ಜವಾಬ್ದಾರಿ: ಗಿರಿಜಾ ಜ್ಞಾನಸುಂದರ್

girija-jnanasundar

ವಿಭಾ ಅತಿ ಉತ್ಸಾಹದಿಂದ ತಾನು ಗೆದ್ದಿರುವ ಮೆಡಲ್ ಗಳು ಮತ್ತು ಸರ್ಟಿಫಿಕೇಟ್ ಗಳನ್ನೂ ಜೋಡಿಸುವುದರಲ್ಲಿ ಮುಳುಗಿದ್ದಳು. ಎಂಟು ವರ್ಷದ ವಿಭಾಗೆ ತಾನು ತನ್ನ ಅಣ್ಣ ವಿಶಾಲ್ ಗಿಂತ ಹೆಚ್ಚು ಪದಕಗಳನ್ನು ಗೆದ್ದಿರುವುದು ಎಲ್ಲಕ್ಕಿಂತ ಸಂತೋಷ ಕೊಟ್ಟಿತ್ತು. ಮನೆಗೆ ಬಂದವರಿಗೆಲ್ಲ ತನ್ನ ಗೆಲುವಿನ ಬಗ್ಗೆ ಹೇಳಿ ಅವರಿಂದ ಹೊಗಳಿಕೆಯನ್ನು ಪಡೆಯುವುದು ಒಂಥರಾ ಮಜಾ ಅನ್ನಿಸುತ್ತಿತ್ತು. ಆಗ ವಿಶಾಲ್ ನ ಮುಖ ಪೆಚ್ಚಾಗುವುದನ್ನು ಗಮನಿಸಲು ಮಾತ್ರ ಮರೆಯುತ್ತಿರಲಿಲ್ಲ. ಆಟ, ಪಾಠ, ಹಾಡು, ಕಲೆ ಎಲ್ಲದರಲ್ಲೂ ತನ್ನ ಇರುವಿಕೆಯನ್ನು ತೋರಿಸಬೇಕೆಂಬುದೇ ಅವಳ ಉತ್ಕಟ ಬಯಕೆ. ಪ್ರತಿವರ್ಷ ಹೀಗೆ ಹೆಚ್ಚೆಚ್ಚು ಬಹುಮಾನಗಳನ್ನೂ ಗೆಲ್ಲುತ್ತಾ ಶಾಲೆಯಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದಳು. ವಿಶಾಲ್ ಸಾಧಾರಣ ಪ್ರತಿಭೆಯ ಹುಡುಗ ಹಾಗು ಸ್ವಲ್ಪ ಮೌನಿಯಾಗಿದ್ದ ಕಾರಣ ಅವಳಷ್ಟು ಪರಿಚಿತನಾಗಿರಲಿಲ್ಲ. ಮನೆಯಲ್ಲೂ ಸಹ ಎಲ್ಲರ ಅಚ್ಚುಮೆಚ್ಚಾಗಿದ್ದಳು ವಿಭಾ. ಅಮ್ಮನ ಮನೆಗೆಲಸದಲ್ಲಿ ಸಹಾಯಮಾಡುವುದು, ಅಪ್ಪನಿಗೆ ಇಷ್ಟವಾದ ಮಸಾಲಾ ಚಹಾ ಮಾಡಿ ಅಪ್ಪನಿಗೆ ಅಚ್ಚುಮೆಚ್ಚಿನ ಮಗಳಾಗಿದ್ದಳು. 

ಶಾಲೆ ಮುಗಿದು ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ಮನೆಯಲ್ಲಿ ಸ್ವಲ್ಪ ಏರು ಪೇರು ಆಗಲು ಶುರುವಾಗಿತ್ತು. ವಿಭಾ ತುಂಬ ಸುಂದರವಾಗಿ ಕಾಣತೊಡಗಿದ್ದಳು. ಅದರಿಂದ ಸಹಜವಾಗಿ ಪೋಷಕರು ಅವಳ ಬಗ್ಗೆ ಹೆಚ್ಚು ಕಾಳಜಿ ವಹಿಸಿಕೊಂಡು ಅವಳ ಮೇಲೆ ಸ್ವಲ್ಪ ನಿರ್ಬಂಧಗಳನ್ನು ಹೇರತೊಡಗಿದರು. ತನ್ನ ಸ್ವಭಾವವನ್ನು ಅವಳು ಮಾರ್ಪಾಡು ಮಾಡಬೇಕಾಗಿ ಬಂತು. ಆದರೂ ತನ್ನ ಸ್ವಂತಿಕೆಯನ್ನು ಬಿಟ್ಟು ಬಾಳುವುದು ಒಂಥರಾ ಹಿಂಸೆಯೇನುಸುತ್ತಿತ್ತು. ಬರುಬರುತ್ತಾ ರೂಢಿಯಾಗಿಹೋಯಿತು. ತನ್ನ ಆಸೆ, ತುಂಟತನಗಳನ್ನು ತನ್ನಲ್ಲೇ ಅದುಮಿಟ್ಟುಕೊಂಡು ಬದುಕುವುದು ಬೇಸರ ಅನಿಸುತ್ತಿತ್ತು. ವಿದ್ಯಾಭ್ಯಾಸ ಮುಗಿಯುವಷ್ಟರಲ್ಲಿ ಅಪ್ಪ ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚಿಹೋಗಿ ಅಪ್ಪನಿಗೆ ಕೆಲಸ ಇಲ್ಲದಂತಾಯಿತು. ವಿಭಾಳ ಡಿಗ್ರಿ ಮುಗಿದಿತ್ತು. ಹೆಚ್ಚಿನ ಓದು ಇಷ್ಟವಿದ್ದರೂ, ಮನೆಯ ಪರಿಸ್ಥಿತಿ ಚೆನ್ನಾಗಿಲ್ಲದಿದ್ದ ಕಾರಣ ಆ ಆಸೆಯನ್ನು ಮನಸ್ಸಿನಲ್ಲೇ ಚಿವುಟಿತು. ಆದರೆ ಅಷ್ಟರಲ್ಲಿ ವಿಶಾಲ್ ತನ್ನ ಮಾಸ್ಟರ್ಸ್ ಮುಗಿಸಿ ಕೆಲಸ ಹುಡುಕುವುದರಲ್ಲಿದ್ದ. ಹಾಗು ವಿದೇಶಕ್ಕೆ ಹೋಗುವ ತನ್ನ ಉತ್ಕಟ ಬಯಕೆಯನ್ನು ಅಪ್ಪ ಅಮ್ಮನಲ್ಲಿ ಹೇಳಿ ಅವರ ಬಳಿಯಿದ್ದ ಹಣವನ್ನೆಲ್ಲ ಪಡೆದಿದ್ದ. 

ಒಂದು ಸಾಧಾರಣವಾದ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ವಿಭಾಳಿಗೆ ಅಪ್ಪ ಅಮ್ಮ ತಮ್ಮ ಹಣವನ್ನೆಲ್ಲ ವಿಶಾಲ್ ಗೆ ಕೊಟ್ಟು ತಾವು ಏನೂ ಹೇಳದೆ ಇದ್ದದ್ದು ದುಃಖ ತರಿಸಿತ್ತು. ಮೂರನೆಯವರಿಂದ ವಿಷಯ ತಿಳಿದಾಗೆ ಇರಿಸುಮುರುಸಾಗಿತ್ತು. ಹೇಗೋ ತನ್ನ ಅಣ್ಣ ಚೆನ್ನಾಗಿದ್ದರೆ ಸಾಕೆಂದು ಎಲ್ಲ ಮರೆತು ಸುಮ್ಮನಾದಳು. ಮನೆಯ ಎಲ್ಲ ಜವಾಬ್ದಾರಿ ವಿಭಾಳ ಮೇಲೆ ಬಂತು. ವಿಶಾಲ್ ಕೆನಡಾದಲ್ಲಿ ಕೆಲಸಕ್ಕೆ ಸೇರಿ ೬ ತಿಂಗಳಾಗಿತ್ತು. ಹೊಸದರಲ್ಲಿ ಪ್ರತಿದಿನ ಫೋನ್ ಮಾಡಿ ಮಾತನಾಡಿಸುತ್ತಿದ್ದ ಅವನು, ನಂತರ ವಾರಕ್ಕೊಮ್ಮೆ, ೧೫ ದಿನಕ್ಕೊಮ್ಮೆ. ಕೊನೆಗೆ ತಿಂಗಳಿಗೊಮ್ಮೆ ಫೋನ್ ಮಾಡತೊಡಗಿದ. ಕೇಳಿದರೆ ತುಂಬ ಬ್ಯುಸಿ, ಇಲ್ಲಿನ ಜೀವನ ತುಂಬ ಕಷ್ಟ ಇದೆ ಅಂತ ಹೇಳಿ ಎಲ್ಲರ ಬಾಯಿ ಮುಚ್ಚಿಸುತ್ತಿದ್ದ. ಅವನ ಸ್ನೇಹಿತರಿಂದ ಒಮ್ಮೊಮ್ಮೆ ವಿಷಯಗಳು ಗೊತ್ತಾಗುತ್ತಿತ್ತು. ಅವನಿಗೆ ಭಾರತದ ಒಂದು ಹುಡುಗಿಯ ಮೇಲೆ ಪ್ರೀತಿ ಹುಟ್ಟಿದೆ ಎಂದು ತಿಳಿದಾಗ ಮನೆಯವರಿಗೆ ಗಾಬರಿಯಾಯಿತು. 

ವಿಭಾಳಿಗೆ ಗಂಡು ನೋಡುವ ಧೈರ್ಯ ಅಪ್ಪ ಅಮ್ಮನಿಗೆ ಇರಲಿಲ್ಲ. ಅವಳಿಗೆ ಮದುವೆ ಮಾಡಲು ತಮ್ಮ ಬಳಿ ದುಡ್ಡಿಲ್ಲ. ಸಾಲ ಮಾಡಲು ಧೈರ್ಯವಿಲ್ಲ. ಅದಲ್ಲದೆ ಈ ಜವಾಬ್ದಾರಿ ತೆಗೆದುಬೇಕಾಗಿರುವ ವಿಶಾಲ್ ಇದರ ಗೋಜಿಗೆ ಹೋಗದೆ ತನ್ನ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದಾನೆ. ಇನ್ನು ಮನೆಯ  ಜವಾಬ್ದಾರಿ ಪೂರಾ ವಿಭಾಳ ಮೇಲೆ. ಮದುವೆ ಮಾಡಿಕೊಂಡು ಹೋದರೆ ಮನೆಯಗತಿ? ವಯಸ್ಸಾಗಿರುವ ಜೀವಗಳು…

