ನವಂಬರ್ 30 2015ರಿಂದ ಡಿಸೆಂಬರ್ 11 2015ರ ವರೆಗಿನ ಜಾಗತಿಕ ಹವಾಗುಣ ಶೃಂಗಸಭೆ ಪ್ಯಾರಿಸ್‍ನಲ್ಲಿ ನಡೆಯಲಿದೆ. 190 ವಿಶ್ವನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ, ಜೊತೆಗೆ ವಿಜ್ಞಾನಿಗಳು, ಹೂಡಿಕೆದಾರರು, ವಿವಿಧ ಕ್ಷೇತ್ರಗಳ ತಜ್ಞರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಭೂಮಿಯ ಮೇಲಿನ ಚರಾಚರಗಳ ಭವಿಷ್ಯದ ದೃಷ್ಟಿಯಿಂದ ಈ ಸಭೆ ಅತ್ಯಂತ ಮಹತ್ವ್ತದ ಸಭೆಯಾಗಲಿದೆ ಎಂದು ತರ್ಕಿಸಲಾಗಿದೆ. ಈ ಸಭೆಯಲ್ಲಿ ಕೈಗೊಳ್ಳುವ ಜಾಗತಿಕ ನಿರ್ಣಯಗಳು ಭೂಮಿಯ ಆರೋಗ್ಯದ ಸೂಚ್ಯಂಕವನ್ನು ಬದಲಿಸಲಿವೆ ಎಂದು ಭಾವಿಸಲಾಗಿದೆ. ಈ ಹಿಂದೆ ಇದೇ ತರಹದ 20 ಶೃಂಗಸಭೆಗಳು ನಡೆದಿದ್ದು, ಯಾವುದೇ ಮಹತ್ತ್ವ ನಿರ್ಧಾರ ಕೈಗೊಳ್ಳುವಲ್ಲಿ ವಿಫಲಗೊಂಡಿದ್ದನ್ನು ಇಲ್ಲಿ ಸ್ಮರಿಸಬೇಕಾಗಿದೆ.
ಜಾಗತಿಕ ಲೆಕ್ಕಾಚಾರದಂತೆ ಈ ಭೂಮಿಯ ಇಂದಿನ ಜನಸಂಖ್ಯೆ 700 ಕೋಟಿ ದಾಟಿ 1000 ಕೋಟಿಯತ್ತ ದಾಪುಗಾಲಿಕ್ಕುತ್ತಿದೆ. ತಜ್ಞರ ಪ್ರಕಾರ ಭೂಮಿಗೆ ಇಷ್ಟು ಜನಸಂಖ್ಯೆಯನ್ನು ತಡೆದುಕೊಳ್ಳುವಷ್ಟು ಶಕ್ತಿಯಿಲ್ಲ. ಇದಕ್ಕೆ ಕಾರಣ ಮತ್ತೆ ಐಷಾರಾಮಿ ಜೀವನ ನಡೆಸುವ ಪ್ರಪಂಚದ ಕೆಲವೇ ಮಂದಿ. ಸರ್ಕಾರಗಳನ್ನು, ಹಣಕಾಸು ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಂಡು, ನೆಲ-ಜಲ-ಗಾಳಿಗಳನ್ನು ಹಾಳು ಮಾಡುತ್ತಾ, ಕೋಟಿ-ಕೋಟಿ ಲಾಭಗಳಿಸಿ ಐಷಾರಾಮಿಯಾಗಿ ಬದುಕುತ್ತಿರುವ ಬಂಡವಾಳಶಾಹಿಗಳು ಒಂದು ಕಡೆಯಾದರೆ, ಕಲುಷಿತ ನೆಲ-ಜಲ-ಗಾಳಿಯನ್ನು ಸೇವಿಸುತ್ತಾ, ಸೊರಗುತ್ತಾ, ತುತ್ತುಕೂಳಿಗೂ ಪರದಾಡುತ್ತಾ, ಬಂಡವಾಳಶಾಹಿಗಳಿಂದ ಸಂತ್ರಸ್ಥರಾದ ಬಹುಸಂಖ್ಯಾತ ಬಡವರೊಂದು ಕಡೆ. ಈ ಅನ್ಯಾಯದ ತಕ್ಕಡಿಯಲ್ಲಿ ಬಂಡವಾಳಶಾಹಿ ವ್ಯವಸ್ಥೆ ಜಜ್ಜಿದ ಬೆಲ್ಲದ ಉಂಡೆಯ ಮೇಲಿನ ಕಲ್ಲುಗುಂಡಿನಂತೆ ಅಂಟಿಕೊಂಡು ಕುಳಿತರೆ, ಈ ಜಗತ್ತಿನ ಮಧ್ಯಮ ಮತ್ತು ಕೆಳವರ್ಗದ ಜನತೆ ಮಲಿನ ಗಾಳಿಯಲ್ಲಿ ತೇಲುಡುತ್ತಾಲೇ ಇರುತ್ತಾರೆ.
