ಜನ್ನತ್: ಅಶ್ಫಾಕ್ ಪೀರಜಾದೆ


ಶಬ್-ಏ-ಮೆಹರಾಜ !
ಮುಹ್ಮದ ಪೈಗಂಬರರನ್ನು ಸರ್ವಶ್ರೇಷ್ಠ ಅಲ್ಲಾಹ ತನ್ನ ಆಸ್ಥಾನಕ್ಕೆ ಸ್ವಾಗತಿಸಿ ಆದರಾತಿಥ್ಯ ನೀಡಿದ ಮಹತ್ವದ ರಾತ್ರಿ. . . ಅಲ್ಲಾಹ ಮತ್ತು ಪೈಗಂಬರರ ಈ ಅಪೂರ್ವ ಸಮ್ಮಿಲನದ ಸವಿನೆನಪಿಗಾಗಿ ಇಡೀ ಮುಸ್ಲಿಂ ಸಮುದಾಯದವರು ಆ ಇಡೀ ರಾತ್ರಿಯನ್ನು ಅಲ್ಲಾಹನ ನಾಮಸ್ಮರಣೆ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ. ವಿಶೇಷ ಪ್ರಾರ್ಥನೆ, ಪ್ರವಚನಗಳ ಮುಖಾಂತರ ತಮಗೂ ‘ಜನ್ನತ್’ ಅಂದರೆ ಸ್ವರ್ಗ ಲಭ್ಯವಾಗಲೆಂದು ಕೋರುತ್ತಾರೆ. ಸಾದೀಕ ಕೂಡ ಈ ಸಾಮೂಹಿಕ ಪ್ರಾರ್ಥನೆ, ಪ್ರವಚನಗಳಲ್ಲಿ ಭಾಗಿಯಾಗಲು ತನ್ನ ಮೊಹಲ್ಲಾದ ಮಸೀದಿಗೆ ತಲಪುತ್ತಾನೆ. ಇಶಾ ನಮಾಜಿನ ನಂತರ ವಿಶೇಷ ಆಹ್ವಾನಿತ ಧರ್ಮಪಂಡಿತ ಮೌಲಾನಾ ರಯೀಸ ಇವರಿಂದ ಬಯಾನ ಅಂದರೆ ಪ್ರವಚನದ ಆರಂಭ !

“ಬಿಸ್ಮಿಲ್ಲಾ ಇರ್ರಹಮಾ ನಿರ್ರಹೀಮ” ಎಂದು ದೇವರ ಹೆಸರಿನಲ್ಲಿ ಬಯಾನ ಆರಂಭಿಸಿದ ಅವರು ಶಬೇ ಮೆಹರಾಜನ ಮಹತ್ವವನ್ನು ವಿವರಿಸಲಾರಂಭಿಸಿದರು. ಈ ರಾತ್ರಿ ಖುದಾತಾಲಾ ಖುದ್ದಾಗಿ ತನ್ನ ಪ್ರಿಯ ಪ್ರವಾದಿಯನ್ನು ಸ್ವರ್ಗಕ್ಕೆ ಆಹ್ವಾನಿಸಿದ್ದರು. ಪೈಗಂಬರರು ಏಳೇಳು ಆಕಾಶಗಳನ್ನು ದಾಟಿ ಸ್ವರ್ಗದತ್ತ ಪಯಣಿಸುತ್ತಿದ್ದರೆ ದಾರಿಯುದ್ದಕ್ಕೂ ದೇವದೂತರು, ಫರೀಸ್ತೆಗಳು ಗೌರವದಿಂದ ಸಲಾಮ ಅರ್ಪಿಸುತ್ತಿದ್ದರು. ಸ್ವರ್ಗ ಸ್ವರ್ಗವೇ, ಆದರೂ ಅಂದು ವಿಶೇಷ ದೇವಕಳೆಯ ಮೂಲಕ ಇನ್ನಷ್ಟು ಕಂಗೊಳಿಸುತ್ತಿತ್ತು. ಏಕೆಂದರೆ ಅಲ್ಲಾಹುನಿಗೆ ಅತ್ಯಂತ ನಿಕಟ, ಪ್ರೀತಿಯ ಪ್ರವಾದಿಯ ಆಗಮನ ಎಲ್ಲ ಸ್ವರ್ಗವಾಸಿಗಳಲ್ಲಿಯೂ ಹರ್ಷ ಮೂಡಿಸಿತ್ತು. ಅವರನ್ನು ಕಾಣುವ ಕಾತರ ತುದಿಗಾಲಲ್ಲ ನಿಲ್ಲಿಸಿತ್ತು. “ಲಾ ಇಲಾಹ ಇಲ್ಲಲಾಹು. . ಮುಹಮದುರ್ರ ರಸೂಲಿಲ್ಲಾಹೀ. . ” ಸರ್ವಶ್ರೇಷ್ಠ ದೇವನೊಬ್ಬನೇ ಪ್ರಾರ್ಥನೆಗೆ ಯೋಗ್ಯನು ಮತ್ತು ಮುಹಮ್ಮದ ಪೈಗಂಬರರು ದೇವರಿಗೆ ಪ್ರಿಯ ಪ್ರವಾದಿ. . ಸಂದೇಶವಾಹಕರು. ಅದಕ್ಕಾಗಿ ರಂಜಾನ ಮಾಸದ ಪವಿತ್ರ ಶಬೇ ಕದ್ರನ ರಾತ್ರಿಗಳಲ್ಲಿ ಅಲ್ಲಾಹು ಪೈಗಂಬರರ ಹೃದಯದಲ್ಲಿ ಮತ್ತು ತನ್ಮೂಲಕ ಇಡೀ ಜಗತ್ತಿಗೆ ಪವಿತ್ರ ಕುರಾನವನ್ನು ಅರ್ಪಣೆ ಮಾಡಿದನು. ನಮ್ಮಂಥ ಸಾಮಾನ್ಯ ಮಾನವರು ಕೂಡ ಭಕ್ತಿಯಿಂದ ದೇವರ ಮನವೋಲಿಸುವ ಮೂಲಕ ಅವನ ಪ್ರೀತಿಗೆ ಪಾತ್ರರಾಗಬಹುದು ಅಷ್ಟೇಯಲ್ಲ ನಮ್ಮ ಧರ್ಮ ಮತ್ತು ಜೀವನ ಉತ್ತಮಗೊಳಿಸುವ ಮೂಲಕ ಸಾವಿನ ಬಳಿಕ ಸ್ವರ್ಗಕ್ಕೂ ಹೋಗಬಹುದು. ಆದರೆ. . ಆದರೆ. . ಕುಡಕರು, ಚಾಡಿಕೋರರು, ಬಡ್ಡಿತಿನ್ನುವರು. . . ಅದರಲ್ಲೇ ವಿಶೇಷವಾಗಿ ಇನ್ನೊಂದು ಅಕ್ಷ್ಯಮ್ಮೆ ಅಪರಾಧ ಎಸಗುವರು ಯಾವುದೇ ಕಾರಣಕ್ಕೂ ಜನ್ನತಿಯಾಗಲೂ ಸಾಧ್ಯವಿಲ್ಲ ಎಂದು ಹೇಳಿದಾಗ ಒಂದು ಕ್ಷಣ ಎಲ್ಲರಲ್ಲೂ ಆತಂಕ, ಕುತೂಹಲ ! ಮೌಲ್ವಿಗಳು ಮುಂದೆ ಯಾರ ಕುರಿತು ಹೇಳುತ್ತಾರೆ ಎಂದು ಕೇಳುವ ಕಾತರ !! ಒಂದು ಕ್ಷಣದ ಮೌನದ ನಂತರ ಅವರು ಹೇಳಿದರು-

