ಜರ್ನಿ, ದಾರಿಯೊಂದೇ ಮೂರು ಸಂಗತಿಗಳು: ಅಮರ್ ದೀಪ್ ಪಿ.ಎಸ್.

ಸಂಜೆ ನಾಲ್ಕು ಇಪ್ಪತ್ತಕ್ಕೆ ಹುಬ್ಬಳ್ಳಿಯಿಂದ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಲ್ಲಿ ದೆಹಲಿಗೆ  ನಮ್ಮ ಪ್ರಯಾಣವಿತ್ತು. ಒಂದು ಸೆಕೆಂಡ್ ಕ್ಲಾಸ್ ಸ್ಲೀಪರ್ ಟಿಕೆಟ್ ಕನ್ಫರ್ಮ್ ಆಗಿತ್ತು.  ಇನ್ನೊಂದು ಇಲ್ಲ.  ಆಗಿಲ್ಲದ್ದೇ ನಂದು.   ನಮ್ಮ ಸ್ನೇಹಿತರೊಬ್ಬರ ಜೊತೆ ಹೋಗಿದ್ದೆ. ಆ ದಿನ ಬೆಳಗಾಂ ದಾಟಿದ ನಂತರ ಟಿ. ಸಿ. ಟಿಕೆಟ್ ಕನ್ಫರ್ಮ್ ಮಾಡಿ ಪಕ್ಕದ ಬೋಗಿಯಲ್ಲಿ ಸೀಟು ಕೊಟ್ಟಿದ್ದ.  ರಾತ್ರಿ ಎಂಟಾಗುತ್ತಿದ್ದಂತೆ ಆ ವರ್ಷದಲ್ಲೇ ಜ್ವರ ಕಾಣಿಸಿಕೊಳ್ಳದ ನನಗೆ ಜ್ವರ ಏರಿ ಓಡುವ ರೈಲಲ್ಲಿ ಪೇಚಿಗೆ ಹತ್ತಿತ್ತು.  ನನ್ನಲ್ಲಿದ್ದ ಗುಳಿಗೆ ತೆಗೆದುಕೊಂಡರೂ ಕಡಿಮೆ ಆಗಲಿಲ್ಲ.  ನನ್ನ ಸ್ನೇಹಿತ ಇದ್ದ ಸೀಟಿನ ಎದುರಿಗೆ ಇಬ್ಬರು ವಯಸ್ಸಾದ ದಂಪತಿ ಅಚ್ಚುಕಟ್ಟಾಗಿ ಪ್ರತಿ ನಿಲ್ದಾಣದಲ್ಲೂ ಸಿಗುವ ಹಣ್ಣು , ತಿನಿಸು, ಐಸ್ ಕ್ರೀಮ್, ಎಲ್ಲವನ್ನೂ ಒಬ್ಬರಿಗೊಬ್ಬರು ಒತ್ತಾಯಿಸಿ ತಿಂದು, ತಿನಿಸಿ  ಅದಲ್ಲದೇ ಮನೆಯಿಂದ ತಂದ ಊಟ ಮಾಡಿ  ಒಪ್ಪವಾಗಿ ಕೈತೊಳೆದು,  ಊಟದ ನಂತರ ಎಲೆ ಅಡಿಕೆ ಅಗಿದು … ವಾಹ್ ಅದೇನು ಆ ವಯಸ್ಸಲ್ಲೂ ಅಷ್ಟು ಪ್ರೀತಿ ಅವರಿಬ್ಬರಲ್ಲಿ.  ಕೊನೆಗೆ ಗುಳಿಗೆ ಕೊಟ್ಟು ಅಜ್ಜಿಯನ್ನು ಮಲಗಿಸಿ ಅಜ್ಜ ತಾನು ಮಲಗುತ್ತಿದ್ದ.  ಮಧ್ಯೆ ಮಧ್ಯೆ ಕೆಮ್ಮಿದರೆ, ಕೊಸರಿದರೆ "ತುಮ್ ತೀಕ್ ಹೊ?" ಕೇಳಿ ಮಲಗುತ್ತಿದ್ದ.  
 
