ಶಂಕರಾಚಾರ್ಯರು ಸ್ಥಾಪಿಸಿದ ಚಾರ್ ಧಾಮ್ ಗಳಲ್ಲಿ ಬದರಿನಾಥ ದ್ವಾರಕಾ, ಪುರಿ ಮತ್ತು ರಾಮೇಶ್ವರಂ ಪವಿತ್ರ ಪುಣ್ಯಕ್ಷೇತ್ರಗಳು. ಒರಿಸ್ಸಾದ ನೆಲದಲ್ಲಿ ಈ ಚಾರ ಧಾಮ್ ಗಳಲ್ಲಿ ಒಂದಾದ ಪುರಿ ಜಗನ್ನಾಥ ದೇವಸ್ಥಾನ ಸ್ಥಾಪಿಸಲಾಗಿದೆ. ಅಲ್ಲದೆ ಇಲ್ಲಿನ ಕೊನಾರ್ಕ್ ಸೂರ್ಯ ದೇಗುಲ ಜಗತ್ ಪ್ರಸಿದ್ಧ.ದೇಶ ವಿದೇಶಗಳ ಸಹಸ್ರಾರು ಭಕ್ತರು ನಿತ್ಯ ನಿತ್ಯ ಇಲ್ಲಿಗೆ ತಲಪುತ್ತಾರೆ.
ಬೆಳಗಿನ ಹತ್ತುಘಂಟೆಯ ಬಿಸಿಲಿಗೆ ಜಗನ್ನಾಥನ ದೇವಸ್ಥಾನ ತಲಪಿದ್ದೆವು. ನಾಲ್ಕು ಕಡೆಗಳಲ್ಲಿ ಒಳಗೆ ಪ್ರವೇಶವಿರುವ ಇಲ್ಲಿ ವಿಸ್ತಾರವಾದ ಸ್ಥಳದ ಮಧ್ಯೆ ಮಂದಿರವಿದೆ. ಸುತ್ತ ಸಣ್ಣಪುಟ್ಟ ದೇಗುಲಗಳಲ್ಲಿ ಇತರ ದೇವತಾ ಮೂರ್ತಿಗಳ ಸನ್ನಿಧಿಯಿದೆ. ನೆತ್ತಿಯ ಮೇಲೆ ಸುಡುವ ಉರಿಬಿಸಿಲು, ಕೆಳಗೆ ಕಾದು ಸುಡುವ ನೆಲ, ವಿಶೇಷವೆಂದರೆ ಈ ಮಂದಿರದ ದರ್ಶನದ ಉತ್ಸುಕತೆ, ಭಕ್ತಿಯಲ್ಲಿ ಬಿಸಿಲು ತಟ್ಟಲಿಲ್ಲ. ಬಾನು ಮುಟ್ಟುವಂತೆ ಎತ್ತರವಾಗಿ ನಿಂತ ಜಗನ್ನಾಥನ ಮಂದಿರದ ಗೋಪುರದ ಎತ್ತರವೇ 192 ಅಡಿಗಳಿವೆ. ಆವರಣದ ಒಳಗೆ ಮೆಟ್ಟಲುಗಳನ್ನು ಏರಿ ಪ್ರವೇಶ ಮಾಡಿದ ಕೂಡಲೇ ನಮ್ಮನ್ನು ಮುತ್ತಿಕೊಳ್ಳುವುದು ಅಲ್ಲಿನ ಪಂಡಾಗಳು (ಪಂಡಿತರು). ಆಲಯದ ಸುತ್ತು ಗೋಡೆಗಳಿಗೆ ಒರಗಿ ಸಾಲು ಸಾಲಾಗಿ ಕೂತ ಇವರು ತಮ್ಮೆದುರಿಗೆ ಸ್ವಲ್ಪ ಗರಿಕೆ, ಎಳ್ಳು ಅಲ್ಲದೆ ನೆನೆದು ಹೋದ ಬಿಳಿಯ ಅಕ್ಕಿ ಹರಡಿಕೊಂಡು ಒಳಗೆ ಕಾಲಿಟ್ಟವರನ್ನು ಸೆಳೆಸೆಳೆದು ಪಿತೃ ಶ್ರಾದ್ಧ ಇಲ್ಲಿ ನಡೆಸಿದರೆ ಮೋಕ್ಷ ಪ್ರಾಪ್ತಿ ಎಂದು ಎದುರು ಕೂರಿಸಿ ಹತ್ತು ನಿಮಿಷಗಳಲ್ಲಿ ಅವರ ಕೈಲಿ ಆ ಅನ್ನದಲ್ಲಿ ನೆಲ್ಲಿಕಾಯಿ ಗಾತ್ರದ ಪಿಂಡ ಮಾಡಿ ತೀರಿಕೊಂಡ ಹಿರಿಯರಿಗೆ ತರ್ಪಣ ಬಿಡಿಸುತ್ತಾರೆ.ಭಕ್ತರು ಪುಣ್ಯಕ್ಷೇತ್ರದಲ್ಲಿ ಶ್ರದ್ಧೆಯಿಂದ ಆ ಕಾರ್ಯ ಮಾಡಿ ಪಂಡಾ ಹೇಳುವ ದೊಡ್ಡ ಮೊತ್ತ ಸಲ್ಲಿಸುತ್ತಾರೆ. ಎರಡೇ ಹೆಜ್ಜೆ ಮುಂದೆ ಅದೇ ಕಾರ್ಯದಲ್ಲಿ ಇನ್ನೊಬ್ಬ ಪಂಡಾ ಮಗ್ನ, ಅದೇ ರೀತಿ ಶ್ರಾದ್ಧಕರ್ಮ ನೆರವೇರಿಸುವ ಪಂಡಾಗಳು ನೂರಾರು ಮಂದಿ ಭಕ್ತರ ದುಡ್ಡು ಪೀಕಿಸುತ್ತಾರೆ . ನಾಲ್ಕೇ ಎಸಳು ಅದೇ ಹೂವು, ಅಷ್ಟೇ ಗರಿಕೆ ಮತ್ತು ಅದೇ ಒಂದು ಮುಷ್ಟಿ ಅಕ್ಕಿಯಲ್ಲಿ ದಿನಕ್ಕೆ ನೂರಾರು ತಿಥಿಗಳನ್ನು ನಡೆಸಿ ಹಣ ಸುಲಿಯುತ್ತಾರೆ. ಇದು ಇಲ್ಲಿನ ಪಂಡಾಗಳ ಸುಲಿಗೆಯ ಮೊದಲ ದರ್ಶನ. ನಿಶ್ಚಿತವಾಗಿಯೂ ಇವರು ಮಂದಿರದ ಅಧಿಕೃತ ಪಂಡಾಗಳಲ್ಲ.
ದೇವಸ್ಥಾನದ ಒಳಗೆ ಕಡ್ಡಾಯವಾಗಿ ಹಿಂದೂಗಳಿಗೆ ಮಾತ್ರಾ ಪ್ರವೇಶ. ಐವತ್ತು ರೂಪಾಯಿಯ ಟಿಕೆಟ್ ಪ್ರವೇಶಕ್ಕೆ ಅಗತ್ಯ. ಇಲ್ಲಿ ಬಲು ವಿಶಾಲವಾದ ಸ್ಥಳಾವಕಾಶವಿದೆ. ಆದರೆ ಅಪಾರವಾದ ನೂಕು ನುಗ್ಗಲು. ಕಾಲೂರಲೂ ಸ್ಥಳವಿಲ್ಲ. ಭಕ್ತರು ಪರಸ್ಪರ ಮೈಗೆ ಅಂಟಿಯೇ ನಿಲ್ಲಬೇಕಾದ ಅವಸ್ಥೆ. ಶಿಸ್ತು, ಕ್ಯೂ ಅನ್ನುವುದಕ್ಕೆ ಅಲ್ಲಿ ಜಾಗವಿಲ್ಲ ಅದು ಹೇಗೆ ಗರ್ಭಗುಡಿಯ ತನಕ ಬಂದೆವೋ ಅರಿಯದು.
ಒಬ್ಬರಾದ ನಂತರ ಇನ್ನೊಬ್ಬರು ಒಳಗೆ ಹೋಗಬೇಕಾಗಿದ್ದ ಕ್ಯೂ ಪದ್ಧತಿಗೆ ಲವಲೇಶ ಬೆಲೆ ಕೊಟ್ಟವರಿಲ್ಲ.ಎಲ್ಲವೂ ಸರಿಯಾಗಿದ್ದೇ ಆದರೆ ನಿಂತ ಕಡೆಯಿಂದಲೇ ಗರ್ಭಗುಡಿಯಲ್ಲಿನ ಮೂಲದೇವರುಗಳನ್ನು ಕಾಣಬಹುದು; ಆದರೆ ಅಲ್ಲಿ ನೋಡಿದರೆ ಅಡ್ಡಲಾಗಿ ಪಂಡಾಗಳೇ ನಿಂತಿದ್ದರು. ಎಡ, ಬಲ ಎರಡು ಭಾಗಗಳಲ್ಲಿ ಕಬ್ಬಿಣದ ತಡೆ ಇತ್ತು ಮಧ್ಯಭಾಗದಲ್ಲಿ ಒಳಕ್ಕೆ ಹೋಗಲು ಸುಮಾರು ಒಂದು ಮೀಟರ್ ಅಗಲದ ಅಂದಾಜು ದ್ವಾರ . ವಿಚಿತ್ರವೆಂದರೆ ಆ ಪ್ರವೇಶದ್ವಾರಕ್ಕೆ ಅಡ್ಡಲಾಗಿ ಅಗಲವಾಗಿ ಮಂಡಲ ಬಿಡಿಸಿಕೊಂಡು ರುದ್ರಾಕ್ಷಿಧಾರಿ ಪಂಡಾ ದ್ವಾರದ ಮುಖಾಂತರ ನೊಣವೂ ನುಸುಳದಂತೆ ಕೂತಿದ್ದ. ಅಲ್ಲಿ ಒಳಗಿದ್ದವರೆಲ್ಲ ಪಂಡಾಗಳೇ. ಒಬ್ಬರೂ ಮುಖ್ಯ ದ್ವಾರ ಬಿಟ್ಟುಕೊಡಲಿಲ್ಲ. ನಾವು ಅತ್ತಿತ್ತ ನೋಡುವುದನ್ನು ಕಂಡ ಪಂಡಾನೊಬ್ಬ ಆ ಕಬ್ಬಿಣದ ಕಟಕಟೆಯ ಸಂದಿಗಳಲ್ಲಿ ಬಗ್ಗಿ ನುಸುಳಿಕೊಂಡು ಒಳಬರಲು ಸೂಚನೆ ಕೊಟ್ಟು ದಕ್ಷಿಣೆಗೆ ಕೈ ಚಾಚಿದ. ನುಸುಳುವಾಗ ಎಲ್ಲಾದರೂ ಆ ನೂಕುನುಗ್ಗಾಟದಲ್ಲಿ ಕೆಳಬಿದ್ದರೆ, ಮೆಟ್ಟಿಕೊಂಡೇ ಸಾಗುವಷ್ಟು ಭಾವುಕ ಭಕ್ತರು ಹಿಂದೆಮುಂದೆ. ನಮಗೋ ಇಲ್ಲಿನ ದುರಾಸೆ, ಭಕ್ತರಿಗೆ ಒಳಬರಲಿಕ್ಕಾಗಿ ಇರುವ ಅಗಲವಾದ ದ್ವಾರ , ಅದನ್ನು ಬ್ಲಾಕ್ ಮಾಡಿ ಅಡ್ಡಕೂತ ಪಂಡಿತ! ನನ್ನು ಕಂಡಾಗ ಆ ದರ್ಪ, ಸುಲಿಗೆ, ಹಣಕ್ಕಾಗಿ ನಡೆಸುವ ವಂಚನೆ ಅದೆಲ್ಲವನ್ನು ಅಲ್ಲಿಂದ ಹದಿನೈದಡಿ ದೂರದಲ್ಲಿ ನಿಂತು ಅದು ಹ್ಯಾಗೆ ಜಗನ್ನಾಥ, ಸುಭದ್ರೆ ಹಾಗೂ ಬಲಭದ್ರ ಸಹಿಸಿಕೊಳ್ಳುತ್ತಾರೋ ಅನ್ನಿಸಿತು. ನಾವೆಲ್ಲ ಏಕ ತೀರ್ಮಾನದಲ್ಲಿಅಲ್ಲಿಂದಲೇ ಕೈಮುಗಿದು ಹೊಳೆಯುವ ವಸ್ತ್ರಾಭರಣದಲ್ಲಿ ಶೋಭಿಸುವ ದೇವರ ಮೂರ್ತಿಗಳನ್ನು ಕಂಡೆವು. ಭಕ್ತರಿಗೆ ಗರ್ಭಗುಡಿಯಲ್ಲಿ ದೇವರ ತೀರಾ ಹತ್ತಿರವಾಗಿ ಹೋಗುವ ವ್ಯವಸ್ಥೆ ಇತ್ತು.