“. . . ವಾಲಿದೇನ ಅಂದರೆ ತನ್ನ ತಂದೆ-ತಾಯಿಯನ್ನು ಬರೀ ಒಂದು ಸಾಸಿವೆ ಕಾಳಿನಷ್ಟಾದರು ಮನಸ್ಸು ನೋಯಿಸಿದವರಾಗಿದ್ದರೆ ಅವರು ಎಂದಿಗೂ ಸ್ವರ್ಗಕ್ಕೆ ಹೋಗಲಾರರು ಅವರಿಗೆ ನರಕದ ಬೆಂಕಿಯೇ ಗತಿ, ಅವರು ಜೀವನ ಪರ್ಯಂತ ನಮಾಜ, ರೋಜಾ, ಹಜ್, ಜಕಾತ ಎನೇ ಮಾಡಿದರೂ ಅದೆಲ್ಲ ವ್ಯರ್ಥ. . ” ಎನ್ನುವ ವಾಕ್ಯಗಳು ಕೇಳುತ್ತಿದ್ದಂತೆಯೇ ಸಾದೀಕನ ಹೃದಯದಲ್ಲಿ ಮೊದಲೇ ಸುಪ್ತವಾಗಿದ್ದ ಪಾಪ-ಪ್ರಜ್ಞೆ ಎಚ್ಚರಗೊಂಡು ಚೋಳಾಗಿ ಕುಟುಕಿದಂತೆ ಭಾಸವಾಗಿ ಅಸಾಧ್ಯ ನೋವು ತಡೆಯಲಾಗದೇ ಕಣ್ಣಂಚಿಗೆ ಬಂದು ಹನಿಗೂಡಿದವು. ಬಯಾನದಿಂದ ಕೇಳುಗರರ ಹೃದಯಗಳು ತುಂಬಿ ಬಂದಿದ್ದವು. ಎಲ್ಲರ ಆತ್ಮಗಳು ವಿಮರ್ಶೆಗೆ ತೊಡಗಿದ್ದವು. ಸಾದೀಕನ ಮನದಲ್ಲೂ ಮಂಥನ ನಡೆದೇ ಇತ್ತು. ತನ್ನ ಪತ್ನಿಯೂ ಈಗ ತುಂಬ ಗರ್ಭಿಣಿ, ಇಂದೋ ನಾಳೆಯೋ ಪ್ರಸವವಾಗಲಿದೆ. ತನಗೆ ಹುಟ್ಟುವ ಮಕ್ಕಳು ಕೂಡ ನಮ್ಮನ್ನು ಉಪೇಕ್ಷಿಸಿದರೆ?. ಒಳ್ಳೇ ಮಕ್ಕಳು ಹುಟ್ಟಬೇಕಾದರೂ ನಾವು ಪುಣ್ಯ ಮಾಡಿರಬೇಕು ಎಂದುಕೊಂಡು ದೇವರ ದಯದಿಂದ ಉತ್ತಮ ಸಂತಾನ ಜನಿಸಿದರೇ ಸಾಕು ಎಂದು ಮನದಲ್ಲೇ ಪ್ರಾರ್ಥಿಸಿದ. ಬಯಾನ ಹಾಗೇ ಮುಂದವರೆದಿತ್ತು-
“ನಮಾಜ-ರೋಜಾ ಯಾವುದನ್ನು ಮಾಡದ ಮನುಷ್ಯ ಸಹ ಹೆತ್ತವರ ಸೇವೆ ಮಾಡುವ ಮೂಲಕ ಅವರ ಹೃದಯಗಳನ್ನು ತಣ್ಣಗಿಟ್ಟು ಅವರ ಆಶೀರ್ವಾದ ಪಡೆಯುವ ಮೂಲಕ ಜನ್ನತಿಯಾಗಬಹುದು. . . ”ಎಂದು ಹೇಳಿ ಅದಕ್ಕನುಸಾರವಾಗಿ ಒಂದು ಕಥೆಯನ್ನು ಉದ್ಧರಿಸಿದರು-
“ಒಂದು ಊರಲ್ಲಿ ನಿತ್ಯ ನಮಾಜಿನ ಬಳಿಕ ಬಯಾನ ಕೇಳುವ ವಾಡಿಕೆ, ಪ್ರವಾದಿಯೊಬ್ಬರು ಬಯಾನ ಹೇಳುತ್ತಿದ್ದರು, ಅದೇ ಸಮಯಕ್ಕೆ ಸರಿಯಾಗಿ ಒಬ್ಬ ವ್ಯಕ್ತಿ ತನ್ನ ನಿತ್ಯ ಕಾಯಕಕ್ಕೆ ನಡೆದು ಹೋಗುತ್ತಿದ್ದ.

ಆತ ನಡೆದುಕೊಂಡು ಹೋಗುವ ದಾರಿ ಮಸೀದಿಯ ಮುಂದೇ ಹಾದು ಹೋಗುದರಿಂದ ಪೈಗಂಬರರ ದೃಷ್ಠಿ ಸಹಜವಾಗಿಯೇ ಅವನ ಮೇಲೆ ಹೋಗುತ್ತಿತ್ತು. ಅವನನ್ನು ನೋಡುತ್ತಿದ್ದಂತಯೇ ಅವರಿಂದ ಹೋರಡುತ್ತಿದ್ದ ಮಾತು-“ಅಗೋ ಅಲ್ನೋಡಿ ಜನ್ನತಿ ಹೋಗುತ್ತಿದ್ದಾನೆ, ಅವನು ಜನ್ನತಿಯಾಗುವ ಸಕಲ ಅರ್ಹತೆ ಪಡೆದವನು” ಎಂದು ಹೀಗೆ ಪ್ರತಿ ದಿನವು ಹೇಳುತ್ತಿದ್ದರೆ ಬಯಾನ ಕೇಳುತ್ತಿದ್ದವರಿಗೆಲ್ಲ ಪರಮಾಶ್ಚರ್ಯವಾಗುತಿತ್ತು. ಅವನೊಬ್ಬ ಸಾದಾ ಸೀದಾ ಸಾಮಾನ್ಯ ಮನುಷ್ಯ, ಮುಂಜಾನೆ ವೇಳೆಗೆ ತನ್ನ ಕೆಲಸಕ್ಕೆ ತೆರಳುತ್ತಿದ್ದವನು ಮಗರೀಬ ಅಂದರೆ ಸಂಜೆ ವೇಳೆಗೆ ಮನೆಗೆ ಮರಳುತ್ತಿದ್ದದ್ದು ಬಿಟ್ಟರೆ ಅವನು ಜನ್ನತಿಯಾಗುತ್ತಾನೆ ಎನ್ನುವಂಥ ಯಾವೂದೇ ವಿಶೇಷ ಕಾರಣಗಳು ಯಾರಿಗೂ ಕಂಡಿರಲಿಲ್ಲ. ನಮಾಜ ಸಮಯದಲ್ಲಿ ಮಸೀದಿ ಮುಂದೆಯೇ ಹಾದು ಹೋಗುವ ಆತ ಒಂದಿನವು ಮಸೀದಿಯತ್ತ ಮುಖ ಮಾಡಿಲ್ಲ, ನಮಾಜಿಗೆ ಬಂದಿಲ್ಲ ಅವನ್ಹೇಗೆ ಜನ್ನತಿಯಾಗುತ್ತಾನೆ? ಹಗಲಿರುಳು ಎನ್ನದೇ ನಮಾಜ-ರೋಜಾ ಮಾಡುವ ನಮ್ಮಂಥವರಿಗೆ ಪ್ರವಾದಿಗಳು ಒಂದಸಲವೂ ನೀವು ಜನ್ನತಿಯಾಗುತ್ತೀರಿ ಎಂದು ಏಕೆ ಹೇಳಲಿಲ್ಲ? ಎನ್ನುವ ಪ್ರಶ್ನೆಗಳು ತೆಲೆಯಲ್ಲಿ ಮೂಡುತ್ತಿದ್ದರೆ, ಏನಿದರ ರಹಸ್ಯ, ಏನವರ ಮಾತಿನ ಮರ್ಮ ಅರಿಯುವ ಕುತೂಹಲ ಕೆಲವರಿಗೆ, ಏಕೆಂದರೆ ಪ್ರವಾದಿಗಳ ಬಾಯಿಂದ ಬಂದ ವಾಣಿ ಸುಳ್ಳಾಗುವ ಪ್ರಮೆಯೇ ಇರಲಿಲ್ಲ. ಹಾಗಾದರೆ ಹೇಗಾದರು ಮಾಡಿ ಇದರ ಗುಟ್ಟು ತಿಳಿದೇ ಬಿಡಬೇಕು ಎನ್ನುವ ಕಾರಣಕ್ಕೆ ಕೆಲವರು ಅವನ ಬೆನ್ನಿಗೆ ಬಿದ್ದು ಅವನ ದಿನಚರಿಯನ್ನೆಲ್ಲ ಗಮನಿಸತೊಡಗಿದರು. ಅವನು ಹೊಟ್ಟೆ ಪಾಡಿಗಾಗಿ ಮನೆ ಬಿಟ್ಟರೆ ಸಂಜೆ ಮನೆ ಸೇರುತ್ತಿದ್ದದ್ದು ಹೊರತು ಪಡಿಸಿದರೆ ಅವನು ಜನ್ನತಿಯಾಗುವಂಥ ಕಾರಣಗಳ್ಯಾವು ಕಾಣಲೇ ಇಲ್ಲ. ಅವನ ದಿನಚರಿಯಲ್ಲಿ ನಮಾಜ ಅಷ್ಟೇಯಲ್ಲ ದಾನ ಧರ್ಮಕ್ಕೂ ಸ್ಥಾನವಿರಲಿಲ್ಲ. ಏಕೆಂದರೆ ಆತ ತೀರ ಬಡವನಾಗಿದ್ದು ಕೂಲಿ ಮಾಡಿ ಜೀವನ ಸಾಗಿಸುವನಾಗಿದ್ದ. ಆದರೆ ಪ್ರವಾದಿಗಳ ಮಾತು ಶತ ಸಿದ್ಧವಾದದ್ದು, ಸುಳ್ಳಾಗು ಮಾತೇ ಇಲ್ಲ. . . ಕುತೂಹಲ ದಿನೇದೀನೇ ಹೆಚ್ಚಾಗುತ್ತಲೇ ಸಾಗಿತ್ತು,

ಯಾವುದಕ್ಕೂ ಒಮ್ಮೆ ಸತ್ಯವನ್ನು ಪೈಗಂಬರರಿಂದಲೇ ತಿಳಿದು ಬಿಡೋಣವೆಂದು ನಿರ್ಧರಿಸಿದ ಜನ-
“ ನಾವು ಪ್ರತಿ ದಿನ ಮಸೀದಿಗೆ ಬಂದು ಐದಹೊತ್ತು ನಮಾಜ, ರೋಜಾ ಏನೆಲ್ಲ ಮಾಡಿದರು ನೀವು ನಮ್ಮನ್ನು ಒಂದು ಸಲವೂ ಜನ್ನತಿಯಾಗುತ್ತೀರಿ ಎಂದು ಹೇಳಲಿಲ್ಲ, ಆದರೆ ಮಸೀದಿ ಕಟ್ಟೆಯೂ ಏರದ ಆ ಮನುಷ್ಯನನ್ನು ಕಂಡಕ್ಷಣ ಆತನನ್ನು ಜನ್ನತಿ ಎನ್ನುತ್ತೀರಿ. ಅವನತ್ತ ಭಯ ಭಕ್ತಿಯಿಂದ ನೋಡುತ್ತೀರಿ. ಅವನಿಗೆ ಅಷ್ಟೊಂದು ಗೌರವವೇಕೆ, ನಮ್ಮನ್ನೆಲ್ಲ ಬಿಟ್ಟು ಅವನಿಗೇ ಜನ್ನತಿ ಪಟ್ಟ ಯಾಕೆ? ಎಂದು ಅರಿಯುವ ಕುತೂಹಲ ನಮಗೆ. . . ದಯಿಟ್ಟು ನಿಮ್ಮ ಮಾತಿನ ಮರ್ಮ ಬಿಚ್ಚಿ ಹೇಳಲೇಬೇಕು”ಎಂದು ಒತ್ತಾಯಿಸಿದಾಗ, ಅವರ ಆತ್ಮೀಯ ಒತ್ತಾಯಕೊಲಿದ ಪ್ರವಾದಿಗಳು-
“ತಾವುಗಳು ಕೇವಲ ಆತನ ಹೊರ ಜಗತ್ತು ಮಾತ್ರ ಗಮನಿಸಿದ್ದೀರಿ. ಅವನು ಮುಂಜಾನೆ ವೇಳೆಗೆ ಮನೆ ಬಿಟ್ಟು ಸಂಜೆ ವೇಳೆಗೆ ಮನೆ ಸೇರುವವರೆಗಿನ ದಿನಚರಿ ಮಾತ್ರ ನೋಡಿದ್ದೀರಿ. ಆದರೆ ಆತ ಮನೆಯಲ್ಲಿ ಏನು ಮಾಡುತ್ತಾನೆ ಎನ್ನವುದು ನಿಮಗೆಲ್ಲ ಗೊತ್ತಿಲ್ಲ. ದಯವಿಟ್ಟು ಒಮ್ಮೆ ನೀವು ಆತನ ಮನೆಗೆ ಹೋಗಿ ನೋಡಬೇಕು. ಆತ ಮನೆಗೆ ಹೋದ ತಕ್ಷಣ ಮಾಡುವ ಮೊದಲ ಕೆಲಸ ತಾಯಿಯ ಸೇವೆ. ಪಾಶ್ರ್ವವಾಯು ಪೀಡಿತ ವೃದ್ಧ ಅಮ್ಮನ ದೇಹ ಚಲಿಸದೆ ಜಡವಾಗಿ ಬಿದ್ದಿದೆ. ಬೆಳಗೆದ್ದ ತಕ್ಷಣ ಇವನ ಸೇವಾಕಾರ್ಯ ಆರಂಭಗೊಳ್ಳುತ್ತದೆ. . ಊಟ. . ಉಪಚಾರ ಅಷ್ಟೇಯಲ್ಲ ಆ ತಾಯಿಯ ಮಲ-ಮೂತ್ರ ವಿಸರ್ಜನೆಗಳನ್ನು ಶುಚಿಗೊಳಿಸುವುದು, ಸ್ನಾನ ಮಾಡಿಸುವುದು, ಹಾಸಿಗೆ ತೊಳೆಯುವುದು, ಬಟ್ಟೆ ಹಾಕುವುದು ಎಲ್ಲ ಇವನೇ ಮಾಡುತ್ತಾನೆ. ತನ್ನ ತೊಂದರೆ ಹೇಳಿ ಕೊಳ್ಳುವ ತಾಯಿ ನಾಲಿಗೆ ಕೂಡ ಬಿದ್ದು ಹೋಗಿದೆ, ಆ ಮೂಕ ಮುದಿ ಅಮ್ಮನನ್ನು ಅವನು ಚಿಕ್ಕ ಮಗುವಿನಂತೆ ಜೋಪಾನ ಮಾಡುತ್ತಾನೆ. ಮಾತೃ ಸೇವೆಯನ್ನು ಯಾವುದೇ ಬೇಸರವಿಲ್ಲದೆ ಮನಸಾರೆ ಮಾಡುತ್ತಾನೆ. ಆ ಕಾರಣಕ್ಕೆ ಮೂಕ ತಾಯಿಯ ಹೃದಯ ಮಾತ್ರ ಸದಾ ಆತನನ್ನು ಆಶೀರ್ವದಿಸುತ್ತಲೇ ಇರುತ್ತದೆ. ಹೆತ್ತವರ ಸೇವೆಗಿಂತ ಶ್ರೇಷ್ಠವಾದ ಕಾರ್ಯ ಇನ್ನೊಂದಿಲ್ಲ. ಆ ಶ್ರೇಷ್ಠ ಕಾರ್ಯ ಆತ ಮಾಡುತ್ತಿದ್ದಾನೆ, ಅದಕ್ಕೇಯಾತ ಜನ್ನತಿಯಾಗುತ್ತಾನೆ ಎನ್ನುವದರಲ್ಲಿ ಸಂದೇಹವೇ ಇಲ್ಲ ಎಂದು ಹೇಳುತ್ತೇನೆ” ಎಂದಾಗ ಎಲ್ಲರೂ ನಾಚಿಕೆಯಿಂದ ತೆಲೆ ಕೆಳಗೆ ಮಾಡಿದರು. ಏಕೆಂದರೆ ಹೆತ್ತವರ ಹೃದಯಗಳಿಗೆ ಗಾಯ ಮಾಡಿ ನಮಾಜ ಮಾಡುವರು ಅವರಲ್ಲಿ ಬಹಳ ಜನ ಇದ್ದರು.

ಮೌಲಾನಾ ರಯೀಸರ ಬಾಯಿಂದ ಜಾರುತ್ತಿದ್ದ ಶಬ್ಧಾವಳಿಗಳು, ಹರಿದು ಬರುತ್ತಿದ್ದ ಕಥೆಗಳು ನೇರವಾಗಿ ಸಾದೀಕನ ಹೃದಯಾಳಕ್ಕಿಳಿದು ಬಿರುಗಾಳಿ ಎಬ್ಬಿಸಿದ್ದವು. ಹೌದು ತನ್ನ ಅಮ್ಮಿಗೂ ಅನಾರೋಗ್ಯವಿತ್ತು. ದೇಹದ ಅರ್ಧಭಾಗ ಸ್ವಾಧೀನ ಕಳೆದುಕೊಂಡಿತ್ತು. ಇನ್ನೂ ಗಟ್ಟಿಯಾಗಿದ್ದ ಅಬ್ಬಾಜಾನರೇ ಊಟ ಉಪಚಾರವನ್ನೆಲ್ಲ ನೋಡಿಕೊಳ್ಳುತ್ತಿದ್ದರು. ತಾನು ಕೆಲಸಕ್ಕೆ ಹೋದರೆ ಮರಳಿ ಬರುವುದಕ್ಕೇ ರಾತ್ರಿಯೇ ಆಗುತ್ತಿತ್ತು, ಮನೆಯ ಕೆಲಸವೆಲ್ಲ ಹೀನಾಳೇ ನಿರ್ವಹಿಸಬೇಕು. ಅಬ್ಬಾಜಾನರಿಗೆ ಮೊದಲಿನಿಂದಲೂ ಮೂಗಿನ ಮೇಲೆಯೇ ಕೋಪ. ಎಲ್ಲವೂ ಅವರು ಹೇಳಿದಂತೆಯೇ ನಡೆಯಬೇಕೆನ್ನುವ ಹಟ. ಯಾರೊಂದಿಗೂ ಹೊಂದಿಕೊಳ್ಳದ ಸ್ವಭಾವ. ಶಾಂತವಾಗಿದ್ದು ಸಲಹೆ ಕೊಟ್ಟು ಸಮಾಧಾನದಿಂದ ಕೆಲಸ ಮಾಡಿಸಿಕೊಳ್ಳವರಲ್ಲ. ಎಲ್ಲದಕ್ಕೂ ತಕರಾರು. ಸೊಸೆಯ ತಾಳ್ಮೆ ಪರೀಕ್ಷಿಸುವದೆಂದರೆ ಅವರಿಗೊಂದು ತರಹ ವಿಚಿತ್ರ ಖುಷಿ. ಆದರೆ ಹೀನಾ ಅಬ್ಬಾಜಾನರ ವರ್ತನೆಯಿಂದ ಬೇಸತ್ತು ಅಸಮಾಧಾನದಿಂದ ಒಳಗೊಳಗೇ ಕುದಿಯಲಾರಂಭಿಸಿದಳು. ದಿನ ಕಳೆದಂತೆ ಹೀನಾಳ ಅಸಹಕಾರ ಧೋರಣೆ ಮುಂದವರೆಯಿತು. ಈ ನಡುವೆ ಅಮ್ಮಿಯ ಸ್ಥಿತಿ ಬಿಗಡಾಯಿಸುತ್ತ ನಡೆಯಿತು. ಇವರು ಮನೆಯಿಂದ ಹೋದರೆ ಸಾಕು ಎನ್ನುವ ಸ್ಥಿತಿಗೆ ತಲುಪಿದಳು. ನಾನು ಮನೆಗೆ ಬಂದಾಗ ಆರೋಪ-ಪ್ರತ್ಯಾರೋಪಗಳನ್ನು ಕೇಳಿ ಕೇಳಿ ಸಾಕಾಗುತ್ತಿತ್ತು.

ಒಂದಿನವಂತೂ ಅದೇನೋ ವಿಷಯ ಧೀರ್ಘಕ್ಕೆ ಹೋದಂತಿತ್ತು. –
“ನನ್ನಿಂದ ಇದೆಲ್ಲ ಆಗುವದೇ ಇಲ್ಲ, ಮನೆಯಲ್ಲಿ ಅವರಿರಬೇಕು ಇಲ್ಲ ನಾನಿರಬೇಕು” ಎಂದು ಹಠ ಹಡಿದು ಕುಳಿತಳು. ಸಾದೀಕ ದಿಕ್ಕೆಟ್ಟು ನಿಂತವನಾಗಿದ್ದ. ಒಂದೆಡೆ ಜನ್ಮ ನೀಡಿದ ತಂದೆ-ತಾಯಿ, ಇನ್ನೊಂದೆಡೆ ಬಯಸಿ ಮದುವೆಯಾದ ಮುದ್ದಿನ ಮಡದಿ. ಮಾಡುವದೇನು? ಧರ್ಮ ಸಂಕಟ! ಜನರೂಢಿಯಂತೆ ಇನ್ನೊಂದು ಹೆಂಡತಿ ಬೇಕಾದರೆ ಸಿಗಬಹದು, ಹೆತ್ತವರು ಹೋದರೆ ಮತ್ತೊಮ್ಮೆ ತರಲು ಸಾಧ್ಯವೇ? ಎಂದು ಯೋಚಿಸಿ ಪತ್ನಿಯನ್ನು ಬಿಡಲು ನಿರ್ಧರಿಸಿದ ಆದರೆ ಆತ್ಮಸಾಕ್ಷಿ ಅದಕ್ಕೂ ಒಪ್ಪಿಗೆ ನೀಡಲಿಲ್ಲ. ಹೀನಾ ಅನಾಥೆ, ಮೇಲಾಗಿ ಸಾದೀಕ ಅವಳನ್ನು ಮೆಚ್ಚಿ ಮದುವೆಯಾಗಿದ್ದ. ತಾನು ಕೈಬಿಟ್ಟರೆ ಅವಳು ಸಾವಿಗೆ ಶರಣಾಗುವದರಲ್ಲಿ ಸಂದೇಹವಿಲ್ಲ. ಮದುವೆ ಮುಂಚೆ ನಿನಗಾಗಿ ಇಡೀ ಜಗವನ್ನೇ ಬಿಡಬಲ್ಲೆ, ಎಂದಿಗೂ ನಿನ್ನ ಕೈಬಿಡುವದಿಲ್ಲ ಎಂದು ವಚನಕೊಟ್ಟು ಮದುವೆ ನಂತರ ಹೀಗೆ ತಂದೆ-ತಾಯಿ, ಬಂಧು-ಬಳಗ ಅಂತಾ ಪತ್ನಿಯನ್ನು ಬಿಟ್ಟು ಬಿಡುವುದು ಯಾವ ನ್ಯಾಯವೆಂದು ಅಂತರಾತ್ಮ ಪ್ರಶ್ನಿಸಿತ್ತು. ವಯಸ್ಸಿನಲ್ಲಿ ಇನ್ನು ಚಿಕ್ಕವಳು ಅಬ್ಬಾ ಪ್ರೀತಿಯಿಂದ ಅವಳಿಂದ ಕೆಲಸ ಮಾಡಿಸಿಕೊಳ್ಳಬಹುದಿತ್ತು, ಆದರೆ ಅವರು ಹಾಗೇ ಮಾಡದೆ ಸಮಸ್ಯೆ ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತಿದ್ದರು. ಇದೇ ತಪ್ಪು ಮುಂದಿಟ್ಟುಕೊಂಡು ಅವಳೊಂದಿಗೆ ದ್ವೇಷ ಭಾವನೆ ಹೊಂದಿ ಅವಳನ್ನು ಮೋಸ ಮಾಡುವದು ಸರಿಯಲ್ಲ ಎನ್ನುವ ನಿರ್ಧಾರಕ್ಕೆ ಸಾದೀಕ ಬಂದಿದ್ದ. ಸಂಧಾನದ ಎಲ್ಲ ದಾರಿಗಳು ಮುಚ್ಚಿದ ಬಳಿಕ ಹೆತ್ತವರನ್ನು ಮನೆಯಿಂದ ಕಳಿಸುವ ನಿರ್ಧಾರಕ್ಕೆ ಬಂದ ಸಾದೀಕನಿಗೆ ಅವರನ್ನು ಎಲ್ಲಿಗೆ ಕಳಿಸುವದು ಎನ್ನುವ ಪ್ರಶ್ನೆ ಕಾಡಿತು. ತನ್ನ ಸ್ನೇಹಿತರಲ್ಲಿ, ತಿಳದವರಲ್ಲಿ ಸಲಹೆ ಕೇಳಿದ. ಯಾರಾದರೊಬ್ಬರು ಸೂಕ್ತ ಸಲಹೆ ನೀಡಬಹುದೆಂಬ ನಂಬಿಕೆ. ಅವರು ಆಚೆ ಹೋಗುವರೆಗೂ ನೀರು ಸಹ ಕುಡಿಯುವದಿಲ್ಲವೆಂದು ಹಠ ಹಿಡಿದು ಕುಳಿತಿದ್ದಳು ಹೀನಾ. ಸಾದೀಕ ಈ ನಡುವೆ ಕಂಗಾಲಾಗಿ ಹೋಗಿದ್ದ, ಏನೂ ತೋಚದೆ. ಅಂಥದರಲ್ಲಿ ಸ್ನೇಹಿತರ್ಯಾರೋ ಹೇಳಿದರು. ಅವರನ್ನು ವೃದ್ಧಾಶ್ರಮಕ್ಕೆ ಕಳಿಸಬಹುದು, ಅಲ್ಲಿ ಅವರ ಊಟ ಉಪಚಾರಕ್ಕೆ ಕೊರತೆ ಇರುವದಿಲ್ಲ. ಅವರ ನಿತ್ಯ ಆರೋಗ್ಯ ಪರೀಕ್ಷೆಗೆ ವೈದ್ಯರೂ, ದಾದಿಯರೂ ಇರುತ್ತಾರೆ ಎಂದು ಹೇಳಿ ಆಶ್ರಮದ ವಿಳಾಸ ನೀಡಿದರು. ಮದರ ತೆರೇಸಾ ಹೆಸರಿನಲ್ಲಿರು ಕ್ರಿಶ್ಚಿಯನ್ ಸಂಸ್ಥೆಯದು . ಅಲ್ಲಿ ನಿನ್ನ ತಂದೆ-ತಾಯಿ ಅರಾಮವಾಗಿರುತ್ತಾರೆ. ಯೋಚಿಸಬೇಡ ಇತ್ತ ನಿನ್ನ ಸಂಸಾರವೂ ಉಳಿಯುತ್ತದೆ, ಅತ್ತ ನಿನ್ನ ಹೆತ್ತವರು ಹಾಯಾಗಿರುತ್ತಾರೆ, ಟೆನಷನ್ ಬೇಡ ಎಂದಾಗ ಸಾದೀಕ ನೆಮ್ಮದಿಯ ಉಸಿರು ಬಿಟ್ಟಿದ್ದ.

ಹಡೆದವರನ್ನು ದೂರ ಮಾಡುವದು ಸರಿ ಇರಲಿಲ್ಲ ಅದರೆ ಅನ್ಯ ಮಾರ್ಗವೂ ಉಳಿದಿರಲಿಲ್ಲ. ಕೊನೆಗೆ ತಂದೆಗೆ ತಿಳಿಹೇಳುವ ಉಪಾಯ ಹುಡುಕಿ –
“ದಿನೇದಿನೇ ಅಮ್ಮಿಯ ಹಾಲತ್ ಹದಗೆಡ್ತಾ ನಡೆದಿದೆ. ಎಷ್ಟು ದಿನಾಂತ ಹೀಗೆ ಮಲಗಿಸಿಕೊಂಡಿರಲು ಸಾಧ್ಯ?, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅದಕ್ಕೇ ಒಂದು ಯೋಚನೆ ಮಾಡಿದ್ದೇನೆ, ಒಂದು ಉತ್ತಮ ಆಸ್ಪತ್ರೆಯಿದೆ. ವಯೋವೃದ್ಧರನ್ನು ಚನ್ನಾಗಿ ನೋಡಿಕೊಳ್ಳುವ ಕ್ರಿಶ್ಚಿಯನ್ ಸಂಸ್ಥೆಯದು, ಊಟ, ಉಪಚಾರ, ವಸತಿಯಲ್ಲ ಉಚಿತ. ಅವರ ಜತೆ ನೀವೂ ಅಲ್ಲಿರಬಹುದು. ಯಾವುದಕ್ಕೂ ಕೊರತೆಯನ್ನುವುದು ಇರುವದಿಲ್ಲ, ನಾನೇ ಇರುತ್ತಿದ್ದೆ ಆದರೆ ಸಮಯ ಎಲ್ಲಿ? ಕೆಲಸದ ಒತ್ತಡ. ” ಎಂದು ಹೇಳುತ್ತಿರಬೇಕಾದರೆ ಅಬ್ಬಾಜಾನರಿಗೆ ತನ್ನ ಸುಪುತ್ರನ ಸದುದ್ದೇಶ ಅರ್ಥವಾಗಿಹೋಗಿತ್ತು-
“ನಮಗಾಗಿ ನೀನೇನೂ ತೊಂದರೆ ತೆಗೆದುಕೊಳ್ಳಬೇಕಾಗಿಲ್ಲ. ಅವಳನ್ನು ನೋಡಿಕೊಳ್ಳುವಷ್ಟು ಶಕ್ತಿ ನನ್ನಲ್ಲಿ ಇನ್ನೂಯಿದೆ. ಊರಲ್ಲಿ ಮನೆ, ಒಂದಿಷ್ಟು ಜಮೀನು ಎಲ್ಲ ಇದೆ, ಅಲ್ಲಿಗೆ ಹೋಗಿ ಹೇಗೋ ಬದಕ್ತೀವಿ. ”
“ಹಾಗಲ್ಲ. . . ” ಎಂದು ಸಮುಜಾಯಿಷಿ ನೀಡಲು ಮುಂದಾಗಿದ್ದ ಮಗನ ಮಾತು ಕಿವಿಗೆ ಹಾಕಿಕೊಳ್ಳದೇ ಮಾರನೇ ದಿನವೇ ಸಾದೀಕ ಕೆಲಸದಿಂದ ಮರಳುವಷ್ಟರಲ್ಲಿ ಬಾಡಿಗೆ ಕಾರ ಮಾಡಿಕೊಂಡು ತಮ್ಮೂರಿಗೆ ತೆರಳಿದ್ದರು. ಬಂಧು-ಬಳಗವೆಲ್ಲ ಇರುವ ಅಲ್ಲಿಗೆ ಹೋದರೆ ಅವರು ಚನ್ನಾಗಿರುತ್ತಾರೆ ಎನ್ನುವ ವಿಶ್ವವಾಸವಿದ್ದರೂ ಹೆತ್ತವರನ್ನು ಮನೆಯಿಂದ ಅಟ್ಟಿದ ಅಪರಾಧ ಮನೋಭಾವ ಮಾತ್ರ ಸಾದೀಕನ ಆಂತರ್ಯದಲ್ಲಿ ಜ್ವಾಲಾಮುಖಿಯಂತೆ ಕುದಿಯುತ್ತಲೇ ಇತ್ತು.