ವಿಶಾಲ್ ಈಬಾರಿ ಫೋನ್ ಮಾಡಿದಾಗ ತನ್ನ ಪ್ರೇಮದ ವಿಷಯವನ್ನು ಮನೆಯವರಿಗೆ ಹೇಳಿದ. ಹುಡುಗಿ ಭಾರತದವಳೇ, ಹಾಗಾಗಿ ಏನೂ ಯೋಚಿಸಬೇಡಿ ಎಂದು ಸಮಾಧಾನ ಮಾಡಲು ಪ್ರಯತ್ನಿಸಿದ. ಅವರಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಹುಡುಗಿ ಗುಜರಾತಿನವಳು. ಅವರ ತಂದೆ ತುಂಬ ಹಣವಂತರಾಗಿದ್ದು, ತಮ್ಮ ವ್ಯಾಪಾರದಲ್ಲಿ ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುತ್ತಾರೆಂದು ಬಹಳ ಸಂತೋಷದಿಂದ ಹೇಳಿದ. ಮನೆಯವರಿಗೆ ಸಂತೋಷ ಪಡಬೇಕೋ, ಅಳಬೇಕೊ ತಿಳಿಯಲಿಲ್ಲ. ಅಮ್ಮ ಮನಸ್ಸು ಮಾಡಿ "ವಿಭಾ ಗೂ ಗಂಡು ನೋಡಬೇಕು ಅಲ್ವ ವಿಶಾಲ್?' ಎಂದು ಕೇಳಿದ್ದಕ್ಕೆ "ಅಮ್ಮ, ಏನಮ್ಮ ನೀನು ಇನ್ನು ಹಳೆ ಕಾಲದಲ್ಲೇ ಇದ್ದೀಯಲ್ಲ..ಅವಳು ತನಗೆ ಬೇಕಾದ ಹುಡುಗನನ್ನು ಆರಿಸಿಕೊಳ್ಳಲಿ ಬಿಡು" ಎಂದು ತನ್ನ ಜವಾಬ್ದಾರಿಯಿಂದ ಮೆಲ್ಲನೆ ಜಾರಿಕೊಂಡ. ಅಮ್ಮ ಬೇಜಾರಾಗಿ ಸುಮ್ಮನಾದರು. 

ಕೆನಡಾದಿಂದ ಭಾರತಕ್ಕೆ ಮೊದಲನೆಯ ಸಲ ಬರುವಾಗಲೇ ಕೋಮಲ್ ಳನ್ನು ಕರೆತಂದಿದ್ದ ವಿಶಾಲ್. ಅವಳನ್ನು ಎಲ್ಲರಿಗೂ ಪರಿಚಯ ಮಾಡಿಕೊಡುತ್ತಾ, ಊರೆಲ್ಲ ಓಡಾಡುತ್ತಿದ್ದ. ವಿಭಾ ತನ್ನ ಅತ್ತಿಗೆ ಆಗುವವಳನ್ನು ಉಪಚರಿಸುವುದರಲ್ಲಿ ಮುಳುಗಿದ್ದಳು. ಅವಳಿಗಾಗಿ ಅವರು ತಂದುಕೊಟ್ಟ ಉಡುಗೊರೆಗಳು ಅವಳಿಗೆ ಬಹಳ ಇಷ್ಟವಾಗಿತ್ತು. ತನ್ನ ಅಣ್ಣ ಸಂತೋಷಪಡುವುದು ಅವಳಿಗೆ ತೃಪ್ತಿ ಕೊಟ್ಟಿತ್ತು. ಒಂದು ವಾರ ತನ್ನ ಮನೆಯಲ್ಲಿದ್ದು, ವಡೋದರಕ್ಕೆ ಹೊರಟ ವಿಶಾಲ್. ಕೋಮಲ್ ಸಹ ತನ್ನನ್ನು ಅವರ ಅಪ್ಪ ಅಮ್ಮನಿಗೆ ಪರಿಚಯ ಮಾಡಿಕೊಡಬೇಕು, ಹಾಗಾಗಿ ತಾನು ಹೊರಡಬೇಕು ಎಂದು ಹೊರಟೆಬಿಟ್ಟ. ಮನೆಯವರೆಲ್ಲ ಇನ್ನೊಂದೆರಡು ದಿನವಾದರೂ ಇರು ಎಂದು ಕೇಳಿದರೂ, ಅದಕ್ಕೆ ಕಿವಿಕೊಡಲಿಲ್ಲ. ಒಂದು ವಾರದ ಬಳಿಕ ಫೋನ್ ಮಾಡಿ ಅವರೆಲ್ಲ ತನ್ನನ್ನು ಮೆಚ್ಚಿದ್ದಾರೆ ಎಂದು ಹೇಳಿದ. ಮುಂದಿನ ಸಲ ಬಂದಾಗ ಮದುವೆ ಮಾಡಿಕೊಳ್ಳುವುದು ಎಂದು ತೀರ್ಮಾನವಾಗಿದೆ ಎಂದು ಹೇಳಿದ. ಮನೆಯವರೆಲ್ಲ ಸ್ಥಬ್ದರಾಗಿದ್ದರು. 

