ಜನಪದ ಸಾಹಿತ್ಯದ ಸ್ಥಿತಿಗತಿ. ಏನು..? ಎತ್ತ..?: ರಕ್ಷಿತ್ ಶೆಟ್ಟಿ

 ಜನಪದ ಎಂಬುವುದು ಕೇವಲ ಒಂದೆರಡು ಪ್ರಕಾರಗಳಿಗೆ ಸೀಮಿತವಾದುದಲ್ಲ ಜನಜೀವನದ ಪ್ರತಿಯೊಂದು ಮಜಲಿನಲ್ಲಿಯೂ ಹಾಸುಹೊಕ್ಕಾಗಿ ನಿಂತಿರುವಂತದ್ದು. ಪ್ರತೀ ಪ್ರದೇಶದ ಪರಿಧಿಯೊಳಗೂ ತನ್ನದೇ ಆದ ವಿವಿದ ರೀತಿಯ ಜಾನಪದ ಚಿತ್ರಣ ಇದ್ದೇ ಇರುತ್ತದೆ. ಅನಕ್ಷರಸ್ಥ ಸಮಾಜದಲ್ಲಿ ಕೇವಲ ಮೌಖಿಕವಾಗಿ ಹರಿದು ಬಂದ ಸಾಹಿತ್ಯ ಪ್ರಕಾರಗಳಿಗೆ ಜಾತಿ, ಧರ್ಮ, ಮತ, ಪಂಥಗಳ ಹಿಡಿತವಿಲ್ಲ. ನಂಬಿಕೆ ಪುರಾಣ ನಡವಳಿಕೆ ಸಮಾಜದ ಆಗುಹೋಗುಗಳೇ ಒಳಗೊಂಡಿರುವುದು ಸರ್ವೇಸಾಮಾನ್ಯ. ಈ ರೀತಿಯಲ್ಲಿ ಕಂಠಸ್ಥ ಸಂಪ್ರದಾಯದ ಮೂಲಕ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದ ಕಲಾಪ್ರಕಾರಗಳು ನಿರಂತರವಾಗಿ ಹೊಸ ರೀತಿ ನೀತಿಗಳನ್ನು ಒಳಗೊಳ್ಳುತ್ತಾ ಸಾಗಬೇಕಾದ ಹಾದಿಯಿಂದ ವಿಮುಖಗೊಳ್ಳುತ್ತಿರುವುದು ಖೇದಕರ ಸಂಗತಿ. ಇತ್ತೀಚೆಗಂತೂ ಜಾನಪದ ಕ್ರಾಂತಿಗಳ ಮಿತಿ ದುರ್ಬಲಗೊಂಡು ವರ್ಣಲೋಕದ ಭ್ರಾಂತಿಯ ಹಾವಳಿಗೆ ಯುವಪೀಳಿಗೆ ಸಂಪೂರ್ಣ ಶರಣಾಗಿರುವುದು ಭವಿಷ್ಯದಲ್ಲಿ ಮತ್ತೆ ನಮ್ಮ ನೆಲದ ಕಲಾಪ್ರಕಾರಗಳನ್ನು ಕಾಣಲು ಸಾಧ್ಯವಾಗದ ಪರಿಸ್ಥಿತಿಯ ಆರಂಭವೋ ಎನ್ನುವ ಆತಂಕ ಮೂಡಿಸುತ್ತಿದೆ. ಒಂದಂತೂ ಸತ್ಯ ಯಾವುದೇ ಕಲೆ ಸಂಸ್ಕೃತಿಯನ್ನು ಒಮ್ಮೆ ಕಳೆದುಕೊಂಡೆವೆಂದರೆ ಮತ್ತೆ ದೊರಕಿಸಿಕೊಳ್ಳುವುದು ಸುಲಭದ ಮಾತಲ್ಲ. ಇಂದಿನ ದುರಂತ ಏನು ಗೊತ್ತೇನು? ಯುವ ಪೀಳಿಗೆ ಜನಪದದ ಅಮೂಲ್ಯ ಕಥೆ, ಹಾಡುಗಳ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ಒಂದೆಡೆಯಾದರೆ, ಕಲೆ,ಸಂಸ್ಕೃತಿಯ ಅಪಹಾಸ್ಯ, ಯಕಶ್ಚಿತ್ ಗಳನ್ನು ವೈಭವೀಕರಣದ ಲೇಪ ಹೊದೆಸಿ ತೋರಿಸುವ ಧೃಶ್ಯ ಮಾಧ್ಯಮದೆದುರು ನಾಗರೀಕರೆನಿಸಿಕೊಂಡವರೂ ಸುಸಂಸ್ಕೃತರೆನಿಸಿಕೊಳ್ಳುವಲ್ಲಿ ಹಿಂದೆ ಬೀಳುತ್ತಿರುವುದು.

