ಜಾಗತಿಕರಣ ಪ್ರವೇಶಿಸಿದ ಈ ಹೊತ್ತನೊಳಗ ಭಾರತದ ಮಹಿಳೆಯರ ಸ್ಥಿತಿಗತಿಯೊಳಗ ಇತ್ಯಾತ್ಮಕ ಬದಲಾವಣೆಗಳಾಗ್ಯಾವೆನು ಅನ್ನೊ ಪ್ರಶ್ನೆಗೆ ಸಮರ್ಪಕವಾದ ಉತ್ತರ ಸಿಗೊದೆಯಿಲ್ಲಾ. ಯಾಕಂದ್ರ ಜಾಗತಿಕರಣ ಯಜಮಾನ ಸಂಸ್ಕೃತಿಯನ್ನ ಪೋಷಿಸಲಿಕತ್ತದ. ಗಂಡಸಿಗೆ ಮುಕ್ತವಾದ ವಾತಾವರಣ ಕಲ್ಪಿಸಿಕೊಟ್ಟು, ಹೆಣ್ಣನ್ನ ಮತ್ತದೆ ಹಳೆಯ ಚೌಕಟ್ಟಿನೊಳಗ ಕೂಡಿಸೊ ಪ್ರಯತ್ನ ನಡದದ.
ನಮ್ಮ ದೇಶದ ಬಹಳಷ್ಟು ಕಾನೂನು ಮತ್ತ ಕಾಯಿದೆಗಳು ಶೋಷಿತರ, ಮಹಿಳೆಯರ ಪರವಾಗಿ ಅವ ಆದ್ರ ಅವೆಲ್ಲಾ ಕಾಗದದ ಮ್ಯಾಲಿನ ಹುಲಿಗಳಾಗಿನ ಉಳಕೊಂಡಾವ. ಸಂವಿಧಾನ ಬಂದು ಇಷ್ಟು ವರ್ಷ ಆದಮ್ಯಾಲೆನು ಮಹಿಳೆಗೆ ಮಿಸಲಾತಿ ಅವಶ್ಯವಾಗಿದ್ದು ಅದನ್ನ ಒದಗಿಸಿಕೊಡಲಿಕ್ಕೆ ವ್ಯವಸ್ಥೆ ಹಿಂದ ಮುಂದ ನೋಡಿದ್ರ, ಸಮಾನತೆ, ಸಬಲೀಕರಣ ಅನ್ನೊ ಮಾತುಗಳು ಬರೆ ಕಾಗದದ ಮ್ಯಾಲಿನ ಭಾಷೆಯಾಗಿನ ಉಳ್ಕೊಂಡಿರ್ತದ.
ಇನ್ನೂ ದೇಹಲಿಯ ಗ್ಯಾಂಗ ರೇಪ್ ಪ್ರಕರಣದ ಆಘಾತನ ಇನ್ನು ಆರಿಲ್ಲಾ ಅಷ್ಟರಾಗ ಒಂದರ ಮ್ಯಾಲಿನ್ನೊಂದು ಅಪ್ರಾಪ್ತ ಬಾಲಕಿಯರ ಮ್ಯಾಲೆ ಅತ್ಯಾಚಾರಗಳ ಸಿಡಲ ಬಡಧಂಥಾ ಸುದ್ದಿಗೊಳನ್ನ ಕೇಳಕೊತನ ಇದ್ದೇವಿ. ಇದೆನಾಗೇದ ಇವತ್ತಿನ ಸಮಾಜಕ್ಕ, ಎಲ್ಲೆ ನೋಡಿದ್ರು ಅಪ್ರಾಪ್ತ ಬಾಲಕಿಯರ ಮ್ಯಾಲೆ, ಗರ್ಭಿಣಿಯರ ಮ್ಯಾಲೆ, ವಿದ್ಯಾರ್ಥಿನಿಯರ ಮ್ಯಾಲೆ, ಅತ್ಯಾಚಾರದ ಮ್ಯಾಲೆ ಅತ್ಯಾಚಾರ ನಡಿಲಿಕತ್ತಾವ, ಇದಕ್ಕ ಬಲಿಯಾದ ಮಾನ ಪ್ರಾಣಗಳ ಹೆಣಾ ನಡುಹಾದ್ಯಾಗ ಕೊಳತನಾರಲಿಕತ್ತಿದ್ರು ಯಾಕ ಇನ್ನು ನಮ್ಮ ರಕ್ಷಣಾ ವ್ಯವಸ್ಥೆ ಇನ್ನು ಕಣ್ಣು ಮೂಗು ಮುಚ್ಚಕೊಂಡ ಕುತದ.
