ಭಾರತದ ಪ್ರವಾಸದಲ್ಲಿದ್ದ ಜಾನ್ ನಿಂದ ಬಂದ ಸಂದೇಶ ವೆಂಕಟ್ ಗೆ ಗರಬಡಿಸಿತ್ತು. ಅಮೆರಿಕಾದ ಪ್ರವಾಸವನ್ನು ಮೊಟಕುಗೊಳಿಸಿ ಕೂಡಲೇ ವಾಪಸ್ಸು ಬರುವಂತೆ ಒಂದೇ ಸಾಲಿನ ಆದೇಶ ಹೊರಡಿಸಿದ್ದ ಅ ಪತ್ರ ಗತಕಾಲದಲ್ಲಿ ಚಾಲ್ತಿಯಿದ್ದ ಟೆಲಿಗ್ರಾಂ ನಂತೆ ಅವನಿಗೆ ಹೈ ವೋಲ್ಟೇಜ್ ಶಾಕ್ ಕೊಟ್ಟಿತ್ತು! ಅವನಿಗೆ ಆಶ್ಚರ್ಯವಾಗಿದ್ದೆಂದರೆ ಆ ಇಮೇಲ್ ಇವನ ಬಾಸ್ ಸುಧೀರ್ ನಿಂದ ಬರದೆ ಜಾನ್ ಕಡೆಯಿಂದ ಬಂದಿದ್ದು. ಸುಧೀರ್ ಗೆ ಕರೆ ಮಾಡಿ ಕೇಳಲು ಅವನು ತನ್ನ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ವಿಷಯ ಗೊತ್ತಾಯಿತು. ತನ್ನ ಬಾಸ್ ಈ ರೀತಿ ಹಟಾತ್ ಆಗಿ ತೊಲಗುವನೆಂದು ಅವನಂದುಕೊಂಡಿರಲಿಲ್ಲ. ಒಳಗೊಳಗೇ ಖುಶಿ ಆಯಿತಾದರೂ, ಯಾವ ಕಾರಣಕ್ಕೆ ಆತ ಕೆಲಸ ಬಿಟ್ಟಿರಬಹುದು ಎಂಬ ಚಿಂತೆ ಕಾಡತೊಡಗಿತ್ತು. ಬಹುಶಃ ಇದು ಜಾನ್ ಕಿತಾಪತಿಯಿರಬಹುದೇ ಎಂಬ ಸಂಶಯ ಇವನ ತಲೆ ಕೊರೆಯತೊಡಗಿತು. ಸುಧೀರ್ ಕೂಡ ಇವನಿಗೆ ಜಾಸ್ತಿ ವಿವರಗಳನ್ನು ಕೊಡದೆ, ಇಲ್ಲಿಗೆ ಬಾ ಆಮೇಲೆ ಎಲ್ಲ ವಿಷಯ ಹೇಳುತ್ತೇನೆ ಅಂದು ಫೋನ್ ಕಟ್ ಮಾಡಿದ. ಕೂಡಲೇ ಈ ವಿಷಯವನ್ನು ತನ್ನ ಅಮೇರಿಕ ಶಾಖೆಯ ಡೈರೆಕ್ಟರ್ ಜೇಮ್ಸ್ ಗೆ ತಿಳಿಸಿದ. ಅವನಿಗೂ ವಿಷಯ ಮೊದಲೇ ಗೊತ್ತಾಗಿತ್ತು. ಜಾನ್ ಭಾರತದಲ್ಲಿ ಬಿರುಗಾಳಿ ಎಬ್ಬಿಸಲೇ ಹೋಗಿದ್ದು ಅಂತ ಗೊತ್ತಿದ್ದ ಅವನು ಮಂದಹಾಸ ಬೀರಿ ವೆಂಕಟ್ ಗೆ ಬೀಳ್ಕೊಟ್ಟ.
