ಜಗದ್ವಂದ್ಯ ಭಾರತಂ ಪುಸ್ತಕ ವಿಮರ್ಶೆ: ಅಶ್ಫಾಕ್ ಪೀರಜಾದೆ


ಜಗದ್ವಂದ್ಯ ಭಾರತಂ {ಕಾದಂಬರಿ}

ಲೇಖಕರು- ರಾಜಶೇಖರ ಮಠಪತಿ [ರಾಗಂ]

“ದೇಶವೆಂದರೆ ದೇವರಿಗೂ ಮಿಗಿಲು, ನಮ್ಮ ಕಲ್ಪನೆಯಲ್ಲಿ ಹುಟ್ಟುವ ದೇವರಗಳು ಕೋಟಿ ಕೋಟಿ. ಅವರ ರೂಪ ಅವತಾರಗಳು ಸಾವಿರ ಸಾವಿರ. ಆದರೆ ದೇಶ ಹಾಗಲ್ಲ.ಅದು ನಾವು ನೆಲಸಿದ ನೆಲೆಯಾಗಿ ನೆಲವಷ್ಟೆ ಅಲ್ಲ. ನಮ್ಮ ಅನ್ನ, ಅಸ್ತಿತ್ವ, ಸ್ವಾತಂತ್ರ್ಯಗಳ ಭರವಸೆ. ನಾವು ಕಂಡು ಮುಟ್ಟಿ ಅನುಭವಿಸಬಹುದಾದ ವಾಸ್ತವ. ದೇಶ ಭದ್ರವಾಗಿದ್ದರೆ ನಾವೂ ಭದ್ರ. ನಮ್ಮ ನಾಳೆಗಳೂ ಭದ್ರ. ದೇಶದ ಗೌರವಕ್ಕೆ ಧಕ್ಕೆಯಾಗದಂತೆ ಬದುಕುಬೇಕು” ಇದು ಮುಸ್ಲಿಂ ಕುಟುಂಬವೊಂದರ ಆದರ್ಶ ಮತ್ತು ಜೀವನ ಸಿದ್ಧಾಂತ. ಕಾದಂಬರಿಯ ಕಥೆ ತೆರೆದುಕೊಳ್ಳುವದೇ ಇಂಥ ದೇಶಪ್ರೇಮವನ್ನ ಉದ್ದೀಪಿಸುವ ನುಡಿಗಳಿಂದ. ಕಥಾನಾಯಕ ಅಹಮ್ಮದ ತನ್ನ ತಂದೆ ಬೋಧಿಸುತ್ತ ಬಂದ ಇಂಥ ದೇಶಭಕ್ತಿಯ ಪಾಠಗಳು ಕೇಳುತ್ತಲೇ ಬೆಳೆದು ರಾಷ್ಟ್ರಪ್ರೇಮಿಯಾದವ. ದೇಶಪ್ರೇಮ ದೇಶಭಕ್ತಿ ಎನ್ನುವುದು ಅವರ ಪೂರ್ವಜರ ಕೊಡೆಗೆಯಾಗಿ ರಕ್ತಗತವಾಗಿ ಬಂದಿರತಕ್ಕಂಥದ್ದು. ಈಗ ಇರುವ ಹಕ್ಕು ಅಜ್ಜಿ, ತಂದೆ ಸಲಾವುದ್ದೀನ್ ಅಹಮ್ಮದನನ್ನು ಒಬ್ಬ ದೇಶ ಪ್ರೇಮಿಯಾಗಿ ಬೆಳೆಸುವದರಲ್ಲಿ ಯಶಸ್ವಿಯಾಗಿದ್ದಾರೆ. ಸಲ್ಲಾವುದ್ದೀನನ ದೇಶಭಕ್ತ ಸ್ನೇಹಿತ ದಾಸಬಾಬು ಇವರಿಂದ ರಾಷ್ಟ್ರದ ಚರಿತ್ರೆ ರಾಷ್ಟ್ರಧ್ವಜದ ಚರಿತ್ರೆ ಅರಿತುಕೊಂಡು ಬೆಳದಿದ್ದು ಅಲ್ಲದೇ ರಾಷ್ಟ್ರಾಭಿಮಾನವನ್ನು ತನ್ನ ದೇಹದ ಕಣಕಣದಲ್ಲಿ ತುಂಬಿಕೊಂಡವನು. ತನ್ನ ಮಕ್ಕಳಿಗೆ ಕೂಡ ಇದೇ ರಾಷ್ಟ್ರಾಭಿಮಾನದ ಪಾಠವನ್ನು ಬೋಧಿಸುತ್ತಿದ್ದವನ ಮನೆಯಲ್ಲಿ ಅದೇನು ಘಟನೆ ಸಂಭವಿಸಿದೆಯೋ ಇದರಿಂದ ಅಹಮ್ಮದ ತುಂಬ ನೊಂದುಕೊಂಡಿದ್ದಾನೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುದರ ಬಗ್ಗೆ ಯೋಚಿಸುತ್ತಿದ್ದಾನೆ. ದೇಶಕ್ಕಾಗಿ ಹುತಾತ್ಮರಾದ ಮನೆಯಲ್ಲಿ ಆತ್ಮಹತ್ಯೆಯ ಯೋಚನೆ ಮಾಡುವುದು ತಪ್ಪು ಆದರೆ ಅಪಮಾನದ ಈ ಭಾರ ಹೊತ್ತು ಬದಕುದು ಹೇಗೇ ?.

ಅಹಮ್ಮದನ ಈ ದ್ವಂದ್ವದೊಂದಿಗೆ ಕತೆಯ ಆರಂಭವಾಗುತ್ತದೆ. ಹಾಗಾದರೆ ಅಹಮ್ಮದ ಅಪಮಾನದಿಂದ ತೆಲೆತಗ್ಗಿಸಬೇಕಾದಂಥ ಘಟನೆ ನಡೆದಿದ್ದಾದರೂ ಏನು? “ದೇಶದ ಬಾವುಟ ಅಂಗೀಕಾರವಾದ ದಿನವೇ ನೀನು ಹುಟ್ಟಿರುವೆ. ನನಗೆ ನಿನೆಂದರೆ ಬಾವುಟ, ಬಾವುಟವೆಂದರೆ ದೇಶ. ಈ ಎರಡನ್ನು ನನ್ನ ಪ್ರಾಣ ಇರುವವರೆಗೂ ಕೆಳಗೆ ಬಿಳಲು ಬಿಡುವದಿಲ್ಲ” ಎನ್ನುವ ಸಲಾವುದ್ದೀನನ ಮಾತಗಳು ಅಹಮ್ಮದನ ಸ್ಮೃತಿ ಪಟದಲ್ಲಿಯಾವತ್ತಿಗೂ ಹಸಿರಾಗಿರುವ ಮಾತುಗಳು. ಇದೇ ಮಾತಿನ ಪ್ರೇರಣೆಯಲ್ಲಿ ತನ್ನ ಮಗ ಇರ್ಪಾನನನ್ನು ರೂಪಿಸಿದ್ದಾನೆ. ಆದರೆ ಅದೇ ಇರ್ಫಾನ ಹೀಗೇಕಾದ? ಮಗ ಇರ್ಫಾನ ಮಾಡಿದ ಕೆಲಸದಿಂದ ಇಂದು ಅಹಮ್ಮದ ಅಪಮಾನ ಅವಮಾನದ ಸ್ಥಿತಿ ಎದುರಿಸಬೇಕಾಗಿದೆ. ಹಾಗಾದರೆ ಇರ್ಫಾನ ಮಾಡಿದ್ದ ತಪ್ಪಾದರು ಏನು? ದೇಶ ಭಕ್ತರ ಮನೆಯಲ್ಲಿ ಹುಟ್ಟಿ ಬೆಳೆದ ಇರ್ಫಾನ್ ತಂದೆ ಅಹಮ್ಮದನ ಅಭಿಮಾನಕ್ಕೆ, ಘನತೆಗೆ ಪೆಟ್ಟು ಬೀಳುವಂಥ ಮಾಡಿದ ಕಾರ್ಯವಾದರು ಯಾವುದು ಎನ್ನುವ ಗುಟ್ಟು ಕಾದಂಬರಿ ಕೊನೆಯವರೆಗೂ ಬಿಟ್ಟುಕೊಡುದಿಲ್ಲ. ನಡುನಡುವೆ ದೇಶದ ಚರಿತ್ರೆ ಮತ್ತು ಬಾವುಟದ ವಿವರಣೆಗಳು ಸ್ವಲ್ಪ ಅತಿಯನಿಸಿದರೂ ಅದರೊಂದಿಗೆ ಪದೇಪದೇ ಅಹಮ್ಮದ ತನ್ನನ್ನು ಪ್ರಶ್ನಿಸಿಕೊಳ್ಳುತ್ತಿದ್ದ ತನ್ನ ಮಗ ಇರ್ಫಾನ್ ಹೀಗೇಕಾದ ? ಎನ್ನುವ ಪ್ರಶ್ನೆ ಓದುಗರಲ್ಲಿ ಕುತೂಹಲ ಮೂಡಿಸುತ್ತಲೇ ಕೊನೆಯ ಅಧ್ಯಾದವರೆಗೂ ಪ್ರಶ್ನೆಯಾಗಿಯೇ ಕಾಡುತ್ತ ಇಡೀ ಕಾದಂಬರಿಯನ್ನು ಕೆಳಗಿಡದೇ ಓದುವಂತೆ ಮಾಡುತ್ತದೆ. ಒಂದು ಕತೆಯ ಮುಖಾಂತರ ದೇಶ ವಿಭಜನೆಯ ಇತಹಾಸ ಅದಕ್ಕೆ ಹೊಂದಿಕೊಂಡಂತೆ ನಮ್ಮ ರಾಷ್ಟ್ರಧ್ವಜ ತಿರಂಗಾದ ಸಂಪೂರ್ಣ ಇತಿಹಾಸವನ್ನು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ಅಷ್ಟೆಯಲ್ಲ ಇಡೀ ಭಾರತಿಯರಲ್ಲಿ ತನ್ಮೂಲಕ ರಾಷ್ಟ್ರಪ್ರೇಮವನ್ನು ಬಿತ್ತುವುದು ಲೇಖಕರ ಉದ್ದೇಶವಾಗಿದೆ.

ಈ ನಿಟ್ಟಿನಲ್ಲಿ ಅವರು ಇತಿಹಾಸದ ಅಭ್ಯಾಸ ಮಾಡುವ ಮೂಲಕ ತುಂಬಾ ಶ್ರಮವಹಿಸಿ ಸಾಕಷ್ಟು ಹೋಂವರ್ಕ ಮಾಡಿರುವುದು ಗೊತ್ತಾಗುತ್ತದೆ. ಇದೇ ಕಾರಣಕ್ಕೆ ಜಗದ್ವಂದ್ಯ ಭಾರತಂ ಒಂದು ವಿಭಿನ್ನ ವಿಶಿಷ್ಠ ಕೃತಿಯಾಗಿ ನಿಲ್ಲುತ್ತದೆ. ಸ್ವಾತಂತ್ರ್ಯದ ನಂತರ ಅಧಿಕಾರಕ್ಕಾಗಿ ನಮ್ಮ ನಾಯಕರು ದೇಶವನ್ನು ವಿಭಜನೆ ಮಾಡಿದ ಪರಿಣಾಮ ದೇಶದ ಪ್ರಜೆಗಳು ಏನೆಲ್ಲ ಸಂಕಷ್ಟಗಳನ್ನು ಏದುರಿಸಬೇಕಾಯಿತು ಎನ್ನುವದನ್ನು ಕಾದಂಬರಿ ತುಂಬಾ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಆಗ ಮುಂಬೈನಲ್ಲಿ ನಡೆದ ದೊಂಬಿಗಳು ಹಿಂಸೆಗಳು ಜನರನ್ನು ಹೇಗೆ ವಿನಾಶದಂಚಿಗೆ ದೂಡಿದವು ಎನ್ನುವುದು ತುಂಬಾ ಹೃದ್ಯವಾಗಿ ಲೇಖಕರು ಇಲ್ಲಿ ಚಿತ್ರಿಸಿದ್ದಾರೆ. ಮುಂಬೈ ಭೇಂಡಿ ಬಝಾರಿನ ದೃಶ್ಯಾವಳಿಗಳು ನಮ್ಮ ಕಣ್ಣುಮುಂದೆ ನಡೆಯುವಂತೆ ಐತಿಹಾಸಿಕ ದಿನಾಂಕಗಳ ಸಮೇತ ದಾಖಲಿಸುತ್ತಾರೆ. ಮುಸ್ಲಿಂ ಕುಟುಂಬವೊಂದು ಅನುಭವಿಸುವ ನರಕಯಾತನೆ, ಆತಂಕ, ತಲ್ಲಣಗಳನ್ನು ಇಡೀ ಮನುಷ್ಯ ಸಮುದಾಯದ ಸಂಕಟವೆನ್ನವಂತೆ ಸಾಂಕೇತಿಕವಾಗಿ ಕತೆಯನ್ನು ಓದುಗರ ಮುಂದೆ ಇಡುತ್ತಾರೆ. ಅಹಮ್ಮದ ಈ ಕಥೆಯ ನಾಯಕನಾಗಿ ವರ್ತಮಾನದಲ್ಲಿ ನಿಂತು ಭವಿಷ್ಯ ಮತ್ತು ಭವಿಷ್ಯತ್ತಿನ ಘಟನಾವಳಿಗಳಿಗೆ ಸಾಕ್ಷಿಯಾಗುತ್ತಾನೆ. ತನ್ನ ಬಾಲ್ಯದಲ್ಲಿ ತನ್ನ ತಂದೆ ಸಲಾವುದ್ದೀನ್ ದೇಶ ವಿಭಜನೆಯ ಕಾಲದಲ್ಲಿ ಅನುಭವಿಸುವ ನರಕಯಾತನೆ, ಹಿಂಸೆಯ ದುಳ್ಳುರಿಯಿಂದ ಇಡೀ ಭೇಂಡಿ ಬಝಾರ್ ಸುಟ್ಟು ಬೂದಿಯಾಗುವುದು, ಸಾವಿರಾರು ಜನ ತನ್ನ ಮನೆ ಅಂಗಡಿಗಳನ್ನು ಕಳೆದುಕೊಂಡು ಬೀದಿಗೆ ಬಿದಿದ್ದು ಅಲ್ಲದೇ ಮಾನ ಪ್ರಾಣಗಳನ್ನು ಕಳೆದುಕೊಂಡು ಬಿಕ್ಕಳಿಸು ದೃಶ್ಯಗಳು ಓದುಗನ ಕರುಳು ಹಿಂಡುವಂತಿವೆ.

ಇದಕ್ಕೆ ಉದಾಹರಣೆಯಾಗಿ ಸಲಾವುದ್ದೀನನ ಸ್ನೇಹಿತ ವಸಂತ ಪರೀಟನ ಮೇಲೆ ಹಲ್ಲೆ, ಅವನ ಮಗಳ ಗುಲಾಭಿ ಮೇಲೆ ಅತ್ಯಾಚಾರ, ಹೆಂಡ್ತಿಯ ಕತ್ತು ಕತ್ತರಿಸಿ ಕೊಲೆ… ಇಂಥ ಅನೇಕ ಘಟನೆಗಳು ದೇಶ ವೀಭಜನೆಯಿಂದಾದ ಭೀಕರತೆಯ ಕಾರಣ ಬೆಚ್ಚಿ ಬೀಳಿಸುವಂತೆ ಮಾಡುತ್ತವೆ. ” ದೇಶ ವಿಭಜನೆಯ ಸುದ್ಧಿ ರೆಡಿಯೋದಲ್ಲಿ ಬಿತ್ತರಗೊಳ್ಳುತ್ತಿದ್ದಂತೆಯೇ ಬೆಳಕಿನ ಬೇಂಡಿ ಬಝಾರ್ ತುಂಬ ಕತ್ತಲೆ ಆವರಿಸುತ್ತದೆ. ಮುಂದೆರಡು ದಿನಗಳಲ್ಲಿ ದಂಡಿ ದಂಡಿಯಾಗಿ ಜನ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇನ್ನೆಲ್ಲಿಗೂ ಗುಳೆ ಹೋಗುತ್ತಿದ್ದಾರೆ. ಭೇಂಡಿ ಬಜಾರಿಗೆ ಬಿದ್ದ ಬೆಂಕಿಯಲ್ಲಿ ಸಲಾವುದ್ದೀನನ ಸೈಕಲ್ ಶಾಫ ಕೂಡ ಸುಟ್ಟು ಭಸ್ಮವಾಗಿದೆ. ಇಡೀ ಭೇಂಡಿ ಬಜಾರ್ ರುದ್ರಭೂಮಿಯಾಗಿ ಪರಿವರ್ತನೆಯಾಗಿದೆ. ಸಲಾವುದ್ದೀನ್ ನ ಸದ್ಭಾವನಾ ಗುಂಪಿನ ಗೆಳೆಯರ ಎಲ್ಲ ಪ್ರಯತ್ನಗಳು ಶಾಂತಿ ಮೂಡಿಸುವಲ್ಲಿ ಸೋತಿವೆ. ಹಿಂದು ಮುಸ್ಲಿಂ ಹೆಸರಿನಲ್ಲಿ ಎಲ್ಲರೂ ಕಚ್ಚಾಡುತ್ತಿದ್ದಾರೆ. ರಕ್ತಸಿಕ್ತ ರಸ್ತೆಗಳಲ್ಲಿ ” ಅಲ್ಲಾಹು ಅಕ್ಬರ್, ಸತ್ ಶ್ರೀ ಕಾಲ್, ಜೈ ಶ್ರೀರಾಮ್, ಭಗಾದೋ ಸಾಲಂಕೋ, ಕುತ್ತೆ ಕಿ ತರಾ ಕಾಟೋ, ರಂಡಿ ಬನಾಲೋ ಲೌಂಡಿಕೋ… ಎನ್ನುವಂಥ ದ್ವೇಷದ ಜ್ವಾಲೆ ಎಲ್ಲಡೆ ಹರಡ್ತಾಯಿದೆ. ಇಂಥ ವಿಷಮ ಪರಿಸ್ಥಿತಿಯಲ್ಲೇ ಗಾಂಧಿ ಹತ್ಯೆ ನಡೆದಿದ್ದು ಕೂಡ ಕಾಳ್ಗಿಚ್ಚಿನಂತೆ ಹರಡುತ್ತದೆ. ಹಿಂಸೆಯ ಮಟ್ಟ ಮೀತಿ ಮೀರುತ್ತದೆ. ಇಂಥದರಲ್ಲಿ ಸಲಾಉದ್ದೀನ್ ಇಲ್ಲಿರುವುದು ಸುರಕ್ಷಿತವಲ್ಲ ಎಂದು ಭಾವಿಸುವ ಅವನ ಸದ್ಭಾನಾ ಬಳಗದ ಸ್ನೇಹಿತರು ಅವನನ್ನು ಕುಟುಂಬ ಸಮೇತನಾಗಿ ಸಮುದ್ರದ ಮಾರ್ಗವಾಗಿ ಗೋವಾಕ್ಕೆ ಸಾಗಹಾಕುವ ಉಪಾಯ ಮಾಡುತ್ತಾರೆ. ಮನಸ್ಸು ಮಾಡಿದರೆ ಪಾಕಿಸ್ತನಕ್ಕೂ ಹಾರಬಹುದಾದ ಬಹಳಷ್ಟು ಮುಸ್ಲಿಂರು ತಮ್ಮಲ್ಲಿನ ರಾಷ್ಟ್ರಾಭಿಮಾನದ ಕಾರಣ ಹೋಗದೇ ಬದುಕಿದರೂ ಭಾರತದಲ್ಲೆ ಸತ್ತರೂ ಭಾರತದಲ್ಲೆ ಎನ್ನುವ ನಿರ್ಧಾರಕ್ಕೆ ಬಂದಿರುತ್ತಾರೆ. ಗಾಂಧೀಜಿ ಹತ್ಯೆ ಮಾಡಿದವನು ಒಬ್ಬ ಮುಸ್ಲಿಂ ಯುವಕ ಅನುವ್ನ ಸುಳ್ಳ ಸುದ್ದಿ ಇನ್ನಷ್ಟು ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳಲು ಕಾರಣವಾಗುತ್ತದೆ. ಆದರೆ ನಾಥೋರಾಂ ಗೋಡ್ಸೆ ಎಂಬಾತ ಈ ಹತ್ಯೆ ಮಾಡಿರುವ ಸತ್ಯ ನಂತರ ಬೆಳಕಿಗೆ ಬರುತ್ತದೆ. ಆದರೆ ಅಲ್ಲಿಯವರೆಗೆ ಎಲ್ಲವೂ ಮುಗಿದು ಹೋಗಿರುತ್ತದೆ. ನಡೆದ ಎಲ್ಲ ವಿವರಗಳನ್ನು ಲೇಖಕರು ಕರಾರುವಕ್ಕಾಗಿ ಐತಿಹಾಸಿಕ ದಿನಾಂಕದೊಂದಿಗೆ ವಿವರಿಸೋದು ಇತಿಹಾಸವನ್ನು ಓದಿದಷ್ಟೆ ರೋಮಾಂಚನವನ್ನು ತಂದು ಕೊಡುತ್ತದೆ.

ಮುಂದೆ ಸಲಾವುದ್ದೀನ ಸಹ ತನ್ನ ಕುಟುಂಬದೊಂದಿಗೆ ನಗರ ಬಿಡಬೇಕಾದ ಅನಿವಾರ್ಯತೆ. ದಾಸ್ ಬಾಬು, ಶ್ಯಾಮಲ್ ದಾಸ, ಬಿಕೋರಾಂ ಮತ್ತು ಇನ್ನಿತರ ಸ್ನೇಹಿತರ ಸಹಾಯ ಮತ್ತು ಸಲಹೆಯಿಂದಾಗಿ ಸಮುದ್ರಮಾರ್ಗವಾಗಿ ಗೋವಾಕ್ಕೆ ಬಂದು ಇಳಿಯುತ್ತಾನೆ. ಮುಂಬೈದಿಂದ ಗೋವಾವರೆಗಿನ ಪಯಣದ ರೋಚಕತೆ ಮತ್ತು ಗುಳೆ ಹೊರಟ ಜನರ ಆತಂಕ ಕೂಡ ಇಲ್ಲಿ ಓದಿಯೇ ಅನುಭವಿಸಬೇಕು. ಮೊದಲೇ ನಿಶ್ಚಯವಾದಂತೆ ಗೋವಾದಿಂದ ಕನ್ನಡ ನೆಲದ ಗರಗಕ್ಕೆ ಬಂದು ಸೇರಬೇಕು. ಗರಗದ ಧಣಿ ಶಂಕರ ರಾವ್ ಇಂಥ ನಿರಾಶ್ರಿತರಿಗೆಲ್ಲ ಆಶ್ರಯ ನೀಡುತ್ತಿರುವ ಮಹಾನುಭಾವ. ಆದರೆ ಅವರು ಕಳಿಸಿಕೊಡುವ ಟ್ರಕ್ ಗಾಗಿ ಕಾಯುವ ಸರದಿ ಇವರದು. ಟ್ರಕ್..ಯಾವಾಗ ಬರುತ್ತೆ ಯಾವಾಗ ಬರುತ್ತೆ ಎನ್ನುವ ಪ್ರಶ್ನೆ ಜನರಲ್ಲಿ ಆತಂಕ ಮೂಡಿಸುತ್ತಿರುತ್ತದೆ. ಹವಾಮಾನ ವೈಪರಿತ್ಯದ ನಡುವೆ ಕಡಿದಾದ ಘಾಟ ದಾರಿಗಳಿಂದ ಬಂದು ಪ್ರಯಾಣಿಕರನ್ನು ಹೊತ್ತಯ್ಯುವ ಕೆಲಸ ಟ್ರಕ್ಕಿನದು. ಆ ಟ್ರಕ್ ಬರುವವರೆಗೂ ಉಸಿರು ಬಿಗಿ ಹಿಡಿದುಕೊಂಡು ಕಾಯುವ ಸರದಿ ಪ್ರಯಾಣಿಕರದು. ಈ ಅವಧಿಯಲ್ಲಿ ಕೂಡ ಸಾವು ನೋವಿನ ಸಾಕಷ್ಟು ಘಟನೆಗಳು ನಡೆಯುತ್ತವೆ. ಈ ಎಲ್ಲ ಘಟನೆಗಳ ನಡುವೆ ಗೋವಾದಿಂದ ತಂದು ಸುರಕ್ಷಿತವಾಗಿ ದಡ ಸೇರಿಸಿದ ಹಡುಗು ಚಾಲಕ ಹಾಸಿಂ ಜಮಾದಾರ, ಗೋವಾ ಮತ್ತು ಗರಗದ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಮಲ್ಲೇಶಪ್ಪ ಕರಡಿಗುಡ್ಡ, ಕೊನೆಗೆ ಗರಗದಲ್ಲಿ ನೆಲೆಯನ್ನು ಒದಗಿಸಿದ ಶಂಕರರಾವ್ ಧಣಿ ಮಾನವೀಯತೆಯ ಸಾಕಾರಮೂರ್ತಿಗಳಾಗಿ ನಮ್ಮ ಮುಂದೆ ನಿಲ್ಲತ್ತಾರೆ. ಬಾಂಬೆಯಿಂದ ಆರಂಭವಾದ ಕಥೆ ಧಾರವಾಡದ ಗದಗಕ್ಕೆ ಬಂದು ಸೇರಿಕೊಳ್ಳುತ್ತದೆ. ನಂತರ ಸಲಾವುದ್ದೀನನ ಕುಟುಂಬ ಇಲ್ಲಿ ನೆಲೆ ಕಂಡುಕೊಳ್ಳುತ್ತದೆ. ನಂತರ ಕೆಲವು ದಿನಗಳ ಬಳಿಕ ಸಲಾವುದ್ದೀನ್ ಮತ್ತು ಶಂಕರರಾವ್ ವಿಧಿವಶರಾಗುತ್ತಾರೆ. ನಂತರ ಎಲ್ಲ ಜವಾಬ್ಧಾರಿಯೂ ಅಹಮ್ಮದನನ ಹೇಗಲೇರುತ್ತದೆ. ಮಗ ಇರ್ಫಾನ್ ಮತ್ತು ಮಗಳು ಅಂಜುಮ ಇವರಿಬ್ಬರಲ್ಲಿಯೂ ದೇಶಭಕ್ತಿ ತುಂಬುದರಲ್ಲಿ ಅಹಮ್ಮದ್ ಹಿಂದೆ ಬೀಳುದಿಲ್ಲ. ಆದರೆ ವಿಧಿಯ ಲೀಲೆಯೇ ಬೇರೆ ಎನ್ನುವಂತೆ ಇರ್ಫಾನ್ ಈಗ ತನ್ನ ತಂದೆಯ ದೃಷ್ಟಿಯಲ್ಲಿ, ಲೋಕದ ದೃಷ್ಟಿಯಲ್ಲಿ ಆರೋಪಿಯಂತೆ ನಿಂತಿದ್ದಾನೆ. ಹಾಗದರೆ ದೇಶಕ್ಕಾಗಿ ತನ್ನ ಪ್ರಾಣವನ್ನೆ ಮುಡಿಪಾಗಿಟ್ಟ ಅಹಮ್ಮದನ ಮನೆಯಲ್ಲಿ ನಡೆದಿದ್ದಾರು ಏನು ? ಒಬ್ಬ ದೇಶ ಭಕ್ತನ ಹೊಟ್ಟೆಯಲ್ಲಿ ದೇಶದ್ರೂಹಿ ಹುಟ್ಟಿದನೆ ? ಹಿಗೆಲ್ಲ ನಡೆಯಲು ಕಾರಣವಾದರೂ ಏನು ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಇಡೀ ಕಾದಂಬರಿ ಓದಲೇಬೇಕು.