ಒಂದ ಹೆಣ್ಣು ಸ್ವಲ್ಪ ತಿಳುವಳಿಕಿ ಬಂದ ದೊಡ್ಡಾಕ್ಯಾದ ಮ್ಯಾಲೆ ಹಡದ ತಾಯಿ ಮುಂದ ತನ್ನ ಅರವಿ ಸುಧ್ಧಾ ಬದಲಾಸಂಗಿಲ್ಲಾ ಅಂಥಾದ್ರಾಗ ಯಾವನೊ ಬಂದು ತನ್ನ ಸ್ವಾರ್ಥಕ್ಕಆಕಿನ್ನ ಹಾಳಮಾಡಿ, ಮಾನಸಿಕವಾಗಿ,ದೈಹಿಕವಾಗಿ ನೋವುಕೊಡತಾನಂದ್ರ ಅದೆಂಥಾ ನೋವನ್ನ ಹೆಣ್ಣುಮಗಳು ಅನುಭವಿಸಿರಬೇಕು ಅನ್ನೊಂದು ಆಕಿಗೆ ಗೊತ್ತು. ಅತ್ಯಾಚಾರಕ್ಕ ಒಳಗಾದವರು ತಮಗಾದ ನೋವಿನ ಹಸಿಗಾಯದ ನೋವನ್ನ ಜೀವನಿಡಿ ಅನುಭೊಗಿಸಿಕೊತನ ಸಂಕಟಾಪಟ್ಟ ಸಾಯತಾರ. ಆದ್ರ ಆ ನೋವಕೊಟ್ಟಾಂವಾ ಒಂದ ಹತ್ತಬಿಟ್ಟ ಇಪ್ಪತ್ತಸಾವಿರಾ ಜಾಸ್ತಿ ಜಾಮೀನಿನ ರೊಕ್ಕಾ ಒಗದು ಬಿಂದಾಸ ಹೆಂಡತಿ ಮಕ್ಕಳ ಜೋಡಿ ಮಜಾಮಾಡತಾನ. ಯಾಕ? ಆಂವಗ ಇನ್ನೊಬ್ಬರ ಮಾನಾ ಮರ್ಯಾದಿ ಜೋಡಿ ಆಟಾ ಆಡಿ, ಒಬ್ಬ ವ್ಯಕ್ತಿದ ಅಷ್ಟ ಅಲ್ಲಾ ಒಂದ ಕುಟುಂಬದವರ ಜೀವನದ ಪೂರ್ತಿ ನಗು ಕಸಗೊಂಡ, ತನ್ನಷ್ಟಕ್ಕ ತಾ ಸುಖದಿಂದ ಇರಲಿಕ್ಕೆ ಎನ ಹಕ್ಕದ?
