ಮನುಷ್ಯನನ್ನು ಸುಸ್ತು ಮಾಡಲು ಯಾವುದಾದರೂ ಒಂದು ಕಾಯಿಲೆ ಸಾಕು. ಅದೇ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್-ಏಡ್ಸ್ ಎಲ್ಲಾ ಒಟ್ಟೊಟ್ಟಿಗೆ ಅಮರಿಕೊಂಡರೆ ಏನಾಗಬಹುದು. ಯಾವ ಡಾಕ್ಟರ್ ಕೂಡಾ ಚಿಕಿತ್ಸೆ ನೀಡಿ ಬದುಕಿಸಲು ಸಾಧ್ಯವಿಲ್ಲದಂತೆ ಆಗುತ್ತದೆ. ಈ ಭೂಮಿಯ ಮೇಲೆ ನೀರಿನ ವಿಚಾರದಲ್ಲೂ ಇದೇ ಆಗಿದೆ. ಅತ್ತ ಎಲ್‍ನಿನೋ ಪೀಡನೆಯಾದರೆ, ಇತ್ತ ಮನುಷ್ಯರೇ ಸ್ವತ: ಹವಾಮಾನ ವೈಪರೀತ್ಯವೆಂಬ ಭೂತವನ್ನು ಮೈಮೇಲೆ ಎಳೆದುಕೊಂಡದ್ದು. ಎಲ್‍ನಿನೋ ಪ್ರಭಾವ ಪ್ರಪಂಚದ ಎಲ್ಲಾ ಭಾಗದಲ್ಲೂ ತನ್ನ ಪರಿಣಾಮವನ್ನು ಬೀರದೇ ಇದ್ದರೂ, ಹವಾಮಾನ ವೈಪರೀತ್ಯ ನಿಶ್ಚಿತವಾಗಿ ಇಡೀ ಜಗತ್ತನ್ನು ಬಾಧಿಸುತ್ತಿದೆ. ಕೈಗಾರಿಕೋತ್ತರ ಆಧುನಿಕ ಪ್ರಪಂಚ ನೀರನ್ನು ನಿರ್ವಹಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಭಾರತದ ಮಟ್ಟಿಗೆ ಹೇಳುವುದಾದರೆ, ನಾವಂತೂ ನೀರನ್ನು ದೈವತ್ವಕ್ಕೇರಿಸಿ, ಕೊಂದಿದ್ದೇವೆ. ಬಳಕೆಗೆ ಯೋಗ್ಯವಾದ ನೀರನ್ನು ಮಾಲಿನ್ಯದ ತೊಟ್ಟಿ ಮಾಡಿ ಬಿಸಾಕಿದ್ದೇವೆ. ಗಂಗೆಯಂತಹ ಗಂಗೆಯನ್ನೇ ವಿಷದ ಮಡುವನ್ನಾಗಿಸಿದ್ದೇವೆ.