ನಮ್ಮ ನಡುವಿನ ಮೇರು ವಿಧ್ವಾಂಸರಾದ ಕೆ.ಎಸ್.ನಾರಾಯಣಾಚಾರ್ಯ ಓಂದೆಡೆ ಉಲ್ಲೇಖಿಸುವಂತೆ, "ಹಿಂದಣದವರು ಅಸಂಸ್ಕೃತರಾಗಿರಲಿಲ್ಲ. ಸಮಸ್ತ ವೇದಗಳನ್ನೂ ನೆನಪಿಟ್ಟು, ತಾಳೆಗರಿಯ ಮೇಲೆ ಲೆಕ್ಕಣಿಯಿಂದ ಬರೆದ ಗ್ರಂಥಗಳನ್ನು ಓದಿ ಓದಿಸಿ ಜ್ಞಾನ ಉಳಿಸಿಟ್ಟವರೇ ಸುಸಂಸ್ಕೃತರು. ಅವರು ದಿನಾ ಕ್ಷೌರ(ಮುಖ ಕ್ಷೌರ) ಮಾಡದಿದ್ದರೇನಂತೆ ಆಗ ಜ್ಞಾನ, ಗೌರವ, ಶಿಷ್ಯವಾತ್ಸಲ್ಯ, ಭವಿಷ್ಯದ ಕಾಳಜಿ, ಸರಳ ಜೀವನ, ಇತರರಿಗೆ ಭಾರವೂ ನೋವುತಾರದುದೂ ಆದ ಜೀವನ ಶೈಲಿ, ನಿಶ್ಚಿತ ಗುರಿ, ಅಮೃತತ್ವ ಸಾಧನೆ ಇಂತವು ಸುರಕ್ಷಿತ ಮೌಲ್ಯಗಳಾಗಿದ್ದವು." ನಾರಾಯಣಾಚಾರ್ಯರ ಮಾತು ಅತೀ ಪುರಾತನತ್ವವನ್ನು ಸೂಚಿಸಿದರೂ ನಂತರದ ಕಾಲಘಟ್ಟದಲ್ಲಿನ ಪೂರ್ವಿಕರ ಬದುಕು, ಜನಜೀವನದ ಹಾದಿಯನ್ನು ಮತ್ತೆ ಹಸನಾಗಿಸಿ ತೋರಿಸುವ ಮಾರ್ಗಸೂಚಿ ಈ ಜ್ಞಾನದ ವರ್ಗಾವಣೆಯೇ ಆಗಿತ್ತು. ಯಾವುದೇ ಕ್ಷಣಕ್ಕೂ ಜೀವನದ ಧ್ಯೇಯವನ್ನು ಮರೆತು ಬಾಳಿದವರಲ್ಲ ನಮ್ಮ ಜನಪದೀಯ ಬದುಕಿನವರು. ಈಗೀಗ ಹಿಂದಣ ಬದುಕಿ ಹಾಕಿಕೊಟ್ಟ ಹಿರಿಯ ತಲೆಮಾರಿನ ಶ್ರೀಮಂತ ಬದುಕಿನ ಹಾದಿಯನ್ನು ನಮ್ಮವರು ಬಳಸಿಕೊಳ್ಳುವುದಿರಲಿ ಒಪ್ಪಿಕೊಳ್ಳಲೂ ಸಿಧ್ದರಿಲ್ಲವೆಂಬುವುದೇ ದುರಂತ. ಮಹಾಕಾವ್ಯಗಳಲ್ಲಿನ ಶುಧ್ದ ಚಾರಿತ್ರ್ಯವನ್ನು ಎತ್ತಿ ಹಿಡಿಯುವುದಕ್ಕಿಂತ ಶೀಲಹೀನ ವ್ಯಕ್ತಿತ್ವಗಳ ವೈಭವೀಕರಣ ಹೆಚ್ಚಾಗುತ್ತಿದೆ.