ಜಗತ್ತಿನ ಪ್ರತಿಷ್ಠಿತ ಕಾರು ತಯಾರಿಕ ಕಂಪನಿ ವೋಕ್ಸ್ ವ್ಯಾಗನ್. ಕೋಟ್ಯಾಂತರ ರೂಪಾಯಿಗಳ ವಹಿವಾಟಿರುವ ಈ ಕಂಪನಿಯ ಕಾರುಗಳು ಅಮೇರಿಕ ಹಾಗೂ ಇನ್ನುಳಿದ ಯೂರೋಪ್ ದೇಶಗಳಲ್ಲಿ ಜನಪ್ರಿಯ. ಭಾರತದಲ್ಲೂ ಅಲ್ಲಲ್ಲಿ ಈ ಕಾರುಗಳು ಕಂಡುಬರುತ್ತವೆ. ನ್ಯಾಯ ಮಾದರಿಯಲ್ಲೇ ಸಾಕಷ್ಟು ಲಾಭಗಳಿಸಿದ ವೋಕ್ಸ್ ವ್ಯಾಗನ್ ಕಂಪನಿ ಇನ್ನು ಅಧಿಕ ಲಾಭಕ್ಕಾಗಿ ಕಳ್ಳಾಟವನ್ನು ಆಡಿ ಸಿಕ್ಕು ಬಿದ್ದಿದೆ. ಈ ಕಂಪನಿ ತಯಾರಿಸುವ ಕಾರುಗಳಿಂದ ಹೊರಬರುವ ಮಾಲಿನ್ಯದ ಪ್ರಮಾಣ ನಿಗದಿತ ಪ್ರಮಾಣಕ್ಕಿಂತಲೂ 40 ಪಟ್ಟು ಹೆಚ್ಚಿದೆ. ಮಾಲಿನ್ಯ ಪ್ರಮಾಣ ಅಳೆಯುವ ತಂತ್ರಾಂಶವನ್ನೇ ಮಾರ್ಪಡಿಸಿ ಈ ಮೋಸವನ್ನು ಕಂಪನಿ ಎಸಗಿದೆ. ಮೋಸ ಗೊತ್ತಾದ ಮೇಲೆ ಮಾರುಕಟ್ಟೆಯಲ್ಲಿರುವ ತನ್ನ ಎಲ್ಲಾ ಕಾರುಗಳನ್ನು ಹಿಂದಕ್ಕೆ ಪಡೆಯುತ್ತೇನೆ ಎಂಬ ಮಾತನ್ನು ಹೇಳಿ ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಥೇಟ್ ನಮ್ಮಲ್ಲಿ ಲಂಚ ಪೀಕಿದ ಅಧಿಕಾರಿಗಳು ಸಿಕ್ಕು ಬಿದ್ದಾಗ ನಮ್ಮ ಆಡಳಿತ ಏನು ಕ್ರಮ ತೆಗೆದುಕೊಳ್ಳುತ್ತದೆಯೋ ಅದೇ ಮಾದರಿಯಲ್ಲಿ ವೋಕ್ಸ್ ವ್ಯಾಗನ್ ಕಂಪನಿಯ ಸಿ.ಇ.ಓ. ರಾಜಿನಾಮೆಯನ್ನು ಕೊಡಿಸಿದೆ. ಇದರಿಂದ ಕಂಪನಿಗೆ ಅದೆಷ್ಟೋ ಡಾಲರ್ ನಷ್ಟವಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ಈ ಮೋಸದಿಂದ ವಾತಾವರಣಕ್ಕೆ ಸೇರಿದ ಹೆಚ್ಚಿನ ಇಂಗಾಲಾಮ್ಲದ ಪ್ರಮಾಣವಿನ್ನೂ ಸಿಕ್ಕಿಲ್ಲ. ಜಗತ್ತಿನ ತೈಲ ಕಂಪನಿಗಳು ಪ್ರಪಂಚವನ್ನು ತಮಗೆ ಬೇಕಾದ ಹಾಗೆ ಆಡಿಸುವಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ 19/11/2015ರ ಪ್ರಜಾವಾಣಿಯಲ್ಲಿ ಶ್ರೀ ನಾಗೇಶ ಹೆಗಡೆಯವರು “ಪೃಥ್ವಿಯನ್ನೇ ವಂಚಿಸ ಹೊರಟ ತೈಲ ಕಂಪನಿ”ಯಲ್ಲಿ ವಿವರವಾಗಿ ಬರೆದಿದ್ದನ್ನು ಓದಿ (ಲಿಂಕ್ ಇಲ್ಲಿದೆ). ತನ್ನ ಲಾಭಕ್ಕಾಗಿ ಇಡೀ ಜಗತ್ತಿನ ವಾತಾವರಣವನ್ನು ಕಲುಷಿತಗೊಳಿಸುತ್ತಿರುವ ಬಂಡವಾಳಶಾಹಿಗಳ ಸ್ಯಾಂಪಲ್ ಇದು.
ಈ ಬಾರಿ ನಡೆಯಲಿರುವ “ಜಾಗತಿಕ ಹವಾಗುಣ ಬದಲಾವಣೆ ಶೃಂಗ”ದಲ್ಲಿ ಬಿಗಿಯಾದ ಅಂತಾರಾಷ್ಟ್ರೀಯ ನಿಯಮಗಳನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ವಿಶ್ವನಾಯಕರ ಮೇಲೆ ಸಾರ್ವಜನಿಕರು ಒತ್ತಡ ಹೇರಬೇಕಾಗಿದೆ. ವಿವಿಧ ಅಂತಾರಾಷ್ಟ್ರೀಯ ಪರಿಸರ ಸಂಘಟನೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಇವುಗಳಲ್ಲಿ ಗ್ರೀನ್‍ಪೀಸ್, ವಲ್ರ್ಡ್ ವೈಲ್ಡ್ ಲೈಫ್ ಫಂಡ್, ಆವಾಜ್ ಡಾಟ್ ಕಾಮ್, ಗಾರ್ಡಿಯನ್ ಮುಂತಾದವುಗಳು ಮಂಚೂಣಿಯಲ್ಲಿವೆ. ಜಾಗತಿಕ ಹವಾಗುಣ ಶೃಂಗ ಸಭೆ ಆರಂಭದ ಮುನ್ನಾದಿನ ಅಂದರೆ ನವಂಬರ್ 29ರಂದು ಜಗತ್ತಿನ 7 ಖಂಡಗಳ 2 ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ “ಗ್ಲೋಬಲ್ ಕ್ಲೈಮೇಟ್ ಮಾರ್ಚ್” ಅಥವಾ ಜಾಗತಿಕ ಹವಾಗುಣ ಜಾಥಾವನ್ನು ಆಯೋಜಿಸಲಾಗಿದೆ. ಇದರಲ್ಲಿ ಸಮಾಜದ ಎಲ್ಲಾ ವರ್ಗದ ಜನರೂ ಭಾಗವಹಿಸಿ, ವಿಶ್ವನಾಯಕರ ಗಮನಸೆಳೆಯಬೇಕೆಂಬ ಆಶಯವಿದೆ.