ಇಷ್ಟ ವರ್ಷದಿಂದ ಸ್ತ್ರೀಶೋಷಣೆ ವಿರುಧ್ಧ ಪ್ರತಿಭಟಣೆಗೊಳ ನಡದಾವ, ಸಂಘ ಸಂಸ್ಥೆಗೊಳ ಹುಟಗೊಂಡಾವ, ಆದ್ರ ಅದರಿಂದ ಹೆಣ್ಣಮಕ್ಕಳಿಗೆ ಆದ ಅನುಕೂಲರ ಎನು? ಎಲ್ಲರೆ ಒಂದ ದುರ್ಘಟನಾ ನಡದಾಗ ಅಷ್ಟ ಎಲ್ಲಾರು ಒಂದಿಷ್ಟ ಮಂದಿನ್ನ ಕೂಡಿಸಿ ಪ್ರತಿಭಟನಾ ಮೆರವಣಿಗಿ ಮಾಡಿದ್ರ ಎನ ಸಾಧಿಸಿಧಂಗ ಆತು, ಭಾಳ ಭಾಳಂದ್ರ ಅತ್ಯಾಚಾರಿಗೊಳ ಸಿಗತಾರ, ಅವರಿಗೆ ಇಂತಿಷ್ಟ ಅಂತ ಶಿಕ್ಷಾ ಆಗತದ ಇಲ್ಲಾ ದಂಡಾ ತುಂಬೊ ಅವಕಾಶ ಇರತದ, ರೊಕ್ಕಾ ಒಗದ ಬಿಡುಗಡಿಯಾಗಿ ಬಂದ ಮುಂದಿನ ಬ್ಯಾಟಿಗೆ ಸಜ್ಜಾಗತಾನ. ಅತ್ಯಾಚಾರಕ್ಕ ಒಳಗಾದವರು ಇಡಿ ಜೀವನಾಪೂರ್ತಿ ಮರಿಲಾರದ ನೋವಿನಿಂದ ಒದ್ದ್ಯಾಡೊದು. ಆದ್ರ ಅಪರಾಧಿ ಮಾತ್ರ ಸುಖದಿಂದ ಇರೊದು ಎಲ್ಲಿಯ ನ್ಯಾಯ?. ನಾವ ಇವತ್ತ ನೊಂದವರಿಗೆ ಕನಿಕರ,ಪ್ರೀತಿ ತೊರಸಬಹುದು,ಮಾನಸಿಕವಾಗಿ ಅವರಿಗೆ ಧೈರ್ಯ ಕೊಡಬಹುದು,ಅವರ ಪರವಾಗಿ ನ್ಯಾಯಕ್ಕಾಗಿ ಹೋರಾಡಬಹುದು,ಆದ್ರ ಮತ್ತ ಮತ್ತ ಆಗೊ ಇಂಥಾ ಅತ್ಯಾಚಾರಗಳನ್ನ ತಡಿಲಿಕ್ಕಾಗಂಗಿಲ್ಲಾ. ಅತ್ಯಾಚಾರ ಆದಮ್ಯಾಲೆ ನ್ಯಾಯಕ್ಕಾಗಿ ಹೋರಾಡೊದರ ಜೋಡಿ ಇಂಥಾ ಅತ್ಯಾಚಾರಗಳನ್ನ ಆಗಲಾರಧಂಗ ತಡಿಯೊದರ ಬಗ್ಗೆನು ಹೋರಾಡಬೇಕು. ಮದಲ ಈ ಅತ್ಯಾಚಾರಧಂಥಾ ಅಪರಾಧಗೊಳಿಗೆ ಜಾಮೀನು ವ್ಯವಸ್ಥಾ ಅಂತು ಇರಬಾರದು.
