ಲೇಖನ

ಜಗದೊಳು ಸರ್ವವೂ ಸುಖಮಯವು: ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ


ಹಾಲಿನಂಥ ಬೆಳದಿಂಗಳು ಚೆಲ್ಲಿ ಹಿತ ನೀಡುವ ಚಂದಿರ ಕಾರ್ಮೋಡಗಳ ನಡುವೆ ಸಿಕ್ಕು ಮರೆಯಾಗುತ್ತಾನೆ. ಕೆಲ ಕಾಲದ ನಂತರ ಬೆಳ್ಳಿ ಮೋಡಗಳ ನಡುವೆ ಮತ್ತೆ ಬೆಳ್ಳನೆಯ ನಗು ಬೀರುತ್ತಾನೆ. ಅಮವಾಸ್ಯೆಯ ದಿನ ಸಂಪೂರ್ಣ ಮಾಯವಾದ ಚಂದಿರ ಹುಣ್ಣಿಮೆ ದಿನ ಬಾಗಿಲು ಮುಚ್ಚಿ ಮಲಗಿದ್ದರೂ ಬೆಳಕಿಂಡಿಯಿಂದ ನಾವಿದ್ದಲ್ಲಿಗೆ ಬಂದು ತಂಪು ನೀಡುತ್ತಾನೆ. ಬದುಕಿನಲ್ಲಿ ಸುಖ ದುಃಖಗಳೂ ಹೀಗೇ ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆ. ಸುಖ ದುಃಖಗಳು ಸೈಕಲ್ ಗಾಲಿಯ ಚಕ್ರದ ಕಡ್ಡಿಗಳಿದ್ದಂತೆ ಒಮ್ಮೆ ಮೇಲಿದ್ದದ್ದು ಇನ್ನೊಮ್ಮೆ ಕೆಳಗೆ ಬರಲೇಬೇಕು. ಸುಖ ದುಃಖಗಳು ನಮ್ಮ ಜೀವನದಲ್ಲಿ ಕಣ್ಣಾ ಮುಚ್ಚಾಲೆ ಆಡುತ್ತಲೇ ಇರುತ್ತವೆ. ಆದರೆ ನಾವು ದುಃಖ ಬಂದಾಗ ಮಾತ್ರ ರೋಧಿಸುತ್ತೇವೆ. ಸುಖದಲ್ಲಿ ಮೈ ಮರೆತು ಬಿಡುತ್ತೇವೆ. ಕಣ್ತೆರೆದು ನೋಡಿದರೆ ಬದುಕಿನಲ್ಲಿ ದುಃಖಕ್ಕಿಂತ ಸುಖವೇ ಜಾಸ್ತಿ. ಸುಖ ಸಂತಸ ಆಸ್ವಾದಿಸುವ ಗುಣ ಬೇಕಷ್ಟೆ.

ಯಾವುದೇ ಚಿಂತೆಯಲ್ಲಿ ಮೆಲ್ಲನೇ ಹೆಜ್ಜೆ ಹಾಕುತ್ತಿರುವಾಗ ಬೇಲಿಯ ಸಾಲಿನಿಂದ ತೂರಿ ಬಂದ ಸುಮದ ಘಮಕ್ಕೆ ನಮ್ಮ ಮನ ಅರಳಿಸುವ ಸಿರಿವಂತಿಕೆ ಇಲ್ಲದಿಲ್ಲ. ಜನ ತುಂಬಿದ ರಸ್ತೆಗಳಲ್ಲೂ ಚಿನ್ನಾಟವಾಡುವ ಪುಟ್ಟ ನಾಯಿ ಮರಿಗಳು ಒಂದು ಅರೆಗಳಿಗೆ ನಮ್ಮನ್ನು ಬಾಲ್ಯ ಲೋಕಕ್ಕೆ ಕರೆದುಕೊಂಡು ಹೋಗದೇ ಇರುವುದಿಲ್ಲ. ಹಾಲು ಗಲ್ಲದ ಕಂದ ನಮ್ಮೆಡೆ ನೋಡಿ ಹಲ್ಲಿಲ್ಲದ ಬಾಯಿ ಮುದ್ದು ಮುದ್ದಾಗಿ ತೆರೆದಾಗ ತಲೆ ಮೇಲೆ ಆಕಾಶ ಬಿದ್ದಿದ್ದರೂ ಏನೋ ಹಿತವಾದ ಭಾವ ಮೂಡಿಸದೇ ಇರದು. ಕಿತ್ತು ತಿನ್ನುವ ಬಡತನದ ಬೀದಿಯಲ್ಲಿ ಹಾದು ಹೋಗುವಾಗ ಗುಡಿಸಲನಿಂದ ಹೆಂಗಳೆಯರ ಕಿಲ ಕಿಲ ಸದ್ದು. ಕೊಂಚ ಹೊತ್ತು ದುಃಖವನ್ನು ಮರೆಮಾಚದೇ ಇರದು. ಹೀಗೆ ದೈವ ಸೃಷ್ಟಿಯಲ್ಲಿ ಸರ್ವವೂ ಸುಖವಮವಾಗಿದೆ. ಕಣ್ತೆರೆದು ನೋಡುವ ವ್ಯವಧಾನ ಶುದ್ಧ ಮನೋಭಾವ ಬೇಕಷ್ಟೆ.