 ಜ್ವರವಿದ್ದ ನಾನು ನನ್ನ ಸೀಟಿಂದ ನನ್ನ ಗೆಳೆಯನ ಹತ್ತಿರ ಬಂದು ನಿದ್ದೆ ಬಾರದೇ ತಿರುಗಾಡುವುದನ್ನು ನೋಡ ಲಾರದೇ ನನ್ನ ಸ್ನೇಹಿತ ಮಂಜು  ವೃದ್ಧರನ್ನು  ಕೇಳಿಯೇಬಿಟ್ಟ.  ಆಗ ಗೊತ್ತಾಗಿದ್ದು; ಅವರೊಬ್ಬ ಹಿರಿಯ ವೈದ್ಯ ಮತ್ತಾಕೆ ಅವರ ಹೆಂಡತಿ.  ದೆಹಲಿಯಲ್ಲಿ ಅವರ ಮಗಳು, ಅಳಿಯ ವೈದ್ಯ ವೃತ್ತಿಯಲ್ಲಿದ್ದಿದ್ದರಿಂದ ವೃದ್ಧ ದಂಪತಿ ಹುಬ್ಬಳ್ಳಿ ಯಿಂದ ಮಾತಾಡಿಸಲು ಹೊರಟಿದ್ದರು.. ಕೂಡಲೇ ಅವರ ಬಳಿಯಿದ್ದ ಗುಳಿಗೆ ನೀಡಿದರು.  ಒಂದರ್ಧ ಗಂಟೆಯಲ್ಲಿ ಸ್ವಲ್ಪ ಸುಧಾರಿಸಿಕೊಂಡೆ. ಎರಡು ರಾತ್ರಿ ಒಂದು ಹಗಲ ಪ್ರಯಾಣದ ದಾರಿಯಲ್ಲಿ ಇನ್ನೇನು ಇಪ್ಪತ್ತು ನಿಮಿಷದಲ್ಲಿ ದೆಹಲಿಯ ನಿಜಾಮುದ್ದೀನ್ ನಿಲ್ದಾಣ ತಲುಪಬೇಕು.  ರೈಲು ನಿಧಾನಕ್ಕೆ ಚಲಿಸುತ್ತಿತ್ತು. ಬೆಳಗ್ಗೆ 5.30ರ ಸಮಯ. ನೀಟಾಗಿ ಅಜ್ಜ ಅಜ್ಜಿ ಇಬ್ಬರು ಹಲ್ಲುಜ್ಜಿ ಲಗೇಜ್ ಜೋಡಿಸಿ, ನಿಲ್ದಾಣದಲ್ಲಿಳಿಯಲು ಅಣಿಯಾಗು ತ್ತಿದ್ದರು.. ಅಜ್ಜಿ ಇರುವ ಬೆಳ್ಳಿ  ಕೂದಲನ್ನು ಜೋಡಿಸಿ ಗಂಟು ಹಾಕುತ್ತಿದ್ದಳು.  ನಾನು ನನ್ನ ಸ್ನೇಹಿತ ಆತನ ಸೀಟಿನಲ್ಲಿ ಕೂತಿದ್ದೆವು. ನಾವಿದ್ದ ಸೀಟು ಸೈಡ್ ಲೋಯರ್, ಬಾಗಿಲ ಪಕ್ಕದ್ದೇ. ನಮ್ಮೆದುರಿನ ಲೋಯರ್ ಸ್ಲೀಪರ್ ನಲ್ಲಿ ವೃದ್ಧ ದಂಪತಿ.  ಬಾಗಿಲಿಂದ ಸಡನ್ನಾಗಿ ಒಬ್ಬ ವ್ಯಕ್ತಿ ಹತ್ತಿದ.  ನೋಡಲು ಪ್ರಯಾಣಿಕನಂತೆ ಇದ್ದ. ನೋಡುತ್ತಿದ್ದಂತೆಯೇ ಅಜ್ಜಿಯ ಕೊರಳಲ್ಲಿದ್ದ ಬಂಗಾರದ ಚೈನ್ ಹಿರಿದು ಕಾಲು ಕಿತ್ತಿದ್ದ. ಬಾಗಿಲ ಪಕ್ಕವೇ ಇದ್ದ ನಾನು ಕಾಲು  ಚಾಚಿದ್ದೆ. ಅಜ್ಜಿ ಕೂಗುವುದಕ್ಕೂ ನಾನು  ಅರಚಿ ಕಾಲು ಅಡ್ಡವಾಗಿ ಎತ್ತಿದ್ದಕ್ಕೂ ನಡುವೆ ಕಳ್ಳ ಹೆಜ್ಜೆ ಇಟ್ಟಿದ್ದ.  ಎಲ್ಲಿ ತಾನು ಸಿಕ್ಕಿ ಬೀಳುತ್ತೇನೋ ಎನ್ನುವ ಭಯದಲ್ಲಿ ಕಳ್ಳ. ಕೈಗೆ ಸಿಕ್ಕಷ್ಟೇ ಚೂರು ಬಂಗಾರದ ಸರ ಕದ್ದು ಚಲಿಸುವ ರೈಲಿಂದ ಜಿಗಿದಿದ್ದ. 
 
ಸುಮಾರು ಮೂರರಿಂದ ನಾಲ್ಕು ತೊಲೆ ಬಂಗಾರದ ಸರದ ತುಂಡುಗಳನ್ನು ಭಯದಲ್ಲಿದ್ದ ಕಳ್ಳ, ನನ್ನ ಕಾಲ ಬುಡದಲ್ಲಿ ಬಿಸಾಕಿ ನಡೆದಿದ್ದ.  ನಾನು ನನ್ನ ಸ್ನೇಹಿತ ಬಿದ್ದ  ಸರದ ಎಲ್ಲಾ ಚೂರುಗಳನ್ನು ಒಟ್ಟು  ಮಾಡಿ ಅಜ್ಜಿಯ ಕೈಗೆ ನೀಡಿದ್ದೆವು.    ಚೋರ್ ಚೋರ್ ಅಂದು ಐದು ನಿಮಿಷದಲ್ಲಿ ಪೋಲೀಸಪ್ಪ  ಬಂದು "ಕ್ಯಾ ಚೋರಿ ಹುವಾ ಹೈ? ಕಿತನೇ ಗ್ರಾಂ ಕಾ? ಪೂರ ಲೇಕೇ ಗಯಾ ಯಾ ಔರ್ ಕುಚ್ ಬಚಾ ಹೈ?   ಎಲ್ಲಾ ವಿಚಾರಿಸಿ "ಹುಷ್ಯಾರಿ ಸೇ ರೆಹನಾ ಜೀ"   ಅಂದು ಹೋದ. "ಈ ಪೋಲೀಸಪ್ಪ ಕಳ್ಳ ಎಷ್ಟು ಕದ್ದಿದ್ದಾನೆ ಎನ್ನುವುದರ ಮೇಲೆ ತಮ್ಮ ನಜ ರಿಗೆ  ಬಿದ್ದ ಕಳ್ಳರಿಂದ ಶೇರು ಪಡೆಯಲು ಮಾಹಿತಿ ಪಡೆದನಾ?" ಎನ್ನುವಂತೆ ಉಳಿದ ಪ್ರಯಾಣಿಕರು ನೋಡಿ ದರು.  ವೃದ್ಧ ದಂಪತಿ ನಮಗೆ "ಶುಕ್ರಿಯಾ" ಅಂದರು.  ಕಿಮ್ಮತ್ತಿಗೇ ನಿಲುಕದ ಒಂದು ಗುಳಿಗೆ ಋಣ ನನ್ನನ್ನು ಜೋರಾಗಿ ಕಿರುಚುವಂತೆ ಮಾಡಿತ್ತು. 
 
ಆಹಾ….  ದೆಹಲಿಯ ಕೆಲ ಲಾಡ್ಜ್ ಗಳಲ್ಲಿ ಪ್ರಯಾಣಿಕರನ್ನು ತಂದು ಕೆಡವುವ ಟ್ಯಾಕ್ಸಿ ಡ್ರೈವರ್ ಗಳು.  ಒಮ್ಮೆ ಬುಕ್ ಮಾಡಿದ ರೂಮನ್ನು ಖಾಲಿ ಮಾಡುವಾಗಿನ ಕಿರಿಕಿರಿಗಳು ಹೊಸಬರಾದ ನಮಗೆ ಕ್ರಮೇಣ "ದಿಲ್ಲಿ ಮೇ ಕೈಸೆ ರೆಹನಾ?" ಅನ್ನುವುದನ್ನು ಹೇಳಿಕೊಟ್ಟಿದ್ದವು.   ಇದ್ದ ಮೂರು ದಿನದಲ್ಲಿ ನೋಡಬಹುದಾದ ಸ್ಥಳಗಳು, ಹೋಗಿದ್ದ ಕೆಲಸ ಎಲ್ಲವನ್ನೂ ಮುಗಿಯಿತು. ಅಲ್ಲಲ್ಲಿ ಉತ್ತರ(ವಿರ)ದ  ಸುಂದರ ಹುಡುಗಿಯರು ಬೇಡವೆಂದರೂ ಕಣ್ಣುಜ್ಜಿದರು.  ಮತ್ತೆ ಅದೇ ನಿಜಾಮುದ್ದೀನ್ ರೈಲಿಗೆ ಹತ್ತುವಾಗ "ಅಬ್ಬಾ ದಿಲ್ಲಿಯೇ" ಅನ್ನುವಂತಾಗಿತ್ತು.  ಹೀಗೆ ಎರಡು ಬಾರಿ ಹೋಗಿ ಬಂದದ್ದಾಯಿತು.

*****

                                              
ಎರಡನೇ ಬಾರಿ ಮಥುರಾ, ಆಗ್ರಾ, ನೋಡಿದೆವು.  ಆಗ್ರಾದಿಂದ ರಿಜೆರ್ವೇಶನ್ ಪಕ್ಕಾ ಇತ್ತು.  ಹತ್ತಿ ಕುಳಿತಾಗ ಕೊಪ್ಪಳ ಜಿಲ್ಲೆಯವರೇ ಆದ ಶಾಲಾ ಶಿಕ್ಷಕರಿಬ್ಬರು ಜೊತೆಯಾದರು.  ಆ ವರ್ಷ ನಡೆದ  ಮಹಾಕುಂಭ ಮೇಳ, ದೆಹಲಿ, ಸುತ್ತಮುತ್ತಲಿನ ಸ್ಥಳಗಳಲ್ಲಿ  ತಿರುಗಾಡಿ ಮರಳುತ್ತಿದ್ದರು.  ಅವರಲ್ಲಿ ಒಬ್ಬ  ಮಾಜಿ ಸೈನಿಕನಿದ್ದ. ರಾಮಪ್ಪ ಆತನ ಹೆಸರು, ಹಾಗಂದುಕೊಳ್ಳೋಣ.  ಒಂದು ಆಕಸ್ಮಿಕ ಸಾವು ಆ ಮಾಜಿ ಸೈನಿಕ, ಹಾಲಿ ಶಿಕ್ಷಕನನ್ನು ಗಂಟು ಬಿದ್ದ ಕಥೆ ಹೇಳಿದ.  ನಾವು ಕೇಳುತ್ತಾ ಎರಡು ತಾಸು ಹಾದಿ ಸವೆಸಿದ್ದೇ ಗೊತ್ತಾಗಲಿಲ್ಲ.  
 
ರಾಮಪ್ಪ  ತಮ್ಮೂರಿನಿಂದ ಪಕ್ಕದೂರಿನ  ಶಾಲೆಗೆ ಬೈಕ್ ಮೇಲೆ ಹೋಗಿ ಬಂದು ಮಾಡುತ್ತಿದ್ದ. ದಾರಿಯಲ್ಲಿ ನಡೆದು ಬರುವವರು, ಪರಿಚಯಸ್ಥರು, ಸ್ನೇಹಿತರು ಎಲ್ಲರಿಗೂ ಮೇಷ್ಟು ತುಂಬಾ ಪರಿಚಯ. ಅದೊಮ್ಮೆ ತನ್ನ ಗಾಡಿ ಇಲ್ಲದ ಕಾರಣ ಪರಿಚಯದ ಒಬ್ಬ ವ್ಯಕ್ತಿಯ ಗಾಡಿಯಲ್ಲಿ ಶಾಲೆಯಿದ್ದ ಊರಿಗೆ ಬಂದು ಹತ್ತಿರದ ಅಂಗಡಿ ಯಲ್ಲಿ ಇಬ್ಬರು ಟೀ ಕುಡಿದು, ಮೇಷ್ಟ್ರು ಶಾಲೆಗೆ ಮತ್ತು ಆ ವ್ಯಕ್ತಿ ತನ್ನ ಕೆಲಸಕ್ಕೆ ಹೊರಟಿದ್ದಾರೆ. ಬರುವಾಗ ಆ ವ್ಯಕ್ತಿಗೆ ಮೇಷ್ಟ್ರು ತನ್ನ ಮೊಬೈಲ್ ನಿಂದ ಕಾಲ್ ಮಾಡಿದ್ದಾರೆ.  ಆ ವ್ಯಕ್ತಿ ಮಾತಾಡಿ "ನನ್ನದಿನ್ನು ತಡವಾಗುತ್ತೆ ನೀವು ಹೊರಡಿ" ಅಂದಿದ್ದಾನೆ.  ಅಷ್ಟೇ.  ಎರಡು ಮೂರು ದಿನಗಳವರೆಗೆ ಆ ವ್ಯಕ್ತಿ ಕಂಡಿಲ್ಲ.  ಫೋನೂ ಇಲ್ಲ.   ನಾಲ್ಕನೇ ದಿನ ಕೆಲಸ ನಿರ್ವಹಿಸುತ್ತಿದ್ದ ಶಾಲೆಗೆ ಪೊಲೀಸರು ಬಂದು ಈ ಮೇಷ್ಟ್ರನ್ನು ಕರೆದುಕೊಂಡು ಹೋಗಿದ್ದಾರೆ.  
 
ಅಲ್ಲಿ ತಿಳಿದದ್ದೆಂದರೆ, ಆ ದಿನ ಮೇಷ್ಟ್ರನ್ನು ಕರೆದುಕೊಂಡು ಬಂದ ವ್ಯಕ್ತಿಯ ಕೊಲೆಯಾಗಿದೆ. ಸತ್ತ ವ್ಯಕ್ತಿಯ ಮೊಬೈಲ್ ಟ್ರ್ಯಾಕ್ ಮಾಡಿದ ಪೊಲೀಸರು ಕೊನೆಯ ಬಾರಿಗೆ ಮಾತನಾಡಿದ ಈ ಮೇಷ್ಟ್ರನ್ನು "ವಿಚಾರಣೆಗೆ" ಕರೆ ತಂದಿದ್ದಾರೆ.   ಕೊನೆ ಕೊನೆಗೆ ಆ ಕೊಲೆಯ ಅನುಮಾನದ ಸುಳಿ ಈ ಮೇಷ್ಟ್ರನ್ನೇ ಸುತ್ತಿಕೊಳ್ಳತೊಡಗಿದೆ. ಅದೆಷ್ಟೇ ಸಮಜಾಯಿಷಿ ನೀಡಿದರೂ, ಅನುಮಾನವೆಂದರೆ ಅನುಮಾನವೇ.  ಅದನ್ನು ಬಿಡಿಸದ ಹೊರತು ಪೊಲೀಸರಿಗೆ ಕೇಸು ಫೈಸಲ್ಲಾಗುವಂತಿಲ್ಲ.   ಈ ಮೇಷ್ಟ್ರು ಕೂಡ ಕಡಿಮೆ ಆಸಾಮಿಯಲ್ಲ, ಮೊದಲೇ ಮಾಜಿ ಸೈನಿಕ. ತನ್ನ ಪಟ್ಟು ತನಗೆ.  ತನ್ನ ನಿಯತ್ತು ತನಗೆ.   ಮೇಷ್ಟ್ರು ಮೊಬೈಲ್ ನಂಬರನ್ನು ಕಾದು ಕುಳಿತ ಪೊಲೀಸರು  ಮಾತುಗಳನ್ನು ಆಲಿಸಿದ್ದಾರೆ.  ಚಲನವಲನಕ್ಕೆ ಬಾತ್ಮಿದಾರರನ್ನು ನೇಮಿಸಿದ್ದಾರೆ.  ಬೇಸತ್ತ ಮೇಷ್ಟ್ರು ಕಡೆಗೆ ಪೊಲೀಸರೊಂದಿಗೆ ಮಾತಾಡಿ "ನೋಡಿ ಸರ್, ನನ್ನ ಮೇಲೆ ಅನುಮಾನ ಇನ್ನು ಬಗೆಹರಿದಿಲ್ಲ ವಾದರೆ, ನನ್ನ ಬ್ರೈನ್ ಮ್ಯಾಪಿಂಗ್ ಮಾಡಿಸಿ, ನಾನದಕ್ಕೂ ತಯಾರು"ಅಂದಿದ್ದಾರೆ.  ಈ ಮಧ್ಯೆ ಪೊಲೀಸರು ಮೇಷ್ಟ್ರು ವಿರುದ್ಧ ಎಫ್. ಐ. ಆರ್. ದಾಖಲಿಸಿದ್ದರೆ?  ದೋಷಾರೋಪಣೆ ಪಟ್ಟಿಯಲ್ಲಿ ಈ ಮೇಷ್ಟ್ರು ಹೆಸರು ಸೇರಿಸಿದ್ದರಾ? ಮೇಷ್ಟ್ರು ಜಾಮೀನು ಪಡೆದು ಈಚೆ ಇದ್ದರಾ? ಅದನ್ನು ವಿವರವಾಗಿ ಮೇಷ್ಟ್ರು ಹೇಳಲಿಲ್ಲ. 
 
ದಿನಾಂಕ ಗೊತ್ತು ಮಾಡಿ ಬೆಂಗಳೂರಿಗೆ ಹೊರಡುವ ಮಧ್ಯೆ ಹಿರಿಯ ಅಧಿಕಾರಿಯೊಬ್ಬರು "ಮೇಷ್ಟ್ರೇ, ಸುಮ್ನೆ ಯಾಕೆ ತೊಂದರೆಗೆ ಸಿಕ್ಕಿಹಾಕಿಕೊಳ್ತೀರಿ,  ನಿಮ್ಗೆ ನಿಜ ಗೊತ್ತಿದ್ದರೆ ತಿಳಿಸಿಬಿಡಿ, ಇನ್ನು ಕಾಲ ಮಿಂಚಿಲ್ಲ" ಅಂದಿ ದ್ದಾರೆ.  ಉಹೂ.. ಮೇಷ್ಟ್ರು ಜಗ್ಗಿಲ್ಲ.  ಆ ಪರೀಕ್ಷೆಯೂ ಮುಗಿದು ನಂತರ ವರದಿ ನೋಡಿದರೆ, ಮೇಷ್ಟ್ರು ಮೇಲಿನ ಅನುಮಾನ ಹುಸಿಯಾಗಿದೆ.. ಆ ನಂತರವೇ ಮುಂದಿನ ತನಿಖೆ ಮಾಡಿದ ಪೊಲೀಸರು  ಕೊನೆಗೂ ಆ ವ್ಯಕ್ತಿಯ ಕೊಲೆ ಹಿಂದಿನ ಕೈಗಳನ್ನು, ಕಾರಣವನ್ನೂ ಪತ್ತೆ ಹಚ್ಚಿದ್ದಾರೆ.   ಕಾರಣವೇನು ಗೊತ್ತಾ? ಅಕ್ರಮ ಸಂಭಂಧ.          

*****

                                         
 ರೈಲು ಸಾಗುತ್ತಿತ್ತು.. ಹಸಿದ ನಾವು  ನಿಲ್ದಾಣವೊಂದರಲ್ಲಿ ಸಿಕ್ಕ ತಿನಿಸು ತಿಂದೆವು.  ನನ್ನ  ಸ್ನೇಹಿತ ಇದನ್ನೆಲ್ಲಾ ಒಂಚೂರು ಆಸಕ್ತಿಯಿಲ್ಲದೇ ಕೇಳಿಯೇ ಇಲ್ಲದಂತೆ ಸುಮ್ಮನಿದ್ದ.   ರೈಲು ಪೂನಾ ತಲುಪಿತು.  ನಾವಿದ್ದ  ಬೋಗಿ ಯಲ್ಲಿ ಬಾಗಿಲ ಪಕ್ಕದ ಸೈಡ್ ಅಪ್ಪರ್ ಸ್ಲೀಪರ್ ಸೀಟಲ್ಲಿ ಒಂದು ಸುಂದರ ಹುಡುಗಿ ಹತ್ತಿದಳು. ಸಮಯ ಹನ್ನೊಂದಾಗಿರಬೇಕು.  ಹತ್ತಿ, ಲಗೇಜ್ ಜೋಡಿಸಿಟ್ಟು ಬಾಗಿಲಿಗೆ ಕಣ್ಣು ನೆಟ್ಟಿದ್ದಳು.  ರೈಲು ಇನ್ನೇನು ಹೊರಡ ಬೇಕು, ಒಬ್ಬ ಯುವಕ ಹತ್ತಿದ. ರೈಲು ಹತ್ತಾರು ಕಿಲೋಮೀಟರ್ ದಾಟಿತು.  ಎಲ್ಲರು ನಿದ್ದೆಗೆ ಜಾರಿದ್ದರು. ನನಗೆ ನಿದ್ದೆ ಬರದೇ ಎದ್ದು ಕುಳಿತೆ.  ಆ ಯುವಕ ಯುವತಿಯ ಸಭ್ಯತೆ ಎಲ್ಲೆ ಮೀರಿ ದಾಟಿತು.  ಕಡೆಗೆ ಒಂದೇ ಸೀಟಲ್ಲಿ, ಒಂದೇ ಚಾದರದೊಳಗೆ "ಒಂದಾಗಿ" ಕುಲುಕಾಡುವುದನ್ನು ನೋಡಿ ಕಿಟಕಿ ತೆರೆದು ಕತ್ತಲಿಗೆ ಮುಖವಿಟ್ಟೆ.  
 
ಹುಬ್ಬಳ್ಳಿ ತಲುಪಿ ಆ ಸುಂದರಿ ಮುಖ ನೋಡಿದೆ.. ಕಣ್ಣು ತಪ್ಪಿಸಿಕೊಂಡು ಇಳಿದು ಹೋದಳು, ಇಳಿದ ಜನರ ಮಧ್ಯೆ ಒಂಚೂರು ದೇಹ ತಾಕಿಸದಂತೆ ಎಚ್ಚರವಹಿಸಿ ಮತ್ತು ಕಣ್ಣು ಪ್ಲಾಟ್ ಫಾರಂ ಬಿಟ್ಟು ಬೇರೇನೂ ನೋಡದಂತೆ.    ಆಗ ಜೊತೆ ಯಾರೂ ಇದ್ದಿಲ್ಲ.  ಅದ್ಯಾವಾಗ ಆ ಯುವಕ, ಎಲ್ಲಿ ಇಳಿದು ಹೋಗಿದ್ದನೋ?.. ನಾನು, ಸ್ನೇಹಿತ ಮಂಜು ಇಳಿದು ಸ್ಟ್ರಾಂಗ್ ಟೀ ಕುಡಿದು ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಬರುವ ರೈಲಿಗೆ ಕಾಯುತ್ತಿದ್ದೆವು.  ಸಡನ್ನಾಗಿ ಸ್ನೇಹಿತ ಮಂಜು ಅವರನ್ನು ಕೇಳಿದೆ.. ಅಲ್ರಿ, ಆ ಮೇಷ್ಟ್ರು ಕೊಲೆ ಕಥೆ ಹೇಳ್ತಾ ಇದ್ದಾಗ, ನೀವ್ಯಾಕೆ ಅದರ ಕಡೆ ಲಕ್ಷ್ಯ ಕೊಡ್ಲಿಲ್ಲ?"   ಅದಕ್ಕೆ ಸ್ನೇಹಿತ ಮಂಜು ಹೇಳಿದ್ದೇನು ಗೊತ್ತೇ? 

"ಅಮರದೀಪ್ ಅವ್ರೆ, ಈಗೇನ್ ಮೇಷ್ಟ್ರು ಹೇಳಿದ್ರಲ್ಲಾ ಕೊಲೆಯಾದ ವ್ಯಕ್ತಿ, ಅವನು ಬೇರೆ ಯಾರೂ ಅಲ್ಲ ನನ್ನ ಸ್ನೇಹಿತನ ತಮ್ಮ, ಅವನ ಕೇಸ್ ಡೀಟೇಲ್ಸ್ ಎಲ್ಲಾ ನನ್ನ ಹತ್ರ ಇದೆ.."
 
ಯಾಕಂದ್ರೆ ಈ ನನ್ನ ಸ್ನೇಹಿತ ಮಂಜು ಮಾಡುತ್ತಿದ್ದುದು ವಕೀಲ ವೃತ್ತಿ…… ಅದು ಆ ಮೇಷ್ಟ್ರಿಗೆ ಗೊತ್ತಿರಲಿಲ್ಲ ಅಷ್ಟೇ.. ನನಗೆ, ನನ್ನ ಸ್ನೇಹಿತನಿಗೆ ಈ ಕೇಸಿನ ಬಗ್ಗೆ ಮಾಹಿತಿ ಇದ್ದ ಬಗ್ಗೆ ತಿಳಿದಿದ್ದಿಲ್ಲ. 
 
ಕಳೆದ ವಾರ ಹುಬ್ಬಳ್ಳಿಗೆ ಒಂದು ಮದುವೆಗೆ ಹೋಗಿದ್ದೆ, ದಿಬ್ಬಣದ ಜೊತೆ.  ಬರುವಾಗ ಒಬ್ಬಂಟಿಯಾಗಿ ಕೊಪ್ಪಳಕ್ಕೆ ಕೊಲ್ಲಾಪುರ ತಿರುಪತಿ ರೈಲಿನ ಜನರಲ್ ಬೋಗಿಯಲ್ಲಿ ಹತ್ತಿದರೆ ಎಲ್ಲಿದೆ ಸೀಟು?  ನಿಂತು, ಬಾಗಿಲ ತುದಿಯಲ್ಲಿ,  ಮೆಟ್ಟಿಲ ಮೇಲೆ ಕುಂತು, ಜೊತೆಗಿದ್ದ ಪ್ರಯಾಣಿಕರೊಂದಿಗೆ ಎರಡು ತಾಸು ಬೇಕಿದ್ದು ಬೇಡದ್ದು, ಅವರೂ ನಾನು ತೌಡು ಕುಟ್ಟಿದಂತೆ ಮಾತಾಡಿ, ನಕ್ಕು ನಿಲ್ದಾಣದಲ್ಲಿ ಇಳಿಯುತ್ತಿದ್ದರೆ, ಅಷ್ಟೊತ್ತು ಮಾತಾಡಿದ ಸಹ ಪ್ರಯಾಣಿಕನೊಬ್ಬ  "ಸರ್, ನಮ್ಗೆ ಸೀಟು ಸಿಕ್ತು, ತಿಮ್ಮಪ್ಪಂಗೆ ನಿಮ್ದೂ ಒಂದ್ ನಮಸ್ಕಾರ ಹೇಳ್ತೀವಿ   ಬರ್ಲಾ" ಅಂದ. 
 
ಸುಮ್ಮನೇ ಎ. ಸಿ.  ಫಸ್ಟ್ ಕ್ಲಾಸ್, 2 ಟೈರ್  3 ಟೈರ್ ಅಂತೆಲ್ಲಾ ಲಕ್ಸುರಿಯಾದ ಪ್ರಯಾಣ ಮಾಡಿ ಸರಕ್ಕಂತ ಕರ್ಟನ್ ಎಳೆದುಕೊಂಡು ಮಲಗುವುದು, ಎದುರಿಗಿದ್ದವರನ್ನು ನಾವಾಗಲಿ, ನಮ್ಮನ್ನು ಅವರಾಗಲಿ ಪರಿ ಚಯಕ್ಕೂ ಎಳೆಯದೇ, ಮಾತು ಆಡದೇ ರಾತ್ರಿ ರೈಲು ಹತ್ತಿದ ತಕ್ಷಣ "ತಿನ್ನಾಮ, ಪಡುಕುನ್ನಾಮ, ತೆಲ್ಲಾ ರಿಂದ"  (ಉಂಡ್ವ್ಯಾ, ಮಕ್ಕಂದ್ವ್ಯಾ, ಬೆಳಕರೀತ")  ಅಂತೇಳಿ ನಿಲ್ದಾಣ ಬಂದ ತಕ್ಷಣ ನಮ್ಮ ಲಗೇಜ್ ಇಳಿಸಿ ಕೊಂಡು ಹೋದೆವೆಂದರೆ ಇಂಥ ಕಥೆಗಳು, ಸುಂದರಿಯ "ಸರಳತೆ" ಮತ್ತು ವೃದ್ಧ ದಂಪತಿ ಪ್ರೀತಿ,  ಕಾಳಜಿ,  ಮಾಡುವ ಬಗೆ, ಸಹ ಪ್ರಯಾಣಿಕರ ಜೊತೆ ಆತ್ಮೀಯತೆ, ದಾರಿ ಮಧ್ಯೆ ಪ್ರಯಾಣಿಕರು  ಮೆಲುಕು ಹಾಕಿ ಗುನು ಗುವ ಹಳೆಯ ತಮ್ಮಿಷ್ಟದ  ಸಿನಿಮಾದ ಹಾಡುಗಳ ಅಪೂರ್ಣತೆ, ಮತ್ತೆ ಮತ್ತೆ ನೆನಪಿಸಿಕೊಂಡು ಲಯಕ್ಕೆ ಬಂದು ಚಿಟಕಿ ಹೊಡೆದು ಖುಷಿಪಡುವ ಸಂಗತಿಗಳು ಮಿಸ್ ಆಗುತ್ತಿದ್ದವು.  
 
ಮನೆಗೆ ಬರುವಾಗ ಪೂನಾದ ಸುಂದರಿಯ "ಸರಳತೆ" ನೆನಪಾಯಿತು.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
thotadaravi
10 years ago

It is nice sir

Kotraswamy M
Kotraswamy M
10 years ago

True Amar! But not all have the same level of observation and sociable nature to ineract, mingle and to peep in to fellow passenger's good and bads. Your write up is a proof that you have done that! 

Santhoshkumar LM
10 years ago

🙂

ganesh
ganesh
10 years ago

railinalli, tharevari khategalu sigaththe.  Neevu helida ghatanegalu nadithane irtuththe.  Nim niroopane chennagiththu.

Rajshekhar
Rajshekhar
10 years ago

ಸ್ವಾಮಿ ನಿಮ್ಮ ತರಹ ದೃ‍ಷ್ಟಿಕೋನ ಎಲ್ಲರಿಗೂ ಇರಲ್ಲ.
ಬರಹದ ಓಘ ಹೇಗಿದೆ ಅಂದ್ರೆ ನಾವೇ ಪ್ರಯಾಣ ಮಾಡಿದ
ಅನುಭವವಾಯಿತು

Manjunatha B
Manjunatha B
10 years ago

¤ªÀÄä d¤ðAiÀÄ ªÀÄÆgÀÄ ¸ÀAUÀwUÀ¼ÀÄ N¢zÉ.  §gÀºÀ ªÀÄ£À vÀnÖvÀÄ.  C©ü£ÀAzÀ£ÉUÀ¼ÀÄ CªÀÄgÀ¢Ã¥À ¸Ágï.

Nice Article..!

7
0
Would love your thoughts, please comment.x
()
x