ದಿನಾಂಕ 11 ಮಾರ್ಚ್ 2016ರಂದು ಪಶ್ಚಿಮ ಬಂಗಾಳದ ವಿದ್ಯುತ್ ಅಭಿಯಂತರರು ಗರ ಬಡಿದು ಕುಳಿತಿದ್ದರು. ಫರಕ್ಕಾ ನಗರದ 2300 ಮೆ.ವ್ಯಾ. ಉತ್ಪಾದನೆ ಮಾಡುವ ಕಲ್ಲಿದ್ದಲು ಶಾಖ ವಿದ್ಯುತ್ ಸ್ಥಾವರ ನೀರಿಲ್ಲದೇ ತನ್ನ ಉತ್ಪಾದನೆಯನ್ನು ನಿಲ್ಲಿಸಿತ್ತು. ಈ ಸ್ಥಾವರದಲ್ಲಿ ಕೆಲಸ ಮಾಡುವ 1000 ಕುಟುಂಬಗಳಿಗೆ ನೀರೇ ಇರಲಿಲ್ಲ. ಕುಡಿಯಲು ತುರ್ತಾಗಿ ಬಾಟಲಿ ನೀರನ್ನು ಒದಗಿಸಲಾಯಿತು. ಇನ್ನುಳಿದ ಕೆಲಸಕ್ಕೆ ಗಂಗಾ ನದಿಯಿಂದ ಅಗ್ನಿಶಾಮಕ ದಳದ ಯಂತ್ರಗಳು ನೀರನ್ನೆತ್ತಿ ತಂದವು. ದೇಶದ 41 ಕಡೆಗಳಲ್ಲಿರುವು ಶಾಖೋತ್ಪನ್ನ ಸ್ಥಾವರಗಳ ಪೈಕಿ ಒಂದಾದ ಫರಕ್ಕಾ ಸ್ಥಾವರಕ್ಕೆ ಗಂಗಾ ನದಿಯಿಂದ ನೀರು ಕಾಲುವೆಯ ಮೂಲಕ ಹರಿದು ಬರುತ್ತಿತ್ತು. ಕಳೆದ ಮುವತ್ತು ವರ್ಷಗಳಿಂದ ನಿರಂತರವಾಗಿ ನೀರು ಪೂರೈಸಿದ ಗಂಗೆಗೂ ಸುಸ್ತಾಗಿರಬೇಕು, ಮೇಲೆ ಹೇಳಿದ ದಿನಾಂಕದಂದು ನದಿಯ ನೀರಿನ ಮಟ್ಟ ಏಕಾಏಕಿ ಇಳಿದು ಹೋಯಿತು. ಕಾಲುವೆ ನೀರು ಪೂರೈಕೆಯಾಗಲಿಲ್ಲ. ಉಷ್ಣಸ್ಥಾವರ ನೀರಿಲ್ಲದೇ ನಡೆಯುವುದಿಲ್ಲ. ಕಾದು ಕಬ್ಬಿಣವಾದ ಟರ್ಬೈನ್‍ಗಳು ತಣಿಯಲು ನೀರು ಬೇಕೆ ಬೇಕು. ಹಾಗೆಯೇ ಈ ಉಷ್ಣಸ್ಥಾವರ ಭಾರತದ ಕಾಲು ಭಾಗಕ್ಕೆ ವಿದ್ಯುತ್ ಪೂರೈಸುವ ಘಟಕವಾಗಿದೆ.
ಇದೇ ಸಂದರ್ಭದಲ್ಲಿ ಗಂಗಾ ನದಿಯ ಮೂಲಕ ಸಾಗಿಸುತ್ತಿದ್ದ ಕಲ್ಲಿದ್ದಲು ತುಂಬಿದ ಲಾಂಚ್‍ಗಳು ನೀರಿನ ಅಭಾವದಿಂದ ನಿಂತಲ್ಲೆ ನಿಂತವು. ಹಿಮಾಲಯದಲ್ಲಿ ಹುಟ್ಟುವ ಗಂಗೆ ಹಲವಾರು ಉಪನದಿಗಳನ್ನು ಸೇರಿಸಿಕೊಳ್ಳುತ್ತಾ, ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಾ, ಭೋರ್ಗರೆಯುತ್ತಾ ಸಾಗುತ್ತದೆ. ರಾಮಜೂಲಕ್ಕೆ ಬರುವ ಹೊತ್ತಿಗೆ ರುಧ್ರಸ್ವರೂಪವನ್ನು ಪಡೆದುಕೊಂಡು, ಮಂಜುಗಡ್ಡೆಯಂತೆ ಕೊರೆಯುತ್ತಾ ಸಾಗುತ್ತದೆ. ಬೆಟ್ಟ ಪ್ರದೇಶದಲ್ಲಿ ಯಾವುದೇ ಕಾರ್ಖಾನೆಗಳು ಇಲ್ಲವಾದ್ದರಿಂದ ನೀರು ಶುದ್ಧವಾಗಿಯೇ ಇರುತ್ತದೆ. ಅನೇಕ ಖನಿಜಗಳನ್ನು ಹೊತ್ತ ಗಂಗೆಯ ನೀರು ಸಾಕಷ್ಟು ಪರಿಶುದ್ಧವಾಗಿಯೇ ಇರುತ್ತದೆಯಾದರೂ, ಯಾತ್ರಸ್ಥಳದ ಮಾಲಿನ್ಯಗಳು ಸೇರುತ್ತಾ ಸಾಗುತ್ತದೆ. ಭಾರತದ ಅತಿದೊಡ್ಡ ನದಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಗಂಗೆಯ ತಟದಲ್ಲಿ ಪ್ರಪಂಚದ ಅತಿ ಪುರಾತನ ನಗರಗಳಾದ ವಾರಣಾಸಿ ಹಾಗೂ ಪಾಟ್ನ ಇವೆ. ಭಾರತದ 40% ಜನಸಂಖ್ಯೆಗೆ ನೀರಿನ ಮೂಲವಾಗಿರುವ ಈ ನದಿ ಹನ್ನೊಂದು ರಾಜ್ಯಗಳಲ್ಲಿ ಪಸರಿಸಿ ಪ್ರಪಂಚದಲ್ಲೇ ಅತಿಹೆಚ್ಚು ಜನಸಾಂದ್ರತೆಗೆ ನೀರುಣಿಸುವ ನದಿಯಾಗಿದೆ. 2500 ಕಿ.ಮಿ. ಉದ್ದಕ್ಕೆ ಹರಿಯುವ ಗಂಗಾ ನದಿಯನ್ನು ಅಕ್ಷಯ ಪಾತ್ರೆ ಎಂದೇ ಭಾವಿಸಲಾಗಿತ್ತು. ಎಷ್ಟೇ ಮಲಿನಗೊಳಿಸಿದರೂ ಗಂಗೆ ತನಗೆ ತಾನೇ ಶುದ್ಧಿಗೊಳಿಸಿಕೊಳ್ಳುವ ದೈವೀಗುಣ ಹೊಂದಿದ ದೇವನದಿ ಎಂದು ಹಿಂದೂಗಳ ಲೆಕ್ಕಾಚಾರವಾಗಿತ್ತು. ಆದರೆ ಗಂಗೆ ಅತ್ಯಂತ ಮಲಿನಗೊಂಡಿದ್ದಾಳೆ, ಬತ್ತುತ್ತಿದ್ದಾಳೆ, ಬಸವಳಿದಿದ್ದಾಳೆ. ಗಂಗೆಯ ತಟದಲ್ಲಿರುವ ಅನೇಕ ಕಾರ್ಖಾನೆಗಳು ತ್ಯಾಜ್ಯವನ್ನು ಎಗ್ಗಿಲ್ಲದೇ ಸುರಿಯುತ್ತಿದ್ದಾರೆ. ನದಿಪಾತ್ರದಲ್ಲಿ ಅಂತರ್ಜಲದ ಮಟ್ಟವೇ ಕುಸಿಯುತ್ತಿದೆ. ಅಭಿವೃದ್ಧಿಯ ನಾಗಾಲೋಟ ಅಕ್ಷಯ ಪಾತ್ರೆಯೆಂದು ತಿಳಿದ ಗಂಗೆಯನ್ನೇ ಸೊರಗಿಸಿದೆ. ನದಿಯನ್ನೇ ನಂಬಿಕೊಂಡ ಜನರ ಬದುಕು ನಿಧಾನವಾಗಿ ಅವನತಿಯತ್ತ ಸಾಗುತ್ತಿದೆ. ಗಂಗೆಯನ್ನು ಬದುಕಿಸಬೇಕು, ಮಾಲಿನ್ಯರಹಿತವಾಗಿಡಬೇಕು ಎಂಬ ಸಂಕಲ್ಪದಿಂದ ಆಗಿನ ಕೇಂದ್ರ ಸರ್ಕಾರವೇ ಹಲವು ಯೋಜನೆಗಳನ್ನು ರೂಪಿಸಿ ಕೋಟಿಗಟ್ಟಲೆ ಹಣವನ್ನು ತೆಗೆದಿರಿಸಿತ್ತು. ಈಗಿನ ಸರ್ಕಾರವೂ ಕೂಡ ಹಲವು ಯೋಜನೆಗಳನ್ನು ರೂಪಿಸಿದೆ. ನಮಾಮಿ ಗಂಗೆ ಯೋಜನೆ ಚಾಲ್ತಿಯಲ್ಲಿದ್ದು, ಗಂಗೆಯ ಶುದ್ಧಿಕರಣ ನಡೆಯುತ್ತಿದೆ. ಇದೇ ಸಮಯದಲ್ಲಿ ಕೇಂದ್ರ ಜಲಮಂಡಳಿಯವತಿಯಿಂದ “ನೀರಿನ ವಾರ” ಎಂಬ ಕಾರ್ಯಕ್ರಮ ದೆಹಲಿಯಲ್ಲಿ ನಡೆಯುತ್ತಿದೆ. ನಾಲ್ಕು ದಿನಗಳ ಈ ಕಾರ್ಯಕ್ರಮದಲ್ಲಿ ನೀರಿನ ಮೂಲವಾದ ನದಿಗಳ ಕುರಿತಾದ ವ್ಯಾಪಕ ಚರ್ಚೆ ಇಲ್ಲ. ಅದು ಬಿಟ್ಟು ನೀರಿನ ನಿರ್ವಹಣೆ ಕಲಿಕೆಗಾಗಿ ಇಸ್ರೇಲ್ ತಜ್ಞರನ್ನು ಆಹ್ವಾನಿಸಲಾಗಿದೆ. ಹತ್ತಾರು ಸಾವಿರ ಅಡಿ ಕೆಳಗಿನ ಅಂತರ್ಜಲ ಎತ್ತಿ ಕೃಷಿ ಮಾಡುವ ಇಸ್ರೇಲಿ ನೀರಿನ ಜ್ಞಾನವನ್ನು ಪಡೆಯುವ ಹಂಬಲ ನಮ್ಮದಾಗಿದೆ. ಅಂತರ್ಜಲದಲ್ಲಿ ಆರ್ಸೆನಿಕ್‍ನಂತಹ ವಿಷವನ್ನು ಬೆರೆಸುವ ನಮಗೆ ಒಂದು ಹನಿ ನೀರನ್ನು ಎರಡು ಬಾರಿ ಉಪಯೋಗಿಸುವ ಇಸ್ರೇಲಿ ತಜ್ಞರು ನೀರಿನ ಪಾಠ ಮಾಡಲಿದ್ದಾರೆ.
ನಮ್ಮ ರಾಜ್ಯದವರೇ ಆದ, ಬೆಂಗಳೂರಿನಲ್ಲಿ ನೆಲೆಸಿರುವ ಶಿವಶಂಕರ್ ಎಂಬ ವ್ಯಕ್ತಿ ಕಳೆದ 20 ವರ್ಷಗಳಿಂದ ತಮ್ಮ ನೀರಿನ ಅಗತ್ಯಗಳನ್ನು ಮಳೆನೀರಿನಿಂದಲೇ ಪೂರೈಸಿಕೊಳ್ಳುತ್ತಿದ್ದಾರೆ. ಸರ್ಕಾರದಿಂದ ಒಂದು ರೂಪಾಯಿಯನ್ನೂ ಪಡೆಯದ ಈ ಮಳೆನೀರು ಕೊಯ್ಲು ತಜ್ಞರ ಸಲಹೆ-ಅಭಿಪ್ರಾಯ ಈಗ ಮುಖ್ಯವಾಗಬೇಕಾಗಿತ್ತು. ಸರಳವಾದ, ಸುಸ್ಥಿರವಾದ ಯಾವ ಯೋಜನೆಗಳಿಗೂ ಸರ್ಕಾರ ಮಹತ್ವ ನೀಡುವುದಿಲ್ಲ ಎಂಬುದು ಪದೇ-ಪದೇ ಸಾಬೀತಾಗುತ್ತದೆ. ಬೆಂಗಳೂರಿನ ಜಲದಾಹಕ್ಕೆ ಮಲೆನಾಡಿನ ಶರಾವತಿಯನ್ನೇ ಬಲಿ ನೀಡಲು ದೊಡ್ಡ-ದೊಡ್ಡ ಯೋಜನೆಗಳು ಕಾರ್ಯರೂಪದಲ್ಲಿವೆ.
ಇದೇ ಸಂದರ್ಭದಲ್ಲಿ ದೇಶದ ಪ್ರಧಾನಿ ಕೃಷಿಕರಿಗೆ ಅನುಕೂಲವಾಗುವಂತಹ 5 ಲಕ್ಷ ಕೃಷಿಹೊಂಡಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸುವ ಹಂತದಲ್ಲಿದ್ದಾರೆ. ಇತ್ತ ಮಹಾರಾಷ್ಟ್ರದಲ್ಲಿನ ಸಕ್ಕರೆ ಕಾರ್ಖಾನೆಗಳು ನೀರನ್ನು ಕದಿಯುತ್ತಿರುವ ಆರೋಪ ಎದುರಿಸುತ್ತಿವೆ. ಲಾತೂರ್ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತತ್ವಾರವಾಗಿದ್ದು, ಬರೀ 20 ಲೀಟರ್ ನೀರನ್ನು ಒಬ್ಬ ವ್ಯಕ್ತಿಗೆ ಪೂರೈಸಲಾಗುತ್ತಿದೆ. ನೀರಿಗಾಗಿ ದೊಂಬಿ-ಗಲಭೆ ತಪ್ಪಿಸುವ ಸಲುವಾಗಿ ಅಲ್ಲಿನ ಜಿಲ್ಲಾಧಿಕಾರಿ 144ನೇ ಸೆಕ್ಷನ್ ಜಾರಿ ಮಾಡಿದ್ದಾರೆ. ಅಂದರೆ ನೀರು ಟ್ಯಾಂಕರ್ ಹತ್ತಿರ 5 ಜನಕ್ಕಿಂತ ಹೆಚ್ಚು ಜನ ಸೇರುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಕಳೆದೆಂಟು ದಿನಗಳಿಂದ ರೈಲ್ವೆ ಇಲಾಖೆಯು ಲಾತೂರ್ ಬರದ ವಿರುದ್ದ ಸಮರ ಸಾರಿ ಕಾರ್ಯನಿರ್ವಹಿಸುತ್ತಿದೆ. 2 ದಿನಕ್ಕೊಮ್ಮೆ ಬುಸ್ವಾಲ್ ಜಂಕ್ಷನ್‍ನಿಂದ 65 ಸಾವಿರ ಲೀಟರ್ ಸಾಮಥ್ರ್ಯದ 8 ರೈಲು ವ್ಯಾಗನ್‍ಗಳು ನೀರನ್ನು ಲಾತೂರ್‍ಗೆ ಹೊತ್ತು ತರುತ್ತಿವೆ. ಅತೀವ ಬರದಿಂದ ಬಳಲುತ್ತಿರುವ ಮಹಾರಾಷ್ಟ್ರದ ಮರಾಠವಾಡ, ಉಸ್ಮನಾಬಾದ್ ಹಾಗೂ ಬೀದ್ ಜಿಲ್ಲೆಗಳ 65 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಗಾಗಿ 2378 ನೀರಿನ ಟ್ಯಾಂಕರ್‍ಗಳು ಅಹೋರಾತ್ರಿ ಶ್ರಮಿಸುತ್ತಿವೆ. ಈ ಜಿಲ್ಲೆಗಳ 7 ನೀರಿನ ಡ್ಯಾಂಗಳಲ್ಲಿ ಒಂದೇ ಒಂದು ಹನಿ ನೀರು ಲಭ್ಯವಿಲ್ಲ. ವಿದರ್ಭದಲ್ಲಿ 11 ಸಾವಿರ ಚಿಲ್ಲರೆ ಹಳ್ಳಿಗಳನ್ನು ಬರಪೀಡಿತ ಪ್ರದೇಶವೆಂದು ಅಲ್ಲಿನ ಸರ್ಕಾರ ಘೋಷಣೆ ಮಾಡಿದೆ. ತೆಲಂಗಾಣದಲ್ಲಿ ಹೈದರಾಬಾದ್ ಹಾಗೂ ವಾರಂಗಲ್ ನಡುವಿನ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ವಾಸಿಸುವ ಆರು ಸಾವಿರ ಚಿಲ್ಲರೆ ಜನಸಂಖ್ಯೆಗೆ ನೀರು ಪೂರೈಸಲು ಇರುವುದು 12 ಕೊಳವೆಬಾವಿಗಳು ಇದರಲ್ಲೂ ಅರ್ಧದಷ್ಟು ಕೊಳವೆಬಾವಿಗಳಲ್ಲಿನ ನೀರಿನ ಲಭ್ಯತೆ ಕಡಿಮೆಯಾಗಿದೆ. ಇಲ್ಲಿಯ ಪವಿತ್ರ ಗೋದಾವರಿ ನದಿ ಬತ್ತಿ ಹೋಗಿದ್ದು, ಬತ್ತಿದ ನದಿಯಲ್ಲಿ ವಾಹನಗಳು ಚಲಿಸುವ ದೃಶ್ಯಗಳನ್ನು ಕಾಣಬಹುದಾಗಿದೆ. ಈ ನದಿಯನ್ನು ನಂಬಿಕೊಂಡಿರುವ ರೈತರು, ಮೀನುಗಾರರು ಕೆಲಸವಿಲ್ಲದೆ ಕುಳಿತಿದ್ದಾರೆ.
ಇತ್ತ ಉಷ್ಣಾಂಶ 40 ಡಿಗ್ರಿಗೆ ಏರುತ್ತಿದ್ದಂತೆ ಆಲಮಟ್ಟಿಯ ಡ್ಯಾಂನ ನೀರಿನ ಪ್ರಮಾಣ ಕುಸಿಯುತ್ತಿದೆ. ಈ ಡ್ಯಾಮಿನ ನೀರನ್ನೇ ನಂಬಿಕೊಂಡ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಜನರಿಗೆ ನೀರಿನ ಮಿತಬಳಕೆಯ ಪಾಠ ಹೇಳಲಾಗುತ್ತಿದೆ. ಅಕ್ರಮವಾಗಿ ಡ್ಯಾಮಿಗೆ ಪೈಪ್ ಅಳವಡಿಸಿ ನೀರು ಕದಿಯುವ ಕಳ್ಳರನ್ನು ಹಿಡಿದು ಮಟ್ಟ ಹಾಕಲಾಗುತ್ತಿದೆ. ಅಕ್ರಮ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಲಾಗುತ್ತಿದೆ. ದೇಶದ 60% ಹೆಚ್ಚು ಭಾಗದಲ್ಲಿ ಬರದ ಛಾಯೆ ಸ್ಪಷ್ಟವಾಗಿ ಮೂಡಿದೆ. ಎಲ್ಲಾ ಸರ್ಕಾರಗಳಿಗೂ ನೀರು ನಿರ್ವಹಣೆ ಸವಾಲಾಗಿದೆ. ನೀರಿನ ಸಮರ್ಪಕ ನಿರ್ವಹಣೆಯನ್ನು ಆಯಾ ಜಿಲ್ಲಾಧಿಕಾರಿಗಳು ನಿರ್ವಹಿಸಬೇಕು ಎಂಬ ಆದೇಶ ಬಹುತೇಕ ಎಲ್ಲಾ ರಾಜ್ಯಗಳಲ್ಲು ಜಾರಿಯಾಗಿದೆ. ಇತ್ತ ಹವಾಮಾನ ಇಲಾಖೆಯಿಂದ ಈ ವರ್ಷ ಉತ್ತಮ ಮಳೆಯಾಗಲಿದೆ ಎಂಬ ಸಂದೇಶದ ಬಗ್ಗೆ ಎಲ್ಲರಲ್ಲೂ ಅನುಮಾನವಿದೆ. ಇಡೀ ದೇಶದಲ್ಲಿ ನೀರಿಗಾಗಿ ಹಾಹಾಕಾರ ಈಗಲೇ ಶುರುವಾಗಿದ್ದು, ಮುಂಗಾರು ಮಳೆಗೂ ಮುನ್ನವೇ ಇದೊಂದು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತವೆ.
ಪಶ್ಚಿಮಘಟ್ಟದ ಕಾಲಬುಡದಲ್ಲಿರುವ ಸಾಗರಕ್ಕೂ ಕುಡಿಯುವ ನೀರಿನ ಅಭಾವವಿದೆ. ಇದೀಗ ವಿದ್ಯುತ್ ಉತ್ಪಾದನೆಗಾಗಿ ಶೇಖರಣೆಗೊಂಡ ನೀರನ್ನೇ ಕುಡಿಯುವುದಕ್ಕೂ ಬಳಸಿಕೊಳ್ಳುವ ಕೋಟಿ ಯೋಜನೆ ಸಾಗರಕ್ಕೆ ತಲುಪಿದೆ. ಮುಂದಿನ 30 ವರ್ಷ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆಡಳಿತಶಾಹಿ ಹಾಗೂ ಅಧಿಕಾರಿ ವರ್ಗ ಈ ಯೋಜನೆ ರೂಪಿಸಿದೆ. ಶರಾವತಿ ಹಿನ್ನೀರನ್ನು ಎತ್ತಿ ಸಾಗರಕ್ಕೆ ಸಾಗಿಸಲು ಅಪಾರ ಶಕ್ತಿ ಬೇಕು. 400 ಎಚ್.ಪಿ ಸಾಮಥ್ರ್ಯದ 3 ಪಂಪ್‍ಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಡುವೆ ಸಿಗುವ 21 ಹಳ್ಳಿಗಳ ಅಗತ್ಯಗಳನ್ನು ಪೂರೈಸಿ ಶರಾವತಿ ಸಾಗರ ಸೇರುತ್ತಾಳೆ. ನೀರಿನ ಹೇರಳ ಲಭ್ಯತೆ ಮುಂದೊಂದು ಶಾಪವಾಗಬಹುದಾದ ಅಪಾಯವಿದೆ. ಸಾಗರದ ಜನ ನೀರಿನ ಮಿತ ಬಳಕೆಗೆ ಗಮನ ಹರಿಸದಿದ್ದಲ್ಲಿ, ನೀರು ಪೂರೈಕೆ ಅಸಾಧ್ಯವಾಗಲಿದೆ.
ಕರ್ನಾಟಕದಲ್ಲಿ ಇತ್ತೀಚಿನ ತಾಪಮಾನ ಹಿಂದಿನ ವರ್ಷಗಳನ್ನು ಮೆಟ್ಟಿ ಏರುತ್ತಿದೆ. ಸರ್ಕಾರಗಳಲ್ಲಿ ಯಾವ ಯೋಜನೆಗಳಾಗಲಿ, ಯೋಚನೆಗಳಾಗಲಿ ಕಂಡುಬರುತ್ತಿಲ್ಲ.ನಿಮ್ಮ ಲೇಖನ ಎಚ್ಚೆತ್ತುಕೊಳ್ಳುವವರಿಗೆ ಸಕಾಲ.
ಧನ್ಯವಾದಗಳು ಅನಂತ ರಮೇಶ್ ಜೀ. ಪಿ.ಸಾಯಿನಾಥ್ ಒಂದು ಮಾತು ಹೇಳುತ್ತಾರೆ "ಎವ್ವೆರಿಬಡಿ ಲವ್ಸ್ ಡ್ರಾಟ್" ಬರ ಬಂದರೆ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಬ್ಬ. ಅದಕ್ಕಾಗಿ ಬರ ತಡೆಯುವ ಯಾವ ಪ್ರಾಮಾಣಿಕ ಪ್ರಯತ್ನಗಳೂ ನಡೆಯುವುದಿಲ್ಲ.