ಗಂಡ ಹೆಂಡತಿ ಅಪ್ಪ ಮಕ್ಕಳು ಗೆಳೆಯ/ತಿಯರ ನಡುವೆ ಮನಸ್ತಾಪ ಬರಲು ಮುಖ್ಯ ಕಾರಣ ನಾನೇ ಸರಿ. ನಾನೆಂದೂ ತಪ್ಪು ಮಾಡುವುದಿಲ್ಲ ಎನ್ನುವ ಅಹಂಕಾರ. ಇತರರು ನಮ್ಮಂತೆ ಎನ್ನುವ ಭಾವದ ಅಭಾವ ನಮ್ಮ ಬಹುತೇಕ ದುಃಖಗಳಿಗೆ ಮೂಲ.ಹದವಿರುವ ಹರೆಯದಲ್ಲಿ ಹದ ಅರಿಯದೇ ಪ್ರೀತಿಯ ಜಾರುಬಂಡೆಯಲ್ಲಿ ಜಾರಿದಾಗ ದುಃಖದ ಮೂಟೆ ಮನದ ಮನೆಯಲ್ಲಿ ಮನೆ ಮಾಡುತ್ತದೆ. ತಿಳಿಗೇಡಿ ವಯಸ್ಸಿನಲ್ಲಿ ತಿಳಿಯದ ಕೆಲಸಗಳಿಗೆ ತಿಳಿದವರಿಂದ ತಿಳಿಯದೇ ಕೈ ಹಾಕಿದರೆ ಕಷ್ಟ-ನಷ್ಟ ಕಟ್ಟಿಟ್ಟ ಬುತ್ತಿ.

ಕಷ್ಟ- ನಷ್ಟಗಳು ಬದುಕಿನ ಬಾಗಿಲಿಗೆ ಬಂದು ನಿಂತಾಗ ದುಃಖ ಉಮ್ಮಳಿಸಿ ಬರುತ್ತದೆ. ಕಣ್ಣೀರು ಕೆನ್ನೆಯನ್ನು ತೋಯಿಸುತ್ತದೆ. ಮೊದಲ ಸಲದ ಅವಮಾನ ಹತಾಶೆ ಬೇಸರ ಕಂಡು ಬದುಕು ಇಂದೇ ಇಲ್ಲೇ ಕೊನೆಗೊಳ್ಳಬಾರದೇ ಎಂದೆನಿಸದೇ ಇರದು. ನೊರೆ ಹಾಲಿನಂತೆ ಉಕ್ಕುತ್ತಿರುವ ಪ್ರೌಶ ವಯಸ್ಸು, ನೆಲ ಒದ್ದು ನೀರು ತೆಗೆಯುವೆನೆಂಬ ಹುಮ್ಮಸ್ಸು ಇದ್ದರೂ ಬಳಿ ಬಂದ ದುಃಖ ಹಾಗೆ ಯೋಚಿಸುವಂತೆ ಮಾಡುತ್ತದೆ. ಆ ಕ್ಷಣ ದಾಟಿದರೆ ಸಾಕು. ಮತ್ತೆ ಹೊಸ ಜೀವನದ ಜನನವಾಗುವುದು. ದುಃಖ ಮುಸುಕು ಹಾಕಿ ಮಲಗುವುದು. ಸುಖ ಮೆಲ್ಲಗೆ ನಮ್ಮ ಹಿಂದೆ ಹೊರಟು ಬರುವುದು. ಸುಖ ಬಳಿ ಬಂದು ನಿಂತುದುದನ್ನು ಕಂಡು ನಾಚಿ, ಅರೆ! ಹಾಗೆ ಯೋಚಿಸಿದ್ದು ನಾನೆನಾ!? ಒಂದು