ಅಲ್ಲಿ ಜಗನಾಥನಿಗೆ ತುಪ್ಪದ ದೀಪ ಹಚ್ಚುವುದು ವಿಶಿಷ್ಟ ಸೇವೆ ಎಂದರು ನಮ್ಮ ಜೊತೆಗಿದ್ದವರು. ಹೊರಬದಿಗೆ ಹಣತೆ , ಬತ್ತಿ ಮತ್ತು ತುಪ್ಪ ಸಿಗುತ್ತಿತ್ತು. ಅಸಂಖ್ಯಾತ ಹಣತೆಗಳು ಅಲ್ಲಿ ಬೆಳಗುತ್ತಿದ್ದದ್ದರ ಜೊತೆಗೆ ನಾವು ಹಚ್ಚಿದ ದೀಪವೂ ಸೇರಿತು. ಮಂದಿರದಲ್ಲಿ ಜಗನ್ನಾಥನ ರಥೋತ್ಸವ ಸುಪ್ರಸಿದ್ಧ ಮತ್ತು ವಿಜೃಂಭಣೆಯಿಂದ ಜರಗುತ್ತದೆ. ಸಾಧಾರಣವಾಗಿ ಜೂನ್ ಮುಕ್ತಾಯಕ್ಕೆ ಅಥವಾ ಜುಲೈ (ಆಷಾಢ) ಆರಂಭದಲ್ಲಿ ರಥೋತ್ಸವ ನಡೆಯುತ್ತದೆ. ಕೃಷ್ಣ, ಸುಭದ್ರೆ ಹಾಗೂ ಬಲಭದ್ರರನ್ನು ಪ್ರತ್ಯೇಕ ಪ್ರತ್ಯೇಕ ರಥಗಳಲ್ಲಿ ವೈಭವವಾಗಿ ಅಲಂಕರಿಸಿ, ಚಿನ್ನಾಭರಣಗಳಿಂದ ಸಿಂಗರಿಸಿ ಉತ್ಸವ ಆರಂಭವಾಗುತ್ತದೆ. ಘೋಷಯಾತ್ರೆ ಎಂದು ಅಲ್ಲಿನವರು ಕರೆಯುತ್ತಾರೆ. ಇಲ್ಲಿ ಜಗನ್ನಾಥನ ವಿಗ್ರಹ ಉತ್ತಮ ಜಾತಿಯ ಮರದಿಂದ ತಯಾರಿಸಿದ್ದು ಮತ್ತು ಪ್ರತಿ ಹನ್ನೆರಡು ವರುಷಗಳಿಗೊಮ್ಮೆ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಿ ಬದಲಾಯಿಸುತ್ತಾರೆ . ರಥೋತ್ಸವದಲ್ಲಿ ಕೃಷ್ಣನ ರಥದ ಎತ್ತರ ನಾಲ್ವತ್ತೈದು ಮೀಟರ್ ಎತ್ತರವಿದ್ದರೆ ಬಲಭದ್ರನದು ನಾಲ್ವತ್ತನಾಲ್ಕು ಮೀಟರ್ ಎತ್ತರ. ನಾಲ್ವತ್ತಮೂರು ಮೀಟರ್ ಎತ್ತರ ಸುಭದ್ರೆಯ ರಥ. ಕಿಕ್ಕಿರಿದ ಜನಸಂದಣಿ ಮತ್ತು ಮುನ್ನುಗ್ಗಿ ಬರುವ ಭಕ್ತರ ದಟ್ಟಣೆಯಿಂದ ಪ್ರತಿ ವರ್ಷದ ರಥೋತ್ಸವದಲ್ಲೂ ಕಾಲ್ತುಳಿತಕ್ಕೆ ಬಲಿಯಾಗುತ್ತಾರೆ ಜನರು. ಸರಿಸುಮಾರು ಎರಡು ಕಿ. ಮಿ. ಉದ್ದದ ಘೋಷಯಾತ್ರೆಯಲ್ಲಿ ದೇವರು ಭಕ್ತರ ಬಳಿ ಬರುತ್ತಾರೆ. ಗರ್ಭಗುಡಿಯಲ್ಲಿ ನಿತ್ಯ ಭಗವಂತನಿಗೆ ಬಟ್ಟೆ ಬದಲಾಯಿಸುತ್ತಾರೆ. ನೈವೇದ್ಯ ಸಮರ್ಪಣೆ ದಿನಾ ಇದೆ. ಪ್ರವೇಶದ್ವಾರದ ಅಕ್ಕಪಕ್ಕ ಜಯ ವಿಜಯರನ್ನು ಸ್ಥಾಪಿಸಿದ್ದಾರೆ. ಒರಿಸ್ಸಾ ಯಾತ್ರೆ ಸಂಪೂರ್ಣವಾಗುವುದು ಜಗನ್ನಾಥನ ಕ್ಷೇತ್ರ ದರ್ಶನದಿಂದ.
ಸುಲಿಗೆ ಮತ್ತು ನೈರ್ಮಲ್ಯತೆಯ ಕೊರತೆ ಅತ್ಯಂತ ಕೊಳಕು ವಾತಾವರಣ ಜೊತೆಗೆ ಮಾಲಿನ್ಯತೆ, ಮೈಮೇಲೆರಗುವ ನೊಣಗಳ ಹಿಂಡು, ಗಲೀಜು ಪಂಡಾಗಳ ನಿರ್ಮಲ ರಹಿತ ಉಡುಗೆ ಕಾಣುವಾಗ ಜಗತ್ಪ್ರಸಿದ್ಧ ಮಂದಿರವೊಂದನ್ನು ಅದೂ ನಿತ್ಯ ಸಹಸ್ರಾರು ಭಕ್ತರು ದೇವದರ್ಶನಕ್ಕೆ ಬರುವ ತಾಣವನ್ನು ಆದಷ್ಟು ಓರಣವಾಗಿ ಇರಿಸಿದ್ದೇ ಆದರೆ ಅದೆಷ್ಟು ಭವ್ಯತೆ ಎನ್ನಿಸಿತು. ಧರ್ಮಸ್ಥಳದಂಥ ಕ್ಷೇತ್ರದ ಮಾದರಿ ಮನಸ್ಸಿದ್ದರೆ ಮಾಡಲು ಅಸಾಧ್ಯವಲ್ಲ. ಬಹುಪಾಲು ಪಂಡಾಗಳು ಹಣಕ್ಕಾಗಿ ನಾನಾ ವೇಷದಲ್ಲಿ ಸುಲಿಯುತ್ತಾರೆ. ನಾವು ಹೊರಗಿಂದ ದೇವಾಲಯದ ಒಳಾಂಗಣಕ್ಕೆ ಕಾಲಿಟ್ಟಲ್ಲಿಂದಲೇ ಇವರ ಹಾವಳಿ. ಅಲ್ಲಿನ ಪ್ರವೇಶದ ದ್ವಾರದಲ್ಲಿ ನಿಂತ ಪಂಡಾನೊಬ್ಬ ನಮ್ಮನ್ನು ಕಾಣುತ್ತಲೇ ಒರಿಯಾ ಭಾಷೆಯಲ್ಲಿ ಏನೇನೋ ಕಿರುಚುತ್ತಾ ಅವನ ಕೈಲಿದ್ದ ಬೆರಳಗಾತ್ರದ ಎರಡು ಬೆತ್ತಗಳನ್ನು ಜೋಡಿಸಿ ಹೆಣೆದಿದ್ದ ಮಂತ್ರದಂಡದಿಂದ ನನ್ನ ನೆತ್ತಿಗೆ ಬಲವಾಗಿ ಎರಡುಬಾರಿ ಕುಟ್ಟಿದ್ದ. ತಟತಟನೆ ಕುಟ್ಟಿದ್ದು ನೆತ್ತಿಯಲ್ಲಿ ಉರಿ ಎದ್ದಿತು. ತಲೆಬುಡ ಅರ್ಥವಾಗದೆ ಸಿಟ್ಟಿಂದ ನೋಡಿದೆ. ಕೈಚಾಚಿ ನೂರೊಂದು ರೂಪಾಯಿ ಕೊಡಲು ದಬಾಯಿಸಿದ. ಯಾತಕ್ಕೆಂದು ಹಿಂದಿಯಲ್ಲಿ ಕೇಳಿದೆ "ನಾನು ನಿನಗೆ ಆಶೀರ್ವಾದ ಮಾಡಿದ್ದೇನೆ. ಅದಕ್ಕೆ ಮಡಗು ದಕ್ಷಿಣೆ" ಎಂದ ಹಿಂದಿಯಲ್ಲೇ. " ನಾನು