ವಿಭಾಳಿಗೆ ತನ್ನ ಜೀವನದಲ್ಲಿ ಏನಾಗುತ್ತಿದೆ ಎಂಬುದೇ ಒಂದು ದೊಡ್ಡ ಪ್ರಶ್ನೆಯಾಗಿತ್ತು. ತನ್ನ ವಯಸ್ಸಿನ ಗೆಳತಿಯರೆಲ್ಲ ಮದುವೆಗೆ ಆಮಂತ್ರಣ ಕೊಡಲು ಬಂದಾಗ ಮುಜುಗರ ಆಗುತ್ತಿತ್ತು. ಯಾರದು ನಿನ್ನ ಮದುವೆ ಯಾವಾಗ ಎಂದು ಕೇಳಿದಾಗ ಸಮಯ ಬಂದಾಗ ಅಂತ ಹೇಳಿ ಹಾರಿಸಿ ಬಿಡುತ್ತಿದ್ದಳು. ತನ್ನ ಮನಸ್ಸಿನಲ್ಲಿ ಏನೋ ಒಂಥರಾ ಭಾವನೆ, ಒಂಟಿತನ, ಜೀವನ ತನಗೆ ಹೊರೆ ಅನ್ನಿಸುತ್ತಿರುವುದು ನಿಧಾನವಾಗಿ ಅನುಭವಕ್ಕೆ ಬರುತ್ತಿತ್ತು. ಅಪ್ಪನಿಗೆ ಮನೋವ್ಯಥೆ ಕಾಡುತ್ತಿತ್ತು. ಅಮ್ಮನಿಗೆ ಅಪ್ಪನನ್ನು ನೋಡಿಕ್ಕೊಳ್ಳುವುದೇ ಒಂದು ಕೆಲಸವಾಗಿಹೋಗಿತ್ತು. ಅವರಿಬ್ಬರನ್ನು ಸಮಾಧಾನ ಮಾಡುವ ಕೆಲಸ ವಿಭಾಗೆ ಕಷ್ಟವಾಗುತ್ತಿತ್ತು. ಇನ್ನು ತನ್ನ ನೋವು ಯಾರಿಗೆ ಹೇಳುವುದು? 

ಆಫೀಸ್ನಲ್ಲಿ ಮೋಹನ್ ತನ್ನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ವಿಭಾಳ ಗಮನಕ್ಕೆ ಬಂದಿತ್ತು. ಕಂಡೂ ಕಾಣದಂತೆ ನಡೆದುಕೊಳ್ಳುತ್ತಿದ್ದಳು. ಸ್ವಲ್ಪ ಹಿರಿಯರಾದ ಶಿವರಾಮಪ್ಪ ಅದನ್ನೆಲ್ಲ ಅವಳಬಳಿ ಹೇಳಿದಾಗ, ಸುಮ್ಮನೆ ನಕ್ಕು ಹೊರಟು ಹೋಗುತ್ತಿದ್ದಳು. ಮೋಹನ್ ಗೆ ಮಾಡುವೆ ಆಗಿ ೪ ವರ್ಷಗಳಾಗಿತ್ತು. ಅಷ್ಟಾಗಿ ಹೊಂದಾಣಿಕೆ ಇರದ ಸಂಸಾರ ಎಂದು ಅವನ ಮಾತಿನಲ್ಲೇ ತಿಳಿಯುತ್ತಿತ್ತು. ವಿಭಾ ಅದರ ಗೋಜಿಗೆ ಹೋಗುತ್ತಿರಲಿಲ್ಲ. ಅವಳಿಗೆ ತನ್ನ ಸ್ವಭಾವವೇ ಬದಲಾಗಿರುವುದು ತಿಳಿದು ಬಂದರೂ ಮೌನ ತುಂಬ ಹಿತ ಅನ್ನಿಸುತ್ತಿತ್ತು. ಪ್ರಪಂಚವೇ ಒಂದು, ತಾನೇ ಒಂದು ಅನ್ನುವ ಭಾವನೆ. 

ವರುಷ ಕಳೆಯುತ್ತಲೇ, ವಿಶಾಲ್ ತನ್ನ ಮದುವೆಯ ದಿನ ಗೊತ್ತುಪಡಿಸಿಕೊಂಡು ಅಪ್ಪ ಅಮ್ಮನಿಗೆ, ಹಾಗು ವಿಭಾಳಿಗೆ ತಯಾರಿ ಮಾಡಿಕೊಳ್ಳಲು ಹೇಳಿದ. ಹಣವನ್ನು ಕಳುಹಿಸಿದ. ಕೆಲವೊಂದು ಉಡುಗೊರೆಗಳನ್ನು ತಂದು ಕೊಟ್ಟ. ತುಂಬ ಮೃದು ಸ್ವಭಾವದವರಾಗಿದ್ದ ಅವರು ಅವನ ಸಂತೋಷಕ್ಕೆ ಅಡ್ಡಿ ಪಡಿಸಬಾರದೆಂದು ಸುಮ್ಮನಾಗಿದ್ದರು. ಅದ್ದೂರಿಯಾಗಿ ಮದುವೆಯು ನಡೆಯಿತು. ಅತಿ ಶ್ರೀಮಂತರಾಗಿದ್ದ ವಿಶಾಲ್ ನ ಮಾವ, ತಮ್ಮ ಶ್ರೀಮಂತಿಕೆಗೆ ತಕ್ಕಂತೆ ವೈಭವದಿಂದ ನೆರೆದವರಿಗೆಲ್ಲ ಆಶ್ಚರ್ಯ ಆಗುವಂತೆ ಮದುವೆ ಮಾಡಿದರು. ತಾವು ಅವರ ಮುಂದೆ ಏನೂ ಇಲ್ಲವೆಂದು ವಿಭಾ ಮತ್ತು ಮನೆಯವರಿಗೆ ಅನ್ನಿಸಿತ್ತು. 

