ಜಪ್ತಿ: ಎಂ ಜವರಾಜ್


ಅಪ್ಪನನ್ನು ತಬ್ಬಿಕೊಂಡು ಮಲಗಿದ ರಾತ್ರಿಗಳು ಸಾಕಷ್ಟಿದ್ದವು. ಅವನ ಮಗ್ಗುಲು ಬೆಚ್ಚನೆಯ ಗೂಡಾಗಿತ್ತು. ಒಂದೊಂದು ಸಾರಿ ಆ ಬೆಚ್ಚನೆಯ ಗೂಡು ದುಗುಡದಲಿ ಕನವರಿಸಿ ಕನವರಿಸಿ ನನ್ನನ್ನು ದೂರ ತಳ್ಳುತ್ತ ಮಗ್ಗುಲು ಬದಲಿಸುತ್ತಿತ್ತು. ಅಪ್ಪನನ್ನು ತಬ್ಬಿಕೊಂಡು ಮಲಗಲು ಅಷ್ಟು ಸುಲಭವಾಗಿರಲಿಲ್ಲ. ತಮ್ಮಂದಿರ ಸರದಿಯ ಸಾಲಿತ್ತು. ಒಂದೊಂದು ರಾತ್ರಿ ಒಬ್ಬೊಬ್ಬರಿಗೆ ಎಂದು ನಿಗದಿ ಮಾಡಿದ್ದರಿಂದ ಆ ಸರದಿಯ ಸಾಲಿನ ರಾತ್ರಿ ನನ್ನದಾಗುತ್ತಿತ್ತು. ಉಳಿದವರು ಅವ್ವನ ಮಗ್ಗುಲಲ್ಲಿ ಮಲಗುತ್ತಿದ್ದರು. ನನ್ನದಾದ ಆ ರಾತ್ರಿಗಳು ಅಪ್ಪನ ಪೇಚಾಟ ನರಳಾಟ ನನಗೆ ದಿಗಿಲು ಹುಟ್ಟಿಸುತ್ತಿತ್ತು. ಕರಿಯ ಸತ್ತ ಮೇಲೆ ಅಪ್ಪನ ದುಗುಡ ಮತ್ತಷ್ಟು ಹೆಚ್ಚಾಗಿತ್ತು. ಸಾಯುವ ವಯಸ್ಸು ಅವನದಾಗಿರಲಿಲ್ಲ. ಕರಿಯ ಹೆಂಡದ ಅಂಗಡಿಯ ಬದಲು ಬ್ರಾಂದಿಯ ಅಂಗಡಿಯ ಬಳಿ ಕಾಣಿಸಿಕೊಂಡ ನೆನಪನ್ನು ಅಪ್ಪ ಆಗಾಗ ಮಾಡಿಕೊಂಡಿದ್ದಿದೆ. ಇದರಿಂದ ಅಪ್ಪನ ನಿದ್ರೆ ಕಿತ್ತ ರಾತ್ರಿಗಳು ಮತ್ತಷ್ಟಾದವು. ಆ ನಿದ್ರೆ ಇಲ್ಲದ ರಾತ್ರಿಯ ಕತ್ತಲಲ್ಲಿ ಸರ್ರನೆ ಮೇಲೆದ್ದು ಗೋಡೆ ಒರಗಿ ಕುಂತು ಮೋಟು ಬೀಡಿ ಹಸ್ಸಿ ಸೇಯುತ್ತ ನಿಧಾನಕೆ ಹೊಗೆ ಬಿಡುತ್ತ ಸೂರು ನೋಡುತ್ತಿದ್ದ ಚಿತ್ರ ನನಗೆ ದಂಗು ಬಡಿಸುತ್ತಿತ್ತು.

ರಾತ್ರಿ ಕಳೆಯುವುದನ್ನೆ ಕಾಯುತ್ತಿದ್ದ ಅಪ್ಪ ಎದ್ದು ಹೊಳೆ ಕಡೆ ನಡೆದರೆ ನಾನೂ ಅವನೊಂದಿಗೆ ನಿಲ್ಲುತ್ತಿದ್ದೆ. ಅವನ ಹೆಜ್ಜೆಗೆ ಹೆಜ್ಜೆ ಹಾಕುವಾಗ ಅದೇ ದಾರಿಯಲಿ ಸಿಗುವ ಕರಿಯನ ಮನೆ ನೋಡದೆ ಇರುತ್ತಿರಲಿಲ್ಲ. ಆಗ ಕರಿಯನ ಹೆಂಡತಿ ಮುಖ ಎತ್ತಿ ನೋಡದೆ ಒಳ ನಡೆದ ಚಿತ್ರ ನನಗೀಗಲೂ ನೆನಪಿದೆ. ಇಂದೋ ನಾಳೆಯೋ ಸೊಸೈಟಿಯವರು ಮನೆ ಜಪ್ತಿಮಾಡಲು ಬರುವವರಿದ್ದರು. ಅದಾಗಲೇ ಜಪ್ತಿ ಮಾಡುವರೆಂಬ ಸುಳಿವಿತ್ತು. ಹೆಜ್ಜೆ ಹಾಕುತ್ತ ಹಾಕುತ್ತ ಅಪ್ಪ ತನ್ನ ಜೇಬಿನಿಂದ ಮೋಟು ಬೀಡಿ ತೆಗೆದು ಬೆಂಕಿಕಡ್ಡಿ ಗೀರಿ ಹಸ್ಸಿ ಸೇಯುತ್ತ ಸೇಯುತ್ತ ನಿಧಾನಕೆ ಹೊಗೆ ಬಿಡುತ್ತ ಸಾಗಿದ. ಹೊಳೆಯ ದಾರಿಯಲಿ ಎದುರಿಗೆ ಸಿಕ್ಕ ಕರಿಯನ ಕಿರಿ ಮಗ ನೋಡದೆಯೂ ನೋಡದ ಹಾಗೆ ಹೋದ ಮೇಲೆ ಅಪ್ಪನ ದುಗುಡ ಇನ್ನಷ್ಡು ಹೆಚ್ಚಿದಂತಿತ್ತು. ಅವನು ಸತ್ತ ದಿನ ಅವನ ಹೆಂಡತಿ ಅಪ್ಪನ ಕೈ ಹಿಡಿದು ” ನಿನ್ಗ ಮೋಸ ಮಾಡಿ ಹೋದ್ನಲ್ಲೊ..” ಎಂದು ಗೋಳಾಡಿ ಗೋಳಾಡಿ ಅಳುತ್ತಿದ್ದಳು. ಅಪ್ಪ ಅವಳ ತಲೆ ಸವರಿ ದೂರ ಸರಿದು ಅಲ್ಲೆ ಕಲ್ಲಿನ ಮೇಲೆ ಕುಕ್ಕರಗಾಲಲ್ಲಿ ಕುಂತು ಬೀಡಿ ಹಸ್ಸಿ ಹೊಗೆ ಬಿಡುತ್ತ ಕರಿಯನ ಹೆಣವನ್ನು ಸುಮ್ಮನೆ ನೋಡ ತೊಡಗಿದ. ಅವ್ವ ಕರಿಯನ ಹೆಣಕ್ಕೆ ಹೂವಾಕಿ ಕೈ ಮುಗಿದು, ಅಳುತ್ತಿದ್ದ ಕರಿಯನ ಹೆಂಡತಿ ಪಕ್ಕದಲ್ಲೆ ಕುಂತಳು. ಕರಿಯನ ಹೆಂಡತಿ‌ ಅವ್ವನ ಕಂಡೊಡನೆ ಅವಳ ಕೈ ಹಿಡಿದು ಗಳಗಳನೆ ಅಳ ತೊಡಗಿದಳು. ಅವಳ ಅಳುವಿಗೆ ಅಕ್ಕಪಕ್ಕದವರ ದುಃಖವು ಉಮ್ಮಳಿಸಿ ಕಣ್ಣೀರು ಕಚ್ಚಿಕೊಂಡು ಅವಳನ್ನು ಸುಮ್ಮನಿರಿಸುತ್ತಿದ್ದರು. ಅದಾಗಲೇ ಮೇಲೆ ಕಟ್ಟುತ್ತಿತ್ತು. ಬೇಗಬೇಗನೇ ಹೆಣ ಎತ್ತಿ ಅದು ಇದು ಮಾಡಿ ಮುಗಿಸಿ ಮಣ್ಣು ಮಾಡುವಾಗ ಬಂದ ಮಳೆಗೆ ಎಲ್ಲರೂ ಅದ್ದಿ ಹೋದರು.