ಭಾರತಕ್ಕೆ ವಾಪಸ್ಸು ಹೋಗಲು ಇವನಂತೂ ಮಾನಸಿಕವಾಗಿ ತಯಾರಾಗಿದ್ದ. ಅದು ಅನಿವಾರ್ಯವೂ ಆಗಿತ್ತು. ಆದರೆ ಹೆಂಡತಿ ಮಗಳಿಗೆ ಇದರಿಂದ ನಿರಶೆಯಾಗುವುದೆಂದು ಅವನಿಗೆ ಗೊತ್ತಿತ್ತು. ಕೂಡಲೇ ಮನೆಗೆ ತೆರಳಿದ. ಜಾನು, ಇವನು ಬೇಗ ಮನೆಗೆ ಬಂದಿದ್ದಕ್ಕೆ ಆಶ್ಚರ್ಯಪಟ್ಟಳಾದರೂ, ಅವನ ಮುಖ ಸಪ್ಪಗಿದ್ದುದನ್ನು ನೋಡಿ ಸ್ವಲ್ಪ ಕಳವಳಕ್ಕೀಡಾದಳು. ಏನು ವಿಷಯ ಅಂತ ಅವಳು ಕೇಳುವುದಕ್ಕೆ ಮೊದಲೇ ಅವನೇ…
"ಜಲ್ದಿ ಪ್ಯಾಕ್ ಮಾಡು. ಇಂಡಿಯಾಕ್ಕ ವಾಪಸ್ ಹೋಗ್ಬೇಕು ಇನ್ನೆರಡು ದಿನದಾಗ. ಅಮೆರಿಕಾದ್ದ್ ಋಣಾ ಮುಗೀತನಸ್ತದ." ಅಂದ ವೆಂಕಣ್ಣನ ಮಾತುಗಳನ್ನು ಅರಗಿಸಿಕೊಳ್ಳುವ ಶಕ್ತಿ ಜಾನುಗಿರಲಿಲ್ಲ! ಇನ್ನೂ ಎರಡು ವಾರ ಅಮೆರಿಕಾದಲ್ಲಿ ಏನೇನು ನೋಡಬೇಕು ಎಂಬ ಪಟ್ಟಿ ತಯಾರಿಸಿಟ್ಟುಕೊಂಡಿದ್ದ ಅವಳಿಗೆ ತನ್ನ ಗಂಡ ಈ ರೀತಿ ಆಗಾಥ ಕೊಡುವನೆಂಬ ಕಲ್ಪನೆ ಕೂಡ ಇರಲಿಲ್ಲ.
"ಯಾಕ್ರೀ? ಏನ್ ಚಾಷ್ಟಿ ಮಾಡಲಿಕತ್ತೀರೆನು"
"ಚಾಷ್ಟಿ ನೂ ಇಲ್ಲಾ ಗೀಷ್ಟಿನೂ ಇಲ್ಲ. ಅಲ್ಲೇ ಸುಧೀರ್ ಕೆಲಸಾ ಬಿಟ್ಟಾನಂತ. ಇದ್ದದ ಕೆಲಸ ಬಿಟ್ಟು ವಾಪಸ್ಸು ಬಾ ಅಂತ ನನಗ ಜಾನ್ ಮೇಲ್ ಮಾಡ್ಯಾನ."
"ಅಯ್ಯ…. ಸುಧೀರ್ ಗೇನ್ ಧಾಡಿ ಆಗಿತ್ತರಿ ಕೆಲಸ ಬಿಡು ಹಂತಾದ್ದು?" ಅವಳಿಗೆ ಸುಧೀರ್ ನ ಬಗ್ಗೆ ಕಾಳಜಿಗಿಂತ ಅವನಿಂದಲೇ ತನ್ನ ಅಮೇರಿಕಾ ಪ್ರವಾಸ ಮೊಟಕಾಗಿದ್ದು ಅನ್ನುವ ಕೋಪವಿತ್ತು!
"… ಅಲ್ರೀ. ಈ ವಾರ ಕಾಪರ್ ಮೈನ್ ಗೆ ಹೋಗೋಣ ಅಂತ ಪ್ಲ್ಯಾನ್ ಮಾಡಿದ್ವಿ. ಇನ್ನೊಂದ್ ವಾರರೆ ಮುಂದ ಹಾಕಿಸ್ಕೋರಿ"
"ಲೇ…. ಅಲ್ಲೇ ವಾಪಸ ಹೋದ ಮ್ಯಾಲೆ ನನ್ನ ಕೆಲಸರೆ ಇರ್ತದೋ ಇಲ್ಲೋ ನಂಗ ಗ್ಯಾರಂಟಿ ಇಲ್ಲ. ಅಂಥಾದರಾಗ ಕಾಪರ್ ಮೈನ್ ಅಂತ! ಕೆಲಸ ಹೋತಂದ್ರ ಅಲುಮಿನಿಯಂ ತಾಟು ಹಿಡ್ಕೊಂಡ್ ಬಿಕ್ಷಾ ಬೇಡಬೇಕು. ಅಷ್ಟು ಸಾಲಾ ಮಾಡೀನಿ. ಹೊಸಾ ಕಾರು ಈಗ ತೊಗೊಳ್ಳೋದು ಬ್ಯಾಡಾ ಅಂದ್ರೂ ನೀನ್ ಕೇಳಲಿಲ್ಲ. ಬೇಕ ಬೇಕು ಅಂತ ಹಟಾ ಮಾಡಿದಿ…" ಅಂತ ತಾನು ಮಾಡಿದ ಎಲ್ಲಾ ಸಾಲಗಳೂ ನೆನಪಾಗಿ, ಅದಕ್ಕೆಲ್ಲಾ ಇವಳೇ ಹೊಣೆ ಅಂತ ಕೂಗತೊಡಗಿದ.
"ಅಯ್ಯ ಹಂಗ್ಯಾಕ ದೆವ್ವ ಬಡದವ್ರಂಗ ಮಾಡ್ತೀರಿ? ಒಂದು ವರಿ ಲಕ್ಷದ್ದ ಕ್ಯಾಮರಾ ತೊಗೊಂಡಿದ್ರಲ್ಲ! ಅದನ್ನೂ ನಾನ ತೊಗೊ ಅಂತ ಹೇಳಿದ್ನೇನು? ಎಲ್ಲಾ ನನ್ನ ಮ್ಯಾಲೆ ಹಾಕಬ್ಯಾಡ್ರಿ. ನಾನೂ ಕೆಲಸಕ್ಕ ಹೋಗ್ತೀನಿ ಅಂದ್ರ ನೀವ್ ಬಿಟ್ಟಿಲ್ಲ. ನಾ ಕೆಲಸಾ ಮಾಡಿದ್ರ ಇಷ್ಟು ಹೆದರೂ ಅವಶ್ಯಕತಿ ಇರ್ತಿರ್ಲಿಲ್ಲ…" ಯಾಕೋ ಬಾಣ ತನ್ನ ಕಡೆಗೆ ತಿರುಗುತ್ತಿರುವ ಲಕ್ಷಣ ಕಂಡು ವೆಂಕಣ್ಣ
"ಹೋಗ್ಲಿ ಬಿಡು, ಈಗ ಹಳೆ ಸುದ್ದಿ ಎಲ್ಲಾ ಯಾಕ. ಆಗಿದ್ದ ಆಗಿ ಹೋತು" ಅಂತ ಶಾಂತಿ ಸಂಧಾನಕ್ಕೆ ತೊಡಗಿದ!
"ಮೈಮ್ಯಾಲೆ ಬಂತಂದ್ರ ಗೀತೋಪದೇಶ ಸುರು ಮಾಡ್ತೀರಿ ನೋಡ್ರಿ. ಎಲ್ಲಾ ಗಂಡಸರ ಬುದ್ಧಿನೂ ಇಷ್ಟ!" ಅಂತ ಲೋಕದ ಗಂಡಸಿರಿಗೆಲ್ಲ ಹಿಡಿಶಾಪ ಹಾಕಿದಳು. ಅವಳಿಗೆ ಹೊರಡುವ ತಯ್ಯಾರಿ ಮಾಡಬೇಕಿತ್ತು. ಅಲ್ಲಿ ಇಲ್ಲಿ ಹರಡಿದ್ದನ್ನೆಲ್ಲ ಪ್ಯಾಕಿಂಗ್ ಮಾಡುವ ದೊಡ್ಡ ಜವಾಬ್ದಾರಿ ಅವಳ ಮೇಲಿತ್ತು. ಕೆಲಸ ಗುಡ್ಡದಷ್ಟಿತ್ತು. ಮಗಳು ಖುಷಿ ಮೊದಲು ಹಠ ಮಾಡಿದಳಾದರೂ ಅಪ್ಪ ಏನೇನೋ ಹೇಳಿ ಅಂತೂ ಅವಳಿಗೆ ಸಮಾಧಾನ ಮಾಡಿದ. ಅವನು laptop ನ ಮುಂದೆ ಕೂತು, ಆದಷ್ಟು ಬೇಗನೆ ಲಭ್ಯವಿರುವ ವಿಮಾನಗಳ ಹುಡುಕಾಟ ನಡೆಸಿದ್ದ.
—-
ಸುಧೀರ್ ರಾಜಿನಾಮೆ ಕೊಟ್ಟಿದ್ದು ದೊಡ್ಡ ಸುದ್ದಿ ಆಗಿತ್ತು. ಎಷ್ಟೋ ವರ್ಷಗಳಿಂದ ಆ ಕಂಪನಿಯ ಉಸ್ತುವಾರಿ ಹೊತ್ತಿದ್ದವನು ಹಟಾತ್ ಆಗಿ ಹೀಗೆ ನಿರ್ಗಮಿಸುವನೆಂಬ ಕಲ್ಪನೆ ಯಾರಿಗೂ ಇರಲಿಲ್ಲ. ಅವನಾಗೇ ಬಿಟ್ಟಿರಲು ಸಾಧ್ಯವೇ ಇಲ್ಲ, ಅವನನ್ನು ಜಾನ್ ನೇ ತೆಗೆದು ಹಾಕಿದ್ದಾನೆಂದು ಪ್ರದೀಪ್ ಅಂದುಕೊಂಡಿದ್ದ. ಆದರೆ ಅವನು ಯಾಕೆ ಹಾಗೆ ಮಾಡಿದ್ದ ಅನ್ನುವುದು ಇನ್ನೂ ಗೌಪ್ಯವಾಗಿತ್ತು. ಜಾನ್ ಮಾತ್ರ ತನ್ನ ಕಾಯಕದಲ್ಲಿ ತೊಡಗಿದ್ದ. ಸುಧೀರ್ ನ ಬದಲಿಗೆ ಇನ್ನೊಬ್ಬ ಸಶಕ್ತ ವ್ಯಕ್ತಿಯನ್ನು ಅವನು ಇಲ್ಲಿ ಕೂಡಿಸಬೇಕಿತ್ತು. ಆ ವ್ಯಕ್ತಿ ವೆಂಕಟ್ ಎಂಬುದನ್ನು ಅವನಾಗಲೇ ಮನಗಂಡಿದ್ದ. ಅದೇ ಕಾರಣಕ್ಕೆ ವೆಂಕಟ್ ಗೆ ವಾಪಸ್ಸು ಬರುವಂತೆ ಆತ ಅಪ್ಪಣೆ ಹೊರಡಿಸಿದ್ದ. ಇದು ವೆಂಕಟ ಗೆ ಗೊತ್ತಿರಲಿಲ್ಲ. ಜಾನ್ ಅದನ್ನು ಹೇಳಿರಲೂ ಇಲ್ಲ. ಅದೇ ಅವನ ವಿಶೇಷತೆ!
—
ಎರಡು ದಿನಗಳಿಂದ ಪ್ರದೀಪ್ ಗೆ ತರಂಗಿಣಿಯ ಫೋನ್ ಬಂದಿರಲಿಲ್ಲದ್ದು ಚಿಂತೆಗೀಡು ಮಾಡಿತ್ತು. ತಾನು ಪ್ಯಾರಿಸ್ ಗೆ ಹೊರಟಿರುವ ವಿಷಯ ಆಗಲೇ ಎಲ್ಲರಿಗೂ ಹೇಳಿಬಿಟ್ಟಿದ್ದ. ಅಂಥದ್ದರಲ್ಲಿ ತರಂಗಿಣಿಯ ಮೌನ ಅವನಿಗೆ ಭಯ ಹುಟ್ಟಿಸಿತ್ತು. ಕೇಳಿಯೇ ಬಿಟ್ಟರಾಯ್ತು ಅಂತ ಅವಳ ನಂಬರ್ ಡಯಲ್ ಮಾಡಿದ. ಇವನ ಕರೆಯನ್ನು ಸ್ವೀಕರಿಸಿದವಳ ದನಿಯಲ್ಲಿ ಎಂದಿನ ಉತ್ಸಾಹ ಇರಲಿಲ್ಲ. ಅದು ಅವನನ್ನು ಇನ್ನೂ ಅಧೀರನನ್ನಾಗಿಸಿತ್ತು.
"ಯಾಕೆ ತರಂಗಿಣಿ ತುಂಬಾ ಡಲ್ ಇದೀರಾ?"
"ಹಾಗೆನಿಲ್ಲಾರೀ, ನಿಮ್ದೆ ಕೆಲಸಾ ಮಾಡ್ತಿದೀನಿ. ಸ್ವಲ್ಪ ಹೆಕ್ಟಿಕ್ ಆಗಿಬಿಟ್ಟಿದೆ. ನಿಮಗೆಲ್ಲಾ ವ್ಯವಸ್ಥೆ ಮಾಡಬೇಕಲ್ಲ!" ಅವನಿಗೆ ಈಗ ಸ್ವಲ್ಪ ಸಮಾಧಾನವಾಗಿತ್ತು. ಅವಳೇ ಮುಂದುವರಿಸಿ…
"ನಿಮ್ಮದು ಆಫರ್ ಲೆಟರ್ ಕೂಡ ತಾಯಾರಾಗ್ತಿದೆ. ಮುಂದಿನ ವಾರ ಸಿಗುತ್ತೆ. ಅದನ್ನು ತರೋಕೆ ನಾನೇ ಹೋಗ್ತಿದೀನಿ." ಅಂದಳು.