ವೇಳೆ ಯೋಚಿಸಿದಂತೆ ದುಡುಕಿ ನಡೆದುಕೊಂಡು ಬಿಟ್ಟಿದ್ದರೆ ಅದೆಂಥ ದೊಡ್ಡ ಅನಾಹುತ ಆಗಿರುತ್ತಿತ್ತು ಎಂಬ ಅಚ್ಚರಿಯ ಮಾತು ಮನದಲ್ಲಿ ಬಂದು ನಡುಗಿಸದೇ ಇರದು. ಜೀವಿಸುವವನು ಸತ್ತವನಿಗಿಂತ ಎಷ್ಟು ಮೇಲೋ. ಸುಖವಂತನು ದುಃಖಿತನಿಗಿಂತ ಅಷ್ಟೇ ಮೇಲು. ಸಿಕ್ಕ ಚಿಕ್ಕ ಚಿಕ್ಕ ಸುಖಗಳನ್ನು ಹೆಕ್ಕಿ ಹೆಕ್ಕಿ ಪಡೆಯಬೇಕು ಅದೇ ಸುಖ ಜೀವನ.

ಸುಖದ ಅಲೆಯಲ್ಲಿ ಮೈ ಮರೆತಿರುವಾಗಲೇ ದುಃಖದ ಬಲೆಗೆ ಅದಾವಾಗ ಬಿದ್ದೆನೆಂದು ತಿಳಿಯುವುದೇ ಇಲ್ಲ. ಅದೇ ದುಃಖದ ಚಾಲಾಕಿತನ ನೋಡಿ. ದುಃಖ ನಮಗೆ ಧಮಕಿ ನೀಡುವುದಿಲ್ಲ. ತೀರಾ ಬಿರುಸಾಗಿಯೂ ಹೇಳುವುದಿಲ್ಲ. ಧ್ವನಿ ಎತ್ತರಿಸದೇ ಹೆಚ್ಚು ದೂರಕ್ಕೆ ಕೇಳದಂತೆ ತಣ್ಣಗಿನ ದನಿಯಲ್ಲಿ ‘ನಾ ಬಂದೆ.’ ಎಂದು ಅತಿ ಪರಿಚಯದವರಂತೆ ಸಲುಗೆಯಿಂದ ಪಕ್ಕಕ್ಕೆ ಕುಳಿತುಕೊಂಡು ಬಿಡುತ್ತದೆ. ಹಾಗಾಗಿ ಯಾರಿಗೂ ಅನುಮಾನ ಮೂಡುವುದೇ ಇಲ್ಲ. ನಾವೇ ಶಕ್ತಿ ಮೀರಿ ಕೂಗಿ ಇತರರ ಗಮನ ಸೆಳೆದು ಸಹಾಯಕ್ಕೆ ಕೇಳಿಕೊಳ್ಳುತ್ತೇವೆ. ಎಷ್ಟೊಂದು ಜಾಗ್ರತೆಯಿಂದ ಬಲೆ ಹೆಣೆದಿರುವ ದುಃಖ ಬರಿಗೈಯಲ್ಲಿ ಹಾಗೆ ಬಂದಿರುತ್ತದಾ? ತಕ್ಕ ತಯಾರಿ ಮಾಡಿಕೊಂಡು ತನ್ನ ರಕ್ಷಣೆಗೆ ಶಕ್ತಿಯುತ ಆಯುಧ ಹಿಡಿದು ಬಂದಿರುತ್ತದೆ. ಹೇಗಾದರೂ ಮಾಡಿ ದುಃಖವನ್ನು ಕಚಪಚ ಎಂದು ತುಳಿದು ಬಿಡಬೇಕೆಂದುಕೊಳ್ಳುತ್ತೇವೆ.