ಈಗ ಅಪ್ಪನ ನಡಿಗೆಯ ಬಿರುಸು ಹೆಚ್ಚಾದಂತೆ ನನ್ನ ನಡಿಗೆಯ ಬಿರುಸೂ ಹೆಚ್ಚಾಯಿತು. ಸೇದುತ್ತಿದ್ದ ಮೋಟು ಬೀಡಿ ತುದಿ ಮುಟ್ಟಿತ್ತು. ಅದನ್ನು ಬಿಡದೆ ಒಳಗೆಳೆದು ಊಪಿ ಕಡೆಯ ದಮ್ಮು ಎಳೆದು ಬಿಸಾಡಿದ. ಹೊಳೆಯ ಅಂಚಿನಲ್ಲಿ ಒಂದರೆ ಗಳಿಗೆ ಕುಂತು ನೀರು ಮುಟ್ಟಿ ಮನೆ ಸೇರುವಷ್ಟರಲ್ಲಿ ಅವ್ವ ಟೀ ಕಾಯಿಸಿ ಕಾಯುತ್ತಿದ್ದಳು. ಟೀ ಗ್ಲಾಸು ಅಪ್ಪನ ತುಟಿ ಮುಟ್ಟುವಷ್ಟರಲ್ಲಿ ” ಮನ ಜಪ್ತಿಯಾದ್ರ ಏನ ಮಾಡದು..” ಅವ್ವನ ಮಾತು ತೂರಿ ಬಂತು. ಅಪ್ಪ ಆ ಟೀ ಗ್ಲಾಸು ಕೆಳಗಿಳಿಸಿ ಹಾಗೆ ಕೈಲಿಡಿದು ಏನೂ ಮಾತಾಡದೆ ಸುಮ್ಮನಾದ. ನಾನು ಸೊರಸೊರನೆ ಟೀ ಕುಡಿದು ಸುಮ್ಮನೆ ಕುಂತುಕೊಂಡೆ. ಅಪ್ಪ ನನ್ನ ಕಡೆ ತಿರುಗಿದ. ನಾನು ಎದ್ದು ಬಾರ್ಕೋಲು ಬಾರ್ಕಾಣಿ ಎತ್ತಿಕೊಂಡು ಹೋಗಿ ಗಾಡಿಗೆ ಹಾಕಿದೆ. ಇದರೊಂದಿಗೆ ಒಂದು ಮಕ್ಕರಿ, ಒಂದು ಎಲ್ಕೋಟು, ಒಂದು ಹಾರೆ, ಒಂದು ಗುದ್ದಲಿ ಗಾಡಿ ಸೇರಿದವು. ಹೊರಗೆ ಹಸುಗಳು ಹುಲ್ಲು ಮೇಯುತ್ತ ಅಪ್ಪನ ಕಡೆ ನೋಡುತ್ತಿದ್ದವು. ತಂಗಳು ತಿಂದ ಅಪ್ಪ ಏಳಲೋ ಬೇಡವೋ ಎಂಬ ಲೆಕ್ಕಾಚಾರದಲ್ಲಿ ಇದ್ದಂತಿತ್ತು ಅವನು ಕುಂತ ಕ್ರಮವ ನೋಡಿ.

ತಿಥಿ ಮುಗಿದ ರಾತ್ರಿ ಕರಿಯನ ಬಾಮೈದ ಹಾಗೆ ಅವನ ಅವ್ವ ಅಪ್ಪ , ಅಪ್ಪನ ಹೆಗಲು ಮುಟ್ಟಿ ಕೈ ಮುಗಿದಿದ್ದರು. ಅಪ್ಪನಿಗೆ ಅದು ಸಮಾಧಾನದ ಸಂಗತಿ ಆಗಿರಲಿಲ್ಲ. ” ನಾನು ಕುಬೇರನ ಹೇಳಿ” ಅಂದ ಅಪ್ಪನ ಮಾತು ಅವರನ್ನು ತಲುಪಲೇ ಇಲ್ಲ. ನಮ್ಮಣ್ಣಂದಿರು ಅಕ್ಕಂದಿರು ಮಾವಂದಿರು ಪರಿಪರಿಯಾಗಿ ಕೇಳಿದರು ಕರಿಯನ ಹೆಂಡತಿಗೆ ಅಳುವುದು ಬಿಟ್ಟು ಬೇರೇನೂ ಗೊತ್ತಿಲ್ಲದಂತೆ ಕಂಡಳು.

ಕರಿಯ ಸತ್ತು ತಿಂಗಳಾಗುತ್ತ ಬಂತು. ಈಗ ಅದೇ ಯೋಚನೆ. ಅಪ್ಪ ಹಸುಗಳನು ಬಿಚ್ಚಿ ಗಾಡಿಗೆ ಕಟ್ಟಿದ. ಒಳಗೆ ಕುಂತ ಅವ್ವನ ಕಣ್ಣಲ್ಲಿ ನೀರಿತ್ತು.

ಅವತ್ತು ಸಂಜೆಯ ಹೊತ್ತಲ್ಲಿ ಹೆಂಡತಿ ಮಕ್ಕಳೊಡನೆ ಬಂದ ಕರಿಯ ” ಕಷ್ಟ ಅದ ಈಗ ನೀವು ದೊಡ್ಡ ಮನ್ಸು ಮಾಡ್ಬೇಕು” ಅಂದ. ಅಪ್ಪ ಕರಿಯನನ್ನು ದಿಟ್ಟಿಸಿ ನೋಡಿದ. ಮನೆಯೊಳಗೆ ಅಕ್ಕ ಅಣ್ಣ ಮಾವ ದುಮುಗುಡುತ್ತಿದ್ದರು. ಅಪ್ಪನನ್ನ ಒಳ ಕರೆದು
“ಪತ್ರಗಿತ್ರಗ ಹೆಬ್ಬೆಟ್ಟು ಗಿಬ್ಬೆಟ್ಟು ಒತ್ದರಿ ಉಸಾರು..” ಎಂದಾಗ ಅಪ್ಪ ಏನೂ ಮಾತಾಡಲಿಲ್ಲ. ನಮ್ಮಪ್ಪನ ಅವ್ವ ಅಡಿ ನಿಂಗಮ್ಮ ಕರಿಯನಿಗೆ ಸೋದರಳಿಯನ ಸಂಬಂಧ. ದೂರದ ನೆಂಟು. ಆ ನೆಂಟು ಅಪ್ಪನೊಂದಿಗೆ ಗಂಟು ಬಿಡಿಸಲಾರದಷ್ಟಿತ್ತು. ಸಾಲಕ್ಕೆ ಋಜು ಹಾಕುವುದಕ್ಕೆ ಅಪ್ಪನಿಗೆ ಗೊಂದಲವಿತ್ತು. ಅವ್ವನ ಹೆಸರಲ್ಲಿ ಹೊಲದ ಪಟ್ಟವಿತ್ತು.ಅವಳು ಸಾಕ್ಷಿಗೆ ಋಜು ಮಾಡಿದರೆ ಕರಿಯನಿಗೆ ಸೊಸೈಟಿಯವರು ಕುರಿಲೋನು ಸಾಂಕ್ಷನ್ ಮಾಡುವ ಖಾತರಿ ಇತ್ತು. ಅಪ್ಪ ಕರಿಯನ ಮಕ್ಕಳನ್ನು ನೋಡಿದ. ಕರಿಯನಿಗೆ ಈಗಾಗಲೇ ಕೈಸಾಲವೂ ಇತ್ತು. ತಂದದ್ದು ಬಡ್ಡಿಗೆ ಸಾಲುತ್ತಿರಲಿಲ್ಲ. ಈ ಕುರಿ ಲೋನಾದರು ಆದರೆ ಅದಾದರು ಅವನಿಗೆ ನೆರವಾಗಲಿ ಅಂತ ಅಂದುಕೊಂಡಿದ್ದ. ಪಟ್ಟದ ಮೇಲೆ ಸಾಲ. ಆ ಸಾಕ್ಷಿ ಇಲ್ಲದಿದ್ದರೆ ಇಲ್ಲ. ನಮ್ಮೂರಲ್ಲಿ ಅವ್ವನ ಹೆಸರಲ್ಲಿ ಬಿಟ್ಟರೆ ಬೇರೆ ಯಾರಿಗೂ ಜಮೀನಿಗೆ ಪಟ್ಟ ಇರಲಿಲ್ಲ. ಅಪ್ಪ ದಿನಾ ಬೆಳಿಗ್ಗೆ ರಾತ್ರಿ ಇದೇ ಯೋಚಿಸುವುದೇ ಆಯ್ತು. ಹೀಗೆ ಒಂದು ರಾತ್ರಿ ನಾನು ಅಪ್ಪನನ್ನು ತಬ್ಬಿಕೊಂಡು ಮಲಗಿರುವಾಗ ಮಗ್ಗುಲಿಗೆ ಹೊರಳಿ ಅವ್ವನನ್ನು ತಿವಿದು ಎಬ್ಬಿಸಿದ. ಅವ್ವ ಅಪ್ಪನ ತಿವಿತಕ್ಕೆ ಮೇಲೆದ್ದು ಕುಂತಳು. ” ಸಾಲ ಪತ್ರಕ್ಕೆ ಋಜು ಮಾಡು ಆಮೇಲ ಏನಾರ ಆಗ್ಲಿ. ಅವ್ನೂ ಕಾಸು ಕರಿಮಣಿ ಮಡಿಕಂಡು ಹೆಂಗ್ಯಾ ಮಾಡ್ಕ ಹೋಗ್ಲಿ” ಅಂದ. ಅವ್ವ “ಆಯ್ತು ಮನಿಕ ಬೆಳಕರಿಲಿ” ಅಂದಳು.

ಅಪ್ಪ ಗಾಡಿಯ ನೊಗಕೆ ಹಸು ಕಟ್ಟುವುದನ್ನೆ ನೋಡುತ್ತ ನಿಂತೆ. ಅವನು ಹಸುವಿನ ಹೆಗಲಿಗೆ ನೊಗ ಏರಿಸಿದ್ದೇ ತಡ ತುಂಟ ಹಸು ಸೆಣಸಾಡ ತೊಡಗಿತು. ಹೋದ ಸೋಮವಾರ ಸಂತೇಲಿ ತಂದ ಹೊಸ ಹಸು. ಉಳುವುದನ್ನು ಬಿಟ್ಟು ಗಾಡಿ ನೊಗಕ್ಕೆ ಒಗ್ಗಿದಂತೆ ಕಾಣಲಿಲ್ಲ. ಹಾಗಂತ ಅಪ್ಪ ಅದನ್ನು ಒಗ್ಗಿಸುವ ತನಕ ಬಿಡದ ಕಸುಬುದಾರ. ಅದು ಎಷ್ಟೇ ಸೆಣಸಾಡಿದರು ಮೂಗುದಾರ ಗಟ್ಟಿಯಾಗಿ ಹಿಡಿದು ಮುಂದಿನ ನೊಗದ ಕೆಳಗಿಂದ ಒಳನುಗ್ಗಿ ಮೂಕಿಯ ಮೇಲೆ ಕೈ ಅದುಮಿ ಮೇಲಕ್ಕೆ ಚಂಗನೆ ನೆಗೆದು ಕುಂತ. ಅಪ್ಪ ಮೂಕಿಯ ಮೇಲೆ ಕುಂತ ರಭಸಕ್ಕೆ ಹಸುಗಳು ಗಾಡಿ ಎಳೆದು ದಡದಡನೆ ಓಡ ತೊಡಗಿದವು. ಇತ್ತ ಅವ್ವ ತನ್ನ ಪಾಡಿಗೆ ತಾನು ಕುಂತು ಸೂರು ನೋಡುತ್ತಿದ್ದಳು. ಸೂರಿನಲ್ಲಿ ಏನಿರಬಹುದೆಂದು ನಾನೂ ಆಂತು ನೋಡಿ ಅವ್ವನನ್ನು ಮಾತಾಡಿಸಲು ಹೋದೆ. ಅವಳು ದಿಗಿಲುಗೊಂಡವಳಂತೆ ಒಂದೇ ಸಮ‌ ದಿಟ್ಟಿಸುತ್ತಿದ್ದಳು.

ಅವತ್ತು ಕುರಿ ಲೋನು ಸಾಂಕ್ಷನ್ ಆದ ದಿನ. ಕತ್ತಲಾದ ಹೊತ್ತಲ್ಲಿ ಕರಿಯನೂ ಕರಿಯನ ಹೆಂಡತಿಯೂ ನಗುನಗುತಾ ಬಂದು ಹೊರ ಜಗುಲಿಯ ಮೇಲೆ ಕುಂತ ಅಪ್ಪನ ಕೈಗೆ ಒಂದು ಬಿಳಿ ಬಾಟ್ಳು ಹೆಂಡ, ಒಂದು ಚಿಕ್ಕೆಲೆ ಇಸ್ತ್ರಿಲಿ ಮುದುರಿ ತಂದ ಹುರಿದ ಮೊಟ್ಟೆ, ಇನ್ನೊಂದು ಎರಡೆಲೆ ಇಸ್ತ್ರಿಲಿ ಚಾಕ್ಣ ಸುತ್ತಿ ಕೊಟ್ಟರು. ನಾನು ಹುರಿದ ಮೊಟ್ಟೆಯ ಗಮಲು ತಾಳದೆ ಅದಕ್ಕೆ ಕೈ ಹಾಕಿದೆ. ಅವ್ವ ನನಗೆ ಗುದ್ದಲು ಬಂದಳು. ಅವಳ ಗುದ್ದನ್ನು ತಪ್ಪಿಸಿಕೊಂಡು ಬಿಡದೆ ಎತ್ತಿಕೊಂಡು ಬಾಯಿಗೆ ಹಾಕಿ ಚಪ್ಪರಿಸಿದೆ. ಅಪ್ಪ ಕರಿಯನನ್ನು ನೋಡುತ್ತ “ಹೆ ಇದೆಲ್ಲ ಯಾಕ್ ತರಕೋದ” ಅಂದ. ಕರಿಯನ ಹೆಂಡತಿ ” ಮಾವಯ್ಯ ಸರಿ ಬುಡು ನೀನನ್ನ ಮಾತು. ನಿನ್ಗಲ್ದೆ ಇನ್ಯಾರಿಗೆ ಕೊಡದು” ಅಂದಳು. ಆಗ ಅಪ್ಪನ ಮುಖ ಅರಳಿತ್ತು.

ಅವ್ವ ಕರಿಯನ ಕುರಿ ಲೋನಿನ ಪತ್ರಕ್ಕೆ ಹೆಬ್ಬೆಟ್ಟು ಒತ್ತಿದ್ದು ಯಾರಿಗೂ ಗೊತ್ತಿಲ್ಲ. ಅವ್ವನ ಹೆಸರು, ಹೊಲದ ಅಳತೆ, ಪಟ್ಟದ ನಂಬರು ಅವ್ವನ ಹೆಬ್ಬೆಟಿನ ಋಜುವಿನ ಅಕ್ಕ ಪಕ್ಕ ಬರೆದಾಗಿತ್ತು. ಶ್ಯಾನುಭೋಗರು ” ಅವ್ರತ್ರ ಲೋನ್ ಕಟ್ಸ ಕೆಲ್ಸ ನಿಮ್ದು” ಅಂತ ತಾಕೀತು ಮಾಡಿದ. ಹಾಗೆ ಹೇಳುವಾಗ ಸೊಸೈಟಿಯ ಮತ್ತಿಬ್ಬರು ಇದ್ದರು. ಅಪ್ಪ ಅವರಲ್ಲೊಬ್ಬನನ್ನು ಜುಟ್ನವ, ಮೂರ್ನಾಮೆವಾ ಅಂತ ಕರಿತಿದ್ದ. ಆ ಜುಟ್ನವ ನನ್ನನ್ನ ಹತ್ತಿರಕ್ಕೆ ಕರೆದು ಬಾಳೆಹಣ್ಣು ಕೊಟ್ಟ. ನಾನು ಅಪ್ಪನ ಅಂಗಿ ಹಿಡಿದು ಬಾಳೆಹಣ್ಣು ಸಿಪ್ಪೆ ಕಿತ್ತು ಬಿಸಾಕಿ ಹಣ್ಣನ್ನು ತಿನ್ನ ತೊಡಗಿದೆ. ಹೆಬ್ಬೆಟ್ಡು ಒತ್ತಿದ್ದ ಅವ್ವ ಅದಾಗಲೇ ಭಗವಾನ್ ಟಾಕೀಸ್ ಕಾಂಪೋಂಡಿನ ಮೂಲೇಲಿ ಕುಂತಿದ್ದಳು. ಅವ್ವಳೊಂದಿಗೆ ಕರಿಯನ ಹೆಂಡತಿಯೂ ಕುಂತಿದ್ದಳು. ಆಗ ಆ ಜಾಗಕ್ಕೆ ಸೊಸೈಟಿಯ ಇನ್ನೊಬ್ಬ ಜಯರಾಮೇಗೌಡ ಕರಿಯನ ಹೆಂಡತಿ ಹತ್ತಿರ ಹೋಗಿ ಮಾತಾಡುತ್ತ ನಿಂತ. ಅವ್ವ ಸರ್ರನೆ ಮೇಲೆದ್ದು ಅಲ್ಲಿಂದ ಕಾಲ್ಕಿತ್ತು ನಾನು ಅಪ್ಪ ನಿಂತ ಜಾಗಕ್ಕೆ ಬಂದಳು. ಕರಿಯನ ಹೆಂಡತಿ ಮುಖ ಅರಳಿಸಿ ಮಾತಾಡುತ್ತಿದ್ದಳು. ಕರಿಯ ಸೊಸೈಟಿಯ ಒಳಗಿಂದ ಬಂದು ಅಪ್ಪನ ಕೈ ಹಿಡಿದ. ಎಲ್ಲವೂ ಸುಸೂತ್ರವಾಗಿ ಜರುಗಿದ ಮೇಲೆ ಅಲ್ಲಿಂದ ಕಾಲ್ದೆಗೆದಿದ್ದೆವು.

ನನಗೀಗ ಹುರಿದ ಮೊಟ್ಟೆಯ ಮೇಲೆ ರುಚಿ ಹತ್ತಿತು. ಅಪ್ಪ ಬಾಟ್ಳು ಹೆಂಡವನ್ನು ಮೇಲೆತ್ತಿ ಗಟಗಟನೆ ಅರ್ಧ ಕುಡಿದು ಅವ್ವನ ಮುಂದೆ ಇಟ್ಟು ಚಾಕ್ಣಕ್ಕೆ ಕೈ ಹಾಕಿ ಒಂದು ಪೀಸು ಎತ್ತಿ ಬಾಯಿಗಿಟ್ಡುಕೊಂಡು ಚಪ್ಪರಿಸಿದ. ನಾನು ಅಪ್ಪನ ನಂತರ ಚಾಕ್ಣಕ್ಕೆ ಕೈ ಹಾಕಿ ಚಿಕ್ಕದೊಂದು ಚಾಕ್ಣದ ಪೀಸು ಎತ್ತಿ ಬಾಯಿಗಿಟ್ಟುಕೊಂಡು ಅಗಿದು ರಸ ಹೀರ ತೊಡಗಿದೆ. ಅವ್ವ ಉಳಿದ ಅರ್ಧ ಬಾಟ್ಳ ಹೆಂಡವನ್ನು ಮೇಲೆತ್ತಿ ಗುಳುಕ್ ಗುಳುಕ್ಕನೆ ಒಂದೆರಡು ಗುಟುಕು ಹೀರಿದಳು. ಅಪ್ಪ ಅವ್ವನಿಗೊಂದು ಚಾಕ್ಣದ ಪೀಸು ಎತ್ತಿಕೊಟ್ಟ. ಅಷ್ಟೊತ್ತಿಗೆ ಮೇಲೆ ಚಂದ್ರ ಮೂಡುತ್ತ ಮಂದಹಾಸ ಬೀರುತ್ತ ಬೆಳಕು ಬೀರಿದ ಹೊತ್ತಲ್ಲಿ ಕರಿಯನೂ ಅವನ ಹೆಂಡತಿಯೂ ಎದ್ದು ಹೋದ ಗಳಿಗೆ ಚೆಂದವಾಗಿತ್ತು.

ಅಪ್ಪ ಮಣ್ಣು ಮರಳು ಹೂಡಿ ಗಾಡಿ ಹೊಡೆದು ಬಂದಾಗ ಮದ್ಯಾಹ್ನದ ಸುಡುಸುಡು ಬಿಸಿಲು. ಸೆಣಸಾಡುತ್ತಿದ್ದ ಹಸು ಒಂದು ಹದಕ್ಕೆ ಬಂದ ಹಾಗಿತ್ತು. ಆ ಹಸು ನೊಗ ಕೆಳಗಿಳಿಸಿದಂತೆ ಒದರಿ ಮಾರು ದೂರ ಹೋಗಿ ನಿಂತಿತು. ಇನ್ನೊಂದು ಹಸು ಅದರ ಸೆಣಸಾಟವನ್ನು ನೋಡಿ ನೊಗ ಬಿಚ್ಚಿದ್ದೇ ತಡ ಅದರ ಹತ್ತಿರ ಹೋಗಿ ಒತ್ತರಿಸಿ ನಿಂತು ಮೈ ನೆಕ್ಕುವಾಗ ಅದೂ ಇದರ ಮೈ ನೆಕ್ಕಲು ಶುರು ಮಾಡಿತು. ಅಪ್ಪ ದೇವಸ್ಥಾನದ ಮೂಲೆಯಲ್ಲಿದ್ದ ಬೋರಿಂಗಿನಲ್ಲಿ ನೀರು ತಂದು ಬಕೀಟು ಇಟ್ಟ. ಎರಡೂ ಹಸುಗಳು ಒಂದೇ ಬಕೀಟಿಗೆ ಮುಸುಡಿ ಎಟ್ಟಿ ನಿಂತವು. ಆಗ ಅಪ್ಪ ಎರಡೂ ಹಸುಗಳಿಗೆ ಒಂದೊಂದು ಬಕೀಟು ಇಟ್ಟು ನೀರು ತುಂಬಿದ. ಆ ಸುಡುವ ಬಿಸಿಲಿಗೆ ಹಸುಗಳು ನೀರನ್ನು ಸೊರಸೊರನೆ‌ ಹೀರ ತೊಡಗಿದವು. ಅವನ್ನು ಎಳೆದು ತಂದು ಗೂಟಕ್ಕೆ ಕಟ್ಡಿ ಹುಲ್ಲು ತಂದಾಕಿದ. ಅವು ನೊಸನೊಸನೆ ಮೇಯಲು ಶುರು ಮಾಡಿದವು. ಅಲ್ಲಿ ನಡು ಮನೆಯಲ್ಲಿ ಅವ್ವ ಮಲಗಿದ್ದಳು. ಅಪ್ಪ ಬಂದವನು ಟವೆಲ್ ನಿಂದ ಧೂಳು ಬಡಿದು ಗೋಡೆ ಒರಗಿ ಕುಂತನು. ಅವ್ವ ಅಪ್ಪನ ಕಂಡು ಮೇಲೆದ್ದು ಕಂಚಿನ ತಟ್ಟೆ ಇಟ್ಟು ರಾತ್ರಿಯ ತಂಗಳನ್ನೆ ಹಾಕಿ ನೀರೂದು ಉಪ್ಪಾಕಿ ಕೈಗೊಂದು ಈರುಳ್ಳಿ ಉಂಡೆ ಕೊಟ್ಟಳು. ಅಪ್ಪ ರಾತ್ರಿಯ ತಂಗಳನ್ನು ಕಲಸಿ ತಟ್ಟೆ ಮೇಲೆತ್ತಿ ಸೊರಸೊರನೆ ಕುಡಿದು ಈರುಳ್ಳಿ ಕಡಿದು ತಿಂದು ಕೈ ತೊಳೆದು ಶ್ಯಾನುಭೋಗರು ಸಿಕ್ಕ ವಿಚಾರವನ್ನು ತಿಳಿಸಿದ. ಕುರಿ ಲೋನು ಆಗಿ ಎರಡು ವರ್ಷಗಳೇ ಆಗಿವೆ. ಅಲ್ಲಿಂದ ಇಲ್ಲಿತಂಕ ಒಂದೂ ಕಂತು ಕಟ್ಟಿಲ್ಲಿದ ಸತ್ತ ಕರಿಯನ ಪ್ರಸ್ತಾಪ ಮಾಡಿದ ಶ್ಯಾನುಭೋಗರು ಅಪ್ಪನಿಗೆ ಜಬರ್ದಸ್ತಾಗಿ ತಾಕೀತು ಮಾಡಿದ್ದು ಅವ್ವನ ಮುಂದೆ ಬಿತ್ತರವಾಯ್ತು.

ತಿಥಿಯ ದಿನ ರಾತ್ರಿ ಕರಿಯನ ಬಾಮೈದ ಅಪ್ಪನ ಎದುರು ಸೊಕ್ಕಿನ ಮಾತಾಡಿದ್ದ. ಅವನ ಅವ್ವ ಅಪ್ಪನೂ ಏನೇನೋ ಮಾತಾಡಿದ್ದರು. ಅವತ್ತು ಅಪ್ಪನಿಗೆ ಮುಖವಿಲ್ಲದೆ ತಿಥಿ ಅನ್ನವನ್ನೂ ತಿನ್ನದೆ ಬಂದು ಜಗುಲಿಯ ಮೇಲೆ ಕುಂತಿದ್ದ. ಅವ್ವ ಋಜು ಮಾಡಿದ ವಿಚಾರಕ್ಕೆ ಮನೆಯಲ್ಲಿ ಎಲ್ಲರೂ ತಲೆಗೊಂದೊಂದು ಮಾತು ಆಡುತ್ತಿದ್ದರು. ತಿಥಿ ಆದ ಮೂರು ದಿನಕ್ಕೆ ಕರಿಯನ ಹೆಂಡತಿ ಬಂದಳು. ಬಂದವಳು ಸುಮ್ನನಿರದೆ ಅಪ್ಪನ ಮುಂದೆ ಗಳಗಳನೆ ಅಳ ತೊಡಗಿದಾಗ ಅಕ್ಕಪಕ್ಕದವರು ಸೇರಿದರು. ಅಪ್ಪ ಅವಳನ್ನು ರೇಗಿ ಕಳಿಸಿದ. ಮಾರನೇ ದಿನ ಸಂಜೆಯ ಕತ್ತಲು. ಅಪ್ಪ ಅಂಗಡಿ ಬೀದಿಗೆ ಹೋಗಿ ಮರಳು ಮಣ್ಣು ಹೂಡಿದ ದುಡ್ಡಿಗಾಗಿ ಕಾದು ದವಸ ತಂದು ಅವ್ವನ ಮುಂದೆ ಇಟ್ಟ. ಅವ್ವ ಮೊರಕ್ಕೆ ರಾಗಿ ಸುರಿದು ಹೊನೆದು ಬೀಸುವ ಕಲ್ಲಿಗೆ ಹಾಕಿ ಬೀಸ ತೊಡಗಿದಳು. ನಾನು ನನ್ನ ಚಿಕ್ಕ ಕೈಗಳಿಂದ ಬೀಸುವ ಕಲ್ಲಿಗೆ ಒಂದೊಂದೆ ಸೆರ ಒಂದೊಂದೆ ಸೆರ ರಾಗಿ ಎತ್ತಿ ಎತ್ತಿ ಹಾಕುತ್ತಿದ್ದೆ. ಕರಿಯನ ಹೆಂಡತಿ ಚಿನ್ನದ ಅಂಗಡಿ ಹತ್ತಿರ ಜಯರಾಮೇಗೌಡನ ಜೊತೆ ಮಾತಾಡುತ್ತ ನಿಂತಿದ್ದ ವಿಚಾರವನ್ನು ಬಿತ್ತರ ಮಾಡಿದ. ಹಾಗೆ ಬಿತ್ತರವಾದ ವಿಚಾರ ಅವ್ವನ ಕಿವಿಗೆ ಬಿದ್ದು ಒಂದರೆ ಗಳಿಗೆ ರಾಗಿ ಬೀಸುವುದ ನಿಲ್ಲಿಸಿ ಅಪ್ಪನನ್ನೆ ನೋಡುತ್ತ ಮತ್ತೆ ರಾಗಿ ಬೀಸುವುದನ್ನು ಮುಂದುವರಿಸಿದಳು. ಈಗ ಅವ್ವನ ಮುಖ ಕೆಂಪೇರಿದಂತೆ ಕಂಡಿತು. ಕುರಿ ಲೋನಿಗು ಮುನ್ನ ಸೋಬಾನದವರು ಆಡಿದ ಮಾತು ಅವ್ವನ ಎದೆಯಲ್ಲಿ ಉಳಿದು ಅದು ಅಪ್ಪನೊಂದಿಗೆ ಬಿತ್ತರಗೊಂಡಿತ್ತು. ಅಪ್ಪ ಅವ್ವನ ಮಾತನ್ನು ತೂರಿ ಬಿಟ್ಟಿದ್ದ. ಅದು ಅವ್ವನಿಗೂ ಬೇಕಿರಲಿಲ್ಲ ಅಪ್ಪನಿಗೂ ಬೇಕಿರಲಿಲ್ಲ.

ಸೆಣಸಾಡುತ್ತಿದ್ದ ಹಸು ಜೋರು ದನಿಯಲ್ಲಿ ಸದ್ದು ಮಾಡಿತು‌. ನೆಲಕ್ಕೆ ಕಾಲುಗಳನ್ನು ಎಳೆದು ಗೀಚುತ್ತ ಅದರ ಲಾಳದ ಸದ್ದು ಅಪ್ಪನನ್ನು ಬಡಿದೆಬ್ಬಿಸಿತ್ತು. ಅಪ್ಪ ಹೊರಗೆ ಬಂದು ನೋಡಿದ . ಅದು ಮೊಸಗರಿಯುತ್ತ ಕೆಕ್ಕರಿಸಿ ನೋಡುತ್ತಿತ್ತು.

