ಲೇಖನ

ಜಗವನ್ನೆ ಒಂದು ತುರ್ತು ನಿಗಾ ಘಟಕವನ್ನಾಗಿಸಿದ ಧನದಾಹಿಗಳು: ಎಂ.ಎಲ್‌.ನರಸಿಂಹಮೂರ್ತಿ

ಪರಿಸರದ ಎಚ್ಚರಿಕೆ ಮಳೆಗಾಲದಲ್ಲಿ ಪ್ರವಾಹಗಳು, ಬೆಟ್ಟಗುಡ್ಡ ಕುಸಿತಗಳ ಮೂಲಕ ನೀಡಿತ್ತು. ಆ ಸಂದರ್ಭದಲ್ಲಿ ನಾವೆಲ್ಲ ಮಾನವೀಯತೆಯ ಮಹಾ ಸಾಗರವನ್ನೆ ಹರಿಸಿದೆವು. ನೆರೆ ಸಂತ್ರಸ್ತರಿಗೆ ಆಹಾರ,ಬಟ್ಟೆ, ವಸತಿ ಕೊಡಿಸುವಲ್ಲಿ ಕೈಯಲ್ಲಾದ ಮಟ್ಟಿಗೆ ಜೊತೆಯಾದೆವು. ಆದರೆ ಬುದ್ದಿ ಕಲಿಯದ ನಾವು ಮತ್ತೆ ಮತ್ತೆ ಅದೆ ಕೃತ್ಯಗಳನ್ನು ಮುಂದುವರೆಸುತ್ತಾ ಪರಿಸರದ ಮೇಲಿನ ಹಲ್ಲೆ ಮಾತ್ರ ನಿಲ್ಲಿಸಲಿಲ್ಲ.

ಈಗ ಚಳಿಯಿಂದ ಬೇಸಿಗೆ‌ ಕಾಲಕ್ಕೆ ಬಂದೆವು. ಕೊರೋನಾದಂತಹ‌ ಮಾರಕ ಸೋಂಕುಗಳು ಬಂದಾಗಲೂ ಪರಿಸರದ ಬಗ್ಗೆ ಯಾವೊಬ್ಬನೂ‌ ಚಕಾರ ಎತ್ತುತ್ತಿಲ್ಲ. ಬದಲಾಗಿ ಕೈ ತೊಳಿ, ಬಾಯಿ ತೊಳಿ, ಮಾಸ್ಕ್ ಹಾಕು, ಕರ್ಫ್ಯೂ ಮಾಡು ಎನ್ನುವ ಮನಸ್ಥಿತಿಗಳ ರಾಜಕಾರಣಿ, ಅಧಿಕಾರಿಗಳೇ ಹೆಚ್ಚು ಇದ್ದಾರೆ.

ಅಮೇಜಾನ್ ಅರಣ್ಯ ಪ್ರದೇಶದಲ್ಲಿ ಸಾವಿರಾರು ಹೆಕ್ಟೇರ್ ಗಳು ಬೆಂಕಿಗಾಹುತಿಯಾಗಿ ಭಸ್ಮವಾಯಿತು, ಬಂಡೀಪುರ, ನಾಗರಹೊಳೆ ಸೇರಿದಂತೆ ನಮ್ಮ ದೇಶದಲ್ಲೂ ಲಕ್ಷಾಂತರ ಹೆಕ್ಟೇರ್ ಅರಣ್ಯ ಸಂಪತ್ತು ಬೆಂಕಿಗೆ, ಗಣಿಕಾರಿಕೆಗೆ, ಅಕ್ರಮಗಳ ಆಕ್ರಮಣಕಾರಿ ರಾಕ್ಷಸ ಮನಸ್ಥಿತಿಗಳಿಂದಾಗಿ ನಾಶವಾದವು. ಆಗ ಯಾವೊಬ್ಬ ರಾಜಕಾರಣಿಯೂ ಪ್ರಾಕೃತಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಲೇ ಇಲ್ಲ.

ದೆಹಲಿಯಲ್ಲಿ ವಾಯುಮಾಲಿನ್ಯದಿಂದಾಗಿ ಸಾವುನೋವುಗಳಾದವು, ಶಾಲಾ-ಕಾಲೇಜುಗಳಿಗೆ ರಜೆಗಳನ್ನು ಘೋಷಿಸಿದರು. ಆದರೂ ಪರಿಸರದ ಬಗ್ಗೆ ಯಾವ ದೊಣ್ಣೆ ನಾಯಕನೂ ಗಂಭೀರವಾಗಿ ಯೋಚನೆ ಮಾಡಿ ಪರಿಸರ ಸೂಕ್ಷ್ಮತೆಯನ್ನು ಪರಿಗಣಿಸಲೇ ಇಲ್ಲ. ಅಭಿವೃದ್ಧಿ ಎಂಬ ನೆಪದಲ್ಲಿ ಮಾಡಬಾರದಂತಹ ನೀಚ ಕೆಲಸಗಳೆಲ್ಲವೂ ಮಾಡಿದರು. ಭೋಗ ಜೀವನಕ್ಕಾಗಿ ಓಡುವ ಈ ಕಾಲಘಟ್ಟದಲ್ಲಿ ರೋಗಗಳನ್ನು ತಡೆಯಲಾಗದಷ್ಟು‌ ದುಸ್ಥಿತಿಗೆ ಬಂದು ತಲುಪಿದ್ದೇವೆ.