ಪ್ರಕೃತಿ ಸಹಜ ಬದುಕಿನಲ್ಲಿ ನಿಸರ್ಗದೊಂದಿಗೆ ಒಂದಾಗಿ ಬದುಕಿದಾಗ ಪ್ರತಿಯೊಬ್ಬನೂ ಕವಿಯಾಗಬಹುದು. ಹಾಗೆ ಭಾವನೆಗಳನ್ನು ಕೆರಳಿಸಿ ಕವಿತ್ವವನ್ನು ಪಡೆಯಲು ಹಾಗೂ ಜ್ಞಾನದ ವರ್ಗಾವಣೆಯಾಗುವಲ್ಲಿ ನಮ್ಮ ಜನಪದೀಯ ಜನಜೀವನದ ಕೊಡುಗೆ ಮಹತ್ವದೆಂಬುವುದು ಸರ್ವವಿದಿತ. ಈಚಿನ ಕಾಲಮಾನದಲ್ಲಿ ಜಾನಪದವನ್ನು ಜನಜೀವನದ ಸಮಗ್ರ ಹಿನ್ನೆಲೆಯಲ್ಲಿ ಕಾಣಬೇಕೆನ್ನುವ ವಾದ ಕೇಳಿಬರುತ್ತಿದೆ. ಅದರಲ್ಲೂ ಮೃದು ಮನಸ್ಸುಗಳನ್ನು ಪಕ್ವ ರೀತಿಯಲ್ಲಿ ಬೆಳೆಸಲು ಹಿಂದೆಲ್ಲಾ ನೆರವಾಗುತ್ತಿದ್ದ ಮೌಕಿಕ ಸಾಹಿತ್ಯದ ಬಹು ದೊಡ್ಡ ಪ್ರಕಾರವಾದ ಜನಪದ ಕಥಾ ಹಂದರಗಳನ್ನು ಮತ್ತೆ ವೈಜ್ಞಾನಿಕ ನೆಲೆಗಟ್ಟಿನಡಿ ತರಬೇಕೆನ್ನುವ ಮಾತೂ ಚಿಂತನೆಗೆ ಒಡ್ಡುವಂತದ್ದೇ. ಆದರೆ ಈ ಮಾತು ಎಷ್ಟರ ಮಟ್ಟಿಗೆ ಯಶಸ್ಸಿನ ಹಾದಿ ತುಳಿಯುತ್ತದೆಯೋ ಕಾದು ನೋಡಬೇಕಾದ ಸಂಗತಿ. ವೇದ ಪುರಾಣಗಳ ತತ್ವ ಸಂದೇಶವನ್ನೇ ಮೂಲೆಗೆ ತಳ್ಳಿದ ನಾಯಕರುಗಳಿಗೆ ಜನಪದ ಸಾಹಿತ್ಯ ರುಚಿಸುವುದೇ.? ಏನೇ ಇದ್ದರೂ ಜನಪದ ಸಾಹಿತ್ಯ ಅಸಂಖ್ಯಾತ ವಿಚಾರವಂತರ ಮನಸ್ಸನ್ನು ಸೆಳೆದಿದ್ದಂತೂ ಸುಳ್ಳಲ್ಲ. ಮತ್ತೊಂದೆಡೆ ವಿಚಾರವಾದಿಗಳು, ಜನಪದ ಹಿತಚಿಂತಕರ ನಡುವಿನ ಸಿಧ್ಧಾಂತದ ಚರ್ಚೆಗಳಲ್ಲಿ ಅಭಿವೃಧಿಯ ಭೇದದ ಸಂಗತಿಗಳನ್ನು ಮೀರಿ ಅನೇಕ ಹೊಸ ವಿಷಯಗಳು ಬೆಳಕಿಗೆ ಬಂದಿದ್ದೂ ಸತ್ಯ.