ಸೊಸೈಟಿ ಗುರುತಿನ ಓಲೆ ಹಾಕಿದ ಆರು ಕುರಿಗಳು ಕರಿಯನ ಮನೆ ಸೇರಿ ಆ ಮನೆಯೊಳಗೆ ಒಂದು ತಡಿ ಕಟ್ಟಿ ಕುರಿಗಳನ್ನು ಕೂಡಿಲಾಯ್ತು. ಅಪ್ಪ ಅವ್ವ ನೋಡಿಕೊಂಡು ಬಂದರು. ಆ ಆರು ಕುರಿಯೊಂದಿಗೆ ಕೈಗಿಷ್ಟು ದುಡ್ಡೂ ಬಂದಿತ್ತು. ಇವೆ ಮುಂದೆ ಮರಿ ಹಾಕ್ತ ಹಾಕ್ತ ಆರಿಗೆ ಆರುನೂರಾದರು ಆಗಬಹುದೆಂದು ಅಂದಾಜಿಸಿದ ಕರಿಯನೂ ಕರಿಯನ ಹೆಂಡತಿಯೂ ಒಂದಿನ ಕರಿಯ ಒಂದಿನ ಅವನ ಹೆಂಡತಿ ಸರದಿಯಲ್ಲಿ ಕುರಿ ಮೇಯಿಸಲು ಸ್ಮಶಾನದ ಮಾಳಕೆ ಹೋಗುತ್ಯಿದ್ದರು. ಅಲ್ಲೆ ಮಿಳ್ಳಸಿದ್ದನೂ ಮಿಳಿ ಹೆಣೆಯುತ್ತ ಕುರಿ ಮೇಯಲು ಬಿಟ್ಡು ಕುಂತಿರುತ್ತಿದ್ದ. ಮಿಳ್ಳಸಿದ್ದನೊಂದಿಗೆ ಮಾತಾಡುತ್ತ ಅವನ ಆಸೆಯನ್ನು ಕೇಳುತ್ತ ಕರಿಯನು ಕರಿಯನ ಹೆಂಡತಿಯೂ ಸಂಜೆ ತುಂಬಿಸಿ ಮನೆಗೆ ಬರುವುದೇ ಒಂದು ಚೆಂದವಾಗಿತ್ತು. ಆದರೆ ಆ ಆರು ಕುರಿಗಳು ಮನೆ ಸೇರಿ ಆರು ತಿಂಗಳು ಕಳೆಯುವುದರಲ್ಲೆ ಒಂದೆರಡು ಕುರಿ ಕಳುವಾಗಿದ್ದವು. ಅದರಲ್ಲಿ ಮಿಳ್ಳಸಿದ್ದನದೂ ಸೇರಿತ್ತು. ಮಿಳ್ಳಸಿದ್ದ ತನ್ನ ಸೊಸೆ ನಾಗಿಯಿಂದ ಉಗಿಸಿಕೊಂಡದ್ದು ಇದೆ. ಇತ್ತ ಕರಿಯನ ಇನ್ನೆರಡು ಕುರಿ ರೋಗ ಬಂದು ಸತ್ತು ಹೋದವು. ಉಳಿದ ಎರಡಾದರು ಬೇರೆ ರೂಪದಲ್ಲಿ ಉಳಿಸಿಕೊಳಲು ಅವನ್ನು ಸಂತೆಯಲ್ಲಿ ಮಾರಿ ದುಡ್ಡು ತಂದು ಟ್ರಂಕಿನಲ್ಲಿ ಇಟ್ಟಾಯ್ತು. ಇಟ್ಟ ದುಡ್ಡು ನಿಲ್ಲದೆ ಬರಿದಾದ್ದು ಊರಿಗೇ ಗೊತ್ತಿದೆ ಏನು. ಅಪ್ಪನ ಸೋದರ ಮಾವ ಕುಳ್ಳದಾಸಯ್ಯ “ನೀನಾಗ್ ನೀನೇ ತಲ ಮೇಲ ಕಲ್ಚೆಪ್ಡಿ ಎಳಕೊಂಡ” ಅಂದ. ಬರಬರುತ್ತ ಕರಿಯ ರಾತ್ರಿಗೆ ಮನೆಗೆ ಬರುವುದು ರೂಢಿಯಾಯ್ತು. ಬಂದವನು ಹಾಗೆ ಬರುತ್ತಿರಲಿಲ್ಲ ಕುಡಿದು ಚಿತ್ತಾಗಿ ಬರುತ್ತಿದ್ದ. ಜಯರಾಮೇಗೌಡರು ಕರಿಯನ ಹೆಂಡತಿ ಜೊತೆ ಜಗುಲಿಯ ಮೇಲೆ ಕುಂತು ಲೋನು ಕಟ್ಟದ ಕಂತಿನ ವಿಚಾರ ಮಾತಾಡುವುದು ಸಾಮಾನ್ಯವಾಗಿತ್ತು. ಕುರಿಗಳು ಕಳುವಾಗಿದ್ದು ರೋಗದಿಂದ ಸತ್ತದ್ದು ಅವಳು ಅವರ ಮುಂದೆ ಗಳಗಳನೆ ಅತ್ತದ್ದು ಬೀದಿ ಜನ ನೋಡದೆ ಇರುತ್ತಿರಲಿಲ್ಲ. ಹಾಗೆ ಜಯರಾಮೇಗೌಡರು ಕರಿಯನ ಹೆಂಡತಿಯ ತಲೆ ಸವರಿ ಸಮಾಧಾನ ಮಾಡುತ್ತಿದ್ದ. ಅದಾದ ತಿಂಗಳಿಗೆ ಬ್ರಾಂದಿ ಅಂಗಡಿ ಹಿಂದೆ ಉಚ್ಚೆ ಉಯ್ಯುವ ಜಾಗದಲ್ಲಿ ಕರಿಯ ಏದುಸಿರು ಬಿಡುತ್ತ ಸತ್ತ ಸುದ್ದಿ ಊರ ಅಂಗಳಕೆ ಬಂದು ಅಂಗಾತ ಬಿದ್ದಾಗ ಅಪ್ಪ ದಿಕೆಟ್ಟವನಂತೆ ಒಂದೇ ಉಸಿರಿಗೆ ಬ್ರಾಂದಿ ಅಂಗಡಿ ಕಡೆ ಓಡ ತೊಡಗಿದ. ಅವ್ವ ತಲೆ ಬಾಗಿಲಲ್ಲಿ ನಿಂತು ಗಾಬರಿಗೊಂಡಿದ್ದಳು.

ಕಾಲುವೆಗೆ ನೀರು ಬಂದಿದೆ. ಹಳೇ ಗದ್ದೆ ನಾಟಿ ಮಾಡಬೇಕು. ನೀರಾವರಿ ಜಮೀನು ಅಂದರೆ ಅದಷ್ಟೆ. ಎರಡೇ ಪಾತಿ. ಹೊಟ್ಲು ಮಾಡಕೆ ಭತ್ತ ಹೊತ್ತ ಅಪ್ಪ ಅವನ ಹಿಂದೆ ಅವ್ವ ಅವರ ಹಿಂದೆ ನಾನು ಹೆಗಲಿಗೆ ಎಲಕೋಟು ಹಾಕಿ ಬಿರಬಿರನೆ ನಡೆಯುತ್ತಿದ್ದೆವು. ಕಾಲುವೆ ತುಂಬಿ ಹರಿಯುತ್ತಿತ್ತು. ಏರಿ ಮೇಲೆ ಕುರುಬರ ಮಾದೇವಪ್ಪನ ತೋಟದ ತೆಂಗಿನ ಮರದ ಸಾಲಿತ್ತು. ಆ ಸಾಲಿಗುಂಟ ಹೋಗುವಾಗ ತುಂತುರು ಹನಿ ಬೀಳುತ್ತ ಅವ್ವ ತನ್ನ ಸೆರಗನ್ನು ತಲೆ ಮೇಲೆ ಎಳೆದುಕೊಂಡು ನಡೆದರೆ ಅವಳಿಂದೆ ನಾನು ಬಿರಬಿರನೆ ಓಡ ತೊಡಗಿದೆ.

ಕರಿಯ ಸತ್ತು ಇವತ್ತಿಗೆ ಆರೇಳು ತಿಂಗಳಾಗಿತ್ತು. ಇತ್ತ ಕರಿಯನ ಹೆಂಡತಿಯ ಸುಳಿವಿರಲಿಲ್ಲ. ಈಗವಳು ಎಲ್ಲಿಗೆ ಹೋದಳು? ಅವನ ಹಿರಿ ಮಗ ಹೋಗಿ ಬಂದು ಮಾಡುತ್ತಿದ್ದ. ಈಗೀಗ ಅವನೂ ಬರುವುದ ನಿಲ್ಲಿಸಿದ್ದ. ಸೊಸೈಟಿ ಕಡೆಯಿಂದ ಜವಾನ ಬಂದು ಕರಿಯನ ಮನೆಯ ಬಾಗಿಲಿಗೆ ಒಂದು ಚೀಟಿ ಅಂಟಿಸಿ ಹೋದ. ಅದರಲ್ಲಿ ‘ನೀವು ಕುರಿ ಲೋನು ಪಡೆದು ಇದುವರೆಗೂ ಅಸಲು ಬಡ್ಡಿ ಜಮೆ ಮಾಡಿಲ್ಲ. ಕೂಡಲೆ ಸೊಸೈಟಿಗೆ ಬಂದು ಈ ಬಗ್ಗೆ ಸಮಜಾಯಿಸಿ ನೀಡುವುದು ಇಲ್ಲದಿದ್ದರೆ ಸೊಸೈಟಿ ನಿಯಮಾಳಿ ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದಿತ್ತು ಎಂಬುದನ್ನು ಓದಿದವರ ಬಾಯಿಂದ ಅವ್ವ ಅಪ್ಪನನ್ನು ಮುಟ್ಟಿತ್ತು. ಇದರಿಂದ ಖಿನ್ನನಾದ ಅಪ್ಪ ಒಕ್ಕಲಗೇರಿಗೆ ಹೋಗಿ ಜಯರಾಮೇಗೌಡರ ಮನೆ ಮುಂದೆ ನಿಂತಾಗ ಅವರು ಸೊಸೈಟಿಯ ಲೆಕ್ಕಪತ್ರ ತೆಗೆದುಕೊಂಡು ಬೆಂಗಳೂರಿಗೆ ಹೋಗಿ ವಾರವಾಯ್ತು ಎಂದರು. ಇದನ್ನು ಕೇಳಿ ಅಪ್ಪನ ದುಗುಡ ಮತ್ತಷ್ಟು ಹೆಚ್ಚಾಯ್ತು.

ಗದ್ದೆಯಿಂದ ಮನೆಗೆ ಬಂದಾಗ ಸೂರ್ಯ ಮುಳುಗಿದ್ದ . ಅದೇ ಹೊತ್ತಿಗೆ ಸೊಸೈಟಿಗೆ ಸಂಬಂಧ ಪಟ್ಟ ಜೀಪೊಂದು ಸದ್ದು ಮಾಡುತ್ತ ನಮ್ಮ ಮನೆಯ ಹತ್ತಿರ ಬಂದು ನಿಂತಿತು. ನಾನು ಅಪ್ಪನ ಅಂಗಿ ಹಿಡಿದು ನಿಂತು ನೋಡ ತೊಡಗಿದೆ. ಅವ್ವ ಅಕ್ಕ ಅಣ್ಣ ಮಾವ ಜಗುಲಿ ಮೇಲೆ ನಿಂತು ನೋಡುತ್ತಿದ್ದರು. ಜೀಪಿನಿಂದ ಜುಟ್ನವ ಇಳಿದ ಆಮೇಲೆ ಶ್ಯಾನುಭೋಗರು ಇಳದ ಮೇಲೆ ಇನ್ನಿಬ್ಬರು ಇಳಿದರು. ಅ ಜೀಪಿನ ಹಿಂದೆ ಸೈಕಲ್ ತುಳಿಯುತ್ತ ಪೊಲೀಸ್ ಒಬ್ಬ ಬಂದ. ನಮ್ಮ ಮನೆಯಿಂದ ಸೀದಾ ನಡೆದುಕೊಂಡು ಹಿಂದಿನ ಬೀದಿಯ ಕರಿಯನ ಮನೆಗೆ ನಡೆದರು. ನಾನು ಹಿತ್ತಲ ಸಂದಿಯಿಂದ ದಾಪುಗಾಲಾಕಿ ಓಡಿದೆ. ಕರಿಯನ ಮನೆಯ ಬೀಗವನ್ನು ಕಬ್ಬಿಣದ ಸುತ್ತಿಗೆಯಿಂದ ಬಡಿದು ಮುರಿದು ಒಳ ಹೋದರು. ಒಳಗಿದ್ದ ತಾಮ್ರ ಕಂಚಿನ ಪದಾರ್ಥಗಳನ್ನು ಎತ್ತಿಕೊಂಡು ಹೊರ ಬಂದರು. ಜನವೆಲ್ಲ ನೋಡುತ್ತ ನಿಂತಿದ್ದರೆ ಬಾಗಿಲು ಎಳೆದು ಅವರೆ ತಂದ ಬೀಗವನ್ನು ಹಾಕಿ ಬಟ್ಟೆ ಸುತ್ತಿ ಅರಗು ಮೆತ್ತಿ ಸೀಲ್ ಮಾಡಿ ಅದೇ ಬಾಗಿಲಿಗೆ ಒಂದು ಉದ್ದದ ಚೀಟಿ ಅಂಟಿಸಿದರು.ನಾನು ಮತ್ತೆ ಅಡ್ಡಾದಿಡ್ಡಿ ಓಡೋಡಿ ಬಂದು ಅಪ್ಪನಿಗೆ ಉಸುರಿದೆ. ಅಪ್ಪನಿಗು ನಡುಕ. ಅವ್ವನಿಗು ನಡುಕ. ಹೇಳುತ್ತಿದ್ದ ನನಗು ನಡುಕ. ಕರಿಯನ ಮನೆಯ ತಾಮ್ರ ಕಂಚಿನ ಸಾಮಾನುಗಳು ಸೊಸೈಟಿಯ ಜೀಪು ಏರಿದವು. ಜುಟ್ನವ ಮೂರ್ನಾಮೆವ ಶ್ಯಾನುಭೋಗರು ಅಪ್ಪ ಅವ್ವನ ಕಡೆ ತಿರುಗಿಯೂ ನೋಡದೆ ಜೀಪು ಏರಿ ಹೋದ ಪ್ರಸಂಗವು ನಡೆದು ಹೋಯ್ತು.

ಇದಾಗಿ ಎಷ್ಟೋ ದಿನಗಳಾದವು. ಕರಿಯನ ಹೆಂಡತಿಯ ಸುಳಿವಿರಲಿಲ್ಲ. ಸೊಸೈಟಿಯವರು ಚೀಟಿ ಅಂಟಿಸಿ ಬೀಗ ಹಾಕಿ ಸೀಲು ಮಾಡಿ ಮುಚ್ಚಿದ್ದ ಕರಿಯನ ಮನೆ ಮಳೆ ಗಾಳಿಗೆ ದಿಕ್ಕಾಪಾಲಾಗಿ ಮುರಿದುಕೊಂಡು ಬೀಳುವ ಹಾಗಿತ್ತು. ಅವತ್ತು ಅವ್ವ ಹೆಬ್ಬೆಟ್ಟು ಋಜು ಮಾಡಿದಾಗ ಆ ಹೆಬ್ಬೆಟ್ಟಿನ ಅಕ್ಕಪಕ್ಕ ಅವ್ವನ ಹೆಸರು, ಅವ್ವನ ಹೆಸರಿನ ಹೊಲದ ಪಟ್ಟದ ನಂಬರು, ಆ ಹೊಲದ ಅಳತೆಯನ್ನು ಇಂಚಿಂಚು ಬಿಡದೆ ದಾಖಲು ಮಾಡಿಕೊಳ್ಳಲಾಗಿತ್ತು.

-ಎಂ ಜವರಾಜ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x