ವಿಭಾಳಿಗೆ ಆಫೀಸ್ ನಲ್ಲಿ ಬಡ್ತಿ ದೊರೆತು, ಅದಕ್ಕೆ ತಕ್ಕಂತೆ ಜವಾಬ್ದಾರಿಗಳು ಹೆಚ್ಚಾದವು. ಅದನ್ನು ನಿಭಾಯಿಸಲು ಸಹಾಯ ಬೇಕಾಗಿ ಬಂತು. ಎಲ್ಲರಿಗಿಂತ ಮೋಹನ್ ಪೂರ್ಣ ಪ್ರಮಾಣದ ಸಹಾಯ ಮಾಡುತ್ತಿದ್ದ. ಅವಳಿಗೆ ಅನುಕೂಲ ಆಗುವಂತೆ ಕೆಲವೊಂದು ಪುಸ್ತಕಗಳು, ಸಿ ಡಿ ಗಳನ್ನೂ ತಂದು ಕೊಡುತ್ತಿದ್ದ. ಅವುಗಳ ಸಹಾಯದಿಂದ ಅವಳ ಕೆಲಸ ಸುಲಭವಾಗುತ್ತಿತ್ತು. ಅವಳು ಮಿತಭಾಷಿಯಾಗಿದ್ದನ್ನು ಗಮನಿಸಿದ ಅವನು ಅವಳನ್ನು ಮಾತನಾಡಲು ಉತ್ತೇಜಿಸುತ್ತಿದ್ದ. ತಮ್ಮ ಕಂಪನಿ ಕೆಲಸದ ಸಲುವಾಗಿ ಬೇರೆ ಕಂಪನಿಗಳಿಗೆ ಹೋಗಬೇಕಾದ ಸಂದರ್ಭದಲ್ಲಿ ಅವಳಿಗೆ ಸಂಕೋಚ ಅನ್ನಿಸುತ್ತಿತ್ತು. ಅದರಿಂದ ಹೊರಬರಲು ಮೋಹನ್ ಬಹಳಷ್ಟು ಸಹಾಯ ಮಾಡಿದ. 

ಅಪ್ಪನಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿತ್ತು. ಕಂಪನಿಯಿಂದ ಅವರ ಆಸ್ಪತ್ರೆಯ ಖರ್ಚು ಭರಿಸುತ್ತಿದ್ದರು. ಹಾಗಾಗಿ ಹಣಕಾಸಿನ ತೊಂದರೆ ಅಷ್ಟಾಗಿ ಕಾಣಲಿಲ್ಲ. ಆದರೆ ಅಮ್ಮನ ಕಳವಳ, ತನಗೆ ಮದುವೆ ಆಗದೆ ಇದ್ದದ್ದಕ್ಕೆ ಅಪ್ಪ ಅನುಭವಿಸುತ್ತಿದ್ದ ನೋವು, ಇದಕ್ಕೆ ತಾನು ಏನೋ ಮಾಡಲು ಆಗದೆ ಮೂಕ ವೇತನೇ ಅನುಭವಿಸುತ್ತಿದ್ದಳು. ವಿಶಾಲ್ ಗೆ ಬಂದು ಹೋಗಲು ಹೇಳಿದ್ದಳು. ಆದರೆ ತಾನು ಏನೋ ಸಮಸ್ಯೆಯಲ್ಲಿದ್ದೇನೆ ಎಂದು ಹೇಳಿದ್ದ. ಮನೆಯಲ್ಲಿದ್ದ ತೊಂದರೆಯಿಂದ ಸಾಕಾಗಿ ಹೋಗಿತ್ತು, ಹಾಗಾಗಿ ಅವನ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಅಪ್ಪನ ಸ್ನೇಹಿತರು ಆಗಾಗ ಬಂದು ಹೋಗುತ್ತಿದ್ದದ್ದು ಅವರಿಗೆ ಸಂತೋಷ ಕೊಡುತ್ತಿತ್ತು. ಅವರು ವಿಭಾಳಿಗೆ ಒಳ್ಳೆಯ ಸಂಭಂದ ನೋಡುತ್ತೇವೆಂದು ಆಶ್ವಾಸನೆ ಕೊಟ್ಟಾಗ ಅಪ್ಪ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದರು. 

ಸುಮಾರು ಎರಡು ತಿಂಗಳ ನಂತರ ಕೋಮಲ್ ವಿಭಾಳಿಗೆ ಫೋನ್ ಮಾಡಿ ತನ್ನ ವ್ಯಥೆಯನ್ನು ಹೇಳಿಕೊಂಡಳು. ವಿಶಾಲ್ ಮದುವೆಯಾದಾಗ ಚೆನ್ನಾಗೆ ಇದ್ದ, ಆಮೇಲೆ ಅವನ ಬಗ್ಗೆ ಏನೇನೋ ವಿಷಯಗಳು ತಮ್ಮ ಇಂಡಿಯನ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದ್ದು ತನ್ನ ಕಿವಿಗೆ ಮುಟ್ಟಿದೆ. ಅವನಿಗೆ ಹೆಣ್ಣಿನ ಹುಚ್ಚು, ಅದಕ್ಕಾಗಿ ತನ್ನ ಹಣವನ್ನು ಖರ್ಚು ಮಾಡಿ ಕ್ಲಬ್ ಗಳಲ್ಲಿ ಸಮಯ ಕಳೆಯುತ್ತಿದ್ದಾನೆ ಎಂದು ಹೇಳಿದಾಗ ವಿಭಾಳಿಗೆ ತನ್ನ ಕಿವಿಗಳನ್ನು ನಂಬಲಾಗಲಿಲ್ಲ. ನನ್ನ ಅಣ್ಣ ಎಂದು ಹೀಗಿರಬಹುದು ಎಂದು ಊಹಿಸಿರಲಿಲ್ಲ. ತನಗೆ ಇಷ್ಟೊಂದು ನೋವಾಗಿದೆ ಇನ್ನು ಅವನ ಹೆಂಡತಿಗೆ ಹೇಗಾಗಿರಬಹುದು? ಅಷ್ಟರಲ್ಲಿ ಕೋಮಲ್ ಮತ್ತ್ತೊಂದು ಸ್ಪೋಕಟವನ್ನು ಸಿಡಿಸಿದಳು. ಅವಳು ವಿಶಾಲ್ ಗೆ ವಿಚ್ಛೇದನ ಕೊಡುವುದಾಗಿ ತೀರ್ಮಾನ ಮಾಡಿರುವುದಾಗಿ ಹೇಳಿದಳು. ಅಯ್ಯೋ ವಿಧಿಯೇ!! ತಾನು ಹೇಗೆ ಇದನ್ನೆಲ್ಲಾ ಸರಿಪಡಿಸುವುದು? ಅಪ್ಪ ಅಮ್ಮನಿಗೆ ಏನು ಹೇಳುವುದು? ವಿಶಾಲ್ ಗೆ ಬುದ್ಧಿ ಹೇಳಲೇ? ಅಷ್ಟಕ್ಕೋ ಅವನು ನನ್ನ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿದ್ದಾನೆಯೇ? ಕೋಮಲ್ ಗೆ ಬುದ್ಧಿ ಹೇಳಲೇ ಅಥವಾ ಸಮಾಧಾನ ಮಾಡಿ ಸಂಸಾರ ಒಂದು ಮಾಡುವುದೇ? ಅವಳ ಜಾಗದಲ್ಲಿ ತಾನಿದ್ದಿದ್ದರೆ ಒಪ್ಪುತ್ತಿದ್ದೇನೆ? ಅವಳು ಬುದ್ಧಿ ಹೇಳದೆಯೇ ವಿಚ್ಛೇದನಕ್ಕೆ ತೀರ್ಮಾನ ಮಾಡಿರಲಾರಳು…… ಅವನ ವಿಷಯ ತಿಳಿದರೆ ಅಪ್ಪನಿಗೆ ಗಾಯದ ಮೇಲೆ ಬರಿಯ ಎಳೆದಂತಾಗುತ್ತದೆ. ಬೇಡ ಬೇಡ.. ಹೇಳುವುದೇ ಬೇಡ ಎಂದು ತೀರ್ಮಾನ ಮಾಡಿದಳು. 

ಆಫೀಸ್ ಗೆ ತಲುಪಿದಾಗ ಮಧ್ಯಾಹ್ನವಾಗಿತ್ತು. ಅಪ್ಪನ ಟೆಸ್ಟ್ ರಿಪೋರ್ಟ್ ತೆಗೆದುಕೊಂಡು ಡಾಕ್ಟರ್ ಹತ್ತಿರ ಮಾತನಾಡಿ ಬರುವುದು ತಡವಾಗಿತ್ತು. ಊಟ ಸಹ ಮಾಡದೆ ಬಂದಿದ್ದರಿಂದ ಸುಸ್ತಾಗಿತ್ತು. ತನಗಾಗಿ ಊಟದ ಡಬ್ಬಿಯನ್ನು ತೆಗೆದಿಟ್ಟಿದ್ದ ಮೋಹನ್ ವಿಭಾಳಿಗೆ ಕೊಟ್ಟಾಗ, ಬೇಡ ಅನ್ನುವುದು ಕಷ್ಟವಾಗಿತ್ತು. ಒಂದೇ ಸಮನೆ ತಿಂದು ಮುಗಿಸಿ, ಕೈತೊಳೆಯುತ್ತಾ ಅವನ ಊಟದ ಬಗ್ಗೆ ವಿಚಾರಿಸಿದಳು. ಅವನು ತನ್ನ ಮನಸ್ಸು ಸರಿಯಿಲ್ಲವೆಂದು ಊಟ ಮಾಡಲು ಇಷ್ಟವಿಲ್ಲವೆಂದಾಗ ನೋವಾಯಿತು. ಏನಾಯಿತು ಎಂದು ವಿಚಾರಿಸಿದಾಗ ಅವನ ಹೆಂಡತಿ ಅವನನ್ನು ದುಡ್ಡಿಗಾಗಿ ತುಂಬ ಪೀಡಿಸುತ್ತಿದ್ದಾಳೆ, ಹಾಗು ವಿದೇಶ ಪ್ರವಾಸ ಮಾಡಿಸಲೇ ಬೇಕೆಂದು ಹಠ ಹಿಡಿದಿರುವುದಾಗಿ ಹೇಳಿದ. ತನ್ನ ಸಂಬಳದಿಂದ ಅವೆಲ್ಲ ಖರ್ಚುಗಳು ಸಾಧ್ಯವಿಲ್ಲವೆಂದು ಎಷ್ಟು ಬಾರಿ ಹೇಳಿದ್ದರೂ, ಅವಳು ತನ್ನನ್ನು ಪೀಡಿಸುತ್ತಿದ್ದಾಳೆಂದು ಹೇಳಿದ. ಹಳ್ಳಿಯ ಬಡ ಹೆಣ್ಣು ಮಗಳು ಎಂದು ಮದುವೆಯಾದೆ, ಆದರೆ ಅವಳ ಬೇಡಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜೀವನ ಕಷ್ಟವಾಗಿದೆ ಎಂದು ಹೇಳಿದ. ಮಗುವನ್ನು ದೊಡ್ಡ ಕಾನ್ವೆಂಟ್ ಗೆ ಸೇರಿಸಬೇಕೆಂದು ಹಠ ಹಿಡಿದಿದ್ದಳು ಅದಕ್ಕಾಗಿ ಸಾಲ ಮಾಡಿ ಸೇರಿಸಿದ್ದಾಯಿತು. ಈಗ ಇದು. ತನ್ನ ಬಳಿ ಇರುವ ಸ್ವಲ್ಪ ಹಣವನ್ನು ಕೊಡುವುದಾಗಿ ವಿಭಾ ಹೇಳಿ ಅವನಿಗೆ ಸಮಾಧಾನ ಮಾಡಿದಳು. ಆದರೆ ಅವರಿಬ್ಬರಿಗೂ ಅದು ಸಮಂಜಸವಲ್ಲವೆಂದು ತಿಳಿದಿತ್ತು. 

ಹತ್ತು ದಿನ ರಜೆಯನ್ನು ಪಡೆದು ಮೋಹನ್ ವಿದೇಶ ಪ್ರವಾಸಕ್ಕೆಂದು ತನ್ನ ಪರಿವಾರದೊಂದಿಗೆ ಹೋದ. ಇತ್ತ ಆಫೀಸ್ ನಲ್ಲಿ ವಿಭಾಗೆ ತಾನು ಮೋಹನ್ ನನ್ನ ಎಷ್ಟು ಹಚ್ಚಿಕೊಂಡಿದ್ದೇನೆಂಬುದರ ಅರಿವಾಗುತ್ತಿತ್ತು. ಅವನ ಬರುವಿಕೆ ತನಗೆ ತುಂಬ ಅವಶ್ಯಕ ಅನ್ನಿಸುವ ಮಟ್ಟಿಗೆ ಅವಳ ಮನಸ್ಸು ಕಾತರಿಸುತ್ತಿತ್ತು. ಭಾವನೆಗಳು ತನ್ನ ಜೀವನದಲ್ಲಿ ಆಟವಾಡುತ್ತಿರುವುದು ಅವಳ ಗಮನಕ್ಕೆ ಬಂದಿತ್ತು. ತನ್ನ ಮನಸ್ಸು ಸ್ಥಿಮಿತವನ್ನು ಕಳೆದುಕೊಳ್ಳುವುದು ಅವಳಿಗೆ ಅಸಹನೆಯನ್ನು ತರಿಸುತ್ತಿತ್ತು. ತನಗೆ ಏನಾಗಿದೆ? ಮೋಹನ್ ನನ್ನ ತಾನು ಪ್ರೀತಿಸುತ್ತಿದ್ದೇನೆಯೇ? ಇಲ್ಲವೆಂದಮೇಲೆ ಅವನ ಬರುವಿಕೆಗೇಕೆ ತಾನು ಕಾಯುತ್ತಿದ್ದೇನೆ? ತನ್ನ ತಂದೆ ತಾಯಿಯ ಜವಾಬ್ದಾರಿ ತನ್ನ ಮೇಲೆ ಇರುವಾಗ ಈರೀತಿಯ ಭಾವನೆಗಳಿಗೆ ಅವಕಾಶ ಕೊಡಲು ಸಾಧ್ಯವೇ? ಒಂದು ವೇಳೆ ಕೊಟ್ಟರು ಸಹ ಮೋಹನ್ ಒಬ್ಬ ಮದುವೆಯಾಗಿರುವ ಗೃಹಸ್ಥ. ಅವನಿಗಾಗಿ ತನ್ನ ಮನಸ್ಸು ಕಾತರಿಸುವುದು ಎಷ್ಟರಮಟ್ಟಿಗೆ ಸರಿ? ವಿದ್ಯಾವಂತಳಾಗಿರುವ ತಾನು ಅವನನ್ನು ಇಷ್ಟಪಡುವುದರಿಂದ ಅವನ ಕುಟುಂಬದ ಒಡಕಿಗೆ ಕಾರಣಳಾಗುವುದು ಸರಿಯೇ? ಹಾಗೆಂದು ತನ್ನ ಮನಸ್ಸಿನಲ್ಲಿರುವ ಪ್ರೀತಿಯನ್ನು ಮುಚ್ಚಿಡುವುದು ಸರಿಯೇ? ಈ ಭಾವನಾ ಲಹರಿಯಲ್ಲಿ ಮುಳುಗಿರುವಾಗ ಮೋಹನ್ ಬಂದಿದ್ದನ್ನು ನೋಡಿ ಆಶ್ಚರ್ಯ ಮತ್ತು ಸಂತೋಷದ ಜೊತೆ ಒಂದು ರೀತಿ ತಪ್ಪಿತಸ್ಥ ಭಾವನೆ ಸಹ ಕಾಡುತ್ತಿತ್ತು. ಮೋಹನ್ ಸಹ ವಿಭಾಳನ್ನು ನೋಡದೆ ತುಂಬ ಹಪಹಪಿಸಿದ್ದು ಅವನ ಕಣ್ಣುಗಳು ಹೇಳುತ್ತಿದ್ದವು. ಅವಳಿಗೆ ಈ ಭಾವನೆಯನ್ನು ಅಥವಾ ಸಂಭಂದವನ್ನು ಮುಂದುವರೆಸುವುದು ಮುಜುಗರವನ್ನು ತಂದುಕೊಟ್ಟಿತ್ತು. 

ಒಂದು ಹೆಣ್ಣು ತನ್ನ ಭಾವನೆಯನ್ನು ವ್ಯಕ್ತಪಡಿಸುವುದು ತಪ್ಪೇ? ಆಸೆಯನ್ನು ಹತ್ತಿಕ್ಕುವುದು ತರವೇ? ತನ್ನ ಜವಾಬ್ದಾರಿ, ಸಮಾಜದ ಗೌರವ  ಹಾಗು ತನ್ನ ವ್ಯಯಕ್ತಿಕ ಬದುಕು ಇವೆರಡರಲ್ಲಿ ಯಾವುದು ಮುಖ್ಯ? ಹೆಣ್ಣಿಗೆ ಮಾತ್ರ ಏಕೆ ಕಟ್ಟುಪಾಡುಗಳು? ಗಂಡಿಗೆ ಸಡಿಲವಾಗುವ ಕಟ್ಟುಪಾಡುಗಳು ಹೆಣ್ಣಿಗೇಕೆ ಕಠೋರ? ಈ ಭಾವನೆಯನ್ನು ತನ್ನ ತಂದೆ ತಾಯಿಯರ ಬಳಿ ಸಹ ಹೇಳಿಕೊಳ್ಳಲಾಗದೆ, ಹಿಂಸೆ ಅನುಭವಿಸುತ್ತ ಎಷ್ಟು ದಿನ ಹೀಗೆ ಬಾಳಬೇಕೆಂಬ ತಳಮಳದೊಂದಿಗೆ ಬಾಳಬೇಕು ಎನ್ನುತ್ತಾ, ದಿನಗಳನ್ನು ತಳ್ಳುತ್ತಿದ್ದ ವಿಭಾಗೆ ತನ್ನ ಬಗ್ಗೆ ಜಿಗುಪ್ಸೆ ಬರಲಾರಂಭಿಸಿತ್ತು.

ತುಂಬ ಧೈರ್ಯಮಾಡಿ ಒಂದು ನಿರ್ಧಾರಕ್ಕೆ ಬರಬೇಕೆಂದು ತೀರ್ಮಾನಿಸಿದ ವಿಭಾ ತಾನು ಮದುವೆ ಆದರೆ ಮೋಹನ್ ನನ್ನು ಮಾತ್ರ, ಆದರೆ ಅದು ಸಾಧ್ಯವಾಗುವುದಿಲ್ಲವಾದ್ದರಿಂದ ಮದುವೆಯಾಗದಿರಲು ತೀರ್ಮಾನಿಸಿದಳು. ಇದರಲ್ಲಿ ತಪ್ಪು ಸರಿಗಳ ತುಲನೆ ಅವಳಿಗೆ ಕಷ್ಟವೆನಿಸಿ ಸಮಯ ಕಳೆದಂತೆ ಎಲ್ಲವು ಸರಿಹೋಗುವುದೆಂದು ನಿರ್ಧರಿಸಿದಳು. ತನ್ನ ಆಪ್ತಗೆಳೆಯನ ಸ್ಥಾನ ಮೋಹನ್ ಗೆ ಕೊಟ್ಟಿದ್ದಳು. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Umashankar Huskur
Umashankar Huskur
7 years ago

Good life Story of a girl transforming oerdf a women with responsibilities of the house and Parents.Here Viva was very happy in her Childhood didn't even bother his brother where he was feeling lonlieness and might have got into bad characters ( Having interest in Women) When life turned towards him got good job,well paid salary,his decided marriage ( here he his behind money & Since he had seen the povertiness, No achievements in life) Where in he loses his Family members Love & Affection ( Parents & wife too) so he again went to clubs in search of women who satisfies is temporary needs..

Viba could also got settled his Life with loving money she felt she is destroying a family and Bad name to her patents ..So she retained Mohans friendship without getting married..

 

Jayaprada
Jayaprada
7 years ago

Fabulous . . . .  Excellent . . . .  

Really conveys a deep meaning . . .  Words to live by! Hope to see more articles from this writer ! 

Best wishes . . . .  

Girija Jnanasundar
Girija Jnanasundar
7 years ago
Reply to  Jayaprada

Thank you very much Jaya & Umashankar.. Appreciate your time to share your valuable feedback

3
0
Would love your thoughts, please comment.x
()
x