ಕಾದಂಬರಿಯಲ್ಲಿ ಬರುವ ಹಿಂದಿ ಮಿಶ್ರಿತ ಕನ್ನಡ ಭಾಷೆ ಮುಂಬೈನ ಪರಿಸರಕ್ಕೆ ಜೀವಂತಿಕೆ ಒದಗಿಸಿದರೆ ಇತ್ತ ಉತ್ತರ ಕರ್ನಾಟಕದ ಭಾಷೆ ಧಾರವಾಡದ ಪರಿಸರವನ್ನ ತುಂಬ ಆಪ್ತವಾಗಿ ಕಟ್ಟಿಕೊಡುತ್ತದೆ. ಪಾತ್ರ ಪೋಷಣೆ, ತಂತ್ರ, ಶೈಲಿ, ವಿಭಿನ್ನ ಕಥಾವಸ್ತು, ಕಥೆಗೆ ಪೂರಕವಾದ ಭಾಷೆ ಈ ಎಲ್ಲ ಅಂಶಗಳು ಕಾದಂಬರಿಯನ್ನು ಗೆಲ್ಲಿಸಿವೆ ಎಂದು ಹೇಳಬಹುದು. ಕೆಲವು ಇತಿಹಾಸಿಕ ಪ್ರಮಾದಗಳನ್ನು ಕಹಿಯಾದ ಕಟು ಸತ್ಯಗಳನ್ನು ಸಹ ಓದುಗರ ಮುಂದೆ ಇಡುವದರಲ್ಲಿ ಕೃತಿಕಾರರು ಹಿಂದೆ ಸರಿಯುವದಿಲ್ಲ. ಸ್ವಾತಂತ್ರ್ಯದ ವಿಷಯಗಳು ಇಟ್ಟುಕೊಂಡು ಕನ್ನಡದಲ್ಲಿ ಹಲವಾರು ಕಾದಂಬರಿಗಳು ಬಂದಿವೆ. ಆದರೆ ಅಲ್ಲಿ ಇರವಂಥ ಪ್ರೇಮಕಾಮದ ಘಟನೆಗಳು ಇಲ್ಲಿ ಬರುವದಿಲ್ಲ. ಇಂಥ ಕಥಾವಸ್ತುವಿನ ನಿರೀಕ್ಷೆಯಲ್ಲಿದವರಿಗೆ ಇಲ್ಲಿ ಸ್ವಲ್ಪ ನಿರಾಸೆಯಾಗಬಹುದು. ಆದರೆ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರು ಓದಬಹುದಾದ ಒಂದು ಉತ್ತಮವಾದ ಶುಧ್ಧ ಐತಿಹಾಸಿಕ, ದೇಶ ಪ್ರೇಮ ಮೂಡಿಸುವ ಕಾದಂಬರಿ ಇದು ಎಂದು ಹೇಳಬಹುದು. ಪ್ರಸ್ತುತ ರಾಜಕೀಯ ಸನ್ನಿವೇಶಗಳು ಹುಟ್ಟು ಹಾಕುತ್ತಿರುವ ಹುಸಿ ರಾಷ್ಟ್ರವಾದ ಮತ್ತು ದಿನೆದಿನೇ ಬೆಳೆಯುತ್ತಿರುವ ಕೋಮವಾದದ, ನಡುವೆ ಭಾವೈಕ್ಯತೆ ಬೆಸೆಯುವ ಪ್ರಯತ್ನವಾಗಿ ಈ ಕೃತಿ ಒಂದು ಆಶಾಕಿರಣವೆಂದರೆ ತಪ್ಪಾಗಲಾರದು. ಹೀಗಾಗಿ ಇಂದಿನ ಸಂದರ್ಭದಲ್ಲಿ ಇದೊಂದು ಮಹತ್ವದ ಕೃತಿಯಂದೇ ಹೇಳಬಹುದು.
– ಅಶ್ಫಾಕ್ ಪೀರಜಾದೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x