ಒಂದ ಹೆಣ್ಣಿನ ಶೀಲದ ಕಿಮ್ಮತ್ತು ಬರೆ ಕೆಲವು ಜಾಮೀನಿಗೆ ಗೊತ್ತ ಮಾಡಿದ್ದ ರೊಕ್ಕಾ ಅಷ್ಟ ಎನು? ಒಂದ ಹೆಣ್ಣು ಅನುಭೊಗಿಸಿದ ಸಂಕಟಾ ನೋವು, ಕಳಕೊಂಡ ತನ್ನ ಶೀಲನ ಎನ ಕೊಟ್ರ ತಂದು ಕೊಡಲಿಕ್ಕೆ ಸಾಧ್ಯ ಅದ.ಅಪರಾಧಿಗೆ ಜೀವನಿಡಿ ಸುಖ ಸಂತೋಷದ ಕ್ಷಣಗಳು ಆದ್ರ ಶೋಷಿತಳಿಗೆ ಮಾತ್ರ ಸಾಯುವ ತನಕಾ ದುಃಖ ,ಜನರ ತಾತ್ಸಾರ ಯಾಕ? ಇದೆಲ್ಲಿ ನ್ಯಾಯಾ. ಇಂಥಾ ಅತ್ಯಾಚಾರಿಗಳಿಗೆ ಕ್ಷಮಾದಾನ ಅಂತು ಇರಲೇಬಾರದು. ಯಾವ ದೇಶೊಧ್ಧಾರದ ಕೆಲಸಾ ಮಡ್ಯಾರಂತ ಇಂಥಾ ಅತ್ಯಾಚಾರಿಗೊಳಿಗೆ ಕ್ಷಮಾದಾನ ಕೊಡಬೇಕು? ಯಾವ ನೋವನ್ನ ಹೆಣ್ಣು ಜೀವನಿಡಿ ಅನುಭವಸ್ತಾಳೊ ಅದೇ ಥರದ ನೋವನ್ನ ಅತ್ಯಾಚಾರಿನು ಅನುಭೋಗಿಸಲೇಬೇಕು. ಅಂಥಾದ ಒಂದ ಶಿಕ್ಷೆಯನ್ನ ಅಪರಾಧಿಗೆ ಕೊಡಬೇಕು. ಇಂಥಾ ಒಂದ ಶಿಕ್ಷಾ ಅನುಬೊಗಸಲಿಕತ್ತ ಅತ್ಯಾಚಾರಿನ ನೋಡಿ ಜೀವನದಾಗ ಬ್ಯಾರೆ ಯಾರು ಅತ್ಯಾಚಾರ ಮಾಡೊದು ಧೂರ ಉಳಿತು, ಒಂದ ಹೆಣ್ಣಿನ ಆಸೆಯಿಂದ ನೋಡಿರಬಾರದು. ಅಂಥಾದರ ಬಗ್ಗೆ ವಿಚಾರ ಮಾಡಿದ್ರುನು ಮೈಯ್ಯಾಗಿನ ಕುದಲಾ ನಿಗರಿ ನಿಂತಿರಬೇಕು ಅಂಥಾ ಒಂದ ಶಿಕ್ಷೆನ ಜಾರಿಗೆ ತರಬೇಕು.
ಹಿಂದಕಿನ ಕಾಲದಾಗ ವಾಮಾಚಾರಾ ಮಾಡೊವರನ ಅವರ ಹಲ್ಲು ಕಿತ್ತಿ ಶಿಕ್ಷಾ ಕೊಡತಿದ್ರಂತ. ವಾಮಾಚಾರಿಗಳ ಶಕ್ತಿ ಇರೊದನ ಮಂತ್ರಗಳೊಳಗ. ಮಂತ್ರಗಳ ಸ್ಪಷ್ಟ ಉಚ್ಛಾರಣೆ ಇಲ್ಲಂದ್ರ ಅವರ ಸಾಧನೆ ಅವರಿಗೆನ ತಿರಗುಬಾಣ ಆಗತದ. ಹಲ್ಲುಗಳನ್ನ ಕಿತ್ತಿ ವಾಮಾಚಾರಿಗಳನ್ನ ನಿಶ್ಚಪ್ರಯೋಜಕರನ್ನಾಗಿ ಮಾಡಿ, ಮಾಟ ಮಂತ್ರಗಳಿಂದಾಗೊ ಅನಾಚಾರಗಳನ್ನ ತಪ್ಪಿಸಿ ದೇಶದ ಹಿತ ರಕ್ಷಣೆ ಮಾಡತಿದ್ರಂತ. ಅದೇ ರೀತಿ ಬಲಾತ್ಕಾರಿಗಳಿಗೆ ಬರೊಬ್ಬರಿ ಶಿಕ್ಷಾ ಅಂದ್ರ ಅತ್ಯಾಚಾರ ಮಾಡಿದ ವ್ಯಕ್ತಿಯನ್ನ ನಪುಂಸಕನನ್ನಾಗಿ ಮಾಡೊದು. ಹೆಣ್ಣಿಗೆ ಹೆಂಗ ಒಂದ ಸಲಾ ಕಳಕೊಂಡಿದ್ದು ವಾಪಸ ಪಡಿಲಿಕ್ಕೆ ಆಗಲಾರಧಂಥಾ ನೊವನ್ನ ಕೊಟ್ಟಾನೊ ಅಂಥಾ ಒಂದ ನೋವು ಆಂವನು ಅನುಭೊಗಸಬೇಕು.ಭೊಗ ವಸ್ತುಗಳು ತನ್ನ ಮುಂದನ ಇದ್ರುನು ಅದನ್ನ ಭೊಗಿಸಲಿಕ್ಕಾಗಲಾರದ, ತಾ ಮಾಡಿದ ಕುಕೃತ್ಯಕ್ಕ ಸಾಯೊತನಕಾ ವಿಲಿ ವಿಲಿ ಒದ್ದಾಡಿರಬೇಕು. ಇಂಥಾ ಒಂದು ದಂಡನೆಯ ಪಧ್ಧತಿ ನೋಡಿ ಪರಸ್ತ್ರಿಯ ಬಗ್ಗೆ ಅಶ್ಲೀಲವಾಗಿ ವಿಚಾರ ಮಾಡೊ ವ್ಯಕ್ತಿಯ ಎದಿಗುಂಡಗಿ ನಡಗಿರಬೇಕು. ಇಂಥಾ ಅಪರಾಧಿಗೊಳ ಎನ ಮಹಾ ದೇಶ ಉಧ್ಧಾರದ ಕೆಲಸಾ ಮಾಡ್ಯಾರಂತ ಇವರನ್ನ ಸುಮ್ನ ಬಿಡಬೇಕು. ಹೌದಪ್ಪ ಇವತ್ತ ಎನೊ ಒಂದ ಬಡತನ ಪರಿಸ್ಥಿತಿ ಅದ ರೊಕ್ಕದ ತ್ರಾಸ ಅದ, ಯಾವದೊ ಒಂದ ವಸ್ತುನ ಕಳುವ ಮಾಡಿ ತನ್ನ ಅವಶ್ಯಕತೆಗಳನ್ನ ಪೂರೈಸಿಕೊಂಡಾನ ಅದ್ರ ಅದೇಲ್ಲೊ ಒಂದ ಕ್ಷಮಾರ್ಹ ಅನಕೊಬಹುದು. ಆವಾಗ ಆ ವಸ್ತುವಿನ ಕಿಮ್ಮತ್ತ ಅಥವಾ ಅಂಥಾದ್ದ ವಸ್ತುವನ್ನ ಅಪರಾಧಿಯಿಂದ ವಸೂಲ ಮಾಡಿ ಅವನಿಗೆ ಶಿಕ್ಷಾ ಕೊಟ್ಟು, ಸುಧಾರಣೆಗೆ ಒಂದ ಅವಕಾಶ ಕೊಡಬಹುದು. ಆದ್ರ ಸ್ತ್ರೀ ಅತ್ಯಾಚಾರದ ವಿಷಯ ಬಂದ್ರ ಅದು ಅಕ್ಷಮ್ಯ ಅಪರಾಧ. ಒಂದ ಹೆಣ್ಣ ಕಳಕೊಂಡಂಥಾ ತನ್ನ ಮರ್ಯಾದಿಯ ವಸ್ತುವನ್ನ ಯಾವ ಅಪರಾಧಿ ವಾಪಸ ಕೊಡಲಿಕ್ಕಾಗತದ. ಇಂಥಾ ಅಪರಾಧಿಗೊಳಿಗೆ ಯಾವುದೆ ಒಂದು ಕರುಣೆಯ ಭಾವನಾ ತೊರಸದ ಕಠಿಣಾಕಠಿಣ ಸಜೆ ಕೊಡಬೇಕು. ಯಾವ ಕ್ಷಣಿಕ ಸುಖದ ಸಲುವಾಗಿ ಆಂವಾ ಒಂದ ಜೀವದ ಜೋಡಿ ಆಟಾಆಡಿರತಾನ ಅಂಥಾ ಸುಖಾನ ಜೀವನದಾಗ ಎಂದು ಅನುಭೊಗಸಲಿಕ್ಕಾಗಿರಬಾರದು, ಈಡಿ ಜೀವನಾ ಶಂಡನಂಘ ಒದ್ಯಾಡಿರಬೆಕು. ಹಂಗ ಅಂದ್ರ ಮಾತ್ರ ಆಗೊ ಅನಾಹುತಗಳನ್ನ ತಪ್ಪಸಬಹುದು. ಇಲ್ಲಾಂದ್ರ ಅಪರಾಧಗೊಳ ನಡದಾಗ ಅಷ್ಟ ಹೋರಾಡೊದು ಆಮ್ಯಾಲೆ ಸುಮ್ನಿರೊದು ಸಮಸ್ಯಾಕ್ಕ ಪರಿಹಾರ ಅಲ್ಲಾ.
ಇಂಥಾ ಅಸಹ್ಯ ಅಪರಾಧಗೊಳ ಆಗಲಾರಧಂಘ ತಡಿಗಟ್ಟೊದ್ರ ನಿಟ್ಟಿನ್ಯಾಗ ತೀವ್ರವಾಗಿ ಹೋರಾಟಾ ಮಾಡಬೇಕು. ಅತ್ಯಾಚಾರವನ್ನ ನಾನ್-ಬೆಯಿಲೇಬಲ್-ಅಫೆನ್ಸ್ ಮಾಡಲೆಬೇಕು. ಮತ್ತ ಯಾವ ಪುರುಷತ್ವದ ಮದದಿಂದ ಇಂಥಾ ಹೀನ ಕಾರ್ಯಾ ಮಾಡಿರತಾನಲ್ಲಾ ಅದನ್ನ ನಪುಂಸಕತ್ವಕ್ಕ ಬದಲಾಯಿಸೊ ಶಿಕ್ಷಾ ಕೊಡಬೇಕು. ಈ ದೇಶದೊಳಗ ಕ್ರಾಂತಿ, ಬದಲಾವಣೆ,ಸುಧಾರಣೆ ಅನ್ನೊದು ಬರೆ ಪುಸ್ತಕದೊಳಗ ಮಾತ್ರ ಅದ. ದೇಶದ ಸರ್ಕಾರ, ಆಡಳಿತ ವ್ಯವಸ್ಥೆ ಇನ್ನು ಹಿಂಗ ಕಣ್ಣು ಮುಚ್ಚಕೊಂಡ ಕುತಿದ್ರ ನಮ್ಮ ದೇಶ ಮತ್ತೊಮ್ಮೆ ಬೇರೆಯವರ ಗುಲಾಮಗಿರಿಗೆ ಸಿಕ್ಕಿಹಾಕ್ಕೊಳ್ಳೊದ್ರಾಗ ಯಾವ ಸಂಶಯನು ಇಲ್ಲಾ. ಯಾಕಂದ್ರ ದೇಶದ ಇಂಥಾ ಆಂತರಿಕ ಅರಾಜಕತೆಯನ್ನ ಮತ್ತೊಬ್ಬರು ಅವಕಾಶವನ್ನಾಗಿ ಉಪಯೋಗಿಸಿಕೊತಾರ.