ಈ ನಿಟ್ಟಿನಲ್ಲಿ ಸಾಗರದಲ್ಲೂ ಜಾಗತಿಕ ಹವಾಗುಣ ಜಾಥಾವನ್ನು ನವಂಬರ್ 29ರಂದು ಆಯೋಜಿಸಲಾಗಿದೆ. ಪರಿಸರಾಸಕ್ತರು ಸೇರಿ ಆಯೋಜಿಸಿದ ಈ ಜಾಥಾದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ. ಖ್ಯಾತ ಪರಿಸರವಾದಿ ಹಾಗೂ ಲೇಖಕ ಶ್ರೀ ವಿಠ್ಠಲ ಹೆಗ್ಗಡೆ ಕಲ್ಕುಳಿ ಕಾರ್ಯಕ್ರಮಕ್ಕೆ ಆಗಮಿಸಿ ಆಶಯ ಭಾಷಣ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಚಲಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಿದೆ. ಈ ಕಾರ್ಯಕ್ರಮಕ್ಕೊಂದು ಆಹ್ವಾನ ಪತ್ರಿಕೆಯನ್ನು ಮುದ್ರಣ ಮಾಡಲಾಗಿದ್ದು, ಜಾಗೃತಿಗಾಗಿ ಬರೆದದ್ದು ಇಲ್ಲಿದೆ.
ಅಪಾಯ ಅಂಚಿನಲ್ಲಿ ನಾವು!
ಮಳೆಯೇಕೆ ಕಡಿಮೆಯಾಗಿದೆ?
ಭೂಬಿಸಿಯ ಪರಿಣಾಮಗಳೇನು?
ಅಕಾಲಿಕ ಮಳೆಗೆ ಕಾರಣವೇನು?
ನೈಸರ್ಗಿಕ ವಿಕೋಪಗಳಿಗೆ ಕಾರಣವೇನು?
ಸೂರ್ಯ ಸಿಟ್ಟಾಗಿದ್ದಾನೆಯೆ?
ನೀರಿಗಾಗಿ ಯುದ್ಧವಾಗುವುದೇ?
ಕಾಡು ಏಕಿರಬೇಕು?
ಈ ತರಹದ ಭಯಜನಕ ಪ್ರಶ್ನೆಗಳು, ಅನುಮಾನಗಳು ನಿಜವೇ? ನಿಜವೇ ಆದಲ್ಲಿ ನಾವೇನು ಮಾಡಬೇಕು? ಅಥವಾ ನಾವೇನು ಮಾಡಬಾರದು. ನಮ್ಮಗಳ ಉತ್ತಮ ಭವಿಷ್ಯಕ್ಕಾಗಿ ಏನೇನ್ನೆಲ್ಲಾ ಮಾಡಬಹುದು.
ಕೈಗಾರಿಕಾ ಕ್ರಾಂತಿ, ವಿಜ್ಞಾನ-ತಂತ್ರಜ್ಞಾನ, ಕೃಷಿಯಲ್ಲಿನ ಆಧುನಿಕತೆ, ಜನಸಂಖ್ಯಾ ಸ್ಪೋಟ, ಯಂತ್ರಗಳ ಮೇಲಿನ ಅತಿಯಾದ ಅವಲಂಬನೆ, ಪಳೆಯುಳಿಕೆ ಇಂಧನಗಳಾದ ಪೆಟ್ರೋಲ್, ಡೀಸೆಲ್, ಕಲ್ಲಿದ್ದಲುಗಳ ಅತಿ ಬಳಕೆ, ಕಾಡು ನಾಶ ಇತ್ಯಾದಿಗಳಿಂದಾಗಿ ಈ ಭೂಮಿಯ ಮೇಲಿನ ಬಿಸಿ ಹೆಚ್ಚಾಗುತ್ತಿದೆ. ಅತಿವೃಷ್ಠಿ ಅನಾವೃಷ್ಠಿ, ಪ್ರಳಯ ಸದೃಶ ಬಿರುಗಾಳಿ, ಭೂಕಂಪ, ಸಮುದ್ರ ಮಟ್ಟದಲ್ಲಿನ ಏರಿಕೆ ಇತ್ಯಾದಿಗಳು ದಿನೇ ದಿನೇ ಪ್ರಪಂಚಾದ್ಯಂತ ಹೆಚ್ಚುತ್ತಿದೆ. ಉತ್ತರ-ದಕ್ಷಿಣ ಧ್ರುವಗಳ ಮಂಜಿನ ಹಾಸು ಕರಗುತ್ತಿದೆ. ಕಂಡು ಕೇಳರಿಯದ ಹೊಸ ರೋಗಗಳು ಧಾಂಗುಡಿಯಿಡುತ್ತಿವೆ. ಕಳೆದ 40 ವರ್ಷಗಳಿಂದಲೇ ಭೂಬಿಸಿಯಿಂದಾಗುವ ದುಷ್ಪರಿಣಾಮಗಳನ್ನು ವಿಜ್ಞಾನಿಗಳು ಅಂದಾಜಿಸಿದ್ದರು. ಭೂಬಿಸಿಯಾಗುತ್ತಿರುವುದು ಯಾರೊಬ್ಬರಿಗೂ ವೈಯಕ್ತಿಕವಾಗಿ ಅನುಭವವಾಗುವುದಿಲ್ಲ. ನೀರಿಗಾಗಿ ಯುದ್ಧಗಳಾಗುವ ಸಂಭವನೀಯ ಅಪಾಯವನ್ನು ತಳ್ಳಿಹಾಕುವ ಸ್ಥಿತಿಯಲ್ಲಿ ನಾವಿಲ್ಲ. ಜನಸಂಖ್ಯೆ ಹೆಚ್ಚಾಗಿರುವ ಏಷ್ಯಾ ಖಂಡದ ದೇಶಗಳಲ್ಲಿ ಅದರಲ್ಲೂ ಮುಖ್ಯವಾಗಿ ಭಾರತ-ಚೀನಾ ಪ್ರಜೆಗಳಿಗೆ ಭೂಬಿಸಿಯ ಅಪಾಯ ಹೆಚ್ಚು. ಆಹಾರದ ಅಭಾವ ತಲೆದೋರಿ ಆಹಾರಭದ್ರತೆಗೆ ಅಪಾಯವುಂಟಾಗುವ ವಿಲಕ್ಷಣ ಸನ್ನಿವೇಶದಲ್ಲಿ ನಾವಿಂದು ಸಿಲುಕಿದ್ದೇವೆ. ಸಮುದ್ರ ತೀರದಲ್ಲಿ ವಾಸಿಸುತ್ತಿರುವ ಜೀವನ ಅಪಾಯಕ್ಕೆ ತಲುಪುವ ದಿನ ದೂರವಿಲ್ಲ. ಭೂಮಿಯ ವಾತಾವರಣದಲ್ಲಿ ಸಿಓಟು ಅಥವಾ ಇಂಗಾಲಾಮ್ಲದ ಮಟ್ಟ ಹೆಚ್ಚಾಗುತ್ತಿರುವುದರಿಂದಾಗಿ ಭೂಬಿಸಿಯಾಗುತ್ತಿದೆ ಎಂಬುದು ನಿರ್ವಿವಾದ. ಈ ನಿಟ್ಟಿನಲ್ಲಿ ಇಡೀ ಭೂಮಿಯ ಏರುತ್ತಿರುವ ಬಿಸಿಯನ್ನು ಹತೋಟಿಯಲ್ಲಿಡಲು ತನ್ಮೂಲಕ ಇಡೀ ಭೂಮಿಯ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಜಗತ್ತಿನ 200 ದೇಶಗಳ ರಾಜಕೀಯ ನಾಯಕರು, ಹೂಡಿಕೆದಾರರು, ಎಲ್ಲಾ ರಂಗದ ವಿಜ್ಞಾನಿಗಳು ಇದೇ ಬರುವ ನವಂಬರ್ 30 ರಿಂದ ಡಿಸೆಂಬರ್ 11ರ ವರೆಗೆ ಪ್ಯಾರೀಸ್‍ನಲ್ಲಿ ಜಾಗತಿಕ ಹವಾಮಾನ ಬದಲಾವಣೆ ಶೃಂಗದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭೂಬಿಸಿಯನ್ನು ತಡೆಯುವುದು ವೈಯಕ್ತಿಕ ಮಟ್ಟದಲ್ಲಿ ಅಸಾಧ್ಯವಾಗಿದೆ. ನೂರಕ್ಕೆ ನೂರು ಮರುಬಳಕೆ ಇಂಧನಗಳನ್ನು ಬಳಸುವುದು ಈಗಿರುವ ಏಕೈಕ ಮಾರ್ಗವಾಗಿದ್ದು, ಈ ನಿಟ್ಟಿನಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳೂ ಏಕತ್ರವಾಗಿ ಶ್ರಮಿಸಿದರೆ ಮಾತ್ರ ಭೂಬಿಸಿಯೆಂಬ ಪ್ರಳಯದಿಂದ ಪಾರಾಗಲು ಸಾಧ್ಯ. ಆದ್ದರಿಂದ, ಜಗತ್ತಿನ ಎಲ್ಲಾ ರಾಷ್ಟ್ರಗಳ ನಾಯಕರ ಗಮನವನ್ನು ಸೆಳೆಯುವ ಸಲುವಾಗಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವುದು, ತನ್ಮೂಲಕ ಜಾಥಾದ ಆಶಯವನ್ನು ಜಗತ್ತಿನ ನಾಯಕರಿಗೆ ತಲುಪಿಸುವ ಕೆಲಸವನ್ನು ಮಾಡಬೇಕಾಗಿದೆ. ಆವಾಜ್ ಸಂಸ್ಥೆ ಜಗತ್ತಿನೆಲ್ಲೆಡೆ ಈ ತರಹದ ಜಾಥಾವನ್ನು ಆಯೋಜಿಸುವ ಕೆಲಸ ಮಾಡುತ್ತಿದ್ದು, ಈ ನಿಯೋಜಿತ ಜಾಥಾದ ಆಶಯವನ್ನು ಪ್ಯಾರೀಸ್ ಶೃಂಗಸಭೆಗೆ ತಲುಪಿಸುವ ಕೆಲಸವನ್ನು ಮಾಡುತ್ತದೆ. ಸಂಕ್ರಮಣದ ಈ ಹೊತ್ತಿನಲ್ಲಿ ಮುಂದಿನ ಪೀಳಿಗೆಗಾಗಿ ಭೂಮಿಯನ್ನು ಪರಿಶುದ್ಧವಾಗಿ ಉಳಿಸುವ ಕೆಲಸವನ್ನು ನಾವೆಲ್ಲಾ ಸಾಮೂಹಿಕವಾಗಿ ಕೈಗೊಳ್ಳಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಬಹುಮುಖ್ಯವಾಗಿದೆ.
ಹತ್ತಿರವಿರುವವರು, ಆಸಕ್ತರು ಬಂದು ಪಾಲ್ಗೊಳ್ಳಿ ಎಂದು ಈ ಮೂಲಕ ಕಳಕಳಿಯ ವಿನಂತಿ.
ಈ ಬರಹ ಮತ್ತು ವಿಷಯ ಹೆಚ್ಚು ಹೆಚ್ಚು ಜನರನ್ನು ತಲುಪಲಿ.