ಹಿಂದೆಯೂ ಇದಕ್ಕಿಂತಲೂ ಭಯಾನಕ ಪ್ಲೇಗು, ಕಾಲರದಂತಹ ಮಾರಕ ರೋಗಗಳು ಬಂದಿವೆ. ಅವು ಪ್ರಪಂಚದಾದ್ಯಂತಹ ಹರಡದೆ ಸೀಮಿತ ಪ್ರದೇಶದಲ್ಲೇ ನಾಶ ಮಾಡಿ ಹೋಗಿವೆ. ಏಕೆಂದರೆ ಆಗಿನ ಪರಿಸರ ಸಮೃದ್ಧಿ ಹಾಗೂ ಮನುಷ್ಯರಲ್ಲಿನ ರೋಗನಿರೋಧಕ ಶಕ್ತಿ. ಹಿಂದೆ ಗುಣಮಟ್ಟದ ಪೌಷ್ಟಿಕ ಆಹಾರ, ನೀರು ದೊರೆಯುತ್ತಿದ್ದವು. ಆದರೆ ಈಗ ನೀಚ ಧನದಾಹಿ ಜಗದಲ್ಲಿ‌ ವ್ಯಾಪಾರೀಕರಣಕ್ಕೆ ತುತ್ತಾಗಿ ಕುಡಿಯಲು ಬಳಸುವ ಶುದ್ಧೀಕರಿಸುವ ನೀರಿನಿಂದ ಹಿಡಿದು ಉಸಿರಾಡುವ ಗಾಳಿಯವರೆಗೂ ಯಾವುದೂ ಶುಭ್ರವಾಗಿಲ್ಲ. ಯಾವುದನ್ನು‌ ಸೇವಿಸಿದರೂ ಅನಾರೋಗ್ಯ, ಸೇವಿಸದಿದ್ದರೂ ಸಾವು. ಇಂತಹ ಕ್ಲಿಷ್ಟಕರವಾದ ನೀಚವಾದ ಸ್ವಾರ್ಥ ಜಗದಲ್ಲಿ ಬಳಲಾಟದಲ್ಲೇ ಬದುಕುತ್ತಿದ್ದೇವೆ.

ಎಲ್ಲರಿಗೂ ಇದು ತಪ್ಪು ಎನ್ನುವುದು ಗೊತ್ತಿದೆ, ಹಾಗೇ ತಪ್ಪು‌ಮಾಡುವುದು ಅನಿವಾರ್ಯ ಎಂಬಂತೆ ಸಾಚಾತನದಿಂದಲೇ ಇನ್ನೊಬ್ಬರಿಗೆ ತೊಂದರೆಯಾದರೂ ಪರವಾಗಿಲ್ಲ, ನಾನು, ನನ್ನವರು ಸುಖವಾಗಿದ್ದರೇ ಸಾಕೆಂಬ ಒಳ್ಳೆಯದಲ್ಲದ ಮನಸ್ಥಿತಿಗಳ ನಡುವೆ ನಾವೆಲ್ಲರೂ ಸಂತೋಷವಾಗಿ ಬದುಕುತ್ತಿದ್ದೇವೆ ಎಂಬ‌ ಭ್ರಮೆಯಲ್ಲಿ ಭೀಕರ ಆತಂಕದಲ್ಲಿದ್ದೇವೆ.

ನೆನಪಿರಲಿ ನಾವು ಯಾವುದರಲ್ಲೂ ಸಾಧನೆ ಮಾಡಲಾಗುತ್ತಿಲ್ಲ ಕೇವಲ ಭ್ರಮೆಯಷ್ಟೆ. ಪ್ರಕೃತಿಯಲ್ಲಿನ ಅದ್ಭುತವಾದ ಅಂಶಗಳನ್ನು ಪತ್ತೆ ಮಾಡುವುದೇ ಸಾಧನೆ ಎಂದು ಸಂಭ್ರಮಿಸುವವರು ನಾವು. ನಿಧಾನವಾಗಿ ಯೋಚನೆ ಮಾಡಿದರೆ ಪ್ರಕೃತಿ ಹೊರೆತು ಪಡಿಸಿದ ಯಾವ ಕಣವೂ ಸೃಷ್ಟಿಯಾಗಿಲ್ಲ, ಸೃಷ್ಟಿ ಮಾಡಲೂ ಸಾಧ್ಯವಿಲ್ಲ. ಪ್ರತಿಯೊಂದು ಪ್ರಕೃತಿಯ ಭಿಕ್ಷೆಯಷ್ಟೆ. ಇಂತಹ ಪ್ರಕೃತಿಯಿಂದ ಭಿಕ್ಷೆ ಪಡೆಯುತ್ತಿರುವ ಭಿಕ್ಷುಕರಾದ ನಾವೂ ಪ್ರಕೃತಿಯನ್ನೇ ವಿಕೃತಗೊಳಿಸಲು ಹೊರಟಾಗ, ಹೊಡೆತ ಬೀಳುವುದು ನಮ್ಮ ಹೊಟ್ಟೆಗೆ, ನಮ್ಮ ಮನುಕುಲಕ್ಕೆ. ಮುಂದೆ ಗಾಳಿ ಸೋಕಿದರೆ ಸಾವು, ಬಿಸಿಲು ಮೈಮೇಲೆ ಬಿದ್ದರೆ ಬೊಬ್ಬೆ ಬರುವುದು, ನಡೆದಾಡಿದರೆ ನರಗಳ ದೌರ್ಬಲ್ಯ ಇತ್ಯಾದಿಯಲ್ಲಿ ಬಳಲುತ್ತಾ ಜಗವೇ ಒಂದು ತುರ್ತು ನಿಗಾ ಘಟಕವಾಗಿ (ICU) ಮಾರ್ಪಡುವ ಕಡೆ ಹೊರಟಿದ್ದೇವೆ. ನಮ್ಮೆಲ್ಲರಿಗೂ ಶುಭವಾಗಲಿ…

ಎಂ.ಎಲ್‌.ನರಸಿಂಹಮೂರ್ತಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *