡಿ ತ್ರೀಡಿ ಬಿಂಬವಾಗಿ ತೋರುತ್ತವೆ. ಸಪಾಟಾಗಿರುವ ವೃತ್ತದ ಚಿತ್ರ ಚೆಂಡಿನ ಹಾಗೆ ತೋರುತ್ತದೆ.
ಕೌತುಕವೆಂದರೆ ನಮ್ಮ ಮಿದುಳಿನ ಸಾವಿರ ಪಾಲಲ್ಲೊಂದಂಶ ಮಿದುಳಿರುವ ಸೂರ್ಯನಕುದುರೆಯೂ ಹೀಗೆಯೇ ಆಳ-ಎತ್ತರವನ್ನು ಗುರುತಿಸುತ್ತದಲ್ಲ? ಅದು ಹೇಗೆ? ಇದೇ ವಿವೇಕ ನಿತ್ಯಾನಂದರ ತಂಡದ ಪ್ರಶ್ನೆ. ಇದಕ್ಕೆ ಉತ್ತರ ಹುಡುಕಲು ಇವರು ಒಂದು ಉಪಾಯ ಮಾಡಿದ್ದಾರೆ. ಸೂರ್ಯನ ಕುದುರೆಗೆ ಒಂದು ಬಣ್ಣದ ಕನ್ನಡಕ ಹಾಕಿದ್ದಾರೆ. ಪ್ರಪಂಚದ ಅತ್ಯಂತ ಪುಟ್ಟ ಕನ್ನಡಕ ಇದು ಎಂದರೂ ತಪ್ಪಲ್ಲ. ಬಣ್ಣದ ಪರದೆಯ ಮೇಲೆ ಚಿತ್ರವೊಂದು ಪರದೆಯ ಆಳದಲ್ಲಿ, ಇಲ್ಲವೇ ಅದರ ಮುಂದೆ ಸುಮಾರು 2.5 ಸೆಮೀ ದೂರದಲ್ಲಿ ಎದ್ದು ತೋರುವಂತೆ ಇಲ್ಲವೇ ಅದೆಷ್ಟು ದೂರದಲ್ಲಿದೆ ಎಂದು ತಿಳಿಯದಂತೆಯೂ ಬಿಂಬಗಳನ್ನು ಪ್ರದರ್ಶಿಸಿ, ದೃಷ್ಟಿ ಪರೀಕ್ಷಿಸಬಹುದು.

ಎರಡು ವರ್ಷಗಳ ಹಿಂದೆ ಈ ಕನ್ನಡಕ ಬಳಸಿ ಸೂರ್ಯನ ಕುದುರೆಗೆ ನಿಜಕ್ಕೂ ಸ್ಟೀರಿಯೋ ದೃಷ್ಟಿ ಇದೆ ಎಂದು ಸ್ಪಷ್ಟವಾಗಿ ತಿಳಿದಿತ್ತು. ಜೊತೆಗೇ ಬೆಳಕನ್ನು ಗ್ರಹಿಸುವುದರಲ್ಲಿ ಎಡಗಣ್ಣು ಮತ್ತು ಬಲಗಣ್ಣಿನ ನಡುವೆ ಬಹಳಷ್ಟು ವ್ಯತ್ಯಾಸವಿದ್ದರೂ ಇವುಗಳ ಇಗ್ಗಣ್ಣು ನೋಟ ಸ್ಪಷ್ಟವಾಗಿರುತ್ತದೆ ಎಂದು ತಿಳಿಸಿದ್ದರು. ಇದೀಗ ಮುಂದುವರೆದು ಮನುಷ್ಯರು ಹಾಗೂ ಈ ಕೀಟಗಳ ದೃಷ್ಟಿಯಲ್ಲಿ ವ್ಯತ್ಯಾಸ ಹೇಗಿರಬಹುದು ಎಂದು ಗುರುತಿಸಿದ್ದಾರೆ.