ರಯೀಸ ಮೌಲಾನಾ ತಮ್ಮ ಬಯಾನ ಹರಿಬಿಡುತ್ತಲೇ ಇದ್ದರು-
“ಹೆತ್ತವರನ್ನು ಮತ್ತು ಪತ್ನಿಯರಲ್ಲಿ ಯಾರಿಗಾದರೂ ಆಯ್ಕೆಮಾಡಿಕೊಳ್ಳುವ ಪ್ರಸಂಗ ಬಂದಲ್ಲಿ ಖಂಡಿತವಾಗಿಯೂ ನೀವು ಹೆತ್ತವರನ್ನೆ ಆಯ್ಕೆ ಮಾಡಿಕೊಳ್ಳಿ ಎಕೆಂದರೆ “ಮಾಕೆ ಕದಂಕೇ ನೀಚೆ ಜನ್ನತ್ ಹೈ; ಔರ ಬಾಪ್ ಜನ್ನತ್ ಕಾ ದರವಾಜಾ” ಅಂದರೆ ಅಮ್ಮನ ಪಾದದಡಿ ಸ್ವರ್ಗವಿದೆ ಮತ್ತು ಅಪ್ಪ ಸ್ವರ್ಗದ ಬಾಗಿಲು ಎಂದು ವಿವರಿಸಿ ಹೇಳುತ್ತಿದ್ದರು.
. . . ಓಮರ ಫಾರೂಕ ಎಂಬ ಮಹಾರಾಜನ ಮಗ ತನ್ನ ತಂದೆಯ ಮಾತಿಗೆ ಬೆಲೆ ಕೊಟ್ಟು ತನ್ನ ಪ್ರಾಣಕ್ಕಿಂತ್ ಹೆಚ್ಚಾಗಿ ಪ್ರೀತಿಸುತ್ತಿದ್ದ ಮಡದಿಯನ್ನೇ ತಲಾಖ್ ನೀಡಿದ ಘಟನೆಯನ್ನು ಅವರು ಇದಕ್ಕೆ ಪೂರಕವಾಗಿ ಹೇಳಿದರು, ಹೆತ್ತವರ ಮಾತು ಕೇಳಿ ತನ್ನ ಸರ್ವಸ್ವವೇ ಆಗಿದ್ದ ಪತ್ನಿಯನ್ನು ಬಿಟ್ಟ ಆತನಿಗೂ ಮತ್ತು ಪತ್ನಿಯ ಮಾತು ಕೇಳಿ ಮಾತಾಪಿತರನ್ನು ದೂರಮಾಡಿಕೊಂಡ ತನಗೂ ಅಜಗಜಾಂತರ ವ್ಯತ್ಯಾಸವೆಂದುಕೊಂಡ ಸಾದೀಕ ತನಗೆ ಮದುವೆಯಾಗಿ ಏಳೆಂಟು ವರ್ಷಕಳೆದರೂ ಮಕ್ಕಳಾಗದಿದ್ದಕ್ಕೇ ಅವರ ಕಣ್ಣೀರಿನ ಶಾಪವೇ ಕಾರಣವಾಗಿರಬಹುದೇ ಎಂದು ಯೋಚಿಸುತ್ತ ಮತ್ತೇ ತನ್ನ ನೆನಪಿನ ಸುರಳಿ ಬಿಚ್ಚಿದ.

ತಂದೆ-ತಾಯಿ ತಮ್ಮೂರಲ್ಲಿ ಪಡಬಾರದ ಪಾಡು ಪಟ್ಟು, ಬಂಧುಬಳಗದವರಿಗೆ ಕಾಡಿಬೇಡಿ, ಕೊನೆಗೆ ಅವರಿಗೂ, ಊರಿನವರಿಗೂ ಬೇಸರವಾಗಿದ್ದರು. ಇಂಥದರಲ್ಲಿ ಅಬ್ಬಾ, ಅಮ್ಮಿಯನ್ನು ನಾಲ್ಕೈದು ವರ್ಷ ಆರೈಕೆ ಮಾಡಿದರು. ಅಮ್ಮಿಜಾನ ಕಾಲವಾದ ನಂತರ ಅಬ್ಬಾಜಾನ ಒಂಟಿತನದಿಂದ ಕಂಗಾಲಾದರು. ಅವರಿಗೆ ಇಹಲೋಕದಲ್ಲಿ ಆಸಕ್ತಿಯೇ ಕಮ್ಮಿಯಾಯ್ತು. ಭ್ರಮಾಧೀನರಾದವರಂತೆ ಊರೂರು ತಿರಗಲು ಆರಂಭಿಸಿದರು. ಅವರಿಗೆ ಒಂದು ಕಡೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ಇನ್ನೂ ಯಾರ ಮೇಲೂ ವಿಶ್ವಾಸ ಉಳದಿರಲಿಲ್ಲ. ಸೂತ್ರ ಹರಿದ ಗಾಳಿ ಪಟದಂತಾಗಿದ್ದರು. ಅಲ್ಲಿ ಇಲ್ಲಿ ಅಂತಾ ಸುತ್ತಿ ಸುತ್ತಿ ಕೊನೆಗೊಂದು ದಿನ ದಾರಿಯ ಹೆಣವಾಗಿ ಹೋಗಿದ್ದರು. .

ಮೌಲ್ವಿಗಳು ಮಾರ್ಮಿಕವಾಗಿ ಹೇಳುತ್ತಲೇ ಇದ್ದರು. ಹೆತ್ತವರ ಬಾಯಿಂದ ಹೊರಟ ಒಂದ ಸಣ್ಣ ನೋವಿನ ನರಳಿಕೆ ಕೂಡ ಮಕ್ಕಳ ಜೀವನಕ್ಕೆ ಹಾನಿಯಾಗಬಲ್ಲದು ಏಕೆಂದರೆ ಅವರ ಆ ನೋವಿನಲ್ಲಿ ಇಡೀ ಅರ್ಶ್ವನ್ನು ಅಂದರೆ ಸೃಷ್ಠಿಯನ್ನೇ ನಡುಗಿಸುವ ಶಕ್ತಿ ಇರುತ್ತದೆ. ತಂದೆ ತಾಯಿ ತನ್ನ ಸಂತಾನದ ವಿರುದ್ಧ ಒಂದು ಉಸಿರೆತ್ತಿದ್ದರೆ ಸಾಕು ಭೂಲೋಕವಷ್ಟೆಯಲ್ಲ ಇಡೀ ದೇವಲೋಕ ಕೂಡ ಭೂಕಂಪವಾದಂತೆ ಕಂಪಿಸುತ್ತದೆ. ಆದರೆ ಮಾತೃ-ಹೃದಯ ಮಾತ್ರ ಅಷ್ಟು ಸುಲಭಕ್ಕೆ ಶಾಪ ನೀಡುವಂಥದಲ್ಲ, ಅದು ತುಂಬ ಮೃದುವಾದದ್ದು, ಪ್ರೀತಿ ಪೂರಿತವಾದದ್ದು ಎನ್ನುವುದಕ್ಕೆ ಉದಾಹರಣೆ ನೀಡಿದರು- “ಒಬ್ಬಳು ತನ್ನ ಗಂಡನ ಪ್ರೀತಿ ಪರೀಕ್ಷಿಸಿಸಬೇಕು ಎನ್ನುವ ಉದ್ದೇಶದಿಂದ ನೀವು ನಿಜವಾಗಿಯೂ ನನ್ನನ್ನು ಪ್ರೀತಿಸುತ್ತಿದ್ದರೆ, ನಿಮ್ಮ ತಾಯಿಯ ಎದೆ ಬಗೆದು ಹೃದಯ ತಂದು ಕೊಡಿ” ಎಂದು ಸವಾಲು ಹಾಕಿದಳು. ಹೆಂಡ್ತಿ ಪ್ರೀತಿಯಲಿ ಹುಚ್ಚನಾದ ಗಂಡ ತಾಯಿಯ ಎದೆ ಚಾಕುವಿನಿಂದ ಇರಿದು ಹೃದಯವನ್ನು ಅಂಗೈಯಲ್ಲಿ ಇಟ್ಟುಕೊಂಡು ಪತ್ನಿಗೆ ಕಾಣಿಕೆ ಕೊಡಲೆಂದು ಅವಸರದಿಂದ ಓಡುತ್ತಿರಬೇಕಾದರೆ ಕಲ್ಲು ಕಾಲಿಗೆ ತಾಗಿ ಎಡವಿದನಂತೆ. ಆಗ ಅಂಗೈಯಲ್ಲಿರುವ ಮಾತೃ-ಹೃದಯ ನುಡಿಯುವದೇನೆಂದರೇ_
“ಮಗನೇ ಜೋಪಾನ. . . ಎಡವಿ ಬಿದ್ದಿಯಾ – ನೋವಾಯಿತೇ”

ಅದೆಂಥ ಕ್ಷಮಾಗುಣ, ಅದೆಂಥ ಸಹನಶೀಲತೆ, ಪುತ್ರ ವಾತ್ಸಲ್ಯ, ಮಗನ ಮೇಲೆ ಮಮತೆ, ಹೃದಯ ಸ್ಪಂದನ ಆ ಅಮ್ಮನ ಹೃದಯಕೆ! ಮಕ್ಕಳ ಎಲ್ಲ ತಪ್ಪಗಳನ್ನು ಮನ್ನಿಸಿ ಬಿಡಬಹುದಾದ ದೊಡ್ಡ ಗುಣ ಆ ಮಾತೃ ಮಮತೆಗೆ. ಬಯಾನ ಕೇಳುವದರಲ್ಲಿ ಮಗ್ನರಾದ ಜನ ಭಾವ ಪರವಶಗೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಎಲ್ಲರ ಕಂಗಳಿಂದ ಪ್ರಾಯಶ್ಚಿತ್ ವೇದನೆಧಾರೆಯಾಗಿ ಹರಿಯುತ್ತಿತ್ತು. ಅವರು ಹೇಳುತ್ತಲೇಯಿದ್ದರು
“ ದೋಸ್ತೋ. . ಗೆಳೆಯರೇ , ಈಗಲೂ ಕಾಲ ಮಿಂಚಿಲ್ಲ ಈಗಲೇ ನಿಮ್ಮ ಹೆತ್ತವರ ಬಳಿ ಹೋಗಿ ನಿಮ್ಮ ತಪ್ಪುಗಳಿಗಾಗಿ ಕ್ಷಮೆಯಾಚಿಸಿ. ತಂದೆ-ತಾಯಿ ಯಾವತ್ತೂ ವಾತ್ಸಲ್ಯಮಯಿ, ಮಮತಾಮಯಿಗಳಾದವರು ನಿಮ್ಮ ತಪ್ಪುಗಳನ್ನು ಖಂಡಿತವಾಗಿಯೂ ಕ್ಷಮಿಸುತ್ತಾರೆ. ಅವರು ಕ್ಷಮಿಸಿದರೆ ಸಾಕು ಕರುಣಾಮಯಿ ದೇವರೂ ಕೂಡ ನಿಮ್ಮನ್ನು ಕ್ಷಮಿಸಿ ಸ್ವರ್ಗಕ್ಕೆ ಅರ್ಹಗೊಳಿಸುತ್ತಾನೆ, ದಯವಿಟ್ಟು ಹೋಗಿ ಹೆತ್ತವರಲ್ಲಿ ಈಗಲೇ ಕ್ಷಮೆಯಾಚಿಸಿ” ಎಂದು ಹೇಳಿ ಕಾರ್ಯಕ್ರಮದ ಅಂತಿಮ ಘಟ್ಟ ದುವಾ ಅಂದರೆ ಸಾಮೂಹಿಕ ಪ್ರಾರ್ಥನೆಗೆ ಅಣಿಯಾದರು.

ದುವಾ ಯಾಚನೆ ಮುಗಿಯುತ್ತಿದ್ದಂತೆ ಮಸೀದಿಯಿಂದ ಹೊರ ಬರುತ್ತಿದ್ದ ಮೌಲಾನಾ ರಯೀಸರನ್ನು-
“ಮೌಲಾನಾ. . ಒಂದ್ನಿಮಿಷ್” ಎಂದು ಸಾದೀಕ ತಡೆದು ನಿಲ್ಲಿಸಿದ-
“ನನಗೊಂದು ಸಂದೇಹ. . ವಾಲಿದೇನ ಬದುಕಿದ್ದರೆ ಅವರಲ್ಲಿ ಕ್ಷಮೆಯಾಚಿಸಬಹುದು. ಆದರೆ ಅಮ್ಮೀ-ಅಬ್ಬಾ ಇಬ್ಬರೂ ಸತ್ತು ಹೋಗಿದ್ದಾರೆ. ಅವರ ಅಪರಾಧಿ ನಾನು, ಈಗ ನಾನೇನ ಮಾಡಬೇಕು? ಹೇಗೆ ಕ್ಷಮೆಯಾಚಿಸಬೇಕು?, ಅವರ ಕ್ಷಮೆ ನನಗೀಗ ದೊರಕುವದಿಲ್ಲ, ಇಷ್ಟು ದಿನ ನಾನು ಮಾಡಿದ ನನ್ನ ನಮಾಜ ರೋಜಾ ಎಲ್ಲ ವ್ಯರ್ಥವೇ?” ಎಂದು ಪ್ರಶ್ನಿಸಿದ್ದಕ್ಕೆ ಅವರು ಉತ್ತರಿಸಿದರು-
“ಪ್ರಾಯಶ್ಚಿತ್ತಕ್ಕಿಂತ ದೊಡ್ಡ ಪ್ರಾರ್ಥನೆ ಬೇರೊಂದಿಲ್ಲ. ನಿನಗೀಗ ಪ್ರಾಯಶ್ಚಿತ್ತ ಭಾವನೆಯುಂಟಾಗಿದೆ. ಅಲ್ಲಾಹ ಇರುವ ಸ್ಥಳದಲ್ಲಿ ನಿಂತು ನೀನು ನಿನ್ನ ಗುನಾಹ ಕಬೂಲ ಮಾಡುತ್ತಿದ್ದೀಯಾ, ಬೇಷಕ್ ಅಲ್ಲಾಹ ಕ್ಷಮಿಸುವನಾಗಿದ್ದಾನೆ. ತಂದೆತಾಯಂದಿರೂ ಅಷ್ಟೇ ತಮ್ಮ ಮಕ್ಕಳು ಅಸುಖಿಗಳಾಗಲಿ ದುಃಖಿಗಳಾಗಲಿ ಎಂದು ಎಂದಿಗೂ ಬಯಸುವದಿಲ್ಲ. ಅವರ ಆತ್ಮ ಸಹ ಮಕ್ಕಳ ಹಿತವನ್ನೇ ಬಯಸುತ್ತದೆ. ಬೇಷಕ್ ಖುದಾ ಇದನ್ನೆಲ್ಲ ಅರಿತವನಾಗದ್ದಾನೆ . ಆತ ಗಫೂರುರ್ರ್ ರಹೀಮ. . ದಯಾಮಯಿ, ಕರುಣಾಮಯಿ ಆಗಿದ್ದಾನೆ. . ಎಲ್ಲ ತಪ್ಪಗಳನ್ನು ಕ್ಷಮಿಸುವನಾಗಿದ್ದಾನೆ” ಎಂದು ಹೇಳಿದಾಗ ಸಾದೀಕನ ಹೃದಯ ಹಗುರಾದಂತೆ ಭಾಸವಾಗಿ ಅಲ್ಲಿಂದ ಸೀದಾ ಕಬ್ರಸ್ಥಾನಕ್ಕೆ ಹೋಗಿ ತಂದೆ-ತಾಯಿಯ ಸಮಾಧಿಗಳ ಮುಂದೆ ನಿಂತು ಹೃದಯ ಹಗುರಾಗುವಂತೆ ಅತ್ತು ಕ್ಷಮೆಯಾಚಿಸಿ ಅವರ ಆತ್ಮಕ್ಕೆ ಶಾಂತಿ ಕೋರಿ ಮನೆಗೆ ಬರುವಷ್ಟಲ್ಲಿ ಮನೆಯಲ್ಲಿ ಸೇರಿದ ಹೆಂಗಸರು-
“ ಬದಾಯಿ ಹೋ ಭಾಯಿಸಾಬ್, ಆಪ ದೋ ಬಚ್ಚಂವ ಕೆ ಬಾಪ ಬನಗಯೆ” ಎಂದು ಸಿಹಿ ಸುದ್ದಿ ಹರಡಿದಾಗ ಸಾದೀಕನಿಗೆ ಒಂದು ಕ್ಷಣ ನಂಬಲಾಗಲಿಲ್ಲ.

ಹೀನಾಳ ಬಳಿ ಓಡಿ ಹೋಗಿ ನೋಡುವಷ್ಟರಲ್ಲಿ ಹೀನಾಳ ಪಕ್ಕದಲ್ಲಿ ಎರಡು ಆರೋಗ್ಯವಂತ ಮಕ್ಕಳು ನಗುತ್ತಿರುವುದು ಕಂಡು ಆಶ್ಚರ್ಯಚಕಿತನಾದ. ಒಂದು ಗಂಡು, ಒಂದು ಹೆಣ್ಣು ಎಂದು ಹೀನಾಳಿಂದ ಗೊತ್ತಾದ ಮೇಲೆ ಖುಷಿಯಿಂದ ಈ ಅವಳಿ ಮಕ್ಕಳನ್ನು ಅಮ್ಮೀ-ಅಬ್ಬಾ ಪ್ರತಿರೂಪ ಎಂದು ವಿವರಿಸಿದಾಗ. ಹೀನಾ ತನ್ನ ಗಂಡನ ಮುಖದ ಮೇಲೆ ಎಂದೂ ಕಾಣದ ಮಹಾದಾನಂದವನ್ನು ಕಂಡು ಇದೆಲ್ಲ ಅಲ್ಲಾಹನ ಕೃಪೆ ಎಂದು ಹೇಳಿ ಈ ಮಕ್ಕಳಿಗೆ ಸಾದೀಕನ ತಂದೆ ತಾಯಿ ಹೆಸರನ್ನೇ ಕೂಗಿರುವದಾಗಿ ಸಾರಿದಾಗ ಸಾದೀಕನಿಗೆ ಸಂತಸ-ಸಂಭ್ರಮಗಳು ತುಂಬಿದ ಮನೆಯೇ ಸ್ವರ್ಗ ಅನಿಸುತ್ತದೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
I M Sankadal
I M Sankadal
6 years ago

ಈಗಲೂ ಕಾಲ ಮಿಂಚಿಲ್ಲ ಈಗಲೇ ನಿಮ್ಮ ಹೆತ್ತವರ ಬಳಿ ಹೋಗಿ ನಿಮ್ಮ ತಪ್ಪುಗಳಿಗಾಗಿ ಕ್ಷಮೆಯಾಚಿಸಿ. ತಂದೆ-ತಾಯಿ ಯಾವತ್ತೂ ವಾತ್ಸಲ್ಯಮಯಿ, ಮಮತಾಮಯಿಗಳಾದವರು ನಿಮ್ಮ ತಪ್ಪುಗಳನ್ನು ಖಂಡಿತವಾಗಿಯೂ ಕ್ಷಮಿಸುತ್ತಾರೆ. ಅವರು ಕ್ಷಮಿಸಿದರೆ ಸಾಕು ಕರುಣಾಮಯಿ ದೇವರೂ ಕೂಡ ನಿಮ್ಮನ್ನು ಕ್ಷಮಿಸಿ ಸ್ವರ್ಗಕ್ಕೆ ಅರ್ಹಗೊಳಿಸುತ್ತಾನೆ, ದಯವಿಟ್ಟು ಹೋಗಿ ಹೆತ್ತವರಲ್ಲಿ ಈಗಲೇ ಕ್ಷಮೆಯಾಚಿಸಿ”

ashfaq peerzade
ashfaq peerzade
6 years ago
Reply to  I M Sankadal

ತಂದೆತಾಯಂದಿರೂ ಅಷ್ಟೇ ತಮ್ಮ ಮಕ್ಕಳು ಅಸುಖಿಗಳಾಗಲಿ ದುಃಖಿಗಳಾಗಲಿ ಎಂದು ಎಂದಿಗೂ ಬಯಸುವದಿಲ್ಲ. ಅವರ ಆತ್ಮ ಸಹ ಮಕ್ಕಳ ಹಿತವನ್ನೇ ಬಯಸುತ್ತದೆ. ಬೇಷಕ್ ಖುದಾ ಇದನ್ನೆಲ್ಲ ಅರಿತವನಾಗದ್ದಾನೆ .

2
0
Would love your thoughts, please comment.x
()
x