"ಒಹ್ ಗುಡ್ ನ್ಯೂಸ್! ಮತ್ತೆ ನಮ್ಮ ವೀಸಾ ಯಾವಾಗ ಮಾಡ್ತಾರಂತೆ?" ಅಂದ.
"ಒಹ್ ಒಳ್ಳೆ ನೆನಪು ಮಾಡಿದ್ರಿ! ಇದೆ ವಿಷಯಕ್ಕೆ ನಿಮಗೆ ಇವತ್ತು ಕಾಲ್ ಮಾಡೋಳಿದ್ದೆ. ನಿಮ್ದು, ಹೆಂಡ್ತಿ ಹಾಗೂ ಮಗಂದು ವೀಸಾಗೆ ಅಪ್ಲಿಕೇಶನ್ ಕಳಿಸಬೇಕು. ಆದ್ರೆ ನೀವು ಇನ್ನೂ ಕಂಪನಿಯ ಎಂಪ್ಲೋಯೀ ಅಲ್ಲವಲ್ಲ. ಅದಕ್ಕೆ, ಪ್ಯಾರಲಲ್ ಆಗಿ ವೀಸಾ ನಾವೇ ಮಾಡ್ಕೊಂಡ್ ಬಿಡೋಣ. ಆ ಕಂಪನಿಯವ್ರೆ ಒಬ್ರು ಅದನ್ನ ಮಾಡಿಸಿಕೊಡ್ತಾರಂತೆ. ಅದರ ಖರ್ಚು ಸಧ್ಯಕ್ಕೆ ನೀವೇ ಕೊಡಬೇಕು. ನಿಮ್ಮ ಮೊದಲನೇ ಸಂಬಳದಲ್ಲಿ ಅದು ನಿಮಗೆ ಸಿಗತ್ತೆ." ಇದು ಸ್ವಲ್ಪ ನುಂಗಲಾರದ ತುತ್ತಾಗಿತ್ತಾದರೂ ಅವನ ಪ್ಯಾರಿಸ್ ಗೆ ಹೋಗಬೇಕೆನ್ನುವ ಬಯಕೆ ಅದಕ್ಕವನು ಒಪ್ಪುವಂತೆ ಮಾಡಿತ್ತು.
"ಎಷ್ಟು ಕೊಡಬೇಕು?"
"ಸಧ್ಯಕ್ಕೆ ಒಂದು ವರೆ ಲಕ್ಷ ಟ್ರಾನ್ಸ್ಫರ್ ಮಾಡಿ. ಒಂದು ಅಕೌಂಟ್ ನಂಬರ್ ಕಳಿಸ್ತೀನಿ." ಅಂದ್ಲು. ಆಗಲಿ ಎಂದು ಹೇಳಿ ಕರೆಯನ್ನು ಕತ್ತರಿಸಿದ. ಅವಳು ಕಳಿಸಿದ ಖಾತೆಗೆ ಆ ಹಣವನ್ನೂ ವರ್ಗಾಯಿಸಿದ ಕೂಡ. ಪ್ಯಾರಿಸ್ ಕನಸು ಕನಸಾಗುವ ಗಳಿಗೆ ಹತ್ತಿರವಾಗುತ್ತಿರುವ ಸೂಚನೆ ಸಿಕ್ಕು ಅವನು ಖುಷಿಯಾಗಿದ್ದ.
(ಮುಂದುವರಿಯುವುದು…)
*****
ಮಸ್ತ್! ಆದ್ರ ಥಟ್ಟ ಅಂತ ಹೇಳಿಬಿಟ್ರಿ ಅನಸ್ತು ವೆಂಕಟನ ಬಡತಿ ಬಗ್ಗೆ….
ನಿಮ್ಮ ಪ್ರೋತ್ಸಹಕ್ಕೆ ಧನ್ಯವಾದಗಳು ವಿಟ್ಠಲ! ಭಾಳ ಎಳೆಯೋದ ಬ್ಯಾಡಾ ಅಂತ ಹೇಳಿದೆ. ಆದ್ರ ಇನ್ನೂ ವೆಂಕಟ್ ಗ ಅದು ಗೊತ್ತಿಲ್ಲ! 🙂