ಇದಕ್ಕೆ ಇವರು ಮಾಡಿದ್ದು ಇಷ್ಟೆ. ಕೀಟಕ್ಕೆ ತೋರಿಸಿದ ಬಿಂಬಗಳ ಹಿನ್ನೆಲೆಯನ್ನು ಇನ್ನೂ ಸಂಕೀರ್ಣವಾಗಿಸಿದ್ದಾರೆ.
ಬಿಂಬ ತೋರುವ ಪರದೆಯ ತುಂಬಾ ಬಿಳಿಯ ಹಾಗೂ ಮತ್ತೊಂದು ಬಣ್ಣದ ಸಣ್ಣ ಚುಕ್ಕಿಗಳಿವೆ. ದೂರದಿಂದ ನೋಡಲು ಇದು ಬಣ್ಣದ ಪರದೆ ಎನಿಸುತ್ತದೆ. ಇಂತಹ ಎರಡು ಪರದೆಗಳನ್ನು ಬಳಸಿದ್ದಾರೆ. ಒಂದು ಪರದೆಯಲ್ಲಿ ಎಡ ಮತ್ತು ಬಲಗಣ್ಣಿಗೆ ಕಾಣುವ ಪರದೆಗಳಲ್ಲಿ ಬಿಳಿ ಚುಕ್ಕಿಗಳ ಸ್ಥಾನ ಅದದೇ ಸ್ಥಾನದಲ್ಲಿ ಇರುತ್ತದೆ. ಮತ್ತೊಂದು ಪರದೆಯಲ್ಲಿ ಬಿಳಿಚುಕ್ಕೆ ಇರುವ ಜಾಗದಲ್ಲಿ ಬಣ್ಣದ ಚುಕ್ಕೆ ಇರುತ್ತದೆ. ಈ ಪರದೆಯ ಮೇಲೆ ಬಿಳಿ ಮತ್ತು ಬಣ್ಣದ ಚುಕ್ಕೆಯ ಬಿಂಬವೊಂದು ಜಾಗ ಬದಲಿಸುತ್ತಾ ಸಾಗುತ್ತದೆ. ಸುರುಳಿಯಾಕಾರದಲ್ಲಿ ಸಾಗುತ್ತ ಪರದೆಯ ಮಧ್ಯದಲ್ಲಿ ಬಂದು ನಿಲ್ಲುವಂತೆ ಇದನ್ನು ಸೃಷ್ಟಿಸಿದ್ದಾರೆ. ಇಂತಹ ಪರದೆಗಳನ್ನು ಕೊಟ್ಟರೆ ಬಿಳಿ-ಬಣ್ಣದ ಚುಕ್ಕೆಗಳ ಸ್ಥಾನ ಬದಲಿಸಿದ ಪರದೆಯ ಹಿನ್ನೆಲೆಯಲ್ಲಿ ವಸ್ತುವಿನ ಚಲನೆಯನ್ನ ಗುರುತಿಸಿದರೂ, ಅದು ಎಲ್ಲಿದೆ ಎಂದು ಹೇಳುವುದು ಮನುಷ್ಯರಿಗೂ ಕಷ್ಟ . ಆದರೆ ಸೂರ್ಯನ ಕುದುರೆ ಮಾತ್ರ ಇದನ್ನು ಗುರುತಿಸುತ್ತದೆ. ಬಿಂಬ ನಿಶ್ಚಲವಾಗಿದ್ದಾಗ ಹಿನ್ನೆಲೆ ಗೋಜಲಾಗಿದ್ದರೆ ಅದಕ್ಕೆ ತಿಳಿಯುವುದಿಲ್ಲ. ಆದರೆ ಹಿನ್ನೆಲೆ ಗೋಜಲಾಗಿದ್ದರೂ, ಬೇಟೆಯ ಅಲುಗಾಟದಿಂದಲೇ ಅದೆಷ್ಟು ದೂರದಲ್ಲಿದೆ ಎಂದು ಗುರುತಿಸಿ ಬಿಡುತ್ತದೆ. ಇದು ಮನುಷ್ಯರಿಗೆ ಕಷ್ಟ.

ಇದರ ಅರ್ಥ ಇಷ್ಟೆ. ಸ್ಟೀರಿಯೋ ದೃಷ್ಟಿ ಎನ್ನುವ ವಿದ್ಯಮಾನ ಹೀಗೇ ಆಗಬೇಕೆಂದಿಲ್ಲ. ಅದು ಬೇರೆ,ಬೇರೆ ವಿಧಾನದಲ್ಲಿ ವಿಕಾಸವಾಗಿರಬಹುದು. ಸೂರ್ಯನಕುದುರೆಯಲ್ಲಿ ಒಮ್ಮೆ, ಹಾಗೂ ಇನ್ನೊಮ್ಮೆ ಅದು ಪ್ರತ್ಯೇಕವಾಗಿ ಹುಟ್ಟಿಕೊಂಡಿರಬೇಕು. ನೋಡಿ ನಿಸರ್ಗದ ಆಯ್ಕೆ ಹೇಗಿದೆ.
ಆಕರ:
Vivek Nityanand et al. A Novel Form of Stereo Vision in the Praying Mantis, Current Biology 28, 1–6, February 19, 2018
ಲಿಂಕ್: https://doi.org/10.1016/j.cub.2018.01.012


3. ಕೋಳಿ ಜ್ವರಕ್ಕೆ ಹಾಲಿನ ಮದ್ದು.
ಕೋಳಿಜ್ವರ ಗೊತ್ತಿರಬೇಕಲ್ಲ? ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಕೋಳಿಜ್ವರದ ಭೀತಿಯಿಂದಾಗಿ ಚಿಕನ್ ಅಂಗಡಿಗಳು ಹಾಗೂ ಚಿಕನ್ ಮಾಂಸದ ಮಾರಾಟವನ್ನು ಕೆಲವು ದಿನಗಳ ಕಾಲ ನಿಷೇಧಿಸಿದ್ದು ವರದಿಯಾಗಿತ್ತು. ಮನುಷ್ಯರಿಗೆ ನೆಗಡಿ ಬರುವ ಹಾಗೆಯೇ ಕೋಳಿಗಳಿಗೂ ಈ ವೈರಸ್ ಜ್ವರ ಕಾಡುತ್ತದೆ. ವಿಶೇಷವೆಂದರೆ ಒಂದು ವೈರಸ್ಸಿಗೆ ಔಷಧಿ ಹುಡುಕುವಷ್ಟರಲ್ಲಿ, ಅದೇ ವೈರಸ್ ತುಸು ಬದಲಾಗಿ ಇನ್ನೊಂದು ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗೆ ಕಳೆದ ಹದಿನಾಲ್ಕು ವರ್ಷಗಳಿಂದಲೂ ಪ್ರಪಂಚದ ಹಲವೆಡೆ ಕೋಳಿಜ್ವರ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಸುದ್ದಿ ಮಾಡುತ್ತಲೇ ಇರುತ್ತದೆ. ಇವುಗಳಲ್ಲಿ ಎರಡು ಬಗೆಯ ವೈರಸ್ ಮನುಷ್ಯರನ್ನೂ ತಾಕಬಲ್ಲುದು ಎನ್ನುವುದು ಇನ್ನೂ ಭೀತಿಯ ವಿಷಯ. ಹೀಗಾಗಿ ಕೋಳಿಜ್ವರ ಎಂದ ಕೂಡಲೇ ಎಲ್ಲರ ಕಿವಿಯೂ ನೆಟ್ಟಗಾಗುವುದು ಖಂಡಿತ.
ಸಾಧಾರಣವಾಗಿ ವೈರಸ್ ಸೋಂಕಿಗೆ ಔಷಧವಿಲ್ಲ. ಏನಿದ್ದರೂ ಅವು ದೇಹ ತಾಕುವ ಮೊದಲೇ ಲಸಿಕೆಯನ್ನು ಹಾಕಬೇಕು. ತೊಂದರೆ ಎಂದರೆ ಪ್ರತಿಯೊಂದು ಬಗೆಯ ವೈರಸ್ಸಿಗೂ ಹೊಸದೊಂದು ಲಸಿಕೆಯನ್ನು ಸೃಷ್ಟಿಸಬೇಕಾಗುತ್ತದೆ. ಇದೊಂದು ದೊಡ್ಡ ಸಮಸ್ಯೆ. ಹಲವಾರು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಆಂಟಿಬಯಾಟಿಕ್ಕುಗಳಂತೆ ಹಲವಾರು ವೈರಸ್ಸುಗಳನ್ನು ಕೊಲ್ಲುವ ಔಷಧಿ ಇದ್ದರೆ ಎಷ್ಟು ಚೆನ್ನ ಅಲ್ಲವೇ?