ಎಲ್ಲಾರು ಭಾಷಣಾ ಮಾಡತಾರ ಸ್ತ್ರೀ ವಿಮೋಚನಕ್ಕ ಪ್ರಗತಿ ಪರ ಕಾರ್ಯಕ್ರಮಗಳನ್ನ ಹಮ್ಮಿಕೊತೇವಿ, ಅದು ಇದು ಅಂತ. ಆದರ ಯಾವದು ಉಪಯೋಗ ಇಲ್ಲಾ. “ ಮನಸ್ಸಿನ್ಯಾಗ ಮಂಡಗಿ ತಿಂದ್ರ, ಗೋಧಿ ಲೆಕ್ಕಾ ಕೊಡೊವರ್ಯಾರ” ಅನ್ನೊ ಲೆಕ್ಕಧಂಗ ಅದ ಈ ವಿಚಾರ. ಎಲ್ಲಾರು ಸುಧಾರಣೆ ಮಾತಾಡತಾರ ಆದ್ರ ಕಾರ್ಯರೂಪಕ್ಕ ತರೊವರ ಯಾರು ಇಲ್ಲಾ. ಪ್ರತಿಯೊಬ್ಬರು ದೇಶದ ಪ್ರತಿ ತಮ್ಮ ತಮ್ಮ ನೈತಿಕ ಜವಾಬ್ದಾರಿನ ಅರಿತು,ಸ್ವ-ಇಚ್ಛೆಯಿಂದ ಸತ್ಯ ಮತ್ತ ನ್ಯಾಯಕ್ಕಾಗಿ ಹೋರಾಡಲಿಕ್ಕೆ ತಯಾರಾಗಿ ಬರಬೇಕು.
ಮಹಾತ್ಮಾ ಗಾಂಧೀಜಿಯವರು ಹೇಳಿದ್ರು” ಯಾವಾಗ ಹೆಣ್ಣು ರಾತ್ರಿ 12 ಗಂಟೆಕ್ಕ ನಿರ್ಭಯವಾಗಿ ರಸ್ತೆಯೊಳಗ ಧೈರ್ಯಾದಿಂದ ಅಡ್ಢ್ಯಾಡತಾಳೊ ಆವಾಗ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಂಘ ಅಂತ. ಆದ್ರ ಇಂದಿನ ದಿನಮಾನದೊಳಗ ಧೈರ್ಯದಿಂದ ಹೊರಗ ಅಡ್ಡ್ಯಾಡೊದ ದೂರ ಉಳಿತು, ಮನ್ಯಾಗ ಹಡೆದ ತಂದಿ, ಸೊದರ ಸಂಬಂಧಿ, ಶಾಲೆಯ ಗುರುಗಳಿಂದ ತನ್ನ ಶೀಲ ಕಾಪಾಡ್ಕೊಳ್ಳಿಕ್ಕೆ ಹೆಣಗಾಡೊ ಅಂಥಾ ದುಸ್ತರ ಪರಿಸ್ಥಿತಿ ಬಂದೊದಗ್ಯಾದ. ಅಷ್ಟ ವಿಕೃತ ಸಮಾಜದ, ಮನೋಭಾವಗಳ ಸೃಷ್ಠಿ ಆಗಲಿಕತ್ತದ. ಸಮಾಜದೊಳಗ ಇವತ್ತ ಮಹಿಳೆ ತನ್ನ ಆತ್ಮಸಮ್ಮಾನವನ್ನ ರಕ್ಷಿಸಿಕೊಳ್ತಾ, ತನ್ನನ್ನು ಈ ವಿಕೃತ ಸಮಾಜದ ಬಲಿಯಿಂದ ರಕ್ಷೀಸಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗೇದ. ಯಾಕಂದ್ರ ಪ್ರತಿಸಲ ರಾಮ ಕೃಷ್ಣರೇ ಹುಟ್ಟಿ ಬರಲಿಕ್ಕೆ ಸಾಧ್ಯವಿಲ್ಲ.
*****
ಕೆಟ್ಟ ಅನಸ್ತದ.
ಸಮಾಜ ಬದಲು ಆಗಬೆಕು ಆದರ ಒಳ್ಳೆ ದೃಷ್ಟಿಯಿ೦ದ ,,,,,