19ನೇ ಶತಮಾನದಲ್ಲಿ ಇಂಗ್ಲೆಂಡಿನ ಪ್ರಾಚೀನಾನ್ವೇಷಕರು ಹಾಗೂ ಜರ್ಮನಿಯ ಭಾಷಾ ವಿಜ್ಞಾನಿಗಳು ಸಮಾಜದ ತಳಮಟ್ಟದ ಜನರ ನಡುವೆ ಬೆರೆಯಲು ಮುಂದಾದಾಗ ಜಾನಪದ ಅಧ್ಯಯನ ಕ್ಷೇತ್ರವೊಂದು ಉಗಮಿಸಿದಂತಾಯಿತು. ಭಾರತದ ತತ್ವಶಾಸ್ತ್ರ ಹಾಗೂ ವೇದಗಳ ಕುರಿತಂತೆ ಅಪಾರ ಆಸಕ್ತಿ ಹೊಂದಿದ್ದ ಜರ್ಮನಿಯಲ್ಲಿ ಮೊದಲ ಬಾರಿಗೆ ಜನಪದ ಸಂಕಲನಗಳು ಮೈತಳೆದವು. 1812ರಲ್ಲಿ ಪ್ರಪ್ರಥಮವಾಗಿ ಗ್ರಿಮ್ ಸಹೋದರರು ಸ್ಥಳೀಯ ಜನಪದ ಕಥೆಗಳನ್ನು ಸಂಗ್ರಹಿಸಿ ವೈಜ್ಞಾನಿಕವಾದ ಅಧ್ಯಯನಕ್ಕೆ ಒಳಪಡಿಸಿ ಸಂಕಲನ ಮಾಡಿದ್ದು ಜಗತ್ತಿನ ಜನಪದ ಸಾಹಿತ್ಯಕ್ಕೆ ಮೊದಲ ಅಡಿಗಲ್ಲೆನಿಸಿತು. ಅನಂತರದಲ್ಲಿ ಯುರೋಪಿನಾದ್ಯಂತ ಜಾನಪದ ಸಾಹಿತ್ಯದ ಸಂಗ್ರಹ ಚಳುವಳಿಯೋಪಾದಿಯಂತೆ ನಡೆಯಿತು. ಅಲ್ಲಿಯವರೆಗೂ ಹಳ್ಳಿಯ ಕಥೆಗಳೆಂದು 'ವಿಧ್ವತ್ತಿನಿಂದ' ದೂರವುಳಿದಿದ್ದ ಜನಪದ ಸಾಹಿತ್ಯದ ಪ್ರಕಾರವೊಂದು ಇದ್ದಕ್ಕಿದ್ದಂತೆ ಚಿಗುರಿ ಬೆಳೆಯಿತು. ಹಾಗೆ ನೋಡಿದರೆ ಸಮೃಧ್ದ ಸಾಹಿತ್ಯದ ತವರೂರಾಗಿದ್ದ ಭಾರತಕ್ಕೇನೂ ಈ ಕ್ಷೇತ್ರ ಹೊಸದೇನಲ್ಲ. ಪಂಚತಂತ್ರ, ಜಾತಕ ಕಥೆಗಳು, ಬ್ರಹತ್ಕತೆ, ಜೈನ ಭೌಧ್ದ ಸಾಹಿತ್ಯ ಮುಂತಾದವುಗಳು ಭಾರತದ ಜನಮನದಲ್ಲಿ ಅದಾಗಲೇ ಠಿಕಾಣಿ ಹೂಡಿದ್ದವು. ಆದರೆ ಪರಕೀಯರ ಧೋರಣೆಯ ಅಡಿಯಾಳಾಗಿದ್ದ ಭಾರತಕ್ಕೆ ತನ್ನ ಅಂತಃಸತ್ವವನ್ನು ಮೇಲೆತ್ತಿ ಹಿಡಿಯುವುದು ಸಾಧ್ಯವಾಗಲೇ ಇಲ್ಲವೇನೋ. ಜರ್ಮನಿಯ ಸಹೋದರರನ್ನು ಮಾದರಿಯಾಗಿಟ್ಟುಕೊಂಡು ನಂತರದಲ್ಲಿ ಜಗತ್ತಿನ ನೂರಾರು ದೇಶಗಳು ತಮ್ಮಲ್ಲಿನ ರಸವತ್ತಾದ 'ಕಥಾಗುಚ್ಚ'ಗಳ ಸಂಕಲನವನ್ನು ಹೊರತಂದವು. ಹೀಗೆ ಅಲ್ಲಲ್ಲಿ ನಡೆದ ಹಲವಾರು ವಿಚಾರಗಳು ಜಾನಪದ ಕಥೆಗಳನ್ನು ನೋಡುವಲ್ಲಿ ಹೊಸ ಧೃಷ್ಠಿಕೋನವನ್ನು ನೀಡಿದವು.

ಕೈಗಾರಿಕೀಕರಣದ ವಿಸ್ತರಣೆ, ಬೆಳೆಯುತ್ತಿರುವ ಆಧುನೀಕರಣದ ಮನಸ್ಥಿತಿ, ನೆಲದ ಸಂಸ್ಕೃತಿಯೆಡೆಗಿನ ಅನಾಸಕ್ತಿಯ ಪ್ರಕ್ರಿಯೆಗಳು ಜನಪದ ಸಾಹಿತ್ಯದ ಮೇಲೆ ಕೊಂಚ ಮಟ್ಟಿಗೆ ಪರಿಣಾಮ ಬೀರಿವೆ. ಸಂಪೂರ್ಣವಾಗಿ ಆಧುನಿಕತೆಯತ್ತ ಮುಖಮಾಡುತ್ತಿರುವ ಈ ಕಾಲಕ್ಕೂ ನಿತ್ಯ ಬದುಕಿನಲ್ಲಿ ಕಷ್ಟಕಾರ್ಪಣ್ಯಗಳ ವಿವರಣೆಗೆ ಬಳಸಿಕೊಳ್ಳುವುದು ಹಿಂದಿನ ಜನಪದೀಯ ರಸವತ್ತಾದ ಸಾಹಿತ್ಯ ಮಾರ್ಗಗಳನ್ನೇ.

ಹಾಗೆ ನೋಡಿದರೆ ಈಗಲೂ ಈ ಪ್ರಕಾರಕ್ಕೆ ವಿಧ್ವತ್ತಿನ ಬರವಣಿಗೆ ಬಂದೇ ಇಲ್ಲ. ಮೂಲ ವಸ್ತುವೇ ಬರದಿದ್ದ ಮೇಲೆ ವಿಶ್ಲೇಷಣೆ, ವಿವರಣೆಗಳ ಕೊರತೆ ಮಾಮೂಲಿಯೇ. ಇದಕ್ಕೆಲ್ಲಾ ಮೂಲ ಕಾರಣ ಈ ಕ್ಷೇತ್ರಕ್ಕೆ ಸಿಗಬೇಕಾದ ಮಾನ್ಯತೆ, ಬೆಂಬಲ, ಪ್ರೇರಣೆ ದೊರಕದೇ ಹೋದದ್ದು. ಭಾರತದ ಭವ್ಯ ಪರಂಪರೆಯಲ್ಲಿ ಮೂಲ ವಸ್ತುವಿನ ಕೊರತೆಯಂತೂ ಇಲ್ಲವೇ ಇಲ್ಲ. ವೇದೋಪನಿಷತ್ತಿನ ಸಾಹಿತ್ಯ, ರಾಮಾಯಣ, ಭಾರತ, ಭಾಗವತಗಳಲ್ಲಿನ ಉಪ ಕಥೆಗಳು, ಆಖ್ಯಾನ, ಟೀಕೆ, ಟಿಪ್ಪಣಿಗಳೇ ಹೇರಳವಾಗಿರುವಾಗ ಮೂಲ ವಸ್ತುವಿನ ಕೊರತೆಯ ಮಾತೆಲ್ಲಿ.? ಸಮಸ್ಯೆ ಇರುವುದೇ ನಮ್ಮ ವ್ಯವಸ್ಥೆಯಲ್ಲಿ ಜೀವನೋತ್ಸಾಹ ತುಂಬಿ ಆಶಾವಾದದ ಮೂಲಕ ಬದುಕನ್ನೇ ಹಸನುಗೊಳಿಸುವ ಶ್ರೀಮಂತ ಸಾಹಿತ್ಯದ ಕ್ಷೇತ್ರವೊಂದರ ಕುರಿತಂತೆ ತಳೆದಿರುವ ತಿರಸ್ಕಾರದ ಮನಸ್ಥಿಯೇ ಜಾನಪದ ಸಾಹಿತ್ಯದ ವ್ಯವಸ್ಥಿತ ಅಧ್ಯಯನ, ತುಲನಾತ್ಮಕ ವಿವರಣೆ ಹೊರಬರದಿರಲು ಕಾರಣವಾಗಿದೆ.

ಜನಪದ ಕಥಾವಾಚಿಕತೆ ಹಾಗೂ ಕೇಳುವಿಕೆಯ ಪರಿಣಾಮವಂತೂ ಇನ್ನೂ ಗಾಡವಾದುದು. ಇಲ್ಲಿ ಸಾಹಿತ್ಯ ಸಂವೇಧನೆಯೊಂದಿಗೆ ಮಾನವೀಯ ಮೌಲ್ಯಗಳೂ ಜಾಗೃತಗೊಳ್ಳುತ್ತವೆ. "ಒಂದರ್ಥದಲ್ಲಿ ಹೇಳಬೇಕೆಂದರೆ ಅವು ಮನುಕುಲಶಾಸ್ತ್ರವನ್ನೇ ಅಭಿವ್ಯಕ್ತಗೊಳಿಸುತ್ತವೆ. ವ್ಯವಸ್ಥಿತ ಅಧ್ಯಯನ ಮಾಡಿದರೆ ಪರಂಪರಾನುಗತವಾದ ಮಾನವನ ಜೀವನ ವಿಧಾನದ ಸೂಕ್ಷ್ಮಗಳನ್ನೇ ವಿವರಿಸಬಹುದು" ಎನ್ನುತ್ತಾರೆ ವಿಚಾರವಾದಿಗಳು. ವಿಧ್ವಾಂಸರೊಬ್ಬರ ಪ್ರಕಾರ "ಜನಪದ ಕಥನಗಳಲ್ಲಿ ಭೌತಿಕ ಸಂಸ್ಕೃತಿ, ಆರ್ಥಿಕ ವ್ಯವಸ್ಥೆ, ಸಾಮಾಜಿಕ ಸಂರಚನೆ ಮತ್ತು ಧಾರ್ಮಿಕ ನಂಬುಗೆಗಳನ್ನು ಕಟ್ಟಬಹುದು. ಹೀಗಾಗಿ ಜನಪದ ಕಥೆಯ ಅಭಿವ್ಯಕ್ತಿ ಅದರ ಮೂಲ ವಸ್ತುಗಳನ್ನು ತನ್ನ ಸೃಷ್ಟಿಕಾರಕ ಅನುಭವದಿಂದ ತೆಗೆದುಕೊಳ್ಳುತ್ತದೆ."  ಜನಪದ ಸಾಹಿತ್ಯ ಮಾನವ ಇತಿಹಾಸದ ಮೂಲವಸ್ತುವನ್ನೇ ಕೆದಕಿ ಮಾನವಶಾಸ್ತ್ರೀಯ ವಿವರಗಳನ್ನು ಎತ್ತಿ ಹಿಡಿಯುವುದರ ಜೊತೆಗೆ ಮನಸ್ಸಿನ ಜಾಗೃತ ಮತ್ತು ಸುಪ್ತ ಸ್ತರಗಳ ಮೇಲಿನ ರಚನಾತ್ಮಕವಾದ ಅಭಿವ್ಯಕ್ತಿಯನ್ನೂ ಬೀರುತ್ತದೆನ್ನುವುದೂ ಸತ್ಯ. ಹೀಗಿರುವಾಗ ಈ ಎಲ್ಲಾ ಧನಾತ್ಮಕ ಸುಸಂಸ್ಕೃತ ಬೆಳವಣಿಗೆ ಆಗಬೇಕಾದುದು ಯುವ ಪೀಳಿಗೆಯಲ್ಲಿ. ಬೆಳವಣಿಗೆ ಹೊಂದಿ ಪ್ರಭುಧ್ಧರಾಗುವ ಹೊತ್ತಿಗೆ ವಿಭಿನ್ನ ರೀತಿಯಿಂದ ಜನಪದ ಪ್ರಕಾರಗಳು ಅವರ ಮನಸ್ಸಿನ ಮೇಲೆ ಅಚ್ಚೊತ್ತಿದರೆ ಅನೇಕ ಸಾಮಾಜಿಕ ಅನರ್ಥಗಳಿಗೆ ಕೊಂಚ ಕಡಿವಾಣ ಹಾಕಬಹುದು. ಇದರ ಶುರುವಾತು ಆಗಬೇಕಾದುದು ಜನ್ಮದಾತೃಗಳ ಸಂಪ್ರದಾಯಬದ್ಧ ಜೀವನ ಪಾಠದ ಮೂಲಕ. ತಾಯಂದಿರರೇ ಕಟ್ಟಿದ ಈ ದೇಶದಲ್ಲಿ ಇದರ ಅಗತ್ಯತೆ ಪ್ರಸ್ತುತ ಕಾಲಮಾನಕ್ಕೆ ತ್ವರಿತವೂ, ಅನಿವಾರ್ಯವೂ, ಮೇಲಾಗಿ ಹೆಚ್ಚು ವಾಸ್ತವಿಕವೂ ಆಗಿದೆ. ಯುವ ಪೀಳಿಗೆಯೇ ಯಾಕಾಗಬೇಕೆಂದರೆ ಅವರಲ್ಲಿ ಅದಾಗಲೇ ಅನುಕರಣಾ ಕಲೆ ಜಾಗೃತಗೊಂಡಿರುವುದರಿಂದ ಸರಿ ತಪ್ಪುಗಳೆರಡನ್ನೂ ಸ್ವೀಕರಿಸಿ ಬದುಕಿನಲ್ಲಿ ಅಳವಡಿಸಿಕೊಳ್ಳುವ ವಯಸ್ಸಿನಲ್ಲಿ ಉತ್ತಮ ಚಿಂತನೆಗಳನ್ನೇ ಹೆಚ್ಚು ಹರಿಸಿದ್ದಲ್ಲಿ ದೇಶ ಸಧೃಡತೆಯ ಹಾದಿ ಹಿಡಿಯುವುದರಲ್ಲಿ ಮಾತಿಲ್ಲ. ಈ ಪ್ರಯತ್ನ ವಯಸ್ಕರಿಗೆ ಸರಿಹೊಂದುವುದು ಕಷ್ಟ. ಯಾಕೆಂದರೆ, ಉತ್ತಮ ಉದ್ಧೇಶಿತ ಪ್ರಯತ್ನಗಳು ವಯಸ್ಕರಲ್ಲಿ ಪರಿಣಾಮಕಾರಿಯಾಗಿ ಹೊಂದಿಕೊಳ್ಳುವುದು ಬಲು ಅಪರೂಪ.! ಇದೊಂದು ಬೇಸರದ ಸಂಗತಿ ಅನ್ನಿಸಿದರೂ ಮಾನವ ತನ್ನ ಆದಿಮ ಧಾರ್ಮಿಕ, ಸಾಮಾಜಿಕ ಪರಿಸರದಲ್ಲಿ ಪ್ರತಿಕ್ರಿಯಿಸಿದ ರೀತಿಯನ್ನು ಅರಿಯಲು ಜಾನಪದ ಸಾಹಿತ್ಯಗಳ ಅಧ್ಯಯನ ಫಲವತ್ತಾದ ಕ್ಷೇತ್ರವೆಂಬುವುದನ್ನು ಮರೆಯಲಾಗದು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Rohith shetty melarikall.
Rohith shetty melarikall.
10 years ago

Super …like it. visleshane adbutha….modern jagathinalli janapada sahithya yemba padave kaneyaguvanthide.

1
0
Would love your thoughts, please comment.x
()
x