ಇದೋ. ಹಾಗೊಂದು ಸುದ್ದಿ ಬಂದಿದೆ. ಮನುಷ್ಯರ ಎದೆಹಾಲಿನಲ್ಲಿರುವ ಸಕ್ಕರೆಯನ್ನೇ ಬಳಸಿ ಕೋಳಿಜ್ವರ ತರುವ ಹಲವಾರು ವೈರಸ್ಸುಗಳನ್ನು ಕೊಲ್ಲುವ ಬಹುಸಾಮರ್ಥ್ಯದ ಔಷಧ ತಯಾರಿಸಬಹುದು ಎಂದು ಸೈಂಟಿಫಿಕ್ ರಿಪೋರ್ಟ್ಸ ಪತ್ರಿಕೆ ವರದಿ ಮಾಡಿದೆ. ಕೊರಿಯಾದ ಸುನ್ ಮೂನ್ ವಿಶ್ವವಿದ್ಯಾನಿಲಯದ ಜೇ ಕ್ಯೂ ಸೋಂಗ್ ಮತ್ತು ಸಂಗಡಿಗರು ಹೀಗೊಂದು ಸುದ್ದಿಯನ್ನು ಮಾಡಿದ್ದಾರೆ. ಎದೆಹಾಲಿನಲ್ಲಿರುವ ಲ್ಯಾಕ್ಟೋಸ್ ಸಕ್ಕರೆಯ ಅಣುಗಳಿಗೆ ಬಾಲವೊಂದನ್ನು ಜೋಡಿಸಿ ಇವು ಕೋಳಿಜ್ವರದ ವೈರಸ್ಗಳನ್ನು ಹೆಕ್ಕುವಂತೆ ಮಾಡಬಹುದಂತೆ. ಅನಂತರ ವೈರಸ್ಗಳು ಅಂಟಿಕೊಂಡ ಈ ಸಯಾಲಿಲ್ ಲ್ಯಾಕ್ಟೋಸ್ ಸಕ್ಕರೆಯನ್ನು ತೊಳೆದರೆ ಸಾಕು. ವೈರಸ್ಗಳು ದೇಹದಿಂದ ಗಡೀಪಾರಂತೆಯೇ ಸರಿ.

ಎದೆಹಾಲಿನ ಸಕ್ಕರೆಗೂ ವೈರಸ್ಸಿಗೂ ಸಂಬಂಧ ಹೀಗೆ. ವೈರಸ್ಸುಗಳು ದೇಹವನ್ನು ಹೊಕ್ಕ ನಂತರ ಜೀವಕೋಶಗಳೊಳಗೆ ನುಸುಳಬೇಕು. ಇದಕ್ಕಾಗಿ ಅವು ಜೀವಕೋಶದ ಗೋಡೆಯಲ್ಲಿರುವ ಹೀಮಗ್ಲುಟಿನಿನ್ ಎನ್ನುವ ಪ್ರೋಟೀನುಗಳ ಜೊತೆಗೆ ಕೈ ಜೋಡಿಸುತ್ತವೆ. ಸಯಾಲಿಲ್ ಲ್ಯಾಕ್ಟೋಸ್ ಕೂಡ ಈ ಪ್ರೋಟೀನಿನ ಜೊತೆಗೆ ತಳುಕಿಕೊಳ್ಳುತ್ತದೆ. ಹೀಗಾಗಿ ವೈರಸ್ಸಿಗೆ ಒಳಹೋಗಲು ಅವಕಾಶವೇ ಇಲ್ಲದಂತಾಗುತ್ತದೆ.

ಎದೆಹಾಲಿನ ಈ ಸಕ್ಕರೆಯ ಔಷಧವನ್ನು ಕೃಷಿ ಮಾಡಿದ ಜೀವಕೋಶಗಳು ಹಾಗೂ ವೈರಸ್ಸುಗಳ ಜೊತೆಗೆ ಕೂಡಿಸಿ ಜೀವಕೋಶಗಳೊಳಗೆ ವೈರಸ್ಸು ನುಸುಳುವುದೇ ಎಂದು ಪರೀಕ್ಷಿಸಿದ್ದಾರೆ. ಹಾಗೆಯೇ ವೈರಸ್ಸುಗಳನ್ನು ಕೋಳಿಗಳಿಗೆ ಚುಚ್ಚಿ ಅವುಗಳಿಗೆ ಸಕ್ಕರೆಯ ಮದ್ದನ್ನು ನೀಡಿದ್ದಾರೆ. ಈ ಕೋಳಿಗಳಲ್ಲಿ ಜ್ವರ ಕಾಣಿಸಿದ್ದು ಕಡಿಮೆಯಂತೆ.
ಸಯಾಲಿಲ್ ಲ್ಯಾಕ್ಟೋಸು ಸಕ್ಕರೆ ಒಂದಲ್ಲ ಎರಡಲ್ಲ, ಇದುವರೆವಿಗೂ ಪರಿಚಯವಿರುವ ಎಲ್ಲ ಕೋಳಿಜ್ವರದ ವೈರಸ್ಸುಗಳನ್ನೂ ದೇಹದಿಂದ ಹೊರಗೆ ತಳ್ಳಿಬಿಡುತ್ತದೆ ಎಂದು ಇವರು ಹೇಳುತ್ತಾರೆ. ಹತ್ತು ವೈರಿಗಳ ಜೊತೆಗೆ ಹೋರಾಡಲು ಒಂದೇ ಕತ್ತಿ ಎಂದ ಹಾಗಾಯಿತು.

ಅದು ಸರಿ. ಬೃಹತ್ ಪ್ರಮಾಣದಲ್ಲಿ ಈ ಔಷಧ ಬೇಕಾದರೆ ಅಷ್ಟೊಂದು ಎದೆಹಾಲನ್ನು ಎಲ್ಲಿಂದ ತರೋಣ ಎಂದಿರಾ? ಕಾದು ನೋಡೋಣ. ಅದಕ್ಕೂ ಉತ್ತರ ಇರಬಹುದು.

ಆಕರ: Ramesh Kumar Pandey et al., Broad-spectrum neutralization of
avian influenza viruses by sialylated human milk oligosaccharides: in vivo
assessment of 3′-sialyllactose against H9N2 in chickens, Scientific Reports | (2018) 8:2563 | DOI:10.1038/s41598-018-20955-4


4. ಮೊದಲ ಹೂವಿನ ಸುತ್ತಮುತ್ತ
ಹೂವೇ, ಹೂವೇ ಎನ್ನುವ ಹಾಡಿದೆಯಲ್ಲ! ವಿಜ್ಞಾನಿಗಳಂತೂ ಈ ಹಾಡನ್ನು ಎಷ್ಟು ಹಾಡುತ್ತಾರೋ ಗೊತ್ತಿಲ್ಲ. ಪ್ರಾಣಿಗಳಲ್ಲಿ ಕೀಟಗಳಂತೆ ಸಸ್ಯಗಳಲ್ಲಿ ಹೂಗಿಡಗಳು ಬಲು ವೈವಿಧ್ಯಮಯವಾದಂತವು. ಪ್ರತಿ ಹೂವೂ ವಿಶಿಷ್ಟ. ತೊಗರಿಯ ಹೂವು ಕೋಳಿಯ ಕೊಕ್ಕಿನ ರೀತಿ. ದಾಸವಾಳದ್ದೋ ಒಂದು ಸುತ್ತಿನಿಂದ ಹಲವು ಸುತ್ತುಗಳ ಹೂವು. ಗುಲಾಬಿಯಲ್ಲಿ ಸುತ್ತು ಎಲ್ಲಿ ಆರಂಭಿಸಿ ಎಲ್ಲಿ ಮುಗಿಯುತ್ತದೆ ಎನ್ನುವುದೂ ಗೊತ್ತಾಗದಷ್ಟು ಸುಂದರ. ಸೂರ್ಯಕಾಂತಿಯಲ್ಲಿಯೋ ಸಾವಿರಾರು ಹೂವುಗಳು ಒಂದೆಡೆ ಗುಂಪಾಗಿವೆ. ಇವುಗಳಲ್ಲೂ ನಡುವಿನಲ್ಲಿರುವ ಹೂವುಗಳೂ ಅಂಚಿನಲ್ಲಿರುವ ಹೂವುಗಳೂ ವಿಭಿನ್ನ. ಇಷ್ಟೆಲ್ಲ ವೈವಿಧ್ಯವಿದ್ದರೂ ಹೂವುಗಳ ರಚನೆಯಲ್ಲೊಂದು ಮೂಲ ವಿನ್ಯಾಸ ಇದೆ ಎನ್ನುವುದು ವಿಜ್ಞಾನಿಗಳ ತರ್ಕ.