ಊಹೂಂ ಅದು ದೊಡ್ಡ ರಿಸ್ಕ್! ಎಂದು ಅದನ್ನು ಮುಂದಿಟ್ಟುಕೊಂಡು ಬೇಕಾದವರ ಮುಂದೆ ಅದರ ಕಾಟ ತಾಳಲಾರೆನೆಂದು ತೋಡಿಕೊಳ್ಳುವುದೇ ಲೇಸು ಎಂದು ಬಗೆಯುತ್ತೇವೆ. ಜೀವ ಎಲ್ಲಕ್ಕಿಂತ ದೊಡ್ಡದಲ್ಲವೇ? ಎಂದು ದುಃಖವನ್ನು ನುಂಗಿಕೊಂಡು ಅದರ ಎದುರು ಬೀಳಲು ಧೈರ್ಯ ಮಾಡದೇ ಸುಮ್ಮನಾಗಿ ಬಿಡುತ್ತೇವೆ. ಈ ನಡುವೆ ಸುಖ ಎಂದಿನಂತೆ ಭಿನ್ನ ಭಿನ್ನ ವೇಷದಲ್ಲಿ ಯಾವಾಗಲೂ ಕಣ್ಮುಂದೆ ಹಾದು ಹೋಗುತ್ತಲೇ ಇರುತ್ತದೆ. ದೂಃಖದ ಮಂಜು ಮುಸುಕಿದ ಕಂಗಳಿಗೆ ಸುಖದ ರೂಪ ಗುರುತಿಸಲು ಆಗುವುದೇ ಇಲ್ಲ. ದುಃಖ ನಮ್ಮನ್ನು ಸಾಕಷ್ಟು ಸತಾಯಿಸುತ್ತದೆ. ಮಾನಸಿಕವಾಗಿ ಕಗ್ಗಿಸಿ ಕೆಳಕ್ಕಿಳಿಸುತ್ತದೆ. ಮತ್ತೆಂದೂ ಈ ದುಃಖ ನನಗೆ ಭೇಟಿಯಾಗದಿರಲಿ ಎನ್ನುವಂತೆ ನಮೋ ನಮೋ ಎನಿಸಿ ಬಿಡುತ್ತದೆ. ತೆಪ್ಪಗೆ ಕುಳಿತು ನಮ್ಮನ್ನು ಹಣಿದು ಹೈರಾಣಾಗಿಸುವ ದುಃಖದ ಪರಿಯನು ಪ್ರತಿಭೇಯನು ಮೆಚ್ಚಲೇಬೇಕು. ಅಹಂಕಾರದಿಂದ ಹೊತ್ತು ಮೆರೆಯುವ ನಮ್ಮನ್ನು ಕೈ ಗೊಂಬೆಯಂತೆ ಆಡಿಸುವ ತಂತ್ರ ದುಃಖಕ್ಕೆ ಮಾತ್ರ ಗೊತ್ತು.

ಹೀಗೆಲ್ಲ ದುಃಖ ಹೆಡಮುರಗಿ ಕಟ್ಟಿದ ಮೇಲೆ ಜೀವನ ದುಃಖದ ಸಾಗರ ಎನ್ನುವ ಸಂದೇಹ ಸುಳಿಯುವುದು ಸುಳ್ಳಲ್ಲ. ವಾಸ್ತವದಲ್ಲಿ ಬದುಕು ಸುಖ ತುಂಬಿದ ಒರತೆಯಾಗಿದೆ. ಹಸಿರು ಹೊದ್ದ ಭೂರಮೆ, ಧುಮ್ಮಿಕ್ಕಿ ಹರಿಯುವ ಜಲಪಾತ,ಬೆಟ್ಟದಿಂದ ಕೆಳಕ್ಕೆ ಬಿದ್ದು ಅಲ್ಲಲ್ಲಿ ಜರಿಯಾಗಿ ಹರಿಯುವ ಜುಳು ಜುಳು ನೀರಿನ ನಿನಾದ, ಹಳ್ಳ, ಕೊಳ್ಳ, ತೊರೆ, ಕಡಲಿನ ಅಲೆಗಳ ಅವಿರತ ಆರ್ಭಟ,ಮುಸ್ಸಂಜೆಯ ರಂಗಿಗೆ ರಂಗು ಹೆಚ್ಚಿಸುವ ಮಳೆಬಿಲ್ಲ, ವಸಂತ ಕೋಗಿಲೆಯ ಇಂಚರ. ಸುಮ್ಮನೇ ಸುಳಿದು ಬೀಸುವ ತಂಗಾಳಿ. ಮಾಡಿದ ತಪ್ಪುಗಳನ್ನು ಮನ್ನಿಸಿ ತಿದ್ದಿ ತೀಡಿ ಮುದ್ದಿಸುವ ಅಪ್ಪ ಅವ್ವ ಗುರುಗಳು, ಸಮಸ್ಯೆಗಳು ಹೆಗಲಿಗೇರಿದಾಗ ಏನೂ ಆಗಲ್ಲ ಪರಿಹಾರ ಹುಡುಕೋಣ ಅನ್ನೋ ಜೀವದ ಗೆಳೆಯರು, ಹೊತ್ತು ಹೊತ್ತಿಗೆ ಹೊಟ್ಟೆ ಸಲುಹುವ ಅಕ್ಕ ತಂಗಿಯರು, ನಾವು ನಿನ್ನ ಬಿನ್ನಿಗಿದ್ದೇವೆ ಎನ್ನುವ ಅಣ್ಣ ತಮ್ಮಂದಿರು.ನಾಡಿ ಮಿಡಿತವರತು ಪ್ರೀತಿಯ ಧಾರೆ ಹರಿಸುವ ಸಂಗಾತಿ, ಖುಷಿಯ ಕಾರಂಜಿ ಹರಿಸುವ ಮಕ್ಕಳು,ಹೀಗೆ ಸುಖದ ಸಾವಿರ ಸಾವಿರ ರೂಪಗಳನ್ನು ಎದುರಿಟ್ಟುಕೊಂಡು ಅವುಗಳನ್ನು ಕಣ್ತೆರೆದು ನೋಡದೇ ಮುಂದುವರೆದಿದ್ದೇ ಹೌದಾದರೆ ಸಂಬಂಧಗಳು ಸಡಿಲಗೊಳ್ಳುತ್ತವೆ.

ಸುಖ ನೀಡುವ ವಿಪುಲ ಅವಕಾಶಗಳು ನಮ್ಮನ್ನು ಸುತ್ತುವರೆದಿವೆ. ಅದರೆ ದುಃಖದ ಕಡಲಿನಲ್ಲಿ ಮುಳುಗಿರುವ ನಮಗೆ ಅವು ಕಾಣುವುದೇ ಇಲ್ಲ. ದುಃಖ ಅದೆಷ್ಟೋ ನೋವು ಅವಮಾನ ಹಿಂಸೆ ಹತಾಶೆಗಳನ್ನು ನಮ್ಮ ಮುಂದೆ ರಾಶಿ ರಾಶಿಯಾಗಿ ಗುಡ್ಡೆ ಹಾಕಿದ್ದರೂ ಅವುಗಳತ್ತ ಚಿತ್ತ ಹರಿಸಿದೇ ಭರ್ಜರಿ ಸುಖ ನೀಡುವ ದೃಶ್ಯಗಳತ್ತ ಸುಮಧುರ ಸಂಬಂಧಗಳತ್ತ ಗಮನ ಹರಿಸಿದರೆ ಜಗದೊಳು ಸರ್ವವೂ ಸುಖಮಯವು ಎಂದೆನಿಸದೇ ಇರದು. ದುಃಖಗಳ ಕೊಡವಿ ನಿಂತರೆ ಸುಖದ ಸಾಲುಗಳೇ ನಮ್ಮನ್ನು ಅಪ್ಪಿಕೊಳ್ಳಲು ಕಾದು ನಿಲ್ಲುತ್ತವೆ ಎನ್ನುವುದು ನಿಜ.
-ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *