ಜಾಣಸುದ್ದಿ 10: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com

ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)

ಈ ಸಂಚಿಕೆಯಲ್ಲಿ

ಇಂದಿನ ಸಂಚಿಕೆಯಲ್ಲಿ
• ತಾಯಿಗೆ ಒದೆಯುವ ಮಕ್ಕಳು
• ಹೊಸ ನೋಟಿಗೊಂದು ಹೊಸ ಶಾಯಿ
• ಚಂದಿರನೇತಕೆ ನಾಚಿದನಮ್ಮ?
• ಮೋಡ ಬಿತ್ತನೆಯ ರಹಸ್ಯ

1. ತಾಯಿಗೆ ಒದೆಯುವ ಮಕ್ಕಳು
ಇದೇನಿದು? ಜಾಣಸುದ್ದಿಯಲ್ಲಿ ಕ್ರೈಂ ಸುದ್ದಿಯೇ ಎನ್ನಬೇಡಿ. ಇದು ನಿತ್ಯವೂ ಟೀವಿಯಲ್ಲಿ ಭಯಾನಕವಾಗಿ ತೋರಿಸುವ ಸುದ್ದಿ ಅಲ್ಲ. ಆದರೆ ಎಲ್ಲ ತಾಯಂದಿರಿಗೂ ತಿಳಿದಿರುವ ಸತ್ಯದ ಗುಟ್ಟು. ಹೌದು. ಮಕ್ಕಳ ಈ ಒದೆತವನ್ನು ಅನುಭವಿಸದ ತಾಯಂದಿರೇ ಇಲ್ಲ ಎನ್ನಬೇಕು. ಬಸುರು ಬೆಳೆಯುತ್ತಿದ್ದಂತೆಯೇ ತಾಯಂದಿರಿಗೆ ಹೊಟ್ಟೆಯಲ್ಲಿ ಇನ್ನೂ ಬೆಳೆಯುತ್ತಿರುವ ಮಗುವು ಒದೆಯುತ್ತಿರುವ ಅನುಭವ ಸ್ಪಷ್ಟವಾಗಿ ಗೊತ್ತಾಗುತ್ತದೆ. ಕೆಲವು ತಾಯಂದಿರಿಗೆ ಇದು ಖುಷಿಯೋ ಖುಷಿ. ಅಜ್ಜಿಯಂದಿರೋ, ಮಗು ಜೋರಾಗಿ ಒದೆಯುತ್ತಿದ್ದರೆ ಗಂಡೇ ಹುಟ್ಟುವುದು ಎಂತಲೋ, ಮೆಲ್ಲನೆ ಒದೆಯುತ್ತಿದ್ದರೆ ಹೆಣ್ಣು ಎಂತಲೋ ಭವಿಷ್ಯ ನುಡಿಯುತ್ತಾರೆ.
ಅವರ ಭವಿಷ್ಯ ನಿಜವಾಗುತ್ತದೆಯೋ ಇಲ್ಲವೋ ಎನ್ನುವುದು ಬೇರೆ ಮಾತು. ಆದರೆ ಹೊಟ್ಟೆಯೊಳಗೆ ಇನ್ನೂ ಕೈಕಾಲು ಮೂಡಿಸಿಕೊಳ್ಳುತ್ತಿರುವ ಮಗು ಅಷ್ಟು ಬಲವಾಗಿ ಒದೆಯಬಲ್ಲುದೇ? ಅಥವಾ ಇದು ತಾಯಂದಿರ ಭ್ರಮೆಯೋ? ಬಸುರಿನಲ್ಲಿರುವ ಮಗು ಒದೆಯುವುದೇಕೆ? ಇವೆಲ್ಲ ಪ್ರಶ್ನೆಗಳೂ ಮಗುವಿನ ನಿರೀಕ್ಷೆಯಲ್ಲಿರುವ ತಾಯಂದಿರನ್ನು ಕಾಡುವಂತೆಯೇ ವಿಜ್ಞಾನಿಗಳನ್ನೂ ಕಾಡಿದೆ. ಇಂಗ್ಲೆಂಡಿನ ಇಂಪೀರಿಯಲ್ ಕಾಲೇಜಿನ ಸ್ಟೆಫಾನ್ ವರ್ಬ್ರಗನ್ ಮತ್ತು ಸಂಗಡಿಗರು ಈ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ. ಆರು ತಿಂಗಳ ಮಗು ಒದ್ದರೆ ಎಷ್ಟು ಬಲವಾಗಿ ಒದೆಯಬಹುದು ಎಂದೂ ಲೆಕ್ಕ ಹಾಕಿದ್ದಾರಂತೆ. ಈ ಸುದ್ದಿಯನ್ನು ರಾಯಲ್ ಸೊಸೈಟಿ ಇಂಗ್ಲೆಂಡು ಪ್ರಕಟಿಸುವ ಇಂಟರ್ಫೇಸ್ ಪತ್ರಿಕೆ ಪ್ರಕಟಿಸಿದೆ.

ಗರ್ಭಸ್ಥ ಭ್ರೂಣದ ಕೈಕಾಲುಗಳ ಚಲನೆಯನ್ನು ಅಳೆಯುತ್ತಿರುವುದು. ಚಿತ್ರ ಕೃಪೆ: ವರ್ಬ್ರುಗೆನ್

ಒಂದೇ ಒಂದು ಜೀವಕೋಶದಿಂದ ಆರಂಭವಾಗುವ ನಮ್ಮ ಬದುಕು ತಾಯಿಯ ಬಸುರಿನಲ್ಲಿ ಕೈ, ಕಾಲು ಮುಂತಾದ ರೂಪು ಪಡೆದು ವ್ಯಕ್ತಿ ಎನ್ನಿಸಿಕೊಳ್ಳುತ್ತದೆಯಷ್ಟೆ. ಒಂಭತ್ತು ತಿಂಗಳು ನಡೆಯುವ ಈ ಕ್ರಿಯೆಯಲ್ಲಿ ಮುಂದಿನ ಐವತ್ತು ವರ್ಷಗಳ ಕಾಲ ನಮ್ಮ ಎಲ್ಲ ಚಟುವಟಿಕೆಗೂ ಅಗತ್ಯವಾದ ಮೂಳೆ-ಮಾಂಸಗಳು, ಎಲ್ಲ ಚಟುವಟಿಕೆಗಳಿಗೂ ಬೇಕಾದ ನರಕೋಶಗಳು, ಜೀರ್ಣಾಂಗ ವ್ಯವಸ್ಥೆಗಳು ಪರಿಪೂರ್ಣವಾಗಿ ರೂಪುಗೊಳ್ಳುತ್ತವೆ. ಮೊದಲ ಸ್ನಾಯುಗಳು ಸುಮಾರು ಎರಡು ತಿಂಗಳ ಬಸಿರಿರುವಾಗ ಕಾಣಿಸಿಕೊಂಡು ಬಲಿಯುತ್ತಾ ಸಾಗುತ್ತವೆ. ಸುಮಾರು ಆರು ತಿಂಗಳಾಗುವ ಹೊತ್ತಿಗೆ ಇವು ಒದೆಯುವಷ್ಟು ಶಕ್ತಿವಂತವಾಗುತ್ತವಂತೆ.
ಈ ಎಲ್ಲ ಬದಲಾವಣೆಗಳೂ ಹೇಗಾಗುತ್ತವೆ ಎನ್ನುವುದನ್ನು ಎಂಆರ್ ಐ ಚಿತ್ರಗಳನ್ನು ತೆಗೆದು ಗರ್ಭದೊಳಗೆ ಭ್ರೂಣದ ಚಲನವಲನಗಳನ್ನು ಪರಿಶೀಲಿಸಿದ್ದಾರೆ. ಅಷ್ಟೇ ಅಲ್ಲ. ಅದು ಒದೆಯುವಾಗಿನ ವೀಡಿಯೋವನ್ನು ನಿಧಾನವಾಗಿ ಪರಿಶೀಲಿಸಿ, ಕೈ, ಕಾಲುಗಳು ಎಷ್ಟು ವೇಗವಾಗಿ ಚಲಿಸುತ್ತದೆ ಎಂದು ಅಳೆದಿದ್ದಾರೆ. ಮೊಳಕಾಲಿನ ಗಂಟು ಹಾಗೂ ಪಾದದ ಸಂಧಿಗಳು ಚಲಿಸುವ ದಿಕ್ಕು ಹಾಗೂ ವೇಗವನ್ನು ಲೆಕ್ಕ ಹಾಕಿ ಅದರಿಂದ ಎಷ್ಟು ಬಲವುಂಟಾಗಬಹುದು ಎಂದು ಗಣಿಸಿದ್ದಾರೆ. ಒದ್ದಾಗ ತಾಯಿಯ ಗರ್ಭಚೀಲವನ್ನು ಎಷ್ಟು ದೂಡುತ್ತದೆ ಎಂದು ಗಮನಿಸಿದ್ದಾರೆ. ಜೊತೆಗೆ ಇದು ತಪ್ಪಿರಬಹುದೋ ಎನ್ನುವ ಅನುಮಾನದಿಂದ, ಪ್ರಯೋಗಾಲಯದಲ್ಲಿ ಗರ್ಭಚೀಲದಷ್ಟೆ ದಪ್ಪ ಹಾಗೂ ಅಷ್ಟೇ ಗಟ್ಟಿಯಾದ ರಬ್ಬರಿನ ಹಾಳೆಯೊಂದನ್ನಿಟ್ಟು ಗರ್ಭದ ಚೀಲವನ್ನು ದೂಡಿದಂತೆಯೇ ಈ ರಬ್ಬರಿನ ಹಾಳೆಯನ್ನು ದೂಡಲು ಎಷ್ಟೆಷ್ಟು ಬಲ ಪ್ರಯೋಗ ಮಾಡಬೇಕಾದೀತು ಎಂದೂ ಪ್ರಯೋಗ ಮಾಡಿದ್ದಾರೆ. ಈ ಮೂರೂ ವಿಧದಿಂದ ದೊರೆತ ಅಳತೆಗಳನ್ನು ಹೋಲಿಸಿ ಗಣಿಸಿದ್ದಾರೆ. ಹೀಗೆ ದೊರೆತ ಮಾಹಿತಿಯಿಂದ ತಾಯ ಗರ್ಭದೊಳಗಿರುವ ಮಗು ಎಷ್ಟು ಜೋರಾಗಿ ಒದೆಯುತ್ತದೆ ಎಂದು ತಿಳಿಯಲು ಪ್ರಯತ್ನಿಸಿದ್ದಾರೆ. ಒಟ್ಟಾರೆ ಆರು ತಿಂಗಳಾಗುವ ಹೊತ್ತಿಗೆ ನಾಲ್ಕು ಕಿಲೋ ಭಾರವನ್ನು ಬಿಸಾಡಿದಷ್ಟು ಬಲವಾಗಿ ಶಿಶು ಒದೆಯಲು ಶಕ್ತವಾಗಿರುತ್ತದಂತೆ. ಈ ಅಧ್ಯಯನಗಳು ಮಗುವಿನ ಬೆಳೆವಣಿಗೆಯಲ್ಲಾಗುವ ದೋಷಗಳನ್ನು ಗುರುತಿಸಲೂ ನೆರವಾದಾವು ಎನ್ನುವುದು ಆಶಯ.
ಹೊಟ್ಟೆಯೊಳಗಿನ ಗುದ್ದಾಟ ಹೇಗಿದೆ ನೋಡಿ!

ಆಕರ: Stefaan W. Verbruggen et al., Modeling the biomechanics of fetal movements Biomechanics and Modeling in Mechanobiology, August 2016, Volume 15, Issue 4, pp 995–1004,
Verbruggen SW, et al., . Stresses and strains on the human fetal skeleton during development. J. R. Soc. Interface 15: 20170593. http://dx.doi.org/10.1098/rsif.2017.059, 2018
ಲಿಂಕ್: https://youtu.be/bu9ZoS_qVYc


ಚುಟುಕು ಚುರುಮುರಿ
2. ಹೊಸ ನೋಟಿಗೊಂದು ಹೊಸ ಶಾಯಿ
ಕಳೆದ ವರ್ಷ ಎರಡು ಸಾವಿರ ರೂಪಾಯಿಗಳ ಹೊಸ ನೋಟು ಬಂದದ್ದು ನೆನಪಿದೆಯಲ್ಲ? ಹೊಸ ನೋಟು ಬಣ್ಣ ಕೆಳದುಕೊಳ್ಳುತ್ತದೆ, ಸುಲಭವಾಗಿ ನಕಲು ಮಾಡಬಹುದು ಎಂದೆಲ್ಲಾ ಸುದ್ದಿಯಾಗಿತ್ತು. ಕೆಲವೆಡೆ ನಕಲಿ ನೋಟುಗಳೂ ಚಲಾವಣೆಗೆ ಬಂದಿದ್ದುವು. ಆಗೆಲ್ಲ ಎಲ್ಲರಿಗೂ ಒಂದೇ ಪ್ರಶ್ನೆ. ನೋಟು ನಕಲಿಯೋ, ಅಸಲಿಯೋ ಪತ್ತೆ ಮಾಡುವುದು ಹೇಗೆ? ಸಾಮಾನ್ಯವಾಗಿ ನೋಟುಗಳಲ್ಲಿ ನಕಲಿಸಲು ಸಾಧ್ಯವಾಗದಂತಹ ಹಲವು ಅಂಶಗಳಿರುತ್ತವೆ. ನೋಟು ಎಣಿಸುವ ಯಂತ್ರದಲ್ಲಿ ಹಾಕಿದೊಡನೆಯೇ ಅದು ಖೋಟಾನೋಟನ್ನು ಹೊರಕ್ಕೆ ದೂಡಿ ಬಿಡುತ್ತದೆ. ಗಾಂಧಿ ತಾತನ ಚಿತ್ರದ ಜೊತೆಗೇ ವಿಶೇಷ ಶಾಯಿಯಲ್ಲಿ ಮುದ್ರಿಸಿದ ಹಲವು ಅಂಶಗಳು ನೋಟು ಅಸಲಿಯೋ, ನಕಲಿಯೋ ಎಂದು ತೀರ್ಮಾನಿಸಲು ನೆರವಾಗುತ್ತವೆ. ಇಂತಹ ಕೆಲಸದಲ್ಲಿ ನೆರವಾಗುವ ಹೊಸ ಶಾಯಿಯೊಂದನ್ನು ಭಾರತೀಯ ವಿಜ್ಞಾನಿಗಳು ರೂಪಿಸಿದ್ದಾರಂತೆ. ನವದೆಹಲಿಯ ರಾಷ್ಟ್ರೀಯ ಭೌತಿಕ ಪ್ರಯೋಗಶಾಲೆ ಅಥವಾ ನ್ಯಾಶನಲ್ ಫಿಸಿಕಲ್ ಲ್ಯಾಬೊರೇಟರಿಯ ವಿಜ್ಞಾನಿ ಬಿಪಿನ್ ಗುಪ್ತಾ ಮತ್ತು ಸಂಗಡಿಗರು ಈ ಸಾಧನೆ ಮಾಡಿದ್ದಾರೆಂದು ಕೆಮಿಸ್ಟ್ರಿ ಎ ಯುರೋಪಿಯನ್ ಜರ್ನಲ್ ಪತ್ರಿಕೆ ವರದಿ ಮಾಡಿದೆ.

ಈಗಾಗಲೇ ಇಂತಹ ಶಾಯಿಗಳು ಬಳಕೆಯಲ್ಲಿದ್ದುವಲ್ಲ? ಮತ್ತೆ ಇನ್ನೊಂದು ಏತಕ್ಕೆ ಎಂದಿರಾ? ಹೌದು. ಶಾಯಿಗಳಿವೆ. ಆದರೆ ಅವುಗಳನ್ನು ಬಹುತೇಕ ವಿದೇಶದಿಂದಲೇ ಆಮದು ಮಾಡಬೇಕು. ಅಷ್ಟೇ ಅಲ್ಲ. ಅವನ್ನು ಬಳಸಬೇಕೆಂದರೂ ವಿಶೇಷ ಕಾಗದ ಬೇಕು. ಏಕೆಂದರೆ ಈ ಶಾಯಿಗಳು ಅಲ್ಟ್ರಾವಯಲೆಟ್ ಅಥವಾ ಯುವಿ ಕಿರಣಗಳಡಿಯಲ್ಲಿ ಮಾತ್ರ ಗೋಚರವಾಗುತ್ತವೆ. ನೋಟು ಪರೀಕ್ಷಿಸುವ ಸಾಧನಗಳಲ್ಲಿ ಯುವಿ ದೀಪವನ್ನು ಬೆಳಗಿಸಿ ಸಾಮಾನ್ಯವಾಗಿ ಕಾಣದಂತಹ ಅಂಶಗಳನ್ನು ಓದಬಹುದು. ಅಸಲಿ ನೋಟಿನಲ್ಲಿ ಈ ಅಂಶಗಳು ಇರುತ್ತವೆ. ನಕಲಿಯಲ್ಲಿ ಇರುವುದಿಲ್ಲ. ಆದರೆ ಈ ಶಾಯಿಗಳದ್ದೊಂದು ಸಮಸ್ಯೆ. ಇವನ್ನು ಮುದ್ರಿಸುವ ವಸ್ತುವೂ ಯುವಿಯಲ್ಲಿ ಹೊಳೆಯಬಾರದು. ಹಾಗಿದ್ದಲ್ಲಿ ಮಾತ್ರ ಅಸಲಿ-ನಕಲಿ ಪರೀಕ್ಷೆ ಫಲಪ್ರದವಾಗುತ್ತದೆ. ಇಲ್ಲದಿದ್ದಲ್ಲಿ ಇಲ್ಲ. ಈ ಕಾರಣದಿಂದಾಗಿ ಶಾಯಿಯ ಜೊತೆಗೆ ವಿಶೇಷವಾದ ಮುದ್ರಣ ಕಾಗದವನ್ನೂ ನಾವು ಆಮದು ಮಾಡಬೇಕು. ಮುದ್ರಿಸಲು ವಿಶೇಷ ತಂತ್ರಗಳೂ ಬೇಕು.

ಬಿಪಿನ್ ಗುಪ್ತಾರ ಶಾಯಿಗೆ ಇದರ ಅವಶ್ಯಕತೆ ಇಲ್ಲವಂತೆ. ನೇರವಾಗಿ ಸಾಧಾರಣ ಮುದ್ರಣ ಶಾಯಿಗಳಂತೆಯೇ ಇದನ್ನೂ ಪಿವಿಸಿ ಗೋಲ್ಡ್ ವಸ್ತುವಿನಲ್ಲಿ ಮಿಶ್ರಮಾಡಿಬಿಡಬಹುದು. ಸಾಧಾರಣವಾಗಿಯೇ ಮುದ್ರಿಸಬಹುದಂತೆ. ಹಾಗೆ ಮುದ್ರಿಸಿದ ಚಿತ್ರವನ್ನೋ, ಅಂಕೆಯನ್ನೋ ಯುವಿ ಬೆಳಕಿನಡಿಯಲ್ಲಿ ಹಿಡಿದರೆ ಸಾಕು. ಅದು ಬಣ್ಣ ಬದಲಿಸುತ್ತದೆ. ಕಪ್ಪಗಿರುವುದು ಹಳದಿಯಾಗಿಯೋ ಕೆಂಪಾಗಿಯೋ ಕಾಣುತ್ತದೆ. ನಕಲಿಯೋ, ಅಸಲಿಯೋ ಗೊತ್ತಾಗುತ್ತದೆ. ಮತ್ತೂ ಒಂದು ಅನುಕೂಲವಿದೆ. ಯುವಿ ಜೊತೆಗೇ ಇನ್ಫ್ರಾರೆಡ್ ಅಥವಾ ಅವಕೆಂಪು ಕಿರಣಗಳ ದೀಪವನ್ನೂ ಬಳಸಬಹುದು. ಆಗ ಬೇರೊಂದು ಬಣ್ಣ ತೋರುತ್ತದೆ.

ಹೊಸ ಶಾಯಿಯಲ್ಲಿ ಹಳೆ ಕಾಗದದ ಮೇಲೆ ಮುದ್ರಿತವಾದ ಚಿತ್ರಗಳು ಯುವಿ ಬೆಳಕಿನಲ್ಲಿ ಕೆಂಪಾಗಿ ತೋರುತ್ತವೆ

ಈ ಶಾಯಿಯಲ್ಲಿ ಅಪರೂಪದ ಧಾತುಗಳಾದ ಯಿಟ್ರಿಬಿಯಮ್, ಇಯೋಬಿಯಂ ಮತ್ತು ನಿಯೋಡೈಮಿಯಂ ಲೋಹಗಳ ಮಿಶ್ರಲೋಹ ಹಾಗೂ ಸತು ಮತ್ತು ಮ್ಯಾಂಗನೀಸ್ ಸಲ್ಫರ್ ವರ್ಣಕಗಳನ್ನು ಕೂಡಿಸಲಾಗಿದೆ. ಮೊದಲನೆಯದು ಅವಕೆಂಪು ಕಿರಣಗಳಲ್ಲಿ ಬೇರೆ ಬಣ್ಣ ತೋರುತ್ತದೆ. ಎರಡನೆಯದು ಯುವಿ ಬೆಳಕಿನಡಿ ಹೊಳೆಯುತ್ತದೆ. ಇವುಗಳ ಪ್ರಮಾಣಗಳನ್ನು ಬದಲಾಯಿಸಿ ಶಾಯಿ ಯಾವ ಬಣ್ಣದಡಿ ಯಾವ ಬಣ್ಣವನ್ನು ಹೊಳೆಯಿಸುತ್ತದೆಂದು ನಿಶ್ಚಯಿಸಬಹುದಂತೆ.

ಈ ಎಲ್ಲ ಅನುಕೂಲಗಳಿಂದಾಗಿ ಇದನ್ನು ಕೇವಲ ನೋಟುಗಳಲ್ಲಿಯಷ್ಟೆ ಅಲ್ಲ, ನಕಲು ಮಾಡುವ ಸಾಧ್ಯತೆ ಇರುವಂತಹ ಔಷಧಿ, ಆಹಾರ ಪದಾರ್ಥಗಳ ಲೇಬಲ್ಲುಗಳನ್ನು ಮುದ್ರಿಸಲು ಹಾಗೂ ಬಲು ಮುಖ್ಯವಾದ ದಸ್ತಾವೇಜುಗಳನ್ನು ಬರೆಯಲೂ ಬಳಸಬಹುದು ಎನ್ನುತ್ತಾರೆ ಬಿಪಿನ್ ಗುಪ್ತಾ.

ಆಕರ:
Kanika et al., A Novel Approach to Synthesise a Dual-Mode Luminescent Composite Pigment for Uncloneable High-Security Codes to Combat Counterfeiting, Chem. Eur. J. 2017, Vol. 23, Pp 17144 – 17151, 2017 (DOI : 10.1002/chem.201704076)
ಲಿಂಕ್: 1. http://onlinelibrary.wiley.com/doi/10.1002/chem.201704076/abstract


3. ಚಂದಿರನೇತಕೆ ನಾಚುವನಮ್ಮ.
ಚಂದಿರನೇತಕೆ ಓಡುವನಮ್ಮ? ಮೋಡಕೆ ಬೆದರಿಹನೆ? ಚಿಕ್ಕಂದಿನಲ್ಲಿ ನಮಗೆಲ್ಲರಿಗೂ ಇದು ಬಲು ಪ್ರಿಯವಾದ ಹಾಡಾಗಿತ್ತು. ರಾತ್ರಿಯಲ್ಲಿ ಆಷಾಢದ ಗಾಳಿಗೆ ಓಡುವ ಮೋಡಗಳ ಹಿಂದೆ ಚಂದಿರ ಮರೆಯಾಗುವುದನ್ನು ನೋಡುವಾಗಲೆಲ್ಲ ಈ ಹಾಡು ನೆನಪಾಗುತ್ತದೆ. ನಾಡಿದ್ದು ಮೂವತ್ತೊಂದನೆಯ ತಾರೀಖು ಚಂದ್ರನನ್ನು ನೋಡುವಾಗ ಬಹುಶಃ ಈ ಹಾಡನ್ನೇ ತುಸು ತಿರುಚಿ ಹಾಡಬೇಕಾಗಬಹುದು. ಚಂದಿರನೇತಕೆ ನಾಚಿಹನಮ್ಮ, ಕೆಂಪಾಗಿದ್ದೇಕೆ ಎಂದು ಕೇಳಬೇಕಾಗಬಹುದು. ಏಕೆಂದರೆ ಅಂದು ರಾತ್ರಿ ಚಂದ್ರ ಕೆಂಪಾಗಿ ಕಾಣಲಿದ್ದಾನೆ.

ಜನವರಿ ಮೂವತ್ತೊಂದರ ಚಂದ್ರನದ್ದು ಒಂದು ವಿಶೇಷ. ಈ ತಿಂಗಳು ಪೂರ್ಣಚಂದ್ರ, ಅರ್ಥಾತ್ ಹುಣ್ಣಿಮೆ ನಮಗೆ ಎರಡನೆಯ ಬಾರಿಗೆ ಕಾಣಿಸುತ್ತಿದೆ. ಸಾಮಾನ್ಯವಾಗಿ ಇಪ್ಪತ್ತೊಂಬತ್ತು ದಿನಗಳ ನಂತರ ನಾವು ಮತ್ತೊಮ್ಮೆ ಪೂರ್ಣಚಂದ್ರನನ್ನು ನೋಡಬಹುದು. ಆದರೆ ಈ ಬಾರಿ ಒಂದನೆಯ ತಾರೀಖು ಕಂಡ ನಂತರ ಮತ್ತೆ ಇಪ್ಪತ್ತೊಂಭತ್ತು ದಿನಗಳ ನಂತರ ಅಂದರೆ ಮೂವತ್ತೊಂದನೆಯ ತಾರೀಖು ಚಂದ್ರ ಪೂರ್ಣವಾಗಿ ತೋರುತ್ತಿದೆ. ಹೀಗೆ ಒಂದೇ ಮಾಸದಲ್ಲಿ ಎರಡು ಬಾರಿ ಹುಣ್ಣಿಮೆ ಆಗುವುದನ್ನು ಬ್ಲೂಮೂನ್ ಅಥವಾ ನೀಲಿಚಂದಿರ ಎಂದು ಕರೆಯುತ್ತಾರೆ. ಲೆಕ್ಕಾಚಾರದ ಪ್ರಕಾರ ಇಂತಹ ಬ್ಲೂಮೂನುಗಳು ಇಪ್ಪತ್ತೆಂಟೇ ದಿನಗಳಿರುವ ಫೆಬ್ರವರಿಯಲ್ಲಿ ಬರುವುದು ಅಸಾಧ್ಯ. ಹಾಗೆಯೇ ಕೇವಲ ಚಂದ್ರಮಾನವನ್ನಷ್ಟೆ ಬಳಸುವ ನಮ್ಮ ಪಂಚಾಂಗಗಳಲ್ಲೂ ಇದು ಕಾಣಿಸಲಿಕ್ಕಿಲ್ಲ. ಏನಿದ್ದರೂ ಜೂಲಿಯನ್ ದಿನಗಣನೆಯನ್ನು ಅಂದರೆ ಸಾಮಾನ್ಯವಾಗಿ ಬಳಸುವ ಜನವರಿಯಿಂದ ಡಿಸೆಂಬರು ಮಾಹೆಗಳ ಕ್ಯಾಲೆಂಡರಿನ ಪ್ರಕಾರವಷ್ಟೆ ಬ್ಲೂ ಮೂನು ಉಂಟಾಗಬಹುದು. ಇದು ನಾವು ದಿನಗಳನ್ನು ಲೆಕ್ಕ ಹಾಕುವ ರೀತಿಯಿಂದ ಆಗುತ್ತದೆಯೇ ಹೊರತು, ಚಂದ್ರನಲ್ಲಿ ಯಾವುದೇ ಬದಲಾವಣೆಯೂ ಇರುವುದಿಲ್ಲ.

ಜನವರಿ ಕೊನೆ ದಿನದ ಚಂದ್ರನದ್ದು ಇನ್ನೊಂದು ವಿಶೇಷವಿದೆ. ಆ ದಿನ ಪೂರ್ಣ ಚಂದ್ರ ಗ್ರಹಣ. ಚಂದ್ರಗ್ರಹಣ ಅಂದರೆ ಗೊತ್ತಿರಬೇಕಲ್ಲ? ಚಂದ್ರನ ಮೇಲೆ ಭೂಮಿಯ ನೆರಳು ಕವಿಯುವ ದಿನ. ಅಂದರೆ ಆ ದಿನ ಚಂದ್ರ ನಮಗೆ ಕಾಣುವಂತಿರಬೇಕಷ್ಟೆ? ಚಂದ್ರನ ಮೇಲೆ ಸೂರ್ಯನ ಬೆಳಕು ಒಂದು ಬದಿಯಿಂದ ಬೀಳದೆ ನೇರವಾಗಿ ಬೀಳುತ್ತಿದ್ದರೆ ಮಾತ್ರ ಚಂದ್ರ ನಮಗೆ ಕಾಣುತ್ತಾನೆ. ಇದು ಹುಣ್ಣಿಮೆಯಂದು ಆಗುತ್ತದೆಯಾದ್ದರಿಂದ ಚಂದ್ರಗ್ರಹಣಗಳೆಲ್ಲವೂ ಹುಣ್ಣಿಮೆಯಂದೇ ಆಗಬೇಕು. ಹುಣ್ಣಿಮೆಯಂದು ಚಂದ್ರಗ್ರಹಣ ಆಗುವುದು ವಿಚಿತ್ರವಲ್ಲ ಅನ್ನುವುದು ಸ್ಪಷ್ಟ.

ಇನ್ನು ಚಂದ್ರನ ಮೇಲೆ ಭೂಮಿಯ ನೆರಳು ಮಸುಕಾಗಿ ಬೀಳಬಹುದು ಅಥವಾ ಗಾಢವಾಗಿರಬಹುದು. ಚಂದ್ರ ಬಲು ದೂರದಲ್ಲಿದ್ದರೆ ಆಗ ಮಸುಕಾದ ನೆರಳು ಬೀಳಬಹುದು. ಆದರೆ ಈಗ ಚಂದ್ರ ಭೂಮಿಗೆ ಬಲು ಹತ್ತಿರದಲ್ಲಿದ್ದಾನೆ. ಅಂದರೆ ಸೂಪರ್ ಮೂನ್ ತೋರಿ ಒಂದು ತಿಂಗಳಾಗಿದೆ ಅಷ್ಟೆ. ಹೀಗಾಗಿ ಗಾಢ ನೆರಳು ಚಂದ್ರನನ್ನು ಕವಿದು ಬೆಳ್ಳಿ ಚಂದಿರ ಕರಿಯಾಗುತ್ತಾನೆ. ಊಹೂಂ. ಕರಿಯಾಗುವುದಿಲ್ಲ. ಕೆಂಪಗಾಗುತ್ತಾನೆ. ಅದೇ ವಿಶೇಷ. ಕರಿನೆರಳು ಬಿದ್ದರೂ ಕಪ್ಪಗಾಗುವುದಿಲ್ಲವೇಕೆ?

ಕಾರಣ ಇಷ್ಟೆ. ಭೂಮಿಯ ಕರಿನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸಿಕೊಂಡ ಹೊತ್ತಿನಲ್ಲೂ ಒಂದಿಷ್ಟು ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದೇ ಬೀಳುತ್ತದೆ. ಅದು ಹೀಗೆ. ಗ್ರಹಣದ ಸಮಯದಲ್ಲಿ ಸೂರ್ಯನ ಬೆಳಕು ಭೂಮಿಯನ್ನು ಹಾದು ಚಂದ್ರನನ್ನು ತಲುಪುತ್ತದಷ್ಟೆ. ಈ ಸಂದರ್ಭದಲ್ಲಿ ದುಂಡಗಿನ ಭೂಮಿಯ ಅಂಚಿನ ಬದಿಯಿಂದ ತೆರಳುವ ಬೆಳಕು ಮಸೂರದೊಳಗಿಂದ ಹೋದಂತೆ ದೂರಕ್ಕೆ ಚೆದುರುತ್ತದೆ. ಇದಕ್ಕೆ ಭೂಮಿಯ ಮೇಲಿನ ವಾಯುಮಂಡಲವೇ ಕಾರಣ. ವಾಯುಮಂಡಲವು ನೆಲದಿಂದಾಚೆಗೂ ಸಾವಿರಾರು ಕಿಲೋಮೀಟರು ದೂರ ವ್ಯಾಪಿಸಿದೆಯಷ್ಟೆ. ತನ್ನೊಳಗಿಂದ ಹಾಯುವ ಬೆಳಕಿನ ನೀಲಿ ಬಣ್ಣ ಹಾಗೂ ಅದರಾಚೆಗಿನ ಬೆಳಕನ್ನೆಲ್ಲ ಈ ವಾಯುಮಂಡಲ ಹೀರಿಕೊಂಡು ಬಿಡುತ್ತದೆ. ಉಳಿದ ಕೆಂಪು, ಕಿತ್ತಳೆ ಮತ್ತು ಹಳದಿ ಮಾತ್ರವೇ ಚಂದ್ರನನ್ನು ತಲುಪುತ್ತವೆ. ಈ ಕೆಂಪು ಬೆಳಕಿನಿಂದಾಗಿ ಚಂದ್ರನೂ ನಾಚಿದಂತೆ ಕೆಂಪಾಗಿ ಕಾಣುತ್ತದೆ.

ಚಂದಿರನೇತನೆ ನಾಚಿದನಮ್ಮ ಎಂದರೆ ಗೊತ್ತಾಯಿತಲ್ಲ! ಭೂಮಿಯ ಗಾಳಿಯ ದೆಸೆಯಿಂದ ಅಷ್ಟೆ. ಹಾಂ. ಇದರೊಟ್ಟಿಗೆ ನೀವಿರುವ ಪ್ರದೇಶದಲ್ಲಿ ಇರುವ ದೂಳೂ ಮುಖ್ಯವಾಗುತ್ತದೆ. ಹಾಗಾಗಿಯೇ, ಒಂದೊಂದು ಸ್ಥಳದಲ್ಲೂ ಚಂದಿರನ ಕೆಂಪು ಬಣ್ಣ ಬೇರೆ, ಬೇರೆ ರಂಗಿನದಾಗಿರಬಹುದು.


4. ಮೋಡ ಬಿತ್ತನೆಯ ರಹಸ್ಯ
ಕಳೆದ ವರ್ಷ ಸಮಯಕ್ಕೆ ಸರಿಯಾಗಿ ಮಳೆ ಬಾರದೇ ಬೆಂಗಳೂರು, ಮೈಸೂರಿಗರು ನೀರಿಗಾಗಿ ತಹತಹಿಸಿದ್ದು ನೆನಪಿದೆಯಷ್ಟೆ. ಅದೇ ವೇಳೆ ಮೋಡಗಳಿಗೆ ಬಿತ್ತನೆ ಮಾಡಿ ಮಳೆ ಸುರಿಸುವ ಪ್ರಯತ್ನವೂ ನಡೆಯಿತು. ಮಳೆಯೇನೋ ಬಂತು. ಆದರೆ ಅದು ಮೋಡಬಿತ್ತನೆಯ ಭಗೀರಥ ಪ್ರಯತ್ನದಿಂದಲೇ ಬಂತೋ ಸಹಜವಾಗಿಯೇ ಬಂತೋ ಗೊತ್ತಾಗಲಿಲ್ಲ. ಹಾಗೆಯೇ ಮೋಡ ಬಿತ್ತನೆಯೆನ್ನುವುದು ಕೇವಲ ಕೆಲವು ಕಂಪೆನಿಗಳ ಲಾಭಕೋರ ಉದ್ಯೋಗ. ಅದರಿಂದಾಗುವ ಉಪಯೋಗ ಏನಿದ್ದರೂ ಹೊಳೆಯಲ್ಲಿ ಹುಣಿಸೆ ತೊಳೆದಂತೆ ಎಂದು ಹೇಳಿದವರೂ ಇದ್ದಾರೆ. ಹೌದೇ? ಮೋಡಬಿತ್ತನೆಯಿಂದ ಮಳೆ ಸುರಿಯುವುದಿಲ್ಲವೇ? ಇದೋ ಅಮೆರಿಕೆಯ ಕೊಲೆರಡೋ ವಿಶ್ವವಿದ್ಯಾನಿಲಯದ ಪವನ ವಿಜ್ಞಾನಿ ಜೆಫ್ರಿ ಫ್ರೆಂಚ್ ಮತ್ತು ಸಂಗಡಿಗರು ಈ ಅನುಮಾನಕ್ಕೆ ಉತ್ತರವನ್ನು ಕೊಡಲು ಪ್ರಯತ್ನಿಸಿದ ಸುದ್ದಿ ಬಂದಿದೆ. ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆಯಲ್ಲಿ ಇತ್ತೀಚೆಗೆ ಇವರು ಪ್ರಕಟಿಸಿದ ಸಂಶೋಧನೆಯಲ್ಲಿ ಬಿತ್ತನೆ ಮಾಡಿದ ನಂತರ ನೀರಾವಿ ಘನೀಭವಿಸಿ, ಹರಳುಗಟ್ಟಿ, ದೊಡ್ಡದಾಗಿ ಕೊನೆಗೆ ಮಂಜಾಗಿ ಸುರಿಯುವುದನ್ನು ಖಚಿತ ಪಡಿಸುತ್ತಾರೆ.

ಮೋಡ ಬಿತ್ತನೆ ಎಂದರೆ ಇನ್ನೇನಲ್ಲ. ಆಕಾಶದ ಎತ್ತರದಲ್ಲಿ ಅತಿ ತಣ್ಣಗಿರುವ ಮೋಡದಲ್ಲಿನ ನೀರಾವಿ ಘನವಾಗುವಂತೆ ಪ್ರೇರೇಪಿಸುವುದು. ಒಮ್ಮೆ ಅದು ಘನೀಭವಿಸಿತೋ, ನಂತರ ಹನಿಯಾಗಿಯೋ, ಮಂಜಿನ ಹರಳಾಗಿಯೋ ಬೆಳೆದು, ಭಾರವಾಗಿ ಧರೆಗೆ ಇಳಿಯುತ್ತದೆ ಎನ್ನುವುದು ಭೌತವಿಜ್ಞಾನಿಗಳ ವಿಶ್ವಾಸ. ಈ ನಂಬಿಕೆಯಿಂದಲೇ ಸಿಲ್ವರ್ ಅಯೊಡೈಡ್ ಇಲ್ಲವೇ ಸೋಡಿಯಂ ಅಯೊಡೈಡಿನಂತಹ ಹರಳುಗಟ್ಟುವ ಪುಡಿಗಳನ್ನು ಮೋಡದ ಮೇಲೆ ಎರಚುತ್ತಾರೆ. ಅದನ್ನೇ ಮೋಡ ಬಿತ್ತನೆ ಎಂದು ನಾವು ಕರೆಯುತ್ತೇವೆ. ಈ ಪುಡಿಯ ಕಣಗಳನ್ನೇ ಆವರಿಸಿಕೊಂಡು ನೀರು ಘನವಾಗುತ್ತದೆ. ಹನಿಯಾಗುತ್ತದೆ. ಹಿಮವಾಗುತ್ತದೆ. ಹನಿ ಅಥವಾ ಹಿಮವನ್ನು ಹುಟ್ಟಿಸುವ ಬೀಜಗಳಾಗುತ್ತವೆ.

ಮೋಡ ಬಿತ್ತಿ ಸುರಿದ ಹಿಮದಲ್ಲಿ ಜೆಫ್ ಫ್ರೆಂಚ್ ಮತ್ತು ಸಂಗಡಿಗರು

ಅಮೆರಿಕೆಯಲ್ಲಿಯೂ ಮೋಡ ಬಿತ್ತನೆ ನಡೆಯುತ್ತದೆ. ಅದರೆ ಮಳೆಗಾಗಿ ಅಲ್ಲ. ಅಲ್ಲಿ ಛಳಿಗಾಲದಲ್ಲಿ ವಾತಾವರಣದಲ್ಲಿರುವ ತೇವಾಂಶವನ್ನು ಹಿಮಪಾತವನ್ನಾಗಿಸಲು ಮೋಡ ಬಿತ್ತನೆ ಮಾಡುತ್ತಾರೆ. ಫ್ರೆಂಚ್ ಮತ್ತು ತಂಡ ಇದನ್ನೇ ಮಾಡಿದ್ದು. ಆದರೆ ಹೀಗೆ ಮೋಡ ಬಿತ್ತನೆ ಮಾಡಿದ ಮೇಲೆ ಮೋಡದಲ್ಲಿ ನಿಜಕ್ಕೂ ಈ ಪುಡಿಯಿಂದಲೇ ಹನಿಯ ಬೀಜಗಳು ರೂಪುಗೊಳ್ಳುತ್ತವೆಯೋ, ಅವೇ ದೊಡ್ಡದಾಗಿ ಧರೆಗಿಳಿಯುತ್ತವೆಯೋ? ಅಥವಾ ಬೇರೆ ಕಾರಣದಿಂದಲೋ ಎನ್ನುವುದನ್ನು ಬಲು ಜಾಣತನದಿಂದ ಪರೀಕ್ಷಿಸಿದ್ದಾರೆ. ಮೋಡಬಿತ್ತನೆಯಿಂದಲೇ ಹಿಮಪಾತವಾಗಿದೆ ಎಂದು ನಿರೂಪಿಸಿದ್ದಾರೆ.

ಇದನ್ನು ಇವರು ಮಾಡಿದ್ದು ಹೀಗೆ. ಮೊದಲಿಗೆ ಬಲು ಶೀತಲ ಪ್ರದೇಶದಲ್ಲಿದ್ದ ಮೋಡಗಳನ್ನು ಆಯ್ದುಕೊಂಡು, ಅದರಲ್ಲಿ ಒಂದೆಡೆ ಮೋಡದ ಮೇಲೆ ವಿಮಾನದ ಮೂಲಕ ಹಾಗೂ ಇನ್ನೊಂದೆಡೆ ಕೆಳಗಿನಿಂದ ಹಾರಿಸಿದ ರಾಕೆಟ್ಟುಗಳ ಮೂಲಕ ಸಿಲ್ವರ್ ಅಯೊಡೈಡ್ ಪುಡಿ ಸೇರುವಂತೆ ಮಾಡಿದರು. ಮೋಡಗಳ ಮೇಲೆ ಹಾಗೂ ಕೆಳಗೆ ಗಾಳಿಯ ಸಂಚಾರ ಹೇಗಿತ್ತು ಎಂದು ರೇಡಾರ್ ಮೂಲಕ ಗಮನಿಸಿದರು. ಅನಂತರ ರೇಡಾರ್ ಯಂತ್ರದ ಮೂಲಕ ಮೋಡದಲ್ಲಾಗುವ ಬದಲಾವಣೆಗಳನ್ನು ಗಮನಿಸಿದರು. ಇವರು ಎರಚಿದ ಪುಡಿಯಿಂದಲೇ ಹಿಮ ಹುಟ್ಟಿದ್ದಾದರೆ, ಎರಚಿದಾಗ ಬೀಸುತ್ತಿದ್ದ ಗಾಳಿಯ ದಿಕ್ಕಿನಲ್ಲಿಯಷ್ಟೆ ಹಿಮ ರೂಪುಗೊಂಡು ಹರಡಬೇಕಷ್ಟೆ. ಇಲ್ಲದಿದ್ದರೆ ಎಲ್ಲೆಂದರಲ್ಲಿ ಕಾಣಿಸಬೇಕು. ರೇಡಾರು ಚಿತ್ರಗಳನ್ನು ವೀಕ್ಷಿಸಿದಾಗ, ನಿರೀಕ್ಷಿಸಿದಂತೆ ಗಾಳಿಯ ದಿಕ್ಕಿಗುಂಟವೇ ಮೋಡದಲ್ಲಿ ಹಿಮ ರೂಪುಗೊಂಡದ್ದು ಕಂಡಿತು. ಅಷ್ಟೇ ಅಲ್ಲ. ಕಾಲ ಕಳೆದಂತೆ ಅದು ಸರಿಯುವುದೂ, ನಿಧಾನವಾಗಿ ಧರೆಯತ್ತ ಇಳಿಯುವುದನ್ನೂ ರೇಡಾರು ಚಿತ್ರಗಳು ತೋರಿದುವು. ನೀರಾವಿ ಹಾಗೂ ಹಿಮದ ನಡುವಿರುವ ಸಾಂದ್ರತೆಯ ವ್ಯತ್ಯಾಸದಿಂದಾಗಿ ಅವುಗಳನ್ನು ತಟ್ಟಿ ಹಿಂಬರುವ ರೇಡಾರು ಅಲೆಗಳಲ್ಲೂ ವ್ಯತ್ಯಾಸಗಳು ಕಾಣಬರುತ್ತವೆ. ಇವನ್ನು ಗುರುತಿಸಿದರೆ ನೀರಾವಿ ಎಲ್ಲಿದೆ, ಹಿಮ ಎಲ್ಲಿದೆ ಎನ್ನುವುದಷ್ಟೆ ಅಲ್ಲ, ಆ ಕಣಗಳ ಗಾತ್ರದಲ್ಲಿನ ವ್ಯತ್ಯಾಸವನ್ನೂ ತಿಳಿಯಬಹುದು.

ರೇಡಾರು ಚಿತ್ರಗಳಲ್ಲಿನ ಈ ವ್ಯತ್ಯಾಸಗಳು ಬಿತ್ತಿದ ಪುಡಿಯಿಂದಾಗಿ ಉಂಟಾದದ್ದು ಎಂದು ತೋರಿಸಿವೆಯಂತೆ. ಅರ್ಥಾತ್, ಮೋಡ ಬಿತ್ತನೆ ಫಲ ನೀಡುತ್ತದೆ ಎಂದಂತಾಯಿತು. ಇದು ಆ ಸಂದರ್ಭದಲ್ಲಿ ಮಾತ್ರವೋ, ಎಲ್ಲ ಸಂದರ್ಭದಲ್ಲಿಯೂ ಸಾಧ್ಯವೋ ಎನ್ನುವುದನ್ನು ಇನ್ನು ತಿಳಿಯಬೇಕು ಅಷ್ಟೆ.
ಆಕರ: Jeffrey French et al., Precipitation formation from orographic cloud seeding, PNAS, www.pnas.org/cgi/doi/10.1073/pnas.1716995115


ಜಾಣನುಡಿ
ಜನವರಿ 28. ಭಾರತೀಯ ಪರಮಾಣು ವಿಜ್ಞಾನಿ ಡಾ. ರಾಜಾ ರಾಮಣ್ಣ ಜನಿಸಿದ ದಿನ. 1928ರ ಜನವರಿ 28ರಂದು ಜನಿಸಿದ ಇವರು ಭಾರತದ ಪ್ರಪ್ರಥಮ ಪರಮಾಣು ಬಾಂಬು ನಿರ್ಮಾಣದ ನೇತೃತ್ವವನ್ನು ವಹಿಸಿದ್ದರು. ಕರ್ನಾಟಕದಲ್ಲಿ ಹುಟ್ಟಿ, ಬೆಳೆದ ಡಾ. ರಾಜಾರಾಮಣ್ಣ ಮುಂಬಯಿಯ ಭಾಭಾ ಅಣುಶಕ್ತಿ ಕೇಂದ್ರದ ನಿರ್ದೇಶಕರಾಗಿಯೂ, ಭಾರತ ಸರಕಾರದ ಪರಮಾಣು ಶಕ್ತಿ ಇಲಾಖೆಯ ಕಾರ್ಯದರ್ಶಿಗಳಾಗಿಯೂ, ಭಾರತದ ಪರಮಾಣು ಶಕ್ತಿ ಕಮಿಷನ್ನಿನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

1974ರಲ್ಲಿ ಭಾರತವು ಪ್ರಪ್ರಥಮವಾಗಿ ಪರಮಾಣು ಬಾಂಬನ್ನು ಸಿಡಿಸಿ ಜಗತ್ತಿನಲ್ಲಿ ಅಚ್ಚರಿ ಮೂಡಿಸಿತ್ತು. ಡಾ. ರಾಮಣ್ಣ ಆ ಸಾಹಸದ ರೂವಾರಿಯಾಗಿದ್ದರು. ಡಾ. ರಾಮಣ್ಣ ಪರಮಾಣು ವಿಜ್ಞಾನಿಗಳಾಗಿದ್ದದ್ದಷ್ಟೆ ಅಲ್ಲ, ಅದ್ಭುತ ಪಿಯಾನೋ ವಾದಕರೂ ಆಗಿದ್ದರು. ಪಿಯಾನೋ ಸಂಗೀತದ ಹಿಂದಿನ ವೈಜ್ಞಾನಿಕ ತತ್ವಗಳನ್ನು ಕುರಿತೂ ಅವರು ಅಧ್ಯಯನ ಮಾಡಿದ್ದರು. “ನಮ್ಮ ಪುರಾಣದ ಕಥೆಗಳು ನನಗೆ ಕೊಟ್ಟಷ್ಟು ಶಿಕ್ಷಣ ಬೇರೆಡೆ ಸಿಗಲಿಲ್ಲ,” ಎನ್ನುತ್ತಿದ್ದರಂತೆ ಡಾ. ರಾಮಣ್ಣ.
—-
ರಚನೆ ಮತ್ತು ಪ್ರಸ್ತುತಿ: ಕೊಳ್ಳೇಗಾಲ ಶರ್ಮ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x