ಅದೇನೋ ಸರಿ. ಇಷ್ಟೆಲ್ಲ ವೈವಿಧ್ಯವಿರುವ ಹೂವುಗಳ ಆರಂಭ ಈ ಭೂಮಿಯ ಮೇಲೆ ಆಗಿದ್ದು ಹೇಗೆ? ಯಾವಾಗ ಎನ್ನುವ ಬಗ್ಗೆ ಇನ್ನೂ ಇದಮಿತ್ಥಂ ಎನ್ನುವ ಪುರಾವೆಗಳಿಲ್ಲ. ಸುಮಾರು 14 ಕೋಟಿ ವರ್ಷಗಳ ಹಿಂದೆ ಹೂವುಗಿಡಗಳ ಉಗಮವಾಗಿರಬೇಕು ಎಂದು ಊಹಿಸಲಾಗಿದೆ. ಸೈಕಾಸ್ ಗಿಡಗಳಂತಹ ನಗ್ನಬೀಜಿಗಳ ಒಂದು ಶಾಖೆ ಹೂ ಗಿಡಗಳಾಗಿ ವಿಕಾಸವಾಗಿರಬೇಕು ಎನ್ನುವುದು ಒಂದು ಕಲ್ಪನೆ. ಆ ಶಂಕುವಿನಾಕಾರದ ಹೂಗುಚ್ಛಗಳೇ ಒತ್ತಾಗಿ, ಪುಟ್ಟದಾಗಿ ಹೂವಿನ ರೂಪ ತಳೆದಿರಬೇಕು.

ದಾಸವಾಳವನ್ನೇ ತೆಗೆದುಕೊಳ್ಳಿ. ಹೊರಗೆ ಪುಟ್ಟ ಹಸಿರಿನ ಪುಷ್ಪಪಾತ್ರೆ. ಅದರೊಳಗೆ ಹೂ ಪಕಳೆಗಳು. ಅದರೊಳಗಿನ ಸುತ್ತು ಪರಾಗ-ಕೇಶರಗಳು. ಅತ್ಯಂತ ಒಳಗಿನದ್ದು ಅಂಡಾಶಯದ್ದು.
ಇದು ಮೂಲ ವಿನ್ಯಾಸ. ಈ ವಿನ್ಯಾಸದಲ್ಲಿ ಅಷ್ಟಿಷ್ಟು ಬದಲಾಗಿ ಬೇರೆ, ಬೇರೆ ಬಗೆಯ ಹೂವುಗಳು ವಿಕಾಸವಾಗಿವೆ. ಹಾಗಿದ್ದರೆ ಈ ಎಲ್ಲ ಹೂವುಗಳಿಗೆ ಮೂಲವೆನ್ನಿಸುವ ಹೂವು ಹೇಗಿದ್ದಿರಬಹುದು?
ಇದನ್ನು ಊಹಿಸುವುದೂ ಕಷ್ಟವೇ. ಪುರಾವೆಗಳು ಇವೆಯೋ ಎಂದರೆ ಮೃದು ಪಕಳೆಗಳ ಹೂವುಗಳ ಫಾಸಿಲುಗಳು ಉಳಿಯುವುದು ಕಷ್ಟ. ಹೀಗಾಗಿ ಪುರಾತನ ಹೂವುಗಳ ಸ್ವರೂಪ ಹೇಗಿತ್ತೋ ಎಂದು ತಿಳಿಯಲಾಗಿಲ್ಲ. ಹಿಂದಿನ ಕಾಲಕ್ಕೆ ಕರೆದೊಯ್ಯುವ ಟೈಂ ಮೆಶೀನ್ ಇದ್ದಿದ್ದರೆ ಇವೆಲ್ಲವೂ ನಿಜವೋ ಸುಳ್ಳೋ ಖಾತ್ರಿ ಪಡಿಸಿಕೊಳ್ಳಬಹುದಿತ್ತು. ಅದಿಲ್ಲದಿರುವುದರಿಂದ ಪರೋಕ್ಷವಾಗಿ ಏನೆಲ್ಲ ಸಾಧ್ಯತೆಗಳಿವೆಯೋ ಅವನ್ನು ಗಮನಿಸಿ, ಪುರಾತನ ಹೂವು ಹೇಗಿದ್ದಿರಬಹುದು ಎಂದು ಚಿತ್ರಿಸಬೇಕಾಗುತ್ತದೆ.

ಇತ್ತೀಚೆಗೆ ಹೀಗೊಂದು ಪ್ರಯತ್ನ ನಡೆದಿದ್ದು ಈಗ ಸುದ್ದಿಯಲ್ಲಿದೆ. ಇ-ಫ್ಲವರ್ ಎನ್ನುವ ಈ ಯೋಜನೆಯಲ್ಲಿ ನಮಗೆ ಗೊತ್ತಿರುವ ವಿವಿಧ ವಿನ್ಯಾಸದ ಹೂವುಗಳನ್ನು ವಿಂಗಡಿಸಲಾಯಿತು. ಎಂಟು ವರ್ಷಗಳ ಕಾಲ ನಡೆದ ಈ ಪ್ರಯತ್ನದಲ್ಲಿ ಹೂವುಗಳು ರೂಪಿಗೆ ಅವಶ್ಯಕವಾದ ಇಪ್ಪತ್ತು ಗುಣಗಳನ್ನು ಗುರುತಿಸಿ, ಕಾಲ-ಕಾಲಕ್ಕೆ ಅವು ಹೇಗೆ ಬದಲಾಗಿವೆ ಎಂದು ಗುರುತಿಸಲು ಪ್ರಯತ್ನಿಸಲಾಯಿತು. ಹೊಸ ವಿನ್ಯಾಸಗಳು ರೂಪುಗೊಳ್ಳುವ ಕಾಲ ಹಾಗೂ ಹೂವು ರೂಪುಗೊಳ್ಳಲು ಕಾರಣವಾದ ಜೈವಿಕ ಅಂಶಗಳು ಯಾವ್ಯಾವುವು ಒಟ್ಟಿಗಿದ್ದುವು ಎಂದು ತಾಳೆ ಹಾಕಲಾಯಿತು. ಇವೆಲ್ಲವನ್ನೂ ಮಾಡಿದಾಗ ಅತಿ ಪುರಾತನವಾದ ಹೂವಿನಲ್ಲಿ ಯಾವ ಗುಣಗಳಿದ್ದುವು ಎಂಬ ಒಂದು ಪರಿಕಲ್ಪನೆ ಮೂಡಿತ್ತು. ಅತಿ ಮುಖ್ಯವಾಗಿ ಹಳೆಯ ಹೂವಿನಲ್ಲಿ ಹೂವಿನ ಅಂಗಗಳು ದಾಸವಾಳದಲ್ಲಿ ಕಾಣುವಂತೆ ಹಲವು ಸುತ್ತುಗಳಲ್ಲಿ ಇದ್ದುವು, ಗುಲಾಬಿಯಂತೆ ಸುರುಳಿಗಳಲ್ಲಿ ಅಲ್ಲ ಎಂದು ಭಾವಿಸಲಾಗಿತ್ತು. ಇದನ್ನೇ ಪೃಥ್ವಿಯ ಮೊದಲ ಹೂವು ಎಂದು ಕರೆಯಲಾಗಿತ್ತು.

ಕಳೆದ ವರ್ಷ ಅನಾವರಣಗೊಂಡ ಹೂವಿನ ಈ ಚಿತ್ರ ಪೂರ್ತಿ ಸರಿಯಿರಲಿಕ್ಕಿಲ್ಲ ಎನ್ನುವ ಸುದ್ದಿ ಬಂದಿದೆ. ನೇಚರ್ ಪತ್ರಿಕೆಯಲ್ಲಿ ವರದಿಯಾಗಿರುವಂತೆ ಇದೇ ಅಂಶಗಳನ್ನು ಇನ್ನೂ ಕೂಲಂಕಷವಾಗಿ ಗಮನಿಸಿದರೆ, ಸುತ್ತುಗಳ ಜೊತೆಗೇ ಸುರುಳಿ ರಚನೆಯ ಅಂಶಗಳೂ ಅಷ್ಟೇ ಪುರಾತನವಾಗಿರುವುದು ಕಂಡಿದೆ. ಅಂದರೆ ಅರ್ಥ ಇಷ್ಟೆ. ಆರಂಭದ ಹೂವುಗಳಲ್ಲಿ ಸುತ್ತುಗಳೂ ಇದ್ದುವು, ಸುರುಳಿಗಳೂ ಇದ್ದುವು.

ಆಕರ: Heidi Ledford, Debate blooms over Earth’s first flower, Science, VO L 5 5 4 | N AT U R E | 1 5 3-154, 2018


ಜಾಣನುಡಿ
ಫೆಬ್ರವರಿ 11.

ಸುಪ್ರಸಿದ್ಧ ಭೌತವಿಜ್ಞಾನಿ ಲಿಯೋ ಜಿಲಾರ್ಡ್ ಜನಿಸಿದ ದಿನ. 1898ರಲ್ಲಿ ಅಂದಿನ ಜರ್ಮನಿಯಲ್ಲಿ ಜನಿಸಿದ ಈತ ಅಂದಿನ ಹಲವು ಜರ್ಮನ್ ವಿಜ್ಞಾನಿಗಳಂತೆಯೇ ನಾಜೀ ಸರಕಾರದಿಂದಾಗಿ ನೊಂದು ಅಮೆರಿಕೆಗೆ ವಲಸಿ ಹೋದರು. ಪರಮಾಣು ಬೀಜಗಳನ್ನು ಒಡೆದು ನಿರಂತರವಾಗಿ ನಡೆಯುವ ಸರಪಳಿ ಕ್ರಿಯೆಯನ್ನು ಮಾಡಬಹುದು ಎಂದು ತರ್ಕಿಸಿ, ಪ್ರದರ್ಶಿಸಿದ ಕೀರ್ತಿ ಎನ್ರಿಕೊ ಫರ್ಮಿಯ ಹಾಗೂ ಇವರಿಗೆ ಸಲ್ಲುತ್ತದೆ. ಈ ಪ್ರಕ್ರಿಯೆಯೇ ಮುಂದೆ ಪರಮಾಣು ಬಾಂಬಿನ ತಯಾರಿಕೆಗೂ ನಾಂದಿ ಹಾಡಿತು. ಆದರೆ ಬಾಂಬಿನ ದುಷ್ಪರಿಣಾಮಗಳಿಂದ ಮನನೊಂದ ಜಿಲಾರ್ಡ್ ಅನಂತರ ಪರಮಾಣು ಬಾಂಬಿನ ತಯಾರಿಕೆಯನ್ನು ವಿರೋಧಿಸಿ, ಪರಮಾಣು ಶಕ್ತಿಯ ಶಾಂತಿಯುತ ಬಳಕೆಯನ್ನು ಪ್ರೋತ್ಸಾಹಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು.
“ವಿಜ್ಞಾನಿಯೊಬ್ಬ ಏನನ್ನಾದರೂ ಹೇಳಿದಾಗ ಇತರೆ ವಿಜ್ಞಾನಿಗಳು ಆತ ಹೇಳಿದ್ದು ಸರಿಯೋ, ತಪ್ಪೋ ಎಂದಷ್ಟೆ ಪ್ರಶ್ನಿಸಿದರೆ ಸಾಕು. ಆದರೆ ಅದೇ ಮಾತನ್ನು ರಾಜಕಾರಣಿ ಹೇಳಿದಾಗ, ಹೀಗೇಕೆ ಹೇಳುತ್ತಿದ್ದಾನೆ ಎಂದೂ ಪ್ರಶ್ನಿಸಬೇಕಾಗುತ್ತದೆ.” ಎಂದು ಜಿಲಾರ್ಡ್ ಹೇಳುತ್ತಿದ್ದರು. ಈ ಮಾತು ಎಷ್ಟು ನಿಜ ಅಲ್ಲವೇ?
—-
ರಚನೆ ಮತ್ತು ಪ್ರಸ್ತುತಿ: ಕೊಳ್ಳೇಗಾಲ ಶರ್ಮ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x