ದೇವರ ದರ್ಶನಕ್ಕೆ ಬಂದಿದ್ದು. ನೀವು ಆಶೀರ್ವದಿಸಿ ಅಂತ ನಾನು ಕೇಳಲಿಲ್ಲ" ಅಂದೆ. ನಾನು ಬಾಯಿ ಮುಚ್ಚಬೇಕಾದರೆ ಸಿಟ್ಟಿಂದ ಪಂಡಾ ವಾಚಾಮಗೋಚರವಾಗಿ ನನ್ನನ್ನು ಬೈದ. ನನ್ನಿಂದ ಹಿಂದೆ ಇದ್ದ ಮಹಿಳೆ ಅವನ ಅವತಾರಕ್ಕೆ ಹೆದರಿ ಕೇಳುವ ಮೊದಲೇ ನೂರೊಂದು ರೂಪಾಯಿ ಕಾಣಿಕೆ ತೆತ್ತು ಅವನ ಬೆತ್ತದಿಂದ ನಡುನೆತ್ತಿಗೆ ಮೊಟಕಿಸಿಕೊಂಡಳು.
ಹನ್ನೆರಡನೆ ಶತಮಾನದಲ್ಲಿ ಗಂಗ ವಂಶದ ದೊರೆ ಅನಂತವರ್ಮ ಇಲ್ಲಿ ಬಹಳಷ್ಟು ಸ್ಥಾಪನೆ, ಅಭಿವೃದ್ಧಿ ಕಾರ್ಯ ನಡೆಸಿದ್ದರು. ಅಂದು ಶಂಕರಾಚಾರ್ಯರಿಗಾಗಲೀ, ಗಂಗ ದೊರೆಗಳಿಗಾಗಲೀ ಮುಂದೆ ಪಂಡಾಗಳು ಬರುವ ಭಕ್ತರನ್ನು ಸುಲಿದು ದರ್ಶನದ ಮುಖ್ಯ ದ್ವಾರಕ್ಕೇ ಅಡ್ಡಲಾಗಿ ಕೂರಬಹುದೆಂಬ ಕಲ್ಪನೆ ಕೂಡಾ ಬಂದಿರಲಿಕ್ಕಿಲ್ಲ. ಅದ್ಭುತ ಶಿಲ್ಪಕಲಾ ಸೌಂದರ್ಯ, ಅಪಾರ ಸಂಪತ್ತು, ಪವಿತ್ರ ಮಂದಿರ ಎಲ್ಲವೂ ಇದೆ. ಭಕ್ತರಿಗೆ ಹೆಜ್ಜೆ ಹೆಜ್ಜೆಗೆ ಅಡ್ಡವಾಗಿ ದುಡ್ಡಿಗೆ ದೋಚುವ ಪ್ರವೃತ್ತಿಗೆ ಕಡಿವಾಣ ಬೀಳಬೇಕು. ಯಾರೂ ಪಂಡಾಗಳ ದರ್ಶನ ಮಾಡಲು ಬರುವವರಲ್ಲ. ಭಕ್ತರಿಗೆ ಸುಲಭ ದರ್ಶನದ ಜೊತೆಗೆ ಸೌಕರ್ಯ, ಸೌಲಭ್ಯ ಹೆಚ್ಚಬೇಕು. ನಿರ್ಮಲ ಭಕ್ತಿಯಿಂದ ದೇವದರ್ಶನ ಮಾಡುವ ವ್ಯವಸ್ಥೆ ಒದಗಬೇಕು. ದೇವಮಂದಿರ ಅಂದರೆ ಶಾಂತಿ, ಭಕ್ತಿ ಮತ್ತು ಪಾವಿತ್ರ್ಯದ ತಾಣವಾಗಬೇಕು.
-ಕೃಷ್ಣವೇಣಿ ಕಿದೂರ್.